ನಿರುದ್ಯೋಗವು ಭಾರತದ ಆರ್ಥಿಕತೆಗೆ ಕುತ್ತಾಗಿ ಪರಿಣಮಿಸಿ ಪ್ರಗತಿಗೆ ನಿರಂತರವಾಗಿ ಸವಾಲೊಡ್ಡುತ್ತಿರುವ ಒಂದು ರೀತಿ ಭೀಕರ ಸಮಸ್ಯೆ. ಒಂದು ಕಡೆ ಅತಿ ವೇಗದಲ್ಲಿ ಜನಸಂಖ್ಯೆಯ ಬೆಳವಣಿಗೆ, ಇನ್ನೊಂದು ಕಡೆ ಉದ್ಯೋಗಾವಕಾಶಗಳ ಕೊರತೆ ಇವುಗಳಿಂದ ನಿರುದ್ಯೋಗಿಗಳ ಸಂಖ್ಯೆ ನಿರಂತರವಾಗಿ ಏರುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಅದು ಬೃಹದಾಕಾರವನ್ನು ತಾಳಿ ನಿಂತಿದೆ. ಪಂಚವಾರ್ಷಿಕ ಯೋಜನೆಗಳು ಹೆಚ್ಚು ಉದ್ಯೋಗಾವಕಾಶಗಳನ್ನು ಸೃಷ್ಟಿಸಿ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸಬೇಕೆಂಬ ಕರ್ತವ್ಯನಿಷ್ಠ ಧ್ಯೇಯ ಹೊಂದಿರುವುದೇನೋ ಸರಿ. ಆದರೆ ದುರದೃಷ್ಟವಶಾತ್ ಈ ಪ್ರಯತ್ನದಲ್ಲಿ ನಮ್ಮ ಯೋಜನೆಗಳು ವಿಫಲವಾಗಿವೆ. ಹೊಸ ಉದ್ಯಮಗಳ ಸ್ಥಾಪನೆ ಮತ್ತು ಅನೇಕ ವಿಧದ ಕಾರ್ಯಕ್ರಮಗಳ ಮೂಲಕ ಉದ್ಯೋಗಗಳು ಹೆಚ್ಚಿದರೂ ರಭಸ ಗತಿಯಲ್ಲಿ, ಸತತವಾಗಿ ಏರುತ್ತಿರುವ ಜನಸಂಖ್ಯೆಗೆ ಸಮನಾಗಿ ಅವು ಬೆಳೆದಿಲ್ಲ, ಪ್ರತಿ ಯೋಜನೆಯೂ ತನ್ನ ಪ್ರಾರಂಭದಲ್ಲಿದ್ದುದಕ್ಕಿಂತಲೂ ಹೆಚ್ಚು ನಿರುದ್ಯೋಗಿಗಳ ಸಂಖ್ಯೆಯಲ್ಲಿ ಮುಕ್ತಾಯಗೊಂಡಿದೆ.

ಮಾನಸಿಕ ಅಥವಾ ಭೌತಿಕ ಶ್ರಮವನ್ನು ಉಪಯೋಗಿಸಿ ದುಡಿಮೆ ಮಾಡಲು ಸಾಮರ್ಥ್ಯವಿದ್ದರೂ ದುಡಿಯುವ ಅವಕಾಶಗಳಿಲ್ಲದಿರುವ ಸ್ಥಿತಿಯೇ ನಿರುದ್ಯೋಗ. ಜನ ಸಂಖ್ಯೆಯ ಬೆಳವಣಿಗೆಯೊಂದಿಗೆ ಉದ್ಯೋಗಾರ್ಥಿಗಳ ಸಂಖ್ಯೆಯೂ ಹೆಚ್ಚುತ್ತಿದೆ. ಉದ್ಯೋಗಾರ್ಥಿಗಳ ಸಂಖ್ಯೆ ಬೆಳೆದಂತೆ ಹೊಸ ಉದ್ಯೋಗಗಳು ಸೃಷ್ಟಿಯಾಗದಿದ್ದರೆ ಅಥವಾ ದುಡಿಮೆಯ ಅವಕಾಶಗಳು ಹೆಚ್ಚದಿದ್ದರೆ ನಿರುದ್ಯೋಗ ತಲೆದೋರುತ್ತದೆ. ಆದ್ದರಿಂದ ಜನಸಂಖ್ಯಾ ಬೆಳವಣಿಗೆಯನ್ನು ಸಂಪೂರ್ಣ ಹತೋಟಿಗೆ ತರಬೇಕು. ಇಲ್ಲವೇ ಜನ ಸಂಖ್ಯೆಯ ಹೆಚ್ಚಳಕ್ಕೆ ಸಮನಾಗಿ ಹೊಸ ಉದ್ಯೋಗಗಳು ಸೃಷ್ಟಿಯಾಗಬೇಕು. ಇಲ್ಲದಿದ್ದರೆ ನಿರುದ್ಯೋಗ ಅನಿವಾರ್ಯವೇ ಸರಿ. ಭಾರತದ ಆರ್ಥಿಕತೆಯಲ್ಲಿ ಈ ಎರಡು ಸಂಗತಿಗಳ ಸಂಮಿಲನದಿಂದ ನಿರುದ್ಯೋಗಿಗಳ ಸಂಖ್ಯೆ ಬೃಹದಾಕಾರವಾಗಿ ಬೆಳೆಯುತ್ತಿದೆ.

ನಿರುದ್ಯೋಗ ಮತ್ತು ಬಡತನಕ್ಕೆ ನೇರ ಸಂಪರ್ಕವಿದೆ. ಒಬ್ಬ ವ್ಯಕ್ತಿ ನಿರುದ್ಯೋಗಿಯಾದರೆ ಅವನಿಗೆ ದುಡಿಮೆ ಇಲ್ಲವಾಗಿ, ಆದಾಯ ಗಳಿಕೆ ತಪ್ಪಿ ಹೋಗಿ ಜೀವನ ನಿರ್ವಹಣೆಯ ಮಾರ್ಗೋಪಾಯವೇ ಇಲ್ಲದಂತಾಗುತ್ತದೆ. ಪರಿಣಾಮವಾಗಿ ಅವನು ದಟ್ಟ ದಾರಿದ್ರ್ಯದಲ್ಲಿ ಬಿದ್ದು ತನ್ನ ಜೀವನ ಸಾಗಿಸಲು ಪರಾವಲಂಬಿಯಾಗಬೇಕಾಗುತ್ತದೆ. ಒಂದು ಕುಟುಂಬದಲ್ಲಿ ಹಲವಾರು ಜನರಿದ್ದು ಒಬ್ಬ ಮಾತ್ರ ಉದ್ಯೋಗಿಯಾಗಿದ್ದರೆ ಉಳಿದವರು ಅವನನ್ನು ಆಶ್ರಯಿಸಬೇಕಾಗುವುದು. ಆಗ ಉದ್ಯೋಗಿಯು ಗಳಿಸಿದ ಆದಾಯವು ಎಲ್ಲ ಜನರಲ್ಲೂ ಹಂಚಿ ಹೋಗುತ್ತದೆ. ಪರಿಣಾಮವಾಗಿ ಸರಾಸರಿ ಆದಾಯ ಕಡಿಮೆಯಾಗಿ, ಅವರ ಅನುಭೋಗದ ಮಟ್ಟ ತಗ್ಗಿ ಎಲ್ಲರೂ ಬಡತನದ ಜೀವನ ಸಾಗಿಸಬೇಕಾಗುತ್ತದೆ. ಕುಟುಂಬದ ಎಲ್ಲ ವ್ಯಕ್ತಿಗಳೂ ಉದ್ಯೋಗಿಗಳಾಗಿದ್ದು ಪರಾವಲಂಬನವಿಲ್ಲದಿದ್ದರೆ ಎಲ್ಲರೂ ಹೆಚ್ಚು ಆದಾಯವಂತರಾಗಿ ಉತ್ತಮ ಮಟ್ಟದ ಜೀವನ ಸಾಗಿಸಲು ಸಾಧ್ಯವಾಗುತ್ತದೆ. ಆದಾಯವು ಜೀವನ ನಿರ್ವಹಣೆಗೆ ಸಾಲದಿರುವಾಗಿ ಉಳಿತಾಯವೇ ಉದ್ಭವಿಸುವುದಿಲ್ಲ. ಹಣಕಾಸಿನ ಉಳಿತಾಯವಿಲ್ಲದಿರುವಾಗ ಆರ್ಥಿಕ ಪ್ರಗತಿಗೆ ಧಕ್ಕೆಯೊಡ್ಡುತ್ತದೆ. ಆದ್ದರಿಂದಲೇ ಪ್ರತಿಯೊಬ್ಬ ವ್ಯಕ್ತಿಯ ನಿರುದ್ಯೋಗವೂ ದೇಶದ ಪ್ರಗತಿಗೆ ಮಾರಕವೆನಿಸುತ್ತದೆ. ಈ ಕಾರಣದಿಂದಲೇ ನಿರುದ್ಯೋಗವೂ ದೇಶದ ಪ್ರಗತಿಗೆ ಮಾರಕವೆನಿಸುತ್ತದೆ. ಈ ಕಾರಣದಿಂದಲೇ ನಿರುದ್ಯೋಗಿಗಳಿಗ ಆದಾಯ ಗಳಿಕೆಯ ಮಾರ್ಗಗಳನ್ನು ಕಲ್ಪಿಸಿ ನಿರುದ್ಯೋಗ ತಲೆದೋರದಂತೆ ಮಾಡಲು ಮೊದಲನೆ ಪಂಚವಾರ್ಷಿಕ ಯೋಜನೆಯ ಪ್ರಾರಂಭದಿಂದಲೂ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ. ಆದರೆ ಆರ್ಥಿಕತೆಯಲ್ಲಿ ಉಪಸ್ಥಿತವಿರುವ ಅಂತರ್ಗತ ಸಂಗತಿಗಳಿಂದಾಗಿ ಈ ನಿಟ್ಟಿನಲ್ಲಿ ಎಲ್ಲಾ ಪ್ರಯತ್ನಗಳು ವಿಫಲವಾಗಿವೆ. ಕಳವಳಕಾರಿಯಾದ ಸಂಗತಿಯೆಂದರೆ ನಿರುದ್ಯೋಗವು ಆರ್ಥಿಕತೆಯನ್ನೇ ದ್ವಂಸ ಮಾಡುವಂತೆ ಅವಿಚ್ಛಿನ್ನವಾಗಿ ಬೃಹತ್ಪ್ರಮಾಣದಲ್ಲಿ ಬೆಳೆಯುತ್ತಿದೆ.

ನಿರುದ್ಯೋಗದ ವಿಧಗಳು:

ಭಾರತದ ಆರ್ಥಿಕತೆಯಲ್ಲಿ ಕಂಡುಬರುವ ನಿರುದ್ಯೋಗ ಅನೇಕ ವಿಧಗಳದ್ದಾಗಿದೆ. ಅಂಕಿ ಅಂಶಗಳ ಕೊರತೆಯಿಂದಾಗಿ ಒಟ್ಟು ನಿರುದ್ಯೋಗಿಗಳು ಹಾಗೂ ವಿವಿಧ ವಿಧದ ನಿರುದ್ಯೋಗಿಗಳ ಸಂಖ್ಯೆಯನ್ನು ಇಷ್ಟೇ ಎಂದು ನಿಖರವಾಗಿ ಹೇಳಲು ಸಾಧ್ಯವಾಗುವುದಿಲ್ಲ. ಇತ್ತೀಚಿನ ಕೆಲವು ಅಧ್ಯಯನಗಳ ಪ್ರಕಾರ ದೇಶದಲ್ಲಿರುವ ಒಟ್ಟು ನಿರುದ್ಯೋಗಿಗಳ ಸಂಖ್ಯೆ ಸುಮಾರು ೯೦ ದಶಲಕ್ಷ ಎಂದು ಅಂದಾಜು ವಿವಿಧ ರೀತಿಯ ನಿರುದ್ಯೋಗವನ್ನು ಕೆಳಕಂಡಂತೆ ವಿವರಿಸಬಹುದು.

. ವಿದ್ಯಾವಂತ ನಿರುದ್ಯೋಗ: ವಿದ್ಯಾವಂತರಲ್ಲಿ ಕಂಡು ಬರುವ ನಿರುದ್ಯೋಗವನ್ನು ವಿದ್ಯಾವಂತ ನಿರುದ್ಯೋಗ ಎಂದು ಕರೆಯಲಾಗುತ್ತದೆ. ಇದಕ್ಕೆ “ತೆರೆದ ನಿರುದ್ಯೋಗ” (Open Unemployment) ಎಂತಲೂ ಹೆಸರಿದೆ. ಪದವೀಧರರು, ಸ್ನಾತಕೋತ್ತರ ಪದವೀಧರರು, ಡಿಪ್ಲೋಮ ಪಡೆದವರು ತಾಂತ್ರಿಕ ಮತ್ತು ವೈದ್ಯಕೀಯ ಪದವೀಧರರು ಮುಂತಾದ ನಿರುದ್ಯೋಗಿಗಳು ಈ ಗುಂಪಿಗೆ ಸೇರುತ್ತಾರೆ. ಭಾರತದಲ್ಲಿ ಸುಮಾರು ೨೪ ದಶಲಕ್ಷ ವಿದ್ಯಾವಂತ ನಿರುದ್ಯೋಗಿಗಳಿರುವರೆಂದು ಹೇಳಲಾಗುತ್ತಿದೆ. ಇವರಲ್ಲಿ ಅನೇಕರು ಮಧ್ಯಮ ವರ್ಗಕ್ಕೆ ಸೇರಿದವರಾಗಿದ್ದು. ನಿರುದ್ಯೋಗದಿಂದಾಗಿ ಅವರು ಸಂಪೂರ್ಣ ಹತಾಶರಾಗಬೇಕಾಗುತ್ತದೆ. ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಿ ಶಿಕ್ಷಣ ಮುಗಿಸಿದ ಬಳಿಕ ಅವರು ನಿರುದ್ಯೋಗಿಗಳಾದರೆ ಅದು ಅವರ ಮತ್ತು ದೇಶದ ಆರ್ಥಿಕತೆಯ ದೃಷ್ಟಿ ಎರಡರಿಂದಲೂ ತುಂಬಾ ಹಾನಿಕರ ಪರಿಣಾಮಗಳಿಗೆ ಎಡೆ ನೀಡುತ್ತದೆ.

. ಋತುಮಾನದ ನಿರುದ್ಯೋಗ: ಹಳ್ಳಿಗಳಲ್ಲಿ ಬಹುಜನರು ವರ್ಷದ ಅನೇಕ ದಿನಗಳಲ್ಲಿ ನಿರುದ್ಯೋಗಿಗಳಾಗಿ ಕಾಲ ಕಳೆಯುತ್ತಾರೆ. ಒಟ್ಟು ಜನ ಸಂಖ್ಯೆಯಲ್ಲಿ ಸುಮಾರು ಶೇ. ೭೦ ರಷ್ಟು ಜನರು ಕೃಷಿಯನ್ನೇ ತಮ್ಮ ಜೀವನಾಧಾರ ಕಸುಬನ್ನಾಗಿ ಆಶ್ರಯಿಸಿದ್ದು ಹಳ್ಳಿಗಳಲ್ಲೇ ವಾಸಿಸುತ್ತಿದ್ದಾರೆ. ಕೃಷಿಯು ಋತುಮಾನದ ಕಸುಬಾಗಿದೆ. ಸಾಗುವಳಿಗೆ ಅಳವಡಿಸಲಾಗಿರುವ ಭೂಮಿಯಲ್ಲಿ ವರ್ಷದಲ್ಲಿ ಎರಡು ಅಥವಾ ಮೂರು ಬೆಳೆಗಳನ್ನು ಬೆಳೆಯಲು ಸಾಧ್ಯವಿರುತ್ತದೆ. ಪೂರ್ಣವಾಗಿ ಮಳೆಯನ್ನೇ ಆಶ್ರಯಿಸಿರುವ ಭೂಮಿಯಲ್ಲಿ ಕೇವಲ ಒಂದು ಬೆಳೆಯನ್ನು ಮಾತ್ರ ಬೆಳೆಯಲು ಸಾಧ್ಯವಾಗುತ್ತದೆ. ಆದ್ದರಿಂದ ರೈತರು ವರ್ಷದ ಬಹುಪಾಲು ದಿನಗಳಲ್ಲಿ ಯಾವ ಉದ್ಯೋಗವೂ ಇಲ್ಲದೆ ಅನಿವಾರ್ಯವಾಗಿ ನಿರುದ್ಯೋಗಿಗಳಾಗಬೇಕಾಗುವ ಪ್ರಸಂಗ ಒದಗುತ್ತದೆ. ಒಂದು ಅಂದಾಜಿನ ಪ್ರಕಾರ ಸುಮಾರು ೪/೫ ರಷ್ಟು ಕೃಷಿ ಜನತೆ ವರ್ಷದಲ್ಲಿ ೨/೩ ರಷ್ಟು ಅವಧಿಗೂ ಮತ್ತು ೧/೫ ರಷ್ಟು ಜನತೆ ವರ್ಷದಲ್ಲಿ ೧/೩ ರಷ್ಟು ಅವಧಿಗೂ ನಿರುದ್ಯೋಗಿಗಳಾಗಿರುತ್ತಾರೆ. ಕೃಷಿಯ ಮೇಲಿನ ಮಿತಿಮೀರಿದ ಅವಲಂಬನದಿಂದಾಗಿ ಈ ಋತುಮಾನದ ನಿರುದ್ಯೋಗ ಪರಿಣಮಿಸುತ್ತದೆ.

. ಮಾರುವೇಷದ ನಿರುದ್ಯೋಗ: ಕೃಷಿ ವಲಯದಲ್ಲಿ ಕಂಡುಬರುವ ಇನ್ನೊಂದು ವಿಧದ ನಿರುದ್ಯೋಗವೆಂದರೆ ಮಾರುವೇಷದ ನಿರುದ್ಯೋಗ, ಎಷ್ಟೋ ಜನರು ಉದ್ಯೋಗಿಗಳಂತೆ ಕೆಲಸ ಮಾಡುತ್ತಿರುತ್ತಾರೆ. ಆದರೆ ಅವರಿಗೆ ಸಾಕಷ್ಟು ಕೆಲಸವಿರುವುದಿಲ್ಲ. ಮಾರುವೇಷದ ನಿರುದ್ಯೋಗವನ್ನು ಈ ರೀತಿ ವಿವರಿಸಬಹುದು. ಒಂದು ಎಕರೆ ಜಮೀನಿನಲ್ಲಿ ೨೦ ಚೀಲ ಧಾನ್ಯವನ್ನು ಬೆಳೆಯಬಹುದು ಮತ್ತು ಎರಡು ಜನರಿಗೆ ಉದ್ಯೋಗವಿದೆ ಎಂದು ಭಾವಿಸೋಣ, ಒಂದು ಚೀಲ ಧಾನ್ಯದ ಬೆಲೆ ೧೦೦ ರೂಪಾಯಿಗಳೆಂದರೆ ಒಬ್ಬನ ತಲಾ ಆದಾಯ ೧೦೦೦ ರೂಪಾಯಿಗಳಾಯಿತು. ಆ ಜಮೀನಿನಲ್ಲಿ ಉತ್ಪಾದನೆಯನ್ನು ಇನ್ನು ಹೆಚ್ಚಿಸಲು ಸಾಧ್ಯವೇ ಇರುವುದಿಲ್ಲ. ಆದರೆ ಜನಸಂಖ್ಯೆ ಹೆಚ್ಚಳದಿಂದಾಗಿ ಇನ್ನೂ ಎರಡು ಜನರು ಅದೇ ಜಮೀನಿನಲ್ಲಿ ಉದ್ಯೋಗಕ್ಕೆ ತೊಡಗುತ್ತಾರೆ. ಆಗ ಅವರ ತಲಾ ಆದಾಯ ಕೇವಲ ೫೦೦ ರೂಪಾಯಿಗಳಾಗುತ್ತದೆ. ನಾಲ್ಕು ಜನರು ಉದ್ಯೋಗಿಗಳಾಗಿದ್ದರೂ ಎರಡು ಜನರು ಮಾತ್ರ ಪೂರ್ಣ ಉದ್ಯೋಗಿಗಳಾಗಿದ್ದು, ಉಳಿದ ಎರಡು ಜನರು ನಿರುದ್ಯೋಗಿಗಳಾಗಿರುತ್ತಾರೆ. ಅಂದರೆ ನಾಲ್ಕು ಜನರು ಮಾರುವೇಷದ ನಿರುದ್ಯೋಗಿಗಳಾಗಿರುತ್ತಾರೆ. ಈ ಎರಡು ಜನರ ಅಂಚಿನ ಉತ್ಪಾದಕತೆ (marginal Producativity) ಸೊನ್ನೆಯಾಗಿರುತ್ತದೆ. ಈ ರೀತಿ ಮಾರುವೇಷದ ನಿರುದ್ಯೋಗಿಗಳಾಗಿರುವ ಜನರು ಕೃಷಿಯನ್ನು ಬಿಟ್ಟು ಹೊರಬಂದರೆ ಹೆಚ್ಚಿನ ಉತ್ಪಾದಕತೆ ಹೆಚ್ಚುವ ಸಾಧ್ಯತೆ ಇರುತ್ತದೆ.

ಮಾರುವೇಷದ ನಿರುದ್ಯೋಗವನ್ನು ಅರೆ ಉದ್ಯೋಗ (under employment) ಎಂತಲೂ ಕರೆಯಬಹುದು. ಅರೆ-ಉದ್ಯೋಗವು ವಿದ್ಯಾವಂತರಲ್ಲಿಯೂ ಕಂಡು ಬರುತ್ತದೆ. ಉದಾಹರಣೆಗೆ ಉದ್ಯೋಗಾವಕಾಶದ ದಿನಕ್ಕೆ ೪ ಗಂಟೆಗಳ ಮಾನಸಿಕ ಶ್ರಮ ನಿರ್ವಹಿಸುವ ಶಕ್ತಿ ಹೊಂದಿದ್ದರೂ ಉದ್ಯೋಗಾವಕಾಶದ ಅಭಾವದಿಂದಾಗಿ ಕೇವಲ ಒಂದು ಗಂಟೆಯ ಶ್ರಮ ನಿರ್ವಹಿಸಬೇಕಾಗುತ್ತದೆ. ಆಗ ಅವನ ಗಳಿಕೆ ಶೇ. ೨೫ರಷ್ಟು ಮಾತ್ರ ಆಗಿರುತ್ತದೆ.

. ತಾಂತ್ರಿಕ ನಿರುದ್ಯೋಗ: ಉದ್ಯಮದಲ್ಲಿ ತಂತ್ರಜ್ಞಾನ ಮತ್ತು ಹೊಸ ಯಂತ್ರಗಳನ್ನು ಉತ್ಪಾದನೆಗೆ ಬಳಸಿದಾಗ ಶ್ರಮಿಕರ ಅವಶ್ಯಕತೆ ಕಡಿಮೆಯಾಗುತ್ತದೆ. ಉತ್ಪಾದನ ವಿಧಾನದಲ್ಲಿ ಇವುಗಳ ಅಳವಡಿಕೆಯಿಂದ ಉದ್ಯೋಗದಲ್ಲಿ, ತೊಡಗಿದ್ದವರನ್ನು ಕೈಬಿಡಬೇಕಾಗಿ ಬರುತ್ತದೆ. ಏಕೆಂದರೆ ದೊಡ್ಡ ಪ್ರಮಾಣದ, ಶೀಘ್ರಗತಿಯ ಉತ್ಪಾದನೆಗೆ ಯಾಂತ್ರೀಕರಣ ಅಗತ್ಯವಾಗಿದೆ. ಯಾಂತ್ರೀಕರಣದಿಂದ ಉದ್ಬವಿಸಿದ ನಿರುದ್ಯೋಗವನ್ನು ತಾಂತ್ರಿಕ ನಿರುದ್ಯೋಗ ಎನ್ನಲಾಗುವುದು.

. ರಚನಾತ್ಮಕ ನಿರುದ್ಯೋಗ: ವಸ್ತುಗಳಿಗೆ ಬೇಡಿಕೆಯ ಏರಿಳಿತ ಮತ್ತು ಅವುಗಳ ಪೂರೈಕೆಯ ಪ್ರಮಾಣಕ್ಕೆ ಅನುಸಾರವಾಗಿ ಉತ್ಪಾದನೆಯಲ್ಲಿ ಹೆಚ್ಚು ಕಡಿಮೆಗಳಾಗುತ್ತವೆ. ಬೇಡಿಕೆ ಹೆಚ್ಚಿದಾಗ ಪೂರೈಕೆಯೂ ಹೆಚ್ಚಬೇಕಾಗುವುದರಿಂದ ಉತ್ಪಾದನೆಯನ್ನು ಅಧಿಕಗೊಳಿಸಲು ಹೆಚ್ಚು ಶ್ರಮಿಕರ ಅವಶ್ಯಕತೆ ಇರುತ್ತದೆ. ಬದಲಾಗಿ ಬೇಡಿಕೆ ಕುಸಿದರೆ ಶ್ರಮಿಕರ ಅವಶ್ಯಕತೆ ಕಡಿಮೆಯಾಗಿ ನಿರುದ್ಯೋಗಕ್ಕೆ ದಾರಿಯಾಗುತ್ತದೆ. ಜನರ ಆಸೆ ಹವ್ಯಾಸಗಳು ಬದಲಾದರೆ, ಆದಾಯ ತಗ್ಗಿದರೆ ಅಥವಾ ವಸ್ತುವಿನ ಗುಣಮಟ್ಟ ಇಳಿದರೆ ಒಂದು ವಸ್ತುವಿಗೆ ಬೇಡಿಕೆ ಕಡಿಮೆಯಾಗುತ್ತದೆ. ಬೇಡಿಕೆ ಮತ್ತು ಪೂರೈಕೆಯ ರಚನೆಯ ವ್ಯತ್ಯಾಸಗಳಿಂದ ತಲೆದೋರುವ ಈ ವಿಧದ ನಿರುದ್ಯೋಗವನ್ನು ರಚನ್ಮಾಕ ನಿರುದ್ಯೋಗ ಎನ್ನುತ್ತೇವೆ. ಇದನ್ನು ಚಕ್ತೀಯ ನಿರುದ್ಯೋಗ (Cyclical Unemployment) ಎಂತಲೂ ಕರಯಬಹುದು. ಏಕೆಂದರೆ ಬೇಡಿಕೆ, ಪೂರೈಕೆ, ಜನರ ಅಭಿರುಚಿ ಹವ್ಯಾಸಗಳು ಮೊದಲಾದವುಗಳಲ್ಲಿ ಬದಲಾವಣೆಗಳು ಸಕ್ರೀಯವಾಗಿ ಸಂಭವಿಸುತ್ತಿರುತ್ತವೆ.

