ಚರಿತ್ರೆಯ ಆರಂಭಿಕ ಹಂತದಲ್ಲಿ ಮಾನವನಿಗೆ ಆಹಾರ ಸಂಗ್ರಹಣೆ ಮಾಡುವುದೇ ಪ್ರಥಮ ಕರ್ತವ್ಯವಾಗಿದೆ. ಮಾನವರ ಚರಿತ್ರೆಯನ್ನು ಅಧ್ಯಯನ ಮಾಡಿದರೆ, ಅವರಿಗೆ ಪ್ರಾಣಿಗಳಂತೆ ಆಹಾರವನ್ನು ಒದಗಿಸಿಕೊಳ್ಳುವುದೇ ಪ್ರಥಮ ಕರ್ತವ್ಯವಾಗಿತ್ತು. ಜೊತೆಗೆ ಕಾಲಕ್ಕೆ ತಕ್ಕಂತೆ ಬದಲಾಗುತ್ತಿದ್ದರಿಂದ ಹವಾಮಾನದಿಂದ ಉಂಟಾಗುತ್ತಿದ್ದ ತೊಂದರೆಗಳಿಂದ ತಪ್ಪಿಸಿಕೊಳ್ಳುವುದು ಅಂದಿನ ಮಾನವನ ಮುಖ್ಯ ಆರ್ಥಿಕ ಪ್ರಶ್ನೆಯಾಗಿ ಪರಿಣಮಿಸಿತ್ತು. ಅಂದಿನ ಕಾಲದ ಅನಾಗರಿಕ ಮನುಷ್ಯನು ಹಣ್ಣು ಹಂಪಲುಗಳನ್ನು ತಿಂದು, ಎಲೆ ಚರ್ಮಗಳನ್ನು ಹೊದ್ದುಕೊಂಡು ಗುಂಪಿನಲ್ಲಿ ವಾಸಮಾಡುತ್ತಿದ್ದನು. ತದನಂತರ ಅವನು ಆಹಾರಕ್ಕಾಗಿ ಬೇಟೆಯಾಡುವುದು, ಮೀನು ಹಿಡಿಯುವುದು ಮುಂತಾದ ಕೆಲಸಗಳನ್ನು ಕೈಗೊಂಡು ವಲಸೆ ಜೀವನವನ್ನು ನಡೆಸಲು ಪ್ರಾರಂಭಿಸಿದನು. ಕಾಲ ಬದಲಾದಂತೆ ಒಂದೇ ಸ್ಥಳದಲ್ಲಿ ನಿಂತು ಸಾಧುಪ್ರಾಣಿಗಳನ್ನು ಸಲಹಿದನು. ಅವುಗಳನ್ನು ಉಪಯೋಗಿಸಿಕೊಂಡು ಆಹಾರದ ಉತ್ಪಾದನೆಯಲ್ಲಿ ತೊಡಗಿದನು. ಸಾಕು ಪ್ರಾಣಿಗಳನ್ನು ಸಾಕುತ್ತಿರುವ ಕಾಲದಲ್ಲಿಯೇ ಆಹಾರಕ್ಕೆ ಆವಶ್ಯಕವಾದ ದವಸ-ಧಾನ್ಯಗಳನ್ನು ಭೂಮಿಯಲ್ಲಿ ಬೆಳೆಯಲಾರಂಭಿಸಿದನು. ಮನುಷ್ಯನ ಜೀವನದ ರೀತಿ ನೀತಿಗಳು ಬದಲಾವಣೆಯಾದ ಹಾಗೆಲ್ಲಾ ಅವನ ಜನಾಂಗವು ಬೆಳೆಯಿತು. ನಾಗರಿಕತೆಯು ಬೆಳೆದಂತೆಲ್ಲ ಆರ್ಥಿಕ ವಿಧಾನಗಳು ಬೆಳೆಯುತ್ತಾ ವಿಸ್ತಾರವಾದ ರೂಪ ಪಡೆದುಕೊಂಡವು.

ಮಾನವನ ಜೀವನಕ್ಕೆ ಅವಶ್ಯಕವಾಗಿ ಬೇಕಾಗಿರುವ ಆರ್ಥಿಕ ಅಂಶಗಳನ್ನು ಎರಡು ಭಾಗಗಳಾಗಿ ವಿಂಗಡಿಸಿ ಅಧ್ಯಯನ ಮಾಡಬಹುದು. ಅವುಗಳೆಂದರೆ (ಅ) ವೈಯಕ್ತಿಕ (ಆ) ಸಾಮಾಜಿಕ. ಈ ಎರಡು ಆರ್ಥಿಕ ಅಂಶಗಳು ಮನುಷ್ಯನ ಜೀವನದಲ್ಲಿ ಬಹುಕಾಲದವರೆಗೆ ಪ್ರಭಾವ ಬೀರಿದ ಸಾಧನಗಳಾಗಿವೆ.

