ಹಿಂದಿನ ಅಧ್ಯಾಯಗಳಲ್ಲಿ ಹಳ್ಳಿಗಳ ಈಗಿನ ಹೀನ ಸ್ಥಿತಿಗೆ ಕಾರಣಗಳನ್ನೂ ಮತ್ತು ಹಳ್ಳಿಗಳ ಏಳಿಗೆಗೆ ಮುಖ್ಯವಾದ ವ್ಯವಸಾಯ, ಉಪಕಸುಬುಗಳು ಮತ್ತು ವ್ಯಾಪಾರ ಇವುಗಳಲ್ಲಿ ಆಗಬೇಕಾದ ಸುಧಾರಣೆಗಳನ್ನೂ ವಿಮರ್ಶೆ ಮಾಡಿದೆವು. ಈಗ ಹಳ್ಳಿಗಳಲ್ಲಿ ವಿಶೇಷವಾಗಿ ಕಂಡುಬರುತ್ತಿರುವ ಬಡತನ ಮತ್ತು ಸಾಲಗಳ ವಿಷಯಗಳನ್ನು ಸ್ವಲ್ಪಮಟ್ಟಿಗೆ ತಿಳಿದುಕೊಂಡು, ಅದಕ್ಕೆ ತಕ್ಕ ಪರಿಹಾರ ಮಾರ್ಗಗಳನ್ನೂ ಯೋಚಿಸಬೇಕಾಗಿದೆ. ನಮ್ಮ ಹಳ್ಳಿಗಳ ಬಡತನವು ಒಂದು ಭಯಂಕರವಾದ ಸಂಗತಿ. ಒಬ್ಬ ಕವಿಯು ವರ್ಣಿಸಿರುವಂತೆ ನಮ್ಮ ದೇಶದ ಜನಗಳು “ಬಡತನದ ಪಂಕದೊಳ್ ಪುಳುಗಳಂತುದಯಿಸುವರು, ಸಾಯುವರು” ಪುರಾತನ ಗ್ರಂಥಗಳಲ್ಲಿಯೂ ಮತ್ತು ಇತಿಹಾಸಗಳಲ್ಲಿಯೂ ನಮ್ಮ ದೇಶವು ಭಗವಂತನ ಮೆಚ್ಚಿನ ನಾಡೆಂದೂ, ಸೃಷ್ಟಿಕರ್ತನು ಅನೇಕ ಅವತಾರಗಳನ್ನು ಮಾಡಿ ತನ್ನ ಲೀಲೆಗಳನ್ನು ತೋರಿಸಿರುವ ನಂದನವೆಂದೂ. ಚಿನ್ನದ ನಾಡೆಂದೂ, ರನ್ನದ ತೌರುಮನೆಯೆಂದೂ ವರ್ಣಿಸಿರುವುದನ್ನು ನೋಡಬಹುದಾಗಿದೆ. ಸಾಮಾನ್ಯ ದೃಷ್ಟಿಯಿಂದಲೂ ನಮ್ಮ ದೇಶದ ಭೂಮಿ, ಜಲ ಸಮೃದ್ಧಿ ಮಾನವ ಸಂಪತ್ತು, ಬೇಸಾಯಗಾರರ ಕುಶಲತೆಯೂ ಹೇರಳವಾಗಿದ್ದು ಪ್ರಪಂಚದಲ್ಲೆಲ್ಲಾ ಉತ್ತಮವಾದ ದೇಶವೆಂದು ಹೇಳಲಾಗುವುದು. ಆದರೆ ನಿಜಸ್ಥಿತಿಯು ಹಾಗಿಲ್ಲ. ನೆಮ್ಮದಿಯಿಂದ ಉಂಡು, ತೃಪ್ತರಾದ ಜನಗಳಿಗಿಂತ ಹೊಟ್ಟೆಗಿಲ್ಲದ ಜನತೆಯೇ ವಿಶೇಷವಾಗಿ ಕಂಡು ಬರುತ್ತಿದ್ದಾರೆ. ಬಡತನದ ಬೇಗೆಯಿಂದ ಜನರು ನಿಸ್ತೇಜರಾಗಿದ್ದಾರೆ. ಎಲ್ಲೆಲ್ಲಿಯೂ ನಿರುದ್ಯೋಗವು ಅರ್ತನಾದವೇ ಕೇಳಿಬರುತ್ತಿದೆ. ನಮ್ಮ ದೇಶದ ಬಡತನ “ಕೈಯೊಳಗಿನ ಹುಣ್ಣಿನಂತೆ” ಅದನ್ನು ತಿಳಿಯಲು ಬೇರೆ ಕನ್ನಡಿ ಬೇಕಾಗಿಲ್ಲ. ಸರ್ವಜ್ಞನು ಹೇಳಿರುವಂತೆ ನಮ್ಮ ರೈತರು ದುಡಿಯುವುದು ಕೇವಲ “ಚೋಟುದ್ದ ಹೊಟ್ಟೆಗೆ ಮತ್ತು ಗೇಣುದ್ದ ಬಟ್ಟೆಗೆ.”

ಒಂದು ದೇಶದ ಐಶ್ವರ್ಯವನ್ನು ಅದೇ ದೇಶಿಯರ ಸರಾಸರಿ ವರಮಾನದಿಂದ ನಿರ್ಧರಿಸುವುದು ಸಾಮಾನ್ಯ ಪದ್ಧತಿಯಾಗಿದೆ. ಇದರಂತೆ ಪ್ರತಿಯೊಬ್ಬ ಭಾರತೀಯನ ವರಮಾನವನ್ನೂ ಇತರ ದೇಶೀಯರ ವರಮಾನದೊಂದಿಗೆ ಹೋಲಿಸಿ ನೋಡಿದರೆ ನಮ್ಮ ದೇಶದ ಆರ್ಥಿಕ ಸ್ಥಿತಿಯು ತಿಳಿಯುವುದು, ತಲೆಯೊಂದಕ್ಕೆ ಇಂಗ್ಲೆಂಡಿನಲ್ಲಿ ೧,೬೯೨, ಕೆನಡಾ ೧,೨೯೮, ಎಸ್. ಎ. ೧,೦೫೩, ಫ್ರಾನ್ಸ್ ೬೩೬ ರೂಪಾಯಿಗಳ ಸರಾಸರಿ ವರಮಾನವಿರುವಾಗ ನಮ್ಮ ದೇಶದ ಸರಾಸರಿ ವರಮಾನವು ಕೇವಲ ೮೦ ರೂಪಾಯಿಗಳಿಗಿಂತ ಕಡಿಮೆಯೆಂದರೆ ನಮ್ಮ ದೇಶದ ಆರ್ಥಿಕ ಸ್ಥಿತಿಯು ಎಂತಹ ವಿಷಮಯ ಪರಿಸ್ಥಿತಿಯಲ್ಲಿರುವುದೆಂದು ತಿಳಿಯಬರುವುದು, ಈ ಬಡತನದ ಫಲವಾಗಿ ನಮ್ಮ ರೈತರ ಜೀವನದ ಅಂತಸ್ತು ಕೂಡ (Standard of Life) ಬಹಳ ಕೆಳಮಟ್ಟದಲ್ಲಿದೆ. ೧೯೩೧ನೇ ಮೈಸೂರು ಸೆನ್ಸಸ್ ವರದಿಯ ಪ್ರಕಾರ ನಮ್ಮ ರೈತರಲ್ಲಿ ಪ್ರತಿಯೊಬ್ಬನಿಗೂ ಕಡೆಯ ಪಕ್ಷ ತಿಂಗಳಿಗೆ ನಾಲ್ಕು ರೂಪಾಯಿಗಳಾದರೂ ಜೀವನಕ್ಕೆ ಅವಶ್ಯಕವೆಂತಲೂ, ಆದರೆ ಅವರ ವರಮಾನವು ವರ್ಷಕ್ಕೆ ಮೂವತ್ತು ರೂಪಾಯಿಗಳಿಗಿಂತ ಹೆಚ್ಚಾಗಿಲ್ಲವೆಂತಲೂ ತಿಳಿದುಬರುತ್ತದೆ. ಕರ್ನಾಟಕದ ಕೆಲವು ಹಳ್ಳಿಗಳಲ್ಲಿ ನಡೆಸಿದ ಪರಿಶೀಲನೆಯ ಪ್ರಕಾರ ತಲೆಯೊಂದಕ್ಕೆ ವರ್ಷಕ್ಕೆ ೬೯ ರೂಪಾಯಿಗಳು ಖರ್ಚಾಗುವುದೆಂದೂ, ಆದರೆ ಅದೇ ಜೈಲಿನಲ್ಲಿರುವ ಖೈದಿಗೆ ಸರ್ಕಾರದವರು ವರ್ಷಕ್ಕೆ ೧೩೦ ರೂಪಾಯಿಗಳನ್ನು ಖರ್ಚು ಮಾಡುವರೆಂದೂ ಗೊತ್ತಾಗಿದೆ. ಇದರಿಂದ ನಮ್ಮ ರೈತನ ಜೀವನವು ಖೈದಿಯ ಜೀವನಕ್ಕಿಂತ ಹೀನಸ್ಥಿತಿಯಲ್ಲಿದೆ. ಇನ್ನೂ ಬಡತನದ ಬೇಗೆಯನ್ನು ಪ್ರತ್ಯೇಕವಾಗಿ ವರ್ಣಿಸಬೇಕಾಗಿಲ್ಲ. ಈ ಬಡತನಕ್ಕೆ ಹಲವು ಕಾರಣಗಳುಂಟು ನಮ್ಮ ದೇಶದ ಜನಸಂಖ್ಯೆಯು ವಿಶೇಷವಾಗಿ ಏರುತ್ತಿದೆ. ೧೯೩೧-೪೧ ರವರೆಗೆ ೨೮೦ ಲಕ್ಷ ಜನತೆಯು ಜಾಸ್ತಿಯಾಗಿರುತ್ತದೆಂದೂ ತಿಳಿದುಬರುತ್ತದೆ. ಇದರಿಂದ ಊಟ ಮಾಡುವವರು ಹೆಚ್ಚಾಗುತ್ತಿದ್ದರೂ ಸಂಪಾದನೆಯು ಮಾತ್ರ ಹೆಚ್ಚಾಗದೆ ಅನೇಕರು ಹೊಟ್ಟೆಗಿಲ್ಲದೆ ನರಳ ಬೇಕಾಗಿರುವುದು. ಅಲ್ಲದೆ ಜನಗಳು ಒಂದೇ ಉದ್ಯೋಗವನ್ನು ನಂಬಿಕೊಂಡಿರುವುದರಿಂದ ಬೇರೆ ಸಂಪಾದನೆಗೆ ಮಾರ್ಗವಿಲ್ಲದೆ ತೊಂದರೆ ಪಡುತ್ತಿರುತ್ತಾರೆ, ನಮ್ಮ ದೇಶದಲ್ಲಿ ಶೇಕಡಾ ೮೦ಕ್ಕಿಂತ ಜಾಸ್ತಿಯಾಗಿ ವ್ಯವಸಾಯವನ್ನೇ ನಂಬಿದ್ದಾರೆ. ಅವರ ಸ್ಥಿತಿಯು ಹಿಂದೆಯೇ ವರ್ಣಿಸಿರುವಂತೆ ಸ್ವಲ್ಪವೂ ತೃಪ್ತಿಕರವಾಗಿಲ್ಲ. ಇದಲ್ಲದೆ ನಮ್ಮ ಸಮಾಜದಲ್ಲಿರುವ ಜಾತಿ ಪದ್ಧತಿಗಳೂ, ಅವಿಭಕ್ತ ಕುಟುಂಬ, ಬಾಲ್ಯ ವಿವಾಹ, ಅಸ್ಪೃಶ್ಯತೆ- ಇವುಗಳೂ ಸಹ ನಮ್ಮ ಜನಗಳ ಬಡತನಕ್ಕೆ ಕಾರಣಗಳಾಗಿವೆ. ಅಲ್ಲದೆ. ನಮ್ಮ ಜನಗಳಲ್ಲಿರುವ ಮೂಢನಂಬಿಕೆಯೂ ಅವರ ಬಡತನಕ್ಕೆ ಕಾರಣ, ಹಳ್ಳಿಯವರಲ್ಲಿ ಸಾಧಾರಣವಾಗಿ “ಹುಟ್ಟಿಸಿದ ದೇವರು ಹುಲ್ಲು ಮೇಯಿಸಿಯಾನೆ” ಎಂಬ ನಂಬಿಕೆಯೂ ಬೇರೂರಿ ನಿಂತಿದೆ. ಅಂತು ಕಾರಣಗಳು ಏನೇ ಇರಲಿ, ಬಡತನವು ನಮ್ಮ ಜನಗಳ ಬೆನ್ನು ಹತ್ತಿ ಬಂದಿರುವ ಬೇತಾಳವೆಂದು ನಿಸ್ಸಂಶಯವಾಗಿ ಹೇಳಬಹುದು.

ಸಾಲ

ಹೀಗೆ ಬಡತನದಲ್ಲಿ ತೊಂದರೆ ಪಡುತ್ತಿರುವ ಜನರು ಯಾವ ಕೆಲಸ ಮಾಡಬೇಕಾದರೂ ಸಾಲವನ್ನು ಕೋರುವುದು ಬಹಳ ಸಹಜ, ರೈತರು ಸಾಲದಲ್ಲಿ ಹುಟ್ಟಿ ಸಾಲದಲ್ಲಿ ಬೆಳೆದು ಸಾಲದಲ್ಲಿಯೇ ಸಾಯುತ್ತಿರುವುದು ಸಾಧಾರಣವಾದ ವಿಷಯ, ನಮ್ಮ ದೇಶದಲ್ಲಿ ಸಾಲಕ್ಕೂ ಬಡತನಕ್ಕೂ ಒಂದು ವಿಶೇಷವಾದ ಸಂಬಂಧವಿದೆ. ಸಾಲದ ಕಾರಣ ಬಡತನ, ಬಡತನದ ಫಲ ಸಾಲ. “ಹುಚ್ಚು ಬಿಟ್ಟ ಹೊರತು ಮದುವೆಯಾಗದು. ಮದುವೆಯಾದ ಹೊರತು ಹುಚ್ಚು ಬಿಡದು” ಎಂಬಂತೆ ಅದೊಂದು ವಿಷಮಯ ಚಕ್ರ, ನಮ್ಮ ದೇಶದ ರೈತರ ಸಾಲವನ್ನು ಸ್ಥೂಲವಾಗಿ ನಿರ್ಧರಿಸುವುದಕ್ಕಾಗಿ ಪ್ರಯತ್ನಗಳು ಬಹುಕಾಲದಿಂದಲೂ ನಡೆದಿದೆ. ೧೮೭೫ ರಲ್ಲಿ ಏರ್ಪಟ್ಟ ಡೆಕನ್ನಿನ ರೈತರ ಸಮಿತಿಯವರು ವ್ಯವಸಾಯದ ಭೂಮಿ ಇರುವ ಹಿಡುವಳಿದಾರರಲ್ಲಿ ಸರಾಸರಿ ತಲೆಯೊಂದಕ್ಕೆ ೩೭೧ ರೂಪಾಯಿಗಳು ಸಾಲವಿದೆ ಎಂದು ನಿಧರಿಸಿದರು. ೧೮೮೦ ಮತ್ತು ೧೯೯೧ ರಲ್ಲಿ ನೇಮಿಸಲ್ಪಟ್ಟ ಕ್ಷಾಮ ಸಮಿತಿಯವರು ರೈತರಲ್ಲೆ ಸುಮಾರು ಶೇಕಡಾ ೭೫ರಷ್ಟು ಮಂದಿ ಸಾಲದಲ್ಲಿ ಮುಳುಗಿರುತ್ತಾರೆ ಎಂದು ಅಭಿಪ್ರಾಯಪಟ್ಟ್ರು, ಫ್ರೆಡರಿಕ್ ನಿಕೋಲ್ಸನ್, ಎಡ್ವರ್ಡ್ ಮ್ಯಾಕ್ಲಗನ್ ಮತ್ತು ಡಾರ್ಲಿಂಗ್ ಮುಂತಾದ ವಿದ್ವಾಂಸರ ನಿರ್ಣಯಗಳ ಆಧಾರಗಳಿಂದ ಬ್ರಿಟಿಶ್ ಇಂಡಿಯಾದ ಸಾಲ ಸುಮಾರು ೬೦೦ ಕೋಟಿ ರೂಪಾಯಿಗಳೆಂದು ಗೊತ್ತಾಗಿತ್ತು. ೧೯೬೦ರಲ್ಲಿ ವಿಮರ್ಶೆ ನಡೆಸಿದ ಕೇಂದ್ರ ಬ್ಯಾಂಕಿಂಗ್ ಕಮಿಟಿಯವರ ಆಧಾರದಿಂದ ನಮ್ಮ ದೇಶದ ರೈತರ ಸಾಲವು ೧,೦೦೦ ಕೋಟಿ ರೂಪಾಯಿಗಳೆಂದು ನಿರ್ಧರಿಸಲ್ಪಟ್ಟಿದೆ. ಅವರು ಈ ಸಾಲದ ಹಿಂಸೆಯು ಹಿಮಾಲಯದಿಂದ ಕನ್ಯಾಕುಮಾರಿಯವರೆಗೂ ಆವರಿಸಿರುವುದೆಂದು ಸಾರಿದರು. ನಮ್ಮ ರಾಜ್ಯದಲ್ಲಿಯೂ ನಡೆಸಿರುವ ನಿರ್ಣಯಗಳ ಆಧಾರದಿಂದ ರೈತರ ಸಾಲವು ೨೫ ಕೋಟಿ ರೂಪಾಯಿಗಳಿಗಿಂತ ಮಿಗಿಲಾಗಿರುವುದೆಂದು ಗೊತ್ತಾಗುತ್ತದೆ.

