ಪ್ರಪಂಚದಲ್ಲಿ ಮಾನವನ ಆರ್ಥಿಕ ಉದ್ಯಮಗಳನ್ನು ಬಂಡವಾಳ ಪ್ರಭುತ್ವ ಸಮಾಜ ಸಮತಾವಾದ, ಸಹಕಾರ ಎಂದು ಮೂರು ಪಂಗಡಗಳಾಗಿ ಅರ್ಥಶಾಸ್ತ್ರಜ್ಞರು ವಿಂಗಡಿಸಿದ್ದಾರೆ, ಸಹಕಾರ ಪದ್ದತಿಯು ಈ ಅಧ್ಯಾಯದ ಮುಖ್ಯ ವಿಷಯ ಆದರೂ ಈ ತತ್ವದ ವಿಶಿಷ್ಟ ಲಕ್ಷಣಗಳನ್ನು ತಿಳಿದುಕೊಳ್ಳಬೇಕಾದರೆ ಉಳಿದ ಎರಡು ವ್ಯವಸ್ಥಾಕ್ರಮದ ಸ್ವರೂಪವನ್ನು ವಿಚಾರ ಮಾಡಬೇಕು.

ಹೆಚ್ಚು ಹಣ ಸಂಪಾದನೆ ಮಾಡುವುದೇ ಬಂಡವಾಳ ಪ್ರಭುತ್ವದ ಮುಖ್ಯ ಧ್ಯೇಯ. ಕೇಂದ್ರೀಕೃತಾಧಿಕಾರ, ಅಸಾಧ್ಯ ಪೈಪೋಟಿ, ಹೆಚ್ಚು ಲಾಭದ ಆಸೆ, ಕೇವಲ ವ್ಯಕ್ತಿಗತವಾದ ಸ್ವಾರ್ಥಪರತೆ- ಮುಂತಾದುವು ಇದರ ಮುಖ್ಯ ಲಕ್ಷಣಗಳು, ಧನಿಕರು ಹೆಚ್ಚು ಉತ್ಪತ್ತಿ ಇಲ್ಲದ ದುರ್ಬಲರನ್ನು ಉಪಯೋಗಿಸಿಕೊಂಡು, ಕೋಟ್ಯಾಧೀಶ್ವರರಾಗಲು ಇದರಲ್ಲಿ ಅವಕಾಶವಿದೆ. ಮಾನವನಶೀಲ, ಸ್ವಭಾವಾದಿ ಗುಣಗಳ ಕೈವಾಡಕ್ಕೆ ಇಲ್ಲೆ ಹೆಚ್ಚು ಅವಕಾಶವಿಲ್ಲ, ಸ್ವಾರ್ಥಪರತೆಯ ಬಂಡವಾಳದ ಅಡಿಗಲ್ಲು, ಮತ್ತೊಬ್ಬರ ದುಡಿಮೆಯ ಫಲವನ್ನು ಅನುಭವಿಸುವುದೇ ಇದರ ನೀತಿ. ಬಂಡವಾಳಗಾರರ ಸಂಸ್ಥೆಗಳು ಪ್ರಪಂಚದ ಅನೇಕ ಭಾಗಗಳಲ್ಲಿ ಇಂದು ಪ್ರಾಮುಖ್ಯತೆಗೆ ಬಂದಿವೆ. ಮತ್ತು ಅಲ್ಲಿಯ ಆರ್ಥಿಕ ಬೆಳವಣಿಗೆಗೆ ಕೂಡ ಇವು ಸಹಾಯ ಮಾಡುತ್ತಿವೆ.

ಇಂತಹ ಸಂಸ್ಥೆಗಳು ಹೆಚ್ಚಿದಂತೆಲ್ಲಾ ಬಂಡವಾಳಗಾರರಿಗೂ ಶ್ರಮಜೀವಿಗಳಿಗೂ ಘರ್ಷಣೆಯುಂಟಾಗಿ ಹೋರಾಟವು ಪ್ರಾರಂಭವಾಗುತ್ತದೆ. ಲಾಭದ ಹೆಚ್ಚು ಭಾಗವನ್ನು ಬಂಡವಾಳಗಾರರು ತೆಗೆದುಕೊಳ್ಳುವುದರಿಂದ ಹೋರಾಟಕ್ಕೆ ಕಾರಣವಾಗಿದೆ. ಈ ಎರಡು ಪಂಗಡಗಳ ವೈಷಮ್ಯವು ದಿನೇ ದಿನೇ ಹೆಚ್ಚುತ್ತಿದೆ. ಇದರಿಂದ ಮಾನವನ ನೈತಿಕ ಮಾರ್ಗವು ಅಧೋಗತಿಗೆ ಇಳಿದು ವ್ಯಕ್ತಿ ಗೌರವವು ಹಾಳಾಗುತ್ತದೆ. ಶ್ರಮಜೀವಿಗಳ ಜೀವನವು ಬಹಳ ಕಷ್ಟಕ್ಕೆ ಈಡಾಗುವುದಲ್ಲದೆ ಜಿಗುಪ್ಸೆಯನ್ನುಂಟು ಮಾಡುತ್ತದೆ. ಈ ತೊಂದರೆಗಳ ನಿವಾರಣೆಗೋಸ್ಕರ ಒಂದು ವಿಧವಾದ ಆರ್ಥಿಕ ವ್ಯವಸ್ಥೆಯನ್ನು ಮಾಡಲಾಯಿತು. ಇದನ್ನೇ ಸಮಾಜ ಸಮತಾವಾದ ಎಂದು ಹೇಳಲಾಗಿದೆ. ಈ ವ್ಯವಸ್ಥೆಯಲ್ಲಿ ಬಂಡವಾಳವಿದ್ದರೂ ಅದು ಸಮಾಜಕ್ಕೆ ಸೇರಿದುದು. ಸಮಾಜದ ಏಳಿಗೆಯ ಹಿತದಲ್ಲಿ ಎಲ್ಲರೂ ಒಗ್ಗಟ್ಟಾಗಿ ದುಡಿದು ಲಾಭವನ್ನು ಸಮನಾಗಿ ಹಂಚಿಕೊಳ್ಳುವುದೇ ಇದರ ನೀತಿ. “ಸಮಾಜದ ಏಳಿಗೆಯೇ ಎಲ್ಲರ ಏಳಿಗೆ, ಎಲ್ಲರ ಏಲ್ಲರ ಏಳಿಗೆಯೇ ಸಮಾಜದ ಏಳಿಗೆ”. ಎಂಬುದು ಇದರ ಮುಖ್ಯತತ್ವ. ಈ ಕ್ರಮದಲ್ಲಿ ಮಾನವನ ಏಳಿಗೆಗೆ ಮುಖ್ಯವಾದ ಸ್ವಸಾಮರ್ಥ್ಯ, ಸ್ವಶಕ್ತಿ, ಪ್ರೀತಿ, ದಯೆ, ಮುಂತಾದ ಶ್ರೇಷ್ಠ ಗುಣಗಳ ಪ್ರಭಾವಕ್ಕೆ ಹೆಚ್ಚು ಅವಕಾಶವಿಲ್ಲ, ನೈತಿಕ ಮತ್ತು ಕುಶಲತೆಯ ಅಭಿವೃದ್ಧಿಗೆ ಇಲ್ಲಿ ಸ್ಥಳವಿಲ್ಲ.

ಮೇಲೆ ವಿವರಿಸಿದ ಎರಡು ಕ್ರಮದಲ್ಲಿಯೂ ಅನೇಕ ಲೋಪದೋಷಗಳಿವೆ. ಇವುಗಳನ್ನು ಸಾಧ್ಯವಾದ ಮಟ್ಟಿಗೆ ನಿವಾರಣೆ ಮಾಡಿ ಅವುಗಳಲ್ಲಿರುವ ಗುಣವನ್ನು ಆಚರಣೆಯಲ್ಲಿ ತರುವುದಕ್ಕಾಗಿ ಸಹಕಾರ ತತ್ವ ರಚನೆಯಾಯಿತೆಂದು ಹೇಳಬಹುದು. “ಸಹಕಾರ” ಎಂದರೆ ಒಟ್ಟುಗೂಡಿ ಕೆಲಸ ಮಾಡುವುದು ಎಂದರ್ಥ. ಮಾನವನ ಬದುಕನ್ನು ಉತ್ತಮಪಡಿಸುವುದಕ್ಕೆ ಸಹಕಾರವು ಬಹಳ ಉತ್ತಮವಾದ ಮಾರ್ಗ. ಈ ಮಾರ್ಗದಲ್ಲಿ ಹೆಚ್ಚು ಹಣ ಸಂಪಾದನೆಗೆ ಅವಕಾಶವಿದ್ದರೂ ಬಂಡವಾಳ ಪ್ರಭುತ್ವದಲ್ಲಿರುವಂತೆ ಪೈಪೋಟಿ ಇಲ್ಲ. ಎಲ್ಲರೂ ಒಗ್ಗಟ್ಟಾಗಿ ಕೆಲಸಮಾಡಿದರೂ, ಪ್ರತಿಯೊಬ್ಬರ ಸ್ವಸಾಮರ್ಥ್ಯ ಮತ್ತು ಸ್ವಶಕ್ತಿಯ ಪ್ರಭಾವವನ್ನು ತೋರಿಸುವುದಕ್ಕೆ ಅವಕಾಶವಿದೆ. ಒಬ್ಬನಿಗಾಗಿ ಎಲ್ಲರೂ. ಎಲ್ಲರಿಗಾಗಿ ಒಬ್ಬನೂ ದುಡಿಯುವುದೇ ಸಹಕಾರದ ಮುಖ್ಯ ಧ್ಯೇಯ ಒಗ್ಗಟ್ಟೇ ಇದರ ಮೂಲ ಮಂತ್ರ, ಸರ್ವಸಮ ಭಾವನೆಯೇ ಇದರ ಅಡಿಗಲ್ಲು.

ಸಾಮಾಜಿಕ ಪ್ರಯೋಗಗಳಲ್ಲಿ ಸಹಕಾರವು ಅತ್ಯುತ್ತಮ ಸಾಧನವೆಂದು ಹೇಳಲಾಗಿದೆ. ಇದರಿಂದ ಸಾಮಾಜಿಕ ಮತ್ತು ಆರ್ಥಿಕ ಪದ್ಧತಿಗಳಲ್ಲಿ ಒಂದು ಬಗೆಯ ಬದಲಾವಣೆಯುಂಟಾಗುವುದಲ್ಲದೆ. ಪೂರ್ಣ ಪದಾರ್ಥಗಳ ಹಂಚಿಕೆಯ ವಿಧಾನ, ಪದಾರ್ಥಗಳನ್ನು ಉಪಯೋಗಿಸುವ ಶಕ್ತಿ ಮುಂತಾದುವು ವೃದ್ಧಿಯಾಗುವುವು. ಪದಾರ್ಥಗಳನ್ನು ಸಕಾಲದಲ್ಲಿ ಒದಗಿಸುವ ವಿಧಾನವೇ ಸಹಕಾರದ ಮುಖ್ಯ ಅಂಗ, ಪದಾರ್ಥಗಳನ್ನು ಕೊಳ್ಳುವವರಿಗೂ ಮಾರುವವರಿಗೂ ಸಾಲ ಕೊಡುವವರಿಗೂ ಸಾಲ ತೆಗೆದುಕೊಳ್ಳುವವರಿಗೂ ಬಂಡವಾಳಗಾರರಿಗೂ ಕೆಲಸಗಾರರಿಗೂ ಆಗಾಗ್ಯೆ ಉಂಟಾಗುವ ಘರ್ಷಣೆಗಳನ್ನೂ ಇತರ ಎಲ್ಲ ಸಮಸ್ಯೆಗಳನ್ನೂ ಬಗೆಹರಿಸುವುದಕ್ಕೆ ಸಹಕಾರ ತತ್ವವು ಮೂಲಾಧಾರ ಎಂದರೆ ಅತಿಶಯೋಕ್ತಿಯಾಗಲಾರದು.

ಸಹಕಾರವು ಅರ್ಥಶಾಸ್ತ್ರ ರೀತ್ಯಾ ಯಾವುದಾದರೂ ಹೊಸತತ್ವವನ್ನು ಆಚರಣೆಯಲ್ಲಿ ತಂದಿದೆಯೆ ಎಂಬುದು ಕೆಲವರ ಪ್ರಶ್ನೆ. ಆರ್ಥಿಕ ಜೀವನವು ಸಹಕಾರ ಪದ್ದತಿಯಿಂದ ಹೆಚ್ಚು ಪ್ರಯೋಜನ ಹೊಂದಿಲ್ಲವೆಂದೂ ಪೈಪೋಟಿಯು ಎಷ್ಟು ಅನುಕೂಲವನ್ನು ಕಲ್ಪಿಸುತ್ತದೋ ಸಹಕಾರವೂ ಕೂಡ ಅಷ್ಟೇ ಸಹಾಯವನ್ನು ಮಾಡುತ್ತದೆಂದೂ ಇದು ಬರೀ ಬ್ರಾಂತಿ ಎಂದೂ, ಈ ವಿಮರ್ಶೆಕಾರರು ವಾದಿಸುತ್ತಾರೆ. ಲೆರಾಯ್ ಮತ್ತು ಬೋಲೋ ಮುಂತಾದ ಪ್ರೆಂಚ್ ಅರ್ಥಶಾಸ್ತ್ರಜ್ಞರು ಸಹಕಾರವು ಬರಿಯ ಬೂಟಾಟಿಕೆ ಎಂದು ಹೇಳಿದ್ದರು. ಆದರೆ ಕಳೆದ ಒಂದುನೂರು ವರ್ಷಗಳ ಅನುಭವದಿಂದ ಸಹಕಾರ ಪದ್ದತಿಯು ನಿಜವಾಗಿ ಮಾನವನ ಆರ್ಥಿಕ ಜೀವನದ ಕಲ್ಯಾಣಕ್ಕಾಗಿ ಪ್ರಚಾರದಲ್ಲಿ ಬಂದ ಬಹು ಸುಲಭವಾದ ಮಾರ್ಗ ಎಂದು ತಿಳಿದುಬರುವುದು.

ತಯಾರಾದ ಪದಾರ್ಥಗಳನ್ನು ಕೊಳ್ಳುವವರ ದೃಷ್ಟಿಯಿಂದ ಸಹಕಾರ ತತ್ವದ ಪ್ರಯೋಜನವನ್ನು ವಿಚಾರ ಮಾಡಿದರೆ ಅದರ ಮಹಿಮೆಯು ಚೆನ್ನಾಗಿ ಗೋಚರವಾಗುವುದು. ವ್ಯಾಪಾರಗಾರರೂ ಪದಾರ್ಥಗಳನ್ನು ತಯಾರಿಸುವವರೂ ತಮ್ಮ ಪದಾರ್ಥಗಳನ್ನು ಆದಷ್ಟು ಹೆಚ್ಚು ಬೆಲೆಗೆ ಮಾರಿ ಹಣ ಸಂಪಾದನೆ ಮಾಡುವ ಆಸೆಯುಳ್ಳವರಾಗಿರುತ್ತಾರೆ. ಇದರಲ್ಲಿ ಇತರರ ದಬ್ಬಾಳಿಕೆಯೂ ಮುಖ್ಯವಾಗಿದೆ. ಇಂತಹ ಕಾಲದಲ್ಲಿ ಸಹಕಾರ ಪದ್ದತಿಯು ಪದಾರ್ಥಗಳನ್ನು ಕೊಳ್ಳುವವರಿಗೆ ನೇರವಾಗಿ ಒಂದು ವಿಧವಾದ ನಿಬಂಧನೆಯನ್ನೇರ್ಪಡಿಸಿ ಪೈಪೋಟಿಗೆ ಅವಕಾಶವಿಲ್ಲದಂತೆ ಮಾಡುತ್ತಿದೆ. ದೊಡ್ಡ ದೊಡ್ಡ ಮಳಿಗೆಗಳೂ, ಸಾಹುಕಾರರೂ, ಸಿಂಡಿಕೇಟುಗಳೂ, ಸಹಕಾರ ನಿಯಮಕ್ಕೆ ಒಳಗಾಗಿ ಪದಾರ್ಥಗಳ ಬೆಲೆಯನ್ನು ಜನಸಾಮಾನ್ಯನ ಜೀವನದ ಅಂತಸ್ಥಿನ ಸೂಕ್ತದರಕ್ಕೆ ಇಳಿಸಬೇಕಾಗುತ್ತದೆ. ಪದಾರ್ಥಗಳನ್ನು ತಯಾರಿಸುವವರೂ ಕೊಳ್ಳುವವರೂ ಒಟ್ಟಿಗೆ ಸೇರಿಪರಸ್ಪರ ಪ್ರೀತಿ ವಿಶ್ವಾಸಗಳಿಂದ ವ್ಯಾಪಾರ ಮಾಡುವಂತೆ ಮಾಡುವುದೇ ಸಹಕಾರದ ಮುಖ್ಯ ಧ್ಯೇಯ. ಮಾನವನ ಅಪಾರ ಕೆಲಸವನ್ನೂ, ಖರ್ಚನ್ನೂ ಕಡಿಮೇ ಮಾಡುವುದೇ ಸಹಕಾರ ತತ್ವದ ಮುಖ್ಯಗುಣ

[1] ಎಂಬುದಾಗಿ ಖ್ಯಾತ ಅರ್ಥಶಾಸ್ತ್ರಜ್ಞಾರಾದಂತಹ ಮಾರ್ಷಲ್ ಅವರು ಹೇಳಿದ್ದಾರೆ.

ಪ್ರತಿಯೊಬ್ಬ, ವ್ಯಕ್ತಿಯೂ, ಅವನವನಿಗೆ ಸೂಕ್ತ ತೋರಿದ ರೀತಿಯಲ್ಲಿ ಸ್ವತಂತ್ರವಾಗಿ ಕೆಲಸ ಮಾಡುವುದೇ ಹಿಂದಿನ ಆರ್ಥಿಕ ಸೂತ್ರದ ಗುರಿಯಾಗಿತ್ತು. ಈ ಕ್ರಮವನ್ನು ಅನುಸರಿಸಿ ಬಂಡವಾಳಗಾರರು ತಮಗೆ ತೋರಿದ ರೀತಿಯಲ್ಲಿ ಸ್ವತಂತ್ರವಾಗಿ ಪದಾರ್ಥಗಳನ್ನು ತಯಾರಿಸಿ ಲಾಭ ಬರುವ ರೀತಿಯಲ್ಲಿ ಮಾರುತ್ತಿದ್ದರು. ಆಗ ಪೈಪೋಟಿ ಇದ್ದರೂ, ಇದನ್ನು ಸಾಮಾಜಿಕ ಕಟ್ಟಲೆಗಳಿಂದಲೂ, ಸಾಮೂಹಿಕ ವ್ಯಾಪಾರದಿಂದಲೂ ತಡೆಗಟ್ಟಲಾಗಿತ್ತು. ಹತ್ತೊಂಬತ್ತನೆಯ ಶತಮಾನದಲ್ಲಿ ಅರ್ಥಶಾಸ್ತ್ರ ನಿಪುಣರು ಇದೇ ಕ್ರಮವನ್ನು ಪುಷ್ಟೀಕರಿಸಿದರು. ಆದರೆ ಕ್ರಮೇಣ ವ್ಯಕ್ತಿ ಸ್ವಾತಂತ್ರ್ಯಕ್ಕಿಂತ ಸಾಮೂಹಿಕ ಕಾರ್ಯಕ್ರಮವು ಉತ್ತಮವೆಂದು ತಿಳಿಸಲಾಯಿತು. ವ್ಯಕ್ತಿ ಹಿತಕ್ಕಿಂತ ಸಾಮೂಹಿಕ ಹಿತದೃಷ್ಟಿಯಲ್ಲಿ ಕೆಲಸ ಮಾಡುವುದು ಅರ್ಥಶಾಸ್ತ್ರ ಸಮ್ಮತವಾದುದೆಂದು ಗೊತ್ತಾಯಿತು.

