ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನಲ್ಲಿ (ತೊಂಬತ್ತರ ದಶಕದ ಪ್ರಾರಂಭದಲ್ಲಿ) ಸಾವಯವ ಕೃಷಿಯ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಒಂದಷ್ಟು ಜನ ಆಸಕ್ತರು ಸೇರಿ ಕಾರ್ಯಕ್ರಮ ರೂಪಿಸತೊಡಗಿದರು. ಅವರಲ್ಲಿ ಕೆ. ಪಿ. ಸುರೇಶ, ಜಿ. ಎಸ್. ಉಬರಡ್ಕ, ಶಿವರಾಂ ಪೈಲೂರ್, ಎಂ. ಟಿ. ಶಾಂತಿಮೂಲೆ ಮುಂತಾದವರಿದ್ದರು. ಸುಳ್ಯ ತಾಲ್ಲೂಕಿನ ಕುಕ್ಕುಜಡ್ಕ ಎಂಬ ಊರಿನಲ್ಲಿ ಸಭೆ. ತೇಜಸ್ವಿಯವರನ್ನು ಅತಿಥಿಯಾಗಿ ಆಹ್ವಾನಿಸಿದ್ದರು. (ತಾರಿಣಿಯವರ ಪತಿ ಚಿದಾನಂದಗೌಡರ ಊರು ಅಲ್ಲೇ ಪಕ್ಕದಲ್ಲಿದೆ).

ಸಭೆಗೆ ತೇಜಸ್ವಿಯವರ ಜೊತೆ ವಿಜ್ಞಾನಿ ಚಂದ್ರಶೇಖರ್, ಪ್ರದೀಪ್ ಕೆಂಜಿಗೆ ಹಾಗೂ ರಾಜೇಶ್ವರಿ ಬಂದಿದ್ದರು. ಇವರೆಲ್ಲರೂ ಕಾರಿನಲ್ಲಿ ಬಂದಿಳಿದಾಗ ಅತಿಥಿಗಳನ್ನು ಕಂಡು ಸಂತೋಷದ ಜೊತೆಗೆ ‘ಕಾರಿನಲ್ಲಿ ಬಂದಿದ್ದಾರೆ ಖರ್ಚು ಕೊಡದಿದ್ದರೆ ಹೇಗೆ’ ಎಂಬ ಆತಂಕವೂ ಸಂಘಟಕರಿಗೆ ಆಯಿತು.

ಸಾವಯವ ಕೃಷಿಯ ಬಗ್ಗೆ ಅಲ್ಲಿನ ಕೆಲವರಲ್ಲದೆ ಚಂದ್ರಶೇಖರ್ ಅವರೂ ಮಾತನಾಡಿದರು. ನಂತರ ತೇಜಸ್ವಿ ಮಾತನಾಡುತ್ತ, ಆಧುನಿಕ ಕೃಷಿಯ ಮತ್ತು ಆಧುನಿಕ ವಿಜ್ಞಾನದ ಅನಾಹುತಗಳ ಬಗ್ಗೆ ಎಚ್ಚರಿಕೆಯಿಂದಿರಬೇಕಾದ ನಾವು ವೈಜ್ಞಾನಿಕ ದೃಷ್ಟಿಕೋನವನ್ನೇ ನಿರಾಕರಿಸುವಂತಾಗಬಾರದು, ಕೃಷಿ ವಿಜ್ಞಾನಿಗಳಿಗಿಂತ ಕೃಷಿಕ ವಿಜ್ಞಾನಿಯಾಗುವುದು ಮುಖ್ಯ ಎಂದರು.

