ವೈರಾಣುವು ಜೀವಿಯೋ ಅಲ್ಲವೋ ಎಂಬುದರ ಬಗ್ಗೆ ಇರುವ ಅನುಮಾನಗಳನ್ನು ಪಕ್ಕಕ್ಕಿಟ್ಟು, ವೈರಸ್ಗಳಿಂದ ನಮಗಿರುವ ಅನುಕೂಲ ಹಾಗೂ ಅಪಾಯಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಇಲ್ಲಿದೆ; ವೈರಾಣುಗಳ ಅನನ್ಯ ಗುಣವಿಶೇಷಗಳ ಕಾರಣದಿಂದ, ನೈಸರ್ಗಿಕ ಹಾಗೂ ಮಾನವನಿರ್ಮಿತ ಉಪಯುಕ್ತತೆ, ಅಷ್ಟೇ ಅಲ್ಲದೆ, ಸಸ್ಯಗಳು, ಪ್ರಾಣಿಗಳು ಹಾಗೂ ಮಾನವರಲ್ಲಿ ವೈರಾಣುಗಳು ಉಂಟುಮಾಡುವ ಕಾಯಿಲೆಗಳ ಬಗ್ಗೆ ಕೂಡ ಗಮನಿಸೋಣ.

ಸಸ್ಯಗಳಲ್ಲಿ ವೈರಾಣುಜನ್ಯ ರೋಗಗಳು

ವೈರಾಣುಗಳು, ಆಹಾರ ಬೆಳೆಗಳು ಹಾಗೂ ವಾಣಿಜ್ಯಿಕ ಬೆಳೆಗಳಲ್ಲಿ ಏಕರೂಪದ ಸೋಂಕು ಉಂಟುಮಾಡುತ್ತವೆ. ಕಬ್ಬು, ತಂಬಾಕು, ಜೋಳ, ಅವರೆಕಾಯಿ, ಮೆಣಸಿನಕಾಯಿ, ಹೂಕೋಸು, ಸೇಬು, ದ್ರಾಕ್ಷಿ, ಸೌತೆಕಾಯಿ ಬೆಳೆಗಳಲ್ಲಿ ಎಲೆ ಮಚ್ಚೆ ರೋಗಗಳಿಗೆ ವೈರಾಣುಗಳು ಕಾರಣವಾಗುತ್ತವೆ. ಈ ರೋಗದ ಪರಿಣಾಮವಾಗಿ ಸಸ್ಯಗಳು ತಕ್ಷಣ ಸಾವನ್ನಪ್ಪುವುದಿಲ್ಲ; ಆದರೆ, ಎಲೆಗಳ ಮೇಲೆ ಗಾಢ ಹಸಿರು ಹಾಗೂ ತಿಳಿ ಹಸಿರು ಬಣ್ಣದ ಮಚ್ಚೆಗಳು ಮೂಡಿ, ಎಲೆಗಳ ಕೆಲವು ಭಾಗಗಳು ಸಾಯುತ್ತವೆ; ಇದರ ಫಲವಾಗಿ ಸಸ್ಯದ ಒಟ್ಟಾರೆ ಬೆಳವಣಿಗೆ ಹಾಗೂ ಇಳುವರಿಯಲ್ಲಿ ಇಳಿಕೆ ಕಂಡುಬರುತ್ತದೆ. ಹತ್ತಿ, ಟೊಮೇಟೊ, ಪಪ್ಪಾಯ ಬೆಳೆಗಳಲ್ಲಿ ಎಲೆ ಸುರುಳಿ ರೋಗಗಳನ್ನು, ವಿವಿಧ ವೈರಾಣುಗಳು ಉಂಟುಮಾಡುತ್ತವೆ. ಈ ರೋಗದ ಹೆಸರೇ ಸೂಚಿಸುವಂತೆ, ಎಲೆಗಳು ಸುರುಳಿ ಸುತ್ತಿಕೊಂಡು, ಮುರುಟುತ್ತವೆ. ಮುರುಟಿದ ಎಲೆಗಳಲ್ಲಿ ಎಷ್ಟರಮಟ್ಟಿಗೆ ದ್ಯುತಿಸಂಶ್ಲೇಷಣೆ ನಡೆದೀತು? ಇದರ ಫಲವಾಗಿ ಹಣ್ಣುಗಳ ಸಂಖ್ಯೆ ಹಾಗೂ ಗುಣಮಟ್ಟದಲ್ಲಿ ಇಳಿಕೆ ಕಂಡುಬರುತ್ತದೆ. ಸೋಂಕಿಗೆ ಈಡಾದ ಎಲೆಗಳು ಬಹಳ ಬೇಗ ಉದುರುತ್ತವೆ ಕೂಡ. ಸಸ್ಯದ ಒಟ್ಟಾರೆ ಬೆಳವಣಿಗೆ ಹಾಗೂ ಇಳುವರಿಯಲ್ಲಿ ಇಳಿಕೆ ಕಂಡುಬರುತ್ತದೆ. ವಿವಿಧ ವೈರಾಣುಗಳು ಭತ್ತ, ಟೊಮೇಟೊ, ಕಡ್ಲೇಕಾಯಿ ಸಸ್ಯಗಳನ್ನು ಗಿಡ್ದಾಗಿಸೋ ರೋಗವನ್ನು ಉಂಟುಮಾಡುತ್ತವೆ. ಹುಟ್ಟಿನಿಂದಲೇ ಕುಂಠಿತ ಬೆಳವಣಿಗೆಯನ್ನು ಪ್ರದರ್ಶಿಸುವ ಈ ರೋಗಗ್ರಸ್ತ ಬೆಳೆಗಳು, ಸರಿಯಾದ ಸಮಯಕ್ಕೆ ಹೂವು, ಕಾಯಿ, ಹಣ್ಣುಗಳನ್ನು ಬಿಡದೇ, ಬೆಳವಣಿಗೆಯ ಜೊತೆಗೇ ಇಳುವರಿಯಲ್ಲೂ ಇಳಿಕೆಯನ್ನು ತೋರ್ಪಡಿಸುತ್ತವೆ.