ಈಗ ಪ್ರಪಂಚದಲ್ಲಿ ಏನಾಗುತ್ತಿದೆ ಎಂಬುದನ್ನು ವಿಚಾರಮಾಡಿದರೆ ಸಹಕಾರದ ಅವಶ್ಯಕತೆಯು ತಿಳಿದುಬರುತ್ತದೆ. ಒಂದು ಕಡೆ ಮಾನವನ ಜೀವನಕ್ಕೆ ಅತ್ಯವಶ್ಯಕವಾದ ಪದಾರ್ಥಗಳು ಸಿಕ್ಕುತ್ತಿಲ್ಲ. ಇನ್ನೊಂದು ಕಡೆ ಅಪಾರವಾದ ಪದಾರ್ಥಗಳನ್ನು ತಯಾರು ಮಾಡಿ ಸರಿಯಾದ ಗಿರಾಕಿ ಇಲ್ಲದೆ ಅವುಗಳನ್ನು ನಾಶಪಡಿಸಲಾಗುತ್ತಿದೆ. ಮತ್ತೊಂದು ಕಡೆ ಪದಾರ್ಥಗಳ ಬೆಲೆಯು ವಿಪರೀತವಾಗಿ ಏರಿ ಅಂತರರಾಷ್ಟ್ರೀಯ ಬೆಲೆಗಿಂತ ಹೆಚ್ಚಾಗುತ್ತಿದೆ. ಈ ಗೊಂದಲದಲ್ಲಿ ಪದಾರ್ಥಗಳನ್ನು ಕೊಳ್ಳುವುದಕ್ಕೂ ಮಾರುವುದಕ್ಕೂ ಅನಾನುಕೂಲತೆಗಳು ಹೆಚ್ಚುತ್ತಿವೆ. ಹೀಗಾಗುವುದಕ್ಕೆ ಕಾರಣವೇನೆಂದರೆ – ಅನೇಕ ದೇಶಗಳು ತಮತಮಗೆ ಸೂಕ್ತ ತೋರಿದ ರೀತಿಯಲ್ಲಿ ಹಣ ಸಂಪಾದನೆಗಾಗಿ ವ್ಯಾಪಾರ ಸೌಲಭ್ಯಗಳನ್ನು ಏರ್ಪಡಿಸಿಕೊಂಡಿವೆ. ಅರ್ಥಶಾಸ್ತ್ರ ನಿಪುಣರ ಬೇಡಿಕೆಗಳಿಗೆ ಕೆಲವು ದೇಶಗಳು ಕಿವಿಗೊಡುತ್ತಿಲ್ಲ, ಸರ್ವರಿಗೂ ಅನುಕೂಲವಾದ ಅಂತರರಾಷ್ಟ್ರೀಯ ಏರ್ಪಾಡಿಗೆ ಹಲವು ದೇಶಗಳು ಅವಕಾಶ ಕೊಡುತ್ತಿಲ್ಲ. ಐವತ್ತೇಳು ದೇಶಗಳ ಪ್ರತಿನಿಧಿಗಳನ್ನೊಳಗೊಂಡ ೧೯೨೭, ೧೯೫೮, ೧೯೬೩, ೧೯೭೬, ೧೯೮೫, ೨೦೦೦ ಇಸವಿಯ ಅಂತರರಾಷ್ಟ್ರೀಯ ಆರ್ಥಿಕ ಸಮ್ಮೇಳನವು ಸರ್ವ ಸಮಾನವಾದ ವ್ಯಾಪಾರ ಸೌಲಭ್ಯಗಳನ್ನೇರ್ಪಡಿಸಲು ಮಾಡಿದ ಪ್ರಯತ್ನವು ಸಾರ್ಥವಾಗಲಿಲ್ಲ ಹೀಗೆಯೇ ಅನೇಕ ಹಣಕಾಸಿನ ಸಮ್ಮೇಳನಗಳೂ, ಆರ್ಥಿಕ ಸಮ್ಮೇಳನಗಳೂ ಮಾಡಿದ ಪ್ರಯತ್ನಗಳು ನಿಷ್ಪಲವಾದುವು. ಆದರೆ ರಾಜಕೀಯದಲ್ಲಿಯೂ ಕೈಗಾರಿಕೆಯಲ್ಲಿಯೂ ಪ್ರಗತಿ ಹೊಂದುತ್ತಿರುವ ದೇಶಗಳು ಬಂಡವಾಳ ನೀತಿಯನ್ನು ಅನುಸರಿಸಿ ದೊಡ್ಡ ದೊಡ್ಡ ಮಳಿಗೆಗಳನ್ನು ಕಟ್ಟಿ ಹಣ ಸಂಪಾದನಾ ಕಾರ್ಯದಲ್ಲಿ ನಿರತವಾಗಿವೆ. ಹೀಗಿರುವಾಗ ಕ್ರಿಯಾತ್ಮಕ ಸಂಸ್ಥೆಗಳಿಗೂ ಪೂರ್ಣವಸ್ತುಗಳನ್ನು ಮಾರಾಟ ಮಾಡುವ ಸಂಸ್ಥೆಗಳಿಗೂ ಇರುವ ಅಂತರವನ್ನು ಹೋಗಲಾಡಿಸಿ ಸಮಾಜದ ಆರ್ಥಿಕ ಸ್ಥಿತಿಯನ್ನು ಉತ್ತಮ ಪಡಿಸಬೇಕಾದರೆ ಸಹಕಾರ ತತ್ವವೇ ಬಹುಮುಖ್ಯವಾದ ಸಾಧನವಾಗಿದೆ.

ಶೀಲವಂತರೂ ಧನಿಕರೂ ಬಡವರೂ ಎಲ್ಲರೂ ಒಟ್ಟಿಗೆ ಸೇರಿ ಆರ್ಥಿಕ ಉದ್ಯಮಗಳಲ್ಲಿ ತೊಡಗಿ ಯಾರೊಬ್ಬರ ಹಕ್ಕುಬಾಧ್ಯತೆಗಳಿಗೆ ತೊಂದರೆಯಾಗದಂತೆ ಅನ್ಯೋನ್ಯವಾಗಿ ಕೆಲಸಮಾಡಲು ಸಹಕಾರ ಪದ್ಧತಿಯಲ್ಲಿ ಹೆಚ್ಚು ಅವಕಾಶವಿದೆ.

ಕೈಗಾರಿಕಾ ಕ್ರಾಂತಿಯ ಫಲವಾಗಿ ಸಮತಾವಾದದಂತೆ ಮೊದಲು ಸಹಕಾರತತ್ವವು ಪ್ರಾರಂಭವಾಯಿತು. ಕ್ರಾಂತಿಯಾದ ತರುಣದಲ್ಲಿ ಹಿಂದಿನ ಪದ್ಧತಿಯಂತೆ ಕೆಲಸ ಮಾಡುವವರಿಗೆ ಅದೇ ಕ್ರಮವನ್ನು ಅನುಸರಿಸುವುದಕ್ಕೆ ಕಷ್ಟವಾಯಿತು. ಹಿಂದೆ ಇದ್ದ ಜೀವನದ ಕಟ್ಟುಪಾಡುಗಳು ಸಡಿಲವಾದುವು. ಸಮಾಜದ ಸ್ಥಿತಿಗತಿಗಳನ್ನು ಗಣನೆಗೆ ತರದೆ ಅನೇಕ ಹೊಸಪದ್ದತಿಗಳು ಆಚರಣೆಯಲ್ಲಿ ಬಂದುವು. ಕಾರ್ಖಾನೆಗಳ ಪೈಪೋಟಿಯಿಂದ ಅನೇಕ ಕೈಕಸುಬುಗಳು ಹಾಳಾದವು. ಕಾರ್ಖಾನೆಗಳಲ್ಲಿ ದುಡಿಯುವ ಹೆಂಗಸರು ಮಕ್ಕಳ ಆರೋಗ್ಯವು ಹದಗೆಟ್ಟಿತು. ಇವುಗಳ ಪರಿಹಾರಕ್ಕೆ ಯಾವ ಕಟ್ಟಳೆಯೂ ಏರ್ಪಡಲಿಲ್ಲ. ಕೆಲಸಗಾರರು ಒಟ್ಟಿಗೆ ಸೇರಿ ಯಾವುದಾದರೂ ಸಹಾಯ ಸಂಪತ್ತಿಯನ್ನು ಒದಗಿಸಿ ಕೊಳ್ಳುವುದಕ್ಕೂ ನಿರ್ಬಂಧವಿತ್ತು. ಈ ಸ್ಥಿತಿಯಲ್ಲಿರುವಾಗ ಸಹಕಾರ ತತ್ವವು ಮಾನವನ ಜೀವನದಲ್ಲಿ ಅವನ ನೈತಿಕಗುಣದ ಆಧಾರದ ಮೇಲೆ ಪ್ರಾರಂಭವಾದ ಅರ್ಥ ಸಾಧನೆ ಮಾರ್ಗವಾಯಿತು.

ಮಾನವನ ಜೀವನದಲ್ಲಿ ಅನೇಕ ಕೆಲಸಗಳನ್ನು ಸಾಧಿಸಲು ಅನಾದಿಕಾಲದಿಂದ ಪರಸ್ಪರ ಸಹಾಯವು ಆಚರಣೆಯಲ್ಲಿ ಬಂದಿದೆ. ಆರ್ಥಿಕ ಜೀವನದಲ್ಲಂತೂ ಇದಕ್ಕೆ ಬಹಳ ಪ್ರಾಮುಖ್ಯತೆ ಇದೆ. ಸುಮಾರು ಒಂದೂವರೆ ಶತಮಾನದಿಂದ ಪ್ರಪಂಚದ ಅನೇಕ ಭಾಗಗಳಲ್ಲಿ ಸಹಕಾರ ಪದ್ಧತಿಯು ಆಚರಣೆಯಲ್ಲಿ ಬಂದಿದೆ. ಪ್ರಪಂಚ ಆರ್ಥಿಕ ರಚನಾಕ್ರಮಕ್ಕೂ, ಶಾಂತಿ ಸಮಾಧಾನ ಸ್ಥಾಪನೆಗೂ, ಸಹಕಾರಿ ತತ್ವವು ಸಹಾಯ ಮಾಡುತ್ತಿದೆ. ಹೀಗೆ ಹಬ್ಬುತ್ತಿರುವ ಸಹಕಾರ ಸಂಸ್ಥೆಗಳ ಅಭಿವೃದ್ಧಿ ಕ್ರಮವನ್ನು ವಿಚಾರ ಮಾಡುವುದು ಯುಕ್ತವಾಗಿದೆ.

ಇಂಗ್ಲೆಂಡ್ ದೇಶವು ಸಹಕಾರ ಪದ್ಧತಿಗೆ ತೌರುಮನೆ, ಹದಿನೆಂಟನೆಯ ಶತಮಾನದಲ್ಲಿ ಇಲ್ಲಿ ಕೈಗಾರಿಕಾ ಕ್ರಾಂತಿಯುಂಟಾಯಿತು. ಇದಕ್ಕೆ ಮುಂಚೆ ಸಣ್ಣ ಕೈಗಾರಿಕೆಗಳು ಉತ್ತಮ ಸ್ಥಿತಿಯಲ್ಲಿದ್ದವು. ವ್ಯವಸಾಯವೇ ಮುಖ್ಯವೃತ್ತಿಯಾಗಿದ್ದುದರಿಂದ ಜನರು ಅನೇಕ ಉಪಕಸಬುಗಳನ್ನು ಕೈಕೊಂಡು ನೆಮ್ಮದಿಯಿಂದ ಜೀವನ ನಡೆಸುತ್ತಿದ್ದರು. ಈ ರೀತಿಯಾದ ನೆಮ್ಮದಿಯು ಬಹಳ ದಿವಸ ನಿಲ್ಲಲಿಲ್ಲ. ಆರ್ಥಿಕವಾಗಿ ಅಭಿವೃದ್ಧಿ ಹೊಂದುವ ರಚನಾಕ್ರಮಕ್ಕೆ ಅನುಕೂಲವಾದ ದೊಡ್ಡ ಕಾರ್ಖಾನೆಗಳು ಸ್ಥಾಪನೆಯಾದುವು. ಬಂಡವಾಳಗಾರರು ಹಣದ ಆಸೆಗೆ ಒಳಗಾಗಿ, ಶ್ರಮಜೀವಿಗಳು ಸೂರೆಮಾಡಲು ತೊಡಗಿದರು, ಕೈಕಸುಬನ್ನು ಬಿಟ್ಟು ಜನರು ಗಿರಣಿಗಳನ್ನು ಪ್ರವೇಶಿಸಿದರು. ಕೂಲಿಕಾರರ ಸಂಖ್ಯೆಯು ಹೆಚ್ಚಿದಾಗ ಮಾಲಿಕರು ಕೂಲಿಯ ದರವನ್ನು ಕಡಿಮೆ ಮಾಡಿದರು. ಶ್ರಮಜೀವಿಗಳ ವಿಚಾರದಲ್ಲಿ ಸರ್ಕಾರದವರು ಉದಾಸೀನರಾಗಿದ್ದರು. ಅವರ ಆರ್ಥಿಕ ಜೀವನದಲ್ಲಿ ಸ್ವಾತಂತ್ರ್ಯವಾಗಲಿ ಅಥವಾ ಹಕ್ಕುಬಾಧ್ಯತೆ ರಕ್ಷಣೆಯಾಗಲಿ ಇರಲಿಲ್ಲ ಹೀಗೆ ಶ್ರಮಜೀವಿಗಳು ಅಂಧಕಾರದಲ್ಲಿ ಮುಳುಗಿ ಅನೇಕ ವಿಧವಾದ ಕಷ್ಟಗಳನ್ನನುಭವಿಸುತ್ತಿದ್ದರು. ಇಂತಹ ಕಷ್ಟದೆಶೆಯಲ್ಲಿದ್ದವರಿಗೆ ರಾಬರ್ಟ್ ಓವನ್ ಎಂಬ ಮಹಾಪುರುಷನು ಸಹಕಾರ ತತ್ವವನ್ನು ಬೋಧಿಸಿ ಅವರ ಕಷ್ಟಪರಿಹಾರ ಪ್ರಯತ್ನ ಮಾಡಿದನು. [2]

ಬಂಡವಾಳ ಪ್ರಭುತ್ವದ ಕೆಟ್ಟ ಪದ್ದತಿಗಳು ಅತ್ಯುನ್ನತ ಸ್ಥಿತಿಯಲ್ಲಿದ್ದಾಗ, ರಾಬರ್ಟ್ ಓವನ್ನನು ೧೭೭೧ನೇ ಇಸವಿಯಲ್ಲಿ, ವೇಲ್ಸ್ ಭಾಗದ ನ್ಯೂರ್ಟೌ ಎಂಬ ಗ್ರಾಮದಲ್ಲಿ ಜನಿಸಿದನು. ಸಂಸಾರದ ಅನಾನುಕೂಲತೆಯಿಂದ ಈತನು ತನ್ನ ಒಂಬತ್ತನೆಯ ವಯಸ್ಸಿನಲ್ಲಿ ಕೆಲಸಕ್ಕೆ ಸೇರಿದನು. ವ್ಯಾಪಾರದಲ್ಲಿ ಇವನಿಗೆ ಅಭಿರುಚಿ ಹೆಚ್ಚಾಗಿದ್ದುದರಿಂದ ತನ್ನ ಹತ್ತೊಂಬತ್ತನೆಯ ವಯಸ್ಸಿನ ವೇಳೆಗೆ ತಾನು ಕಷ್ಟಪಟ್ಟು ಸಂಪಾದಿಸಿದ ಹಣದ ಸಹಾಯದಿಂದ ಮ್ಯಾಂಚೆಸ್ಟರ್ ಪಟ್ಟಣದ ಯಂತ್ರ ತಯಾರು ಮಾಡುವ ಕಾರ್ಖಾನೆಯ ಪಾಲುಗಾರನಾದನು. ಹೀಗೆ ವ್ಯಾಪಾರದಲ್ಲಿ ಅಭಿವೃದ್ಧಿ ಹೊಂದಿ ಕೆಲವು ವರ್ಷಗಳಾದ ಮೇಲೆ ಸ್ಕಾಟ್ಲೆಂಡ್ ದೇಶದ ನ್ಯೂಲನಾರ್ಕ್ ಎಂಬ ಗ್ರಾಮದಲ್ಲಿ ಒಂದು ನೂಲಿನ ಗಿರಣಿಯ ಪಾಲುಗಾರನಾದನು. ಗಿರಣಿಯಲ್ಲಿ ಕೆಲಸ ಮಾಡುತ್ತಿದ್ದ ಶ್ರಮಜೀವಿಗಳ ಜೀವನವು ಆಗ ಬಹಳ ಕಷ್ಟವಾಗಿತ್ತು. ಅವರೆಲ್ಲರೂ ಸಾಮಾನ್ಯವಾಗಿ ಅವಿದ್ಯಾವಂತರು. ಅವರಲ್ಲಿ ಅಪ್ರಮಾಣಿಕತೆ, ಅಸೂಯೆ, ಆತ್ಮಪ್ರಶಂಸೆ, ವಂಚನೆ ಮುಂತಾದ ದುರ್ಗುಣಗಳು ತುಂಬಿದ್ದವು. ಬಡತನದ ಬೇನೆ, ಸಾಲದ ಹೊರೆ, ಕುಡುಕುತನ ಮುಂತಾದುವು ಅವರನ್ನು ಬಾಧಿಸುತ್ತಿದ್ದುವು. ಇಂತಹ ಕಡುಬಡತನದಲ್ಲಿ ಕಷ್ಟಪಡುತ್ತಿದ್ದ ಶ್ರಮಜೀವಿಗಳ ಜೀವನವನ್ನು ಉತ್ತಮಪಡಿಸಲು ರಾಬರ್ಟ್ ಓವನ್ನನ್ನು ಪ್ರಯತ್ನಿಸಿದನು.

ಮನುಷ್ಯನ ಜೀವನದ ಏರಿಳಿತಗಳಿಗೆ ಸುತ್ತಮುತ್ತಲಿನ ವಾತಾವರಣವು ಬಹುಮಟ್ಟಿಗೆ ಸಹಾಯ ಮಾಡುವುದೆಂದು ಓವನ್ನನ ನಂಬಿಕೆ. ಇಂತಹ ವಾತಾವರಣವನ್ನು ಪರಿಷ್ಕರಿಸುವುದೇ ಸಮಾಜೋದ್ಧಾರದ ಪ್ರಥಮ ಹಂತವೆಂದು ತಿಳಿದು ಓವನನ್ನು, ಶ್ರಮಜೀವಿಗಳಿಗೆ ನೈರ್ಮಲ್ಯದ ಮಹತ್ವವನ್ನು ಬೋಧಿಸಿದನು. ಅವರು ಮನೆಯನ್ನು ಮೈ ಬಟ್ಟೆ ಮುಂತಾದವನ್ನು ಚೊಕ್ಕಟವಾಗಿಟ್ಟುಕೊಳ್ಳುವಂತೆ ತಿಳಿಸಿದನು. ಅವರಿಗೆ ಆಹಾರ ಸಾಮಗ್ರಿಗಳು ಸುಲಭ ಬೆಲೆಗೆ ದೊರಕುವಂತೆ ಒಂದು ಅಂಗಡಿಯನ್ನು ಇಡಿಸಿದನು. ಕೂಲಿಜನಗಳ ಅನಾಥ ಮಕ್ಕಳ ಪೋಷಣೆಗೂ ಶಿಶುಗಳ ಆರೋಗ್ಯ ರಕ್ಷಣೆಗೂ ತಕ್ಕ ವ್ಯವಸ್ಥೆ ಮಾಡಿದನು. ಇವೆಲ್ಲ ಕಾರ್ಯಗಳಲ್ಲಿಯೂ ಒಗ್ಗಟ್ಟು ಮತ್ತು ಪರಸ್ಪರ ಸಹಾಯವು ತನ್ನ ಉದ್ಯಮದ ಅಡಿಗಲ್ಲೆಂದು ಭಾವಿಸಿದನು. ಕೆಲಸಗಾರರನ್ನು ಒಟ್ಟಿಗೆ ಸೇರಿಸುವುದಕ್ಕಾಗಿ ಉತ್ತಮ ನಾಟಕ ಶಾಲೆಗಳನ್ನೂ, ಪುಸ್ತಕ ಭಂಡಾರಗಳನ್ನೂ ಸ್ಥಾಪಿಸಿದನು. ಗಿರಣಿಯ ಕೆಲಸಗಾರರಿಗೆ ಮಿತವ್ಯಯದ ಮಹಿಮೆಯನ್ನು ತಿಳಿಸಿ, ಅವರು ಹಣ ಶೇಖರಿಸುವ ಮಾರ್ಗವನ್ನು ತೋರಿಸಿಕೊಟ್ಟನು. ಈ ಬಗೆಯ ಕಾರ್ಯಕ್ರಮಗಳಿಂದ ಶ್ರಮಜೀವಿಗಳಲ್ಲಿ ಸೌಹಾರ್ದವೂ ಹುರುಪೂ ಉತ್ಸಾಹವೂ ನೆಲಸುವಂತೆ ಮಾಡಿದ ಕೀರ್ತಿಯು ರಾಬರ್ಟ್ ಓವನ್ನಿಗೇ ಸೇರಿತು. ಅವನ ಶ್ರೇಷ್ಠ ಉದ್ಯಮಗಳಿಂದ ಗಿರಣಿಯ ಜನರ ಸಂಪತ್ತು ಹೆಚ್ಚಿದುದಲ್ಲದೆ ಅವರ ಜೀವನವು ಉತ್ತಮವಾಯಿತು. ತಾನು ಮಾಡಿದ ಕೆಲಸಗಳನ್ನೆಲ್ಲಾ ಇತರರೂ ಮಾಡುವಂತೆ ಪ್ರೇರೇಪಿಸಿದನು.

