ಬ್ಯಾಕ್ಟೀರಿಯಾಗಳ ನೈಸರ್ಗಿಕ ಹಾಗೂ ಮಾನವ ನಿರ್ಮಿತ ಉಪಯುಕ್ತತೆಯ ಬಗ್ಗೆ ಎಷ್ಟು ಹೇಳಿದರೂ ಸಾಲದು. ನಾವು ನಾವಾಗಿ ಬದುಕಿರಲು ಮತ್ತು ಸತ್ತ ಮೇಲೆ ಮಣ್ಣಿನಲ್ಲಿ ಮಣ್ಣಾಗಲೂ ಬ್ಯಾಕ್ಟೀರಿಯಾಗಳು ಅತ್ಯಾವಶ್ಯಕ. ಹಾಗೆಂದು ಇವು ಕೇವಲ ನಮ್ಮ ಆಪ್ತ ಮಿತ್ರರೇ? ಖಂಡಿತ ಇಲ್ಲ; ಕೆಲವು ಬ್ಯಾಕ್ಟೀರಿಯಾಗಳು ಮಾರಣಾಂತಿಕ ರೋಗಗಳನ್ನು ನಮ್ಮಲ್ಲೂ, ನಮಗೆ ಬೇಕಾಗಿರುವ ಜಾನುವಾರುಗಳಲ್ಲೂ, ಸಾಕು ಪ್ರಾಣಿಗಳಲ್ಲೂ, ಆಹಾರ ಧಾನ್ಯಗಳಲ್ಲೂ, ವಾಣಿಜ್ಯ ಬೆಳೆಗಳಲ್ಲೂ ಉಂಟು ಮಾಡುತ್ತವೆ. ಕೆಲವು ಬ್ಯಾಕ್ಟೀರಿಯಾಗಳಂತೂ ಪರಿಸ್ಥಿತಿಗೆ ಅನುಗುಣವಾಗಿ ಮಿತ್ರನಾಗಿ ಅಥವಾ ಶತ್ರುವಾಗಿ ತಮ್ಮ ಪಾತ್ರವನ್ನು ವಹಿಸುತ್ತವೆ. ಬ್ಯಾಕ್ಟೀರಿಯಾಗಳ ಕೆಲವು ಪ್ರಮುಖ ನೈಸರ್ಗಿಕ ಹಾಗೂ ಮಾನವನಿರ್ಮಿತ ಉಪಯೋಗಗಳ ಬಗ್ಗೆ ಗಮನಿಸೋಣ.

ಬ್ಯಾಕ್ಟೀರಿಯಾಗಳ ನೈಸರ್ಗಿಕ ಉಪಯುಕ್ತತೆ:

ಸಸ್ಯಗಳಿಗೆ ಸಾರಜನಕವು ಅತ್ಯಗತ್ಯ; ಅದರಲ್ಲೂ ಶುದ್ಧ ರೂಪದಲ್ಲಿರುವ ಸಾರಜನಕ. ಆದರೆ ಮಣ್ಣಿನಲ್ಲಿ ಅಥವಾ ಗಾಳಿಯಲ್ಲಿ ಸಾರಜನಕವು ಶುದ್ಧ ರೂಪದಲ್ಲಿರದೇ ನೈಟ್ರೇಟ್, ನೈಟ್ರೈಟ್, ಅಮೋನಿಯಾ, ಸಾರಜನಕ ಡೈ ಆಕ್ಸೈಡ್ನ ರೂಪದಲ್ಲಿ ಲಭ್ಯವಿರುತ್ತದೆ. ಇಂತಹ ಸಂಯುಕ್ತ ರೂಪೀ ಸಾರಜನಕವನ್ನು ಶುದ್ಧ ರೂಪಕ್ಕೆ ಮಾರ್ಪಡಿಸಿ, ಸಸ್ಯಗಳಿಗೆ ಲಭ್ಯವಾಗಿಸುವುದು ಬ್ಯಾಕ್ಟೀರಿಯಾಗಳೇ. ರೈಝೋಬಿಯಮ್, ಅನಬೀನ, ನಾಸ್ಟಾಕ್, ಸ್ಪಿರುಲಿನಾದಂತಹಾ ಬ್ಯಾಕ್ಟೀರಿಯಾ ಮತ್ತು ಸೈನೋಬ್ಯಾಕ್ಟೀರಿಯಾಗಳು ಹೀಗೆ ನೈಸರ್ಗಿಕವಾಗಿ ಕೃಷಿಯಲ್ಲಿ ಸಹಾಯ ಮಾಡುತ್ತವೆ.
