ನಮ್ಮ ಪೂರ್ವಜರ ದೈನಂದಿನ ಬೇಡಿಕೆಗಳು ಸಣ್ಣ ಪ್ರಮಾಣದಲ್ಲಿದ್ದವು, ಅಲ್ಲದೆ ಅವರು ತಮಗೆ ಬೇಕಾದ ಸರಕು ಸಾಮಗ್ರಿಗಳನ್ನು ತಾವೇ ಉತ್ಪಾದಿಸಿಕೊಳ್ಳುತ್ತಿದ್ದುದರಿಂದ ವಿನಿಮಯದ ಪ್ರಶ್ನೆ ಉದ್ಬವಿಸದೆ ಪೇಟೆಯ ಮಹತ್ವ ಅಷ್ಟೊಂದು ಅನಿಸಿರಲಿಲ್ಲ. ಆದರೆ ಮುಂದೆ ಮಾನವ ತನ್ನ ಆವಶ್ಯಕತೆಗಿಂತ ಹೆಚ್ಚಿಗೆ ಉತ್ಪಾದಿಸುತ್ತ ಅಥವಾ ಸಂಗ್ರಹಿಸುತ್ತ ಹೋದಂತೆಲ್ಲ ತನ್ನಲ್ಲಿ ಹೆಚ್ಚಾಗಿರುವ ಪದಾರ್ಥಗಳನ್ನು ಇತರರ, ಹೆಚ್ಚಾದ ಸರಕುಗಳೊಂದಿಗೆ ವಿನಿಮಯ ಮಾಡುವ ಪದ್ಧತಿ ಕಾರ್ಯರೂಪಕ್ಕೆ ಬಂದಿತು. ಆದರೆ ಈ ರೀತಿ ವಸ್ತು ವಿನಿಮಯ…. (Barter Exchange) ತನಗೆ ಬೇಕಾದ ಎಲ್ಲ ಸಾಮಗ್ರಿಗಳನ್ನು ಒದಗಿಸದಾಯಿತು. ಅಲ್ಲದೆ ವಿನಿಮಯದ ನಿಶ್ಚಿತ ಮಾಧ್ಯಮದ ಅಭಾವದಿಂದ ಸರಳ ವಿನಿಮಯ ಕೂಡ ಅಸಾಧ್ಯವಷ್ಟೇ ಅಲ್ಲದೆ ಕಷ್ಟಮಯವಾಯಿತು. ಈ ಶೋಧನೆಯಲ್ಲಿಯೇ ಹಣದ ವ್ಯವಸ್ಥೆ ಏರ್ಪಟ್ಟಿತು. ವಿನಿಮಯಕ್ಕೆ ಅತಿಯಾಗಿ ಉಪಯುಕ್ತವಾದ ಈ ಹಣದ ವ್ಯವಸ್ಥೆಯಿಂದಲೇ ವಾಣಿಜ್ಯ ಅಧಿಕವಾಗಿ ವಿಕಸಿತಗೊಂಡು ವ್ಯಾಪಾರ ಅಧಿಕ ಪ್ರಮಾಣದಲ್ಲಿ ಹೆಚ್ಚಿತು. ವ್ಯಾಪಾರದ ಹೆಚ್ಚಿನ ಅಭಿವೃದ್ಧಿ ಸುಗಮವಾಗಿ ಸಾಗಲು ಅದಕ್ಕೆ ಪೋಷಕವಾದ ಸಾರಿಗೆ ವ್ಯವಸ್ಥೆ, ಹಣಕಾಸಿನ ವ್ಯವಸ್ಥೆ, ಸಂಗ್ರಹಣೆಯ ವ್ಯವಸ್ಥೆ ಮುಂತಾದವು ದಿನೇ ದಿನೇ ಅಭಿವೃದ್ಧಿ ಹೊಂದಿತು, ಪೇಟೆಗಳು ಹೆಚ್ಚಿದವು.

ಹಳ್ಳಿಗಳ ಬೀಡಾದ ಭಾರತದಲ್ಲಿ ಸ್ಥಾನಿಕ ಹಾಗೂ ಪ್ರಾದೇಶಿಕ ಪೇಟೆಗಳು ಹೆಚ್ಚು, ಕೃಷಿ ಪ್ರಧಾನವಾದ ಈ ದೇಶದಲ್ಲಿ ಭೂ-ಹುಟ್ಟುವಳಿಗಳ ಪ್ರಮಾಣ ಅಧಿಕವಿದ್ದು, ವ್ಯಾಪಾರ ಕೂಡ ಅಧಿಕ ಪ್ರಮಾಣದಲ್ಲಿ ನಡೆಯುತ್ತಿತ್ತು. ಗ್ರಾಮಾಂತರ ಪ್ರದೇಶದ ಪೇಟೆಗಳು, ಇತರ ಪೇಟೆಗಳ ದೃಷ್ಟಿಯಿಂದ ವಿಕಸಿತಗೊಂಡಿಲ್ಲ. ೫೩ ವರ್ಷಗಳ ಸ್ವಾತಂತ್ರ್ಯದ ನಂತರ ಕೂಡ, ಗ್ರಾಮಾಂತರ ಪ್ರದೇಶದ ಮಾರುಕಟ್ಟೆಗಳು ಪೇಟೆ ಎಂಬ ಹೆಸರಿಗೆ ಕಳಂಕ ತರದಂತೆ ಕೇವಲ ಅಸ್ತಿತ್ವದಲ್ಲಿ ಮಾತ್ರ ಉಳಿದಿವೆ. ಒಂದು ಕಡೆ ವಾಣಿಜ್ಯದ ಅಭಿವೃದ್ಧಿ ಅತಿ ವೇಗವಾಗಿ ಸಾಗಿದ್ದರೂ ಈ ಕ್ಷೇತ್ರ ಅಲಕ್ಷಿತವಾಗಿ ಉಳಿದಿದೆ. ವ್ಯಾಪಾರದ ಅಭಿವೃದ್ಧಿಗಾಗಿ ಬೇಕಾಗುವ ಎಲ್ಲ ಸೌಕರ್ಯಗಳನ್ನು ಈ ಪೇಟೆ ಹೊಂದಿಲ್ಲ. ವ್ಯಾಪಾರದ ಕಾರ್ಯ-ಕಲಾಪಗಳಿಗೆ ನೀತಿ-ನಿಯಮಗಳು ಇಲ್ಲಿ ಇಲ್ಲ. ಒಂದೇ ತೆರನಾದ ಕಾರ್ಯಪದ್ಧತಿ ಇಲ್ಲ. ಕೆಲವೊಂದು ಪೇಟೆಗೆ ಕಾಲ್ನಡಿಗೆಯಿಂದ ಕೂಡ ಹೋಗಲು ರಸ್ತೆಗಳಿಲ್ಲ. ಬೇಡಿಕೆ ಮೀರುವ ಹೆಚ್ಚುವರಿ ಸರಕುಗಳನ್ನು ಸಂಗ್ರಹಿಸಲು ಗೋದಾಮುಗಳಿಲ್ಲ. ಹೀಗಾಗಿ ಗ್ರಾಮಾಂತರ ಪ್ರದೇಶದ ಈ ಮಾರುಕಟ್ಟೆಗಳು ಉತ್ಪಾದಕರಿಗೆ ಯೋಗ್ಯ ಬೆಲೆ ದೊರಕಿಸದೆ ಅನ್ಯಾಯ ಮಾಡುತ್ತಿವೆ. ದೇಶದ ಸರ್ವತೋಮುಖ ಅಭಿವೃದ್ಧಿಯಲ್ಲಿ ಈ ಗ್ರಾಮಾಂತರ ಪ್ರದೇಶದ ಪೇಟೆಗಳ ಬೆಳವಣಿಗೆ ಅತಿ ಮುಖ್ಯ.

ಸಂತೆಯಲ್ಲಿಯ ಸರಕುಗಳ ಲಕ್ಷಣಗಳು

ಗ್ರಾಮಾಂತರ ಪ್ರದೇಶದ ಮಾರುಕಟ್ಟೆಗಳು ಹೆಚ್ಚಾಗಿ ಕೃಷಿ ಉತ್ಪನ್ನಗಳಲ್ಲಿ ವ್ಯವಹರಿಸುತ್ತಿರುವುದರಿಂದ, ಆ ಸರಕುಗಳ ಈ ಕೆಳಗಿನ ಲಕ್ಷಣಗಳಿಗೆ ಬದ್ಧವಾಗಬೇಕಾಗಿದೆ.

೧. ಸಣ್ಣ ಪ್ರಮಾಣದ ಉತ್ಪಾದನೆ.

೨. ಚದುರಿದ ಉತ್ಪಾದನೆ.

೩. ಋತುವಿಗೆ ತಕ್ಕಂತೆ ಏಕಕಾಲಕ್ಕೆ ಉತ್ಪಾದನೆ.

೪. ಸರಕುಗಳ ದರ್ಜೆ ನಿಶ್ಚಿತವಿರುವುದಿಲ್ಲ.

೫. ಉತ್ಪನ್ನ ಅನರ್ಥಿಷ್ಟ.

೬. ಸರಕುಗಳ ಗಾತ್ರ ದೊಡ್ಡದು.

೭. ಹೆಚ್ಚಾಗಿ ಶೀಘ್ರ ನಾಶವಾಗುವ ಸರಕುಗಳ ಉತ್ಪಾದನೆ

೮. ಅನಾಸಕ್ತ ಬೇಡಿಕೆ.

ಭಾರತದಲ್ಲಿಯ ಸಣ್ಣ ಭೂ-ಹಿಡುವಳಿಯು ರೈತನಿಗೆ ತನ್ನದೆ ಆದ ಕೆಲವೊಂದು ಸಮಸ್ಯೆಗಳನ್ನು ಒಡ್ಡಿದೆ. ಸಣ್ಣ ಭೂ-ಹಿಡುವಳಿ ಆತನಿಗೆ ಸ್ವಂತ ಸೌಲಭ್ಯಗಳನ್ನು ಹೊಂದಲು ಅನುಕೂಲವಾಗುವುದಿಲ್ಲ. ಕಾರಣ ಜೋಡೆತ್ತು ಭೂಮಿಯನ್ನು ಊಳುವುದಕ್ಕೆ ಬೇಕಾಗುವ ಎಲ್ಲಾ ಸವಲತ್ತುಗಳನ್ನು ಆತ ಹೊಂದಿದ್ದರೆ. ಆತನ ಹೊಲದ ಗಾತ್ರದ ದೃಷ್ಟಿಯಿಂದ ಅವು ಹೆಚ್ಚಿನ ಖರ್ಚಿನವು ಆಗುತ್ತವೆ. ಅಲ್ಲದೆ ಅವುಗಳ ಪೂರ್ತಿ ಉಪಯೋಗ ಕೂಡ ತನ್ನ ಹೊಲದಲ್ಲಿ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಇನ್ನು ಟ್ರ್ಯಾಕ್ಟರ್ ಮುಂತಾದ ಆಧುನಿಕ ಸಲಕರಣೆಗಳನ್ನು ಹೊಂದುವುದಂತೂ ಸಾಧ್ಯವೇ ಇಲ್ಲ. ಹೀಗಾಗಿ ಸಣ್ಣ ರೈತ ತನ್ನ ಬೇಸಾಯವನ್ನು ಬಾಡಿಗೆಯಿಂದಲೇ ನೋಡಿಕೊಳ್ಳುವನು. ಹೀಗಾಗಿ ಎಕರೆವಾರು ಉತ್ಪಾದನೆ ಖರ್ಚು ದೊಡ್ಡ ಭೂ-ಹುಡುವಳಿದಾರರ ಉತ್ಪಾದನೆ ಖರ್ಚಿಗಿಂತ ಹೆಚ್ಚಾಗುವುದೆ. ಅಲ್ಲದೆ, ಒಟ್ಟು ಉತ್ಪಾದನೆ ಕಡಿಮೆ ಪ್ರಮಾಣದಲ್ಲಿ ಇರುವುದರಿಂದ ಬೆಲೆ ನಿರ್ಧರಿಸುವಲ್ಲಿಯೂ ಸಹ ಈತನ ಹಿಡಿತ ಕಡಿಮೆಯಾಗುವುದು. ಈ ಸಣ್ಣ ಭೂ-ಹುಡುವಳಿ ರೈತ ತನ್ನದೇ ಆದ ಬೆಲೆಗಳಿಗೆ ಬದ್ಧನಾಗಿರಲು ಅಸಾಧ್ಯ. ಆದರೆ, ದೊಡ್ಡ ಭೂ-ಹಿಡುವಳಿದಾರರು ದೊಡ್ಡ ಪ್ರಮಾಣದಲ್ಲಿ ಉತ್ಪಾದನೆ ಹೊಂದಿರುವುದರಿಂದ, ಸರಕುಗಳ ಬೆಲೆಗಳನ್ನು ನಿರ್ಧರಿಸುವಾಗ, ಕೊಳ್ಳುವಾಗ ದಲ್ಲಾಳಿಗಳನ್ನು ತಮ್ಮ ಹಿಡಿತಕ್ಕೆ ತಂದು, ಹೆಚ್ಚು ಕಡಿಮೆ ತಾವೇ ಬೆಲೆ ನಿರ್ಧರಿಸುವಲ್ಲಿ ಹೆಚ್ಚಿನ ಪಾತ್ರ ವಹಿಸುವುದು ಸಾಧ್ಯ ಅಲ್ಲದೆ ಅದಕ್ಕೆ ದಲ್ಲಾಳಿ ಒಪ್ಪಲೂ ಸಾಧ್ಯ. ಕಾರಣ ದಲ್ಲಾಳಿಗೂ ದೊಡ್ಡ ಭೂ-ಹಿಡುವಳಿದಾರರ ಅನುಪಸ್ಥಿತಿಯಲ್ಲಿ ಸಣ್ಣ ಭೂ-ಹಿಡುವಳಿದಾರರಿಂದ ಸಣ್ಣ ಪ್ರಮಾಣದಲ್ಲಿಯ ಸರಕುಗಳನ್ನು ಸಂಗ್ರಹಿಸಲು ಹೆಚ್ಚಿನ ಖರ್ಚು ಮಾಡಬೇಕಾಗುವುದು. ಅದರ ಉಳಿತಾಯ ಇಲ್ಲಿ ಆಗುವುದು. ಇನ್ನು ಸಣ್ಣ ಭೂಹಿಡುವಳಿದಾರರ, ಸಣ್ಣ ಪ್ರಮಾಣದಲ್ಲಿರುವ ಉತ್ಪಾದನೆಗೆ ಪ್ರಮಾಣ ಕಟ್ಟುವುದು ವರ್ಗಿಕರಣ ಮಾಡುವುದು ಕೂಡ ಖರ್ಚಿನದಾಗುವುದು. ಈ ಕಾರ್ಯ ಕೈಗೊಳ್ಳುವ ನೈಪುಣ್ಯವುಳ್ಳವರಿಗೆ ಹೆಚ್ಚಿನ ವೇತನ ನೀಡಬೇಕಾಗುವುದು, ಅಲ್ಲದೆ ಖಾಯಂ ಆಗಿ ಕೆಲಸ ಒದಗಿಸಬೇಕು. ಅದನ್ನು ಈ ಸಣ್ಣ ರೈತ ಪೂರೈಸಲಾರ, ಹೀಗಾಗಿ ಸಣ್ಣ ಭೂ ಹಿಡುವಳಿ ರೈತ, ಬೇರೆ ಬೇರೆ ಹೊಲದಲ್ಲಿ ಬೆಳೆದ ಸರಕುಗಳನ್ನು ಪ್ರಾಮಾಣಿಸದೆ (Without Standardisation) ಮಾರಾಟ ಮಾಡುವುದರಿಂದ ಕಡಿಮೆ ಪ್ರಮಾಣದ ಸರಕುಗಳ ಬೆಲೆಯನ್ನೇ ಉಳಿದ ಹೆಚ್ಚಿನ ಪ್ರಮಾಣದ ಸರಕುಗಳಿಗೂ ಪಡೆದು, ಅನ್ಯಾಯ ಸಹಿಸಬೇಕಾಗುವುದು. ಹೀಗೆ ಒಟ್ಟಿನಲ್ಲಿ ಸಣ್ಣ ಭೂ-ಹಿಡುವಳಿ ರೈತ, ಬೆಲೆಗಳನ್ನು ನಿರ್ಧರಿಸುವಾಗ ತನ್ನ ಪೂರ್ತಿ ಹಿಡಿತವನ್ನು ಕಳೆದುಕೊಳ್ಳುವನು. ಇಂತಹ ರೈತರೇ ಗ್ರಾಮಾಂತರ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ.

ಇನ್ನು, ಭೂ-ಹುಟ್ಟುವಳಿ ಚದುರಿದ ಉತ್ಪಾದನೆಯಾಗಿದೆ. ಭೂಮಿಯ ಫಲವತ್ತತೆ, ಇತರ ನೈಸರ್ಗಿಕ ಸೌಲಭ್ಯಗಳು, ಉತ್ಪಾದನೆಯಲ್ಲಿ ಹೆಚ್ಚಿನ ಪ್ರಾಮುಖ್ಯತೆ ಹೊಂದುವುದು. ಹೀಗಾಗಿ ಎಲ್ಲ ಬೆಳೆಗಳನ್ನು ಎಲ್ಲ ಪ್ರದೇಶದಲ್ಲಿ ಬೆಳೆಯಲಿಕ್ಕಾಗದು. ದೇಶದ ಯಾವುದಾದರೂ ಭಾಗದಲ್ಲಿ. ಭೂಮಿಯ ಫಲವತ್ತತೆ ಹಾಗೂ ಇತರ ಸೌಲಭ್ಯಗಳನ್ನು ಆದರಿಸಿ, ಒಂದೆರಡು ಬೆಳೆಗಳನ್ನು ಹುಲುಸಾಗಿ ಬೆಳೆಯಲಾಗುವುದು. ಬೆಳೆದ ಸ್ಥಳದಲ್ಲಿ ಅವುಗಳ ಬೇಡಿಕೆ ತೀರ ಕಡಿಮೆ. ಅಲ್ಲದೆ ಅವುಗಳ ಪೂರೈಕೆ ಬೇಡಿಕೆ ಮೀರುವುದರಿಂದ, ಅಗ್ಗ ದರದಲ್ಲಿ ಮಾರಬೇಕಾಗುವುದು. ಬೇರೆ ಸ್ಥಳಗಳಿಗೆ ಎಲ್ಲಿ ಸರಕುಗಳ ಅಭಾವವಿರುವುದೋ ಅಲ್ಲಿಗೆ ಸಾಗಿಸಬೇಕೆಂದರೆ ವೇಳೆಯ ಅಭಾವದಿಂದ, ಇಂತಹ ಸೌಲಭ್ಯಗಳ ಅನಾನುಕೂಲತೆಯಿಂದ ಸಣ್ಣ ಭೂ-ಹಿಡುವಳಿದಾರರಿಗೆ ಅದು ಕಷ್ಟಸಾಧ್ಯ. ಹೀಗಾಗಿ ಗ್ರಾಮಾಂತರ ಪ್ರದೇಶದ ಪೇಟೆಯಲ್ಲಿಯೇ ದಲ್ಲಾಳಿಗಳಿಗೆ, ಅವುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಬೇಕಾಗುವುದು.

ಸಾಮಾನ್ಯವಾಗಿ ಕೃಷಿ-ಉತ್ಪಾದನೆ ಋತುವಿನ ಉತ್ಪಾದನೆ ಆಗಿರುವುದರಿಂದ, ಒಂದು ಋತುವಿನಲ್ಲಿ ಒಂದೇ ತೆರನಾದ ಸರಕುಗಳು ಅತಿ ಹೆಚ್ಚಿನ ಪ್ರಮಾಣದಲ್ಲಿ ಪೇಟೆಯಲ್ಲಿ ಲಭ್ಯವಾಗುವುವು ಹೀಗಾಗಿ ಆ ಸರಕುಗಳ ಬೆಲೆಯನ್ನು ನಿಯಂತ್ರಿಸುವುದು ಮತ್ತು ಸರಳ ಸಾಗಾಣಿಕೆಗಾಗಿ ಸಾರಿಗೆ ಒದಗಿಸುವುದು ಅಸಾಧ್ಯವಾಗುವುದು. ಒಂದು ವೇಳೆ ಅವುಗಳನ್ನು ಸಂಗ್ರಹಿಸಿ ಮುಂದೆ ಕೆಲವೊಂದು ಕಾಲದ ನಂತರ ಮಾರಾಟ ಮಾಡಬೇಕೆಂದರೆ. ಸಂಗ್ರಹಿಸಲು, ದೊಡ್ಡದಾದ ಸುಸಜ್ಜಿತ ಗೋದಾಮುಗಳ ಅಭಾವ ಗ್ರಾಮಾಂತರ ಪ್ರದೇಶದಲ್ಲಿ ಇನ್ನು ಹೆಚ್ಚು. ಅವು ಬಾಡಿಗೆಗೆ ದೊರೆಯಲಾರವು. ಅಲ್ಲದೆ ಸ್ವತ: ಸಣ್ಣ ಭೂಹಿಡುವಳಿದಾರ ಅವುಗಳನ್ನು ಹೊಂದುವುದು ಕಷ್ಟಸಾಧ್ಯ. ಹೀಗಾಗಿ, ಒಂದೇ ಕಾಲಕ್ಕೆ ಬೇಡಿಕೆ ಮೀರಿ ಪೂರೈಕೆ ಬೆಲೆಗಳ ಕುಸಿತಕ್ಕೆ ನಾಂದಿಯಾಗುವುದು. ಆದ್ದರಿಂದ ಈ ಗ್ರಾಮಾಂತರ ಪ್ರದೇಶದ ಮಾರುಕಟ್ಟೆಯಲ್ಲಿ ಸರಕು ಸಂಗ್ರಹಿಸಲು. ಗೋದಾಮುಗಳ ಸೌಲಭ್ಯ ಒದಗಿಸಿಕೊಡುವುದು ಅತ್ಯವಶ್ಯಕವಾಗಿದೆ.

ಭೂ-ಹುಟ್ಟುವಳಿಗಳ ದರ್ಜೆ ಕೂಡ ನಿಶ್ಚಿತವಾಗಿ ಇರುವುದಿಲ್ಲ. ಆದ್ದರಿಂದ, ಅವುಗಳ ಪ್ರಮಾಣ ನಿರ್ಧರಿಸುವುದು ದುಸ್ತರವಾಗುವುದು. ಈ ವರ್ಷದ ಕೆಳದರ್ಜೆಯ ಸರಕು, ಬರಗಾಲದಿಂದಲೋ, ಅತಿವೃಷ್ಟಿಯಿಂದಲೋ, ಮುಂದಿನ ವರ್ಷ ಉಪಲಬ್ಧವಿರುವ ಸರಕುಗಳಲ್ಲಿ ಒಳ್ಳೆಯ ದರ್ಜೆಯ ಸರಕು ಎಂದು ಪರಿಗಣಿಸಲಾಗುವುದು. ಆಯಾ ವರ್ಷದ ಹವಾಮಾನ, ಮಳೆ, ಮಂಜು (ಚಳಿ), ಬಿಸಿಲು, ಇತ್ಯಾದಿ ಆ ವರ್ಷದ ಬೆಳೆಗಳ ಮೇಲೆ ತಮ್ಮದೇ ಆದ ಪ್ರಭಾವ ಬೀರುವುದರಿಂದ, ನಿಶ್ಚಿತ ದರ್ಜೆಯನ್ನು ಗೊತ್ತುಪಡಿಸಲಿಕ್ಕಾಗದು. ಹೀಗಾಗಿ, ಬೆಲೆ ನಿರ್ಧರಿಸುವುದು ಕಷ್ಟದ್ದಾಗುವುದು. ಗ್ರಾಮಾಂತರ ಪ್ರದೇಶದ ಮಾರುಕಟ್ಟೆಗಳಲ್ಲಿ ದಲ್ಲಾಳಿಗಳು ಇದರ ಲಾಭ ಪಡೆದು, ತಮಗೆ ಲಾಭದಾಯಕವೆನಿಸಿದ ಬೆಲೆಗೆ – ಸರಕಿನ ದರ್ಜೆ ತುಂಬಾ ಕೆಳಮಟ್ಟದ್ದು ಎಂದು ತಿಳಿಸಿ ಕೊಂಡುಕೊಳ್ಳುವರು. ರೈತರು ಈ ದರ್ಜೆಯ ವಿಷಯದಲ್ಲಿ ಅಜ್ಞಾನಿಗಳಾಗಿರುವುದರಿಂದ ಮೋಸ ಹೋಗುವರು.

ಭೂ-ಹುಟ್ಟುವಳಿಗಳ ಉತ್ಪನ್ನ ಕೂಡ ಅನಿರ್ದಿಷ್ಟ. ಕೆಲವೊಂದು ವರ್ಷ ನಿಶ್ಚಿತಪಡಿಸಿದ ಎಕರೆ ಭೂಮಿಯಲ್ಲಿ ಹೆಚ್ಚು ಬೆಳೆಯನ್ನು ಬೆಳೆಯುವರು. ಮರುವರ್ಷ ಆಷ್ಟೇ ಎಕರೆ ಭೂಮಿ ತೊಡಗಿಸಿದ ಖರ್ಚಿನಷ್ಟು ಕೂಡ ಉತ್ಪನ್ನ ಕೊಡದೆ ಹೋಗುವುದು. ಹಲವಾರು ನೈಸರ್ಗಿಕ ಅನುಕೂಲ ಅನಾನುಕೂಲಗಳ ಮೇಲೆ ಇದು ಅವಲಂಬಿಸಿರುವುದರಿಂದ, ರೈತ ನಿಶ್ಚಿತವಾಗಿ ಇಂತಿಷ್ಟು ಕ್ವಿಂಟಾಲ್ ಜೋಳ, ಗೋಧಿ, ಭತ್ತ, ಬೇಳೆಕಾಳು ಬೆಳೆಯುತ್ತೇನೆ ಎಂದು ಹೇಳಲಿಕ್ಕಾಗದು. ಆದ್ದರಿಂದ ಉತ್ಪಾದನೆಯ ಮೇಲೆ ನಿಯಂತ್ರಣ ಇಲ್ಲದೇ ಹೋಗಿ. ಬೆಲೆಯನ್ನು ನಿರ್ಧರಿಸುವುದು ಅಸಾಧ್ಯವಾಗುವುದು. ಕೆಲವರ್ಷ ಎಲ್ಲ ಅನುಕೂಲತೆಗಳಿಂದ, ಎಲ್ಲ ಕಡೆಗೆ ಹುಲುಸಾಗಿ ಬೆಳೆದ ಬೆಳೆ ಬೇಡಿಕೆ ಮೀರಿ ಬೆಲೆಗಳು ಕುಸಿಯುವಂತೆ ಮಾಡುವುದು. ಇನ್ನಿತರ ವರ್ಷಗಳಲ್ಲಿ ಅತಿ ಹೆಚ್ಚಿನ ಮಳೆಯಿಂದ ಅಥವಾ ಬರಗಾಲದಿಂದ ಅಥವಾ ಕೆಡಕು ಹವಾಮಾನ, ಮಂಜು, ಬೆಳೆ ರೋಗ ಮುಂತಾದವುಗಳಿಂದ ಕಡಿಮೆ ಸರಕಿನ ಉತ್ಪತ್ತಿ ಬೇಡಿಕೆ ಪೂರೈಸದೆ ಹೋಗುವುದರಿಂದ ಬೆಲೆಗಳೇನೋ ಗಗನಕ್ಕೇರುವವು. ಆದರೆ, ರೈತರು ಇಂತಹ ಸಂದರ್ಭಗಳಲ್ಲಿ ತಮ್ಮ ಉತ್ಪಾದನೆಯನ್ನೇ ಪೂರ್ತಿಯಾಗಿ ಕಳೆದುಕೊಂಡಿರುವರು. ಹೀಗಾಗಿ, ಹೆಚ್ಚುವರಿ ಬೆಲೆಯ ಲಾಭ ಅವರಿಗೆ ದಕ್ಕದೆ ಹಾನಿಗೊಳಗಾಗುವರು.

ಇನ್ನು, ಭೂ-ಹುಟ್ಟುವಳಿಗಳ ಗಾತ್ರ ಕೂಡ ಅತಿ ದೊಡ್ಡದು. ಹೀಗಾಗಿ ಸಾರಿಗೆಗೆ ಸುಲಭವಾಗಿ ಹೆಚ್ಚಿನ ಹಣ ತೆತ್ತಬೇಕಾಗುವುದು ಹಲವಾರು ತರಕಾರಿ, ಕಾಯಿಪಲ್ಲೆಗಳಲ್ಲಿ ಅವು ಮೂಲಕ್ಕಿಂತ ಉಳಿದ ಭಾವವೇ ಹೆಚ್ಚಿನದಾಗಿರುವುದು. ಆದರೆ, ಮಾರಾಟದಿಂದ ನಿವ್ವಳ ಉತ್ಪನ್ನ ತೀರ ಕಡಿಮೆ. ಇದನ್ನು ಕಡೆಗಣಿಸುವುದು ಕೂಡ ಕಷ್ಟಸಾಧ್ಯ. ಗ್ರಾಮಾಂತರ ಪೇಟೆಯ ದಲ್ಲಾಳಿಗಳು, ಸರಕುಗಳ ಈ ಗುಣದ ಹೆಚ್ಚಿನ ಲಾಭ ಪಡೆಯುವರು.

ಇದಲ್ಲದೆ, ತರಕಾರಿ ಕಾಯಿಪಲ್ಲೆಗಳು ಹಾಲು, ಹಣ್ಣು, ಶೀಘ್ರ ನಾಶವಾಗುವ ಸರಕುಗಳು. ಆದ್ದರಿಂದ ಅವುಗಳನ್ನು ನಿಶ್ಚಿತ ಅವಧಿಯಲ್ಲಿ ಬೇಡಿಕೆ ಪೂರೈಕೆಗಳ ಚಕ್ರಗಳ ತಾಕಲಾಟಕ್ಕೆ ತೊಡಗಿಸಿ,, ಬೆಲೆಗಳ ನಿರ್ಧಾರಕ್ಕೆ ಬಿಡದೆ. ಲಭ್ಯವಿರುವ ಬೆಲೆಗೆ ಮಾರ ಬೇಕಾಗುವುದು. ತರಕಾರಿ ಕಾಯಿಪಲ್ಲೆ ಸರಕುಗಳನ್ನು ಅವು ಬಾಡದ ಅಥವಾ ಕೆಡದ ಮುಂಚೆಯೇ ಮಾರಾಟ ಮಾಡಿದರೆ ಸ್ವಲ್ಪವಾದರೂ ಲಾಭವನ್ನು ಹೊಂದಬಹುದು. ಹಾಲು,, ಮೊಸರು, ಹಣ್ಣು ಹಂಪಲುಗಳನ್ನು ಕೆಲವೊಂದು ನಿಶ್ಚಿತ ಅವಧಿಯಲ್ಲಿಯೆ ಪ್ರಸ್ತುತ ಬೆಲೆಗೆ ಮಾರಾಟ ಮಾಡುವುದು ಅತ್ಯವಶ್ಯ. ಹೆಚ್ಚಿನ ಬೆಲೆಯ ಆಸೆಯಿಂದ ಆಮೇಲೆ ಮಾರಿದರಾಯಿತೆಂದು ಕಾಯ್ದರೆ ಇಡೀ ಸರಕೇ ನಾಶವಾಗಲು ಆಸ್ಪದ ಕೊಟ್ಟು ಹಾನಿಗೊಳಗಾಗಬೇಕಾಗುವುದು. ಸಾಮಾನ್ಯವಾಗಿ ಟೊಮಾಟೋ, ಹಸಿ-ಕಾಳು-ಪಲ್ಲೆ, ಹಾಲು, ಬೆಣ್ಣೆ ಇತ್ಯಾದಿ ಕೆಲವೊಂದು ಅವಧಿಯ ನಂತರ, ತಮ್ಮ ನಿಲುವನ್ನು ಕಳೆದುಕೊಂಡು ಗಳಿಕೆಯಲ್ಲಿ ಕಡಿತ ಹೊಂದಿ,. ಕಡಿಮೆ ಬೆಲೆ ಪಡೆಯುತ್ತವೆ. ಇವುಗಳನ್ನು ಸಂಗ್ರಹಿಸುವುದು ಕೂಡ ಕಷ್ಟ, ಗ್ರಾಮಾಂತರ ಪ್ರದೇಶದಲ್ಲಿ ಆ ಸೌಲಭ್ಯ ದೊರೆಯದು. ಒಂದು ವೇಳೆ ಆ ಸೌಲಭ್ಯ ಒದಗಿಸಿದ್ದಾದರೂ, ಹಾಲು, ದನಕರುಗಳು ಮುಂತಾದ ನಾಶವಾಗುವಂತಹ ಸರಕುಗಳನ್ನು ಸಂಗ್ರಹಿಸಿಡುವುದೇ ಅಸಾಧ್ಯ, ಹೀಗಾಗಿ ಭೂ-ಹಿಡುವಳಿದಾರರು ಹಾನಿಗೊಳಗಾಗಬೇಕಾಗುವುದು.

ಇದಲ್ಲದೆ, ಬಹಳಷ್ಟು ಭೂ-ಹುಟ್ಟುವಳಿ ಸರಕುಗಳ ಬೇಡಿಕೆ ತೀರ ಅನಾಸಕ್ತವಾದದ್ದು. ಅವುಗಳ ಬೇಡಿಕೆ ಪ್ರಮಾಣದ ದೃಷ್ಟಿಯಿಂದ ನಿಶ್ಚಿತವಾದದ್ದು, ದವಸ ಧಾನ್ಯಗಳ ಬೆಲೆಗಳು ಬಹಳಷ್ಟು ಕುಸಿದರೂ ಕೂಡ, ದಿನನಿತ್ಯ ಬಳಕೆದಾರರ ಕೊಳ್ಳುವ ಪ್ರಮಾಣ ಹೆಚ್ಚಲಾರದು. ಹೀಗಾಗಿ ಮಾರಾಟಗಾರರು ರೈತರು ಗ್ರಾಮಾಂತರ ಪೇಟೆಗಳಲ್ಲಿ ಈ ತೊಂದರೆ ಹೆಚ್ಚಿನ ಪ್ರಮಾಣದಲ್ಲಿ ಅನುಭವಿಸಬೇಕಾಗುವುದು. ಬೇಡಿಕೆ ಮೀರಿದ ಪೂರೈಕೆಯನ್ನು ಅಭಾವ ಪ್ರದೇಶಗಳಿಗೆ ಸಾಗಿಸಬೇಕೆಂದರೆ. ಅವುಗಳ ಮಾಹಿತಿ ಈ ಗ್ರಾಮಾಂತರ ಪ್ರದೇಶದ ಮಾರುಕಟ್ಟೆಯಲ್ಲಿ ಲಭ್ಯವಿರುವುದಿಲ್ಲ. ಅಲ್ಲದೆ ಸಾರಿಗೆ ಸಂಪರ್ಕ ಸೌಲಭ್ಯವ ಅಭಾವ ಕೂಡ ಇನ್ನಷ್ಟು ಅನಾನುಕೂಲಕ್ಕೆ ಪುಷ್ಟಿ ನೀಡುವುದು. ಹೀಗಾಗಿ ಹೆಚ್ಚಿನ ಪ್ರಮಾಣದ ಸರಕುಗಳು, ಅದರಲ್ಲೂ ಹೆಚ್ಚಾಗಿ ನಾಶವಾಗುವಂತಹ ಸರಕುಗಳು, ಬೇಡಿಕೆಯಿಲ್ಲದೆ ನಾಶವಾಗಿಯೇ ಹೋಗುವವು.

ಇವೆಲ್ಲ ಹಾಗೂ ಇದೇ ತೆರನಾದ ಇನ್ನಿತರ ಸಮಸ್ಯೆಗಳು ಮೂಲ ಸ್ವರೂಪವಾಗಿದ್ದರೂ ಇವುಗಳಿಗೆ ಪರಿಹಾರ ಕಲ್ಪಿಸಿಕೊಡದ ಹೊರತು. ಗ್ರಾಮಾಂತರ ಪ್ರದೇಶದ ಮಾರುಕಟ್ಟೆಯ ಮಹತ್ವ ಹೆಚ್ಚಿಸಿ ಗ್ರಾಮಾಂತರ ಪ್ರದೇಶದ ಜನರಿಗೆ ಅದರ ಲಾಭ ಮಾಡಿಕೊಡುವುದು ಕಷ್ಟ. ಆಧುನಿಕ ಪದ್ಧತಿಯಿಂದ ಉತ್ಪಾದಿಸುವ ಜ್ಞಾನ, ಸುಧಾರಿತ ತಳಿಯ ಬೀಜಗಳ ಉಪಯೋಗ, ಉತ್ಪಾದನೆಯಲ್ಲಿ ಕೀಟನಾಶಕ ಔಷಧಿಗಳ ಸದುಪಯೋಗದ ಜ್ಞಾನ, ಬೇಡಿಕೆಯಂತೆ ಪೂರೈಕೆ ಮಾಡಲು ಮಾರುಕಟ್ಟೆಯ ಮಾಹಿತಿ, ಸುಧಾರಿತ ಸಾರಿಗೆ ವ್ಯವಸ್ಥೆ ಸಂಗ್ರಹಣೆಯ ಸೌಕರ್ಯ ಮುಂತಾದವನ್ನು ಒದಗಿಸುವುದು. ಗ್ರಾಮಾಂತರ ಪ್ರದೇಶದ ಮಾರುಕಟ್ಟೆಯ ಅಭಿವೃದ್ದಿಯಲ್ಲಿ ಸೂಕ್ತ ಕಾರ್ಯಕ್ರಮವಾಗಿ ಅವುಗಳ ಮಹತ್ವ ಹೆಚ್ಚಬಹುದು.

ಸಂತೆಯಲ್ಲಿನ ಸಮಸ್ಯೆಗಳು

ಕೃಷಿ ಹುಟ್ಟುವಳಿಗಳ ದೊಡ್ಡ ಪ್ರಮಾಣದ ವ್ಯಾಪಾರ ನಡೆಸುವ ಈ ಗ್ರಾಮಾಂತರ ಪ್ರದೇಶದ ಪೇಟೆಗಳು ಈ ಕೆಳಗಿನ ಸಮಸ್ಯೆಗಳಿಗೆ ತುತ್ತಾಗಿದೆ.

೧. ಉತ್ಪಾದಕರ ಸಂಘಟನೆಯ ಅಭಾವ

೨. ಸ್ಥಾನಿಕ ಪೇಟೆಯಲ್ಲಿ ಅನಿವಾರ್ಯ ಮಾರಾಟ

೩. ದಲ್ಲಾಳಿಗಳ ಪ್ರಭಾವ

೪. ಅತಿಯಾದ ಪೇಟೆಯ ಖರ್ಚು

೫. ಹೆಚ್ಚಿನ ಮೋಸಗಾರಿಕೆ

೬. ತೂಕ ಅಳತೆಯಲ್ಲಿ ಹೊಂದಾಣಿಕೆ ಇಲ್ಲದಿರುವುದು.

೭. ಪ್ರಮಾಣಿಸುವ ಮತ್ತು ವರ್ಗಿಕರಣದ ಸೌಲಭ್ಯವಿಲ್ಲದಿರುವುದು.

೮. ಪೇಟೆಯ ಮಾಹಿತಿ ಅಭಾವ

೯. ಸಂಗ್ರಹಣೆಗೋಸ್ಕರ ಗೋದಾಮುಗಳ ಕೊರತೆ.

೧೦. ಅವಿಕಸಿತ ಸಾರಿಗೆ ಸಂಪರ್ಕ

೧೧. ಹಣಕಾಸಿನ ನೆರಮು ಕಡಿಮೆ ಇರುವುದು.

ಉತ್ಪಾದಿತ ಸರಕುಗಳ (Manufactured Goods) ವ್ಯಾಪಾರಸ್ಥರ ಸಂಘಟನೆಯಂತೆ ಕೃಷಿ ಉತ್ಪಾದಿತರ ಸಂಘಟನೆ ಇಲ್ಲ. ಹೀಗಾಗಿ ವಸ್ತುಗಳ ವಿನಿಮಯದ ಮೇಲೆ ಹಾಗೂ ಬೆಲೆಗಳ ನಿರ್ಧಾರದ ಮೇಲೆ ನಿಯಂತ್ರಣ ಮಾಡುವುದು ಕಷ್ಟವಾಗುವುದು. ಕೈಗಾರಿಕೆ ಉದ್ದಿಮೆಗಳಿಂದ ಹೊರಬರುವ ಉತ್ಪಾದನೆಗಳ ಉತ್ಪಾದಕ ಸಂಘಟನೆ ಅತೀ ದೊಡ್ಡ ಪ್ರಮಾಣದಲ್ಲಿ ಇರುವುದರಿಂದ, ಬೇಡಿಕೆಯನ್ನು ಗಣನೆಗೆ ತೆಗೆದುಕೊಂಡು ಉತ್ಪಾದಿಸುವುದಾಗಲಿ ಅಥವಾ ನಿರ್ದಿಷ್ಟ ಬೆಲೆಗೆ ಮಾರಾಟ ಮಾಡುವುದಾಗಲೀ ಅಥವಾ ಸರ್ಕಾರಿ ನಿರ್ಬಂಧನೆಗಳಿಗೆ ತಮ್ಮ ಪ್ರತಿಭಟನೆ ತೋರಿಸುವುದಾಗಲಿ ಸಾಧ್ಯವಾಗುವುದು. ಆದರೆ ಭೂ-ಹುಟ್ಟುವಳಿದಾರರು ಈ ರೀತಿ ಸಂಘಟನೆ ಹೊಂದಿಲ್ಲ. ಹೀಗಾಗಿ ದಲ್ಲಾಳಿಗಳಿಗೆ ಸರ್ಕಾರಕ್ಕೆ ಇದು ವರವಾಗಿ ಪರಿಣಮಿಸಿದೆ. ರೈತರು ತಮ್ಮದೆ ಆದ ಸಮಸ್ಯೆಗಳನ್ನು ಪ್ರತಿಪಾದಿಸುವುದು ಒಟ್ಟಿಗೆ ಇರಲಿ, ತಮ್ಮ ಹಕ್ಕುಗಳ ಸಂರಕ್ಷಣೆ ಕೂಡ ಸಂಘಟನೆಯ ಅಭಾವದಿಂದ ಮಾಡಲಾರರು. ಇದು ಗ್ರಾಮಾಂತರ ಪ್ರದೇಶದ ಮಾರುಕಟ್ಟೆಯ ಬೆಳವಣಿಗೆಗೆ ದೊಡ್ಡ ಅಡೆತಡೆಯಾಗಿ ಪರಿಣಮಿಸಿದೆ. ಅಲ್ಲದೆ ಅವುಗಳ ಮಹತ್ವವನ್ನು ಕುಂದಿಸಿದೆ.

ಇನ್ನು, ಬಹುಪಾಲು ಭೂ ಹುಟ್ಟುವಳಿದಾರರು ಸ್ಥಾನಿಕ ಪೇಟೆಯಲ್ಲಿ ಇರುವ ದಲ್ಲಾಳಿಗಳಿಂದ ಉತ್ಪಾದನೆಗಿಂತ ಬಹಳಷ್ಟು, ಮುಂಚಿತವಾಗಿಯೆ ಭೂಮಿಯನ್ನು ಉಳುವ ಖರ್ಚಿನ ಸಲುವಾಗಿ, ಬಿತ್ತುವ ಬೀಜ ಖರೀದಿಸಲು, ಗೊಬ್ಬರ ಕೊಳ್ಳಲು ಇತ್ಯಾದಿಗಳಿಗಾಗಿ ಮುಂಗಡ ಹಣ ಪಡೆದಿರುವುದರಿಂದ, ರೈತರು ಸುಗ್ಗಿಯ ನಂತರ ನೇರವಾಗಿ ಯಾವುದಕ್ಕೂ ವಿಚಾರ ಮಾಡದೇ, ಈ ದಲ್ಲಾಳಿಗಳಿಗೆ ಅನಿವಾರ್ಯವಾಗಿ ಮಾರಾಟ ಮಾಡಬೇಕಾಗುವುದು. ಬೇರೆ ಯಾವ ಸಂಘ ಸಂಸ್ಥೆಗಳು ದೊಡ್ಡ ಪ್ರಮಾಣದಲ್ಲಿ ರೈತನ ಹಣಕಾಸಿನ ತೊಂದರೆಯಲ್ಲಿ ನೆರವು ನೀಡಲು ಬರಲಾರದ್ದರಿಂದ, ಅನಿವಾರ್ಯವಾಗಿ ರೈತರು ಈ ಸ್ಥಾನಿಕ ದಲ್ಲಾಳಿಗಳ ಕೃಪೆಯಲ್ಲಿ ಸಾಲ ಪಡೆದು. ಸುಗ್ಗಿಯ ನಂತರ ದಲ್ಲಾಳಿಗಳು ನಿರ್ಧರಿಸಿದ ಬೆಲೆಗಳಿಗೆ ಅನಿವಾರ್ಯವಾಗಿ ಮಾರಾಟ ಮಾಡಬೇಕಾಗುವುದು. ಇದಲ್ಲದೆ ಸಣ್ಣ ಪ್ರಮಾಣದ ಉತ್ಪಾದನೆ, ಅವಿಕಸಿತ ಸಾರಿಗೆ ಸಂಪರ್ಕ, ಪೇಟೆಯ ಮಾಹಿತಿ ಅಭಾವ ಮತ್ತು ಹಲವಾರು ಭೂ-ಹುಟ್ಟುವಳಿಗಳು ನಾಶವಾಗುವಂತ ಗುಣದವುಗಳಾದ್ದರಿಂದ, ಬೇರೆ ಪರ್ಯಾಯವಿಲ್ಲದೆ ಸ್ಥಾನಿಕ ಪೇಟೆಯಲ್ಲಿಯೇ ಅವುಗಳನ್ನು ಮಾರಾಟ ಮಾಡಬೇಕಾಗುವುದು. ಇವೆಲ್ಲ ಗ್ರಾಮಾಂತರ ಪ್ರದೇಶದ ಮಾರುಕಟ್ಟೆಯ ಸುಸಜ್ಜಿತ ಬೆಳವಣೆಗೆಯಲ್ಲಿ ಕಾಲು ತೊಡಕಾಗಿ ನಿಂತಿವೆ.

ಅಲ್ಲದೆ ಗ್ರಾಮಾಂತರ ಪ್ರದೇಶದ ಮಾರುಕಟ್ಟೆಯಲ್ಲಿ ರೈತರನ್ನು ಅಡ್ಡ ಹಾದಿಗೆ ಎಳೆಯಲು ಹಲವಾರು ದಲ್ಲಾಳಿಗಳ ಉಪಸ್ಥಿತಿ ಇನ್ನೊಂದು ಕಾರಣ, ಸುಸಜ್ಜಿತ ಹಾಗೂ ಕ್ರಮಬದ್ದ, ನಿಯಂತ್ರಿತ ಪೇಟೆಯಲ್ಲಿ ಲೈಸೆನ್ಸ್ ಪಡೆದ ದಲ್ಲಾಳಿಗಳಿಗೆ ಮಾತ್ರ ಪ್ರವೇಶ ಹಾಗೂ ಕಾರ್ಯಕಲಾಪಗಳಲಿ ಭಾಗವಹಿಸಲು ಅಧಿಕಾರ ಇರುವುದರಿಂದ ಮಾರಾಟಗಾರರಿಗೆ, ಕೊಳ್ಳುವವರಿಗೆ, ನ್ಯಾಯ ದೊರೆಯುವುದು. ಆದರೆ ಈ ಸ್ಥಾನಿಕ ಅಥವಾ ಪ್ರಾದೇಶಿಕ ಪೇಟೆಯಲ್ಲಿ ದಲ್ಲಾಳಿಗಳ ಕಾರ್ಯಕಲಾಪಗಳಿಗೆ ಯಾವುದೇ ತರಹದ ಬಂಧನಗಳಿಲ್ಲದಿರುವುದರಿಂದ, ಸರಕುಗಳನ್ನು ಕೊಳ್ಳುವ ವ್ಯಾಪಾರಸ್ಥರ ಅಥವಾ ಕೈಗಾರಿಕೆ ಉದ್ದಿಮೆದಾರರ ಹಾಗೂ ರೈತರ ಮಧ್ಯೆ ದಲ್ಲಾಳಿಗಳು ಹೆಚ್ಚಿನ ಕಾರ್ಯನಿರ್ವಹಿಸಿ ಲಾಭ ಪಡೆಯುವರು. ತಮ್ಮ ವಾಕ್ ಚಾತುರ್ಯದಿಂದ ಹಾಗೂ ನುರಿತ ಮಾರಾಟಗಾರಿಕೆಯ ಕಲೆಯಿಂದ ರೈತರಿಗೆ ಬದಲಿ ಪರ್ಯಾಯ ತೋಚದಂತೆ ಮಾಡಿ ಸ್ಥಾನಿಕ ಪೇಟೆಯಲ್ಲಿಯೇ ಕಡಿಮೆ ಬೆಲೆಗೆ ಮಾರಾಟ ಮಾಡಲು ಹಚ್ಚುವರು. ಇಂತಹ ನುರಿತ ನಿಪುಣ ದಲ್ಲಾಳಿಗಳ ಮೋಸದ ಜಾಲದಲ್ಲಿ ರೈತರು ಸಿಲುಕಿಕೊಂಡು, ತಮ್ಮ ಸರಕುಗಳಿಗೆ ಯೋಗ್ಯ ಬೆಲೆ ಪಡೆಯಲಾರದೆ ಅನ್ಯಾಯ ಸಹಿಸುವರು. ದಲ್ಲಾಳಿಗಳ ಹೆಚ್ಚಿನ ಸಂಖ್ಯೆ ಈ ಪೇಟೆಯಲ್ಲಿ ರೈತರಿಗೆ ಪರ್ಯಾಯ ಲಾಭದಾಯಕ ಮಾರಾಟ ವ್ಯವಸ್ಥೆಯಿಂದ ವಂಚಿತ ಗೊಳಿಸುವುದು. ಇದು ಹೆಚ್ಚಾಗಿ ರೇಷ್ಮೆ ಗೂಡಿನ ಮಾರುಕಟ್ಟೆ ಹಾಗೂ ತರಕಾರಿ ಮಾರುಕಟ್ಟೆಯಲ್ಲಿ ಸಂಭವಿಸುತ್ತದೆ.

ಗ್ರಾಮಾಂತರ ಪ್ರದೇಶದ ಮಾರುಕಟ್ಟೆಗಳು ಅವ್ಯವಸ್ಥಿತವಾಗಿರುವುದರಿಂದ, ವ್ಯಾಪಾರಿ ಕಾರ್ಯಕಲಾಪಗಳಿಗೆ ಯಾವುದೇ ನೀತಿ ನಿಯಮಗಳಿಲ್ಲ. ಸರಕುಗಳನ್ನು ಮಾರಾಟ ಮಾಡಿದ ನಂತರ, ಹಣ ಪಡೆಯುವಾಗ ರೈತ ಬಹುಪಾಲು ಭಾಗವನ್ನು ಆ ಖರ್ಚು ಈ ಖರ್ಚು ದಲ್ಲಾಳಿ ಅಂತಾ ಕಳೆದುಕೊಳ್ಳಬೇಕಾಗುವುದು. ನಿಯಂತ್ರಿತ ಮಾರುಕಟ್ಟೆಯಲ್ಲಿ ಕೊಳ್ಳುವವರಿಂದ ನೂರಕ್ಕೆ ಒಂದರಷ್ಟೋ ಒಂದುವರೆಯೆಷ್ಟೋ ಕೇಳಲಾಗುವುದು. ಆದರೆ ಈ ಸ್ಥಾನಿಕ ಪೇಟೆಯಲ್ಲಿ ದಲ್ಲಾಳಿ, ಹಮಾಲಿ, ತುಲಾಯಿ (ಸರಕುಗಳ ತೂಕಮಾಡಿದ್ದಕ್ಕಾಗಿ ಹಣ) ಉಸ್ತುವಾರಿ (ಚೀಲಗಳ ಬಾಯಿ ಬಿಚ್ಚುವ, ಮರಳಿ ಹೊಲೆಯುವ ಕೆಲಸಕ್ಕಾಗಿ ಹಣ) ದಾನ,ಧರ್ಮಾದಾನ ಅಂತಾ, ಹಲವಾರು ತರಹದ ಖರ್ಚನ್ನು ಮಾರಾಟ ಮಡುವ ರೈತನ ತಲೆಗೆ ಹಾಕಿ, ಆತನಿಗೆ ಸಲ್ಲಬೇಕಾದ ಬಹುಪಾಲು ಸರಕಿನ ಮೊತ್ತವನ್ನು ಕಡಿತಗೊಳಿಸಿ, ಹಾನಿಯ ಹೊಂಡದಲ್ಲಿ ನೂಕುವರು. ಇನ್ನು ಈ ಕಡಿತಗಳಿಗೆಲ್ಲಾ ಯಾವುದೆ ತರಹದ ಇತಿ ಮಿತಗಳಿಲ್ಲ. ಕೆಲವೊಂದು ಸಲ ಚೀಲಕ್ಕೆ ನಾಲ್ಕೈದು ಕಿಲೋದಷ್ಟು, ಮಣ್ಣಿನ ಕಡಿತ ಎಂದು ಮಾಡಿದರೆ, ಮತ್ತೊಂದು ಸಲ ಅಥವಾ ಇನ್ನೊಬ್ಬ ರೈತನಿಗಾಗಿ ಅದನ್ನು ಹತ್ತು ಕಿಲೋದಷ್ಟು ಕಡಿತಗೊಳಿಸಲಾಗುವುದು. ಅದೇ ರೀತಿ ಸರಕುಗಳು ಹಸಿ ಇವೆ ಅಂತಲೂ ಕೂಡ, ಇವಲ್ಲೆ ಗ್ರಾಮಾಂತರ ಪ್ರದೇಶದ ಪೇಟೆಯ ಬೆಳವಣಿಗೆಯಲ್ಲಿ ಕಂಟಕವಾಗಿ ಪರಿಣಮಿಸಿವೆ. ಭೂ ಹುಟ್ಟುವಳಿದಾರರು ನಿರಂತರವಾಗಿ ಈ ಅನ್ಯಾಯ ಸಹಿಸುತ್ತ ಬಂದಿದ್ದಾರೆ. ಈ ಅನ್ಯಾಯ ದೂರವಾಗಬೇಕಾದರೆ ಗ್ರಾಮಾಂತರ ಪ್ರದೇಶದಲ್ಲಿ ವ್ಯವಹರಿಸುವ ರೈತರ ತಿಳುವಳಿಕೆ ಮಟ್ಟ ಬದಲಾಗಿ, ಯಾವುದಕ್ಕೂ ಕಟ್ಟುನಿಟ್ಟು ಮಾಡಿಕೊಂಡು, ಕ್ರಮಬದ್ದ, ವ್ಯಾಪಾರದ ಅನುಕೂಲ ಮಾಡದ ಹೊರತು ಗ್ರಾಮಾಂತರ ಪ್ರದೇಶದ ಮಾರುಕಟ್ಟೆಯ ಮಹತ್ವ ಹೆಚ್ಚಿಸಲಾಗದು.

ಗ್ರಾಮಾಂತರ ಪ್ರದೇಶದ ಮಾರುಕಟ್ಟೆಯಲ್ಲಿನ ಮೋಸಗಾರಿಕೆ, ಅವುಗಳ ಬೆಳವಣಿಗೆಯಲ್ಲಿ ಇನ್ನೂ ಹೆಚ್ಚಾದ ಆಡಕು ತೊಡಕು, ಸರಕುಗಳ ತೂಕ ಮಾಡುವಾಗ ಸರಿಯಾದ ತೂಕದ ಕಲ್ಲು ಉಪಯೋಗಿಸದೆ. ಯಾವುದಾದರು ಒಂದು ದೊಡ್ಡ ಬಂಡೆಗಲ್ಲು ಇಟ್ಟು, ಇದು ಕ್ವಿಂಟಲ್ಲಿಗೆ ಸಮ ಎಂದು ಹೇಳುವುದು. ಇದು ಪ್ರಾದೇಶಿಕ ಪೇಟೆಯಲ್ಲಿನ ಮೋಸಗಾರಿಕೆಯ ಪರಮಾವಧಿ. ಅಲ್ಲದೆ ಸ್ಯಾಂಪಲ್ ಪ್ರತಿ ಚೀಲದಿಂದ, ಬುಟ್ಟಿಯಿಂದ ಬಹುಪಾಲು ಸರಕನ್ನು ತೆಗೆದುಕೊಳ್ಳುವುದು. ಕಾರಣವಿಲ್ಲದೆ ಪ್ರತಿಸಲ ದಾನ ಎಂದು ಮಾರಾಟ ಮೊತ್ತದಲ್ಲಿ ಕಡಿತ ಮಾಡುವುದು ಇವು ಇನ್ನಿತರ ಮೋಸಗಾರಿಕೆಗಳು, ಇನ್ನು ದಲ್ಲಾಳಿಗಳ ಮೋಸಗಾರಿಕೆಯಂತೂ ಹೇಳತೀರದು. ಸಾಮಾನ್ಯವಾಗಿ ದನಕರುಗಳ ಪೇಟೆಯಲ್ಲಿ ಮಧ್ಯಸ್ಥಿಕೆ ವಹಿಸುವ ವ್ಯಕ್ತಿ ದನಕರುಗಳ ಮಾರಾಟಗಾರರು ಹಾಗೂ ಕೊಳ್ಳುವವರು ಒಟ್ಟಿಗೆ ಸೇರದಂತೆ ಮಾಡಿ, ಪ್ರತ್ಯಕ್ಷದಲ್ಲಿ ಅವರ ಎದುರಿಗೆ ಬೆಲೆಗಳನ್ನು ನಿರ್ಧರಿಸದೆ, ಪರೋಕ್ಷವಾಗಿ ಮಾರಾಟ ಮಾಡುವವರಿಗೆ ಒಂದು ಬೆಲೆ ತಿಳಿಸಿಕೊಳ್ಳುವವರಿಗೆ ಇನ್ನೊಂದು ಬೆಲೆ ಹೇಳಿ, ನಡುವಿನ ವ್ಯತ್ಯಾಸ ತನ್ನ ಜೇಬಿಗೆ ಹಾಕಿಕೊಳ್ಳುವುದು ಇನ್ನೊಂದು ತರಹದ ಮೋಸಗಾರಿಕೆ ಇಲ್ಲಿ, ಈ ದಲ್ಲಾಳಿಗಳ ಮೋಸಗಾರಿಕೆಯ ಚತುರತೆ ಮೆಚ್ಚತಕ್ಕಂತಹದು. ಕಾರಣ, ಅವರು ಮಾರಾಟಗಾರರನ್ನು ಹಾಗೂ ಕೊಳ್ಳುವವರನ್ನು ನಂಬಿಸಲು, ಒಂದು ಬಟ್ಟೆಯಲ್ಲಿ ತಮ್ಮ ಸ್ವಂತ ಚಪ್ಪಲಿ ಜತೆಯನ್ನು ಕಟ್ಟಿ “ಇದು ನೋಡು ಸುಳ್ಳು ಹೇಳುವುದಿಲ್ಲ ಈ ಬುತ್ತಿಯ ಆಣೆ” ಎಂದು ಚಪ್ಪಲಿ ಜತೆ ಕಟ್ಟಿಟ್ಟ, ಗಂಟು ಮುಟ್ಟಿ ಹೇಳುವುದು ವಾಡಿಕೆ.