ಸಂಪೂರ್ಣ ಅಧಿಕಾರ ತನ್ನಲ್ಲಿಯೇ ಕೇಂದ್ರೀಕೃತವಾಗಿರಬೇಕೆಂಬ ಹಂಬಲ, ಬೇರೆಯವರಿಗಿಂತ ಪ್ರತಿಯೊಂದು ಕ್ಷೇತ್ರದಲ್ಲಿಯೂ ತಾನೇ ಅಧಿಕ ಲಾಭ ಪಡೆಯಬೇಕೆಂಬ ಆಸೆ. ಪೈಪೋಟಿ ಇರುವ ಕಡೆ ವಿರೋಧಿಯನ್ನು ನಿರ್ದಾಕ್ಷಿಣ್ಯವಾಗಿ ಧ್ವಂಸ ಮಾಡುವಂತಹ ಕಾರ್ಯ. ಕೆಲಸಗಾರ, ಕೂಲಿಗಾರರ, ಯೋಗಕ್ಷೇಮದ ಕಡೆ ಅಲಕ್ಷತೆ ತೋರಿಸುವುದು. ಇವೇ ಮುಂತಾದವುಗಳು ವೈಯಕ್ತಿಕ ಕ್ಷೇತ್ರದ ಪ್ರಮುಖ ಲಕ್ಷಣಗಳಾಗಿವೆನ್ನಬಹುದು. ಹಾಗೆಯೇ ಸಾಮಾಜಿಕ ಕ್ಷೇತ್ರದ ಲಕ್ಷಣಗಳನ್ನು ಗಮನಿಸುವುದಾದರೆ ಪ್ರಜೆಗಳನ್ನೆಲ್ಲ ಸಮನಾಗಿ ಕಾಣುವುದು, ಬಡವರ ಮತ್ತು ಬಲಹೀನರ ರಕ್ಷಣೆಗೆ ಶ್ರಮಿಸುವುದು, ತಾವು ತೊಡಗಿಸಿಕೊಡಿರುವ ವೃತ್ತಿಯಲ್ಲಿ ಬಂದಂತಹ ಆದಾಯದಲ್ಲಿ ಪರರೊಂದಿಗೆ ಸೇರಿ ವಿಭಜನೆ ಮಾಡಿಕೊಳ್ಳುವುದು. ಪ್ರಮುಖವಾಗಿ ಸಾಮಾಜಿಕ ನೆಲೆಗಟ್ಟಿನಲ್ಲಿ ವ್ಯಕ್ತಿ ಸ್ವಾತಂತ್ರ್ಯಕ್ಕೆ ಹೆಚ್ಚಿನ ಅವಕಾಶ ಕಲ್ಪಿಸುವುದು-ಸಾಮಾಜಿಕ ಅಂಶದ ಪ್ರಮುಖ ಲಕ್ಷಣಗಳಾಗಿರುತ್ತದೆ. ಈ ಪ್ರತಿಯೊಂದು ಲಕ್ಷಣವು ಒಂದಲ್ಲಾ ಒಂದು ರೀತಿಯಲ್ಲಿ ಸಮಾಜದ ಆರ್ಥಿಕ ಜೀವನದ ಮೇಲೆ ಪ್ರಮುಖ ಪ್ರಭಾವವನ್ನು ಬೀರದೆ ಇರಲಾರದು.

