ಋಗ್ವೇದ, ಮಹಾಭಾರತ, ಮನುಸೃತಿ ಮತ್ತಿತರ ಕಡೆ ಗ್ರಾಮಗಳ ಪ್ರಸ್ತಾಪ ಬಂದಿದೆ. ಆದರೂ ಅವುಗಳು ನಮಗೆ ತಿಳಿಸುವ ಸಂಗತಿಗಳು ತೀರ ಕಡಿಮೆ. ಏಕೆಂದರೆ ಅವು ಮುಖ್ಯವಾಗಿ ಧಾರ್ಮಿಕ ಗ್ರಂಥಗಳು. ಸಮಾಜ ರಚನೆಯ ಮೇಲಿನ ಜಿಜ್ಞಾಸೆಗೆ ಅಲ್ಲಿ ಪ್ರಾಧಾನ್ಯವಿರುವುದು ಕಂಡು ಬರುವುದಿಲ್ಲ. ಗ್ರಾಮಗಳ ಬಗ್ಗೆ ಸಾಕಷ್ಟು ವಿಸ್ತೃತವಾದ ವರ್ಣನೆಯನ್ನು ನಾವು ಪ್ರಥಮ ಬಾರಿಗೆ ನೋಡುವುದು ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ. ಈ ಕೃತಿಯು ಕ್ರಿ. ಪೂ. ಮೂರನೇ ಅಥವಾ ನಾಲ್ಕನೆಯ ಶತಮಾನಕ್ಕೆ ಸೇರಿದ್ದೆಂದು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ.

ಅರ್ಥಶಾಸ್ತ್ರದಲ್ಲಿ ಜನಸಂಖ್ಯೆಯ ಗಾತ್ರ ಹಾಗೂ ಭೂಸ್ವಾಮ್ಯವನ್ನು ಆಧಾರವನ್ನಾಗಿಟ್ಟುಕ್ಕೊಂಡು ಗ್ರಾಮಗಳನ್ನು ವಿವಿಧ ರೀತಿಯಲ್ಲಿ ವರ್ಗೀಕರಿಸಲಾಗಿದೆ. ಹಾಗೆಯೇ ಗ್ರಾಮದ ಮುಖ್ಯಸ್ಥನಿಂದ ಪ್ರಾರಂಭವಾಗಿ ರಾಜ್ಯದ ಮುಖ್ಯಸ್ಥನಾದ ರಾಜನವರೆವಿಗೆ ವಿವಿಧ ಅಧಿಕಾರಿಗಳ ಬಗೆಗೂ ವಿವರಣೆ ದೊರೆಯುತ್ತವೆ. ಹಾಗೆಯೇ ಹೊಸ ಗ್ರಾಮಗಳನ್ನು ಸ್ಥಾಪಿಸುವ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿರುವುದು ಕಂಡು ಬರುತ್ತದೆ. ಇದರ ನಂತರ ಇದುವರೆಗೂ ದೊರೆತಿರುವ ಅನೇಕ ಸಾಹಿತ್ಯಾಧಾರಗಳಲ್ಲಿ ಹಾಗೂ ಶಾಸನಾಧಾರಗಳಲ್ಲಿ ಗ್ರಾಮಗಳ ಉಲ್ಲೇಖವಿರುವುದು ಹೆಚ್ಚಾಗಿ ಕಾಣಬಹುದಾಗಿದೆ. ಹಾಗೆಯೇ ನಮ್ಮ ನಾಡನ್ನು ಆಳಿದಂತಹ ರಾಜವಂಶಗಳ ಕಾಲದಲ್ಲಿ ಗ್ರಾಮೀಣ ಪ್ರದೇಶದ ಅಭಿವೃದ್ಧಿ ಹಾಗೂ ಹೊಸ ಹೊಸ ಗ್ರಾಮಗಳನ್ನು ಸ್ಥಾಪನೆ ಮಾಡಿ ಅವುಗಳ ಅಭಿವೃದ್ಧಿಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ಶ್ರಮಿಸಿರುವುದನ್ನು ನಾವು ಚರಿತ್ರೆಯಿಂದ ತಿಳಿಯಬಹುದಾಗಿದೆ.

ಕರ್ನಾಟಕದಲ್ಲಿ ೧೯೫೦-೧೯೬೦ರ ದಶಕದಲ್ಲಿ ಗ್ರಾಮಾಧ್ಯಯನಗಳೆಂದು ಶೀರ್ಷಿಕೆಯನ್ನೊತ್ತ ಹಲವು ಪ್ರಬಂಧಗಳು, ಗ್ರಂಥಗಳೂ ಸಮಾಜಶಾಸ್ತ್ರದ ಬೆಳೆಯುತ್ತಿರುವ ಸಾಹಿತ್ಯರಾಶಿಗೆ ಬಂದು ಸೇರಿದವು. ಈ ಕ್ಷೇತ್ರಕ್ಕೆ ಸಮಾಜಶಾಸ್ತ್ರಜ್ಞರು ಮಾತ್ರವಲ್ಲದೆ ಸಾಮಾಜಿಕ ಮಾನವಶಾಸ್ತ್ರಜ್ಞರು ಹಾಗೂ ಅರ್ಥಶಾಸ್ತ್ರಜ್ಞರು, ರಾಜಕೀಯಶಾಸ್ತ್ರಜ್ಞರು, ಇತಿಹಾಸಶಾಸ್ತ್ರಜ್ಞರು ಕೂಡಾ ಇಂಥ ಸಾಹಿತ್ಯವನ್ನು ನಿರ್ಮಿಸಿ ಶ್ರೀಮಂತಗೊಳಿಸಲು ಮುಂದಾದರು. ಆದರೆ ೧೯೫೯ರ ನಂತರ ಗ್ರಾಮಾಧ್ಯಯನವೆಂಬ ಅಧ್ಯಯನದ ಪ್ರಕಾರಗಳಿಗೆ ನಿಶ್ಚಿತ ಸ್ವರೂಪ ಹಾಗೂ ಸ್ಥಾನಮಾನ ಪ್ರಾಪ್ತವಾಯಿತೆಂದು ಕೆಲವು ಸಮಾಜಶಾಸ್ತ್ರಜ್ಞರು ಅಭಿಪ್ರಾಯ ಪಡುವುದುಂಟು. ಅಂದಿನಿಂದ ಇಂದಿನವರೆಗೆ ಸಣ್ಣ ದೊಡ್ಡ ರೂಪದ ನೂರಾರು ಅಧ್ಯಯನಗಳು ನಡೆದಿವೆ.