ಪ್ರಾಣಿಗಳಲ್ಲಿ ವೈರಾಣುಜನ್ಯ ರೋಗಗಳು

ಪ್ರಾಣಿ ಪಕ್ಷಿಗಳನ್ನೂ ವೈರಾಣುಗಳ ಕಾಟ ಬಿಟ್ಟಿಲ್ಲ; ಜಾನುವಾರು, ಬೆಕ್ಕು, ನಾಯಿ, ಕೋಳಿ, ಬಾತು ಕೋಳಿಗಳನ್ನು ಒಳಗೊಂಡಂತೆ ನಮ್ಮ ಜೀವನದಲ್ಲಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಹಾಸುಹೊಕ್ಕಾಗಿರುವ ಪ್ರಾಣಿ ಪಕ್ಷಿಗಳಲ್ಲಿ ಬಹಳಷ್ಟು ಮಾರಕ ರೋಗಗಳಿಗೆ ವೈರಾಣುಗಳು ಕಾರಣ. ಕುದುರೆಗಳಲ್ಲಿ ಕಂಡುಬರುವ ಜೌಗು ಜ್ವರ, ಜಾನುವಾರು, ಬೆಕ್ಕು, ಇಲಿಗಳಲ್ಲಿ ಕಂಡುಬರುವ ರಕ್ತದ ಕ್ಯಾನ್ಸರ್, ಆಹಾರ ಮೆಲುಕು ಹಾಕುವ ಜಾನುವಾರು, ಜಿಂಕೆ, ಜಿರಾಫೆಯಂತಹ ಪ್ರಾಣಿಗಳಲ್ಲಿ ಶ್ವಾಸಕೋಶದ ಉರಿಯೂತ (ನ್ಯುಮೋನಿಯ), ಸಂಧಿವಾತ ಮತ್ತು ನರಸಂಬಂಧಿ ರೋಗಗಳಿಗೆ ವೈರಾಣುಗಳು ಕಾರಣವಾಗುತ್ತವೆ. ಮಾಂಸಾಹಾರ ಉದ್ದಿಮೆಗೆ ಅಪಾರ ಪ್ರಮಾಣದ ಆರ್ಥಿಕ ನಷ್ಟ ಉಂಟುಮಾಡುವ ಕೋಳಿಜ್ವರ, ಹಂದಿಜ್ವರಕ್ಕೂ ವೈರಾಣುಗಳೇ ಕಾರಣ. ಜಾನುವಾರುಗಳಲ್ಲಿ ಒಂದರಿಂದ ಮತ್ತೊಂದಕ್ಕೆ ಕಾಡ್ಗಿಚ್ಚಿನಂತೆ ಹರಡುವ ಕಾಲು-ಬಾಯಿ ರೋಗವೂ ವೈರಾಣುಗಳ ಕೊಡುಗೆಯೇ. ನಾಯಿಗಳಲ್ಲಿ ಕಂಡುಬರುವ ರೇಬಿಸ್ನಂತಹ ಮಾರಣಾಂತಿಕ ರೋಗಕ್ಕೂ ವೈರಾಣುವೇ ಕಾರಣ, ಇತ್ತೀಚಿಗೆ ಮನುಷ್ಯರನ್ನೂ ಕಂಗೆಡಿಸಿದ ಎಬೋಲ ವೈರಸ್ ಮತ್ತು ನಿಪಾಹ್ ವೈರಸ್ಗಳು, ಪ್ರಾಣಿಗಳಲ್ಲೂ ಕಾಯಿಲೆ ಉಂಟುಮಾಡುತ್ತವೆ. ಎಬೋಲ ವೈರಾಣುವು ಮಂಗ, ಚಿಂಪಾಂಜಿ, ಗೊರಿಲ್ಲಾ, ಬಾವಲಿಗಳಲ್ಲಿ ಜ್ವರ, ತಲೆನೋವು, ಸುಸ್ತು, ಭೇದಿ, ಅನಿಯಮಿತ ಆಂತರಿಕ ರಕ್ತಸ್ರಾವವನ್ನು ಉಂಟುಮಾಡುತ್ತದೆ ಹಾಗೂ ನಿಪಾಹ್ ವೈರಾಣುವು  ಬಾವಲಿಗಳಲ್ಲಿ, ಹಂದಿ, ಬೆಕ್ಕು, ನಾಯಿಗಳಲ್ಲಿ  ಶ್ವಾಸಕೋಶ ಸಂಬಂಧಿ ಸಮಸ್ಯೆ ಹಾಗೂ ಮೆದುಳುಜ್ವರ ಉಂಟುಮಾಡುತ್ತದೆ.