ಗಿರಣಿ ಮಾಲೀಕರು ಮಾನವ ಹಿತದೃಷ್ಟಿಯಿಂದ ತಮಗೆ ಸೇರಿದ ಶ್ರಮಜೀವಿಗಳಿಗೆ ಅನುಕೂಲಗಳನ್ನು ಕಲ್ಪಿಸುವುದು, ಪ್ರಭುತ್ವದವರು ಕೂಲಿಗಾರರ ಅಭಿವೃದ್ಧಿ ವಿಷಯದಲ್ಲಿ ಸೂಕ್ತ ಕಾನೂನು ಮಾಡುವುದು, ಕೆಲಸಗಾರರು ತಮ್ಮ ಸ್ವಸಾಮರ್ಥ್ಯ ಮತ್ತು ಪರಸ್ಪರ ಸಹಾಯದಿಂದ ತಮ್ಮ ಜೀವನವನ್ನು ಉತ್ತಮ ಪಡಿಸಿಕೊಳ್ಳುವ ಕಾರ್ಯಕ್ರಮವನ್ನು ಅನುಸರಿಸುವುದು ಈ ಮೂರು ರಾಬರ್ಟ್ ಓವನ್ನನು ಪ್ರಯತ್ನಿಸಿದ ಘನ ಸಾಧನೆಗಳು. ಆಗಿನ ಪರಿಸ್ಥಿತಿಯಲ್ಲಿ ಈ ಸಾಧನೆಗಳು ಅಷ್ಟು ಸುಲಭವಾಗಿರಲಿಲ್ಲ. ಆ ಕಾಲದಲ್ಲಿ ಪ್ರಭುತ್ವದವರಿಗಾಗಲಿ, ಗಿರಕಿ ಮಾಲಿಕರಿಗಾಗಲೀ, ಶ್ರಮ ಜೀವಿಗಳ ವಿಷಯದಲ್ಲಿ ತಾಳ್ಮೆ ಅಥವಾ ಸಹಾನುಭೂತಿ ಇರಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ ರಾಬರ್ಟ್ ಓವನ್ನನು ಧೈರ್ಯಮಾಡಿ ಮುಂದೆ ಬಂದು ಶ್ರಮಜೀವಿಗಳ ಬಾಳನ್ನು ಉತ್ತಮಗೊಳಿಸಲು ಮಾಡಿದ ಪ್ರಯತ್ನವು ಪ್ರಸ್ತುತ್ಯರ್ಹವಾದುದು. ಇಂಗ್ಲೆಂಡ್ ದೇಶದ ಸಹಕಾರ ಪದ್ಧತಿಗೆ ಈತನೇ ಜನಕನೆಂದು ಹೇಳಬಹುದು. ಗಿರಣಿಮಾಲಿಕರ ಮತ್ತು ಶ್ರಮಜೀವಿಗಳ ಸೌಹಾರ್ದವೇ, ಗಿರಣಿಗಳ ಅಭಿವೃದ್ಧಿಯ ಅಡಿಗಲ್ಲೆಂಬ ಉಚ್ಚ ಧ್ಯೇಯಗಳೆಲ್ಲ ಕಾರ್ಯ ರೂಪದಲ್ಲಿ ಬಂದು ಕೆಲಸಗಾರರ ಜೀವನವು ಉತ್ತಮಗೊಂಡಿತು.

ರಾಬರ್ಟ್ ಓವನ್ನನು ಹಾಕಿಕೊಟ್ಟ ಮಾರ್ಗದಲ್ಲಿ ಇಂಗ್ಲೆಂಡ್ ದೇಶದ ಲ್ಯಾಂಕ್ ಷೈರ್ ನಲ್ಲಿರುವ ರಾಕ್ ಡೇಲ್ ಎಂಬ ಗ್ರಾಮದ ಇಪ್ಪತ್ತೆಂಟು ಜನ ನೇಯ್ಗೆಯವರು ಮೊದಲು ಸಹಕಾರ ಪದ್ಧತಿಯನ್ನು ಕಾರ್ಯರೂಪಕ್ಕೆ ತಂದರು. ಇವರು ಶ್ರಮಜೀವಿಗಳ ಕಷ್ಟವನ್ನು ಸ್ವತಃ ಅನುಭವಿಸಿ, ತಾವು ಹೂಡಿದ ಮುಷ್ಕರದ ಫಲವಾಗಿ ಕೆಲಸ ಬಿಟ್ಟರು ಆನಂತರ ಎಲ್ಲರೂ ಒಟ್ಟಿಗೆ ಸೇರಿ ಒಂದು ಸಹಕಾರಿ ಉಗ್ರಾಣವನ್ನು ಸ್ಥಾಪಿಸಿದರು, ಈ ರಾಕ್ ಡೇಲ್ ಮುಖಂಡರ ಪ್ರಯತ್ನವು ಸಫಲವಾಯಿತು. ಈ ಸಮಾಚಾರವು ಎಲ್ಲ ಕಡೆಗೂ ಹರಡಿತು. ಅನೇಕ ಕಡೆಗಳಲ್ಲಿ ಈ ತತ್ವವನ್ನೇ ಅನುಸರಿಸಿ ಇಂತಹ ಸಂಘಗಳು ಸ್ಥಾಪಿಸಲ್ಪಟ್ಟವು. ರಾಕಂಡೇಲ್ ಸಂಘದ ಮೂಲ ತತ್ವಗಳನ್ನು ಈ ರೀತಿ ಸಂಗ್ರಹಿಸಬಹುದು.

೧. ವ್ಯಾಪಾರವನ್ನು ನಗದಾಗಿಯೇ ನಡೆಯಿಸುವುದು.

೨. ಪೇಟೆಧಾರಣೆಗೆ ಅನುಗುಣವಾಗಿ ಪದಾರ್ಥಗಳನ್ನು ಮಾರುವುದು.

೩. ಖರ್ಚನ್ನೆಲ್ಲಾ ಕಳೆದು, ಉಳಿದ ಹಣದಲ್ಲಿ ಸ್ವಲ್ಪಭಾಗವನ್ನು ಅಪದ್ಧನವಾಗಿಟ್ಟು ಉಳಿದುದನ್ನು ಸಹಕಾರ ಪ್ರಚಾರ ಮತ್ತು ವಿದ್ಯಾಭಿವೃದ್ಧಿ ಕೆಲಸಗಳಿಗೆ ವಿನಿಯೋಗಿಸುವುದು.

೪. ಬಂಡವಾಳ ಬಡ್ಡಿಯನ್ನು ತೆಗೆದಿಟ್ಟು, ಉಳಿದ ಹಣವನ್ನು ಸದಸ್ಯರ ವ್ಯಾಪಾರದ ಮೊಬಲಗಿನ ಮೇಲೆ ಸಮನಾಗಿ ಹಂಚುವುದು.

೫. ಸದಸ್ಯರು ಸಂಘದ ಆಡಳಿತವನ್ನು ಸಮನಾದ ದೃಷ್ಟಿಯಿಂದ ನಡೆಯಿಸುವುದು.

೬. ಮತವಿಷಯಗಳಲ್ಲಿ ಸಂಘವು ತಟಸ್ತ್ಯದಿಂದ ಇರುವುದು.

ಮೇಲೆ ಕಂಡ ತತ್ವಗಳನ್ನು ಅನುಸರಿಸಿ ಸ್ಥಾಪಿಸಲ್ಪಟ್ಟ ಯಾವ ಸಹಕಾರ ಉಗ್ರಾಣವು ಹೀನಸ್ಥಿತಿಗೆ ಬರಲಿಲ್ಲ. ಈ ಉಗ್ರಾಣಗಳ ಕೆಲಸವು ಅತ್ಯಾಶ್ಚರ್ಯಕರವಾಗಿದೆ. ಲಕ್ಷಾಂತರ ಜನರು ಈ ಉಗ್ರಾಣಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಪದಾರ್ಥಗಳು ಸಹಕಾರ ಗಿರಣಿಗಳಲ್ಲಿಯೆ ತಯಾರಾಗುತ್ತಿವೆ. ಈ ಗಿರಣಿಗಳಿಂದ ಶ್ರಮಜೀವಿಗಳಿಗೆ ವರ್ಷ ಒಂದಕ್ಕೆ ಸುಮಾರು ನಾಲ್ಕುಕೋಟಿ ಪೌಂಡುಗಳು ವ್ಯಾಪಾರ ಮತ್ತು ವಾಣಿಜ್ಯ ವ್ಯವಹಾರವನ್ನು ಈ ಉಗ್ರಾಣಗಳೆಲ್ಲ ಒಟ್ಟಿಗೆ ಸೇರಿ ಒಟ್ಟು ರಾಶಿ ವ್ಯಾಪಾರಕ್ಕೆ ಅನುಕೂಲವಾದ ಒಂದು ಹೋಲ್ ಸೆಲ್ ಸಂಘವನ್ನು ಏರ್ಪಡಿಸಿದವು. ಐದು ವರ್ಷದ ನಂತರ ಇಂತಹ ಇನ್ನೊಂದು ಸಂಘವನ್ನು ಸ್ಥಾಪಿಸಲಾಯಿತು. ಈ ಎರಡು ದೊಡ್ಡ ಸಂಘಗಳು ನಾನಾ ಶಾಖೆಗಳನ್ನು ಸ್ಥಾಪಿಸಿ, ತಮ್ಮ ಸ್ವಂತ ಗಿರಣಿಗಳಲ್ಲಿ ತಯಾರಾದ ಪದಾರ್ಥಗಳ ಮಾರಾಟ ಮಾಡಲು ಪ್ರಾರಂಭಿಸಿದವು. ಇವುಗಳು ತಮ್ಮ ಸ್ವಂತ ಹಡಗುಗಳನ್ನು ಇಟ್ಟುಕೊಂಡು ಇತರ ದೇಶಗಳಲ್ಲಿ ಮಳಿಗೆಗಳನ್ನು ಸ್ಥಾಪಿಸಿ, ಪದಾರ್ಥಗಳನ್ನು ಮಾರಾಟಕ್ಕೆ ಸಾಗಿಸುತ್ತಿವೆ. ಹೀಗೆ ಇಂಗ್ಲೆಂಡ್ ದೇಶದ ಸಹಕಾರ ಬೆಳವಣಿಗೆಯು ಅತ್ಯಂತ ಪ್ರಾಮುಖ್ಯತೆಯನ್ನು ಪಡೆದಿದೆ. ಇನ್ನು ಯಾವ ದೇಶದಲ್ಲಿಯೂ ಸಹಕಾರ ಉಗ್ರಾಣಗಳ ಅಭಿವೃದ್ಧಿಯೂ ಇಷ್ಟು ಸಮಪರ್ಕವಾಗಿಲ್ಲ.

ಇಂಗ್ಲೆಂಡ್ ದೇಶದ ಸಹಕಾರ ಸಂಸ್ಥೆಗಳೆಲ್ಲ ಉಗ್ರಾಣ ಸಂಘಗಳೇ ಆಗಿವೆ. ಈ ಸಂಘಗಳು ಸದಸ್ಯರಲ್ಲಿ ಮಿತವ್ಯಯವನ್ನು ಹರಡಿ ಸ್ವಸಾಮಥ್ಯದಿಂದ ಅವರು ತಮ್ಮ ಜೀವನವನ್ನು ಉತ್ತಮಗೊಳಿಸುವಂತೆ ಮಾಡುತ್ತಿವೆ. ವೈದ್ಯ ಸಹಾಯ, ವಿದ್ಯಾಭ್ಯಾಸ, ವಿದೇಶ ಪ್ರಯಾಣ ಮುಂತಾದ ಉದ್ಯಮಗಳಿಗೆ ಸಹಕಾರ ಸಂಘಗಳು ಸಹಾಯ ಮಾಡುತ್ತಿವೆ. ವ್ಯಾಪಾರೋದ್ಯಮಗಳಲ್ಲಿಯೂ, ಸಂಘದ ಕಾರ‍್ಯ ನಿರ್ವಾಹದಲ್ಲಿಯೂ ಸದಸ್ಯರಿಗೆ ಶಿಕ್ಷಣ ಕೊಡಲಾಗುತ್ತಿದೆ. ರಾಕ್ ಡೇಲ್ ಅಗ್ರಗಾಮಿಗಳು ವಿದ್ಯಾಭ್ಯಾಸ ಸಹಕಾರತತ್ವವು ಜನರಿಗೆ ಚೆನ್ನಾಗಿ ಮನದಟ್ಟಾಗಬೇಕಾದರೆ ವಿದ್ಯಾಪ್ರಚಾರವು ಅತ್ಯಾವಶ್ಯಕ ಎಂಬುದಾಗಿ ಅವರು ತಿಳಿದಿದ್ದರು. ಬಂಡವಾಳ ಪ್ರಭುತ್ವ ಮತ್ತು ಸಮಾಜ ಸಮತ ಅಕ್ರಮದ ಹೊಡೆತದಿಂದ ರಕ್ಷಿಸಬೇಕಾದರೆ, ಸಹಕಾರ ತತ್ವ ಪ್ರಚಾರಕ್ಕೆ ಪ್ರತಿಯೊಂದು ಸಹಕಾರ ಸಂಘವೂ ಹೆಚ್ಚು ಪ್ರಯತ್ನಿಸಬೇಕೆಂಬ ತತ್ವವನ್ನು ಇಂಗ್ಲೆಂಡ್ ದೇಶವು ಅನುಸರಿಸುತ್ತಾ ಇದೆ*[3]

ರಾಬರ್ಟ್ ಓವನ್ ಮಹಾಪುರುಷನು ಸಹಕಾರ ಪದ್ಧತಿಯ ಪ್ರಥಮ ಮಾರ್ಗವನ್ನು ಇಂಗ್ಲೆಂಡ್ ದೇಶದ ಜನರಿಗೆ ತೋರಿಸಿದನು. ಇದನ್ನು ಅತ್ಯುತ್ತಮ ರೀತಿಯಲ್ಲಿ ರಾಕ್ ಡೇಲ್ ಮುಖಂಡರು ಅನುಸರಿಸಿ ಜಯಭೇರಿ ಹೊಡೆದರು. ಇಂಗ್ಲೆಂಡ್ ದೇಶದ ಸಹಕಾರ ಪದ್ಧತಿಯ ಅಭಿವೃದ್ದಿಗೆ ಅಲ್ಲಿಯ ಜನರ ಸಾಮರ್ಥ್ಯವೇ ಮುಖ್ಯ ಕಾರಣ. ಪ್ರಭುತ್ವದವರು ಅಷ್ಟೊಂದು ಸಹಾಯ ಮಾಡದಿದ್ದರೂ. ಕಾಲಕ್ರಮದಲ್ಲಿ ಅಗತ್ಯವಾದ ಕಾನೂನುಗಳನ್ನು ಆಚರಣೆಯಲ್ಲಿ ತಂದರು. ಈ ತತ್ವವನ್ನು ಭರತಖಂಡದ ಸಹಕಾರ ಪ್ರೇಮಿಗಳು ಅಗತ್ಯವಾಗಿ ಗಮನದಲ್ಲಿಡಬೇಕು.

ಪ್ರಪಂಚದ ಅನೇಕ ಭಾಗಗಳಲ್ಲಿ ಸಹಕಾರ ಚಳವಳಿಯು ತನ್ನದೆಯಾದ ಮಹತ್ವವನ್ನು ಪಡೆದಿದೆ. ಯೂರೋಪು ಖಂಡದಲ್ಲಿ ಅನೇಕ ದೇಶಗಳು ಸಹಕಾರ ವಿಷಯದಲ್ಲಿ ಹೆಚ್ಚು ಉತ್ಸಾಹವನು ತೋರಿಸಿವೆ. ಒಂದೊಂದು ದೇಶದಲ್ಲಿ ಒಂದೊಂದು ವಿಧವಾದ ಸಹಕಾರ ಸಂಘಗಳು ಹೆಚ್ಚು ಪ್ರಾಮುಖ್ಯತೆಯನ್ನು ಪಡೆದಿವೆ. ಇಂಗ್ಲೆಂಡ್ ದೇಶದಲ್ಲಿ ಸಹಕಾರ ಉಗ್ರಾಣಗಳು, ಫ್ರಾನ್ಸ್ ಮತ್ತು ಬೆಲ್ಜಿಯಂ ದೇಶದಲ್ಲಿ ಸಹಕಾರ ವಿಮಾಸಂಘಗಳು, ಇಟಲಿ ಮತ್ತು ಜರ್ಮನಿಯಲ್ಲಿ ಸಹಕಾರ ಲೇವಾದೇವಿ ಸಹಕಾರ ಸಂಘಗಳಿಗೆ ಜರ್ಮನಿ ದೇಶದ ಸಂಘಗಳು ಮಾರ್ಗದರ್ಶಕಗಳಾದವು.

