ನಿಮಗೆ, ಮಸಾಲೆದೋಸೆ ಎಂದರೆ ಬಾಯಲ್ಲಿ ನೀರೂರುತ್ತದೆಯೇ? ಅಷ್ಟೇ ಯಾಕೆ, ಮಲ್ಲಿಗೆ ಇಡ್ಲಿ, ಬ್ರೆಡ್, ಕೇಕ್, ಕುಕೀಸ್ ಕೂಡ ಎಷ್ಟು ರುಚಿಕರ ಅಲ್ವಾ? ಹಾಗಾದರೆ, ನೀವು ಇವುಗಳನ್ನು ತಯಾರಿಸಿದವರನ್ನು ಹೊಗಳುವ ಮೊದಲು ನಮ್ಮ ಶಿಲೀಂಧ್ರಗಳಿಗೆ ತಮ್ಮ ಪಾಲಿನ ಮನ್ನಣೆ ಕೊಟ್ಟುಬಿಡಿ. ರುಬ್ಬಿ ಇಟ್ಟ ದೋಸೆ ಇಡ್ಲಿ ಹಿಟ್ಟು, ಕಲಸಿ ಇಟ್ಟ ಬ್ರೆಡ್ ಕೇಕ್ ಹಿಟ್ಟು ಹುದುಗಿ ಹದಕ್ಕೆ ಬರುವುದು, ‘ಯೀಸ್ಟ್’ ಎಂಬ ಶಿಲೀಂಧ್ರದ ಜೀವರಾಸಾಯನಿಕ ಕರಾಮತ್ತಿನಿಂದಲೇ. ಇಂತಹಾ ಸಾವಿರಾರು ಬಗೆಯಲ್ಲಿ ಶಿಲೀಂಧ್ರಗಳು ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿವೆ; ಅವುಗಳಲ್ಲಿ ಕೆಲವು ಉಪಯುಕ್ತ ರೀತಿಯಾದರೆ ಕೆಲವು ಮಾರಕ. ಶಿಲೀಂಧ್ರಗಳು ನಮ್ಮ ಜೀವನದಲ್ಲಿ ವಹಿಸುವ ಪಾತ್ರದ ಬಗ್ಗೆ ಕೂಲಂಕುಷವಾಗಿ ಗಮನಿಸೋಣ.

 

ಶಿಲೀಂಧ್ರಗಳ ನೈಸರ್ಗಿಕ ಉಪಯುಕ್ತತೆ:
ಶಿಲೀಂಧ್ರಗಳು ಪರಿಸರ ವ್ಯವಸ್ಥೆಯ ಆಹಾರ ಸರಪಳಿಗಳಲ್ಲಿ ಮುಖ್ಯ ಪಾತ್ರ ವಹಿಸುವ ‘ವಿಭಾಜಕ’ಗಳು; ಅಂದರೆ, ಸಂಕೀರ್ಣ ಜೈವಿಕ ಅಥವಾ ಇಂಗಾಲಯುಕ್ತ ಪದಾರ್ಥಗಳನ್ನು ವಿಭಜಿಸಿ ಸರಳ, ಇಂಗಾಲ ರಹಿತ ಪದಾರ್ಥಗಳನ್ನಾಗಿ ಪರಿವರ್ತಿಸುವುದು ಕೆಲವು ಶಿಲೀಂಧ್ರ ಪ್ರಭೇದಗಳ ಕೆಲಸ. ತಮ್ಮ ಚಯಾಪಚಯ ಕ್ರಿಯೆಯ ಭಾಗವಾಗಿ ಈ ಕಾರ್ಯವನ್ನು ಶಿಲೀಂಧ್ರಗಳು ಮಾಡುತ್ತವೆ. ಸತ್ತ ಸಸ್ಯ -ಪ್ರಾಣಿಗಳ ದೇಹಗಳನ್ನು, ಸಸ್ಯ ಜನ್ಯ ಮತ್ತು ಪ್ರಾಣಿಜನ್ಯ ತ್ಯಾಜ್ಯವನ್ನು ಇವು ತಮ್ಮ ಆಹಾರವನ್ನಾಗಿ ಬಳಸಿ, ಶಕ್ತಿ ಪಡೆದು, ನಂತರ ಈ ಪ್ರಕ್ರಿಯೆಯಿಂದ ಉತ್ಪತ್ತಿಯಾದ ಸರಳ ತ್ಯಾಜ್ಯವನ್ನು ಭೂಮಿಗೆ ಮರಳಿಸುತ್ತವೆ. ಇದರ ಫಲವಾಗಿ ಭೂಮಿಯ ಫಲವತ್ತತೆಯು ಹೆಚ್ಚುವುದಷ್ಟೇ ಅಲ್ಲದೆ, ಜೈವಿಕ ಭೂರಾಸಾಯನಿಕ ಚಕ್ರಗಳಿಗೆ ಖನಿಜಾಂಶಗಳು, ಮೂಲಧಾತುಗಳು ಮರಳುತ್ತವೆ ಮತ್ತು ಮಣ್ಣಿನ ಪ್ರಮಾಣವು ಕೂಡ ಏರಿಕೆಯಾಗುತ್ತದೆ. ಇವುಗಳೆನಾದರೂ, ಸತ್ತ ಸಸ್ಯ – ಪ್ರಾಣಿ – ಮನುಷ್ಯರ ದೇಹಗಳನ್ನು ಮತ್ತು ನಮ್ಮ ದಿನನಿತ್ಯದ ಚಟುವಟಿಕೆಗಳಿಂದ ಉತ್ಪತ್ತಿಯಾಗುವ ಜೈವಿಕ ವಿಘಟನೀಯ ತ್ಯಾಜ್ಯಗಳನ್ನು ತಮ್ಮ ಜೀವಿತಕ್ಕೆಉಪಯೋಗಿಸಿಕೊಂಡು ಬರಿದಾಗಿಸದಿದ್ದರೆ, ಈ ಭೂಮಿಯ ಪರಿಸ್ಥಿತಿ, ಬದುಕಿರುವ ನಮ್ಮೆಲ್ಲರ ಪರಿಸ್ಥಿತಿ ಏನಾಗಬಹುದು ಎಂಬುದು ಅನೂಹ್ಯ. ಸಂಯುಕ್ತ ಜೈವಿಕ ಪದಾರ್ಥಗಳನ್ನು ಸರಳೀಕರಿಸುವುದು ಕೇವಲ ಶಿಲೀಂಧ್ರಗಳ ಕೆಲಸವಲ್ಲ; ಹಲವು ಬಗೆಯ ಬ್ಯಾಕ್ಟೀರಿಯಾ ಕೂಡ ವಿಭಾಜಕಗಳೇ. ಆದರೆ, ಆಮ್ಲೀಯ ಗುಣವುಳ್ಳ ಮಣ್ಣಿನಲ್ಲಿ ಈ ವಿಭಾಜಕ ಬ್ಯಾಕ್ಟೀರಿಯಾ ಬದುಕಲು ಸಾಧ್ಯವಿಲ್ಲ; ಅಂತಹ ಪರಿಸ್ಥಿತಿಯಲ್ಲಿ ಆಮ್ಲೀಯ ವಾತಾವರಣವನ್ನೇ ಹೆಚ್ಚಾಗಿ ಪ್ರೀತಿಸುವ ಶಿಲೀಂಧ್ರಗಳು, ತಮ್ಮ ವಸಾಹತು ನಿರ್ಮಿಸಿ ಕಾರುಬಾರು ನಡೆಸುತ್ತವೆ. ತಮ್ಮ ದೈನಂದಿನ ಚಯಾಪಚಯ ಪ್ರಕ್ರಿಯೆಯ ಭಾಗವಾಗಿ ಜೀರ್ಣಕಾರಿ ಕಿಣ್ವಗಳನ್ನು ಬಿಡುಗಡೆಗೊಳಿಸಿ, ತಮ್ಮ ಸುತ್ತಲೂ ಇರುವ ‘ಸೆಲ್ಯುಲೋಸ್’, ‘ಲಿಗ್ನಿನ್’ ನಂತಹ ಜೈವಿಕ ಇಂಗಾಲಯುಕ್ತ ಮತ್ತು ಸಾರಜನಕಯುಕ್ತ ಪದಾರ್ಥಗಳ ಮೇಲೆ ಈ ಕಿಣ್ವಗಳನ್ನು ಪ್ರಯೋಗಿಸಿ, ಇಂಗಾಲದ ಡೈ ಆಕ್ಸೈಡ್, ನೀರು, ಅಮೋನಿಯ, ಹೈಡ್ರೋಜೆನ್ ಸಲ್ಫೈಡ್ನಂತಹ ಸರಳ ಪದಾರ್ಥಗಳನ್ನು ಉತ್ಪತ್ತಿ ಮಾಡುತ್ತವೆ. ಇದೇ, ನಮ್ಮ ಕಣ್ಣಿಗೆ, ಜೈವಿಕ ವಸ್ತುವಿನ ಕೊಳೆಯುವ ಪ್ರಕ್ರಿಯೆಯಾಗಿ ಕಂಡುಬರುತ್ತದೆ. ಕೆಲವು ಶಿಲೀಂಧ್ರಗಳು, ಬೇರೆಲ್ಲಾ ಖನಿಜಾಂಶಗಳಿಗಿಂತಾ ಸಾರಜನಕ ಮತ್ತು ಇಂಗಾಲದ ಡೈ ಆಕ್ಸೈಡ್ಅನ್ನು ಹೆಚ್ಚಿನ ಪ್ರಮಾಣದಲ್ಲಿ ನಿರಂತರವಾಗಿ ಒದಗಿಸುತ್ತಾ ಸಸ್ಯಗಳ ಸನ್ಮಿತ್ರಗಳಾಗಿರುತ್ತವೆ.