ಮನುಷ್ಯರಲ್ಲಿ ವೈರಾಣುಜನ್ಯ ರೋಗಗಳು

ವೈರಾಣುಗಳು ಮನುಷ್ಯರಲ್ಲಿ ಉಂಟುಮಾಡುವ ರೋಗಗಳ ಯಾದಿ ಬಹಳ ದೊಡ್ಡದಿದೆ; ಸಾಮಾನ್ಯವಾಗಿ ಹಲವಾರು ವೈರಾಣುಜನ್ಯ ಕಾಯಿಲೆಗಳು ಮಾರಣಾಂತಿಕವೆಂದು ಕಂಡುಬಂದಿವೆ. ಆದರೆ, ಈಗೀಗ ಸುಧಾರಿತ ವೈದ್ಯಕೀಯ ತಪಾಸಣೆ ಮತ್ತು ಚಿಕಿತ್ಸೆಯ ಲಭ್ಯತೆ ಜೊತೆಗೆ ಕಾಯಿಲೆಗಳ ಬಗ್ಗೆ ಜನರಲ್ಲಿ ಹೆಚ್ಚಿದ ಅರಿವು, ಇವುಗಳ  ತೀವ್ರತೆಯನ್ನು ಕಡಿಮೆಗೊಳಿಸಿವೆ.

ಕೆಲವು ದಶಕಗಳ ಹಿಂದೆ ಪ್ರಾಣಾಂತಿಕವೆಂದು ಸಾಬೀತಾಗಿದ್ದ, ಸಾವಿರಾರು ಎಳೆಯ ಜೀವಗಳನ್ನು ಬಲಿಪಡೆದಿದ್ದ ಸಿಡುಬು, ವೇರಿಯೋಲಾ ವೈರಾಣುವಿನ ಕೊಡುಗೆ. ಅದರ ಸೌಮ್ಯವಾದ ಆವೃತ್ತಿಯಾದ ಚಿಕನ್ ಪಾಕ್ಸ್ ಅಥವಾ ಸಣ್ಣಮ್ಮ ಎಂದು ಕರೆಯಲಾಗುವ ಕಾಯಿಲೆಯು, ಹರ್ಪಿಸ್ ಜ್ಹಾಸ್ಟರ್ ವೈರಾಣುವಿನಿಂದ ಉಂಟಾಗುತ್ತದೆ.  ಈಗ ಚುಚ್ಚುಮದ್ದು ಲಭ್ಯವಿರುವ ಪೋಲಿಯೋ ರೋಗಕ್ಕೂ ವೈರಸ್ಗಳೇ ಕಾರಣ. ಶ್ವಾಸಕೋಶ ಹಾಗೂ ಚರ್ಮಕ್ಕೆ ಸಂಬಂಧಿತ ದಡಾರ, ಗಂಟಲು ಹಾಗೂ ಲಾಲಾರಸ ಗ್ರಂಥಿಗಳ ಊತ ರೋಗವಾದ ಮಂಪ್ಸ್ ಅಥವಾ ಗದ್ದಬಾವು ಕೂಡ ವೈರಾಣುಜನ್ಯ ರೋಗಗಳೇ. ಚಿಕಿತ್ಸೆ ಲಭ್ಯವಾಗದಿದ್ದಲ್ಲಿ ಕುರುಡುತನಕ್ಕೆ ಕಾರಣವಾಗುವ ರವೆಗಣ್ಣು ರೋಗಕ್ಕೆ, ಕ್ಲಮೈಡಿಯ ಎಂಬ ವೈರಾಣುವು ಕಾರಣ., ಸಾಮಾನ್ಯವಾಗಿ ಹವಾಮಾನ ಬದಲಾವಣೆಯಾದ ತಕ್ಷಣ ಕಾಡುವ ನೆಗಡಿ, ಮೈಕೈನೋವು ಜ್ವರಕ್ಕೂ ಮಿಕ್ಸೋವೈರಸ್ ಎಂಬ ವೈರಾಣುವು ಕಾರಣ.