. ಘರ್ಷಾಣಾತ್ಮಕ ನಿರುದ್ಯೋಗ: ಮಾಲಿಕರು ಮತ್ತು ಉದ್ಯೋಗಿಗಳ ನಡುವಣ ಘರ್ಷಣೆಯಿಂದ ಎಷ್ಟೋ ವೇಳೆ ನಿರುದ್ಯೋಗ ಸಂಭವಿಸುತ್ತದೆ. ಉದ್ಯೋಗಿಗಳು ಮುಷ್ಕರ ಹೂಡಿದಾಗ ಅಥವಾ ಮಾಲಿಕಕ್ರು ಬೀಗಮುದ್ರೆ ಹಾಕಿದಾರ ಕಾರ್ಮಿಕರು ಕೆಲಸ ಕಳೆದುಕೊಳ್ಳುತ್ತಾರೆ. ಅದಕ್ಕೆ ಕಾರ್ಮಿಕರನ್ನು ಹೊರಹಾಕಿದಾಗಲೂ ಈ ರೀತಿಯ ನಿರುದ್ಯೋಗ ತಲೆದೋರುತ್ತದೆ.

ಸಮಸ್ಯೆಯ ಸ್ವರೂಪ

ಭಾರತದಲ್ಲಿ ನಾವು ಕಾಣುವ ನಿರುದೋಗವು ಅಭಿವೃದ್ಧಿ ಹೊಂದಿದ ದೇಶಗಳಲ್ಲಿನ ನಿರುದ್ಯೋಗಕ್ಕಿಂತ ಭಿನ್ನವಾದುದು. ಆ ದೇಶಗಳಲ್ಲಿ ವ್ಯಾಪಾರದ ಮುಗ್ಗಟ್ಟಿನಿಂದ ಸಕ್ರೀಯ ನಿರುದ್ಯೋಗ, ತಂತ್ರಜ್ಞಾನದ ಮತ್ತು ಅನುಭೋಗಿಗಳ ಒಲವಿನ ಬದಲಾವಣೆಯಿಂದ ತಾಂತ್ರಿಕ ನಿರುದ್ಯೋಗ ಮತ್ತು ಕೆಲವು ಉದ್ಯಮಗಳ ಋತುಮಾನದ ಸ್ವರೂಪದಿಂದಾಗಿ ಋತುಮಾನದ ನಿರುದ್ಯೋಗ ಸಂಭವಿಸುತ್ತವೆ. ಅಲ್ಲಿ ತಲೆದೋರುವ ನಿರುದ್ಯೋಗಕ್ಕೆ ಪ್ರಧಾನ ಕಾರಣವೆಂದರೆ ಪರಿಣಾಮಕಾರಿ ಬೇಡಿಕೆಯ ಕೊರತೆ. ಆದರೆ ಭಾರತದಂತಹ ಅಭಿವೃದ್ದಿ ಹೊಂದುತ್ತಿರುವ ದೇಶಗಳಲ್ಲಿ ಉಪಸ್ಥಿತವಿರುವ ನಿರುದ್ಯೋಗವೇ ಬೇರೆ ರೀತಿಯದು. ಕಡಿಮೆ ಸಂಖ್ಯೆಯ ಅಭಿವೃದ್ಧಿ ಕಾರ್ಯಗಳ ಅನುಷ್ಠಾನ ಮತ್ತು ಕಡಿಮೆ ಉತ್ಪಾದಕತೆ, ಕೆಳಮಟ್ಟದ ಉಳಿತಾಯಗಳು ಮತ್ತು ತಗ್ಗಿದ ಬಂಡವಾಳ ಹೂಡಿಕೆ ಇವುಗಳ ವಿಷವೃತ್ತದಿಂದ ಜನ್ಮ ತಳೆದಿರುವುದೇ ನಮ್ಮ ದೇಶದಲ್ಲಿ ಕಾಣುವ ನಿರುದ್ಯೋಗ, ಉಳಿತಾಯಗಳು ಮತ್ತು ಬಂಡವಾಳ ಹೂಡಿಕೆ ಅಧಿಕಗೊಂಡರೆ ನಿರುದ್ಯೋಗವನ್ನು ಸಾಕಷ್ಟು ಪ್ರಮಾಣದಲ್ಲಿ ಬಗೆಹರಿಸಲು ಸಾಧ್ಯವಾಗುತ್ತದೆ. ಏಕೆಂದರೆ ಹೆಚ್ಚು ಉದ್ಯೋಗಗಳನ್ನು ಒದತಗಿಸುವಂತಹ ಅಭಿವೃದ್ಧಿ ಕಾರ್ಯಗಳ ಅನುಷ್ಠಾನಕ್ಕೆ ಮತ್ತು ಹೊಸ ಉದ್ಯಮಗಳ ಸ್ಥಾಪನೆಗೆ ಆಗಾಧ ಪ್ರಮಾಣದ ಬಂಡವಾಳದ ಅವಶ್ಯಕತೆ ಇದೆ. ಬಂಡವಾಳದ ಕೊರತೆಯ ಕಾರಣದಿಂದ ನಿರುದ್ಯೋಗ ಸಮಸ್ಯೆಗೆ ಯಶಸ್ವೀ ಪರಿಹಾರ ಅಸಾಧ್ಯವೇ ಸರಿ. ಅತಿ ಭೀಕರ ನಿರುದ್ಯೋಗದ ಪ್ರಸ್ತುತ ಸನ್ನಿವೇಶದಲ್ಲಿ ಹೆಚ್ಚು ತೊಂದರೆಗೀಡಾಗಿರುವವರೆಂದರೆ ಭೂರಹಿತ ಕೃಷಿ ಮತ್ತಿ ಕೃಷಿಯೇತರ ಕಾರ್ಮಿಕರು ಮತ್ತು ವಿದ್ಯಾವಂತ ಮಧ್ಯ ವರ್ಗದವರು. ಮೊದಲೇ ಬಡವರಾಗಿದ್ದರೆ ನಿರುದ್ಯೋಗವು ಅವರನ್ನು ಮತ್ತಷ್ಟು ತೀವ್ರ ಬಡತನ ಮತ್ತು ದಾರಿದ್ರ್ಯದ ದವಡೆಗೆ ನಿರ್ದಯವಾಗಿ ನೂಕುತ್ತದೆ. (ಇದರಲ್ಲಿ ದಲಿತರು ಮತ್ತು ಅಸ್ಪೃಶ್ಯರು ಹೆಚ್ಚಾಗಿ ಸೇರಿರುತ್ತಾರೆ ಎನ್ನಬಹುದು).

ಯೋಜನೆಗಳ ಅವಧಿಯಲ್ಲಿ ನಿರುದ್ಯೋಗ (ದಶಲಕ್ಷಗಳಲ್ಲಿ)*

[1]

 

ಮೊದಲನೇ ಯೋಜನೆ ೧೯೫೧-೫೬

ಎರಡನೇ
ಯೋಜನೆ
೧೯೫೬-೬೧

ಮೂರನೇ ಯೋಜನೆ ೧೯೬೧-೬೬

೧೯೬೬-೭೬ರ ಹತ್ತು ವರ್ಷಗಳ ಅವಧಿ

೧. ಅವಧಿಯ ಪ್ರಾರಂಭದಲ್ಲಿ ನಿರುದ್ಯೋಗ

೩.೩

೫.೩

೭.೧

೯.೬

೨. ಕಾರ್ಮಿಕ ಶಕ್ತಿಗೆ ಸೇರಿದ ಹೊಸಬರು

೯.೦

೧೧.೮

೧೭.೦

೪೩.೦

೩. ಒಟ್ಟು ನಿರುದ್ಯೋಗ

೧೨.೩

೧೭.೧

೨೪.೧

೫೨.೬

೪. ಸೃಷ್ಟಿಯಾದ ಹೊಸ ಉದ್ಯೋಗಗಳು

೭.೦

೧೦.೦

೧೪.೫

೨೫.೦

ಅ) ಕೃಷಿ ವಲಯ

(೧.೫)

೩.೫)

(೪.೦)

(೯.೦)

ಆ) ಕೃಷಿಯೇತರ ವಲಯ

(೫.೫)

(೬.೫)

(೧೦.೫)

(೧೬.೦)

ಒಟ್ಟು ನಿರುದ್ಯೋಗ

೫.೩.

೭.೧

೯.೬

೨೭.೬

 

ಪ್ರತಿ ಯೋಜನಾವಧಿಯಲ್ಲಿಯೂ ನಿರುದ್ಯೋಗಿಗಳ ಸಂಖ್ಯೆ ಹೆಚ್ಚುತ್ತಾ ಹೋಗಿರುವುದು ಮೇಲಿನ ಪಟ್ಟಿಯಿಂದ ವ್ಯಕ್ತವಾಗುತ್ತದೆ. ತುಂಬಾ ಕಳವಳಕಾರಿಯಾದ ಸಂಗತಿಯೆಂದರೆ ಪ್ರತಿ ಯೋಜನೆಯ ಪ್ರಾರಂಭದಲ್ಲಿದ್ದುದಕ್ಕಿಂತಲೂ ಯೋಜನೆಯ ಕೊನೆಯಲ್ಲಿದ್ದ ನಿರುದ್ಯೋಗಿಗಳ ಸಂಖ್ಯೆಯೇ ಹೆಚ್ಚು. ಬೇರೆ ರೀತಿಯಲ್ಲಿ ಹೇಳುವುದಾದರೆ, ಯೋಜನಾವಧಿಯಲ್ಲಿ ಕಾರ್ಮಿಕ ಶಕ್ತಿಗೆ ಸೇರ್ಪಡೆಯಾದ ಹೊಸಬರಿಗೆ ಉದ್ಯೋಗಗಳನ್ನು ಒದಗಿಸಲು ಅಶಕ್ತವಾಗಿರುವುದರಿಂದ ನಿರುದ್ಯೋಗದ ಅವಶೇಷ ಬೆಳೆಯುತ್ತಲೇ ಹೋಗಿದೆ. ಮಿತಿ ಮೀರಿದ ಜನಸಂಖ್ಯಾ ಏರಿಕೆಯೇ ಈ ಸಂಗತಿಗೆ ಕಾರಣವಾಗಿದೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ.

ಮೊದಲನೇ ಪಂಚವಾರ್ಷಿಕ ಯೋಜನೆಯಲ್ಲಿ ಕೃಷಿ ಹಾಗೂ ಕೃಷಿಯೇತರ ವಲಯಗಳಲ್ಲಿ ೭ ದಶಲಕ್ಷ ಉದ್ಯೋಗಗಳನ್ನು ಸೃಷ್ಟಿಸಿದರೂ ಕೂಡ ಯೋಜನೆಯ ಪ್ರಾರಂಭದಲ್ಲಿ ೩.೩ ದಶಲಕ್ಷವಿದ್ದ ನಿರುದ್ಯೋಗ ಅಂತ್ಯದಲ್ಲಿ ೫.೩ ದಶಲಕ್ಷಕ್ಕೆ ಏರಿತು. ಜನಸಂಖ್ಯಾ ಏರಿಕೆಯ ಫಲವಾಗಿ ೯ ದಶಲಕ್ಷ ಜನರು ಹೊಸದಾಗಿ ಕಾರ್ಮಿಕ ಶಕ್ತಿಗೆ ಸೇರಿದುದೇ ಇದಕ್ಕೆ ಕಾರಣ. ಅಂತೆಯೇ ೫.೩ ದಶಲಕ್ಷ ನಿರುದ್ಯೋಗಿಗಳೊಡನೆ ಪ್ರಾರಂಭಗೊಂಡ ಎರಡನೆ ಪಂಚವಾರ್ಷಿಕ ಯೋಜನೆಯು ೭.೧ ದಶಲಕ್ಷ ನಿರುದ್ಯೋಗಿಗಳೊಡನೆ ಕೊನೆಗೊಂಡಿತು. ಮೂರನೆಯ ಪಂಚವಾರ್ಷಿಕ ಯೋಜನೆಯ ಅವಧಿಯಲ್ಲಿ ಬಹಳಷ್ಟು ಪ್ರಮಾಣದ ಉದ್ಯೋಗಗಳು (೧೪.೫ ದಶಲಕ್ಷ) ಸೃಷ್ಟಿಯಾದುವು. ಆದಾಗ್ಯೂ ನಿರುದ್ಯೋಗವು ೭.೧ ದಶಲಕ್ಷದಿಂದ ೯.೬ ದಶಲಕ್ಷಕ್ಕೆ ಏರಿತು. ಮೂರನೆಯ ಯೋಜನೆಯ ನಂತರದ ಅವಧಿಯಲ್ಲಿ ನಿರುದ್ಯೋಗಿಗಳ ಸಂಖ್ಯೆಯ ಏರಿಕೆಗೆ ಕಡಿವಾಣವೇ ಇಲ್ಲವಾಗಿದೆ. ೧೯೬೬ರ ಪ್ರಾರಂಭದಲ್ಲಿ ೯.೬ ದಶಲಕ್ಷವಿದ್ದ ನಿರುದ್ಯೋಗಿಗಳ ಸಂಖ್ಯೆ ೧೯೭೬ರಲ್ಲಿ ೨೭.೬ಕ್ಕೆ ಏರಿತು. ೧೯೮೭ರ್ ಅಂದಾಜಿನಂತೆ ಅದು ಸುಮಾರು ೭೦ ದಶಲಕ್ಷವಾಗಿದೆ.

ಉದ್ಯೋಗಾವಕಾಶಗಳ ಕೊರತೆಯಿಂದ ಪರಾವಲಂಬನ ಮತ್ತು ಬಡತನ ಉದ್ಬವಿಸುತ್ತವೆ. ದೇಶದ ಆರ್ಥಿಕತೆಯ ದೃಷ್ಟಿಯಿಂದ ಬಂಡವಾಳ ಸಂಚಯನು ಮತ್ತು ಉತ್ಪಾದನೆಯ ಹೆಚ್ಚಳಕ್ಕೆ ಭಾರೀ ಅಡಚಣೆಯುಂಟಾಗುತ್ತದೆ. ಪಂಚವಾರ್ಷಿಕ ಯೋಜನೆಗಳಲ್ಲಿ ನಿರುದ್ಯೋಗ ನಿವಾರಣೆಗೆ ಮಿತಿಮಿರಿದ ಪ್ರಾಧಾನ್ಯ ನೀಡಲಾಗಿದ್ದರೂ ಈ ಸಮಸ್ಯೆ ಎಳ್ಳಷ್ಟೂ ಬಗೆಹರಿದಿಲ್ಲ ಎಂಬ ವಿಷಯ ವಿಷಾದನೀಯವಾದುದು, ನಿರುದ್ಯೋಗ ನಿವಾರಣೆ ಮತ್ತು ಉದ್ಯೋಗಗಳ ಸೃಷ್ಟಿಗೆ ಅಳವಡಿಸಿಕೊಂಡಿರುವ ಅನೇಕ ಯೋಜನೆಗಳೂ ದೋಷಪೂರಿತವಾಗಿವೆ ಎಂದರೆ ತಪ್ಪಾಗಲಾರದು. ಒಟ್ಟಿನಲ್ಲಿ ಅನೇಕ ಸಂಗತಿಗಳ ಸಂಚಿತ ಪರಿಣಾಮದಿಂದ ನಿರುದ್ಯೋಗವು ಸ್ವಲ್ಪವೂ ತಗ್ಗದಂತೆ ನಿರಂತರವಾಗಿ ಏರುತ್ತಿದ್ದು ಪ್ರತಿಯೊಬ್ಬ ವ್ಯಕ್ತಿಯ ಅಧೋಗತಿಗೆ ಕಾರಣವಾದಂತೆ ರಾಷ್ಟ್ರದ ಆರ್ಥಿಕ ಪ್ರಗತಿಗೂ ಕಂಟಕಪ್ರಾಯವಾಗಿದೆ.

ಸ್ವದೇಶದಲ್ಲಿ ಉದ್ಯೋಗಗಳ ಕೊರತೆಯನ್ನು ಮನಗಂಡು ಎಷ್ಟೋ ಜನ ತಾಂತ್ರಿಕ ಮತ್ತು ವೈದ್ಯಕೀಯ ಪದವೀಧರರು ಅಭಿವೃದ್ಧಿ ಹೊಂದಿದ ದೇಶಗಳಿಗೆ, ವಿಶೇಷವಾಗಿ ಅಮೆರಿಕಾ ಮತ್ತು ಕೆನಡಾ ದೇಶಗಳಿಗೆ, ವಲಸೆ ಹೊಗುತ್ತಿರುವುದು ಕಂಡು ಬರುತ್ತದೆ. ಇದನ್ನು ಪ್ರತಿಭಾ ಪಲಾಯನ (Brain Drain) ಎಂದು ಕಕ್ರೆಯುತ್ತೇವೆ. ನಮ್ಮ ದೇಶದ ಆರ್ಥಿಕತೆಯ ಬೊಕ್ಕಸದಿಂದ ಬೃಹತ್ ಪ್ರಮಾಣದ ಹಣ ಖರ್ಚು ಮಾಡಿ ಶಿಕ್ಷಣ ಪಡೆದ ಜನರು ಇತರೆ ದೇಶಗಳಲ್ಲಿ ಉದ್ಯೋಗಿಗಳಾಗಿ ನೆಲೆಸಿದರೆ ಅದು ನಮ್ಮ ಅರ್ಥಿಕತೆಗೆ ತುಂಬಲಾರದ ನಷ್ಟವೇ ಸರಿ. ಇದನ್ನೇ ಅನುಸರಿಸಿ, ಬಹುಮಂದಿ ಸ್ವದೇಶದಲ್ಲಿ ಉದ್ಯೋಗಾವಕಾಶಗಳಿದ್ದರೂ ಹೆಚ್ಚು ಗಳಿಕೆಯ ಆಮಿಷದಿಂದ ವಲಸೆ ಹೋಗುತ್ತಿರುವರು ಅಸಮಂಜಸವೆಂದು ಹೇಳಲಾಗುವುದಿಲ್ಲ. ಆದರೆ ಹೆಚ್ಚು ಗಳಿಕೆಯ ಆಸೆಯಿಂದ ತಾಯ್ನಾಡನ್ನು ತ್ಯಜಿಸುವುದು ನಿಜವಾಗಿಯೂ ದ್ರೋಹಕರ.

ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿರುವ ಈ ಸ್ಥಿತಿಯನ್ನು ಮನಗಂಡು ಅಭಿವೃದ್ಧಿ ಹೊಂದಿದ ದೇಶಗಳು ಉಚ್ಚ, ಶಿಕ್ಷಿತ ಜನರನ್ನು ತಮ್ಮ ದೇಶದೊಳಗೆ ಬರುವಂತೆ ಪ್ರೋತ್ಸಾಹಿಸುತ್ತವೆ.

ಅವಿದ್ಯಾವಂತ ನಿರುದ್ಯೋಗಿಗಳು ಮತ್ತು ಅರೆ ಉದ್ಯೋಗಿಗಳು ಅಸಂಖ್ಯಾತವಾಗಿದ್ದರೂ ಸಮಸ್ಯೆ ತೀವ್ರತೆ ದೇಶದ ಎಲ್ಲ ಪ್ರದೇಶಗಳಲ್ಲೂ ಏಕ ಪ್ರಕಾರವಾಗಿಲ್ಲ ಕೆಲವು ಪ್ರದೇಶಗಳಲ್ಲಿ ಅವರ ಸಂಖ್ಯೆ ಇತರ ಪ್ರದೇಶಗಳಲ್ಲಿರುವುದಕ್ಕಿಂತ ತುಂಬಾ ಕಡಿಮೆ ಇದೆ. ಅಷ್ಟೇ ಅಲ್ಲದೆ. ತುಂಬಾ ವಿಪರ್ಯಾಸವಾಗಿ, ಕೆಲವು ಪ್ರದೇಶಗಳಲ್ಲಿ ವರ್ಷದ ಕೆಲವು ಸಮಯದಲ್ಲಿ ಶ್ರಮಿಕರ ಕೊರತೆ ಸಂಭವಿಸುವ ಸಂಗತಿಯೂ ಅಪರೂಪವಲ್ಲ. ಕೃಷಿಯು ಋತುಮಾನದ ಕಸುಬಾಗಿರುವುದರಿಂದ ಬಿತ್ತನೆ ಮತ್ತು ಕಟಾವಿನ ಕಾಲದಲ್ಲಿ ಹೆಚ್ಚು ಶ್ರಮಿಕರೆಗೆ ಬೇಡಿಕೆ ಇದ್ದು ಸುತ್ತಮುತ್ತಲ ಪ್ರದೇಶದಲ್ಲಿರುವ ಶ್ರಮಿಕರ ಪೂರೈಕೆ ಬೇಡಿಕೆಗಿಂತಲೂ ಕಡಿಮೆಯಾದರೆ ಆಶ್ಚರ್ಯವಿಲ್ಲ. ಆದರೆ ಆ ಕಾಲಗಳನ್ನು ಕಳೆದರೆ ಮತ್ತೆ ನಿರುದ್ಯೋಗ ಯಥಾ ಪ್ರಕಾರ ಪಸರಿಸುತ್ತದೆ.

ಅವಿದ್ಯಾವಂತ ನಿರುದ್ಯೋಗಿಗಳಲ್ಲಿಯೂ ಉದ್ಯೋಗವನ್ನು ಅರಸಿ ವಲಸೆ ಹೋಗುವ ಪ್ರವೃತ್ತಿ ಇದೆ. ಆದರೆ ಎಲ್ಲ ಪ್ರದೇಶಗಳಲ್ಲೂ ಶ್ರಮಿಕರ ಹೆಚ್ಚಳ ಮತ್ತು ನಿರುದ್ಯೋಗವಿರುವುದರಿಂದ ಈ ಪ್ರವೃತ್ತಿಗೆ ತಡೆಯುಂಟಾಗಿದೆ. ಅಲ್ಲದೆ. ಭಾಷೆ, ಸಂಸ್ಕೃತಿ, ಆಚಾರ ವಿಚಾರಗಳು ಮುಂತಾದುವುಗಳ ಭಿನ್ನತೆಯಿಂದ ದೂರ ಪ್ರದೇಶಗಳಿಗೆ ಜನರು ವಲಸೆ ಹೋಗಲು ಇಷ್ಟಪಡುವುದಿಲ್ಲ. ಆದ್ದರಿಂದ ಕೆಲವು ಪ್ರದೇಶಗಳಲ್ಲಿ ಉದ್ಯೋಗಗಳು ಲಭ್ಯವಿದ್ದರೂ ಅವು ಯಾವ ಪ್ರಯೋಜನಕ್ಕೂ ಬರುವುದಿಲ್ಲ. ಒಟ್ಟಿನಲ್ಲಿ ಭಾರತದ ಆರ್ಥಿಕತೆಯಲ್ಲಿ ನಿರುದ್ಯೋಗವು ಅರೆ ಉದ್ಯೋಗ, ವಿದ್ಯಾವಂತ ನಿರುದ್ಯೋಗ, ಮಾರುವೇಷದ ನಿರುದ್ಯೋಗ ಮುಂತಾದ ರೂಪಗಳಲ್ಲಿ ಬೃಹದಾಕಾರ ತಳೆದು ಆರ್ಥಿಕ ಪ್ರಗತಿಯ ಎಲ್ಲ ಫಲಗಳನ್ನು ಧ್ವಂಸ ಮಾಡುತ್ತಿರುವುದರೊಡನೆ ಭವಿಷ್ಯದ ಪ್ರಗತಿಗೂ ಪ್ರತಿಬಂದ ಒಡ್ಡುತ್ತಿದೆ.

ಅಭಿವೃದ್ಧಿ ಹೊಂದಿದ ದೇಶಗಳೂ ನಿರುದ್ಯೋಗ ಸಮಸ್ಯೆಯನ್ನು ಅನುಭವಿಸುತ್ತಿವೆ ಎಂಬುದು ಸ್ವಾರಸ್ಯಕರವಾದ ವಿಷಯ . ಸಮತಾವಾದಿ ದೇಶಗಳನ್ನು ಹೊರತುಪಡಿಸಿ ಎಲ್ಲ ಅಭಿವೃದ್ಧಿ ಹೊಂದಿದ ದೇಶಗಳಲ್ಲೂ ಸ್ವಲ್ಪ ಹೆಚ್ಚು ಅಥವಾ ಕಡಿಮೆ ಪ್ರಮಾಣದಲ್ಲಿ ನಿರುದ್ಯೋಗ ಗೋಚರಿಸುತ್ತದೆ. ಪ್ರಪಂಚದಲ್ಲೇ ಅತಿ ಹೆಚ್ಚು ಮುಂದುವರಿದ ಅರ್ಥಿಕತೆಯಾದ ಅಮೆರಿಕಾದಲ್ಲಿ ಒಟ್ಟು ಶ್ರಮ ಬಲದ ಶೇ. ೮ ರಷ್ಟು ಜನರು ನಿರುದ್ಯೋಗಿಗಳಾಗಿರುವರು. ಆರ್ಥಿಕ ಪ್ರಗತಿಯಲ್ಲಿ ಎರಡನೆಯ ಸ್ಥಾನ ಪಡೆದ ಜಪಾನ್ ನಲ್ಲಿಯೂ ನಿರುದ್ಯೋಗ ಕಂಡು ಬರುತ್ತದೆ. ಆದರೆ ಈ ದೇಶಗಳಲ್ಲಿ ನೀವು ಕಾಣುವ ನಿರುದ್ಯೋಗಕ್ಕಿಂತ ಭಾರತದ ನಿರುದ್ಯೋಗ ಭಿನ್ನವಾದುದು. ಜನಸಂಖ್ಯಾ ನಿಯಂತ್ರಣ ಮತ್ತು ಹೆಚ್ಚು ಬಂಡವಾಳ ಹೂಡಿಕೆಯ ಮೂಲಕ ಉದ್ಯೋಗಗಳ ಸೃಷ್ಟಿಗೆ ಅಲ್ಲಿ ವ್ಯಾಪ್ತಿ ಇದೆ. ಆದರೆ ಭಾರತದಲ್ಲಿ ಈ ಎರಡೂ ಸಂಗತಿಗಳೆಗೆ ಹೆಚ್ಚಿನ ಅವಕಾಶವಿಲ್ಲದಿರುವುದರಿಂದ ನಿರಾಶಾವಾದಕ್ಕೆ ಆಸ್ಪದ ದೊರೆತಿದೆ.

