ನಮ್ಮ ಗ್ರಾಮಗಳ ಇಂದಿನ ಸ್ಥಿತಿಯಂತು ತುಂಬಾ ಚಿಂತಾಜನಕವಾಗಿದೆ. ಸಾಮಾಜಿಕ ರೀತಿಯಲ್ಲಿಯೂ ಮತ್ತು ಆರ್ಥಿಕ ಅಂಶಗಳಿಂದಲೂ ಒಂದು ರೀತಿಯ ಸ್ವಯಂಪೂರ್ಣತೆಯಿಂದ ಕೂಡಿಕೊಂಡು ಪುಟ್ಟಪುಟ್ಟ ಪ್ರಜಾಪ್ರಭುತ್ವಗಳೆನಿಸಿಕೊಂಡಿದ್ದಂತಹ ಗ್ರಾಮಗಳು ಈಗ ಏನಾಗುತ್ತಿವೆ ಎಂಬುದಕ್ಕಿಂತ ಏನಾಗಿದೆ? ಯಾವ ಸ್ಥಿತಿಯಲ್ಲಿವೆ ಎಂಬುವುದನ್ನು ಪರಿಶೀಲಿಸುವುದು ಅವಶ್ಯಕವೆನ್ನಿಸುತ್ತದೆ.

ಶತಶತಮಾನಗಳಿಂದ ತಾವೇ ಭ್ರಮಿಸಿಕೊಂಡಿದ್ದಂತಹ ಸಮಾಜದ ಶ್ರೇಷ್ಠತೆ ಹಾಗೂ ಸಂಸ್ಕೃತಿಯ ಸಂರಕ್ಷಕರೆಂದು ತಿಳಿದು ಸಾಮಾಜಿಕವಾಗಿ ಹಾಗೂ ಮಿಕ್ಕ ಕ್ಷೇತ್ರಗಳಲ್ಲಿಯೂ ಸುರಕ್ಷಿತವಾಗಿಯೇ ಬಾಳಿದಂತಹ ಬ್ರಾಹ್ಮಣರು ಇಂದು ತಮ್ಮ ಜವಾಬ್ದಾರಿಯುತವಾದಂತಹ ಪ್ರಮುಖ ಸ್ಥಾನಗಳನ್ನು ಕಳೆದುಕೊಂಡು ಗ್ರಾಮದ ತಮ್ಮ ಒಡನಾಡಿಗಳಿಂದ ಬೇರೆಯಾಗುತ್ತಿದ್ದಾರೆ. ಒಂದು ಕಾಲದಲ್ಲಿ, ಬ್ರಾಹ್ಮಣರ ದೃಷ್ಟಿಯಲ್ಲಿ ಗ್ರಾಮವೆಂದರೆ ತಮ್ಮವರೇ ಇರುವಂತಹ ಅಗ್ರಹಾರವೊಂದೇ. ಅಗ್ರಹಾರದ ಹೊರಗಿನ ಭಾಗವನ್ನು ಅವರು ಲೆಕ್ಕಕ್ಕೆ ತೆಗೆದುಕೊಳ್ಳುತ್ತಿರಲಿಲ್ಲ. ಹೊರಗಿನವರು ಅಲ್ಲಿ ಯಾರನ್ನಾದ್ರು “ನಿಮ್ಮೂರಲ್ಲಿ ಮನೆಗಳು ಎಷ್ಟು ಇವೆ ? ಎಂದು ಕೇಳಿದರೆ ತಕ್ಷಣ ಅವರು ಸುಮಾರು ನೂರು ಎನ್ನುತ್ತಿದ್ದರು. ಏಕೆಂದರೆ ಗ್ರಾಮದಲ್ಲಿ ವಾಸಿಸುತ್ತಿದ್ದಂತಹ ಬೇರೆ ಜನಾಂಗದವರು ಕೇರಿಗಳಲ್ಲಿ ಇದ್ದರೂ ಇವು ಅಂದು ಊರುಗಳಾಗಿ ಪರಿಗಣಿಸಲಾಗಿರಲಿಲ್ಲ. ಊರು ಎಂದರೆ ಕೇವಲ ಅಗ್ರಹಾರ ಮಾತ್ರವೆಂದು ನಂಬಿದ್ದರು.*

[1] ಇಂದು ಅವರು ಸಂಪೂರ್ಣವಾಗಿ ಪರೋಪಜೀವಿಯಾಗಿ ಜೀವಿಸುತ್ತಿದ್ದಾರೆ. ಕ್ಷತ್ರಿಯರು, ವೈಶ್ಯರು ಹಾಗೂ ಶೂದ್ರರೂ ಕೂಡ ತಮ್ಮ ತಮ್ಮ ಮುಖ್ಯ ವೃತ್ತಿಯನ್ನು ಸಂಪೂರ್ಣವಾಗಿ ಕೈಬಿಟ್ಟು ಸರ್ಕಾರದ ಸೇವಾವೃತ್ತಿಯಲ್ಲಿ ತೊಡಗಿಕೊಂಡು ಸ್ವಪ್ರತಿಷ್ಟೆಯಿಂದ ಜೀವನ ನಡೆಸಲು ಪ್ರಾರಂಭಿಸಿದ ನಂತರ ಸಮಾಜದ, ಗ್ರಾಮ, ರಾಜ್ಯದ, ರಾಷ್ಟ್ರದ ಹಿತದಿಂದ ದುಡಿಯುವುದನ್ನು ಬಿಟ್ಟರೆನ್ನಬಹುದು, ಇದು ಒಂದಲ್ಲಾ ಒಂದು ರೀತಿಯಲ್ಲಿ ದೇಶದ ಆರ್ಥಿಕ ಹೀನತೆಗೆ ಹಾಗೂ ಸಾಮಾಜಿಕ ಹಾಗೂ ರಾಜಕೀಯ ಅಭದ್ರತೆಗೆ ಕಾರಣವಾಯಿತೇನೋ ಅನ್ನಿಸುತ್ತದೆ.