ಮೆಟ್ರಿಕ್ ಪದ್ಧತಿ ತೂಕ ಅಳತೆಗಳ ಪ್ರಚಲಿತದಲ್ಲಿ ಬಂದು ಹಲವಾರು ವರ್ಷಗಳಾದರೂ ಸಹಿತ, ಬೇರೆ ಬೇರೆ ಪ್ರದೇಶಗಳಲ್ಲಿ ಪ್ರಾದೇಶಿಕವಾಗಿ ತಮ್ಮದೆ ಆದ ತೂಕದ ವ್ಯವಸ್ಥೆ ಬಳಕೆಯಲ್ಲಿದೆ. ಕೆಲ್ಲವು ಪ್ರದೇಶಗಳಲ್ಲಿ ಇಪ್ಪತ್ತು ಕಿಲೋಗ್ರಾಂಗಳನ್ನು “ಮಣ” ಅಂತಾ ಪರಿಗಣಿಸಿದರೆ, ಇನ್ನೂ ಕೆಲವುಕಡೆ ನಲ್ವತ್ತು ಕಿಲೋಗ್ರಾಂಗಳನ್ನು “ಮಣ” ಅಂತಾ ಪರಿಗಣಿಸಲಾಗುವುದು. ಹೀಗಾಗಿ ಒಂದು ಪೇಟೆಯಿಂದ ಇನ್ನೊಂದು ಪೇಟೆಗೆ ವ್ಯವಹರಿಸುವಾಗ, ಇದು ತೊಂದರೆಯಾಗಿ ಪರಿಣಮಿಸುವುದು. ಅಲ್ಲದೆ ದಲ್ಲಾಳಿಗಳಿಗೆ ಮೋಸಗೊಳಿಸಲು ಹೆಚ್ಚಿನ ಆಸ್ಪದ ಕಲ್ಪಿಸಿಕೊಡುವುದು. ಮಾರಾಟಗಾರ ೨೦ಕಿಲೋಗ್ರಾಂಗಳ “ಮಣ” ಎಂದು ತಿಳಿದು, ಒಂದು ನಿರ್ದಿಷ್ಟಪಡಿಸಿದ ಬೆಲೆಗೆ ಮಾರಲು ಸಿದ್ಧವಾದಾಗ, ಕೊಳ್ಳುವವ ೪೦ ಕಿಲೋಗ್ರಾಂಗಳ “ಮಣ” ಎಂದು ಭಾವಿಸಿ ಒಪ್ಪಿಗೆ ಅಂತಾ ಹೇಳಿದಾಗ, ಸಲ್ಲದ ಜಗಳಕ್ಕೆ ಆಸ್ಪದವಾಗುವುದು. ಆಗ ಜಗಳ ಬಗೆಹರಿಸಲು ಮಧ್ಯಸ್ಥಿಕೆ ವಹಿಸುವ ವ್ಯಾಪಾರಸ್ಥರು ರೈತರ ಪಾಲಿಗೆ ವೈರಿಗಳೆ ಆಗಿರುತ್ತಾರೆ. ಹೀಗಾಗಿ ರೈತರಿಗೆ ಹಾನಿಯಾಗುವುದು. ಅಲ್ಲದೆ ತೂಕ ಅಳತೆಗಳೆಗೆ ಬಳಸಲಾಗುವ ಶಬ್ದ ಪ್ರಯೋಗಗಳು ಕೂಡ ಪ್ರಾದೇಶಿಕವಾಗಿ ಬಹಳಷ್ಟು ಭಿನ್ನವಾಗಿವೆ. ಕೊಳಗ (೧/೪ ಸೇರು), ಚಿಟ್ಟಿ (ಅರ್ಧ ಸೇರು), ನಿಟಿಲಿ (ಸೇರು), ಅಡಿಸೇರು (ಎರಡು ಸೇರು), ಪಾಯಲಿ (ನಾಲ್ಕು ಸೇರು), ಉತ್ತರ ಕರ್ನಾಟಕದಲ್ಲಿ ಚಿರಪರಿಚಿತವಿದ್ದರೆ, ದಕ್ಷಿಣದಲ್ಲಿ ಅರಪಾವು, ಸೇರು, ಪಡಿ ಇತ್ಯಾದಿ ತೂಕ-ಅಳತೆ ಶಬ್ದಗಳು. ಅಲ್ಲದೆ ಬೆಳ್ಳಿ-ಬಂಗಾರ ಮಾರಾಟದಲ್ಲಿ ಕೂಡ ತೊಲೆಯ ತೂಕ, ಎಲ್ಲ ಪ್ರದೇಶದಲ್ಲಿ ಒಂದು ರೂಪಾಯಿ ತೂಕಕ್ಕೆ ಸೀಮಿತವಿಲ್ಲ. ಕೆಲವು ಕಡೆ ೧೦ ಗ್ರಾಂಗೆ ತೊಲೆ, ಇನ್ನೂ ಕೆಲವು ಕಡೆ ೧೧ ಗ್ರಾಂಗೆ ತೊಲೆ ಅಂತಾ ಭಾವಿಸುವರು. ಹೀಗಾಗಿ ಇವು ಕೂಡ ವಸ್ತು ವಿನಿಮಯದಲ್ಲಿ ತೊಂದರೆಯನ್ನುಂಟು ಮಾಡುವವು.

ಸಣ್ಣ ಪ್ರಮಾಣದಲ್ಲಿ ಉತ್ಪಾದಿಸುವ ಸರಕುಗಳನ್ನು ಪ್ರಮಾಣಿಸುವದು (Standardisation) ವರ್ಗಿಕರಣಗೊಳಿಸಿವುದು (Grading) ಕೂಡ ಭೂ ಹುಟ್ಟುವಳಿದಾರರಿಗೆ ಖರ್ಚಿನ ಮೂಲವೆ. ಇದು ಕಾರ್ಯ ನೈಪುಣ್ಯತೆಗೆ ಸಂಬಂಧಿಸಿದ್ದರಿಂದ ಅವರ ಸೇವೆ ಪಡೆಯುವಾಗ ಅವರ ನೈಪುಣ್ಯತೆಗೆ ತಕ್ಕಂತೆ ಸಂಬಳವನ್ನು ಕೊಡಬೇಕಾಗುವುದು. ಒಂದು ವೇಳೆ ಕೊಡಲು ನಿರ್ಧರಿಸಿದರೂ ಕೂಡ ಭೂ – ಊತ್ಪಾದನೆ ಸಣ್ಣ ಪ್ರಮಾಣದ ಉತ್ಪಾದನೆಯಾಗಿರುತ್ತದೆ. ಅದು ಕೂಡ ವರ್ಷದ ಕೆಲವೊಂದು ಋತುವಿನಲ್ಲಿ ಮಾತ್ರ ಇರುವುದರಿಂದ ಆವರ ಪೂರ್ಣ ವೇಳೆ ಸೇವೆ ಪಡೆಯುವುದು ಅಸಾಧ್ಯವಾಗುವುದು. ಅದಕ್ಕಾಗಿ, ಸಣ್ಣ ಭೂ-ಹುಟ್ಟುವಳಿದಾರರು ಇದರ ಗೋಜಿಗೆ ಹೋಗಲಾರರು, ಆದರೆ ಪ್ರಮಾಣೀಕರಣ, ವರ್ಗೀಕರಣ ಹೊರತಾಗಿ ವಸ್ತುಗಳ ಮಾರಾಟ ಕೈಕೊಳ್ಳುವುದರಿಂದ ಕಡಿಮೆ ಪ್ರತೀಯ ಹಾಗೂ ಹೆಚ್ಚಿನ ಪ್ರತೀಯ ಸರಕುಗಳಿಗೂ ಒಂದು ತೆರನಾದ ಬೆಲೆ ಪಡೆಯಬೇಕಾಗುವುದು ಹೀಗಾಗಿ ಅನಿವಾರ್ಯವಾಗಿ ಹಾನಿಗೊಳಗಾಗಬೇಕಾಗುವುದು.

ಗ್ರಾಮಾಂತರ ಪ್ರದೇಶದಲ್ಲಿಯ ಜನರಿಗೆ ಅದರಲ್ಲೂ ಹೆಚ್ಚಾಗಿ ರೈತರಿಗೆ ಇಷ್ಟೊಂದು ಸಂಪರ್ಕ ಮಾಧ್ಯಮದ ಬೆಳವಣಿಗೆ ನಂತರವೂ, ಪೇಟೆಗಳ ಸಂಪೂರ್ಣ ಮಾಹಿತಿ ದೊರೆಯದೆ ಇರುವುದು ದುರದೃಷ್ಟಕರ. ಇದು ಹಾನಿಗೆ ನಾಂದಿಯಾಗಿದೆ. ಕಾರಣ ಪೇಟೆಯಲ್ಲಿ ಬೇಡಿಕೆ ಇದೆ. ಇಲ್ಲಿ ಕಡಿಮೆ ಇದೆ ಅನ್ನುವ ಮಾಹಿತಿ ಭೂ-ಹುಟ್ಟುವಳಿದಾರರಿಗೆ ಗೊತ್ತಾದರೆ, ಒಂದೆರಡು ದಿವಸ ಅಥವಾ ವಾರ ತಡೆದು ಸರಕುಗಳನ್ನು ಪೇಟೆಗೆ ಸಾಗಿಸಿ ಮಾರಾಟ ಮಾಡುವ ನಿರ್ಣಯ ಕೈಕೊಳ್ಳಬಹುದು. ಆದರೆ ಈ ಮಾಹಿತಿ ಅವರಿಗೆ ದೊರೆಯದ್ದರಿಂದ, ಏಕಕಾಲಕ್ಕೆ ಒಂದೇ ತೆರನಾದ ಸರಕುಗಳು ಪೇಟೆಗೆ ಧುಮುಕಿ, ಬೆಲೆಗಳು ಮಣ್ಣು ಮುಕ್ಕುವಂತೆ ಮಾಡುವವು. ಅಲ್ಲದೆ ಅಲ್ಪಸ್ವಲ್ಪ ಮಾಹಿತಿ ದೊರೆತರೂ ಅದು ಸ್ಥಾನಿಕ ಪೇಟೆಯಲ್ಲಿಯ ದಲ್ಲಾಳಿಗಳ ಮುಖಾಂತರ ತಾವೇ ತಮ್ಮ ಲಾಭಕ್ಕಾಗಿ ಇಂತಹ ಮಾರಾಟಗಾರರನ್ನು ಬಲಿ ತೆಗೆದುಕೊಳ್ಳಲೂ ಹಿಂಜರಿಯಲಾರರು. ಹೀಗಾಗಿ ಗ್ರಾಮಾಂತರ ಪ್ರದೇಶದ ಮಾರುಕಟ್ಟೆಯ ಬೆಳವಣಿಗೆಯಲ್ಲಿ ಈ ವಿಷಯ ಕೂಡ ಅಡರು-ತೊಡರಾಗಿ ಪರಿಣಮಿಸಿದೆ. ಆಧುನಿಕ ಸಂಪರ್ಕ ಮಾಧ್ಯವದ ಮೂಲಕ ಈ ತೊಡರನ್ನು ಹೋಗಲಾಡಿಸಬಹುದು. ಇದೇನು ಅಷ್ಟೊಂದು ಜಟಿಲವಾದ ಸಮಸ್ಯೆ ಅಲ್ಲ. ಈಗಾಗಲೇ ಈ ದಿಶೆಯಲ್ಲಿ, ಗ್ರಾಮಪಂಚಾಯತಿಗಳ ಮುಖಾಂತರ, ತಾಲೂಕು ಅಭಿವೃದ್ಧಿ, ಮಂಡಳಿಗಳ ಮುಖಾಂತರ, ಪತ್ರಿಕೆಗಳ ಮುಖಾಂತರ, ರೇಡಿಯೋ, ದೂರದರ್ಶನ ಸಂಪರ್ಕ ಮಾಧ್ಯಮದಿಂದ ರೈತರಿಗೆ ಸಲಹೆಗಳು ಎಂಬ ಮಾಲಿಕೆಯಲ್ಲಿ ಪ್ರಯತ್ನ ನಡೆದದ್ದಾಗಿದೆ. ಆದರೆ ಈ ಪ್ರಮಾಣ ಇನ್ನೂ ಹೆಚ್ಚಬೇಕು. ಕಾರಣ ಈ ಸಂಪರ್ಕ ಮಾಧ್ಯಮದಲ್ಲಿ ಅನಕ್ಷರತೆ ತೊಡಕಾಗುವುದು. ಅಲ್ಲದೆ ಬಡತನದಿಂದಾಗಿ ಪ್ರತಿಯೊಬ್ಬ ರೈತನಿಗೆ ರೇಡಿಯೋ ಕೊಳ್ಳಲು ಅನುಕೂಲವಾಗಲಾರದು. ಇದು ಇಂದಿಗೂ ಸಹ ಸತ್ಯವೆನ್ನಬಹುದು.

ಗ್ರಾಮಾಂತರ ಪ್ರದೇಶದಲ್ಲಿ ಹೆಚ್ಚುವರಿ ಉತ್ಪನ್ನಗಳನ್ನು ಹಳ್ಳಿಗಳಲ್ಲಿ (pits) ಸಂಗ್ರಹಿಸುವುದು ಸರ್ವಸಾಮಾನ್ಯ. ಆದರೆ, ಇಂತಹ ಪದ್ಧತಿ ದೊಡ್ಡ ಪ್ರಮಾಣದ ಸಂಗ್ರಹಣೆಗೆ ಅನಾನುಕೂಲ, ಅಷ್ಟೇ ಅಲ್ಲ ಸರಕುಗಳ ಗುಣಮಟ್ಟವನ್ನು ಕೂಡ ಕೆಳಮಟ್ಟಕ್ಕೆ ಇಳಿಸುವುದು. ಇದು ಸರಕುಗಳನ್ನು ಸುರಕ್ಷಿತವಾಗಿ ಸಂಗ್ರಹಿಸುವ ವಿಧಾನವಲ್ಲ, ಸಾಮಾನ್ಯವಾಗಿ ಹಳ್ಳಿಗಳಲ್ಲಿ ದವಸ-ಧಾನ್ಯಗಳು ಒಂದು ತೆರನಾದ ವಾಸನೆಗೆ ಒಳಗಾಗುವುದನ್ನು ಅರಿತಿರಬಹುದು. ಹೀಗಾಗಿ ಸರಕುಗಳ ಸಂಗ್ರಹಣೆಗೋಸ್ಕರ ಗೋದಾಮುಗಳು ಕೂಡ ಗ್ರಾಮಾಂತರ ಪ್ರದೇಶದ ಬೆಳವಣಿಗೆಯನ್ನು ಕುಂಠಿತಗೊಳಿಸಿವೆ. ಹಲವಾರು ಭೂ-ಹುಟ್ಟುವಳಿಗಳಿಗೆ ಅಪೇಕ್ಷಿತ ಸಂಗ್ರಹಣೆಯ ಅವಶ್ಯಕತೆ ಇರುವುದರಿಂದ, ಅವುಗಳನ್ನು ಒಳ್ಳೆಯ ರೀತಿಯಿಂದ ಸಂಗ್ರಹಿಸದಿದ್ದಲ್ಲಿ ಅವು ನಾಶ ಹೊಂದುವವು. ಸಾಮಾನ್ಯವಾಗಿ ಈರುಳ್ಳಿ (Onions) ದೊಡ್ಡ ಗೋದಾಮಿನಲ್ಲಿ ನೆಲದ ತುಂಬ ಹರಡಿ ಅವುಗಳನ್ನು ಒಣಗಿಸಬೇಕಾಗುವದು. ಸ್ಥಳದ ಅಭಾವದಿಂದ ಗೋಣಿಚೀಲಗಳಲ್ಲಿ ತುಂಬಿ ಇಟ್ಟಿದ್ದಾದರೆ ಅವು ನಾಶವಾಗುವವು. ಭತ್ತ, ಗೋದಿ, ಜೋಳ, ರಾಗಿ ಮುಂತಾದ ಆಹಾರ ಧಾನ್ಯಗಳು ಸಹ ಇಂದು ಇಲಿ, ಹೆಗ್ಗಣಗಳಿಗೆ ತುತ್ತಾಗುವುದು ಅಥವಾ ಸರಿಯಾದ ಗೋದಾಮುವಿನ ಸೌಲಭ್ಯವಿಲ್ಲದ ಮುಗ್ಗಲು ಬರುವುದು ಕಾಣಬಹುದಾಗಿದೆ. ಅದೇ ರೀತಿ ಒಣ ಮೆಣಸಿನಕಾಯಿಯು ಒಣ ಹವೆಯಲ್ಲಿ ಇದ್ದಷ್ಟು ಕಾಲ ಕೆಂಪು ಆಗಿ ಉಳಿಯುವವು ಒಂದು ವೇಳೆ ಸ್ಥಳಾಭಾವದಿಂದ ಚೀಲದಲ್ಲಿ ತುಂಬಿದ್ದರೆ ಕೆಲವೊಂದು ದಿನಗಳಲ್ಲಿ ಅವು ಬೆಳ್ಳಗಾಗಿ ಅವುಗಳ ದರ್ಜೆ ಕಡಿಮೆಯಾಗಿ ಯೋಗ್ಯ ಬೆಲೆ ಪಡೆದುಕೊಳ್ಳಲಾರವು. ಗ್ರಾಮಾಂತರ ಪ್ರದೇಶದಲ್ಲಿ ರೈತನಿಗೆ ನಿಲ್ಲಲಿಕ್ಕೆ ಸ್ವಂತ ಮನೆಯೇ ಇಲ್ಲದಿರುವಾಗ ಆತನು ಗೋದಾಮುಗಳನ್ನು ಕಟ್ಟಿಸುವುದು ಅಸಾಧ್ಯ, ಇನ್ನು ಆಯಾ ಪ್ರದೇಶದ ಗ್ರಾಮ ಪಂಚಾಯತಿಗಳು ಅಥವಾ ಇನ್ನಿತರ ಸಂಘ-ಸಂಸ್ಥೆಗಳು. ಈ ಕಾರ್ಯ ಕೈಗೊಳ್ಳಬೇಕು. ಆದರೆ ಅವು ಕೂಡ ಈ ದಿಶೆಯಲ್ಲಿ ಗಣನೀಯ ಕಾರ್ಯಕೈಕೊಂಡಿಲ್ಲ. ಈ ಗೋದಾಮುಗಳ ಕೊರತೆಯಿಂದ ಬಹುಪಾಲು ಭೂ-ಹುಟ್ಟುವಳಿ ನಾಶವಾದ ನಿದರ್ಶನಗಳಿವೆ. ಇದು ಗ್ರಾಮಾಂತರ ಪ್ರದೇಶದ ಮಾರುಕಟ್ಟೆಯ ಪ್ರಾಮುಖ್ಯವಾದ ಸಮಸ್ಯೆ ಆಗಿದೆ.