ನಮ್ಮ ರೈತರ ಈ ಸಾಲದ ಹೊರೆಗೆ ಅನೇಕ ಕಾರಣಗಳಿವೆ. ವ್ಯವಸಾಯದ ಹೀನಸ್ಥಿತಿ, ಉಪಕಸಬುಗಳಿಲ್ಲದಿರುವುದು, ಜನಗಳು ಹೊಟ್ಟೆಗಿಲ್ಲದೆ ಅನೇಕ ವ್ಯಾಧಿಗಳಿಂದ ನರಳುತ್ತಿರುವುದು, ಕಾಲಕ್ಕೆ ಸರಿಯಾದ ಮಳೆ ಬೆಳೆಗಳಾಗದಿರುವುದು. ವ್ಯವಸಾಯಕ್ಕೆ ಮುಖ್ಯವಾದ ದನಕರುಗಳು ಸರಿಯಾದ ಮೇವಿಲ್ಲದೆ ರೋಗಗಳಿಗೆ ತುತ್ತಾಗುವುದು, ರೈತರು ತನಗೆ ಬೇಕಾದ ಸಲಕರಣೆಗಳನ್ನೊದಗಿಸಿಕೊಳ್ಳಲು ಮೂಲಧನದ ಅಭಾವ, ಇವುಗಳ ಜೊತೆಗೆ ಪ್ರಬಲವಾದ ಕೆಲವು ಕಾರಣಗಳು ನಮ್ಮ ರೈತರನ್ನು ಸಾಹುಕಾರರ ಗುಲಾಮರನ್ನಾಗಿ ಮಾಡುತ್ತಿವೆ. ನಮ್ಮ ರೈತರು ಸಾಲವಾಗಿ ಪಡೆದ ಹಣವನ್ನು ಆದಾಯ ಬರುವ ಉಪಯೋಗವಾಗುವ ರೀತಿಯಲ್ಲಿ ವಿನಿಯೋಗಿಸದೆ ವ್ಯರ್ಥವಾಗಿ ದುಂದು ಖರ್ಚು ಮಾಡುವರು. ಸಾಧಾರಣವಾಗಿ ರೈತರು ತಮ್ಮ ಸಂಸಾರಗಳಿಗೆ ಮಿತವಾಗಿ ಖರ್ಚು ಮಾಡುತ್ತಿದ್ದರೂ, ಮದುವೆ, ಹಬ್ಬ ಮುಂತಾದ ಉತ್ಸವ ಸಮಯಗಳಲ್ಲಿಯೂ ಮತ್ತು ಸಾವು ಮುಂತಾದ ವಿಶೇಷ ಸಂದರ್ಭಗಳಲ್ಲಿಯೂ “ಹಾಸಿಗೆ ಇದ್ದಷ್ಟು ಕಾಲು ಚಾಚಬೇಕೆಂಬ” ನಿಯಮವನ್ನು ಮರೆತು ಯೊಗ್ಯತೆ ಮೀರಿ ಖರ್ಚು ಮಾಡಲು ಯತ್ನಿಸುತ್ತಾರೆ. ಇದಕ್ಕೆ ನಮ್ಮ ಸಮಾಜದಲ್ಲಿ ಈ ವಿಶೇಷ ಸಂದರ್ಭಗಳಲ್ಲಿ ಹಣ ಖರ್ಚು ಮಾಡಿದಷ್ಟು ತಮಗೆ ಗೌರವ ದೊರೆಯುವುದೆಂಬ ತಪ್ಪು ಭಾವನೆಯೇ ಕಾರಣ. ಸಮಾರಂಭಗಳಲ್ಲಿ ಸಿಹಿ ಊಟ ಮಾಡಿ ತೇಗುವ ನೆಂಟರಾರೂ ಸಾಲಗಾರನ ಹಣಕ್ಕೆ ತಗಾದೆ ಮಾಡುವಾಗ ನೆರವಾಗುವುದಿಲ್ಲ. ಈ ದುಂದುಗಾರಿಕೆಯ ಜೊತೆಗೆ ಮುಂದಾಲೋಚನೆಯ ಅಭಾವವು ರೈತರ ಹೀನಸ್ಥಿತಿಗೆ ಕಾರಣವಾಗಿದೆ. “ನಾಳೆ ಯಾರೋ ನಾವಾರೋ” ಎಂಬ ಭಾವನೆಯು ಅವರಲ್ಲಿ ಬೇರೂರಿ ಮುಂದಾಲೋಚನೆಯಿಲ್ಲದೆ ಹಣ ವ್ಯಯಮಾಡಿ ಸಾಲ ತೀರಿಸಲು ಮಾರ್ಗವಿಲ್ಲದೆ ತೊಂದರೆ ಪಡುವರು. ಇದರ ಜೊತೆಗೆ ಕೋರ್ಟು ಕಛೇರಿ ವ್ಯವಹಾರ ಮಾಡುವುದರಲ್ಲಿ ರೈತರಿಗಿರುವ ವಿಶೇಷವಾದ ಮಮತೆಯು ಅವರ ಹೀನಸ್ಥಿತಿಗೆ ಕಾರಣವಾಗಿದೆ. ಯಾವುದೋ ಅಲ್ಪವಿಷಯಕ್ಕಾಗಿ ನೂರಾರು ರೂಪಾಯಿಗಳನ್ನು ವ್ಯರ್ಥವಾಗಿ ಖರ್ಚುಮಾಡುವರು. ರೈತರು ತಾವು ಹೊಟ್ಟೆಗೆ ತಿನ್ನದೆ, ಬಟ್ಟೆ, ಉಡದೆ, ಹೆಂಡತಿ ಮಕ್ಕಳಿಗೆ ವಂಚನೆಮಾಡಿ ಕೂಡಿಟ್ಟ, ತಮ್ಮ ದುಡಿಮೆಯನ್ನು ದೇವರಿಗರ್ಪಿಸುವ ಮುಡುಪಿನಂತೆ ವ್ಯವಹಾರಕ್ಕಾಗಿ ಒಪ್ಪಿಸುತ್ತಿರುವುದು ಬಹಳ ಶೋಚನೀಯವಾದ ವಿಷಯ. ಅವರು ರನ್ನನ ಗದಾಯುದ್ದದಲ್ಲಿ “ನಲಕಿರಿವೆನೆಂದು ಬಗೆದಿರೇಂ ಛಲಕಿರಿವೆಂ” ಎಂದು ದುರ್ಯೋಧನನು ಹೇಳಿರುವಂತೆ ವ್ಯಾಜ್ಯ ಮಾಡುವುದು ಪ್ರಯೋಜನಕ್ಕಲ್ಲ, ಛಲಕ್ಕಾಗಿ, ಈ ಕೆಟ್ಟಚಾಳಿಯು ನಮ್ಮ ರೈತರಿಂದ ತೊಲಗದ ಹೊರತು ಅವರಿಗೆ ಏಳಿಗೆಯಿಲ್ಲ. ನಮ್ಮ ರೈತರ ಸಾಲಕ್ಕೆ ಪಿತ್ರಾರ್ಜಿತವಾದ ಸಾಲವು ಮುಖ್ಯವಾದ ಕಾರಣಗಳಲ್ಲೊಂದು, ಸಾಲವು ವಂಶ ಪಾರಂಪರ್ಯವಾಗಿ ಬರುವ ಆಸ್ತಿ, ತಂದೆಯ ಋಣವನ್ನು ತೀರಿಸುವುದು ಮಗನ ಪವಿತ್ರ ಕರ್ತವ್ಯವೆಂಬ ಭಾವನೆಯಿಂದ ತಮಗೆ ಸಂಬಂಧವಿಲ್ಲದ ಸಾಲದ ಸಂಕೋಲೆಗೆ ಸಿಕ್ಕಿ ನರಳುತ್ತಿರುತ್ತಾರೆ. ಇದರಿಂದ ಸಾಹುಕಾರರು ಕುರಿಮರಿಯನ್ನು ಹೆದರಿಸಿದ ತೋಳನಂತೆ ರೈತರನ್ನು ಹಿಂಸೆ ಪಡಿಸುತ್ತಿರುವರು. ಭಾರತಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ ಬೃಹತ್ ಕೈಗಾರಿಕೆಗಳು ನಮ್ಮ ದೇಶದಲ್ಲಿ ನೆಲಸಿದವು. ದೊಡ್ಡ ಪಟ್ಟಣಗಳು, ರೈಲು, ಮೋಟಾರು ಮುಂತಾದ ಸೌಲಭ್ಯಗಳು ಅಭಿವೃದ್ಧಿಯಾಗಿ ಜಮೀನಿನ ಬೆಲೆಯು ಏರಿದ್ದುದರಿಂದ ರೈತರಿಗೆ ಕಷ್ಟವಿಲ್ಲದೆ ಸಾಲ ಸಿಕ್ಕಲು ಅವಕಾಶವಾಯಿತು. ಇದರಿಂದ ದುಂದುಗಾರಿಕೆ ಹೆಚ್ಚಾಗಿ ರೈತರ ಜೀವನಕ್ರಮದಲ್ಲಿ ಅನೇಕ ಬದಲಾವಣೆಗಳು ಬಂದು ಹೆಚ್ಚುತ್ತಿರುವ ಖರ್ಚಿಗೆ ತಕ್ಕ ವರಮಾನವಿಲ್ಲದೆ ಸಾಲಗಾರರ ಬಲೆಗೆ ಬೀಳುತ್ತಿದ್ದಾರೆ.

ಲೇವಾದೇವಿಯು ಬಹು ಕಾಲದಿಂದ ನಮ್ಮ ದೇಶದಲ್ಲಿದ್ದರೂ ಸಾಹುಕಾರರು ಕೆಲವು ನಿರ್ಬಂಧಗಳನ್ನು ಅನುಸರಿಸಬೇಕಾಗಿತ್ತು, ದುಬಾರಿ ಬಡ್ಡಿ ಹಾಕುವುದು ಧರ್ಮವಿರುದ್ದವೆಂದು ಭಾವಿಸಲ್ಪಟ್ಟು ಗ್ರಾಮದಲ್ಲಿದ್ದ ಹಿರಿಯರು ವ್ಯವಹಾರಗಳನ್ನು ತೀರ್ಮಾನ ಮಾಡುತ್ತಿದ್ದರಿಂದ, ಸಾಹುಕಾರರ ಸ್ವೇಚ್ಛಾ ಪ್ರವರ್ತನೆಗೆ ಅವಕಾಶವಿರುತ್ತಿರಲಿಲ್ಲ. ಪ್ರಜಾಪ್ರಭುತ್ವ ಸರ್ಕಾರ ಭಾರತದಲ್ಲಿ ಬಂದ ಮೇಲೆ ಹಳ್ಳಿಗಳ ಅಚ್ಚುಕಟ್ಟು ಸದರಿ ನ್ಯಾಯ ತೀರ್ಮಾನಕ್ಕೆ ಸಿವಿಲ್ ಕೋರ್ಟುಗಳು ಜಾಸ್ತಿಯಾದವು. ಅನೇಕ ಕಾನೂನುಗಳು ಬಳಕೆಗೆ ಬಂದವು, ಹಳ್ಳಿಗಳ ವಿದ್ಯಮಾನಗಳನ್ನು ಅರಿಯದ ಅಧಿಕಾರಿಗಳು ಬರೀ ಕಾನೂನನ್ನೇ ಅನುಸರಿಸಿ ವ್ಯವಹಾರಗಳನ್ನು ತೀರ್ಮಾನ ಮಾಡುತ್ತ ಬಂದುದರಿಂದ ಸಾಹುಕಾರನಿಗೆ ನಿರಾತಂಕವಾಯಿತು. ಇದರಿಂದ ಸಾಹುಕಾರರು ರೈತರಿಂದ ಚಕ್ರಬಡ್ಡಿಯನ್ನು ವಸೂಲ್ಮಾಡಲು ಹಿಂದೆಗೆಯದೆ ಅನೇಕ ಸಂದರ್ಭಗಳಲ್ಲಿ ಅವರ ಆಸ್ತಿಪಾಸ್ತಿಗಳನ್ನು ತಮ್ಮ ಬಾಕಿಗೆ ಈಡಾಗಿ ತೆಗೆದುಕೊಳ್ಳುವುದು ಬಹು ಸಾಧಾರಣವಾಗಿ ಹೋಯಿತು. ಸ್ವಾಭಾವಿಕವಾಗಿ ಜನರಲ್ಲಿರಬೇಕಾದ ದಯೆ ದಾಕ್ಷಿಣ್ಯಗಳು ಮಾಯವಾಗಿ ಹಣವೇ ಪ್ರಧಾನವೆಂಬ ಭಾವನೆಯು ಜನರಲ್ಲಿ ಮನೆಮಾಡಿಕೊಂಡಿದೆ. ಹೀಗಾದರೂ ಈಗಲೂ ರೈತರಿಗೆ ಸಾಹುಕಾರರೇ ಗತಿ, ಪ್ರಪಂಚವನ್ನೆ ಆವರಿಸಿದ ಆರ್ಥಿಕ ಮುಗ್ಗಟ್ಟಿನಿಂದ ರೈತರು ಬೆಳೆಯುವ ಪದಾರ್ಥಗಳ ಬೆಲೆ ಇಳಿದು ಹೋಗಿ ಸಾಲ ತೀರಿಸುವುದು ಬಹು ಕಷ್ಟವಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಆದರೆ ಹಿಂದೆ ಎರಡನೆಯ ಘೋರ ಪ್ರಪಂಚ ಯುದ್ದದ ಪರಿಣಾಮವಾಗಿ ಪದಾರ್ಥಗಳ ಬೆಲೆಗಳು ವಿಶೇಷವಾಗಿ ಏರಿದ್ದರಿಂದ ಅನೇಕ ರೈತರಿಗೆ ಹೆಚ್ಚು ಹಣ ದೊರೆಯುವಂತಾಯಿತು. ಆದರೂ ವ್ಯವಸಾಯದ ಖರ್ಚು ವಿಪರೀತವಾಗಿ ಹೆಚ್ಚಿರುವುದರಿಂದಲೂ ಜೀವನ ನಿರ್ವಹಣ ವೆಚ್ಚವು ಏರಿರುವುದರಿಂದಲೂ ಸಾಲಗಳನ್ನು ತೀರಿಸುವುದು ಅನೇಕರಿಗೆ ಸಾಧ್ಯವಾಗಿಲ್ಲ. ಮೇಲೆ ಹೇಳಿದ ಕಾರಣಗಳಿಂದ ರೈತರು ಸಾಲದ ಹೊರೆಯಲ್ಲಿ ಸಿಕ್ಕಿ ನರಳುತ್ತಿದ್ದಾರೆ. “ಸಾಲವೋ ಶೂಲವೋ” ಎಂಬಂತೆ ಸಾಲದ ಮಹಿಮೆಯನ್ನು ಸಾಲ ಮಾಡಿರುವವರೆಲ್ಲರೂ ಬಲ್ಲರು. ಸರ್ವಜ್ಞನು ಹೇಳಿರುವಂತೆ “ಸಾಲವನು ಕೊಂಬಾಗ ಮೇಲೋಗರುಂಡಂತೆ ಸಾಲಿಗರು ಬಂದು ಸೆಳೆದಾಗ ಕಿಬ್ಬದಿಯ ಕೀಲು ಮುರಿದಂತೆ ಸರ್ವಜ್ಞ” ಎಂಬ ಮಾತೇ ಸಾಕು.