ಹಳ್ಳಿಗಳಲ್ಲೆ ಹುಟ್ಟಿ, ಬೆಳೆದು, ಜೀವನ ನಡೆಸುತ್ತಿರುವ ಜನಗಳಿಗೆ ಪಟ್ಟಣದಲ್ಲಿರುವವರು ಬಂದು ತಿಳಿವಳಿಕೆ ಹೇಳುವುದರ ಔಚಿತ್ಯವಾದರು ಏನು, ಎಂಬ ಸಂಶಯ ತಕ್ಷಣವೇ ಕೆಲವರಿಗೆ ಮೂಡಬಹುದು. ಅದರಲ್ಲಿಯೂ ಗ್ರಾಮೀಣ ಪ್ರದೇಶದ ವ್ಯಕ್ತಿಗೆ ಅವರ ಯೋಜನೆ, ಚಿಂತನೆ ಹಾಗೂ ಪಟ್ಟಣದವರು ನೀಡುವ ಸಲಹೆಗಳು ಮೊದಮೊದಲು ಒಪ್ಪಿಕೊಳ್ಳುವುದು ಕಷ್ಟದ ಕೆಲಸವೇ ಆಗಿತ್ತು. ಆದರೆ ನಂತರ ಆಟದ ಸೊಬಗು ಆಟವಾಡುವವರಿಗಿಂತ ನೋಡುವವರಿಗೆ ಚೆನ್ನಾಗಿ ತಿಳಿಯುತ್ತದೆ ಎಂಬಂತೆ ಗ್ರಾಮದ ಸೊಬಗು ಆ ಪ್ರದೇಶದ ಜೀವನದ ಕುಂದುಕೊರತೆಗಳು ಹೊರಗಿನಿಂದ ನೋಡುವವರಿಗೆ ಒಂದು ರೀತಿಯಲ್ಲಿ ಎದ್ದು ಕಾಣುತ್ತದೆ. ಅಲ್ಲದೆ ನಾನು ನಾನು ನನ್ನ ಪಿಹೆಚ್. ಡಿ. ಪದವಿಗಾಗಿ “ಮೈಸೂರು” ಸಂಸ್ಥಾನದಲ್ಲಿ ಗ್ರಾಮೀಣಾಭಿವೃದ್ಧಿಯ ಒಂದು ಸಮೀಕ್ಷೆ (೧೮೮೧ ರಿಂದ ೧೯೪೦) ಎಂಬ ವಿಷಯದಲ್ಲಿ ಅಧ್ಯಯನವನ್ನು ಕೈಗೊಂಡಾಗ ಗ್ರಾಮೀಣ ಪ್ರದೇಶದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸ್ಥಿತಿಯ ವಿವರಗಳನ್ನು ಪರಿಶೀಲಿಸುವ ಸುಯೋಗವು ದೊರೆತಿತ್ತು. ಹಾಗೆಯೇ ಅನೇಕ ಗ್ರಾಮಗಳಲ್ಲಿ ಗ್ರಾಮೀಣಾಭಿವೃದ್ಧಿಗೆ ಸಂಬಂಧಿಸಿದಂತೆ ಅನೇಕ ವಿಷಯಗಳಡಿಯಲ್ಲಿ ಉಪನ್ಯಾಸ ನೀಡುವ ಸುಸಂಧಿಯೂ ಒದಗಿ ಬಂದಿತ್ತು. ಈ ಹಂತದಲ್ಲಿ ಇದರ ಬಗ್ಗೆ ಬರೆಯಬೇಕೆಂಬ ಆಸೆ ಮೂಡಿತ್ತೆನ್ನಬಹುದು.

ಪ್ರಸ್ಥಾವನೆಯಲ್ಲಿ ಕುವೆಂಪುರವರ ನೇಗಿಲಯೋಗಿ ಕಾವ್ಯವನ್ನು ಉಲ್ಲೇಖಿಸಿರುವ ಹಾಗೆ ನಮ್ಮ ಹಳ್ಳಿಗಳು ನೇಗಿಲಯೋಗಿಗಳ ತೌರುಮನೆಯಾಗಿದೆ, ಏಕೆಂದರೆ ಯಾವ ರೀತಿ ಯೋಗಿಯು ತನ್ನ ಯೋಗಾಭ್ಯಾಸವನ್ನು ಎಷ್ಟು, ತೊಂದರೆ ಬಂದರೂ ಕೈ ಬಿಡದೆ ಸಾಧಿಸುವನೋ, ಅದೇ ರೀತಿಯಾಗಿ ನಮ್ಮ ರೈತರು ಎಷ್ಟೇ ಕಷ್ಟಗಳಾದರೂ ಹಿಂಜರಿಯದೆ ಬೇಸಾಯವನ್ನೇ ನಂಬಿ ತನ್ನ ಬಾಳಿನ ಸಾಧನೆ ಮಾಡಿಕೊಳ್ಳುತ್ತಿದ್ದನೆನ್ನಬಹುದು. ಇತ್ತೀಚಿನ ನಗರೀಕರಣ. ಜಾಗತೀಕರಣ, ಖಾಸಗೀಕರಣ, ಹಾಗೂ ಆಧುನೀಕರಣಗಳ ಬಿರುಗಾಳಿಗೆ ಸಿಲುಕಿದ ಜನತೆ ಅದರಲ್ಲಿಯೂ ನಗರದ ಜನರೇ “ಹಳ್ಳಿಗಳಿಗೆ ಹಿಂತಿರುಗಿ” ಎಂಬ ಉಪದೇಶವನ್ನು ಸಾರಿ ಸಾರಿ ಹೇಳುತ್ತಿರುವುದು ಕಂಡುಬರುತ್ತದೆ. ನಮ್ಮ ರಾಷ್ಟದಲ್ಲಿ ಶೇಕಡ ೭೦ಕ್ಕಿಂತ ಹೆಚ್ಚಾಗಿ ಇಂದಿಗೂ ಸಹ ಜನರು ಹಳ್ಳಿಗಳಲ್ಲಿ ವಾಸಿಸುತ್ತಿದ್ದಾರೆ. ಅವರು ತಮ್ಮ ಜೀವನೋಪಯೋಗಕ್ಕೆ ಪ್ರಮುಖವಾಗಿ ಬೇಸಾಯವನ್ನೇ ನಂಬಿಕೊಂಡಿದ್ದಾರೆ. ನಮ್ಮ ರಾಜ್ಯದ ಪರಿಮಿತಿಯಲ್ಲಿಯೆ ಅಧ್ಯಯನ ಮಾಡುವುದಾದರೆ ರಾಷ್ಟ್ರದಷ್ಟೆ ಪ್ರಮಾಣದ ಜನತೆ ಹಳ್ಳಿಯಲ್ಲಿ ವಾಸಿಸುತ್ತಿರುವುದು ಕಂಡುಬರುತ್ತದೆ. ೨೦೦೧ರ ಜನಗಣತಿಯ ವರದಿಗಳ ಪ್ರಕಾರ ನಮ್ಮ ರಾಜ್ಯದಲ್ಲಿ ೫೬,೬೮೨ ಗ್ರಾಮಗಳಿವೆ. ಇವುಗಳಲ್ಲಿ ೨೭೦೬೬ ರೆವಿನ್ಯೊ ಗ್ರಾಮಗಳಾಗಿಯೂ ೨೯,೬೧೬ ಸಣ್ಣ ಹಳ್ಳಿಗಳಾಗಿಯೂ ಕಂಡುಬರುತ್ತವೆ. ಒಟ್ಟು ಜನಸಂಖ್ಯೆ ೫೨೭ ಲಕ್ಷ. ಇದರಲ್ಲಿ ೮೪ ಲಕ್ಷ ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಶೇಕಡಾ ೬೬ ರಷ್ಟು, ಜನರು ಗ್ರಾಮೀಣ ಪ್ರದೇಶದಲ್ಲಿಯೇ ವಾಸಿಸುತ್ತಿದ್ದಾರೆ. ಆದ್ದರಿಂದ ಈಗಲೂ ಸಹ ನಮ್ಮ ರಾಷ್ಟ್ರವಾಗಲಿ ಆಥವಾ ನಮ್ಮ ರಾಜ್ಯವಾಗಲಿ ಅಭಿವೃದ್ಧಿ ಹೊಂದಬೇಕಾದರೆ ಗ್ರಾಮಗಳ ಸ್ಥಿತಿ ಮೊದಲು ಉತ್ತಮವಾಗಬೇಕು. ಗ್ರಾಮಗಳೇ ನಮ್ಮ ದೇಶದ ಬೆನ್ನು ಮೂಳೆಯಿದ್ದ ಹಾಗೆ ಎಂದು ದೇಶದ ಹಿರಿಯರು ಹಾಗೂ ಮಹಾತ್ಮರೆನಿಸಿಕೊಂಡವರೆಲ್ಲರೂ ಹೇಳಿದ್ದಾರೆ, ಇಂತಹ ಮಹತ್ವವಿರುವ ನಮ್ಮ ಗ್ರಾಮಗಳು ಇಂದು ಯಾವ ದಿಕ್ಕಿನಲ್ಲಿ ಮುನ್ನಡೆಯುತ್ತಿವೆ. ಹಾಗೂ ಅದರ ಸ್ಥಿತಿಗತಿ ಬಗ್ಗೆ ಹೆಚ್ಚು ಮಾತುಗಳಿಂದ ಇಲ್ಲಿ ವರ್ಣಿಸಬೇಕಾಗಿಲ್ಲವೇನೋ.