ನಮ್ಮ ಗ್ರಾಮಗಳ ಈಗಿನ ಸ್ಥಿತಿ ತುಂಬಾ ಶೋಚನೀಯವಾಗಿದೆ. ಪ್ರತಿಯೊಂದು ಗ್ರಾಮವು ಬಡತನದ ತೌರುಮನೆಯಾಗಿದೆ. ಜನರಲ್ಲಿ ನಿರುತ್ಸಾಹ, ಅಸೂಯೆ, ನಿರುದ್ಯೋಗ-ಕೊಲೆ-ಸುಲಿಗೆ ದರೋಡೆ-ಅನೈತಿಕ ವ್ಯವಸ್ಥೆ ತಾಂಡವಾಡುತ್ತಿದೆ. ಹಾಗೆಯೇ ಹಿರಿಯರ ಬಗ್ಗೆ ಅಗೌರವ – ನಮ್ಮ ಊರು ನಮ್ಮ ಜನ, ನಮ್ಮ ಸಂಸ್ಕೃತಿ ನಮ್ಮ ನಾಡು ಎಂಬುವಂತಹ ಮಾತಿನಿಂದ ತುಂಬ ದೂರ ಸರಿಯುತ್ತಿದ್ದಾರೆ. ಇತ್ತೀಚಿನ ಸಮೀಕ್ಷೆಯ ಪ್ರಕಾರ ಸಾಮಾಜಿಕವಾಗಿ ಉತ್ತಮರೆಂದು ಶತಮಾನದಿಂದ ಕರೆದುಕೊಂಡು ಬಂದವರೆಲ್ಲರು ತಮ್ಮ ಊರುಗಳನ್ನು ತೊರೆದು ಪಟ್ಟಣದ ಖಾಯಂ ವಾಸಿಗಳಾಗಿ ಪರಿವರ್ತನೆಗೊಂಡಿದ್ದಾರೆ. ಆ ನಂತರ ಗ್ರಾಮದಲ್ಲಿ ಉಳಿದವರು ಕೆಳವರ್ಗದ ಜನರೇ ಹೆಚ್ಚು. (ದಲಿತ ವರ್ಗವೆನ್ನಬಹುದು) ಈ ಜನರು ಬೆಳಗಿನಿಂದ ಸಾಯಂಕಾಲದವರೆಗೆ ದುಡಿದರೂ ಸಹ ಅವರಿಗೆ ಹೊಟ್ಟೆತುಂಬ ಆಹಾರವಿಲ್ಲ. ಉಡಲು ಮೈತುಂಬ ಬಟ್ಟೆ ಇಲ್ಲ. ಅಭಿವೃದ್ಧಿ ಹೊಂದುತ್ತಿರುವ ಹೊಂದಿರುವ ರಾಷ್ಟ್ರವೆಂದು ನಮ್ಮಷ್ಟಕ್ಕೆ ನಾವೇ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರೂ ಎಲ್ಲೊ ಒಂದು ದೃಷ್ಟಿಯಲ್ಲಿ ಪ್ರಪಂಚದ ಬಡರಾಷ್ಟ್ರಗಳಲ್ಲಿ ಭಾರತ ಮೊದಲನೆ ಸಾಲಿನಲ್ಲಿ ನಿಲ್ಲುವುದೋ ಏನೋ ಎಂಬ ಸಂಶಯ ಮೂಡದಿರಲಾರದು. ಗ್ರಾಮೀಣ ಪ್ರದೇಶದ ವಿದ್ಯಾವಂತರು, ದೃಢಕಾಯ ಯುವಕರು, ಸುಸಂಸ್ಕೃತ ಆದಂತಹ ಹಳ್ಳಿಯ ಯುವಕರು ಹಳ್ಳಿಯನ್ನು ಬಿಟ್ಟು ಪಟ್ಟಣ ಸೇರುತ್ತಿದ್ದಾರೆ. (ಇಲ್ಲಿ ಗ್ರಾಮಗಳನ್ನು ತೊರೆದವರೆಂದರೆ) ಸಂಪೂರ್ಣವಾಗಿ ತಮ್ಮ ಗ್ರಾಮವನ್ನು ಮರೆತವರು ಮಾತ್ರ.) ಇಂದಿನ ಆಧುನಿಕತೆಯ ಭರಾಟೆಯಲ್ಲಿ ಸಿಲುಕಿಕೊಂಡು ತಾವು ಹುಟ್ಟಿದೂರಿನ ಸಂಪ್ರದಾಯಗಳನ್ನು ಸಂಪೂರ್ಣವಾಗಿ ಮರೆಯುತ್ತಿದ್ದಾರೆ. ಅವರಲ್ಲಿ ಉತ್ಸಾಹ, ಶಕ್ತಿ ಎಲ್ಲವೂ ಕುಗ್ಗುತ್ತಿವೆ. ಇವುಗಳ ಜೊತೆಗೆ ನಗರೀಕರಣದಿಂದ ಹಾಗೂ ಆಧುನಿಕರಣದಿಂದ ಏನೆಲ್ಲಾ ಮುಂದೆ ಬರುತ್ತಿದ್ದರೂ ಬಿಡನೆಂದು ಅವರ ಜೊತೆಗೆ ಅಂಟು ಜಾಡ್ಯವಾಗಿ ಅಂಟಿಕೊಂಡಿರುವಂತಹ ಅವಿದ್ಯೆ -ಅಜ್ಞಾನ – ಬಡತನಗಳು ಆವರಿಸಿಕೊಂಡಿವೆ.

ನಮ್ಮ ಇಂದಿನ ಗ್ರಾಮಗಳ (ಎಲ್ಲೋ ಅಲ್ಲಿ ಇಲ್ಲಿ ಕೆಲವು ಗ್ರಾಮಗಳು ಮಾದರಿ ಗ್ರಾಮಗಳೆನ್ನಿಸಿಕೊಂಡಿರಬಹುದು. ಅದು ಸರ್ಕಾರದವರ ದೃಷ್ಟಿಯಲ್ಲಿ ಮಾತ್ರವೆಂದು ನಿಸ್ಸಂದೇಹವಾಗಿ ಹೇಳಬಹುದೇನೋ.) ಸ್ಥಿತಿಯಂತೂ ದಿನೇ ದಿನೇ ಶೋಚನೀಯವಾಗುತ್ತಿದೆ. ಒಂದು ಕಡೆ ರೈತರು ಹೊರಲಾರದ ಸಾಲದ ಭಾರದಿಂದಾಗಿ ಆತ್ಮಹತ್ಯೆಗೆ ಮೊರೆ ಹೋಗುತ್ತಿದ್ದಾರೆ ಇನ್ನೊಂದು ಕಡೆ ಎಷ್ಟು ದುಡಿದರೂ ಊಟ ಬಟ್ಟೆ ಸಾಕಾಗದ ವರಮಾನ: ಮಗದೊಂದು ಕಡೆ ತಾವು ಕಷ್ಟಪಟ್ಟು ಬೆಳೆದ ದವಸಧಾನ್ಯಗಳು ಮಧ್ಯಸ್ಥಗಾರರಿಂದ ಕಬಳಿಕೆಯಾಗುತ್ತಿವೆ. ಸರ್ಕಾರವು ಸಂವಿಧಾನದ ಆಧಾರದ ಮೇಲೆ ಸಾಮಾಜಿಕ ನ್ಯಾಯಕ್ಕಾಗಿ ಸಂಘರ್ಷ ಇಲ್ಲದೆ ಸೂರ್ಯ ಮುಳುಗಲಾರ- ಉದಯಿಸಲಾರ ಎನ್ನುವಷ್ಟರ ಮಟ್ಟಿಗೆ ನಮ್ಮ ಗ್ರಾಮಗಳ ಸಾಮಾಜಿಕ ಸ್ಥಿತಿಯು ದುರ್ಬಲವಾಗುತ್ತಿದೆ. ಈ ಕಾರಣಗಳಷ್ಟೆ, ಅಲ್ಲದೆ ನಮ್ಮ ಜನಗಳು ಸೋಮಾರಿಗಳಾಗಿ (ವರ್ಷದಲ್ಲಿ ಆರು ತಿಂಗಳು) ವ್ಯರ್ಥ ಕಾಲಕ್ಷೇಪ ಮಾಡುತ್ತಿರುವುದು ಕಂಡು ಬರುತ್ತದೆ. “ಕುಂತ್ಕತಿನ್ನುವವನಿಗೆ ಬೆಟ್ಟದಷ್ಟು, ಇದ್ರೂ ಸಾಲ್ದು” ಎಂಬಂತೆ ಇಂದಿನ ಗ್ರಾಮೀಣ ಪ್ರದೇಶದ ಯುವಕರು ಒಗ್ಗಟ್ಟಿನಿಂದ ಕೆಲಸ ಮಾಡದೆ ದ್ವೇಷಾಸೂಯೆಗಳಿಗೆ ಬಲಿಯಾಗುತ್ತಿದ್ದಾರೆ. ತಮ್ಮದಲ್ಲದ ವ್ಯಾಜ್ಯ- ವ್ಯವಹಾರಗಳಲ್ಲಿ ನಿರತರವಾಗಿ ಕಷ್ಟಪಡುತ್ತಿದ್ದಾರೆ. ಹಿಂದೆ ಶಿಸ್ತುಬದ್ಧವಾಗಿದ್ದಂತಹ ಜನಸಮೂಹಕ್ಕೆ ಕಾನೂನುಗಳು ಹೆಚ್ಚಾದಂತೆಲ್ಲಾ ಅವುಗಳಿಂದ ಮುಕ್ತರಾಗಲು ಸುಳ್ಳು, ಮೋಸಗಳು ದಗಲಬಾಜಿತನಗಳು, ಹೆಚ್ಚಾಗತೊಡಗಿವೆ. ಹಿಂದೆ ಇದ್ದಂತಹ ಶಿಸ್ತು ಸಂಪೂರ್ಣವಾಗಿ ಮಾಯವಾಗಿದೆ. ಪ್ರಜಾಪ್ರಭುತ್ವದ ಸರ್ಕಾರ ಪ್ರಜೆಗಳಿಗೆ ಅಧಿಕಾರ ನೀಡುವ ನಿಟ್ಟಿನಲ್ಲಿ ಜಾರಿಗೆ ತಂದಂತಹ ಗ್ರಾಮ ಪಂಚಾಯಿತಿ ಚುನಾವಣೆಗಳು ಗ್ರಾಮ ಗ್ರಾಮಗಳಲ್ಲಿ ಅನಾಯಕತ್ವವೇರ್ಪಟ್ಟು ಒಂದು ರೀತಿಯಲ್ಲಿ ತುಂಬಿದ ಕೆರೆ ಹೊಡೆದು ಹೋದಂತಾಗಿದೆ. ಊರುಗಳ ಏಳಿಗೆಯಲ್ಲಿಯೂ, ಸೊಬಗಿನಲ್ಲಿಯೂ ಅಭಿಮಾನವಿಟ್ಟಿದ್ದಂತಹ ಜನಗಳು ಈಗ ತಮ್ಮ ಗ್ರಾಮಗಳ ವಿಷಯದಲ್ಲಿ ಕೇವಲ ಉಪೇಕ್ಷೆಯನ್ನು ತೋರಿಸುತ್ತಿದ್ದಾರೆ. “ಕೆಟ್ಟು ಪಟ್ಟಣ ಸೇರು” ಎಂಬ ತತ್ವವನ್ನು ಚಾಚುತಪ್ಪದೆ ಅನುಸರಿಸಿ ಗ್ರಾಮೀಣ ಯುವಕರು ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ಹಿಂದೆ ಇದ್ದಂತಹ ಗ್ರಾಮೀಣ ಜನರ ಸ್ವಯಂಪೂರ್ಣತೆಯು ಸಂಪೂರ್ಣ ಮಾಯವಾಗಿ ಜನರು ತಮಗೆ ಬೇಕಾದ ಪ್ರತಿಯೊಂದು ಪದಾರ್ಥಕ್ಕೂ ಇತರರಿಗಾಗಿ ಕೈಕಾಯುವ ಪರಿಸ್ಥಿತಿ ಕಂಡು ಬರುತ್ತಿದೆ.

“ನಮ್ಮ ಗ್ರಾಮಗಳಲ್ಲಿ ಕೈಗಾರಿಕೆ, ವ್ಯವಸಾಯ, ಸಾಮಾಜಿಕ ಅಧೋಗತಿಗೆ ನಮ್ಮಲ್ಲಿರುವ ಹೆಚ್ಚಿನ ಸಂಖ್ಯೆಯ ಅನಕ್ಷರಸ್ಥರ ಕಾರಣ” ಎಂದು ವಿಶ್ವೇಶ್ವರಯ್ಯನವರು ಹೇಳಿದ್ದಾರೆ. ಏಕೆಂದರೆ ಇಂದಿಗೂ ಸಹ ಈ ಮೇಲಿನ ಮಾತು ಪ್ರಸ್ತುತವೆನ್ನಿಸುತ್ತದೆ. ನಮ್ಮ ಗ್ರಾಮಗಳ ಹೀನಸ್ಥಿತಿಗೆ ಅಲ್ಲಿಯ ಜನರಲ್ಲಿ ಆವರಿಸಿಕೊಂಡಿರುವ ಅಜ್ಞಾನವೇ ಮುಖ್ಯಕಾರಣ. ಮುಂದೆಯೂ ಎಲ್ಲಿಯವರೆಗೆ ಹಳ್ಳಿಗಳಲ್ಲಿ ನಿರಕ್ಷರಸ್ಥರುಗಳು ಹೆಚ್ಚಾಗಿರುವರೋ, ಎಲ್ಲಿಯವರೆಗೆ ಗ್ರಾಮಗಳಲ್ಲಿ ಅವಿದ್ಯೆ, ಅಹಂಕಾರ, ಅನಾರೋಗ್ಯ, ಅರಾಜಕತೆ ಮುಂತಾದವುಗಳು ಎಡೆಬಿಡದೆ ಕಾಡುತ್ತವೆಯೋ ಅಲ್ಲಿಯವರೆವಿಗೂ ಅವರಲ್ಲಿ ಸ್ವಾವಲಂಬನೆಯಾಗಿರುವ ಶಕ್ತಿಯಾಗಲಿ ಅಥವಾ ತಿಳುವಳಿಕೆಯ ಎಚ್ಚರಿಕೆಯಾಗಲಿ ಮೂಡಲು ಸಾಧ್ಯವಿಲ್ಲವೆನ್ನಬಹುದು. ಗ್ರಾಮೀಣ ಪ್ರದೇಶದಲ್ಲಿ ಇಂದು ಸಿಗುತ್ತಿರುವ ಪ್ರಾಥಮಿಕ ಶಿಕ್ಷಣವಾಗಲಿ ಅಥವಾ ಉನ್ನತ ಶಿಕ್ಷಣವಾಗಲಿ ದೇಶದ ಏಳ್ಗೆಗಾಗಿ ಅನುಕೂಲಕರವಾದ ದೃಷ್ಟಿಯಿಲ್ಲವನ್ನಬಹುದು, ವಿದ್ಯಾಪ್ರಚಾರದ ಹೆಸರಿನಲ್ಲಿ ಪ್ರತಿವರ್ಷ ನೂರಾರು ಯೋಜನೆಯನ್ನು ಸರ್ಕಾರ ನಿರ್ಮಿಸಿಕೊಂಡು ಹಣವನ್ನು ನೀರಿನಂತೆ ಖರ್ಚು ಮಾಡುತ್ತಿದ್ದರೂ ಸಹ ಅದೆಲ್ಲವು ಒಂದು ದೃಷ್ಟಿಯಲ್ಲಿ ಹರಿಯುವ ನದಿಯಲ್ಲಿ ಹುಣಸೆ ಹಣ್ಣನ್ನು ತೀಡಿದಂತಾಗಿದೆ. ಇದರಿಂದಾಗಿ ಕೆಲವು ಗ್ರಾಮದ ಮಧ್ಯಮ ವರ್ಗದ ಜನರು ತಮ್ಮ ಮಕ್ಕಳನ್ನು ಉತ್ತಮ ವಿದ್ಯಾಭ್ಯಾಸಕ್ಕಾಗಿ ಗ್ರಾಮಗಳಿಂದ ಪಟ್ಟಣದ ಕಡೆಗೆ ಸೇರಿಸುತ್ತಿದ್ದಾರೆ. ಇನ್ನೂ ಬಡಜನರು ಮಿತಿಮೀರಿದ ಜನಸಂಖ್ಯೆ ಒತ್ತಡಕ್ಕೆ ಬಲಿಯಾಗಿ ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಸ್ವಲ್ಪವೂ ಗಮನಕೊಡುತ್ತಿಲ್ಲ. ಗ್ರಾಮೀಣ ಉಪಾಧ್ಯಾಯರುಗಳಿಗೆ ಸರಿಯಾದ ಶಿಕ್ಷಣದ ಕೊರತೆ, ಪಾಠ ಪ್ರವಚನಾದಿಗಳಿಗೆ ಪಠ್ಯ ಪುಸ್ತಕದ ಕೊರತೆ, ಶಾಲಾಕೊಠಡಿಗಳ ಕೊರತೆ ಹೀಗೆ ಪಟ್ಟಿಮಾಡುತ್ತಾ ಹೋದಂತೆ ಕೊರತೆಯ ಸರಮಾಲೆಯೇ ಇಂದು ನಮ್ಮ ಗ್ರಾಮಗಳಲ್ಲಿ ಕಂಡು ಬರುತ್ತದೆ. ಆಧುನಿಕ ಮೈಸೂರಿನ ಶಿಲ್ಪಿ, ನಾಲ್ವಡಿ ಕೃಷ್ಣರಾಜ ಓಡೆಯರ್ ರವರು ಒಮ್ಮೆ”ಹಳ್ಳಿ, ಹಳ್ಳಿಯ ಪಾಠಶಾಲೆ, ಹಳ್ಳಿಯ ಶಿಕ್ಷಕ” ಈ ಮೂರು ನಮ್ಮ ಸಂಸ್ಕೃತಿಯ ಮತ್ತು ದೇಶಾಭಿವೃದ್ದಿಯ ಆಧಾರ ಸ್ಥಂಭಗಳೆಂದು ನುಡಿದಿದ್ದಾರೆ, ಅಂದು ಅವರಾಡಿದ ಈ ಮಾತು ವರ್ತಮಾನಕ್ಕೂ ಹಾಗೂ ಭವಿಷ್ಯತ್ತಿಗೂ ಪ್ರಸ್ತುತವೆನಿಸದೆ ಇರಲಾರದು.