ನಮ್ಮ ಕರುಳನ್ನೇ ತಮ್ಮ ವಸಾಹತು ಮಾಡಿಕೊಂಡಿರುವ ಹಲವು ಪ್ರಮುಖ ಬ್ಯಾಕ್ಟೀರಿಯಾಗಳು, ನಮ್ಮ ಆರೋಗ್ಯದ ಮುಖ್ಯ ರೂವಾರಿಗಳೆಂದರೆ ತಪ್ಪಾಗಲಾರದು. ‘ಲಾಕ್ಟೋಬಾಸಿಲ್ಲಸ್’, ‘ಬಿಫಿಡೋಬ್ಯಾಕ್ಟೀರಿಯಮ್’ನಂತಹ ಬ್ಯಾಕ್ಟೀರಿಯಾಗಳು ಲಾಕ್ಟಿಕ್ ಆಮ್ಲವನ್ನು ಉತ್ಪಾದಿಸಿ ಪಿಷ್ಟ, ಪ್ರೋಟೀನ್ ಮತ್ತು ಕೊಬ್ಬಿನಂಶವನ್ನು ಚಿಕ್ಕ ಚಿಕ್ಕ ಘಟಕಗಳನ್ನಾಗಿ ಮಾಡಿ, ನಮ್ಮ ದೇಹವು ಅವನ್ನು ಅರಗಿಸಿಕೊಂಡು, ಹೀರಿಕೊಳ್ಳುವುದಕ್ಕೆ ಸಹಾಯ ಮಾಡುತ್ತವೆ. ಇದರ ಜೊತೆಜೊತೆಗೇ, ನಮ್ಮ ಜೀರ್ಣಾಂಗ ವ್ಯವಸ್ಥೆಯ ‘ಪಿ.ಎಚ್’ ಅನ್ನು ೬.೭ ಯಿಂದ ೬.೯ರ ಒಳಗೇ ಇರುವಂತೆ ನಿರ್ವಹಿಸುತ್ತವೆ ಈ ಬ್ಯಾಕ್ಟೀರಿಯಾಗಳು; ಅಂದರೆ, ಜೀರ್ಣಾಂಗ ವ್ಯವಸ್ಥೆಯು, ಆಮ್ಲೀಯ ವಾತಾವರಣವಾಗಿಯೇ ಇರುವ ಹಾಗೆ ನೋಡಿಕೊಳ್ಳುತ್ತವೆ. ಈ ಆಮ್ಲೀಯ ವಾತಾವರಣವು ಹಾನಿಕಾರಕ ಬ್ಯಾಕ್ಟೀರಿಯಾಗಳಿಗೇ ಹಾನಿಕಾರಕ; ಹಾಗಾಗಿ ರೋಗಕಾರಕ ಬ್ಯಾಕ್ಟೀರಿಯಾಗಳು ನಮ್ಮ ಜೀರ್ಣಾಂಗ ವ್ಯವಸ್ಥೆಯಲ್ಲಿಬೇರೂರಲು ಸಾಧ್ಯವಾಗುವುದಿಲ್ಲ. ಕರುಳಿನಲ್ಲಿರುವ ಉಪಯುಕ್ತ ಬ್ಯಾಕ್ಟೀರಿಯಾಗಳ ಸಂಖ್ಯೆಯಲ್ಲಿ ಇಳಿಮುಖವಾದರೆ, ಆಗ ನಮ್ಮ ಹೊಟ್ಟೆ ಕೆಡುವುದು ಖಂಡಿತ.
ನಮ್ಮ ದೇಹದಲ್ಲಿರುವ ಬಹಳಷ್ಟು ಬ್ಯಾಕ್ಟೀರಿಯಾಗಳು ಹಲವಾರು ಕಿಣ್ವಗಳನ್ನು, ಹಾರ್ಮೋನ್ಗಳನ್ನೂ ಮತ್ತು ವಿಟಮಿನ್ಗಳನ್ನೂ ಉತ್ಪಾದಿಸಿ ನಮ್ಮ ದೇಹಕ್ಕೆ ಒದಗಿಸುತ್ತವೆ. ಉದಾಹರಣೆಗೆ, ಮಾನವನ ಕರುಳಿನಲ್ಲಿರುವ ಇ.ಕೊಲೈ ಎಂಬ ಬ್ಯಾಕ್ಟೀರಿಯಾ, ಅತ್ಯುಪಯುಕ್ತ ‘ವಿಟಮಿನ್ ಬಿ’ಅನ್ನು ಒದಗಿಸುತ್ತದೆ. ಮತ್ತೂ ಕೆಲವು ಬ್ಯಾಕ್ಟೀರಿಯಾಗಳು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಹಾನಿಕಾರಕ ಬ್ಯಾಕ್ಟೀರಿಯಾಗಳ ವಿರುದ್ಧ ಸಮರ ಸಾರಿ, ಪ್ರತಿರಕ್ಷಣಾ ವ್ಯವಸ್ಥೆಯ ಭಾಗವಾಗಿ ಕಾರ್ಯ ನಿರ್ವಹಿಸುತ್ತವೆ.
ಪರಿಸರವ್ಯವಸ್ಥೆಯಲ್ಲಿ ಕೂಡ ಈ ಸೂಕ್ಷ್ಮಾತಿಸೂಕ್ಷ್ಮ ಜೀವಿಯು ಬಹು ಮುಖ್ಯವಾದ ಪಾತ್ರ ನಿರ್ವಹಿಸುತ್ತದೆ. ಆಹಾರ ಸರಪಳಿಯಲ್ಲಿ ವಿಭಜಕ ಜೀವಿಯಾಗಿ ಕಾರ್ಯನಿರ್ವಹಿಸುವ ಬ್ಯಾಕ್ಟೀರಿಯಾಗಳು, ಸಸ್ಯಗಳು ಮತ್ತು ಪ್ರಾಣಿಗಳ ಪ್ರತ್ಯಕ್ಷ ಮತ್ತು ಪರೋಕ್ಷ ವಿಭಜನೆಯಲ್ಲಿ ತೊಡಗುತ್ತವೆ; ಅಂದರೆ, ಸತ್ತ ಸಸ್ಯ, ಪ್ರಾಣಿ, ಸಸ್ಯ ಅಥವ ಪ್ರಾಣಿಯ ಭಾಗಗಳು, ಸಸ್ಯ ಅಥವಾ ಪ್ರಾಣಿಯ ವಿಸರ್ಜನೆಗಳು ಇತ್ಯಾದಿಯನ್ನು ಸರಳ ರೂಪಕ್ಕೆ ಮಾರ್ಪಡಿಸಿ, ಮಣ್ಣಿಗೆ ಮತ್ತು ವಾತಾವರಣಕ್ಕೆ ಹಿಂದಿರುಗಿಸುತ್ತವೆ. ಹಾಗಾಗಿ, ಬ್ಯಾಕ್ಟೀರಿಯಾಗಳು ಜೈವಿಕ ಭೂರಾಸಾಯನಿಕ ಚಕ್ರಗಳ ಪ್ರಮುಖ ಭಾಗಗಳೂ ಹೌದು.