ಹಿಂದಿನ ಕಾಲದಲ್ಲಿದ್ದ ಹಳ್ಳಿಗಳ ಅಚ್ಚುಕಟ್ಟನ್ನು ತಿಳಿಯಬೇಕಾದದ್ದು ಇಲ್ಲಿ ಅವಶ್ಯಕ. ಏಕೆಂದರೆ ಇಂದಿನ ಗ್ರಾಮಗಳ ಅಭಿವೃದ್ಧಿಯ ವಿಷಯವನ್ನು ಚೆನ್ನಾಗಿ ತಿಳಿಯಬೇಕಾದರೆ ನಾವು ಇತಿಹಾಸವನ್ನು ಮರೆಯಬಾರದು. ಈ ಹಂತದಲ್ಲಿ “ಹಿಂದಿನ ಇತಿಹಾಸವು ಮುಂದಿನ ಏಳಿಗೆಗೆ ತಳಹದಿ” ಎಂಬ ಹಿರಿಯರ ವಾಣಿ ನಿಜವೆನ್ನಿಸುತ್ತದೆ. ಇದೇ ಸಂದರ್ಭದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ರವರು ಜನತೆಗೆ ನೀಡಿರುವ “ಇತಿಹಾಸವನ್ನು ಮರೆತವರು ಇತಿಹಾಸವನ್ನು ನಿರ್ಮಿಸಲಾರರು” ಎಂಬ ನುಡಿ ಮುತ್ತು ಸಹ ಸರ್ವಕಾಲಕ್ಕೂ ಪ್ರಸ್ತುತವೆನ್ನಿಸದೆ ಇರಲಾರದು.

ರಾಜ್ಯದ ಹಿಂದಿನ ಹಳ್ಳಿಗಳನ್ನು ಸರ್ ಚಾರ್ಲಸ್ ಮೆಟ್ ಕಾಫ್ ಎಂಬ ವಿದ್ವಾಂಸರೊಬ್ಬರು ಪ್ರತಿಯೊಂದು ಹಳ್ಳಿಯೂ ಸ್ವಸಂಪೂರ್ಣತೆಯನ್ನು ಪಡೆದ ಒಂದು ಪುಟ್ಟ ಪ್ರಜಾಪ್ರಭುತ್ವವೆಂದು ಹೇಳಿರುವುದು ಕಂಡು ಬರುತ್ತದೆ. ಇತಿಹಾಸದಲ್ಲಿ ನಮ್ಮ ರಾಜ್ಯದ ಅನೇಕ ಪ್ರದೇಶಗಳನ್ನು ಅನೇಕ ರಾಜರು ಆಳಿದರು: ಅಳಿದರು. ಚಕ್ರಾಧಿಪತ್ಯಗಳು ಏರಿದುವು, ಉರುಳಿದವು. ಪರದೇಶದವರು ದಾಳಿ ನಡೆಸಿ ದೋಚಿಕೊಂಡು ಹೋದರು, ಆದರೂ ನಮ್ಮ ಗ್ರಾಮಗಳು ನಶಿಸಿ ಹೋಗದೆ ತಮ್ಮ ಮಿತಿಯಲ್ಲಿಯೇ ಬೆಳೆಯುತ್ತಲೇ ಇದ್ದವು. “ರಾಯರಿಗೆ ರಾಜ್ಯವಾದರೆರಾಗಿ ಬೀಸುವುದು ತಪ್ಪೀತೆ” ಎಂಬ ಗಾದೆಯಂತೆ ಆಳರಸರಿಗೆ ತಾವು ಕೊಡುವ ಕಂದಾಯವನ್ನು ಕೊಟ್ಟರಾಯ್ತು. ನಮಗೂ ಹೊರಗಿನ ಪ್ರಪಂಚಕ್ಕೂ ಯಾವ ಸಂಬಂಧವೂ ಇಲ್ಲವೆಂದು ಗ್ರಾಮದ ಜನರು ಅಂದು ತಿಳಿದರು. ಒಂದು ರೀತಿಯಲ್ಲಿ ಇವುಗಳು