ಇನ್ನು ಗ್ರಾಮಾಂತರ ಪ್ರದೇಶದ ಮಾರುಕಟ್ಟೆಯ ಅಭಿವೃದ್ದಿಯಲ್ಲಿ ಹೆಚ್ಚಿನ ತೊಂದರೆಯ ವಿಷಯವೆಂದರೆ ಹದಗೆಟ್ಟ ಸಾರಿಗೆ ಸಂಪರ್ಕ, ಗ್ರಾಮಾಂತರ ಪ್ರದೇಶದ ಮಾರುಕಟ್ಟೆಗಳ ಒಟ್ಟು ಸಂಖ್ಯೆಯ (ಸುಮಾರು ೩೦೦೦೦) ೩/೪ರಷ್ಟು ಪೇಟೆಗಳು ಮಳೆಗಾಲದಲ್ಲಿ ತಮ್ಮ ವ್ಯಾಪಾರಿ ಕಾರ್ಯ ಕಲಾಪಗಳನ್ನು ಸ್ಥಗಿತಗೊಳಿಸಬೇಕಾಗುತ್ತದೆ. ಕಾರಣ ಒಳ್ಳೆಯ ರಸ್ತೆಗಳಿಲ್ಲ. ಅವಶ್ಯಕತೆ ಇದ್ದಲ್ಲಿ ಸೇತುವೆಗಳಿಲ್ಲ. ಎಲ್ಲವೂ ಕಚ್ಚಾ ರಸ್ತೆಗಳು. ಆದ್ದರಿಂದ ಸಾರಿಗೆ ಮಾಲಿಕರು ಲಕ್ಷಾಂತರ ರೂಪಾಯಿ ತೊಡಗಿಸಿದ ತಮ್ಮ ಟ್ರಕ್ಕುಗಳನ್ನು ಇಂತಹ ರಸ್ತೆಗಳ ಮೇಲೆ ಓಡಾಡಿಸಲು ಹಿಂಜರಿಯುವರು. ಇದರಿಂದ ಈ ಪರಿಸ್ಥಿತಿ ತನ್ನದೇ ಆದ ಬೆಳಕನ್ನು ಭೂ_ಹುಟ್ಟುವಳಿಗಳ ವಿನಿಮಯದ ಮೇಲೆ ಬೀರುವುದು. ಕಾರಣ ಬಹುಪಾಲು ಭೂ-ಹುಟ್ಟುವಳಿಗಳು ನಾಶವಾಗುವಂತಹ ಸರಕುಗಳು. ಇನ್ನುಳಿದ ಸರಕುಗಳನ್ನು ಸಂಗ್ರಹಿಸಲು ರೈತರ ಹತ್ತಿರ ಗೋದಾಮುವಿನ ಸೌಲಭ್ಯವಿಲ್ಲ ಆದ್ದರಿಂದ ಸರಕುಗಳು ಮಳೆ ಪಾಲಾಗುವವು. ಕೊನೆಗೆ ರೈತ ಮಳೆಯ ನೀರಿನಲ್ಲಿಯೂ ಕೂಡ ತನ್ನ ಕಣ್ಣೀರನ್ನೂ ಒರೆಸಿಕೊಳ್ಳಬೇಕಾಗುವುದು. ಇಂತಹ ಪರಿಸ್ಥಿತಿಯಲ್ಲಿ ಸಿಲುಕಿಕೊಂದ ಸಂದರ್ಭಗಳಲ್ಲಿ ದಲ್ಲಾಳಿಗಳು ರೈತರಿಂದ ತೀರ ಕಡಿಮೆ ಬೆಲೆಗೆ ವಸ್ತುಗಳನ್ನು ಕೊಳ್ಳಲು ಮುಂದಾಗುವುದು ರೈತರ ಅನಿವಾರ್ಯ ಪರಿಸ್ಥಿಯಿಂದಾಗಿ ಕಡಿಮೆ ಬೆಲೆಗೆ ಮಾರಲಿಕ್ಕೆ ಮುಂದಾಗಿ ಹಾನಿಗೊಳಗಾಗುವರು. ದಲ್ಲಾಳಿಗಳು ಲಾಭ ಪಡೆಯುವರು. ಇಂತಹ ವಿಶಾಲ ಭಾರತದಲ್ಲಿ ರಸ್ತೆ ಸಾರಿಗೆ ಆಗಲಿ ಅಥವಾ ರೈಲು ಸಾರಿಗೆ ಆಗಲಿ ಗ್ರಾಮಾಂತರ ಪ್ರದೇಶದ ಅಭಿವೃದ್ಧಿಯಲ್ಲಿ ಯಾವ ಹೆಚ್ಚಿನ ಪಾತ್ರವನ್ನು ವಹಿಸಿಲ್ಲ. ರಸ್ತೆ ಸಾರಿಗೆ, ಗ್ರಾಮಾಂತರ ಪ್ರದೇಶದ ಕಡೆಗೆ ಲಕ್ಷ್ಯವಹಿಸಿದೆ. ರೈಲುಸಾರಿಗೆ ಕೇವಲ ದೊಡ್ಡ ಪಟ್ಟಣಗಳಿಗೆ ಸಂಪರ್ಕ ಕಲ್ಪಿಸಿದೆ ,ದೇಶದ ಅತಿ ದೊಡ್ಡ ಸಾರಿಗೆ ಸಾಧನವಾಗಿದೆ. ರೈಲುಸಾರಿಗೆ ಗ್ರಾಮಾಂತರ ಪ್ರದೇಶಗಳಿಗೆ ಲಭ್ಯವಿರುವುದು ಅತಿವಿರಳ. ಅಲ್ಲದೆ ಲಭ್ಯವಿದ್ದ ಕಡೆಯಲ್ಲಿ ಅದರ ಲಾಭ ದೊರೆಯುವುದು ದುಸ್ತರ ಕಾರಣ ನಾಶವಾಗುವಂತಹ ಭೂ-ಹುಟ್ಟುವಳಿಗಳನ್ನು ಬೇಗನೆ ಸಾಗಿಸುವಲ್ಲಿ ರೈಲು ಸಾರಿಗೆ ಅಸಮರ್ಪಕ ಆಷ್ಟೆ ಅಲ್ಲ. ಅದು ಪೂರ್ತಿ ವಿಫಲಗೊಂಡಿದೆ. ಅದಕ್ಕೆ ತನ್ನದೆ ಆದ ಹಲವಾರು ಕಾರಣಗಳಿವೆ. ರೈಲು ಮಾರ್ಗ ಎಲ್ಲ ಕಡೆಗೆ ಒಂದೇ ತೆರನಾದದ್ದಿಲ್ಲ. ಒಂದು ಕಡೆಗೆ ಮೀಟರ್ ಗೇಜ್ ಇದ್ದರೆ, ಇನ್ನೊಂದೆಡೆ ಬ್ರಾಡ್-ಗೇಜ್, ಮತ್ತೊಂದೆಡೆ ನ್ಯಾರೋಗೇಜ್ ಅಲ್ಲದೆ ವ್ಯಾಗನ್ ಗಳ ಲಭ್ಯತೆ ಕೂಡ ಬಹಳಷ್ಟು ದುಸ್ತರ ಹೀಗಾಗಿ ವಸ್ತುಗಳನ್ನು ಹತ್ತಿ ಇಳಿಸಿ, ಸಾಗಿಸುವುದರಲ್ಲಿಯೇ ಬಹುಪಾಲು ಸರಕುಗಳು ನಾಶ ಹೊಂದುವವು. ಒಂದು ವೇಳೆ ಗ್ರಾಮಾಂತರ ಪ್ರದೇಶಕ್ಕೆ ರೈಲು ಸಂಪರ್ಕ ಲಭ್ಯವಾಗಬೇಕಾದರೆ ಇದ್ದ ರೈಲುಮಾರ್ಗ ಬದಲಾಯಿಸಬೇಕು. ಅದು ಅಸಾಧ್ಯ. ಸರಕುಗಳ ಸುಲಭ ಸಾಗಾಣಿಕೆಯ ದೃಷಿಯಿಂದ ದೇಶದ ತುಂಬ ಒಂದೇ ತೆರನಾದ (ಬ್ರಾಡ್-ಗೇಜ್) ರೈಲು ಮಾರ್ಗ ಇರುವುದು ಅತ್ಯವಶ್ಯ ಆದರೆ ಅದು ಇಷ್ಟರಲ್ಲಿಯೇ ಅಸಾಧ್ಯ. ಇನ್ನು ರಸ್ತೆ ಸಾರಿಗೆ ಗ್ರಾಮಾಭಿವೃದ್ಧಿಗೆ ಅನುಕೂಲವಾಗಬೇಕಾದರೆ ಪ್ರತಿ ಹಳ್ಳಿಯನ್ನು ಸಂಧಿಸುವ ಎಲ್ಲ ರಸ್ತೆಗಳನ್ನು ಪಕ್ಕಾ ರಸ್ತೆಯಾಗಿ ಪರಿವರ್ತಿಸಬೇಕು. ಮಳೆಗಾಲದಲ್ಲಿ ತೊಂದರೆ ಉಂಟಾಗದಂತೆ ಅವಶ್ಯವಿದ್ದಲ್ಲಿ ಸೇರುವೆ (Bridge) ಕಟ್ಟಿಸಬೇಕು. ಈ ದಿಶೆಯಲ್ಲಿ ಈಗಾಗಲೇ ಅಪೇಕ್ಷಿತ ಅಭಿವೃದ್ಧಿ ಕಾರ್ಯ ನಡೆದಿದೆ. ಅದರ ಬೆಳವಣಿಗೆ ಕಾದು ನೋಡಬೇಕಷ್ಟೆ. ಏನೇ ಆದರೂ ವಿಕಸಿತ ಸಾರಿಗೆ ಸಂಪರ್ಕದ ಅವಶ್ಯಕತೆ ಗ್ರಾಮಾಂತರ ಪ್ರದೇಶ ಮಾರುಕಟ್ಟೆ ಅಭಿವೃದ್ಧಿಗೆ ಅತ್ಯವಶ್ಯ ಯಾವ ರೀತಿ ಮನುಷ್ಯನ ದೇಹದಲ್ಲಿ ರಕ್ತ ಸಂಚರಿಸಲು ನರಗಳ ಅವಶ್ಯಕತೆ ಇದೆಯೋ ಅದೇ ರೀತಿಯಲ್ಲಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸರಕುಗಳು ವಿನಿಮಯವಾಗಲು ಸಾರಿಗೆ ಸಂಪರ್ಕದ ಅಭಿವೃದ್ಧಿ ಅತೀ ಪ್ರಮುಖ. ಆ ದಿಶೆಯಲ್ಲಿ ಬೆಳವಣಿಗೆ ಆದರೆ ಮಾತ್ರ ಗ್ರಾಮಾಂತರ ಪ್ರದೇಶದ ಮಾರುಕಟ್ಟೆಗಳ ಮಹತ್ವ ಹೆಚ್ಚುತ್ತ ಭೂ ಹುಟ್ಟುವಳಿದಾರರಿಗೆ ಅವರ ಸರಕುಗಳಿಗೆ ಯೋಗ್ಯ ಬೆಲೆ ಕಾಣುವಂತೆ ಅವಕಾಶ ಕಲ್ಪಿಸಿಕೊಟ್ಟಂತಾಗುತ್ತದೆ.

ಗ್ರಾಮಾಂತರ ಪ್ರದೇಶದ ಪೇಟೆಗಳು ಸುವ್ಯವಸ್ಥಿತವಾಗಿ ಕಾರ್ಯನಿರ್ವಹಿಸಬೇಕಾದರೆ, ಈ ಪೇಟೆಯಲ್ಲಿ ಸ್ಥಾನಿಕ ದಲ್ಲಾಳಿಗಳ ಮೋಸ ಜಾಲದಲ್ಲಿ ಸಿಲುಕಿಗೊಂಡ ರೈತರನ್ನು ಬಿಡುಗಡೆ ಮಾಡಬೇಕು. ಹೆಚ್ಚಾಗಿ ಆರ್ಥಿಕ ಅನಾನುಕೂಲತೆಗಳಿಂದ ರೈತರು ಈ ದಲ್ಲಾಳಿಗಳ ಪೇಚಾಟದಲ್ಲಿ ಸಿಲುಕಿಕೊಳ್ಳುತ್ತಾರೆ. ಇದನ್ನು ತಡೆಹಿಡಿಯಬೇಕು. ಅಂದರೆ ರೈತರಿಗೆ ಬಿತ್ತುವ ಮುನ್ನ ಭೂಮಿಯಲ್ಲಿ ಕೈಕೊಳ್ಳಬೇಕಾದ ಕಸುಬಿಗಾಗಿ ಹಣ ಪೂರೈಸುವುದು, ಸಾಮಗ್ರಿಗಳನ್ನು ಕೊಳ್ಳುವುದಕ್ಕೆ, ಬಿತ್ತನೆ ಬೀಜಕೊಳ್ಳುವುದಕ್ಕೆ, ಗೊಬ್ಬರ ಕೊಳ್ಳುವುದಕ್ಕೆ, ಹಣ ಒದಗಿಸುವ ಕಾರ್ಯವನ್ನು ಕೆಲವೊಂದು ಸಂಘ ಸಂಸ್ಥೆಗಳು ಕೈಕೊಳ್ಳಬೇಕು. ಈ ಆರ್ಥಿಕ ತೊಂದರೆ ಕೇವಲ ಕೃಷಿ ಹುಟ್ಟುವಳಿಗಳನ್ನು ಮಾರಾಟ ಮಾಡುವವರಿಗಷ್ಟೆ ಅಲ್ಲ ಕೊಳ್ಳುವವರಿಗೂ ಕೂಡ ಭಾದಿಸುತ್ತದೆ. ಕಾರಣ ಪಟ್ಟಣದಲ್ಲಿರುವ ದಲ್ಲಾಳಿಗಳು ತಾವು ಖರೀದಿಸಿದ ಸರಕುಗಳನ್ನು ಗೋದಾಮುಗಳಲ್ಲಿ ಇಟ್ಟು, ಗೋದಾಮು ರಸೀದಿ (Ware house Receipt) ಪಡೆದು ಅದನ್ನು ನಂತರ ಹಣಕಾಸಿನ ಸಂಸ್ಥೆಗಳಲ್ಲಿ ಒತ್ತೆ (Pledge) ಇಟ್ಟು ಸಾಲಪಡೆದು ಇನ್ನಿತರ ಖರೀದಿ ಕಾರ್ಯಕಲಾಪಗಳನ್ನು ಕೈಕೊಳ್ಳುವರು. ಆದರೆ ಈ ಸೌಲಭ್ಯ ಗ್ರಾಮಾಂತರ ಪ್ರದೇಶದ ಮಾರುಕಟ್ಟೆಯಲ್ಲಿ ದಲ್ಲಾಳಿಗಳಿಗೆ ಗೋದಾಮುಗಳ ಅಭಾವದಿಂದ ದೊರೆಯಲಾರದು. ಹೀಗಾಗಿ ಇವರು ಹೆಚ್ಚಿನ ಬಡ್ದಿ ದರದಲ್ಲಿ ತಮ್ಮ ಕಾರ್ಯಕಲಾಪಗಳಿಗೆ ಸ್ಥಳೀಯ ಸಾಹುಕಾರರಿಂದ ಸಾಲ ಪಡೆಯುವರು. ಇದರಿಂದ ಖರೀದಿಸುವ ಖರ್ಚು ಹೆಚ್ಚಾಗುವುದು. ಆದರೆ ದಲ್ಲಾಳಿಗಳು ಚಾಣಾಕ್ಷರಾದ್ದರಿಂದ ಆ ಖರ್ಚನ್ನು ತಾವು ಸ್ವತಃ ವಹಿಸದೆ ಮಾರಾಟಗಾರರ ತಲೆಗೆ ಹಾಕುವರು. ಹೀಗಾಗಿ ರೈತ ಗ್ರಾಮಾಂತರ ಪೇಟೆಯಲ್ಲಿ ತನ್ನ ಸ್ವಂತ ಕಸುಬಿಗಾಗಿ ಬೇಕಾಗುವ ಹಣದ ಪೂರೈಕೆಯ ಅಭಾವದಿಂದ ಒಂದು ಕಡೆ ಅನ್ಯಾಯಕ್ಕೆ ತುತ್ತಾದರೆ ಇನ್ನೊಂದೆಡೆಯಿಂದ ದಲ್ಲಾಳಿಗಳೂ ತಮ್ಮ ಅನಾನುಕೂಲತೆಯನ್ನು ಒಡ್ದಿ ಅನುಕೂಲ ಮಾಡಿಕೊಳ್ಳುವರು. ಹೀಗಾಗಿ ಗ್ರಾಮಾಂತರ ಪ್ರದೇಶದಲ್ಲಿ ವ್ಯಾಪಾರ ಕಾರ್ಯಕಲಾಪಗಳಿಗೆ ಬೇಕಾಗುವ ಹಣದ ಯೋಗ್ಯ ಬಡ್ಡಿಯ ದರದಲ್ಲಿ ಪೂರೈಕೆಗೆ ಅಭಾವ ಉಂಟಾಗುವುದು. ಇದು ಅಲ್ಲಿಯ ಪೇಟೆಯ ಅಭಿವೃದ್ದಿಯಲ್ಲಿ ಅನಾನುಕೂಲತೆ ತಂದೊಡ್ಡಿದೆ.