ಲೇವಾದೇವಿ ಸಂಘಗಳಿಗೆ ಜರ್ಮನಿಯ ಪ್ರಸಿದ್ಧಿಯಾಗಿದೆ. ಇವುಗಳಲ್ಲಿ ಎರಡು ಬಗೆಗಳಿವೆ. ಒಂಡು ಗ್ರಾಮಜೀವನಕ್ಕೆ ಯೋಗ್ಯವಾದುದು ಇನ್ನೊಂದು ನಗರಕ್ಕೆ ಅರ್ಹವಾದುದು. ಈ ಎರಡು ಬಗೆಯ ಸಹಕಾರ ಸಂಘಗಳನ್ನು ಸ್ಥಾಪಿಸಿದ ಮಹನೀಯರ ವಿಷಯವಾಗಿಯೂ, ಅವುಗಳ ರೀತಿ ನೀತಿಗಳ ವಿಷಯವಾಗಿಯೂ ಇಲ್ಲಿ ವಿಚಾರ ಮಾಡುವುದು ಪ್ರಯೋಜನಕಾರಿಯಾಗಿದೆ. ಗ್ರಾಮ ಜೀವನಕ್ಕೆ ಸರಿದೂಗುವ ಸಹಕಾರ ಸಂಘವನ್ನು ಸ್ಥಾಪಿಸಿದವನು ರೈಯಿಪಿರ್ಸನ್ ಎಂಬುವರು. ಇವನು ಬಡಜನರಿಗೆ ಆಲೂಗೆಡ್ಡೆಯನ್ನು ಸುಲಭವಾಗಿ ದೊರಕಿಸುವುದಕ್ಕಾಗಿ ಒಂದು ಸಣ್ಣ ಹಳ್ಳಿಯಲ್ಲಿ ಮೊದಲು ಒಂದು ಸಂಸ್ಥೆಯನ್ನು ಸ್ಥಾಪಿಸಿದನು. ಈ ಸಂಸ್ಥೆಯ ಅನುಭವವನ್ನು ಪಡೆದು. ಇನ್ನೊಂದು ಹಳ್ಳಯಲ್ಲಿ ಬಂದು ಲೇವಾದೇವಿ ಸಂಘವನ್ನು. ಸ್ಥಾಪಿಸಿದನು. ಸಂಘದ ಸದಸ್ಯರು ಮನೆ ಜಮೀನು ಮುಂತಾದವುಗಳ ಆಧಾರವಿಲ್ಲದೆ ಸ್ವಂತ ನಂಬಿಕೆಯ ಮೇಲೆ ಸಾಲ ಪಡೆಯಬಹುದಾಗಿತ್ತು. ಈ ರೀತಿಯ ಸಂಘಗಳು ವಿಸ್ತಾರವಾಗಿ ಸ್ಥಾಪನೆಯಾದ ಮೇಲೆ, ಇವು ಬಡವರಾದ, ಗುಣಾಢ್ಯರಾದ ಸದಸ್ಯರಿಗೆ ಬಂಡವಾಳವನ್ನೊದಗಿಸಿ ಅವರು ತಮ್ಮ ಆರ್ಥಿಕ ಜೀವನವನ್ನು ಉತ್ತಮಪಡಿಸಿಕೊಳ್ಳುವಂತೆ ಸಹಾಯ ಮಾಡುತ್ತಿದ್ದುವು. ರೈಯಿಪಿರ್ಸನ್ ಸಂಘಗಳು ರೈತರ ನೈತಿಕಾಭಿವೃದ್ಧಿಯನ್ನು ಮುಖ್ಯ ಧ್ಯೇಯವನ್ನಾಗಿ ಇಟ್ಟುಕೊಂಡು ಸದಸ್ಯರಿಗೆ ಸಹಾಯ ಮಾಡುತ್ತಿದ್ದುವು. “ಸದಸ್ಯರ ನೈತಿಕ ಮತ್ತು ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸುವುದು. ಸದಸ್ಯರ ಲಾಭದಾಯಕ ಉದ್ಯಮಗಳಿಗೆ ಬಂಡವಾಳವನ್ನು ಒದಗಿಸುವುದು ಸದಸ್ಯರು ಸ್ವಲ್ಪ ಹಣವನ್ನಾದರೂ ಗಳಿಸುವಂತೆ ಮಾಡುವುದು ಇವೇ ಮುಂತಾದುವು ಈ ಸಹಕಾರ ಸಂಘಗಳ ಮುಖ್ಯ ಉದ್ದೇಶವಾಗಿತ್ತು. ”

ರೈಯಿಪಿರ್ಸನ್ ಸಂಘಗಳು ಒಂದೊಂದು ಗ್ರಾಮಕ್ಕೆ ಒಂದೊಂದು ಸ್ಥಾಪಿತವಾಗಿ, ವಾರಕ್ಕೊಂದು ಸಾರಿ ಸಭೆಗಳನ್ನು ಸೇರಿಸಿ ಸಂಘದ ಆರ್ಥಿಕ ಸ್ಥಿತಿ ಮತ್ತು ಇತರ ಅನುಕೂಲತೆಯ ವಿಚಾರವಾಗಿ ಚರ್ಚೆ ನಡೆಯಿಸಿ ಸೂಕ್ತ ಕಾರ್ಯಕ್ರಮವನ್ನು ಅನುಸರಿಸುತ್ತಿದ್ದವು. ಜರ್ಮನಿ ದೇಶದ ಒಟ್ಟು ರೈತರ ಸಂಖ್ಯೆಯಲ್ಲಿ ಅರ್ಧಕ್ಕಿಂತ ಹೆಚ್ಚಾಗಿ ಈ ಸಂಘಗಳ ಸದಸ್ಯರಾಗಿದ್ದಾರೆ. ಸಾಹುಕಾರರ ಗುಲಾಮರಾಗಿ ನರಳುತ್ತಿದ್ದ ರೈತರಿಂದ ತುಂಬಿದ್ದ ಒಂದು ಹಳ್ಳಿಯಲ್ಲಿ ರೈಯಿಪಿರ್ಸನ್ ಸಂಘವು ಸ್ವಲ್ಪಕಾಲದಲ್ಲಿಯೇ ಅಲ್ಲಿಯ ರೈತರನ್ನು ಸಾಲದಿಂದ ಬಿಡುಗಡೆ ಮಾಡಿ ಅವರ ಅರ್ಥಿಕ ಸ್ಥಿತಿಯನ್ನು ಉತ್ತಮಪಡಿಸಿತು. ಅವರಿಗೆ ಅನುಕೂಲವಾದ ವ್ಯವಸಾಯದ ಮುಟ್ಟುಗಳು, ಬಂಡವಾಳ ಮುಂತಾದುವನ್ನು ಒದಗಿಸಿತು. ಇದರಿಂದ ರೈತರು ಹೆಚ್ಚು ಹಣ ಸಂಪಾದನೆ ಮಾಡಿದರು. ಅವರ ಜೀವನವು ಉತ್ತಮವಾಯಿತು” ಹೀಗೆ ರೈಯಿಪಿರ್ಸನ್ ಸಂಘಗಳು ಜರ್ಮನಿ ದೇಶದಲ್ಲೆಲ್ಲಾ ಹರಡಿ ದೇಶದ ವ್ಯಾಪಾರವನ್ನೂ ವ್ಯವಸಾಯವನ್ನೂ ಉತ್ತಮ ಪಡಿಸಿತು. ರೈತರು ತಮಗೆ ಬೇಕಾದ ಸಲಕರಣೆಗಳನ್ನು ಸುಲಭವಾಗಿ ಒದಗಿಸಿಕೊಳ್ಳುವುದಕ್ಕೂ, ಮಿತವ್ಯಯ ಪದ್ಧತಿಯನ್ನು ಅನುಸರಿಸುವುದಕ್ಕೂ, ಆರ್ಥಿಕೋದ್ಯಮಗಳಿಗೆ ಮಾಡಿದ ಸಾಲವನ್ನು ಸಕಾಲದಲ್ಲಿ ತೀರಿಸುವುದಕ್ಕೂ, ರೈಯಿಪಿರ್ಸನ್ ಸಂಘಗಳು ಹೆಚ್ಚು ಸಹಾಯ ಮಾಡಿತು.

ನಗರಗಳ ಕೈಗಾರಿಕಾ ನೀತಿಗೆ ಯೋಗ್ಯವಾದ ಮತ್ತೊಂದು ಬಗೆಯ ಸಹಕಾರ ಸಂಘಗಳನ್ನು ಹರ್ ಷಲ್ಸ್ ಡಿಲಿಟ್ಸ್ ಎಂಬ ಮಹನೀಯರು ಸ್ಥಾಪಿಸಿದನು. ಈ ಸಂಘಗಳು ಹೆಚ್ಚು ಪರಿಚಯವಿಲ್ಲದ ಸದಸ್ಯರನ್ನೊಳಗೊಂಡು ನಿಯಮಿತ ಜವಾಬ್ದಾರಿಯ ಮೇಲೆ ಕೆಲಸ ಮಾಡಿ ತಮ್ಮ ಕಾರ್ಯಕ್ಷೇತ್ರವನ್ನು ವಿಸ್ತರಿಸಿದವು. ಹರ್ ಷೇಲ್ಸ್ ಅವರಿಂದ ಸ್ಥಾಪಿತವಾದ ಸಂಘಗಳು ಎರಡು ವಿಧಗಳಾಗಿವೆ. ಒಂದು ಬಂಡವಾಳವನ್ನು ಒದಗಿಸುತ್ತವೆ. ಇನ್ನೊಂದು ಸ್ವಪ್ರಯತ್ನವನ್ನೂ, ಮಿತವ್ಯಯವನ್ನೂ ವೃದ್ಧಿಪಡಿಸುತ್ತವೆ. ಈ ಎರಡು ಬಗೆಯ ಸಂಸ್ಥೆಗಳೂ ಸದಸ್ಯರಿಗೆ ಮಾತ್ರ ಸಾಲಕೊಟ್ಟು ಅವರನ್ನು ಒಟ್ಟು ಗೂಡಿಸಿ ಅವರ ವ್ಯಾಪಾರೋದ್ಯಮಗಳಿಗೆ ಅವಶ್ಯಕವಾದ ಚಾತುರ್ಯವನ್ನೂ ಅನುಸರಿಸಿದುವು. ಕೈಗಾರಿಕಾ ಸಹಕಾರ ಸಂಘ ಮತ್ತು ಸಹಕಾರ ತತ್ವದ ಮೇಲೂ ಹರ್ ಷಲ್ಸ್ ನು ಕೆಲವು ಪುಸ್ತಕಗಳನ್ನು ಬರಿದು ಜನರಲ್ಲಿ ಜ್ಞಾನ ಪ್ರಚಾರ ಮಾಡಿದನು. ಹೀಗೆ ರೈಯಿಪಿರ್ಸನ್ ಮತ್ತು ಹರ್ ಷಲ್ಸ್ ಡಿಲಿಟ್ಜ್ ಇಬ್ಬರೂ ಜರ್ಮನಿ ದೇಶದ ಜನರ ದುಃಸ್ಥಿತಿಯನ್ನು ನೋಡಿ ಶಾಶ್ವತವಾದ ಸುಖಶಾಂತಿಗಳನ್ನುಂಟು ಮಾಡತಕ್ಕ ಸಹಕಾರ ಸುಧಾರಣೆಯನ್ನು ಆಚರಣೆಯಲ್ಲಿ ತಂದರು. ಮಾನವನ ಬದುಕು ಬಾಳು ಇವರ ಸುಧಾರಣೆಯ ಫಲವಾಗಿ ಉತ್ತಮಗೊಂಡವು.

ಜರ್ಮನಿ ದೇಶದ ಮಾದರಿಯಲ್ಲಿಯೇ ಇಟಲಿ, ಡೆನ್ ಮಾರ್ಕ್ ದೇಶದ ಸಹಕಾರ ಪದ್ಧತಿಯು ಭರತಖಂಡಕ್ಕೆ ಉತ್ತಮ ನಿದರ್ಶನವಾಗಿದೆ. ಜರ್ಮನಿಯ ಯುದ್ಧದ ಫಲವಾಗಿ ಡೆನ್ ಮಾರ್ಕ್ ದೇಶವು ತನ್ನ ಫಲವತ್ತಾದ ಕೆಲವು ಭೂ ಪ್ರದೇಶವನ್ನು ಕಳೆದುಕೊಂಡಿತು. ದವಸಧಾನ್ಯಗಳ ಬೆಲೆಯು ಇಳಿದು ಹೋದುದರಿಂದ ವ್ಯವಸಾಯ ವೃತ್ತಿಯು ಫಲದಾಯಕವಾಗಿರಲಿಲ್ಲ.

ಫಲವತ್ತಿಲ್ಲದ ಜಮೀನಿನಿಂದಲೇ ರೈತರ ಜೀವನ ನಡೆಸಬೇಕಾಯಿತು, ಇದಕ್ಕಾಗಿ ಡೇನರು ಪಶುಪಾಲನೆಯನ್ನು ಉತ್ತಮ ಪಡಿಸಿದರು. ತಮ್ಮ ಆರ್ಥಿಕೋನ್ನತಿಗೆ ಸಹಕಾರ ಪದ್ದತಿಯೇ ಉತ್ತಮ ಮಾರ್ಗವೆಂದು ತಿಳಿದು ತಮ್ಮ ಎಲ್ಲಾ ಉದ್ಯಮಗಳಲ್ಲಿಯೂ ಸಹಕಾರ ತತ್ವವನ್ನು ಆಚರಣೆಯಲ್ಲಿ ತಂದರು. ೧೮೮೬ನೆಯ ಇಸವಿಯಲ್ಲಿ ಮೊದಲನೆಯ ಸಹಕಾರ ಸಂಸ್ಥೆಯು ಸ್ಥಾಪಿಸಲ್ಪಟ್ಟಿತು. ಆಗಿನಿಂದ ಒಂದೇ ಸಮನಾಗಿ ಇಲ್ಲೆ ಸಹಕಾರ ಪದ್ಧತಿಯು ಅಭಿವೃದ್ಧಿ, ಹೊಂದುತ್ತಾ ಇದೆ.

ಡೆನ್ ಮಾರ್ಕ್ ಬಹಳ ಸಣ್ಣ ದೇಶ, ಅದರ ವಿಸ್ತೀರ್ಣ ೧೬೦೦ ಚದರ ಮೈಲಿ. ಅಲ್ಲಿಯ ಪ್ರಜಾ ಸಂಖ್ಯೆ ೬೫ಲಕ್ಷ, ಇಂತಹ ಸಣ್ಣ ದೇಶದಲ್ಲಿ ೩೭ಲಕ್ಷ ಸದಸ್ಯರುಗಳನ್ನೊಳಗೊಂಡ (೧೪೦೦೦) ಸಹಕಾರ ಸಂಘಗಳು ಕೆಲಸ ಮಾಡುತ್ತಿವೆ. ಡೇನರು ಪ್ರತಿಯೊಂದು ಪದಾರ್ಥ ಉತ್ಪತ್ತಿ, ಮಾರಾಟಗಳನ್ನು ಉತ್ತಮ ಬೆಲೆಯೂ ಲಾಭವೂ ಬರುವಂತೆ ಕೆಲಸ ಮಾಡುತ್ತಿವೆ. ಡೆನ್ಮಾರ್ಕ್ ದೇಶದ ಹಾಲು ಬೆಣ್ಣೆ ವ್ಯಾಪಾರದ ಶೇಕಡಾ ೯೦%ರಷ್ಟೂ, ವ್ಯವಸಾಯದ ಪದಾರ್ಥಗಳ ಶೇಕಡಾ ೭೦ರಷ್ಟೂ ಅಲ್ಲಿಯ ಸಹಕಾರ ಸಂಘಗಳ ಮೂಲಕವೇ ನಡೆಯುತ್ತಿದೆ.

ಡೆನ್ಮಾರ್ಕ್ ದೇಶದ ಸಹಕಾರ ಪದ್ಧತಿಯ ಅಭಿವೃದ್ಧಿಗೆ ಅಲ್ಲಿಯ ವಿದ್ಯಾಭ್ಯಾಸ ಕ್ರಮವೇ ಮುಖ್ಯ ಕಾರಣವೆಂದು ಅರ್ಥಶಾಸ್ತ್ರಜ್ಞರು ತಿಳಿಸಿದ್ದಾರೆ. ಅಲ್ಲಿಯ ಶಿಕ್ಷಣ ಕ್ರಮವ ಫಲವಾಗಿ ಜನರಲ್ಲಿ ದೇಶಪ್ರೇಮ ಹಾಗೂ ದೇಶ ಸೇವೆ ಮಾಡಬೇಕೆಂಬ ಕುತೂಹಲ ಹೆಚ್ಚಿದುವು. ಅಲ್ಲಿಯ ರೈತಾಪಿ ಜನಗಳ ಮಕ್ಕಳಲ್ಲಿ ಕೂಡ ಪ್ರಜಾಪ್ರಭುತ್ವದ ಆಕಾಂಕ್ಷೆ, ಸರ್ವಸಮಾನತಾ ಭಾವನೆ ಮುಂತಾದವು ಚೆನ್ನಾಗಿ ಬೇರೂರಿವೆ. ಇಂತಹ ಗುಣಗಳು ಸಹಕಾರ ಪದ್ಧತಿಯು ಅಭಿವೃದ್ದಿಗೆ ಅನುಕೂಲವಾದ ವಾತಾವರಣವಾಗಿ ಪರಿಣಮಿಸಿತು. ಡೆನ್ಮಾರ್ಕ್ ದೇಶದ ವಿದ್ಯಾಭ್ಯಾಸ ಮತ್ತು ಸಹಕಾರ ಪದ್ದತಿಗಳ ಪರಸ್ಪರ ಬೆಂಬಲದಿಂದ ಉಂಟಾಗುತ್ತಿರುವ ಅಭಿವೃದ್ಧಿಯು ಡೇನರನ್ನು ಒಂದು ಆದರ್ಶ ರೈತಜನಾಂಗವನ್ನಾಗಿ ಮಾಡಿದೆ ಎಂದು ಹೇಳಬಹುದು. ಇಲ್ಲಿ ಧನಿಕರೂ. ಬಡವರೂ ಭೇದಭಾವವಿಲ್ಲದೆ ಸಹಕಾರ ಸಂಘಗಳಲ್ಲಿ ಒಟ್ಟಿಗೆ ಸೇರಿ ಕೆಲಸಮಾಡಿ ಸುಖಸಂಪತ್ತುಗಳನ್ನು ಸಂಪಾದಿಸಿ ಸಂತೋಷದಿಂದ ಜೀವನ ಮಾಡುತ್ತಿದ್ದಾರೆ.[4] ಡೇನರ ಪ್ರಗತಿದಾಯಕ ಸಹಕಾರ ಪದ್ಧತಿಯು ಭಾರತೀಯರಿಗೆ ಇನ್ನೂ ಸ್ವಪ್ನದೃಷ್ಟಿಯಾಗಿ ಉಳಿದಿದೆ.

