ಆಟೋಟ, ನೃತ್ಯ, ಗಾಯನ, ಪರ್ವತಾರೋಹಣ, ಉಸಿರಾಟ, ಹೃದಯದ ಬಡಿತ, ಅನ್ನನಾಳದ ಮೂಲಕ ಆಹಾರ ಸಾಗಣೆ, ಕಣ್ಣಾಡಿಸುವಿಕೆ, ಭಾವನೆಗಳನ್ನು ತೋರುವ ಮುಖಚರ್ಯೆ – ಹೀಗೆ ದೇಹದ ಪ್ರತಿಯೊಂದು ಕಾರ್ಯ ಮತ್ತು ಕಾರಣಗಳಿಗೆ ಸ್ಪಂದಿಸುವ ಅಂಗವ್ಯೂಹವೇ ಸ್ನಾಯುಗಳು.

ಮಾನವ, ಮೂಳೆ-ಮಾಂಸದ ತಡಿಕೆ ಎನ್ನುತ್ತೇವೆ. ದೇಹದ ಮೂಳೆಗಳು ಆಧಾರ ಸ್ತಂಭದಂತೆ ಆಕೃತಿ ಮತ್ತು ವಿನ್ಯಾಸವನ್ನು ನೀಡಿದರೆ, ಚರ್ಮ ಇಡೀ ಶರೀರಕ್ಕೆ ರಕ್ಷಣಾ ಹೊದಿಕೆಯಾಗಿ ದೇಹವನ್ನು ಕಾಪಾಡುತ್ತದೆ. ಈ ಮೂಳೆ ಮತ್ತು ಚರ್ಮದ ನಡುವಿನ ಸ್ನಾಯುಗಳೇ ಶರೀರದ ತಿರುಳು. ಮಾಂಸಾಹಾರಿಗಳು ಭಕ್ಷಿಸುವ ಮಾಂಸವೆಂದರೆ ತಿರುಳಿರುವ ಸ್ನಾಯುಗಳು.

ಸ್ನಾಯುಗಳು ದೇಹದ ಯಾಂತ್ರಿಕ ಕ್ರಿಯೆಗೆ ಸಹಾಯಕ. ಇವು ಶಾಖ ಮತ್ತು ಶಕ್ತಿಯನ್ನು ಒದಗಿಸುವ ಕಾರ್ಖಾನೆಗಳೆನ್ನಬಹುದು. ದೇಹದಲ್ಲಿರುವ ಸ್ನಾಯುಗಳನ್ನು ಅವುಗಳ ಕಾರ್ಯ ಮತ್ತು ಸೂಕ್ಷ್ಮರಚನೆ ಹಾಗೂ ಅವುಗಳ ನೆಲೆ ಅಥವಾ ಸ್ಥಾನಕ್ಕೆ ಅನುಗುಣವಾಗಿ ಮೂರು ವಿಧದ ಸ್ನಾಯುಗಳಾಗಿ ಗುರುತಿಸಬಹುದು. ಅವೇ ಕಂಕಾಲ ಸ್ನಾಯು, ಒಳಾಂಗ ಸ್ನಾಯು ಮತ್ತು ಹೃದಯ ಸ್ನಾಯುಗಳು.

ಕಂಕಾಲ ಸ್ನಾಯು ದೇಹದ ಮೂಳೆಗಳಿಗೆ ಹೊಂದಿಕೊಂಡಿರುವಂತಹದ್ದು. ಈ ಸ್ನಾಯುಗಳನ್ನು ಸ್ವಪ್ರೇರಣೆಯಿಂದ ಚಲಿಸಬಹುದಾದ್ದರಿಂದ ಇವನ್ನು ಐಚ್ಛಿಕ (voluntary) ಸ್ನಾಯುಗಳೆನ್ನುತ್ತೇವೆ. ತಲೆ, ಎದೆ, ಕೈಕಾಲುಗಳು ಮತ್ತು ಚರ್ಮಕ್ಕೆ ಹೊಂದಿಕೊಂಡಿರುವ ಸ್ನಾಯುಗಳೆಲ್ಲವೂ ಕಂಕಾಲ ಸ್ನಾಯುಗಳು. ಇವು ಅವುಗಳ ಸ್ಥಾನಕ್ಕನುಗುಣವಾಗಿ ಬೇರೆ ಬೇರೆ ಉದ್ದ, ದಪ್ಪ, ಅಗಲಗಳಾಗಿ ಹರಡಿವೆ. ಈ ಸ್ನಾಯುಗಳು ಸ್ನಾಯುತಂತುಗಳಿಂದಾಗಿವೆ. ಈ ತಂತುಗಳು ಸಮಾನಾಂತರವಾದ ಸಣ್ಣ, ಸಣ್ಣ ಕಟ್ಟುಗಳಂತೆ ಜೋಡಿಸಲ್ಪಟ್ಟಿವೆ. ಪ್ರತಿಯೊಂದು ಸ್ನಾಯು ಇಂತಹ ಅನೇಕ ಕಟ್ಟುಗಳಿಂದಾಗಿದೆ. ಪ್ರತಿಯೊಂದು ಸ್ನಾಯುತಂತುವು ಸಾರ್ಕೋಲೆಮ್ಮ ಎಂಬ ಪೊರೆಯಿಂದ ಆವೃತವಾಗಿರುವುದು. ಇಂತಹ ಅನೇಕ ಸ್ನಾಯು ತಂತುಗಳ ಕಟ್ಟು ಎಂಡೋಮೈಸಿಯಂ ಪೊರೆಯಿಂದ, ಈ ಕಟ್ಟುಗಳು ಪೆರಿಮೈಸಿಯಂ ಪೊರೆಯಿಂದ ಆವೃತವಾಗಿರುತ್ತವೆ. ಪೆರಿಮೈಸಿಯಂ ಪೊರೆಯಿಂದ ಆವೃತವಾದ ಅನೇಕ ದಡುಗಟ್ಟುಗಳ ದಪ್ಪ ಕಟ್ಟು, ಎಪಿಮೈಸಿಯಂ ಎಂಬ ಪೊರೆಯಿಂದ ಒಂದು ದೊಡ್ಡ ಸ್ನಾಯುವಾಗಿ, ಬಿಗುಪಟ್ಟಿಯ ಮೂಲಕ ಮೂಳೆಗಳಿಗೆ ಬಂಧಿತವಾಗಿರುತ್ತದೆ. ಈ ಪ್ರತಿಯೊಂದು ಸ್ನಾಯುಕಟ್ಟುವೂ ರಕ್ತನಾಳ ಮತ್ತು ನರಗಳನ್ನು ಹೊಂದಿರುತ್ತದೆ.

ಕಂಕಾಲ ಸ್ನಾಯುವಿನ ಅಡ್ಡಕೊಯ್ತ

ಮಾನವ ದೇಹದಲ್ಲಿ ಸುಮಾರು 650 ಕಂಕಾಲ ಸ್ನಾಯುಗಳನ್ನು ಹೆಸರಿಸಲಾಗಿದೆ. ಇವುಗಳನ್ನು 840 ಕಟ್ಟುಗಳಂತೆ ಗುರುತಿಸಬಹುದೆಂಬ ಅಭಿಪ್ರಾಯ ಕೆಲವರದ್ದು.

ಒಟ್ಟಾರೆ ಸ್ನಾಯುಗಳು ದೇಹದ ಸೇಕಡ 40 ರಿಂದ 50 ರಷ್ಟು ತೂಕವನ್ನು ಭರಿಸುತ್ತವೆ. ಸ್ನಾಯುಗಳೊಂದಿಗೆ ಕೀಲುಗಳು ಮತ್ತು ಮೂಳೆಯ ಸಂಧಿಗಳು ಪರಸ್ಪರ ಹೊಂದಾಣಿಕೆಯಿಂದ ಕಾರ್ಯ ನಿರ್ವಹಿಸುವುದರಿಂದ ಇಡೀ ಭೌತಿಕ ಮತ್ತು ಯಾಂತ್ರಿಕ ವ್ಯವಸ್ಥೆಯನ್ನು ಸ್ನಾಯು-ಅಸ್ಥಿವ್ಯೂಹ ಎನ್ನಬಹುದು.