ಇಂದಿನ ನಮ್ಮ ಗ್ರಾಮಗಳ ದುಃಸ್ಥಿತಿಗೆ ಅನೇಕ ಕಾರಣಗಳುಂಟು. ಈ ಹಂತದಲ್ಲಿ ನಾವು ಗಮನಿಸಬಹುದಾದಂತಹ ಮೊದಲನೆ ಕಾರಣ ಬ್ರಿಟೀಷರ ಆಳ್ವಿಕೆಯ ಕಾಲ. (ವಸಾಹತುಶಾಹಿ ಆಳ್ವಿಕೆಯ ಕಾಲ) ಬ್ರಿಟೀಷರ ಆಳ್ವಿಕೆಯ ಕಾಲದಿಂದ ನಮ್ಮ ಗ್ರಾಮಗಳ ಇಳಿಮೆ ಪ್ರಾರಂಭವಾಯಿತು, ಏಕೆಂದರೆ ಅವರು ನಗರಗಳನ್ನು ಆಧುನಿಕ ಮಾದರಿಯಲ್ಲಿ ಅಭಿವೃದ್ಧಿ ಪಡಿಸಿದಂತೆಲ್ಲಾ ಶತಶತಮಾನಗಳಿಂದ ಹಳ್ಳಿಯನ್ನೇ ಡೆಲ್ಲಿ ಎಂದು ನಂಬಿದ್ದಂತಹ ನಮ್ಮವರು ಪಟ್ಟಣಗಳ ಮೋಹಕ್ಕೆ ಬಿದ್ದು ತಮ್ಮ ಗ್ರಾಮಗಳನ್ನು ತ್ಯಜಿಸಲಾರಂಭಿಸಿದರು. ಅದರಲ್ಲಿಯೂ ಮುಖ್ಯವಾಗಿ ಇಂಗ್ಲೀಷ್ ಶಿಕ್ಷಣದ ಪ್ರಭಾವ,. ಇಂಗ್ಲೀಷ್ ವಿದ್ಯಾಭ್ಯಾಸ ಮಾಡಿದಂತಹ ಯುವಕ ಯುವತಿಯರು ತಮ್ಮ ಹಿಂದಿನ ಸಂಸ್ಕೃತಿ, ಆಚಾರ, ವಿಚಾರಗಳನ್ನೂ ಉಪೇಕ್ಷೆ ಮಾಡಿ ತಮ್ಮ ತವರು ಗ್ರಾಮವನ್ನು, ಅಲ್ಲಿ ತಾವು ಕಳೆದ ಬಾಲ್ಯದ ಸುವರ್ಣದಂತಹ ಸಮಯವನ್ನು ಸಂಪೂರ್ಣವಾಗಿ ಮರೆತು ಆಲಕ್ಷಿಸಿದರು. ಗೃಹ ಕೈಗಾರಿಕೆಯ ಸ್ಥಳಕ್ಕೆ ಯಂತ್ರಗಳು ಬಂದು ತಮ್ಮ ಜೀವನಾಧಾರವನ್ನಾಗಿ ನಂಬಿಕೊಂಡಿದ್ದಂತಹ ಗೃಹ ಕೈಗಾರಿಕಾ ಕಸಬುದಾರರ ಸ್ಥಿತಿ ಶೋಚನೀಯವಾಯಿತು. ಅವರೂ ಸಹ ತಮ್ಮ ಜೀವನಕ್ಕಾಗಿ ಗ್ರಾಮ ತ್ಯಜಿಸುವ ಸ್ಥಿತಿ ಬಂದೊದಗಿತು ಬ್ರಿಟಿಷರ ಆಳ್ವಿಕೆಯ ಪದ್ದತಿಯಿಂದ ಸರ್ಕಾರದ ಆಡಳಿತದಲ್ಲಿ ಕೇಂದ್ರೀಕೃತ ವ್ಯವಸ್ಥೆ ಏರ್ಪಟ್ಟಿತು. ಹಾಗೂ ಇಂದು ನಮ್ಮ ಪ್ರಜಾಪ್ರಭುತ್ವ ಮಾದರಿಯ ಸರ್ಕಾರಗಳಿಂದಾಗಿ ಗ್ರಾಮೀಣ ಪ್ರಜೆಗಳು ತಮ್ಮ ಕೆಲಸವನ್ನು ತಾವು ಮಾಡಿಕೊಳ್ಳಬೇಕೆಂಬುದನ್ನು ಮರೆತರು. ಎಲ್ಲವನ್ನು ಸರ್ಕಾರದವರೇ ಮಾಡಬೇಕೆನ್ನುವ ತಪ್ಪು ಭಾವನೆಯು ಜನಗಳ ಮನಸ್ಸಿನಲ್ಲಿ ಹೆಚ್ಚುಹೆಚ್ಚಾಗಿ ಬೇರೂರ ತೊಡಗಿತು. ನಿಮ್ಮ ಮನೆಯ ಮುಂದಿನ ಚರಂಡಿ, ಬೀದಿಗಳನ್ನು, ಶುಚಿಯಾಗಿಟ್ಟು ಕೊಳ್ಳಿರಿ ಎಂದು ಹೇಳಿದರೆ ಸರ್ಕಾರದವರು ಕೂಲಿಗಳನ್ನಿಟ್ಟು ಗುಡಿಸಲಿ ಎಂಬ ಉತ್ತರ ಬರುವ ಅಭಿಪ್ರಾಯ. ತಮ್ಮ ಕೆಲಸವನ್ನು ತಮ್ಮ ಸುತ್ತಮುತ್ತಲ್ಲ ಪರಿಸರವನ್ನು ತಾವೇ ಶುದ್ದವಾಗಿಟ್ಟುಕೊಳ್ಳಬೇಕೆಂಬ ತತ್ವವನ್ನು ಅರಿತು ಜೀವಿಸುವ ಹೊರತು ಯಾರೂ ಏಳಿಗೆ ಹೊಂದಲಾರರು. ಕೇವಲ ದಾರಿ ತೋರಿಸಬಲ್ಲ ಸರ್ಕಾರದೊಡನೆ ಸಹಕರಿಸಿ ಮುನ್ನಡೆಯಬೇಕಾದದ್ದು ಪ್ರಜೆಗಳ ಕರ್ತವ್ಯ. ಇತ್ತೀಚೆಗೆ ನಮ್ಮ ಸರ್ಕಾರಗಳು (ಕೇಂದ್ರ ಸರ್ಕಾರವಿರಲಿ ಅಥವಾ ರಾಜ್ಯ ಸರ್ಕಾರಗಳೇ ಇರಲಿ) ಕೈಗೊಳ್ಳುತ್ತಿರುವ ಗ್ರಾಮಾಭಿವೃದ್ದಿ ಕಾರ್ಯಗಳು ಪ್ರಶಂಸನೀಯವಾದುವುಗಳಾಗಿವೆ. ಗ್ರಾಮೀಣ ಜನತೆ ಇವುಗಳ ಉಪಯೋಗವನ್ನು ಹೆಚ್ಚು ಹೆಚ್ಚಾಗಿ ಉಪಯೋಗಿಸಿಕೊಂಡು ತಾವು ಹಾಗೂ ತಮ್ಮ ಗ್ರಾಮವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬೇಕು. ಈ ಹಂತದಲ್ಲಿ ಗ್ರಾಮಗಳು ಹೆಚ್ಚು ಹೆಚ್ಚಾಗಿ ಅಭಿವೃದ್ಧಿ ಹೊಂದಲು ಪ್ರಜೆಗಳು, ಸರ್ಕಾರಗಳು ಒಗ್ಗಟ್ಟಾಗಿ ಸೇರಿ ಒಮ್ಮನಸ್ಸಿನಿಂದ ದುಡಿಯಬೇಕು.