ಇನ್ನು, ನಮ್ಮ ಪ್ರಯತ್ನವಿಲ್ಲದೆಯೂ ಇಡ್ಲಿ ದೋಸೆ ಹಿಟ್ಟಿನ ಹುದುಗುವಿಕೆ, ದ್ರಾಕ್ಷಿಯ ರಸದಿಂದ ವೈನ್ ತಯಾರಿ, ಹಾಲು ಮೊಸರಾಗುವುದು ಇತ್ಯಾದಿ ನೈಸರ್ಗಿಕವಾಗಿ ನಡೆಯುವುದು ಇವೇ ಬ್ಯಾಕ್ಟೀರಿಯಾಗಳ ಕೃಪೆಯಿಂದ; ಇದನ್ನು ಮಾನವ ತನ್ನ ಅನುಕೂಲತೆ ಮತ್ತು ವಾಣಿಜ್ಯಿಕ ಅವಶ್ಯಕತೆಗೆ ತಕ್ಕಂತೆ ಮಾರ್ಪಡಿಸಿಕೊಂಡಿದ್ದಾನೆ.

ಬ್ಯಾಕ್ಟೀರಿಯಾಗಳ ಮಾನವ – ನಿರ್ಮಿತ ಉಪಯುಕ್ತತೆ:

ಬ್ಯಾಕ್ಟೀರಿಯಾಗಳ ಬಗ್ಗೆ ಸಂಪೂರ್ಣವಾಗಿ ಅರಿಯಲೆಂದೇ ಇರುವ ಸೂಕ್ಷ್ಮಜೀವಾಣುವಿಜ್ಞಾನದ ಶಾಖೆಯೇ, ‘ಬಾಕ್ಟೀರಿಯೋಲೋಜಿ’. ಈ ಶಾಖೆಯ ವಿಜ್ಞಾನಿಗಳು ಬ್ಯಾಕ್ಟೀರಿಯಾಗಳ ಅವಶ್ಯಕತೆಗಳು, ಅವುಗಳ ವಿಧಗಳು, ಅವುಗಳನ್ನು ಪ್ರಯೋಗಾಲಯದಲ್ಲಿ ಬೆಳೆಸಲು ಬೇಕಾದ ಪರಿಕರಗಳು ಮತ್ತು ವಿಧಾನಗಳು, ಅವುಗಳ ಜೈವಿಕ ಪ್ರಕ್ರಿಯೆಗಳಿಂದ ಹೊರಬರುವ ರಾಸಾಯನಿಕ ಪದಾರ್ಥಗಳು, ಅವುಗಳ ವಸಾಹತುಗಳು, ಬೇರೆ ಸೂಕ್ಷ್ಮಾಣುಜೀವಿಗಳೊಂದಿಗೆ ಅವುಗಳ ಸಂಬಂಧ, ಹೀಗೆ ಬ್ಯಾಕ್ಟೀರಿಯಾಗಳ ಬಗ್ಗೆ ಅಮೂಲಾಗ್ರವಾಗಿ ಅರಿಯಲು ಪ್ರಯೋಗಗಳನ್ನು ನಡೆಸುತ್ತಾ ಸಾಗಿ ಬಂದಿದ್ದಾರೆ. ಬ್ಯಾಕ್ಟೀರಿಯಾಗಳ ಬಗ್ಗೆ ಅಧ್ಯಯನ ಹೆಚ್ಚುತ್ತಾ ಹೋದಷ್ಟೂ ಅವುಗಳ ಗುಣವಿಶೇಷಗಳ ಬಗ್ಗೆ ವಿಜ್ಞಾನಿಗಳಿಗೆ ತಿಳಿಯುತ್ತಾ ಹೋಯಿತು; ಇದರ ಫಲವಾಗಿ ಅವುಗಳ ಯಾವ ಗುಣವಿಶೇಷವನ್ನು ಹೇಗೆ ಅನ್ವಯಿಸಿಕೊಂಡು ಏನು ಉಪಯೋಗ ಪಡೆಯಬಹುದೆಂದು ಹೊಸ ಹೊಸ ಸಾಧ್ಯತೆಗಳನ್ನು ರೂಪಿಸುತ್ತಾ ಸಾಗಿದರು.