ಶಿಲೀಂಧ್ರಗಳು ಮೂಲತಃ ಸೂಕ್ಷ್ಮಾಣು ಜೀವಿಗಳೇ ಆಗಿದ್ದು, ಬಹುಪಾಲು ಶಿಲೀಂಧ್ರಗಳನ್ನು ಸೂಕ್ಷ್ಮದರ್ಶಕದ ಬಳಕೆಯಿಂದ ಮಾತ್ರ ಕಾಣಲು ಸಾಧ್ಯ; ಆದರೂ, ಅವುಗಳ ವರ್ಗಕ್ಕೇ ಸೇರುವ ಅಣಬೆಗಳು ನಮ್ಮ ಬರಿಗಣ್ಣಿಗೆ ಸುಲಭವಾಗಿ ಕಾಣುವಂಥವು ಮತ್ತು ಸಾಮಾನ್ಯವಾಗಿ ತೇವಾಂಶ ಹೆಚ್ಚಿರುವ ಸ್ಥಳಗಳಲ್ಲಿ ಕಂಡುಬರುವಂಥವು. ಈ ಅಣಬೆಗಳು ಸಣ್ಣ ಪುಟ್ಟ ಇರುವೆ, ಗೆದ್ದಲಿನಂತಹಾ ಕೀಟಗಳಿಂದ ಮೊದಲ್ಗೊಂಡು ಹಂದಿ, ಮೊಲ, ಜಿಂಕೆ, ಬ್ಯಾಡ್ಜರ್, ಇಲಿಗಳನ್ನೊಳಗೊಂಡ ಪ್ರಾಣಿಗಳ ವಿಶಾಲ ಶ್ರೇಣಿಗೆ ನೈಸರ್ಗಿಕ ಆಹಾರ. ಅಣಬೆಗಳು ಈ ಪ್ರಾಣಿಗಳಿಗೆ ಪ್ರೋಟೀನ್ ನ ಆಗರವಾಗಿ, ಮುಖ್ಯ ವಿಟಮಿನ್ಗಳ ಮೂಲಸೆಲೆಯಾಗಿ ನೈಸರ್ಗಿಕವಾಗಿ ದೊರೆಯುತ್ತವೆ.
ಶಿಲೀಂಧ್ರಗಳ ದೇಹರಚನೆ ಉದ್ದುದ್ದ ದಾರಗಳಂತಹಾ ಜೀವಕೋಶಸಮೂಹದಿಂದ ಆಗಿರುತ್ತದೆಯಾದ್ದರಿಂದ, ಈ ದಾರರೂಪೀ ದೇಹವು ಒಂದರೊಂದಿಗೆ ಮತ್ತೊಂದು ಬೆಸೆದು, ಜಾಲದಂತಹ ವ್ಯವಸ್ಥೆ ಏರ್ಪಡುತ್ತದೆ. ಈ ಶಿಲೀಂಧ್ರಗಳ ಜಾಲವು, ನೈಸರ್ಗಿಕ ಜಲಪಾತ್ರಗಳ ಸ್ವಚ್ಛತೆ ಕಾಪಾಡುವಲ್ಲಿ ಸಹಾಯಕ. ನೀರಿನಲ್ಲಿ ಹರಿಯುವ ರೋಗಕಾರಕ ಸೂಕ್ಷ್ಮಾಣು ಜೀವಿಗಳು, ಜೀವಾಣು ವಿಷಗಳು, ಭಾರಲೋಹಗಳನ್ನು ಸೋಸಿ, ಅವುಗಳನ್ನು ತಮ್ಮ ಜೀವರಾಸಾಯನಿಕ ಕ್ರಿಯೆಗಳಿಗೆ ಬಳಸಿಕೊಂಡು, ನೀರಲ್ಲಿ ಅವುಗಳ ಪ್ರಮಾಣವನ್ನು ಕುಗ್ಗಿಸುತ್ತವೆ. ‘ಸ್ತ್ರೋಫಾರಿಯ’ ಪ್ರಭೇದವು ಈ ಗುಣತತ್ವವನ್ನು ಹೆಚ್ಚಾಗಿ ಪ್ರದರ್ಶಿಸುತ್ತದೆ. ಹಾಗಾಗಿ ಇಂತಹ ಶಿಲೀಂಧ್ರಗಳನ್ನು ನೈಸರ್ಗಿಕ ಶೋಧಕ ಎನ್ನಬಹುದು. ಕೆಲವು ಶಿಲೀಂಧ್ರಗಳಂತೂ, ವಿಸ್ಫೋಟಕಗಳಲ್ಲಿ ಬಳಸಲಾಗುವ ಅಪಾಯಕಾರಿ ಸಂಯುಕ್ತ ಪದಾರ್ಥವಾದ ‘ಟಿ.ಎನ್.ಟಿ’ಯನ್ನು ಕೂಡ ಜೀರ್ಣಿಸಿಕೊಂಡು, ಸಸ್ಯಗಳಿಗೆ ಉಪಯುಕ್ತ ಸಾರಜನಕವನ್ನು ಕೊಡಮಾಡುತ್ತವೆ ಮತ್ತು ಮಣ್ಣಿನಿಂದ ಈ ವಿಷಕಾರಿ ಪದಾರ್ಥವನ್ನು ಇನ್ನಿಲ್ಲವಾಗಿಸುತ್ತವೆ.