ಇಂದು ನಮ್ಮ ಗ್ರಾಮೀಣ ಪ್ರದೇಶದಲ್ಲಿ ಜನರು ನೆಮ್ಮದಿಯಿಲ್ಲದೆ ಅನೇಕ ಹಳೆಯ ಹಾಗೂ ಹೊಸ ಹೊಸ ರೋಗರುಜಿನಗಳಿಂದ ನರಳುತ್ತಿದ್ದಾರೆ. ಇದಕ್ಕೆ ಸರಳವಾದ ಕಾರಣವೆಂದರೆ ಗ್ರಾಮಗಳಲ್ಲಿ ಬದಲಾದಂತಹ ವ್ಯವಸಾಯ ಪದ್ಧತಿ. ವ್ಯವಸಾಯಕ್ಕೂ ಜನಗಳ ಆರೋಗ್ಯಕ್ಕೂ ಅವರ ಆರ್ಥಿಕಾಭಿವೃದ್ಧಿಗೂ ತುಂಬ ಹತ್ತಿರವಾದ ಸಂಬಂಧ ಇರುವುದೆಂದು ನಿಸ್ಸಂದೇಹವಾಗಿ ಹೇಳಬಹುದು. ಇಂದಿನ ವ್ಯವಸಾಯ ಕೇವಲ ರಾಸಾಯನಿಕ ಗೊಬ್ಬರ, ಕ್ರೀಮಿನಾಶಕ ಔಷಧಿಗಳ ತಳಹದಿಯ ಮೇಲೆಯೇ ನಿಂತಿದೆ. ಕೊಟ್ಟಿಗೆ ಗೊಬ್ಬರದ ಹೆಸರೇ ಇಲ್ಲದಂತಾಗಿದೆ. ಹೆಚ್ಚು ಹೆಚ್ಚು ರಾಸಾಯನಿಕ ವಸ್ತುಗಳನ್ನು ಬಳಸಿ ಅಧಿಕ ಹಿಳುವರಿಯನ್ನು ಪಡೆಯಬೇಕೆಂಬ ಆಸೆ ರೈತರಲ್ಲಿ ಮನೆ ಮಾಡಿರುವುದರ ಜೊತೆಗೆ, ಆರೋಗ್ಯದ ರಕ್ಷಣೆಗೆ ಮನಸ್ಸು ನೀಡದಿರುವುದು ಅಷ್ಟೆ ಪ್ರಮಾಣದಲ್ಲಿ ಕಂಡು ಬರುತ್ತದೆ. ಇಂದು ಆರೋಗ್ಯ ಇಲಾಖೆಯವರ ಸಮೀಕ್ಷೆಯ ಪ್ರಕಾರ ನಮ್ಮ ಆಯಸ್ಸು ಕೇವಲ ೫೦ ವರ್ಷಗಳೆಂದು ಅಂದಾಜು ಮಾಡಲಾಗಿದೆ. ಒಂದು ವರ್ಷಕ್ಕೆ ಒಂದು ಸಾವಿರ ಜನರಿಗೆ ಸುಮಾರು ೩೮ ಜನರು ಸಾಯುವರೆಂದೂ, ೩೫ ಜನರು ಹುಟ್ಟುವರೆಂದೊ ತಿಳಿದುಬರುತ್ತದೆ. ಈ ರೀತಿಯ ಜನನ ಮರಣಗಳೆರಡರ ಸಂಖ್ಯೆಯನ್ನೂ ಇತರ ದೇಶಗಳ ಸಂಖ್ಯೆಯೊಡನೆ ಹೋಲಿಸಿ ನೋಡಿದರೆ, ನಮ್ಮ ರಾಷ್ಟ್ರಕ್ಕೆ ಪ್ರಥಮ ಸ್ಥಾನವೇ ದೊರೆಯಬಹುದು. ಪೌಷ್ಟಿಕ ಆಹಾರದ ಕೊರತೆ, ಪ್ರಾಥಮಿಕ ಆರೋಗ್ಯದ ಕೊರತೆಯಿಂದ ಗ್ರಾಮೀಣ ಪ್ರದೇಶದಲ್ಲಿ ಮಕ್ಕಳ ಸಾವಿನ ಸಂಖ್ಯೆ ಮಿತಿಮೀರುತ್ತಿದೆ. ಇದಕ್ಕೆ ಪ್ರಮುಖ ಕಾರಣ ಬಡತನದ ಜೊತೆಗೆ ಮಕ್ಕಳ ಪೋಷಣೆಯ ವಿಷಯದಲ್ಲಿ ಹೆಚ್ಚಾಗಿ ಅಜ್ಞಾನ ಅವರಿಸಿಕೊಂಡಿರುವುದು. ಹಾಗೆಯೇ ಅನಾರೋಗ್ಯವಾಗುತ್ತಿರುವಂತಹ ವಾಸಸ್ಥಳ (ಸ್ಲಮ್) ಮುಂತಾದವುಗಳು ರೋಗಗಳನ್ನು ಹೆಚ್ಚಿಸುವುದಲ್ಲದೆ ಸಮಾಜದ ಅಧೋಗತಿಗೆ ಕಾರಣವಾಗುತ್ತದೆ. ಇಂದೂ ಗ್ರಾಮೀಣ ಪ್ರದೇಶದ ಜನರಲ್ಲಿ ಉತ್ಸಾಹವೆಂಬುವುದೇ ಇಲ್ಲದಾಗಿದೆ. ಗ್ರಾಮಗ್ರಾಮಗಳಲ್ಲಿ ಬರಗಾಲವೆಂಬ ಭೂತ ಬಂದೊದಗುತ್ತದೆ. ನಮ್ಮ ದೇಶದಿಂದಲೇ ಮರೆಯಾದವೆಂದು ತಿಳಿದಿದ್ದಂತಹ ಮಾರಿಗಳಾದಂತಹ ಮಲೇರಿಯ, ಪ್ಲೇಗು, ವಾಂತಿಭೇದಿ, ಕ್ಷಯ-ಸಕ್ಕರೆ ರೋಗ ಹಾಗೂ ಆಧುನಿಕವಾಗಿರುವ ಏಡ್ಸ್ ಮುಂತಾದ ರೋಗಗಳು ನೆಮ್ಮದಿಯಿಂದ ಜೀವಿಸುತ್ತಿದ್ದಂತಹ ಗ್ರಾಮೀಣ ಜನರನ್ನು ಜೀವಂತ ಮರಣದೆಡೆಗೆ ಕೊಂಡೊಯುತ್ತಿವೆ. ದೇಶದ ಜನಸಂಖ್ಯೆಯಂತು ಜಾಮಿತಿಯ ಪ್ರಮಾಣದಲ್ಲಿ ಹೆಚ್ಚುತ್ತಿದೆ. ಆದರೆ ಅದೇ ಜನರು ತೆಗೆದುಕೊಳ್ಳುತ್ತಿರುವ ಆಹಾರ ಅದೇ ಪ್ರಮಾಣದಲ್ಲಿ ಹೆಚ್ಚುತ್ತಿಲ್ಲ. (ಜನಸಂಖ್ಯೆ ೨,೬,೧೦,೨೨, ೨೮, ೩೬ ರೀತಿಯಲ್ಲಿ ಹೆಚ್ಚುತ್ತಿದ್ದರೆ, ಆಹಾರದ ಉತ್ಪಾದನೆ ೧, ೨, ೩, ೪, ೫, ೬ ರೀತಿಯಲ್ಲಿ ಹೆಚ್ಚುತ್ತಿದೆ ಇದನ್ನೇ ಅರ್ಥಶಾಸ್ತ್ರದಲ್ಲಿ ಜಾಮಿತಿಯ ಪ್ರಮಾಣ ಎಂದು ಕರಯಲಾಗುತ್ತದೆ), ಗ್ರಾಮೀಣ ಪ್ರದೇಶದ ಜನತೆಗೆ ಜೀವಿಸಲು ಅವಶ್ಯಕವಾದಂತಹ ಆಹಾರದ ಕೊರತೆಯೇ ಎದ್ದು ಕಾಣುವಾಗ ಇನ್ನೂ ದೇಹ ಪೋಷಣಿಗೆ ಅವಶ್ಯಕವಾಗಿರುವಂತಹ ಹಾಲು, ಮೊಸರು, ಬೆಣ್ಣೆ, ತರಕಾರಿ, ಹಣ್ಣು