ಹೀಗೆ ಪ್ರತಿದಿನವೂ ಹೆಚ್ಚುತ್ತಿರುವ ಸಾಲದ ಕಿರುಕುಳದಿಂದ ರೈತರನ್ನು ಕಾಪಾಡಬೇಕೆಂಬ ಉದ್ದೇಶದಿಂದ ಸರ್ಕಾರದವರು ಅನೇಕ ಪ್ರಯತ್ನಗಳನ್ನು ನಡೆಸಿರುವರು. ಅವುಗಳನ್ನು ವಿಮರ್ಶೆ ಮಾಡುವುದಕ್ಕೆ ಮೊದಲು ಒಂದು ಮುಖ್ಯವಾದ ವಿಷಯವನ್ನು ಗಮನಿಸಬೇಕಾಗುವುದು. ಸಾಲ ಮಾಡಿ ಯಾವುದಾದರೂ ಆದಾಯ ಬರತಕ್ಕ ರೀತಿಯಲ್ಲಿ ವೆಚ್ಚ ಮಾಡಿದ್ದರೆ. ಆ ಸಾಲವನ್ನು ತೀರಿಸುವಲ್ಲಿ ಯಾವ ತೊಂದರೆಯೂ ಇರುವುದಿಲ್ಲ. ಅನಾವಶ್ಯಕವಾದ ದುಂದುಗಾರಿಕೆ ಮಾಡಿದ ಸಾಲ ಜನರನ್ನು ಬೆಂಕಿಯಂತೆ ಸುಡುವುದು. ನಮ್ಮ ದೇಶದ ಸಾಲದಲ್ಲಿ ಹೆಚ್ಚು ಭಾಗವು ನಿರರ್ಥಕವಾದ ಸಾಲವಾಗಿರುವುದರಿಂದ ಬಹಳ ಆತಂಕಕ್ಕೆ ಕಾರಣವಾಗಿದೆ. ಜನರಲ್ಲಿ ಸಾಲ ಮಾಡುವ ಚಾಳಿಯು ತಪ್ಪಬೇಕಾದರೆ ಜ್ಞಾನ ಪ್ರಚಾರವಾಗಬೇಕು. ಈ ಉದ್ದೇಶದಿಂದ ಸರ್ಕಾರದವರು ಪ್ರೈಮರಿ ವಿದ್ಯಾಭ್ಯಾಸದಲ್ಲಿಯೇ ಇದರೆ ಬಗ್ಗೆ ಹೆಚ್ಚಿನ ಮಾಹಿತಿ ನೀಡುವ ವಿಶೇಷ ಪ್ರಯತ್ನ ಮಾಡುತ್ತಿದ್ದರೂ ಅದು ಫಲಕಾರಿಯಾಗಿಲ್ಲ. ಶಿಕ್ಷಣ ಅದರಲ್ಲಿಯೂ ವಯಸ್ಕರ ಶಿಕ್ಷಣದ ಅಭಿವೃದ್ಧಿಯ ಪ್ರಯತ್ನಗಳು ಹೆಚ್ಚಾಗಿ ನಡೆಯಬೇಕು. ಇದರ ಜೊತೆಗೆ ಜನರಲ್ಲಿ ಮಿತವ್ಯಯ ಬುದ್ಧಿಯನ್ನು ಹೆಚ್ಚಿಸಿ ಕಷ್ಟಕಾಲಕ್ಕೆ ಸಹಾಯವಾಗುವಂತೆ ಸ್ವಲ್ಪ ಹಣವನ್ನು ಶೇಖರಿಸಲು ಸೇವಿಂಗ್ಸ್ ಬ್ಯಾಂಕುಗಳನ್ನು ಏರ್ಪಡಿಸಬೇಕು. ನಮ್ಮ ದೇಶದಲ್ಲಿ ಅನೇಕ ಖಾಸಗಿ ಸರ್ಕಾರಿ ಮತ್ತು ಪೋಸ್ಟಾಫೀಸು ಸೇವಿಂಗ್ಸ್ ಬ್ಯಾಂಕುಗಳಿದ್ದರೂ ಅವು ತೀರಾ ಕಡಿಮೆ. ಈ ಬ್ಯಾಂಕುಗಳಲ್ಲಿ ಕೂಡಿಸಿದ ಹಣವನ್ನು ಆದಾಯ ಬರುವ ಕೈಗಾರಿಕೆ ಮುಂತಾದ ಉದ್ಯಮಗಳಲ್ಲಿ ಉಪಯೋಗಿಸಬೇಕು. ಈಗ ಜಾರಿಯಲ್ಲಿರುವ ಸಿವಿಲ್ ಕಾನೂನುಗಳಿಂದ ಅನೇಕ ತೊಂದರೆಗಳಿವೆ. ರೈತನಿಗೆ ಅನ್ಯಾಯವಾಗಿ ಬಡ್ಡಿ ಹಾಕಿ ಆತನಿಂದ ಆಸ್ತಿಪಾಸ್ತಿಗಳನ್ನು ಕಸಿದುಕೊಳ್ಳಲು ಇರತಕ್ಕ ಅವಕಾಶವನ್ನು ತಪ್ಪಿಸಬೇಕು. ಈ ಉದ್ದೇಶದಿಂದ ಬ್ರಿಟೀಷ್ ಸರ್ಕಾರದವರು ೧೮೭೯ರಲ್ಲಿ “ಡೆಕನ್ ಅಗ್ರಿಕಲ್ಚರಿಸ್ಟ್ ರಿಲೀಫ್ ಆಕ್ಟ್” ಎಂಬ ಕಾನೂನನ್ನು, ೧೯೧೮ರಲ್ಲಿ “Vsurrous Loans Act” ಎಂಬ ಸಮಿತಿಯವರು ತಿಳಿಸಿರುವಂತೆ ಅವುಗಳಿಂದ ಏನೂ ಉಪಯೋಗವಿಲ್ಲ. ಪಂಜಾಬ್ ಸರ್ಕಾರದವರು ಜಾರಿ ಮಾಡಿರುವ ಪಂಜಾಜ್ ಅಕೌಂಟ್ಸ್ ಬಿಲ್ ಎಂಬ ಮಸೂದೆಯ ಪ್ರಕಾರ ಎಲ್ಲಾ ಸಾಹುಕಾರರೂ ತಮ್ಮ ಲೆಕ್ಕಗಳನ್ನು ಸರಿಯಾಗಿ ಪುಸ್ತಕಗಳಲ್ಲಿ ಬರೆಯಬೇಕೆಂದೂ, ಆರು ತಿಂಗಳಿಗೆ ಒಂದು ಸಾರಿಯಾದರೂ ಸಾಲಗಾರರಿಗೆ ಅವರವರ ಸಾಲದ ಲೆಕ್ಕಚಾರವನ್ನು ತೋರಿಸುವ ರಸೀದಿಯನ್ನು ಕೊಡುವಂತೆ ಏರ್ಪಡಿಸಬೇಕೆಂದೂ ಮತ್ತು ಸಾಹುಕಾರರು ಲೈಸೆನ್ಸ್ ಪಡೆಯಬೇಕೆಂದೂ ವಿಧಾಯಕ ಮಾಡಿದ್ದರು, ಇಂಡಿಯಾ ಸರಕಾರದ (Central Banking) ಸಮಿತಿಯವರು ಅಭಿಪ್ರಾಯಪಟ್ಟಿರುವಂತೆ ನಮ್ಮಲ್ಲಿ ಬೇರೂರಿರುವ ಸಾಲವೆಂಬ ವಿಷವೃಕ್ಷವನ್ನು ನಿರ್ಮೂಲನೆ ಮಾಡುವುದು ಅವಶ್ಯಕವಾಗಿದೆ. ಇದಕ್ಕಾಗಿ ಸಾಹುಕಾರರಿಗೂ ಸಾಲಗಾರರಿಗೂ ರಾಜಿ ಮಾಡಿಸಿ (Debt Conciliation) ಸಾಲದ ಋಣವನ್ನು ಬಗೆಹರಿಸಲು ಅಧಿಕಾರಿಗಳು ಪ್ರಯತ್ನಪಡುವುದರಿಂದ ವಿಶೇಷ ಪ್ರಯೋಜನವುಂಟೆಂದು ಸೂಚಿಸಿರುತ್ತಾರೆ. ರೈತರ ವಿಷಮ ಸ್ಥಿತಿಯನ್ನು ಸಾಹುಕಾರರಿಗೆ ತಿಳಿಸಿ, ಅವರ ದಯದಾಕ್ಷಿಣ್ಯಗಳನ್ನು ಸವಿಮಾತುಗಳಿಂದ ಜಾಗೃತಗೊಳಿಸಿ, ಸಾಲಗಾರರಿಗೆ ಸಹಾಯ ಮಾಡಬಹುದು. ಇದಕ್ಕಾಗಿ ಪ್ರತಿಯೊಂದು ಸರ್ಕಾರದವರೂ ಯೋಗ್ಯರೂ ಸುಶಿಕ್ಷಿತರೂ ವಾಕ್ಪಟುಗಳೂ ಆದ ಅಧಿಕಾರಿಗಳನ್ನು ಜನಗಳಲ್ಲಿ ಜ್ಞಾನ, ಪ್ರಚಾರ ಕಾರ್ಯಕ್ಕೆ ನೇಮಿಸಬೇಕು. ಸಾಲದ ಮೊಬಲಗು ನಿರ್ಧರಿಸಿ ಅದನ್ನು ಕಂತುಗಳಲ್ಲಿ ತೀರಿಸಲು ಅನುಕೂಲವಾಗುವಂತೆ ಮಾಡಬೇಕು. ಕರ್ನಾಟಕ ಸರ್ಕಾರದವರು ಅಗ್ರಿಕಲ್ಚರಲ್ ರಿಲೀಫ್ ಆಕ್ಟ್ ಎಂಬ ಕಾನೂನನ್ನು ಜಾರಿ ಮಾಡಿರುವುದೂ “Debt Conciliation Boards” ಎಂಬ ಸಾಲದ ರಿಯಾಯಿತಿ ಸಮಿತಿಗಳನ್ನು ಏರ್ಪಡಿಸಿರುವುದೂ ಒಂದು ಹೆಮ್ಮೆಯ ವಿಷಯ. ಕೆಲವು ವರ್ಷಗಳಿಂದೀಚೆಗೆ ನಮ್ಮ ದೇಶದಲ್ಲಿ ಜಮೀನು ರೈತರಿಂದ ಸಾಹುಕಾರರ ಕೈಗೆ ಸೇರುತ್ತಿರುವುದು ಬಹಳ ವಿಷಾದಕರವಾದ ಸಂಗತಿ, ರೈತರು ಸಾಲದಲ್ಲಿ ಮುಳುಗಿ ತಮ್ಮ ಸರ್ವಸ್ವವನ್ನೂ ಸಾಹುಕಾರರ ಪಾಲುಮಾಡಿ ತಬ್ಬಲಿಗಳಾಗಿರುವುದರಿಂದ ದೇಶದ ಆರ್ಥಿಕ ನೆಮ್ಮದಿಗೆ ಭಂಗವಾಗುತ್ತದೆ. ರೈತರು ದೇಶವೆಂಬ ಮನೆಗೆ ಕಂಬಗಳಿದ್ದಂತೆ. ಅವರ ಕಷ್ಟವನ್ನು ತಪ್ಪಿಸಬೇಕೆಂದು ಪಂಜಾಬ ಸರ್ಕಾರದವರು “Land Alenation Act ” ಎಂಬ ಮಸೂದೆಯ ಪ್ರಕಾರ ಸಾಹುಕಾರರು ಜಮೀನನ್ನು ರೈತರಿಂದ ಕೊಳ್ಳುವುದಕ್ಕಾಗಲೀ ಅಥವಾ ೩೦ ವರ್ಷಗಳಿಗೆ ಜಾಸ್ತಿ ಭೋಗ್ಯ ಮಾಡಿಕೊಳ್ಳುವುದಾಗಲೀ ಅವಕಾಶವಿರುವುದಿಲ್ಲ. ಇದರಿಂದ ರೈತರನ್ನು ಸಾಹುಕಾರರ ಹಿಡಿತದಿಂದ ತಪ್ಪಿಸಿದರೂ ಸಾಹುಕಾರರಿಗೆ ಬದಲಾಗಿ ಅನುಕೂಲಸ್ಥರಾದ ರೈತರೇ ಬಡರೈತರನ್ನು “ದೊಡ್ಡ ಮೀನು ಸಣ್ಣ ಮೀನುಗಳನ್ನು ನುಂಗುವಂತೆ” ತೊಂದರೆ ಪಡಿಸಲು ಅವಕಾಶವಾಗುವುದು. ಇವುಗಳ ಜೊತೆಗೆ ಬಹುಕಾಲದಿಂದ ಸರ್ಕಾರದವರು ಕೃಷಿ ಸಾಲವನ್ನು ಕೊಡುವ ಏರ್ಪಾಡು ಮಾಡಿರುತ್ತಾರೆ. ಇದರಿಂದ ರೈತರಿಗೆ ಉಪಯೋಗವಾಗಿದ್ದರೂ ಜನಸಾಮಾನ್ಯರಲ್ಲಿ ಕೃಷಿ ಸಾಲವೆಂದರೆ ಬೇಸರ ಕಂಡು ಬರುತ್ತಿರುವುದು. ಇದಕ್ಕೆ ಸರ್ಕಾರದಲ್ಲಿ ಜನಗಳಿಗಿರುವ ಅನುಮಾನ, ಸಾಲ ವಸೂಲು ಮಾಡುವುದರಲ್ಲಿ ಅಧಿಕಾರಿಗಳ ಕಾಠಿಣ್ಯ, ಸಾಲ ಮಂಜೂರು ಮಾಡುವುದರಲ್ಲಿ ಅನಾವಶ್ಯಕವಾದ ಕಾಲ ವಿಳಂಬ, ಸಣ್ಣ ಅಧಿಕಾರಿಗಳ ಕಿರುಕುಳ ಮತ್ತು ಲಂಚಕೋರತನ ಇವುಗಳು ಮುಖ್ಯ ಕಾರಣವೆಂದು ಹೇಳಬಹುದು. ಅಲ್ಲದೆ ಸರ್ಕಾರದವರೊಬ್ಬರೇ ಎಷ್ಟೇ ಪ್ರಯತ್ನಪಟ್ಟರೂ ರೈತರಿಗೆ ಬೇಕಾಗುವ ಅನುಕೂಲಗಳನ್ನು ಒದಗಿಸುವುದೂ ಅಸಾಧ್ಯ. ಸರ್ಕಾರವು ರೈತರಿಗೆ ಕೊಡುವ ಸಾಲವು “ಹೊಳೆಯಲ್ಲಿ ಹುಣಸೆಹಣ್ಣು ಕದಡಿದಂತೆ” ಬಹುಮಟ್ಟಿಗೆ ಫಲಕಾರಿಯಾಗುತ್ತಿಲ್ಲ ಎನ್ನಬಹುದು.

ರೈತರಿಗೆ ನಿಜವಾಗಿಯೂ ಸಹಾಯಮಾಡಿ ಅವರನ್ನು ಸಾಲದ ಹೊರೆಯಿಂದ ತಪ್ಪಿಸಬೇಕಾದರೆ ಸಹಕಾರ ಸಂಘಗಳು ಬಹು ಮಟ್ಟಿಗೆ ನೆರವಾಗುವುದೆಂದು ಧಾರಾಳವಾಗಿ ಹೇಳಬಹುದು. “ಹೆಸರಿಲ್ಲದ ರೋಗಕ್ಕೆ ಹೀರೆಮದ್ದು” ಎಂಬಂತೆ ಪರಸ್ಪರ ಸಹಕಾರ ಸಂಘಗಳು ರೈತರ ಕಷ್ಟಕ್ಕೆ ಸಂಜೀವಿನಿ ಎಂದು ಹೇಳಬಹುದು. ಸಹಕಾರ ತತ್ವವು ಅಮೋಘವಾದದ್ದು. ಅಲ್ಪ ಚೈತನ್ಯವುಳ್ಳ ರೈತರು ತಮ್ಮಲ್ಲಿರುವ ಸ್ವಲ್ಪ ಹಣವನ್ನು ಕೊಟ್ಟು ಸದಸ್ಯರಾಗಿ ಒಂದು ಸಂಘವನ್ನೇರ್ಪಡಿಸಿಕೊಂಡರೆ, “ಸಂಘವೇ ಶಕ್ತಿ” ಎಂಬಂತೆ ತಮ್ಮ ಸ್ಥಿತಿಯನ್ನು ಉತ್ತಮಪಡಿಸಿಕೊಳ್ಳಲು ಅನುಕೂಲವಾಗುವುದು. “ಹನಿ ಗೂಡಿದರೆ ಹಳ್ಳ, ತೆನೆ ತೆನೆ ಗೂಡಿದರೆ ಬಳ್ಳ” ಎಂಬಂತೆ ರೈತರಿಂದ ಕೂಡಿಸಲ್ಪಟ್ಟ ಹಣದಿಂದ ಉಪಯೋಗವಾದ ಕೆಲಸಗಳಿಗೆ ಸಾಲವನ್ನು ಸುಲಭ ರೀತಿಯಲ್ಲಿ ಕೊಟ್ಟು ರೈತರನು ಸಾಹುಕಾರರ ಬಲೆಗೆ ಬೀಳದಂತೆ ಮಾಡಬಹುದು. ಅಲ್ಲದೆ ರೈತರ ವ್ಯಾಪಾರವನ್ನು ಉತ್ತಮಪಡಿಸಿ ಹೆಚ್ಚು ಲಾಭ ಬರುವಂತೆ ಮಾಡುವುದಕ್ಕೂ, ಗ್ರಾಮಗಳಿಗೆ ಬೇಕಾಗುವ ವೈದ್ಯ ಸಹಾಯವನ್ನೊದಗಿಸುವುದಕ್ಕೂ, ಮಿತವ್ಯಯ ಬುದ್ಧಿಯನ್ನು ಹೆಚ್ಚಿಸಿ ಹಳ್ಳಿಗರ ಜೀವನದ ಅಂತಸ್ಥನ್ನು ಉತ್ತಮಗೊಳಿಸುವುದಕ್ಕೂ ಮತ್ತು ವ್ಯಾಜ್ಯ ವ್ಯವಹಾರಗಳನ್ನು ಬಗೆಹರಿಸಿ ಶಾಂತಿಯನ್ನು ನೆಲೆಗೊಳಿಸುವುದಕ್ಕೂ ಸಹಕಾರ ಸಂಘಗಳು ಸಹಕಾರಿಯಾಗಬಹುದು. ಹೀಗಿದ್ದರೂ ನಮ್ಮ ದೇಶದಲ್ಲಿ ಸಹಕಾರ ಸಂಘಗಳು ತೃಪ್ತಿಕರವಾಗಿ ಕೆಲಸ ಮಾಡಿಲ್ಲ. ಕರ್ನಾಟಕ ರಾಜ್ಯದಲ್ಲಿ ೧೯೩೪-೩೫ರಲ್ಲಿ ಸುಮಾರು ೧,೯೯೯ ಸಂಘಗಳಿದ್ದವು. ಇವುಗಳಲ್ಲಿ ೧,೨೬,೨೭೭ ಸದಸ್ಯರಿದ್ದರು. ೧೯೪೪-೪೫ರಲ್ಲಿ ಸುಮಾರು ೩,೮೦೬ ಸಂಘಗಳಿದ್ದವು, ೧೯೬೦೬೧ ಸೊನ್ಸರ್ ಪ್ರಕಾರ ಸುಮಾರು ೮,೩೦೧ ಸಹಕಾರ ಸಂಘಗಳಿದ್ದರೆ ೧೯೯೧-೯೨ರಲ್ಲಿ ಇವುಗಳ ಸಂಖ್ಯೆ ೧೫,೩೮೦ಕ್ಕೆ ಹೆಚ್ಚಿದೆ. ಇದನ್ನು ನಮ್ಮ ದೇಶದ ಜನಸಂಖ್ಯೆಗೆ ಹೋಲಿಸಿದರೆ ಸಹಕಾರದ ವಿಚಾರದಲ್ಲಿ ನಮ್ಮ ನಾಡು ಎಷ್ಟು ಹಿಂದುಳಿದೆದೆ ಎಂದು ಗೊತ್ತಾಗುವುದು. ಇನ್ನೊಂದು ವಿಷಯ ನಮ್ಮ ರೈತರ ಮೇಲಿರುವ ಸಾಲದ ಹೊರೆಯನ್ನು ಸಾಮಾನ್ಯ ಪರಸ್ಪರ ಸಹಾಯ ಸಂಘಗಳು ಇಳಿಸಲಾರವು. ಅಲ್ಲದೆ ಸೊಸೈಟಿಗಳು ರೈತರಿಗೆ ಬೇಕಾಗುವ ದೀರ್ಘಾವಧಿ ಸಾಲಗಳನ್ನು ಒದಗಿಸಲಾರವು. ಆದುದರಿಂದಲೇ ಜಮೀನು ಅಭಿವೃದ್ಧಿ ಪಡಿಸುವ ಬ್ಯಾಂಕುಗಳನ್ನು ಸ್ಥಾಪಿಸುವ ಅವಶ್ಯಕತೆಯು ಹೆಚ್ಚುತ್ತಿದೆ. ರೈತರ ಸಾಲದ ಹೊರೆಯನ್ನು ಇಳಿಸುವುದು ಜಮೀನಿಗೆ ಬೇಕಾಗುವ ಸಾಲವನ್ನೊದಗಿಸುವುದು. ಈ ಬ್ಯಾಂಕುಗಳ ಉದ್ದೇಶ. ಈ ರೀತಿಯ ಬ್ಯಾಂಕುಗಳು ನಮ್ಮ ದೇಶದಲ್ಲಿ ಹೆಚ್ಚುತ್ತಿರುವುದು ಸಂತೋಷದ ವಿಷಯ. ನಮ್ಮ ರಾಜ್ಯದಲ್ಲಿ ಒಂದು ಕೇಂದ್ರ ಬ್ಯಾಂಕನ್ನು ಸ್ಥಾಪಿಸಿ, ಅನೇಕ ತಾಲ್ಲೂಕುಗಳಲ್ಲಿ ಅದರ ಶಾಖೆಗಳನ್ನು ಏರ್ಪಡಿಸಿ ರೈತರಿಗೆ ಸಹಾಯ ಮಾಡುತ್ತಿರುವುದು ಎಲ್ಲರಿಗೂ ತಿಳಿದ ವಿಷಯ. ಆದರೆ ಈ ಪ್ರಯತ್ನ ಇನ್ನೂ ಹೆಚ್ಚಾಗಿ ನಡೆಯಬೇಕು. ಇದರ ಜೊತೆಗೆ ರೈತರಲ್ಲಿ ಜೀವವಿಮಾಪದ್ದತಿ (Life