ಬ್ಯಾಕ್ಟೀರಿಯಾಗಳ ಮಾನವ – ನಿರ್ಮಿತ ಉಪಯೋಗಗಳ ಪಟ್ಟಿ ದೊಡ್ಡದಿದೆ. ಇದಕ್ಕೆ ಕಾರಣ, ನಮ್ಮ ಭೂಮಿಯಲ್ಲಿ ಲಭ್ಯವಿರುವ ಉಪಯುಕ್ತ ಬ್ಯಾಕ್ಟೀರಿಯಾಗಳ ಸಂಖ್ಯೆ ಅಗಾಧ; ಅಷ್ಟೇ ಅಲ್ಲದೆ, ಅವುಗಳನ್ನು ಮಣ್ಣು, ಗಾಳಿ, ನೀರಿನಿಂದ ಸುಲಭವಾಗಿ ಮತ್ತು ಯಥೇಚ್ಚವಾಗಿ ಪಡೆಯಬಹುದು, ಅಷ್ಟೇ ಸುಲಭವಾಗಿ ಪ್ರಯೋಗಾಲಯದಲ್ಲಿ ಬೆಳೆಸಬಹುದು. ಅವುಗಳಿಂದ ರಾಸಾಯನಿಕಗಳನ್ನು ಪಡೆಯುವುದು, ಅಥವಾ ಅವುಗಳೊಳಗೆ ಜೀನ್ ಗಳನ್ನು ಬದಲಾಯಿಸುವುದು ಕೂಡ ತುಲನಾತ್ಮಕವಾಗಿ ಸುಲಭವೇ.
ಆಹಾರ ಸಂಸ್ಕರಣೆಯಲ್ಲಿ ಬ್ಯಾಕ್ಟೀರಿಯಾಗಳು ಬಹಳ ಮುಖ್ಯ; ಪಿಷ್ಟವನ್ನು ಆಮ್ಲವಾಗಿ ಪರಿವರ್ತಿಸುತ್ತಾ ಇಂಗಾಲದ ಡೈ ಆಕ್ಸೈಡ್ ಅನ್ನು ಬಿಡುಗಡೆಗೊಳಿಸುವ ಅವುಗಳ ಗುಣವಿಶೇಷವನ್ನು ಇಲ್ಲಿ ಬಳಸಿಕೊಳ್ಳಲಾಗುತ್ತದೆ. ‘ಲಾಕ್ಟೋಬಾಸಿಲ್ಲಸ್’ ನಂತಹ ಬ್ಯಾಕ್ಟೀರಿಯಾಗಳನ್ನು ಹಾಲಿನಿಂದ ಮೊಸರು ತಯಾರಿಸಲು, ಇಡ್ಲಿ ದೋಸೆ ಹಿಟ್ಟು ಹುದುಗು ಬರಲು, ಬ್ರೆಡ್ – ಬನ್, ಚೀಸ್ ಇತ್ಯಾದಿ ತಯಾರಿಸಲು ಬಳಸುತ್ತಾರೆ; ‘ಯೀಸ್ಟ್’ ಎಂಬ ಶಿಲೀಂಧ್ರದ ಜೊತೆಯಲ್ಲಿಅಥವಾ ಪ್ರತ್ಯೇಕವಾಗಿ ಕೇವಲ ಬ್ಯಾಕ್ಟೀರಿಯಾವನ್ನೇ ಈ ಪ್ರಕ್ರಿಯೆಗಳಲ್ಲಿ ಬಳಸಲಾಗುತ್ತದೆ. ಆಹಾರ ತಯಾರಿಕೆಯಲ್ಲಿ ಬಳಸುವ ‘ವಿನೆಗರ್’ ನಂತಹ ಆಮ್ಲಗಳನ್ನು ತಯಾರಿಸಲು ಕೂಡ ಬ್ಯಾಕ್ಟೀರಿಯಾಗಳ ಬಳಕೆಯಾಗುತ್ತದೆ.
ಜೀವರಕ್ಷಕ ‘ಆಂಟಿಬಯೋಟಿಕ್ಸ್’ಗಳ ಉತ್ಪಾದನೆಯಲ್ಲಿ ಕೂಡ ಬ್ಯಾಕ್ಟೀರಿಯಾಗಳದ್ದು ಪ್ರಮುಖ ಪಾತ್ರ; ತಮ್ಮ ಜೈವಿಕ ಪ್ರಕ್ರಿಯೆಗಳ ನೈಸರ್ಗಿಕ ಉತ್ಪನ್ನವಾಗಿ, ತಮ್ಮ ವಸಾಹತಿನ ಸುತ್ತ ಮುತ್ತ ಇರುವ ಶತೃ ಸೂಕ್ಷ್ಮಾಣು ಜೇವಿಯ ನಾಶಕ್ಕಾಗಿ ವಿಶಿಷ್ಟ ರಾಸಾಯನಿಕಗಳನ್ನು ಬಿಡುಗಡೆಗೊಳಿಸುತ್ತವೆ. ಈ ರಾಸಾಯನಿಕಗಳು ಯಾವ ಸೂಕ್ಷ್ಮಾಣು ಜೀವಿಯ ವಿರುದ್ಧ ಕೆಲಸ ಮಾಡುತ್ತದೆ ಎಂಬುದನ್ನು ಗಮನಿಸಿ, ಆ ಸೂಕ್ಷ್ಮಾಣು ಜೀವಿಯು ಉಂಟು ಮಾಡುವ ಖಾಯಿಲೆಯ ನಿವಾರಣೆಗೆ ಈ ರಾಸಾಯನಿಕವನ್ನು ಬಳಸಬಹುದು. ಆದರೆ, ಪ್ರಯೋಗಾಲಯದಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿರುವ ಈ ರಾಸಾಯನಿಕಗಳನ್ನು ಕಾರ್ಖಾನೆಗಳಲ್ಲಿ ಹೆಚ್ಚಿನ ಪ್ರಮಾಣಕ್ಕೆ ಏರಿಸಲಾಗುತ್ತದೆ; ಅಂದರೆ, ಬೃಹತ್ ಪ್ರಮಾಣದಲ್ಲಿ ಬ್ಯಾಕ್ಟೀರಿಯಾಗಳನ್ನು ಬಳಸಿ, ಅವುಗಳನ್ನು ಸೂಕ್ತ ವಾತಾವರಣಕ್ಕೆ ಒಡ್ಡಿ, ಈ ರಾಸಾಯನಿಕಗಳನ್ನು ಬೃಹತ್ ಪ್ರಮಾಣದಲ್ಲಿ ಪಡೆಯಲಾಗುತ್ತದೆ. ನಂತರ, ಈ ರಾಸಾಯನಿಕವನ್ನು, ಮಾನವನಿಗೆ ಅಥವಾ ಪ್ರಾಣಿಗಳಿಗೆ ರೋಗ ಗುಣ ಪಡಿಸುವ ಸಲುವಾಗಿ ನೀಡಿದಾಗ, ಯಾವುದೇ ಅಡ್ಡ ಪರಿಣಾಮಗಳು ಆಗದಿರಲೆಂದು ಸಂಸ್ಕರಿಸಲಾಗುತ್ತದೆ. ಸಾಮಾನ್ಯವಾಗಿ ಬಳಸಲಾಗುವ ‘ನಿಯೋಮೈಸಿನ್’, ‘ಸ್ಟ್ರೆಪ್ತೋಮೈಸಿನ್’, ‘ಟೆಟ್ರಾಸೈಕ್ಲಿನ್’ ನಂತಹಾ ಪ್ರತಿಜೀವಕಗಳೆಲ್ಲಾ ಬ್ಯಾಕ್ಟೀರಿಯಾಗಳ ಕೊಡುಗೆಯೇ.
ಸೂಕ್ಷ್ಮಜೀವಾಣುವಿಜ್ಞಾನದ ಒಂದು ಬಹುಮುಖ್ಯ ಉಪಶಾಖೆ ‘ಬಯೋಟೆಕ್ನಾಲಜಿ’ ಅಥವಾ ‘ಜೈವಿಕತಂತ್ರಜ್ಞಾನ’ ; ಹೆಸರೇ ಸೂಚಿಸುವಂತೆ ತಂತ್ರಜ್ಞಾನವನ್ನು ಬಳಸಿ ಜೈವಿಕಪ್ರಕ್ರಿಯೆಗಳನ್ನು, ಬಗೆ ಬಗೆಯ ಜೀವಿಗಳನ್ನು ಅಧ್ಯಯಿಸಿ, ವಿವಿಧ ಆಯಾಮಗಳಲ್ಲಿ ಬಳಸಿಕೊಳ್ಳುವ ಪಥವಿದು. ನೂರಾರು ಬಗೆ ಬಗೆಯ ಬ್ಯಾಕ್ಟೀರಿಯಾಗಳನ್ನು ಬಳಸಿ ‘ಎಥನಾಲ್’, ‘ಅಸಿಟೋನ್’ನಂತಹ ಹಲವಾರು ಉಪಯುಕ್ತ ರಾಸಾಯನಿಕಗಳನ್ನು, ಅನೇಕ ಕಿಣ್ವಗಳನ್ನು, ಆಮ್ಲಗಳನ್ನು, ಪರಿಮಳದ್ರವ್ಯಗಳನ್ನು ತಯಾರಿಸಲಾಗುತ್ತದೆ.

ಸೂಕ್ಷ್ಮಜೀವಾಣುವಿಜ್ಞಾನದ ಮತ್ತೊಂದು ಅನ್ವಯಿಕ ಶಾಖೆ, ‘ಜೆನೆಟಿಕ್ ಇಂಜಿನಿಯರಿಂಗ್’ ಅಥವಾ ತಳೀಯ ಇಂಜಿನಿಯರಿಂಗ್. ಇಲ್ಲಿ ಒಂದು ಜೀವಿಯ ಪ್ರತಿ ಕಣದ ಅಂತರಾತ್ಮವಾದ ‘ಡಿ.ಎನ್.ಎ’ಯನ್ನೇ ಗುರಿಯಾಗಿರಿಸಿಕೊಂಡು, ಅದರೊಳಗೆ ಇರುವ ಬೇಡದ ಜೀನ್ ಅನ್ನು ಹೊರತೆಗೆದು, ಬೇಕಾದ ಜೀನ್ ಅನ್ನುಆ ಜಾಗದಲ್ಲಿ ಇರಿಸಲಾಗುತ್ತದೆ. ಇಂತಹ ಪ್ರಕ್ರಿಯೆಗಳನ್ನು ಸೂಕ್ಷ್ಮಾಣು ಜೀವಿಗಳಷ್ಟೇ ಅಲ್ಲದೆ ಸಸ್ಯ, ಪ್ರಾಣಿ ಮತ್ತು ಮನುಷ್ಯರಲ್ಲೂ ನಡೆಸಲಾಗುತ್ತದೆ ಮತ್ತು ವಾಣಿಜ್ಯಿಕವಾಗಿ/ ವೈಜ್ಞಾನಿಕವಾಗಿ ತಕ್ಕ ಫಲಿತಾಂಶಗಳನ್ನು ಪಡೆಯಲಾಗುತ್ತದೆ; ಮನುಷ್ಯರಲ್ಲಿ ಒಂದು ಬಗೆಯ ಮಧುಮೇಹವನ್ನು ನಿರ್ವಹಿಸಲು ಬೇಕಾದ ಇನ್ಸುಲಿನ್ ಅನ್ನು, ಇದೇ ‘ತಳೀಯ ಇಂಜಿನಿಯರಿಂಗ್’ ಮೂಲಕ ತಯಾರಿಸಲಾಗುತ್ತದೆ. ಸುಲಭವಾಗಿ ಲಭ್ಯವಿರುವ ಮತ್ತು ಸುಲಭವಾಗಿ ಜನಸಂಖ್ಯೆಯನ್ನು ಇಮ್ಮಡಿಗೊಳಿಸಿಕೊಳ್ಳುವ ಬ್ಯಾಕ್ಟೀರಿಯಾ – ‘ಇ.