ಇವು ಇಷ್ಟೆ ಅಲ್ಲದೆ ಕಲಬೆರಕೆ ಸಮಸ್ಯೆ ಕೂಡ ಗ್ರಾಮಾಂತರ ಪ್ರದೇಶದ ಮಾರುಕಟ್ಟೆಯ ಮಹತ್ವವನ್ನು ಕುಂದಿಸಿದೆ. ದಲ್ಲಾಳಿಗಳು ತಮ್ಮ ಸ್ವಾರ್ಥಸಾಧನೆಯಲ್ಲಿ ಒಳ್ಳೆಯ ದರ್ಜೆಯ ಸರಕಿನಲ್ಲಿ ಕಡಿಮೆ ದರ್ಜೆಯ ಸರಕು ಸೇರಿಸಿ ಲಾಭ ಪಡೆಯಲಿಚ್ಚಿಸುವರು. ಆದರೆ ಅದರ ಪರಿಣಾಮ ಹುಟ್ಟುವಳಿದಾರರ ಪಾಲಿಗೆ ಅಪ್ರಾಮಾಣಿಕತೆಯಾಗಿರುತ್ತದೆ. ಅಂತಹ ಕಳಂಕವಷ್ಟೆ ಅಲ್ಲದೆ. ಸರಕುಗಳಿಗೆ ಸಲ್ಲಬೇಕಾದ ಯೋಗ್ಯ ಬೆಲೆಯಲ್ಲಿಯೂ ಕೂಡ ಕಡಿತ ಅನುಭವಿಸಬೇಕಾಗುವುದು. ಸಾಮಾನ್ಯವಾಗಿ ಉತ್ತಮ ದರ್ಜೆಯ ಹತ್ತಿಯಲ್ಲಿ ಕೆಳದರ್ಜೆಯ ಹತ್ತಿ ಬೆರಸುವುದು, ಜೋಳ, ಗೋಧಿ, ರಾಗಿ, ಅಕ್ಕಿ ಮುಂತಾದ ಧಾನ್ಯಗಳಲ್ಲಿ ತೂಕ ಹೆಚ್ಚಿಸಲು ಸಣ್ಣ ಕಲ್ಲಿನ ಹರಳುಗಳನ್ನಾಗಲಿ ಅಥವಾ ಬೆಣಚುಕಲ್ಲಿನ ಹರಳುಗಳನ್ನಾಗಲಿ ಬೆರಸುವುದು, ಬೇಳೆಕಾಳುಗಳಾದ ಹೆಸರು, ಹಲಸಂದಿ ಇತ್ಯಾದಿಗಳಲ್ಲಿ ಅದೇ ಬಣ್ಣದ ಅದೇ ಗಾತ್ರದ ಇತರ ಅನಾವಶ್ತಕ ಕಾಳು ಬೆರಸುವುದು, ಮೆಣಸಿನಕಾಯಿಗೆ ನೀರು ಸಿಂಪಡಿಸಿ ಒದ್ದೆ ಮಾಡಿ ಹೆಚ್ಚು ತೂಕ ಬರುವಂತೆ ಮಾಡುವುದು, ಸೇಂಗಾಕ್ಕೆ ಬಕೆಟುಗಟ್ಟಲೆ ನೀರು ಸುರಿದು ಮಾರುವುದು. ಜೀರಿಗೆ, ಬಡಿ ಸೋಪುಗಳಲ್ಲಿ ಹುಲ್ಲು ಕಡ್ಡಿ ಬೆರೆಸುವುದು ಇತ್ಯಾದಿ ಮೋಸಗಾರಿಕೆ ಹಾಗೂ ಕಲಬೆರಕೆ ರೂಪದಲ್ಲಿ ಪರಮಾವಧಿಯಾಗಿರುವುದು. ಇದು ಈ ಶತಮಾನದ ಜಾಣತನದ ಅವಲಕ್ಷಣವಾಗಿ ಗ್ರಾಮಾತರ ಪೇಟೆಯ ಬೆಳವಣಿಗೆಯಲ್ಲಿ ಒಂದು ಘೋರ ಸಮಸ್ಯೆಯಾಗಿ ಪರಿಣಮಿಸಿದೆ. ಇದರ ನಿರ್ಮಾಣವಾಗಿ ಸರಾಸರಿ ಏನೆಲ್ಲಾ ಕ್ರಮಗಳನ್ನು ಕೈಗೆತ್ತಿಕೂಂಡರೂ ಎಷ್ಟೋ ಕಡೆ ಇದು ನಡೆಯುತ್ತಿದೆ.

ಮಾರುಕಟ್ಟೆಯಲ್ಲಿ ಬೆಲೆಗಳನ್ನು ನಿರ್ಧರಿಸುವ ತತ್ವಗಳು

ಸಾಮಾನ್ಯವಾಗಿ ಪೇಟೆಯ ದರ ಅಂದರೆ, ಮಾರಾಟಗಾರರು ಪೇಟಿಯಲ್ಲಿ ಸರಕುಗಳನ್ನು ಮಾರಲು ಒಪ್ಪುವ ದರ ಹಾಗೂ ಖರೀದಿದಾರರು ಸರಕುಗಳನ್ನು ಕೊಂಡುಕೊಳ್ಳಲು ಒಪ್ಪುವುದರ ಎಂಬ ಅರ್ಥದಲ್ಲಿ ಬಳಸಲಾಗುವುದು. ಉತ್ಪಾದಿತ ಸರಕುಗಳ ಬೆಲೆಗಳು ಉತ್ಪಾದಿತರಿಂದಲೇ ನಿರ್ಧರಿಸಲ್ಪಡುತ್ತವೆ. ಬಳಕೆದಾರರು ಆ ಬೆಲೆಗೆ ಯಾವುದೇ ತಕರಾರು ಇಲ್ಲದೆ ಕೊಳ್ಳುತ್ತಾರೆ. ಆದರೆ ಭೂ-ಹುಟ್ಟುವಳಿಗಳ ಮಾರಾಟ ಕಾರ್ಯದಲ್ಲಿ ಈ ಅನುಕೂಲತೆ ಇರುವುದಿಲ್ಲ. ಗ್ರಾಮಾಂತರ ಪ್ರದೇಶದ ಪೇಟೆಗಳು ಭೂ ಹುಟ್ಟುವಳಿಗಳ ಆಗರವಾದುದರಿಂದ ಬೇಡಿಕೆ ಪೂರೈಕೆ ಸಿದ್ದಾಂತದನ್ವಯ ಪೇಟೆಯ ದರ ನಿರ್ಧರಿಲಾಗುವುದು. ಈ ದರ ಕೂಡ ಎಲ್ಲ ಸರಕುಗಳಿಗೆ ಎಲ್ಲ ಕಾಲಕ್ಕೂ ಅನ್ವಯಿಸುವುದಿಲ್ಲ. ಕಾರಣ ಕೆಲವೊಂದು ಸರಕುಗಳು ನಾಶವಾಗುವಂತಹ ಗುಣವನ್ನು ಹೊಂದಿವೆ ಹಾಗೂ ಅತಿ ಕಡಿಮೆ ಅವಧಿಯಲ್ಲಿ ಮಾರಾಟ ಮಾಡಬೇಕಾಗುವುದು. ಇದರಿಂದ ಈ ಸಿದ್ಧಾಂತ ಅವುಗಳಿಗೆ ಅನ್ವಯಿಸುವುದಿಲ್ಲ.

ಗ್ರಾಮಾಂತರ ಪ್ರದೇಶದ ಪೇಟೆಯ ಬೆಲೆ ನಿರ್ಧರಿಸುವ ಬೇಡಿಕೆ ಪೂರೈಕೆ ಸಿದ್ದಾಂತ ಕೂಡ, ರೈತರಿಗೆ ಅಷ್ಟೊಂದು ಅನುಕೂಲವಾಗಿಲ್ಲ. ಕಾರಣ ಭೂ-ಹುಟ್ಟುವಳಿಗಳು ಈಗಾಗಲೇ ವಿವರಿಸಿದಂತೆ ತಮ್ಮದೇ ಆದ ಕೆಲವೊಂದು ಲಕ್ಷಣಗಳನ್ನು ಹೊಂದಿರುವುದರಿಂದ ಋತುವಿಗೆ ತಕ್ಕಂತೆ ಏಕಕಾಲಕ್ಕೆ ಸರಕುಗಳಿಗೆ ಬೇಡಿಕೆ ಇರಲಿ ಅಥವಾ ಬಿಡಲಿ ಪೇಟೆಯನ್ನು ಧುಮುಕುವವು. ಗೋದಾಮುಗಳ ಅಭಾವ ಹಾಗೂ ಇನ್ನಿತರ ಸಮಸ್ಯೆಗಳ ಕಾರಣ ಅವುಗಳನ್ನು ನಿಯಂತ್ರಿಸುವುದು ಕೂಡ ಕಷ್ಟ. ಹೀಗಾಗಿ ಇನ್ನಿತರ ಸಮಸ್ಯೆಗಳ ಕಾರಣ ಅವುಗಳನ್ನು ನಿಯಂತ್ರಿಸುವುದು ಕೂಡ ಕಷ್ಟ. ಹೀಗಾಗಿ ಈ ಕಾಲದಲ್ಲಿ ಬೇಡಿಕೆ ಮೀರಿದ ಪೂರೈಕೆಯಿಂದ ಬೆಲೆಗಳು ಪೂರ್ತಿ ಕುಸಿದು ಭೂ ಹುಟ್ಟುವಳಿದಾರರಿಗೆ ಹಾನಿ ಉಂಟಾಗುವುದು. ಅಲ್ಲದೆ ಸಣ್ಣ ಪ್ರಮಾಣದ ಉತ್ಪಾದನೆ ಕೂಡ ಬೆಲೆ ನಿರ್ಧರಿಸುವಲ್ಲಿ ರೈತನ ಹಿಡಿತವನ್ನು ಕಡಿಮೆ ಮಾಡುವುದು. ಇನ್ನು ಸರಕುಗಳ ಪ್ರಮಾಣೀಕರಣ ಹಾಗೂ ವರ್ಗಿಕರಣ (Standardisation & Grading) ಮಾಡದೇ ಇದ್ದುದರಿಂದ ಹಾಗೂ ಉತ್ಪಾದಿತರ ಸಂಘಟನೆಯ ಅಭಾವ ರೈತನ ಈ ಅನಾನುಕೂಲತೆಗೆ ಪುಷ್ಟಿ ನೀಡುವುದು.

ಇದಲ್ಲದೆ ಗ್ರಾಮಾಂತರ ಪ್ರದೇಶದ ಪೇಟೆಯ ಬೆಲೆ ನಿರ್ಧಾರದಲ್ಲಿ ಇತರ ಮಾರುಕಟ್ಟೆಯ ಬೆಲೆಗಳು ತಮ್ಮದೇ ಆದ ಯಾವ ಪ್ರಭಾವವನ್ನು ಬೀರಲಾರವು ಕೊಳ್ಳುವವರಿಗೆ ಈ ಮಾಹಿತಿ ಇದ್ದರೂ ಮಾರಾಟ ಮಾಡುವವರಿಗೆ ಅದರ ಕಲ್ಪನೆ ಇಲ್ಲದ್ದರಿಂದ ಕೇವಲ ಸ್ಥಳೀಯ ಪೇಟೆಯ ಆ ದಿನದ ಬೇಡಿಕೆ ಪೂರೈಕೆಯ ಮೇಲೆ ಬೆಲೆ ನಿರ್ಧರಿಸಲಾಗುವುದು. ಆದರೆ ಕೈಗಾರಿಕೆ ಉದ್ದಿಮೆಗಳ ಉತ್ಪಾದಿತ ಸರಕುಗಳ ಬೆಲೆ ನಿರ್ಧರಿಸುವಾಗ ಇಡೀ ದೇಶದಲ್ಲಿಯ ಆ ವರ್ಷದ ಪೂರೈಕೆ. ಬೇಡಿಕೆಗಳನ್ನು ಅನುಲಕ್ಷಿಸಿ ಬೆಲೆ ನಿರ್ಧರಿಸಲಾಗುವುದು. ಹೀಗಾಗಿ ಇತರ ಮಾರುಕಟ್ಟೆಯ ಬೆಲೆಗಳ ಮಾಹಿತಿ ಅಭಾವ ಭೂ ಹುಟ್ಟುವಳಿದಾರರ ಪರ ಬೆಲೆಗಳು ನಿರ್ಧಾರವಾಗುವಲ್ಲಿ ಅಡ್ಡಿಯನ್ನುಂಟ್ಟು ಮಾಡುವವು.

ಇತರ ಹಲವಾರು ಸರಕುಗಳು ತಮ್ಮ ಗುಣ ಲಕ್ಷಣಗಳಿಗೆ ಅನುಸರಿಸಿ ಬೇಡಿಕೆ ಪೂರೈಕೆ ಸಿದ್ಧಾಂತದ ಚೌಕಟ್ಟಿನಲ್ಲಿ ಸಿಲುಕದೆ ತಮ್ಮ ಬೆಲೆಗಳನ್ನು ನಿರ್ಧರಿಸಿಕೊಳ್ಳುವುವು. ಸಾಮಾನ್ಯವಾಗಿ ನಾಶವಾಗುವಂತಹ ಸರಕುಗಳಾದ ತರಕಾರಿ ಕಾಯಿಪಲ್ಲೆಗಳು. ಹಾಲು,, ಮೊಸರು, ಬೆಣ್ಣೆ, ಆಡು, ಕುರಿಮಾಂಸ, ದನದ ಮಾಂಸ ಮುಂತಾದವುಗಳನ್ನು ನಿಶ್ಚಿತ ಪಡಿಸಿದ ವೇಳೆಯಲ್ಲಿ ಮಾರಾಟ ಮಾಡಬೇಕಾದ್ದರಿಂದ ಅವು ಯೋಗ್ಯ ಬೆಲೆಗಳನ್ನು ಪಡೆಯದೆ ಹೋಗುವವು. ಅಲ್ಲದೆ ಈ ನಾಶವಾಗುವಂತಹ ಸರಕುಗಳನ್ನು ಅತಿ ಕಡಿಮೆ ವೇಳೆಯಲ್ಲಿ ಮಾರಾಟ ಮಾಡಬೇಕಾದ್ದರಿಂದ ಬೇಡಿಕೆಯನ್ನು ಗಣನೆಗೆ ತೆಗೆದುಕೊಳ್ಳುವುದು. ಬೇಡಿಕೆ ಹೆಚ್ಚಿಸುವುದಗೋಸ್ಕರ ಕಡಿಮೆ ಬೆಲೆಗೆ ಮಾರಾಟ ಮಾಡಾಬೇಕಾಗುವುದು. ಇಷ್ಟಾದರೂ ಸಹಿತ ಕೆಲವೊಂದು ಸರಕುಗಳಿಗೆ ಅನಾಸಕ್ತ ಬೇಡಿಕೆ ಇರುವುದರಿಂದ ಬೆಲೆಗಳ ಇಳಿತ ಕೊಳ್ಳುವವರ ಮೇಲೆ ಯಾವುದೇ ಪರಿಣಾಮ ಬೀರದೆ ನಾಶವಾಗುವಂತಹ ಸರಕುಗಳು ನಾಶವಾಗಿ ಹೋಗುವ ಹೊರತು ಬೇಡಿಕೆ ಹೆಚ್ಚುವುದಿಲ್ಲ. ಆದರೆ ಈ ರೀತಿ ಕೈಗಾರಿಕೆ ಉದ್ದಿಮೆಗಳ ಉತ್ಪಾದಿತ ವಸ್ತುಗಳ ಸಂದರ್ಭದಲ್ಲಿ ಸಂಭವಿಸದು. ಈ ಸಾಮಾಜಿಕ ತಾಕಲಾಟ ಕೂಡ ಗ್ರಾಮಾಂತರ ಪ್ರದೇಶದ ಪೇಟೆಯಲ್ಲಿಯ ಬೆಲೆಗಳ ನಿರ್ಧಾರ ಮಾರಾಟಗಾರರ ಪರ ಸಲ್ಲದು.

ಇನ್ನು ಕೆಲವೊಂದು ಸಲ ರಾಜಕೀಯ ಕೂಡ ಇದರಲ್ಲಿ ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುವುದು. ದವಸ ಧ್ಯಾನ್ಯಗಳನ್ನು ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ, ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಸಾಗಿಸಬಾರದು ಎಂಬ ಸರ್ಕಾರದ ಪ್ರಾದೇಶಿಕ ಸಾಗಾಣಿಕೆಯ ನಿರ್ಬಂಧ ಬಳಕೆದಾರರ ಹಾಗೂ ಬೆಲೆಗಳ ನಿಯಂತ್ರಣದ ದೃಷ್ಟಿಯಿಂದ ಅನುಕೂಲವಾದರೂ, ಮಾರಾಟಗಾರ ರೈತರ ವಿರುದ್ಧವಾದ ನಿರ್ಧಾರ, ಸರ್ಕಾರ ರೈತರ ಸರಕುಗಳಿಗೆ ನಿಗದಿ ಪಡಿಸಿದ ಬೆಲೆಗಳನ್ನು ನಿರ್ಧರಿಸುತ್ತದೆ. ಆದರೆ ಪ್ರತ್ಯಕ್ಷ ಕಾರ್ಯಾಚರಣೆಯಲ್ಲಿ ಅದು ಎಲ್ಲ ಸರಕುಗಳಿಗೆ ಸಲ್ಲದ ಗೊತ್ತುವಳಿ ಮಂಡಿಸುತ್ತದೆ. ಹೀಗಾಗಿ ರೈತರಿಗೆ ನ್ಯಾಯ ದೊರಕಿಸುವುದರಲ್ಲಿ ಸರಕಾರವೇ ರೈತನಿಗೆ ಅನ್ಯಾಯವೆಸಗುವುದು. ಸರ್ಕಾರದ ಈ ನಿರ್ಧಾರ ಬಳಕೆದಾರರಿಗೆ ಸ್ವಲ್ಪ ಅನುಕೂಲ ಮಾಡಿಕೊಟ್ಟರೂ ಹೆಚ್ಚಿನ ಲಾಭವು ದಲ್ಲಾಳಿಗಳ ಜೇಬಿಗೆ ಸಲ್ಲುವಂತೆ ಮಾಡುವದು.

ಸ್ವಾತಂತ್ರ್ಯ ದೊರೆತು ೫೩ ವರ್ಷಗಳು ಸಂದರೂ ಸಹಿತ ಗ್ರಾಮಾಂತರ ಪ್ರದೇಶದಲ್ಲಿ ಬೆಲೆ ನಿರ್ಧರಿಸುವ ಬೇಡಾಡಿಕೆ ಪದ್ದತಿ (Bargaining System) ಕಡಿಮೆ ಆಗಿಲ್ಲ. ಸಣ್ಣ ಪ್ರಮಾಣದಲ್ಲಿ ಉತ್ಪಾದಿಸಲ್ಪಡುವ ನೂರರ ನಲವತ್ತರಷ್ಟು ಭಾಗ ಸರಕು ಈ ಪದ್ಧತಿಯಿಂದಲೇ ಮಾರಲ್ಪಡುವುದು. ಇಲ್ಲಿ ಬೆಲೆಗಳು ಬಳಕೆದಾರರ ಪರ ನಿರ್ಧಾರವಾಗುವವು. ಕಾರಣ ಇಲ್ಲಿ ಹಲವಾರು ಸರಕುಗಳಿಗೆ ಬೇಡಿಕೆ ಅನಾಸಕ್ತವಾದ್ದರಿಂದ ಈ ಹೊತ್ತುಕೊಳ್ಳಬೇಕೆಂಬ ಹಂಬಲ ಬಳಕೆದಾರರಿಗೆ ಇರುವುದಿಲ್ಲ. ಆದರ ಮಾರಾಟ ಮಾಡುವವರಿಗೆ ವೇಳೆ ಅಭಾವ ಅಲ್ಲದೆ ಪೇಟೆಗೆ ಬಂದಾಗ ಹೊಲದಲ್ಲಿ ದನಕರುಗಳನ್ನು ಮೇಯಿಸುವದು,ನೀರು ಕುಡಿಸುವದು. ಇನ್ನಿತರ ಹೊಲದಲ್ಲಿಯ ಕಸಬುಗಳ ಕಡೆಗೆ ಆತನ ಲಕ್ಷ್ಯ ಕೇಂದ್ರೀಕೃತವಿರುವುದು. ಹೀಗಾಗಿ ಬೇಡಾಡಿಕೆ ಪದ್ಧತಿಯಲ್ಲಿ ರೈತ ವೇಳೆಯ ಅಭಾವದಿಂದ ಮತ್ತು ಸಮಸ್ಯೆಗಳ ತಾಕಲಾಟದಲ್ಲಿ ಬೆಲೆಗಳನ್ನು ನಿರ್ಧರಿಸುವಾಗ ತನ್ನ ಪೂರ್ತಿ ಹಿಡಿತವನ್ನು ಕಳೆದುಕೊಳ್ಳುವನು ಮತ್ತು ದೊರೆತ ಬೆಲೆಗೆ ಮಾರಾಟ ಮಾಡುವನು. ತರಕಾರಿ ಕಾಯಿಪಲ್ಲೆ ಹಾಲು, ಮೊಸರು, ಮೊಟ್ಟೆ ಮತ್ತು ಇನ್ನಿತರ ನಾಶವಾಗುವಂತಹ ಸರಕುಗಳನ್ನು ಸಂಗ್ರಹಿಸುವ ಆಧುನಿಕ ಸೌಲಭ್ಯಗಳಾದ ಶೀತ-ಗೃಹಗಳು (Cold Storage) ಲಭ್ಯವಿಲ್ಲದ್ದರಿಂದ ಹೇಗಾದರೂ ಮಾಡಿ ಈ ವಸ್ತುಗಳನ್ನು ಮಾರಾಟ ಮಾಡಲೇಬೇಕಾದ್ದರಿಂದ ಬೆಲೆಗಳು ರೈತನ ಪರ ನಿರ್ಧಾರವಾಗದೇ ಬಳಕೆದಾರರ ಪರ ನಿರ್ಧಾರವಾಗುವವು. ಅನಿವಾರ್ಯವಾಗಿ ಈ ಅನ್ಯಾಯವನ್ನು ಭೂ-ಹುಟ್ಟುವಳಿದಾರರು ಸಹಿಸಬೇಕಾಗಿದೆ. ಇದರಿಂದ ಬಹಳಷ್ಟು ಸಲ ರೈತ ಉತ್ಪಾದಿತ ಖರ್ಚನ್ನು ಕೂಡ ಮರಳಿ ಪಡೆಯಲಾರ. ಈ ಜೂಜಾಟದಿಂದ ರೈತರ ಬಿಡುಗಡೆ ಮಾಡದ ಹೊರತು ಗ್ರಾಮಾಂತರ ಪ್ರದೇಶದ ಮಾರುಕಟ್ಟೆಯ ಮಹತ್ವ ಹೆಚ್ಚಿಸಲಾಗದು.