ಶಿಲೀಂಧ್ರಗಳ ಮಾನವನಿರ್ಮಿತ ಉಪಯುಕ್ತತೆ:
ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ಇಷ್ಟು ಮುಖ್ಯ ಪಾತ್ರ ವಹಿಸುವ ಶಿಲೀಂಧ್ರಗಳನ್ನು ಗಮನಿಸಿದ ಮಾನವ, ಉದ್ದೇಶಪೂರ್ವಕವಾಗಿ ಇವುಗಳಿಂದ ಏನೆಲ್ಲಾ ಉಪಯುಕ್ತತೆ ಪಡೆಯಬಹುದು ಎಂದು ತಿಳಿಯಲು ಶತಮಾನಗಳಿಂದ ಪ್ರಯೋಗಗಳನ್ನು ನಡೆಸುತ್ತಲೇ ಬಂದಿದ್ದಾನೆ. ಇವುಗಳ ಮತ್ತೂ ಕೆಲವು ಉಪಯೋಗಗಳು, ವಿಜ್ಞಾನಿಗಳ ಯಾವುದೋ ಪ್ರಯೋಗದ ಅನಪೇಕ್ಷಿತ ಫಲಿತಾಂಶದಿಂದ ಗೋಚರಿಸಿದ್ದೂ ಉಂಟು. ವೈದ್ಯಕೀಯ ಕ್ಷೇತ್ರ, ಔದ್ಯಮಿಕ ಕ್ಷೇತ್ರ, ಆಹಾರ ಸಂಸ್ಕರಣೆ, ಕೃಷಿ ಸೇರಿದಂತೆ ವಿವಿಧೆಡೆ ಶಿಲೀಂಧ್ರಗಳ ಬಳಕೆಯನ್ನು ಅಪಾರವಾಗಿ ಕಾಣಬಹುದಾಗಿದೆ.
ಇತ್ತೀಚಿನ ದಶಕಗಳಲ್ಲಿ ಪ್ರಾಣರಕ್ಷಕಗಳೇ ಆಗಿರುವ ಆಂಟಿಬಯೋಟಿಕ್ ಔಷಧಿಗಳು ಅಥವಾ ಪ್ರತಿಜೀವಕ ಔಷಧಿಗಳನ್ನು ಮೊದಲು ತಯಾರಿಸಿದ್ದೇ ಶಿಲೀಂಧ್ರಗಳಿಂದ. ಶಿಲೀಂಧ್ರಗಳನ್ನು ಹೀಗೆ ಉಪಯೋಗಿಸಬಹುದೆಂದು ತಿಳಿದದ್ದು ಒಂದು ರೋಚಕ ಘಟನೆಯಿಂದ. ೧೯೨೮ರಲ್ಲಿ ಅಲೆಕ್ಸಾಂಡರ್ ಫ್ಲೆಮಿಂಗ್ ಎಂಬ ಜೀವವಿಜ್ಞಾನಿ ಬ್ಯಾಕ್ಟೀರಿಯಾಗಳ ಬಗ್ಗೆ ಸಂಶೋಧನೆ ನಡೆಸುತ್ತಿದ್ದರು; ತಮ್ಮ ಪ್ರಯೋಗಾಲಯದಲ್ಲಿದ್ದ ವಿಶೇಷವಾದ ಪೆಟ್ರಿಡಿಶ್ಗಳಲ್ಲಿ ರೋಗಕಾರಕ ಬ್ಯಾಕ್ಟೀರಿಯಾಗಳನ್ನು ಬೆಳೆಸುತ್ತಿದ್ದರು ಮತ್ತು ಅವುಗಳ ಮೇಲೆ ವಿವಿಧ ಪ್ರಯೋಗಗಳನ್ನು ನಡೆಸುತ್ತಿದ್ದರು. ಒಮ್ಮೆ ಕೆಲವು ದಿನಗಳ ರಜೆ ಮುಗಿಸಿ ತಮ್ಮ ಪ್ರಯೋಗಾಲಯಕ್ಕೆ ಹಿಂದಿರುಗಿ, ಬೇಕಾದ ಮತ್ತು ಬೇಡದ ಸಂಶೋಧನಾ ಸಾಮಗ್ರಿಯನ್ನು ಬೇರ್ಪಡಿಸಲು ಮುಂದಾದರು; ಬಿಸಾಡಲು ತೆಗೆದುಕೊಂಡಿದ್ದ ಒಂದು ಪೆಟ್ರಿಡಿಶ್ನಲ್ಲಿ ಅವರಿಗೆ ಅಚ್ಚರಿ ಕಾದಿತ್ತು. ಆ ಪಾತ್ರೆಯಲ್ಲಿ ತಾವು ಬೆಳೆಸಿದ್ದ ಬ್ಯಾಕ್ಟೀರಿಯಾ ಕಾಲೋನಿಯು ಒಂದು ವೃತ್ತಾಕಾರವಾಗಿ ನಾಶವಾಗಿದ್ದು ಅದೇ ಜಾಗದಲ್ಲಿ ಹೊಸ ಬಗೆಯ ಕಾಲೋನಿಯೆದ್ದಿತ್ತು. ಬ್ಯಾಕ್ಟೀರಿಯಾವನ್ನು ನಾಶ ಮಾಡಿ, ಅಲ್ಲಿ ತನ್ನ ವಸಾಹತು ನಿರ್ಮಿಸಿದ ಸೂಕ್ಷ್ಮಾಣು ಜೀವಿ ಯಾವುದೆಂದು ಆಶ್ಚರ್ಯದಿಂದ ಆ ಹೊಸ ವಸಾಹತಿನ ಮೇಲೆ ಸಂಶೋಧನೆ ಆರಂಭಿಸಿದರು. ಅದರ ಫಲಿತಾಂಶವಾಗಿ ತಿಳಿದು ಬಂದದ್ದೆಂದರೆ, ಆ ಹೊಸಾ ವಸಾಹತು ‘ಪೆನಿಸೀಲಿಯಮ್ ನೋಟೆಟಮ್’ ಎಂಬ ಶಿಲೀಂಧ್ರದ್ದಾಗಿದ್ದು, ಅದು ಅಲ್ಲಿ ಮೊದಲು ಇದ್ದ ಬ್ಯಾಕ್ಟೀರಿಯಾವನ್ನು ನಾಶ ಮಾಡಲು ವಿಶಿಷ್ಟ ಪ್ರತಿಜೀವಕ ರಾಸಾಯನಿಕವನ್ನು ಬಿಡುಗಡೆಗೊಳಿಸಿದೆ ಎಂಬುದು. ಆ ಪ್ರತಿಜೀವಕವೇ ಎಲ್ಲೆಲ್ಲೂ ಈಗಲೂ ಬಳಸಲ್ಪಡುವ ‘ಪೆನಿಸಿಲಿನ್’. ಈ ಸಂಶೋಧನೆಯು ‘ಪ್ರತಿಜೀವಕ ತತ್ವ’ದ ಮೇಲೆ ಬೆಳಕು ಬೀರಿದ ನಂತರ, ಜಗತ್ತಿನ ವಿವಿಧೆಡೆ ನೂರಾರು ವಿಜ್ಞಾನಿಗಳು ಸೂಕ್ಷ್ಮಾಣು ಜೀವಿಗಳ ಮೇಲೆ ಸಂಶೋಧನೆ ನಡೆಸಿ, ಬಗೆ ಬಗೆಯ ಶಿಲೀಂಧ್ರಗಳಷ್ಟೇ ಅಲ್ಲದೆ ವಿವಿಧ ಬ್ಯಾಕ್ಟೀರಿಯಾಗಳಿಂದ ಕೂಡ ಸಾವಿರಾರು ರೀತಿಯ ಪ್ರತಿಜೀವಕಗಳನ್ನು ಹೊರತೆಗೆದಿದ್ದಾರೆ.’ಆಸ್ಪರ್ಜಿಲ್ಲಸ್’, ‘ಟ್ರೈಕೊಡರ್ಮ’, ‘ಫ್ಯುಸಿಡಿಯಂ’ ಸೇರಿದಂತೆ ಪ್ರತಿಜೀವಕ ಉತ್ಪಾದಿಸುವ ಶಿಲೀಂಧ್ರಗಳ ಪಟ್ಟಿ ದೊಡ್ಡದಿದೆ. ಕೇವಲ ಪ್ರತಿಜೀವಕಗಳಲ್ಲದೇ, ರಕ್ತದೊತ್ತಡವನ್ನು ನಿಯಂತ್ರಿಸಲು, ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಿಸಲು, ಟ್ಯೂಮರ್ಗಳನ್ನು ನಿವಾರಿಸಲು, ಕೊಲೆಸ್ಟರಾಲ್ ಕಡಿಮೆಗೊಳಿಸಲು, ಪ್ರಸವದ ನಂತರ ರಕ್ತಸ್ರಾವವನ್ನು ತಹಬಂದಿಗೆ ತರಲು, ನೋವು ಶಮನ ಪಡಿಸಲು ಬಳಸುವ ಕೆಲವು ಔಷಧಿಗಳಲ್ಲೂ ಶಿಲೀಂಧ್ರಗಳ ಸಹಾಯದಿಂದ ತಯಾರಿಸಲಾದ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಪ್ರಯೋಗಾಲಯಗಳಲ್ಲಿ, ಕಾರ್ಖಾನೆಗಳಲ್ಲಿ ಬಳಸಲು ಬೇಕಾದ ‘ಸ್ಪಿರಿಟ್’, ಹಲವು ಬಗೆಯ ಆಮ್ಲಗಳು, ಕಿಣ್ವಗಳನ್ನು ಶಿಲೀಂಧ್ರದ ಬಳಕೆಯಿಂದ ಉತ್ಪಾದಿಸಲಾಗುತ್ತದೆ.ಶಿಲೀಂಧ್ರಗಳನ್ನು ಮತ್ತು ಅವುಗಳ ಸಹಾಯದಿಂದ ಉತ್ಪತ್ತಿಯಾದ ಸಂಯುಕ್ತ ಪದಾರ್ಥಗಳನ್ನು ಕಾಗದ, ಚರ್ಮ, ಮಾರ್ಜಕ, ಜವಳಿ, ಸುಗಂಧ ದ್ರವ್ಯ ಮತ್ತಿತರ ಉತ್ಪಾದನಾ ಮತ್ತು ಸಂಸ್ಕರಣಾ ಉದ್ಯಮಗಳಲ್ಲಿ ಬಳಸಲಾಗುತ್ತದೆ;