ಕೊಲೈ’ಯನ್ನು ಪ್ರತ್ಯೆಕಿಸಿಕೊಳ್ಳಲಾಗುತ್ತದೆ. ಅದರ ‘ಡಿ.ಎನ್.ಎ’ಯೊಳಗೆ ಇನ್ಸುಲಿನ್ ಉತ್ಪಾದಿಸಲು ಬೇಕಾದ ಜೀನ್ ಅನ್ನು ಇರಿಸಲಾಗುತ್ತದೆ. ಈ ಇನ್ಸುಲಿನ್ ಜೀನ್ಉಳ್ಳ ಬ್ಯಾಕ್ಟೀರಿಯಾದ ಸಂತಾನೋತ್ಪತ್ತಿಯ ಫಲವಾದ ಮುಂದಿನ ಎಲ್ಲಾ ಜನಾಂಗದ ಬ್ಯಾಕ್ಟೀರಿಯಾಗಳೂ, ಇನ್ಸುಲಿನ್ ಜೀನ್ ಅನ್ನು ತಮ್ಮೊಳಗೆ ಇರಿಸಿಕೊಂಡೇ ಹುಟ್ಟಿರುತ್ತವೆ. ಹಾಗಾಗಿ ಈ ಎಲ್ಲಾ ಬ್ಯಾಕ್ಟೀರಿಯಾಗಳೂ ಇನ್ಸುಲಿನ್ ಅನ್ನು ಉತ್ಪಾದಿಸುತ್ತವೆ. ಹೀಗೆ ಉತ್ಪಾದಿಸಲಾದ ಇನ್ಸುಲಿನ್ ಅನ್ನು ಸಂಸ್ಕರಿಸಿ ವೈದ್ಯಕೀಯವಾಗಿ ಬಳಸಲಾಗುತ್ತದೆ. ಇನ್ಸುಲಿನ್ ಅಷ್ಟೇ ಅಲ್ಲದೆ ‘ಸೋಮಾತೋಟ್ರೋಪಿನ್’ನಂತಹ ಹಲವಾರು ಬಹುಪಯುಕ್ತ ಜೀವರಕ್ಷಕ ರಾಸಾಯನಿಕಗಳನ್ನು ತಳೀಯ ಇಂಜಿನಿಯರಿಂಗ್ ಮುಖಾಂತರ ಉತ್ಪಾದಿಸಲಾಗುತ್ತಿದೆ.
ಕೃಷಿಯಲ್ಲಿ ಕೂಡ ಬ್ಯಾಕ್ಟೀರಿಯಾಗಳು ಹಲವು ಅನುಕೂಲಗಳನ್ನು ಮಾಡಿಕೊಡುತ್ತವೆ. ಮಣ್ಣಿನ ಪರೀಕ್ಷೆಯ ನಂತರ, ಯಾವ ಮಣ್ಣಿನಲ್ಲಿ ಸಾರಜನಕದ ಕೊರತೆಯಿರುತ್ತದೋ, ಅಲ್ಲಿ ರಾಸಾಯನಿಕ ಸಾರಜನಕವನ್ನು ಸೇರಿಸುವ ಬದಲು, ಸಾರಜನಕವನ್ನು ಮಣ್ಣಿನ ಭಾಗವಾಗಿಸುವ ಬ್ಯಾಕ್ಟೀರಿಯಾಗಳನ್ನು ಸೇರಿಸಿದರೆ ಒಳಿತು; ಅವು ತಮ್ಮ ಜೈವಿಕ ಪ್ರಕ್ರಿಯೆಯಿಂದ ಸಾರಜನಕವನ್ನು ನಿರಂತರವಾಗಿ ಸಸ್ಯಗಳಿಗೆ ಒದಗಿಸುತ್ತವೆ ಮತ್ತು ಯಾವುದೇ ರಾಸಾಯನಿಕ ಗೊಬ್ಬರದ ಅಡ್ಡ ಪರಿಣಾಮದ ಭಯವಿರುವುದಿಲ್ಲ. ಬ್ಯಾಕ್ಟೀರಿಯಾಗಳು ವಿಭಜಕಗಳು ಕೂಡ ಆಗಿರುವುದರಿಂದ, ಗೊಬ್ಬರವನ್ನು ಮತ್ತಷ್ಟು ಸರಳಗೊಳಿಸಿ, ಸಸ್ಯವು ಪೋಷಕಾಂಶವನ್ನು ಹೀರಿಕೊಳ್ಳಲು ಕೂಡ ಸಹಾಯ ಮಾಡುತ್ತವೆ. ಬ್ಯಾಕ್ಟೀರಿಯಾಗಳನ್ನು ನೈಸರ್ಗಿಕ ಕೀಟನಾಶಕವನ್ನಾಗಿ ಕೂಡ ಬಳಸಲಾಗುತ್ತದೆ. ಸೂಕ್ತ ಬ್ಯಾಕ್ಟೀರಿಯಾವನ್ನು ಸಸ್ಯದೊಳಗೆ ಸೇರಿಸಿದರೆ, ಆ ಸಸ್ಯವನ್ನು ತಿನ್ನುವ ‘ಎಲೆಕೊರಕ’ದಂತಹಾ ಕೀಟಗಳು ಈ ಬ್ಯಾಕ್ಟೀರಿಯಾದಿಂದ ಅಸ್ವಸ್ಥಗೊಂಡು ನಾಶವಾಗುತ್ತವೆ.
