ಇತಿಹಾಸವನ್ನು ಮರೆತವರು ಇತಿಹಾಸ ಸೃಷ್ಟಿಸಲಾರರು ಎನ್ನುವ ಡಾ. ಬಿ. ಆರ್. ಅಂಬೇಡ್ಕರ್ ರವರ ನುಡಿ ಎಷ್ಟು ಸತ್ಯ. ಏಕೆಂದರೆ ಇಂದಿನ ಹಾಗೂ ಅಂದಿನ ಗ್ರಾಮೀಣ ಚಿತ್ರಣವನ್ನು ಇಂದು ತೆಗೆದಿಡಬೇಕೆಂದರೆ ಇತಿಹಾಸ ಪ್ರಜ್ಞೆ ಬಹುಮುಖ್ಯವಾದ ಸಾಧನವಾಗಿ ಗೋಚರಿಸುತ್ತದೆ.

ನಮ್ಮ ರಾಷ್ಟ್ರ ಹಾಗೂ ರಾಜ್ಯಗಳು ಅನೇಕ ಆರ್ಥಿಕ ತೊಂದರೆಯಿಂದ ನರಳುತ್ತಿದೆ. ಈ ಸಮಸ್ಯೆಯನ್ನು ಎದುರಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಮಾಜದ ರಚನಾತ್ಮಕ ಕಾರ್ಯಕ್ರಮಗಳಲ್ಲಿ ವಿಧವಿಧವಾದ ಪ್ರಗತಿಪರ ಯೋಜನೆಗಳನ್ನು ಕೈಗೊಳ್ಳುತ್ತಿದೆ. ಆದರೆ ಇಂದು ಜಾಗತೀಕರಣದ ಪ್ರವಾಹಕ್ಕೆ ಸಿಲುಕಿ ನಮ್ಮ ಬದುಕು ಅನೇಕ ಬದಲಾವಣೆಯನ್ನು ಹೊಂದುತ್ತಿದೆ. ಸದ್ಯಕ್ಕಂತು ಇದನ್ನು ತಪ್ಪಿಸುವುದಕ್ಕೆ ಸಾಧ್ಯವಿಲ್ಲ. ಆದರೆ, ಇಂತಹ ಪ್ರಮುಖವಾದ ಬದಲಾವಣೆಗಳನ್ನು ಆಚರಿಸುವ ಸಂದರ್ಭದಲ್ಲಿ. ನಮ್ಮ ಸಂಪ್ರದಾಯ, ಸಂಸೃತಿ, ವಿಧ್ಯಾಭ್ಯಾಸ, ನಡೆನುಡಿ ಮುಂತಾದ ಸಾಂಸೃತಿಕ ಆಂಶಗಳನ್ನು ಜ್ಞಾಪಕದಲ್ಲಿಟ್ಟಿರಬೇಕು. ಇದನ್ನೆ ಇತಿಹಾಸ ಪ್ರಜ್ಞೆ ಎನ್ನುವುದು. ಗ್ರಾಮೀಣ ಪ್ರದೇಶದ ಜನರ ಸಾಮಾಜಿಕ ಜೀವನದಲ್ಲಿನ ಸ್ಥಾನಮಾನವನ್ನು ಉತ್ತಮಪಡಿಸಬೇಕಾದರೆ, ಅವರ ಆರ್ಥಿಕ ಮಟ್ಟವನ್ನು ಏರಿಸುವುದರ ಜೊತೆಗೆ ಅವರ ಸಾಂಸೃತಿಕ, ನೈತಿಕ, ಶಾರೀರಿಕ ಮತ್ತು ಮಾನಸಿಕ ಮಟ್ಟವನ್ನೂ ಕೂಡ ಪ್ರಮುಖ್ಯವಾಗಿ ಉತ್ತಮಪಡಿಸಬೇಕು. ಈ ಕಾರ್ಯ ಒಂದೆರಡು ವರ್ಷದಲ್ಲಿ ಸಾಧ್ಯವಾಗದ ಮಾತೆಂಬುದು ತಿಳಿದಿರುವ ವಿಷಯವೇ. ಆದರೆ ಈ ಕಾರ್ಯಕ್ಕಾಗಿ ದೀರ್ಘ ವರ್ಷದ ಕಾರ್ಯ ಯೋಜನೆಗಳನ್ನು ಸಿದ್ಧಪಡಿಸಿಕೊಂಡು ಹಂತಹಂತವಾಗಿ ಜಾರಿಗೆ ತಂದು ಯೋಜನೆಯ ಫಲ ಪಡೆಯಬೇಕಾಗುತ್ತದೆ.

ರಾಷ್ಟ್ರವು ೧೦ನೇ ಪಂಚವಾರ್ಷಿಕ ಯೋಜನೆಯ ಪ್ರಮುಖ ಹಂತದಲ್ಲಿದೆ, ಯೋಜನೆಗಳ ಪ್ರಮುಖ್ಯವಾದ ಉದ್ದೇಶವೆಂದರೆ ಗ್ರಾಮೀಣಾಭಿವೃದ್ಧಿ, ಬಡತನ, ನಿರುದ್ಯೊಗ ನಿರ್ಮೂಲನೆ ಹಾಗೂ ವಿದ್ಯಾಪ್ರಚಾರ ಮಾಡುವುದಾಗಿದೆ. ಇವುಗಳ ಜೊತೆಗೆ ಜನರ ಜೀವನಮಟ್ಟವನ್ನು ಉತ್ತಮಗೊಳಿಸುವುದು. ಅದರಲ್ಲಿಯೂ ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ಗುಂಪುಗಳ ಜೀವನ ಸುಧಾರಣೆಯ ಬಗ್ಗೆ ಹೆಚ್ಚು ಒತ್ತು ಕೊಡುವುದಾಗಿದೆ. ಆದರೆ ನಿಜ ಸ್ಥಿತಿಯೇನೆಂದರೆ ದೇಶದ ಜನಸಂಖ್ಯೆಯ ಬಹುದೊಡ್ಡ ಗುಂಪು ಬಡತನ ರೇಖೆಗಿಂತ ಕೆಳಗೆ ಜೀವನ ನಡೆಸುತ್ತಿರುವುದು. ಅದರಲ್ಲಿ ಹೆಚ್ಚಿನ ಜನರು ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಇದುವರೆಗೆ ನಡೆದಿರುವ ಬಹುಪಾಲು ಸಂಶೋಧನ ಅಧ್ಯಯನಗಳ ಪ್ರಕಾರ ಗ್ರಾಮಗಳಲ್ಲಿ ಅಭಿವೃದ್ಧಿ ಕೆಲಸಗಳು, ಸಮುದಾಯವಾರು ಸಮನಾಗಿ ಹಂಚಿಕೆಯಾದಂತೆ ಕಂಡು ಬರುವುದಿಲ್ಲ. ಬದಲಾಗಿ ಗ್ರಾಮೀಣ ಸಾಮಾಜಿಕ ಶ್ರೇಣಿಯು ವಿಸ್ತಾರಗೊಂಡ ಕಾರಣ ಹಲವಾರು ಅಹಿತರ ಪರಿಣಾಮಗಳ ಬೆಳವಣಿಗೆಗೆ ದಾರಿ ಮಾಡಿಕೊಟ್ಟಿದೆ ಎಂದು ತಿಳಿಯಬಹುದಾಗಿದೆ.

ಅಭಿವೃದ್ಧಿ ಹೊಂದುತ್ತಿರುವ ಸಮಾಜಗಳಲ್ಲಿ ಕೃಷಿಯೂ ಆರ್ಥಿಕ ಚಟುವಟಿಕೆಗಳ ಪ್ರಮುಖ ಸಾಧನವೆನ್ನಬಹುದು. ಕೃಷಿಯು ಹೆಚ್ಚಿನ ಪ್ರಮಾಣದಲ್ಲಿ ಜನರಿಗೆ ಉದ್ಯೋಗ ಅವಕಾಶಗಳನ್ನು ಕಲ್ಪಿಸುವುದರ ಜೊತೆಗೆ ಆಹಾರ ಮತ್ತು ಕೈಗಾರಿಕೆಗಳ ಕಚ್ಚಾ ಪದಾರ್ಥಗಳನ್ನು ಒದಗಿಸುವ ಪ್ರಮುಖ ಮೂಲವಾಗಿದೆ. ಪಾಶ್ಚಿಮಾತ್ಯ ರಾಷ್ಟ್ರಗಳು ಈಗಿನ ಔದ್ಯೋಗಿಕ ಕ್ರಾಂತಿಯನ್ನು ಕಂಡು, ಆರ್ಥಿಕಾಭಿವೃದ್ಧಿಯನ್ನು ಸಾಧಿಸುವ ಮೊದಲು ಕೃಷಿಯಲ್ಲಿ ಪ್ರಗತಿ ಸಾಧಿಸಿದವು ಎಂಬ ಅಂಶವನ್ನು ಇಲ್ಲಿ ಗಮನಿಸಬೇಕಾಗುತ್ತದೆ.

ರಾಷ್ಟ್ರದ, ರಾಷ್ಟ್ರದ, ಜಿಲ್ಲೆಯ, ತಾಲ್ಲೂಕಿನ, ಹೋಬಳಿಯ, ಗ್ರಾಮದ, ಹಳ್ಳಿಯ ಸಂಪತ್ತು ಅಭಿವೃದ್ಧಿಯಾಗಬೇಕಾದರೆ ರೈತರ ಪ್ರಗತಿಯು ಅತ್ಯಾವಶ್ಯಕ. ಈ ರೈತರ ಬದುಕು ಪ್ರಗತಿ ಕಾಣಬೇಕಾದರೆ ವ್ಯವಸಾಯ, ವಿದ್ಯಾಭ್ಯಾಸ, ಕೈಗಾರಿಕೆ, ಸಹಕಾರ, ವ್ಯಾಪಾರ ಮುಂತಾದ ವಿಚಾರಗಳಲ್ಲಿ ಹಿಂದೆ ವಿವರಿಸಿರುವಂತೆ ಪ್ರಗತಿದಾಯಕ ಕಾರ್ಯಕ್ರಮಗಳನ್ನು ಆಚರಣೆಯಲ್ಲಿ ತರಬೇಕು. ರಾಷ್ಟ್ರಾಭಿವೃದ್ಧಿ ಕಾರ್ಯಗಳನ್ನು ಒಂದೇ ಸಲಕ್ಕೆ ಆಚರಣೆಯಲ್ಲಿ ತರುವುದು ಕಷ್ಟವೆನ್ನಬಹುದು. ಈ ಹಂತದಲ್ಲಿ ಮೊದಲಿಗೆ ಗ್ರಾಮೀಣ ಜನರಲ್ಲಿ ಕ್ರಿಯಾತ್ಮಕ ಕೆಲಸಗಳನ್ನು ಉತ್ತಮಪಡಿಸುವುದು ಬಹುಮುಖ್ಯ.