ಯೀಸ್ಟ್ ಎಂಬ ಶಿಲೀಂಧ್ರವನ್ನು ಶತಮಾನಗಳಿಂದಲೂ ಅಡುಗೆಯಲ್ಲಿ ಬಳಸಲಾಗುತ್ತಿದೆ. ಬ್ರೆಡ್, ಕೇಕ್ ಇತ್ಯಾದಿ ಬೇಕರಿ ಪದಾರ್ಥಗಳ ತಯಾರಿಯಲ್ಲಿ ಬಳಸುವ ಹಿಟ್ಟು ಹುದುಗಲು ಸಹಾಯ ಮಾಡುವುದು ಇದೇ ‘ಯೀಸ್ಟ್’. ಈ ಶಿಲೀಂಧ್ರದ ಸಹಾಯದಿಂದಲೇ ದ್ರಾಕ್ಷಿ ಮತ್ತಿತರ ಹಣ್ಣಿನ ರಸವನ್ನು ಕಾಲಾನುಕ್ರಮದಲ್ಲಿವೈನ್ ಆಗಿ ಪರಿವರ್ತಿಸಲು ಸಾಧ್ಯವಾಗುವುದು. ಈ ‘ಹುದುಗು’ ಬರುವ ಪ್ರಕ್ರಿಯೆಯು, ಶಿಲೀಂಧ್ರಗಳ ಪ್ರಮುಖ ಜೀವರಾಸಾಯನಿಕ ಪ್ರಕ್ರಿಯೆಯನ್ನು ಪ್ರತಿನಿಧಿಸುತ್ತದೆ. ಈ ಶಿಲೀಂಧ್ರಗಳು, ಹಣ್ಣಿನ ರಸ ಅಥವಾ ಬ್ರೆಡ್ – ಕೇಕ್ ತಯಾರಿಗೆ ಬೇಕಾದ ಹಿಟ್ಟಿನಲ್ಲಿರುವ ಸಕ್ಕರೆ ಅಂಶವನ್ನು, ಆಮ್ಲಜನಕ ರಹಿತ ವಾತಾವರಣದಲ್ಲಿ, ಇಂಗಾಲಯುಕ್ತ ಆಮ್ಲ, ಮದ್ಯ ಮತ್ತು ಇಂಗಾಲದ ಡೈ ಆಕ್ಸೈಡ್ ನಂತಹ ಉತ್ಪನ್ನಗಳಾಗಿ ಮಾರ್ಪಡಿಸುತ್ತವೆ. ಹಿಟ್ಟು ಹುದುಗಿದ ನಂತರ ಉಬ್ಬುವುದು ಇದೇ ಇಂಗಾಲದ ಡೈ ಆಕ್ಸೈಡ್ ನ ಕಾರಣದಿಂದ ಮತ್ತು ಹಣ್ಣಿನರಸ ವೈನ್ ಆಗುವುದು ಇದೇ ಮದ್ಯದ ಕಾರಣದಿಂದ. ಹಾಲಿನ ಉತ್ಪನ್ನಗಳಾದ ಚೀಸ್, ಪನೀರ್, ಯೋಗರ್ಟ್ ಎಂಬ ಸುವಾಸಿತ ಮೊಸರಿನ ತಯಾರಿಯಲ್ಲಿ ಕೂಡ ಶಿಲೀಂಧ್ರಗಳ ಬಳಕೆಯನ್ನು ಯಥೇಚ್ಛವಾಗಿ ಮಾಡಲಾಗುತ್ತದೆ. ಈ ಶಿಲೀಂಧ್ರಗಳ ಬಳಕೆಯಿಂದಾಗಿಯೇ ವಿಶಿಷ್ಟ ಸವಿ ಲಭಿಸುತ್ತದೆ ಎಂದು ಆಹಾರ ತಯಾರಿ ಮತ್ತು ಸಂಸ್ಕರಣಾ ಉದ್ಯಮದವರು ಕಂಡುಕೊಂಡಿದ್ದಾರೆ. ಕೆಲವು ಬಗೆಯ ಉಪ್ಪಿನಕಾಯಿಗಳು, ಸಾಸ್ ಕೆಚಪ್ಗಳ ತಯಾರಿಯಲ್ಲಿ ಕೂಡ ಶಿಲೀಂಧ್ರಗಳನ್ನು ಬಳಸುತ್ತಾರೆ. ಬಗೆಬಗೆಯ ಅಣಬೆಗಳನ್ನು ವಿವಿಧ ತಿನಿಸುಗಳ ತಯಾರಿಯಲ್ಲಿ ಬಳಸುವುದು ಹಿಂದಿನಿಂದಲೂ ಜಾರಿಯಲ್ಲಿದೆ.