ಎರೆಹುಳುಗಳ ಬಗ್ಗೆ ಮಾತನಾಡುತ್ತಾ ‘ನಾವೆಲ್ಲ ಎರೆಹುಳು ರೈತನ ಗೆಳೆಯ ಎಂಬ ಪಾಠವನ್ನು ಓದಿದ್ದೇವೆ. ಈಗ ನೀವೂ ಎರೆಹುಳು ಸಾಕಿ ಎನ್ನುತ್ತಿದ್ದೀರಿ. ನಾನು ತೋಟದಲ್ಲಿ ನೆಡಲು ಒಂದಷ್ಟು ಕಾಫಿ – ಕುಕ್ಕೆ ಗಿಡಗಳನ್ನು ಮಾಡಿದ್ದೆ )ಕುಕ್ಕೆ ಗಿಡ – ಅಂದರೆ ಪಾಲಿಥೀನ್ ಬ್ಯಾಗ್‌ನಲ್ಲಿ ಮಾಡಿದ ನರ್ಸರಿ). ಅದರಲ್ಲಿ ಸಾಕಷ್ಟು ಎರೆಹುಳುಗಳಿದ್ದವು. ಅವಿದ್ದರೆ ಒಳ್ಳೆಯದು ಅಂದುಕೊಂಡು ಹಾಗೇ ಬಿಟ್ಟೆ, ಎರೆಹುಳುಗಳೆಲ್ಲ ದೊಡ್ಡವಾಗಿ ಕುಕ್ಕೆಯೊಳಗೆ ಮೇಲೆ ಕೆಳಗೆ ಹರಿದಾಡಿ ಮಣ್ಣೆಲ್ಲ ಸಡಿಲಾಗಿ ಹೋಯಿತು, ಗಿಡಗಳೆಲ್ಲ ಹಾಳಾದವು.’ ಎಂದರು. ಹೀಗೆ ಯಾವುದೇ ಹೊಸ ಪ್ರಯೋಗವಾದರೂ ರೈತನ ಅನುಭವದ ಪ್ರಯೋಗಶಾಲೆಯಲ್ಲೇ ಅದರ ಮೌಲ್ಯಮಾಪನ ಮತ್ತು ಅಗತ್ಯ ಬದಲಾವಣೆಯ ಅಳವಡಿಕೆ ಆಗಬೇಕು ಎಂದು ಸೂಚ್ಯವಾಗಿ ಹೇಳಿದರು. ಆದರೆ ತೇಜಸ್ವಿಯವರು ಸಾವಯವ ಕೃಷಿಯನ್ನು ಸಮರ್ಥಿಸಿ ಸುಧೀರ್ಘ ಭಾಷಣ ಮಾಡಬಹುದೆಂದು ನಿರೀಕ್ಷಿಸಿ ಬಂದಿದ್ದ ಕೆಲವರು, ಆ ಮಾತನ್ನು ತಮಾಷೆಯೆಂದು ಪರಿಗಣಿಸಿದ್ದೇ ಅಲ್ಲದೆ ತೇಜಸ್ವಿಯವರು ಎರೆಹುಳುಗಳ ಉಪಯೋಗದ ವಿರುದ್ಧವೇ ಮಾತನಾಡಿದರು ಅಂದುಕೊಂಡರು.

ಕಾರ್ಯಕ್ರಮ ಮುಗಿಸಿ ಅತಿಥಿಗಳು ಹೊರಡುವಾಗ ಸಂಘಟಕರು ಕವರಿನಲ್ಲಿ ಸ್ವಲ್ಪ ಹಣವನ್ನಿಟ್ಟು ಕೊಡಲು ಹೋದರೆ, “ಕಂಡಿದ್ದೀನಿ ಕಣ್ರಿ, ಇಷ್ಟೊಂದು ಕಷ್ಟಪಟ್ಕೊಂಡ್ ಕೆಲಸ ಮಾಡ್ತಾ ಇದ್ದೀರಿ. ಇಟ್ಕೊಳ್ರಿ” ಎಂದು ಸಂಭಾವನೆಯಿರಲಿ ದಾರಿ ಖರ್ಚನ್ನೂ ಸ್ವೀಕರಿಸಲು ನಿರಾಕರಿಸಿದರು.

* * *

೯೭ನೇ ಇಸವಿಯ ಸುಮಾರಿಗೆ ಒಂದು ದಿನ ಚಿಕ್ಕಮಗಳೂರಿಗೆ ಹೋದವನು ಹಿಂದಿರುಗುವಾಗ ಮೂಡಿಗೆರೆಯಲ್ಲಿ ಇಳಿದೆ. ಸಕಲೇಶಪುರದತ್ತ ಹೋಗುವ ಬಸ್ಸಿಗಾಗಿ, ಬಸ್ಟ್ಯಾಂಡಿನಲ್ಲಿ ಕಾಯುತ್ತ ಕುಳಿತಿದ್ದೆ. ನಾರಾಯಣಗೌಡ ನನ್ನ ಮುಂದೆ ತನ್ನ ಬೈಕನ್ನು ತಂದು ನಿಲ್ಲಿಸಿದ.