ಆದರೆ, ಭಾರತದ ಗ್ರಾಮಗಳಲ್ಲಿ ಮಾತ್ರ ಹಾಗಾಗಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ಇಲ್ಲಿಯ ಆರ್ಥಿಕ ಸ್ಥಿತಿಯು ಬಹಳ ಕೆಳದರ್ಜೆಯದಾಗಿರುತ್ತದೆ. ದಿನದಿಂದ ದಿನಕ್ಕೆ ಬಡತನವು ಹೆಚ್ಚುತ್ತಿದೆ. ಜನಸಂಖ್ಯೆಯ ನಿಯಂತ್ರಣಕ್ಕೆ ಏನೆಲ್ಲಾ ಪ್ರಯತ್ನ ಪಡುತ್ತಿದ್ದರೂ ಅದು ಕಡಿಮೆಯಾಗುವ ಲಕ್ಷಣವಂತು ಕಂಡುಬರುತ್ತಿಲ್ಲ. ರಾಷ್ಟ್ರದ ಸಂಪತ್ತನ್ನು ಹೆಚ್ಚಿಸುವುದಕ್ಕೆ ಹಾಗೂ ಇರುವ ಸಂಪತ್ತನ್ನು ಬಳಸುವುದಕ್ಕ್ಕೆ ಸರಿಯಾದ ಪ್ರಯತ್ನಗಳು ನಡೆಯುತ್ತಿಲ್ಲ. ಆರ್ಥಿಕಾಭಿವೃದ್ಧಿ ಪ್ರಯತ್ನವೂ ಮತ್ತು ಶಕ್ತಿಯೂ ನಮ್ಮ ಗ್ರಾಮೀಣ ಜನರಲ್ಲಿ ಹೆಚ್ಚುತ್ತಿಲ್ಲ. ಜನರಲ್ಲಿ ನಿಶ್ಯಕ್ತಿ, ನಿರುದ್ಯೋಗ, ನಿರುತ್ಸಾಹ, ಕ್ರೌರ್ಯ, ಅಪರಾಧಗಳಂತಹ ಅನಿಷ್ಟಗಳು ಹೆಚ್ಚುತ್ತಿವೆ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ರೈತರ ಹಾಗೂ ಗ್ರಾಮೀಣ ಪ್ರದೇಶದ ಅಭಿವೃದ್ಧಿಗಾಗಿ ಅನೇಕ ಹೊಸ ಹೊಸ ಯೋಜನೆಗಳನ್ನು ಸೃಷ್ಟಿಸಿ ಅವುಗಳ ಮೂಲಕ ಅಭಿವೃದ್ಧಿಯನ್ನು ಅನುಷ್ಟಾನಕ್ಕೆ ತರಲು ಪ್ರಯತ್ನಿಸುತ್ತಿದ್ದರೂ ಸಹ ರೈತರ ಕಷ್ಟಕ್ಕೆ ಪರಿಹಾರ ಕಂಡಂತೆ ಕಾಣುತ್ತಿಲ್ಲ. ಸಾಲದ ಬಾಧೆ ತಾಳಲಾರದೆ. ನಮ್ಮ ರಾಷ್ಟ್ರದ ಬೆನ್ನೆಲುಬು ಎನಿಸಿಕೊಂಡಿರುವ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಕರ್ನಾಟಕ ರಾಜ್ಯ ಒಂದರಲ್ಲಿಯೇ ೧೯೯೧-೯೨ರಲ್ಲೆ ೮೬ ಜನ ರೈತರು ಆತ್ಮಹತ್ಯೆಗೆ ಶರಣಾದರೆ. ೧೯೯೬-೯೭ನೇ ಸಾಲಿನಲ್ಲಿ ೨೮೦ ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಹೀಗೆ ಮುಂದುವರೆದು ೨೦೦೧, ೨೦೦೨, ೨೦೦೩ನೆ ವರ್ಷದಲ್ಲಿ ೧೬೨೩ ರೈತರು ಸಾಲದ ಬಾಧೆಯನ್ನು ತಾಳಲಾರದೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಕರ್ನಾಟಕ ರಾಜ್ಯ ಪತ್ರವು ತಿಳಿಸುತ್ತದೆ. ೨೦೦೩ ಜನವರಿಯಿಂದ ಸೆಪ್ಟೆಂಬರ್ ತಿಂಗಳ ಅವಧಿಯಲ್ಲಿಯೇ ೪೦೩ ರೈತರ ಆತ್ಮಹತ್ಯೆಯ ಪ್ರಕರಣಗಳು ದಾಖಲಾಗಿವೆ. ಕರ್ನಾಟಕವು ಸತತ ಮೂರು ವರ್ಷಗಳಿಂದಲೂ ಭೀಕರ ಬರಗಾಲದ ಬವಣೆಯಿಂದ ಬೇಯುತ್ತಿರುವುದು ಇದಕ್ಕೆ ಕಾರಣವೆಂದು ಮೇಲ್ನೋಟಕ್ಕೆ ಕಂಡುಬಂದರು, ಈ ಸಂಬಂಧ ಸರ್ಕಾರಗಳು ವಿಶೇಷ ಕಾಳಜಿ ವಹಿಸದಿರುವುದು ಸೋಜಿಗದ ವಿಷಯವೇ ಸರಿ.

ನಮ್ಮ ಪ್ರಜಾಕ್ಷೇಮ ಸರ್ಕಾರಗಳು ಗ್ರಾಮೀಣ ಪ್ರದೇಶದ ಜನರ ಆರ್ಥಿಕ ಮೂಲವನ್ನು ಅಭಿವೃದ್ಧಿಪಡಿಸುವ ದಿಕ್ಕಿನಲ್ಲಿ ಅನೇಕ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಂಡಿವೆ. ಗೃಹಕೈಗಾರಿಕೆಗಳ ಅಭಿವೃದ್ಧಿ, ಜಮೀನು ಕಂದಾಯದಲ್ಲಿ ಸ್ವಲ್ಪ ರಿಯಾಯಿತಿ, ವಿದ್ಯುತ್ ಪಾವತಿಯಲ್ಲಿ ಕಡಿತ, ಬ್ಯಾಂಕ್ ಸಾಲಗಳನ್ನು ಮನ್ನ, ಬರಗಾಲದ ಪರಿಹಾರ, ಉಚಿತ ವಸತಿ ಯೋಜನೆ, ಕುಡಿಯುವ ನೀರು ಆರೋಗ್ಯ ಮುಂತಾದ ಮೂಲಭೂತ ಸೌಕರ್ಯಗಳ ಕಡೆಗೆ ಹೆಚ್ಚಿನ ಗಮನ ನೀಡಿರುವುದು ಕಂಡುಬರುತ್ತಿದ್ದರೂ, ಈ ಕಾರ್ಯಗಳಿಂದ ಗ್ರಾಮೀಣ ಪ್ರದೇಶದ ರೈತ ಬಾಂಧವರಿಗೆ ಅಲ್ಪಸ್ವಲ್ಪ ಸಹಾಯವಾಗುತ್ತಿರುವುದು ಕಂಡುಬಂದರೂ, ಇವುಗಳಿಂದ ದೇಶದ ಪ್ರಗತಿಯಾಗುವಂತೆ ಕಂಡು ಬರುತ್ತಿಲ್ಲ. ಇದಕ್ಕೆ ನಿರ್ದಿಷ್ಟ ಆರ್ಥಿಕ ಯೋಜನೆಗಳನ್ನು ಪಂಚವಾರ್ಷಿಕ ಯೋಜನೆಯ ಮಾದರಿಯಲ್ಲಿಯೇ ದ್ವಿವಾರ್ಷಿಕ ಯೋಜನೆಯ ರೂಪದಲ್ಲಿ ಜಾರಿಗೆ ತಂದು ಗ್ರಾಮೀಣ ಅಭಿವೃದ್ಧಿಯ ಕಾರ್ಯಗಳನ್ನು ಕೈಗೊಳ್ಳಬೇಕೆನ್ನಿಸುತ್ತದೆ.