ಮೊಟ್ಟೆ, ಮುಂತಾದವುಗಳು ದೊರೆಯುವುದಾದರೂ ಹೇಗೆ ಸಾಧ್ಯ? ಇವುಗಳ ಜೊತೆಗೆ ಇಂದು ಗ್ರಾಮಗಳೆಂದರೆ ನಮ್ಮ ಕಣ್ ಮುಂದೆ ಅವಿಚ್ಛಿನ್ನವಾಗಿ ಬಂದೊದಗುವ ದೃಶ್ಯ, ಕೊಳಕು ನೀರಿನ ಗುಂಡಿಗಳು, ಗೊಬ್ಬರದ ತಿಪ್ಪೆ ಗುಂಡಿಗಳು, ಹೇಸಿಗೆಯ ಜಾಗ, ಹದಗೆಟ್ಟ ಚರಂಡಿ, ಗಾಳಿ ಬೆಳಕಿನಿಂದ ವಂಚಿತವಾಗಿರುವ ಇಕ್ಕಟ್ಟಿನ ಮನೆಗಳು. ಅವುಗಳೆಲ್ಲವೂ ಒಂದೊಂದು ರೀತಿಯಲ್ಲಿ ಹಳ್ಳಿಯ ಆರೋಗ್ಯವನ್ನು ಕೆಡಿಸಿ, ಜನರನ್ನು ರೋಗದ ಬಾಗಿಲಿಗೆ ನೂಕುತ್ತಿವೆ. ಇವುಗಳ ಸ್ವಚ್ಚತೆಯ ಬಗ್ಗೆ ಸರ್ಕಾರ ಹಾಗೂ ಖಾಸಗಿ ಸಂಘ ಸಂಸ್ಥೆಯವರು ಗ್ರಾಮ ಗ್ರಾಮಗಳಲ್ಲಿ ಜ್ಞಾನ ಪ್ರಸಾರವನೇನೋ ಮಾಡುತ್ತಿವೆ. ಆದರೆ ಇದು ಸಾಲದು, ಶತಶತಮಾನಗಳಿಂದ ಅಜ್ಞಾನದಲ್ಲಿಯೇ ಮುಳುಗಿ ಆ ಕೊಳಕು-ನೀರಿನಲ್ಲಿಯೇ ಪವಿತ್ರ ಸ್ನಾನ ಮಾಡುತ್ತಿರುವ ಅಜ್ಞಾನಿಗಳಿಗೆ ವರ್ಷಕ್ಕೊಂದು ಸಾರಿ ಕಾರ್ಯಕ್ರಮಗಳ ಮೂಲಕ ಬಾಯಿ ಮಾತಿಗೆ ಹೇಳಿ ಬಂದರೆ ಸಾಲದಾಗಿದೆ. ಅವರಲ್ಲಿ ಈ ವಿಧವಾದ ತೊಂದರೆಗಳು ಪರಿಹಾರವಾಗಬೇಕಾದರೆ ಅಮೂಲ್ಯವಾದ ಜ್ಞಾನ (ಶಿಕ್ಷಣ)ವು ಕಿರಿಯರು-ಹಿರಿಯರೆನ್ನದೆ ನಿರಂತರವಾಗಿ ಎಲ್ಲರಲ್ಲೂ ಪ್ರಚಾರವಾಗಬೇಕು. ಅವರಿಗೆ ತಮ್ಮ ಗ್ರಾಮದ ಪರಿಸರ, ಇರುವುದರಲ್ಲಿಯೇ ಶುದ್ಧವಾಗಿರುವಂತಹ ತಿಳುವಳಿಕೆ ಮೂಡಿಸಿ ಅವರುಗಳು ತಮ್ಮ ದೇಹ, ಮನೆ, ಮನಸ್ಸನ್ನು ಶುಚಿತ್ವದ ಕಡೆ ಕೊಂಡೊಯ್ಯುವ ತಿಳುವಳಿಕೆಯನ್ನು ಹೆಚ್ಚು ಹೆಚ್ಚಾಗಿ ತಿಳಿಸಬೇಕಾಗಿದೆ.

ಇಂದು ನಮ್ಮ ಗ್ರಾಮಗಳ ಹೀನಸ್ಥಿತಿಗೆ ಅಲ್ಲಿಯ ಯುವ ಕೆಲಸಗಾರರು ತಮ್ಮ ಪಿತ್ರಾರ್ಜಿತವಾಗಿ ಬೆಳೆದು ಬಂದಿದ್ದ ಕುಶಲತೆಯನ್ನು ಬಿಡುತ್ತಿರುವುದು ಹಾಗೂ ವಂಶಪಾರಂಪರ್ಯವಾಗಿ ಬೆಳೆದು ಬಂದಂತಹ ಕೈಗಾರಿಕಾ ಕಸಬುಗಳನ್ನು ಸಂಪೂರ್ಣವಾಗಿ ಕೈಬಿಡುತ್ತಿರುವುದಾಗಿದೆ. ಇದಕ್ಕೆ ಪ್ರಮುಖ ಕಾರಣ ಪಾಶ್ಚಾತ್ಯ ದೇಶಗಳ ವಿಪರೀತ ಸಂಪರ್ಕ. ಇದನ್ನೇ ನಾವು ಇಂದು ಜಾಗತೀಕರಣ ಎಂದು ಕರೆಯುತ್ತಿರುವುದು. ಇದರಿಂದಾಗಿ ವ್ಯಾಪಾರವೆಲ್ಲಾ ವಿದೇಶಿಯರ ಪೈಪೋಟಿಗೆ ಮೀಸಲಾಯಿತು. ಯಾಂತ್ರಿಕೃತ ವಸ್ತುಗಳ ತಯಾರಿಕೆಯಿಂದ ಗ್ರಾಮೀಣ ಕೈಗಾರಿಕೆಗಳೆಲ್ಲಾ ಒಂದೊಂದಾಗಿ ಹಾಳಾಗುತ್ತಾ ಬಂದವು. ಗ್ರಾಮೀಣ ಕುಶಲ ಕರ್ಮಿಗಳು ಹಗಲಿರುಳು ದುಡಿದರೂ ಅವರ ನಿತ್ಯಜೀವನಕ್ಕೆ ಸಾಕಾಗುವಷ್ಟು ಹಣವು ಸಹ ದೊರಕದ ಸ್ಥಿತಿ ಬಂದೊದಗಿತು. ಸರ್ಕಾರಗಳು ಪಂಚವಾರ್ಷಿಕ ಯೋಜನೆಗಳನ್ನು ಜಾರಿಗೆ ತಂದು ಗ್ರಾಮೀಣ ಪ್ರದೇಶದ ಕೈಗಾರಿಕೆಗಳ ಅಭಿವೃದ್ದಿಗೆ, (ಗೃಹ ಕೈಗಾರಿಕೆಗಳ ಉಳಿವಿಗಾಗಿ) ಅವುಗಳ ಉಳಿವಿಗಾಗಿ ಶ್ರಮಿಸುತ್ತಿದ್ದರೂ ಯಂತ್ರ ಸಲಕರಣೆಯಿಂದ ತಯಾರಾಗುತ್ತಿರುವಂತಹ ದೇಶಿ ಹಾಗೂ ವಿದೇಶಿ ಪದಾರ್ಥಗಳ ಪೈಪೋಟಿಯಿಂದ ಇಲ್ಲಿಯ ಸಣ್ಣ ಕೈಗಾರಿಕೆಗಳು ತಲೆ ಎತ್ತಿ ನಿಲ್ಲಲೂ ಸಾಧ್ಯವಾಗುತ್ತಿಲ್ಲ. ಕಂಗಾಲಾದಂತಹ ಈ ಜನರು ತಮ್ಮ ಜೀವನೋಪಯೋಗಕ್ಕಾಗಿ ತಮ್ಮದಲ್ಲದ ವ್ಯವಸಾಯವನ್ನು ಅವಲಂಬಿಸಿಕೊಂಡು ಬದುಕುವಂತಾಗಿದೆ. ಇದರಿಂದ ಭೂಮಿಯ ವಿಸ್ತೀರ್ಣವೂ ಸಹ ಚಿಕ್ಕದಾಗಿ ಕೃಷಿಯ ಉತ್ಪನ್ನ ಕುಂಠಿತಗೊಳ್ಳುತ್ತಿದೆ.