ವೈರಾಣುಗಳ ನೈಸರ್ಗಿಕ ಉಪಯುಕ್ತತೆ

ವೈರಾಣುಗಳು ಬ್ಯಾಕ್ಟೀರಿಯಾಗಿಂತಲೂ ಗಾತ್ರದಲ್ಲಿ ಚಿಕ್ಕದಾಗಿದ್ದು, ಬ್ಯಾಕ್ಟೀರಿಯಾದ ಜೀವಕೋಶದಲ್ಲಿನ ಕೋಶಾಂಶಗಳನ್ನು ತನ್ನ ಉಳಿವಿಗಾಗಿ ಬಳಸಿಕೊಳ್ಳುತ್ತವೆ; ತಮ್ಮ ಚಯಾಪಚಯ ಕ್ರಿಯೆ ಹಾಗೂ ಸಂತಾನೋತ್ಪತ್ತಿ ನಡೆದ ನಂತರ, ಬ್ಯಾಕ್ಟೀರಿಯಾದ ಜೀವಕೋಶವನ್ನು ಒಡೆದು ಹೊರಬರುತ್ತವೆ. ಹೀಗೆ, ಬ್ಯಾಕ್ಟೀರಿಯಾದೊಳಗೆ ಸೋಂಕುಂಟು ಮಾಡಿ, ಅವುಗಳ ನಾಶಕ್ಕೆ ಕಾರಣವಾಗುವ ‘ಬ್ಯಾಕ್ಟೀರಿಯೋಫಾಜ್’ ಎಂಬ ಈ ವೈರಾಣುಗಳು, ಕೆಲವು ಅಪಾಯಕಾರಿ ಬ್ಯಾಕ್ಟೀರಿಯಾದ ನಿರ್ನಾಮಕ್ಕೆ ನೈಸರ್ಗಿಕವಾಗಿ ಸಹಕಾರಿ.

ಇದೇ ‘ಬ್ಯಾಕ್ಟೀರಿಯೋಫಾಜ್’ ಎಂಬ ವೈರಾಣುಗಳು, ನದಿ – ಕೆರೆ – ಸಮುದ್ರಗಳಲ್ಲಿ ಹೆಚ್ಚುವ ಶೈವಲಗಳನ್ನು(ಆಲ್ಗೆ) ಇದೇ ರೀತಿ ನಾಶಪಡಿಸಿ, ಜಲಪಾತ್ರದ ಪರಿಸರೀಯ ಸಮತೋಲನವನ್ನು ಕಾಪಾಡುತ್ತವೆ. ಜಲವಾಸಿ ಸಸ್ಯಗಳ ದ್ಯುತಿಸಂಶ್ಲೇಷಣೆಯನ್ನು ಹೆಚ್ಚಿಸುವಲ್ಲಿ ಪರೋಕ್ಷ ಪಾತ್ರವಹಿಸುವ ಈ ವೈರಾಣುಗಳು, ವಾತಾವರಣದಲ್ಲಿರುವ ಇಂಗಾಲದ ಡೈ ಆಕ್ಸೈಡ್ನ ಪ್ರಮಾಣ ತಗ್ಗಿಸುವಲ್ಲಿ ಸಹಕಾರಿ.

ವೈರಾಣುಗಳ ಮಾನವ ನಿರ್ಮಿತ ಉಪಯುಕ್ತತೆ

ವೈರಸ್ಗಳನ್ನು ತಳಿವಿಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ  ಪ್ರತಿರಕ್ಷಾವಿಜ್ಞಾನದ ಸಂಶೋಧನೆಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ವಂಶವಾಹಿಗಳ ಬಗ್ಗೆ, ಡಿಎನ್ಎ ಪ್ರತಿಕೃತಿ ರಚನೆ, ಡಿ.ಎನ್.ಎ – ಆರ್.ಎನ್.ಎ ನ್ಯೂಕ್ಲಿಕ್ ಆಮ್ಲಗಳನ್ನು ನಕಲುಮಾಡುವುದು, ಆರ್.ಎನ್.ಎ ಮತ್ತು ಪ್ರೋಟೀನ್ ರಚನೆಯಂತಹ ವಿಷಯಗಳ ಬಗ್ಗೆ, ನಮ್ಮ ತಿಳುವಳಿಕೆ ಹೆಚ್ಚಿಸಿಕೊಳ್ಳುವ ಸಲುವಾಗಿ ನಡೆಸುವ ಪ್ರಯೋಗಗಳಲ್ಲಿ, ವೈರಾಣುಗಳನ್ನು ಉಪಯೋಗಿಸಿಕೊಳ್ಳಲಾಗುತ್ತದೆ. ವೈರಾಣುಗಳು ಅತ್ಯಂತ ಸರಳ ದೇಹರಚನೆಯುಳ್ಳ ವ್ಯವಸ್ಥೆಗಳು ಎಂಬುದೇ, ಅಣ್ವಿಕ ಜೀವವಿಜ್ಞಾನ ಹಾಗೂ ಕೋಶೀಯ ಜೀವವಿಜ್ಞಾನದ ಮೂಲಭೂತ ತತ್ವಗಳನ್ನು ಅರಿಯಲು ಇವುಗಳನ್ನು ಬಳಸುವುದರ ಹಿಂದಿನ ಪ್ರಮುಖ ಕಾರಣ.