ನಮ್ಮ ದೇಶ ಹಾಗೂ ರಾಜ್ಯದಲ್ಲಿ ಅಪಾರವಾದ ಪ್ರಾಕೃತಿಕ ಸಂಪತ್ತಿದೆ. ಇದರ ಜೊತೆಗೆ ಇತರ ಸೌಕರ್ಯಗಳೂ ಇವೆ. ಅನೇಕ ಕಡೆಗಳಲ್ಲಿ ಈ ಸೌಕರ್ಯಗಳು ವ್ಯರ್ಥವಾಗುತ್ತಿವೆ. ಜನತೆಯನ್ನು ಬಡತನದ ರೇಖೆಯಿಂದ ಮೇಲೆತ್ತಲು, ಪ್ರಾಕೃತಿಕ ಸಂಪತ್ತನ್ನು ಹೆಚ್ಚುಹೆಚ್ಚಾಗಿ ಬಳಸಿಕೊಳ್ಳಲು, ಇದರ ಮೂಲಕ ದೇಶದ ಆದಾಯವನ್ನು ಹೆಚ್ಚಿಸುವುದಕ್ಕೂ ಈ ಆರ್ಥಿಕ ಯೋಜನೆಗಳು ಬಹುಮುಖ್ಯವಾದ ಪಾತ್ರವನ್ನು ವಹಿಸುತ್ತವೆ. ಉದಾಹರಣೆಗೆ ವ್ಯವಸಾಯಕ್ಕೂ, ಕೈಗಾರಿಕೆಗೂ ಯಾವ ಸಂಬಂಧವಿರಬೇಕು, ವ್ಯಾಪಾರದ ವಸ್ತುಗಳ ಮಾರಾಟಕ್ಕೆ ಏನೇನು ಸೌಕರ್ಯಗಳು ಬೇಕು, ಜನತೆಯಲ್ಲಿ ತಿಳುವಳಿಕೆಯ ಅರಿವು ಮೂಡಿಸಬೇಕಾದರೆ ಏನು ಮಾಡಬೇಕು, ಯಾವ ರೀತಿಯ ಕೈಗಾರಿಕೆಗಳು ಪ್ರೋತ್ಸಾಹಿಸಬೇಕು ಗೃಹ ಕೈಗಾರಿಕೆಗಳಿಗೂ (ಗ್ರಾಮ ಕೈಗಾರಿಕೆ) ದೊಡ್ಡ ಕೈಗಾರಿಕೆಗಳಿಗೂ ಯಾವ ಸಂಬಂಧವಿರಬೇಕು ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿಸಲು ಯಾವ ಕಾರ್ಯಗಳನ್ನು ಕೈಗೊಳ್ಳಬೇಕು. ಇವೇ ಮುಂತಾದ ವಿಷಯಗಳು ಆರ್ಥಿಕ ಯೋಜನೆಯ ಪ್ರಮುಖವಾದ ಕಾರ್ಯಗಳಾಗಿರುತ್ತವೆ. ಆದರೆ ನಮ್ಮ ರಾಷ್ಟ್ರದಲ್ಲಿ ಇಂದು ೧೦ನೇ ಪಂಚವಾರ್ಷಿಕ ಆರ್ಥಿಕ ಯೋಜನೆಯು ಜಾರಿಯಲ್ಲಿದ್ದರೂ ಸಹ ಮೇಲಿನ ಸಮಸ್ಯೆಗಳು ಸಮಸ್ಯೆಗಳಾಗಿಯೇ ಉಳಿದೆವೆ. ಇವುಗಳ ನಿವಾರಣೆಗೆ ಶಾಶ್ವತವಾದ ಪರಿಹಾರ ಕಂಡು ಹಿಡಿಯುವಲ್ಲಿ ನಮ್ಮ ರಾಜಕೀಯ ಹಾಗೂ ಆರ್ಥಿಕ ತಜ್ಞರು ವಿಫಲವಾಗಿರುವುದು ಮೇಲುನೋಟಕ್ಕೆ ಕಂಡು ಬರುತ್ತದೆ.

ನಮ್ಮ ರಾಷ್ಟ್ರದ ೭೩ ರಷ್ಟು ಜನರು ಕೃಷಿಯನ್ನು ತಮ್ಮ ಜೀವನಕ್ಕೆ ಆಧಾರವೆಂದು ನಂಬಿಕೊಂಡಿದ್ದರೂ ಇಂದು ಕೃಷಿಯು ಲಾಭದಾಯಕವಾದ ವೃತ್ತಿಯಾಗಿ ಉಳಿದಿಲ್ಲ. ರೈತರು ತಮ್ಮ ಕಷ್ಟಕ್ಕೆ ಸರಿಯಾದ ಪ್ರತಿಫಲ ಪಡೆಯುತ್ತಿಲ್ಲ. ಇದಕ್ಕೆ ಅನೇಕ ಕಾರಣಗಳನ್ನು ನೀಡಬಹುದು. ಇವುಗಳಲ್ಲಿ ಅತಿ ಮುಖ್ಯವಾದದ್ದು ಅವರ ಅಜ್ಞಾನ ಸ್ವಾತಂತ್ರ್ಯ ಬಂದು ಐವತ್ತಾರು ವರ್ಷಗಳಾದರೂ ನೂರರಲ್ಲಿ ಎಪ್ಪತ್ತೆಂಟರಷ್ಟು ಜನರಿಗೆ ಅಕ್ಷರಜ್ಞಾನವಿಲ್ಲ. ಅವರ ಅಜ್ಞಾನವೇ ವಿವಿಧ ಕಷ್ಟಗಳಿಗೂ ಮೂಲ ಕಾರಣವಾಗಿದೆ. ಈ ಅನಿಷ್ಟ ನಮ್ಮ ಜನರಿಂದ ತೊಲಗದ ಹೊರತು ಅವರಲ್ಲಿ ಆತ್ಮಾವಲಂಬನ ಶಕ್ತಿಯಾಗಲಿ ಅಥವಾ ಅವರ ಆದಾಯದ ಪ್ರಗತಿಯಾಗಲಿ ಬೆಳವಣಿಗೆಯ ರೂಪ ಕಾಣುವುದು ಕಷ್ಟ.