ಪರಿಹಾರ

ಗ್ರಾಮಾಂತರ ಪ್ರದೇಶದ ಮಾರುಕಟ್ಟೆಯ ಅಭಿವೃದ್ಧಿ ದೃಷ್ಟಿಯಿಂದ ಇತ್ತೀಚೆಗೆ ಸುವ್ಯವಸ್ಥಿತ ಹಾಗೂ ನಿಯಂತ್ರಿತ ಮಾರುಕಟ್ಟೆ ಮತ್ತು ವ್ಯಾಪಾರಿ ಸಹಕಾರಿ ಸಂಸ್ಥೆಗಳ (Co-operative Marketing) ಸ್ಥಾಪನೆ ದಿಟ್ಟ ಹೆಜ್ಜೆಗಳಾಗಿವೆ. ಆದರೂ ಅವು ಇನ್ನೂ ಅಪೇಕ್ಷಿಸಿತ ಫಲ ನೀಡಿಲ್ಲ. ಹೀಗಾಗಿ ಗ್ರಾಮಾಂತರ ಪ್ರದೇಶದ ಮಾರುಕಟ್ಟೆಯ ಅಭಿವೃದ್ಧಿ ಸಮಸ್ಯೆ ಅನಿರ್ಧಾರಿತ ಸಮಸ್ಯೆಯಾಗಿ ಉಳಿದಿದೆ. ಇದಕ್ಕೆ ಕೇವಲ ಸರ್ಕಾರ ಮಾತ್ರ ಕಾರಣವಲ್ಲ. ಮುಖ್ಯವಾಗಿ ಉತ್ಪಾದಿತರ, ಬಳಕೆದಾರರ ಮತ್ತು ದಲ್ಲಾಳಿಗಳ ದೃಷ್ಟಿಕೋನ ಬದಲಾಗಬೇಕು. ಬಳಕೆದಾರರು ಯಾವತ್ತೂ ಕೊಳ್ಳುವಾಗ ಅನಾಸಕ್ತಿ ತೋರಿಸುವುದನ್ನು ತಪ್ಪಿಸಬೇಕು. ಸಾಮಾನ್ಯವಾಗಿ ಈ ಗ್ರಾಮಾಂತರ ಪ್ರದೇಶದ ಪೇಟೆಯಲ್ಲಿ ದಲ್ಲಾಳಿಗಳು ಸಾಧ್ಯವಿದ್ದಷ್ಟು ಅತೀ ಹೆಚ್ಚು ಲಾಭ ಗಳಿಸುವ ಪ್ರವೃತ್ತಿ ಬದಲಾಗಬೇಕು. ಆದರೆ ಇವೆಲ್ಲ ತಕ್ಷಣ ಬದಲಾಗುವ ಲಕ್ಷಣಗಳು ಬಹಳ ಕಡಿಮೆ.

ಮೂವತ್ತು ಸಾವಿರಕ್ಕೂ ಹೆಚ್ಚಾಗಿರುವ ಗ್ರಾಮಾಂತರ ಪೇಟೆಗಳಲ್ಲಿ ಬಹುಪಾಲು ಪೇಟೆಗಳು ಇತ್ತೀಚೆಗೆ ಮಾರಾಟ ಕಾರ್ಯಕಲಾಪಗಳಿಗಾಗಿ ತಮ್ಮದೇ ಆದ ನೀತಿ ನಿಯಮಗಳನ್ನು ರೂಪಿಸಿಕೂಂಡು ಸುವ್ಯವಸ್ಥಿತ (organised) ಪೇಟೆಯಂತೆ ಕಾರ್ಯ ನಿರ್ವಹಿಸುತ್ತಿವೆ. ಆದರೆ ಈ ಎಲ್ಲ ಪೇಟೆಗಳಲ್ಲಿ ಎಲ್ಲರೂ ಕಟ್ಟುನಿಟ್ಟಾಗಿ ನಿಯಮಗಳನ್ನು ಪಾಲಿಸುತ್ತಿಲ್ಲ. ಹೀಗಾಗಿ ಈ ಪೇಟೆಗಳಿಂದ ಅಪೇಕ್ಷಿಸಿದ ಫಲ ದೊರೆಯಲಾರದೆ ಉಳಿದಿದೆ. ಅಲ್ಲದೆ ಮಾರಾಟ ಕಾರ್ಯದಲ್ಲಿ ಉತ್ಪಾದಿತರ ದೃಷ್ಟಿ ಬದಲಾವಣೆ ಅತಿ ಪ್ರಾಮುಖ್ಯ. ಆದರೆ ಈ ಎಲ್ಲ ಸೌಲಭ್ಯಗಳನ್ನು ಒದಗಿಸಿದರೂ ಕೂಡ ಸುಗ್ಗಿಯ ನಂತರ ಸರಕುಗಳನ್ನು ಮನೆಗೆ ತರದೆ ಅಥವಾ ಸ್ವತಃ ಪೇಟೆಗೆ ಸಾಗಿಸದೆ ಹೊಲದಲ್ಲಿಯೆ ಮಾರಾಟ ಮಾಡುವುದನ್ನು ಇನ್ನೂ ಬಿಟ್ಟಿಲ್ಲ್ಲ. ದಲ್ಲಾಳಿಗಳಿಗೆ ಹುಲುಸಾಗಿ ಬೆಳೆದು ನಿಂತ ಧಾನ್ಯದ ಪೈರನ್ನೇ ಇಂತಿಷ್ಟು ಹಣಕ್ಕೆ ಅಂತಾ ಮಾರಾಟ ಮಾಡುವುದನ್ನು ತಪ್ಪಿಸಲಾಗಿಲ್ಲ. ಈ ರೀತಿಯಲ್ಲೆ ಹಣ್ಣು-ಹಂಪಲು, ಹೂ-ಕಾಯಿಗಳನ್ನು ಮಾರುವುದು ತುಂಬ ಕಂಡು ಬರುತ್ತದೆ. ಬಾಳೆಹಣ್ಣಿನ ತೋಟವನ್ನಾಗಲಿ, ದ್ರಾಕ್ಷಿ ಹಣ್ಣಿನ ತೋಟವನ್ನಾಗಲಿ ಇನ್ನಿತರ ಪೇರಲ, ಗೋಡಂಬಿ, ಮಾವಿನ ಹಣ್ಣು ಹಾಗೂ ಹೂದೋಟವನ್ನು ಕೂಡ ಬೇಡಿಕೆಯಿಂದ ಹಳ್ಳಿಯ ಹಿರಿಯರ ಸಮಕ್ಷಮ ನಿಗದಿಪಡಿಸಿದ ಮೊತ್ತಕ್ಕೆ ಮಾರುವುದು ವಾಡಿಕೆಯಾಗಿದೆ. ಇದರಲ್ಲಿ ಕಷ್ಟಪಟ್ಟ ಉತ್ಪಾದಿತ ರೈತನಿಗೆ ಸಲ್ಲಬೇಕಾದ ಲಾಭ ದಲ್ಲಾಳಿಯ ಜೇಬಿಗೆ ಸೇರುವುದು. ಇದನ್ನು ತಪ್ಪಿಸಬೇಕು. ಇನ್ನೂ ಸಾವಿರಾರು ಸುವ್ಯವಸ್ಥಿತ ಅಥವಾ ನಿಯಂತ್ರಿತ ಮಾರುಕಟ್ಟೆಗಳನ್ನು ಸ್ಥಾಪಿಸಿದಾದರೂ ಸ್ವತಃ ರೈತರ ದೃಷ್ಟಿ ಬದಲಾಗದು. ಆತ ನಿಯಂತ್ರಿತ ಮಾರುಕಟ್ಟೆಯಿಂದಲೇ ತನ್ನ ಸರಕುಗಳನ್ನು ಮಾರುವೆ ಎಂಬ ಆತ್ಮವಿಶ್ವಾಸ ತಳೆಯದ ಹೊರತು, ಗ್ರಾಮಾಂತರ ಪ್ರದೇಶದ ಬೆಳವಣಿಗೆ ಅಸಾಧ್ಯ. ಇನ್ನು ತನ್ನ ಹಣಕಾಸಿನ ತೊಂದರೆಗೋಸ್ಕರ ಹಳ್ಳಿಯ ಸಾಹುಕಾರರ ಅಥವಾ ಸ್ಥಾನಿಕ ದಲ್ಲಾಳಿಗಳ ಹಿಡಿತದಲ್ಲಿ ಸಿಲುಕಿಕೊಳ್ಳುವ ಈ ರೈತರನ್ನು ಜೀತದಾಳು ವಿಮುಕ್ತಿಯಂತೆ ಖಾಸಗಿ ಲೇವಾದೇವಿದಾರರ ಹಿಡಿತದಿಂದ ವಿಮುಕ್ತಿ ಮಾಡುವುದು ತುಂಬಾ ಅತ್ಯವಶ್ಯ. ಈ ದಿಶೆಯಲ್ಲಿ ಇತ್ತೀಚೆಗೆ ಸಹಕಾರಿ ಸಂಘಗಳು ಸರಕಾರದಿಂದ ಹಣದ ನೆರವು ಪಡೆದು ಸಾಲ ವಿತರಣೆ ಮಾಡುತ್ತಿರುವುದು ಗಮನಾರ್ಹ. ಆದರೆ ಈ ಸಂಘಗಳು ನೀಡುತ್ತಿರುವ ಸಾಲದ ಮೊತ್ತ ತೀರ ಕಡಿಮೆ. ಈ ಸಾಲ ರೈತನ ಯಾವುದೊಂದು ಸಮಸ್ಯೆಯನ್ನೂ (ಬಿತ್ತನೆ ಬೀಜ ಕೊಳ್ಳುವುದಾಗಲಿ, ಗೊಬ್ಬರ ಕೊಳ್ಳುವುದಾಗಲಿ) ಬಗೆಹರಿಸದು. ಹೀಗಾಗಿ ಈ ಪ್ರಯತ್ನ ವಿಫಲವಾಗಿದೆ. ಅಷ್ಟೇ ಅಲ್ಲ ರೈತನಿಗೆ ಹೆಚ್ಚಿನ ಅನಾನುಕೂಲತೆ ಒಡ್ಡಿದೆ. ಕಾರಣ ರೈತರು ಈ ಸಂಘಸಂಸ್ಥೆಗಳಿಂದ ದೊರೆಯುವ ಸಾಲ ಸೌಲಭ್ಯವನ್ನು ಪಡೆಯುವುದಲ್ಲದೆ ಮತ್ತೆ ಸ್ಥಳೀಯ ಸಾಹುಕಾರರಿಂದಲೂ ಸಾಲ ಪಡೆದು ತೀರಿಸಲಾಗದ ಸಾಲದ ಹೊರೆಗೆ ಈಡಾಗುವರು. ಅಲ್ಲದೆ ಸಾಮಾನ್ಯವಾಗಿ ಈ ಸಹಕಾರಿ ಸಂಸ್ಥೆಗಳು ಹೆಚ್ಚಾಗಿ ಬಾವಿ ತೋಡುವುದಕ್ಕೋಸ್ಕರ ಸಾಲ ಸೌಲಭ್ಯ ಒದಗಿಸುವುದು ತುಂಬ ರೂಢಿ. ಅದಕ್ಕಾಗಿ ಸಹಕಾರಿ ಸಂಘ ಸಂಸ್ಥೆಗಳು ಕೇವಲ ಬಾವಿ ತೋಡುವುದಕ್ಕೋಸ್ಕರ ಮಾತ್ರ ಸಾಲ ಸೌಲಭ್ಯ ಒದಗಿಸದೆ, ಅವಶ್ಯಕತೆ ಇರುವ ಎಲ್ಲ ರೈತರಿಗೆ ಅವರವರ ಯೋಗ್ಯತೆ ಪ್ರಭಾವ ನೋಡದೆ, ಎಕರೆಗೆ ಇಂತಿಷ್ಟು ಸಾಲ, (ಆ ಹಣ ಅಷ್ಟು ಎಕರೆ ಬೇಸಾಯಕ್ಕೆ ಸಾಕಾಗುವಂತೆ) ಎಂದು ಹಣದ ಸೌಲಭ್ಯ ನೀಡಬೇಕು.

ಈ ಸಂದರ್ಭದಲ್ಲಿ ರೈತರು ಪಡೆದ ಸಾಲ ದುರುಪಯೋಗ ಪಡಿಸಿಕೊಳ್ಳುತ್ತಾರೆ ಎಂಬ ದೂರು ಸತ್ಯಕ್ಕೆ ಸಮೀಪವಾಗಿಯೇ ಇರುತ್ತದೆ. ಕೇವಲ ರೈತರನ್ನು ಮಾತ್ರ ಅದಕ್ಕೆ ಹೊಣೆಗಾರನನ್ನಾಗಿ ಮಾಡುವುದು ಅನುಚಿತ. ಸಹಕಾರಿ ಸಂಘಗಳ ಸಾಲ ವಿತರಣೆಯ ಪದ್ಧತಿಯಲ್ಲಿಯೂ ಕೂಡ ಲೋಪದೋಷಗಳಿವೆ. ಆದರೂ ಇತ್ತೀಚಿಗೆ ಈ ಸಹಕಾರಿ ಸಂಘ ಸಂಸ್ಥೆಗಳು ಹಣದ ರೂಪಪದಲ್ಲಿ ಸಾಲ ನೀಡದೆ ಬಿತ್ತನೆಯ ಬೀಜಗಳನ್ನು ಗೊಬ್ಬರವನ್ನು ಪೂರೈಸಿ ಹಣದ ದುರುಪಯೋಗ ತಪ್ಪಿಸಿವೆ. ಇಂತಹ ವಿತರಣಾ ಪದ್ಧತಿಯಲ್ಲಿಯೂ ಕಲಬೆರಕೆ ಎಂಬ ದೂರು ಕೇಳಿ ಬರುತ್ತಿದೆ. ಅದನ್ನು ಯೋಗ್ಯ ನಿಯಂತ್ರಣದಿಂದ ತಡೆಗಟ್ಟಬೇಕಾಗಿದೆ.

ಇನ್ನೂ ಸ್ಥಾನಿಕ ಪೇಟೆಯಲ್ಲಿಯ ಸಣ್ಣ ಪ್ರಮಾಣದ ಮಾರಾಟವನ್ನು ರೈತರು ಸ್ವತಃ ತಪ್ಪಿಸಿ ಸಹಕಾರಿ ಸಂಘಗಳಿಂದ ಸ್ಥಾಪಿತವಾದ ಸುವ್ಯವಸ್ಥಿತ ಮಾರುಕಟ್ಟೆಗಳ ಮುಖಾಂತರ ಮಾರುವುದನ್ನು ನಿರ್ಧರಿಸಿದ್ದಾರೆ. ಇದರಿಂದ ಎಲ್ಲಾ ಸಣ್ಣ ಪ್ರಮಾಣದ ಸರಕುಗಳನ್ನು ಒತ್ತಟ್ಟಿಗೆ ಸೇರಿಸಿ ಕಡಿಮೆ ಖರ್ಚಿನಲ್ಲಿ ಪ್ರಾಮಾಣಿಕ ವರ್ಗೀಕರಣ ಮಾಡುವುದು ಸಾಧ್ಯವಾಗುವುದು. ಹೀಗಾಗುವುದರಿಂದ ಯೋಗ್ಯ ಸರಕುಗಳಿಗೆ ಯೋಗ್ಯ ಬೆಲೆ ದೊರೆತಂತಾಗುವುದು.

ಅಲ್ಲದೆ ಈ ಸಹಕಾರಿ ಸಂಘ – ಸಂಸ್ಥೆಗಳಿಗೆ ಸರಕಾರದಿಂದ ಹಣದ ನೆರವು ದೊರೆಯುತ್ತಿರುವುದರಿಂದ, ಸರಕುಗಳಿಗೆ ಬೇಕಾಗುವಂತಹ ಬೇರೆ ಬೇರೆ ತರಹದ ಗೋದಾಮುಗಳನ್ನು ಕಟ್ಟಿಸಿ ಸಂಗ್ರಹಣೆಯ ಸಮಸ್ಯೆಯನ್ನು ಬಗೆಹರಿಸಬಹುದು. ಬೆಳಗಾವಿಯಲ್ಲಿಯ ಕೃಷಿ ಉತ್ಪನ್ನ ಮಾರಾಟ ಸಂಘ – ಸಂಸ್ಥೆ, ಆಲೂಗಡ್ಡೆ, ಬೆಣ್ಣೆ, ಹಾಲು, ಗೆಣಸು ಮುಂತಾದವುಗಳನ್ನು ಬಹುಕಾಲದವರೆಗೆ ನಾಶವಾಗದಂತೆ ಸಂಗ್ರಹಿಸಿಡಲು ಕಟ್ಟಿಸಿದ, ಶೀತ ಗೃಹ (cold storaga) ಒಂದು ಒಳ್ಳೆಯ ನಿದರ್ಶನ. ಅಲ್ಲದೆ ಅದೇ ಸಂಸ್ಥೆ, ಬೆಲ್ಲವನ್ನು ಸಂಗ್ರಹಿಸಲು ಅತ್ಯಾಧುನಿಕವಾಗಿ ಕಟ್ಟಿಸಿದ ಗೋದಾಮು ಹಾಗೂ ಇನ್ನಿತರ ಸರಕುಗಳ ಸಂಗ್ರಹಣೆಗೋಸ್ಕರ ಸೌಲಭ್ಯ ಒದಗಿಸುವ ಇತರ ಗೋದಾಮುಗಳು ಮಾದರಿಯಾಗಿವೆ. ಇಂತಹ ಸೌಲಭ್ಯಗಳನ್ನು ದೇಶದ ಬೇರೆ ಬೇರೆ ಭಾಗಳಲ್ಲಿ ಕಾಣಬಹುದು. ಆದರೂ ಸಹ ಒದಗಿಸುತ್ತಿರುವ ಸಂಗ್ರಹಣೆಯ ಸೌಲಭ್ಯದ ಪ್ರಮಾಣದ ಅಪೇಕ್ಷಿತ ಪ್ರಮಾಣಕ್ಕಿಂತ ಬಹಳಷ್ಟು ಕಡಿಮೆಯಾಗಿದೆ. ಇದನ್ನು ಹೆಚ್ಚಿಸುವುದು ಅತೀ ಪ್ರಾಮುಖ್ಯ ಇದಲ್ಲದೆ ಶೀತ-ಗೃಹದಂತಹ ಸೌಲಭ್ಯಗಳು ಪಟ್ಟಣಕ್ಕೆ ಮಾತ್ರ ಸೀಮಿತವಾಗಿವೆ. ಅವುಗಳನ್ನು ಗ್ರಾಮಾತರ ಪ್ರದೇಶಕ್ಕೆ ವಿಸ್ತರಿಸುವುದು ತೀರ ಅವಶ್ಯ.

ಇತ್ತೀಚೆಗೆ ರಾಜ್ಯ ಸರಕಾರವು ಬೆಂಗಳೂರಿನ ಸಮೀಪದ ಯಲಹಂಕದಲ್ಲಿ “ರೈತರ ಸಂತೆ” ಎನ್ನುವ ಆಧುನಿಕ ರೀತಿಯ ಮಾರುಕಟ್ಟೆ ವ್ಯವಸ್ಥೆಯನ್ನು ನಿರ್ಮಿಸಿದೆ. ರೈತರೇ ತಾವು ಬೆಳೆದ ಬೆಳೆಯನ್ನು ತಂದು ತಾವೇ ವ್ಯಾಪಾರ ಮಾಡಿ ಅಧಿಕ ಲಾಭ ಪಡೆಯುವಂತೆ ಮಾಡಿದೆ. ಇದರಿಂದ ಯಾವ ಮಧ್ಯಸ್ಥಗಾರನಿಗೂ ರೈತರಲ್ಲಿ ಗೊಂದಲ ಸೃಷ್ಟಿಸಲು ಅಥವಾ ಮೋಸ ಮಾಡಲು ಸ್ಥಳಾವಕಾಶವಿರುವುದಿಲ್ಲ.

ಈ ಸುಸಜ್ಜಿತ ಮಾರುಕಟ್ಟೆಗಳು ಅದರಲ್ಲಿಯೂ ಹೆಚ್ಚಾಗಿ ಸಹಕಾರಿ ಸಂಘ ಸಂಸ್ಥೆಗಳು ಗ್ರಾಮಾಂತರ ಪ್ರದೇಶದಲ್ಲಿಯ ಮಾರಾಟ ಕಾರ್ಯಕಲಾಪಗಳಲ್ಲಿ ಹೆಚ್ಚಿನ ಪಾತ್ರ ವಹಿಸುತ್ತಿವೆ. ಇದರಿಂದ ತೂಕ ಅಳತೆಗಳಲ್ಲಿಯ ಮೋಸಗಾರಿಕೆ, ಸ್ಥಾನಿಕ ಪೇಟೆಯಲ್ಲಿ ದಲ್ಲಾಳಿಗಳಿಗೆ ಮಾಡಬೇಕಾದ ಅನಿವಾರ್ಯ ಮಾರಾಟ, ಪೇಟೆಯ ಅತಿಯಾದ ಖರ್ಚನ್ನು ಸ್ವಲ್ಪ ಪ್ರಮಾಣದಲ್ಲಿ ತಪ್ಪಿಸಿವೆ. ಆದರೂ ಈ ಸುಸಜ್ಜಿತ ಮಾರುಕಟ್ಟೆಗಳ ಕಾರ್ಯವ್ಯಾಪ್ತಿ ತಮ್ಮದೇ ಆದ ಹಲವರು ಕುಂದುಕೊರತೆಗಳ ಕಾರಣ (ಗೋದಾಮುಗಳ ಕೊರತೆವೇಳೆಗನುಸರಿಸಿ ನಿಯಮಿತವಾಗಿ ಸರಕಾರದಿಂದ ಹಣದ ಪೂರೈಕೆಯಲ್ಲಿ ವಿಳಂಬ, ಅಡೆತಡೆ ಇತ್ಯಾದಿ) ಸಂಕುಚಿತಗೊಂಡಿದೆ. ಅದಕ್ಕಾಗಿ ಇನ್ನು ಹೆಚ್ಚಿನ ಪ್ರಮಾಣದಲ್ಲಿ ಇವುಗಳ ಕಾರ್ಯವ್ಯಾಪ್ತಿ ಹೆಚ್ಚಿಸಬೇಕಾಗಿದೆ.

ಸುವ್ಯವಸ್ಥಿತ ಮಾರುಕಟ್ಟೆಗಳು, ಉತ್ಪಾದಿತರ ಸಂಘಟನೆಯಂತೆ ಕಾರ್ಯ ನಿರ್ವಹಿಸುತ್ತಿವೆ. ಇದರಿಂದ, ಇವುಗಳ ಅನುಪಸ್ಥಿಯಲ್ಲಿ ರೈತರು ಸಹಿಸಬೇಕಾದ ಹಲವಾರು ತರಹದ ಅನ್ಯಾಯ, ಮೋಸಗಾರಿಕೆ ತಪ್ಪಿದಂತಾಗಿದೆ. ಈ ಪೇಟೆಗಳು ದಲ್ಲಾಳಿಗಳಿಗೆ ಲೈಸೆನ್ಸ್ ನೀಡುತ್ತಿವೆ. ಇದರಿಂದ ಅವರ ಕುತಂತ್ರ ಚಟುವಟಿಕೆಗಳು ಹತೋಟಿಯಲ್ಲಿ ಬಂದಿವೆ. ಅಲ್ಲದೆ, ಅವರ ಎಲ್ಲ ವ್ಯವಹಾರ ಕಾರ್ಯಕಲಾಪಗಳು ಕೆಲವೊಂದು ಮಾರುಕಟ್ಟೆಯ ನಿಯಮಗಳಿಗೆ ಬದ್ಧವಾದ್ದರಿಂದ (ಸರಕುಗಳನ್ನು ಇಂತಿಷ್ಟು ದಿವಸಗಳಲ್ಲಿ ಪಡೆಯುವುದು, ಹಣ ಪಾವತಿ ಮಾಡುವುದು ಇತ್ಯಾದಿ) ಪೂರ್ತಿ ನಿಯಂತ್ರಣದಲ್ಲಿವೆ. ಈ ಮಾರುಕಟ್ಟೆಗಳು ಕೊಳ್ಳುವವರಿಂದಲೇ ಕೆಲವೊಂದು ನಿಶ್ಚಿತರೂಪದಲ್ಲಿ (ಪ್ರತಿಶತ ೧, ೧ ೧/೨) ಪೇಟೆಯ ಖರ್ಚನ್ನು ವಸೂಲಿ ಮಾಡುವುದರಿಂದ, ಉತ್ಪಾದಿತರಿಗೆ ಲಾಭವಾಗಿದೆ. ಒಟ್ಟಿನಲ್ಲಿ ಗ್ರಾಮಾಂತರ ಪ್ರದೇಶದ ಮಾರುಕಟ್ಟೆಗಳ ಅಭಿವೃದ್ಧಿಗೆ ಹೆಚ್ಚಿನ ಆಸಕ್ತಿ ಕಾಣಿಸುತ್ತಲಿದೆ.

ಸಾರಿಗೆ-ಸಂಪರ್ಕ ಮಾಧ್ಯಮಗಳು ಕೂಡ ಇತ್ತೀಚೆಗೆ ಗ್ರಾಮಾಂತರ ಪ್ರದೇಶಕ್ಕೆ ತಮ್ಮ ಕಾರ್ಯಕಲಾಪಗಳನ್ನು ಹಮ್ಮಿಕ್ಕೊಳ್ಳುತ್ತಲಿವೆ. ರೈಲು ಸಾರಿಗೆ ಸಂಪರ್ಕ ಕಲ್ಪಿಸಿ ಕೊಡುವುದು ಅಸಾಧ್ಯವಾಗಿದ್ದರೂ, ರಸ್ತೆ-ಸಾರಿಗೆ ಸಂಪರ್ಕ ಹೆಚ್ಚುತ್ತಿವೆ. ಪ್ರತಿ ಹಳ್ಳಿಗೂ ರಸ್ತೆಯ ಸೌಲಭ್ಯ ಒದಗಿಸುವಲ್ಲಿ ಪ್ರಯತ್ನ ಮಾಡಲಾಗಿದೆ. ಕಚ್ಚಾ ರಸ್ತೆಗಳ ಸೌಲಭ್ಯವಿದ್ದರೂ ವರ್ಷದ ಬಹುಪಾಲು ಕಾಲ ಅವು ಕಾರ್ಯನಿರ್ವಹಿಸುತ್ತಿರುವುದರಿಂದ ಸರಕುಗಳ ಸಾಗಾಣಿಕೆಯಲ್ಲಿ ಅಮೂಲಾಗ್ರ ಬದಲಾವಣೆ ಆಗಿವೆ. ಪರಿಸ್ಥಿತಿಯಲ್ಲಿ ಸುಧಾರಣೆಯತ್ತ ಸಾಗಿದೆ. ಆದರೂ ಮಳೆಗಾಲದಲ್ಲಿ ಹೆಚ್ಚಿನ ಸಾರಿಗೆ ಸಂಪರ್ಕ ತಪ್ಪಿ ಹೋಗುತ್ತಿರುವುದರಿಂದ ಮತ್ತು ಕಚ್ಚಾ ರಸ್ತೆಯಿದ್ದದ್ದಕ್ಕಾಗಿ, ಟ್ರಕ್ಕು ಮಾಲೀಕರು ಕಾರ್ಯನಿರ್ವಹಿಸಲು ಹಿಂಜರಿಯುತ್ತಿರುವುದರಿಂದ ಸಾಗಾಣಿಕೆಯಲ್ಲಿ ವ್ಯತ್ಯಯ ಉಂಟಾಗುವುದು. ಈ ಪರಿಸ್ಥಿತಿಯಲ್ಲಿ ಸುಧಾರಿಸಬೇಕಾಗಿದೆ. ಆದರೆ ಇದು ಹೆಚ್ಚು ಖರ್ಚಿನ ವಿಷಯ. ಆದ್ದರಿಂದ ಇದು ಇಷ್ಟರಲ್ಲಿಯೇ ಅಸಾಧ್ಯ. ಅದನ್ನು ಹಂತ ಹಂತವಾಗಿ ಪೂರೈಸಬೇಕಾಗುವುದು. ಕಾರಣ ಎಲ್ಲ ಕಡೆಗೆ ಸೇತುವೆ ನಿರ್ಮಿಸುವುದಕ್ಕೆ ಆಗಲಿ ಅಥವಾ ಕಚ್ಚಾ ರಸ್ತೆಯನ್ನು ಪಕ್ಕಾರಸ್ತೆಯಾಗಿ ಪರಿವರ್ತಿಸುವಲ್ಲಾಗಲಿ ಸಾವಿರಾರು ಕೋಟಿ ಹಣ ವಿನಿಯೋಗದ ಅವಶ್ಯಕತೆಯಿರುವುದರಿಂದ, ಈ ಕಾರ್ಯ ಹಂತ ಹಂತವಾಗಿಯೇ ಸಾಧ್ಯ. ಎಲ್ಲಾ ಸಮಸ್ಯೆಗಳೂ ಪರಿಹಾರವನ್ನು ಒಮ್ಮೆಲೆ ಪೂರೈಸಲಿಕ್ಕಾಗದು. ಏನೇ ಆದರೂ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸರಕುಗಳನ್ನು ಸುರಕ್ಷಿತವಾಗಿ ಹಾಗೂ ಕಡಿಮೆ ಖರ್ಚಿನಿಂದ ಯಾವುದೇ ಅಡೆತಡೆಯಿಲ್ಲದೆ ಸಾಗಿಸಲು ಸಾರಿಗೆ ಸೌಕರ್ಯಗಳ ವ್ಯವಸ್ಥೆ ಚೆನ್ನಾಗಿರಬೇಕು.

ಇನ್ನು ಗ್ರಾಮಾಂತರ ಪ್ರದೇಶಗಳ ಪೇಟೆ ವ್ಯಾಪಾರಿ ಕಾರ್ಯಕ್ಷೇತ್ರ ಹೆಚ್ಚಾಗಬೇಕಾದರೆ, ಅಲ್ಲಿಯ ಉತ್ಪಾದಿತರಿಗೆ ಬೇರೆ ಬೇರೆ ಸ್ಥಳಗಳಿಗೆ ಸರಕುಗಳನ್ನು ಸಾಗಿಸಿ, ಮಾರಾಟ ಮಾಡುವ ಸೌಕರ್ಯ ಕಲ್ಪಿಸಿ ಕೊಡಬೇಕು. ಇದನ್ನು ಕೇವಲ ಸಾರಿಗೆ- ಸಂಪರ್ಕ ಕಲ್ಪಿಸಿ ಕೊಡುವುದರಿಂದ ಮಾಡಲಿಕ್ಕಾಗದು, ಆದರೂ ಕೂಡ ಬೇರೆ ಪೇಟೆಗಳ ಮಾಹಿತಿ ಒದಗಿಸುವುದು ಮುಖ್ಯ. ಸಂಪರ್ಕ ಮಾಧ್ಯಮಗಳು ದಿನೇ ದಿನೇ ಹೆಚ್ಚುತ್ತಿದ್ದರೂ ರೈತರಿಗೆ ಅವುಗಳ ಸದುಪಯೋಗ ದೊರೆಯುತ್ತಿಲ್ಲ. ಪಟ್ಟಣದ ಹಾಗೂ ಇನ್ನಿತರ ಸುವ್ಯವಸ್ಥಿತ ಪೇಟೆಗಳಿಂದ ವಾರಕ್ಕೊಮ್ಮೆ ಧಾರಣೆಪಟ್ಟಿ, ಹಳ್ಳಿಯ ಗ್ರಾಮಪಂಚಾಯಿತಿಗಳಿಗೆ ಅಥವಾ ಸಹಕಾರಿ ಸಂಘಗಳಿಗೆ ಬಂದು ತಲುಪಿ ಅದನ್ನು ಅವರು ನೋಟೀಸ ಬೋರ್ಡ್ ಮೂಲಕ ಬಿತ್ತರಿಸುತ್ತಿದ್ದರೂ ಕೆಲವೊಂದು ಹಳ್ಳಿಯ ಗ್ರಾಮ ಪಂಚಾಯಿತಿಗಳು ವಾರಕ್ಕೆ ಒಂದೆರಡು ಬಾರಿ, ನಿರ್ದಿಷ್ಟ ಪಡಿಸಿದ ವೇಳೆಯಲ್ಲಿ ಪಂಚಾಯಿತಿ ಕಛೇರಿಗಳಲ್ಲಿ ಗ್ರಾಮಲೆಕ್ಕಿಗರ ಮೂಲಕ ಧಾರಣೆ ಪಟ್ಟಿ ಹಾಗೂ ಇತರ ಪೇಟೆಯ ವಿವರ ನೀಡಲು ಅನುವು ಮಾಡುತ್ತಿವೆ. ಈ ಕಾರ್ಯಕ್ರಮ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ರೈತರಿಗೆ ಅನುಕೂಲವಾಗುವಂತೆ ನಡೆಸಿಕೊಂಡು ಹೋಗುವುದು ಅತ್ಯವಶ್ಯ. ಇನ್ನು ರೇಡಿಯೋ, ದೂರವಾಣಿ, ದೂರದರ್ಶನ ಮಾಧ್ಯಮಗಳನ್ನು ಎಲ್ಲ ರೈತರು ಬಳಸಿಕೊಳ್ಳುವುದು ಅಸಾಧ್ಯ. ಕಾರಣ ಪ್ರತಿಯೊಬ್ಬ ರೈತನ ವರಮಾನ ಈ ಸೌಲಭ್ಯಗಳನ್ನು ಹೊಂದಲು ಅನುವು ಮಾಡಲಾರದು. ಬೇರೆ ಬೇರೆ ಪೇಟೆಗಳಲ್ಲಿ ಸರಕುಗಳ ಆಮದು ಮಾಹಿತಿ, ಶಿಲ್ಕು, ಮಾರಾಟ, ಬೆಲೆ, ಲಾಭದ ಮಿತಿ, ಪೇಟೆಯ ಕಾರ್ಯಕಲಾಪಗಳಲ್ಲಿ ತಮ್ಮದೇ ಆದ ನಿರ್ಣಯ ತೆಗೆದುಕೊಳ್ಳಲು ಬಹಳಷ್ಟು ಅನುಕೂಲಕರವಾಗುವುದು. ಹೀಗಾಗಿ ಈ ದಿಶೆಯಲ್ಲಿ ಸರಕಾರ ಎಲ್ಲ ಹಳ್ಳಿಗರಿಗೆ ಅವಶ್ಯಕ ಪೇಟೆಯ ವರದಿ ಬೇರೆ ಬೇರೆ ಸಂಪರ್ಕ ಸಧನೆಗಳ ಮೂಲಕ ಒದಗಿಸುವುದು ಅತ್ಯಗತ್ಯ.

ಒಟ್ಟಿನಲ್ಲಿ ಗ್ರಾಮಾಂತರ ಪ್ರದೇಶದ ಮಾರುಕಟ್ಟೆಗಳ ಬೆಳವಣಿಗೆ ಹಾಗೂ ಅವುಗಳ ಮಹತ್ವ ಆ ಪೇಟೆಗಳು ಸುವ್ಯವಸ್ಥಿತ ವ್ಯಾಪಾರಿ ಕಾರ್ಯಕಲಾಪಗಳನ್ನು ಕೈಗೊಳ್ಳಲು ಬೇಕಾಗುವ ಸೌಲಭ್ಯಗಳನ್ನು ಹೊಂದುವುದರಲ್ಲಿ ಅಡಗಿದೆ. ಪ್ರಸ್ತುತ ವಿವರಣೆಯಲ್ಲಿ, ಗ್ರಾಮಾಂತರ ಪ್ರದೇಶದ ಪೇಟೆಯಲ್ಲಿ ಹೆಚ್ಚಾಗಿ ಭೂ – ಹುಟ್ಟುವಳಿಗಳ ಮಾರಾಟ ನಡೆಯುತ್ತಿರುವುದರಿಂದ ಅವುಗಳ ಕುರಿತು ಪ್ರತಿಪಾದಿಸಲಾಗಿದ್ದರೂ, ಇವೇ ಸಮಸ್ಯೆಗಳು ಈ ಪೇಟೆಯಲ್ಲಿ ಮಾರಲ್ಪಡುವ ಇತರ ಉತ್ಪಾದಿತ ಸರಕುಗಳಿಗೂ (manufacture) ಅನ್ವಯಿಸುವುದು. ಪಟ್ಟಣ ಪ್ರದೇಶಗಳು ಬೆಳೆಯುತ್ತಿರುವ ಜನಸಂಖ್ಯೆಯೊಂದಿಗೆ, ದೊಡ್ಡ ದೊಡ್ಡ ಕೈಗಾರಿಕೆ ಉದ್ದಿಮೆಗಳೊಂದಿಗೆ ತಮ್ಮದೇ ಆದ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿವೆ. ಆದುದರಿಂದ ಸರಕಾರವೂ ಗ್ರಾಮಾಂತರ ಅಭಿವೃದ್ಧಿಗೆ ಹೆಚ್ಚಿನ ಗಮನ ನೀಡುತ್ತಿವೆ. ಹೀಗಾಗಿ ಈ ಪ್ರದೇಶದ ಪೇಟೆಗಳಿಗೆ ಮುಂದೆ ಉಜ್ವಲವಾಗುವ ಭವಿಷ್ಯ ಇದೆ ಎನ್ನಬಹುದು.