ವೈದ್ಯಕೀಯ ಕ್ಷೇತ್ರದಲ್ಲಿ ವೈರಾಣುಗಳನ್ನು ಹಲವಾರು ರೀತಿಯಲ್ಲಿ ಬಳಸುತ್ತಾರೆ; ಅವುಗಳಲ್ಲಿ ಪ್ರಮುಖವಾಗಿ ಕ್ಯಾನ್ಸರ್ ಮತ್ತು ಅನುವಂಶಿಕ ರೋಗಗಳ ಆಳವಾದ ಅಧ್ಯಯನದಲ್ಲಿ ಹಾಗೂ ಔಷಧಿಗಳ ವಾಹಕಗಳಾಗಿ ಉಪಯೋಗಿಸಲಾಗುತ್ತದೆ. ವೈರಾಣುಗಳಲ್ಲಿರುವ ರೋಗಕಾರಕ ಜೀನ್ಗಳನ್ನು ಹೊರತೆಗೆದು, ಅವುಗಳನ್ನು ನಿರುಪದ್ರವಿಗಳನ್ನಾಗಿ ಮಾಡಿ, ಅವುಗಳ ಒಳಗೆ ಔಷಧಿಗಳನ್ನು ಇರಿಸಿ, ರೋಗಿಗೆ ನೀಡಲಾಗುತ್ತದೆ. ಸಾಮಾನ್ಯ ವಿಧಾನಗಳ ಮೂಲಕ ಸಾಧಿಸಲಾಗದ ಮಾಯಕ ಫಲಿತಾಂಶಗಳನ್ನು, ವೈರಾಣು ವಾಹಕಗಳ ಮೂಲಕ ಸಾಧಿಸಬಹುದು ಎಂದು ಕಂಡುಬಂದಿದೆ. ರೋಗಕಾರಕ ಬ್ಯಾಕ್ಟೀರಿಯಾವನ್ನು ಗುರಿಯಾಗಿಸಿ, ನಾಶಮಾಡುವ ಚಿಕಿತ್ಸಕ ವಿಧಾನದಲ್ಲಿ ‘ಬ್ಯಾಕ್ಟೀರಿಯೋಫಾಜ್’ ವೈರಾಣುಗಳನ್ನು ಬಳಸಲಾಗುತ್ತದೆ.

ನ್ಯಾನೋ ತಂತ್ರಜ್ಞಾನದಲ್ಲೂ ವಾಹಕಗಳಾಗಿ ವೈರಾಣುಗಳ ಬಳಕೆ ಮಾಡಲಾಗುತ್ತದೆ; ತಳೀಯವಾಗಿ ಮಾರ್ಪಡಿಸಲಾದ ಜೀನ್ ಅನುಕ್ರಮಗಳನ್ನು, ಅತಿಥೇಯ ಜೀವಕೋಶಕ್ಕೆ ನ್ಯಾನೋ ಮಟ್ಟದಲ್ಲಿ ವಿತರಣೆ ಮಾಡಲು, ಅತ್ಯಂತ ಸಣ್ಣ ಗಾತ್ರದ ವೈರಾಣುಗಳನ್ನು ಪರಿಣಾಮಕಾರಿಯಾಗಿ ಬಳಸಬಹುದಾಗಿದೆ.

ವೈರಾಣುಗಳನ್ನು ಜೀನ್ ವಾಹಕಗಳಾಗಿ  ಬಳಸಿ, ಕುಲಾಂತರಿ ಸಸ್ಯಗಳನ್ನು ಹಾಗೂ ಪ್ರಾಣಿಗಳನ್ನು ಹುಟ್ಟುಹಾಕಬಹುದು; ಇದರಿಂದ ಸಸ್ಯಗಳು ಹಾಗೂ ಪ್ರಾಣಿಗಳು, ಹೆಚ್ಚು ಫಲದಾಯಕವಾಗುತ್ತವೆ ಎಂದು ಕಂಡುಬಂದಿದೆ.

ವಂಶವಾಹಿ ಚಿಕಿತ್ಸೆಯ ಮೂಲಕ, ಕಾರ್ಯಪ್ರವೃತ್ತ ಜೀನನ್ನು ಕ್ಯಾನ್ಸರ್ ಪೀಡಿತ ರೋಗಿಯ ಜೀವಕೋಶದೊಳಗೆ ಪರಿಚಯಿಸಲು, ‘ಅಡೆನೋವೈರಾಣು’ಗಳು ಅತ್ಯಂತ ಪರಿಣಾಮಕಾರಿ ಎಂಬುದು ಸಾಬೀತಾಗಿದೆ; ಇದರ ಮೂಲಕ ಹಲವು ಬಗೆಯ ಕ್ಯಾನ್ಸರ್ಗಳು ಉಪಶಮನಗೊಂಡಿವೆ ಎಂದು ಕಂಡುಬಂದಿದೆ.