ಹಲವಾರು ಬಗೆಯ ಕೈಗಾರಿಕೆಗಳಲ್ಲಿ ಬ್ಯಾಕ್ಟೀರಿಯಾಗಳನ್ನು ಕಚ್ಚಾ ವಸ್ತುವಾಗಿ, ಸಂಸ್ಕರಣೆಗೆ ಬೇಕಾದ ಮೂಲದ್ರವ್ಯವಾಗಿ, ರಾಸಾಯನಿಕಗಳ ಬದಲು ಜೀವರಾಸಾಯನಿಕರೂಪಿಯಾಗಿ ಬಳಸಲಾಗುತ್ತದೆ. ಉದಾಹರಣೆಗೆ, ಸೆಣಬು, ಅಗಸೆ ನೂಲು ಇತ್ಯಾದಿ ನಾರುಗಳ ಸಂಸ್ಕರಣೆಯಲ್ಲಿ, ಅವುಗಳನ್ನು ನೀರಿನಲ್ಲಿ ನೆನೆಸಿದ ನಂತರ ಮೃದುಗೊಳಿಸುವ ಪ್ರಕ್ರಿಯೆಯಲ್ಲಿ ಬ್ಯಾಕ್ಟೀರಿಯಾವನ್ನು ಬಳಸುತ್ತಾರೆ. ‘ಕ್ಲೊಸ್ತ್ರೀಡಿಯಂ ಬೈಜರಿಂಕಿ’, ‘ಅಖ್ರೋಮೊಬಾಕ್ಟೆರ್ ಪರ್ವುಲಸ್’ ನಂತಹ ಬ್ಯಾಕ್ಟೀರಿಯಾಗಳನ್ನು ಸಿಂಪಡಿಸಿದರೆ ಕೆಲವೇ ಘಂಟೆಗಳಲ್ಲಿ ಸಂಸ್ಕರಿತ ನಾರು ಸಿದ್ಧವಾಗಿರುತ್ತದೆ.
ಬ್ಯಾಕ್ಟೀರಿಯಾಗಳು ಪರಿಸರಕ್ಕೆ ನೀಡುವ ಕೊಡುಗೆ ಅನನ್ಯ. ವಿಭಜಕಗಳಾಗಿ, ಗಿಡ ಮರ ಪ್ರಾಣಿ ಪಕ್ಷಿ ಮಾನವರ ದೈಹಿಕ ತ್ಯಾಜ್ಯವನ್ನು ಇವು ಜೀರ್ಣಿಸಿಕೊಂಡು, ಸರಳ ಗೊಳಿಸಿ, ಗಾಳಿ, ನೀರು, ಮಣ್ಣಿನ ನಡುವೆ ಜೈವಿಕಭೂರಾಸಾಯನಿಕ ಸೇತುವೆಯಾಗಿ ಧಾತುಗಳನ್ನು ಮೂಲಸ್ಥಾನಕ್ಕೆ ಹಿಂದಿರುಗಿಸುತ್ತವೆ; ಇಂತಹ ಗುಣವಿಶೇಷವುಳ್ಳ ಬ್ಯಾಕ್ಟೀರಿಯಾಗಳನ್ನು ತ್ಯಾಜ್ಯ ನಿರ್ವಹಣಾ ಘಟಕಗಳಲ್ಲಿ ಜೈವಿಕ ತ್ಯಾಜ್ಯದ ಸೂಕ್ತ ನಿರ್ವಹಣೆಗೆ ಬಳಸಿಕೊಳ್ಳಲಾಗುತ್ತದೆ. ಅಷ್ಟೇ ಅಲ್ಲದೆ, ಕೊಳಚೆ ನೀರನ್ನು ಶುದ್ಧ ರೂಪಕ್ಕೆ ಪರಿವರ್ತಿಸಲು ರಾಸಾಯನಿಕಗಳ ಜೊತೆಜೊತೆಗೇ ಬ್ಯಾಕ್ಟೀರಿಯಾಗಳನ್ನೂ ಉಪಯೋಗಿಸಲಾಗುತ್ತದೆ. ಇನ್ನು, ಸಾಗರದ ಜೀವಿಗಳಿಗೆ ಕಂಟಕಕಾರಕವಾದ ತೈಲ ಸೋರಿಕೆಯನ್ನುನಿವಾರಿಸಲು ಬ್ಯಾಕ್ಟೀರಿಯಾಗಳೇ ಬೇಕು. ‘ಅಲ್ಕಾನಿವೊರಾಕ್ಸ್’ನಂತಹ ಬ್ಯಾಕ್ಟೀರಿಯಾಗಳು ತಮ್ಮ ಜೀವನಕ್ಕೆ ಬೇಕಾದ ಆಹಾರ ಪೋಷಕಾಂಶಗಳನ್ನು ಪೆಟ್ರೋಲ್, ಡೀಸಲ್ ಇತ್ಯಾದಿ ಹೈಡ್ರೋಕಾರ್ಬನ್ಗಳಿಂದ ಪಡೆಯುತ್ತವೆ. ಸಾಗರದ ಯಾವ ಭಾಗದಲ್ಲಿ ತೈಲ ಸೋರಿಕೆಯಾಗಿದೆಯೋ, ಅಲ್ಲಿ ಇಂತಹಾ ಬ್ಯಾಕ್ಟೀರಿಯಾಗಳನ್ನುಬೃಹತ್ ಪ್ರಮಾಣದಲ್ಲಿ ಬಿಡುಗಡೆಗೊಳಿಸಿದರೆ ವಿಜ್ಞಾನಿಗಳ ಕೆಲಸ ಮುಗಿಯಿತು; ತೈಲವನ್ನು ಸಂಪೂರ್ಣವಾಗಿ ಅರಗಿಸಿಕೊಂಡು ಸಾಗರವನ್ನು ಸ್ವಚ್ಚಗೊಳಿಸಿ ಸಮರೋಪಾದಿಯಲ್ಲಿ ಸ್ವಾಮಿ ಕಾರ್ಯ ಸ್ವ ಕಾರ್ಯ ನಿರ್ವಹಿಸುತ್ತವೆ ಈ ಬ್ಯಾಕ್ಟೀರಿಯಾಗಳು.