ನಿರುದ್ಯೋಗದ ಸಾಮಾನ್ಯ ಕಾರಣಗಳು

ಭಾರತದ ಪರಿಸರದಲ್ಲಿ ನಿರುದ್ಯೋಗದ ಉದ್ಬವಕ್ಕೆ ಸಾಮಾನ್ಯ ಕಾರಣಗಳು ಈ ಕೆಳಕಂಡಂತಿವೆ.

. ಹೆಚ್ಚುತ್ತಿರುವ ಜನಸಂಖ್ಯಾ ಬೆಳವಣಿಗೆ: ೧೯೨೧ರಿಂದೀಚೆಗೆ, ಅದರಲ್ಲೂ ವಿಶೇಷವಾಗಿ, ೧೯೬೦ ರಿಂದೀಚೆಗೆ ನಮ್ಮ ದೇಶದಲ್ಲಿ ಜನಸಂಖ್ಯೆಯ ಪ್ರಮಾಣವು ಸ್ವಲ್ಪವೂ ತಗ್ಗದಂತೆ ನಿರಂತರವಾಗಿ ರಭಸಗತಿಯಲ್ಲಿ ಏರುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಅದು ಶೇ. ೩.೫ರ ವಾರ್ಷಿಕ ದರದಲ್ಲಿ ಬೆಳೆಯುತ್ತಿದೆ. ಈ ಸಂಗತಿಯು ನಮ್ಮ ನಿರುದ್ಯೋಗ ಸಮಸ್ಯೆಗೆ ಒಂದು ಮೂಲ ಕಾರಣವಾಗಿದೆ. ಹೊಸ ಉದ್ಯೋಗಾವಕಾಶಗಳ ಸೃಷ್ಟಿಗೆ ಅವಕಾಶವಿಲ್ಲದಿರುವಾಗ ಅಥವಾ ಜನಸಂಖ್ಯೆಗೆ ಹೋಲಿಸಿದಂತೆ ಉದ್ಯೋಗಗಳು ನಿಧಾನವಾಗಿ ಬೆಳೆಯುತ್ತಿರುವಾಗ ನಿರುದ್ಯೋಗ ಅನಿವಾರ್ಯವಾಗುತ್ತದೆ

. ಮಂದಗತಿಯ ಆರ್ಥಿಕಾಭಿವೃದ್ಧಿ: ಬಂಡವಾಳದ ಹೂಡಿಕೆ ಅಗಾಧ ಪ್ರಮಾಣದಲ್ಲಿ ಹೆಚ್ಚುತ್ತಿದ್ದು. ಹೊಸ ಉದ್ಯಮಗಳು ಸ್ಥಾಪನೆಯಾಗುತ್ತಿದ್ದು. ಅಭಿವೃದ್ಧಿ ಕಾರ್ಯಗಳು ಹೆಚ್ಚಿನ ಸಂಖ್ಯೆಯಲ್ಲಿ ಜಾರಿಗೆ ಬರುತ್ತಿದ್ದರೆ ಉದ್ಯೋಗಾವಕಾಶಗಳು ತ್ವರಿತ ಗತಿಯಲ್ಲಿ ಬೆಳೆಯುತ್ತವೆ. ಉತ್ಪಾದನೆಯ ಜಡತ್ವ, ಬಂಡವಾಳದ ಕೊರತೆ ಮತ್ತು ಮಂದಗತಿಯ ಆರ್ಥಿಕ ಪ್ರಗತಿ. – ಇವು ಭಾರತದಲ್ಲಿ ಆರ್ಥಿಕತೆಯ ಪ್ರಧಾನ ಲಕ್ಷಣಗಳಾಗಿವೆ. ಹೊಸ ಕೈಗಾರಿಕೆಗಳು ಸ್ಥಾಪನೆಯಾಗುತ್ತಿದ್ದರೆ ಮತ್ತು ಪಟ್ಟಣಗಳಲ್ಲಿ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಅಭಿವೃದ್ಧಿ ಕಾರ್ಯಗಳು ಅನುಷ್ಠಾನಗೊಳ್ಳುತ್ತಿದ್ದರೆ ಹೆಚ್ಚುವರಿ ಜನಸಂಖ್ಯೆಗೆ ಉದ್ಯೋಗ ಒದಗಿಸಲು ಸಾಧ್ಯವಾಗುತ್ತದೆ. ಆಗ ನಿರುದ್ಯೋಗಿ ಜನರಿಗೆ ಗಳಿಕೆಯ ಮಾರ್ಗ ದೊರೆತು ಆರ್ಥಿಕ ಪ್ರಗತಿ ಉತ್ತಮಗೊಳ್ಳುತ್ತದೆ. ಬಂಡವಾಳದ ಕೊರತೆ ಮತ್ತು ಕಡಿಮೆ ದರದ ಅಭಿವೃದ್ಧಿಯು ಅನಭಿವೃದ್ಧಿಯ ಕಾರಣ ಮತ್ತು ಪರಿಣಾಮಗಳೆರಡು ಆಗಿದೆ ಎಂಬುದರಲ್ಲಿ ಸಂಶಯವಿಲ್ಲ.

. ದೋಷಪೂರ್ಣ ಶಿಕ್ಷಣ ಪದ್ಧತಿ: ವಿದ್ಯಾವಂತರನ್ನು ಸೃಷ್ಟಿಸುವುದೇ ನಮ್ಮ ಶಿಕ್ಷಣ ಪದ್ಧತಿಯ ಗುರಿಯಾಗಿದೆಯೇ ಹೊರತು ಉದ್ಯೋಗಗಳನ್ನು ಕಂಡುಕೊಳ್ಳುವ ದೃಷ್ಟಿಯಿಂದ ಅದು ಸಹಾಯಕವಾಗಿಲ್ಲ. ತಮ್ಮ ಸರ್ಕಾರದಲ್ಲಿ ಸೇವೆ ಸಲ್ಲಿಸಲು ಗುಮಾಸ್ತರಾಗುವಂತೆ ಶೈಕ್ಷಣಿಕ ತರಬೇತಿ ನೀಡುವುದೇ ಬ್ರಿಟೀಷರ ಗುರಿಯಾಗಿತ್ತು. ಬ್ರಿಟೀಶರು ಸೂತ್ರೀಕರಿಸಿದ ಶಿಕ್ಷಣ ಪದ್ದತಿಯೇ ಹೆಚ್ಚು ಕಡಿಮೆ ಇನ್ನೂ ಜಾರಿಯಲ್ಲಿರುವುದೇ ನಮ್ಮ ನಿರುದ್ಯೋಗ ಸಮಸ್ಯೆಗೆ ಒಂದು ಪ್ರಮುಖ ಕಾರಣವಾಗಿದೆ ಎಂದರೆ ತಪ್ಪಾಗದು. ನಮ್ಮ ಶಿಕ್ಷಣ ಪದ್ಧತಿಯು ಹೆಚ್ಚಾಗಿ ಸಾಮಾನ್ಯ ಶಿಕ್ಷಣ ನೀಡುತ್ತಿದೆಯೇ ಹೊರತು ಜನರನ್ನು ನಿರ್ದಿಷ್ಟ ಉದ್ಯೋಗಗಳಿಗೆ ಸಿದ್ಧಪಡಿಸುತ್ತಿಲ್ಲ. ವಿದ್ಯಾವಂತರು. ನಿರುದ್ಯೋಗಿಗಳಾಗಿರಲೂ ಒಪ್ಪಿಯಾರು. ಗುಮಾಸ್ತರಾಗಿ ಸೇವೆ ಸಲ್ಲಿಸಲೂ ಒಪ್ಪಿಯಾರು. ಆದರೆ ಭೌತಿಕ ಶ್ರಮವನ್ನು ಉಪಯೋಗಿಸಿ ಜೀವನ ಸಾಗಿಸಲು ಇಷ್ಟಪಡುವುದಿಲ್ಲ. ವಿದ್ಯಾರ್ಜನೆಯು ಜೀವನ ನಿರ್ವಹಣೆಗೆ ಅತ್ಯಾವಶ್ಯಕವಾದ ಅಂಶ ಎಂಬುವುದನ್ನು ಅರಿತುಕೊಳ್ಳದೆ ಅದು ಉತ್ತಮ ಉದ್ಯೋಗ ದೊರಕಿಸುವ ಸೂಕ್ತ ಮಾರ್ಗ ಎಂಬುದೇ ನಮ್ಮ ದೇಶದ ಜನರಲ್ಲಿ ಬೆಳೆದು ಬಂದಿರುವ ತಪ್ಪು ಕಲ್ಪನೆಯಾಗಿದೆ.

. ಕೃಷಿಯ ಋತುಮಾನದ ಸ್ವರೂಪ : ಕೃಷಿಯು ಪ್ರಮುಖವಾಗಿ ಮಳೆಯನ್ನೇ ಅವಲಂಬಿಸಿದ್ದು ಋತುಮಾನದ ಕಸುಬಾಗಿರುವುದರಿಂದ ಕೃಷಿಯನ್ನೇ ಜೀವನಾಧಾರ ವೃತ್ತಿಯಾಗಿ ಆಶ್ರಯಿಸಿರುವ ಜನರು ಋತುಮಾನದ ನಿರುದ್ಯೋಗ ಅನುಭವಿಸಬೇಕಾಗುತ್ತದೆ.

 . ಕೃಷಿಯ ಮೇಲೆ ಮಿತಿಮೀರಿದ ಅವಲಂಬನೆ: ಅನೇಕ ಜನರು ಬೇರೆ ಉದ್ಯೋಗಗಳನ್ನು ಹುಡುಕದೆ ಕೃಷಿಯನ್ನೇ ಅವಲಂಬಿಸಿರುವುದು ನಿರುದ್ಯೋಗಿ ಮತ್ತು ಮಾರುವೇಷದ ನಿರುದ್ಯೋಗಕ್ಕೆ ದಾರಿಯಾಗಿದೆ. ಕೃಷಿಯು ಜೀವನದ ಒಂದು ಮಾರ್ಗವಾಗುವ ಬದಲು ಒಂದು ವಿಧಾನವಾಗಿ ಮಾರ್ಪಟ್ಟಿದೆ. ಕೃಷಿಯು ಪ್ರಗತಿಪರ ಕಸುಬಾಗಿ ಉಳಿದಿಲ್ಲ ಎಂದು ಗೊತ್ತಿದ್ದು, ಬೇರೆ ಉದ್ಯೋಗಗಳು ದೊರೆಯುವ ಸಂಭವವಿದ್ದರೂ ಹಳ್ಳಿಯ ಜನರು ಕೃಷಿಯನ್ನು ಬಿಡಲು ಇಚ್ಛಿಸುವುದಿಲ್ಲ. ಇದರ ಪರಿಣಾಮವಾಗಿ ಭೂಮಿಯ ವಿಭಜನೆ ಮತ್ತು ವಿಚ್ಛಿದ್ರತೆ ಹೆಚ್ಚಿ ಉತ್ಪಾದನೆ ಮತ್ತು ಜನರ ಆದಾಯ ತಗ್ಗುತ್ತವೆ. ಜನಸಂಖ್ಯೆ ಹೆಚ್ಚಿದಂತೆ ಮಾರುವೇಷದ ನಿರುದ್ಯೋಗ ಜಾಸ್ತಿಯಾಗ ತೊಡಗುತ್ತದೆ.