ಅಂದು ನಮ್ಮ ವಿದ್ಯಾಭ್ಯಾಸ ಕ್ರಮವು ಒದು ರೀತಿಯಲ್ಲಿ ಚೆನ್ನಾಗಿತ್ತು. ರಾಷ್ಟ್ರೀಯತೆಯನ್ನು ಮತ್ತು ಸಂಸ್ಕೃತಿಯನ್ನು ಯಾವ ರೀತಿಯಲ್ಲಿ ಪೋಷಿಸಬೇಕೆಂಬುವುದು ಅಂದಿನ ವಿದ್ಯಾಭ್ಯಾಸದ ಮುಖ್ಯ ಧ್ಯೇಯವಾಗಿತ್ತು. ಜನರಲ್ಲಿ ಶಿಸ್ತು, ಆತ್ಮಸಂಯಮ, ವ್ಯಕ್ತಿತ್ವ, ಸತ್ಯಾಅಹಿಂಸೆಯ ಮಹತ್ವವನ್ನು ಚೆನ್ನಾಗಿ ಬೇರೂರಬೇಕೆಂಬುದೇ ಆಗಿತ್ತು. ಈ ಕ್ರಮದಿಂದಾಗಿ ಜನರಲ್ಲಿ ವಿಚಾರಮಾಡುವ ಶಕ್ತಿಯು ಅಭಿವೃದ್ಧಿ ಹೊಂದುತ್ತಿತ್ತೆನ್ನಬಹುದು. ಹಿಂದೆ ವಿದ್ಯಾಭ್ಯಾಸವನ್ನು ಸ್ವಲ್ಪ ಭಾಗವನ್ನು ಉಪಾಧ್ಯಾಯರಿಂದಲೂ, ಇನ್ನೂ ಸ್ವಲ್ಪ ಭಾಗವನ್ನು ಪರಿಶೀಲನಾ ಶಕ್ತಿಯಿಂದಲೂ, ಮತ್ತೆ ಸ್ವಲ್ಪ ಭಾಗವನ್ನು ಉಪನ್ಯಾಸ ಮತ್ತು ಚರ್ಚೆ ಮುಂತಾದ ಸಾಧನೆಗಳಿಂದಲೂ, ಉಳಿದ ಭಾಗವನ್ನು ಪ್ರಕೃತಿಯ ಪರಿಣಾಮದಿಂದಲೂ ಪಡೆದು ವಿದ್ಯಾವಂತರಾಗಿರುತ್ತಿದ್ದರೆಂದು ಹೇಳಬಹುದು.

ಆದರೆ ಇಂದಿನ ವಿದ್ಯಾಭ್ಯಾಸ ಕ್ರಮದಲ್ಲಿ ಸರಿಯಾದ ವಿಷಯ ಗ್ರಹಣ ಶಕ್ತಿ ಇಲ್ಲ. ಕೃಷಿಯನ್ನು ರಾಷ್ಟ್ರದ ೭೦ರಷ್ಟು ಜನರು ಅವಲಂಬಿಸಿದ್ದರೂ ಸಹ ಇದರ ಬಗ್ಗೆ ನೀಡುತ್ತಿರುವ ಶಿಕ್ಷಣ ೧೫ರಷ್ಟು ಮಾತ್ರ. ಸಾಹಿತ್ಯ ಪಾಠಕ್ಕೆ ಹೆಚ್ಚಿನ ಪ್ರಾಮುಖ್ಯತೆ ದೊರಕಿದೆ. ಸಾಮಾಜಿಕ ಅನಿಷ್ಟ ಪದ್ದತಿಗಳ ಬಗ್ಗೆ ಅರಿವು ಮೂಡಿಸುವಂತಹ, ದಲಿತರ ಮೇಲೆ ನಡೆಯುವ ದೌರ್ಜನ್ಯದ ಬಗ್ಗೆ ಅರಿವು ಮೂಡಿಸಿ ಅದನ್ನು ನಿರ್ಮೂಲನೆ ಮಾಡುವುದರ ಬಗ್ಗೆ, ದಲಿತರಲ್ಲಿ ಆತ್ಮ ಧ್ಯೇಯವನ್ನು ಹೆಚ್ಚಿಸುವುದರ ಬಗ್ಗೆ ಆಸ್ಪೃಶ್ಯತೆಯ ನಿವಾರಣೆಗೆ ಸಂಬಧಿಸಿದ ವಿಚಾರಗಳಿಲ್ಲದೆ. ಒಂದು ರೀತಿಯಲ್ಲಿ ಇಂದಿನ ಶಿಕ್ಷಣದ ಕ್ರಮವು ರಾಷ್ಟ್ರಾಭಿಮಾನವನ್ನು ಸೃಷ್ಟಿಸುವುದಿಲ್ಲ ಹಾಗೂ ಜನತೆಯ ಜೀವನಕ್ಕೆ ಉಪಯೋಗವಾಗದ ಸ್ಥಿತಿಯಲ್ಲಿದೆ. ವಿದ್ಯೆ ಪಡೆದವರೆಲ್ಲ. (ಪದವಿ ಪಡೆದವರೆಲ್ಲ) ಸರ್ಕಾರಿ ಉದ್ಯೋಗವನ್ನೆ ಬಯಸಿದರೆ…. ಅಂದರೆ ವಿದ್ಯಾವಂತರು ತಮ್ಮ ಗ್ರಾಮೀಣ ಪ್ರದೇಶದಲ್ಲಿ ಸ್ವಯಂ ಉದ್ಯೋಗದಲ್ಲಿ ತೊಡಗಿ ಅದನ್ನು ಅಭಿವೃದ್ಧಿಪಡಿಸಿ ತಮ್ಮ ಆರ್ಥಿಕ ಆದಾಯವನ್ನು ಹೆಚ್ಚಿಸಿಕೊಳ್ಳುವ ಶಿಕ್ಷಣದ ಕೊರತೆ ಇಂದಿನ ಶಿಕ್ಷಣದಲ್ಲಿ ಕಂಡುಬರುತ್ತಿಲ್ಲ. ಇಂಥ ಸಂದರ್ಭದಲ್ಲಿ ವಿದ್ಯಾರ್ಥಿಗಳ ಹೃದಯದಲ್ಲಿ ಸ್ಫೂರ್ತಿಯಾಗಲಿ ಅಥವಾ ದೇಶಪ್ರೇಮವಾಗಲಿ ಬರುವುದು ಹೇಗೆ ತಾನೆ ಸಾಧ್ಯ. ಖ್ಯಾತ ಶಿಕ್ಷಣ ತಜ್ಞರೆನ್ನಿಸಿಕೊಂಡಿರುವ ಇಂಗ್ಲೆಂಡಿನ ಜಾರ್ಜ್ ಬರ್ನಾಡ್ ಷಾ ಅವರು ಹೇಳಿರುವಂತೆ “ಹುಚ್ಚಿಲ್ಲದವರಿಗಾಗಿ ಹುಚ್ಚು ಜನರು ನಡೆಯಿಸುತ್ತಿರುವ ಹುಚ್ಚಾಸ್ಪತ್ರೆಗಳೇ ಶಾಲೆಗಳು” ಎಂದಿರುವುದು ಇಂದು ನಾಯಿಕೊಡೆಗಳಂತೆ ತಲೆ ಎತ್ತಿರುವ ಇಂದಿನ ಕಾನ್ವೆಂಟ್ ಶಿಕ್ಷಣದ ರೀತಿನೀತಿಗೆ ಅನ್ವಯಿಸುತ್ತದೆನ್ನಬಹುದು.

