ಈ ಭೂಮಿಯಲ್ಲಿ ಎಲ್ಲಾ ಜೀವರಾಶಿಗಳ ಪೈಕಿ ಮಾನವರು ಜೀವಿಯು ಅತ್ಯಂತ ಶ್ರೇಷ್ಠವಾದ ಮತ್ತು ಪವಿತ್ರವಾದ ಗುಂಪಿಗೆ ಸೇರುವರೆಂದು ವಿಜ್ಞಾನವು ಹೇಳುತ್ತದೆ. ಏಕೆಂದರೆ ಈ ಮಾನವ ಜೀವಿಗೆ ಉಳಿದ ಎಲ್ಲಾ ವರ್ಗಗಳನ್ನು ಅಂದರೆ ಪ್ರಾಣಿವರ್ಗ ಮತ್ತು ಸಸ್ಯವರ್ಗಗಳನ್ನು ತನ್ನ ಅಧೀನದಲ್ಲಿಟ್ಟುಕೊಂಡು ಜೀವಿಸುವ ಶಕ್ತಿಯುಂಟು. ಮಾನವರಲ್ಲಿ ಕಂಡು ಬರುವ ಸಾಮಾಜಿಕ ಪ್ರಕ್ರಿಯೆಗಳೇ ಇವನನ್ನು ಬೇರ್ಪಡಿಸಿರುವುದು. ಮಾನವರಲ್ಲಿ ವಿಶೇಷವಾದ ವಿವೇಚನಾಶಕ್ತಿ, ಆಲೋಚನಾಶಕ್ತಿ, ಊಹಾಶಕ್ತಿಗಳೆಲ್ಲಾ ಇರುವುದರಿಂದ ಅವರು ಸಮಾಜದಲ್ಲಿ ಅಗತ್ಯವಾದ ಬದಲಾವಣೆಗಳನ್ನು ತರಬಲ್ಲರು. ಸಮಾಜವೂ ಸಹ ವ್ಯಕ್ತಿಗೆ ಉತ್ತಮ ಸನ್ನಿವೇಶ, ಸೌಲಭ್ಯಗಳನ್ನು ಒದಗಿಸುವುದು. ಇವುಗಳಿಂದಲೇ ಮಾನವರು ಪ್ರತಿ ಸಂದರ್ಭದಲ್ಲಿ ವಿವಿಧ ಅನುಭವಗಳನ್ನು ಪಡೆಯುವರು. ಶಿಕ್ಷಣವು ಈ ಸಾಮಾಜಿಕ ಜೀವನದ ಬೆಳವಣಿಗೆಗೆ ಕಾರಣವಾಗಿರುವುದು. ಅಂದರೆ ಸಮಾಜವು ಬೆಳೆದು ಬೆಳವಣಿಗೆ ಹೊಂದಿದಂತೆಲ್ಲಾ ಮಾನವರ ಅನುಭವಗಳು ಸಹ ಹೆಚ್ಚುತ್ತಾ ಬರುವುದು. ಜೀವನದ ಪರಂಪರೆಯನ್ನು ಯಶಸ್ವಿಯಾಗಿ ಮುಂದೆ ಸಾಗಿಸುವುದೇ ಶಿಕ್ಷಣದ ಕಾರ್ಯವಾಗಿರುವುದು. ಜೀವಮಾನದಲ್ಲಿ ಗಳಿಸುವ ಅನುಭವವು ಇದಕ್ಕೆಲ್ಲಾ ಸಹಾಯ ಮಾಡುವುದು. ಇದು ಪ್ರತಿಯೊಬ್ಬರಿಗೂ ಅಗತ್ಯವಾದ ತಿಳುವಳಿಕೆ. ಈ ಅನುಭವದಿಂದ ಮಾನವರು ಕ್ರಮೇಣ ತನ್ನ ಆಹಾರ, ವಸತಿ, ಉಡುಪು, ಆರೋಗ್ಯ, ಮನರಂಜನೆಗಳನ್ನು ಅರಿತುಕೊಂಡು ಉತ್ತಮಗೊಳಿಸುತ್ತ ಬಂದಿರುವರು. ಈ ಹಲವಾರು ಆಸೆ ಆಕಾಂಕ್ಷೆಗಳನ್ನು ಪಡೆದಿರುವುದರಿಂದಲೇ ಇತರ ಜೀವರಾಶಿಗಳಿಂದ ಮಾನವರು ಭಿನ್ನವಾಗಿರುವರು. ಶಿಕ್ಷಣವೇ ಇದಕ್ಕೆಲ್ಲಾ ಕಾರಣ. ಈ ಅನುಭವಗಳನ್ನು ಪಡೆದು ಉತ್ತಮ ರೀತಿಯಲ್ಲಿ ಉಪಯೋಗಿಸಿಕೊಳ್ಳುವುದಕ್ಕೆ ಸಹಾಯ ಮಾಡುವುದೆ ಶಿಕ್ಷಣ. ಇದರಲ್ಲಿ ನಮ್ಮ ಶಾಲೆಗಳ ಪಾತ್ರ ವಿಶೇಷವಾದದ್ದು. ನಿಜವಾದ ಜ್ಞಾನವು ಮಾನವರ ಸ್ಥಿತಿಯನ್ನು ಉತ್ತಮಪಡಿಸುವುದು. ಇದರಿಂದ ಗ್ರಾಮಗಳ ಅಭಿವೃದ್ಧಿ ತನಗೆ ತಾನೆ ಹೊಂದುತ್ತವೆ.