ಸಂಪೂರ್ಣವಾಗಿ “ನಗರದ ಪ್ರಭುತ್ವ” ಗಳಂತೆ ಇದ್ದವೆನ್ನಬಹುದು. ಅಂದು ನಮ್ಮ ಗ್ರಾಮಗಳಲ್ಲಿ ಜನರು ಕೈಗೊಂಡಿರುವ ಪ್ರಮುಖ ವ್ಯಕ್ತಿಯ ಆಧಾರದ ಮೇಲೆ ಸಮರ್ಪಕವಾದೊಂದು ವ್ಯವಸ್ಥೆ ಇದ್ದಿತ್ತು, ಹಳ್ಳಿಯವರು ಹೊರಗಿನವರ ಸಹಾಯವನ್ನು ನಿರೀಕ್ಷಿಸದೆ ತಮ್ಮ ಜೀವನಕ್ಕೆ ಬೇಕಾದ ಸಾಧನ ಸೌಕರ್ಯಗಳನ್ನೆಲ್ಲ ತಾವೇ ಕಲ್ಪಿಸಿಕೊಳ್ಳುತ್ತಿದ್ದರು. ಪ್ರತಿಯೊಬ್ಬ ರೈತನೂ ತನಗೆ ಬೇಕಾದ ಆಹಾರ ಪದಾರ್ಥಗಳೊಂದಿಗೆ, ಉಡುಗೆಗೆ ಬೇಕಾದ ಹತ್ತಿ, ದೀಪಕ್ಕೆಬೇಕಾಗುತ್ತಿದ್ದಂತಹ ಎಣ್ಣೆ, ಜಾನುವಾರುಗಳಿಗೆ ಬೇಕಾಗುತ್ತಿದ್ದಂತಹ ಆಹಾರ, ನೀರು ಮುಂತಾದ ಹಲವು ಅವಶ್ಯಕ ಪದಾರ್ಥಗಳೆಲ್ಲವನ್ನು ಸ್ವಪ್ರಯತ್ನದಿಂದಲೇ ಹೊಂದಿಸಿಕೊಳ್ಳುತ್ತಿದ್ದನು. ಇದರ ಜೊತೆಗೆ ಹಿಂದಿನ ಗ್ರಾಮೀಣ ಜನರು ಇಂದಿನ ರೀತಿಯಲ್ಲಿ ಕಾಲವನ್ನು ವ್ಯರ್ಥವಾಗಿ ಕಳೆಯದೆ ವಿರಾಮ ಕಾಲದಲ್ಲಿ ಉಪಯೋಗವಾಗುವಂತಹ ಅನೇಕ ಕೈಕಸುಬುಗಳನ್ನು ಇಟ್ಟುಕೊಂಡು ವರ್ಷಪೂರ್ತಿ ಉದ್ಯೋಗಪರರಾಗಿದ್ದರು. ಅಷ್ಟೆ ಅಲ್ಲದೆ ಪ್ರತಿಯೊಂದು ಗ್ರಾಮದಲ್ಲಿಯೂ ಸಹ ಗ್ರಾಮಗಳಿಗೆ ಅಂಗವಾಗಿ “ಬಾರಾಬಲೂತಿ” ಎನ್ನುವ ಕೆಲಸಗಾರರಿದ್ದರು (ಸ್ವಯಂ ಸೇವಕರುಗಳು). ತಮ್ಮ ಕೆಲಸವನ್ನು ತಾವೇ ಮಾಡಿಕೊಳ್ಳುವುದು ದೊಡ್ಡ ಕರ್ತವ್ಯ; ಕಷ್ಟಪಟ್ಟು ದುಡಿಯುವುದು ಎಂದಿಗೂ ಅಪಮಾನವಲ್ಲ ಎಂಬುದನ್ನು ಅಂದಿನ ಗ್ರಾಮೀಣರು ಚೆನ್ನಾಗಿ ಮನನ ಮಾಡಿಕೊಂಡಿದ್ದರು. ತಾನು ಮಾಡುವುದು ಉತ್ತಮ ಆಳು ಮಾಡುವುದು ಹಾಳು, “ಕೈ ಕೆಸರಾದರೆ ಬಾಯಿ ಮೊಸರು” ಎಂಬ ನಾಣ್ಣುಡಿಗಳು ಸಾರಿ ಸಾರಿ ಹೇಳುವ ಅರ್ಥ ಇದೇ ಆಗುತ್ತದೆ.