ಸಸ್ಯಗಳ ಆರೋಗ್ಯಕರ ಬೆಳವಣಿಗೆಗೆ ಶಿಲೀಂಧ್ರಗಳು ನೈಸರ್ಗಿಕವಾಗಿ ಸಹಾಯ ಮಾಡುವುದು ತಿಳಿದದ್ದೇ. ಆದರೆ, ಮತ್ತೂ ಹೆಚ್ಚಿನ ಪ್ರಯೋಜನ ಪಡೆಯುವ ಸಲುವಾಗಿ, ಶಿಲೀಂಧ್ರಗಳನ್ನೂ, ಅವುಗಳ ಉತ್ಪನ್ನಗಳನ್ನೂ ಕೃಷಿಯಲ್ಲಿ ಬಳಸಲಾಗುತ್ತದೆ. ‘ಮೈಕೋರೈಝಲ್’ ಶಿಲೀಂಧ್ರಗಳನ್ನು ಜೈವಿಕಗೊಬ್ಬರವಾಗಿ ಉಪಯೋಗಿಸಲಾಗುತ್ತದೆ. ‘ಬ್ಯುವೆರಿಯಾ’, ‘ಫೈಟೋಪ್ತೋರಾ’, ‘ಟ್ರೈಕೊಡರ್ಮ’ದಂತಹ ಕೆಲವು ಶಿಲೀಂಧ್ರಗಳು ಗಿಡಹೇನು ಮತ್ತಿತರ ಕೀಟಗಳನ್ನು ನಿಯಂತ್ರಿಸುವ ಗುಣಲಕ್ಷಣಗಳನ್ನು ಪ್ರದರ್ಶಿಸುವುದರಿಂದ, ಅವುಗಳನ್ನು ಜೈವಿಕ ಕೀಟನಾಶಕಗಳಾಗಿ ಬಳಸಲಾಗುತ್ತದೆ.

ಶಿಲೀಂಧ್ರಗಳ ಮತ್ತೊಂದು ಮುಖ:
ಇಷ್ಟೆಲ್ಲಾ ಉಪಯುಕ್ತತೆಯ ತೆರೆಯ ಹಿಂದೆ ಶಿಲೀಂಧ್ರಗಳ ಭಯಂಕರ ಮುಖವೊಂದು ಅಡಗಿದೆ. ಅವು ಉಂಟುಮಾಡುವ ರೋಗಗಳ ಯಾದಿ ಚಿಕ್ಕದೇನಲ್ಲ; ಸಸ್ಯಗಳಲ್ಲಿ, ಪ್ರಾಣಿಗಳಲ್ಲಿ ಅಷ್ಟೇ ಅಲ್ಲದೇ ಮಾನವನಲ್ಲಿ ಕೂಡ ಕಂಡುಬರುವ ಮಾರಕ ರೋಗಗಳ ಹಿಂದೆ ಬ್ಯಾಕ್ಟೀರಿಯಗಳಷ್ಟೇ ಶಿಲೀಂಧ್ರಗಳ ಕೈವಾಡ ಕೂಡ ಇದೆ.
ಪ್ರಮುಖ ಆಹಾರ ಬೆಳೆಗಳಾದ ಅಕ್ಕಿ, ರಾಗಿ, ಜೋಳ ಹಾಗೂ ಗೋಧಿ ಬೆಳೆಗಳಲ್ಲಿ ಎಲೆಯ ಮೇಲೆ ಕಂದು ಬಣ್ಣದ ಚುಕ್ಕೆ ಮೂಡುವುದು, ಸೂಕ್ಷ್ಮವಾದ ಬಿಳಿ ಬಣ್ಣದ ಪುಡಿ ಕಂಡುಬರುವುದು, ತೆನೆಯು ಕೊಳೆಯುವುದು ಶಿಲೀಂಧ್ರಗಳ ಕಾರಣದಿಂದ. ವಾಣಿಜ್ಯ ಬೆಳೆಗಳಾದ ಹತ್ತಿ, ಕಾಫಿ, ಕಡಲೇಕಾಯಿ, ಕಬ್ಬು ಮತ್ತು ತರಕಾರಿ ಬೆಳೆಗಳು ಕೂಡ ಶಿಲೀಂಧ್ರಗಳ ದಾಳಿಯಿಂದ ಸೊರಗುತ್ತವೆ ಮತ್ತು ರೈತನಿಗೆ ಅಪಾರ ನಷ್ಟವನ್ನು ಉಂಟುಮಾಡುತ್ತವೆ. ‘ಸರ್ಕೊಸ್ಪೋರ’, ‘ಉಸ್ಟಿಲಾಗೋ’, ‘ಸ್ಕ್ಲೀರೋಸ್ಪೋರ’, ‘ಫ್ಯುಸೇರಿಯಂ’ ಸೇರಿದಂತೆ ಬಹುಪಾಲು ಶಿಲೀಂಧ್ರಗಳು ಸಸ್ಯಗಳಲ್ಲಿ ರೋಗಕಾರಕ ಎಂಬುದು ಕಂಡುಬಂದಿದೆ.