ಊರುಗಳ ಅಧ್ಯಯನ ಅಥವಾ ಗ್ರಾಮಾಧ್ಯಯಗಳೆಂದರೇನು? ಎಂಬ ಪ್ರಶ್ನೆಗೆ ಪ್ರಸಿದ್ಧ ಸಮಾಜ ಶಾಸ್ತ್ರಜ್ಞರಾಗಿದ್ದಂತಹ ಹೆರಾಲ್ಡ್ ಮನ್ ಎಂಬುವರ ಮಾತಿನಲ್ಲಿ ಹೇಳುವುದಾದರೆ, ಗ್ರಾಮಾಧ್ಯಯನಗಳೆಂದರೆ ಗ್ರಾಮೀಣ ಬದುಕು ಹಾಗೂ ಗ್ರಾಮೀಣ ಸ್ಥಿತಿ-ಗತಿಗಳ ಹತ್ತಿರದ ನೋಟಗಳು. ಈ ಹೇಳಿಕೆ ಗಮನಿಸಿದರೆ ಸಾಮಾನ್ಯವಾಗಿ ಇದಕ್ಕಿಂತ ಹೆಚ್ಚಿನ ವ್ಯಾಖ್ಯೆ ಬೇಕಾಗಿಲ್ಲವೆನ್ನಬಹುದು. ಕರ್ನಾಟಕದಲ್ಲಿ ಗ್ರಾಮಾಧ್ಯಯನಗಳು ಪ್ರಚಲಿತವಾಗುತ್ತಿದ್ದ ಸ್ವಲ್ಪ ಮೊದಲು ಭಾರತದಲ್ಲಿಯೂ ಸಮಾಜವಿಜ್ಞಾನಿಗಳು “ಜನಾಂಗೀಯ ಅಧ್ಯಯನಗಳು” ಎಂಬ ಅಧ್ಯಯನಗಳನ್ನು ಕೈಗೊಂಡಿದ್ದರು. ವಿದೇಶಗಳಲ್ಲಿ ರಾಬರ್ಟ್ ರೆಡ್ ಫೀಲ್ಡ್ ರ ಟೆಪೊಜ್ಞಾನ, “ಎ ಮಿಕ್ಸಿಕನ್ ವಿಲೇಜ್” (ಟೆಪೊಜ್ಞಾನ್ ಒಂದು ಮಿಕ್ಸಿಕನ್ ಗ್ರಾಮ), ಥಾಮಸ್ ಮತ್ತು ಜ್ನಾನೇಕಯವರ ದಿ ಪೋಲಿಸ್ ಪ್ರೆಸಂಟ್ ಇನ್ ಯುರೋಪ್ ಆಂಡ್ ಅಮೆರಿಕಾ, (ಯುರೋಪ್ ಮತ್ತು ಅಮೆರಿಕೆಯಲ್ಲಿ ಪೋಲಿಸ್ ರೈತ), ಅಲ್ವಿನ್ ಲೀಸ್ ರವರ ಲೈಡ್ ಇನ್ ಎ ವ್ಯಾಲ್ಯು ಕಂಟ್ರಿ ಸ್ಯಾಡ್ (ವ್ಯಾಲಿ ಹಳ್ಳಿಗಾಡಿನಲ್ಲಿ ಜನಜೀವನ), ಅಂಡ್ ದಂಪತಿಗಳು ಬರೆದಿರುವ “ಮಿಡ್ಲ್ ಟೌನ್’ ಮತ್ತು ವಿಂಡ್ಯಾಟೌನ್ ಇನ್ ಟ್ರಾನ್ಸಿಶನ್ (ಸ್ಥಿತ್ಯಂತರದಲ್ಲಿ ಮಿಡ್ಲ್ ಟೌನ್), ಆಸ್ಕರ್ ಲಿವಿರ್ ರವರ “ಲೈಫ್ ಇನ್ ಎ ಮೆಕ್ಸಿಕನ್ ವಿಲೇಜ್” ಟಿಪೊಜ್ಞಾನ ರೀಸ್ಟಡೀಸ್ (ಮೆಕ್ಸಿಕಾಸ್ ಗ್ರಾಮವೊಂದರಲ್ಲಿ ಜನಜೀವನ; ಟೆಪೊಜ್ಞಾನಿನ ಮರು ಅಧ್ಯಯನ)

[1] ಎಂಬ ಪ್ರಸಿದ್ಧ ಅಧ್ಯಯನಗಳು ಆಗಿನ ಕಾಲದ ಗ್ರಾಮೀಣ ಅಧ್ಯಯನದ ಪ್ರಮುಖ ವಿದೇಶಿ ಕೃತಿಗಾಗಿದ್ದವು. ಇವು ಇಂದಿಗೂ ಸಹ ಹಲವು ರೀತಿಯಲ್ಲಿ ಸಂಶೋಧನಾ ಕೃತಿಗಳಾಗಿ ಉಳಿದಿವೆ.

ಕರ್ನಾಟಕದಲ್ಲಿ ಸಮುದಾಯ ಅಧ್ಯಯನಗಳಿಗೂ ಗ್ರಾಮಾಧ್ಯಯನಗಳಿಗೂ ಒಂದು ಮುಖ್ಯವಾದಂತಹ ಭೇದವಿದೆ. ಕರ್ನಾಟಕದಲ್ಲಿ ಗ್ರಾಮ ಸಮುದಾಯಗಳ ವೈಜ್ಞಾನಿಕ ಅಧ್ಯಯನದ ಪ್ರಾರಂಭವು ಹೆನ್ರಿಮೆಯ್ನರವರು ಬರೆದಂತಹ ಅಯಾನ್ಸಿಯಂಟ್ ಲಾ(೧೮೬೧), “ವಿಲೇಜ್ ಕಮ್ಯುನಿಟೀಸ್ ಇನ್ ದಿ ಈಸ್ಟ್ ಅಂಡ್ ವೇಸ್ಟ್(೧೮೭೬), ಮತ್ತು ದಿ ಅಲಿಗ ಹಿಸ್ಟರಿ ಆಫ್ ಇನ್ಸ್ ಟಿನ್ಯೂಷನ್ಸ್” (೧೮೮೦)[2] ಎಂಬ ಗ್ರಂಥಗಳು ಪ್ರಕಟಣೆಯಾದಾಗಿನಿಂದವೆನ್ನಬಹುದು ಮೇಲೆ ಉಲ್ಲೇಖಿಸಿರುವ ಮೊದಲನೆಯ ಮತ್ತು ಕೊನೆಯ ಕೃತಿಗಳು ಜಗತ್ತಿನಾದ್ಯಾಂತ ಗ್ರಾಮ ಸಮಾಜದ ವಿಕಾಸದ ಬಗ್ಗೆ ನೀಡುವ ಸಿದ್ಧಾಂತಗಳನ್ಮು ಒಳಗೊಂಡಿವೆ. ಈ ಕೃತಿಗಳಲ್ಲಿ ಅಲ್ಲಲ್ಲಿ ಕರ್ನಾಟಕದ ಸಮುದಾಯಗಳ ಬಗ್ಗೆಯೂ ಉಲ್ಲೇಖವಿರುವುದು ಕಂಡು ಬರುತ್ತದೆ. “ದಿ ಇಂಡಿಯನ್ ವಿಲೇಜ್ ಕಮ್ಯುನಿಟಿ” ಎಂಬ ಗ್ರಂಥವನ್ನು ಪ್ರಕಟಿಸಿದರು[3]. ಈ ಗ್ರಂಥದಲ್ಲಿ ಭಾರತದ ಗ್ರಾಮೀಣ ಸಮಾಜದ ಎಲ್ಲ ಸಂಕೀರ್ಣತೆಯನ್ನು ಸಶಕ್ತವಾಗಿ ಗ್ರಹಿಸಲಾಗಿದೆ.

ಜಗತ್ತಿನ ಇತರ ಭಾಗಗಳಲ್ಲಿ ಗ್ರಾಮಗಳು ವಿಕಾಸ ಹೊಂದಿದ ಬಗೆಯಲ್ಲಿಯೇ ಭಾರತದಲ್ಲಿಯೂ ಗ್ರಾಮಗಳು ವಿಕಾಸ ಹೊಂದಿದವು ಎಂದು ಹೆನ್ಸಿಮೇಯ್ಸ್ ಅಭಿಪ್ರಾಯ ಪಟ್ಟರೆ, ಇದರ ವಿರುದ್ಧ ಅಭಿಪ್ರಾಯವನ್ನು ಬಾಡೆನ್ ಪಾವೆಲ್ ರವರು ವ್ಯಕ್ತಪಡಿಸಿದ್ದಾರೆ. ಅವರ ಪ್ರಕಾರ ರೈತವಾರಿ ಗ್ರಾಮಗಳು ಭಾರತದ ಮೂಲ ಗ್ರಾಮಗಳು. ಸಂಯುಕ್ತ ಗ್ರಾಮಗಳು ಆರ್ಯರ ಆಗಮನದ ನಂತರವೇ ಹುಟ್ಟಿಕೊಂಡವು. ಆರ್ಯರಲ್ಲಿ ಪೂರ್ವಪಿತೃಗಳ ಬಗ್ಗೆ ಬಲವಾದ ನಂಬಿಕೆಯಿದ್ದರಿಂದ ಗ್ರಾಮಗಳ ರಚನೆಯ ಮೇಲೆ ಅದು ಪ್ರಭಾವ ಬೀರಿತು. ಗ್ರಾಮಗಳು ಪಿತೃಪ್ರಧಾನ ಸಂಯುಕ್ತ ಕುಟುಂಬದ ಮಾದರಿಯಲ್ಲಿ ಬದಲಾವಣೆ ಹೊಂದಿದವು. ಬಾಡೆನ್ ಪಾವೆಲ್ ರವರು ಈ ವಾದಕ್ಕೆ ಸಾಕ್ಷಿಯಾಗಿ ಸಂಯುಕ್ತ ಗ್ರಾಮಗಳು ಆರ್ಯರ ಪ್ರಭಾವ ಮಧ್ಯವರ್ತಕ ಶ್ರೇಣಿಯ ಉತ್ತರ ಭಾಗದಲ್ಲಿ ಹೆಚ್ಚಾಗಿದ್ದು ದ್ರಾವಿಡರ ಪ್ರಾಬಲ್ಯವಿರುವ ದಕ್ಷಿಣ ಭಾರತದಲ್ಲಿ ರೈತವಾರಿ ಗ್ರಾಮಗಳು ಹೆಚ್ಚಾಗಿರುವುದನ್ನು ಎತ್ತಿ ತೋರಿಸುತ್ತಾರೆ[4]. ಈ ವಿವಾದವು ಮೊದಲು ಗ್ರಾಮೀಣ ಸಮಾಜದ ಅಧ್ಯಯನ ಕೈಗೊಂಡ ವಿದ್ವಾಂಸರಿಗೆ ಕುತೂಹಲಕರವಾದಂತಹ ಬೆಳವಣಿಗೆಯಾಗಿದ್ದಿತ್ತು.