ಶಿಕ್ಷಣ ಕ್ಷೇತ್ರದಲ್ಲಿ ಶಿಶು ಶಿಕ್ಷಣ, ಪ್ರಾಥಮಿಕ ಶಿಕ್ಷಣ, ಫ್ರೌಢ ಶಿಕ್ಷಣ, ವೃತ್ತಿ ಶಿಕ್ಷಣ ಹಾಗೂ ಸಾಮಾಜಿಕ ಶಿಕ್ಷಣಗಳೆಂಬ ಅನೇಕ ಬಗೆಯ ಭೇದಗಳಿವೆ ಇಂದಿನ ಅಧ್ಯಯನದಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಪ್ರಾಥಮಿಕ ಶಿಕ್ಷಣವನ್ನು ಮಾತ್ರ ಚರ್ಚಿಸಲಾಗಿದೆ.

ಗ್ರಾಮೀಣ ಪ್ರದೇಶದಲ್ಲಿ ಇಂದು ಪ್ರಾಮುಖ್ಯವಾಗಿ ದೊರಕುತ್ತಿರುವುದು ಪ್ರಾಥಮಿಕ ಶಿಕ್ಷಣ ಮಾತ್ರ. ದೇಶದ ರಾಜಕೀಯ ಮತ್ತು ಸಾಮಾಜಿಕ ಪ್ರಗತಿಗೆ ವಿಸ್ತಾರವಾದ ಪ್ರಾಥಮಿಕ ಶಿಕ್ಷಣವು ಅತ್ಯವಶ್ಯಕ ಎಂಬುದಾಗಿ ಶಿಕ್ಷಣ ನಿಪುಣರು ಅಭಿಪ್ರಾಯಪಟ್ಟಿದ್ದಾರೆ. ಇಂತಹ ಪ್ರಾಮುಖ್ಯತೆ ಹೊಂದಿರುವ ಪ್ರಾಥಮಿಕ ಶಿಕ್ಷಣವನ್ನು ವಿಚಾರ ಪೂರ್ವಕವಾದ ರೀತಿಯಲ್ಲಿ ರಚಿಸಬೇಕು. ಅದರ ಸಮರ್ಪಕವಾದ ತಳಹದಿಯ ಮೇಲೆ ಮುಂದಿನ ಶಿಕ್ಷಣದ ಗುರಿಯನ್ನು ನಿರ್ಧರಿಸಬೇಕು ಎಂದು ಶಿಕ್ಷಣ ಶಾಸ್ತ್ರಜ್ಞರೇ ಹೇಳಿದ್ದಾರೆ.

ಶಿಕ್ಷಣವೆಂದರೆ ಗಿಳಿಯಂತೆ ಕಂಠಪಾಠ ಮಾಡುವುದಿಲ್ಲ. ಆದರಲ್ಲಿ ನಾನಾ ವಿಧದ ಪಂಗಡಗಳಿವೆ. ಜ್ಞಾನಾರ್ಜನೆ, ವಿಷಯ ವಿಮರ್ಶೆ, ಮನೋರಂಜನೆ, ಕ್ರೀಡೆ, ಕಲೆ ಮುಂತಾದವುಗಳು ಮನುಷ್ಯರಲ್ಲಿ ಒಂದು ಬಗೆಯ ಸಂಸ್ಕಾರವನ್ನುಂಟು ಮಾಡುವ ಅನುಭವವು ಶಿಕ್ಷಣದಲ್ಲಿ ಇರಬೇಕು. ಆದರೆ ಇಂದಿನ ಗ್ರಾಮೀಣ ಮಕ್ಕಳು ಅಧುನಿಕತೆಯಡೆ ವಾಲಲೂ ಸಾಧ್ಯವಾಗದೇ. ಇತ್ತ ಗ್ರಾಮೀಣ ಪ್ರದೇಶದ ಶಿಕ್ಷಣಕ್ಕೂ ಹೊಂದಿಕೊಳ್ಳಲಾಗದೇ ಸಂಕಷ್ಟ ಸ್ಥಿತಿಯಲ್ಲಿರುವುದು ಕಂಡುಬರುತ್ತದೆ. ತನ್ನದೇಯಾದ ಹೊಸಹೊಸ ಅನುಭವಗಳಿಗಾಗಿ ಹಾತೊರೆಯುತ್ತಿರುವ ಇಂದಿನ ಮಕ್ಕಳಿಗೆ ಶಿಕ್ಷಣ ಕ್ರಮವು ಯಾವ ಬಗೆಯ ಸಹಾಯವನ್ನು ಮಾಡುತ್ತಿಲ್ಲವೆನ್ನಬಹುದು. ಏಕೆಂದರೆ ಇಂದು ಭಾರತವು ಒಂದು ರೀತಿಯಲ್ಲಿ ಸಂಧಿಕಾಲದಲ್ಲಿದೆ. ನಮ್ಮ ಸಾಮಾಜಿಕ ಸಂಪ್ರದಾಯಗಳು, ಈ ಪರಿವರ್ತನೆಯ ಹೊಡೆತಕ್ಕೆ ಸಿಲುಕಿ ತನ್ನ ಪ್ರಮುಖ ಉದ್ದೇಶವನ್ನೆ ಬದಲಾಯಿಸುತ್ತಿವೆ. ಗ್ರಾಮೀಣ ಪ್ರದೇಶದ ಸಾಮಾಜಿಕ ಸಂಘ ಸಂಸ್ಥೆಗಳು ಆರ್ಥಿಕ ತೊಂದರೆಯಿಂದ ಬೆಂದು ಬೂದಿಯಾಗುತ್ತಿವೆ. ಮತ, ಧರ್ಮ, ಆಚಾರ, ವಿಚಾರ, ನಡೆ, ನುಡಿ, ಉಡುಗೆ ತೊಡುಗೆ, ಶ್ರದ್ದಾಸಕ್ತಿಗಳೂ ಜಗತೀಕರಣ ಹಾಗೂ ವಿಜ್ಞಾನದ ಯುಗದ ಭೀಕರ ಅಲೆಗೆ ಸಿಲುಕಿ ಕುಗ್ಗಿ ಹೋಗುತ್ತಿವೆ. ಜನರ ಸಾಮಾಜಿಕ ಜೀವನದ ಮುಖ್ಯ ಅಡಿಗಲ್ಲೆಂದು ಕರಿಸಿಕೊಂಡಿರುವ ನೈತಿಕ ಬಲವು ಇಲ್ಲದಂತಾಗುತ್ತಿದೆ. ಇಂತಹ ತೊಂದರೆಯಲ್ಲಿ ದೇಶವಿರುವಾಗ ಮನುಷ್ಯನಿಗೆ ಬೇಕಾದದ್ದು ಶಾಂತಿ ಮತ್ತು ವಿಚಾರಪರತೆ, ಇವುಗಳನ್ನು ಪಡೆಯಲು ಬೇಕಾಗುವ ಸಾಧನವೇ ಉತ್ತಮ ಶಿಕ್ಷಣ.

ಶಿಕ್ಷಣವು ಜೀವನದ ಒಂದು ಮುಖ್ಯ ಹವ್ಯಾಸವಾಗಿದೆ. ಇದರಲ್ಲಿ ಪ್ರಚಲಿತ ಇತಿಹಾಸ ಹಾಗೂ ನೈತಿಕ ಲಕ್ಷಣಗಳು ಇದ್ದೇ ಇರಬೇಕು. ಈಗ ನಾವು ವಿದ್ಯಾರ್ಥಿಗಳಿಗೆ ಬೋಧಿಸುತ್ತಿರುವ ಶಿಕ್ಷಣ ಪದ್ಧತಿಯಲ್ಲಿ ಈ ಲಕ್ಷಣಗಳು ಕಂಡುಬರುತ್ತಿಲ್ಲ. ಸಮಾಜದಲ್ಲಿನ ಉಪದೇಶ ಪರಂಪರೆಯೂ (ಪುರಾಣ ಮಿಶ್ರಿತವಾದ ವಿಷಯಕ್ಕೆ ಹೆಚ್ಚಿನ ಅಧ್ಯತೆ ನೀಡಿರುವುದು) ಮತ್ತು ಮೂಢನಂಬಿಕೆಗೆ ಹೆಚ್ಚಿನ ಆದ್ಯತೆ ನೀಡಿರುವುದು ಕಂಡುಬರುತ್ತದೆ. ದೇಶವು ಬಡತನದಲ್ಲಿ ನರಳುತ್ತಿರುವುದರಿಂದ ಇದಕ್ಕೆ ಪರಿಹಾರಕರವಾದ ಶಿಕ್ಷಣಕ್ಕೆ ಸರಿಯಾದ ಅರ್ಥಪೂರ್ಣವಾದ ಸಂಪನ್ಮೂಲ ಒದಗಿಸುವಲ್ಲಿ ಅವಕಾಶವಿಲ್ಲದಾಗಿದೆ. ಇವುಗಳಿಗೆ ನಮ್ಮ ಸಾಮಾಜಿಕ, ಧಾರ್ಮಿಕ ಹಾಗೂ ರಾಜಕೀಯ ಅಂಶಗಳೇ ಕಾರಣವಾಗಿವೆ. ಒಟ್ಟಿನಲ್ಲಿ ಇಂದಿನ ಶಿಕ್ಷಣ ಪದ್ದತಿಯು ವಿದ್ಯಾರ್ಥಿಗಳನ್ನಾಗಲಿ, ರಾಷ್ಟ್ರವನ್ನಾಗಲಿ ಅಥವಾ ತಂದೆತಾಯಿಗಳನ್ನಾಗಲಿ ಆಕರ್ಷಿಸುತ್ತಿಲ್ಲವೆಂದು ಹೇಳಬಹುದು.