ಸಾಮಾನ್ಯವಾಗಿ ಅಂದು ಪ್ರತಿಯೊಬ್ಬ ಗ್ರಾಮಸ್ಥರೂ ಸಹ ಗ್ರಾಮದ ಕೆಲಸಕ್ಕೆ ಕೈ ಜೋಡಿಸುತ್ತಿದ್ದರು. ತಮ್ಮ ಮನೆಯ ಕೆಲಸವೆಂಬಂತೆ ಉತ್ಸಾಹಶಾಲಿಗಳಾಗಿ ವಿಶೇಷ ಅಭಿಮಾನದಿಂದ ದುಡಿಯುತ್ತಿದ್ದರು. ಇದಕ್ಕೆ ಸಾಕ್ಷಿ ಎಂಬಂತೆ ಪ್ರತಿಯೊಂದು ಗ್ರಾಮಗಳಲ್ಲಿಯೂ ಹಾಗೂ ಗ್ರಾಮ-ಗ್ರಾಮಗಳ ಮಧ್ಯೆ ಸಿಗುವಂತಹ ಕೆರೆ, ಕುಂಟೆ, ಬಾವಿ, ತೋಪು, ದೇವಾಲಯಗಳು ಇದಕ್ಕೆ ನಿದರ್ಶನವೆನ್ನಬಹುದಾಗಿದೆ. (ಆದರೆ ಇಂದು ಸ್ವತಹ ಜನರಿಂದ ನಿರ್ಮಾಣವಾದಂತಹ ಒಂದೇ ಒಂದು ಕೆರೆ, ಕುಂಟೆ, ಬಾವಿ, ತೋಪು ಸಹ ದೊರಕದಾಗಿದೆ). ಅಂದಿನ ಜನತೆಗೆ ಹಳ್ಳಿಗಳೇ ದಿಲ್ಲಿಗಳಾಗಿದ್ದವು. ಅವುಗಳ ಸೌಂದರ್ಯವೇ ಅವರ ಸೌಂದರ್ಯವಾಗಿತ್ತೆನ್ನಬಹುದು. ಅಂದಿನ ಜನತೆ ದೇವರ ಮೇಲೆ ಇಟ್ಟುಕೊಂಡಿದ್ದಂತಹ ಸುಂದರವಾದ ಸೌಂದರ್ಯದ ಪ್ರೀತಿಯ ಭಕ್ತಿಯು ದೇವರನ್ನು ನಿರ್ಮಲನು, ಶಾಂತನು, ಸುಂದರನು, ಕರುಣಾಮಯಿಯೆಂದು ತಿಳಿಯಲಾಗಿತ್ತು. ಆ ದೇವರನ್ನು ಧ್ಯಾನ ಮಾಡಬೇಕಾದರೆ ನಿರ್ಮಲವಾದ, ಸುಂದರವಾದ, ಶಾಂತವಾದಂತಹ ವಾತಾವರಣವಿರಬೇಕೇಂದು ನದಿ ತೀರ, ರಮ್ಯವಾದ ವನ, ಚಿತ್ತಾಕರ್ಷಕವಾದಂತಹ ಬೆಟ್ಟಗಳ ಮೇಲ್ಭಾಗದಲ್ಲಿ ದೇವಸ್ಥಾನಗಳನ್ನು ನಿರ್ಮಿಸಿದ್ದನು. ಇದನ್ನು ನಾವು ಇಂದಿಗೂ ಹೆಚ್ಚಿನ ಪ್ರಮಾಣದಲ್ಲಿ ನೋಡುತ್ತಿದ್ದೇವೆ. ಅದೇ ರೀತಿಯಲ್ಲಿ ಅವುಗಳಿಗೆ “ಆಧುನಿಕ” ವಾದ ಭಕ್ತಿಭಾವದಿಂದ ಪೂಜಿಸಿಕೊಂಡು ಸಹ ಬರುತ್ತಿದ್ದೇವೆ. ನಮ್ಮ ನಾಡಿನ ಪ್ರಸಿದ್ದ ಕವಿಗಳಾದಂತಹ ರನ್ನ, ಜನ್ನ. ಪೊನ್ನ, ಪಂಪ, ರಾಘವಾಂಕ, ಹರಿಹರ, ದಾಸರುಗಳು, ವಚನಕಾರರು, ಆಧುನಿಕ ಕಾಲದ ಬೇಂದ್ರೆ, ಕುವೆಂಪು, ಕೆ. ಎಸ್. ಎನ್. ಮುಂತಾದ ನೂರಾರು ಕವಿಗಳು ನಮ್ಮ ನಾಡಿನ ಗ್ರಾಮಗಳ ವರ್ಣನೆಯನ್ನು ತೃಪ್ತಿಯಾಗುವಷ್ಟೆ ತಮ್ಮ ಕೃತಿಗಳಲ್ಲಿ ಕೃಷಿ ಮಾಡಿದ್ದಾರೆ. ಅವರುಗಳು ವರ್ಣಿಸಿರುವ ಸಂಪಿಗೆ, ಮಲ್ಲಿಗೆ, ಜಾಜಿ ಮುಂತಾದ ಹೂಗಿಡಗಳು, ನಿಂಬೆ, ಮಾವು, ಹಲಸು ಮುಂತಾದ ಫಲ ವೃಕ್ಷಗಳು ಅಂದು ಹಳ್ಳಿಗಳಲ್ಲಿ ತುಂಬಿರುತ್ತಿತ್ತೆಂದು ಅವುಗಳನ್ನು ಓದಲು ಪ್ರಾರಂಭಿಸಿದರೆ ಕಂಡು ಬರುತ್ತದೆ. ಆದರೆ ಇಂದಿನ ಗ್ರಾಮಗಳ ವ್ಯವಸ್ಥೆಯೇ ಬೇರೆಯಾಗಿದೆ. ಇಂದೆಲ್ಲಾ ಬರೀ “ಪಾರ್ಥೇನಿಯಂ” ಗಿಡಗಳ ಸಂಸ್ಕೃತಿ ನಮ್ಮ ಕಣ್ಣಿಗೆ ಬೀಳುತ್ತದೆ. ಹಿಂದೆ ಹಳ್ಳಿಯಲ್ಲಿ ಯಾಜಮಾನ್ಯ ಸಂಸ್ಕೃತಿಯು ಬೇರುಬಿಟ್ಟಿತ್ತು. ದಣಿ ಸಂಸ್ಕೃತಿಯು ತಾಂಡವಾಡುತಲಿತ್ತು. ಇವರುಗಳು ತಮ್ಮ ತಮ್ಮ ಹಳ್ಳಿಗಳನ್ನು ತಮ್ಮ ಹದ್ದುಬಸ್ತಿನಲ್ಲಿಟ್ಟುಕೊಂಡು ಅನೇಕ ಸಂಪ್ರದಾಯಬದ್ಧರಾಗಿದ್ದರು. ಊರಿನ ವ್ಯಾಜ್ಯ ವ್ಯವಹಾರಗಳನ್ನು ಊರಿನ ಹಿರಿಯರು ಪಂಚಾಯಿತಿಯಿಂದ ತೀರ್ಮಾನಿಸುತ್ತಿದ್ದರು. ಈಗಿನಂತೆ ಕೋರ್ಟುಗಳಿರಲಿಲ್ಲ. ಜನರು ತಾವು ಗುರ್ತಿಸಿಕೊಂಡಿರುವ ಕೈಕಸಬುಗಳನ್ನೆ ತಮ್ಮ ಜಾತಿಯ ಮೂಲಕಸಬುಗಳನ್ನಾಗಿ ಪರಿವರ್ತಿಸಿಕೊಂಡು ತಮ್ಮ ತಮ್ಮ ಜೀವನದಲ್ಲಿ ಒಂದು ರೀತಿಯ ಕ್ರಮ, ಶಿಸ್ತು ಮತ್ತು ಸಂತೋಷವನ್ನು ಅನುಭವಿಸುತ್ತಿದ್ದರು. ಇಷ್ಟರಿಂದ ಮಾತ್ರಕ್ಕೆ ಅಂದಿನ ಜನರೆಲ್ಲರೂ ಶ್ರೀಮಂತರಾಗಿದ್ದರೆಂದಾಗಲಿ ಅಥವಾ ಸಾಮಾಜಿಕವಾದಂತಹ ಅಸಮಾಧಾನವಿರಲಿಲ್ಲವೆಂದೇನಲ್ಲ. ಆದರೆ ಜನರಲ್ಲಿ ಸಮಾಧಾನ ತೃಪ್ತಿಗಳಿದ್ದುದರಿಂದ ಈಗಿನಂತೆ ನಿರುತ್ಸಾಹಕ್ಕೆ ಎಡೆಯಿರಲಿಲ್ಲವೆನ್ನಬಹುದು. ಇದಕ್ಕೆ ನಿದರ್ಶನವೆಂದರೆ ಅಂದು ಗ್ರಾಮೀಣ ಪ್ರದೇಶದಲ್ಲಿ ಉದಯಿಸಿದ್ದಂತಹ ಗಾನ, ಲಾವಣಿ, ಸುಗ್ಗಿ ಕುಣಿತ, ಬಯಲಾಟಗಳು, ಸೋಬಾನೆ ಪದಗಳು, ದೇವರ ಕುರಿತ ಜಾನಪದ ಗೀತೆಗಳು, ಮುಂತಾದವು ಇಲ್ಲಿ ಇಂದಿಗೂ ನಾವು ಕೇಳುವುದಕ್ಕೆ ಹಾಗೂ ಅವುಗಳ ಮೌಲ್ಯವನ್ನು ತಿಳಿಯುವುದಕ್ಕೆ ಅವಕಾಶವೆನ್ನಬಹುದು.