ಎಡ್ವರ್ಡ್ ಜೆನ್ನರನು ಮೊದಲ ಬಾರಿಗೆ ಸಿಡುಬಿನ ವಿರುದ್ಧ ಉಪಯುಕ್ತ ಲಸಿಕೆಯನ್ನು ಕಂಡುಹಿಡಿದಾಗ, ಆತ ಬಳಸಿದ್ದು ನಿರುಪದ್ರವಿಯಾಗಿಸಿದ್ದ ವೈರಾಣುಗಳನ್ನೇ; ಇದೇ ವಿಧಾನವು ಇಂದಿಗೂ ಚಾಲ್ತಿಯಲ್ಲಿದ್ದು, ವೈರಾಣುವಿನ ರೋಗಕಾರಕ ಅಂಶವನ್ನು ತೆಗೆದುಹಾಕಿ, ಉಳಿದ ವೈರಾಣುವಿನ ಭಾಗಗಳನ್ನು ಲಸಿಕೆಯ ರೂಪದಲ್ಲಿ ಸಂಸ್ಕರಿಸಿ, ಬಳಸಲಾಗುತ್ತದೆ; ನೂರಾರು ರೋಗಗಳ ವಿರುದ್ಧ ಜಾಗತಿಕವಾಗಿ ಮಾನವಕುಲವು ಸಾಧಿಸಿರುವ ಗೆಲುವಿನಲ್ಲಿ, ವೈರಾಣುಗಳು ಪ್ರಮುಖ ಪಾತ್ರ ವಹಿಸಿವೆ. ದಡಾರ, ಗದ್ದಬಾವು ಹಾಗೂ ರುಬೇಲ್ಲಾ ಸೋಂಕು ತಡೆಗಟ್ಟಲು ನೀಡುವ ಎಂ.ಎಂ.ಆರ್ ಲಸಿಕೆ, ಚಿಕನ್ ಪಾಕ್ಸ್ ಅಥವಾ ಸಣ್ಣಮ್ಮ ಸೋಂಕು ತಡೆಗಟ್ಟಲು ನೀಡುವ ಲಸಿಕೆ, ಪೋಲಿಯೋ ಲಸಿಕೆ – ಇವೆಲ್ಲವೂ ವೈರಸ್ಗಳನ್ನು ಕೊಂದು ಅಥವಾ ನಿಶಕ್ತಗೊಳಿಸಿ ತಯಾರಿಸಲಾದ ಲಸಿಕೆಗಳೇ.

ನಿರ್ದಿಷ್ಟ ಜೀವಕೋಶಗಳಲ್ಲಿ ನಿರ್ದಿಷ್ಟ ಕಿಣ್ವಗಳನ್ನು ಸೇರಿಸಲು ಕೂಡ, ವೈರಾಣುಗಳ ಸಹಾಯ ಪಡೆಯಲಾಗುತ್ತದೆ; ಈ ಕಿಣ್ವಗಳ ಅಭಿವ್ಯಕ್ತಿಯ ಫಲವಾಗಿ, ನಿಷ್ಕ್ರಿಯವಾಗಿದ್ದ ಹಲವು ಉಪಯುಕ್ತ ಜೀವರಾಸಾಯನಿಕ ಮಾರ್ಗಗಳು ಸಕ್ರಿಯಗೊಳ್ಳುತ್ತವೆ ಮತ್ತು ಮಾನವನ ಆರೋಗ್ಯದ ನಿರ್ವಹಣೆಯಲ್ಲಿ ಸಹಕಾರಿಯಾಗುತ್ತವೆ.

ಜೈವಿಕ ಕೀಟ ನಿಯಂತ್ರಣದಲ್ಲಿ ವೈರಾಣುಗಳನ್ನು ಬಳಸಬಹುದು ಎಂದು ಕೃಷಿತಜ್ಞರು ಸಾರಿದ್ದಾರೆ; ಹಾನಿಕಾರಕ ಕೀಟಗಳನ್ನು ನಿಯಂತ್ರಿಸಲು ‘ನ್ಯೂಕ್ಲಿಯಾರ್ ಪಾಲಿಹೆಡ್ರೋಸಿಸ್ ವೈರಸ್’ನಂತಹ ಕೆಲವು ನಿರ್ದಿಷ್ಟ ವೈರಾಣುಳನ್ನು ಬಳಸಿ, ಬೆಳೆಗಳನ್ನು ಕೀಟಗಳ ಹಾವಳಿಯಿಂದ ಕಾಪಾಡಿಕೊಳ್ಳಬಹುದು ಎಂದು ಕಂಡುಬಂದಿದೆ.