ಸ್ನಾಯು ಚಲನೆಯಲ್ಲಿ ಎರಡು ವಿರುದ್ಧ ನಡವಳಿಕೆಯ ಸ್ನಾಯುಗಳು ಒಂದಕ್ಕೊಂದು ಪೂರಕವಾಗಿ ಕಾರ್ಯನಿರ್ವಹಿಸುತ್ತವೆ. ಉದಾಹರಣೆಗೆ ಕೈ ಆಡಿಸುವಾಗ ತೋಳಿನ ಮುಂಭಾಗದಲ್ಲಿ ಉಬ್ಬುವ ಸ್ನಾಯು ಬೈಸೆಪ್ಸ್, ಅದಕ್ಕೆ ವಿರುದ್ಧವಾಗಿ ಕಾರ್ಯನಿರ್ವಹಿಸುವುದು ಟ್ರೈಸೆಪ್ಸ್ ಸ್ನಾಯು. ಯಾವ ಸ್ನಾಯು ಕೀಲಿ/ಸಂಧಿಯನ್ನು ಬಾಗಿಸಲು ಸಹಾಯಕವೋ ಅವನ್ನು ಮಡಿಚಿಕೆ (Flexor) ಸ್ನಾಯು ಎನ್ನುತ್ತೇವೆ. ಯಾವುದು ಸಂಧಿಯನ್ನು ಬಿಚ್ಚಲು ಸಹಾಯಕವೋ ಅವು ಹಿಂಚಾಚಿಕೆ (Extensor) ಸ್ನಾಯುಗಳು.

ಗರಿಷ್ಠ ಗಾತ್ರದ ಸ್ನಾಯು: ಪಿರ್ರೆ ಅತವಾ ಕುಂಡಿಯ ಭಾಗದಲ್ಲಿರುವ ಅತ್ಯಂತ ಗರಿಷ್ಠ ಮತ್ತು ಬಲಿಷ್ಠ ಸ್ನಾಯುವೇ ಗ್ಲೂಟಿಯಸ್ ಮಾಕ್ಸಿಮಸ್ (ಪಿರ್ರೆಯ ಮಹತ್ತಮ ಸ್ನಾಯು). ಕೈಯನ್ನು ಸೊಂಟದ ಹಿಂದಕ್ಕೆ ಇಟ್ಟಾಗ ಪ್ರಧಾನವಾಗಿ ಅನುಭವಕ್ಕೆ ಬರುವ ಸ್ನಾಯು ಇದೇ. ಈ ಭಾಗದಲ್ಲಿ ಮೂರು ಮುಖ್ಯ ಸ್ನಾಯುಕಟ್ಟುಗಳಿವೆ. ಅವೇ ಗ್ಲೂಟಿಯಸ್  ಮಾಕ್ಸಿಮಸ್, ಗ್ಲೂಟಿಯಸ್ ಮೀಡಿಯಸ್  ಮತ್ತು ಗ್ಲೂಟಿಯಸ್ ಮಿನಿಮಸ್.ಈ ಸ್ನಾಯುಕಟ್ಟುಗಳು ಗುರುತ್ವಕ್ಕೆ ವಿರುದ್ಧವಾಗಿ ಚಲಿಸುವುದರಿಂದ ಇವನ್ನು ಪ್ರತಿಗುರುತ್ವ ಸ್ನಾಯುಗಳೆನ್ನಬಹುದು. ಮೆಟ್ಟಿಲು ಏರುವಾಗ ಇವು ಸಹಾಯಕ. ನಮ್ಮ ಪೂರ್ವಿಕರಾದ ಗೊರಿಲ್ಲ, ಚಿಂಪಾಜಿಗಳಿಗೆ ಹೋಲಿಸಿದರೆ ನಮ್ಮಲ್ಲಿ ಇದು ಭಾರಿ ಪ್ರಮಾಣದಲ್ಲಿ ವಿಕಾಸಗೊಂಡಿದೆ ಎನ್ನಬಹುದು. ಮಾಕ್ಸಿಮಸ್ ಸ್ನಾಯು, ಸೊಂಟದ ಮೂಳೆಯ ಅಗಲ ಭಾಗವಾದ ಇಲಿಯಂ (ಟೊಂಕೆಲುಬು) ಮತ್ತು ಪವಿತ್ರ ಟೊಂಕ (ಸೇಕ್ರಂ)ಗಳು ಹಾಗೂ ತೊಡೆಮೂಳೆಯಾದ ಫೀಮರ್‌ಗೆ ಬಂಧಿತವಾಗಿದೆ. ಇದರಿಂದಾಗಿ ನಾವು ತೊಡೆ ಭಾಗವನ್ನು ಪಕ್ಕಕ್ಕೆ, ಮುಂದಕ್ಕೆ ಮತ್ತು ದೇಹ ಭಾಗದಿಂದ ದೂರಕ್ಕೆ ಚಲಿಸಲು ಅನುಕೂಲವಾಗಿದೆ.