ಗಾಂಧೀಜಿಯವರು ರಾಷ್ಟ್ರೀಯ ಸ್ವಾತಂತ್ರ್ಯ, ಆಂದೋಲನಕ್ಕೆ ಕರೆಕೊಟ್ಟಾಗ ಓಗೊಟ್ಟು ಬಂದ ಅವರ ಅನುಯಾಯಿಗಳಲ್ಲಿ ವಿದ್ಯಾರ್ಥಿಗಳು ಮತ್ತು ಸಹೋದ್ಯೋಗಿಗಳು ಇದ್ದರು. ಗಾಂಧೀಜಿಯವರು ಅವರಿಗೆ ಗ್ರಾಮೀಣ ಸಮಾಜದ ಅಧ್ಯಯನ ಮತ್ತು ಅಲ್ಲಿನ ಸಮಸ್ಯೆಗಳ ಜೊತೆಗೆ ಪರಿಹಾರಕವಾದ ಸೂಚನೆ ನೀಡುವಂತಹ ಅಧ್ಯಯನ ಮಾಡಲು ತಿಳಿಸಿದರು. ಇದೇ ಸಂದರ್ಭದಲ್ಲಿ ಅವರು ಸರ್ವೋದಯ ಕಾರ್ಯಕ್ರಮವನ್ನು ಸಹ ರೂಢಿಸಿದರು. ಇವುಗಳೊಂದಿಗೆ ಭಾರತದಲ್ಲಿ ಜೊತೆಗೆ ಕರ್ನಾಟಕದಲ್ಲಿಯೂ ಅನೇಕರಿಗೆ “ಗ್ರಾಮಾಧ್ಯಯನದ” ಬಗ್ಗೆ ಅಧ್ಯಯನ ಕೈಗೊಳ್ಳಲು ಪ್ರೇರಣೆ ನೀಡಿತು. “ವಿಲೇಜ್ ಗವರ್ನಮೆಂಟ್ ಇನ್ ಬ್ರಿಟಿಶ್ ಇಂಡಿಯ” ಮತ್ತು “ಲೋಕಲ್ ಗವರ್ನಮೆಂಟ್ ಇನ್ ಏನ್ಸಿಯಂಟ್ ಇಂಡಿಯಾ” ಗಳಲ್ಲದೆ ಅನೇಕ ಕೃತಿಗಳು ಈ ಅವಧಿಯಲ್ಲಿ ಪ್ರಕಟಗೊಂಡವು. ಇವು ಗ್ರಾಮ ಅಧ್ಯಯನದಲ್ಲಿ ಆಸಕ್ತಿ ಮೂಡಿಸಲು ಸಹಕಾರಿಯಾದವು. ಸ್ವಾತಂತ್ರ್ಯನಂತರ ಗ್ರಾಮಗಳ ಅಧ್ಯಯನಕ್ಕೆ ಹೆಚ್ಚಿನ ಗಮನ ನೀಡಲಾಯಿತು. ದೇಶೀಯ ಸಂಶೋಧಕರೊಂದಿಗೆ ವಿದೇಶೀಯ ಅದರಲ್ಲಿಯೂ ಅಮೆರಿಕಾದ ಸಂಶೋಧಕರು ಅನೇಕ ಗ್ರಾಮಗಳು ಸಮುದಾಯಗಳ ಬಗ್ಗೆ ಸಂಶೋಧನಾ ಯೋಜನೆಗಳನ್ನು ಕೈಗೊಳ್ಳತೊಡಗಿದರು. ಈ ಸಂಶೋಧಕರು ಒಂದು ಕೆಲವು ಹಳ್ಳಿಗಳ ಗುಂಪನ್ನು ಆರಿಸಿಕೊಂಡು ಹಲವಾರು ವರ್ಷಗಳ ಕಾಲ ಅಲ್ಲಿಯೇ ನೆಲಸಿ ಆಯಾ ಗ್ರಾಮಗಳ ಸಮಗ್ರ ಅಧ್ಯಯನ ಮಾಡತೊಡಗಿದರು. ಈ ರೀತಿಯ ಅಧ್ಯಯನಗಳು ಗ್ರಾಮ ಸಮಾಜದ ವ್ಯವಸ್ಥಿತವಾದ, ವೈಜ್ಞಾನಿಕ ಚಿಂತನೆಗೆ ಸಹಕಾರಿಯಾದವುಗಳಾಗಿವೆ. ದಕ್ಷಿಣ ಕರ್ನಾಟಕದ (ಹಳೆ ಮೈಸೂರು ಪ್ರಾಂತ್ಯದ ಗ್ರಾಮಗಳಲ್ಲಿ) ಗ್ರಾಮೀಣ ಬದುಕಿನ ಚಿತ್ರವನ್ನು ನೀಡಿರುವ ಅಬ್ಬಿಬ್ ದುಬಾಯ್ ರವರ “ದಿ ಹಿಂದೂ ಮ್ಯಾನರ್ ಅಂಡ್ ಕಸ್ಟಮ್ಸ್” ಕೃತಿಯು ಈ ದೃಷ್ಟಿಯಲ್ಲಿ ಉತ್ತಮ ಸಂಶೋಧನಾಕೃತಿಯಾಗಿ ಹೊರಹೊಮ್ಮಿದೆ.

ಹಿಂದೆ ಚರ್ಚಿಸಲು ಬಯಸಿರುವಂತೆಯೇ ೨೦ನೇ ಶತಮಾನದ ಮೊದಲಿಗೆ ಪ್ರಾರಂಭವಾದ ಗ್ರಾಮಾಧ್ಯಯನಗಳು ಭಾರತದ ಬಡತನವನ್ನು ತಿಳಿಯಲು ಮಾಡಿದ ಪ್ರಯತ್ನದಂತಿದ್ದವು. ಎಚ್. ಎಚ್. ಮಾನೆ ಮತ್ತು ಎನ್. ವಿ. ಕಂಟೀಕರ ರವರ “ಲ್ಯಾಂಡ್ ಆಂಡ್ ಲೇಬರ್ ಇನ್ ಎ ಡೆಕನ್ ವಿಲೇಜ್” (ದಖ್ಖನಿನ ಗ್ರಾಮವೊಂದರಲ್ಲಿ ಭೂಮಿ ಮತ್ತು ಶ್ರಮ) ಎಂಬ ಗ್ರಂಥ, ೧೯೧೮ರಲ್ಲಿ ಪ್ರಕಟವಾದ ಗಿಲ್ಬಟ್ ಸ್ಲೇಟರನ “ಇಕಾನಮಿಕ್ ಕಂಡಿಷನ್ಸ್ ಆಫ್ ಸಮ್ ಆಫ್ ದಿ ಸೌಥ್ ಇಂಡಿಯನ್ ವಿಲೇಜಸ್” (ದಕ್ಷಿಣ ಭಾರತದ ಕೆಲವು ಹಳ್ಳಿಗಳ ಆರ್ಥಿಕ ಸ್ಥಿತಿಗತಿಗಳು) ಎಂಬ ಕೃತಿ, ೧೯೨೫ ರಲ್ಲಿ ಎಂ. ಎಲ್. ಡಾರ್ಲಿಂಗ್ ರವರ “ದಿ ಪಂಜಾಬ್ ಪೆಸಂಟ್ ಇನ್ ಪ್ರಾಸ್ಪೆಂಟ್ ಅಂಡ್ ಡೆಟ್” (ಸಮೃದ್ಧಿ ಮತ್ತು ಸಾಲದಲ್ಲಿ ಪಂಜಾಬಿನ ರೈತ) ಇವು ಪ್ರಮುಖವಾದ ಕೃತಿಗಳು. ಈ ಕೃತಿಗಳು ಅಂದಿನ ರೈತರು “ಸಾಲದಲ್ಲಿ ಹುಟ್ಟಿ; ಸಾಲದಲ್ಲಿ ಬದುಕಿ, ಸಾಲದಲ್ಲಿ ಸಾಯುವ” ಬವಣೆಯನ್ನು ವರ್ಣಿಸಿದವು. ಈ ದೃಷ್ಟಿಯಲ್ಲಿ ಇವು ಇಂದಿಗೂ ಸಹ ಪ್ರಸ್ತುತವಾಗಿವೆ. ದಕ್ಷಿಣ ಭಾರತದ ಗ್ರಾಮಗಳ ಬಗೆಗೆ ಥಾಮಸ್, ಮತ್ತು ರಾಮಕೃಷ್ಣನ್ ರವರನ್ನು ಇಲ್ಲಿ ಸ್ಮರಿಸಬೇಕು. ಇವರುಗಳು ಹಿಡುವಳಿಯ ಗಾತ್ರ, ಭೂಮಿಯ ಬಳಕೆ, ಬೆಳೆವಿನ್ಯಾಸ, ಜಾತಿಗಳ ಏಣಿಶ್ರೇಣಿ, ರೈತರ ಉತ್ಪನ್ನ, ಆದಾಯ, ವಿದ್ಯಾಭ್ಯಾಸ ವೆಚ್ಚ, ಉಳಿತಾಯ, ಸಾಲ, ಆಸ್ತಿ, ಜಾನುವಾರು ಸಂಪತ್ತುಗಳನ್ನೆಲ್ಲಾ ಅಳೆದು ಬಿಡಿಬಿಡಿಯಾಗಿ ಸಾಮಾನ್ಯ ಪ್ರಜೆಗೂ ತಿಳಿಯುವ ಹಾಗೆ ಹೇಳಲು ಪ್ರಯತ್ನಿಸಿದರು. ಒಂದು ದೃಷ್ಟಿಯಲ್ಲಿ ಇವರ ಗ್ರಂಥಗಳನ್ನು “ಗ್ರಾಮೀಣ ಪಾರ್ಶ್ವ ನೋಟಗಳು”[5] ಎನ್ನಬಹುದಾಗಿದೆ. ಇವರುಗಳು ತಿಂಗಳುಗಳ ಕಾಲ ಗ್ರಾಮೀಣ ಪ್ರದೇಶದಲ್ಲಿಯೂ ಕಣ್ಣಾರೆ ನೋಡಿ ಪಾಲ್ಗೊಂಡು ಹೇಳುವ ಗ್ರಾಮೀಣ ಬದುಕಿನ ಸತ್ಯ ಕಥೆಗಳೆಂದು ವರ್ಣಿಸುವುದು ಸೂಕ್ತವಾದೀತು.

ಕರ್ನಾಟಕ ಗ್ರಾಮೀಣ ಬದುಕನ್ನು ತಮ್ಮ ಬರವಣಿಗೆಯಲ್ಲಿ ಶ್ರೀಮಂತಗೊಳಿಸಿದ ಎಂ. ಎನ್. ಶ್ರೀನಿವಾಸ್ ರವರು ಅಂತರ ರಾಷ್ಟ್ರೀಯ ಖ್ಯಾತಿ ಪಡೆದ ಸಮಾಜಶಾಸ್ತ್ರಜ್ಞರು, ಇವರು “ದಿ ರಿಮೆಂಬರ್ಡ್ ವಿಲೇಜ್” ಎಂಬ ಪ್ರಸಿದ್ಧ ಗ್ರಂಥ ಬರೆದಿದ್ದಾರೆ. ೧೯೫೫ರಲ್ಲಿ ಮೆಕಿಮ್ ಮ್ಯಾರಿಯಟ್ ಸಂಪಾದಿಸಿದ “ವಿಲೇಜ್ ಇಂಡಿಯಾ” ಕ್ಕೆ ಅವರು ಬರೆದ “ಮೈಸೂರು ಗ್ರಾಮವೊಂದರ ಸಾಮಾಜಿಕ ವ್ಯವಸ್ಥೆ” (ದಿ ಸೋಷಿಯಲ್ ಸಿಸ್ಟಮ್ ಆಫ್ ಎ ಮೈಸೂರ್ ವಿಲೇಜ್) ಎಂಬ ಲೇಖನ ಹಾಗೂ ಶ್ರೀನಿವಾಸರೇ ಸಂಪಾದಿಸಿದ “ಇಂಡಿಯಾಸ್ ವಿಲೇಜಸ್” ಕೃತಿಗಳು ಗ್ರಾಮ ಜೀವನದ ಅಧ್ಯಯನಕ್ಕೆ ಸಹಕಾರಿಯಾಗಿದೆ.

ನಮ್ಮ ದೇಶ ಮುಖ್ಯವಾಗಿ ಹಳ್ಳಿಗಳ ದೇಶ, ಇದನ್ನು ನೇಗಿಲಯೋಗಿಗಳ ತೌರುಮನೆಯಂದು ರಾಷ್ಟ್ರಕವಿ ಕುವೆಂಪು ವರ್ಣಿಸಿರುವುದನ್ನು ಕಾಣಬಹುದು. ಕುವೆಂಪುರವರ ತಮ್ಮ ಪ್ರಸಿದ್ಧ ಕವನವಾದ “ನೇಗಿಲಯೋಗಿ” ಯಲ್ಲಿ ಯೋಗಿಯು ತನ್ನ ಯೋಗಾಭ್ಯಾಸವನ್ನು ಎಷ್ಟೇ ತೊಂದರೆ ಬಂದರೂ ಬಿಡದೆ ಹೇಗೆ ಸಾಧಿಸುವನೋ, ಅದೇ ರೀತಿಯಾಗಿ ನಮ್ಮ ರೈತನು ಎಷ್ಟೇ ಕಷ್ಟಗಳಾದರೂ ಹಿಂಜರಿಯದೆ ಬೇಸಾಯವನ್ನೇ ನಂಬಿ ತನ್ನ ಬಾಳಿನ ಸಾಧನೆ ಮಾಡುತ್ತಿದ್ದಾನೆ. ಇದು ಇಂದಿಗೂ ಸಹ ಅನೇಕ ಆಧುನಿಕತೆಯ ಪ್ರವೇಶದ ನಡುವೆಯೂ ತನ್ನ ವಿಶಿಷ್ಟವಾದಂತಹ ವಿಶಾಲ ಅರ್ಥವನ್ನು ಹೊಂದಿ ಮುನ್ನಡೆಯುತ್ತಿದೆ. ಕುವೆಂಪುರವರ ಮಾತಿನಲ್ಲಿಯೇ ಹೇಳುವುದಾದರೆ

ಫಲವನು ಬಯಸದ ಸೇವೆಯೆ ಪೂಜೆಯು

ಕರ್ಮವೆ ಇಹಪರ ಸಾಧನವು

ಕಷ್ಟದೊಳನ್ನವ ದುಡಿವನೆ ತ್ಯಾಗಿ

ಸೃಷ್ಟಿ ನಿಯಮದೊಳವನೇ ಭೋಗಿ

 

ಲೋಕದೊಳೇನೇ ನಡೆಯುತಲಿರಲಿ

ತನ್ನೀ ಕಾರ್ಯವ ಬಿಡನೆಂದೂ

ರಾಜ್ಯಗಳುದಿಸಲಿ ರಾಜ್ಯಗಳಳಿಯಲಿ

ಹಾರಲಿ ಗದ್ದುಗೆ ಮಕುಟಗಳು

ಮುತ್ತಿಗೆ ಹಾಕಲಿ ಸೈನಿಕರೆಲ್ಲ

ಬಿತ್ತುಳುವುದನ ಬಿಡುವುದೆ ಇಲ್ಲ.

