ಯಾವುದೇ ರೀತಿಯ ಸರ್ಕಾರದ ಪ್ರಮುಖ ಉದ್ದೇಶ ಜನತೆಯ ಹಾಗೂ ರಾಷ್ಟ್ರದ ಹಿತ ಸಾಧನೆಯಾಗಿರುತ್ತದೆ. ಸರ್ಕಾರದ ನೆರವಿಲ್ಲದೆ ಯಾವುದೇ ಕ್ಷೇತ್ರದಲ್ಲಿ ಮುಂದುವರಿಯುವುದು ಕಷ್ಟ ಸಾಧ್ಯವೇ. ಅದು ರಾಜ್ಯ ಪ್ರಭುತ್ವವೇ ಇರಲಿ ಅಥವಾ ಪ್ರಜಾಪ್ರಭುತ್ವ ಮಾದರಿಯ ಸರ್ಕಾರವೇ ಆಗಿರಲಿ. ಈ ಹಂತದಲ್ಲಿ ಕೃಷಿ ಕ್ಷೇತ್ರವೇನೂ ಹೊರತಾದುದಲ್ಲ. ಭಾರತದ ಇತಿಹಾಸವನ್ನು ಒಮ್ಮೆ ಮೆಲುಕು ಹಾಕಿದರೆ ಅದರಲ್ಲಿಯೂ ಕರ್ನಾಟಕದ ಚರಿತ್ರೆಯನ್ನೊಮ್ಮೆ ನೋಡಿದರೆ ಅಂದಿನಿಂದಲೂ ಪ್ರತಿಯೊಂದು ಸಾಮ್ರಾಜ್ಯ, ಸಂಸ್ಥಾನದ ಸರ್ಕಾರಗಳು ಕೃಷಿಯನ್ನು ತಮ್ಮ ಬಂಡವಾಳವಾಗಿಸಿಕೊಂಡು. ಅದರ ಅಭಿವೃದ್ಧಿಯಲ್ಲಿ ಹೆಚ್ಚು ಆಸಕ್ತಿ ವಹಿಸುತ್ತಾ ಬಂದಿರುವುದನ್ನು ಕಾಣಬಹುದು, ಇದಕ್ಕೆ ಸಾಕ್ಷಿ ಎಂಬಂತೆ ಇಂದು ನಾಡಿನಾದ್ಯಾಂತ ಹರಡಿಕೊಂಡಿರುವ ಕೆರೆಗಳು, ತೊರೆಗಳು, ನದಿಗಳಿಗೆ ಅಡ್ಡಲಾಗಿ ಕಟ್ಟಿರುವ ಅಣೆಕಟ್ಟುಗಳು ಮೂಕಸಾಕ್ಷಿಯಾಗಿ ಅಂದಿನ ಸಾಂಸ್ಕೃತಿಕ ಬದುಕಿನ ಬೆಳಕನ್ನು ಚೆಲ್ಲುತ್ತ ಇಂದಿಗೂ ಜೀವಂತವಾಗಿವೆ. ಜವಾಹರ್ ಲಾಲ್ ನೆಹರುರವರು ಹೇಳಿದ ಹಾಗೆ ಇವುಗಳನ್ನೇ ನಾವು ಆಧುನಿಕ ಯುಗದ ದೇವಾಲಯಗಳೆನ್ನಬಹುದು.

ಕೃಷಿ ಕ್ಷೇತ್ರದಲ್ಲಿ ಸರ್ಕಾರದ ಪ್ರವೇಶ ಅತ್ಯಂತ ಮುಖ್ಯ ಹಾಗೂ ಅವಶ್ಯವೆಂದು ಹಿಂದೆ ಹಾಗೂ ಇಂದು ನಂಬಲಾಗಿದೆ. ಇಂದಿನ ಸರ್ಕಾರದ ವ್ಯವಸಾಯಿಕ ಕಾರ್ಯಕ್ಷೇತ್ರವು ವಿಶಾಲವಾಗಿ ಬೆಳೆಯುತ್ತಿದೆ. ಇಂದಿನ ನಮ್ಮ ಪ್ರಜಾಪ್ರಭುತ್ವ ಮಾದರಿಯ ಸರ್ಕಾರವು ಪ್ರಜೆಗಳ ಕಲ್ಯಾಣವೇ ಸರ್ಕಾರದ ಮುಖ್ಯ ಗುರಿ ಎಂಬ ತತ್ವದ ಆಧಾರದ ಮೇಲೆ ಆಳ್ವಿಕೆ ನಡೆಸುತ್ತಿದೆ. ಜನತೆಯ ಹಿತಸಾಧನೆಗೆ (ಆರ್ಥಿಕ, ಶೈಕ್ಷಣಿಕ, ಸಾಮಾಜಿಕ) ಕೃಷಿಯನ್ನು ಅಭಿವೃದ್ಧಿ ಪಡಿಸುವುದು ಒಂದು ಉತ್ತಮ ಮಾರ್ಗವೆಂದು ತಿಳಿದು ಭಾರತವಲ್ಲದೆ ವಿಶ್ವದ ಬಹುತೇಕ ದೇಶಗಳು ಇಂದು ಕೃಷಿಯತ್ತ ಹೆಚ್ಚು ಹೆಚ್ಚು ಗಮನಹರಿಸಿವೆ.

ಭಾರತದ ಕೃಷಿ ಕ್ಷೇತ್ರದಲ್ಲಿ ಸರ್ಕಾರದ ಪ್ರವೇಶ ಅಗತ್ಯ ಎನ್ನುವುದಕ್ಕೆ ನಾವು ಹಲವಾರು ಕಾರಣಗಳನ್ನು ಗುರ್ತಿಸಬಹುದು.

೧. ವಿಶ್ವದಲ್ಲಿಯೇ ಜನಸಂಖ್ಯೆಯಲ್ಲಿ ಮೊದಲ ಸ್ಥಾನಕ್ಕೇರಲು ತುದಿಗಾಲಲ್ಲಿ ನಿಂತಿರುವ ಭಾರತದಂತಹ ರಾಷ್ಟ್ರದಲ್ಲಿ ಕೃಷಿ ಸಾಮಾನ್ಯವಾಗಿ ಸಣ್ಣ ಗಾತ್ರದ ಉದ್ಯಮವಾಗಿದ್ದು ಬೃಹತ್ ಗಾತ್ರದ ಉದ್ಯಮಕ್ಕೆ ಒದಗಿ ಬರುವ ಹಲವಾರು ಸೌಲಭ್ಯಗಳನ್ನು ಸಣ್ಣ ರೈತ ಸಂಘಟಿಸಿಕೊಳ್ಳಲಾರದ ಸ್ಥಿತಿಯಲ್ಲಿ ಇರುವುದು ಸಹಜವೇ. ಬೃಹತ್ ಗಾತ್ರದ ಮಧ್ಯವರ್ತಿಗಳೊಂದಿಗೆ ಚೌಕಾಸಿ ಮಾಡಿ ನ್ಯಾಯಯುತವಾದ ಬೆಲೆಯನ್ನು ಪಡೆದು ಉತ್ತಮ ಆದಾಯ ಮಾಡುವ ಸಾಮರ್ಥ್ಯವೂ ಸಣ್ಣ ರೈತನಿಗಿರುವುದಿಲ್ಲ. ಈ ದೃಷ್ಟಿಯಿಂದ ಸರ್ಕಾರದ ಮಧ್ಯ ಪ್ರವೇಶ ಅಗತ್ಯವೆನಿಸುತ್ತದೆ.

೨. ಕೃಷಿ ಕಾರ್ಯಕ್ರಮ ಮುಖ್ಯವಾಗಿ ನೆಲವನ್ನೇ ಅವಲಂಬಿಸಿದೆ. ಇದರಿಂದಾಗಿ ಭೂ ಹಿಡುವಳಿ ಹಾಗೂ ಉತ್ತರಾಧಿಕಾರದ ಕಾನೂನುಗಳು ಕೃಷಿಗೆ ಅತ್ಯಂತ ಮುಖ್ಯವೆನಿಸಿವೆ. ಸರ್ಕಾರದ ಇವೆರಡನ್ನೂ ನಿರ್ಣಯಿಸಲು ಜವಾಬ್ದಾರಿಯ ಸ್ಥಾನ ವಹಿಸಬೇಕಾಗುತ್ತದೆ.

೩. ಸಾಮಾನ್ಯವಾಗಿ ಕೃಷಿ ಒಂದು ಕೆಳಸ್ಥರದ ಮಾದರಿಯ ಕೈಗಾರಿಕೆ ಎಂದೆನಿಸಿದೆ. ಅದರ ಅಭಿವೃದ್ಧಿಗೆ ಬೇಕಾದ ಬಂಡವಾಳ ಮತ್ತು ಇತರ ಉತ್ಪಾದನಾಂಶಗಳು ಸುಲಭವಾಗಿ ಕೈಗೊಳ್ಳಬೇಕಾಗುವುದಿಲ್ಲ. ಇಂತಹ ಸಂದರ್ಭದಲ್ಲಿ ಸರ್ಕಾರ ಮಧ್ಯೆ ಪ್ರವೇಶಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಾದ ಅವಶ್ಯಕತೆ ಇರುತ್ತದೆ.

೪. ಅಲ್ಪಾವಧಿಯಲ್ಲಿ ಕೃಷಿ ಉತ್ಪನ್ನಗಳ ಬೇಡಿಕೆಯಲ್ಲಿ ಏರಿಳಿತಗಳುಂಟಾದಾಗ, ಅದಕ್ಕೆ ತಕ್ಕಂತೆ ಉತ್ಪನ್ನಗಳ ಪೂರೈಕೆಯಲ್ಲಿ ವ್ಯತ್ಯಾಸ ಕಂಡು ಬರುವುದಿಲ್ಲ. ಆದ್ದರಿಂದ ಬೆಲೆಗಳೂ ಲಾಭಗಳೂ ಅಸ್ತವ್ಯಸ್ತಗೊಂಡು ರೈತ, ಗ್ರಾಹಕ ಅಥವಾ ಕೈಗಾರಿಕೆಗಳ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಇದನ್ನು ತಡೆಗಟ್ಟಿ ಸಮತೋಲನವನ್ನು ಕಾಪಾಡಲು ಸರ್ಕಾರದ ಮಧ್ಯೆ ಪ್ರವೇಶಿಕೆಯ ಅವಶ್ಯಕತೆ ಎದ್ದು ಕಾಣುತ್ತದೆ.

೫. ಕೊನೆಯದಾಗಿ ಪ್ರಮುಖವಾಗಿ ಹೇಳುವುದಾದರೆ ರಾಜಕೀಯ ಹಾಗೂ ಸಾಮಾಜಿಕ ಕಾರಣಗಳಿಂದಲೂ ಸರ್ಕಾರಗಳು ಕೃಷಿಯಲ್ಲಿ ಆಸಕ್ತಿ ವಹಿಸುವುದುಂಟು.

ಸರ್ಕಾರಗಳು ಇನ್ನೂ ಅನೇಕ ಬಗೆಯಲ್ಲಿ ಕೃಷಿಕ್ಷೇತ್ರದಲ್ಲಿ ಹಾಗೂ ಕೃಷಿಯ ಉತ್ಪಾದನಾ ಕಾರ್ಯದಲ್ಲಿ ಪ್ರವೇಶಿಸಬಹುದಾಗಿದೆ. ಬೃಹತ್ ನೀರಾವರಿ, ಚರಂಡಿ ವ್ಯವಸ್ಥೆ, ಇಂತಹ ಕಾರ್ಯಗಳಲ್ಲೂ ಸರ್ಕಾರದ ಪ್ರವೇಶಿಕೆ ಅವಶ್ಯಕವೆನ್ನಿಸುತ್ತದೆ. ಅಲ್ಲದೆ ಪಶುಗಳಿಗೂ ಅಥವಾ ಫಸಲಿಗೂ ಸಾಂಕ್ರಾಮಿಕ ರೋಗ ತಗುಲಿದಾಗ ಅದರ ನಿವಾರಣೆಗೆ ಸಾರ್ವತ್ರಿಕವಾಗಿ ಕ್ರಮ ಕೈಗೊಳ್ಳಬೇಕಾಗುತ್ತದೆ. ಇದು ಕೃಷಿಯ ಹಾಗೂ ಕೃಷಿಕನ ದಕ್ಷತೆಯನ್ನು ಹೆಚ್ಚಿಸುವ ಉದ್ದೇಶದಿಂದ ಇಂತಹ ಕ್ರಮಗಳನ್ನು ಎಲ್ಲಾ ಗ್ರಾಮೀಣ ಪ್ರದೇಶದ ಪ್ರಜೆಗಳೂ ಅನುಸರಿಸಬೇಕಾಗುತ್ತದೆ. ಇಂಥಹ ಕಾರ್ಯಗಳನ್ನು ಜಾರಿಗೆ ತರುವುದು ಕೇವಲ ಸರ್ಕಾರಗಳಿಂದ ಮಾತ್ರ ಸಾಧ್ಯ. ಆರ್ಥಿಕವಾಗಿ ಬಹಳ ದುರ್ಬಲರಾಗಿರುವಂತಹ ಬಡರೈತರಿಗೆ ಆಧುನಿಕ ಕೃಷಿ ಉಪಕರಣಗಳನ್ನು, ರಾಸಾಯನಿಕ ಗೊಬ್ಬರಗಳನ್ನು ಕೊಳ್ಳಲು ಶಕ್ತರಾಗಿರುವುದಿಲ್ಲವೆಂಬ ಕಾರಣಕ್ಕಾಗಿ ಸರ್ಕಾರ ಮಧ್ಯ ಪ್ರವೇಶಿಸಿ ಇವುಗಳನ್ನು ಸ್ವತಃ ಸರ್ಕಾರವೇ ಕೊಂಡುಕೊಂಡು ಅನೇಕ ಸೌಲಭ್ಯದ ಸಬ್ಸಿಡಿ ಯೋಜನೆಯ ಅಡಿಯಲ್ಲಿ ರೈತರಿಗೆ ಒದಗಿಸುವ ಏರ್ಪಾಡು ಇಂದು ನಡೆಯುತ್ತಿದೆ.

ಭಾರತ ದೇಶದಲ್ಲಿಯೇ ಶರವೇಗದಲ್ಲಿ ಮುನ್ನಡೆಯುತ್ತಿರುವ ನಮ್ಮ ಕರ್ನಾಟಕ ರಾಜ್ಯದಲ್ಲಿ ಸರ್ಕಾರ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ನೆರವನ್ನು ನೀಡುತ್ತಿದೆ. ಇಂದಿನ ನೂರಾರು ಕೃಷಿ ಸಂಬಂಧಿಸಿದ ಸಮಸ್ಯೆಯಲ್ಲಿ ಸರ್ಕಾರದ ಮಧ್ಯ ಪ್ರವೇಶ ಅತ್ಯಂತ ಅವಶ್ಯಕವೆನಿಸುತ್ತದೆ. ಇದಕ್ಕೆ ಪ್ರಮುಖವಾಗಿ ಗುರುತಿಸಬಹುದಾದ ಕಾರಣಗಳೆಂದರೆ.

೧. ನಮ್ಮ ಕೃಷಿ ಪ್ರಕೃತಿಯ ಕೈಗೊಂಬೆಯಾಗಿದ್ದು, ಅದು ಮಳೆಯೊಂದಿಗೆ ನಿರಂತರವಾಗಿ ಜೂಜಾಟ ನಡೆಸಬೇಕಾಗುತ್ತದೆ. ಇಂತಹ ಪ್ರಕೃತಿಯ ಪ್ರಕೋಪದಿಂದ ಉಂಟಾಗುವ ಅಸ್ಥಿರತೆ, ಆಘಾತಗಳನ್ನು ಕೃಷಿ ಅಪಾರವಾಗಿ ಎದುರಿಸಬೇಕಾಗುತ್ತದೆ.

೨. ನಮ್ಮ ರಾಜ್ಯದಲ್ಲಿ ಕೃಷಿಯು ಇಂದಿಗೂ ಸಹ ಹಿಂದುಳಿದ ಕೈಗಾರಿಕೆ ಎನ್ನಿಸಿಕೊಂಡಿದೆ. ಇಲ್ಲಿಯ ಕೃಷಿ ಉತ್ಪಾದನ ವ್ಯವಸ್ಥೆಯಲ್ಲಿ ಸರ್ಕಾರ ಮಾತ್ರವೇ ಸ್ಥಿರತೆಯನ್ನು ತರಬಲ್ಲದೆನ್ನಬಹುದು.

೩. ಇಂದು ನಮ್ಮ ರಾಜ್ಯ ಭಾರತ ದೇಶದಲ್ಲಿಯೇ ಆಧುನಿಕವಾಗಿ, ತಂತ್ರಜ್ಞಾನದಲ್ಲಿ, ನಗರೀಕರಣದಲ್ಲಿ ಮುನ್ನಡೆಯುತ್ತಿದ್ದರೂ ಜನಸಂಖ್ಯೆಯ ಆಧಾರದ ಪ್ರಕಾರ ಕೃಷಿಯನ್ನು ಅವಲಂಬಿಸಿರುವವರ ಪ್ರಮಾಣ ಅತ್ಯಂತ ಹೆಚ್ಚಾಗಿದೆ. ಕೃಷಿಯ ಮೇಲಿನ ಒತ್ತಡವನ್ನು ಕಡಿಮೆ ಮಾಡಬೇಕಾದರೆ ಹೆಚ್ಚುವರಿಯಾಗುವ ಕೃಷಿ ಕಾರ್ಮಿಕರನ್ನು ಇತರ ಉದ್ಯೋಗಗಳಲ್ಲಿ ನೆಲೆಗೊಳಿಸಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಸರ್ಕಾರದ ಪ್ರವೇಶ ಅತ್ಯಂತ ಅವಶ್ಯಕತೆ ಎನ್ನಿಸುತ್ತದೆ.

೪. ಇಂದಂತು ರಾಜ್ಯದಲ್ಲಿ ರೈತರ ಸಂಘಟನೆ, ಹಾಗೂ ರೈತರ ಮೂಲಭೂತ ಸೌಕರ್ಯಗಳನ್ನು ನಿವಾರಿಸುವಲ್ಲಿ ಸರ್ಕಾರಗಳು ತುಂಬ ಅಸಮರ್ಪಕವೆನಿಸಿ ಕೊಳ್ಳುತ್ತಿವೆ ಯೇನೋ. ಹಾಗೆಯೇ ಕೃಷಿ ಸಂಘಟನೆ ಮತ್ತು ಕೃಷಿ ವ್ಯವಸ್ಥೆ ತುಂಬ ಅಸಮರ್ಪಕವೆನ್ನಿಸುತ್ತಿವೆ. ಜಮೀನಿನ ಹಿಡುವಳಿ, ಗೇಣಿಪದ್ಧತಿ, ಮಾರಾಟ ಮುಂತಾದುದನ್ನು ಸರಿಪಡಿಸಲು ಸರ್ಕಾರ ಮುಂದೆ ಬರಬೇಕಾಗುತ್ತದೆ. ಇದರ ಜೊತೆಗೆ ಮಧ್ಯವರ್ತಿಗಳು, ಸಾಲಿಗರು, ಮಾರುಕಟ್ಟೆಯ ಏರಿಳಿತಗಳು ನಮ್ಮ ರಾಷ್ಟ್ರಕ್ಕೆ, ರಾಜ್ಯಕ್ಕೆ ಸರ್ಕಾರದ ಪ್ರವೇಶ ಅತ್ಯಂತ ಅವಶ್ಯಕವೆಂಬುವಂತೆ ಮಾಡಿದೆ. ಭಾರತ ಇಂದು ಎಷ್ಟೆಲ್ಲ ತಂತ್ರಜ್ಞಾನದಲ್ಲಿ ಮುಂದುವರೆದಿರುವುದೆಂದು ಹೇಳಿಕೊಳ್ಳುತ್ತಿದ್ದರೂ, ನಮ್ಮ ರೈತರು ಹೆಚ್ಚಿನ ಪ್ರಮಾಣದಲ್ಲಿ ಅಜ್ಞಾನಿ, ಅನಕ್ಷರಸ್ಥರಾಗಿಯೆ ಉಳಿದಿರುವುದು ಕಂಡುಬರುತ್ತದೆ. “ಅಪ್ಪ ಹಾಕಿದ ಆಲದ ಮರಕ್ಕೆ ನೇತಾಕಿಕೊಂಡು ಸಾಯುವುದು” ಎಂಬ ನಾಣ್ಣುಡಿಯಂತೆ ಅವರಿಗೆ ಆಧುನಿಕ ಕೃಷಿ ವಿಧಾನದ ಬಗ್ಗೆ ಎಷ್ಟೇ ತಿಳುವಳಿಕೆ ನೀಡಿದರೂ ಅವರು ಇದನ್ನು ಅನುಸರಿಸುತ್ತಿಲ್ಲ. ಇನ್ನೂ ಮಾರುಕಟ್ಟೆಯ ವ್ಯವಹಾರದಲ್ಲಂತು ಇವರು ಅಮಾಯಕರೆ. ಇಂಥಹ ದೃಷ್ಟಿಯಿಂದ ಭಾರತದ ಕೃಷಿಯಲ್ಲಿ ಸರಕಾರದ ಪಾತ್ರ ಅತಿ ಮಹತ್ವದ್ದಾಗಿರುತ್ತದೆ.

ಸರ್ಕಾರ ಎಷ್ಟೇ ಅಭಿವೃದ್ದಿ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದರೂ ಸಹ ಅವುಗಳಲ್ಲಿ ರೈತರಿಗೆ ಸಂಪೂರ್ಣ ನಂಬಿಕೆ ಬರಬೇಕು. ಹಾಗೂ ಆ ಯೋಜನೆಗಳು ರೈತರ ಕೈಗೆ ಸಿಗುವಂತಾಗಬೇಕು, ಜನರು ಆ ಯೋಜನೆಯನ್ನು ತಮ್ಮ ಕೃಷಿ ಪದ್ಧತಿಯಲ್ಲಿ ಸಂಪೂರ್ಣವಾಗಿ ಅಳವಡಿಸಿಕೊಳ್ಳಬೇಕು. ಈ ಕಾರ್ಯಕ್ಕೆ ರೈತರ ಸಹಕಾರ ಅತ್ಯಂತ ಅಮೂಲ್ಯವಾದದು. ರೈತರಿಗೆ ಈ ಯೋಜನೆಗಳಲ್ಲಿ ನಂಬಿಕೆ ಬರದ ಹೊರತು ಕೃಷಿಯ ಅಭಿವೃದ್ಧಿ ಸಾಧ್ಯವಿಲ್ಲವೆಂದೆ ಹೇಳಬಹುದು. ಮಿಶ್ರಬೇಸಾಯ, ಹೊಸತಳಿಗಳ ಮತ್ತು ರಾಸಾಯನಿಕ ಗೊಬ್ಬರಗಳ ಬಳಕೆ, ಸುಧಾರಿತ ಬೇಸಾಯದ ವಿಧಾನ, ಕ್ರಿಮಿನಾಶಕ ವಸ್ತುಗಳ ಬಳಕೆಯ ವಿಧಾನ ಮುಂತಾದವುಗಳಲ್ಲಿ ರೈತರಿಗೆ ಅಚಲವಾದಂತಹ ನಂಬಿಕೆ ಮೂಡಿಸಬೇಕಾಗುತ್ತದೆ. ಈ ಮೇಲಿನ ಎಲ್ಲಾ ಕಾರ್ಯಗಳನ್ನು ಗ್ರಾಮೀಣ ಪ್ರದೇಶದ ಜನರಿಗೆ ತಲುಪಿಸಲು ಹಾಗೂ ತಲುಪಿಸಬೇಕಾದದ್ದು ಸರ್ಕಾರಗಳ ಹೊಣೆ. ಇದು ಸರ್ಕಾರಗಳಿಂದ ಮಾತ್ರ ಸಾಧ್ಯವೆಂದು ಹೇಳಬಹುದು. ಈ ಕೆಲಸದಲ್ಲಿ ನೂರಾರು ಸ್ವಯಂ ಸಂಸ್ಥೆಗಳು ಕಾರ್ಯಮಗ್ನರಾಗಿದ್ದರೂ ಸಹ ಅವು ಅನೇಕ ತೊಂದರೆಯನ್ನು ಎದುರಿಸಬೇಕಾಗುತ್ತದೆ. ಅದರಿಂದಾಗಿ ಈ ಕೆಲಸವು ಸರ್ಕಾರಕ್ಕೆ ಹೆಚ್ಚು ಹತ್ತಿರವಾದದ್ದೆನ್ನಬಹುದು

ಸ್ವಾತಂತ್ರ್ಯಪೂರ್ವ ಕೃಷಿ

ಮೊದಲೇ ತಿಳಿಸಿರುವಂತೆ ಅಂದು ಕೃಷಿ ಮಳೆಯನ್ನು ಅವಲಂಬಿಸಿತ್ತು. ಹೀಗೆ ಅಲ್ಪ ಸ್ವಲ್ಪ ಮಳೆಯಿಂದ ಬೆಳೆಬೆಳೆದು ಕೈಗೆ ಸಿಗುವ ಸಮಯದಲ್ಲಿಯೂ ಅದು ಕ್ರಿಮಿಕೀಟಗಳಿಗೆ, ಪ್ರಾಣಿಗಳಿಗೆ ಬಲಿಯಾಗುತ್ತಿರುವ ಸಂಭವವೇ ಹೆಚ್ಚಾಗಿರುತ್ತಿತ್ತು. ಒಟ್ಟಾರೆಯಾಗಿ ಸ್ವಾತಂತ್ರ್ಯಪೂರ್ವದಲ್ಲಿ ಕೃಷಿ ಅಷ್ಟೇನೂ ಲಾಭದಾಯಕವಾಗಿರಲಿಲ್ಲ, ಹೀಗೆಂದು ರೈತರು ತಮ್ಮ ಜೀವನದ ಏಕೈಕ ಆಧಾರವಾಗಿದ್ದ ಕೃಷಿಯನ್ನು ಕೈಬಿಡುವಂತೆಯೂ ಇರಲಿಲ್ಲ. ಅಂದು ತಾಂಡವಾಡುತ್ತಿದ್ದ ಉಳಿಗಮಾನ್ಯ ಪದ್ಧತಿಯಿಂದ ಹಳ್ಳಿಯಲ್ಲಿ ಮೇಲ್ ಜಾತಿ ಎಂದು ಸ್ವಘೋಷಿಸಿಕೊಂಡು ಸಾಹುಕಾರರಾಗಿ ಮೆರೆಯುತ್ತಿದ್ದವರ ಬಳಿಯಲ್ಲಿ ಹೆಚ್ಚಿನ ಬಡ್ಡಿಗೆ ಹಣವನ್ನು ಸಾಲವಾಗಿ ತಂದು, ಅದನ್ನು ಕೃಷಿಗೆ ಹಾಕಿ ಬೆಳೆಯಲ್ಲಿ ನಷ್ಟ ಸಂಭವಿಸಿದಾಗ ಜಮೀನನ್ನೆ ಕಳೆದುಕೊಂಡಂತಹ ಉದಾಹರಣೆಗೆ ನಮ್ಮ ಚರಿತ್ರೆಯಲ್ಲಿ ಕೊರತೆಯೇನಿಲ್ಲ.

ಸ್ವಾತಂತ್ರ್ಯಪೂರ್ವದಲ್ಲಿ ನಮ್ಮ ರಾಜ್ಯದ ರೈತನ ಸರಾಸರಿ ಆದಾಯ ವರ್ಷಕ್ಕೆ ೧೫೦ ರೂಪಾಯಿಗಳು, ಅದರಲ್ಲಿ ಅರ್ಧಭಾಗವನ್ನುಭೂಮಿಯ ಒಡೆಯನಿಗೆ ಗೇಣಿಯ ರೂಪದಲ್ಲಿ ಒಪ್ಪಿಸಬೇಕಾಗಿತ್ತು. ಇನ್ನೂ ಬಡ್ಡಿಗಾಗಿ ೧೦ ರೂಪಾಉಯಿಗಳಾದರೆ ಇತರೆ ತೆರಿಗೆಯ ರೂಪದಲ್ಲಿ ೫ ರೂಪಾಯಿಗಳು ವೆಚ್ಚವಾಗುತ್ತಿತ್ತು. ರೈತರಿಗೆ ಉಳಿಯುತ್ತಿದ್ದುದು ತಲಾ ೬೦ ರೂಪಾಯಿಗಳು ಮಾತ್ರ. ಅಂದರೆ ತಿಂಗಳಿಗೆ ಕೇವಲ ೫ ರೂಪಾಯಿಗಳು. ಈ ಹಣದ ಮೊತ್ತವನ್ನು ಜ್ಞಾಪಿಸಿಕೊಂಡರೇ ಅವರ ದಾರುಣ ಜೀವನ್ ಸ್ಥಿತಿ ಹೇಗಿತ್ತೆಂಬುವುದು ಪ್ರತಿಯೊಬ್ಬರ ಕಣ್-ಮುಂದೆ ತಕ್ಷಣವೆ ಸುಳಿದಾಡುತ್ತದೆ. ಇಂಥಹ ಪರಿಸ್ಥಿತಿಯಲ್ಲಿ ಬಡ ಕೂಲಿಕಾರ್ಮಿಕರು, ರೈತರು ಗ್ರಾಮದಲ್ಲಿದ್ದ ಸಾಹುಕಾರರ ಬಳಿಗೆ ಸಾಲಕ್ಕಾಗಿ ಹೋಗದೆ ಬೇರೆ ಮಾರ್ಗವೇ ಇರುತ್ತಿರಲಿಲ್ಲ. ಮೊದಲೆ ತಿಳಿಸಿರುವ ಹಾಗೆ ಸಾಲದ ಶೂಲಕ್ಕೆ ಸಿಕ್ಕಿದ ಅವರು ಕ್ರಮೇಣ ಸಾಲವನ್ನು ತೀರಿಸಲಾಗದೆ, ಜೀವನೋಪಾಯಕ್ಕಾಗಿ ಇದ್ದ ಚೋಟುದ್ದ ಭೂಮಿಯನ್ನು ಸಾಹುಕಾರರ ವಶಕ್ಕೆ ಒಪ್ಪಿಸಿ, ಅದೂ ಸಾಲದೆ ಹೋದರೆ, ಸಾಯುವವರೆಗೂ ಅವರ ಬಳಿ ಜೀತದ ಆಳುಗಳಾಗಿ ದುಡಿಯಬೇಕಾಗಿತ್ತು. ಇಂತಹ ಹೀನ ಪರಿಸ್ಥಿತಿಯಲ್ಲಿಯೂ ಸಹ ಮೈಸೂರು ಸಂಸ್ಥಾನವನ್ನು ಹೊರತುಪಡಿಸಿ, ಬ್ರಿಟೀಷ್ ಸರ್ಕಾರವಾಗಲಿ ಅಥವಾ ಇತರೆ ಸಾಮಂತ ಸಂಸ್ಥೆಗಳಾಗಲಿ ಯಾವುದೇ ಸುಧಾರಣೆ ತರುವ ಕ್ರಮವನ್ನು ಕೈಗೊಳ್ಳಲಿಲ್ಲ. (ಈ ಹಂತದಲ್ಲಿ ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಮಹರಾಜರು ಅನೇಕ ಸುಧಾರಣ ಕ್ರಮವನ್ನು ಕೈಗೊಂಡು ಅಮರರಾಗಿದ್ದಾರೆ). ಆದರೆ ೧೯ನೇ ಶತಮಾನದ ಕೊನೆಯಲ್ಲಿ ರಾಜ್ಯದಲ್ಲಿ ಅನೇಕ ದಿನಗಳವರೆಗೆ ಕ್ಷಾಮ ಕಾಣಿಸಿಕೊಂಡಿತು. ಇಂಥಹ ಸಮಯದಲ್ಲಿ ಸರ್ಕಾರ ಕೃಷಿಯನ್ನು ಉತ್ತಮಪಡಿಸುವ ಕಡೆಗೆ ಸ್ವಲ್ಪ ಪ್ರಮಾಣದಲ್ಲಿ ಗಮನವನ್ನು ಹರಿಸಿತ್ತೆಂದು ಹೇಳಬಹುದಾಗಿದೆ.