ಗ್ಲೂಟಿಯಸ್ ಮಾಕ್ಸಿಮಸ್

ಮಹತ್ತಮ ಅಗಲ ಸ್ನಾಯು: ಲಾಟಿಸ್ಮಸ್ ಡಾರ್ಸೈ (ಬೆನ್ನಿನ ಅಗಲತಮ ಸ್ನಾಯು) – ಇದು ಬೆನ್ನಿನ ಮಧ್ಯಭಾಗಕ್ಕೆ ಹರಡಿದೆ. ಲಾಟಿಸ್ಮಸ್ ಪದ ಅತ್ಯಂತ ವಿಸ್ತಾರ ಎಂಬ ಅರ್ಥ ಕೊಡುತ್ತದೆ. ಈ ಸ್ನಾಯು ಕಟ್ಟುಗಳು ಚಪ್ಪಟೆಯಾಗಿದ್ದು ಕೆಳಗಿನ ಆರು ಬೆನ್ಮೂಳೆ, ಸೊಂಟದ ಬೆನ್ಮೂಳೆಗಳಿಗೆ ಹೊಂದಿಕೊಂಡು, ತೋಳ್ಮೂಳೆ (humerus)ಗೂ ಸಂಪರ್ಕ ಕಲ್ಪಿಸಿಕೊಂಡಿವೆ. ಇದರಿಂದ ಹೆಗಲು ಮತ್ತು ತೋಳನ್ನು ಹಿಂಭಾಗ, ಮುಂಭಾಗ, ಕೆಳಭಾಗಕ್ಕೆ ಬಾಗಿಸಲು ಸಾಧ್ಯ. ಇವು ವೇಗದ ಉಸಿರಾಟದಲ್ಲೂ ಸಹಾಯಕ. ವಿಶೇಷವಾಗಿ ಕೆಮ್ಮುವಾಗ ಮತ್ತು ಸೀನುವಾಗ ಇವು ನೆರವಾಗುತ್ತವೆ.

ಲಾಟಿಸ್ಮಸ್ ಡಾರ್ಸೈ ಸ್ನಾಯು

ಅತ್ಯಂತ ಉದ್ದ ಸ್ನಾಯು: ಇದೇ ಸಾರ್‌ಟೋರಿಯಸ್ (ದರ್ಜಿಸ್ನಾಯು). ಇದು ಸೊಂಟದ ಬೋಗುಣಿಯ ಭಾಗದಿಂದ ಹೊರಟು ಮೊಣಕಾಲಿನವರೆಗೂ ಒಂದು ಸಣ್ಣ ಪಟ್ಟಿಯಂತೆ ಇಳಿಯುತ್ತದೆ. ಇದು ಸುಮಾರು 60 ಸೆಂ.ಮೀ.ನಷ್ಟು ಉದ್ದವಿರಬಹುದು. ಕಾಲುಗಳನ್ನು ದೇಹಭಾಗದ ಹತ್ತಿರಕ್ಕೆ ಹಾಗೂ ಕಾಲಿನ ಮೇಲೆ ಕಾಲು ಹಾಕುವುದಕ್ಕೆ ಈ ಸ್ನಾಯುಕಟ್ಟು ಸಹಾಯಕ.