ಈತ ಹೈಸ್ಕೂಲಿನಲ್ಲಿ ನನ್ನ ಸಹಪಾಠಿ. ನಂತರ ಕೆಲವು ವರ್ಷ ದೂರಾಗಿದ್ದೆವಾದರೂ ರೈತ ಸಂಘ ಮತ್ತೆ ನಮ್ಮನ್ನು ಹತ್ತಿರ ತಂದಿತ್ತು. ಗೆಳೆತನ ಮತ್ತೊಮ್ಮೆ ಮುಂದುವರಿಯಿತು. ನಾರಾಯಣಗೌಡ ಮೂಡಿಗೆರೆಯ ಪಕ್ಕದ ಬಣಕಲ್ ಎಂಬ ಊರಿನವನು. ಅಲ್ಲೇ ಅವನಿಗೆ ಒಂದಷ್ಟು ಗದ್ದೆ – ತೋಟವೂ ಇದೆ. ಸಾಕಷ್ಟು ಅನುಕೂಲವಿದ್ದವನು. ಎಪ್ಪತ್ತರ ದಶಕದ ಆದಿಭಾಗದಲ್ಲೇ ಒಂದು ಸೆಕೆಂಡ್ ಹ್ಯಾಂಡ್ ಜಾವಾ ಬೈಕನ್ನು ಖರೀದಿಸಿದ್ದ. ಅದನ್ನು ಕಾಡು, ಗುಡ್ಡ, ಗದ್ದೆ ಎಲ್ಲೆಂದರಲ್ಲಿ ಓಡಿಸುತ್ತಿದ್ದ. ಗದ್ದೆಗೆ ಗೊಬ್ಬರ ಸಾಗಿಸುವುದರಿಂದ ಹಿಡಿದು ದನಗಳಿಗೆ ಹುಲ್ಲು ತರಲೂ ಅದನ್ನೇ ಬಳಸುತ್ತಿದ್ದ. ಚಿಕ್ಕಮಗಳೂರು – ಶಿವಮೊಗ್ಗದವರೆಗೂ ಅದರಲ್ಲೇ ಸಂಚರಿಸುತ್ತಿದ್ದ. ಆಗಲೇ ಇವನಿಗೆ ‘ಬೈಕ್ ನಾರಾಯಣಗೌಡ’ ಎಂಬ ಅಭಿದಾನ ಪ್ರಾಪ್ತವಾಗಿತ್ತು. ಬೈಕನ್ನು ಎಲ್ಲೆಂದರಲ್ಲಿ ನಿಲ್ಲಿಸಿ ರಿಪೇರಿ ಮಾಡುವ ಕಲೆ ನಾರಾಯಣ ಗೌಡನಿಗೆ ಕರಗತವಾಗಿತ್ತು. ಅದು ಹೇಗೋ ತೇಜಸ್ವಿಯವರೊಂದಿಗೆ ಈತನಿಗೆ ಸಂಪರ್ಕವಿತ್ತು. ಕೆಲವುಬಾರಿ ಅವರಲ್ಲಿಗೆ ಈತ ಹೋಗಿಬರುತ್ತಿದ್ದ. ಇದನ್ನೇ ನೆಪವಾಗಿಟ್ಟುಕೊಂಡು ಸಂದರ್ಭ ಸಿಕ್ಕಿದಾಗಲೆಲ್ಲ, ತೇಜಸ್ವಿಯವರಿಗೆ ಸ್ಕೂಟರ್ ರಿಪೇರಿಯನ್ನು ತಾನೇ ಹೇಳಿಕೊಟ್ಟುದ್ದಾಗಿ ರೀಲು ಬಿಡುತ್ತಿದ್ದ!

ನಾರಾಯಣ ಗೌಡ ನನ್ನನ್ನುದ್ದೇಶಿಸಿ “ಎತ್ಲಾಗೋ ಮಾರಾಯ” ಎಂದ.