ರಾಷ್ಟ್ರವು (ಕೇಂದ್ರ ಸರ್ಕಾರ) ೧೮೮೦,೧೮೯೮ ಮತ್ತು ೧೯೦೧ರ ಕ್ಷಾಮದ ಪರಿಶೀಲನೆ, ಸಾವು-ನೋವುಗಳ ಪರಿಶೀಲನೆ, ತಾತ್ಕಾಲಿಕ ಪರಿಹಾರದ ಮಾರ್ಗದರ್ಶನಕ್ಕಾಗಿ ರಚಿಸಿದಂತಹ ಆಯೋಗಗಳು ನೀಡಿದಂತಹ ವರದಿಯು ಕೃಷಿಯನ್ನು ಸುಧಾರಿಸಲು ಅನೇಕ ಸಲಹೆಗಳನ್ನು ನೀಡಿದವೆನ್ನಬಹುದು. ಇದರ ಫಲವೇ ೧೮೮೪ರಲ್ಲಿ ಕೃಷಿಯನ್ನು ಅಭಿವೃದ್ಧಿ ಪಡಿಸಲು ಕೇಂದ್ರ ಸರ್ಕಾರ ಸ್ಥಾಪಿಸಿದ ಕೃಷಿ ಇಲಾಖೆ. ೧೮೮೯ರಲ್ಲಿ ರಾಯಲ್ ಅಗ್ರಿಕಲ್ಚರಲ್ ಆಯೋಗ ಒಂದು ಮಹತ್ವದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ ಕೃಷಿಗೆ ಸಂಬಂಧಿಸಿದಂತೆ ವೈಜ್ಞಾನಿಕ ಸಂಶೋಧನೆಯ ಅವಶ್ಯಕತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿತು. ಇವುಗಳೆಲ್ಲದರ ಆಧಾರದ ಮೇಲೆ ಕೇಂದ್ರ ಸರ್ಕಾರ ಕೃಷಿ ಇನ್ಸ್ ಪೆಕ್ಟರ್ ಜನರಲ್ ಗಳನ್ನು, ಕೀಟ ವಿಜ್ಞಾನಿಗಳನ್ನು ನೇಮಕ ಮಾಡಿ ಕೃಷಿ ಕಾರ್ಯಗಳು ಆದಷ್ಟು ಪ್ರಮಾಣದಲ್ಲಿ ಸಮರ್ಪಕವಾಗಿ ನಡೆಯಲು ಮೇಲ್ವಿಚಾರಣೆ ವಹಿಸುವಂತೆ ಆದೇಶ ನೀಡಿತು. *

[1]

ಮೈಸೂರು ಸಂಸ್ಥಾನದಲ್ಲಿ ೧೮೯೭ರಲ್ಲಿ ಕೃಷಿ ಇಲಾಖೆ ಪ್ರಾರಂಭವಾಯಿತು. ೧೯೦೩ರಲಿ ಪುಣೆಯಲ್ಲಿ ಕೃಷಿ ಸಂಶೋಧನಾಲಯವನ್ನು ಸ್ಥಾಪಿಸಲಾಯಿತು. ಮುಂದುವರೆದು ಸರ್ಕಾರವು ರೈತರು ಸುವ್ಯಸ್ಥಿತ ರೀತಿಯಲ್ಲಿ ಕೃಷಿಯನ್ನು ಕೈಗೊಳ್ಳಲು ಮುಖ್ಯವಾಗಿ ಅಡ್ಡಿಯಾಗಿ ಪರಿಣಮಿಸಿದ್ದ ಹಣಕಾಸಿನ ಸಮಸ್ಯೆಯನ್ನು ನಿವಾರಿಸಲು ೧೯೦೪ರಲ್ಲಿ ಸರ್ಕಾರ ಸಾಲ ಸಂಘಗಳು ಕಾಯಿದೆಯನ್ನು ಜಾರಿಗೆ ತಂದಿತು. ಅದೇ ವರ್ಷ ಸಹಕಾರ ಸಂಸ್ಥೆಗಳು ಭಾರತದಲ್ಲಿ ತಲೆ ಎತ್ತಲಾರಂಭಿಸಿದವು ೧೯೦೫ರಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳ ಕೃಷಿ ಇಲಾಖೆಗಳು ವಿಸ್ತರಿಸಲ್ಪಟ್ಟವು. ರಾಯಲ್ ಕಮೀಷನ್ ವರದಿ ನಂತರ ೧೯೩೦ರಲ್ಲಿ ಅಖಿಲ ಭಾರತ ಕೃಷಿ ಮಂಡಳಿ ಸ್ಥಾಪಿಸಲ್ಪಟ್ಟಿತು. ಈ ಮಂಡಳಿಯು ಕೃಷಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಹೊಸ ವಿಧಾನಗಳನ್ನು ಕಾರ್ಯರೂಪಕ್ಕೆ ತರಲು ಸಂಶೋಧನೆ ಹಾಗೂ ಅಧ್ಯಯನಗಳಿಗೆ ಸಾಕಷ್ಟು ಪ್ರಾಮುಖ್ಯತೆ ಕೊಟ್ಟಿತು. ಈ ದಿಕ್ಕಿನಲ್ಲಿ ಸರ್ಕಾರ ಮುನ್ನಡೆದು ಮುಂದೆ ಪೂನಾ, ಕಾನ್ಪುರ, ನಾಗಪುರ, ಕೊಯಮತ್ತೂರುಗಳಲ್ಲಿ ಕೃಷಿ ಕಾಲೇಜುಗಳನ್ನು ಸ್ಥಾಪಿಸಿತು.

೧೯೧೯ರಲ್ಲಿ ಸ್ಥಳೀಯ ಪರಿಸ್ಥಿಗೆ ತಕ್ಕಂತೆ ಕೃಷಿ ಕ್ಷೇತ್ರದಲ್ಲಿ ಸುಧಾರಣೆ ತರಲು ರಾಜ್ಯ ಸರ್ಕಾರಗಳಿಗೆ ಸ್ವಾತಂತ್ರ್ಯ ದೊರೆಯಿತು. ಅಂದಿನಿಂದ ಕೃಷಿಯನ್ನು ಅಭಿವೃದ್ಧಿ ಪಡಿಸುವಲ್ಲಿ ರಾಜ್ಯ ಸರ್ಕಾರಗಳ ಪಾತ್ರ ಹಿರಿದಾಯಿತು. ಇವುಗಳ ಸತತ ಪ್ರಯತ್ನದಿಂದಾಗಿ ಕೃಷಿಯ ಕಾರ್ಯಗಳು ಸಮರ್ಪಕವಾಗಿ ನಡೆದು ಕೃಷಿ ಕೈಗಾರಿಕೆಗಳಿಗೆ ಕಚ್ಚಾ ಸಾಮಗ್ರಿಗಳು ಒದಗುವಂತಾಯಿತು. ಆದರೆ ಈ ಸಮಯದಲ್ಲಿ (೧೯೨೯) ರಲ್ಲಿ ವಿಶ್ವದಲ್ಲೆಲ್ಲಾ ಆರ್ಥಿಕ ಮುಗ್ಗಟ್ಟು ತಲೆದೋರಿತು. ಭಾರತವು ಇದರಿಂದ ಹೊರತಾಗಿರಲಿಲ್ಲ. ಆರ್ಥಿಕ ಮುಗ್ಗಟ್ಟಿನಿಂದಾಗಿ ಕೃಷಿ ಬೆಲೆಗಳು ಕುಸಿದವು ಇದರಿಂದ ಕೃಷಿಯನ್ನೇ ನಂಬಿ ಜೀವನ ನಡೆಸುತ್ತಿದ್ದ ರೈತರ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯದೆ ಕೃಷಿಯನ್ನು ಮುಂದುವರೆಸುವಲ್ಲಿ ನಿರುತ್ಸಾಹಿಗಳಾದರು. ಇಂದಿನಂತೆಯೇ ಅಂದು ಕೂಡಾ ಅನೇಕ ರೈತರು ಸಾಲದ ಋಣದಿಂದ ಮುಕ್ತರಾಗಲು ತಮ್ಮ ಜಮೀನುಗಳನ್ನು ಕಳೆದುಕೊಂಡು ನಿರ್ಗತಿಕರಾದರು. ಭೂರಹಿತ ರೈತರ ಸಂಖ್ಯೆ ಹೆಚ್ಚಾಯಿತು. ಊಟಕ್ಕಾಗಿ ಕೆಲಸಗಳನ್ನು ಹುಡುಕಿಕೊಂಡು ಪಟ್ಟಣಗಳಿಗೆ ವಲಸೆ ಹೋಗಲಾರಂಭಿಸಿದರು. ಇಂಥಹ ಪರಿಸ್ಥಿತಿಯಲ್ಲಿಯೂ ಸರ್ಕಾರ ಕೃಷಿ ಉತ್ಪನ್ನಗಳ ಬೆಲೆಗಳಲ್ಲಿ ಸ್ಥಿರತೆಯನ್ನು ತಂದು ರೈತರ ಸ್ಥಿತಿಯನ್ನು ಸುಧಾರಿಸಲು ಕ್ರಮಕೈಗೊಳ್ಳಲಿಲ್ಲ. ಇಂಥಹ ಸಮಯದಲ್ಲಿಯೇ ರಿಸರ್ವ್ ಬ್ಯಾಂಕ್ ಎಂಬುವುದು ೧೯೩೫ ರಲ್ಲಿ ಕೇಂದ್ರ ಬ್ಯಾಕೆಂಬ ಹೆಸರಿನಿಂದ ಸ್ಥಾಪಿಸಲ್ಪಟ್ಟಿತು. ಇದರ ಮುಖ್ಯ ಅಂಗವಾಗಿ ಕೃಷಿ ಸಾಲ ಇಲಾಖೆಯನ್ನು ಪ್ರಾರಂಭಿಸಲಾಯಿತು. ರೈತರಿಗೆ ಅಗತ್ಯವಾದಂತಹ ಸಾಲವನ್ನು ಒದಗಿಸಿ ಅವರು ಕೃಷಿ ಕಾರ್ಯಗಳನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಮಾಡುವುದು ಈ ಇಲಾಖೆಯ ಮುಖ್ಯ ಕೆಲಸವಾಗಿತ್ತು. ಇಂದಿಗೂ ಈ ಕೃಷಿ ಇಲಾಖೆಯು ಭಾರತದ ಕೃಷಿ ಅಭಿವೃದ್ಧಿಗೆ ಅನೇಕ ಬಗೆಯಲ್ಲಿ ಸೇವೆ ಸಲ್ಲಿಸುತ್ತಿದೆ. ೧೯೩೯ -೪೫ರ ಅವಧಿಯಲ್ಲಿ ಸಂಭವಿಸಿದ ದ್ವಿತೀಯ ಮಹಾಯುದ್ಧವು ಭಾರತದ ಕೃಷಿಗೆ ಒಂದು ವರವಾಗಿ ಪರಿಣಮಿಸಿತೆಂದರೆ ತಪ್ಪಾಗದು. ಏಕೆಂದರೆ ಯುದ್ಧದ ಅವಧಿಯಲ್ಲಿ ಕೃಷಿ ಉತ್ಪನ್ನಗಳ ಬೆಲೆಗಳು ಏರಲಾರಂಬಿಸಿದವು. ಇದರಿಂದಾಗಿ ಆರ್ಥಿಕ ಮುಗ್ಗಟ್ಟಿನಿಂದ ಕುಂಠಿತಗೊಂಡಿದ್ದ ಕೃಷಿಗೆ ಚೇತನ ದೊರೆಯುವಂತಾಯಿತು. ಆದಾಗ್ಯೂ ಸಹ ದಾಖಲೆಗಳನ್ನು ಪರಿಶೀಲಿಸಿದಾಗ ಯುದ್ಧದ ಅವಧಿಯಲ್ಲಿ ಸರಕಾರದ ಬೆಲೆ ನಿಯಂತ್ರಣ ಮತ್ತು ಪಡಿತರ ವ್ಯವಸ್ಥೆ ಸಮರ್ಪಕವಾಗಿರಲಿಲ್ಲವೆಂದು ಹೇಳಬಹುದು.

ಸ್ವಾತಂತ್ರ್ಯಪೂರ್ವದಲ್ಲಿ ಭಾರತದ ಕೃಷಿಗೆ ಬಡಿದ ಮತ್ತೊಂದು ಬರ ಸಿಡಿಲೆಂದರೆ ೧೯೩೫ ರಲ್ಲಿ ಬರ್ಮಾ (ಇಂದಿನ ಮೇಹನ್ ಮಾರ್) ಭಾರತದಿಂದ ಪ್ರತ್ಯೇಕಿಸಲ್ಪಟ್ಟಿದ್ದು. ಹೆಚ್ಚಿನ ಫಲವತ್ತಾದ ಭತ್ತ ಬೆಳೆಯುವ ಪ್ರದೇಶಗಳು ಬರ್ಮಾಕ್ಕೆ ಸೇರಿದ್ದರಿಂದ ಆಹಾರ ಧಾನ್ಯಗಳ ಕೊರತೆಯನ್ನು ರಾಷ್ಟ್ರ ಎದುರಿಸಬೇಕಾಯಿತು ಭಾರತದ ಅವಿಭಾಜ್ಯ ಅಂಗವಾಗಿದ್ದ ಬರ್ಮಾ ತನ್ನ ತವರು ಮನೆಗೆ ವಿದೇಶಿ ನೆಲೆಯಲ್ಲಿ ನಿಂತು ಅಕ್ಕಿ ರಫ್ತು ಮಾಡಿತ್ತು. ಆದರೆ ಇದು ಹೆಚ್ಚು ದಿನ ಮುಂದುವರಿಯಲಿಲ್ಲ. ಕಾರಣ ೧೯೪೨ ರಲ್ಲಿ ಸಂಭವಿಸಿದ ಮತೀಯ ಕಲಹ ಇದಕ್ಕೆ ಕಾರಣವಾಗಿತ್ತು. ಇಷ್ಟು ಸಾಲದೆಂಬಂತೆ ೧೯೪೨ರ ವರ್ಷ ಇಡೀ ಬಂಗಾಳದಾದ್ಯಾಂತ ಮಹಾಕ್ಷಾಮ ತಲೆದೋರಿತು ನಂತರ ಭಾರತದ ಕೃಷಿಯ ಮೇಲೆ ಹಾಗೂ ಕೃಷಿ ಆಧಾರಿತ ಕೈಗಾರಿಕೆಗಳ ಮೇಲೆ ಬಿದ್ದ ಭಾರಿ ಹೊಡೆತವೆಂದರೆ ೧೯೪೭ ರಲ್ಲಿ ದೇಶ ವಿಭಜನೆಯ ಘಟನೆ. ಈ ಅವಧಿಯಲ್ಲಿ ಪಾಕಿಸ್ತಾನ ಹಾಗೂ ಭಾರತಗಳು ವಿಭಜನೆ ಹೊಂದಿದವು. ಫಲವತ್ತಾದ ಪ್ರದೇಶಗಳು ನಮ್ಮ ಕೈಬಿಟ್ಟು ತೀವ್ರವಾದ ಆಹಾರದ ಅಭಾವ ದೇಶದಲ್ಲಿ ತಲೆದೋರಿತು. ಮುಖ್ಯವಾಗಿ ಭಾರತದಲ್ಲಿ ಕೃಷಿ ಆಧಾರಿತವಾದ ಕೈಗಾರಿಕಗಳು (ಉದಾಹರಣೆಗೆ: ಎಣ್ಣೆ ಕೈಗಾರಿಕೆ, ಬಟ್ಟೆ ಕೈಗಾರಿಕೆ, ಸಕ್ಕರೆ ಕೈಗಾರಿಕೆ, ಸೆಣಬಿನ ಕೈಗಾರಿಕೆ ಇತ್ಯಾದಿ) ಭಾರತದಲ್ಲಿಯೇ ಉಳಿದರೆ ಇವುಗಳಿಗೆ ಕಚ್ಚಾವಸ್ತುಗಳನ್ನು ಒದಗಿಸುತ್ತಿದ್ದಂತಹ ಫಲವತ್ತಾದ ಕೃಷಿ ಭೂಮಿಯು ಪಾಕಿಸ್ತಾನಕ್ಕೆ ಸೇರಿತು. ಇದು ಸುಮಾರು ವರ್ಷಗಳವರೆಗೆ ಭಾರತದ ಅರ್ಥ ವ್ಯವಸ್ಥೆ ಹಾಗೂ ಸಾಮಾಜಿಕ ವ್ಯವಸ್ಥೆಯ ಮೇಲೆ ಪರಿಣಾಮ ಬೀರಿತ್ತೆನ್ನಬಹುದು. ಹೀಗೆ ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಶರ ಆಡಳಿತದಲ್ಲಿ ಭಾರತದ ಕೃಷಿ ದುಸ್ಥಿತಿಯಲ್ಲಿ ಮುಳುಗಿತ್ತೆನ್ನಬಹುದು.

ಸ್ವಾತಂತ್ರ್ಯ ನಂತರ ಕೃಷಿ

೧೯೪೭, ಆಗಸ್ಟ್ ೧೫ ರಂದು ಭಾರತ ಬ್ರಿಟಿಶರ ದಾಸ್ಯದಿಂದ ಮುಕ್ತಿ ಹೊಂದಿ ಸ್ವಾತಂತ್ರ್ಯದ ಜಯಮಾಲೆ ಧರಿಸಿತು. ಶತಮಾನದ ಗುಲಾಮಗಿರಿಯ ಕಪಿಮುಷ್ಠಿಯಿಂದ ಪಾರಾಗಿ ಸ್ವರಾಜ್ಯಗಳಿಸಿದ ಸಂದರ್ಭದಲ್ಲಿ ಭಾರತದ ಕೃಷಿಯ ಪರಿಸ್ಥಿತಿ ಏನೇನೂ ಸುಖಕರವಾಗಿರಲಿಲ್ಲ. ಈ ಸಮಯದಲ್ಲಿ ನಮ್ಮ ದೇಶದ ಮುಂದೆ ಲೆಕ್ಕವಿಲ್ಲದಷ್ಟು ಸಮಸ್ಯೆಗಳು, ಬೃಹದಾಕಾರವಾಗಿ ಬೆಳೆದು ನಿಂತಿದ್ದವು. ಇತರ ದೇಶಗಳೊಡನೆ ಹೋಲಿಸಿದಾಗ ಭಾರತವು ಎಲ್ಲಾ ಕ್ಷೇತ್ರದಲ್ಲಿಯೂ ತೀರಾ ಹಿಂದುಳಿದಿತ್ತು. ನೀರಿಗಾಗಿ ಬಾಯಾರಿ ಬಿರುಕು ಬಿಟ್ಟ ಗದ್ದೆಗಳು, ಹಸಿದ ಹೊಟ್ಟೆಯಲ್ಲಿ, ಗೋಳುಗರಿಯುತ್ತಿದ್ದ ಲಕ್ಷಾಂತರ ಜನರು, ಜಾತಿ ವ್ಯವಸ್ಥೆಯ ಕಟ್ಟುಪಾಡಿನಿಂದಾಗಿ ನಾಯಿ, ಹಂದಿಗಳಿಗಿಂತಲೂ ಕೀಳಾಗಿ ಜೀವಿಸುತ್ತಿದ್ದಂತಹ ಕೋಟ್ಯಾಂತರ ದಲಿತ ಜನರಗೋಳು, ಹರಕು ಮುರುಕು ಉಪಕರಣಗಳಿಂದ ತುಂಬಿದ ಹಳೆಯ ಕಾರ್ಖಾನೆಗಳು, ಬಡತನ, ಆಜ್ಞಾನ ಮೂಢನಂಬಿಕೆ, ಪೌಷ್ಟಿಕ ಆಹಾರದ ಕೊರತೆಯಿಂದ ಹಾಗೂ ಬರ, ಕ್ಷಾಮ, ಭೀಕರ ಬಿರುಗಾಳಿಗೆ ತುತ್ತಾಗಿ ಗ್ರಾಮೀಣ ಜನತೆಯ ಬದುಕು ನಮ್ಮ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದಾಗ ಎಲ್ಲೆಲ್ಲೂ ಕಂಡು ಬರುತ್ತಿದ್ದ ಹೃದಯಂಗಮವಾದ ಕರುಣಾಪೂರಿತ ದೃಶ್ಯಗಳಾಗಿತ್ತೆಂದು ಅನೇಕ ಆಧಾರಗಳಿಂದ ತಿಳಿದು ಬರುತ್ತದೆ. ಇಷ್ಟೆ ಅಲ್ಲದೆ ಲಕ್ಷಾಂತರ ಗ್ರಾಮೀಣ ಜನರು ಅನ್ಯಾಯವಾದ ಭೂಪದ್ಧತಿಯಿಂದ ವಿಪರೀತ ಕಷ್ಟಕೊಳ್ಳಗಾಗಿದ್ದರು. ಮೊದಲೇ ತಿಳಿಸಿರುವ ಹಾಗೆ ಬಡತನದ ತಾಂಡವ ನೃತ್ಯ ಎಲ್ಲೆಲ್ಲೂ ಪಾಶವೀ ಕೃತ್ಯಗಳನ್ನು ನಡೆಸಿತ್ತು. ಕೈಗಾರಿಕೆಗಳು ಬೆರಳೆಣಿಸುವಷ್ಟಿದ್ದವು. ಕಚ್ಚಾ ವಸ್ತುಗಳು ಕೊರತೆಯಿಂದಾಗ ಅವೂ ಸಹ ಹೀನ ಸ್ಥಿತಿಯಲ್ಲಿದ್ದವು. ಇಂತಹ ವಿಷಮ ಪರಿಸ್ಥಿತಿಯಲ್ಲಿ ಸರ್ಕಾರಕ್ಕೆ ಯೋಜನಾಬದ್ಧ ಅಭಿವೃದ್ಧಿಯನ್ನು ಕೈಗೊಳ್ಳುವುದೊಂದೇ ಹಿತವಾದ ಮಾರ್ಗವಾಗಿ ತೋರಿತ್ತೆನ್ನಬಹುದು. ಈ ಹಂತದಲ್ಲಿ ದೇಶವು ರಾಜಕೀಯ ಸ್ವಾತಂತ್ರ್ಯಗಳಿಸಿ ಮುಂದೆ ೧೯೫೦ ರಲ್ಲಿ ಆರ್ಥಿಕ ಸ್ವಾತಂತ್ರ್ಯ ಗಳಿಸಲು ಪಂಚವಾರ್ಷಿಕ ಯೋಜನೆಯ ಪಥದಲ್ಲಿ ಕಾಲಿಟ್ಟಿತು. (ಈ ಪಂಚವಾರ್ಷಿಕ ಯೋಜನೆಯನ್ನುಮೊದಲೆ ಪ್ರಪಂಚದಲ್ಲಿ ಜಾರಿಗೆ ತಂದ ರಾಷ್ಟ್ರವೆಂದರೆ ರಷ್ಯ. ಭಾರತದ ಪ್ರಥಮ ಪ್ರಧಾನಿ ಪಂಡಿತ್ ನೆಹರೂರವರು ಈ ಮಹತ್ವದ ಯೋಜನೆಯನ್ನು ಭಾರತದಲ್ಲಿ ಜಾರಿಗೆ ತಂದರು. ಭಾರತದ ಪಂಚವಾರ್ಷಿಕ ಯೋಜನೆಗಳ ಜನಕ ನೆಹರೂ ಎಂದು ಕರೆಯಲಾಗಿದೆ). ಭಾರತ ಹಳ್ಳಿಗಳ ರಾಷ್ಟ್ರವಾಗಿದ್ದರಿಂದ ಹಾಗೂ ಅಂದು ಭಾರತದ ಆರ್ಥಿಕತೆಯು ಗ್ರಾಮೀಣ ಪ್ರದೇಶದ ಮೇಲೆಯೇ ಅವಲಂಭಿತವಾಗಿದ್ದರಿಂದ, ಗ್ರಾಮೀಣ ಮೂಲ ಕಸುಬಾಗಿದ್ದ ಕೃಷಿಯಲ್ಲಿ ಅಧಿಕ ಉತ್ಪಾದನೆ ಪಡೆದು ಆಹಾರದಲ್ಲಿ ಸ್ವಾವಲಂಬಿಗಳಾಗಲು ಪ್ರಥಮ ಪಂಚವಾರ್ಷಿಕ ಯೋಜನೆಯಲ್ಲಿ (೧೯೫೧-೧೯೫೨) ಹೆಚ್ಚಿನ ಆದ್ಯತೆ ನೀಡಲಾಯಿತು. ಅಲ್ಲಿಂದ ಭಾರತದ ಕೃಷಿಯಲ್ಲಿ ಹೊಸ ತಿರುವು ಮೂಡಲಾರಂಭಿಸಿತು. ಏಕೆಂದರೆ ಕೃಷಿಯು ಭಾರತದ ಅರ್ಥ ವ್ಯವಸ್ಥೆಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿತು. ಸುಮಾರು ಶೇಕಡ ೭೦% ರಷ್ಟು ಜನರು ಕೃಷಿಯನ್ನೇ ಅವಲಂಬಿಸಿದ್ದು. ಅದರಲ್ಲಿ ಶೇಕಡ ೯೦% ರಷ್ಟು ಜನರು ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಆದ ಕಾರಣ ಭಾರತ ದೇಶವು ಕೃಷಿ ಪ್ರಧಾನವಾದ ರಾಷ್ಟ್ರವಾಗಿದೆ. ನಮ್ಮ ದೇಶದ ಗ್ರಾಮೀಣ ಆರ್ಥಿಕ ಅಭಿವೃದ್ಧಿಯು ಕೃಷಿಯ ಮೇಲೆಯೇ ಅವಲಂಬಿಸಿರುವುದರಿಂದ ಕೃಷಿ ಅಥವಾ ಒಕ್ಕಲುತನವು “ಭಾರತದ ಅರ್ಥವ್ಯವಸ್ಥೆ”ಯ ಬೆನ್ನೆಲುಬಾಗಿದೆ ಎಂದು ಕರೆದುಕೊಳ್ಳುತ್ತೇವೆ. ನಮ್ಮ ರಾಷ್ಟೀಯ ವರಮಾನದ ೬೦% ರಷ್ಟು ಕೃಷಿಯ ಮೂಲದಿಂದಲೇ ಬರುತ್ತಿದೆ.

ನಮ್ಮ ದೇಶದ ಅರ್ಥವ್ಯವಸ್ಥೆಯಲ್ಲಿ ಕೃಷಿಯ ಮಹತ್ವವನ್ನು ತಿಳಿಯಬಹುದು.

. ಆಹಾರದ ಮೂಲ : ಕೃಷಿಯು ಜನರಿಗೆ ಮುಖ್ಯವಾಗಿ ಬೇಕಾಗುವ ಆಹಾರ ಮತ್ತು ಜಾನುವಾರುಗಳಿಗೆ ಬೇಕಾಗುವ ಮೇವನ್ಮು ಒದಗಿಸುತ್ತದೆ. ಆಹಾರ ಧಾನ್ಯಗಳ ಜೊತೆಗೆ ಎಣ್ಣೆಕಾಳುಗಳು, ದ್ವಿದಳ ಧಾನ್ಯಗಳು, ಕಾಯಿಪಲ್ಲೆ, ಹಣ್ಣು- ಹಂಪಲು ಇತ್ಯಾದಿಗಳನ್ನು ಪೂರೈಸುತ್ತದೆ. ನಮ್ಮ ಇಂದಿನ ರೈತರು ಕೃಷಿ ಕ್ಷೇತ್ರದಲ್ಲಿ ಹಲವಾರು ತಾಂತ್ರಿಕ ಬದಲಾವಣೆಗಳನ್ನು ಅಳವಡಿಸಿರುವುದರಿಂದ ಹಾಗೂ ತಮಗೆ ಬೇಕಾಗುವ ಆಹಾರ ಧಾನ್ಯಗಳನ್ನು ಬೆಳೆದು ಆಹಾರದ ಸ್ವಾಲಂಬನೆಯನ್ನು ಸಾಧಿಸುತ್ತಾ ದಾಪುಗಾಲಿಡುತ್ತಿದ್ದಾರೆ. ಆದರೆ ಬಹುಮುಖ್ಯವಾದ ಸಲಹೆ ಎಂದರೆ ಜಾಮಿತಿಯ ಪ್ರಮಾಣದಲ್ಲಿ ಬೆಳೆಯುತ್ತಿರುವ ಜನಸಂಖ್ಯೆಯನ್ನು ಸಾರ್ವಜನಿಕರು ಹತೋಟಿಗೆ ತರುವುದನ್ನು ಮಾಡಿದರೆ ಮಾತ್ರ ಆಹಾರ ಧಾನ್ಯಗಳ ಕೊರತೆಯುಂಟಾಗುವ ಸಾಧ್ಯತೆಗಳಿರುವುದಿಲ್ಲ.

. ಗೃಹ ಕೈಗಾರಿಕೆ ಹಾಗೂ ಬೃಹತ್ ಕೈಗಾರಿಕೆಗಳ ಏಳ್ಗೆ: ಕೃಷಿಯ ಕೈಗಾರಿಕೆಗಳಿಗೆ ಮತ್ತು ಕಾರ್ಖಾನೆಗಳಿಗೆ ಅವಶ್ಯವಿರುವ ಕಚ್ಚಾ ಸರಕುಗಳನ್ನು ಪೂರೈಸಿ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಉದಾಹರಣೆಗೆ : ಹತ್ತಿ ಬಟ್ಟೆ ಕೈಗಾರಿಕೆಗೆ ಹತ್ತಿಯನ್ನು, ಕಬ್ಬನ್ನು ಸಕ್ಕರೆ ಕೈಗಾರಿಕೆಗಳಿಗೂ, ಗೋಣಿಚೀಲ ತಯಾರಿಸುವ ಕಾರ್ಖಾನೆಗಳಿಗೆ ಸೆಣಬನ್ನು, ಎಣ್ಣೆ ಕೈಗಾರಿಕೆಗೆ ಎಣ್ಣೆ ಬೀಜಗಳನ್ನು ಹಾಗೂ ಇನ್ನಿತರ ಕೃಷಿ ಆಧಾರಿತ ಪರಿಷ್ಕರಣೆ ಕಾರ್ಖಾನೆಗಳಿಗೂ ಕೃಷಿಯ ಅನೇಕ ಕಚ್ಚಾ ಸಾಮಗ್ರಿಗಳನ್ನು ಒದಗಿಸುತ್ತದೆ.

. ರಾಜ್ಯ ಹಾಗೂ ರಾಷ್ಟ್ರದ ವರಮಾನದ ಮೂಲ : ಕೃಷಿಯು ನಮ್ಮ ದೇಶದಲ್ಲಿ ರಾಷ್ಟ್ರಿಯ ವರಮಾನದ ಮೂಲವಾಗಿದೆ. ನಮ್ಮ ದೇಶದ ಒಟ್ಟು ವರಮಾನದಲ್ಲಿ ಕನಿಷ್ಟ ಒಂದು ಮೂರಂಶದಷ್ಟು ವರಮಾನವು ಕೃಷಿಯಿಂದಲೇ ಬರುತ್ತಿರುತ್ತದೆ. ಆದರೆ ಮುಂದುವರಿದ ರಾಷ್ಟ್ರಗಳಲ್ಲಿ ತಮ್ಮ ದೇಶದ ವರಮಾನಕ್ಕೆ ಕೃಷಿಯ ಕೊಡುಗೆ ಅತಿ ಕಡಿಮೆ ಇರುವುದನ್ನು ನಾವು ಗಮನಿಸಬೇಕಾಗುತ್ತದೆ. ಉದಾಹರಣೆಗೆ -ಅಮೇರಿಕದಲ್ಲಿ ಶೇಕಡ ೩ ರಷ್ಟು, ಇಂಗ್ಲೆಂಡಿನಲ್ಲಿ ಶೇಕಡ ೨ ರಷ್ಟು ಮಾತ್ರ ಇರುತ್ತದೆ. ಇದರಿಂದ ಬಹು ಬೇಗನೇ ಅಧಿಕ ಆದಾಯ ನೀಡುತ್ತಿರುವ ಕೈಗಾರಿಕೆ ಮತ್ತು ಸೇವಾವಲಯವನ್ನು ನಮ್ಮ ದೇಶದ ಜನರು ಕಡೆಗಣಿಸಿದ್ದಾರೆಂಬುದು ತಿಳಿದು ಬರುತ್ತದೆ.

. ನಿರುದ್ಯೋಗ ನಿರ್ವಹಣೆಗೆ ಮೂಲ : ಕೃಷಿಯು ನಮ್ಮ ದೇಶದ ಅದರಲ್ಲಿಯೂ ಗ್ರಾಮೀಣ ಭಾಗದ ಜನರಿಗೆ ವರ್ಷವಿಡೀ ಉದ್ಯೋಗವನ್ನು ಒದಗಿಸುತ್ತದೆ. ನಮ್ಮ ದೇಶದ ಸುಮಾರು ೭೦% ರಷ್ಟು ಜನರು ಒಕ್ಕಲುತನವನ್ನೇ ಅವಲಂಭಿಸಿದ್ದಾರೆ. ಮುಂದುವರಿದ ರಾಷ್ಟ್ರಗಳಿಗೆ ಇದರ ಮೇಲಿನ ಅವಲಂಬನೆಯು ತೀರ ಕಡಿಮೆಯಾಗಿರುತ್ತದೆ. ಉದಾಹರಣೆಗೆ ಇಂಗ್ಲೆಂಡ್ ನಲ್ಲಿ ಶೇಕಡ ೨%, ಅಮೆರಿಕದಲ್ಲಿ ಶೇಕಡ ೨% ಕೆನಡಾದಲ್ಲಿ ಶೇಕಡ ೫% ರಷ್ಟು, ಆಸ್ಟ್ರೇಲಿಯ ಮತ್ತು ಜಪಾನ್ ನಲ್ಲಿ ಅನುಕ್ರಮವಾಗಿ ಶೇಕಡ ೮ ಮತ್ತು ೧೨ ರಷ್ಟು ಜನರು ಮಾತ್ರ ಕೃಷಿಯ ಮೇಲೆ ಅವಲಂಬಿಸಿದ್ದಾರೆ. ಇಲ್ಲಿ ಅತ್ಯಂತ ಹೆಚ್ಚಿನ ಜನರು ತ್ವರಿತಗತಿಯಲ್ಲಿ ಆದಾಯ ತರುವ ಕೈಗಾರಿಕೆ ಮತ್ತು ಸೇವಾವಲಯಗಳಲ್ಲಿ ನಿರತರಾಗಿ ತಮ್ಮ ದೇಶದ ರಾಷ್ಟ್ರಾದಾಯಕ್ಕೆ ಅತ್ಯಂತ ಹೆಚ್ಚಿನದಾದ ವರಮಾನವನ್ನು ನೀಡುತ್ತಿರುವುದನ್ನು ಗಮನಿಸಬಹುದು. ನಮ್ಮ ದೇಶದ ಕೃಷಿಕರು ಅದರಲ್ಲೂ ಗ್ರಾಮೀಣ ಭಾಗದಲ್ಲಿನ ಕೃಷಿಕರು ತಮ್ಮ ವೃತ್ತಿಯ ಆಯ್ಕೆಯನ್ನು ಕೃಷಿಯಿಂದ ಕೈಗಾರಿಕೆ ಅಥವಾ ಸೇವಾ ವಲಯಗಳಿಗೆ ಬದಲಾಯಿಸಿಕೊಂಡರೆ ಗ್ರಾಮೀಣ ಅರ್ಥವ್ಯವಸ್ಥೆಯಲ್ಲಿ ಬದಲಾವಣೆ ತಂದು ಕೃಷಿಕರು ಮತ್ತು ಇಡೀ ರಾಷ್ಟ್ರದ ವ್ಯವಸ್ಥೆಯ ಬೆಳವಣಿಗೆಯ ದಿಕ್ಕನ್ನೆ ಬದಲಾಯಿಸಬಹುದಾಗಿದೆ. ಪ್ರಜ್ಞಾವಂತ ಕೃಷಿ ಕುಟುಂಬಗಳು ಇಂತಹ ಬದಲಾವಣೆಗೆ ಹಿಂದು-ಮುಂದು ನೋಡದೇ ಮುಂದಿನ ತಮ್ಮ ಮಕ್ಕಳನ್ನು ಕೃಷಿಯ ಚಟುವಟಿಕೆ ಬದಲು ಕೈಗಾರಿಕೆ ಅಥವಾ ಸೇವಾ ವಲಯಗಳಲ್ಲಿ ತೊಡಗಿಸುವ ಮಹತ್ವವಾದ ನಿರ್ಧಾರವನ್ನು ಕೈಗೊಳ್ಳಬೇಕಾಗಿದೆ. ಹಾಗಾದರೆ ಮಾತ್ರ ನಮ್ಮ ದೇಶದ ಅರ್ಥವ್ಯವಸ್ಥೆಯನ್ನು ಸುಲಭವಾಗಿ ಪುನರ್ ರೂಪಿಸಿ ಜನಾ ಜೀವನ ಮಟ್ಟದಲ್ಲಿ ಬದಲಾವಣೆ ತರಬಹುದು.

. ವಾಣೆಜ್ಯ ವ್ಯಾಪಾರದ ಮೂಲಕೇಂದ್ರ : ಕೃಷಿಯು ನಮ್ಮ ದೇಶದ ವಾಣಿಜ್ಯ ವ್ಯಾಪಾರದ ಪ್ರಮುಖ ಮೂಲವಾಗಿದೆ. ನಮ್ಮ ದೇಶದ ವಾಣಿಜ್ಯ ವ್ಯಾಪಾರದಲ್ಲಿ ಸುಮಾರು ಅರ್ಧದಷ್ಟು ಸರಕುಗಳು ಕೃಷಿ ಅಥವಾ ಕೃಷಿ ಆಧಾರಿತ ವಸ್ತುಗಳಾಗಿವೆ. ಉದಾಹರಣೆಗೆ ಚಹಾ, ಕಾಫಿ, ತಂಬಾಕು, ಎಣ್ಣೆ ಬೀಜಗಳು, ಸೆಣಬು, ಸಕ್ಕರೆ, ಗೋಡಂಬಿ, ಸಾಂಬಾರು ಪದಾರ್ಥಗಳು ಮುಂತಾದವುಗಳನ್ನು ಹೆಸರಿಸಬಹುದು. ಇಂದು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ವಾಣಿಜ್ಯ ಬೆಳೆಗಳನ್ನು ಬೆಳೆದು ವಿದೇಶಗಳಿಗೆ ರಪ್ತು ಮಾಡಿ ವಿದೇಶಿ ವಿನಿಮಯವನ್ನು ಗಳಿಸುತ್ತಿದ್ದೇವೆ. ಇದಕ್ಕೆ ಪ್ರತಿಯಾಗಿ ವಿದೇಶಗಳಿಂದ ನಮ್ಮ ದೇಶದ ಆರ್ಥಿಕ ಅಭಿವೃದ್ಧಿಗೆ ಬೇಕಾಗುವ ಯಂತ್ರೋಪಕರಣಗಳು, ಕೈಗಾರಿಕೆಯ ಬಿಡಿಭಾಗಗಳು ಹಾಗೂ ತಾಂತ್ರಿಕ ಪರಿಣಿತರನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ.

. ರಾಷ್ಟ್ರೀಯ ಸೇವೆಗೆ ಆಧಾರ: ವ್ಯವಸಾಯವು ನಮ್ಮ ದೇಶದ ಅರ್ಥ ವ್ಯವಸ್ಥೆಯ ತೃತೀಯ ವಲಯ ಅಥವಾ ಸೇವಾವಲಯದಲ್ಲಿ ಬರುವ ವ್ಯಾಪಾರ, ವಾಣಿಜ್ಯ, ಸಾರಿಗೆ, ಸಂಪರ್ಕ, ಬ್ಯಾಂಕು, ವಿಮಾ ಸಂಸ್ಥೆಗಳ ಸರ್ವತೋಮುಖ ಅಭಿವೃದ್ಧಿಗೆ ಆಧಾರಸ್ತಂಭವಾಗಿದೆ. ನಮ್ಮ ದೇಶದ ಸಮೃದ್ಧಿಯು ಕೃಷಿಯ ಅಭಿವೃದ್ಧಿಯಲ್ಲಿಯೇ ಇರುತ್ತದೆ. ಕೃಷಿಯು ಕುಂಠಿತವಾದರೆ ನಮ್ಮ ದೇಶದ ಅರ್ಥವ್ಯವಸ್ಥೆಯೇ ಕುಂಟಿತಗೊಳ್ಳುತ್ತದೆ. ಸೇವಾವಲಯವೂ ಕುಂಠಿತವಾಗುವುದರಲ್ಲಿ ಆಶ್ಚರ್ಯವೆನ್ನಿಸದಿರದು.

. ಸರ್ಕಾರದ ಆದಾಯದ ಮೂಲ : ಕೃಷಿಯು ನಮ್ಮ ದೇಶದ ಬಹುತೇಕ ಜನರ ಮುಖ್ಯ ಉದ್ಯೋಗವಾಗಿರುವುದರಿಂದ ನಮ್ಮ ದೇಶದ ಒಂದು ಮೂರಂಶಕ್ಕಿಂತ ಅಧಿಕ ರಾಷ್ಟ್ರೀಯ ಆದಾಯವನ್ನು ಇದರಿಂದಲೇ ಬರುತ್ತಿದೆ. ಕೃಷಿಕರು ಸಮೃದ್ಧಿಯಿಂದಿದ್ದರೆ, ಸರ್ಕಾರಕ್ಕೆ ಕೊಡಬೇಕಾಗುವ ಭೂಕಂದಾಯ, ಶುಲ್ಕ, ದಂಡ, ಕೃಷಿ ಆಧಾರಿತ ಉದ್ದಿಮೆಗಳಿಂದ ಬರಬೇಕಾಗುವ ಅಬಕಾರಿ ಸುಂಕ, ಮಾರಾಟ ತೆರಿಗೆ, ಆಯಾತ, ನಿರ್ಯಾತಸುಂಕ ಇತ್ಯಾದಿಗಳು ರಾಷ್ಟ್ರೀಯ ಬೊಕ್ಕಸಕ್ಕೆ ಬರುವುದರಿಂದ ಒಕ್ಕಲುತನ ಸರ್ಕಾರಕ್ಕೆ ಒಂದು ಪ್ರಮುಖ ಆದಾಯದ ಮೂಲವಾಗಿ ರೂಪಗೊಂಡಿದೆ ಎನ್ನಬಹುದು. ಒಟ್ಟಾರೆ ಕೃಷಿಯ ಮಹತ್ವವನ್ನು ಈ ಕೆಳಗಿನ ಚಿತ್ರದಲ್ಲಿ ನೋಡಬಹುದಾಗಿದೆ.

ವ್ಯವಸಾಯ*[2]

ಆಹಾರ

ರಾಷ್ಟ್ರೀಯ ಆದಾಯ

ಕೈಗಾರಿಕೆಯ ಪ್ರಗತಿ

ವಿದೇಶಿ ವಿನಿಮಯದಲ್ಲಿ ಪ್ರಗತಿ

ಉತ್ತಮ ಜೀವನಾಧಾರ

ಉದ್ಯೋಗ

ಉತ್ತಮ ವ್ಯಾಪಾರ ಮತ್ತು ವಾಣಿಜ್ಯ

ಗ್ರಾಮೀಣಾಭಿವೃದ್ಧಿ

ಭಾರತದ ಕೃಷಿಯಲ್ಲಿನ ಸಮಸ್ಯೆಗಳು

ನಮ್ಮ ದೇಶ ಹಾಗೂ ರಾಜ್ಯಗಳು ಏನೆಲ್ಲಾ ಆಧುನಿಕ ತಂತ್ರಜ್ಞಾನದಲ್ಲಿ ಅಭಿವೃದ್ಧಿ ಹೊಂದುತ್ತಿದ್ದರೂ ಸಹ ಈ ದೇಶದ ಜನರ ಬೆನ್ನೆಲುಬಾಗಿರುವ ಕೃಷಿಯಲ್ಲಿ ಅಭಿವೃದ್ಧಿ ಸಾಧಿಸಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ನೂರಾರು ಕಾರಣಗಳನ್ನು ನೀಡಬಹುದು. ಬಹುತೇಕ ಕೃಷಿಕರೂ ಸಹ ಆರ್ಥಿಕವಾಗಿ ಹಿಂದುಳಿದಿದ್ದಾರೆ. ಇದರಲ್ಲಿ ದಲಿತರ ಪಾಲು ನಾಲ್ಕನೇ ಮೂರರಷ್ಟು ಎನ್ನಬಹುದು. ಇದಕ್ಕೆ ನಮ್ಮ ದೇಶದ ಕೃಷಿ ವಲಯದಲ್ಲಿರುವ ಸಮಸ್ಯೆಗಳೇ ಮುಖ್ಯ ಕಾರಣಗಳಾಗಿವೆ. ನಮ್ಮ ಕೃಷಿ ಸಮಸ್ಯೆಗಳನ್ನು ಸ್ವಾತಂತ್ರ್ಯಪೂರ್ವ ಹಾಗೂ ಸ್ವಾತಂತ್ರ್ಯನಂತರ ಸಮಸ್ಯೆಗಳೆಂದು ವಿಂಗಡಿಸಿಕೊಂಡು ಅಧ್ಯಯನ ಮಾಡಬಹುದು. ಅವುಗಳಲ್ಲಿ ಮುಖ್ಯವಾದವುಗಳೆಂದರೆ.

. ಅಂದಿನ ಕೃಷಿ ಸಮಸ್ಯೆಗಳು (ಸ್ವಾತಂತ್ರ್ಯ ಪೂರ್ವದ ಕಾಲ): ಕೃಷಿಗಾರಿಕೆ ಎಂದಾಕ್ಷಣ ಅದನ್ನು ನಾವು ಹಳ್ಳಿಗಳಿಗೆ ತಕ್ಷಣ ಹೊಲಿಸುವುದು ಸಹಜ. ಜನರ ಇರುವಿಕೆಯನ್ನು ಪ್ರಮುಖವಾಗಿ ಎರಡು ವಿಧವಾಗಿ ವಿಂಗಡಿಸಬಹುದು. ಹಳ್ಳಿಗಳಲ್ಲಿ ವಾಸಿಸುವವರನ್ನು ಗ್ರಾಮೀಣವಾಸಿಗಳೆಂದು ಮತ್ತು ಪಟ್ಟಣಗಳಲ್ಲಿ ವಾಸಿಸುವವರನ್ನು ನಗರವಾಸಿಗಳೆಂದು ಕರೆಯಲಾಗುತ್ತದೆ. ಹಾಗಾದರೆ ಹಳ್ಳಿಯ ಜನರು ಅಥವಾ ಗ್ರಾಮೀಣ ಜನರು ಎಂದರೆ ಯಾರು? ಎಂಬ ಪ್ರಶ್ನೆ ತಟ್ಟನೆ ಮೂಡುತ್ತದೆ. ಆಧುನಿಕ ಜ್ಞಾನ, ವೈಜಾನಿಕ ಮನೋಭಾವ, ವಿಶೇಷ ದೃಷ್ಟಿಕೋನ, ಸಾಮಾನ್ಯ ಜೀವನದ ಸೌಕರ್ಯಗಳಲ್ಲಿದೆ. ಪ್ರಗತಿ ಇಲ್ಲದ, ಉದಾತ್ತ ಜೀವನ ಸಾಗಿಸುವವರೆಲ್ಲರೂ ಹಳ್ಳಿಗರೆ. ಹಳ್ಳಿಗಳಲ್ಲಿ ಇಂತಹ ಜನರೇ ವಿಶೇಷವಾಗಿರುವುದರಿಂದ ಹಳ್ಳಿಗರೆಂಬ ಹೆಸರು ಕೊಡಲಾಗಿದೆ. ಒಕ್ಕಲುತನ ಮತ್ತು ಅದರ ಸಹಾಯಕ, ಪೂರಕ ವೃತ್ತಿಗಳನ್ನು ಅವಲಂಬಿಸಿದ ಜನ ಹೆಚ್ಚಾಗಿ ಹಳ್ಳಿಗಳಲ್ಲಿಯೇ ವಾಸವಾಗಿದ್ದು ಹೊರಗಿನ ಜಗತ್ತಿನ ಗಾಳಿ, ಬೆಳಕಿಗೆ ದೂರವಾಗಿ ನರಕ ಜೀವನ ಸಾಗಿಸುತ್ತಿರುವವರನ್ನು ಹಳ್ಳಿಗರೆಂದು ಪರಿಗಣಿಸಲಾಗಿದೆ. ಹೀಗೆ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿರುವ ಬಹುತೇಕ ನಮ್ಮ ಹಳ್ಳಿಗಳಲ್ಲಿ ಒಕ್ಕಲುತನದ ಜನರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅವುಗಳನ್ನು ಅಧ್ಯಯನದ ದೃಷ್ಟಿಯಿಂದ ಎರಡು ರೀತಿಯಾಗಿ ವಿಂಗಡಿಸಬಹುದು. ಒಂದನೆಯದಾಗಿ ಪ್ರಾಚೀನ ಭಾರತದ ಕೃಷಿ ಹಾಗೂ ಕೃಷಿಯ ಸಮಸ್ಯೆಗಳು ಮತ್ತು ಎರಡನೆಯದಾಗಿ ಆಧುನಿಕ ಕೃಷಿ ಹಾಗೂ ಕೃಷಿಯ ಸಮಸ್ಯೆಗಳು.

ಪ್ರಾಚೀನ ಕಾಲದ ಕೃಷಿಯ ಸಮಸ್ಯೆಗಳು

ಅಂದಿನ ಕೃಷಿಯನ್ನು ನಾವು ಸಾಮಾನ್ಯವಾಗಿ (ಸ್ವಾತಂತ್ರ್ಯ ಪೂರ್ವದಲ್ಲಿ) ಬ್ರಿಟೀಶ್ ರವರ ಅಥವಾ ವಸಾಹತು ಕಾಲದಲ್ಲಿನ ಕೃಷಿ ಪದ್ಧತಿ ಎಂದು ಕರೆದುಕೊಳ್ಳುತ್ತೇವೆ. ಭಾರತದ ಪ್ರಾಚೀನ ಇತಿಹಾಸದ ಪುಟಗಳಲ್ಲಿ, ವೇದ, ಪುರಾಣ, ಮಹಾಕಾವ್ಯಗಳಲ್ಲಿ ಭಾರತವು ಚಿನ್ನದ ಹೊಗೆಯಾಡುವ ರಾಷ್ಟ್ರವೆಂದರೂ ಸಹ (ಅಂದು ಭಾರತದ ಕೃಷಿಯಲ್ಲಿ ಸಮಸ್ಯೆಗಳಿರಲಿಲ್ಲ ಎಂದೇನಲ್ಲ) ಸುಮಾರು ೨೦೦ ಅಥವಾ ೩೦೦ ವರ್ಷಗಳಲ್ಲಿ ವಸಹಾತುಶಾಹಿ ಆಡಳಿತದ ಅವಧಿಯಲ್ಲಿ ಹತ್ತು ಹಲವಾರು ಸಮಸ್ಯೆಗಳನ್ನು ಎದುರಿಸುವಂತಾಯಿತು.

ಅವುಗಳೆಂದರೆ

೧. ಸಂಪತ್ತಿನ ಲೂಟಿ

೨. ಅಭಿವೃದ್ದಿಗೆ ಪ್ರಚೋದನೆ ಇಲ್ಲದಿರುವಿಕೆ.

೩. ಭೂ ಒಡೆಯರಿಗೆ ಹೆಚ್ಚಿನ ಪ್ರಾಶಸ್ರ್ಯ.

೪. ಹೆಚ್ಚಿನ ತೆರಿಗೆ

೫. ಬೆಳೆಗಳ ಬದಲಾವಣೆ ಇಲ್ಲ.

೬. ಬಡತನ, ಅಜ್ಞಾನ, ಮೂಡನಂಬಿಕೆ ಇತ್ಯಾದಿ.

೧೯೪೭ಕ್ಕೂ ಹಿಂದೇ ವಿದೇಶಿಯವರು ನಮ್ಮ ರಾಷ್ಟ್ರವನ್ನು ಆಳ್ವಿಕೆ ಮಾಡುತ್ತಿದ್ದರಿಂದ ಅವರು ತಮ್ಮ ವೈಯಕ್ತಿಕ ಲಾಭಕ್ಕಾಗಿ ಮಾತ್ರ ಕೃಷಿಯನ್ನು ಉಪಯೋಗಿಸಿಕೊಂಡರೆನ್ನಬಹುದು. ನಮ್ಮನಾಳುತ್ತಿದ್ದಂತಹ ಬ್ರಿಟಿಶರು ಭಾರತದಿಂದ ಸಾಕಷ್ಟು ಸಂಪತ್ತನ್ನು ದೋಚಿಕೊಂಡು ಹೋದರೆನ್ನಬಹುದು. ಇದು ಅವರ ಪ್ರಮುಖ ಉದ್ದೇಶವಾಗಿತ್ತೆಂದೇ ಹೇಳಬಹುದು. ಇದು ಭಾರತದ ಕೃಷಿಯ ಮೇಲೆ ಅಗಾಧವಾದ ಪರಿಣಾಮವನ್ನು ಬೀರಿತೆನ್ನಬಹುದು. ಪ್ರಮುಖವಾಗಿ ರೈತರು ಬೆಳೆದಂತಹ ವಸ್ತುಗಳು ಲೇವಿ (Levy) ಮೂಲಕ ಬ್ರಿಟಿಶರಿಂದ ಕಿತ್ತುಕೊಳ್ಳಲ್ಪಡುತ್ತಿದ್ದವು. ನಾವು ಉತ್ತಿ, ಬಿತ್ತಿ ಬೆಳೆದ ಕಾಳಿನ ಮೇಲೆ ನಮಗೆ ಸಂಪೂರ್ಣ ಸ್ವಾತಂತ್ರ್ಯವನ್ನು ಅವರು ಬಿಟ್ಟಿಕೊಡುತ್ತಿರಲಿಲ್ಲ. ಇದರಿಂದಾಗಿ ಭಾರತದ ಒಕ್ಕಲಿಗರ ಆಶಾ ಮನೋಭಾವನೆಯ ಮೇಲೆ ಅಪಾರವಾದ ಪ್ರತಿ ಕೂಲದ ವಾತಾವರಣ ಉಂಟಾಗುತ್ತಿತ್ತು ಎನ್ನಬಹುದು.

ಇಷ್ಟೆ ಅಲ್ಲದೆ ಅಂದಿನ ಕೃಷಿಯು ಪ್ರಮುಖವಾಗಿ ಮಳೆಯ ನೀರನ್ನೇ ಅವಲಂಬಿತವಾಗಿರುತ್ತಿತ್ತು. ಆಧುನಿಕ ಹಾಗೂ ವೈಜ್ಞಾನಿಕ ಸಾಧನೆಗಳ ಬಳಕೆಯ ಪರಿಚಯವೇ ಇಲ್ಲದಾಗಿತ್ತು. ಒಂದರ್ಥದಲ್ಲಿ ಇದು ಬ್ರಿಟಿಶರಿಗೆ ಬೇಡವಾಗಿತ್ತನ್ನಬಹುದು. ಯಾಕೆಂದರೆ ಅವರು ಭಾರತವನ್ನು ಯಾವಾಗಲೂ ತಮ್ಮ ದೇಶದಲ್ಲಿ ತಯಾರಾದ ಸಿದ್ಧ ವಸ್ತುಗಳ ಮಾರುಕಟ್ಟೆಯನ್ನಾಗಿಸಿ ಕೊಳ್ಳಬೇಕಾಗಿತ್ತೇ ವಿನಹ ಅವರನ್ನು ಸ್ವಾವಲಂಬಿಗಳನ್ನಾಗಿ ನಿರ್ಮಿಸುವುದು ಬೇಡವಾಗಿತ್ತು. ಭಾರತದಲ್ಲಿದ್ದಂತಹ ಉಳಿಗಮಾನ್ಯ ವ್ಯವಸ್ಥೆ ಅಥವಾ ಭೂಮಿಯ ಒಡೆತನ ಬ್ರಿಟಿಶರಿಗೆ ವರದಾನವಾಗಿತ್ತು. ಇದರಿಂದ ಅವರಿಗೆ ಕೇಂದ್ರೀಕೃತ ರೂಪದಲ್ಲಿ ಕಂದಾಯದ ವಸೂಲಿ ಬಹಳ ಸುಲಭವಾಗುತ್ತಿತ್ತು. ಕಂದಾಯ ವಸೂಲಿಗೆ ಕೆಲ ಭೂ ಮಾಲಿಕರನ್ನೇ ನೇಮಿಸಿ ಅವರಿಗೆ ವಿಶೇಷ ಸವಲತ್ತು ಮತ್ತು ಮಾನ್ಯತೆಯನ್ನು ಕೊಡಲಾಗುತ್ತಿತ್ತು. ಇವರು ಹಳ್ಳಿ ಹಾಗೂ ಗ್ರಾಮಗಳಲ್ಲಿ ಸರ್ವಾಧಿಕಾರಿಗಳಾಗಿ ತಮಗಿಷ್ಟ ಬಂದಂತೆ ಕಾನೂನನ್ನು ಸೃಷ್ಟಿಸಿಕೊಂಡು ದಬ್ಬಾಳಿಕೆಯಿಂದ ಮೆರೆಯುತ್ತಿದ್ದರು. ಇವರ ದರ್ಪದಲ್ಲಿ ಅಸ್ಪೃಶ್ಯರು ಹಾಗೂ ದಲಿತರ ಸ್ಥಿತಿಯ ಶೋಚನೀಯವಾಗಿತ್ತೆಂದು ಪ್ರತ್ಯೇಕವಾಗಿ ಹೇಳುವುದು ಬೇಡವೆನಿಸುತ್ತದೆ. ಇವರು ತಮ್ಮತಮ್ಮ ಅಧಿಕಾರದ ಆಸೆ ಆಮಿಷಗಳಿಗೆ ಬ್ರಿಟೀಶರಿಗಿಂತಲೂ ಕ್ರೂರವಾಗಿ ತಮ್ಮ ಜನತೆಯನ್ನೇ ಸುಲಿಗೆ ಮಾಡುತ್ತಿದ್ದರು. ರೈತರು ಬೆಳೆದ ಆಹಾರದ ಮೇಲೆ ಪೂರ್ತಿ ಹಕ್ಕು ಇರುತ್ತಿರಲಿಲ್ಲ. ಮೊದಲನೆ ಪಾಲುಗಾರ ಬ್ರಿಟೀಶ್ ಅಧಿಕಾರಿಗಳಾಗುತ್ತಿದ್ದರು. ಇದನ್ನೇ ನಾವು ಸ್ವಾತಂತ್ರ್ಯ ನಂತರ ಸ್ವಲ್ಪ ವರ್ಷ ಲೇವಿ ಎಂದು ಕರೆಯುತ್ತಿದ್ದದ್ದು. ಭಾರತೀಯ ಲೇವಿ ಪದ್ಧತಿಯ ಸ್ವಲ್ಪವಾದರೂ ಹಣ ಕೊಡುತ್ತಿತ್ತು. ಆದರೆ ಬ್ರಿಟಿಶರು ಲೇವಿಯನ್ನು ಕಂದಾಯದ ರೂಪದಲ್ಲಿ ಒಂದೇ ಸಮನೆ ಹೀರುತ್ತಿದ್ದರು. ಕೆಲವೊಮ್ಮೆ ಲೇವಿಯು ರೈತನಿಗೆ ಅತೀವ ನೋವು ಉಂಟು ಮಾಡುತ್ತಿತ್ತು. (ಮಳೆ ಸರಿಯಾಗಿ ಸಕಾಲದಲ್ಲಿ ಬೀಳದೆ ಬೆಳೆಯು ನಿರೀಕ್ಷಿಸಿದಷ್ಟು ಸಿಗದಿದ್ದಾಗ ಸಿಕ್ಕ ಬೆಳೆಯನ್ನೇ ಲೇವಿ ನೀಡಿ ವರ್ಷಪೂರ್ತಿ ಗೌಡರ ಮನೆಯಲ್ಲಿ ಜೀತದಾಳಾಗಿ ಕೆಲಸ ಮಾಡಿರುವ ನಿದರ್ಶನಗಳು ನೂರಾರು ಉದಾಹರಿಸಬಹುದು).

ಮೇಲಿನ ಎಲ್ಲ ಕಾರಣಗಳು ಬ್ರಿಟೀಶ್ ಆಳ್ವಿಕೆಯಿಂದಾದರೆ ಇದರೆ ಜೊತೆಗೆ ನೈಸರ್ಗಿಕ ಅನಾನುಕೂಲತೆಗಳಾದ ಬರಗಾಲ, ಕ್ಷಾಮ, ರೋಗರುಜಿನ, ಬೆಳೆನಾಶಕ, ಕೀಟಗಳ ಅಟ್ಟಹಾಸ, ಅತಿವೃಷ್ಟಿಯಿಂದ ಬೆಳೆಗಳ ಹಾನಿ ಮುಂತಾದವುಗಳು ಕೂಡ ಗ್ರಾಮೀಣ ಪ್ರದೇಶದ ಕೃಷಿಯ ಸಮಸ್ಯೆಗಳಾಗಿದ್ದವು. ಇವು ಇಂದೇನೊ ಮುಕ್ತವಾಗಿಲ್ಲ. ಏಕೆಂದರೆ ಕಾಲ ಆಧುನಿಕತೆಯ ಕಡೆಗೆ ಹೋಗುತ್ತಿದ್ದಂತೆ ಆಧುನಿಕವಾದಂತಹ ಸಮಸ್ಯೆಗಳು ತನ್ನದೆಯಾದ ರೀತಿಯಲ್ಲಿ ಕಂಗೊಳಿಸಿ ನಾಟ್ಯವಾಡುತ್ತಿವೆ. ಈ ದೃಷ್ಟಿಯಿಂದ ನಾವು ಆಧುನಿಕ ಕೃಷಿಯ ಸಮಸ್ಯೆಗಳನ್ನು ಗಮನಿಸಬಹುದು.

ಸಾಮಾನ್ಯವಾಗಿ ನಾವು ಆಧುನಿಕ ಗ್ರಾಮೀಣ ಪ್ರದೇಶದಲ್ಲಿನ ಕೃಷಿಯ ಸಮಸ್ಯೆಗಳನ್ನು ಸ್ವಾತಂತ್ರ್ಯನಂತರದ ಸಮಸ್ಯೆಗಳೆಂದು ಭಾವಿಸುತ್ತೇವೆ. ದೇಶಕ್ಕೆ ಸ್ವಾತಂತ್ರ್ಯ ಬಂದು ಐದುವರೆ ದಶಕಗಳು ದಾಟುತ್ತಿದ್ದರೂಸಹ ನಾವು ನಮ್ಮ ಗ್ರಾಮೀಣ ಪ್ರದೇಶದಲ್ಲಿನ ಕೃಷಿಯ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಒಂದಲ್ಲ ಒಂದು ದೃಷ್ಟಿಯಿಂದ ಸಂಪೂರ್ಣವಾಗಿ ವಿಫಲರಾಗಿದ್ದೇವೆ. ಪ್ರಮುಖವಾಗಿ ಇಂದಿನ ಕೃಷಿಲ್ಯ ಸಮಸ್ಯೆಯನ್ನು ನಾವು ನೈಸರ್ಗಿಕ, ಆರ್ಥಿಕ ಮತ್ತು ಸಾಮಾಜಿಕ ಕಾರಣಗಳನ್ನು ಕೊಟ್ಟು ಚರ್ಚಿಸಬಹುದು.

. ನೈಸರ್ಗಿಕ ಕಾರಣಗಳು

ಮಳೆಯ ಅನಿಶ್ಚಿತತೆ

ಹಿಮಪಾತ ಮತ್ತು ಆಣೆಕಲ್ಲು            ಮಳೆ

ಕ್ರಿಮಿಕೀಟಗಳು

ವನ್ಯಮೃಗಗಳಿಂದ
ಬೆಳೆ ನಾಶ

ಅರಣ್ಯ ನಾಶ

ನಮಗೆಲ್ಲ ತಿಳಿದಿರುವ ಹಾಗೆ ಮತ್ತು ಭಾರತದ ಚರಿತ್ರೆಯುದ್ದಕ್ಕೂ ಗಮನಿಸುವುದು ನಮ್ಮ ಕೃಷಿಯು ಹೆಚ್ಚಾಗಿ ನಿಸರ್ಗವನ್ನೆ ಅವಲಂಬಿಸಿದೆ ಎಂಬುವುದನ್ನು. ಏಕೆಂದರೆ ಭಾರತದಲ್ಲಿ ಎಷ್ಟೇ ಜೀವ ನದಿಗಳಿದ್ದರೂ ಅವು ತುಂಬಿ ಹರಿಯಬೇಕಾದರೆ ಮಳೆಯನ್ನೇ ಅವಲಂಬಿಸಿದೆ. ದಕ್ಷಿಣ ಭಾರತ ನದಿಗಳು ಮಳೆಯನ್ನೇ ನಂಬಿಕೊಂಡು ಹರಿಯುತ್ತಿವೆ. ಉತ್ತರ ಭಾರತದ ನದಿಗಳು ಕೆಲವು ಕಾರಣಗಳಿಂದ ಇದರಿಂದ ವಿನಾಯಿತಿ ಪಡೆಯಬಹುದು. ಉತ್ತರ ಭಾರತದ ನದಿಗಳು ಮಳೆಗಾಲದಲ್ಲಿ ಮಳೆಯಿಂದಲೂ, ಬೇಸಿಗೆಯ ಕಾಲದಲ್ಲಿ ಹಿಮಾಲಯದಿಂದ ಬಿಸಿಲಿಗೆ ಕರಗುವ ಮಂಜಿನಿಂದಲೂ ಸಾಮಾನ್ಯವಾಗಿ ವರ್ಷಪೂರ್ತಿ ತುಂಬಿ ಹರಿಯುತ್ತವೆ. ಆದರೆ ಒಟ್ಟಾರೆ ಭಾರತದ ಕೃಷಿಯ ಮಳೆಯನ್ನೆ ಮುಖ್ಯವಾಗಿ ಅವಲಂಬಿಸಿದೆ. ಭಾರತದಲ್ಲಿ ಬೀಳುವ ಮಳೆಯು ಪ್ರಮುಖವಾಗಿ ಅನಿಶ್ಚಿತತೆ ಮತ್ತು ಅಕಾಲಿಕ ರೀತಿಯ ಮುಖ್ಯ ಲಕ್ಷಣಗಳನ್ನು ಹೊಂದಿವೆ. ಭಾರತದಲ್ಲಿ ಸಾಮಾನ್ಯವಾಗಿ ಜೂನ್ ನಿಂದ ಸೆಪ್ಟೆಂಬರ್ ವರೆಗೆ ಅಂದರೆ ವರ್ಷದ ನಾಲ್ಕು ತಿಂಗಳು ಮಾತ್ರ ಮಳೆ ಬೀಳುತ್ತದೆ. ಉಳಿದ ತಿಂಗಳು ಮಳೆ ಇರುವುದಿಲ್ಲ. ಇದಕ್ಕಾಗಿ ನದಿಗಳಿಗೆ ಅಡ್ಡಲಾಗಿ ಅಣೆಕಟ್ಟೆಗಳನ್ನು ನಿರ್ಮಿಸಿ ಕೃಷಿಗೆ ಅನುಕೂಲವಾಗುವ ರೀತಿಯಲ್ಲಿ ನೀರನ್ನು ಉಪಯೋಗಿಸಿಕೊಳ್ಳಲಾಗುತ್ತಿದೆ. ಇದೂ ತೃಪ್ತಿಕರವಾಗಿಲ್ಲ. ಎಷ್ಟೊ ಪ್ರದೇಶದಲ್ಲಿ ನೀರು ಹರಿದು ಸಮುದ್ರದ ಪಾಲಾಗುತ್ತಿದೆ. ಅಷ್ಟೆ ಅಲ್ಲ ಕೆಲವು ಸಲ ಭೂಮಿಯ ಮೇಲ್ಗಡೆ ಇರುವಂತಹ ಫಲವತ್ತಾದ ಅಂಶವನ್ನು ರಭಸದ ಮಳೆಯು ಹಾಗೂ ನದಿಯ ಪ್ರವಾಹವು ಹಾಳು ಮಾಡುವುದುಂಟು. ಹಾಗೆಯೇ ಒಮ್ಮೊಮ್ಮೆ ಮಳೆ ಬಾರದೆ ಕ್ಷಾಮ ಸಂಭವಿಸಿ ಬೆಳೆಗಳು ನಾಶವಾಗಬಹುದು ಅಥವಾ ಸುಟ್ಟು ಹೋಗಬಹುದು. ಒಟ್ಟಾರೆ ಗಮನಿಸುವುದಾದರೆ ಇಂದು ನಾವು ಏನೆಲ್ಲಾ ಆಧುನಿಕತೆಯಲ್ಲಿ ಮುಂಚೂಣಿಯಲ್ಲಿದ್ದರೂ ಸಹ ನಮ್ಮ ಕೃಷಿ ಪದ್ಧತಿ ಮಾತ್ರ ಅನಿಶ್ಚಿತ ವಾತಾವರಣದಿಂದ ಕೂಡಿದೆ. ಇದಕ್ಕಾಗಿಯೇ ಹಿಂದಿನಿಂದ ಇಂದಿನವರೆವಿಗೂ ನಾವು “ಭಾರತದ ಕೃಷಿಯು ಮಳೆಯೊಡನೆ ಆಡುವ ಜೂಜಾಟ” ಎಂದು ಕರೆದುಕೊಂಡು ಬಂದಿರುವುದು. ಕೆಲವು ಸಮಯದಲ್ಲಿ ಮಳೆಯು ತನ್ನ ಉಗ್ರ ನರ್ತನವನ್ನು ಪ್ರದರ್ಶಿಸಿ ಬೆಳೆದ ಬೆಳೆಯನ್ನು ನಾಶ ಮಾಡುವುದುಂಟು. ಇದಕ್ಕೆ ಹೆಚ್ಚಾಗಿ ತೋಟಗಾರಿಕೆಯ ಬೆಳೆಗಳಾಗಿರುವಂತಹ ಕಾಫಿ, ಟೀ, ಏಲಕ್ಕಿ, ಹಣ್ಣು ಹಂಪಲು, ತರಕಾರಿ ಗಳು ಹೆಚ್ಚಾಗಿ ಬಲಿಯಾಗುತ್ತವೆನ್ನಬಹುದು.