ಅತ್ಯಂತ ಬಲಿಷ್ಠ ಸ್ನಾಯು: ಮಾಸೆಟರ್ (ಮೆಲ್ಲುವ ಸ್ನಾಯುಗಳು) ದವಡೆಗೆ ಸೇರಿಕೊಂಡಂತೆ, ಹಲ್ಲುಗಳಿಂದ ಆಹಾರವನ್ನು ಕತ್ತರಿಸಲು ಸಹಾಯ ಮಾಡುವ ಸ್ನಾಯುಕಟ್ಟುಗಳು.

ನಡೆಯಲು, ಓಡಲು, ಕುಣಿಯಲು ಸಹಾಯಕವಾಗುವ ಬಲಿಷ್ಠ ಸ್ನಾಯುಗಳು ಮೀನಖಂಡದಲ್ಲಿವೆ. ಇವೇ ಗಾಸ್ಟ್ರೋನೆಮಿಯಸ್ ಮತ್ತು ಸೋಲಿಯಸ್ ಸ್ನಾಯುಕಟ್ಟುಗಳು.

ಈ ಸ್ನಾಯುಕಟ್ಟುಗಳು ದೇಹವನ್ನು ನೆಟ್ಟಗೆ ನಿಲ್ಲಿಸಲು ಹಾಗೂ ಹಿಂಭಾಗಕ್ಕೆ ಬೀಳದಂತೆ ತಡೆಯಲು, ಗುರುತ್ವಕ್ಕೆ ವಿರುದ್ಧವಾಗಿ ಎಳೆಯಲು ಸಹಾಯಕ.

ಮಾಸೆಟರ್ ಸ್ನಾಯು

ನಾಲಿಗೆಯ ಸ್ನಾಯು ಕಟ್ಟುಗಳು: ಬಹುಮುಖಿಯಾಗಿ ಕಾರ್ಯನಿರ್ವಹಿಸುವ ಸ್ನಾಯುಕಟ್ಟುಗಳ ವಿಶೇಷವಾದ ಜೋಡಣೆಯಿಂದಾದ ಈ ಅಂಗ ಅತ್ಯಂತ ಬಲಿಷ್ಠ ಮತ್ತು ಪ್ರಭಾವಶಾಲಿ. ತಿಂದ ಆಹಾರವನ್ನು ಕಲೆಸಲು, ಮಾತನಾಡಲು, ತನ್ನ ಹಿಂಬದಿಯಲ್ಲಿರುವ ಗಲಗ್ರಂಥಿ (ಟಾನ್ಸಿಲ್) ಮೂಲಕ ದೇಹಕ್ಕೆ ಸೋಂಕಿನಿಂದ ರಕ್ಷಣೆ ನೀಡಲು ಇದು ಸಹಾಯಕ.

ನಾಲಿಗೆಯ ಸ್ನಾಯು ಕಟ್ಟುಗಳು

ಇದೆಲ್ಲಕ್ಕಿಂತಲೂ ಬಲಿಷ್ಠವಾದ ಸ್ನಾಯುಕಟ್ಟುಗಳು ಗರ್ಭಕೋಶದಲ್ಲಿವೆ. ಇವು ಕಂಕಾಲ ಸ್ನಾಯುಕಟ್ಟುಗಳಲ್ಲ. ಒಳಾಂಗ ಅನೈಚ್ಛಿಕ (involuntary) ಸ್ನಾಯುಕಟ್ಟುಗಳು. ಈ ಸ್ನಾಯು ಕಟ್ಟುಗಳು ಪ್ರಸವಕಾಲದಲ್ಲಿ ಮಗುವನ್ನು ಗರ್ಭಕೋಶದಿಂದ ಹೊರದೂಡಲು ಬೇಕಾಗುವ ಬಲ ನೀಡುವುವು. ಈ ಸ್ನಾಯುಗಳ ಉತ್ತೇಜನಕ್ಕೆ ಚೋದಕ ನೆರವಾಗುವುದು. ಈ ಚೋದಕ ಪಿಟ್ಯುಟರಿ ಗ್ರಂಥಿ ಸ್ರವಿಸುವ ಆಕ್ಸಿಟೋಸಿನ್.