 . ಬದಲಿ ಉದ್ಯೋಗಗಳ ಅಭಾವ: ಹಳ್ಳಿಗಳಲ್ಲಿ ಗುಡಿ ಕೈಗಾರಿಕೆ, ಸಣ್ಣ ಪ್ರಮಾಣದ ಕೈಗಾರಿಕೆ, ರಸ್ತೆ ನಿರ್ಮಾಣದ ಕಾರ್, ನೀರಾವರಿ ಯೋಜನೆಗಳು ಮುಂತಾದವುಗಳಿದ್ದರೆ ಕೃಷಿಯ ಉದ್ಯೋಗವಿಲ್ಲದ ಕಾಲದಲ್ಲಿ ಜನರು ತಾತ್ಕಾಲಿಕ ಉದ್ಯೋಗವನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಆದರೆ ಸಣ್ಣ ಕೈಗಾರಿಕೆಗಳು ಮತ್ತು ಅಭಿವೃದ್ದಿ ಕಾರ್ಯಗಳ ಅಭಾವವಿರುವುದರಿಂದ ಋತುಮಾನದ ನಿರುದ್ಯೋಗಕ್ಕೆ ಪರಿಹಾರ ಕಂಡುಹಿಡಿಯಲು ಸಾಧ್ಯವಾಗುವುದಿಲ್ಲ.

 . ಶ್ರಮದ ಅಚಲತೆ: ಶ್ರಮವು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಸಾಗಿಸಲು ಅತ್ಯಂತ ಕಷ್ಟವಾದ ಸರ್ಕು ಎಂದು ಆಡಂಸ್ಮಿತ್ ಹೇಳಿದ್ದಾನೆ. ಕೆಲವು ಪ್ರದೇಶಗಳಲ್ಲಿ ಶ್ರಮದ ಕೊರತೆ ಇದ್ದು ಉದ್ಯೋಗಾವಕಾಶಗಳು ಲಭ್ಯವಿದ್ದರೂ ಶ್ರಮಬಲ ಯಥೇಚ್ಛವಾಗಿರುವ ಪ್ರದೇಶದ ನಿರುದ್ಯೋಗೀ ಜನರು ಆ ಪ್ರದೇಶಗಳಿಗೆ ವಲಸೆ ಹೋಗಲು ಇಷ್ಟಪಡುವುದಿಲ್ಲ, ಭಾಷೆ, ಆಚಾರ ವಿಚಾರಗಳು, ಧರ್ಮ, ಸಂಸ್ಕೃತಿ, ನಂಬಿಕೆಗಳು ಮುಂತಾದುವುಗಳಲ್ಲಿ ಒಂದು ಪ್ರದೇಶಕ್ಕೂ ಇನ್ನೊಂದು ಪ್ರದೇಶಕ್ಕೂ ಭಿನ್ನತೆಯಿರುವುದೇ ಶ್ರಮದ ಅಚಲತೆಗೆ ಕಾರಣವಾಗಿದೆ. ಇದು ನಿರುದ್ಯೋಗಕ್ಕೆ ಒಂದು ಮುಖ್ಯ ಕಾರಣವೆನ್ನಬಹುದು.

. ಅವಿಭಕ್ತ ಕುಟುಂಬ ಪದ್ಧತಿ: ಅವಿಭಕ್ತ ಕುಟುಂಬವು ಕುಟುಂಬದ ಎಲ್ಲ ಸದಸ್ಯರಿಗೂ ಆರ್ಥಿಕ ಭದ್ರತೆ ಒದಗಿಸುತ್ತದೆ. ಕುಟುಂಬದಲ್ಲಿ ಅನೇಕ ಜನರಿದ್ದು ಕೆಲವರು ಮಾತ್ರ ಉದ್ಯೋಗಿಗಳಾಗಿದ್ದರೂ ಎಲ್ಲರ ಜೀವನ ನಿರ್ವಹಣೆ ಕಷ್ಟವಾಗುವುದಿಲ್ಲ. ಏಕೆಂದರೆ ನಿರುದ್ಯೋಗಿಗಳಾಗಿರುವ ಕೆಲವರು ಉದ್ಯೋಗಿಗಳನ್ನು ಆಶ್ರಯಿಸಿ ಜೀವನ ಸಾಗಿಸುತ್ತಾರೆ. ಅವಿಭಕ್ತ ಕುಟುಂಬದಲ್ಲಿ ಜನರ ಗಂಭೀರ ದೃಷ್ಟಿಯಿಂದ ಉದ್ಯೋಗಗಳನ್ನು ಹುಡುಕುವುದಿಲ್ಲ.

. ಆಧುನಿಕರ ಹಾಗೂ ಕಂಪ್ಯೂಟರೀಕರಣ: ಇಂದು ಮಾನವನು ಒಂದಲ್ಲಾ ಒಂದು ಹಂತದಲ್ಲಿ ಪ್ರತಿ ಕ್ಷಣವನ್ನು ಯಾಂತ್ರಿಕವಾಗಿ ಸಾಗಿಸಲು ಬಯಸುತ್ತಿದ್ದಾನೆ. ನಮ್ಮ ಹಳೆ ಕಾಲದ ಕೈಗಾರಿಕೆಗಳು ಮೂಲೆ ಗುಂಪಾಗಿ, ಗ್ರಾಮೀಣಾ ಕೈಗಾರಿಕೆ ಹಾಗೂ ಗುಡಿ ಕೈಗಾರಿಕೆಗಳು ಇಲ್ಲದಂತಾಗಿ ಗ್ರಾಮಗಳಲ್ಲಿ ನಿರುದ್ಯೋಗ ತಾಂಡವಾಡ ತೊಡಗಿದೆ. ಕಾರಣ ಆಧುನಿಕವಾದಂತಹ ಕೈಗಾರಿಕಾ ಯಂತ್ರಗಳು ಬಳಕೆಗೆ ಬಂದದ್ದರಿಂದ ಹಾಗೂ ಇಂದು ಸಂಪೂರ್ಣ ಕಂಪ್ಯೂಟರ್ ಯುಗವಾಗಿ ಪರಿವರ್ತನೆಗೊಂಡಿರುವುದಿಂದಾಗಿದೆ. ಹತ್ತು ಜನ ಮಾಡುವ ಪ್ರತಿಯೊಂದು ಕೆಲಸವನ್ನು ಒಂದು ಕಂಪ್ಯೂಟರ್ ಮುಂದೆ ಕುಳಿತು ಒಬ್ಬನೇ ವ್ಯಕ್ತಿ ಮಾಡಿ ಮುಗಿಸುತ್ತಿದ್ದಾನೆ. ಇದರಿಂದಾಗಿ ಒಂದು ಕಡೆ ಮಿತಿಮೀರುತ್ತಿರುವ ಜನಸಂಖ್ಯೆ, ಮತ್ತೊಂದು ಕಡೆ ಜೀವನದ ಆವಲಂಬನೆಗಾಗಿ ಆಧುನಿಕತೆ ಇವುಗಳ ನಡುವೆ ಜನತೆ ಅದರಲ್ಲಿಯು ಇಂದಿನ ಯುವಜನತೆ ಸಿಲುಕಿಕೊಂಡು ತೊಳಲಾಡುತ್ತಿರುವುದು ಸರ್ವಸಾಮಾನ್ಯವಾಗಿದೆ. ಈ ಸಂದರ್ಭದಲ್ಲಿ ಹೆಚ್ಚಾಗಿ, ಆಧುನಿಕ ಶಿಕ್ಷಣ ಪಡೆದವರು, ಇಂಗ್ಲೀಷ್ ಭಾಷೆಯನ್ನು ಚೆನ್ನಾಗಿ ಅರಿತವರು ಹಾಗೂ ಈ ಜಾತಿ ವ್ಯವಸ್ಥೆಯ ದೇಶದಲ್ಲಿ ಉತ್ತಮ ಜಾತಿ ಎಂದು ಗುರ್ತಿಸಿಕೊಂಡವರು ಹೆಚ್ಚಾಗಿ ಉದ್ಯೋಗ ಪಡೆಯುತ್ತಿದ್ದಾರೆಯೇ ವಿನಹ ದಲಿತರು ಹಾಗೂ ಅಸ್ಪೃಶ್ಯತ ಸ್ಥಿತಿಗತಿ ಶೋಚನೀಯವಾಗಿದೆ. ಇವರು ಪಡೆಯುವ ಶಿಕ್ಷಣವು ಕೇವಲ ಸರ್ಕಾರಿ ವಲಯದಲ್ಲಿಯೇ ಉದ್ಯೋಗ ಪಡೆಯುವುದಕ್ಕಾಗಿರುತ್ತದೆಯೇ ಹೊರತು ಇಂದಿನ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಸ್ಪರ್ಧಿಸಿ ಉದ್ಯೋಗ ಪಡೆಯಲು ಅಸಾಧ್ಯವಾಗಿರುತ್ತದೆ. ಸರ್ಕಾರವಾದರೂ ಎಲ್ಲಿ ತಾನೇ ಕೆಲಸ ಸೃಷ್ಟಿಸುತ್ತಿದೆ? ಪ್ರತಿಯೊಂದು ಹಂತದಲ್ಲಿಯು ಖಾಸಗೀಕರಣವು ತಾಂಡವಾಡುತ್ತಿರುವಾಗ, ಉನ್ನತ ಜಾತಿಯವರ ಕೈಯಲ್ಲಿರುವ ಉದ್ಯೋಗ ಸಂಸ್ಥೆಗಳು ಸಾಮಾನ್ಯ ಶಿಕ್ಷಣ ಪಡೆದಿರುವವರ ಕಡೆ ಏನು ತಾನೇ ಗಮನ ಹರಿಸುವರು? ಇದು ನಿರುದ್ಯೋಗಕ್ಕೆ ಪ್ರಮುಖ ಕಾರಣವಾಗಿದೆ. ಒಟ್ಟಾರೆ ಜಾಗತೀಕರಣ ಮತ್ತು ದಲಿತರ ಸ್ಥಿತಿಗತಿಯನ್ನು ಗುರುತಿಸುವುದೇ ನಮ್ಮದೊಂದು ಬೃಹತ್ ಅಧ್ಯಯನವೆನ್ನಿಸುತ್ತದೆ.

ಒಟ್ಟಿನಲ್ಲಿ ನಮ್ಮ ಆರ್ಥಿಕತೆಯಲ್ಲಿರುವ ಅಂತರ್ಗತ ವಿರೋಧಾಭಾಸಗಳು, ಮಿತಿಮೀರಿದ ಜನಸಂಖ್ಯಾ ಏರಿಕೆ, ಬಂಡವಾಳದ ಅಭಾವ, ಕೃಷಿಯ ಹಿಂದುಳಿದಿರುವಿಕೆ, ಅಭಿವೃದ್ಧಿ ಕಾರ್ಯಗಳ ಕೊರತೆ ಇವೇ ನಿರುದ್ಯೋಗಕ್ಕೆ ಪ್ರಮುಖ ಕಾರಣಗಳಾಗಿದ್ದು ಸಮಸ್ಯೆಯನ್ನು ಮತ್ತಷ್ಟು ತೀವ್ರವಾಗಿಸುತ್ತಿವೆ ಎಂದು ಹೇಳಬಹುದು.

ದುಷ್ಪರಿಣಾಮಗಳು:

ನಿರುದ್ಯೋಗವು ಆರ್ಥಿಕತೆಯ ಮೇಲೆ ಅನೇಕ ದುಷ್ಪರಿಣಾಮಗಳನ್ನು ಬೀರಿ ಅಭಿವೃದ್ಧಿಯ ಗತಿಯನ್ನು ಕುಂಠಿತಗೊಳಿಸುತ್ತದೆ.

೧. ನಿರುದ್ಯೋಗವು ಬಡತನಕ್ಕೆ ದಾರಿಯಾಗುತ್ತದೆ. ನಿರುದ್ಯೋಗಿಗಳು ಜೀವನ ನಿರ್ವಹಣೆಗೆ ಇತರರನ್ನೂ ಆಶ್ರಯಿಸುವುದರಿಂದ ಸರಾಸರಿ ಆದಾಯ ಮತ್ತು ಅನುಭೋಗದ ಮಟ್ಟ ತಗ್ಗಿ ಜೀವನಮಟ್ಟ ಇಳಿಯುತ್ತದೆ. ಉದ್ಯೋಗಿಗಳ ಆದಾಯವು ನಿರುದ್ಯೋಗಿಗಳ ಪೋಷಣೆಗೆ ಹಂಚಿಹೋಗುವುದರಿಂದ ಬಡತನ ಸರ್ವವ್ಯಾಪ್ತಿಯಾಗುತ್ತದೆ.

೨. ನಿರುದ್ಯೋಗದಿಂದ ಅತೃಪ್ತಿ, ಆತ್ಮ ಸಂಶಯ ಮತ್ತು ನಿರಾಶಾವಾದ ಪರಿಣಮಿಸುತ್ತದೆ. ಎಷ್ಟೋ ಜನ ನಿರುದ್ಯೋಗಿಗಳು ಜೀವನ ಸಾಗಿಸುವ ಯಾವ ಮಾರ್ಗವೂ ಕಾಣದ ಆತ್ಮಹತ್ಯೆ ಮಾಡಿಕೊಳ್ಳುವರು. ಮಾನಸಿಕ ಅಥವಾ ಭೌತಿಕ ಶ್ರಮವನ್ನು ಉಪಯೋಗಿಸಿ ದುಡಿಯುವ ಜೀವಗಳ ನಷ್ಟವು ಆರ್ಥಿಕತೆಗೆ ತುಂಬಲಾರದ ನಷ್ಟವೇ ಸರಿ.