ಸಹಕಾರಾಭಿವೃದ್ಧಿಯ ಉನ್ನತ ಶಿಖರವನ್ನು ನಾವು ರಷ್ಯಾ ದೇಶದಲ್ಲಿ ಕಾಣಬಹುದು. ಆದರೆ ರಷ್ಟ್ಯಾ ದೇಶದಲ್ಲಿ ಆಚರಣೆಯಲ್ಲಿ ಇರುವ ಸಹಕಾರ ಪದ್ದತಿಗೂ, ಪ್ರಪಂಚದ ಇತರ ಭಾಗಗಲ್ಲಿರುವ ಸಹಕಾರ ಪದ್ದತಿಗೂ ಬಹಳ ವ್ಯತ್ಯಾಸವಿದೆ. ೧೯೯೧೭ನೇ ಇಸವಿಯ ಸಾಮುದಾಯಿಕ ಕ್ರಾಂತಿಯ ಫಲವಾಗಿ ಹಿಂದೆ ಇದ್ದ ಸಹಕಾರ ಚಳವಳಿಯು ಹಿಮ್ಮೆಟ್ಟಿತು. ಅನೇಕ ಬದಲಾವಣೆಗಳುಂಟಾದವು. ಇದರ ಪ್ರಕಾರ ರೈತರು ಒಟ್ಟಾಗಿ ಸೇರಿ ಧಾನ್ಯವನ್ನು ಕೊಳ್ಳುವುದು. ಮಾರುವುದು ಇತರ ವ್ಯಾವಸಾಯಿಕ ಉದ್ಯಮಗಳನ್ನು ಕೈಗೊಳ್ಳುವುದು ರೂಢಿಯಲ್ಲಿ ಬಂದುವು. ಇಂದು ದೇಶದ ಒಟ್ಟು ಜನಸಂಖ್ಯೆಯ ಅರ್ಧಭಾಗಕ್ಕಿಂತ ಹೆಚ್ಚಿನ ಜನರು ಸಹಕಾರ ಸಂಸ್ಥೆಗಳ ಸದಸ್ಯರಾಗಿದ್ದರೆ. ಅಲ್ಲಿಯ ವ್ಯಾಪಾರವೆಲ್ಲ ಸಾಮೂಹಿಕ ಪದ್ದತಿಯಲ್ಲಿ ನಡೆಯುತ್ತಿದೆ. ಈ ಸಂಸ್ಥೆಗಳಿಗೆ “ಕೋಡೊಕ್ಕಲುತನ” (Kolhoz) ಎಂದು ಹೆಸರು. ಅಲ್ಲಿಯ ಸಮಾಜ ಸಮತಾವಾದವು ಹಿಂದೆ ಇದ್ದ ಸಹಕಾರ ಸಂಸ್ಥೆಗಳನ್ನು ರೂಪಾಂತರಗೊಳಿಸಿ ಸಾಮೂಹಿಕ ಸಂಸ್ಥೆಗಳನ್ನಾಗಿ ಮಾರ್ಪಡಿಸಿದೆ. ಈ ಸಂಸ್ಥೆಗಳನ್ನು ಸಹಕಾರ ಸಂಘಗಳೆಂದು ಹೇಳುವುದೇ ಕಷ್ಟವಾಗಿದೆ. ಈ ಸಾಮೂಹಿಕ ಸಂಸ್ಥೆಗಳನ್ನು ರಷ್ಯಾ ಸರಕಾರವು ಮಾಡಿರುವಷ್ಟು, ಹಣ ಸಹಾಯವು ಮಿಕ್ಕ ಯಾವ ಸರ್ಕಾರವೂ ಅಲ್ಲಿಯ ಸಂಸ್ಥೆಗಳಿಗೆ ಮಾಡಿಲ್ಲ. *[5]

ಅಮೆರಿಕಾ, ಕೆನಡಾ ದೇಶಗಳು ಡೆನ್ಮಾರ್ಕ್ ನಂತೆಯೇ ಮಾರಾಟದ ಸಂಘಗಳನ್ನು ಸ್ಥಾಪಿಸಿವೆ. ಅಮೇರಿಕಾ ದೇಶದಲ್ಲಿ ಆಯಾಯಾ ಪದಾರ್ಥಗಳ ಒಟ್ಟು ವ್ಯಾಪಾರದ ಶೇಕಡಾ ೬೦ ರಷ್ಟು ಸಹಕಾರ ಸಂಸ್ಥೆಗಳ ಮೂಲಕವೇ ನಡೆಯುತ್ತಿದೆ. ಯೂರೋಪ್ ಖಂಡದ ಸಹಕಾರ ಪದ್ಧತಿಯನ್ನೇ ಆದರ್ಶವಾಗಿಟ್ಟುಕೊಂಡು ಅಮೇರಿಕಾ ದೇಶವು ಸಹಕಾರ ಪದ್ಧತಿಯ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳನ್ನು ಕಳುಹಿಸುತ್ತಿದೆ. ಸಹಕಾರಾಭಿವೃದ್ಧಿಗೆ ಅಮೇರಿಕಾ ದೇಶವು ಸರ್ವ ಪ್ರಯತ್ನವನ್ನೂ ಮಾಡಿದೆ. ಮಾಡುತ್ತಲೂ ಇದೆ.

ಜಪಾನ್ ದೇಶದಲ್ಲಿ ಸಹಕಾರ ಪದ್ಧತಿಯು ಭರತ ಖಂಡದ ಹಾಗೆ ಸರ್ಕಾರದ ಸಹಾಯದಿಂದಲೇ ಪ್ರಾರಂಭವಾಗಿ ಅದರ ಆಶ್ರಯದಲ್ಲಿಯೇ ಬೆಳೆಯುತ್ತಿದೆ. ೧೯೦೦ನೇ ಇಸವಿಯಲ್ಲಿ ಸಹಕಾರ ಚಳುವಳಿಯು ಇಲ್ಲಿ ಪ್ರಾರಂಭವಾಯಿತು ಈಗ ಜಪಾನಿನಲ್ಲಿ (೬೫೦೦೦) ರೈತರ ಸಂಘಗಳು ಇವೆ. ಇವುಗಳ ಸದಸ್ಯರ ಸಂಖ್ಯೆಯು ಇಲ್ಲಿಯ ಸಹಕಾರ ಸಂಘಗಳು, ಕ್ಷಾಮ ಕಾಲದಲ್ಲಿ, ಆಹಾರ ಸಾಮಗ್ರಿಗಳನ್ನು ಒದಗಿಸುತ್ತದೆ. ರೈತಾಪಿ ಜನಗಳಿಗೆ ಪ್ರಯೋಗಶಾಲೆಗಳ ಮೂಲಕ ಸಹಾಯ ಮಾಡುತ್ತಿವೆ. ಕುರಿ, ಮೇಕೆ ಮುಂತಾದ ಪ್ರಾಣಿಗಳ ಪಾಲನಾ ಕ್ರಮವನ್ನು ತಿಳಿಸುತ್ತಿವೆ. ಜಪಾನ್ ದೇಶದ ಪ್ರಜಾಸ್ವಾತಂತ್ರ್ಯ ಬಲವು ಅಲ್ಲಿಯ ಸಹಕಾರ ಪದ್ಧತಿಗೆ ಹೆಚ್ಚಿನ ಪ್ರೋತ್ಸಾಹವನ್ನೂ ಅನುಕೂಲಗಳನ್ನೂ ಕಲ್ಪಿಸುತ್ತಿದೆ.

ಭಾರತದಲ್ಲಿ ಸಹಕಾರ

ಭಾರತದಲ್ಲಿ ಸಹಕಾರ ಪದ್ಧತಿಯ ಅಭಿವೃದ್ಧಿಯನ್ನು ವಿಚಾರ ಮಾಡೋಣ, ಪ್ರಾಚೀನ ಕಾಲದಿಂದ ಸಾಮೂಹಿಕ ಕಾರ್ಯಕ್ರಮಗಳು ಇಲ್ಲಿ ಆಚರಣೆಯಲ್ಲಿ ಇದ್ದಿತು. ಸಾಮಾಜಿಕ ಕೆಲಸಗಳಲ್ಲಿ ಗ್ರಾಮಸ್ಥರೆಲ್ಲರೂ ಒಟ್ಟಿಗೆ ಕಲೆತು ಕೆಲಸ ಮಾಡುತ್ತಿದ್ದರು. ಮನುಧರ್ಮ ಶಾಸ್ತ್ರದಲ್ಲಿಯೂ, ಕೌಟಿಲ್ಯನ ಅರ್ಥಶಾಸ್ತ್ರದಲ್ಲಿಯೂ, ಈ ರೀತಿಯ ಸಾಮೂಹಿಕ ಕಾರ್ಯಕ್ರಮಗಳ ನಿದರ್ಶನಗಳು ಬೇಕಾದಷ್ಟು ಇವೆ. ಈ ಕ್ರಮಗಳನ್ನು ಅನುಸರಿಸಿ ಭರತ ಖಂಡದ ಅನೇಕ ಭಾಗಗಳಲಿ ಜನರ ಆರ್ಥಿಕ ಜೀವನವನ್ನು ಉತ್ತಮ ಪಡಿಸುವುದಕ್ಕೂ ಸಾಮೂಹಿಕ ಉದ್ಯಮಗಳು ರೂಢಿಯಲ್ಲಿದ್ದವು. ಆದರೆ ಇವುಗಳ ಕಾರ್ಯಕ್ರಮಕ್ಕೆ ಸರಿಯಾದ ಯೋಜನೆಯಾಗಲಿ ಅಥವಾ ಸರ್ಕಾರದ ಕಾನೂನಾಗಲಿ ಇರಲಿಲ್ಲ.

ಬೊಂಬಾಯಿ ಅಧಿಪತ್ಯದಲ್ಲಿ ವ್ಯವಸಾಯಗಾರರಿಗೆ ಬಂಡವಾಳವನ್ನೊದಗಿಸುವುದಕ್ಕಾಗಿ ರಾನಡೆಯವರೂ ಮತ್ತು ವಿಲೊಯಂವೆಡ್ಡರ್ ಅವರೂ ಒಂದು ಯೋಜನೆಯನ್ನು ತಯಾರಿಸಿದರು. ಆದರೆ ಇದನ್ನು ಸರ್ಕಾರದವರು ಒಪ್ಪಲಿಲ್ಲ್ಲ. ಇದಕ್ಕೆ ಪ್ರತಿಯಾಗಿ ರೈತರಿಗೆ ಅಲ್ಪ ಅವಧಿಯ ಸಾಲ ಕೊಡುವ ಪದ್ಧತಿಯನ್ನು ಆಚರಣೆಯಲ್ಲಿ ತರಲಾಯಿತು. ಈ ಕ್ರಮದಿಂದ ರೈತರಿಗೆ ಅಷ್ಟೊಂದು ಪ್ರಯೋಜನವಾಗಲಿಲ್ಲ. ಮದರಾಸ್ ಅಧಿಪತ್ಯದಲ್ಲಿ ವ್ಯವಸಾಯದ ಬ್ಯಾಂಕುಗಳನ್ನು ಸ್ಥಾಪಿಸಬೇಕೆಂಬುದಾಗಿ ಸರ್ಕಾರವು ಯೋಚಿಸಿ ಅದರ ಸಾಧ್ಯಾಸಾಧ್ಯತೆಯನ್ನು ಪರಿಶೀಲಿಸಲು ಫ್ರೆಡ್ರಿಕ್ ನಿಕಲ್ಸನ್ ಎಂಬುವರನ್ನು ನೇಮಿಸಿದರು. ನಿಕಲ್ಸನ್ ಅವರ ವರದಿಯನ್ನು ಸರ್ಕಾರದವರು ವಿಮರ್ಶೆ ಮಾಡಿ ರೈತರ ಬದುಕನ್ನು ಉತ್ತಮ ಪಡಿಸಲು ರೈಪಿಯಿರ್ಸನ್ ಮಾದರಿಯ ಸಂಘಗಳು ಸರ್ವೋತ್ತಮವಾದುವು ಎಂಬುದಾಗಿ ನಿರ್ಧರಿಸಿದರು. ಇವುಗಳ ಸ್ಥಾಪನೆಗೆ ಸಹಕಾರಿಯಾದ ಒಂದು ಕಾನೂನನ್ನು ೧೯೦೪ನೇ ಇಸವಿಯಲ್ಲಿ ಮಂಜೂರು ಮಾಡಲಾಯಿತು. ಈ ಕಾನೂನು ಪ್ರಕಾರ ಸಹಕಾರ ಸಂಘಗಳನ್ನು ಸ್ಥಾಪಿಸುವುದಕ್ಕೆ ಪ್ರೋತ್ಸಾಹ ಕೊಡಲು ಪ್ರತಿಯೊಂದು ಪ್ರಾಂತ್ಯದಲ್ಲಿಯೂ ಸಹಕಾರ ಶಾಖೆಗಳನ್ನು ಸ್ಥಾಪಿಸಿ ಅಧಿಕಾರಿಗಳನ್ನು ನೇಮಿಸಲಾಯಿತು. ಸಹಕಾರ ಸಂಘಗಳ ಸ್ಥಾಪನೆ, ಶಿಕ್ಷಣ, ಕಾರ್ಯನಿರ್ವಹಣೆ, ಲೆಕ್ಕ ಪರಿಶೋಧನೆ ಮುಂತಾದ ಜವಾಬ್ದಾರಿಯನ್ನೆಲ್ಲಾ ಸರ್ಕಾರದವರೇ ವಹಿಸಿದರು. ಇಷ್ಟಾದರೂ ಕಾರ್ಯಕ್ಷೇತ್ರದಲ್ಲಿ ಇನ್ನೂ ಕೆಲವು ನ್ಯೂನತೆಗಳು ಇದ್ದುವು. ಇದನ್ನು ಸರಿ ಪಡಿಸುವುದಕ್ಕಾಗಿ ೧೯೧೨ನೆಯ ಇಸವಿಯಲ್ಲಿ ಒಂದು ತಿದ್ದುಪಡಿ ಕಾನೂನನ್ನು ಆಚರಣೆಯಲ್ಲಿ ತರಲಾಯಿತು.

ಭರತ ಖಂಡದ ಸಹಕಾರ ಪದ್ದಯು ಸರ್ಕಾರದ ಆಶ್ರಯದಲ್ಲಿಯೇ ಹುಟ್ಟಿ ಅಭಿವೃದ್ಧಿ ಹೊಂದುತ್ತಿದೆ. ಇದಕ್ಕಾಗಿಯೇ ನಮ್ಮ ಸರ್ಕಾರವು ಪ್ರತ್ಯೇಕ ಸಚಿವರನ್ನೆ ನೇಮಿಸಿದ್ದಾರೆ. ಇದರ ಬೆಳವಣಿಗೆಯಲ್ಲಿ ಸರ್ಕಾರದ ಪಾತ್ರವು ಅತಿ ಮುಖ್ಯವಾಗಿದೆ. ಸಹಕಾರಾಭಿವೃದ್ಧಿಗೆ ಭರತ ಖಂಡದಲ್ಲಿ ದೊರೆತಿರುವಷ್ಟು ಅವಲಂಬನವೂ ಪ್ರೋತ್ಸಾಹವೂ ಮತ್ತಾವ ದೇಶದಲ್ಲಿಯೂ ದೊರೆತಿಲ್ಲವೆಂದು ಹೇಳಬಹುದು. ರೈತರ ಆರ್ಥಿಕ ಮತ್ತು ನೈತಿಕ ಬೆಳವಣಿಗೆಗೆ ಸಹಕಾರ ಪ್ರಚಾರವು ಬಹಳ ಮುಖ್ಯ ಸಾಧನವೆಂದು ದೇಶದಾದ್ಯಂತವೂ ಸರ್ಕಾರದವರು ಸಾರುತ್ತಿದ್ದಾರೆ. ಇಷ್ಟಾದರೂ ಪಾಶ್ಚಾತ್ಯ ದೇಶಗಳಲ್ಲಿ ಆಗಿರುವಷ್ಟು ಅಭಿವೃದ್ಧಿಯು ಇಲ್ಲಿ ಆಗಿಲ್ಲ, ಪ್ರಜಾ ಪ್ರೇರಣೆಯಿಂದಲೂ ಮತ್ತು ಸ್ವಸಾಮರ್ಥ್ಯದಿಂದಲೂ ಸ್ವಭಾವಸಿದ್ಧವಾಗಿ ಬೆಳೆದ ಚಳುವಳಿಗೂ ಪ್ರಭುತ್ವದವರಿಂದಲೇ ಪ್ರಯತ್ನ ಪೂರ್ವಕವಾಗಿ ಪ್ರಚಾರ ಮಾಡುತ್ತಿರುವ ಚಳುವಳಿಗೂ ವ್ಯತ್ಯಾಸವಿದ್ದೇ ಇದೆ. ಈ ಕಾರಣದಿಂದಲೇ ಭರತ ಖಂಡದಲ್ಲಿ ಸಹಕಾರ ಪದ್ದತಿಯು ಅಷ್ಟು ಪ್ರಬಲಗೊಂಡಿಲ್ಲ, ಆದರೂ ಸಹಕಾರ ತತ್ವವು ಭಾರತೀಯ ಬಡರೈತರ ಉದ್ಧಾರ ಮಾರ್ಗವೆಂದು ಸರ್ಕಾರದವರೂ, ಪ್ರಜೆಗಳು ಮನಗಂಡಿದ್ದಾರೆ. ರೈತರ ಆರ್ಥಿಕ ಜೀವನವನ್ನು ಉತ್ತಮ ಪಡಿಸುವುದಕ್ಕೂ ಮತ್ತು ಅವರನ್ನು ಋಣಮುಕ್ತರನ್ನಾಗಿ ಮಾಡುವುದಕ್ಕೂ ಸಹಕಾರ ಸಂಘಗಳೇ ಸಹಾಯ ಮಾಡಬೇಕು.

ಸಹಕಾರ ಚಳುವಳಿಯು ಭರತ ಖಂಡದಲ್ಲಿ ಕಳೆದ ಮೂವತ್ತು ವರ್ಷಗಳಿಂದ ಹೆಚ್ಚಾಗಿ ಪ್ರಚಾರದಲ್ಲಿದೆ. ಆದರೂ, ಬಂಗಾಳ ಪ್ರಾಂತ್ಯದಲ್ಲಿ ಒಂದುನೂರು ಹಳ್ಳಿಗಳಿಗೆ ೬೦ ಸಹಕಾರ ಸಂಘಗಳಂತೆಯೂ ಮದರಾಸಿನಲ್ಲಿ ೫೩ ಸಂಘಗಳಂತೆಯೂ, ಪಂಜಾಜಿನಲ್ಲಿ ೮೦ ರಂತೆಯೂ ಕರ್ನಾಟಕದಲ್ಲಿ ೬೩ರಂತೆಯೂ ಇವೆ. ಮಹಾರಾಷ್ಟ್ರ ಮತ್ತು ಕರ್ನಾಟಕಗಳಲ್ಲಿ ನೂರಕ್ಕೆ ತೊಂಬತ್ತು ಜನ ಸಾಗುವಳಿದಾರರು ಸಹಕಾರ ಚಳುವಳಿಯ ಸಂಬಂಧವಿಲ್ಲದೆ ಇದ್ದಾರೆ, ಅಲ್ಪಸಂಖ್ಯಾತ ಸಹಕಾರ ಸಂಘಗಳು ಇರುವ ಕೆಲವು ಪ್ರಾಂತ್ಯಗಳಲ್ಲಿ ಕೂಡ ಸಂಘಗಳ ಆರ್ಥಿಕ ಸ್ಥಿತಿಯು ಚೆನ್ನಾಗಿಲ್ಲ. ಅನೇಕ ಸಂಘಗಳ ಬಂಡವಾಳವು ಸರಿಯಾದ ರೀತಿಯಲ್ಲಿ ಶೇಖರಿಸಲ್ಪಡುತ್ತಾ ಇಲ್ಲ. ಅನೇಕ ಕಡೆಗಳಲ್ಲಿ ಈ ಸಂಘಗಳನ್ನು ರೈತರು ಅಧಿಕಾರಿ ಸಂಸ್ಥೆಗಳೆಂದು ತಿಳಿಯುತ್ತಿದ್ದಾರೆ. ಅನೇಕ ಸಂಘಗಳ ಕಾರ್ಯಕ್ರಮವು ಶ್ರದ್ದೆಯಿಂದಲೂ, ಜಾಣತನದಿಂದಲೂ ನಡೆಯುತ್ತಾ ಇಲ್ಲ. ಒಟ್ಟಿನಲ್ಲಿ ಸಹಕಾರ ಚಳುವಳಿಯ ಮೇಲೆ ಜನರಿಗೆ ಇನ್ನೂ ಮಮತೆ, ಉತ್ಸಾಹ, ಶ್ರದ್ದೆ ಮುಂತಾದವು ಹುಟ್ಟಿಲ್ಲ. ಎಂಬುದಾಗಿ ಹೇಳಬಹುದು. ಇದಕ್ಕೆ ಜನರ, ಶ್ರದ್ಧೆ ಮುಂತಾದವು ಹುಟ್ಟಿಲ್ಲ ಎಂಬುದಾಗಿ ಹೇಳಬಹುದು. ಇದಕ್ಕೆ ಜನರ ಅವಿದ್ಯೆಯೇ ಮುಖ್ಯ ಕಾರಣವಾಗಿದೆ.