ಒಟ್ಟಿನಲ್ಲಿ ನಮ್ಮ ಹಳ್ಳಿಗಳು ಇಂದು ತುಂಬ ಶೋಚನೀಯವಾದಂತಹ ಸ್ಥಿತಿಯಲ್ಲಿವೆ. ಅವುಗಳ ಬಡತನ ವರ್ಣನಾತೀತವಾಗುತ್ತಿದೆ. ಸಾಲದ ಹೊರೆಯು ಆತ್ಮಹತ್ಯೆಯವರೆಗೆ ಕೊಂಡೊಯುತ್ತಿದೆ. ಅವರ ವರಮಾನವು ಕಡಿಮೆಯಾಗುತ್ತಿದೆ. ಹೀಗಿದ್ದರೂ ಸರ್ಕಾರಗಳ ಅನೇಕ ಕಾನೂನು ಕಟ್ಟಳೆಗಳಿಂದ, ಗ್ರಾಮೀಣ ಪ್ರದೇಶದ ಜನರಿಗೆ ಅದರಲ್ಲಿಯೂ ದಲಿತ ಜನರ ಉದ್ದಾರಕ್ಕಾಗಿ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಅವರನ್ನು ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಮೇಲೆತ್ತಲು ಶ್ರಮಿಸುತ್ತಿವೆನ್ನಬಹುದು. ಈ ಸೌಲಭ್ಯಗಳನ್ನು ನಾನು ಮೊದಲೇ ಪ್ರಸ್ಥಾಪಿಸಿರುವ ಹಾಗೆ ಸರಿಯಾದ ಮಾರ್ಗದಲ್ಲಿ ಉಪಯೋಗಿಸಿಕೊಳ್ಳಬೇಕು. “ಸಾವಿರ ತಂದರೆ ಸಂಜೇಗೆಲಾಯ” ಎಂಬ ಗಾದೆ ಮಾತಿನಂತೆ ಆಗಬಾರದು.

ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ಗ್ರಾಮೀಣ ಪ್ರದೇಶದ ಪುನರುದ್ಧಾರದ ವಿಷಯವು ಎಲ್ಲೆಲ್ಲೂ ಕಂಡುಬಂದಿತ್ತು. ಗಾಂಧೀಜಿಯಿಂದ ಪ್ರಾರಂಭವಾಗಿ ಗ್ರಾಮದ ಸಣ್ಣಪುಟ್ಟ ಸಂಘ ಸಂಸ್ಥೆಯ ಮುಖಂಡರವರೆಗೆ, ಆರ್ಥಶಾಸ್ತ್ರಜ್ಞರುಗಳು, ರಾಜಕಾರಣಿಗಳು, ವಿದ್ಯಾವಂತರು, ಮೇಧಾವಿಗಳೆಲ್ಲರೂ ಗ್ರಾಮೋದ್ಧಾರದ ವಿಷಯದಲ್ಲಿ ಹೆಚ್ಚು ಆಸಕ್ತಿ ವಹಿಸಿ ಅವುಗಳ ಅಭಿವೃದ್ಧಿಗೆ ಕೆಲವು ಕಾರ್ಯಕ್ರಮಗಳನ್ನು ಕೈಗೊಂಡಿರುವುದನ್ನು ಕಾಣಬಹುದಾಗಿದೆ. ಉದಾಹರಣೆಗೆ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸ್ವಾತಂತ್ರ್ಯ ನಂತರ ಗ್ರಾಮೋದ್ಧಾರಕ್ಕಾಗಿ ಕೈಗೊಂಡಂತಹ ಪ್ರಮುಖ ಕಾರ್ಯಕ್ರಮಗಳೆಂದರೆ ಸಾಮಾನ್ಯ ಶಿಕ್ಷಣದ ಪ್ರಗತಿಗೊಳಿಸುವುದರ ಜೊತೆಗೆ ವಯಸ್ಕರ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಾ ಬರುತ್ತಿರುವುದು, ವೈದ್ಯಕೀಯ ಮತ್ತು ಜನಾರೋಗ್ಯದ ಕಡೆ ಗಮನ, ಕ್ರೀಡೆ ಮತ್ತು ಯುವಜನ ಸೇವೆಯ ಅಭಿವೃದ್ಧಿ, ಭಾರತೀಯ ವೈದ್ಯ ಪದ್ಧತಿಯನ್ನು ಅಭಿವೃದ್ಧಿಪಡಿಸಿ ಈ ಪದ್ಧತಿಯಲ್ಲಿ ಪರಿಣಿತಿ ಪಡೆದಿದ್ದಂತಹ ಜನಾಂಗದ ಅಭಿವೃದ್ಧಿಗೆ ಶ್ರಮಿಸುತ್ತಿರುವುದು. ಪ್ರಮುಖವಾಗಿ ಮಿತಿಮೀರಿ ಬೆಳೆಯುತ್ತಿರುವ ಜನಸಂಖ್ಯೆಯ ನಿಯಂತ್ರಣಕ್ಕಾಗಿ ಕುಟುಂಬ ಕಲ್ಯಾಣ ಯೋಜನೆಯನ್ನು ಗ್ರಾಮಗಳಲ್ಲಿ ಜಾರಿಗೆ ತಂದು, ಅದರ ಮೂಲಕ ಜನತೆಗೆ ಅರಿವು ಮೂಡಿಸಿ ಬಡತನ ನಿವಾರಣೆಗೆ ಶ್ರಮಿಸುವ ಉದ್ದೇಶ, ಮೂಲಭೂತ ಸೌಕರ್ಯಗಳಾಗಿರುವ ಕುಡಿಯುವ ನೀರು ಹಾಗೂ ನೈರ್ಮಲ್ಯಕ್ಕೆ ಹೆಚ್ಚಿನ ಒತ್ತು ನೀಡುತ್ತಿರುವುದನ್ನು ಗಮನಿಸಬಹುದಾಗಿದೆ.