೩. ನಿರುದ್ಯೋಗಿಗಳು ಆರ್ಥಿಕತೆಗೆ ಹೊರೆಯಾಗಿರುತ್ತಾರೆ. ಕಷ್ಟಪಟ್ಟು ಉತ್ಪಾದಿಸಿದ ಸರಕುಗಳ ಅನುತ್ಪಾದಕ ಮತ್ತು ಪರಾವಲಂಬಿ ನಿರುದ್ಯೋಗಿಗಳ ಜೀವನಕ್ಕೆ ಮುಡಿಪಾಗುವುದರಿಂದ ಬಂಡವಾಳ ಕ್ರೂಢಿಕರಣಕ್ಕೆ ಮಾರ್ಗ ದೊರೆಯದೆ ದೇಶವು ಇನ್ನೂ ದುರ್ಬಲವಾಗುತ್ತದೆ. ಅನುಭೋಗದ ಮಟ್ಟದಲ್ಲಿ ಉಳಿತಾಯವಾಗುವುದರಿಂದ ಶ್ರಮಿಕರ ಉತ್ಪಾದನಾ ದಕ್ಷತೆ ಕಡಿಮೆಯಾಗಿ ಒಟ್ಟು ಉತ್ಪಾದನೆಯೂ ತಗ್ಗುತ್ತದೆ. ಇವೆಲ್ಲವುಗಳು ಆರ್ಥಿಕ ಪ್ರಗತಿಗೆ ಭಾರೀ ಆಡಚಣೆ ಒಡ್ಡುತ್ತವೆ.

೪. ನಿರುದ್ಯೋಗದಿಂದ ಪರಿಣಮಿಸಿದ ಪ್ರತಿಭಾ ಪಲಾಯನವು ಆರ್ಥಿಕತೆಗೆ ಭರಿಸಲಾಗದ ಹಾನಿಯುಂಟು ಮಾಡುತ್ತದೆ. ಉಚ್ಚ ಶಿಕ್ಷಣ ಪಡೆದ ವಿದ್ಯಾವಂತರು ಉದ್ಯೋಗಾರ್ಥಿಗಳಾಗಿ ವಿದೇಶಗಳಿಗೆ ಹೋದರೆ ರಾಷ್ಟ್ರದ ಬೊಕ್ಕಸದಿಂದ ಅವರ ಶಿಕ್ಷಣಕ್ಕೆ ಖರ್ಚು ಮಾಡಿದ ಹಣ ನಷ್ಟವಾಗುತ್ತದೆ ಮತ್ತು ಅವರಿಂದ ಪಡೆಯಬಹುದಾಗಿದ್ದ ಸೇವೆಯೂ ದೊರೆಯದೆ ಹೋಗುತ್ತದೆ.

ತಜ್ಞರು ಮತ್ತು ಇತರ ವಿದ್ಯಾವಂತರನ್ನು ಉತ್ಪಾದಿಸಲು ಕೋಟಿಗಟ್ಟಲೆ ಹಣವನ್ನು ವೆಚ್ಚ ಮಾಡಲಾಗಿರುತ್ತದೆ. ನಂತರ ಪ್ರತಿಫಲವಾಗಿ ದೇಶಕ್ಕೆ ಅವರ ಸೇವೆಯು ದೊರೆಯದಿದ್ದಾಗ ತುಂಬಲಾರದ ನಷ್ಟವಾಗುತ್ತದೆ. ತದ್ವಿರುದ್ದವಾಗಿ ಇವರನ್ನು ಪಡೆದ ದೇಶಕ್ಕೆ ಸ್ವಲ್ಪವೂ ವೆಚ್ಚವಿಲ್ಲದೆ ಇವರ ಸೇವೆ ಒದಗುವುದರಿಂದ ಅದು ಕೋಟ್ಯಂತರ ರೂಪಾಯಿಗಳು ಲಾಭ ಗಳಿಸುವ ಪರಿಸ್ಥಿತಿಯಲ್ಲಿರುತ್ತದೆ. ಇದು ಭಾರತದಂತಹ ಅನಭಿವೃದ್ದಿ ದೇಶಕ್ಕೆ ಪ್ರತಿಭಾ ಪಲಾಯನದಿಂದಾಗುವ ದುರಂತದ ಕಥೆಯಾಗಿದೆ.

೫. ನಿರುದ್ಯೋಗಿ ಯುವಕರು ಅಸಂತೃಪ್ತಿಯಿಂದ ಲೂಟಿ, ಹಿಂಸಾಚಾರ, ಕಳ್ಳತನ ಮೊದಲಾದ ಸಮಾಜಘಾತುಕ ಕೃತ್ಯಗಳಲ್ಲಿ ತೊಡಗುವ ಸಂದರ್ಭಗಳಿಗೇನೂ ಕಡಿಮೆಯಿಲ್ಲ ಇದು ಕಾನೂನು ವ್ಯವಸ್ಥೆಯನ್ನು ಹದಗೆಡಿಸುವುದೇ ಅಲ್ಲದೆ ಸಾಧಿಸಿದ ಪ್ರಗತಿಯನ್ನು ನಾಶ ಮಾಡುತ್ತದೆ ಮತ್ತು ಸಾಧಿಸಬಹುದಾದ ಪ್ರಗತಿಗೆ ಪ್ರತಿಬಂಧಕವಾಗುತ್ತದೆ. ಇಂದು ಇಂಥಹ ನಿರುದ್ಯೋಗಿಗಳೇ ಅನೇಕ ಭಯೋತ್ಪಾದಕ ಸಂಘ ಸಂಸ್ಥೆಗಳನ್ನು ನಿರ್ಮಿಸಿಕೊಂಡು ಭಯೋತ್ಪಾದಕ ಕೃತ್ಯದಲ್ಲಿ ತೊಡಗಿರುವುದು ಉದಾಹರಣೆಗೆ: ಆಂದ್ರದ ನಕ್ಸಲೈಟ್ಸ್ ಗಳನ್ನು ಗುರುತಿಸಬಹುದು.

ಪರಿಹಾರೋಪಾಯಗಳು

ನಿರುದ್ಯೋಗದ ನಿವಾರಣೆಗೆ ಅಥವ ಕನಿಷ್ಟ ಅದನ್ನು ತಗ್ಗಿಸಲು ಕೆಲವು ಪರಿಹಾರ ಮಾರ್ಗಗಳನ್ನು ಸೂಚಿಸಬಹುದು.

೧. ಜನಸಂಖ್ಯಾ ನಿಯಂತ್ರಣದ ಹೊರತು ನಿರುದ್ಯೋಗಕ್ಕೆ ಪರಿಹಾರ ಸಾಧ್ಯವೇ ಇಲ್ಲ. ಆರ್ಹತೆಯ ಯಾವುದೇ ಸಮಸ್ಯೆಯ ನಿರ್ಮೂಲನಕ್ಕೆ ಮತ್ತು ಅಭಿವೃದ್ಧಿ ಕಾರ್ಯಗಳ ಪರಿಣಾಮಕರಿ ಅನುಷ್ಠಾನಕ್ಕೆ ಜನಸಂಖ್ಯಾ ನಿಯಂತ್ರಣ ತೀರಾ ಅವಶ್ಯಕ. ಜನಸಂಖ್ಯೆಯ ಬೆಳವಣಿಗೆಯು ಶೂನ್ಯದರವನ್ನು ತಲುಪಿದರೆ ನಿರುದ್ಯೋಗ ಸಮಸ್ಯೆಯೇ ಉದ್ಭವಿಸುವುದಿಲ್ಲ. ಅದು ಕಡಿಮೇ ದರದಲ್ಲಿ ಏರುತ್ತಿದ್ದರೆ ಕೆಲವು ವಲಯಗಳಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಿ ನಿರುದ್ಯೋಗ ಸಮಸ್ಯೆಯನ್ನು ಬಹುಮಟ್ಟಿಗೆ ಪರಿಹರಿಸಲು ಸಾಧ್ಯವಾಗುತ್ತದೆ.

೨. ಹೆಚ್ಚು ಉದ್ಯೋಗಗಳನ್ನು ಒದಗಿಸಬಲ್ಲಂತಹ ಹೊಸ ಕೈಗಾರಿಕೆಗಳನ್ನು ಸ್ಥಾಪಿಸುವುದು ಅವಶ್ಯಕ. ಬಂಡವಾಳ ಒಂದು ಆಡಚಣೆಯಾಗುವುದು ಸಹಜ, ಆದರೆ ಸ್ವದೇಶೀ ಮತ್ತು ವಿದೇಶೀ ಸಾಲದ ಮೂಲಕ ಅತ್ಯಲ್ಪ ಅವಧಿಯಲ್ಲಿ, ಉತ್ಪನ್ನ ನೀಡಬಲ್ಲ ಕೈಗಾರಿಕೆಗಳನ್ನು ಸ್ಥಾಪಿಸುವುದರಿಂದ ಈ ಸಮಸ್ಯೆ ಎಡೆಯಾಗದಂತೆ ನೋಡಿಕೊಳ್ಳಬಹುದು. ವಿಶೇಷವಾಗಿ ಆಮದು ಪ್ರತಿನಿದಾನಕ (Import Substitution) ಕೈಗಾರಿಕೆಗಳನ್ನು ಸ್ಥಾಪಿಸುವುದರಿಂದ ಆಮದುಗಳಿಗೆ ಖರ್ಚು ಮಾಡುವ ಹಣವೂ ಉಳಿಯುತ್ತದೆ. ಆರ್ಥಿಕತೆಯೂ ಪ್ರಗತಿಯಾಗುತ್ತದೆ, ಉದ್ಯೋಗಗಳೂ ಸೃಷ್ಟಿಯಾಗುತ್ತವೆ.

೩. ಶ್ರಮದ ಚಲನೆಯನ್ನು ಪ್ರೋತ್ಸಾಹಿಸುವುದು ತುಂಬಾ ಹಿತಕರ, ಕೃಷಿ ವಲಯದಲ್ಲಿರುವ ಹೆಚ್ಚುವರಿ ಶ್ರಮಿಕರು ಉತ್ತಮ ಉದ್ಯೋಗಗಳನ್ನು ಹುಡುಕಿಕೊಂಡು ಪಟ್ಟಣಗಳಿಗೆ ವಲಸೆ ಹೋಗುವಂತೆ ಅವರನ್ನು ಪ್ರೇರೇಪಿಸಬೇಕು, ಬಹುತೇಕ ಸಂದರ್ಭದಲ್ಲಿ ಇದು ಕಷ್ಟದ ಕೆಲಸವೇ ಸರಿ ಕೃಷಿಗೆ ಆಂಟಿಕೊಂಡು ಅದರೊಡನೆಯೇ ಈಜುವ ಅಥವಾ ಮುಳುಗುವ ದೃಷ್ಟಿಯಿಟ್ಟುಕೊಂಡಿದ್ದು ಅದರಿಂದ ಹೊರಬಂದು ಇತರ ಉದ್ಯೋಗಗಳನ್ನು ಅರಸಲು ವಿಶೇಷ ಪ್ರಯತ್ನವನ್ನು ಉಪಯೋಗಿಸಬೇಕಾಗುತ್ತದೆ. ಹೆಚ್ಚು ಗಳಿಕೆ ಮತ್ತು ಉತ್ತಮ ಜೇವನಮಟ್ಟ, ಮನರಂಜನೆಗೆ ಅವಕಾಶಗಳು ಮುಂತಾದುವುಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಜನರು ಪಟ್ಟಣಗಳಿಗೆ ವಲಸೆ ಹೋಗುತ್ತಾರೆ, ಆದರೂ ಕೃಷಿಯಿಂದ ಹೊರಬರಲು ಇಚ್ಚಿಸದಿರುವ ಜನರೇ ಬಹಳ, ಕೃಷಿ ಕ್ಷೇತ್ರದಲ್ಲಿ ಪ್ರಚಲಿತವಿರುವ ವೇತನದ ಮಟ್ಟಕ್ಕಿಂತ ಹೆಚ್ಚಿನ ವೇತನ ದೊರೆಯುವಂತಿದ್ದರೆ ಅವರು ವಲಸೆ ಹೋಗಲು ಇಚ್ಛಿಸಬಹುದು. ಕೈಗಾರಿಕೆಗಳಲ್ಲಿ ವೇತನವು ಕೃಷಿಯಲ್ಲಿರುವ ವೇತನಕ್ಕಿಂತ ಶೇ. ೩೦ರಷ್ಟು ಹೆಚ್ಚಿದ್ದರೆ ಕೃಷಿ ಕೆಲಸಗಾರರನ್ನು ಪಟ್ಟಣಗಳಿಗೆ ವಲಸೆ ಹೋಗುವಂತೆ ಪ್ರೇರೇಪಿಸಬಹುದೆಂದು ಆರ್ಥರ್ ಲೂಯಿಸ್ ಎಂಬ ಅರ್ಥಶಾಸ್ತ್ರಜ್ಞರು ಅಭಿಪ್ರಾಯ ಪಡುತ್ತಾರೆ.