ಈ ಮಾತು ನಿಜಕ್ಕೂ ನಮ್ಮ ರೈತರ ದುಡಿಮೆಯ ಪ್ರಮಾಣಿಕ ಸಂಕೇತದ ಅರ್ಥವನ್ನು ಸೂಚಿಸುತ್ತದೆ.

ಹಳ್ಳಿ ಅಳಿದರೆ ಭಾರತವೂ ಅಳಿಯುತ್ತದೆ ಎಂದರು ಗಾಂಧೀಜಿ. ಆದರೆ ಈ ೫೪ ವರ್ಷಗಳು ಬೃಹತ್ ಯೋಜನಾ ಪಯಣದಲ್ಲಿ ನಮ್ಮ ಐದು ಮುಕ್ಕಾಲು ಲಕ್ಷ ಹಳ್ಳಿಗಳು ನಶಿಸುತ್ತಲೇ ಇವೆ. ಸಣ್ಣಪುಟ್ಟವಾಗಿದ್ದಂತಹ ನಗರ ಪ್ರದೇಶಗಳು ಮಹಾನಗರಗಳಾಗಿ ಬೆಳೆದು ನಿಂತಿವೆ. ನಮ್ಮ ಜನಸಂಖ್ಯೆಯು ಮಿತಿಯೇ ಇಲ್ಲದ ರೀತಿಯಲ್ಲಿ ಬೆಳೆಯುತ್ತಿವೆ. ಉತ್ಪಾದನೆಯಲ್ಲಿ ಒಂದಕ್ಕೆ ಆರರಷ್ಟು ಹೆಚ್ಚಿದೆ. ಬಡತನದ ರೇಖೆಯಿಂದ ಕೆಳಗಿರುವ ಜನಸಂಖ್ಯೆಯೂ ಒಂದಕ್ಕೆ ನಾಲ್ಕರಷ್ಟು ಹೆಚ್ಚಿದೆ. ಅಕ್ಷರಸ್ಥರ ಸಂಖ್ಯೆ ಹೆಚ್ಚಾಗುತ್ತಿರುವ ಹಾಗೂ ಅದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಅನಕ್ಷರಸ್ಥರ ಸಂಖ್ಯೆಯೂ ಬೃಹದಾಕಾರವಾಗಿಯೇ ಬೆಳೆಯುತ್ತಿರುವುದು ಕಾಣಬಹುದು. ವ್ಯವಸಾಯದ ಭೂಮಿ ಹೆಚ್ಚಾಗಿದೆ, ಮಳೆಯನ್ನೇ ನಂಬಿದ್ದಂತಹ ಪ್ರದೇಶಗಳಿಗೆ ಅಣೆಕಟ್ಟುಗಳ ಮೂಲಕ ನೀರಾವರಿ ವ್ಯವಸ್ಥೆಯನ್ನು ಜಾರಿಗೆ ತಂದಿದ್ದರೂ ಸಹ ಉಣ್ಣಲು ಅನ್ನ ಎಲ್ಲರಿಗೂ ಸಮನಾಗಿ ದೊರಕದು. ಬಟ್ಟೆಯ ಉತ್ಪಾದನೆ ನಾಲ್ಕು ಪಟ್ಟು ಹೆಚ್ಚಿದೆ. ಆದರೆ ೧೯೫೫-೫೬ರಲ್ಲಿ ವರ್ಷಕ್ಕೆ ಪ್ರತಿಯೊಬ್ಬ, ಪ್ರಜೆಗೆ ೧೪.೪ ಮೀಟರ್ ಬಟ್ಟೆ, ಬಳಕೆ ಇದ್ದರೆ, ೧೯೮೧- ೧೯೮೨ ರಲ್ಲಿ ೧೦.೭ ಮೀಟರ್ ಗಳಿಗೆ ಇಳಿಯಿತು. ನಂತರ ೧೯೯೧-೯೨ ರಲ್ಲಿ ೦.೯೩ ಮೀಟರ್ ಗಳಿಗೆ ಇಳಿದಿದೆ. ಇದರ ಅರ್ಥ ಒಟ್ಟು ಭಾರತದ ಜನ ಸಂಖ್ಯೆಯಲ್ಲಿ ೪೦ ಕೋಟಿ ಜನರ ಜೀವನ ದುರ್ಭರವಾಗಿದೆನ್ನಬಹುದು. ಅರೆ ಲೂಟಿ, ಅರೆ ನಗ್ನತೆ, ಅರಕ್ಷಿತ ಜೀವನ ಅವರ ಪಾಲಿಗೆ ನಿತ್ಯಶಾಪವಾಗಿ ಪರಿಣಮಿಸಿದೆ. ಈ ಮೇಲಿನೆಲ್ಲ ಶೋಷಣೆಗಳಿಗೆ ಬಲಿಯಾದವರೆಲ್ಲರೂ ಮುಕ್ಕಾಲು ಭಾಗ ಗ್ರಾಮಸ್ಥರುಗಳೇ. ಅವರಲ್ಲಿಯೂ ಬಹುಭಾಗ ರೈತರು ಹಾಗೂ ಕೂಲಿಕಾರ್ಮಿಕರು. ವ್ಯವಸಾಯಾಧಾರಿತ ಜೀವನ ತಿರುಗುತ್ತಿರುವ ಈ ಜನ ಹಳ್ಳಿಗಳಲ್ಲಿ ಜೀವಿಸುತ್ತಿದ್ದಾರೆ. ಅದಕ್ಕನುಗುಣವಾದ ಆರ್ಥಿಕ ಸಾಮಾಜಿಕ ಮತ್ತು ಶೈಕ್ಷಣಿಕ ಪ್ರಗತಿಗೆ ಶ್ರಮಿಸುತ್ತಿರುವ ಸರ್ಕಾರಗಳು ಪ್ರಗತಿ ಪಡೆದಿದ್ದೇವೆಂದು ಅಂದುಕೊಂಡರೂ ಸಹ ಅಂತರಾಳದಲ್ಲಿ ಸ್ವಲ್ಪವೂ ಪ್ರಗತಿ ಕಾಣದೆ ಉಳಿದಿವೆ. ಗ್ರಾಮೀಣ ಪ್ರದೇಶದ ಆರ್ಥಿಕ ಸಂಪತ್ತೆಲ್ಲವೂ ದಾರಿತಪ್ಪಿವೆ. ನಗರಾಭಿಮುಖವಾಗಿರುವ ಅವುಗಳ ಹಿತಾಸಕ್ತಿಗಳು ಹೆಚ್ಚು, ಹೆಚ್ಚಾಗಿ ಶೋಷಣೆಗೆ ಬಲಿಯಾಗುತ್ತಿವೆ. ಅಷ್ಟೆ ಅಲ್ಲದೇ ಉತ್ಪಾದಿತ ಆದಾಯವೆಲ್ಲವೂ ಬ್ರಾಹ್ಮಣ ಹಾಗೂ ಶ್ರೀಮಂತ ಬ್ರಾಹ್ಮಣೇತರರು ಹಾಗೂ ಅಲ್ಪಸಂಖ್ಯಾತರೆಂದು ಕರೆಸಿಕೊಳ್ಳುವ ಅನ್ಯ ಕೋಮುಗಳ ಹಿಡಿತಕ್ಕೆ ಸಿಕ್ಕಿವೆ. ಜಾಗತೀಕರಣ, ಕೈಗಾರೀಕರಣ, ನಗರೀಕರಣ, ಆಧುನಿಕ ವ್ಯಾಪಾರೀಕರಣ, ಖಾಸಗೀಕರಣಗಳಿಂದಾಗಿ ಹಳ್ಳಿಹಳ್ಳಿಗಳಲ್ಲಿ ನೆಮ್ಮದಿ ಸಂಪೂರ್ಣವಾಗಿ ನಶಿಸಿ ಹೋಗುತ್ತಿದೆ. ಅತೃಪ್ತಿ, ಅಭದ್ರತೆ, ಅಶಾಂತಿಗಳಿಗೆ ತುತ್ತಾಗಿರುವ ಅಸಂಖ್ಯಾತ ದೇಶಬಾಂಧವರು ಅದರಲ್ಲಿಯೂ ಗ್ರಾಮೀಣ ಪ್ರದೇಶದ ದಲಿತ ವರ್ಗ ಹಾಗೂ ಮಹಿಳೆಯರು ತಮ್ಮ ಭವಿಷ್ಯವನ್ನು ಕುರಿತು ಆಳವಾಗಿ ಯೋಚಿಸುತ್ತಿದ್ದಾರೆ. ಇವುಗಳ ನಿವಾರಣೆಗೆ ಸರ್ಕಾರ ಅಥವಾ ಅಧೀನ ಸಂಘ ಸಂಸ್ಥೆಗಳು ನೂರಾರು ಯೋಜನೆಗಳನ್ನು ನಿರ್ಮಿಸಿಕೊಂಡು ಇವುಗಳ ನಿವಾರಣೆಗೆ ಶ್ರಮಿಸುತ್ತಾ ಬಂದಿದ್ದರೂ ಸಹ ತೃಪ್ತಿಕರವಾದಂತಹ ಫಲ ಸಿಗುವಂತೆ ಕಾಣುತ್ತಿಲ್ಲ. ಇದಕ್ಕೆ ನಮ್ಮ ರಾಷ್ಟ್ರದ ಸಾಮಾಜಿಕ ರಚನೆಯೂ ಮೂಲ ಕಾರಣವಾಗಿದೆನ್ನಬಹುದು.