ನಮ್ಮ ಗ್ರಾಮಗಳು ಇಂದು ಜಾಗತೀಕ ಗ್ರಾಮಗಳಾಗಿ ಸಂಧಿಸುತ್ತಿರುವ ಸಂದರ್ಭದಲ್ಲಿ ಹಾಗೂ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪರಿವರ್ತನೆಗೆ, ದೇಶಗಳು ಸಿಲುಕಿ ಬದಲಾವಣೆಗಳನ್ನು ಹೊಂದುತ್ತಿರುವ ಈ ಕಾಲದಲ್ಲಿ ನಮ್ಮ ಶಿಕ್ಷಣ ಪದ್ಧತಿ ಮಾತ್ರ ಯಾವ ಬದಲಾವಣೆಯನ್ನೂ ಹೊಂದದೆ. ಸ್ವತಂತ್ರ್ಯಪೂರ್ವದಲ್ಲಿ ಹಾಗೂ ಸ್ವತಂತ್ರ್ಯ ನಂತರದ ಪ್ರಾಥಮಿಕ ಹಂತದಲ್ಲಿ ಇದ್ದಂತಹ ಪಠ್ಯವನ್ನೇ ಇಂದಿಗೂ ನಮ್ಮ ವಿದ್ಯಾರ್ಥಿಗಳಿಗೆ ಬೋಧಿಸಿ ಅವರಿಗೆ ಆಧುನಿಕ ಶಿಕ್ಷಣದಂದ ವಂಚಿತರನ್ನಾಗಿ ಮಾಡಲಾಗುತ್ತಿದೆ. ಇದು ಗ್ರಾಮೀಣ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳನ್ನು ಹಾಗೂ ಪ್ರಾಥಮಿಕ ಶಾಲೆಯ ಪಠ್ಯಪುಸ್ತಕವನ್ನು ನೋಡಿ ಬರೆದದ್ದು, ನಗರಗಳಲ್ಲಿ ಇಂದಿನ ಶಿಕ್ಷಣ ಭಿನ್ನ ಸ್ವರೂಪದ್ದಾಗಿರಬಹುದು. ಇದು ಕೇವಲ ೧೮ರಷ್ಟು ಮಾತ್ರ. ಆದರೆ ೮೨ರಷ್ಟು ಶಿಕ್ಷಣ ಭಿನ್ನ ಸ್ವರೂಪದ್ದಾಗಿರಬಹುದು. ಇದು ಕೇವಲ ೧೮ರಷ್ಟು ಮಾತ್ರ. ಆದರೆ ೮೨ರಷ್ಟು ಶಿಕ್ಷಣ ಮೇಲಿನದೇ ಆಗಿದೆ.

ಇಂದಿನ ಶಿಕ್ಷಣ ಪದ್ಧತಿಯು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಲ್ಲಿ ಕ್ರಿಯಾಶಕ್ತಿಯನ್ನಾಗಲಿ, ಉತ್ಸಾಹವನ್ನಾಗಲಿ, ರಾಷ್ಟ್ರೀಯ ಐಕ್ಯತೆಯನ್ನಾಗಲಿ ಹೆಚ್ಚಿಸುತ್ತಿಲ್ಲ ಸಮಾಜದಲ್ಲಿರುವ ಅನಿಷ್ಟ ಪದ್ದತಿಗಳನ್ನು ನಿರ್ಮಾಲನೆ ಮಾಡುವಂತಹ ಶಿಕ್ಷಣವನ್ನು ಕೊಡುತ್ತಿಲ್ಲ. ಏಕೆಂದರೆ ಕೇವಲ ಓದು ಬರಹದಿಂದಲೇ ಮಾನಾ ಮಾನವೀಯತೆಯಿಂದ ಬದುಕಲು ಸಾಧ್ಯವಿಲ್ಲವೆಂಬುದು ನಮಗೆಲ್ಲ ತಿಳಿದಿರುವ ವಿಷಯವೆ.

ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಸಾಲಿನಲ್ಲಿ ಭಾರತ ಪ್ರಮುಖ ಸ್ಥಾನದಲ್ಲಿದೆಯೆಂದು ನಮ್ಮ ಆರ್ಥಿಕ ತಜ್ಞರು ಅಭಿಪ್ರಾಯ ಪಡುತ್ತಾರೆ. ಆದರೆ ವಾಸ್ತವ ಸ್ಥಿತಿಯು ಇದರಿಂದ ಭಿನ್ನವಾಗಿರುವುದನ್ನು ಗುರ್ತಿಸಬಹುದು. ಏಕೆಂದರೆ ನಮ್ಮ ದೇಶದಲ್ಲಿರುವಷ್ಟು ಅನಕ್ಷರಸ್ಥರೂ, ಅಜ್ಞಾನಿಗಳೂ, ದೈವಭಕ್ತರೂ, ಸಂಪ್ರದಾಯಸ್ಥರೂ ಬೇರಾವ ರಾಷ್ಟ್ರದಲ್ಲಿಯೂ ಕಂಡು ಬರುವುದಿಲ್ಲ. ಅದಲ್ಲದೆ ಆಧುನಿಕ ಶಿಕ್ಷಣ ಕ್ರಮವನ್ನು ಉತ್ತಮ ಪಡಿಸುವುದಕ್ಕೆ ಇಲ್ಲಿರುವ ಅಡಚಣೆಗಳು ಮತ್ಯಾವ ದೇಶದಲ್ಲಿಯೂ ಕಂಡುಬರುವುದಿಲ್ಲ. ಏಕೆಂದರೆ ದಲಿತರ ನೋವು, ಅವರು ಶತಶತಮಾನಗಳಿಂದ ಸವರ್ಣಿಯರಿಂದ ಅನುಭವಿಸಿದ ಕತ್ತಲೆಯ ಜೀವನದ ಸ್ಥಿತಿಗತಿಯನ್ನು ನೇರವಾಗಿ ಚರ್ಚಿಸ ಬಯಸಿದರೆ ಸವರ್ಣಿಯರು ಅದಕ್ಕೆ ಅಡ್ಡಿಯಾಗುತ್ತಾರೆ. ಇದಕ್ಕೆ ಸಾಮಾಜಿಕ ಹಾಗೂ ರಾಜಕೀಯ ಕಾರಣಗಳನ್ನು ಸೇರಿಸಿ ಅಶಾಂತಿಯನ್ನು ಸೃಷ್ಟಿಸಿ ಅರಾಜಕತೆಗೆ ದಾರಿ ಮಾಡಿಕೊಡುತ್ತಾರೆ. ಇದಕ್ಕೆ ನಮ್ಮ ರಾಜ್ಯದಲ್ಲಿ ಎಸ್. ಎಂ. ಕೃಷ್ಣ ಸರ್ಕಾರವು ಪ್ರಾಥಮಿಕ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿ ಊಟದ ವ್ಯವಸ್ಥೆಯನ್ನು ಜಾರಿಗೆ ತಂದಿರುವುದರಿಂದ ಉಂಟಾದ ಅಸ್ಪೃಶ್ಯತೆಯನ್ನು ಗುರ್ತಿಸಬಹುದು. ಇದಕ್ಕೆಲ್ಲ ಪ್ರಮುಖ ಕಾರಣ ಅಜ್ಞಾನ ಹಾಗೂ ನಾವು ಇಂದಿಗೂ ನೀಡುತ್ತಿರುವ ಶಿಕ್ಷಣದ ಕ್ರಮ, ಇನ್ನೂ ಗ್ರಾಮೀಣ ಪ್ರದೇಶದ ಬಡರೈತರು ತಮ್ಮ ಮಕ್ಕಳ ವಿದ್ಯಾಭ್ಯಸದ ವಿಷಯದಲ್ಲಿ ಉದಾಸೀನರಾಗಿದ್ದಾರೆ, ಅನೇಕ ಸಂದರ್ಭದಲ್ಲಿ ಮಕ್ಕಳನ್ನು ಶಾಲೆಯಿಂದ ಬಿಡಿಸಿ, ಕೃಷಿ, ಗೃಹಕೈಗಾರಿಕೆ ಹಾಗೂ ವಾಣಿಜ್ಯ ವ್ಯವಹಾರಗಳಿಗೆ ಉಪಯೋಗಿಸಿಕೊಳ್ಳುತ್ತಿದ್ದಾರೆ. ಬಾಲಕಾರ್ಮಿಕರ ಸಂಖ್ಯೆ ದಿನೆದಿನೆ ಹೆಚ್ಚುತ್ತಿದೆ. ಪಾಠಶಾಲೆಗಳು ಸವರ್ಪಕವಾಗಿಲ್ಲ. ನೂರಕ್ಕೆ ಐವತ್ತೆಂಟರಷ್ಟು ಪ್ರಾಥಮಿಕ ಗ್ರಾಮೀಣ ಪಾಠಶಾಲೆಗಳು ಸಮರ್ಪಕವಾಗಿಲ್ಲ ನೂರಕ್ಕೆ ಐವತ್ತೆಂಟರಷ್ಟು ಪ್ರಾಥಮಿಕ ಗ್ರಾಮೀಣ ಶಾಲೆಗಳು ಇನ್ನೂ ಏಕೋಪಧ್ಯಾಯ ಶಾಲೆಯ ಮಾದರಿಯಲ್ಲಿಯೇ ಇವೆ. ಇನ್ನೂ ಕೆಲವು ಶಾಲೆಗಳಲ್ಲಿ ಅಲ್ಪವೇತನದ, ತಾತ್ಕಲಿಕ ಕೆಲಸ, ಅಶಿಕ್ಷಿತರಾದ ಉಪಾಧ್ಯಾಯರು ಕಂಡುಬರುತ್ತಾರೆ. ಇವರಿಂದ ಪ್ರಾಥಮಿಕ ಶಿಕ್ಷಣ ಪಡೆದ ಸ್ವಲ್ಪ ಕಾಲದ ನಂತರ ಶಾಲೆಯನ್ನು ತೊರೆದು ಅನಕ್ಷರಸ್ಥರಾಗುವ ದಿಕ್ಕಿನಲ್ಲಿ ನಮ್ಮ ಗ್ರಾಮೀಣ ವಿದ್ಯಾರ್ಥಿಗಳು ಮುಂದಾಗುತ್ತಿದ್ದಾರೆ. ಈಗಿನ ಶಿಕ್ಷಣ ಕ್ರಮವು ಅನರ್ಹವಾದುದೂ ಮತ್ತು ಹಾನಿಕರವಾದುದೂ ಆಗಿದೆ. ವಿದ್ಯಾಪ್ರಚಾರದ ಹೆಸರಿನಲ್ಲಿ ಅಪಾರ ಹಣ ನಷ್ಟವಾಗುತ್ತಿದೆ ಎಂಬುವುದು ಶಿಕ್ಷಣ ತಜ್ಞಾ ಅಭಿಪ್ರಾಯವಾಗಿದೆ. ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಉತ್ತಮಪಡಿಸಲು ಸರ್ಕಾರಗಳು ಅನೇಕ ಸಮಿತಿಗಳನ್ನು ನೇಮಕ ಮಾಡಿದರು, ಸಮಿತಿಗಳು ಸೂಕ್ತವಾದ ಸಲಹೆಗಳನ್ನೇನೋ ನೀಡಿವೆ. ಆದರೆ ಇವುಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಅನೇಕ ತೊಡರುಗಳು ಬಂದೊದಗುತ್ತಿವೆ. ಇಷ್ಟಾದರೂ ಇಡೀ ಭರತಖಂಡಕ್ಕೆ ಅನ್ವಯಿಸತಕ್ಕ ಒಂದು ರಾಷ್ಟೀಯ ಶಿಕ್ಷಣಕ್ರಮವು ಇನ್ನೂ ಏರ್ಪಡದಿರುವುದು ಸೋಜಿಗದ ವಿಷಯವೇ.