ಸಾಮಾನ್ಯವಾಗಿ ನಾವು ಇಂದಿಗೂ ನಮ್ಮ ದಿನನಿತ್ಯದ ಸುದ್ದಿಪತ್ರಿಕೆಗಳನ್ನು ನೋಡಿದರೆ ಆನೆಗಳಿಂದ ಬೆಳೆನಾಶ, ಕಾಡುಹಂದಿ, ಇಲಿ ಹೆಗ್ಗಣಗಳಿಂದ ಬೆಳೆ ನಾಶವೆಂಬ ಸುದ್ದಿಯನ್ನು ಕಾಣುತ್ತೇವೆ. ಅದಲ್ಲದೆ ಭಾರತದ ಆಭಿವೃದ್ಧಿಯು ರಾಷ್ಟ್ರದ ಬೃಹತ್ ಪ್ರಮಾಣದ ಬೆಳೆಗಳ ನಾಶ. ಇಲಿ ಮತ್ತು ಹೆಗ್ಗಣಗಳಿಂದಲೇ ನಡೆಯುತ್ತಿದೆ ಎಂದು ಸಮೀಕ್ಷೆಯೊಂದು ತಿಳಿಸುತ್ತದೆ. ಇದರಿಂದಾಗಿ ಕೃಷಿಯ ಉತ್ಪಾದನೆಯು ಕಡಿಮೆ ಆದಾಯವನ್ನು ಗಳಿಸುತ್ತದೆ ಎನ್ನಬಹುದು. ಅಷ್ಟೆ ಅಲ್ಲದೆ ಇಂದಿನ ನಮ್ಮಭಾರತ ದೇಶದ ವಿಸ್ತಾರಕ್ಕೆ ತಕ್ಕಂತೆ ಕನಿಷ್ಟ ಶೇಕಡಾ ೩೩% ರಷ್ಟು ಭೂ ಪ್ರದೇಶ ಅರಣ್ಯಗಳಿಂದ ಕೂಡಿರಬೇಕಾಗಿತ್ತು. ಆದರೆ ನಾವು ಇಂದು ಬೃಹತ್ ಕೈಗಾಗಿಕೆಗಳ ಸ್ಥಾಪನೆಗಾಗಿ, ವಸತಿ ಮತ್ತು ಬೃಹತ್ ನೀರಾವಾರಿ ಯೋಜನೆಗಳಿಗಾಗಿ ಬಹುತೇಕ ಅರಣ್ಯಗಳನ್ನುಕಡಿದು ಬಯಲು ಪ್ರದೇಶ ಮಾಡುತ್ತಿದ್ದೇವೆ. ಖನಿಜ ಸಂಪತ್ತಿನ ಬಳಕೆಗಾಗಿ ಅರಣ್ಯ ಸಂಪತ್ತನ್ನು ನಮ್ಮ ಕೈತಪ್ಪಿಸಿಕೊಳ್ಳುತ್ತಿದ್ದೇವೆ. ಇದು ಹೀಗೆ ವುಂದುವರೆದರೆ ನಮ್ಮಮುಂದಿನ ಪೀಳಿಗೆಗೆ ನಾವು ದ್ರೋಹ ಮಾಡಿದಂತೆಯೇ ಸರಿ.

. ಆರ್ಥಿಕ ಮತ್ತು ತಾಂತ್ರಿಕ ಕಾರಣಗಳು

ಸಣ್ಣ ಮತ್ತು ಹರಿದು ಹಂಚಿದ ಭೂ ಹಿಡುವಳಿಗಳೂ

ನೀರಾವರಿ ಸೌಲಭ್ಯದ ಕೊರತೆ

ಹಣದ ಕೊರತೆ

ಗ್ರಾಮೀಣ ಋಣ ಭಾರ

ಪುರಾತನ ಮತ್ತು ಅವೈಜ್ಞಾನಿಕ ಒಕ್ಕಲುತನ

ಕೃಷಿ ಶಿಕ್ಷಣದ ಅಭಾವ

ಜೀವ ಪದ್ಧತಿ

ಕಂದಾಯ ಮತ್ತು ಸಾಲದ ಭಾರ

ಉತ್ತಮ ರಸಗೊಬ್ಬರ ಅಥವಾ ಸಾವಯವ ಗೊಬ್ಬರದ ಕೊರತೆ

ಬೆಳೆಯ ರೋಗಗಳು

ಉತ್ತಮ ಮತ್ತು ಪರಿಷ್ಕೃತ ಬೀಜಗಳ ಅಭಾವ

ಸಾರಿಗೆ ಸೌಕರ್ಯದ ಅಭಾವ

ಕೃಷಿ ಮಾರುಕಟ್ಟೆ ಸಮಸ್ಯೆ

ಕೃಷಿ ದಾಸ್ತಾನು ಸಮಸ್ಯೆ

 

ನಮ್ಮ ದೇಶದ ಕೃಷಿಯ ಅವಶ್ಯಕತೆಯಿರುವುದಕ್ಕಿಂತಲೂ ಹೆಚ್ಚಿನ ಜನರು ಅವಲಂಬಿಸಿರುವುದು ಕಂಡು ಬರುತ್ತದೆ. ಪ್ರತಿಶತ ೭೦ ರಷ್ಟು ಜನರು ಕೃಷಿಯನ್ನೇ ತಮ್ಮ ಜೀವಾಳವೆಂದು ಭಾವಿಸಿರುವುದು ಇಂದಿನ ಆಧುನಿಕ ದಿನಗಳಲ್ಲಿಯೂ ಕಂಡು ಬರುತ್ತದೆ. ಖಿನ್ನತೆಯಿಂದ ಕೃಷಿಯ ಇಳುವರಿಯ ಮೇಲೆ ಅನೇಕ ದುಷ್ಪರಿಣಾಮಗಳುಂಟಾಗಿ ಉತ್ಪಾದನೆ ಕಡಿಮೆಯಾಗಿದೆ. ಇದರಿಂದಾಗಿ ಕೃಷಿಯ ಆದಾಯ ಕಡಿಮೆಯಾಗಿ ಬಡತನದ ವಿಷಮ ಚಕ್ರಕ್ಕೆ ಕಾರಣವಾಗಿದೆ ಎನ್ನಬಹುದು. ನಮ್ಮ ದೇಶದ ಪ್ರತಿಶತ ೩೩ ರಷ್ಟು ಕೃಷಿಕರು ಅತೀ ಸಣ್ಣ ಅಥವಾ ಭೂರಹಿತ ಕೃಷಿ ಕಾರ್ಮಿಕರಾಗಿದ್ದಾರೆ. ಹಲವು ಸಂದರ್ಭ ಗೇಣಿದಾರರಾಗಿರುವುದರಿಂದ ಅವರು ಹೆಚ್ಚು ಆಸಕ್ತಿ ವಹಿಸಿ ಇನ್ನೊಬ್ಬರ ಭೂಮಿಯಲ್ಲಿ ದುಡಿಯುವುದಿಲ್ಲ. ಅನೇಕ ರೈತರ ಭೂಮಿ ಸಣ್ಣ-ಸಣ್ಣ ತುಂಡುಗಳಿರುವುದರಿಂದ ಆಧುನಿಕ ಬೇಸಾಯ ಪದ್ಧತಿಯನ್ನೇ ಅನುಸರಿಸಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ಪುರಾತನ ವ್ಯವಸಾಯ ಪದ್ಧತಿಯನ್ನೇ ಅವಲಂಬಿಸಿ ಕೃಷಿ ಮಾಡಿದ ಭೂಮಿಯಲ್ಲಿ ಉತ್ತಮ ಇಳುವರಿ ಪಡೆಯಲು ಸಾಧ್ಯವಾಗುವುದಿಲ್ಲ. ನಮ್ಮ ದೇಶದ ಕೃಷಿಯ ಇಳುವರಿಯು ಅತ್ಯಂತ ಕಡಿಮೆ ಇರುತ್ತದೆ ಎಂದು ಹೇಳುವುದಕ್ಕೆ ಕಾರಣಗಳೆಂದರೆ ನಮ್ಮ ಕೃಷಿ ಕಾರ್ಮಿಕರ ದಕ್ಷತೆಯ ಅಭಾವ, ಬಂಡವಾಳದ ಕೊರತೆ ಮತ್ತು ಪೂರಕ ಕೃಷಿ ವಸ್ತುಗಳ ಕಡಿಮೆ ಗುಣ ಮಟ್ಟ ಇತ್ಯಾದಿಗಳು ಕಾರಣವಾಗಿರುತ್ತವೆ. ಭಾರತದಲ್ಲಿಯೇ ಆಗಲಿ ಅಥವಾ ನಮ್ಮ ರಾಜ್ಯದಲ್ಲಿಯೇ ಇರಲಿ ಕೃಷಿಯು ಉತ್ತಮವಾಗಬೇಕಾದರೆ ಅದಕ್ಕೆಸಾಕಷ್ಟು ನೀರಿನ ಪೂರೈಕೆಯಾಗಬೇಕು. ಆದರೆ ಭಾರತದಲ್ಲಿ ಸಾಗುವಳಿಯಾಗುತ್ತಿರುವ ಭೂಮಿಯಲ್ಲಿ (೨೩೦ ದಶಲಕ್ಷ ಹೆಕ್ಟೇರ್) ಕೇವಲ ೩೪% ರಷ್ಟು ಮಾತ್ರ ನೀರಾವರಿ ಸೌಲಭ್ಯ ಪಡೆದಿರುವುದು ಅಂಕಿ ಅಂಶಗಳಿಂದ ತಿಳಿದು ಬರುತ್ತದೆ. ನೀರಾವರಿ ಆಧರಿಸಿ ಕೃಷಿಯನ್ನು ಕೈಗೊಂಡರೆ ಎರಡರಿಂದ ಮೂರು ಪಟ್ಟು ಆಹಾರದ ಉತ್ಪಾದನೆಯನ್ನು ಹೆಚ್ಚಿಸಬಹುದಾಗಿದೆ. ಆದರೆ ಭಾರತದಲ್ಲಿ ಮುಕ್ಕಾಲು ಭಾಗ ಕೃಷಿಯು ಮಳೆಯನ್ನೇ ಅವಲಂಬಿಸಿದೆ. ಇಂಥ ಕಡೆ ಉತ್ತಮ ಫಸಲನ್ನು ನೀರಿಕ್ಷಿಸುವುದು ಕಷ್ಟಕರವೇ ಸರಿ, ಅಷ್ಟೆ ಅಲ್ಲದೆ ನಮ್ಮ ಕೃಷಿಯು ಸಹ ಪ್ರತಿಯೊಂದು ಉದ್ಯಮಕ್ಕೂ ಇರುವ ಹಾಗೆ ಹಣದ ಸಮಸ್ಯೆಯನ್ನು ಎದುರಿಸುತ್ತಿದೆ. ಸಾಮಾನ್ಯವಾಗಿ ಇತ್ತೀಚಿಗಿನ ಭೂ ಹಿಡುವಳಿಯಿಂದಾಗಿ ಕೃಷಿಕರು ಕಡು ಬಡವರಾಗಿರುವುದು ಕಂಡು ಬರುತ್ತದೆ. ತಮ್ಮ ಭೂಮಿಯ ವ್ಯವಸಾಯಕ್ಕೆ ಬೇಕಾಗುವ ಹಣವನ್ನು ತಾವೇ ಒದಗಿಸಿಕೊಳ್ಳಲಾರದ ಸ್ಥಿತಿಯಲ್ಲಿರುವುದು ಕಂಡುಬರುತ್ತದೆ. ಆಷ್ಟೇ ಅಲ್ಲದೆ ಇಂದಿನ ಆಧುನಿಕ ಕೃಷಿ ಪದ್ಧತಿಯ ತುಂಬಾ ವೆಚ್ಚದಾಯಕವಾಗಿದೆ. ಆದ್ದರಿಂದ ರೈತರು (ಅದರಲ್ಲಿಯೂ ದಲಿತ ಹಾಗೂ ಅಸ್ಪೃಶ್ಯ ರೈತರು) ಗ್ರಾಮೀಣ ವಲಯದಲ್ಲಿ ಸಾಹುಕಾರರಿಂದ ಮಿತಿಮೀರಿದ ಬಡ್ಡಿಯ ಮೇಲೆ ಸಾಲ ಪಡೆಯುತ್ತಾರೆ. ಇದರಿಂದಾಗಿ ಸಾಲವನ್ನು ತೀರಿಸಲು ತಮ್ಮ ವರ್ಷದ ಫಸಲನ್ನೇ ಮಾರಿ, ವರ್ಷಪೂರ್ತಿ ಕೂಲಿ ಮಾಡಿ ಜೀವನ ನಡೆಸುವ ಪ್ರಸಂಗ ಹೆಚ್ಚಾಗಿ ಕಂಡು ಬರುತ್ತದೆ. ಇಷ್ಟೆ ಅಲ್ಲದೆ ಗ್ರಾಮೀಣ ಜನರು ಅನಾವಶ್ಯಕವಾಗಿ ಮದುವೆ, ಮುಂಜಿ, ಆರತಿ, ಉಪನಯನ, ಪ್ರಸ್ಥ, ವರೋಪಚಾರ, ವರದಕ್ಷಿಣೆ, ಹಬ್ಬ, ಹರಿದಿನ, ಪೂಜೆ, ಉತ್ಸವ, ಜಾತ್ರೆ ಮುಂತಾದ ಕಾರ್ಯಗಳಿಗೆ ಹಣವನ್ನು ದುಂದು ವೆಚ್ಚ ಮಾಡಿ ಬಡ್ಡಿದಾರರ, ಮಾರ್ವಾಡಿಗಳ ಮತ್ತು ಗ್ರಾಮೀಣ ಜಮೀನುದಾರರ ಋಣದಲ್ಲಿ ತಮಗೆ ತಿಳಿಯದ ರೀತಿಯಲ್ಲಿ ಬಂಧಿತರಾಗಿರುತ್ತಾರೆ, ಈ ಸಂದರ್ಭದಲ್ಲಿಯೇ ನಮ್ಮ ಭಾರತೀಯ ಕೃಷಿಕರನ್ನು “ಸಾಲದಲ್ಲಿ ಜನಿಸಿ, ಸಾಲದಲ್ಲಿಯೇ ಬೆಳೆದು, ಸಾಲದಲ್ಲಿಯೇ ಸತ್ತು ತನ್ನ ಉತ್ತರಾಧಿಕಾರಿಗಳಿಗೆ ಸಾಲವನ್ನೇ ಆಸ್ತಿಯಾಗಿ ನೀಡುತ್ತಾನೆ” ಎನ್ನುವ ಮಾತು ಪ್ರಚಲಿತವಾಗಿದೆ ಎನ್ನಬಹುದು.

ಇಂದಿಗೂ ನಮ್ಮ ಗ್ರಾಮೀಣ ಪ್ರದೇಶದ ರೈತರು ಅಪ್ಪ ನೆಟ್ಟ ಆಲದ ಮರಕ್ಕೆ ನೇತಾಕಿಕೊಳ್ಳುತ್ತಿದ್ದಾರೆ, ಏಕೆಂದರೆ ನಮ್ಮ ಕೃಷಿಕರು ಪುರಾತನ ಕೃಷಿ ಪದ್ಧತಿಯಾದ ಮರದ ನೇಗಿಲು ಹಾಗೂ ಎತ್ತಿನ ಬಂಡಿಗಳನ್ನೇ ಬಳಸುತ್ತಿರುವುದು. ನಮ್ಮ ರೈತರು ತೀರ ಬಡತನದಲ್ಲಿರುವುದರಿಂದ ತಾತ ಮುತ್ತಾತರಿಂದ ಉಪಯೋಗಿಸಲ್ಪಟ್ಟು ಹಳೆಯ ಸಲಕರಣೆಗಳನ್ನೇ ಬೇಸಾಯಕ್ಕಾಗಿ ಉಪಯೋಗಿಸುತ್ತಿದ್ದಾರೆ. ಇನ್ನೂ ಕೆಲವು ಸಂಪ್ರದಾಯ ಕೃಷಿಯಲ್ಲಿ ರಸಗೊಬ್ಬರವನ್ನು ಉಪಯೋಗಿಸಲು ಹಿಂಜರಿಯುತ್ತಾರೆ. ಆಧುನಿಕ ಉಪಕರಣಗಳಾದಂತಹ ಟ್ರಾಕ್ಟರ್, ಟಿಲ್ಲರ್, ಕ್ರೆಷರ್ ಮತ್ತು ಹಾರ್ವಸ್ಟರ್ ಇತ್ಯಾದಿಗಳ ಬಳಕೆ ಅಪರೂಪವಾಗಿದೆ. ಇಂಥಹ ಸೌರ್ಕಯಗಳು ಕೇವಲ ಸೀಮಿತ ಕೃಷಿಕರಿಗೆ ಅಂದರೆ ಹೆಚ್ಚಿನ ಪ್ರಮಾಣದ ಭೂಮಿಯನ್ನು ಹೊಂದಿರುವ ಜಮೀನುದಾರರಿಗೆ ಲಭ್ಯವಾಗುತ್ತಿದೆ. ಆದ್ದರಿಂದಾಗಿ ಬೇಸಾಯದ ಉತ್ಪತ್ತಿಯು ಕಡಿಮೆಯಾಗುತ್ತಿವೆ ಎನ್ನಬಹುದು. ಮತ್ತೊಂದು ಮುಖ್ಯವಾದ ಸಮಸ್ಯೆ ಎಂದರೆ ನಮ್ಮ ದೇಶದ ರೈತರಿಗೆ ಶಿಕ್ಷಣದ ಅಭಾವ. ನಮ್ಮ ರಾಷ್ಟ್ರದ ಜನರು ಯಾವ ಕ್ಷೇತ್ರದಲ್ಲಿ ಹೆಚ್ಚು ಅವಲಂಬಿತರಾಗಿದ್ದಾರೆ ಎಂಬುದನ್ನು ಅರಿತುಕೊಂಡು ಅದನ್ನು ಅಭಿವೃದ್ಧಿ ಪಡಿಸುವ ರೀತಿಯಲ್ಲಿ ಶಿಕ್ಷಣ ಮುಂದುವರಿಯುತ್ತಿಲ್ಲ. ಇಂದು ಕೃಷಿಯೇ ಸುಮಾರು ೭೦% ರಷ್ಟು ಜನರ ಮುಖ್ಯ ಕಸುಬಾಗಿದ್ದರೂ ಅವರ ಬಗ್ಗೆ ಶಿಕ್ಷಣ ಕೊಡುವ ಸಂಸ್ಥೆಗಳು ಬಹಳ ಕಡಿಮೆ. (ಉದಾಹರಣೆಗೆ; ನಮ್ಮ ರಾಜ್ಯದಲ್ಲಿಯೇ ತೆಗೆದುಕೊಳ್ಳಿ, ರಾಜ್ಯದ ಜನತೆಯು ಸುಮಾರು ೭೫% ರಷ್ಟು ಕೃಷಿಯನ್ನೇ ಆಧರಿಸಿದ್ದರೂ ಈ ಕೃಷಿಯನ್ನು ಅಧ್ಯಯನ ಮಾಡುವ ವಿಶ್ವವಿದ್ಯಾನಿಲಯಗಳು ಇರುವುದು ಎರಡೇ ಎರಡು (ಬೆಂಗಳೂರಿನ GKVK ಹಾಗೂ ಧಾರವಾಡ ಕೃಷಿ ವಿಶ್ವವಿದ್ಯಾಲಯ). ಆದರೆ ಸಾಮಾಜಿಕ ಅಧ್ಯಯನಕ್ಕಾಗಿ ಹನ್ನೊಂದು ವಿಶ್ವವಿದ್ಯಾನಿಲಯಗಳು ಕೆಲಸ ಮಾಡುತ್ತಿವೆ. ಜಪಾನ್ ನಂತಹ ಪುಟ್ಟ ರಾಷ್ಟ್ರ ತನ್ನ ರಾಷ್ಟ್ರಿಯ ಆದಾಯವನ್ನು ಹೆಚ್ಚಾಗಿ ಕೈಗಾರಿಕೆಯಿಂದ ಪಡೆದರೂ ಅಲ್ಲಿ ಕೃಷಿ ವಿಶ್ವವಿದ್ಯಾಲಯ ಮತ್ತು ಮಹಾವಿದ್ಯಾಲಯಗಲು ನೂರಾರಿವೆ. ಇಂದು ಗ್ರಾಮೀಣ ಪ್ರದೇಶದ ನಿರುದ್ಯೋಗಿಗಳನ್ನು ಗುರ್ತಿಸಿ ಅವರಿಗೆ ಕೋಳಿ ಸಾಕಾಣಿಕೆ, ಕುರಿ ಸಾಕಾಣಿಕೆ ಮತ್ತು ಮೀನು ಸಾಕಾಣಿಕೆ ಬಗ್ಗೆ ಅರಿವು ಮೂಡಿಸಿ, ತರಬೇತಿ ನೀಡಿ ಈ ಹಂತದಲ್ಲಿ ಅವರಲ್ಲಿ ಮುನ್ನಡೆಸಿದರೆ ಸ್ವಲ್ಪ ಪ್ರಮಾಣದ ಸಮಸ್ಯೆಗೆ ಪರಿಹಾರ ಸಿಗಬಹುದು.

ಇಷ್ಟೆಲ್ಲಾ ನಾವು ಪ್ರಗತಿಪರವಾಗಿ ಚಿಂತಿಸಿದರೂ ಸಹ ನಮ್ಮ ಕೃಷಿಕರು ಉಪಯೋಗಿಸುವ ಗೊಬ್ಬರವು ಅತ್ಯಂತ ಕೆಳಮಟ್ಟದ್ದಾಗಿದೆ. ಉತ್ತಮವಾದ ರಾಸಾಯನಿಕ ಗೊಬ್ಬರದ ಬೆಲೆಗಳು ಹೆಚ್ಚಾಗಿರುವುದರಿಂದ ಸಾಮಾನ್ಯ ರೈತರಿಗೆ ರಾಸಾಯನಿಕ ಗೊಬ್ಬರವನ್ನು ಕೊಳ್ಳಲಾಗುತ್ತಿಲ್ಲ. ಅಷ್ಟೇ ಅಲ್ಲದೆ ಜನರು ತಮ್ಮ ಜೀವನಾವಶ್ಯಕತೆಗಾಗಿ ಸಾಕುತ್ತಿರುವ ಎತ್ತು. ಕೋಣ, ಎಮ್ಮೆ, ಹಸು ಕರುಗಳ ಸಗಣಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಬೆರಣಿ ಮಾಡಿ ಇಂಧನವಾಗಿ ಬಳಸಿಕೊಳ್ಳುತ್ತಾರೆ. ಇದರಿಂದಾಗಿ ಸಾವಯವ ಗೊಬ್ಬರವೂ ತನ್ನ ಮೌಲ್ಯವನ್ನು ಕಳೆದುಕೊಳ್ಳುವ ಸ್ಥಿತಿಯನ್ನು ತಲುಪಿದೆ. ಇದರಿಂದಾಗಿ ಕಷ್ಟಪಟ್ಟು ಬೆಳೆದ ಬೆಳೆಯನ್ನು ಸಹ ಸಕಾಲಕ್ಕೆ ತಗಲುವ ರೋಗಗಳಿಂದ ಸಂರಕ್ಷಿಸಲು ಅವನಿಗೆ ಸಾಧ್ಯವಾಗುತ್ತಿಲ್ಲ. ನಮ್ಮ ರಾಷ್ಟ್ರದಲ್ಲಿ ಕೃಷಿ ಕೈಗೊಂಡಿರುವ ಪ್ರದೇಶಕ್ಕೆ ಹೋಲಿಸಿದರೆ ಕ್ರಿಮಿನಾಶಕ ಮತ್ತು ಬೆಳೆಗಳನ್ನು ವೃದ್ಧಿಪಡಿಸುವ ಔಷಧಿಯ ಉತ್ಪಾದನೆ ಹಾಗೂ ಬಳಕೆ ಕಡಿಮೆ ಪ್ರಮಾಣದಲ್ಲಿದೆ. ಇದರಿಂದಾಗಿ ಬೆಳೆ ನಾಶ ಹೊಂದಿ ರೈತನು ಸಾಲ ಹಾಗೂ ಇನ್ನಿತರ ಸಮಸ್ಯೆಗಳಿಗೆ ಪರಿಹಾರ ಕಾಣದೆ “ಆತ್ಮಹತ್ಯೆ” ಯಂತಹ. ಅಪರಾಧ ಕೃತ್ಯಕ್ಕೆ ತಲೆಬಾಗುತ್ತಿದ್ದಾನೆ ಇದು ಹೆಚ್ಚಾಗಿ ಉತ್ತರ ಕರ್ನಾಟಕ ಪ್ರದೇಶದಲ್ಲಿ ಕಂಡುಬರುತ್ತಿದೆ.

. ಸಾಮಾಜಿಕ ಕಾರಣಗಳು

ಸಂಪ್ರದಾಯಿಕ ಮತ್ತು
ಮೂಢ ನಂಬಿಕೆಗಳು

ಅನಕ್ಷರತೆ ಮತ್ತು
ಅಜ್ಞಾನ

ಜಾತಿ ಪದ್ಧತಿ

ರೈತನ ಅನಾರೋಗ್ಯ

ಮೇಲಿನ ಹಲವಾರು ಕಾರಣಗಳ ಜೊತೆಗೆ ಇಂದು ನಮ್ಮ ಗ್ರಾಮಗಳಲ್ಲಿ ಕೃಷಿಯ ಇಳುವರಿ ಕಡಿಮೆಯಾಗಲು ಸಾಮಾಜಿಕ ಅಂಶಗಳೂ ಬಹುಮಟ್ಟಿಗೆ ಕಾರಣವಾಗಿರುತ್ತವೆ. ನಮ್ಮ ರೈತರು ಹೆಚ್ಚಾಗಿ ಅನಕ್ಷರಸ್ಥರೂ, ಸಂಪ್ರದಾಯ ಶರಣರೂ ಆಗಿರುವುದರಿಂದ ಕೃಷಿಕತನವು ಕೇವಲ ತಮ್ಮ ಉಪ ಜೀವನದ ವೃತ್ತಿ ಎಂದು ತಿಳಿದಿದ್ದಾರೆಯೇ ವಿನಃ ಅದನ್ನೊಂದು ಕೈಗಾರಿಕೆ ಅಥವಾ ಸೇವಾವಲಯವೆಂದು ತಿಳಿದುಕೊಂಡಿಲ್ಲ. ಈ ರೀತಿಯ ನಿರಾಶಾವಾದಿ ವಿಚಾರವುಳ್ಳ ಹೆಚ್ಚಿನ ನಮ್ಮ ರೈತರು ತಮ್ಮ ಉತ್ಪಾದನೆಯಲ್ಲಿ ಉತ್ತಮ ಫಲ ನಿರೀಕ್ಷಿಸುವಲ್ಲಿ ಸಫಲರಾಗುವುದಿಲ್ಲ. ಈ ದೃಷ್ಟಿಯಿಂದ ಕೃಷಿಯ ಉತ್ಪಾದನೆಯು ಇಳಿಮುಖವಾಗಲು ಕೇವಲ ನೈಸರ್ಗಿಕ ಮತ್ತು ತಾಂತ್ರಿಕ, ಆರ್ಥಿಕ ಕಾರಣಗಳಷ್ಟೇ ಅಲ್ಲದೆ ಸಾಮಾಜಿಕ ಕಾರಣಗಳು ಇವೆ. ಅವುಗಳನ್ನು ವಿಸ್ತರಿಸುವುದಾದರೆ, ಸಮಾಜಶಾಸ್ತ್ರಜ್ಞ ಹಾಗೂ ಅರ್ಥಶಾಸ್ತ್ರಜ್ಞರು ಹೇಳುವಂತೆ ನಮ್ಮ ಬೇಸಾಯವು ಹಿಂದುಳಿಯಲು ನಮ್ಮ ಕೃಷಿಕರ ಕುರುಡು ನಂಬಿಕೆ ಹಾಗೂ ಅವರ ದೈವ ಅಧೀನ ಪ್ರವೃತ್ತಿಯೇ ಕಾರಣವಾಗಿದೆ ಎಂಬ ಮಾತನ್ನು ಹೇಳುತ್ತಾರೆ. ನಮ್ಮ ಕೃಷಿಕರಲ್ಲಿ ಅನೇಕ ಮೂಢನಂಬಿಕೆಗಳು ಮನೆ ಮಾಡಿದೆ. ಅವರು ಕೃಷಿಯನ್ನು ಆರ್ಥಿಕವಾಗಿ ಲಾಭಕರ ಉದ್ಯಮವೆಂದು ಪರಿಗಣಿಸಿಲ್ಲ. ಅನಗತ್ಯವಾದ ಹಬ್ಬ ಹರಿದಿನ, ಪೂಜೆ, ಪುರಸ್ಕಾರ, ಮದುವೆ ಇತ್ಯಾದಿಗಳಿಗೆ ಹಣವನ್ನು ಸಾಲ ಮಾಡಿಯಾದರೂ ದುಂದು ವೆಚ್ಚ ಮಾಡುವಷ್ಟು ಕೃಷಿಗೆ ಮಾಡುವುದಿಲ್ಲ. ನಮ್ಮ ಕೆಟ್ಟ ಆಚಾರ ಸಂಪ್ರದಾಯಗಳು ಇಂದಿನ ಯುವ ರೈತರನ್ನೂ ಸಹ ಸೋಮಾರಿಯಾಗಿಸಿವೆ. ಆಷ್ಟೆ ಅಲ್ಲದೆ ಜಾತಿಯ ಸಂಪ್ರದಾಯಗಳು ಮತ್ತು ಧಾರ್ಮಿಕ ಸಂಪ್ರದಾಯಗಳು ರೈತರಿಗೆ ಹೊರೆಯಾಗಿವೆ ಮತ್ತು ಕೃಷಿಯು ಹಿಂದುಳಿಯುತ್ತಿರುವುದಕ್ಕೆ ಕಾರಣವಾಗಿವೆ ಎನ್ನಬಹುದು. ಇಷ್ಟೆ ಅಲ್ಲದೆ ನಮ್ಮ ಕೃಷಿಕರು ಬಹುತೇಕ ಅನಕ್ಷರಸ್ಥರಾಗಿರುವುದರಿಂದ ಹೊಸ ಹೊಸ ಬದಲಾವಣೆಗೆ ಅವರು ಸಿದ್ಧರಾಗುತ್ತಿಲ್ಲ. ಬಹುತೇಕ ರೈತರು ಅಜ್ಞಾನಿಗಳಾಗಿದ್ದು ಆಧುನಿಕ ಕೃಷಿ ಪದ್ಧತಿಗಳನ್ನು ಸಂಪೂರ್ಣವಾಗಿ ವಿರೋಧಿಸುತ್ತಾರೆ. ಕೃಷಿಯನ್ನು ಇವರು ನಮ್ಮ ತಲತಲಾಂತರದಿಂದ ಬಂದಿರುವ ಪಿತ್ರಾರ್ಜಿತ ಎಂದು ಭಕ್ತಿಯಿಂದ ನಡೆಸಿಕೊಂಡು ಬರುತ್ತಿರುವರೇ ಹೊರತು. ಇದೊಂದು ವಾಣಿಜ್ಯ ಕಸುಬೆಂದು ಉತ್ಸಾಹದಿಂದ ನಡೆಸಿರುವುದು ಕಂಡು ಬರುವುದೇ ಇಲ್ಲ. ಇನ್ನು ಕೊನೆಯವಾಗಿ ಜಾತಿ ವ್ಯವಸ್ಥೆ. ಕೆಲವು ಜಾತಿಯವರು ಕೃಷಿ ಮಾಡುವುದೇ ಮಹಾ ಅಪರಾಧವೆಂದು ತಿಳಿದು ಹೊಲಗಳಲ್ಲಿ ದುಡಿಯುವುದು ತಮ್ಮ ಅಂತಸ್ಥಿಗೆ ಕೀಳು ಎಂದು ಭಾವಿಸಿ ತಮಗೆ ತಾವೇ ದ್ರೋಹ ಮಾಡಿಕೊಂಡಿರುವುದಕ್ಕೆ ಅನೇಕ ನಿದರ್ಶನಗಳಿವೆ. ಈ ರೀತಿಯಾಗಿ ಕೃಷಿಯು ಹಿಂದುಳಿಯಲು ಕಾರಣವಾಗುತ್ತಿದೆ.