ಮೂರನೆಯ ಜಾಗತಿಕ ಮಹಾಯುದ್ಧವೇನಾದರೂ ನಡೆದರೆ, ಅದು ಜೈವಿಕ ಶಸ್ತ್ರಾಸ್ತ್ರಗಳ ಬಳಕೆಯ ಮೂಲಕವೇ ಎನ್ನುತ್ತಾರೆ ಹಲವು ಸಂಶೋಧಕರು ಹಾಗೂ ಇತಿಹಾಸತಜ್ಞರು. ಇದು ಎಷ್ಟರಮಟ್ಟಿಗೆ ಸತ್ಯಕ್ಕೆ ಹತ್ತಿರ ಎಂಬುದು ಮನಗಾಣಲು ಅಪಾರ ಲೋಕಜ್ಞಾನ ಬೇಕು; ಆದರೆ, ಅತ್ಯಂತ ಅಪಾಯಕಾರಿ ಜೈವಿಕ ಶಸ್ತ್ರಾಸ್ತ್ರಗಳ ತಯಾರಿ ಅಷ್ಟೇನೂ ಕಷ್ಟವಲ್ಲ. ಜೈವಿಕ ಶಸ್ತ್ರಾಸ್ತ್ರವೆಂದರೆ ಬೃಹತ್ ಫಿರಂಗಿ, ತುಪಾಕಿ, ಪಿಸ್ತೂಲು, ಮದ್ದುಗುಂಡು – ಇವ್ಯಾವುದೂ ಅಲ್ಲ; ಕೆಲವೇ ಕೆಲವು ಗ್ರಾಂಗಳಷ್ಟು ಅಪಾಯಕಾರಿ ಮಾರಣಾಂತಿಕ ರೋಗಕಾರಕ ಸೂಕ್ಷ್ಮಾಣುಜೀವಿ ಸಾಕು. ಕ್ಷಣಮಾತ್ರದಲ್ಲಿ, ಗಾಳಿಯ ಅಥವಾ ನೀರಿನ ಮೂಲಕ ಹರಡಬಲ್ಲ ರೋಗಕಾರಕ ಸೂಕ್ಷ್ಮಾಣುಜೀವಿಗಳು ಸೃಷ್ಟಿಸುವ ಅಲ್ಲೋಲ ಕಲ್ಲೋಲ ಬಹಳ ದೊಡ್ಡ ಮಟ್ಟದ್ದೇ! ಇಂತಹ ಜೈವಿಕ ಶಸ್ತ್ರಾಸ್ತ್ರಗಳ ತಯಾರಿಕೆಯಲ್ಲಿ ಬಳಸಲಾಗುವ ಸೂಕ್ಷ್ಮಾಣುಜೀವಿಗಳ ಪಟ್ಟಿಯಲ್ಲಿ ಮೊದಲ ಹೆಸರು ಈ ವೈರಸ್ಗಳದ್ದೇ. ಇದಕ್ಕೆ ಕಾರಣ, ಈ ವೈರಾಣುಗಳು, ಜೀವಕೋಶದ ಹೊರಗೆ ನಿರ್ಜೀವ ಧೂಳಿನ ಕಣದಂತೆ ಇದ್ದು, ಗಾಳಿಯ ಅಥವಾ ನೀರಿನ ಮೂಲಕ ಯಾವುದೇ ಜೀವಿಯ ದೇಹ ಸೇರಿದರೆ, ಸುಪ್ತ ಸ್ಥಿತಿಯಿಂದ ಹೊರಬಂದು, ಸಕ್ರಿಯವಾಗಿ, ತನ್ನ ಗುಣವಿಶೇಷವಾದ ರೋಗವನ್ನು ಅತಿಥೇಯ ಜೀವಿಯಲ್ಲಿ ಸುಲಭವಾಗಿ ಉಂಟುಮಾಡುತ್ತವೆ. ಇದು ನಿಜಾರ್ಥದಲ್ಲಿ ಜಗದ ಒಳಿತಿಗೆ ಉಪಯುಕ್ತವಲ್ಲದಿದ್ದರೂ, ಮಾನವನು ಕಂಡುಕೊಂಡ ವೈರಾಣುಗಳ ಅನ್ವಯಗಳಲ್ಲಿ ಒಂದಾದ್ದರಿಂದ, ಮಾನವನಿರ್ಮಿತ  ಉಪಯುಕ್ತತೆ ಎಂದು ಪರಿಗಣಿಸಬೇಕಾಗಿದೆ.

ತ್ಯಾಜ್ಯನೀರಿನ ಜೈವಿಕ ಸಂಸ್ಕರಣ ಪ್ರಕ್ರಿಯೆಗಳಲ್ಲಿ ವೈರಾಣುಗಳನ್ನು, ಅದರಲ್ಲೂ ಮುಖ್ಯವಾಗಿ, ಬ್ಯಾಕ್ಟೀರಿಯೋಫಾಜ್ಗಳನ್ನೂ ಬಳಸಲಾಗುತ್ತದೆ; ಪ್ರಯೋಗಾಲಯಗಳೊಳಗೆ ಅಪಾರ ಪ್ರಮಾಣದಲ್ಲಿ ಈ ನಿರ್ದಿಷ್ಟ ವೈರಾಣುಗಳನ್ನು ಸಂಶ್ಲೇಷಿಸಿ ಮತ್ತು ಸಂಸ್ಕರಿಸಿ, ತ್ಯಾಜ್ಯನೀರಿನಲ್ಲಿ  ಅವುಗಳನ್ನು ಪರಿಚಯಿಸಿದರೆ ನಮ್ಮ ಕೆಲಸ ಮುಗಿದ ಹಾಗೇ! ನಿರ್ದಿಷ್ಟ ಹಾನಿಕಾರಕ ಸೂಕ್ಷ್ಮಾಣುಜೀವಿಯನ್ನು ನಿರ್ದಿಷ್ಟ ವೈರಾಣುವು ಗುರಿ ಮಾಡಿ, ಆವುಗಳನ್ನು ಸುಲಭವಾಗಿ ನಿವಾರಿಸುತ್ತವೆ; ಸಂಸ್ಕರಣ ಪ್ರಕ್ರಿಯೆಯ ನಂತರ, ಈ ವೈರಾಣುಗಳನ್ನು ಹಿಂಪಡೆದು, ಸ್ಫಟಿಕೀಕರಣಗೊಳಿಸಿ, ಮತ್ತೊಮ್ಮೆ ಉಪಯೋಗಿಸಲು ಶೇಖರಿಸಿಡಬಹುದು.