ಭರತ ಖಂಡದಲ್ಲಿ ಸಹಕಾರ ಪದ್ದತಿಯ ಅಭಿವೃದ್ಧಿಯಾಗಬೇಕಾದರೆ ಅತಿಮುಖ್ಯವಾಗಿ ಮೂರು ಕೆಲಸಗಳು ನಡೆಯಬೇಕು. ಮೊದಲನೆಯದಾಗಿ, ಸಹಕಾರತತ್ವವು ನಮ್ಮ ಅಭಿವೃದ್ಧಿಗಾಗಿ ಸರ್ಕಾರದವರು ಪ್ರಾರಂಭಿಸಿದ್ದಾರೆ. ಇದರಿಂದ ಆದಷ್ಟು ಹೆಚ್ಛಿನ ಪ್ರಯೋಜನವನ್ನು ನಾವು ಹೊಂದಬೇಕು ಎಂಬ ಮನೋಭಾವವು ಪ್ರತಿಯೊಬ್ಬ ರೈತನಿಗೂ ಉಂಟಾಗಬೇಕು. ಎರಡನೆಯದಾಗಿ ಈಗ ಆಚರಣೆಯಲ್ಲಿರುವ ಸಹಕಾರ ಸಂಘಗಳನ್ನು ಸ್ಥಾಪಿಸಿ, ಮಾದರಿ ರೀತಿಯಲ್ಲಿ ಕೆಲಸ ಮಾಡಿ ತೋರಿಸಬೇಕು. ಮೂರನೆಯದಾಗಿ ಈಗ ಆಚರಣೆಯಲ್ಲಿರುವ ಲೇವಾದೇವಿ ಸಂಘಗಳ ಜೊತೆಗೆ ಸಹಕಾರ ಮಳಿಗೆಗಳು, ಕೃಷಿ ಕ್ಷ್ರೇತ್ರ ಸಂಘಗಳು, ಧಾನ್ಯ ವ್ಯಾಪಾರ ಸಂಘಗಳು, ಕೈಗಾರಿಕಾ ಸಂಘಗಳು, ಕೃಷಿ ಸಹಕಾರ ಸಂಘಗಳು, ಜಮೀನು ಕೃಷಿ ಸಂಯೋಜನಾ ಸಂಘಗಳು – ಮುಂತಾದ ನಾನಾ ವಿಧವಾದ ಸಹಕಾರ ಸಂಘಗಳು ಹೆಚ್ಚು ಹೆಚ್ಚಾಗಿ ಸ್ಥಾಪನೆಯಾಗಬೇಕು. ರೈತರ ನಿತ್ಯಜೀವನದಲ್ಲಿ ಬಳಕೆಯಲ್ಲಿರುವ ಹಲವು ದೋಷಗಳನ್ನು ನಿವಾರಣೆ ಮಾಡುವುದಕ್ಕೋಸ್ಕರ ಕೆಲವು ಸಹಕಾರ ಸಂಘಗಳು ಕೆಲಸಮಾಡುತ್ತಿವೆ. ಇವುಗಳಿಗೆ “ಬೆಡರ್ ಲಿವಿಂಗ್ ಸೊಸೈಟಿ” ಗಳೆಂದು ಹೆಸರು. ಇವುಗಳು ಪಂಜಾಬ್ ರಾಜ್ಯದಲ್ಲಿ ಚೆನ್ನಾಗಿ ಕೆಲಸ ಮಾಡುತ್ತಿವೆ. ಈ ಸಂಸ್ಥೆಗಳು ರೈತರ ದುಂದು ವೆಚ್ಚವನ್ನು ಕಡಿಮೆ ಮಾಡಿಸಿ, ಅವರ ಮಕ್ಕಳನ್ನು ಶೈಕ್ಷಣಿಕವಾಗಿ ವಿದ್ಯಾಭಿವೃದ್ಧಿ, ಆರೋಗ್ಯ ನೈರ್ಮಲ್ಯ ಮುಂತಾದ ಕೆಲಸಗಳನ್ನು ತೃಪ್ತಿಕರವಾಗಿ ನಡೆಯಿಸುತ್ತವೆ.

ಭರತ ಖಂಡದ ಅನೇಕ ರಾಜ್ಯಗಳಂತೆಯೇ ಕರ್ನಾಟಕವೂ ಸಹ ಸಹಕಾರ ಪದ್ಧತಿಯನ್ನು ಆಚರಣೆಯಲ್ಲಿ ತರುವುದಕ್ಕೆ ಸೂಕ್ತವಾದ ಕಾನೂನುಗಳನ್ನು ಮಂಜೂರು ಮಾಡಿದೆ. ಕರ್ನಾಟದ ರಾಜ್ಯದ ಸಹಾಕಾರ ತತ್ವ ಕಾನೂನು ಭಾರತದ ಕಾನೂನಿನ ಆಧಾರದ ಮೇಲೆ ತಯಾರಾದುದಾದರೂ. ಅದರಲ್ಲಿ ಕೆಲವು ಉತ್ತಮ ಬದಲಾವಣೆಗಳಿವೆ. ಭಾರತದ ಕಾನೂನು ಲೇವಾದೇವಿ ಸಂಘಗಳಿಗೆ ಅನ್ವಯಿಸತಕ್ಕುದಾಗಿದೆ. ಕರ್ನಾಟಕದ ಕಾನೂನು ಎಲ್ಲ ತರಹದ ಸಹಕಾರ ಸಂಘಗಳಿಗೆ ಅನ್ವಯಿಸುವಂತೆ ರಚಿಸಿದೆ. ಭಾರತದ ಕಾನೂನಿನಲ್ಲಿ ಇರುವಂತೆ ಹಳ್ಳಿ ಮತ್ತು ಪಟ್ಟಣಗಳೆಂದು ವ್ಯತ್ಯಾಸ ಮಾಡದೆ ಕಾರ್ನಾಟಕ ಸ್ಥಿತಿಗತಿಗನುಸಾರವಾಗಿ ಏಕರೀತಿಯ ಸಹಕಾರ ಸಂಘಗಳ ಸ್ಥಾಪನೆಗೆ ಅವಕಾಶವನ್ನುಂಟು ಮಾಡಿದೆ.

ಮೂಲ ಸಹಕಾರ ಸಂಘಗಳು ಬೆಳೆದುದರ ಫಲವಾಗಿ ಅವುಗಳಿಗೆ ಬಂಡವಾಳ ಹಣವನ್ನು ಒದಗಿಸಲು ಒಂದು ಕೇಂದ್ರ ಸಹಕಾರ ಸಂಸ್ಥೆಯ ಅವಶ್ಯಕತೆಯುಂಟಾಯಿತು. ಆದುದರಿಂದ ೧೯೦೯ನೆ ಇಸವಿಯಲ್ಲಿ “ಬೆಂಗಳೂರು ಸೆಂಟ್ರಲ್ ಕೋ-ಆಪರೇಟಿವ್ ಬ್ಯಾಂಕ್”, ೧೯೧೫ರಲ್ಲೆ: ಮೈಸೂರು ಸಹಕಾರ ಅಪೆಕ್ಸ್ ಬ್ಯಾಂಕು” ಸ್ಥಾಪಿಸಲ್ಪಟ್ಟವು. ರಾಜ್ಯದ ನಾನಾ ಭಾಗಗಳಲ್ಲಿ ಕೆಲಸಮಾಡುತ್ತಿರುವ ಸಹಕಾರ ಸಂಸ್ಥೆಗಳಿಗೆ ಈ ಎರಡು ಕೇಂದ್ರ ಸಂಸ್ಥೆಗಳು ಇಂದಿಗೂ ಹಣ ಒದಗಿಸುತ್ತಿವೆ. ಈ ಹಣದಿಂದ ಸಾವಿರಾರು ಸಂಸ್ಥೆಗಳು ರೈತಾ ಸಂಪಾದನಾ ಶಕ್ತಿಯನ್ನು ಹೆಚ್ಚಿಸುವುದಕ್ಕೂ, ಅವರನ್ನು ಋಣಮುಕ್ತರನ್ನಾಗಿ ಮಾಡುವುದಕ್ಕೂ ಸಹಾಯ ಮಾಡುತ್ತಿವೆ.

“ಕೋ-ಆಪರೇಟೀವ್ ಕ್ರೆಡಿಟ್” ಶಾಖೆಯವರು ಅಪೆಕ್ಸ್ ಬ್ಯಾಂಕಿನಿಂದ ಸಾಲಪಡೆದ ಸಹಕಾರ ಸಂಘಗಳ ಹಣಕಾಸಿನ ಪರಿಸ್ಥಿತಿಯನ್ನು ಕೂಲಂಕುಶವಾಗಿ ಪರಿಶೀಲಿಸಿ, ಅವುಗಳಿಗೆ ಸೂಕ್ತವಾದ ಸಲಹೆಗಳನ್ನು ಕೊಡುತ್ತಿದ್ದಾರೆ. ಸಂಘಗಳ ಸಾಲವು ಸರಿಯಾಗಿ ಪಾವತಿ ಮಾಡುವುದಕ್ಕೆ ಅನುಕೂಲವಾದ ಮತ್ತು ಪ್ರಾಮಾಣಿಕರಾದ ಸದಸ್ಯರನ್ನು ಚುನಾಯಿಸಿ ಪುನರ್ವ್ಯವಸ್ಥೆಗೊಳಿಸುತ್ತಿದ್ದಾರೆ, ಸಂಘದ ಸಾಲವನ್ನು ತೀರಿಸಲು ಕೊಟ್ಟಿರುವ ಅವಧಿಯನ್ನು ಹೆಚ್ಚುಸುವುದರಿಂದಲೂ, ಅನೇಕ ಸಂಘಗಳನ್ನು ಪುನರುಜ್ಜೀವನಗೊಳಿಸಲಾಗಿದೆ. ಪ್ರತಿಯೊಂದು ಸಂಘದವರೂ ತಮಗೆ ಅತ್ಯವಶ್ಯಕವಾದ ವೆಚ್ಚಕ್ಕೂ ಜಮೀನು ವ್ಯವಸಾಯ ಮಾಡುವುದಕ್ಕೂ, ಕಂದಾಯ ಪಾವತಿ ಮಾಡುವುದಕ್ಕೂ ತಕ್ಕಷ್ಟು ನಗದು ಹಣವನ್ನು ರೈತರಿಗೆ ಒದಗಿಸಲು ಪ್ರಯತ್ನ ಪಡುತ್ತಿದ್ದಾರೆ. ಸಾಧ್ಯವಾದ ಸಂದರ್ಭಗಳೆಲ್ಲಾ ವ್ಯವಸಾಯೋತ್ಪನ್ನ ಪದಾರ್ಥಗಳನ್ನು ಮಾರಾಟ ಮಾಡಿ ಬಂದ ಹಣವನ್ನು ಸಾಲದ ಕಂತಿಗಾಗಿ ವಜಾ ಹಾಕಿಕೊಳ್ಳಲು ವಿಶೇಷ ರೀತಿಯ ಏರ್ಪಾಡು ಮಾಡಲಾಗಿದೆ. ಸಹಕಾರ ಚಳುವಳಿಯ ಪ್ರಯೋಜನವು ಜನರಿಗೆ ಸಂಪೂರ್ಣವಾಗಿ ಲಭಿಸಲೆಂದು ಸಹಕಾರ ಶಾಖೆಯು ಕೆಲಸ ಮಾಡುತ್ತಿದೆ. ಆದರೂ ಕರ್ನಾಟಕದ ಪ್ರಜೆಗಳು ಈ ಸದವಕಾಶವನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಳ್ಳುತ್ತಿಲ್ಲ.

“ಡೆನ್ಮಾರ್ಕ್ ಮತ್ತು ಸ್ವೀಡನ್ ದೇಶಗಳು ಇಷ್ಟು ಅಭಿವೃದ್ಧಿ ಸ್ಥಿತಿಗೆ ಬರಲು ಯಾವ ಸಹಕಾರ ಚಳುವಳಿಯು ಕಾರಣವಾಯಿತೋ ಅದೇ ಸಹಕಾರ ಚಳುವಳಿಯು ನಮ್ಮ ದೇಶದಲ್ಲಿ ಆಷ್ಟು ಹೆಚ್ಚಾಗಿ ಮುಂದುವರಿದಿಲ್ಲ” ಎಂಬುದಾಗಿ ಸಹಕಾರ ಪ್ರೇಮಿಗಳು ಹೇಳುತ್ತಿದ್ದಾರೆ. ಸಹಕಾರ ಮನೋಭಾವವು ನಮ್ಮ ಜನಗಳಲ್ಲಿ ಇನ್ನೂ ಚೆನ್ನಾಗಿ ಮೂಡಿಲ್ಲ. ಈ ಚಳುವಳಿಗೆ ಜೀವಕಳೆಯನ್ನು ತುಂಬಲು ಸಹಕಾರ ಸಂಸ್ಥೆಗಳ ಉತ್ಸಾಹ ಮತ್ತು ಶ್ರದ್ದೆ ಕಡಿಮೆಯಾಗಿದೆ ಎಂದು ಹೇಳಬಹುದು. ಸಂಸ್ಥಾನದ ಸಹಕಾರ ವಿಚಾರಣಾ ಸಮಿತಿಯವರು ತಿಳಿಸಿರುವಂತೆ ಸಹಕಾರ ಸಂಘಗಳ ನಿಜತ್ವದ ತಿಳಿವಳಿಕೆಯು ಸದಸ್ಯರಿಗೆ ಇಲ್ಲದೇ ಇರುವುದರಿಂದಲೂ, ಸಹಕಾರ ತತ್ವದ ಜ್ಞಾನವು ಇಲ್ಲದೇ ಇರುವವರು ಸಂಘಗಳ ಕಾರ್ಯನಿರ್ವಾಹವನ್ನು ವಹಿಸಿಕೊಂಡಿರುವುದರಿಂದಲೂ ಚಳುವಳಿಯ ಅಭ್ಯುದಯಕ್ಕೆ ಆಡಚಣೆಯುಂಟಾಗಿವೆ.

ಹಳ್ಳಿಗಳೇ ಕರ್ನಾಟಕದ ರಾಜ್ಯದ ತಳಹದಿ, ಇವುಗಳು ಪುಷ್ಟಿಯಾದಂತೆಲ್ಲ ರಾಜ್ಯವು ಅಭಿವೃದ್ಧಿ ಹೊಂದುವುದು. ರೈತನೇ ರಾಜ್ಯದ ಜೀವಾಳ, ರೈತನೇ ದೇಶಕ್ಕೆ ಸ್ಪೂರ್ತಿ ಕೊಡತಕ್ಕವನು. ಅವನು ಈಗ ಅನುಭವಿಸುತ್ತಿರುವ ಖಾಯಿಲೆಗೆ ಹಣಕಾಸಿನ ಅಭಾವವೇ ಮುಖ್ಯ ಕಾರಣವಾಗಿದೆ. “ರೈತರಿಗೆ ಸಾಲವೇ ನರಕಯಾತನೆ. ಅದು ಅವರು ಕಷ್ಟ ಪಟ್ಟು. ಬೆಳೆಯುವ ಬೆಳೆಯು ಅವರ ಕೈಹತ್ತದಂತೆ ಮಾಡುತ್ತದೆ. ಅವರ ಶಕ್ತಿಯನ್ನು ಕುಂದಿಸುತ್ತದೆ. ಅವರಿಗೆ ಜೀವನದಲ್ಲಿ ಬೇಸರಿಕೆಯನ್ನುಂಟು ಮಾಡುತ್ತಿದೆ. ಆದುದರಿಂದ ಅವರ ಸಾಲದ ಕಷ್ಟವನ್ನು ಮೊದಲು ಪರಿಹರಿಸಬೇಕು. ಅವರ ಕೃಷಿ ಕಸುಬನ್ನು ಉತ್ತಮ ಪಡಿಸಲು ಸುಲಭ ಕಂತಿನ ಬಂಡವಾಳ ಒದಗಿಸಬೇಕು. ಗೃಹಕೈಗಾರಿಕೆಗಳಲ್ಲೆ ತರಬೇತು ಕೊಡಬೇಕು. ಅವರು ಬೆಳೆದ ಧಾನ್ಯಗಳಿಗೂ, ತಯಾರು ಮಾಡಿದ ಪದಾರ್ಥಗಳಿಗೂ ಸರಿಯಾದ ಬೆಲೆ ಸಿಗುವಂತಾಗಬೇಕು. ಅವರ ಅಲ್ಪ ಆದಾಯವನ್ನು ಪುಷ್ಟಿಗೊಳಿಸಬೇಕು. ಹೀಗೆ ಅವರ ಜೀವನದಲ್ಲಿ ಸುಖಶಾಂತಿಗಳು ನೆಲಸಬೇಕಾದರೆ ಉತ್ತಮ ಸಹಕಾರ ಸಂಘಗಳು ಕೆಲಸಮಾಡಬೇಕು.”[6] ಎಂಬುದಾಗಿ ಲಾರ್ಡ್ ಲಿನ್-ರಿತ್ ಗೋ ಆವರು ಬರೆದಿದ್ದಾರೆ.

ಕರ್ನಾಟಕ ರಾಜ್ಯದಲ್ಲಿ ಸಹಕಾರ ಪದ್ಧತಿಯ ಅಭಿವೃದ್ಧಿಗೆ ಹೆಚ್ಚು ಅವಕಾಶವಿದೆ. ಹಣ್ಣು, ಹೂವು ಮುಂತಾದವುಗಳು ಸಮೃದ್ಧಿಯಾಗಿರುವ ಕಡೆ ಅವುಗಳ ಮಾರಾಟಕ್ಕೆ ಸಹಕಾರ ಸಂಘಗಳನ್ನು ಸ್ಥಾಪಿಸಬಹುದು. ಸಂಸ್ಥಾನದ ಅನೇಕ ಭಾಗಗಳಲ್ಲಿ ತಯಾರಾಗುತ್ತಿರುವ ಉಣ್ಣೆ, ರೇಷ್ಮೆ, ಹತ್ತಿಬಟ್ಟೆಗಳ ಮಾರಾಟಕ್ಕೆ ಸಹಕಾರ ಸಂಘಗಳನ್ನು ಸ್ಥಾಪಿಸಬಹುದು. ಇದರಿಂದ ರಾಷ್ಟ್ರೀಯ ಮತ್ತು ಸ್ಥಳೀಯ ಕೈಗಾರಿಕೆಗಳೆಗೆ ಉತ್ತೇಜನ ಕೊಟ್ಟಂತಾಗುವುದಲ್ಲದೆ. ಕೈಗಾರಿಕೋದ್ಯಮಗಳನ್ನು ಉತ್ತಮ ಪಡಿಸುವುದಕ್ಕೂ, ಸಹಕಾರ ಕ್ರಮದಲ್ಲಿ ನಡೆಯಿಸುವ ಸೌಲಭ್ಯವನ್ನು ಕಲ್ಪಿಸಿದಂತೆ ಆಗುವುದು. ದನಕರುಗಳ ತಳಿಯನ್ನು ಹಾಲು, ಮೊಸರು, ಬೆಣ್ಣೆ ಮುಂತಾದವುಗಳ ಮಾರಾಟಕ್ಕೂ, ಸಂಘಗಳನ್ನು ಸ್ಥಾಪಿಸಬಹುದು. ಪಂಜಾಬ್ ರಾಜ್ಯದಲ್ಲಿರುವಂತೆ ಧಾನ್ಯಗಳನ್ನು ಶೇಖರಿಸಿ, ಲಾಭ ಬರುವ ಕಾಲದಲ್ಲಿ ಮಾರಾಟ ಮಾಡುವ ಸಂಘಗಳನ್ನು ಏರ್ಪಡಿಸಬಹುದು. ಸಿಮೆಂಟು, ಕಬ್ಬಿಣ, ಮರ-ಮುಂತಾದ ಸಾಮಾನುಗಳನ್ನು ಮಾರಾಟ ಮಾಡುವುದಕ್ಕೂ ರಸ್ತೆ, ಸೇತುವೆ, ಮನೆ ಮುಂತಾದವುಗಳನ್ನು ಕಂಟ್ರಾಕ್ಟ್ ಮಾಡುವುದಕ್ಕೂ ಇಂಜಿನಿಯರಿಂಗ್ ಸಂಘಗಳನ್ನು ಸ್ಥಾಪಿಸಬಹುದು. ನಿರುದ್ಯೋಗ ಸಮಸ್ಯೆಯನ್ನು ಬಗೆಹರಿಸುವುದಕ್ಕೆ ಸಹಕಾರ ಪದ್ಧತಿಯಲ್ಲಿ ಹೇರಳವಾದ ಅವಕಾಶವಿದೆ. ಸಂಸ್ಥಾನದ ಅಭ್ಯುದಯವಾಗಬೇಕಾದರೆ, ಎಲ್ಲ ಕಡೆಗಳಲ್ಲಿಯೂ, ನಾನಾ ಉದ್ದೇಶಗಳನ್ನೊಳಗೊಂಡ ಸಹಕಾರ ಸಂಘಗಳು ಜನ್ಮ ತಾಳಿ ಕೆಲಸ ಮಾಡಬೇಕು. ಉದಾರ ಸ್ವಭಾವವುಳ್ಳ ಹಿತಚಿಂತಕರಾದ ಜನರು ಮುಂದೆ ಬಂದು ಸರ್ಕಾರದ ಸಹಕಾರೋದ್ಯಮಗಳಲ್ಲಿ ನೇರವಾಗಿ ಕೆಲಸ ಮಾಡಬೇಕು. ಉದಾತ್ವ ಭಾವನೆಯುಳ್ಳ ತರುಣರು ಸರಿಯಾದ ಶಿಕ್ಷಣ ಪಡೆದು ಸಹಕಾರ ಚಳುವಳಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿ ತಮ್ಮ ಸಹೋದರ ವರ್ಗಕ್ಕೆ ಸೇವೆ ಸಲ್ಲಿಸಬೇಕು.

ಕಾವೇರಿ, ಜೋಗ್ ಜಲಪಾತಗಳನ್ನು ತಡೆಗಟ್ಟಿ ಹೇಗೆ ವಿದ್ಯುಚ್ಛಕ್ತಿಯನ್ನು ಉತ್ಪತ್ತಿ ಮಾಡಿ ಕನ್ನಡ ನಾಡಿನ ಜನರ ಸುಖ ಸಂತೋಷಗಳನ್ನು ಅಭಿವೃದ್ಧಿ ಪಡಿಸುತ್ತಿದ್ದಾರೆಯೋ, ಹಾಗೆಯೇ ಜನಗಳಲ್ಲಿರುವ ಸಹಕಾರ ಮನೋಭಾವವನ್ನು ರಾಷ್ಟ್ರದ ಹಿತಸಾಧನೆಗೆ ಉಪಯೋಗಿಸಿಕೊಳ್ಳಲು ಸರ್ಕಾರದವರು ಹಲವು ಕಾರ್ಯಕ್ರಮಗಳನ್ನು ಅನುಸರಿಸುತ್ತಿದ್ದಾರೆ. ಆಧುನಿಕ ರೀತಿಯಲ್ಲಿ ಸಹಕಾರ ಶಿಕ್ಷಣ ಕೊಡಲು “ಕರ್ನಾಟಕ ಸಹಕಾರ ಕೇಂದ್ರ” ಎಂಬ ಒಂದು ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಈ ಸಂಸ್ಥೆಯು ಮೈಸೂರು, ಬೆಂಗಳೂರು, ಬೆಳಗಾಂ, ಬೀದರ್, ದಾವಣಗೆರೆ ನಗರದಲ್ಲಿ ಒಂದೊಂದು ಶಾಖೆಯನ್ನು ಸ್ಥಾಪಿಸಿಕೊಂಡಿದೆ. ಸಹಕಾರ ಸಂಘಗಳ ನೌಕರರಿಗೂ ಖಾಸಗಿ ಮಹನೀಯರಿಗೂ ಶಿಕ್ಷಣ ಕೊಡುವ ಏರ್ಪಾಡು ಮಾಡಿದೆ. ಗ್ರಾಮಾಂತರ ಪ್ರದೇಶದಿಂದ ಬರುವ ವಿದ್ಯಾರ್ಥಿಗಳಿಗೆ ಮಾಸಾಶನವನ್ನೂ ಸ್ಥಳ ವಸತಿಯನ್ನೂ ಕಲ್ಪಿಸಲಾಗಿದೆ. ವ್ಯಾಸಂಗದ ಅವಧಿಯು ಮುಗಿದ ಮೇಲೆ ಪರೀಕ್ಷೆಗಳನ್ನು ನಡೆಯಿಸಿ ಉತ್ತೀರ್ಣರಾದವರಿಗೆ ಪ್ರಶಸ್ತಿ ಪತ್ರಿಕೆಗಳನ್ನು ಕೊಡುವ ಏರ್ಪಾಡಾಗಿದೆ. ವ್ಯಾಸಂಗದ ಕಾಲದಲ್ಲಿ ವಿದ್ಯಾರ್ಥಿಗಳು ಪಾರಿಭಾಷಿಕ ಶಿಕ್ಷಣ ಪಡೆಯುವುದಕ್ಕೋಸ್ಕರ ನಗರಗಳಲ್ಲಿ ಚೆನ್ನಾಗಿ ಕೆಲಸ ಮಾಡುತ್ತಿರುವ ಸಹಕಾರ ಸಂಸ್ಥೆಗಳಿಗೆ ಹೋಗಿ ಕಾರ್ಯಕ್ರಮವನ್ನು ತಿಳಿದುಕೊಳ್ಳುವ ಸೌಕರ್ಯವನ್ನು ಒದಗಿಸಲಾಗಿದೆ. ಸಹಕಾರ ಚಳುವಳಿಯ ಚರಿತ್ರೆ, ಲೆಕ್ಕ ಪತ್ರ ಇಡುವ ವಿಧಾನ, ಸಹಕಾರತತ್ವದ ಆಚರಣೆ, ಗ್ರಾಮ ಪುನರುಜ್ಜೀವನ ಮುಂತಾದ ವಿಷಯಗಳಲ್ಲಿ ಶಿಕ್ಷಣ ಕೊಡಲಾಗುತ್ತಿದೆ. ವಿದ್ಯಾರ್ಥಿಗಳು ಹೀಗೆ ಉತ್ತಮ ಶಿಕ್ಷಣ ಪಡೆದು ತಮ್ಮ ತಮ್ಮ ಸ್ಥಳೀಯ ಸಹಕಾರ ಸಂಘಗಳಲ್ಲಿ ದಕ್ಷತೆಯಿಂದ ಕೆಲಸ ಮಾಡಿ ಸಹಕಾರಾಭಿವೃದ್ಧಿಗೆ ಸಹಾಯ ಮಾಡಬೇಕೆಂಬುದೇ ಈ ಕೇಂದ್ರ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ.

ಮನೆ ಕಟ್ಟುವುದಕ್ಕೆ ಸಹಾಯ ಮಾಡುವ ಸಹಕಾರ ಸಂಘಗಳು ಮೊದಲು ಮೈಸೂರು ಸಂಸ್ಥಾನದಲ್ಲಿ ಪ್ರಾರಂಭವಾಗಿದ್ದವು. ಈ ಸಂಸ್ಥೆಗಳಿಗೆ ಹೆಚ್ಚು ಬಂಡವಾಳವನ್ನು ಒದಗಿಸಲು ಅಪೆಕ್ಸ್ ಬ್ಯಾಂಕ್ ಸಹಾಯ ಮಾಡುತ್ತಲಿತ್ತು. ಸಂಸ್ಥಾನದಲ್ಲಿ ಸುಮಾರು ಮೂವತ್ತು ಸಂಘಗಳಿಗಿಂತ ಹೆಚ್ಚಾಗಿ ಅನುಕೂಲವಾದ ವಸತಿಗಳನ್ನು ಕಲ್ಪಿಸಿಕೊಳ್ಳುವುದಕ್ಕೆ ಇವು ಸಹಾಯ ಮಾಡುತ್ತಿದೆ. ಬೆಂಗಳೂರು ಪಟ್ಟಣದ ಹೌಸಿಂಗ್ ಸಂಘವೂ, ಮಂಡ್ಯದ ಹೌಸ್ ಬಿಲ್ಡಿಂಗ್ ಸಂಘವೂ, ಮಾದರಿ ಕೆಲಸಗಳನ್ನು ಮಾಡುತ್ತಿವೆ. ಈ ಸಂಸ್ಥೆಗಳು ಸುಲಭವಾಗಿ ಮನೆ ಕಟ್ಟುವುದಕ್ಕೂ, ಚರಂಡಿ, ದೀಪ ಮತ್ತು ನೀರಿನ ಸೌಕರ್ಯಗಳನ್ನು ಕಲ್ಪಿಸುವುದಕ್ಕೂ ಶ್ರದ್ದೆ ವಹಿಸಿ ಕೆಲಸ ಮಾಡುತ್ತಿವೆ. ಇಂತಹ ಮಾದರಿ ಸಹಕಾರ ಸಂಘಗಳು ಇನ್ನೂ ಹೆಚ್ಚಾಗಿ ಅವತರಿಸಿ, ಜನರಿಗೆ ಹೆಚ್ಚು ಸಹಾಯ ಮಾಡಬೇಕು.

ಗ್ರಾಮಾಂತರಗಳಲ್ಲಿ ಇರುವ ಸಹಕಾರ ಸಂಘಗಳು ಸಾಮಾನ್ಯವಾಗಿ ರೈತರಿಗೆ ಅವಶ್ಯಕವಾದ ದೀರ್ಘಾವಧಿ ಸಾಲವನ್ನು ಒದಗಿಸಲು ಆಗುವುದಿಲ್ಲ, ರೈತರ ಅಪಾರವಾದ ಸಾಲದ ಭಾರವನ್ನು ಕಡಿಮೆ ಮಾಡುವುದಕ್ಕೂ. ದೀರ್ಘಾವಧಿ ಸಾಲವನ್ನು ಒದಗಿಸುವ ಸಹಕಾರ ಸಂಘಗಳು ಸ್ಥಾಪಿಸಲ್ಪಟ್ಟಿವೆ. ಇವುಗಳಿಗೆ ಜಮೀನು ಕೃಷಿ ಸಂಘಗಳೆಂದು ಹೆಸರು. ಸಂಸ್ಥಾನದಲ್ಲಿ ಒಂದು ಕೇಂದ್ರ ಕೃಷಿ ಬ್ಯಾಂಕು ಸುಮಾರು ಮುನ್ನೂರು ಸಹಕಾರ ಅಂಗ ಸಂಸ್ಥೆಗಳೂ ಕೆಲಸ ಮಾಡುತ್ತಿವೆ. ಕೇಂದ್ರ ಸಂಸ್ಥೆಯು ಅಂಗ ಸಂಸ್ಥೆಗಳಿಗೆ ಬಂಡವಾಳವನ್ನು ಒದಗಿಸಿ ಅವುಗಳ ಮೂಲಕ ರೈತರ ಸಾಲವನ್ನು ತೀರಿಸುವ ವ್ಯವಸ್ಥೆ ಮಾಡಲಾಗಿದೆ. ಈ ಅಂಗ ಸಂಸ್ಥೆಗಳು ಇದುವರೆಗೆ ಕೋಟ್ಯಾಂತರ ರೂಪಾಯಿಗಳ ಸಾಲಕೊಟ್ಟಿವೆ. ರೈತರನ್ನು ಕಿತ್ತು ತಿನ್ನುತ್ತಿರುವ ಅಪಾರ ಸಾಲದ ಕಷ್ಟ ಪರಿಹಾರವಾಗಬೇಕಾದರೆ ಇಂತಹ ಕೃಷಿ ಸಹಕಾರ ಸಂಸ್ಥೆಗಳ ಕಾರ್ಯಕ್ಷೇತ್ರವು ಹೆಚ್ಚು ವಿಸ್ತರಿಸಬೇಕು.

ರೈತರಿಗೆ ವೈದ್ಯ ಸಹಾಯವನ್ನು ಒದಗಿಸುವುದಕ್ಕೂ, ಅವರ ವ್ಯಾಜ್ಯ ವ್ಯವಹಾರಗಳನ್ನು ಬಗೆಹರಿಸುವುದಕ್ಕೂ, ಜಮೀನುಗಳ ದೀರ್ಘಾವಧಿ ಬಳಕೆಯನ್ನು ಸಂಯೋಜನೆ ಮಾಡುವುದಕ್ಕೂ ಕೆಲವು ದೇಶಗಳಲ್ಲಿ ಸಹಕಾರ ಸಂಸ್ಥೆಗಳು ಸ್ಥಾಪಿತವಾಗಿವೆ. ಆಯಾ ದೇಶಗಳ ಅನುಭವವನ್ನೂ ಅಲ್ಲಿಯ ಕಾರ್ಯಕ್ರಮವನ್ನೂ ವಿಚಾರ ಮಾಡಿದರೆ ಪರಸ್ಪರ ಸಹಾಯ ಸಂಘಗಳು, ಗ್ರಾಮ ಜೀವನದ ಸಮಸ್ತ ಶಾಖೆಗಳಲ್ಲೂ ಹೆಚ್ಚು ಸಹಾಯ ಮಾಡುವುವು ಎಂಬುದಾಗಿ ಗೋಚರವಾಗುವುದು. ರೈತರ ನಿತ್ಯಜೀವನದಲ್ಲಿ ಅನೇಕ ಲೋಪದೋಷಗಳಿವೆ ಇವುಗಳನ್ನೆಲ್ಲಾ ಪರಿಹರಿಸಿ ಅವರ ಜೀವನದ ಅಂತಸ್ತನ್ನು ಉತ್ತಮಗೊಳಿಸಲು ಒಂದು ಬಗೆಯ ಸಹಕಾರ ಸಂಘಗಳನ್ನು ಪಂಜಾಬಿನಲ್ಲಿ ಸ್ಥಾಪಿಸಲಾಗಿದೆ. ೧೯೩೧ನೆಯ ಸಾಲಿನಲ್ಲಿ ಇಂತಹ ೩೬೦ ಸಂಘಗಳು ರೈತರ ಸಂಪಾದನೆಯನ್ನು ಹಾಳು ಮಾಡುತ್ತಿರುವ ಕೆಟ್ಟ ಪದ್ದತಿಗಳನ್ನು ತಪ್ಪಿಸಿದ್ದಲ್ಲದೆ ಅವರ ಆರೋಗ್ಯ ನೈರ್ಮಲ್ಯ ಮುಂತಾದ ವಿಷಯಗಳಿಗೆ ಹೆಚ್ಚು ಗಮನ ಕೊಡುತ್ತಿದ್ದವು. ಇಂತಹ ಸಂಘಗಳು ಸ್ಥಾಪಿತವಾದ ಗ್ರಾಮಗಳಲ್ಲಿ ರೈತರ ಮದುವೆಯ ಖರ್ಚು ಶೇಕಡಾ ೫೦ ರಿಂದ ೭೫ರವರೆಗೂ ಕಡಿಮೆಯಾಗಿದೆ ಎಂದು ಡಾರ್ಲಿಂಗ್ ಅವರು ಅಂದಾಜು ಮಾಡಿದ್ದಾರೆ.[7] ಆದರೂ ನಮ್ಮ ದೇಶದಲ್ಲಿ ಸಹಕಾರ ಪದ್ಧತಿಯು ಅಷ್ಟು ವಿಸ್ತರಿಸಿಲ್ಲ ಅವು ಅಭಿವೃದ್ಧಿಗೆ ಬಂದು ಸರ್ವರಿಗೂ ಉಪಯೋಗವಾಗಬೇಕಾದರೆ ಅತಿ ಮುಖ್ಯವಾಗಿ ಐದು ವಿಷಯಗಳನ್ನು ನಾವು ಗಮನಿಸಬೇಕು.

೧. ಗ್ರಾಮದ ಸಹಕಾರ ಸಂಘವನ್ನು ಹಳ್ಳಿಯ ಬ್ಯಾಂಕನ್ನಾಗಿ ಮಾರ್ಪಡಿಸಿ, ಹಳ್ಳಿಯ ಜೀವನದ ರೀತಿನೀತಿಗಳನ್ನು ಅದು ತನ್ನ ಆಡಳಿತದಲ್ಲಿ ಸೇರಿಸಿಕೊಳ್ಳುವಂತೆ ಏರ್ಪಾಡಾಗಬೇಕು.

೨. ಹಳ್ಳಿಯಲ್ಲಿ ವಾಸಮಾಡುವ ಪ್ರತಿಯೊಬ್ಬನೂ ಈ ಸಂಸ್ಥೆಯ ಸದಸ್ಯನಾಗಬೇಕು.

೩. ಸಹಕಾರ ಮೂಲತತ್ವವನ್ನು ಪ್ರತಿಯೊಬ್ಬನೂ ಅನುಸರಿಸಬೇಕು.

೪. ಪ್ರತಿಯೊಬ್ಬ ಸದಸ್ಯನೂ ಸಂಸ್ಥೆಯ ವ್ಯವಹಾರದಲ್ಲಿ ಯಾವಾಗಲೂ ಭಾಗ ತೆಗೆದುಕೊಳ್ಳಬೇಕು

೫. ಇಂತಹ ಕೇಂದ್ರೀಕೃತ ಸಹಾಯಕ ಸಂಸ್ಥೆಗಳನ್ನು ಕೆಲವು ಚುನಾಯಿತ ಪ್ರದೇಶಗಳಲ್ಲಿ ಮೊದಲು ಸ್ಥಾಪಿಸಿ ಕೆಲಸ ಮಾಡಬೇಕು.

ಮೇಲ್ಕಂಡ ಐದು ವಿಷಯಗಳನ್ನು ವಿಸ್ತರಿಸುವುದಾದರೆ

೧. ಹಳ್ಳಿಯಲ್ಲಿ ಸ್ಥಾಪಿತವಾದ ಸಹಕಾರ ಸಂಸ್ಥೆಯು ಹಣಕಾಸಿನ ವ್ಯವಹಾರ ಒಂದನ್ನೇ ಆಚರಣೆಯಲ್ಲಿ ಇಟ್ಟುಕೊಳ್ಳಕೂಡದು. ಪದಾರ್ಥಗಳ ಮತ್ತು ದವಸಗಳ ಮಾರಾಟದ ವಿಷಯವನ್ನೂ, ವ್ಯವಸಾಯ ಮತ್ತು ಕೈಗಾರಿಕೋದ್ಯಮಗಳ ಉನ್ನತಿಯನ್ನೂ ಮತ್ತು ಅಲ್ಲಿಯ ಸಾಮಾಜಿಕ ಮತ್ತು ಧಾರ್ಮಿಕ ಪದ್ಧತಿಗಳನ್ನು ಉತ್ತಮಪಡಿಸುವ ವಿಷಯವನ್ನೂ ಈ ಸಂಸ್ಥೆಯು ಗಮನಿಸಬೇಕು. ಗ್ರಾಮಸ್ಥರು ದುಂದುಗಾರಿಕೆಯನ್ನು ಕಡಿಮೆ ಮಾಡಿ ಅವರ ಕ್ರಿಯಾತ್ಮಕ ಶಕ್ತಿಯನ್ನು ಅಭಿವೃದ್ಧಿ ಪಡಿಸಿಕೊಳ್ಳಬೇಕು. ಈ ಕೆಲಸಗಳನ್ನು ನಡೆಯಿಸುವುದಕ್ಕಾಗಿ ಸಂಸ್ಥೆಯು ಪ್ರಾರಂಭದಲ್ಲಿಯೇ ಸರಿಯಾದ ಮತ್ತು ಸುಲಭವಾದ ಕಾಯಿದೆಗಳನ್ನು ಏರ್ಪಡಿಸಿ ಪ್ರತಿಯೊಬ್ಬ ಸದಸ್ಯನೂ ಅವುಗಳನ್ನು ಅಚರಿಸುವಂತೆ ಮಾಡಬೇಕು. ಸಂಸ್ಥೆಯು ಆಚರಣೆಯಲ್ಲಿ ತಂದ ಪ್ರತಿಯೊಂದು ವಿಷಯವನ್ನು ಚೆನ್ನಾಗಿ ಚರ್ಚೆಮಾಡಿ, ಅದರ ಸಾಧ್ಯಾಸಾಧ್ಯತೆಯನ್ನು ವಿಮರ್ಶೆಮಾಡಿ ಪ್ರತಿಯೊಬ್ಬ ಸದಸ್ಯನೂ ಅದನ್ನು ಚೆನ್ನಾಗಿ ತಿಳಿದುಕೊಳ್ಳುವಂತೆ ಮಾಡಬೇಕು. ಹೀಗೆ ಗ್ರಾಮದ ಸಹಕಾರ ಸಂಸ್ಥೆಯು ಹಳ್ಳಿಯ ಉದ್ಯಮಗಳಲ್ಲಿ ತನ್ನ ಪ್ರಭಾವವನ್ನು ಬೀರಿ ರೈತರ ಜೀವನವನ್ನು ಉತ್ತಮ ಪಡಿಸಬಹುದು.