Insurance)ಯನ್ನು ಬಳಕೆಗೆ ತರುವುದು ಉತ್ತಮ. ಆದರೆ ಪಾಲಿಸಿಯ ಕಂತುಗಳು ಸ್ವಲ್ಪವಾಗಿರಬೇಕು. ಸಹಕಾರ ಸಂಘಗಳು ಅಭಿವೃದ್ಧಿಯಾಗಬೇಕಾದರೆ ಮತ್ತು ರೈತರಿಗೆ ಅವುಗಳಿಂದ ನಿಜವಾಗಿಯೂ ಉಪಯೋಗವಾಗಬೇಕಾದರೆ, ಜನಗಳಲ್ಲಿ ತಿಳಿವಳಿಕೆ ಹೆಚ್ಚಾಗಬೇಕು. ಅನೇಕ ಹಳ್ಳಿಗಳಲ್ಲಿ ಪರಸ್ಪರ ಸಹಾಯ ಸಂಘಗಳ ಲೆಕ್ಕಪತ್ರಗಳನ್ನು ಇಡಬಲ್ಲ ವಿದ್ಯಾವಂತರು ವಿರಳ ಇದ್ದರೂ ನಿಸ್ಸಹತೆಯಿಂದ ಕೆಲಸ ಮಾಡುವವರು ಕಡಿಮೆ. ಸಂಘದ ಹಣವನ್ನು ಸ್ವಾರ್ಥಕ್ಕಾಗಿ ಉಪಯೋಗಿಸುವವರೇ ಹೆಚ್ಚು. ಅಲ್ಲದೆ ರೈತರು ತಾವು ಪಡೆದ ಹಣವನ್ನು ಸಕಾಲಕ್ಕೆ ಪಾವತಿ ಮಾಡಿದರೆ ತಮಗೇ ಒಳ್ಳೆಯದೆಂಬುದನ್ನು ಅರಿಯರು. ಇದನ್ನೆಲ್ಲಾ ನಿವಾರಿಸಲು ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ವಿದ್ಯಾ ಪ್ರಚಾರವೇ ರಾಜಮಾರ್ಗ, ಸಾಲ ಮಾಡುವುದರಿಂದ ತಮ್ಮ ಏಳಿಗೆಗೆ ಭಂಗ ಬರುವುದೆಂದು, ಒಂದು ವೇಳೆ ಸಾಲ ಮಾಡಿದರೂ ಹಣವನ್ನು ದುಂದು ವೆಚ್ಚ ಮಾಡದೆ ಉಪಯೋಗವಾದ ರೀತಿಯಲ್ಲಿ ಖರ್ಚುಮಾಡುವುದರಿಂದ ಸಾಲವನ್ನು ಸುಲಭವಾಗಿ ತೀರಿಸಬಹುದೆಂದು ಮನದಟ್ಟಾಗಬೇಕು. ಒಟ್ಟಿನಲ್ಲಿ ತಮ್ಮ ಬಾಳಿನ ಉನ್ನತಿ ಅಥವಾ ಅವನತಿಯು ತಮ್ಮ ಕೈಯಲ್ಲೇ ಇರುವುದೆಂಬ ದೃಢವಾದ ನಂಬಿಕೆಯು ಅವರಲ್ಲಿ ಮೂಡಬೇಕು. ಇದೇ ಅವರ ಬಡತನದ ನಿವಾರಣೆಗೆ ಸರಿಯಾದ ಚಿಕಿತ್ಸೆ.

ವೈದ್ಯ ಸಹಾಯ, ವಿದ್ಯಾಭ್ಯಾಸ, ಜನಜಾಗೃತಿ

ಇದುವರೆಗೂ ಗ್ರಾಮಾಂತರಗಳ ಹೀನಸ್ಥಿತಿಯನ್ನೂ ಅವುಗಳ ಏಳಿಗೆಗೆ ಬೇಕಾದ ಮಾರ್ಗಗಳನ್ನೂ ಕುರಿತು ಸ್ವಲ್ಪ ಮಟ್ಟಿಗೆ ವಿಮರ್ಶಿಸಿದೆವು. ಅಲ್ಲದೆ ರೈತರ ತಲೆಯ ಮೇಲೆ ದೊಡ್ಡ ಬೆಟ್ಟದಂತಿರುವ ಸಾಲದ ಹೊರೆಯನ್ನೂ. ಅದರ ಕಾರಣಗಳನ್ನೂ ಮತ್ತು ಅದನ್ನಿಳಿಸಲು ನೆರವಾಗಬಹುದಾದ ಕೆಲವು ಪರಿಹಾರಗಳನ್ನೂ ಯೋಚಿಸಿದೆವು. ಎಲ್ಲಕ್ಕಿಂತಲೂ ಮಿಗಿಲಾಗಿ ನಮ್ಮ ರೈತನ ಜೀವನಯಾತ್ರೆ ಸುಗಮವಾಗಿ ನಡೆಯಬೇಕಾದರೆ ಅವನ ಶರೀರದಲ್ಲಿ ಸರಿಯಾದ ಬಲವಿರಬೇಕು. ಒಂದು ಜನಾಂಗದ ಶಕ್ತಿಗೆ ಅದರೆ ಕಾರ್ಯಶಕ್ತಿಯೇ ತಳಹದಿಯಾಗಿರುತ್ತದೆ. ನಮ್ಮ ದೇಶದ ಜನಗಳ ಬಡತನವು ಎಂತಹ ಭೀಕರ ದೃಶ್ಯವೆಂಬುದನ್ನು ಹಿಂದೆಯೇ ನೋಡಿದೆವು. ಈ ಬಡತನಕ್ಕೆ ಪ್ರಬಲವಾದ ಕಾರಣ ಅನೇಕ ಜನಗಳು ಒಂದು ಹೊತ್ತು ಊಟಕ್ಕೆ ಕೂಡ ಮಾರ್ಗವಿಲ್ಲದೆ ನರಳುತ್ತಿರುವರೆಂದು ಧಾರಾಳವಾಗಿ ಹೇಳಬಹುದು. “ಆರೋಗ್ಯವೇ ಭಾಗ್ಯ” ಎಂಬುದು ಬಹು ದೊಡ್ಡ ಮಾತು. ಐಶ್ಚರ್ಯಕ್ಕಿಂತಲೂ ದೇಹಾರೋಗ್ಯವು ಉತ್ತಮವಾದ ಸಂಪತ್ತು. ಎಷ್ಟೇ ಐಶ್ವರ್ಯವಿದ್ದರೂ ಶರೀರದಲ್ಲಿ ನೆಮ್ಮದಿಯಿಲ್ಲದ ಜನಗಳಿಗೆ ಸುಖವಿಲ್ಲ. ವಿಶೇಷವಾಗಿ ನಮ್ಮ ಜನಗಳು ಬಡತನದಿಂದ ಹೊಟ್ಟೆಗಿಲ್ಲದೆ ಅನೇಕ ರೋಗ ರುಜಿನಗಳಿಂದ ನರಳುತ್ತಿರುತ್ತಾರೆ.

ಭಾರತದ ಕೃಷಿ ಇಲಾಖೆ ಹಾಗೂ ರಾಜ್ಯ ಸರ್ಕಾರದ ಕೃಷಿ ಇಲಾಖೆಯವರು ನಮ್ಮ ದೇಶದ ಆರ್ಥಿಕ ಅಭಿವೃದ್ದಿಗೂ ಜನಗಳ ಆರೋಗ್ಯಕ್ಕೂ ಬಹು ಸಮೀಪವಾದ ಸಂಬಂಧವಿರುವುದೆಂದು ಒತ್ತಿ ಹೇಳಿರುವರು ಇದನ್ನು ಮನಗಂಡು ಮುಂದುವರಿಯಬೇಕಾಗಿದೆ.