ಗರ್ಭಕೋಶ ಸ್ನಾಯುಗಳು

ಅತ್ಯಂತ ಕನಿಷ್ಠ ಗಾತ್ರದ ಸ್ನಾಯು ಕಟ್ಟು: ಮಧ್ಯಕಿವಿ (ನಡುಗಿವಿ) ಸ್ನಾಯುಕಟ್ಟು (ಸ್ಟೆಪೀಡಿಯಸ್). ಮಧ್ಯ ಕಿವಿಯಲ್ಲಿ ಮೂರು ಅತ್ಯಂತ ಚಿಕ್ಕ ಮೂಳೆಗಳಿವೆ. ಅವೇ ಮ್ಯಾಲಿಯಸ್, ಇಂಕಸ್ ಮತ್ತು ಸ್ಟೇಪ್ಸ್ (ಸ್ಟಿರಪ್). ಈ ಸ್ಟೇಪ್ಸ್ ಮೂಳೆಗೆ ಅಂಟಿಕೊಂಡಂತೆ ಅತ್ಯಂತ ಕನಿಷ್ಠ ಸ್ನಾಯು ಕಟ್ಟು ಬಿಗಿದುಕೊಂಡಿದೆ. ಇದೇ ಸ್ಟೆಪೀಡಿಯಸ್ ಸ್ನಾಯು. ಇದರ ಉದ್ದ ಕೇವಲ 1.25 ಮಿಲಿಮೀಟರ್. ಎರಡು ಸಣ್ಣ ಗೆರೆಗಳಂತೆ ಕಾಣುವ ಇದರ ತೂಕ ಅತ್ಯಂತ ಚಿಕ್ಕ ತೂಕಮಾನವಾದ ಒಂದು ಗ್ರೇನ್ (0.065 ಗ್ರಾಮ್). ಈ ಸ್ನಾಯು ನಡುಗಿವಿಯ ಮೂಳೆಗಳನ್ನು ಸರಪಳಿಯಂತೆ ತಾಡಿಸಿ ಶಬ್ದ ತರಂಗವನ್ನು ಒಳಗಿವಿಗೆ ರವಾನಿಸುತ್ತದೆ.

ಅತ್ಯಂತ ಚಟುವಟಿಕೆಯ ಸ್ನಾಯುಕಟ್ಟುಗಳು: ಕಣ್ಣಿನ ಸ್ನಾಯುಕಟ್ಟಿನಲ್ಲಿ ನಿರಂತರವಾಗಿ ಕಣ್ಣನ್ನು ಚಲಿಸುವಂತೆ ಮಾಡಿ, ನೋಟವನ್ನು ಪ್ರಭಾವಶಾಲಿಯಾಗಿಸುವ ಸ್ನಾಯುಗಳಿವೆ. ಒಂದು ಗಂಟೆಯ ಕಾಲ ಗಮನವಿಟ್ಟು ಪುಸ್ತಕವನ್ನು ಓದುವಾಗ ನಮ್ಮ ಕಣ್ಣುಗಳು ಕನಿಷ್ಠ 10,000 ಬಾರಿ ತನ್ನ ಕಣ್ಣಾಲಿಗಳನ್ನು ಚಲಿಸಲು, ಸ್ನಾಯುಗಳನ್ನು ಪೂರಕವಾಗಿ ಬಳಸುವುದೆಂದು ಅಂದಾಜಿಸಲಾಗಿದೆ.