ಗಾಂಧೀಜಿಯವರು ನಿರುದ್ಯೋಗ ನಿರ್ಮೂಲನೆಗೆ ಗ್ರಾಮೀಣ ಕೈಗಾರಿಕೆಗಳಿಗೆ ಪುನರ್ ಜನ್ಮ ನೀಡಬೇಕೆಂದರು. ಆದರೆ ಬೃಹತ್ ಕೈಗಾರಿಕೆಗಳಿಂದಾಗಿ, ಆಧುನಿಕ ತಂತ್ರಜ್ಞಾನದ ಪ್ರಗತಿಯಿಂದಾಗಿ ಗ್ರಾಮ ಕೈಗಾರಿಕೆಗಳು ಒಂದೊಂದಾಗಿ ಮಾಯವಾದವು. ಇದನ್ನೇ ನಂಬಿದಂತವರ ಬದುಕು ಬೀದಿ ಪಾಲಾಯಿತು. ಈ ಜನರು ಗ್ರಾಮೀಣ ಪ್ರದೇಶಗಳನ್ನು ತೊರೆದು ಜೀವನದ ಅನುಕೂಲಕ್ಕಾಗಿ ನಗರಗಳಿಗೆ ವಲಸೆ ಕೈಗೊಂಡರು. ಇದರಿಂದಾಗಿ ಗ್ರಾಮೀಣ ಸಂಸ್ಕೃತಿ ಮಾಯವಾಗಿ ಕೆಟ್ಟ ನಗರೀಕರಣದ ಕೊಳಗೇರಿಗಳು ನಿರ್ಮಾಣವಾದವು. ಜನರು ನಗರಗಳಲ್ಲಿ ಸರಿಯಾದ ಉದ್ಯೋಗ ದೊರಕದೆ ಅಪರಾಧ ಕೆಲಸಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿ ಅವರ ಉಜ್ವಲ ಭವಿಷ್ಯಕ್ಕೆ ತಿಲಾಂಜಲಿ ಹೇಳಿಕೊಂಡಿರುವುದಕ್ಕೆ ನಮ್ಮ ಮುಂದೆ ಉದಾಹರಣೆಗಳಿವೆ. ನಮ್ಮ ರಾಷ್ಟ್ರದಲ್ಲಿ ಜನರು ಬಡತನದ ರೇಖೆಯಿಂದ ಮೇಲೆ ಬರಬೇಕಾದರೆ ಪ್ರಮುಖವಾಗಿ ಇಲ್ಲಿಯ ನಿರುದ್ಯೋಗವು ಕಡಿಮೆಯಾಗಬೇಕು. ಹೀಗಾಗಬೇಕಾದರೆ ಸಾಮಾನ್ಯ ರೀತಿಯ ಕೈಗಾರಿಕೆ, ಗೃಹಕೈಗಾರಿಕೆಗಳು ಮತ್ತು ವ್ಯವಸಾಯವನ್ನು ಅವಲಂಬಿಸಿರುವಂತಹ ಗ್ರಾಮೀಣ ಪ್ರದೇಶದ ಸಣ್ಣ ಕೈಗಾರಿಕೆಗಳು ಹೆಚ್ಚಿನ ಪ್ರಮಾಣದಲ್ಲಿ ಅಭಿವೃದ್ಧಿ ಹೊಂದಬೇಕು. ಒಂದರ್ಥದಲ್ಲಿ ವಿಸ್ತಾರವಾದ ಗ್ರಾಮ ಕೈಗಾರಿಕೆಗಳು ಹಾಗೂ ದೊಡ್ಡ ಕೈಗಾರಿಕೆಗಳನ್ನು ಹೆಚ್ಚುಹೆಚ್ಚಾಗಿ ನಿರ್ಮಿಸುವುದರಿಂದ ನಿರುದ್ಯೋಗವನ್ನು ಹೋಗಲಾಡಿಸಬಹುದಾಗಿದೆ. ಇವುಗಳ ಜೊತೆಗೆ ಲೋಕೋಪಯೋಗಿ ಕೆಲಸ ಕಾರ್ಯಗಳನ್ನು ಹೆಚ್ಚುಹೆಚ್ಚಾಗಿ ಕೈಗೊಳ್ಳುವುದರಿಂದ ಗ್ರಾಮೀಣ ಪ್ರದೇಶದ ಜನರಿಗೆ ಹೆಚ್ಚಿನ ಉದ್ಯೋಗದ ಅವಕಾಶವನ್ನು ಸೃಷ್ಟಿಸಬಹುದೆಂದು ಹೇಳಬಹುದಾಗಿದೆ.