ಸುಧಾರಣಾತ್ಮಕ ಕ್ರಮಗಳು

ಕೃಷಿ ಸುಧಾರಿಸಲು ಉಪಾಯಗಳು: ಭಾರತದ ಕೃಷಿಯಲ್ಲಿ ಸುಧಾರಣೆ ತರುವುದೆಂದರೆ ಪ್ರತಿ ಎಕರೆಗೆ ಬರುವ ಇಳುವರಿಯನ್ನು ಹೆಚ್ಚಿಸುವುದಾಗಿದೆ. ಇದಕ್ಕೆ ಮೇಲಿನ ಹಲವಾರು ಅಂಶಗಳು ಕಾರಣವಾಗಿರುವುದನ್ನು ನಾವು ಕಂಡುಕೊಂಡಿದ್ದೇವೆ. ಕೃಷಿಯ ಇಳುವರಿಯನ್ನು ಹೆಚ್ಚಿಸಬೇಕಾದರೆ. ಮೇಲಿನ ಎಲ್ಲಾ ಕಾರಣಗಳಿಗೆ ಪರಿಹಾರೋಪಾಯಗಳನ್ನು ಕಂಡುಕೊಳ್ಳಬೇಕಾಗಿದೆ. ಅಂತಹ ಪರಿಹಾರೋಪಾಗಳೆಂದರೆ ೧. ನೀರಾವರಿ ಸೌಕರ್ಯದ ವಿಸ್ತರಣೆ. ೨. ಸುಧಾರಿಸಿದ ಸಾಗುವಳಿ, ೩. ಒಕ್ಕಲುತನದ ಮೇಲಿನ ಒತ್ತಡವನ್ನು ಕಡಿಮೆ ಮಾಡುವುದು. ೪. ಸಾಲ ಸೌಲಭ್ಯಗಳ ವಿಸ್ತರಣೆ, ೫. ಮಾರಾಟ ಸೌಲಭ್ಯಗಳ ವಿಸ್ತರಣೆ. ೬. ಹಿಡುವಳಿಗಳನ್ನು ಒಂದುಗೂಡಿಸುವುದು ೭. ರೈತರಿಗೆ ತರಬೇತಿ ಮತ್ತು ಶಿಕ್ಷಣವನ್ನು ನೀಡುವುದು ೮. ಭೂ ಸುಧಾರಣಾ ಕ್ರಮವನ್ನು ತ್ವರಿತಗೊಳಿಸುವುದು ಇತ್ಯಾದಿಗಳಾಗಿರುತ್ತವೆ.

ಭೂ ಸುಧಾರಣೆ ಕ್ರಮಗಳು: ಭಾರತ ದೇಶವು ಕೃಷಿ ಪ್ರಧಾನವಾದ ರಾಷ್ಟ್ರವೆಂದು ಈ ತನಕ ನೋಡಿದೆವು. ನಮ್ಮ ಕೃಷಿಕರ ಸಮಸ್ಯೆಗಳು ಅನೇಕ ಇವೆ. ಅವುಗಳಲ್ಲಿ ಭೂ ಒಡೆಯರ ಮತ್ತು ಗೇಣಿದಾರರ ಸಮಸ್ಯೆಗಳು ಪ್ರಮುಖವಾದವುಗಳಾಗಿವೆ. ರೈತರ ಆರ್ಥಿಕ ಮತ್ತು ಸಾಮಾಜಿಕ ಸುಧಾರಣೆಗೆ ಈ ಎರಡು ಸಮಸ್ಯೆಗಳ ನಿವಾರಣೆ ಅತ್ಯವಶ್ಯಕವಾಗಿರುತ್ತದೆ. ಸ್ವತಂತ್ರ್ಯ ಬರುವುದಕ್ಕೆ ಪೂರ್ವದಲ್ಲಿ ಮೂರು ವಿಧವಾದ ಭೂ-ಹಿಡುವಳಿ ಪದ್ಧತಿಗಳಿದ್ದವು ಅವುಗಳೆಂದರೆ

೧. ರೈತವಾರಿ ಪದ್ಧತಿ (Land Tenure)

2. ಮಹಲ್ವಾರಿ ಪದ್ಧತಿ (mahalwari system)

೩. ಜಮೀನ್ದಾರಿ ಪದ್ಧತಿ (Zamindari System

. ರೈತವಾರಿ ಪದ್ಧತಿ: ರೈತವಾರಿ ಪದ್ಧತಿ ಎಂದರೆ ಉಳುವವನೇ ಭಾಮಿಯ ಒಡೆಯನಾಗಿದ್ದು, ಅವನೇ ನೇರವಾಗಿ ಸರಕಾರಕ್ಕೆ ಭೂ ಕಂದಾಯವನ್ನು ಕೊಡುತ್ತಿದ್ದನು. ಯಾರು ಸರ್ಕಾರಕ್ಕೆ ಭೂ ಕಂದಾಯವನ್ನು ಕಟ್ಟುತ್ತಾರೋ ಅವರೇ ಭೂಮಿಯ ಒಡೆಯರು. ಅವನು ಭೂಮಿಯನ್ನು ಅಡವಿಡಬಹುದು, ಗೇಣಿಗೆ ಕೊಡಬಹುದು, ಮಾರಾಟ ಮಾಡಬಹುದು; ಇಂತಹ ಪದ್ಧತಿ ನಮ್ಮ ದೇಶದ ಕರ್ನಾಟಕ, ಮಹಾರಾಷ್ಟ್ರ, ಗುಜರಾತ್, ಆಂಧ್ರ ಪ್ರದೇಶ, ಅಸ್ಸಾಂ ಮತ್ತು ತಮಿಳುನಾಡು ರಾಜ್ಯಗಳಲ್ಲಿ ರೂಢಿಯಲ್ಲಿತ್ತು. ಇದೇ ಪದ್ಧತಿಯನ್ನು ಭಾರತದ ಇತರ ಭಾಗಗಳಿಗೂ ವಿಸ್ತರಿಸುವ ಕ್ರಮವನ್ನು ಕೈಗೊಳ್ಳಲಾಯಿತು.

. ಮಹಲ್ವಾರಿ ಪದ್ಧತಿ: “ಮಹಲ” ಎಂದರೆ ಒಂದು ಹಳ್ಳಿಯ ಘಟಕವಾಗಿದ್ದು, ಹಳ್ಳಿಯ ಎಲ್ಲಾ ರೈತರು ಸಾಮೂಹಿಕವಾಗಿ ಸರಕಾರಕ್ಕೆ ನೇರವಾಗಿ ಭೂ ಕಂದಾಯವನ್ನು ಕೊಡುತ್ತಿದ್ದರು. ಸಾಮೂಹಿಕವಾಗಿ ಅಥವಾ ವೈಯಕ್ತಿಕವಾಗಿ ಸರ್ಕಾರಕ್ಕೆ ಭಾಕಂದಾಯವನ್ನು ಕೊಡಲು ಹಕ್ಕುಳ್ಳವರಾಗಿದ್ದರು. ಗ್ರಾಮದ ಎಲ್ಲಾ ರೈತರು ಭೂಮಿಯ ಒಡೆತನವನ್ನು ಹೊಂದಿದ್ದರು. ಸರ್ಕಾರ ಕಾಲಕಾಲಕ್ಕೆ ನಿಗದಿಪಡಿಸಿದ ಭೂಕಂದಾಯವನು ಕೊಡುತ್ತಿದ್ದರು. ಇಂತಹ ಪದ್ಧತಿಯು ಪಂಜಾಬ್ ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿ ರೂಢಿಯಲ್ಲಿದ್ದಿತು. ಪಂಜಾಜಿನಲ್ಲಿ ಭೂ ಒಡೆಯರೇ ಸಾಗುವಳಿ ಮಾಡಿದರೆ. ಉತ್ತರ ಪ್ರದೇಶದಲ್ಲಿ ಗೇಣಿದಾರರೂ ಸಾಗುವಳಿ ಮಾಡುತ್ತಿದ್ದರು.

. ಜಮೀನ್ದಾರಿ ಪದ್ದತಿ: ಬ್ರಿಟೀಷ್ ಸರ್ಕಾರ ಈ ಪದ್ಧತಿಯನ್ನು ಜಾರಿಗೆ ತಂದಿತು. ಬ್ರಿಟೀಷರು ಭೂ-ಕಂದಾಯವನ್ನು ವಸೂಲಿ ಮಾಡಲು ಕೆಲವು ಪ್ರತಿನಿಧಿಗಳನ್ನು ನೇಮಿಸಿದರು. ಈ ಪ್ರತಿನಿಧಿಗಳು ಭೂ ಕಂದಾಯ ವಸೂಲಿ ಮಾಡುತ್ತಿದ್ದುದರಿಂದ ಕಾಲ ಕ್ರಮೇಣ ಅವರೇ ಭೂಮಿಯ ಒಡೆಯರೆಂದು ಪರಿಗಣಿಸಲಾಯಿತು. ಇವರು ಗ್ರಾಮೀಣ ಪ್ರದೇಶಗಳಲ್ಲಿರುವ್ ಜಮೀನುಗಳ ಒಡೆತನವನ್ನು ಪಡೆಯುವಂತಾದರು. ಇವರಿಗೆ ಜಮೀನ್ದಾರರೆಂದು ಕರೆಯಲಾಯಿತು. ಇವರಿಗೆ ಬ್ರಿಟೀಷ್ ಸರ್ಕಾರ ಹಲವಾರು ಸೌಲಭ್ಯಗಳನ್ನು (ಭೂ ಒಡೆತನ, ಸಾಗುವಳಿ ಪದ್ಧತಿ ಮತ್ತು ಸುಧಾರಣೆ) ನೀಡಲಾಯಿತು, ಜಮೀನ್ದಾರಿ ಪದ್ಧತಿಯಲ್ಲಿ ಜಮೀನ್ದಾರರು ಭೂಮಿಯ ಒಡೆಯನಾಗಿದ್ದು ಅವನು ಸರ್ಕಾರಕ್ಕೆ ಕೊಡಬೇಕಾದ ಭೂ ಕಂದಾಯಕ್ಕೆ ಸಂಪೂರ್ಣ ಹೊಣೆಗಾರನಾಗಿದ್ದನು. ಭೂಮಿಯ ಸಾಗುವಳಿ ಮಾಡುವ ಕೃಷಿ ಕಾರ್ಮಿಕರು ಪ್ರತಿವರ್ಷ ಜಮೀನ್ದಾರರು ನಿಗದಿ ಮಾಡಿದ ಗೇಣಿಯನ್ನು ಕೊಡಬೇಕಾಗುತ್ತಿತ್ತು. ಗೇಣಿಯ ಮೊತ್ತದಲ್ಲಿ ಜಮೀನ್ದಾರನು ಕೆಲಭಾಗವನ್ನು ಭೂ ಕಂದಾಯಕೊಟ್ಟು ಉಳಿದ ಭಾಗವನ್ನು ತನ್ನ ಆದಾಯವೆಂದು ಇಟ್ಟುಕೊಳ್ಳುತ್ತಿದ್ದನು. ಸರ್ಕಾರ ಮತ್ತು ಗೇಣಿದಾರನ ನಡುವೆ ಜಮೀನ್ದಾರನು ಮಧ್ಯವರ್ತಿಯಾಗಿದ್ದನು. ಸರ್ಕಾರ ಮತ್ತು ಗೇಣಿದಾರ ಅಥವಾ ಸಾಗುವಳಿದಾರನ ನಡುವೆ ಯಾವುದೇ ನೇರವಾದ ಸಂಬಂಧ ಇರುತ್ತಿರಲಿಲ್ಲ. ಇಂತಹ ಪದ್ಧತಿ ಪಶ್ಚಿಮ ಬಂಗಾಳ, ಬಿಹಾರ ಮತ್ತು ಒರಿಸ್ಸಾ ರಾಜ್ಯಗಳಲ್ಲಿ, ಮದ್ರಾಸ್, ಅಸ್ಸಾಂ ಮತ್ತು ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ರೂಢಿಯಲ್ಲಿತ್ತು.

ಗೇಣಿ ಪದ್ಧತಿಯ ಸಮಸ್ಯೆಗಳು:

ಗೇಣಿ ಪದ್ಧತಿಯೆಂದರೆ ಜಮೀನಿನ ಮಾಲಿಕನು ತನ್ನ ಜಮೀನನ್ನು ಸಾಗುವಳಿ ಮಾಡಲು ಕೃಷಿಕಾರ್ಮಿಕನಿಗೆ ವಾರ್ಷಿಕ ಗೇಣಿಯ ಕರಾರಿನ ಮೇಲೆ ಕೊಡುವ ಪದ್ಧತಿಗೆ ಗೇಣಿ ಪದ್ಧತಿ ಎನ್ನುತ್ತೇವೆ. ಗೇಣಿ ಪದ್ಧತಿಯಲ್ಲಿ ಎರಡು ವಿಧಗಳಿವೆ ಅವುಗಳೆಂದರೆ.

೧. ಹಕ್ಕುದಾರ ಗೇಣಿದಾರರು (Occupancy Tenants)

೨. ಹಕ್ಕುರಹಿತ ಗೇಣಿದಾರರು (Non-occupancy Tenants)

ಹಕ್ಕುದಾರ ಗೇಣಿದಾರನು ಎಂದರೆ ಗೇಣಿದಾರನು ಜಮೀನ್ದಾರನ ಜಮೀನಿನ ಮೇಲೆ ಸಾಗುವಳಿ ಶಾಶ್ವತ ಹಕ್ಕನ್ನು ಹೊಂದಿರುತ್ತಾನೆ. ಗೇಣಿದಾರನನ್ನು ಸಾಗುವಳಿಯಿಂದ ಬಿಡಿಸಲಿಕ್ಕಾಗದು. ಏಕೆಂದರೆ ಶಾಶ್ವತ ಹಕ್ಕುದಾರನಿರುವುದರಿಂದ ನಿರ್ದಿಷ್ಟಪಡಿಸಿದ ಗೇಣಿಯನ್ನು ಪ್ರತಿವರ್ಷ ಕೊಡುತ್ತಾನೆ. ಹಕ್ಕು ರಹಿತ ಗೇಣಿದಾರನೆಂದರೆ ಗೇಣಿದಾರನು ಜಮೀನಿನ ಮೇಲೆ ಸಾಗುವಳಿಯ ಶಾಶ್ವತ ಹಕ್ಕನ್ನು ಹೊಂದಿರುವುದಿಲ್ಲ. ಜಮೀನಿನ ಮಾಲಿಕನು ತನಗೆ ಬೇಡವೆನಿಸಿದಾಗ ಗೇಣಿದಾರನನ್ನು ತೆಗೆದು ಹಾಕಬಹುದು. ಗೇಣಿದಾರನು ಜಮೀನಿನ ಒಡೆಯನಿಗೆ ಕೊಡುವ ಗೇಣಿಯೂ ಪ್ರತಿ ವರ್ಷ ಹೆಚ್ಚಾಗುತ್ತಾ ಹೋಗಬಹುದು. ಇಂತಹ ಗೇಣಿ ಪದ್ಧತಿ ದೇಶದಾದ್ಯಂತ ಶೇಕಡ ೯೦ ರಷ್ಟು ರೂಢಿಯಲ್ಲಿರುತ್ತದೆ.

ಗೇಣಿ ಪದ್ಧತಿಯ ಸಮಸ್ಯೆಗಳು:

ಜಮೀನ್ದಾರಿ ಪದ್ಧತಿ ನಿರ್ಮಾಲನೆಯಾದರೂ ಗೇಣಿ ಪದ್ಧತಿ ಮಾತ್ರ ಬಳಕೆಯಲ್ಲಿರುತ್ತದೆ. ಆದರೆ ಈ ಪದ್ಧತಿಯಲ್ಲಿ ಗೇಣಿದಾರರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವುಗಳೆಂದರೆ.

. ಗೇಣಿಯ ಏರಿಕೆ: ಜಮೀನಿನ ಒಡೆಯರು ತಮ್ಮ ಭೂಮಿಗೆ ತಗೆದುಕೊಳ್ಳುವ ಗೇಣಿಯನ್ನು ಪ್ರತಿವರ್ಷ ತಮ್ಮ ಮನಸ್ಸಿಗೆ ಬಂದಂತೆ ಏರಿಸುವುದು ಒಂದು ಪ್ರಮುಖ ಸಮಸ್ಯೆಯಾಗಿದೆ. ಇದರಿಂದ ಗೇಣಿದಾರರ ಆರ್ಥಿಕ ಪರಿಸ್ಥಿತಿಯ ಮೇಲೆ ಅನೇಕ ರೀತಿಯ ದುಷ್ಪರಿಣಾಮವುಂಟಾಗಿ ಬಡತನದ ಬೇಗೆಯಲ್ಲಿ ಬೆಂದು ಹೋಗುವಂತಹ ಪರಿಸ್ಥಿತಿ ಉಂಟಾಯಿತು.

. ಗೇಣಿದಾರರ ಬದಲಾವಣೆ: ಗೇಣಿದಾರರನ್ನು ಜಮೀನ್ದಾರರು ತಮ್ಮ ಇಷ್ಟದ ಪ್ರಕಾರ ನಿರ್ಧರಿಸುತ್ತಿದ್ದರು. ಗೇಣಿದಾರನಿಗೆ ಭೂಮಾಲಿಕರು ಸಾಗುವಳಿ ಕೊಡುವ ಭೂಮಿಯನ್ನು ಯಾವಾಗ ಕಸಿದುಕೊಳ್ಳುವರೋ ಎನ್ನುವ ಭಯ ಅವನನ್ನು ಕಾಡುತ್ತಿತ್ತು. ಇಂತಹ ಅನಿಶ್ಚಿತ ಪರಿಸ್ಥಿತಿಯಲ್ಲಿ ಆಧುನಿಕ ಬೇಸಾಯ ಪದ್ಧತಿಯನ್ನು ಅಳವಡಿಸಿ ಸಾಗುವಳಿ ಮಾಡಿ ತನ್ನ ಹಣಕಾಸಿನ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳುವ ಗೊಡವೆಗೆ ಗೇಣಿದಾರನು ಕೈ ಹಾಕುತ್ತಿರಲಿಲ್ಲ.

. ಸಾಲದ ಬಾಧೆ: ಅತ್ಯಧಿಕ ಪ್ರಮಾಣದ ಗೇಣಿಯನ್ನು ಮಾಲಿಕರಿಗೆ ಕೊಡುತ್ತಿರುವುದರಿಂದ ಗೇಣಿದಾರನು ಯಾವ ಲಾಭವನ್ನೂ ಪಡೆಯುತ್ತಿರಲಿಲ್ಲ. ಕೃಷಿ ಇಳುವರಿಯೂ ಕಡಿಮೆ ಇರುವುದರಿಂದ ಸಾಲದ ಬಾಧೆಯಲ್ಲಿಯೇ ಇರಬೇಕಾಗಿದ್ದಿತು. ಈ ಸಮಸ್ಯೆಗಳನ್ನು ನಿವಾರಿಸಲು ಸರ್ಕಾರ ಭೂ ಸುಧಾರಣ ಕ್ರಮಗಳನ್ನು ಕೈಗೊಂಡಿತು.

ಭೂ ಸುಧಾರಣಕ್ರಮದ ಉದ್ದೇಶಗಳು

ಸರ್ಕಾರದ ಭೂ ಸುಧಾರಣಾ ಕ್ರಮದ ಉದ್ದೇಶಗಳು ಕೆಳಗಿನಂತಿವೆ:

೧. ಜಮೀನ್ದಾರಿ ಮತ್ತು ಮಹಲ್ವಾರಿ ಪದ್ಧತಿಯನು ನಿರ್ಮೂಲನೆ ಮಾಡುವುದು.

೨. ಗೇಣಿ ಪದ್ಧತಿಯ ದೋಷವನ್ನು ನಿವಾರಿಸಿ ಕೃಷಿ ಕಾರ್ಮಿಕರಿಗೆ ನ್ಯಾಯ ದೊರಕಿಸಿಕೊಡುವುದು.

೩. ಭೂ-ಹಿಡುವಳಿಯ ಕನಿಷ್ಟ ಮತ್ತು ಗರಿಷ್ಟ ಮಿತಿಯನ್ನು ನಿಗದಿಪಡಿಸುವುದು.

೪. ಚಿಕ್ಕ ಹಿಡುವಳಿಗಳನ್ನು ಒಂದುಗೂಡಿಸುವುದು.

೫. ಉಳುವವನೇ ಭೂಮಿಯ ಒಡೆಯನೆಂದು ಸಾರುವುದು

೬. ಸಹಕಾರಿ ಬೇಸಾಯಕ್ಕೆ ಉತ್ತೇಜನ ನೀಡುವುದು.

ಸರ್ಕಾರ ಕೈಗೊಂಡ ಭೂ ಸುಧಾರಣಾ ಕ್ರಮಗಳು

ಸರ್ಕಾರ ಈ ಕೆಳಗಿನ ಭೂಸುಧಾರಣಾ ಕ್ರಮಗಳನ್ನು ಕೈಗೊಂಡಿದೆ.

. ಮಧ್ಯವರ್ತಿಯ ನಿರ್ಮೂಲನೆ: ಭೂಮಿ ಮತ್ತು ಗೇಣಿದಾರನ ಮಧ್ಯೆ ಜಮೀನ್ದಾರನು ಇರುತ್ತಿದ್ದನು. ಇಂತಹ ಜಮೀನ್ದಾರಿ ಪದ್ಧತಿಯಲ್ಲಿ ಗೇಣಿದಾರನು ಸುಲಿಗೆಗೆ ಒಳಗಾಗುತ್ತಿದ್ದನು. ಆದಕಾರಣ ಸರ್ಕಾರ ಇಂತಹ ಪದ್ಧತಿಯನ್ನು ನಿರ್ಮೂಲನೆ ಮಾಡುವ ಉದ್ದೇಶವನ್ನಿಟ್ಟುಕೊಳ್ಳಲಾಯಿತು. ಮೇಲಾಗಿ ಬಹುತೇಕ ರಾಜ್ಯ ಸರ್ಕಾರಗಳು ಈ ಬಗ್ಗೆ ಶಾಸನ ತಂದು ಜಮೀನ್ದಾರಿ ಪದ್ಧತಿಯನ್ನು ನಿರ್ಮೂಲನೆ ಮಾಡಿದವು. ಇದರಿಂದ ಜಮೀನ್ದಾರನ ಜಮೀನುಗಳೆಲ್ಲವೂ ಸರ್ಕಾರದ ವಶವಾಯಿತು. ಸರ್ಕಾರ ಇಂತಹ ಜಮೀನುಗಳನ್ನು ೩೦ ದಶಲಕ್ಷ ಭೂ ರಹಿತರಿಗೆ ಹಂಚಿತು. ಮೊದಲು ಗೇಣಿದಾರರಾಗಿದ್ದ ಈ ರೈತರು ಭೂ ಒಡೆಯರಾದರು, ರೈತರು ಮತ್ತು ಸರ್ಕಾರದ ನಡುವೆ ನೇರ ಸಂಪರ್ಕವುಂಟಾಯಿತು. ಸರ್ಕಾರದ ಈ ಕ್ರಮದಿಂದ ಗೇಣಿದಾರರೇ ನೇರವಾಗಿ ಸರ್ಕಾರಕ್ಕೆ ಭೂ ಕಂದಾಯ ಕಟ್ಟುವುದರಿಂದ ಜಮೀನಿನ ಮೇಲೆ ಸಂಪೂರ್ಣ ಹತೋಟಿ ಇಟ್ಟುಕೊಳ್ಳುವುದು ಅವರಿಗೆ ಸಾಧ್ಯವಾಯಿತು. ಜಮೀನ್ದಾರರಿಗೆ ಸರ್ಕಾರ ಹಣದ ರೂಪದಲ್ಲಿ ಮತ್ತು ಸರ್ಕಾರಿ ಸಾಲ ಪತ್ರಗಳ ರೂಪದಲ್ಲಿ ಪರಿಹಾರವನ್ನು ಕೊಡಲಾಯಿತು. ಇದಲ್ಲದೆ ೧೦ ದಶಲಕ್ಷ ಎಕರೆಯಷ್ಟು ಸಾಗುವಳಿ ಬಾರದೇ ಇರುವ ಭೂಮಿಯನ್ನು ಭೂ ರಹಿತ ಕೃಷಿ ಕಾರ್ಮಿಕರಿಗೆ ಹಂಚಿ ಸಾಗುವಳಿ ವ್ಯಾಪ್ತಿಯನ್ನು ವಿಸ್ತರಿಸಲಾಯಿರು. ಕೆಲವೊಂದು ಭಾಗದಲ್ಲಿ ಅರಣ್ಯ ಬೆಳೆಸಲು ಕ್ರಮಕೈಗೊಳ್ಳಲಾಯಿತು. ಇಂತಹ ಕೆಳ ಭೂಮಿಯ ಭಾಗವನ್ನು ಗ್ರಾಮ ಪಂಚಾಯಿತಿಗಳ ಆಡಳಿತಕ್ಕೆ ಒಪ್ಪಿಸಲಾಯಿತು. ಸರ್ಕಾರ ಜಾರಿಗೆ ತಂದ ಭೂ ಸುಧಾರಣೆಯು ಮೂರು ಪ್ರಮುಖ ಗುರಿಗಳನ್ನು ಹೊಂದಿರುತ್ತವೆ. ಅವುಗಳೆಂದರೆ ೧. ಗೇಣಿಯ ದರದ ನಿರ್ಧಾರ, ೨. ಗೇಣಿಯ ಹಕ್ಕಿನ ಭದ್ರತೆ, ೩. ಹಿಡುವಳಿ ಒಡೆತನದ ಹಕ್ಕು ಪ್ರಮುಖವಾಗಿದೆ.

. ಗೇಣಿ ದರದ ನಿರ್ಧಾರ: ಗೇಣಿದಾರನು ಭೂ ಮಾಲಿಕನಿಗೆ ಪ್ರತಿವರ್ಷ ಕೊಡಬೇಕಾದ ಗೇಣಿಯ ಗರಿಷ್ಠ ದರವನ್ನು ರಾಜ್ಯ ಸರ್ಕಾರಗಳು ಶಾಸನದ ಮೂಲಕ ನಿಗದಿಪಡಿಸಿವೆ. ಭೂ ಮಾಲಿಕರು ತಮ್ಮ ಮನಬಂದಂತೆ ಗೇಣಿ ನಿರ್ಧಾರ ಮಾಡುವಂತಿಲ್ಲ. ಗೇಣಿಯ ದರ ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆಯಾಗಿರುವುದಲ್ಲದೆ ಒಂದೇ ರಾಜ್ಯದ ವಿವಿಧ ಭಾಗಗಳಲ್ಲಿಯೂ ಬೇರೆ ಬೇರೆಯಾಗಿರುವುದೊಂದು ವೈಶಿಷ್ಟ್ಯವಾಗಿರುತ್ತದೆ. ಗೇಣಿಯನ್ನು ಭೂಮಿಯ ಫಲವತ್ತತೆ, ನೀರಾವರಿ ಸೌಕರ್ಯ ಇತ್ಯಾದಿಗಳ ಆಧಾರದ ಮೇಲೆ ನಿಗದಿ ಪಡಿಸಲಾಗುತ್ತಿದೆ. ಭೂಮಾಲಿಕನು ಸರ್ಕಾರ ನಿಗದಿಪಡಿಸಿದ ಗೇಣಿಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಇದರಿಂದ ಗೇಣಿದಾರನ ಸಾಗುವಳಿಗೆ ಯಾವುದೇ ಅನಿಶ್ಚಿತತೆಯುಂಟಾಗುವುದಿಲ್ಲ.

. ಗೇಣಿ ಹಕ್ಕಿನ ಭದ್ರತೆ: ಗೇಣಿದಾರನು ಸರ್ಕಾರ ನಿಗದಿಪಡಿಸಿದ, ಗೇಣಿಯನ್ನು ಭೂಮಾಲಿಕನಿಗೆ ಕೊಡುವ ತನಕ ಭೂ ಮಾಲಿಕನು ಗೇಣಿದಾರನನ್ನು ಬಿಡಿಸುವ ಹಾಗಿಲ್ಲ. ಗೇಣಿದಾರನು ಆಕಸ್ಮಿಕವಾಗಿ ಕಾನೂನಿನ ಪ್ರಕಾರ ತಪ್ಪು ಮಾಡಿದಲ್ಲಿ ಮಾತ್ರ ಅವನನ್ನು ಭೂಮಿಯಿಂದ ಹೊರಹಾಕಬಹುದು, ಗೇಣಿ ಹಕ್ಕಿನ ನಿಯಮಗಳಿಗೆ ಸಂಬಂಧಿಸಿದಂತೆ ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ಶಾಸನಗಳಿರುವುದುಂಟು.

. ಹಿಡುವಳಿಯ ಒಡೆತನದ ಹಕ್ಕು: ಸರ್ಕಾರ ಗೇಣಿದಾರನ ಅಥವಾ ಕೃಷಿ ಕಾರ್ಮಿಕರ ಹಿತರಕ್ಷಣೆಗೋಸ್ಕರ “ಉಳುವವನೆ ಭೂಮಿಯ ಒಡೆಯನೆಂಬ” ತತ್ವದ ಆಧಾರದ ಮೇಲೆ ಅವತ ಹಿತ ರಕ್ಷಣೆ ಮಾಡುವಲ್ಲಿ ನಿರಂತರವಾಗಿ ಶ್ರಮಿಸುತ್ತದೆ. ಕೆಲವೂಂದು ಭೂಮಿಯನ್ನು ಭೂಮಾಲಿಕನಿಗೆ ಬಿಟ್ಟುಕೊಟ್ಟು ಉಳಿದ ಭೂಮಿಯ ಒಡೆತನವನ್ನು ಗೇಣಿದಾರರಿಗೆ ಕೊಡಲು ಕ್ರಮವನ್ನು ಕೈಗೊಳ್ಳಲಾಗಿದೆ. ಭೂಮಿಯನ್ನು ಕಳೆದುಕೊಂಡ ಭೂಮಾಲಿಕನಿಗೆ ಪರಿಹಾರ ಮತ್ತು ಭೂ ಮಾಲಿಕರಿಗೆ ಪರಿಹಾರ ನೀಡಲು ವಿವಿಧ ರಾಜ್ಯಗಳಲ್ಲಿ ವಿವಿಧ ನಿಯಮಗಳು ಇರುತ್ತವೆ.

ಕೃಷಿ ಹಣಕಾಸು

ಕೃಷಿ ವಲಯ ನಮ್ಮ ದೇಶದ ಅರ್ಥವ್ಯವಸ್ಥೆಯಲ್ಲಿ ಮಹತ್ವದ ಪಾತ್ರ ವಹಿಸಿರುತ್ತದೆ. ಬಹುತೇಕ ಕೃಷಿ ಹಿಡುವಳಿಗಳು ಚಿಕ್ಕ ಅತೀ ಚಿಕ್ಕದಾಗಿರುವುದರಿಂದ ನಮ್ಮ ದೇಶದ ಕೃಷಿಕರು ತಾಂತ್ರಿಕ ಮತ್ತು ಹಣಕಾಸಿನ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದಕ್ಕೆ ಕಡಿಮೆ ಕೃಷಿಕರು ಉತ್ಪಾದನೆ ಮತ್ತು ಬಡತನದ ವಿಷಮ ಚಕ್ರ ನೇರವಾಗಿ ಕಾರಣಗಳಾಗಿವೆ. ಇಂತಹ ಹಿನ್ನೆಲೆಯಲ್ಲಿ ಕೃಷಿ ಹಣಕಾಸು ಕೃಷಿಯಲ್ಲಿನ ಸಮಸ್ಯೆಗಳ ನಿವಾರಣೆಗೆ ಅತಿ ಅವಶ್ಯಕವಾಗಿದೆ. ಕೃಷಿಕರಿಗೆ ಬೀಜ, ಗೊಬ್ಬರ, ಕ್ರಿಮೀನಾಶಕ, ಟ್ರಾಕ್ಟರ್, ದಿನನಿತ್ಯದ ಕೃಷಿ ಚಟುವಟಿಕೆಗಳಿಗೆ ಮತ್ತಿತರ ಶಾಶ್ವತ ಸೊತ್ತಿನ ನಿರ್ಮಾಣಕ್ಕೆ ಹಣಕಾಸು ಅತ್ಯಾವಶ್ಯಕವಾಗಿರುತ್ತದೆ. ಈ ಎಲ್ಲಾ ಉದ್ದೇಶಗಳಿಗೆ ಬೇಕಾಗುವ ಕೃಷಿ ಹಣಕಾಸನ್ನು ನಾವು ಮೂರು ವಿಧವಾಗಿ ವಿಂಗಡಿಸಬಹುದು.

ಅ. ಅಲ್ಪಾವದಿ ಸಾಲ

ಆ. ಮಧ್ಯಮಾವಧಿ ಸಾಲ

ಇ. ದೀರ್ಘಾವಧಿ ಸಾಲ

. ಅಲ್ಪಾವಧಿ ಸಾಲ: ಅಲ್ಪಾವಧಿ ಸಾಲದ ಅವಧಿ ೬ ತಿಂಗಳಿನಿಂದ ೧೨ ತಿಂಗಳವರೆಗಿನ ಸಾಲಗಳಾಗಿರುತ್ತದೆ. ರೈತರು ಬೀಜ, ಗೊಬ್ಬರ, ಕ್ರಿಮಿನಾಶಕ ಮತ್ತಿತರ ದಿನನಿತ್ಯದ ಕೃಷಿ ಚಟುವಟಿಕೆಗಳಿಗೆ ಸಾಲವನ್ನು ತೆಗೆದುಕೊಳ್ಳುವರು. ಕೃಷಿ ಹುಟ್ಟುವಳಿ ಬಂದ ನಂತರ ಮಾರಾಟ ಮಾಡಿ ಇಂತಹ ಸಾಲವನ್ನು ಮರುಪಾವತಿ ಮಾಡುತ್ತಾರೆ.

. ಮಧ್ಯಮಾವಧಿ ಸಾಲ: ಮಧ್ಯಮಾವಧಿ ಸಾಲದ ಅವಧಿ ೧೨ ತಿಂಗಳಿಗಿಂತ ಹೆಚ್ಚು ೫ ವರ್ಷಗಳಿಗಿಂತ ಕಡಿಮೆ ಅವಧಿ ಸಾಲಗಳಾಗಿವೆ. ಇಂತಹ ಸಾಲವನ್ನು ರೈತರು ಜಾನುವಾರು, ಕೃಷಿ ಸಲಕರಣೆ, ಜಮೀನಿನ ಸುಧಾರಣೆ ಮಾಡಲು ಮಧ್ಯಮಾವಧಿ ಸಾಲಗಣನ್ನು ತೆಗೆದುಕೊಳ್ಳುತ್ತಾರೆ.