“ಚಿಕ್ಮಗ್ಳೂರಿಗೋಗಿದ್ದೆ, ಈಗ ಊರಿಗೆ” ಎಂದೆ.

“ಬಾ ಇಲ್ಲೇ ತೇಜಸ್ವಿ ಮನೆತಂಕ ಹೋಗ್ಬರೋಣ ಬಾ” ಎಂದು ಕರೆದ.

ನನಗೆ ಅವನೊಂದಿಗೆ ಹೋಗುವ ಮನಸ್ಸಾದರೂ ಆಗಲೇ ಸಂಜೆ ನಾಲ್ಕಾಗುತ್ತ ಬಂದಿತ್ತು. ಬಸ್ಸು ತಪ್ಪಿದರೆ ಎಂಬ ಚಿಂತೆಯಾಯಿತು. ನಾನು ಬರುವುದಿಲ್ಲ ನೀನೆ ಹೋಗಿ ಬಾ ಎಂದೆ.

“ನನಿಗೆ ಒಬ್ನೇ ಹೋಗಕ್ಕೆ ಬೇಜಾರು, ಅಲ್ಲದೇ ಒಬ್ನೇ ಹೋದ್ರೆ ಮಾರಾಯ ಅವ್ರು ತುಂಬ ಹೊತ್ತು ಮಾತಾಡ್ತ ಕೂತ್ಕಂಡ್ಬಿಡ್ತಾರೆ, ಆಮೇಲ್ ಪಜೀತಿ, ಇಬ್ರಾದ್ರೆ ಏನಾರ ಹೇಳಿ ಬೇಗ ಹೊರಡ್ಬೋದು ಬಾ” ಎಂದ. ಅವನು ಹೇಳಿದ ದಾಟಿ ತೇಜಸ್ವಿಯವರಿಗೆ ಇವನಂತಹ ಆತ್ಮೀಯ ಸ್ನೇಹಿತ ಇನ್ನೊಬ್ಬರಿಲ್ಲ ಎನ್ನುವಂತಿತ್ತು.

ಈತನ ಮಾತಿನ ಬಗ್ಗೆ ನನಗೇನೋ ಅನುಮಾನವಾಯಿತು. ಆದ್ದರಿಂದ ತಪ್ಪಿಸಿಕೊಳ್ಳಲು ನೆಪ ಹುಡುಕುತ್ತಾ “ನಾನೀಗ ಅಲ್ಲಿಗೆ ಬಂದು ಐದು ಗಂಟೆ ಬಸ್ ತಪ್ಪಿದ್ರೆ ನಾನಿಲ್ಲೇ ಬಾಕಿ” ಎಂದೆ.

“ಬಾ ಆಮೇಲೆ ನಮ್ಮೂರಿಗೋಗಾಣ, ನಾಳೆ ನಾನು ಆ ಕಡೆ (ಸಕಲೇಶಪುರ) ಬರೋದಿತ್ತು ಜೊತೆಲೇ ಹೋಗಣ” ಎಂದು ಗಂಟುಬಿದ್ದ. ನನಗೆ ಇವತ್ತು ಊರಿಗೆ ಹೋಗಲೇ ಬೇಕೆಂದೂ ನಾಳೆ ಬೆಳಗ್ಗೆ ಮುಖ್ಯವಾದ ಕೆಲಸವಿರುವುದರಿಂದ ನಿಮ್ಮೂರಿಗೆ ಬಂದು ಉಳಿಯಲು ಸಾಧ್ಯವಿಲ್ಲವೆಂದು ಹೇಳಿದೆ.

“ಸರಿ ಹಂಗಾದ್ರೆ ಇವತ್ತೆ ನಾನು ಸಕಲೇಶಪುರಕ್ಕೆ ಬರ್ತೀನಿ, ನಿನ್ನ ಊರೀಗೇ ಬಿಡ್ತೀನಲ್ಲ ಬಾ, ಹೆಂಗೂ ನಿಂಗೆ ಬಸ್ ಚಾರ್ಜ್ ಉಳಿಯುತ್ತಲ್ಲ. ಅದು ದಾರೀಲಿ ಹಾನುಬಾಳಲ್ಲಿ ಸಾಯಂಕಾಲದ ಖರ್ಚಿಗಾಯ್ತು” ