ನಮ್ಮ ಜತೆಗಿದ್ದಾರೆ : ಯಾರೋ ಬಿಟ್ಟ
ಬಾಣದ ಹಾಗೆ ನೆಟ್ಟಗೇ ನಡೆಯುವವರು
ಹಿಡಿದದ್ದನ್ನು ಅಚ್ಚುಕಟ್ಟಾಗಿ ಕಡೆದು, ಗುಡಿ ಕಟ್ಟಿ
ದಾರಿಯುದ್ದಕು ನೆನಪ ಉಳಿಸಿದವರು.
ಸದ್ದಿರದೆ, ತಮ್ಮ ಪಾಲಿಗೆ ಬಂದಷ್ಟು ನೆಲ-
ವನ್ನುತ್ತು ಬಿತ್ತಿ ಬೆಳೆಯ ತೆಗೆದವರು
ಬಿಸಿಲು-ಬಿರುಗಾಳಿ-ಮಾಗಿಯ ಜತೆಗೆ ಕೆಳೆ ಬೆಳಸಿ
ಎದೆಗೆ ಸುಗ್ಗಿಯ ಹಿಗ್ಗ ತಂದುಕೊಂಡವರು.

ಹೆಸರೇ? ಲಾಭವೆ? ಪದವಿಗಳೆ? ಅವ-
ನೆಲ್ಲ ನಸುನಕ್ಕು ದಾಟಿದವರು
ಗಿರಿಯಷ್ಟು ಸಾಧಿಸಿದರೂ ಕಡೆಗೆ ಶೇಷ
ವೆಷ್ಟೆಂದು ಯಾವತ್ತ್ತೂ ಎಣಿಸದವರು

(* ಪ್ರೊ. ಎಲ್.ಎಸ್. ಶೇಷಗಿರಿ ರಾಯರ ಸ್ನೇಹವನ್ನು ನೆನೆದು.)