ಇಂದು ನಮ್ಮ ಗ್ರಾಮೀಣ ಪ್ರದೇಶದ ಪ್ರಾಥಮಿಕ ಶಿಕ್ಷಣವು ರಾಷ್ಟ್ರೀಯ ಮನೋಭಾವವುಳ್ಳಾದ್ದಾಗಿಲ್ಲ, ಮಕ್ಕಳ್ಳನ್ನು ಶಿಕ್ಷಣದ ಕಡೇ ಆಕರ್ಷಿಸುವ ಪುಸ್ತಕಗಳಿಲ್ಲ. ಓದುವ ಅಭಿರುಚಿಯನ್ನು ಮಕ್ಕಳಲ್ಲಿ ಹುಟ್ಟಿಸುವ ಸಾಧನಗಳಿಲ್ಲ, ಮುಖ್ಯವಾಗಿ ಶಿಕ್ಷಣವೆಂಬುವುದು ನಮ್ಮ ಸಂಪತ್ತೆಂಬುದು ಗ್ರಾಮೀಣ ಜನರಿಗೆ ಗೊತ್ತಾದಂತೆ ಕಂಡು ಬರುತ್ತಿಲ್ಲ. ಸರ್ಕಾರ ಸರಿಯಾದ ಕಾಲದಲ್ಲಿ ಪ್ರಾಥಮಿಕ ಶಾಲಾಪುಸ್ತಕಗಳನ್ನು ಮಕ್ಕಳಿಗೆ ದೊರಕಿಸುತ್ತಿಲ್ಲ. ಇದರಿಂದಲೂ ಓದಿನ ಅಭಿರುಚಿಯನ್ನು ಬಿಟ್ಟು, ಅವರು ಮತ್ತೇ ನಿರಕ್ಷರಾಗುತ್ತಿದ್ದಾರೆ. ಮೊದಲಿಗೆ ರಾಷ್ಟ್ರೀಯ ಶಿಕ್ಷಣವೇನೆಂಬುದನ್ನು ಚೆನ್ನಾಗಿ ಅರ್ಥ ಮಾಡಿಕೊಂಡು, ನಮ್ಮ ದೇಶ, ನಮ್ಮ ವಾತಾವರಣ, ನಮ್ಮ ಭಾಷೆ, ನಮ್ಮ ಸಂಸ್ಕೃತಿ ಮುಂತಾದವುಗಳಿಗೆ ಸರಿಹೋಗುವಂತಹ ಮಕ್ಕಳ ಸಾಹಿತ್ಯವನ್ನು ಪ್ರಕಟಿಸಿ ಮಕ್ಕಳಲ್ಲಿ ಹೆಚ್ಚಿನ ಜ್ಞಾನಾರ್ಜನೆಯಾಗುವಂತೆ ಕ್ರಮ ಕೈಗೊಳ್ಳಬೇಕಾಗಿದೆ. ಬದಲಾಗುತ್ತಿರುವ ಕಾಲಕ್ಕೆ ಹೊಸಹೊಸ ಆಸೆಗೆ, ಹೊಸಬಾಳ್ವೆಗೆ ಅನುಕೂಲವಾಗುವಂತಹ ಶಿಕ್ಷಣಕ್ರಮವನ್ನು ನಮ್ಮ ಗ್ರಾಮೀಣ ಜನತೆಗೆ ನೀಡಿ ಅವರನ್ನು ಮುಖ್ಯವಾಹಿನಿಯ ಕಡೆಗೆ ಮುನ್ನೆಡೆಸುವ ಕ್ರಮ ತೆಗೆದುಕೊಳ್ಳಬೇಕೆಂದಿನಿಸುತ್ತದೆ.

ನಮ್ಮ ರಾಷ್ಟ್ರದ ಸಂಸ್ಕೃತಿಯ ಪರಂಪರಾನುಗತವಾಗಿ ಗ್ರಾಮಗಳಲ್ಲಿ ನೆಲೆಸಿದೆ ಎಂಬುದು ಅಂದಿನ ಮತ್ತು ಇಂದಿನ ಸತ್ಯ ಸಂಗತಿಯೇ. ಈ ಸಂಸ್ಕೃತಿಯು ಮುಂದೆಯೂ ಉಳಿಯಬೇಕಾದರೆ, ಗ್ರಾಮಗಳ ಪುನರುದ್ಧಾರವಾಗಬೇಕು. ಉತ್ತಮ ಶಿಕ್ಷಣದ ಕ್ರಮವು, ಇಂತಹ ಪುನರುದ್ಧಾರ ಕಾರ್ಯದ ಅಂಗ, ಅಪಾರ ಹಣವನ್ನು ಖರ್ಚು ಮಾಡಿ ಸರ್ಕಾರದವರು ಪ್ರತಿಯೊಂದು ಹಳ್ಳಿಯಲ್ಲಿಯೂ, ಶೈಕ್ಷಣಿಕ ಕೆಲಸವನ್ನು ಕೈಗೊಳ್ಳುವುದು ಸಾಧ್ಯವಾಗದಿರಬಹುದು, ಇಂತಹ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದ ಜನರಿಗೆ ಸ್ವಾವಲಂಬನೆಯಾದ ಮತ್ತು ಆರ್ಥಿಕ ಸಮಸ್ಯೆಗಳನ್ನು ಬಗೆಹರಿಸತಕ್ಕ ಶಿಕ್ಷಣ ಕ್ರಮವು ಗ್ರಾಮೀಣ ಪುನರುದ್ಧಾರ ಕಾರ್ಯಕ್ಕೆ ಅಗತ್ಯವಾಗಿ ಬೇಕಾಗುತ್ತದೆಂದು ಹೇಳಬಹುದು.