ಕಳೆದ ಶತಮಾನದ ಪ್ರಾರಂಭದಲ್ಲಿಯೇ ಸ್ವಾಮಿ ವಿವೇಕಾನಂದರು ಈ ರಾಷ್ಟ್ರದ ಮಹಾಚೇತನವನ್ನು ಬಡಿದೆಬ್ಬಿಸಲು ಅಜೇಯ ವಾಣಿಯಿಂದ ನಿರ್ಭಯವಾಗಿ ನುಡಿದಿದ್ದರು: “ಎದ್ದೇಳಿ, ಎಚ್ಚರಗೊಳ್ಳಿ, ಗುರಿ ಮುಟ್ಟುವ ತನಕ ಮುನ್ನಡೆಯಿರಿ! ಮತ್ತೊಮ್ಮೆ ಎದೆಗಾರಿಕೆಯಿಂದ ಎದ್ದು ನಿಲ್ಲಿ! ತ್ಯಾಗಕ್ಕೆ ಸಿದ್ಧರಾಗಿ! ತ್ಯಾಗವಿಲ್ಲದೆ ಯಾವುದನ್ನು ಸಾಧಿಸಲಾರಿರಿ. ಅಲ್ಪ ಸ್ವಾರ್ಥವನ್ನು ಮೆಟ್ಟಿ ನಿಲ್ಲದೆ ಯಾರಿಗೂ ಉಪಕಾರಿಯಾಗಲು ಸಾಧ್ಯವಿಲ್ಲ. ರಾಷ್ಟ್ರ ಮುಳುಗಿ ಹೋಗುತ್ತಿದೆ. ಅಸಂಖ್ಯ ಕೋಟಿ ಜನತೆಯ ಶಾಪ ನಮ್ಮ ತಲೆಯ ಮೇಲೆ ದಟ್ಟವಾಗಿದೆ. ಬಾಯಾರಿಕೆಯಿಂದ ಸಾಯುತ್ತಿರುವ ಅಸಂಖ್ಯಾತ ಬಾಂಧವರಿಗೆ ಬಚ್ಚಲು ನೀರನ್ನು ನೀಡಿ ಯಥೇಚ್ಚವಾಗಿ ಹರಿಯುತ್ತಿರುವ ನದಿನೀರಿನಿಂದ ವಂಚಿಸಿದ್ದೇವೆ. ವೈಜ್ಞಾನಿಕವಾಗಿ ನಾವೆಲ್ಲ ಒಂದೇ, ಒಬ್ಬನೇ ದೇವನ ಸಂಜಾತರು ಎಂದು ಬೋಧಿಸುತ್ತಾ ಕಿರಿಯಂಶವನ್ನೂ ಆಚಾರದಲ್ಲಿ ಅನುಷ್ಟಾನ ಮಾಡದೆ ಅಗಾಧ ಸಂಖ್ಯೆಯ ವಂಚಕವೃತ್ತಿ ಅತ್ಯಂತ ದಾರುಣವಾಗಿ ಬೆಳೆದಿದೆ. ನಮಗಿಂದು ಬೇಕಾಗಿರುವುದು ಸ್ಫಟಿಕ ಸದೃಶವಾದ ಶೀಲ. ಸತ್ತರೂ ಬಿಡಲಾರೆ ಎನ್ನುವ ನೈತಿಕಶೀಲ, ಭಾರತ ಬದುಕಲು ನಿಸ್ಸೀಮ ಬಲಿದಾನಕ್ಕೂ ಸಿದ್ದರಿರುವ ವೀರ ಜನಾಂಗ”[6] ಎಂದು ವಿವೇಕಾನಂದರು ಅಂದಿನ ಯುವಕರಿಗೆ ಅಮೃತ ವಾಣಿಯ ಮೂಲಕ ರಾಷ್ಟ್ರದ ಪ್ರಗತಿಗೆ ಕರೆಕೊಟ್ಟರು. ಇದು ಇಂದಿಗೂ ಮುಂದೆಂದಿಗೂ ಪ್ರಸ್ತುತವೆಂದೆನ್ನಿಸಿಕೊಂಡಿದೆ.