. ದೀರ್ಘಾವಧಿ ಸಾಲ: ದೀರ್ಘಾವಧಿ ಸಾಲ ೫ ವರ್ಷಗಳಿಗಿಂತ ಹೆಚ್ಚಿನ ಅವಧಿಯ ಸಾಲಗಳಾಗಿವೆ. ಇಂತಹ ಸಾಲವನ್ನು ರೈತರು ಟ್ರ್ಯಾಕ್ಟರ್ ಮುಂತಾದ ಯಂತೋಪಕರಣಗಳನ್ನು ಕೊಳ್ಳಲು, ಜಮೀನು ಕೊಳ್ಳಲು, ಸಾಲ ಮರುಪಾವತಿ ಮಾಡಲಿಕ್ಕೆ, ಬಾವಿ ತೋಡಿಸಲು ಮತ್ತಿತರ ಶಾಶ್ವತ ಕೃಷಿ ಚಟುವಟಿಕೆಗೆಳಿಗೆ ದೀರ್ಘಾವಧಿ ಸಾಲಗಳ ಬೇಡಿಕೆ ಉದ್ಭವಿಸುತ್ತದೆ.

ಕೃಷಿ ಸಾಲದ ದಿಕ್ಕಿನಲ್ಲಿ ಕೃಷಿ ಬದಲಾವಣೆ

ನಮ್ಮ ದೇಶದ ಕೃಷಿ ವಲಯದಲ್ಲಿನ ಸಾಲದ ಪರಿಸ್ಥಿತಿಯನ್ನು ಅವಲೋಕಿಸಿದರೆ ೧೯೫೧ ರಿಂದ ೧೯೮೧ರ್ ಮೂರು ದಶಕಗಳಲ್ಲಾದ ಹಲವಾರು ಬದಲಾವಣೆಗಳನ್ನು ಕಾಣಬಹುದು. ಕೃಷಿಗೆ ಒದಗಿಸುವ ಸಾಲಗಳನ್ನು ನಾವು ಸಾಂಸ್ಥಿಕ ಮತ್ತು ಸಾಂಸ್ಥಿಕೇತರ ಸಾಲಗಳೆಂದು ವರ್ಗೀಕರಿಸುತ್ತೇವೆ. ಸಾಂಸ್ಥಿಕ ಸಾಲ ನೀಡುವ ಸಂಸ್ಥೆಗಳೆಂದರೆ ವಾಣಿಜ್ಯ ಬ್ಯಾಂಕುಗಳು, ಸಹಕಾರಿ ಬ್ಯಾಂಕುಗಳು ಅಥವಾ ಸಂಸ್ಥೆಗಳು ಮತ್ತು ಸರ್ಕಾರಗಳಾಗಿವೆ. ಸಾಂಸ್ಥಿಕೇತರ ಸಾಲ ನೀಡುವ ಸಂಸ್ಥೆಗಳೆಂದರೆ ಸಾಲ ಕೊಡುವ ಸಾಹುಕಾರರು, ಕೃಷಿ ಲೇವಾದೇವಿದಾರರು, ಬಂಧುಗಳು ಮತ್ತು ಸ್ನೇಹಿತರು, ವ್ಯಾಪಾರಿಗಳು, ಜಮೀನ್ದಾರರು ಮತ್ತಿತರರು ಇರುತ್ತಾರೆ. ಭಾರತ ಸರ್ಕಾರ ಕೃಷಿಕರಿಗೆ ಸಾಕಷ್ಟು ಸಾಲದ ಸೌಲಭ್ಯಗಳನ್ನು ಸಾಂಸ್ಥಿಕ ಸಾಲ ನೀಡುವ ಸಂಸ್ಥೆಗಳಿಂದ ಒದಗಿಸುವ ಉದ್ದೇಶದಿಂದ ಹಲವಾರು ಜರೂರು ಕ್ರಮಗಳನ್ನು ಯೋಜನಾವಧಿಯಲ್ಲಿ ಕೈಗೊಂಡಿದೆ. ಸಾಂಸ್ಥಿಕೇತರ ಸಂಸ್ಥೆಗಳು ಕೃಷಿಕರ ಮೇಲೆ ಅತ್ಯಧಿಕ ಬಡ್ದಿ ವಸೂಲಿ (ಪ್ರತಿಶತ ೩೬ ರಿಂದ ೧೨೦ರ ತನಕ) ಮಾಡಿ ಶೋಷಣೆಗೆ ಗುರುಪಡಿಸುತ್ತಿರುವುದರಿಂದ ಇವರ ಪ್ರಾಮುಖ್ಯತೆಯನ್ನು ಕಡಿಮೆ ಮಾಡಿ ಬಡ ಕೃಷಿಕರನ್ನು ಋಣ ಮುಕ್ತರನ್ನಾಗಿ ಮಾಡುವ ಉದ್ದೇಶವನ್ನು ಸರ್ಕಾರ ಇಟ್ಟುಕೊಂಡು ಹಲವಾರು ಸುಧಾರಣಾ ಕ್ರಮಗಳನ್ನು ಕಾಲಾನುಕ್ರಮೇಣ ಕೈಗೊಂಡಿದೆ. ಸರ್ಕಾರದ ಸತತ ಪರಿಶ್ರಮದಿಂದಾಗಿ ೧೯೫೧ ರಿಂದ ೧೯೯೬ ರವರೆಗೆ ಕೃಷಿ ಸಾಲದ ದಿಕ್ಕಿನಲ್ಲಿ ಪ್ರಾಮಾಣಾತ್ಮಕ ಬದಲಾವಣೆಯಾಗಿದೆ. ಇದನ್ನು ಕೆಳಗಿನ್ ಪಟ್ಟಿಯಿಂದ ತಿಳಿದುಕೊಳ್ಳಬಹುದು.

ಪಟ್ಟಿ: ೧೯೫೧ ರಿಂದ ೧೯೮೧ರ ವರೆಗಿನ ಕೃಷಿ ಸಾಲದ ದಿಕ್ಕಿನ ಬದಲಾವಣೆ

ಸಾಲದ ಮೂಲಗಳು

೧೯೫೧೫೨ (ಪ್ರತಿಶತ)

೧೯೭೧
(
ಪ್ರತಿಶತ)

೧೯೮೧
(
ಪ್ರತಿಶತ)

೧೯೯೫೯೬
(
ಪ್ರತಿಶತ)

ಸಾಂಸ್ಥಿಕೇತರ ಸಂಸ್ಥೆಗಳು
ಸಾಲಕೊಡುವ ಸಾಹುಕಾರರು

೪೫

೧೪

ಕೃಷಿ ಲೇವಾದೇವಿದಾರರು

೨೫

೨೩

ಸಂಬಂಧಿಗಳು ಮತ್ತು ಸ್ನೇಹಿತರು

೧೪

೧೪

ವ್ಯಾಪಾರಿಗಳು

ಜಮೀನ್ದಾರರು

ಇತರರು

ಒಟ್ಟು

೯೩

೭೧

೩೯

೨೦

ಸಾಂಸ್ಥಿಕ ಸಂಸ್ಥೆಗಳು

ಸರ್ಕಾರ (ಕೃಷಿ ಸಾಲ)

ಸಹಕಾರಿ ಸಂಸ್ಥೆಗಳು

ವಾಣಿಜ್ಯ ಬ್ಯಾಂಕುಗಳು

೨೮

೪೪

ಒಟ್ಟು

೨೯

೬೧

೮೦

೧೦೦

೧೦೦

೧೦೦

೧೦೦

 

ಸಾಂಸ್ಥಿಕ ಮೂಲಗಳು (Institutional Sources)

ಕೆಳಗಿನ ಸಾಂಸ್ಥಿಕ ಮೂಲಗಳಿಂದ ರೈತರು ಸಾಲದ ನೆರವನ್ನು ಪಡೆಯುತ್ತಿದ್ದಾರೆ.

ಅ) ಸಹಕಾರಿ ಸಂಸ್ಥೆಗಳು

ಆ) ವಾಣಿಜ್ಯ ಬ್ಯಾಂಕ್ ಗಳು

ಇ) ಪ್ರಾದೇಶಿಕ ಗ್ರಾಮಿಣ ಬ್ಯಾಂಕ್ ಗಳು

ಈ) ಸರಕಾರ

. ಸಹಕಾರಿ ಸಂಸ್ಥೆಗಳು: ಸಹಕಾರಿ ಸಂಘಗಳ ಸ್ಥಾಪನೆ ನಮ್ಮ ದೇಶದಲ್ಲಿ ೧೯೦೪ ರಲ್ಲಿ ಆಯಿತು. ನಮ್ಮ ದೇಶದಲ್ಲಿ ಕೆಳಗಿನ ಸಂಸ್ಥೆಗಳು ಕೃಷಿಕರಿಗೆ ಪತ್ತಿನ ಸೌಲಭ್ಯ ಒದಗಿಸುತ್ತಿವೆ.

. ಪ್ರಾಥಮಿಕ ಸಹಕಾರಿ ಪತ್ತಿನ ಸಂಸ್ಥೆಗಳು: ಇವುಗಳು ಗ್ರಾಮೀಣ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅಲ್ಪಕಾಲಾವಧಿ ಸಾಲವನ್ನು ಕೃಷಿಕರಿಗೆ ಒದಗಿಸುತ್ತಿವೆ ೧೯೯೬ರ ವೇಳೆಗೆ ೯೫೦೦೦ ಇಂತಹ ಸಂಸ್ಥೆಗಳು ಗ್ರಾಮೀಣ ಭಾಗದಲ್ಲಿ ಕಾರ್ಯನಿರ್ವಹಿಸಿ ಪ್ರತಿಶತ ೯೬ ರಷ್ಟು ಗ್ರಾಮೀಣ ಪ್ರದೇಶಕ್ಕೆ ಇವುಗಳ ವ್ಯಾಪ್ತಿ ಹಬ್ಬಿದ್ದಿತು. ಎಲ್ಲಾ ಸಂಸ್ಥೆಗಳಲ್ಲೆ ೫೪೮ ಲಕ್ಷ ಸದಸ್ಯರು ರೂ. ೧೦೦೦ ಕೋಟಿ ಠೇವಣಿ ಇಟ್ಟಿದ್ದು, ರೂ. ೬೨೬೦ ಕೋಟಿ ಸಾಲ ಪಡೆದಿದ್ದರು. ಪ್ರಾಥಮಿಕ ಸಹಕಾರಿ ಸಂಘಗಳ ಮರುಪಾವತಿ ಬಾಕಿ ಇದೇ ವೇಳೆಗೆ. ಪ್ರತಿಶತ ೪೨ ರಷ್ಟು ಇದ್ದಿತ್ತು.

. ಜಿಲ್ಲಾ ಸಹಕಾರಿ ಸಂಸ್ಥೆಗಳು: ಈ ಸಂಸ್ಥೆಯ ಮುಖ್ಯ ಆಡಳಿತ ಕಛೇರಿ ಜಿಲ್ಲೆಯ ವ್ಯಾಪ್ತಿಯಲ್ಲಿದ್ದು, ತನ್ನದೇ ಆದ ಶಾಖೆಗಳ ಮೂಲಕ ವ್ಯವಹಾರ ನಡೆಸುತ್ತದೆ, ಜಿಲ್ಲಾ ಸಹಕಾರಿ ಪತ್ತಿನ ಬ್ಯಾಂಕು, ರಾಜ್ಯಮಟ್ಟದ ಅಪೆಕ್ಸ್ ಬ್ಯಾಂಕು ಮತ್ತು ಗ್ರಾಮೀಣ ಮಟ್ಟದ ಪ್ರಾಥಮಿಕ ಸಹಕಾರಿ ಸಂಘಗಳಿಗೆ ಜೋಡಣೆ ಹೆಣೆಯುವ ಸಂಸ್ಥೆಯಾಗಿದೆ. ಜಿಲ್ಲಾ ಸಹಕಾರಿ ಪತ್ತಿನ ಬ್ಯಾಂಕು ಪ್ರಾಥಮಿಕ ಸಹಕಾರಿ ಪತ್ತಿನ ಸಂಘಗಳ ಮೂಲಕ ಕೃಷಿಕರಿಗೆ ಸಾಲದ ಸೌಲಭ್ಯವನ್ನು ಒದಗಿಸುತ್ತವೆ. ೧೯೯೬ರ ವೇಳೆಗೆ ದೇಶದಾದ್ಯಂತ ೩೩೭ ಜಿಲ್ಲಾ ಸಹಕಾರಿ ಪತ್ತಿನ ಸಂಸ್ಥೆಗಳು ಇದ್ದು ೭೨೭೫ ಶಾಖೆಗಳ ಮೂಲಕ ಕೆಲಸ ನಿರ್ವಹಿಸುತ್ತಿದ್ದವು. ಇವುಗಳ ಠೇವಣಿ ಹಣ ರೂ. ೩೦೦೦ ಕೋಟಿ ಇದ್ದು, ರೂ. ೩೭೧೦ ಕೋಟಿ ಸಾಲ ನೀಡಿದ್ದವು. ಮರು ಪಾವತಿ ಬಾಕಿ ಪ್ರತಿಶತ ೪೦ರಷ್ಟು ಇದೇ ವೇಳೆಗೆ ಇದ್ದಿತ್ತು.

. ರಾಜ್ಯ ಸಹಕಾರಿ ಬ್ಯಾಂಕ್: ಪ್ರತಿಯೊಂದು ರಾಜ್ಯದಲ್ಲಿ ರಾಜ್ಯ ಸಹಕಾರಿ ಬ್ಯಾಂಕ್ ಅಥವಾ ಅಪೆಕ್ಸ್ ಬ್ಯಾಂಕು ಕಾರ್ಯ ನಿರ್ವಹಿಸುತ್ತಿದ್ದು, ಜಿಲ್ಲಾ ಸಹಕಾರಿ ಬ್ಯಾಂಕುಗಳ ಮೂಲಕ ಪ್ರಾಥಮಿಕ ಸಹಕಾರಿ ಸಂಸ್ಥೆಗಳಿಗೆ ಹಣಕಾಸಿನ ನೆರವನ್ನು ಕೃಷಿಗೆ ನೀಡುತ್ತವೆ. ೧೯೮೦ರ ವೇಳೆಗೆ ದೇಶದಾದ್ಯಂತ ೨೭ ರಾಜ್ಯ ಸಹಕಾರಿ ಬ್ಯಾಂಕುಗಳು ಕಾರ್ಯ ನಿರ್ವಹಿಸುತ್ತಿದ್ದು. ರೂ. ೧೪೨೩ ಕೋಟಿ ಠೇವಣಿ ಹೊಂದಿದ್ದವು. ಒಟ್ಟಾರೆ ರೂ. ೨೪೦೦ ಕೋಟಿ ಸಾಲವನ್ನು ನೀಡಿದ್ದವು.

. ಭೂ ಅಭಿವೃದ್ಧಿ ಬ್ಯಾಂಕುಗಳು: ಮೇಲಿನ ಸಹಕಾರಿ ಸಂಸ್ಥೆಗಳು ಕೃಷಿಕರಿಗೆ ಅಲ್ಪ ಮತ್ತು ಮಧ್ಯಮ ಕಾಲಾವಧಿ ಸಾಲವನ್ನು ನೀಡುತ್ತಿವೆ. ಭೂ ಅಭಿವೃದ್ಧಿ ಬ್ಯಾಂಕ್ ಗಳಲ್ಲಿ ಎರಡು ಪ್ರಕಾರಗಳಿವೆ ೧. ಪ್ರಾಥಮಿಕ ಭೂ ಅಭಿವೃದ್ಧಿ ಬ್ಯಾಂಕ್ ಕೃಷಿಕರಿಗೆ ನೇರವಾಗಿ ಸಾಲವನ್ನು ನೀಡುತ್ತವೆ. ದೇಶದಾದ್ಯಂತ ೧೯೮೦ರ ವೇಳೆಗೆ ೮೯೬ ಪ್ರಾಥಮಿಕ ಭೂ ಅಭಿವೃದ್ಧಿ ಬ್ಯಾಂಕ್ ಗಳು ಕೆಲಸವನ್ನು ನಿರ್ವಹಿಸುತ್ತಿದ್ದು. ರೂ. ೧೧೩೦ ಕೋಟಿ ಕಾರ್ಯ ನಿರ್ವಹಿಸುವ ಬಂಡವಾಳವನ್ನು ಹೊಂದಿದ್ದವು. ಇದರಲ್ಲಿ ರೂ. ೨೦೫ ಕೋಟಿ ಸಾಲ ನೀಡಿದ್ದರೆ, ರೂ. ೮೬೬ ಕೋಟಿ ಹಣಕಾಸಿನ ನೆರವನ್ನು ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನಿಂದ ಪಡೆದಿದ್ದವು. ಈ ಬ್ಯಾಂಕುಗಳ ಮರುಪಾವತಿ ಬಾಕಿ ಇದೇ ವೇಳೆಗೆ ರೂ. ೮೯೧ ಕೋಟಿಯಷ್ಟು ಇದ್ದಿತ್ತು. ೨. ರಾಜ್ಯ ಭೂ ಅಭಿವೃದ್ಧಿ ಬ್ಯಾಂಕ್ (State Land Development Bank) ರಾಜ್ಯ ಭೂ ಅಭಿವೃದ್ಧಿ ಬ್ಯಾಂಕ್ ರಾಜ್ಯ ಮಟ್ಟದ ಸಂಸ್ಥೆಯಾಗಿದ್ದು ಪ್ರಾಥಮಿಕ ಭೂ ಅಭಿವೃದ್ಧಿ ಬ್ಯಾಂಕಿಗೆ ಸಾಲದ ನೆರವನ್ನು ನೀಡುತ್ತಿವೆ. ಈ ಬ್ಯಾಂಕ್ ಗಳು ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನಿಂದ ಹಣಕಾಸಿನ ಪುನರ್ ನೆರವನ್ನು ಪಡೆದು ಪ್ರಾಥಮಿಕ ಭೂ ಅಭಿವೃದ್ಧಿ ಬ್ಯಾಂಕ್ ಗಳ ಮೂಲಕ ಕೃಷಿಕರಿಗೆ ಸಾಲ ನೀಡುತ್ತವೆ. ದೀರ್ಘಾಕಾಲಾವಧಿ ಸಾಲ ನೀಡುವ ಈ ಸಂಸ್ಥೆಗಳಿಗೆ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಸ್ಥಾಪನೆಯಾದ ನಂತರ ೧೯೮೨-೮೩ನೇ ಹಣಕಾಸಿನ ವರ್ಷದಿಂದ ಪುನರ್-ಧನ ಸೌಲಭ್ಯವನ್ನು ವಿಸ್ತ್ರರಿಸಿ ಭೂ ಅಭಿವೃದ್ಧಿ ಬ್ಯಾಂಕುಗಳ ಬದಲು ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ಪ್ರಾಥಮಿಕ ಭೂ ಅಭಿವೃದ್ಧಿ ಬ್ಯಾಂಕುಗಳಿಗೆ) ಎಂದು ಮತ್ತು ರಾಜ್ಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ರಾಜ್ಯ ಭೂ ಅಭಿವೃದ್ದಿ ಬ್ಯಾಂಕ್ ಗಳಿಗೆ) ಎಂದು ಪುನರ್ ನಾಮಕರಣ ಮಾಡಲಾಯಿತು.

. ಮಾಣಿಜ್ಯ ಬ್ಯಾಂಕ್ ಗಳು: ವಾಣಿಜ್ಯ ಬ್ಯಾಂಕ್ ಗಳಲ್ಲಿ ಮೂರು ಪ್ರಕಾರದ ಬ್ಯಾಂಕುಗಳು ಕೃಷಿಗೆ ಸಾಲವನ್ನು ನೀಡುತ್ತಿವೆ. ಅವುಗಳೆಂದರೆ ಸ್ಟೇಟ್ ಬ್ಯಾಂಕ್ ಮತ್ತು ಅದರ ಸಹ ಬ್ಯಾಂಕ್ ಗಳು, ರಾಷ್ಟ್ರೀಕೃತ ವಾಣಿಜ್ಯ ಬ್ಯಾಂಕುಗಳು ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಾಗಿರುತ್ತವೆ. ದೇಶದಾದ್ಯಂತ ಕೇವಲ ೮೨೬೨ ವಾಣಿಜ್ಯ ಬ್ಯಾಂಕುಗಳು ೧೯೫೧ರ ವೇಳೆಗೆ ಕೆಲಸ ನಿರ್ವಹಿಸುತ್ತಿದ್ದರೆ, ಇವುಗಳ ಸಂಖ್ಯೆ ೧೯೯೬ರ ವೇಳೆಗೆ ೬೫೦೦೦ ಕ್ಕೆ ಏರಿತು. ಎಲ್ಲಾ ವಾಣಿಜ್ಯ ಬ್ಯಾಂಕುಗಳಿಂದ ಕೃಷಿಗೆ ರೂ. ೩೧೦೦೦ ಕೋಟಿ ಸಾಲ ನೀಡಿ ನಿಗದಿತ ಪ್ರತಿಶತ ೨೪. ೪ರಷ್ಟು ಸಾಲವನ್ನು ನೀಡಲಾಗಿದ್ದಿತ್ತು.

. ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಗಳು: ಕೃಷಿ ಕಾರ್ಮಿಕರಿಗೆ, ಗ್ರಾಮೀಣ ಕರಕುಶಲದಾರರಿಗೆ, ಚಿಕ್ಕ ವ್ಯಾಪಾರಿಗಳಿಗೆ ಮತ್ತಿತರ ಅಶಕ್ತ ಜನರಿಗೆ ಸಾಲ ನೀಡುವ ಮಹತ್ತರವಾದ ಧ್ಯೇಯವನ್ನೀಟ್ಟುಕೊಂಡು ಜನ್ಮ ತಾಳಿದವು. ಇಂತಹ ದುರ್ಬಲ ಜನರಿಗೆ ಸಾಲ ಸೌಲಭ್ಯ ನೀಡಿ ಅವರ ಉತ್ಪಾದನ ಸಾಮರ್ಥ್ಯ ಹೆಚ್ಚಿಸಿ ಒಟ್ಟಾರೆ ಗ್ರಾಮೀಣ ಅಭಿವೃದ್ಧಿ ಸಾಧಿಸುವ ಮಹತ್ವಾಕಾಂಕ್ಷೆಯನ್ನಿಟ್ಟುಕೊಂಡಿವೆ. ೧೯೯೬ರ ವೇಳೆಗೆ ಇಂತಹ ೧೯೬ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ದೇಶದಾದ್ಯಂತ ಕಾರ್ಯ ನಿರ್ವಹಿಸುತ್ತಿದ್ದು, ೩೮೦ ಜಿಲ್ಲೆಗಳಿಗೆ ಇವುಗಳ ವ್ಯಾಪ್ತಿ ವಿಸ್ತರಿಸಿದೆ. ಇವುಗಳ ಶಾಖೆಗಳು ೧೯೮೪ರಲ್ಲಿ ೧೦೨೪೫ ಇದ್ದರೆ, ೧೯೯೯ ರ ವೇಳೆಗೆ ೧೫೦೦೦ಕ್ಕೆ ಏರಿತು. ಇವುಗಳು ನೀಡಿರುವ ಸಾಲದ ಮೊತ್ತ ಇದೇ ವೇಳೆಗೆ ರೂ. ೧೦೮೧ ಕೋಟಿಯಿಂದ ರೂ. ೫೧೦೦ ಕೋಟಿಗೆ ಏರಿತು. ಒಟ್ಟಾರೆ ೧೯೬ ಗ್ರಾಮೀಣ ಬ್ಯಾಂಕ್ ಗಳಲ್ಲಿ ೧೫೧ ಗ್ರಾಮೀಣ ಬ್ಯಾಂಕುಗಳು ನಷ್ಟದಲ್ಲಿ ಇದೇ ವೇಳೆಗೆ ನಡೆದಿದ್ದು, ಕೇಂದ್ರ ಸರ್ಕಾರ ಇವುಗಳ ವ್ಯವಹಾರ ಸುಧಾರಿಸಿಕೊಳ್ಳುವುದಕ್ಕಾಗಿ ಹಲವಾರು ಸುಧಾರಣ ಕ್ರಮಗಳನ್ನು ಪ್ರಕಟಿಸಿವೆ. ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ ಮರುಪಾವತಿ ಬಾಕಿ ಮೇಲಿನ ವೇಳೆಗೆ ಪ್ರತಿಶತ ೨೬. ೭ ರಿಂದ ೩೨. ೧ಕ್ಕೆ ಏರಿದ್ದಿತು.

. ಸರಕಾರ: ಸರಕಾರವು ಕೃಷಿಕರಿಗೆ ನೇರವಾಗಿ ಸಾಲ ನೀಡುವ ಸೌಲಭ್ಯವನ್ನು ಸ್ಥಗಿತಗೊಳಿಸಿದೆ. ಆದರೆ ಕೆಲ ವರ್ಷಗಳ ಹಿಂದೆ ತಕಾವಿ ಸಾಲವೆಂದು ಕೃಷಿಕರಿಗೆ ನೀಡುವ ಪದ್ಧತಿಯನ್ನಿಟ್ಟುಕೊಂಡಿದ್ದಿತ್ತು. ಈಗ ಸರಕಾರ ಬ್ಯಾಂಕುಗಳ ಮೂಲಕ ಬಡತನ ನಿರ್ಮಾಲನಾ ಕಾರ್ಯಕ್ರಮ, ಉದ್ಯೋಗ ಒದಗಿಸುವ ನೆಹರೂ ರೋಜ್ ಗಾರ್ ಯೋಜನೆ, ವಿಶೇಷ ಘಟಕ ಯೋಜನೆ, ಭಾಗ್ಯಜ್ಯೋತಿ ಮತ್ತಿತರ ಹಲವಾರು ಯೋಜನೆಗಳ ಸಹಾಯಧನವೆಂದು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ನೀಡುತ್ತವೆ.

ಕೃಷಿ ಮಾರುಕಟ್ಟೆ

ಕೃಷಿ ಮಾರುಕಟ್ಟೆಗಳು ಕೃಷಿಕರ ಹಣಕಾಸಿನ ಪರಿಸ್ಥಿತಿ ಸುಧಾರಿಸಲಿಕ್ಕೆ ಮೂಲ ಸೌಲಭ್ಯಗಳನ್ನೊದಗಿಸುತ್ತವೆ. ಇವುಗಳು ಕೃಷಿಕರು ಬೆಳೆದ ಹುಟ್ಟುವಳಿಗೆ ಉತ್ತಮ ಬೆಲೆ ನಿಗದಿ ಪಡಿಸಿ ಕೃಷಿಯನ್ನು ಲಾಭದಾಯಕ ವೃತ್ತಿಯನ್ನಾಗಿ ಮಾಡುತ್ತವೆ. ಮಾರುಕಟ್ಟೆಗಳು ಕೃಷಿಕರಿಗೆ ಲಾಭದಾಯಕ ಬೆಲೆ ಒದಗಿಸಲು ವಿಫಲವಾದರೆ ರೈತರು ತಾವು ಬೆಳೆದ ಹುಟ್ಟುವಳಿಯನ್ನು ಸಮೀಪದ ದಲ್ಲಾಳಿಗಳಿಗೆ ಮಾರಿ ಬಂದಷ್ಟು ಹಣವನ್ನು ಪಡೆದು ತೃಪ್ತಿ ಪಡಬೇಕಾಗುತ್ತದೆ. ಇಂತಹ ಮಾರಾಟದ ವ್ಯವಸ್ಥೆಯಿಂದ ರೈತರಿಗೆ ಸಿಗಬೇಕಾಗದ ಲಾಭವನ್ನು ದಲ್ಲಾಳಿಗಳೇ ಪಡೆದುಕೊಳ್ಳುತ್ತಾರೆ. ನಮ್ಮ ದೇಶದ ಕೃಷಿಕರು ಕೃಷಿ ಮಾರಾಟದಲ್ಲಿ ಅನೇಕ ಲೋಪ-ದೋಷಗಳನ್ನು ಎದುರಿಸುತ್ತಿದ್ದಾರೆ. ಅವುಗಳು ಕೆಳಗಿನಂತಿವೆ.

. ಸಂಘಟನೆಯ ಅಭಾವ: ನಮ್ಮ ದೇಶದ ಕೃಷಿಕರು ಅನಕ್ಷರಸ್ತರಾಗಿರುವುದರಿಂದ ಸಂಘಟಿತ ಹೋರಾಟ ಮನೋಭಾವನೆಯನ್ನು ಹೊಂದಿರುವುದಿಲ್ಲ. ಇದರಿಂದ ಇವರು ದಲ್ಲಾಳಿಗಳಿಂದ ವ್ಯವಸ್ಥಿತವಾಗಿ ಶೋಷಣೆಗೆ ಒಳಪಟ್ಟ ಜನರಾಗಿದ್ದಾರೆ. ಆದರೆ ಕೃಷಿ ಹುಟ್ಟುವಳಿ ಕೊಳ್ಳುವ ಉದ್ದಿಮೆದಾರರು ಸಗಟು ವ್ಯಾಪಾರಸ್ಥರು, ಮತ್ತು ಸಂಸ್ಕರಣದಾರರು ಬಲವಾದ ಸಂಘಟನೆಯನ್ನು ಹೊಂದಿದ್ದಾರೆ. ಇವರು ರೈತರು ಬೆಳೆದ ಬೆಳೆಗಳೆಗೆ ನ್ಯಾಯಯುತ ಬೆಲೆ ನೀಡುತ್ತಿಲ್ಲ. ತೂಕ, ಅಳತೆ, ದಲ್ಲಾಳಿ ಇತ್ಯಾದಿಗಳನ್ನು ರೈತರ ಮೇಲೆ ವಿಧಿಸಿ ರೈತರನ್ನು ಸುಲಿಗೆಗೊಳಪಡಿಸುತ್ತಿದ್ದಾರೆ.

. ಅಧಿಕ ಮದ್ಯಸ್ಥಿಕೆದಾರರು: ರೈತರು ಬೆಳೆದ ಹುಟ್ಟುವಳಿಯನ್ನು ತಮ್ಮ ಹತ್ತಿರದ ದಲ್ಲಾಳಿ ಅಂಗಡಿಗಳಲ್ಲಿಯೇ ಮಾರಾಟ ಮಾಡುವುದರಿಂದ ಕೃಷಿ ಹುಟ್ಟುವಳಿ ಮಾರಾಟದಲ್ಲಿ ಮಧ್ಯಸ್ಥಗಾರರ ಸಂಖ್ಯೆ ಅಧಿಕವಾಗಿರುತ್ತದೆ. ಇದರಿಂದ ರೈತರಿಗೆ ಸಿಗಬೇಕಾದ ನ್ಯಾಯಯುತ ಲಾಭವನ್ನು ಇವರೇ ತಿಂದು ಹಾಕುತ್ತಾರೆ.

. ಅಧಿಕ ಮಾರಾಟ ವೆಚ್ಚ: ಕಾನೂನು ಬದ್ಧವಾದ ಮಾರುಕಟ್ಟೆಯಲ್ಲಿ ರೈತರು ತಮ್ಮ ಹುಟ್ಟುವಳಿಯನ್ನು ಮಾರುವುದರ ಬದಲು ಕ್ರಮಬದ್ಧವಲ್ಲದ ಮಾರುಕಟ್ಟೆಯಲ್ಲಿ ಮಾರಾಟ ವೆಚ್ಚವನ್ನು ಕೊಡಬೇಕಾಗುತ್ತದೆ. ಅಂತಹ ವೆಚ್ಚಗಳೆಂದರೆ ವ್ಯಾಪಾರಿಗಳ ದಲ್ಲಾಳಿ, ತೂಕದ ಶುಲ್ಕ, ಹಮಾಲಿ, ತೂಕ ಮಾಡುವವರ ಕೂಲಿ, ಸರಕುಗಳ ಆಶುದ್ಧತೆಯ ಕಡತ, ಅಳತೆಯಲ್ಲಿ ಸಂಭವಿಸುವ ವ್ಯತ್ಯಾಸ ಇತ್ಯಾದಿಗಳನ್ನು ರೈತರ ಆದಾಯದಲ್ಲಿ ವಜಾ ಮಾಡಲಾಗುತ್ತದೆ.

. ಮಾರುಕಟ್ಟೆಯ ಅವ್ಯವಹಾರಗಳು: ದಲ್ಲಾಳಿಗಳ ಮಾರುಕಟ್ಟೆಯಲ್ಲಿ ಅನೇಕ ಮೋಸದ ಕೃತ್ಯಗಳೂ ಸಹ ಮಾರುಕಟ್ಟೆ ನ್ಯೂನತೆಗಳಾಗಿವೆ. ಅವುಗಳೆಂದರೆ ತೂಕ ಅಳತೆಗಳಲ್ಲಿ ಮೋಸ, ನಮೂನೆಗಾಗಿ ಅಧಿಕ ಪ್ರಮಾಣದ ಸರಕನ್ನು ತೆಗೆದುಕೊಳ್ಳುವುದು, ಗುಪ್ತವಾಗಿ ಬೆಲೆ ನಿಗದಿಪಡಿಸುವುದು ಇತ್ಯಾದಿಗಳಿಂದ ರೈತರಿಗೆ ಅನ್ಯಾಯವಾಗುತ್ತಿದೆ.

. ಪ್ರಮಾಣೀಕರಣ ಮತ್ತು ವರ್ಗಿಕರಣದ ಅಭಾವ: ರೈತರು ಬೆಳೆದ ಹುಟ್ಟುವಳಿಗಳಾದ ಅಕ್ಕಿ, ಗೋಧಿ, ಚಹಾ, ಕಾಫಿ ಮೊದಲಾದ ಕೃಷಿ ಹುಟ್ಟುವಳಿಗಳಿಗೆ ಪ್ರಾಮಾಣೀಕರಿಸಿದ ವರ್ಗಗಳಿರುವುದಿಲ್ಲ. ಪ್ರಮಾಣೀಕರಣ ಮತ್ತು ವರ್ಗೀಕರಣ ಇಲ್ಲದ್ದರಿಂದ ರೈತರು ತಮ್ಮ ಸರಕುಗಳಿಗೆ ನ್ಯಾಯಯುತ ಬೆಲೆಯನ್ನು ನಿರೀಕ್ಷಿಸಲಾಗುವುದಿಲ್ಲ.