ನಾಯಿ, ಬೆಕ್ಕು, ಹಸು, ಕೋತಿ, ಹಂದಿ, ಮೊಲ ಸೇರಿದಂತೆ ಎಲ್ಲಾ ಸಾಕು ಪ್ರಾಣಿಗಳಲ್ಲಿ ಮತ್ತು ವನ್ಯಮೃಗಗಳಲ್ಲಿ ಹಲವಾರು ರೋಗಗಳಿಗೆ ಕಾರಣ ಈ ಶಿಲೀಂಧ್ರಗಳು; ‘ಆಸ್ಪರ್ಜಿಲ್ಲೋಸಿಸ್’, ‘ಎಪಿಝೂಟಿಕ್ ಲಿಮ್ಪಾನ್ಜೈಟಿಸ್’, ಹುಳುಕಡ್ಡಿ, ಹಲವು ಬಗೆಯ ಅಲರ್ಜಿಗಳು, ಶ್ವಾಸಕೋಶ ಮತ್ತು ಚರ್ಮ ಸಂಬಂಧಿ ವ್ಯಾಧಿಗಳು ಇತ್ಯಾದಿ ‘ಮ್ಯುಕರ್’, ‘ರೈಝೋಪಸ್’, ‘ಆಸ್ಪರ್ಜಿಲ್ಲಸ್’ ಮತ್ತಿತರ ಶಿಲೀಂಧ್ರಗಳ ಕೊಡುಗೆ. ಸರಿಯಾದ ಸಮಯಕ್ಕೆ ಚಿಕಿತ್ಸೆ ಲಭ್ಯವಾಗದಿದ್ದಲ್ಲಿ ಪ್ರಾಣಕ್ಕೆ ಎರವಾಗುವ ಸಾಧ್ಯತೆ ಇಲ್ಲದಿಲ್ಲ.
ಮಾನವನಲ್ಲಿ ಇತರ ಪ್ರಾಣಿಗಳಂತೆಯೇ ಶ್ವಾಸಕೋಶ ಮತ್ತು ಚರ್ಮ ವ್ಯಾಧಿಗಳು, ಜೊತೆಗೆ ಕಣ್ಣು ಮತ್ತು ಕಿವಿಯ ಸೋಂಕು, ಗುಪ್ತಾಂಗಗಳ ಸೋಂಕು, ಇಷ್ಟೇ ಅಲ್ಲದೆ ಮೆದುಳಿಗೆ ಹಾನಿ ಮಾಡಿ ಮಾನಸಿಕ ಸ್ಥಿಮಿತ ತಪ್ಪಿಸುವ ರೋಗಗಳು ಕೂಡ ಶಿಲೀಂಧ್ರಗಳ ಕೈವಾಡದಿಂದ ಕಂಡುಬರುತ್ತವೆ. ‘ಹಿಸ್ಟೋಪ್ಲಾಸ್ಮ’, ‘ಕ್ಯಾಂಡಿಡಾ ಆಲ್ಬಿಕನ್ಸ್’,’ಕ್ಲಾಡೋಸ್ಪೋರಿಯಂ’ನಂತಹ ಹಲವು ರೋಗಕಾರಕ ಶಿಲೀಂಧ್ರಗಳು ನಮ್ಮ ಸುತ್ತಲಿನ ಗಾಳಿ, ನೀರು ಮತ್ತು ಮಣ್ಣಿನಲ್ಲಿ ಹೇರಳವಾಗಿ ಲಭ್ಯವಿದ್ದು ರೋಗಗಳನ್ನು ಉಂಟುಮಾಡಲು ಹವಣಿಸುತ್ತಿರುತ್ತವೆ. ಇದಕ್ಕೆ ಕಾರಣ, ಅವು ನಮ್ಮೊಳಗೇ ಹೊಕ್ಕು, ನಮ್ಮ ಜೀವರಾಸಾಯನಿಕ ಪ್ರಕ್ರಿಯೆಗಳನ್ನು ತಮ್ಮ ಆದೇಶಕ್ಕೆ ಅನುಗುಣವಾಗಿ ಕುಣಿಸಿ, ತಮ್ಮ ಜೀವರಾಸಾಯನಿಕ ಪ್ರಕ್ರಿಯೆಗಳನ್ನು ಪೂರೈಸಿಕೊಳ್ಳಬೇಕಾಗುತ್ತದೆ. ಇಲ್ಲಿ ಯಾರ ಪ್ರತಿರಕ್ಷಣಾ ವ್ಯವಸ್ಥೆಯು ಹೆಚ್ಚು ಶಕ್ತವೋ ಅವರು ಜಯಿಸುವ ಸಾಧ್ಯತೆ ಹೆಚ್ಚು. ನೈಸರ್ಗಿಕವಾಗಿ ನಮ್ಮ ಪ್ರತಿರಕ್ಷಣಾ ವ್ಯವಸ್ಥೆಗೆ ಕುಂದುಬಂದಿದ್ದರೆ, ಅದನ್ನು ಶಕ್ತಗೊಳಿಸಲು ಆರೋಗ್ಯಪೂರ್ಣ ಜೀವನಶೈಲಿಯ ಜೊತೆಗೆ ಬೇಕಾದಷ್ಟು ಔಷಧಿಗಳು ಲಭ್ಯ. ಆ ಔಷಧಿಗಳ ತಯಾರಿಗೇನಾದರೂ ಶಿಲೀಂಧ್ರಗಳನ್ನು ಬಳಸಿದ್ದರೆ, ಶಿಲೀಂಧ್ರವೇ ಶಿಲೀಂಧ್ರದ ವಿರುದ್ಧ ಹೋರಾಡಿದಂತೆ. ಇದನ್ನೂ, ಕೆರೆಯ ನೀರನ್ನು ಕೆರೆಗೆ ಚೆಲ್ಲುವುದು ಎನ್ನಬಹುದೇನೋ!

– ಕ್ಷಮಾ.ವಿ.ಭಾನುಪ್ರಕಾಶ್