೨. ಇಂತಹ ಸಂಸ್ಥೆಗಳು ಉತ್ತಮ ರೀತಿಯಲ್ಲಿ ಕಲಸ ಮಾಡಬೇಕಾದರೆ ಹಳ್ಳಿಯಲ್ಲಿ ವಾಸ ಮಾಡುವ ಪ್ರತಿಯೊಬ್ಬರೂ ತಪ್ಪದೆ ಸಂಸ್ಥೆಯ ಸದಸ್ಯರಾಗಬೇಕು. ಸದಸ್ಯತ್ವದಲ್ಲಿ ಮೇಲುಕೀಳೆಂಬ ಭಾವನೆಯಾಗಲಿ ಬಡತನವೆಂಬ ಭೇದಗಳಾಗಲಿ ಖಂಡಿತ ಇರಕೂಡದು, ಸಂಸ್ಥೆಯ ಆಡಳಿತವು ಸರಿಯಾಗಿದ್ದ ಪಕ್ಷದಲ್ಲಿ ಈ ವ್ಯತ್ಯಾಸಗಳು ತಲೆಹಾಕಲು ಅವಕಾಶವಿಲ್ಲ. ದಲಿತ ಜನಾಂಗದ ಜೀವನದ ಸದಸ್ಯರ ಸ್ಥಿತಿಯನ್ನು ಉತ್ತಮ ಪಡಿಸುವುದು ಸಂಸ್ಥೆಯ ಮುಖ್ಯ ಉದ್ದೇಶವಾಗಿರಬೇಕು. ಪ್ರತಿಯೊಬ್ಬ ಸದಸ್ಯನೂ ಅವನವನ ಯೋಗ್ಯತಾನುಸಾರ ಸಂಸ್ಥೆಯಿಂದ ಪ್ರಯೋಜನವನ್ನು ಹೊಂದುವಂತಿರಬೇಕು. ಕಡುಬಡವನಾದ ಗ್ರಾಮಸ್ಥನೂ ಕೂಡ ಸಂಸ್ಥೆಯಿಂದ ಹಣಕಾಸಿನ ಸೌಲಭ್ಯವನ್ನೂ ಹೊಂದಲು ಅವಕಾಶವಿಲ್ಲದಿದ್ದರೆ ಸುಲಭ ಬೆಲೆಗೆ ಪದಾರ್ಥಗಳನ್ನಾಗಲೀ ಅಥವಾ ಇತರ ಸಾಮಾಜಿಕ ನೈತಿಕ ಬೆಂಬಲವನ್ನಾಗಲಿ ಹೊಂದಲು ಸಹಾಯಮಾಡಬೇಕು. ಒಂದು ಗ್ರಾಮವ ಆರ್ಥಿಕ ಸ್ಥಿತಿಯನ್ನು ತಿಳಿಯಬೇಕಾದರೆ ಅಲ್ಲಿಯ ವ್ಯವಸಾಯಗಾರರ ಜೀವನವನ್ನೇ ಅಲ್ಲದೆ ಅಲ್ಲಿ ವಾಸಮಾಡುವ ನಾಯಿಂದ ಕುಂಬಾರ ಬಡಗಿ ನೇಯ್ಗೆಯವ ಹೊಲಿಯ ಮಾದಿಗ – ಮುಂತಾದ ಜನಗಳ ಜೀವನವನ್ನೂ ವಿಚಾರ ಮಾಡಬೇಕು. ಗ್ರಾಮದಲ್ಲಿ ಆರ್ಥಿಕ ಮತ್ತು ಸಾಮಾಜಿಕ ಕುಂದುಕೊರತೆಗಳಿಂದ ಕಷ್ಟಪಡುತ್ತಿರುವ ಪ್ರತಿಯೊಬ್ಬನ ಜೀವನವನ್ನು ಉತ್ತಮ ಪಡಿಸಲು ಸಹಕಾರ ಸಂಸ್ಥೆಯು ಸಹಾಯ ಮಾಡುವಂತಾಗಬೇಕು.

೩. ಈ ಸಂಸ್ಥೆಗಳು ಯಾವಾಗಲೂ ಸಹಕಾರ ಮೂಲತತ್ವವನ್ನೇ ಅನುಸರಿಸಬೇಕು. ಈಗ ರೂಢಿಯಲ್ಲಿರುವ ಸಹಕಾರ ಸಂಸ್ಥೆಗಳಲ್ಲಿ ಅವಶ್ಯಕವಾದ ಬದಲಾವಣೆಗಳನ್ನು ಆಚರಣೆಯಲ್ಲಿ ತಂದು ಅವುಗಳನ್ನು ಸ್ಥಳೀಯ ಅನುಕೂಲತೆಗೆ ಹೊಂದಿಸಿಕೊಳ್ಳಬೇಕು. ಸಹಕಾರ ಮೂಲತತ್ವಕ್ಕೆ ಅವಶ್ಯಕವಾಗಿ ಈ ಮೂರು ವಿಷಯಗಳನ್ನು ಗಮನಿಸಬೇಕು ೧. ಸಂಸ್ಥೆಯು ತನ್ನ ಬಂಡವಾಳವನ್ನು ಜಾಣತನದಿಂದ ಶೇಖರಿಸಿ ಸಾಲದ ರೂಪದಲ್ಲಿ ಹಂಚುವುದು, ಕೂಡಿಟ್ಟ ಹಣವನ್ನೂ ಲಾಭದಾಯಕ ಕೆಲಸಗಳಿಗೆ ಉಪಯೋಗವಾಗದೆ ಇರುವ ಹಣವನ್ನು ಸಂಘದ ಬಂಡವಾಳಕ್ಕಾಗಿ ಸೇರಿಸುವ ಪ್ರಯತ್ನಮಾಡಬೇಕು. ೨. ಸಂಸ್ಥೆಯು ಸದಸ್ಯರು ಸಂಗಡ ವ್ಯವಹಾರ ನಡೆಯಿಸುವಾಗ ಸಾಧ್ಯವಾದ ಮಟ್ಟಿಗೆ ಮಿತವ್ಯಯವನ್ನು ಆಚರಿಸುವಂತೆ ಪ್ರೇರೇಪಿಸಬೇಕು. ಸದಸ್ಯರು ತಮಗೆ ಬೇಕಾದ ಎಲ್ಲಾ ಪದಾರ್ಥಗಳನ್ನೂ ಸಂಘದ ಮೂಲಕವೇ ತರಿಸಿಕೊಂಡು ತಮ್ಮ ಎಲ್ಲ ಆರ್ಥಿಕ ವ್ಯವಹಾರವನ್ನು ಸಂಸ್ಥೆಯ ಮೂಲಕವೇ ನಡೆಯಿಸುವ ಅಭ್ಯಾಸ ಮಾಡಿದರೆ ಬಹಳ ಅನುಕೂಲ. ಪ್ರಾರಂಭದಲ್ಲಿ ಬೇಕಾದ ಪದಾರ್ಥಗಳೆಲ್ಲಾ ಸಿಕ್ಕದೇ ಇರಬಹುದು. ಆದರೆ ಹಣಕಾಸಿನ ವಿನಿಮಯವನ್ನು ಬಹಳ ಮಿತವಾಗಿ ಅಭ್ಯಾಸದಲ್ಲಿಟ್ಟುಕೊಂಡು ಸದಸ್ಯರಿಗೆ ಬೇಕಾದ ಪದಾರ್ಥಗಳನ್ನು ದೊಡ್ಡ ದೊಡ್ಡ ಉಗ್ರಾಣದಿಂದ ತರಿಸಿ ಹಂಚುವ ಪ್ರಯತ್ನ ಮಾಡಬೇಕು. ಅಂತಹ ಉಗ್ರಾಣಕ್ಕೆ ಬೇಕಾದ ದವಸ ದಾನ್ಯಗಳನ್ನು ಗ್ರಾಮದ ಸದಸ್ಯರಿಂದ ಶೇಖರಿಸಿ. ಅಲ್ಲಿಗೆ ಕಳುಹಿಸಬಹುದು.

೩. ಉತ್ತಮ ಸಹಕಾರ ಪದ್ಧತಿಯು ಶಿಕ್ಷಣವನ್ನು ಸಂಸ್ಥೆಯ ಸರಿಯಾದ ಆಡಳಿತ ಕ್ರಮದಲ್ಲಿಯೇ ಹೊಂದಬಹುದು. ಸದಸ್ಯರು ತಮ್ಮ ತಮ್ಮಲ್ಲಿಯೇ ಸರಿಯಾದವರನ್ನು ಚುನಾಯಿಸಿ ಸಂಘದ ಕೆಲಸಕ್ಕೆ ನೇಮಿಸಬೇಕು. ಹೀಗೆ ಕೆಲಸ ಮಾಡುವವರಲ್ಲಿ ಶ್ರದ್ದೆಯೂ ಉತ್ಸಾಹವೂ ಇರುವಂತಾಗಬೇಕು.

೪. ನಾನಾ ವಿಧವಾದ ಕಾರ್ಯಕ್ರಮವನ್ನು ಅನುಸರಿಸುವ ಗ್ರಾಮ ಸಹಕಾರ ಸಂಸ್ಥೆಯು, ಯಾವಾಗಲು ಸದಸ್ಯರ ಸಂಪರ್ಕವನ್ನು ಇಟ್ಟುಕೊಂಡಿರಬೇಕು. ಇಂತಹ ಸದಸ್ಯರಿಗೆ ಸಂಘದ ಮೇಲೆ ಒಂದು ವಿಧವಾದ ಪ್ರಾಮಾಣಿಕತೆ ಹೆಚ್ಚಾಗುವುದಲ್ಲದೆ, ಸಂಘದ ಕೆಲಸಗಳಲ್ಲಿ ಉತ್ಸಾಹ ಹುಟ್ಟುತ್ತದೆ. ಸದಸ್ಯರಿಗೆ ಸಾಹುಕಾರನ ಹತ್ತಿರ ಸಿಕ್ಕುವ ಸೌಕರ್ಯಗಳೆಲ್ಲಾ ಸಂಘದಲ್ಲಿಯೇ ಸಿಕ್ಕುವುದಲ್ಲದೆ, ಸಾಹುಕಾರನ ಲೇವಾದೇವಿಯ ಕಷ್ಟಗಳೆಂದೂ ಇರುವುದಿಲ್ಲ. ಸಾಹುಕಾರನ ಲೆಕ್ಕ ಪತ್ರಗಳಿಗಿಂತ ಸಂಘದ ಲೆಕ್ಕಪತ್ರಗಳು ಸರಿಯಾದ ರೀತಿಯಲ್ಲಿಯೂ ಲಾಭಕರ ರೀತಿಯೂ ಇಡಲ್ಪಡುವುವು. ಆದುದರಿಂದ ಸಂಘದಲ್ಲಿ ಸದಸ್ಯರ ಸಂಪರ್ಕವೂ ಲೇವಾದೇವಿಯೂ ಪದಾರ್ಥಗಳನ್ನು ಸಂಘದ ಮೂಲಕವೇ ಕೊಳ್ಳುವ ಮತ್ತು ಮಾರುವ ಏರ್ಪಾಡೂ ಬಹಳ ಉತ್ತಮವಾದ ವಾತಾವರಣವನ್ನು ಕಲ್ಪಿಸುತ್ತದೆ.

೫. ಉತ್ತಮ ಸಹಕಾರ ಸಂಸ್ಥೆಗಳನ್ನು ಸ್ಥಾಪಿಸುವುದಕ್ಕೆ ಸರಿಯಾದ ಸ್ಥಳಗಳನ್ನು ಚುನಾಯಿಸಬೇಕು. ದೇಶದ ಅನೇಕ ಭಾಗಗಳಲ್ಲಿ ಸಂಘಗಳನ್ನು ಆತುರವಾಗಿ ಸ್ಥಾಪಿಸಿ ಸ್ವಲ್ಪಕಾಲದಲ್ಲಿಯೇ ಅಂತಹ ಸಂಘಗಳು ಮುಚ್ಚಲ್ಪಟ್ಟಿವೆ. ನಮ್ಮಲ್ಲಿ “ಆರಂಭಶೂರತ್ವವು” ಇನ್ನೂ ಬಳಕೆಯಲ್ಲಿದೆ. ನಾನಾ ವಿಧವಾದ ಕಾರ್ಯಕ್ರಮಗಳನ್ನೊಳಗೊಂಡ ಸಹಕಾರ ಸಂಸ್ಥಗಳನ್ನು ಸ್ಥಾಪಿಸಬೇಕಾದರೆ ಮೊದಲು ಸ್ಥಳೀಯ ಅನುಕೂಲ, ಜನರ ಸ್ವಭಾವ, ಇತರ ವಾತಾವರಣ – ಮುಂತಾದ ವಿಚಾರಗಳನ್ನು ವಿಮರ್ಶೆ ಮಾಡಿ, ಅಲ್ಲಿಯ ಜನಗಳು ಸಹಕಾರ ತತ್ವದಲ್ಲಿ ಹೆಚ್ಚು ಶ್ರದ್ದೆವಹಿಸುವಂತೆ ತಿಳಿವಳಿಕೆಯನ್ನುಂಟು ಮಾಡಿ ಸಂಘಗಳನ್ನು ಸ್ಥಾಪಿಸಬೇಕು. ಈ ಸಂಸ್ಥೆಗಳಲ್ಲಿ ಕೆಲಸ ಮಾಡುವುದಕ್ಕೆ ಹೊಸ ರೀತಿಯು ಮುಂದಾಳುತನವೂ ಸಹಕಾರ ಪರಿಜ್ಞಾನವೂ ಅತ್ಯಾವಶ್ಯಕ. ಇಂತಹ ಕೆಲವು ಮಾದರಿ ಸಂಘಗಳನ್ನು ಕೆಲವು ಅನುಕೂಲವಾದ ಮಾದರಿ ಗ್ರಾಮಗಳಲ್ಲಿ ಸ್ಥಾಪಿಸಿ ಅವುಗಳು ಮಾರ್ಗದರ್ಶಕ ಸಂಸ್ಥೆಗಳಾಗಿ ನಿಲ್ಲುವಂತೆ ಮಾಡಬೇಕು.

ಮಾನವ ಸಂಸಾರಗಳ ಸಾರ್ವತ್ರಿಕ ಸೌಹಾರ್ದತೆ, ನ್ಯಾಯಪರತೆ, ನೈತಿಕ ಸ್ವಾತಂತ್ರ್ಯ, ಸರ್ವ ಸಮಾನತಾಭಾವ, ನೆಮ್ಮದಿಯ ಸಹವಾಸ ಮುಂತಾದ ಸದ್ಗುಣಗಳ ಐಕ್ಯತೆಗೆ ಸಹಕಾರತತ್ವವು ಹೆಚ್ಚು ಸಹಾಯ ಮಾಡುತ್ತದೆ. ಇದಕ್ಕೆ ಮೇಲುಕೀಳೆಂಬ ಭಾವನೆಯಾಗಲೀ ಅಥವಾ ಇತರ ಸರಹದ್ದಿನ ನಿಬಂಧನೆಯಾಗಲಿ ಇರಕೂಡದು. ಮಾನವ ಜೀವನವನ್ನು ಪುಷ್ಕಲವನ್ನಾಗಿಯೂ ಮತ್ತು ಉದಾರಯುತವನ್ನಾಗಿಯೂ ಮಾಡುವುದೇ ಇದರ ಪರಮಧ್ಯೇಯ. ಮಾನವ ಜೀವನದ ಪ್ರತಿಯೊಂದು ಮಾರ್ಗದಲ್ಲಿಯೂ, ಸಹಕಾರತತ್ವದ ಉಚ್ಚಧ್ಯೇಯಗಳು ಆಚರಣೆಯಲ್ಲಿ ಬಂದರೆ ಪ್ರಪಂಚದಲ್ಲಿ ಶಾಂತಿ ಸ್ಥಾಪನೆಯಾಗುವುದಲ್ಲದೆ, ದೇಶ ಅಭಿವೃದ್ಧಿಯಾಗುವುದರಲ್ಲಿ ಸಂದೇಹವಿಲ್ಲ.

ಇಂತಹ ಶ್ರೇಷ್ಠ ಧ್ಯೇಯಗಳನ್ನು ಆದರಿಸುವುದಕ್ಕಾಗಿ, ಕರ್ನಾಟಕ ರಾಜ್ಯದಲ್ಲಿ ಸಹಕಾರ ಸಚಿವಾಲಯವನ್ನು ಸೃಷ್ಟಿಸಿ ಇದಕ್ಕೆ ಸಂಬಂಧಿಸಿದ ಉನ್ನತ ಇಲಾಖೆಯನ್ನೇ ನೇಮಿಸಿಕೊಂಡು ಸಾಮಾನ್ಯ ಜನತೆಗೆ ಅನುಕೂಲವಾಗುವ ರೀತಿಯಲ್ಲಿ ಮುನ್ನಡೆಯುತ್ತಿದೆ. ಇದಕ್ಕೆ ಅನುಕೂಲಗಳು ಪ್ರಚಾರ ಸಂಸ್ಥೆಗಳನ್ನು ಸ್ಥಾಪಿಸಲಾಗಿದೆ. ಇವುಗಳಿಗೆ ಸರ್ಕಾರದ ಬೆಂಬಲವು ಅಪರಿಮಿತವಾಗಿದೆ. ಕರ್ನಾಟಕ ಸಹಕಾರಾಭಿವೃದ್ಧಿಯನ್ನು ಪರಿಶೀಲಿಸಿ, ಸೂಕ್ತ ಬೆಂಬಲವು ಅಪರಿಮಿತವಾಗಿದೆ. ಕರ್ನಾಟಕ ಸಹಕಾರಾಭಿವೃದ್ದಿಯನ್ನು ಪರಿಶೀಲಿಸಿ. ಸೂಕ್ತ ಸಲಹೆಗಳನ್ನು ಸೂಚಿಸುವುದಕ್ಕೆ ಪ್ರತಿ ತಿಂಗಳಿಗೂ ವಿಚಾರಣಾ ಸಮಿತಿಗಳನ್ನು ಏರ್ಪಡಿಸಲಾಗುವುದು. ಇದರ ಜೊತೆಗೆ ಪತ್ರಿಕಾ ಪ್ರಕಟಣೆ, ಭಾಷಣ, ಸಮ್ಮೇಳನ ಸಹಕಾರ ಶಿಕ್ಷಣ – ಮುಂತಾದ ಏರ್ಪಾಡಿನಿಂದ ಸರ್ಕಾರದವರು ಸಹಕಾರ ಪ್ರಚಾರ ನಡೆಯಿಸುತ್ತಿದ್ದಾರೆ. ಇದು ನಮ್ಮ ಗ್ರಾಮಗಳ ಹಾಗೂ ರೈತರ ಏಳ್ಗೆಗೆ ಸಹಕಾರಿಯಾಗಿದೆ ಎನ್ನಬಹುದು.

 [1] 1. Principles of Economics by Port Marshall

[2] History of Co-operation in England by Holyoke. Co-operative movement in Great Britain by Beatrice Potter.

 

[3] From a writing of F. W. Rarffeisen quoted from Co-operation at Home and abroad C. R. Fay – 49

 

[4] Economic Philosophy of Co-operation by Nourse American Economic Review Vol. 12

[5] The Co-operative movment in Japan by Ogata – Kiyashi.

[6] The Panjab Peasent in Prosperity and Debt by M. L. Daling 252-254

[7] The Indian Peasent by H. E. Lord Linlithgow