ಗ್ರಾಮೀಣ ಪ್ರದೇಶದ ಬಡವರ್ಗದ ಜನರಿಗೆ ಅದರಲ್ಲಿಯೂ ದಲಿತ ಸಮಾಜದವರ ಅಭಿವೃದ್ಧಿಗಾಗಿ “ಸಮಾಜಕಲ್ಯಾಣ” ಯೋಜನೆಯನ್ನು ನಿರ್ಮಿಸಿ ಅದರ ಮೂಲಕ ನೂರಾರು ಯೋಜನೆಗಳನ್ನು ಹಮ್ಮಿಕೊಂಡು ಅವುಗಳ ಅಭಿವೃದ್ದಿಗೆ ನಿರಂತರವಾಗಿ ಕೆಲಸ ಮಾಡುತ್ತಿವೆ. ಶತಮಾನಗಳಿಂದಲೂ ಅಸ್ಪೃಶ್ಯರಾಗಿಯೇ ಇರುವಂತಹ ಮಹಿಳೆಯರ ಕಲ್ಯಾಣಕ್ಕಾಗಿ ಅನೇಕ ಅಭಿವೃದ್ಧಿ ಯೋಜನೆಗಳನ್ನು ನಿರ್ಮಿಸಿ ಅವರುಗಳ ಕಲ್ಯಾಣಕ್ಕಾಗಿ ಪ್ರತ್ಯೇಕ ಸಚಿವಾಲಯವನ್ನೆ ತೆರೆದು ಶ್ರಮಿಸುತ್ತಿವೆ. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಪೌಷ್ಠಿಕ ಆಹಾರದ ಕೊರತೆ ಇದ್ದೆ ಇರುತ್ತದೆ. ಇಂತಹ ಸಮಯದಲ್ಲಿ ಪ್ರಾಥಮಿಕ ಶಾಲೆಯಲ್ಲಿ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಜಾರಿಗೆ ತಂದು ಪೌಷ್ಠಿಕ ಆಹಾರದ ಕೊರತೆಯನ್ನು ನೀಗಿಸುವ ಕೆಲಸ ನಡೆಯುತ್ತಿದೆ. ಗ್ರಾಮೀಣ ಪ್ರದೇಶದ ಮೂಲ ಕಸುಬಾಗಿರುವಂತಹ ವ್ಯವಸಾಯ, ತೋಟಗಾರಿಕೆ, ಪಶುಸಂಗೋಪನೆ, ಮೀನುಗಾರಿಕೆ, ಅರಣ್ಯ, ಗೃಹಕೈಗಾರಿಕೆ ಮುಂತಾದ ಕ್ಷೇತ್ರಗಳ ಅಭಿವೃದ್ಧಿಗಾಗಿ ಸರ್ಕಾರದ ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮಗಳು ಮುಕ್ತ ಮನಸ್ಸಿನಿಂದ ದುಡಿಯುತ್ತಿವೆ. ವ್ಯವಸಾಯಕ್ಕೆ ನದಿಗಳಿಗೆ ಅಡ್ಡಲಾಗಿ ಬೃಹತ್ ಅಣೆಕಟ್ಟೆಗಳನ್ನು ನಿರ್ಮಿಸಿ ಕಾಲುವೆಯ ಮೂಲಕ ನೀರೊದಗಿಸಿ ಹೆಚ್ಚು ಹೆಚ್ಚು ವಾಣಿಜ್ಯ ಬೆಳೆಗಳನ್ನು ಬೆಳೆದು ರೈತರು ತಮ್ಮ ಜೀವನ ಮಟ್ಟವನ್ನು ಹೆಚ್ಚಿಸಿಕೊಳ್ಳಲು ನೆರವಾಗುತ್ತಿವೆ. ಗ್ರಾಮೀಣ ರಸ್ತೆ ನಿರ್ಮಾಣ, ಸಾರಿಗೆ ವ್ಯವಸ್ಥೆ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಲೋಕೋಪಯೋಗಿ ಕಾಮಗಾರಿಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನೆರವಿನಿಂದ ಎಡೆಬಿಡದೆ ನಡೆಯುತ್ತಿವೆ. ಇದಕ್ಕೆ ವಿಶ್ವಬ್ಯಾಂಕ್ ನಿಂದ ಆರ್ಥಿಕ ನೆರವು ಅಪಾರವಾಗಿ ದೊರಕುತಲೂ ಇದೆ. ಆದರೆ ಈ ಮೇಲಿನ ಎಲ್ಲಾ ಗ್ರಾಮಾಭಿವೃದ್ಧಿ ಯೋಜನೆಗಳು ಸಕಾಲದಲ್ಲಿ ಜಾರಿಗೆ ಬಂದರೂ ಅಧಿಕಾರಿಗಳ ಹಾಗೂ ಮಧ್ಯಸ್ಥಿಕರ ಮೋಸದ ಬಲೆಗೆ ಸಿಲಿಕಿ ಕುಂಠಿತಗೊಂಡಿರುವುದಕ್ಕೂ ಸಾಕ್ಷಿಗಳಿವೆ. ನಮ್ಮ ಉನ್ನತ ರಾಜಕಾರಣಿಗಳು, ಅಧಿಕಾರಿಗಳು ಗ್ರಾಮೀಣ ಪ್ರದೇಶದ ಅಭಿವೃದ್ಧಿಯ ಯೋಜನೆಯನ್ನು ಯಾವ ಮೂಲಾಜಿಗೂ ಬೆಲೆ ಕೊಡದೆ ಕಾರ್ಯರೂಪಕ್ಕೆ ತರುವಂತಾಗಬೇಕು ಹಾಗೂ ಲಂಚ ಮೋಸದಲ್ಲಿ ಕೆಲಸ ಮಾಡುವವಾರಿಗೆ ಕಠಿಣ ಕ್ರಮವನ್ನು ತೆಗೆದುಕೊಳ್ಳಬೇಕಾಗುತ್ತದೆ. (ಈ ಹಂತದಲ್ಲಿ ಕರ್ನಾಟಕ ಸರ್ಕಾರ ಲೋಕಾಯುಕ್ತ ಇಲಾಖೆಗೆ ಹೆಚ್ಚಿನ ಅಧಿಕಾರ ನೀಡಬೇಕಾಗುತ್ತದೆ.)

ರಾಷ್ಟ್ರಕ್ಕೆ ಸ್ವಾತಂತ್ರ್ಯ ಬಂದ ಪ್ರಾರಂಭದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದವರು ಕೈಗೊಂಡ, ಕೈಗೊಳ್ಳುತ್ತಿರುವ ಕಾರ್ಯಕ್ರಮಗಳ ಪೈಕಿ ಗ್ರಾಮ ಪುನರುಜ್ಜೀವನಕ್ಕೆ ಸಂಬಂಧಪಟ್ಟ, ಅಭಿವೃದ್ಧಿ ಕಾರ್ಯಕ್ರಮಗಳಿಗಿಂತ ಹೆಚ್ಚು ಪ್ರಮುಖ್ಯವಾದುದು ಇಲ್ಲವೆಂದೆ ಹೇಳಬಹುದು. ಸರಿಯಾಗಿ ಈ ಯೋಜನಗಳನ್ನು ಬಳಸಿಕೊಂಡರೆ ನಿಜವಾಗಿಯೂ ಮತ್ತು ಶಾಶ್ವತವಾಗಿಯೂ ಗ್ರಾಮೀಣ ಪ್ರದೇಶದ ಪರಿಸ್ಥಿತಿಯನ್ನು ಉತ್ತಮಗೊಳಿಸುವಂಥವು ಆಗಿವೆ.[1] ಭಾರತೀಯ ಗ್ರಾಮ ಡಾ. ವೆಂ. ನಾಗೇಶ. ಪುಟ ೧೯