ನಮ್ಮ ಗ್ರಾಮಗಳೇ ಈ ರಾಷ್ಟ್ರದ ಬುನಾದಿಗಳೆಂದರು ಗಾಂಧೀಜಿ. ಆದರೆ ಈ ಮಾತಿಗೆ ವಿರೋಧವೆಂಬಂತೆ ಡಾ. ಬಿ. ಆರ್. ಅಂಬೇಡ್ಕರ್ ರವರು ಈ ಗ್ರಾಮ ಸಮಾಜವೇ ಅಸ್ಪೃಶ್ಯತೆಯನ್ನು ಸೃಷ್ಟಿಸಿ, ಪೋಷಿಸಿ, ರಕ್ಷಿಸಿ, ಬೆಳೆಸಿಕೊಂಡು ಬಂದಿರುವುದು. ಗ್ರಾಮಸಮಾಜ ನಿರ್ಮಾಲನೆಯಾದರೆ ಮಾತ್ರ ಅಸ್ಪೃಶ್ಯತೆ ನಿರ್ಮಾಲನೆ ಸಾಧ್ಯವೆಂದು ಹೇಳಿದರು. ಒಂದರ್ಥದಲ್ಲಿ ಇವರಿಬ್ಬರ ಹೇಳಿಕೆಗಳಲ್ಲಿಯೂ ಸತ್ಯಾಂಶವಿದೆ. ಅಂಬೇಡ್ಕರ್ ರವರ ಹೇಳಿಕೆಯಂತೆ, ಗ್ರಾಮಗಳೆ ಅಸ್ಪೃಶ್ಯತೆಯ ತವರುಮನೆಗಳು. ಇಂದಿಗೂ ಸಹ ಭೂತಕಾಲದ ಕಲ್ಪನೆಯನ್ನು ಚಾಚು ತಪ್ಪದೆ ಪಾಲಿಸಿಕೊಂಡು ಬರುತ್ತಿವೆ. ಜೊತೆಗೆ ದಿನೇದಿನೇ ಮೇಲುಕೀಳು ಎಂಬ ಭಾವನೆಯು ಹೆಚ್ಚಾಗುತ್ತಿದೆ. ಇದಕ್ಕೆ ನಮ್ಮ ಶಿಕ್ಷಣ, ರಾಜಕೀಯ ಪ್ರಮುಖವಾಗಿ ಸಮಾಜದ ದೌರ್ಬಲ್ಯವೇ ಕಾರಣವೆನ್ನಬಹುದು. ಇದಕ್ಕೆ ಮೂಕಸಾಕ್ಷಿಯಾಗಿ ಮೊದಲೇ ಚರ್ಚಿಸಿರುವಂತೆ ಕರ್ನಾಟಕದಲ್ಲಿ ಎಸ್.ಎಂ. ಕೃಷ್ಣ ಸರ್ಕಾರವೂ ಶಾಲಾಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಕಾರ್ಯಕ್ರಮವನ್ನು ಜಾರಿಗೆ ತಂದಿರುವುದು ತಮಗೆಲ್ಲ ತಿಳಿದಿರುವ ವಿಷಾಯವೆ. ಆದರೆ ಈ ಕಾರ್ಯಕ್ರಮದಿಂದಾಗಿ ಪ್ರಾಚೀನ ಕಾಲದಲ್ಲಿದ್ದಂತಹ ಅನಿಷ್ಟ ಅಸ್ಪೃತ್ಯತೆಯು ಹೆಚ್ಚುಹೆಚ್ಚಾಗಿ ಜೀವಂತ ಪಡೆದು ಅದರ ಅರಿವನ್ನು ಸವರ್ಣೀಯರೆಂದು ಕರೆದುಕೊಂಡವರಲ್ಲಿ ಮೂಡಿಸಿದೆ. ದಲಿತರ ಜೊತೆ ಕುಳಿತು ಊಟ ಮಾಡುವ ಆಗಿಲ್ಲ. ದಲಿತರು ಅಡುಗೆ ಮಾಡಿದರೆ ಸವರ್ಣೀಯ ಮಕ್ಕಳ್ಯಾರೂ ದಾಸೋಹದಲ್ಲಿ ಪಾಲ್ಗೊಳ್ಳುವುದಿಲ್ಲ. ಘರ್ಷಣೆ ಊರಿಗೆ ಊರೇ ಸ್ಮಶಾಣವಾಗಿ ಪರಿವರ್ತನೆಗೊಳ್ಳುತ್ತದೆ. ದಲಿತರು ಸುಮ್ಮನಿದ್ದರೆ ಅವರಿಗೆ ಅವರೇ ಅನ್ಯಾಯ ಮಾಡಿಕೊಂಡಂತೆ. ಈ ಕಾರಣಗಳಿಂದಾಗಿ ಇಂದು ಗ್ರಾಮಗಳು ಮೂಲ ಅಸ್ತಿತ್ವವನ್ನೇ ಕಳೆದುಕೊಂಡು ನೂರಾರು ಸಮಸ್ಯೆಗಳ ಗೂಡಾಗಿ ಪರಿವರ್ತನೆಯಾಗುತ್ತಿರುವುದು ಕಂಡು ಬರುತ್ತಿದೆ. ಇವುಗಳ ನಿರ್ಮೂಲನೆಯಾಗದ ಹೊರತು ಗ್ರಾಮೀಣ ಅಭಿವೃದ್ದಿ ಸಾಧ್ಯವಿಲ್ಲ.

ಅಲ್ಪ ಶಿಕ್ಷಣ ಪಡೆದು ನಿರುದ್ಯೋಗಿಗಳಾಗಿ ಊರು ಊರುಗಳಲ್ಲಿ ಅಲೆಯುತ್ತಿರುವ ಯುವಕರು ಕೊಳಕು ರಾಜಕೀಯ ಪಕ್ಷಗಳ ಬೆಂಬಲಿಗರೆಂದು ಗುರ್ತಿಸಿಕೊಂಡು ಗ್ರಾಮದ ಶಾಂತಿಗೆ ಭಂಗ ತರುತ್ತಿದ್ದಾರೆ. ಇದರಿಂದಾಗುತ್ತಿರುವ ಗ್ರಾಮೀಣ ಅಶಾಂತಿಯ ನೈರ್ಮಲ್ಯ ಹೇಳತೀರದು. ಇವರು ತಮ್ಮ ಸ್ವಾರ್ಥ ಸಾಧನೆಗಾಗಿ ಹಳ್ಳಿಯ ಜನರಲ್ಲಿ ದ್ವೇಷಾಭಾವನೆ ಮೂಡಿಸಿ, ಅಸ್ಪೃಶ್ಯತೆಯನ್ನು ಹೆಚ್ಚಾಗಿ ಜಾರಿಗೆ ತಂದು ಒಗ್ಗಾಟ್ಟಾಗಿದ್ದಂತಹ ಗ್ರಾಮಗಳನ್ನು ಛಿದ್ರಛಿದ್ರವಾಗಿ ವಿಂಗಡಿಸಿ ನೋಡುವಂತೆ ಮಾಡಿದ್ದಾರೆ, ಇದನ್ನು ನಿರ್ಮೂಲನೆ ಮಾಡುವ ಕೆಲಸ ಸರ್ಕಾರ ಹಾಗೂ ಸಂಘ ಸಂಸ್ಥೆಗಳಿಗಿದೆ. ಇದನ್ನು ಇವರುಗಳು ಶಾಸ್ತ್ರಬದ್ದವಾಗಿ ನಿರ್ವಹಿಸಬೇಕಾಗುತ್ತದೆ.

ಪ್ರಸ್ತುತ ಕೃತಿಯಲ್ಲಿ ಬಂದಿರುವ ಗ್ರಾಮೀಣ ಪ್ರದೇಶದ ಚಿತ್ರಣವು ಸಾಮಾನ್ಯವಾಗಿ ಭಾರತದ ಎಲ್ಲಾ ಕಡೆಯಿಂದಲೂ ಕಂಡುಬರುವುದಾಗಿದೆ. ಕೆಲವು ನನ್ನ ಅಧ್ಯಯನದ ಹಾಗೂ ಸ್ವಾನುಭವದ ಪರಿಶ್ರಮಗಳ ಮೇಲೆ ರಚಿತವಾದವುದಾಗಿದೆ. ಗ್ರಂಥಗಳ ನೆರವನ್ನು ಇಲ್ಲಿ ಧಾರಾಳವಾಗಿ ಪಡೆಯಲಾಗಿದೆ. ಸಹಾಯಕ ಗ್ರಂಥಗಳ ಪಟ್ಟಿಯಲ್ಲಿ ಸೂಚಿಸಿದ ಎಲ್ಲ ಗ್ರಂಥಗಳ ಕತೃಗಳಿಗೆ ನನು ಕೃತಜ್ಞನಾಗಿರುತ್ತೇನೆ.