ಇಂತಹಾ ಮಾನವ ನಿರ್ಮಿತ ಉಪಯೋಗಗಳ ಪಟ್ಟಿ ಬೆಳೆಯುತ್ತಲೇ ಸಾಗಿದೆ, ನಿಜ. ಆದರೆ, ಜೊತೆ ಜೊತೆಗೇ, ಬ್ಯಾಕ್ಟೀರಿಯಾಗಳಿಂದ ಆಗುತ್ತಿರುವ ಹಾನಿ ಕಡಿಮೆಯೇನಲ್ಲ. ಸಸ್ಯಗಳಲ್ಲಿ ಅಂದರೆ ಆಹಾರ ಬೆಳೆಗಳು ಮತ್ತು ವಾಣಿಜ್ಯಿಕ ಬೆಳೆಗಳಲ್ಲಿ ಬ್ಯಾಕ್ಟೀರಿಯಾಗಳು ಉಂಟು ಮಾಡುವ ರೋಗಗಳಿಂದ ಆರೋಗ್ಯ ಸಮಸ್ಯೆಗಳು ಮತ್ತು ಆರ್ಥಿಕ ಸಮಸ್ಯೆ ತಲೆದೋರಬಹುದು. ಸಾಕು ಪ್ರಾಣಿಗಳಲ್ಲಿ, ಜಾನುವಾರುಗಳಲ್ಲಿ ಮತ್ತು ವನ್ಯಮೃಗಗಳಲ್ಲಿ ಕೂಡ ಕಂಡುಬರುವ ಬ್ಯಾಕ್ಟೀರಿಯಾದಿಂದ ಉಂಟಾದ ರೋಗಗಳು, ವಿವಿಧ ಆಯಾಮಗಳಲ್ಲಿ ಪರಿಣಾಮ ಬೀರುತ್ತವೆ. ಬ್ಯಾಕ್ಟೀರಿಯಾದಿಂದ ಪ್ರಾಣಿಗಳಲ್ಲಿ ಉಂಟಾಗುವ ಕೆಲವು ಪ್ರಮುಖ ರೋಗಗಳು ಅಂಥ್ರಾಕ್ಸ್, ಲೆಪ್ಟೋಸ್ಪೈರೋಸಿಸ್, ಉಣ್ಣಿ ಜ್ವರ ಇತ್ಯಾದಿ. ಮಾನವರಲ್ಲಿ ಕಂಡುಬರುವ ನಾಯಿಕೆಮ್ಮು, ಕಾಲೆರಾ, ಕ್ಷಯ, ಕುಷ್ಟರೋಗ, ಧನುರ್ವಾಯು, ನ್ಯುಮೋನಿಯ, ಟೈಫಾಯ್ಡ್ ಇತ್ಯಾದಿ ನೂರಾರು ರೋಗಗಳಿಗೆ ಬ್ಯಾಕ್ಟೀರಿಯಾ ಕಾರಣ. ನೇರವಾಗಿ ರೋಗಗಳಿಗೆ ಕಾರಣಕರ್ತನಾಗಿ ಅಷ್ಟೇ ಅಲ್ಲದೆ ಹಲವಾರು ಪ್ರಕ್ರಿಯೆಗಳ ಪರೋಕ್ಷ ಪರಿಣಾಮವಾಗಿ ಕೂಡ ಬ್ಯಾಕ್ಟೀರಿಯಾ ಮನುಷ್ಯರಿಗೆ ಹಾನಿ ಮಾಡುವುದುಂಟು. ಆದರೆ, ಇವೆಲ್ಲಾ ಹಾನಿಕಾರಕ ಬ್ಯಾಕ್ಟೀರಿಯಾಗಳಿಂದ ನಮ್ಮನ್ನು, ಸಸ್ಯ ಪ್ರಾಣಿಗಳನ್ನು ಕಾಪಾಡಿಕೊಂಡರೆ, ಬ್ಯಾಕ್ಟೀರಿಯಾಗಳಿಂದ ದೊರೆಯುವ ಅನಿಯಮಿತ ಅನುಕೂಲಗಳನ್ನು ಅನುಭವಿಸಬಹುದು.

– ಕ್ಷಮಾ.ವಿ.ಭಾನುಪ್ರಕಾಶ್