ಮುಖಚರ್ಯೆ ಬದಲಿಕೆಯ ಸ್ನಾಯುಗಳು: ಅಳು, ನಗು, ಸಿಟ್ಟು, ಸಿಡುಕು, ಹಾವ-ಭಾವಗಳ ಪ್ರದರ್ಶನದಲ್ಲಿ ಮುಖದಲ್ಲಿರುವ ಸುಮಾರು 36 ಸ್ನಾಯುಕಟ್ಟುಗಳು ಪಾಲ್ಗೊಳ್ಳುತ್ತವೆ. ನಗುವಾಗ ಬಳಸುವ ಸ್ನಾಯುಗಳಿಗಿಂತ ಅಳುವಾಗ ಹೆಚ್ಚಿನ ಸಂಖ್ಯೆಯ ಸ್ನಾಯುಗಳು ಪಾಲ್ಗೊಳ್ಳುವುವೆಂದು ವಿವರಿಸಲಾಗಿದೆ.

ಸಮರ್ಥ ಕಾರ್ಯಾಚರಣೆಯ ಸ್ನಾಯು: ಹೃದಯ ಸ್ನಾಯು – ಜೀವಾಂಕುರದ ಒಂದು ತಿಂಗಳಿನಲ್ಲಿ ಬಡಿದುಕೊಳ್ಳಲಾರಂಭಿಸುವ ಹೃದಯ ಜೀವಮಾನದುದ್ದಕ್ಕೂ ನಿರಂತರವಾಗಿ ಬಡಿಯುತ್ತಲೇ ಇರುತ್ತದೆ. ಸಾಧಾರಣವಾಗಿ ಒಂದು ಬಡಿತದ ಕಾಲ 0.8 ಸೆಕೆಂಡುಗಳು. ಈ ಅವಧಿಯಲ್ಲಿ ಹೃತ್ಕರ್ಣ ಮತ್ತು ಹೃತ್ಕುಕ್ಷಿ ಒಂದರನಂತರ ಮತ್ತೊಂದು ಸಂಕೋಚನ ಮತ್ತು ವ್ಯಾಕೋಚನಗೊಳ್ಳುತ್ತವೆ. ತೆಳು ಭಿತ್ತಿಯ ಹೃತ್ಕರ್ಣ 0.1 ಸೆಕೆಂಡುಗಳಷ್ಟು ಸಂಕುಚಿಸಿ ಉಳಿದ 0.7 ಸೆಕೆಂಡುಗಳ ಕಾಲ ವ್ಯಾಕೋಚನ ಸ್ಥಿತಿಯಲ್ಲಿದ್ದು ವಿಶ್ರಮಿಸಿದರೆ, ದಪ್ಪ ಭಿತ್ತಿಯ ಹೃತ್ಕುಕ್ಷಿ 0.3 ಸೆಕೆಂಡುಗಳಷ್ಟು ಅವಧಿ ಸಂಕುಚಿಸಿ ಉಳಿದ 0.5 ಸೆಕೆಂಡುಗಳು ಕಾಲ ವ್ಯಾಕೋಚನ ಸ್ಥಿತಿಯಲ್ಲಿರುವುದು. ಒಟ್ಟಾರೆ ಹೃದಯ ಸ್ನಾಯುಗಳು ತಮ್ಮ ಬಡಿತದ 0.8 ಸೆಕೆಂಡುಗಳಲ್ಲಿ ಸೇಕಡ 50ರಷ್ಟು ಕಾಲ (0.4 ಸೆಕೆಂಡುಗಳು) ಕಾರ್ಯನಿರ್ವಹಿಸುತ್ತವೆ. ಉಳಿದ ಅರ್ಧ ಅವಧಿಯಲ್ಲಿ ವ್ಯಾಕೋಚನ ಸ್ಥಿತಿಯಲ್ಲಿರುವುದರಿಂದ ಕಾರ್ಯದ ನಡುವೆಯೇ ವಿರಾಮ ಪಡೆದು, ಸಮರ್ಥವಾಗಿ ಜೈವಿಕ ಕ್ರಿಯೆ ನಡೆಸುವ ತಂತ್ರಗಾರಿಕೆ ತೋರುತ್ತವೆ. ಇವು ಅನೈಚ್ಛಿಕ ಸ್ನಾಯುಗಳಾದರೂ ಸಮರ್ಥ ಕಾರ್ಯವಿಧಾನಕ್ಕಾಗಿ ವಿಶೇಷವಾದ ಸೂಕ್ಷ್ಮರಚನೆಯನ್ನು ತೋರುತ್ತವೆ.