ರಾಷ್ಟ್ರೀಯ ಶಿಕ್ಷಣ ನೀಡುತ್ತೇವೆಂದುಕೊಂಡು ನಾವು ಹಿನ್ನೆಡೆಯ ಹೆಜ್ಜೆ ಹಾಕಬಾರದು ಹಾಗೇಯೇ ನಿರ್ಜೀವವಾದ ಕ್ರಮವನ್ನು ಅನುಸರಿಸಬಾರದು. ರಾಷ್ಟ್ರೀಯ ಶಿಕ್ಷಣ ಪದ್ಧತಿಯಲ್ಲಿ ಘಟಿಕಾಲಯದ ಹಾಗೂ ಅಗ್ರಹಾರದ ಶಿಕ್ಷಣ ಪದ್ಧತಿ ಕಂಡು ಬರಬಾರದು. ಸ್ವದೇಶ ಶಿಕ್ಷಣ ಎಂದುಕೊಂಡು ಇಂದಿನ ಉಪಗ್ರಹ ಯುಗದಲ್ಲಿ; ವಿಮಾನ ಎಲಿಕಾಫ್ಟರ್ ಯುಗದಲ್ಲಿ ಎತ್ತಿನಗಾಡಿಯಲ್ಲಿ ಒಂಟಿ ಕುದುರೆಗಳ ಮೇಲೆ ಶೈಕ್ಷಣಿಕ ಪ್ರವಾಸ ಮಾಡುತ್ತೇವೆ. ಬಸ್, ರೈಲುಗಳಲ್ಲೂ ಪ್ರವಾಸ ಮಾಡುವುದಿಲ್ಲ ಎನ್ನವುದು ದಡ್ಡತನ, ನಮ್ಮ ಗ್ರಾಮೀಣ ಪ್ರದೇಶದ ಶಿಕ್ಷಣ ಪ್ರಸಾರವು ಇಂದಿಗೂ ಸಹ ಎತ್ತಿನ ಗಾಡಿಯ ಪ್ರವಾಸವಾಗಿದೆ ಎಂಬುವುದು ನಮಗೆಲ್ಲ ತಿಳಿದಿರುವ ವಿಷಯವೇ.

ನಮ್ಮ ರಾಷ್ಟ್ರವು ಸ್ವಾತಂತ್ರ್ಯವನ್ನು ಗಳಿಸಿದ ನಂತರ ರಾಷ್ಟ್ರದ ಸಮಸ್ಯೆಗಳನ್ನು ಬಗೆಹರಿಸುವುದಕ್ಕೆ ವಿವಿಧ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಪ್ರಗತಿಯು ಸಾಕಷ್ಟು ಪ್ರಮಾಣದಲ್ಲಿ ನಡೆದಿದ್ದರೂ ಇನ್ನೂ ತೃಪ್ತಿಕರವಾಗದೆ ದಿನೆದಿನೇ ಸಮಸ್ಯೆ ಹೆಚ್ಚುತ್ತಾ ಇರುವುದು ಕಂಡು ಬರುತ್ತಿದೆ. ಇದಕ್ಕೆ ನಾನಾಕಾರಣಗಳನ್ನು ಗುರ್ತಿಸಬಹುದು. ಮುಖ್ಯವಾಗಿ ಮಿತಿಮೀರಿ ಏರುತ್ತಿರುವ ಜನಸಂಖ್ಯೆ, ಔದ್ಯೋಗಿಕ, ವಾಣಿಜ್ಯ, ಶಿಕ್ಷಣ, ಸಾಮಾಜಿಕ, ಆರ್ಥಿಕ ಇತ್ಯಾದಿ ಕ್ಷೇತ್ರಗಳಲ್ಲಿ ಒದಗುತ್ತಿರುವ ಅವಕಾಶ, ಲಾಭಗಳಿಗೆ ಪಾಲುದಾರರ ಸಂಖ್ಯೆ ತೀವ್ರವಾಗಿ ಹೆಚ್ಚುತ್ತಾ ಇರುವುದು. ಹೀಗಾಗಿ ಉತ್ಪಾದನೆಗಿಂತ ಬೇಡಿಕೆಗಳೇ ಹೆಚ್ಚಾಗಿರುವುದು. ಜನಸಂಖ್ಯೆಯು ವಿಪರೀತವಾಗಿ ಹೆಚ್ಚುತ್ತಾ ಇರುವುದು ಈ ರಾಷ್ಟ್ರದ ಮೂಲಭೂತ ಸಮಸ್ಯೆಗಳಿಗೆ ಮೂಲ ಕಾರಣವಾಗುತ್ತಿದೆ. ಇದನ್ನು ನಿಯಂತ್ರಿಸಿದ ಹೊರತು ನಮ್ಮ ಗ್ರಾಮಗಳು ಶಿಕ್ಷಣ ವ್ಯವಸ್ಥೆಯು ಆರೋಗ್ಯಕರವಾದ ದಿಕ್ಕಿನಲ್ಲಿ ಮುನ್ನಡೆಯಲು ಸಾಧ್ಯವಾಗುವುದಿಲ್ಲವೆನ್ನಬಹುದು.