ಕನ್ನಡ ನಾಡು ಒಂದು ಬೃಹತ್ ಶ್ರೀಮಂತ ನಾಡು. ಅತ್ಯಂತ ಹೆಚ್ಚಿನ ಪ್ರಾಕೃತಿಕ ಸಂಪತ್ತನ್ನು, ಮಾನವ ಶಕ್ತಿಯನ್ನೂ ಪಡೆದ ಅದ್ವಿತೀಯ ರಾಜ್ಯ. ಆದರೂ ಅದು ಅತ್ಯಂತ, ದಾರುಣ ಜೀವನ ಸಮಸ್ಯೆಗಳನ್ನು ಈಗ ಎದುರಿಸುತ್ತಿದೆ. ಇವೆಲ್ಲವನ್ನೂ ಒಟ್ಟು ಗೂಡಿಸಿ ಅವರ ಜೊತೆಯಲ್ಲಿ ಭಾರತ ದೇಶದ ರಾಷ್ಟ್ರೀಯ, ದಾರ್ಶನಿಕ ಮತ್ತು ಆತ್ಮ ಶಕ್ತಿಗಳ ಮಹಾ ಪರಂಪರೆ ಹಾಗೂ ಆಧುನಿಕ ಜ್ಞಾನಭಂಡಾರದ ತಂತ್ರಜ್ಞಾನವನ್ನು ಜೋಡಿಸಿ ನೋಡಿದಾಗ ಬಹುಶಃ ಕರ್ನಾಟಕದ ಚಿತ್ರ ಸ್ಪಷ್ಟವಾಗಬಹುದೇನೋ. ಸಮಸ್ತ ಶಕ್ತಿ ವಿಶೇಷಗಳನ್ನೂ ಈ ನಾಡು ಅನ್ವೇಷಿಸಿ ಅರಗಿಸಿಕೊಳ್ಳುತ್ತಲೇ ಇದೆ. ಆದ್ದರಿಂದಲೇ ನಮ್ಮ ಜನತೆಯ ಅಂತಸತ್ವಗಳಲ್ಲಿ ಭರವಸೆ ಉಕ್ಕುತ್ತದೆ. ಅವರ ಆತ್ಮ ವಿಶ್ವಾಸದಲ್ಲಿ ನಂಬಿಕೆಯಿದೆ. ಈ ಪುಣ್ಯಭೂಮಿ ನಿರಾಶೆ ಅಥವಾ ನಿಸ್ಸಹಾಯಕತೆಗಳಿಂದ ನಲುಗಿ ಹೋಗುತ್ತದೆ ಎಂದು ನಾನು ನಂಬಲಾರೆ ಎಂದಿದ್ದಾರೆ ಈ ನಾಡು ಕಂಡ ಪ್ರಸಿದ್ಧ ರಾಜರಾದಂತಹ ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ರವರು. ಮೈಸೂರು ವಿಶ್ವ ವಿದ್ಯಾಲಯದ ಮೊದಲ ಘಟಿಕೋತ್ಸವ ಭಾಷಣದಲ್ಲಿ ಆಡಿದ ಮಾತುಗಳು. ಅವು ಅಂದು ಹಾಗೂ ಇಂದಿಗೂ ಸಹ ಪ್ರಸ್ತುತವೆನ್ನಬಹುದಾಗಿದೆ. “ನಮ್ಮ ನಾಡು ನೂರಕ್ಕೆ ೭೦ ರಷ್ಟು ವ್ಯವಸಾಯಿಕ ದೇಶ. ಗ್ರಾಮಗಳೇ ಇಲ್ಲಿಯ ಐಶ್ವರ್ಯದ ಆಧಾರ, ರೈತನೇ ಗ್ರಾಮಗಳ ಮತ್ತು ರಾಷ್ಟ್ರದ ತಳಹದಿ. ಅವನ ಸಂಪತ್ತೇ ದೇಶದ ಸಂಪತ್ತು. ಅವನ ಭಾಗ್ಯವೇ ದೇಶದ ಭಾಗ್ಯ. ಅವನ ಉದ್ಧಾರವೇ ದೇಶೋದ್ಧಾರ, ಇಂಥ ರೈತನಲ್ಲಿ ಸುಖ, ಸಂಪತ್ತು ಸಮೃದ್ಧಿಯಾಗಿದ್ದರೆ ದೇಶದಲ್ಲಿ ನೆಲವೂ ಬಲವೂ ಸಂಪತ್ತೂ ಪ್ರವಾಹಬಂದ ನದಿಯಂತೆ ಉಕ್ಕಿ ಉಕ್ಕಿ ಹರಿಯುತ್ತದೆ” ಎಂದು ನಮ್ಮ ಗ್ರಾಮೀಣ ಪ್ರದೇಶದ ಮಹತ್ವ ಹಾಗೂ ರೈತರ ಮೌಲ್ಯವನ್ನು ಮನಗೊಂಡಿದ್ದರು.

ಕೃಷಿಕನೇ ರಾಷ್ಟ್ರದ ಬೆನ್ನೆಲಬು. ಅವನೇ ಅದರ ಅಡಿಗಲ್ಲೂ ಕೂಡ. ಇವರನ್ನು ಮುಖ್ಯವಾಗಿ ಭದ್ರಪಡಿಸಬೇಕು. ಇಂದಂತು ಎಲ್ಲಾ ರಾಷ್ತ್ರಗಳು ರೈತನ ಉದ್ಧಾರದ ಬಗ್ಗೆ ಹೆಚ್ಚಿನ ಶ್ರದ್ದೆ ವಹಿಸುತ್ತಿರುವುದು ಕಂಡುಬರುತ್ತಿದೆ. ನಮ್ಮ ರಾಷ್ಟ್ರದಲ್ಲಂತೂ ಇದಕ್ಕೆ ಮೊದಲ ಆದ್ಯತೆ ನೀಡಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಇಷ್ಟಾದರೂ ಅವನ ಸ್ಥಿತಿ ಉತ್ತಮಗೊಂಡಿಲ್ಲ. ಅವನ ವಿದ್ಯಾಬುದ್ದಿಗಳು ಉತ್ತಮಗೊಳ್ಳುತ್ತಿಲ್ಲ. ಅವನು ಬೆಳೆಯುವ ಬೆಳೆ ಹುಲಸುತ್ತಿಲ್ಲ. ಅವನಲ್ಲಿ ನಿಶಕ್ತಿ, ಅಜ್ಞಾನ, ಅಂಧಶ್ರದ್ಧೆ ಹೆಚ್ಚುತ್ತಿವೆ. ಏಕಾಗ್ರತೆ, ಜಾಗರೂಕತೆ, ಪ್ರಾಮಾಣಿಕತೆ ಮಾಯವಾಗುತ್ತಿದೆ. ಇದರ ಜೊತೆಗೆ ಬಡತನ, ಆಹಾರದ ಕೊರತೆ, ಪ್ರಾಥಮಿಕ ಆರೋಗ್ಯದ ಕೊರತೆಗಳಂತವು ಇವರನ್ನು ದ್ವಂಸ ಮಾಡುತ್ತಿವೆ. ಪ್ರಪಂಚದ ಅಭಿವೃದ್ಧಿ ರಾಷ್ತ್ರಗಳಿಗೆ ಹೋಲಿಸಿಕೊಂಡು ನಮ್ಮ ರಾಷ್ಟ್ರವೂ ಕೂಡ ಅಭಿವೃದ್ಧಿ ಹೊಂದುತ್ತಿರುವ ರಾಷ್ತ್ರವೆಂದು ಹೇಳಿಕೊಳ್ಳುತ್ತಿದ್ದೇವೆ. ದೇಶದ ಬೇರೊಂದು ರಾಜ್ಯಗಳಿಗೆ ತಾಳೆ ಹಾಕಿ ನೋಡಿದಾಗ ನಮ್ಮ ಕರ್ನಾಟಕ ಆಧುನಿಕವಾಗಿ ಶರವೇಗದಲ್ಲಿ ಮುನ್ನಡೆಯುತ್ತಿದೆ ಎಂದು ನಮಗೆ ಮೇಲ್ನೋಟಕ್ಕೆ ಗೋಚರಿಸುತ್ತದೆ. ಆದರೆ ಯಾವ ದೃಷ್ಟಿಯಿಂದ ನೋಡಿದರೂ ಪ್ರಪಂಚದ ಯಾವೊಂದು ದೇಶಕ್ಕಿಂತ ನಮ್ಮ ದೇಶವ ಮುಂದುವರಿದ ರಾಷ್ಟ್ರವೆಂದು ಹೇಳಲಾಗದು. ಇಲ್ಲಿ ಬಡತನ ಹೆಚ್ಚುತ್ತಿದೆ. ಜನತೆಯಲ್ಲಿ ಅಕ್ಷರ ಜ್ಞಾನ ಹೊಂದಬೇಕಾದ ಸಂಖ್ಯೆ ಹೆಚ್ಚಾಗಿದೆ. ಗ್ರಾಮೀಣ ಜನತೆಯ ಮೂಲಾಧಾರವಾಗಿದ್ದಂತಹ ಗೃಹ ಕೈಗಾರಿಕೆಗಳು ಮಾಯವಾಗಿದೆ. ವ್ಯಾಪಾರದ ಹದಗೆಟ್ಟ ನೀತಿಯಿಂದಾಗಿ ರೈತನು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಗ್ರಾಮ ಗ್ರಾಮಗಳಲ್ಲಿ, ಜನತೆ ಜನತೆಗಳಲ್ಲಿ ಅಸಹಕಾರ, ಅಸಹನೆ ಹೆಚ್ಚಾಗುತ್ತಿದೆ. ಒಟ್ಟಾರೆ ಹೇಳುವುದಾದರೆ ನಮ್ಮ ಗ್ರಾಮೀಣ ಜನತೆಯಲ್ಲಿ ಆಧುನಿಕತೆಯ ದಾಳಿಯಿಂದ ಜಾಗತೀಕರಣದ ಪ್ರಭಾವದಿಂದ ನಮ್ಮ ಗ್ರಾಮ, ನಮ್ಮ ಮನೆ, ನಮ್ಮ ಸಮಾಜ ಹಾಗೂ ನಮ್ಮ ಬಂಧು-ಬಾಂಧವರಲ್ಲಿ ಸ್ವದೇಶಿ ಮನೋಭಾವನೆಯು ಕಡಿಮೆಯಾಗುತ್ತಿದೆ ಎಂದೆನಿಸುತ್ತದೆ.