ಮಾನವಕುಲವನ್ನು ಮುನ್ನಡೆಸಿಕೊಂಡು ಹೋಗುವಂತಹ ಪ್ರಧಾನಕಾರ್ಯದಲ್ಲೂ, ಈ ಪುಟ್ಟ ವೈರಾಣುಗಳ ಪಾತ್ರವಿದೆಯೆಂದರೆ ನಂಬುತ್ತೀರಾ? ಮಾನವನ ವಿಕಾಸದ ಪ್ರಾಥಮಿಕ ಪ್ರಕ್ರಿಯೆಯಲ್ಲಿ, ವೈರಸ್ಗಳ ಮೂಲಕ ಕೆಲವು ಪ್ರಮುಖ ಜೀನ್ಗಳು, ಮಾನವನ ವಂಶವಾಹಿಯ ಅವಿಭಾಜ್ಯ ಅಂಗಗಳಾಗಿವೆ. ಈ ಜೀನ್ ನ ಅನುಪಸ್ಥಿತಿಯಲ್ಲಿ, ಗರ್ಭಕೋಶದಲ್ಲಿ ಮಾಸುಚೀಲದ ರಚನೆಯು ಪರಿಪೂರ್ಣವಾಗಿ ಆಗುವುದು ಸಾಧ್ಯವಿಲ್ಲ; ಅಂದರೆ, ಮಾನವನಿಗಿಂತಾ ಮೊದಲೇ ಭೂಮಿಯಲ್ಲಿದ್ದ ವೈರಸ್ಗಳು, ಮಾನವನಿಗೆ ಕೊಡಮಾಡಿದ ಅತ್ಯುಪಯುಕ್ತ ವಂಶವಾಹಿ ಅನುಕ್ರಮದ ಕಾರಣ, ಇಂದಿನವರೆಗೂ ಸಮಂಜಸವಾದ ಗರ್ಭಧಾರಣೆ ಹಾಗೂ ಯುಕ್ತವಾದ ಮಾಸುಚೀಲ, ಹೊಕ್ಕಳುಬಳ್ಳಿಯ ರಚನೆಯನ್ನೂ ಒಳಗೊಂಡಂತೆ ಸರಿಯಾದ ಗರ್ಭಾವಸ್ಥೆ ಹಾಗೂ ಆರೋಗ್ಯವಂತ ಶಿಶುವಿನ ಜನನ ಮುಂದುವರೆದಿದ್ದು, ಇದರ ಮುಖಾಂತರ, ಮಾನವಕುಲದ ಉಳಿವಿಗೆ ವೈರಾಣುಗಳು ಎಷ್ಟು ಪ್ರಮುಖ ಕೊಡುಗೆ ನೀಡಿವೆ ಎಂಬುದನ್ನು ನಾವು ಅರ್ಥೈಸಿಕೊಳ್ಳಬಹುದು.

ಸಾಮಾನ್ಯವಾಗಿ, ಯಾವುದೇ ಸೂಕ್ಷ್ಮಾಣುಜೀವಿಯೂ, ತಮ್ಮ ಅಪಾಯಕಾರಿ ಗುಣವಿಶೇಷಗಳಿಂದ ಜನರಲ್ಲಿ ಭಯ ಹುಟ್ಟಿಸಿ, ಕುಖ್ಯಾತವಾಗಿ, ನಂತರದ ಸಂಶೋಧನೆಗಳಿಂದ ತಮ್ಮ ಉಪಕಾರಿ ಪ್ರವೃತ್ತಿಯನ್ನೂ ಹೊರಗೆಡವಿ, ಪ್ರಖ್ಯಾತವಾಗುತ್ತವೆ; ಹಾಗಾಗಿ, ಈಗಾಗಲೇ ನಮಗೆ ತಿಳಿದಿರುವ ಪ್ರಕಾರ, ವೈರಾಣುಗಳನ್ನೂ ಒಳಗೊಂಡಂತೆ ಎಲ್ಲಾ ಬಗೆಯ ಸೂಕ್ಷ್ಮಾಣುಜೀವಿಗಳೂ ಉಪಕಾರಿಗಳೂ ಹೌದು, ಅಪಾಯಕಾರಿಯೂ ಹೌದು; ಅವುಗಳ ಬಗ್ಗೆ ಹೆಚ್ಚೆಚ್ಚು ತಿಳಿದುಕೊಂಡಷ್ಟೂ ನಾವು ಅವುಗಳ ಅಪಾಯದಿಂದ ಸುಲಭವಾಗಿ ಪಾರಾಗಬಹುದು ಹಾಗೂ ಅವುಗಳ ಉಪಕಾರವನ್ನು ಸಂಪೂರ್ಣವಾಗಿ ಪಡೆಯಬಹುದಾಗಿದೆ.

– ಕ್ಷಮಾ ವಿ ಭಾನುಪ್ರಕಾಶ್