ಇಲ್ಲಿಯ ಬರಹಗಳನ್ನು ಗ್ರಾಮೀಣ ಜನಸಾಮಾನ್ಯರನ್ನು, ಶಾಲಾ ಕಾಲೇಜುಗಳಲ್ಲಿ ಓದುತ್ತಿರುವ ಗ್ರಾಮೀಣ ವಿದ್ಯಾರ್ಥಿಗಳನ್ನು ಗಮನದಲ್ಲಿರಿಸಿ ಹಾಗೂ ರಾಜಕೀಯವನ್ನು ವೃತ್ತಿಯಾಗಿರಿಸಿಕೊಂಡು ವ್ಯವಹರಿಸುತ್ತಿರುವವರನ್ನು ಉದ್ದೇಶಿಸಿ ರಚಿಸಲಾಗಿದೆ ಎಂದು ಹೇಳಬಯಸುತ್ತೇನೆ. ಕೃಷಿಕರ ಏಳ್ಗೆಯಾಗದೆ, ಹಳ್ಳಿಗಳ ಅಭಿವೃದ್ಧಿಯಾಗದೆ ನಮ್ಮ ರಾಷ್ಟ್ರದ ಅಭಿವೃದ್ಧಿಯಾಗಲಾರದೆಂಬ ಮಾತನ್ನು ನಾವೆಲ್ಲರೂ ಅರಿತಿದ್ದೇವೆ. ಆದರೆ ನಿಷ್ಠೆಯಿಂದ, ಪ್ರಾಮಾಣಿಕತನದಿಂದ ಎಲ್ಲಕ್ಕೂ ಹೆಚ್ಚಾಗಿ ವಾಸ್ತವ್ಯದೃಷ್ಟಿಯಂದ ನಾವು ನಮ್ಮ ಮುಂದಿರುವ ಸಮಸ್ಯೆಗಳ ಪರಿಹಾರದಲ್ಲಿ ನಿರತರಾಗುವುದು ಅವಶ್ಯಕ. ಸರ್ಕಾರಿ ಅಧಿಕಾರಿಗಳು, ರಾಜಕಾರಣಿಗಳು ತಮ್ಮ ಪ್ರತಿಷ್ಠೆಯನ್ನು, ವೈಯುಕ್ತಿಕ ಲಾಭವನ್ನು ಮೆರೆಯುವುದಕ್ಕೆ, ಮೇಲಣ ಅಧಿಕಾರಿಗಳ ಮೆಚ್ಚುಗೆಯನ್ನು ಪಡೆಯುವುದಕ್ಕೆ “ಎಲ್ಲವೂ ಸರಿಯಾಗಿದೆ, ಪ್ರಗತಿ ಪಥದಲ್ಲಿ ನಡೆದಿವೆ” ಎಂದು ಸವಿ ಮಾತನಾಡಿರುವ ಸನ್ನಿವೇಶಗಳು ಇವೆ. ಆದರೆ ಇಂತಹ ಬೆಲ್ಲದ ಮಾತುಗಳಿಂದ ಇಂದು ಬಂದು, ನಾಳೆ ಹೋಗುವ ಅಧಿಕಾರಿಗಳ ಹುಸಿ ಮಾತುಗಳಿಂದ ಯಾರಿಗೆ ಏನಾಗಬೇಕಾಗಿದೆ? ‘ಜಾತೀಯತೆ’, ‘ಅಸ್ಪೃಶ್ಯತೆ’ ಸಾಯುವತ್ತಾ ನಡೆದಿದೆ ಎಂದು ಎಲ್ಲರೂ ಹೇಳುವವರೆ. ಆದರೆ ಇದು ಸತ್ಯವೇ? ಇಂದು ಸರ್ಕಾರಕ್ಕೆ ನೀಡಿರುವ ೮೧ರಷ್ಟು ಹೇಳಿಕೆಗಳು ಮೇಲಿನ ರೀತಿಯವೇ ಆಗಿವೆ.

ನಮ್ಮ ಹಿರಿಯರು ಹೇಳಿದರು “ನನಗೆ ಜನ್ಮವಿತ್ತ ಪುಣ್ಯ ಭೂಮಿಯೇ, ನೀನು ಸ್ವರ್ಗಕ್ಕಿಂತಲೂ ಶ್ರೇಷ್ಠ” ಎಂದು ಇದನ್ನು ಅವರು ಜೀವನದುದ್ದಕೂ ಅಭಿಮಾನದಿಂದ ಉದ್ಗರಿಸುತ್ತಲೇ ಬಂದಿದ್ದರು. ಇಂದು ಆ ವಾಣಿ ನಮ್ಮನ್ನೆಲ್ಲ ಕೈಹಿಡಿದು ಉತ್ತಮ ಪಥದಲ್ಲಿ ಕರೆದೊಯ್ಯಬೇಕಾದ ಅವಶ್ಯಕತೆ ಎಂದಿಗಿಂತಲೂ ಹೆಚ್ಚಾಗಿದೆ. ಯಾವುದೇ ಸರ್ಕಾರವೇ ಆಡಳಿತದ ಚುಕ್ಕಾಣಿ ಹಿಡಿಯಲಿ. ಅವರು ಹೆಚ್ಚಿನ ಪ್ರಾಮುಖ್ಯತೆ ನೀಡಬೇಕಾದದ್ದು ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ. ಏಕೆಂದರೆ

“ನಮ್ಮ ದೇಶವು ಸಂಪೂರ್ಣವ್ಯವಸಾಯಿಕ ದೇಶ,

ಗ್ರಾಮಗಳೇ ಇಲ್ಲಿಯ ಐಶ್ವರ್ಯದ ಆಧಾರ,

ರೈತನೇ ಗ್ರಾಮಗಳ ಮತ್ತು ರಾಷ್ಟ್ರದ ತಳಹದಿ.

ಅವನ ಸಂಪತ್ತೇ ದೇಶದ ಸಂಪತ್ತು,

ಅವನ ಭಾಗ್ಯವೇ ದೇಶದ ಭಾಗ್ಯ,

ಅವನ ಉದ್ಧಾರವೇ ದೇಶೋದ್ಧಾರ,

ದೇಶದ ಗ್ರಾಮೀಣ ಜನರಲ್ಲಿ ಸುಖ, ಸಂಪತ್ತು, ಸಮೃದ್ಧಿಯಾಗಿದ್ದರೆ

ದೇಶದಲ್ಲಿ ನೆಲವೂ, ಬಲವೂ, ಸಂಪತ್ತೂ ನದಿಯಂತೆ

ಅವಿಚ್ಚಿನ್ನವಾಗಿ ಹರಿಯುತ್ತದೆ” ಎಂಬುದನ್ನು ಮರೆಯಬಾರದು.