. ದಾಸ್ತಾನು ಮಳಿಗೆಗಳ ಅಭಾವ: ಗ್ರಾಮೀಣ ಭಾಗದಲ್ಲಿ ರೈತರು ಬೆಳೆದ ಹುಟ್ಟುವಳಿಯನ್ನು ಲಾಭದಾಯಕ ಬೆಲೆ ಸಿಗುವ ತನಕ ಶೇಖರಿಸಿಟ್ಟುಕೊಳ್ಳಲು ದಾಸ್ತಾನು ಮಳಿಗೆಗಳಿರುವುದಿಲ್ಲ. ಇಂತಹ ಸೌಲಭ್ಯಗಳಿಲ್ಲದ್ದರಿಂದ ರೈತರ ದಾಸ್ತಾನನ್ನು ಅಸಮರ್ಪಕವಾಗಿ ಸಂಗ್ರಹಿಸಿಡುವುದರಿಂದ ಇಲಿ, ಹೆಗ್ಗಣ ಮತ್ತಿತರ ಕ್ರಿಮಿಕೀಟಕ್ಕೆ ತುತ್ತಾಗಿ ರೈತರು ನಷ್ಟಕ್ಕೊಳಗಾಗುತ್ತಿದ್ದಾರೆ.

. ಸಾರಿಗೆ ಸಂಪರ್ಕಗಳ ಅಭಾವ: ಗ್ರಾಮೀಣ ಭಾಗದಲ್ಲಿ ಉತ್ತಮ ಸಾರಿಗೆ ಸಂಪರ್ಕಗಳಿಲ್ಲದ್ದರಿಂದ ರೈತರು ಹಳ್ಳಿಗಳಿಂದ ಪಟ್ಟಣಕ್ಕೆ ಹುಟ್ಟುವಳಿಯನ್ನು ತಂದು ಮಾರಲು ಅನೇಕ ಸಾರಿಗೆ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ.

. ಹಣಕಾಸಿನ ಕೊರತೆ: ಗ್ರಾಮೀಣ ಭಾಗದ ರೈತರ ಆರ್ಥಿಕ ಪರಿಸ್ಥಿತೆ ಉತ್ತಮ ಇಲ್ಲದ್ದರಿಂದ ಸಮೀಪದ ಸಾಹುಕಾರರಿಂದ ಅತಿ ಹೆಚ್ಚಿನ ಬಡ್ಡಿ ಕೊಟ್ಟು ಸಾಲ ತಂದಿರುತ್ತಾರೆ. ಸಾಹುಕಾರರು ರೈತರ ಹುಟ್ಟುವಳಿಯನ್ನು ತಮಗೆ ಬೇಕಾದ ಬೆಲೆಗೆ ತೆಗೆದುಕೊಂಡು ರೈತರಿಗೆ ಸಿಗಬೇಕಾದ ಲಾಭವನ್ನು ಅವರೇ ತಿಂದು ಹಾಕುತ್ತಿದ್ದಾರೆ. ಸಾಲಕೊಡುವ ಮುನ್ನ ತಾವು ಬೆಳೆದ ಹುಟ್ಟುವಳಿಯನ್ನು ಸಾಹುಕಾರರಿಗೆ ಮಾರಾಟ ಮಾಡಬೇಕೆಂಬ ಕರಾರಿನ ಮೇಲೆ ಸಾಹುಕಾರರು ರೈತರಿಗೆ ಸಾಲವನ್ನು ಕೊಟ್ಟಿರುತ್ತಾರೆ.

. ಮಾರುಕಟ್ಟೆ ಸಮಾಚಾರದ ಕೊರತೆ: ಗ್ರಾಮೀಣ ಭಾಗದ ರೈತರಿಗೆ ಮಾರುಕಟ್ಟೆ ಸಮಾಚಾರವನ್ನು ತಿಳಿಸುವ ಸಾಧನ ಸಂಪರ್ಕಗಳು ನಮ್ಮ ದೇಶದಲ್ಲಿ ಸಾಕಷ್ಟಿಲ್ಲ, ನಗರದ ಮಾರುಕಟ್ಟೆಯಲ್ಲಿ ಕೃಷಿ ಹುಟ್ಟುವಳಿಗಿರುವ ಬೆಲೆಗಳ ಮಾಹಿತಿ ಅಥವಾ ಬೆಲೆಯ ಬದಲಾವಣೆ ಬಗ್ಗೆ ಮಾಹಿತಿ ಸಮಯಕ್ಕೆ ಸರಿಯಾಗಿ ಸಿಗುವುದಿಲ್ಲ, ಬೆಲೆಗಳೆಗೆ ರೈತರು ಸ್ಥಳೀಯ ವ್ಯಾಪಾರಿಗಳನ್ನೇ ನಂಬಬೇಕಾಗುತ್ತದೆ.

ಕೃಷಿ ಮಾರುಕಟ್ಟೆಗಳು ಮತ್ತು ಅವುಗಳ ಸುಧಾರಣೆಗಳು

ಭಾರತದಲ್ಲಿ ಕೃಷಿ ಮಾರುಕಟ್ಟೆ ಸುಧಾರಣೆಗೆ ಹಲವಾರು ಸಮಿತಿ ಮತ್ತು ಆಯೋಗಗಳು ಅನೇಕ ಶಿಫಾರಸ್ಸುಗಳನ್ನು ಮಾಡಿವೆ. ಸರ್ಕಾರ ಆ ಶಿಫಾರಸ್ಸಿನ ಮೇರೆಗೆ ಅನೇಕ ಸುಧಾರಣಾ ಕ್ರಮಗಳನ್ನು ಕೈಗೊಂಡಿದೆ. ಅಂತಹ ಕ್ರಮಗಳು ಕೆಳಗಿನಂತಿವೆ.

. ನಿಯಂತ್ರಿತ ಮಾರುಕಟ್ಟೆಗಳನ್ನು ಸ್ಥಾಪಿಸುವುದು: ನಿಯಂತ್ರಿತ ಮಾರುಕಟ್ಟೆಗಳು ಕೃಷಿ ಹುಟ್ಟುವಳಿ ಮಾರುಕಟ್ಟೆಯ ಕುಂದು ಕೊರತೆಗಳನ್ನು ನಿವಾರಿಸಲು ಮತ್ತು ಕೃಷಿಕರಿಗೆ ನ್ಯಾಯಯುತ ಬೆಲೆಯನ್ನು ಒದಗಿಸಲು ಪ್ರಯತ್ನಿಸುತ್ತವೆ. ದೇಶದ ಎಲ್ಲಾ ರಾಜ್ಯಗಳೂ ನಿಯಂತ್ರಿತ ಮಾರುಕಟ್ಟೆ ಸ್ಥಾಪಿಸಲು ಕಾಯ್ದೆಯನ್ನು ಪಾಸು ಮಾಡಿರುತ್ತವೆ. ೧೯೫೧ರ ವೇಳೆಗೆ ದೇಶದಾದ್ಯಂತ ೨೦೦ ಇಂತಹ ಮಾರುಕಟ್ಟೆಗಳಿದ್ದರೆ, ಇವುಗಳ ಸಂಖ್ಯೆ ೧೯೯೮ರ ವೇಳೆಗೆ ೬೮೦೦ಕ್ಕೆ ಏರಿತು.

. ಸಹಕಾರಿ ಮಾರುಕಟ್ಟೆಗಳು: ದೇಶದ ಅನೇಕ ಕಡೆಗಳಲ್ಲಿ ಸಹಕಾರಿ ಮಾರುಕಟ್ಟೆಗಳು ಅಸ್ತಿತ್ವದಲ್ಲಿವೆ. ಇವು ರೈತರ ಹುಟ್ಟುವಳಿಯನ್ನು ಯೋಗ್ಯ ಬೆಲೆಗೆ ಮಾರಾಟ ಮಾಡಿ ರೈತರ ವರಮಾನವನ್ನು ಹೆಚ್ಚಿಸುತ್ತವೆ. ರೈತರಿಗೆ ನ್ಯಾಯಯುತ ಆದಾಯ ಸಿಗಲು ಅವಶ್ಯವಿರುವ ಕ್ರಮಗಳನ್ನು ಕೈಗೊಂಡಿದೆ. ಅವುಗಳೆಂದರೆ ಸರಕುಗಳ ಪ್ರಮಾಣೀಕರಣ ಮತ್ತು ವರ್ಗೀಕರಣ ಆಗಿವೆ. ದಾಸ್ತಾನು ಸೌಲಭ್ಯ ಮತ್ತು ಸಾರಿಗೆ ಸಂಪರ್ಕಗಳ ಸೌಲಭ್ಯ, ಸಾಲದ ನೆರವು ಇತ್ಯಾದಿ ಸೇವೆಗಳನ್ನು ರೈತರಿಗೆ ಒದಗಿಸುತ್ತಿವೆ. ದೇಶದಾದ್ಯಂತ ಒಟ್ಟಾರೆ ಜೂನ್ ೧೯೯೭ನೇ ವೇಳೆಗೆ ೬೦೦೦ ಪ್ರಾಥಮಿಕ ಸಹಕಾರಿ ಮಾರುಕಟ್ಟೆ ಸಂಘಗಳು, ೩೮೦ ಕೇಂದ್ರ ಸಹಕಾರಿ ಮಾರುಕಟ್ಟೆ ಸಂಘಗಳು ಮತ್ತು ೨೯ ರಾಜ್ಯ ಮಟ್ಟದ ಸಹಕಾರಿ ಒಕ್ಕೂಟಗಳು ಮತ್ತು ಒಂದು ರಾಷ್ಟ್ರಮಟ್ಟದ ಅಖಿಲಭಾರತ ಸಹಕಾರಿ ಒಕ್ಕೂಟಗಳಿದ್ದವು. ಒಟ್ಟಾರೆ ರೂ. ೬೫೦೩ ಕೋಟಿ ಮೌಲ್ಯದ ಕೃಷಿ ಹುಟ್ಟುವಳಿಯ ವ್ಯಾಪಾರವನ್ನು ಸಹಕಾರಿ ಮಾರುಕಟ್ಟೆಗಳು ಮಾರ್ಚ್ ೧೯೯೨ರ್ ವೇಳೆಗೆ ನಿರ್ವಹಿಸಿದ್ದರೆ, ಇದರ ಮೌಲ್ಯ ಕೇವಲ ರೂ. ೧೬೦ ಕೋಟಿಯಷ್ಟು ೧೯೯೨-೯೩ರಲ್ಲಿ ಇದ್ದಿತು.

. ತೂಕ ಮತ್ತು ಅಳತೆಗಳ ಪ್ರಮಾಣೀಕರಣ: ಕೃಷಿಕರ ಹುಟ್ಟುವಳಿಗೆ ಅವಶ್ಯವಿರುವ ಕ್ರಮಬದ್ಧ ತೂಕ ಮತ್ತು ಅಳತೆಯನ್ನು ಸರ್ಕಾರ ಪ್ರಮಾಣೀಕರಿಸಿದೆ. ದೇಶದಾದ್ಯಂತ ಒಂದೇ ತೂಕ ಮತ್ತು ಅಳತೆಗಳನ್ನು ಉಪಯೋಗಿಸಲು ಕಾನೂನಿನ ಪ್ರಕಾರ ಕ್ರಮಗಳನ್ನು ಕೈಗೊಂಡಿದೆ.

. ದಾಸ್ತಾನು ಸೌಲಭ್ಯ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೃಷಿ ಹುಟ್ಟುವಳಿಯನ್ನು ಸಂಗ್ರಹಿಸಿಡಲು ದಾಸ್ತಾನು ಮಳಿಗೆಗಳನ್ನು ಒದಗಿಸಿದೆ. ಕೇಂದ್ರ ಸರ್ಕಾರದ ಆಹಾರ ನಿಗಮ ಮತ್ತು ರಾಜ್ಯ ಸರ್ಕಾರದ ಆಹಾರ ಪೂರೈಕೆ ನಿಗಮಗಳು ಇಂತಹ ಮಳಿಗಳನ್ನು ರೈತರಿಗೆ ಯೋಗ್ಯ ಬಾಡಿಗೆಯ ಮೇಲೆ ಪೂರೈಸುತ್ತವೆ.

. ಬೆಂಬಲ ಬೆಲೆ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೃಷಿಕರ ಹುಟ್ಟುವಳಿಗೆ ಯೋಗ್ಯ ಬೆಲೆ ಸಿಗಲು ಬೆಂಬಲ ಬೆಲೆಯನ್ನು ನಿಗದಿಪಡಿಸಿವೆ. ಕಾಲಕ್ರಮೇಣ ಅವುಗಳ ಉತ್ಪಾದನಾ ವೆಚ್ಚವನ್ನು ಪರಿಷ್ಕರಿಸಿ ಸೂಕ್ತ ರೀತಿಯಲ್ಲಿ ಬೆಂಬಲ ಬೆಲೆಯನ್ನು ಪರಿಷ್ಕರಣೆಗೆ ಒಳಪಡಿಸುತ್ತವೆ. ಹುಟ್ಟುವಳಿಯ ಬೆಲೆ ಕುಸಿದರೆ ಬೆಂಬಲ ಬೆಲೆಗೆ ಸರ್ಕಾರವೇ ಖರೀದಿಸಿ ಅವುಗಳ ಯೋಗ್ಯ ವಿತರಣೆ ಮಾಡುವ ಕ್ರಮವನ್ನು ಕೈಕೊಂಡಿದೆ.

. ಮಾರುಕಟ್ಟೆ ಸಮಾಚಾರದ ಪ್ರಸಾರ: ಕೃಷಿ ಹುಟ್ಟುವಳಿಗಳ ಬೆಲೆಗಳನ್ನು ರೈತರಿಗೆ ತಿಳಿಸಲು ಅನೇಕ ಮಾಧ್ಯಮಗಳನ್ನು ಸರ್ಕಾರ ಬಳಸಿಕೊಂಡಿದೆ. ಅವುಗಳೆಂದರೆ ಆಕಾಶವಾಣಿ, ದಿನಪತ್ರಿಕೆ, ಕೃಷಿ ಮಾರಾಟ ಪತ್ರಿಕೆ ಮೊದಲಾದ ಮಾಧ್ಯಮಗಳ ಮೂಲಕ ವ್ಯವಸ್ಥೆ ಮಾಡಿದೆ.

. ಸಾರಿಗೆ ಸಂಪರ್ಕಗಳ ಸೌಲಭ್ಯ: ಸರಕಾರವು ಎಲ್ಲಾ ಹಳ್ಳಿಗಳಿಗೂ ಸಾರಿಗೆ ಸಂಪರ್ಕ ಕಲ್ಪಿಸಲು ಗ್ರಾಮೀಣ ಸಾರಿಗೆ ಸೇವೆಯನ್ನು ಪ್ರತಿ ತಾಲ್ಲೂಕಿನಲ್ಲೂ ಒದಗಿಸಿದೆ. ಪ್ರತಿಯೊಂದು ತಾಲ್ಲೂಕಿಗೂ ನಗರ ಸಾರಿಗೆ ಬಸ್ಸನ್ನು ಒದಗಿಸಿ ತಾಲ್ಲೂಕಿನಲ್ಲಿ ಬರುವ ಎಲ್ಲಾ ಹಳ್ಳಿಗಳೆಗೆ ಸಾರಿಗೆ ಸೌಕರ್ಯವನ್ನು ಒದಗಿಸಿದೆ.

ಭಾರತದಲ್ಲಿ ದಾಸ್ತಾನು ಮಳಿಗೆಗಳು

ದಾಸ್ತಾನು ಮಳಿಗೆಗಳು ಕೃಷಿಕರಿಗೆ ನ್ಯಾಯಯುತ ಬೆಲೆ ಒದಗಿಸಲು ಸಹಾಯ ಮಾಡುತ್ತವೆ. ನಮ್ಮ ದೇಶದ ಗ್ರಾಮಾಂತರ ಪ್ರದೇಶದಲ್ಲಿ ದಾಸ್ತಾನು ಸೌಲಭ್ಯಗಳ ಕೊರತೆ ವಿಪರೀತವಾಗಿದ್ದಿತು. ರೈತರು ತಮ್ಮ ಹುಟ್ಟುವಳಿಯನ್ನು ಸುಗ್ಗಿ ಸಂದರ್ಭದಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡುವ ಪರಿಸ್ಥಿತಿ ಇದ್ದಿತ್ತು. ಇದರಿಂದ ರೈತನಿಗೆ ಅನ್ಯಾಯವಾಗುತ್ತಿತ್ತು. ಆದಕಾರಣ ಕೇಂದ್ರ ಸರ್ಕಾರವು ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸಲು ದಾಸ್ತಾನು ಮಳಿಗೆಗಳ ಸೌಲಭ್ಯಗಳನ್ನು ಒದಗಿಸಲು ನಿರ್ಧರಿಸಿತು. ದಾಸ್ತಾನು ಮಳಿಗೆಗಳಲ್ಲಿ ರೈತರು ತಮ್ಮ ಹುಟ್ಟುವಳಿಯನ್ನು ಶೇಖರಿಸಿಟ್ಟು ಮಾರುಕಟ್ಟೆಯಲ್ಲಿ ಅವುಗಳ ಬೆಲೆ ಏರಿದಾಗ ಮಾರಾಟ ಮಾಡಿ ಅಧಿಕ ವರಮಾನವನ್ನು ಪಡೆಯಬಹುದಾಗಿದೆ. ಅಥವಾ ಮಳಿಗೆಯ ರಸೀದಿಯ ಆಧಾರದ ಮೇಲೆ ಬ್ಯಾಂಕ್ ಗಳಿಂದ ಮತ್ತು ಸಹಕಾರಿ ಸಂಘಗಳಿಂದ ಸಾಲವನ್ನು ಪಡೆದು ತಮ್ಮ ಜರೂರು ಹಣಕಾಸಿನ ಅವಶ್ಯಕತೆಗಳನ್ನು ಪೂರೈಸಿಕೊಳ್ಳಬಹುದಾಗೆದೆ. ಮಾರುಕಟ್ಟೆಯಲ್ಲಿ ಬೆಲೆ ಏರಿದಾಗ ದಾಸ್ತಾನನ್ನು ಮಾರಾಟ ಮಾಡಿ ತಮ್ಮ ಸಾಲವನ್ನು ಮರುಪಾವತಿ ಮಾಡಬಹುದಾಗಿದೆ.

ಭಾರತದಲ್ಲಿ ಅನೇಕ ದಾಸ್ತಾನು ಮಳಿಗೆಗಳು ದಾಸ್ತಾನು ಸೇವೆಗಳನ್ನು ಒದಗಿಸುತ್ತವೆ. ಅವುಗಳೆಂದರೆ.

೧. ಕೇಂದ್ರ ಸರ್ಕಾರವು ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ಮತ್ತು ದಾಸ್ತಾನು ಮಳಿಗೆ ಮಂಡಳಿಯೊಂದನ್ನು (National Co-op Development and Ware Housing Board) ೧೯೫೬ರಲ್ಲಿ ಸ್ಥಾಪಿಸಿತು. ಈ ಮಂಡಳಿಯು ರೈತರ ಹುಟ್ಟುವಳಿಯನ್ನು ಸಂಗ್ರಹಿಸಿಡಲು ದಾಸ್ತಾನು ಸೇವೆಯನ್ನು ಒದಗಿಸುತ್ತದೆ. ೧೯೫೭ರಲ್ಲಿ ಕೇಂದ್ರ ಸರ್ಕಾರ ಕೇಂದ್ರ ದಾಸ್ತಾನು ಮಳಿಗೆ ನಿಗಮ (Central Ware Housing Corporations)ವನ್ನು ಸ್ಥಾಪಿಸಿತು. ನಿಗಮವು ಮಹತ್ವವಾದ ನಗರ ಪ್ರದೇಶಗಳಲ್ಲಿ ದಾಸ್ತಾನು ಮಳಿಗೆಗಳನ್ನು ಮತ್ತು ಉಗ್ರಾಣಗಳನ್ನು ಕಟ್ಟಿಸುತ್ತದೆ. ಈ ಮಳಿಗೆಗಳಲ್ಲಿ ಕೃಷಿ ಹುಟ್ಟುವಳಿ, ಬೀಜ, ಗೊಬ್ಬರಗಳನ್ನು ಸಂಗ್ರಹಿಸಿಡಲಾಗುತ್ತದೆ.

೨. ರಾಜ್ಯ ಸರ್ಕಾರಗಳೂ ರಾಜ್ಯ ದಾಸ್ತಾನು ಮಳಿಗೆ ನಿಗಮವನ್ನು ಸ್ಥಾಪಿಸಿವೆ. ನಿಗಮವು ರಾಜ್ಯದ ಪ್ರಮುಖ ಸ್ಥಳಗಳಲ್ಲಿ ದಾಸ್ತಾನು ಮಳಿಗೆಗಳನ್ನು ಕಟ್ಟಿಸುತ್ತದೆ. ಮಳಿಗೆಗಳಲ್ಲಿ ಕೃಷಿ ಹುಟ್ಟುವಳಿ, ಬೀಜ, ಗೊಬ್ಬರ ಮೊದಲಾದವುಗಳನ್ನು ಸಂಗ್ರಹಿಸಿಡಲಾಗುತ್ತದೆ.

೩. ಸರಕಾರಿ ಮಾರಾಟ ಸಂಘಗಳೂ ಸಹ ದಾಸ್ತಾನು ಸೌಲಭ್ಯಗಳನ್ನು ನೀಡುತ್ತಿವೆ. ರಾಜ್ಯದ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಕಟ್ಟಿಸಿ ರೈತರಿಗೆ ದಾಸ್ತಾನು ಸೇವೆಯನ್ನು ಒದಗಿಸುತ್ತಿವೆ.

೪. ಭಾರತೀಯ ಆಹಾರ ನಿಗಮ (Fooda Corporation of India) ವು ದಾಸ್ತಾನುಗಳನ್ನು ಹೊಂದಿದ್ದು, ಆಹಾರ ಸಾಮಗ್ರಿಗಳ ದಾಸ್ತಾನ್ನು ಮಾಡುತ್ತವೆ.

ಇವುಗಳಲ್ಲದೇ ಖಾಸಗಿ ರಂಗದಲ್ಲೂ ಖಾಸಗಿದಾರರು ದಾಸ್ತಾನು ಮಳಿಗೆಗಳನ್ನು ಕಟ್ಟಿಸಿ ಅವುಗಳನ್ನು ಸರ್ಕಾರಕ್ಕೆ ಬಾಡಿಗೆಗೆ ಕೊಡುತ್ತಿವೆ. ಇಷ್ಟೆಲ್ಲ ದಾಸಾನು ಮಳಿಗೆಗಳಿದ್ದರೂ ಗ್ರಾಮೀಣ ಭಾಗದ ಕೃಷಿಕರು ಇವುಗಳ ಕೊರತೆಯನ್ನು ಎದುರಿಸುತ್ತಿದ್ದಾರೆ. ಆದ ಕಾರಣ ಇವುಗಳ ಸೌಲಭ್ಯವನ್ನು ಗ್ರಾಮೀಣ ಭಾಗಕ್ಕೆ ಒದಗಿಸುವುದು ಅತ್ಯವಶ್ಯಕವಾಗಿದೆ.

. ನೀರಾವರಿ ಪ್ರಕಾರಗಳು:

ನಮ್ಮ ದೇಶದಲ್ಲಿ ಮುಖ್ಯವಾಗಿ ನಾಲ್ಕು ಪ್ರಕಾರದ ನೀರಾವರಿ ಸೌಲಭ್ಯಗಳಿವೆ. ಅವುಗಳೆಂದರೆ ಬಾವಿಗಳು, ಕೆರೆಗಳು, ನದಿ ಕಾಲುವೆಗಳು ಮತ್ತು ತುಂತುರು ಅಥವಾ ಹನಿ ನೀರಾವರಿಗಳು.

. ಬಾವಿಗಳಿಂದ ನೀರಾವರಿ: ಬಾವಿಗಳ ಮೂಲಕ ಪಡೆಯುವ ನೀರಾವರಿ ಪದ್ಧತಿಯು ಬಹುಮುಖ್ಯವಾಗಿದ್ದು, ಇದು ಪುರಾತನ ಕಾಲದಿಂದಲೂ ರೂಢಿಯಲ್ಲಿರುತ್ತದೆ. ಬಾವಿಗಳನ್ನು ಎರಡು ಪ್ರಕಾರಗಳಾಗಿ ವಿಂಗಡಿಸಬಹುದು. ತೋಡು ಬಾವಿಗಳು (Dug Wells) ಮತ್ತು ಕೊಳವೆ ಬಾವಿಗಳು (Tube Wells). ತೋಡುಬಾವಿಯಿಂದ ನೀರಾವರಿ ಸೌಲಭ್ಯ ಪಡೆಯುತ್ತಿರುವುದು ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗುತ್ತಿರುವುದು ಕಂಡುಬರುತ್ತಿದೆ. ಅದರ ಬದಲು ಕೊಳವೆ ಬಾವಿಗಳು ಹೆಚ್ಚು ಚಾಲ್ತಿಯಲ್ಲಿವೆ. ಏಕೆಂದರೆ ಜಮೀನಿನಲ್ಲಿ ದುಂಡಾಕಾರದಲ್ಲಿ ಬಾವಿ ತೆಗೆಯುವುದರಿಂದ ಶ್ರಮ, ವೆಚ್ಚ ಉಳಿತಾಯವಾಗುತ್ತದೆ. ನದಿ, ಕೆರೆಗಳಲ್ಲದ ಪ್ರದೇಶಗಳಲ್ಲಿ ಬಾವಿಗಳೆ ನೀರಾವರಿಯ ಮುಖ್ಯ ಸಾಧನಗಳಾಗಿವೆ. ಭಾರತದಲ್ಲಿ ನೀರಾವರಿ ಸೌಲಭ್ಯ ಪಡೆಯುತ್ತಿರುವ ಒಟ್ಟು ಭೂಮಿಯ ಶೇಕಡ ೪೮ರಷ್ಟು ಭಾಗಕ್ಕೆ ಬಾವಿಗಳಿಂದ ನೀರು ಒದಗುತ್ತದೆ. ದೇಶದಾದ್ಯಂತ ೩ ದಶಲಕ್ಷ ಬಾವಿಗಳಿದ್ದು ಅವುಗಳಲ್ಲಿ ಅರ್ಧದಷ್ಟು ಉತ್ತರ ಪ್ರದೇಶದಲ್ಲಿವೆ. ಉಳಿದ ರಾಜ್ಯಗಳೆಂದರೆ ಪಂಜಾಬ್, ತಮಿಳುನಾಡು, ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಕರ್ನಾಟಕ.

. ನದಿ ಕಾಲುವೆಗಳು (River Cannals) ನದಿ ಕಾಲುವೆಗಳು ಅತ್ಯಧಿಕ ಪ್ರಮಾಣದ ನೀರಾವರಿ ಸೌಲಭ್ಯವನ್ನು ಒದಗಿಸಿದ್ದು, ದೇಶದಾದ್ಯಂತ ಇವು ಮುಖ್ಯವಾದ ನೀರಾವರಿ ಸಾಧನಗಳಾಗಿವೆ. ನದಿಗಳಿಗೆ ಅಣೆಕಟ್ಟುಗಳನ್ನು ಕಟ್ಟಿ ನೀರನ್ನು ಸಂಗ್ರಹಿಸಿ, ಆ ನೀರನ್ನು ಕಾಲುವೆಗಳ ಮೂಲಕ ಹೊಲಗಳಿಗೆ ಪೂರೈಸುವುದಕ್ಕೆ ನದಿ ಕಾಲುವೆ ನೀರಾವರಿ ಎಂದು ಕರೆಯುತ್ತೇವೆ. ಇಂತಹ ಕಾಲುವೆಗಳನ್ನು ಸರ್ಕಾರವೇ ನಿರ್ಮಿಸುತ್ತದೆ. ನಮ್ಮ ರಾಜ್ಯದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯಡಿಯಲ್ಲಿ ನಾರಾಯಣಪುರ ಅಣೆಕಟ್ಟು ಮತ್ತು ಆಲಮಟ್ಟಿ ಅಣೆಕಟ್ಟುಗಳು, ಕಾವೇರಿ ನದಿಯ ಕೃಷ್ಣರಾಜ ಸಾಗರ, ಮೆಟ್ಟೂರು ಅಣೆಕಟ್ಟು, ತುಂಗಭದ್ರ ಅಣೆಕಟ್ಟುಗಳು, ಮಲಪ್ರಭಾ ಮತ್ತು ಘಟಪ್ರಭ ಇತ್ಯಾದಿ ನೀರಾವರಿ ಯೋಜನೆಗಳು ಕಾಲುವೆಗಳ ಮೂಲಕ ನೀರಾವರಿ ಸೌಲಭ್ಯವನ್ನು ಒದಗಿಸುತ್ತಿವೆ. ದೇಶದ ಇತರ ರಾಜ್ಯಗಳಾದ ಪಂಜಾಜ್, ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಆಂಧ್ರಪ್ರದೇಶ ಇತ್ಯಾದಿ ರಾಜ್ಯಗಳಲ್ಲಿ ಅನೇಕ ನದಿ ಕಾಲುವೆಗಳು ರಚಿಸಲ್ಪಟ್ಟಿವೆ. ಅಣೆಕಟ್ಟುಗಳ ಮೂಲಕ ನೀರಾವರಿ ಸೌಲಭ್ಯವೊಂದನ್ನೇ ಅಲ್ಲದೆ ವಿದ್ಯುಚ್ಛಕ್ತಿ ಉತ್ಪಾದನೆ, ಮನರಂಜನೆ, ನೆರೆ ನಿಯಂತ್ರಣ, ಕುಡಿಯುವ ನೀರಿನ ಪೂರೈಕೆ ಇತ್ಯಾದಿ ಉದ್ದೇಶ ಹೊಂದಿರುವುದರಿಂದಾಗಿ ಈ ಯೋಜನೆಗಳಿಗೆ “ವಿವಿಧೋದ್ದೇಶ ನೀರಾವರಿ ಯೋಜನೆಗಳು” (multi -purpose irrigation projects) ಎಂದು ಕರೆಯುತ್ತೇವೆ. ದೇಶದ ಒಟ್ಟಾರೆ ಪಡೆಯುವ ನೀರಾವರಿ ಸೌಲಭ್ಯದಲ್ಲಿ ಪ್ರತಿಶತ ೩೮ರಷ್ಟು ನೀರಾವರಿಯನ್ನು ಕಾಲುವೆಗಳಿಂದ ಪಡೆಯುತ್ತಿದ್ದೇವೆ. ಸುಮಾರು ೧೫. ೯ ದಶಲಕ್ಷ ಹೆಕ್ಟೇರಿಗೆ ನದಿಕಾಲುವೆಗಳೇ ನೀರಾವರಿ ಸೌಲಭ್ಯವನ್ನು ಒದಗಿಸುತ್ತಿವೆ.

ನದಿ ಕಾಲುವೆಗಳಲ್ಲಿ ಎರಡು ಪ್ರಕಾರಗಳಿವೆ. ಅವುಗಳೆಂದರೆ ಅ. ಸರ್ವಕಾಲಿಕ ಕಾಲುವೆಗಳು (Perennial Cannala) ವರ್ಷವಿಡೀ ನೀರಾವರಿ ಸೌಲಭ್ಯವನ್ನು ನೀಡಿದರೆ. ಆ. ಪ್ರವಾಹ ಕಾಲುವೆಗಳು ಪ್ರವಾಹದಿಂದ ತುಂಬಿ ಹರಿಯುವ ಕಾಲುವೆಗಳಿಂದ ನೀರಾವರಿ ಸೌಲಭ್ಯವನ್ನು ಪಡೆಯುತ್ತೇವೆ. ಮೂರನೇ ಪ್ರಕಾರವೆಂದು ಗುರುತಿಸಲ್ಪಡುವ ಶೇಖರಿಸಲ್ಪಟ್ಟ ನೀರಿನ ಕಾಲುವೆಗಳಿರುತ್ತವೆ (Storage Works Cannals) ಆಯಕಟ್ಟಿನ ಸ್ಥಳಗಳಲ್ಲಿ ಆಣಕಟ್ಟುಗಳನ್ನು ಕಟ್ಟಿ ಮಳೆ ನೀರನ್ನು ಸಂಗ್ರಹಿಸಿ ಕಾಲುವೆಗಳ ಮೂಲಕ ನೀರನ್ನು ಪೂರೈಸುವುದಕ್ಕೆ ಶೇಖರಿಸಲ್ಪಟ್ಟ ನೀರಿನ ಕಾಲುವೆಗಳು ಎಂದು ಕರೆಯುತ್ತೇವೆ. ಇತ್ತೀಚಿನ ದಿನಗಳಲ್ಲಿ ಇಂತಹ ಸಣ್ಣ ನೀರಾವರಿ ಪದ್ಧತಿ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆಯುತ್ತಿರುವುದೊಂದು ವಿಶೇಷವಾಗಿದೆ.

. ಕೆರೆಗಳು: ಮಳೆಯ ನೀರು ಒಂದೆಡೆ ಸಂಗ್ರಹವಾಗಿ ಅದರ ನೀರನ್ನೇ ನೀರಾವರಿ ಉದ್ದೇಶಕ್ಕೆ ಉಪಯೋಗಿಸುತ್ತಿರುವುದಕ್ಕೆ ಕೆರೆಗಳು ಎಂದು ಕರೆಯುತ್ತೇವೆ. ಇಂತಹ ಕೆರೆಗಳು ರಾಜ್ಯ ಸರಕಾರದ ಒಡೆತನದಲ್ಲಿರುತ್ತವೆ. ಅವುಗಳು ಹರಿಯಾಣ, ಪಂಜಾಬ್, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶ, ಒರಿಸ್ಸಾ, ಕರ್ನಾಟಕ ಮತ್ತು ಬಿಹಾರ ರಾಜ್ಯಗಳಲ್ಲಿ ಹೆಚ್ಚಾಗಿ ಕಂಡು ಬರುತ್ತವೆ. ಕೆರೆಗಳಿಂದ ಸುಮಾರು ೩.೧ ದಶಲಕ್ಷ ಹೆಕ್ಟರ್ ಭೂಮಿ ನೀರಾವರಿ ಸೌಲಭ್ಯವನ್ನು ಪಡೆದಿದ್ದು, ಇದರಲ್ಲಿ ಅಧಿಕವಾಗಿ ತಮಿಳುನಾಡು ಮತ್ತು ಆಂಧ್ರ ಪ್ರದೇಶ, ರಾಜ್ಯಗಳು ಈ ಸೌಲಭ್ಯವನ್ನು ಪಡೆದಿದೆ.