ಜೊತೆಗೆ ಶ್ರಮಿಕರನ್ನು ಹೆಚ್ಚುವರಿ ಪ್ರದೇಶಗಳಿಂದ ಕೊರತೆ ಪ್ರದೇಶಗಳಿಗೆ ಚಲಿಸಿವಂತೆ ಪ್ರೋತ್ಸಾಹಿಸುವುದು ಸಹ ಅವಶ್ಯಕವಾಗಿದೆ.

೪. ಶ್ರಮ ಸಾಂದ್ರ ತಂತ್ರದ ಬಳಕೆಯು ನಿರುದ್ಯೋಗದ ನಿವಾರಣೆಯಲ್ಲಿ ಬಹಳ ಪರಿಣಾಮಕಾರಿಯಾಗುವುದರಲ್ಲಿ ಸಂದೇಹವಿಲ್ಲ. ಆರ್ಥಿಕತೆಯ ಎಲ್ಲ ವಲಯಗಳಲ್ಲಿಯೂ, ಎಲ್ಲ ವಿಧದ ಉತ್ಪಾದನೆಯಲ್ಲಿಯೂ ವಿವಿಧ ಹಂತಗಳಲ್ಲಿ ಸಾಧ್ಯವಿರುವಷ್ಟು ಮಟ್ಟಿಗೆ ಬಂಡವಾಳದ ಬದಲಿಗೆ ಶ್ರಮಕ್ಕೇ ಪ್ರಾಧಾನ್ಯತೆ ನೀಡಿದರೆ ಹೆಚ್ಚುವರಿ ಶ್ರಮಿಕರನ್ನು ಬಳಸಿಕೊಳ್ಳುವುದು ಸಾಧ್ಯವಾಗುತ್ತದೆ. ಬಂಡವಾಳದ ಕೊರತೆಯ ಸಮಸ್ಯೆಯಿಂದ ಹೊರಬರಲೂ ಇದರಿಂದ ಮಾರ್ಗ ದೊರೆಯುತ್ತದೆ.

೫. ಎಲ್ಲಕ್ಕೂ ಮಿಗಿಲಾಗಿ ನಮ್ಮ ಶಿಕ್ಷಣ ಪದ್ಧತಿಯಲ್ಲಿ ಸುಧಾರಣೆಯಾಗಬೇಕಾಗಿದೆ. ಉನ್ನತ ವ್ಯಾಸಂಗಕ್ಕೆ ಎಲ್ಲರಿಗೂ ಅವಕಾಶ ನೀಡದೆ ಪ್ರತಿಭೆಯನ್ನು ಗುರುತಿಸಿ ಉತ್ತಮ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ನೀಡಿ ಅವರನ್ನು ವಿಶೇಷ ಹುದ್ದೆಗಳಿಗೆ ಸಿದ್ದಪಡಿಸುವ ದಿಸೆಯಲ್ಲಿ ಶಿಕ್ಷಣ ಪದ್ಧತಿಯು ಬದಲಾಗಬೇಕು. ಕಡಿಮೆ ಶಿಕ್ಷಣ ಪಡೆದವರು ಯಾವ ಉದ್ಯೋಗವೂ ದೊರೆಯದಿದ್ದರೆ ಭೌತಿಕ ಶ್ರಮಿಕರಾಗುವಂತೆ ಅಥವಾ ಸ್ವಯಂ ಉದ್ಯೋಗಿ ಯೋಜನೆಗಳನ್ನು ಪ್ರಾರಂಭಿಸುವಂತೆ ಅವರಿಗೆ ಪ್ರೋತ್ಸಾಹ ನೀಡಬೇಕು.

೬. ಉತ್ತಮ ಹಾಗೂ ಪ್ರಗತಿಪರ ಜನಶಕ್ತಿ ಯೋಜನೆಯು ಅವಶ್ಯಕತೆ ತುಂಬಾ ಜರೂರಾಗಿದೆ. ಆರ್ಥಿಕತೆಯಲ್ಲಿ ಲಭ್ಯವಿರುವ ಮತ್ತು ಭವಿಷ್ಯದಲ್ಲಿ ಸೃಷ್ಟಿಯಾಗಬಲ್ಲ ಉದ್ಯೋಗಗಳನ್ನು ಅಂದಾಜು ಮಾಡಿ ಆಯಾ ಉದ್ಯೋಗಗಳು ತೋರುವಂತಹ ಶಿಕ್ಷಣ ಮತ್ತು ತರಬೇತಿಯನ್ನು ನೀಡುವುದರ ಮೂಲಕ ಬಂಡವಾಳ, ಕಾಲ ಮತ್ತು ಶ್ರಮ ಪೋಲಾಗದ ರೀತಿಯಲ್ಲಿ ವಿದ್ಯಾವಂತರಿಗೆ ನಿರಾಶೆಯುಂಟಾಗುವ ವಿಧದಲ್ಲಿ ಉದ್ಯೋಗಾವಕಾಶಗಳನ್ನು ಒದಗಿಸುವುದು ಸಾಧ್ಯವಾಗುತ್ತದೆ. ಭಾರತದ ಸನ್ನಿವೇಶಗಳಿಗೆ ಸರಿಹೊಂದುವಂತಹ ಒಂದು ದೀರ್ಘಕಾಲೀನ ಜನಶಕ್ತಿ ಯೋಜನೆಯನ್ನು ರೂಪಿಸುವಿಕೆಯು ಅರ್ಥಶಾಸ್ತ್ರಜ್ಞರು, ತಂತ್ರಜ್ಞರು ಮತ್ತು ಯೋಜನಾನುಭವಿಗಳ ಕಾರ್ಯವಾಗಿದೆ.

೭. ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಣ್ಣ ಪ್ರಮಾಣದ ಕೈಗಾರಿಕೆಗಳು ಸ್ಥಾಪನೆಗೊಂಡರೆ ನಿರುದ್ಯೋಗ, ಋತುಮಾನದ ನಿರುದ್ಯೋಗ ಮತ್ತು ಮಾರುವೇಷದ ನಿರುದ್ಯೋಗಗಳಿಗೆ ಸೂಕ್ತ ಪರಿಹಾರ ಕಂಡುಹಿಡಿಯಲು ದಾರಿಯಾಗುತ್ತದೆ. ಸಣ್ಣ ಪ್ರಮಾಣದ ಕೈಗಾರಿಕೆಗಳು ಹೆಚ್ಚು ಬಂಡವಾಳವನ್ನು ಅಪೇಕ್ಷಿಸದಿರುವುದರಿಂದ ಅವುಗಳ ಸ್ಥಾಪನೆ ಕಷ್ಟವಾಗುವುದಿಲ್ಲ. ಅವು ಹೆಚ್ಚು ಉದ್ಯೋಗ ಸೃಷ್ಟಿಯ ಸಾಮರ್ಥ್ಯ ಹೊಂದಿವೆ. ಹಳ್ಳಿಗಳಲ್ಲಿಯೇ ದೊರೆಯುವ ಕಚ್ಚಾ ಸರಕುಗಳನ್ನು ಬಳಸಿಕೊಂದು ಉತ್ಪಾದನೆ ಮಾಡಲು ಶಕ್ತವಾಗಿರುವುದರಿಂದ ಈ ಕೈಗಾರಿಕೆಗಳು ಕಡಿಮೆ ವೆಚ್ಚದಲ್ಲಿ ಹೆಚ್ಚು ಉತ್ಪನ್ನ ನೀಡಬಲ್ಲವು.

೮. ವಿವಿಧ ರೀತಿಯ ಲೋಕೋಪಯೋಗಿ ಅಭಿವೃದ್ಧಿ ಕಾರ್ಯಗಳು ಉತ್ತಮ ವಿಧದಲ್ಲಿ ಉದ್ಯೋಗಗಳನ್ನು ಒದಗಿಸುತ್ತವೆ. ರಸ್ತೆ ನಿರ್ಮಾಣ, ಶಾಲಾ ಕಟ್ಟಡಗಳು ಮತ್ತು ಮನೆಗಳು ನಿರ್ಮಾಣ, ವಿದ್ಯುತೀಕರಣ, ನೀರಾವರಿ ಯೋಜನೆಗಳು, ಬಾವಿ ತೋಡುವಿಕೆ ಮುಂತಾದ ಕಾರ್ಯಗಳು ಹೆಚ್ಚುವರಿ ಶ್ರಮಿಕರಿಗೆ ಉದ್ಯೋಗಗಳನ್ನು ನೀಡಿ ಅವರಿಗೆ ಜೀವನದ ಮಾರ್ಗವನ್ನು ಕಲ್ಪಿಸುವಂತೆ ಅಭಿವೃದ್ಧಿ ಸಾಧನೆಗೆ ನೆರವಾಗುತ್ತವೆ. ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಕಾರ್ಯಕ್ರಮಗಳ ಅನುಷ್ಠಾನವು ಎಲ್ಲ ವಿಧದಲ್ಲಿಯೂ ಒಳ್ಳೆಯದು.

೯. ನಿರುದ್ಯೋಗಿ ಯುವಕರು ಅನೇಕ ವಿಧದ ಸಣ್ಣ ಕೈಗಾರಿಕೆಗಳು, ಹೈನುಗಾರಿಕೆ ಕೋಳಿಸಾಕಣೆ, ಸಾವಯವ ಮುಂತಾದ ಸ್ವಯಂ ಉದ್ಯೋಗ ಯೋಜನೆಗಳನ್ನು ಪ್ರಾರಂಭಿಸಲು ಮುಂದೆ ಬರಬೇಕು. ಸರ್ಕಾರವು ಹಣಕಾಸಿನ ಮತ್ತು ಇತರ ಬಗೆಯ ನೆರವು ನೀಡುವ ಮೂಲಕ ಅವರನ್ನು ಪ್ರೋತ್ಸಾಹಿಸಬೇಕು, ಸ್ವಯಂ ಉದ್ಯೋಗ ಯೋಜನೆಗಳನ್ನು ಪ್ರಾರಂಭಿಸುವುದರಿಂದ ವ್ಯರ್ಥವಾಗುತ್ತಿದ್ದ ಶ್ರಮ, ಮತ್ತು ಬುದ್ಧಿವಂತಿಕೆ ಉತ್ಪಾದಕವಾಗಿ ಉಪಯೋಗಿಸಲ್ಪಡುತ್ತವೆ. ಹೊಸ ಯೋಜನೆಗಳ ಮೂಲಕ ಆರ್ಥಿಕ ಪ್ರಗತಿಗೆ ಇಂಬು ದೊರೆಯುತ್ತದೆ. ಆಷ್ಟೇ ಅಲ್ಲದೆ ಇಂತಹ ಯೋಜನೆಗಳಲ್ಲಿ ಅನೇಕ ಜನ ನಿರುದ್ಯೋಗಿಗಳಿಗೆ ಉದ್ಯೋಗದ ಅವಕಾಶವಿರುತ್ತದೆ. ನಿರುದ್ಯೋಗಿ ಯುವಕರು ಪ್ರತಿಷ್ಠೆಯನ್ನೇ ದೊಡ್ಡ ವಿಷಯವಾಗಿ ಮಾಡಿಕೊಳ್ಳದೆ ಸ್ವಯಂ ಇಚ್ಛತರಾಗಿ ಸರ್ಕಾರದ, ಬ್ಯಾಂಕುಗಳ ಮತ್ತು ತಜ್ಞರ ಸಹಾಯ ಹಾಗೂ ಬೆಂಬಲ ಪಡೆದು ತ್ ಇಂತಹ ಯೋಜನೆಗಳನ್ನು ಪ್ರಾರಂಭಿಸುವುದು ಅತ್ಯುತ್ತಮವಾದುದು.

೧೦. ಕೃಷಿಯ ಸಾಂಸ್ಥಿಕ ರಚನೆಯ ಬದಲಾವಣೆಯು ನಿರುದ್ಯೋಗ ಸಮಸ್ಯೆಯ ನಿವಾರಣೆಯ ದಿಸೆಯಲ್ಲಿ ಸಾರಭೂತವಾದ ಕಾಣಿಕೆ ನೀಡುವುದರಲ್ಲಿ ಸಂದೇಹವಿಲ್ಲ. ಸಣ್ಣ ರೈತರು ಮತ್ತು ಕೃಷಿ ಕಾರ್ಮಿಕರ ಪರವಾಗಿ ಭೂಮಿ ಮರುಹಂಚಿಕೆ, ಹಿಡುವಳೆಗಳ ಘನೀಕರಣ, ಬಹುಬೆಲೆ ಪದ್ದತಿಯು ಅನುಷ್ಟಾನ ಮೊದಲಾದ ಕಾರ್ಯಕ್ರಮಗಳು ಹೆಚ್ಚಿನ ಸಂಖ್ಯೆಯ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಮೂಲಕ ನಿರುದ್ಯೋಗ ನಿರ್ಮೂಲನಕ್ಕೆ ಸಹಾಯಕವಾಗುತ್ತದೆ.[1] *ಉದ್ಯೋಗ ದರ್ಶಿನಿ: ವಾರ್ಷಿಕ ಸಂಚಿಕೆ, ಬೆಂಗಳೂರು