ನಮ್ಮ ರಾಜ್ಯದ (ದೇಶವೂ ಸಹ) ಇಂದು ಅನೇಕ ಆರ್ಥಿಕ ತೊಂದರೆಗಳನ್ನು ಎದುರಿಸುತ್ತಿದೆ. ಇದನ್ನು ಸರಿದೂಗಿಸಲು ಸರ್ಕಾರಗಳು ವಿಧವಿಧವಾದ ಕಷ್ಟ ನಿವಾರಣೋಪಾಯಗಳನ್ನು ಕಂಡು ಹಿಡಿದು ಕಾರ್ಯರೂಪಕ್ಕೆ ತರುತ್ತಿವೆ. ಆದರೆ ಆ ನಿವಾರಣೋಪಾಯಗಳು ಅನೇಕ ಕಾರಣಗಳಿಂದ ಕುಂಠಿತಗೊಳ್ಳುತ್ತಿರುವುದೂ ನಮ್ಮ ಕಣ್ ಮುಂದೆ ಕಂಡು ಬರುತ್ತಿವೆ. ಸರ್ಕಾರಕ್ಕಾಗಲಿ, ಖಾಸಗಿಯವರಾಗಲಿ ಗ್ರಾಮೀಣಾಭಿವೃದ್ಧಿಯ ಉಪಾಯಗಳನ್ನು ಹಂಚಿಕೆ ಮಾಡುವಾಗ, ಬಡತನ ಬೇಗೆಯಿಂದ ನರಳುತ್ತಿರುವ ಸಾಮಾನ್ಯ ರೈತರ ಸ್ಥಿತಿಯನ್ನು ಗಮನಿಸಬೇಕು. ಅವರ ಪರಿಸ್ಥಿತಿಯನ್ನು ಹಠಾತ್ತನೆ ಉತ್ತಮ ಪಡಿಸುವುದಕ್ಕಾಗುವುದಿಲ್ಲ. ಅಥವಾ ಸರ್ಕಾರದ ಒಂದೆರಡು ಪರಿಹಾರೋಪಾಯಗಳನ್ನು ಆಚರಣೆಯಲ್ಲಿ ತರುವುದರಿಂದ ಸರಿಪಡಿಸಿದಂತೆ ಕಂಡು ಬರುವುದಿಲ್ಲ. ಅವರ ಮೂಲ ಕಸುಬಾಗಿರುವಂತಹ ವ್ಯವಸಾಯದ ವಿಧಾನದಲ್ಲಿಯೂ ಶಿಕ್ಷಣದ ಕ್ರಮದಲ್ಲಿಯೂ, ಪ್ರಮುಖವಾಗಿ ಗೃಹ ಕೈಗಾರಿಕಾ ನೀತಿಯಲ್ಲಿ ಹಾಗೂ ಸಹಕಾರ, ವ್ಯಾಪಾರ, ಸಾಮಾಜಿಕ ಸ್ಥಿತಿಗತಿ ಮುಂತಾದ ಕ್ಷೇತ್ರಗಳಲ್ಲಿಯೂ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಯ ಯೋಜನಾ ಕ್ರಮವು ಆಚರಣೆಯಲ್ಲಿ ಬರಬೇಕು. ಪಂಚವಾರ್ಷಿಕ ಯೋಜನೆಯ ಮಾದರಿಯಲ್ಲಿ ಈ ಕಾರ್ಯಕ್ರಮಗಳನ್ನು ಜಾರಿಗೆ ತರಬೇಕು. ಹಾಗೂ ಪ್ರತಿಯೊಂದು ವರ್ಷವೂ ಜಾರಿಗೊಂಡ ಪರಿಣಾಮವನ್ನು ಅರಿಯಲು ಪರಿಶೀಲನೆ ನಡೆಸಬೇಕು.

ಮೇಲೆ ವಿವರಿಸಿರುವ ಪ್ರತಿಯೊಂದು ವಿಷಯವನ್ನು ಸೀಮಿತವಾದ ಚೌಕಟ್ಟಿನೊಳಗೆ ಚರ್ಚಿಸಿ ನಮ್ಮ ಗ್ರಾಮೀಣ ಜನತೆಗೆ ಅರ್ಥವಾಗುವಂತೆ ಈ ಪುಸ್ತಕವನ್ನು ರಚಿಸಲಾಗಿದೆ ನಮ್ಮ ಇಂದಿನ ಗ್ರಾಮಗಳ ಸ್ಥಿತಿಗಳನ್ನು ಕುರಿತು ಇಲ್ಲಿ ಚರ್ಚಿಸ ಬಯಸಿದ್ದೇನೆ. ನಾಡಿನ ಬೆನ್ನೆಲುಬಾಗಿರುವ ರೈತರ ಏಳಿಗೆಗಾಗಿ ಕೆಲವು ಪ್ರಗತಿಪರವಾದಂತಹ ಅಂಶಗಳನ್ನು ಸೂಚಿಸಿ ಅವುಗಳ ಪರಿಹಾರೋಪಾಯಗಳ ಕಡೆಗೆ ಗಮನ ಹರಿಸಲಾಗಿದೆ. ವಿದ್ಯಾವಂತರೂ, ಗ್ರಾಮಾಭಿಮಾನಿಗಳೂ, ಪಂಚಾಯಿತಿಗಳು, ಗ್ರಾಮ ಪುನರುದ್ಧಾರ ಕಾರ್ಯಗಳಲ್ಲಿ ಆಸಕ್ತಿ ವಹಿಸಿರುವ ಪ್ರತಿಯೊಬ್ಬರಿಗೂ ಕೆಲವು ಮೂಲಭೂತ ಮಾಹಿತಿಯನ್ನು ಈ ಕಿರು ಪುಸ್ತಕ ನೀಡುತ್ತದೆಂದು ಹೇಳಬಹುದು. ಕನ್ನಡ ಕಣ್ವರೆನಿಸಿಕೊಂಡಿರುವ ಬಿ. ಎಂ. ಶ್ರೀಯವರು ಜನವಾಣಿ ಬೇರು; “ಕವಿವಾಣಿ ಹೂವು” ಎಂಬ ಅಮೂಲ್ಯವಾದ ಮಾತನಾಡಿದ್ದರು. ಅದನ್ನೇ ಅನುಕರಿಸುವುದಾದರೆ ಗ್ರಾಮಿಣ ಜೀವನವೇ ಬೇರು.” ನಗರಜೀವನ ಹೂವು” ಎಂದು ಅರ್ಥೈಸಿಕೊಂಡು ಜೀವನ ನಡೆಸಿದರೆ ಸಾರ್ವಕಾಲಿಕ ಸತ್ಯವೂ ಆಗಬಲ್ಲದು.[1]ಭಾರತೀಯ ಗ್ರಾಮ – ಹಾ.ವೆ. ನಾಗೇಶ್, ಪುಟ ೨

[2] ಗ್ರಾಮ ಸಮಾಜ ಡಾ. ಜೋಗನ್ ಶಂಕರ‍್ ಪುಟ ೫

[3] ಅದೇ ಪುಟ

[4] ಅದೇ ಪುಟ ೬

[5] ಭಾರತೀಯ ಗ್ರಾಮ ಪು.೪

[6] ಲಾಹೋರಿನ ಭಾಷಣ ಲಾಹೋರಿನ ೧೯೦೨ ವಿವೇಕಾನಂದ ಕೃತಿ ಶ್ರೇಣಿ ಸಂ.೩.