. ತುಂತುರು ಮತ್ತು ಹನಿ ನೀರಾವರಿ: ಕೃಷಿ ಕ್ಷೇತ್ರದಲ್ಲಿ ಕ್ರಾಂತಿ ಪ್ರಾರಂಭವಾದಂದಿನಿಂದ ತುಂತುರು ಮತ್ತು ಹನಿ ನೀರಾವರಿ ಪದ್ಧತಿ ಸಾಕಷ್ಟು ಪ್ರಾಮುಖ್ಯತೆಯನ್ನು ಪಡೆಯುತ್ತಿದೆ. ಇದೊಂದು ವೈಜ್ಞಾನಿಕ ಪದ್ಧತಿಯಾಗಿದ್ದು ಕೃಷಿ ಇಳುವರಿಯನ್ನು ಮಿತ ನೀರಿನ ಬಳಕೆಯೊಂದಿಗೆ ಹೆಚ್ಚಿಸುವ ಪ್ರಮುಖ ನೀರಾವರಿ ಸಾಧನವಾಗಿದೆ. ತುಂತುರು ನೀರಾವರಿಯು ನೀರಿನ ದಕ್ಷತೆ ಮತ್ತು ನೀರಿನ ಸದ್ಬಳಕೆಯನ್ನು ಹೆಚ್ಚಿಸುತ್ತಿದೆ. ಅನುಕೂಲತೆಗಳಿಗೆ ಹೋಲಿಸಿದರೆ ಖರ್ಚು ಮಿತವೆಂದೇ ಹೇಳಬಹುದು. ನೀರನ್ನು ಅಲ್ಯೂಮಿನಿಯುಂ ಅಥವಾ ಅಂತಹುದೇ ಪೈಪುಗಳ ರಂಧ್ರದ ಮೂಲಕ ಜಮೀನಿಗೆ ತುಂತುರುಗೊಳಿಸಲಾಗುತ್ತದೆ. ಇದು ಗುಡ್ಡಗಾಡು ಪ್ರದೇಶ ಮತ್ತು ಮರಳು ಪ್ರದೇಶದಲ್ಲಿ ವಿಶೇಷವಾಗಿ ಪ್ರಾಮುಖ್ಯತೆ ಪಡೆದಿದೆ. ಉತ್ತರ ಭಾರತದ ಹಿಮಾಚಲ ಪ್ರದೇಶ, ಪಂಜಾಬ್, ದಕ್ಷಿಣ ಭಾರತದ ಮಹಾರಾಷ್ಟ್ರ, ತಮಿಳ್ನಾಡು, ಕರ್ನಾಟಕದಲ್ಲೂ ಇವುಗಳ ಪ್ರಾಮುಖ್ಯತೆ ಹೆಚ್ಚಾಗುತ್ತಿದೆ.

ಮೇಲಿನ ವಿವಿಧ ಮೂಲಗಳಿಂದ ಪಡೆಯುತ್ತಿರುವ ನೀರಾವರಿ ಸೌಲಭ್ಯಗಳ ಪ್ರಗತಿಯನ್ನು ಕೆಳಗಿನ ಪಟ್ಟಿಯಿಂದ ತಿಳಿದುಕೊಳ್ಳಬಹುದು.

ಪಟ್ಟಿ: ನೀರಾವರಿ ಪ್ರಗತಿ (ದಶಲಕ್ಷ  ಹೆಕ್ಟೇರ್ ಗಳಲ್ಲಿ)

ನೀರಾವರಿ

೧೯೫೦-೫೧

೧೯೬೦-೬೧

೧೯೯೫-೯೬

 

ವಿಸ್ತೀರ್ಣ

ಪ್ರತಿಶತ

ವಿಸ್ತೀರ್ಣ

ಪ್ರತಿಶತ

ವಿಸ್ತೀರ್ಣ

ಪ್ರತಿಶತ

ಕಾಲುವೆಗಳು

೮.೩

೪೦

೧೦.೫

೪೩

೩೪.೦

೪೦

ಬಾವಿಗಳು

೬.೦

೨೯

೭.೩

೨೯

೨೮.೦

೫೦

ಕೆರೆಗಳು

೩.೬

೧೭

೪.೫

೧೮

೧೭.೦

೦೭

ಇತರ ಮೂಲಗಳು

೩.೦

೧೪

೨.೪

೧೦

೧೦.೦

೦೩

ಒಟ್ಟು

೨೦.೯

೧೦೦

೨೪.೭

೧೦೦

೮೯.೦

೧೦೦

 

. ಕೃಷಿಯಲ್ಲಿ ವಿಜ್ಞಾನ ಮತ್ತು ತಾಂತ್ರಿಕ ಜ್ಞಾನದ ಉಪಯೋಗ:

ಭಾರತ ದೇಶವು ವಿಜ್ಞಾನ ಮತ್ತು ತಾಂತ್ರಿಕ ಜ್ಞಾನದಲ್ಲಿ ಮುಂದುವರಿದ ದೇಶಗಳಿಗಿಂತ ಹಿಂದೆ ಬಿದ್ದಿರುವುದಿಲ್ಲ. ಆದರೆ ಭಾರತದ ಕೃಷಿಕರು ಮಾತ್ರ ಪುರಾತನ ಕಾಲದ ತಂತ್ರಜ್ಞಾನ ಮತ್ತು ಸಾಗುವಳಿ ಪದ್ಧತಿಯನ್ನನುಸರಿಸುತ್ತಿರುವುದೊಂದು ವಿಷಾದದ ಸಂಗತಿಯಾಗಿದೆ. ಅವರು ಸಂಪ್ರದಾಯ ಪ್ರಿಯರೂ ಮತ್ತು ಅಪ್ರಗತಿಪರ ವಿಚಾರವುಳ್ಳವರೂ ಆಗಿರುವುದರಿಂದ ಮುಂದುವರಿದ ರಾಷ್ಟ್ರಗಳ ರೈತರು ಉಪಯೋಗಿಸುವ ಅತ್ಯಾಧುನಿಕ ಬೇಸಾಯ ಪದ್ಧತಿಯನ್ನನುಸರಿಸಲು ಅಸಮರ್ಥರಾಗಿದ್ದಾರೆ. ಇದಕ್ಕೆ ಅವರ ಬಡತನವೂ ಒಂದು ಪ್ರಮುಖ ಕಾರಣವಾಗಿದೆ. ಇತ್ತೀಚಿನ ದಿನಗಳಲ್ಲಿ ಕೃಷಿ ಕ್ಷೇತ್ರದಲ್ಲೂ ವಿಜ್ಞಾನ ಮತ್ತು ತಂತ್ರಜ್ಞಾನದ ಉಪಯುಕ್ತತೆ ಹೆಚ್ಚಾಗುತ್ತಿರುವುದೊಂದು ನಮ್ಮ ದೇಶದ ರೈತರ ದೈನಂದಿನ ಚಟುವಟಿಕೆಯಲ್ಲಿನ ಬದಲಾವಣೆಯ ದಿಕ್ಸೂಚಿಯಾಗಿದೆ ಎಂದು ಹೇಳಬಹುದು. ಉದಾಹರಣೆಗೆ; ರೈತರು ಪುರಾತನ ಕಾಲದ ಸಲಕರಣೆಗಳ ಬದಲಾಗಿ ವೈಜ್ಞಾನಿಕ ವಿಧಾನದಿಂದ ತಯಾರಿಸಿದ ಬೇಸಾಯದ ಸಲಕರಣೆಗಳನ್ನು ಉಪಯೋಗಿಸಲು ಪ್ರಾರಂಭಿಸಿದ್ದಾರೆ, ಎರಡನೆಯದಾಗಿ ರಾಸಾಯನಿಕ ಗೊಬ್ಬರವನ್ನು ಅಧಿಕ ಪ್ರಮಾಣದಲ್ಲಿ ಉಪಯೋಗಿಸುತ್ತಿದ್ದಾರೆ. ಮೂರನೆಯದಾಗಿ ಅಧಿಕ ಇಳುವರಿ ನೀಡುವ ಮಿಶ್ರತಳಿ ಬೀಜಗಳನ್ನು ಉಪಯೋಗಿಸುತ್ತಿದ್ದಾರೆ ಸರಕಾರವು ರಾಷ್ಟ್ರೀಯ ಬೀಜ ನಿಗಮವನ್ನು (National Seeds Corporation) ಸ್ಥಾಪಿಸಿದ್ದು. ಅಧಿಕ ಇಳುವರಿ ನೀಡುವ ಮತ್ತು ರೋಗ ಪ್ರತಿಬಂಧಕ ಶಕ್ತಿಯುಳ್ಳ ಬೀಜಗಳನ್ನುತ್ಪಾದಿಸುವ ಮತ್ತು ವಿತರಣೆ ಮಾಡುವ ಹೊಣೆ ಹೊತ್ತಿರುತ್ತದೆ. ಜೊತೆಗೆ ಕೃಷಿ ಇಲಾಖೆ ಮತ್ತು ಭಾರತೀಯ ಕೃಷಿ ಸಂಶೋಧನೆಯ ಮಂಡಳಿ ಬೇರೆ ಬೇರೆ ಪ್ರದೇಶಗಳಿಗೆ ಅನುಕೂಲವಾಗುವಂತಹ ವಿವಿಧ ಪ್ರಕಾರದ ಅಧಿಕ ಇಳುವರಿ ನೀಡುವ ಮತ್ತು ರೋಗ ಪ್ರತಿಬಂಧಕ ಶಕ್ತಿಯುಳ್ಳ ಬೀಜಗಳನ್ನು ಉತ್ಪಾದಿಸಲು ಹಾಗೂ ಪ್ರಚಾರ ಮಾಡಲು ಕ್ರಮ ಕೈಗೊಂಡಿವೆ. ಹಸಿರು ಕ್ರಾಂತಿಯ ಫಲವಾಗಿ ಪ್ರಾರಂಭಿಸಿದ (೧೯೬೬೦) ಅಧಿಕ ಇಳುವರಿ ನೀಡುವ ಮಿಶ್ರತಳಿ ಬೀಜಗಳ ಬಳಕೆಯ ಕಾರ್ಯಕ್ರಮವನ್ನು (High Yielding Varieties Programme) ಪ್ರಾರಂಭವಾಯಿತು. ಇದರ ಪರಿಣಾಮದಿಂದಾಗಿ ಕೃಷಿ ಇಳುವರಿಯಲ್ಲಿ ಗಣನೀಯ ಹೆಚ್ಚಲ ಕಂಡು ಬಂದಿತು. ಇಷ್ಟು ಅಧಿಕ ಉತ್ಪಾದನೆಯನ್ನು ಸಾಧಿಸಿದ್ದರಿಂದ ಕೃಷಿಯಲ್ಲಿ ಕ್ರಾಂತಿಕಾರಕ ಬದಲಾವಣೆ ಆರಂಭವಾಯಿತು. ಈ ಕ್ರಾಂತಿ ಹಸಿರು ಬೆಳೆಗಳಿಗೆ ಸಂಬಂಧಿಸಿದ್ದರಿಂದ ಈ ಕ್ರಾಂತಿಗೆ ಹಸಿರು ಕ್ರಾಂತಿ ಎಂದು ಹೆಸರಿಡಲಾಯಿತು. ನಾಲ್ಕನೆಯದಾಗಿ ಸರಕಾರವು ಭೂಮಿಯ ಫಲವತ್ತತೆಯನ್ನು ಕಾಪಾಡುವುದಕ್ಕಾಗಿ ಭೂಸಾರ ಸಂರಕ್ಷಣಾ ವಿಧಾನವನ್ನು ವೈಜ್ಞಾನಿಕವಾಗಿ ಕೈಗೊಂಡಿದೆ. ಐದನೆಯದಾಗಿ ನೀರಾವರಿ ಸೌಲಭ್ಯಗಳನ್ನು ಒದಗಿಸಿ ಮಳೆಯ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದಕ್ಕೋಸ್ಕರ ಚಿಕ್ಕ, ಮಧ್ಯಮ ಮತ್ತು ಬೃಹತ್ ಪ್ರಮಾಣದ ನೀರಾವರಿ ಯೋಜನೆಗಳನ್ನು ಅನುಷ್ಟಾನದಲ್ಲಿ ತಂದಿದೆ. ಇದಲ್ಲದೇ ಒಣಬೇಸಾಯ, ಮಿಶ್ರಬೇಸಾಯ ಮೊದಲಾದುವುಗಳನ್ನು ಅನುಸರಿಸಲು ರೈತರಿಗೆ ಪ್ರೇರಣೆ ನೀಡುತ್ತದೆ. ಕೊನೆಯದಾಗಿ ಗ್ರಾಮೀಣ ಪ್ರದೇಶಗಳಿಗೆ ವಿದ್ಯುಚ್ಛಕ್ತಿಯನ್ನೊದಗಿಸುತ್ತಿದ್ದು, ವಿವಿಧ ಯೋಜನಾವಧಿಯಲ್ಲಿ ಅಧಿಕ ಸಂಪನ್ಮೂಲವನ್ನು ಬಿಡುಗಡೆ ಮಾಡಿದೆ. ಈ ರೀತಿಯಾಗಿ ಭಾರತ ದೇಶದಲ್ಲಿ ಕೃಷಿ ಕ್ಷೇತ್ರದಲ್ಲಿ ವಿಜ್ಞಾನ ಹಾಗೂ ತಂತ್ರಜ್ಞಾನದ ಬಳಕೆ ಕ್ರಮೇಣ ಅಧಿಕವಾಗುತ್ತಿರುವುದೊಂದು ಸಂತಸವನ್ನುಂಟು ಮಾಡುವ ಅಂಶವಾಗಿದೆ.

. ಕೃಷಿ ಕಾರ್ಮಿಕರು: ಯಾವುದೇ ಸ್ಥಿರ ಸ್ವತ್ತು ಅಥವಾ ಸ್ಥಿರಾಸ್ಥಿ ಇಲ್ಲದೆ ಹೊಲಗದ್ದೆಗಳಲ್ಲಿ ಕೂಲಿಗಾಗಿ ದುಡಿಯುವ ಕಾರ್ಮಿಕರಿಗೆ ಕೃಷಿ ಕಾರ್ಮಿಕರೆಂದು ಕರೆಯುತ್ತಾರೆ. ಭಾರತದಲ್ಲಿ ಅವರ ಸಂಖ್ಯೆ ಅಧಿಕ ಪ್ರಮಾಣದಲ್ಲಿದೆ. ಆದರೆ ಆರ್ಥಿಕ ಸ್ಥಿತಿ ಮಾತ್ರ ಶೋಚನೀಯವಾಗಿದೆ. ಸರ್ಕಾರವು ಇವರ ಪರಿಸ್ಥಿತೆ ಸುಧಾರಣೆಗೆ ಸಾಕಷ್ಟು ಗಮನಕೊಟ್ಟು ಹಲವಾರು ಶಾಸನ ಮತ್ತು ಕಾಯ್ದೆಗಳನ್ನು ಜಾರಿಗೆ ತಂದಿದ್ದರೂ ಇವರಿಗಾಗಿರುವ ಉಪಯೋಗ ಮಾತ್ರ ಅಷ್ಟಕಷ್ಟೇ.

ಕೃಷಿ ಕಾರ್ಮಿಕರ ಲಕ್ಷಣಗಳು

ಭಾರತದ ಕೃಷಿ ಕಾರ್ಮಿಕರು ಈ ಕೆಳಗಿನ ಲಕ್ಷಣಗಳನ್ನು ಹೊಂದಿದ್ದಾರೆ.

. ಸಂಘಟನೆ ಇಲ್ಲ: ಕೃಷಿ ಕಾರ್ಮಿಕರು ಕೈಗಾರಿಕಾ ಕಾರ್ಮಿಕರಂತೆ ಸಂಘಟನೆ ಮಾಡಿಕೊಂಡಿರುವುದಿಲ್ಲ. ಹೀಗಾಗಿ ಅವರ ಕುಂದುಕೊರತೆಗಳನ್ನು, ಬೇಡಿಕೆಗಳನ್ನು ಸರ್ಕಾರ ಮತ್ತು ಭೂ ಒಡೆಯರಿಂದ ಈಡೇರಿಸಿಕೊಳ್ಳಲಾಗುತ್ತಿಲ್ಲ.

. ಅವಿದ್ಯಾವಂತರು: ನೂರಕ್ಕೆ ತೊಂಬತ್ತರಷ್ಟು ಕೃಷಿ ಕಾರ್ಮಿಕರು ಅವಿದ್ಯಾವಂತರು ದಿನನಿತ್ಯ ಆಗುತ್ತಿರುವ ಬದಲಾವಣೆಯ ಅರಿವು ಆಗದೇ ಇರುವುದರಿಂದ ಶೋಷಣೆಗೆ ಒಳಗಾಗಿರುವ ಕಾರ್ಮಿಕರಾಗಿದ್ದಾರೆ.

. ದುರ್ಬಲ ವರ್ಗಕ್ಕೆ ಸೇರಿದವರಾಗಿದ್ದಾರೆ: ಬಹುತೇಕ ಕೃಷಿ ಕಾರ್ಮಿಕರು ಅನೇಕ ವರ್ಷಗಳಿಂದ ಕಡೆಗಣಿಸಲ್ಪಟ್ಟಿರುವ ದುರ್ಬಲ ವರ್ಗಕ್ಕೆ ಸೇರಿದವರಾಗಿದ್ದಾರೆ. ಉದಾಹರಣೆಗೆ ಪರಿಶಿಷ್ಠ ಜಾತಿ, ಪಂಗಡ, ಅಥವಾ ಬುಡಕಟ್ಟು ಮತ್ತಿತರ ಹಿಂದುಳಿದ ವರ್ಗಗಳಿಗೆ ಸಂಬಂಧಪಟ್ಟವರಾಗಿದ್ದಾರೆ.

. ವಲಸೆ ಹೋಗುವ ಪರಿಪಾಠ. ಕೃಷಿ ಕಾರ್ಮಿಕರಿಗೆ ವರ್ಷವಿಡೀ ಒಂದೇ ಕಡೆ ಕೆಲಸ ಸಿಗದೆ ಇರುವುದರಿಂದ ಕೆಲಸ ಸಿಗುವೆಡೆ ವಲಸೆ ಹೋಗುವುದೊಂದು ಸಾಮಾನ್ಯ ಲಕ್ಷಣವಾಗಿದೆ.

. ಸಾಲದ ಬಾಧೆ: ಕೃಷಿ ಕಾರ್ಮಿಕರು ಕಡಿಮೆ ಕೂಲಿಯನ್ನು ಪಡೆಯುವವರಾಗಿರುವುದರಿಂದ ಜೀವನ ವೆಚ್ಚಕ್ಕೆ ತಮ್ಮ ಕೂಲಿಯ ಆದಾಯ ಸಾಕಾಗುವುದಿಲ್ಲ. ಅದಕ್ಕೋಸ್ಕರ ಸಾಲ ತರಬೇಕಾಗುತ್ತದೆ. ತಂದಂತಹ ಸಾಲ ಮರುಪಾವತಿಗೆ ಆದಾಯ ಸಾಕಾಗದೇ ಇರುವುದರಿಂದ ಯಾವಾಗಲೂ. ಸಾಲದಲ್ಲಿಯೆ ಬಳಲುತ್ತಿರುತ್ತಾರೆ. ಕೊನೆಗೆ ತಮ್ಮ ಜೀವನಾವಧಿಯಲ್ಲಿ ತಾವು ಮಾಡಿದ ಸಾಲವನ್ನು ತೀರಿಸದೇ ತಮ್ಮ ಸಾಲದ ಹೊರೆಯನ್ನು ಬಳುವಳಿಯಾಗಿ ತಮ್ಮ ಮಕ್ಕಳಿಗೆ ಬಿಟ್ಟುಹೊಗುತ್ತಾರೆ.

. ಕಡಿಮೆ ಜೀವನಮಟ್ಟ: ಭಾರತದ ಕೃಷಿ ಕಾರ್ಮಿಕರ ಆದಾಯ ಕಡಿಮೆ ಇರುವುದರಿಂದ ಮತ್ತು ಜೀವನ ವೆಚ್ಚ ದಿನನಿತ್ಯ ಹೆಚ್ಚಾಗುತ್ತಿರುವುದರಿಂದ ಅವರ ಕನಿಷ್ಟ ಬೇಡಿಕೆಗಳಾದ ಅನ್ನ, ಬಟ್ಟೆ, ವಸತಿ, ಶಿಕ್ಷಣ, ವೈದ್ಯಕೀಯ ಸೇವೆಗಳ ಈಡೇರಿಕೆಗೂ ಸಾಕಾಗದಿರುವುದರಿಂದ ಜೀವನಮಟ್ಟ ಕಡಿಮೆಯಿರುತ್ತದೆ.

. ಜೀತಪದ್ಧತಿ: ಭಾರತದ ಕೃಷಿ ಕಾರ್ಮಿಕರು ಶ್ರೀಮಂತರ ಪಟ್ಟಭದ್ರ ಹಿತಾಸಕ್ತಿ ಜನರ, ಭೂ ಒಡೆಯರ ಕಪಿಮುಷ್ಟಿಯಲ್ಲಿದ್ದಾರೆ. ಇವರು ಕೃಷಿ ಕಾರ್ಮಿಕರಿಗೆ ತಮ್ಮ ಉಪಜೀವನಕ್ಕೆ ಬೇಕಾಗುವಷ್ಟು ಹಣವನ್ನು ಕೊಟ್ಟು ಅದೇ ಹಣ ಮತ್ತು ಬಡ್ಡಿ ಬಾಬತ್ತಿನಲ್ಲಿ ತಮಗೆ ಬೇಕಾಗುವಷ್ಟು ವರ್ಷ ಕಡಿಮೆ ವಾರ್ಷಿಕ ಅಥವಾ ಮಾಸಿಕ ಜೀತವನ್ನು ನಿಗದಿ ಪಡಿಸಿಕೊಳ್ಳುವ ಪದ್ಧತಿ ಇನ್ನು ದೇಶದಾದ್ಯಂತ ಇರುತ್ತದೆ.

ಇವರ ಪರಿಸ್ಥಿತಿ ಸುಧಾರಿಸಲು ಸರ್ಕಾರ ಕೈಗೊಂದ ಕ್ರಮಗಳು: ಸ್ವತಂತ್ರ ಭಾರತವು ಕೃಷಿ ಕಾರ್ಮಿಕರ ಪರಿಸ್ಥಿತೆ ಸುಧಾರಣೆಗೆ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಆವುಗಳನ್ನು ಸಂಕ್ಷಿಪ್ತವಾಗಿ ಕೆಳಗೆ ವಿವರಿಸಲಾಗಿದೆ.

. ಸಂವಿಧಾನಾತ್ಮಕ ರಕ್ಷಣೆ:ಭಾರತ ಸರ್ಕಾರವು ಜೀತ ಪದ್ಧತಿ ಮಹಾಪರಾಧವೆಂದು ಘೋಷಿಸಿದೆ. ಜೀತ ಪದ್ಧತಿ ನಿರ್ಮೂಲನೆ ಮಾಡುವುದಕ್ಕಾಗಿ ಕೃಷಿ ಕಾರ್ಮಿಕರ ಪುನರ್ವಸತಿಗೆ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಮಾರ್ಚ್ ೧೯೯೨ರ ಕೊನೆ ವೇಳೆಗೆ ೨,೫೦,೨೮೯ ಜೀತದಾಳುಗಳನ್ನು ಗುರುತಿಸಿ, ಅವರಲ್ಲಿ ೨,೨೩,೧೪೧ ಜೀತದಾಳುಗಳಿಗೆ ಪುನರ್ವಸತಿ ಸೌಲಭ್ಯಗಳನ್ನು ಒದಗಿಸಲಾಗಿದ್ದಿತ್ತು. ಪುನರ್ವಸತಿ ಕಾರ್ಯಕ್ರಮಗಳಲ್ಲಿ ಅಲ್ಪಕಾಲಾವಧಿ, ತಕ್ಷಣದ ಕ್ರಮವೆಂದರೆ ಜೀತದಾಳಿಗೆ ಜೀವನಾಂಶಕ್ಕೆ ಬೇಕಾಗುವ ನಿವೇಶನ, ಭೂಮಿ ಹಂಚಿಕೆ, ಉದ್ಯೋಗ ನೀಡುವುದು, ಕನಿಷ್ಠ ಕೂಲಿ ನಿಗದಿ. ದೀರ್ಘ ಕಾಲಾವಧಿ ಕ್ರಮಗಳೆಂದರೆ ಭೂಮಿಯ ಅಭಿವೃದ್ದಿಗೆ ಪತ್ತಿನ ಸೌಲಭ್ಯ, ಹಾಲನ್ನು ಕೊಡುವ ಹಸುಗಳ ಪೂರೈಕೆಗೆ ಕ್ರಮ ಅವರು ಉತ್ಪಾದಿಸಿದ ವಸ್ತುಗಳಿಗೆ ಬೆಂಬಲ ಬೆಲೆ ಇತ್ಯಾದಿಗಳು ಪ್ರಮುಖವಾದ ಸರ್ಕಾರದ ಕ್ರಮಗಳಾಗಿರುತ್ತವೆ.

. ಕನಿಷ್ಠ ಕೂಲಿ ಕಾಯಿದೆ: ಕನಿಷ್ಠ ಕೂಲಿ ಕಾಯ್ದೆಯು ಕೃಷಿ ಕಾರ್ಮಿಕರಿಗೆ ಕನಿಷ್ಠ ಬೇಡಿಕೆಗೆ ತಕ್ಕಂತೆ ಕನಿಷ್ಠ ಕೂಲಿ ನಿಗದಿಪಡಿಸಲು ರಾಜ್ಯ ಸರ್ಕಾರಗಳಿಗೆ ಅಧಿಕಾರ ನೀಡುತ್ತದೆ. ಈ ಕಾಯ್ದೆ ಪ್ರಕಾರ ಅಸ್ಸಾಮ್ ರಾಜ್ಯದಲ್ಲಿ ಅತ್ಯಧಿಕ ಕನಿಷ್ಠ ಕೂಲಿ ರೂ. ೧೯ ಇದ್ದರೆ. ಆಂಧ್ರಪ್ರದೇಶ ರಾಜ್ಯದಲ್ಲಿ ಅತಿ ಕಡಿಮೆ ರೂ. ೮ ಕನಿಷ್ಠ ಕೂಲಿ ನಿಗದಿಯಾಗಿದ್ದಿತ್ತು (೧೯೯೦) ಕೃಷಿಯಲ್ಲಿ ಮುಂದುವರಿದ ರಾಜ್ಯವಾದ ಪಂಜಾಬಿನಲ್ಲಿ ರೂ. ೧೮. ೫೦ ಕನಿಷ್ಠ ಕೂಲಿ ನಿಗದಿಯಾಗಿದ್ದಿತ್ತು.

. ವಿಶೇಷ ಘಟಕ ಯೋಜನೆ: ವಿಶೇಷ ಘಟಕ ಯೋಜನೆಯಡಿ ದುರ್ಬಲ ವರ್ಗಕ್ಕೆ ಸೇರಿದ ಎಲ್ಲಾ ಕುಟುಂಬಗಳು ಎಂದರೆ ಪರಿಶಿಷ್ಟ ಜಾತಿ, ಪಂಗಡ, ರೈತರು, ಕೈ ಕಸಬುದಾರರು, ಕೃಷಿ ಕಾರ್ಮಿಕರು, ಚಿಕ್ಕ ವ್ಯಾಪಾರಿಗಳೆಲ್ಲರಿಗೂ ರಿಯಾಯಿತಿ ಬಡ್ಡಿ ದರದಲ್ಲಿ ಸಾಲದ ಸೌಲಭ್ಯ, ಸಮೂಹ ಬಾವಿ ಮತ್ತು ಪೈಪ್ ಲೈನನ್ನು ಸರ್ಕಾರ ಹಾಕಿಸಿ ನೀರಾವರಿ ಸೌಲಭ್ಯವನ್ನು ಒದಗಿಸಿದೆ. ಪುಕ್ಕಟೆ ವಿದ್ಯುಚ್ಛಕ್ತಿ, ಬೀಜ, ಗೊಬ್ಬರ ಮತ್ತು ಕ್ರಿಮಿನಾಶಕಗಳ ಪೂರೈಕೆ ಇತ್ಯಾದಿ ಕೃಷಿ ಉಪಕರಣಗಳನ್ನು ಕೃಷಿ ಇಲಾಖೆಯಿಂದ ಪೂರೈಸಿ ದುರ್ಬಲ ವರ್ಗಕ್ಕೆ ಸೇರಿದ ಕೃಷಿಕರ ಆರ್ಥಿಕ ಪರಿಸ್ಥಿತೆ ಸುಧಾರಣೆಗೆ ಪ್ರೋತ್ಸಾಹ ನೀಡುತ್ತಿದೆ.

. ಬಂಜರು ಭೂಮಿಯ ಉಪಯೋಗ: ಸಾಗುವಳಿಗೆ ಉಪಯೋಗವಾಗದ ಬಂಜರು ಭೂಮಿಯನ್ನು ಸರ್ಕಾರ ಸಾಗುವಳಿಗೆ ತರುತ್ತದೆ. ಕೃಷಿ ಕಾರ್ಮಿಕರ ಪೂನರ್ವಸತಿ ಯೋಜನೆಯಡಿ ಇಂತಹ ಭೂಮಿಯನ್ನು ಅವರಿಗೆ ಹಂಚುತ್ತದೆ.

. ಉದ್ಯೋಗ ನಿರ್ಮಿಸುವ ಕಾರ್ಯಕ್ರಮಗಳು: ಗ್ರಾಮೀಣ ಭಾಗದಲ್ಲಿರುವ ಕೃಷಿ ಕಾರ್ಮಿಕರಿಗೆ ವರ್ಷವಿಡೀ ಉದ್ಯೋಗವಕಾಶ ನಿರ್ಮಿಸುವುದಕ್ಕಾಗಿ ಉದ್ಯೋಗ ದೃಢೀಕರಕರಣ ಯೋಜನೆ, ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಕಾರ್ಯಕ್ರಮ, ನೆಹರೂ ರೋಜ್ ಗಾರ್ ಯೋಜನೆ ಇತ್ಯಾದಿಗಳನ್ನು ಸರ್ಕಾರ ಕಾಲಕ್ರಮೇಣ ತಯಾರಿಸಿ ಎಲ್ಲಾ ನಿರುದ್ಯೋಗಿಗಳಿಗೆ ವರ್ಷವಿಡಿ ಉದ್ಯೋಗವಕಾಶಗಳನ್ನು ನಿರ್ಮಿಸಿ ಅವರ ಉಪಜೀವನಕ್ಕೆ ಬೇಕಾಗುವ ಆದಾಯವನ್ನು ಸೃಷ್ಟಿಸಿ ಕೊಟ್ಟಿದೆ.

. ೨೦ ಅಂಶಗಳ ಹೊಸ ಕಾರ್ಯಕ್ರಮಗಳು: ಭಾರತದ ಪ್ರಧಾನಿ ದಿ. ಶ್ರೀಮತಿ. ಇಂದಿರಾಗಾಂಧಿ ಮತ್ತು ದಿ. ರಾಜೀವ್ ಗಾಂಧಿಯವರು ರೂಪಿಸಿದ ೨೦ ಅಂಶಗಳ ಕಾರ್ಯಕ್ರಮಗಳನ್ನು ಘೋಷಿಸಿದರು. ಜನವರಿ ೧೪, ೧೯೮೨ರಂದು ಈ ಕಾರ್ಯಕ್ರಮಗಳನ್ನು ಪರಿಷ್ಕರಿಸಲಾಯಿತು. ಈ ಕಾರ್ಯಕ್ರಮದನ್ವಯ ಭೂ ರಹಿಕ ಕೃಷಿ ಕಾರ್ಮಿಕರ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಭೂ ಹಂಚಿಕೆ, ಜೀವನಮಟ್ಟ ಸುಧಾರಿಸುವ ಹಲವಾರು ಕ್ರಮಗಳನ್ನು ರಾಜ್ಯ ಸರ್ಕಾರಗಳು ಕೈಗೊಂಡಿವೆ.

ಕೃಷಿ ಮತ್ತು ಗ್ರಾಮಗಳು ಎಂದೆಂದಿಗೂ ಒಂದಕ್ಕೊಂದು ಬಿಡಲಾರದ ಸ್ಥಿತಿಯಲ್ಲಿದ್ದರೂ ಅವುಗಳ ನಿರ್ವಹಣೆಯಲ್ಲಿ ನಮ್ಮ ಆಳುವವರು ಸಂಪೂರ್ಣ ನಿರ್ಲಕ್ಷ ವಹಿಸಿರುವುದಕ್ಕೆ ನಮ್ಮ ಕಣ್ ಮುಂದೆಯೇ ಅನೇಕ ಸಾಕ್ಷಿಗಳಿವೆ. ರೈತರಿಗೆ ಎಲ್ಲಾ ರೂಪದಲ್ಲಿಯೂ ರಿಯಾಯಿತಿ ನೀಡಿ ಅವರ ಜೀವನ ಮಟ್ಟವನ್ನು ಉತ್ತಮ ಪಡಿಸಿದರೆ ರಾಷ್ಟ್ರದ ರಾಜ್ಯದ ಜೀವನ ಮಟ್ಟ ಉತ್ತಮ ಪಡಿಸಿದಂತೆ ಎಂದು ಹೇಳಬಹುದು.[1] ಭಾರತದ ಗ್ಯಾಸೆಟಿಯರ‍್, ಭಾಗ-೦೩, ಪು. ೨೦೬

[2]* ಗ್ರಾಮೀಣ ಪ್ರದೇಶದಲ್ಲಿ ಒಕ್ಕಲುತನದ ಸಮಸ್ಯೆ: ಅರ್ಜುನನ ಹ. ಕೊಳಚೆ, ಪುಟ. ೯, ಕ.ವಿ.ವಿ. ಧಾರವಾಡ.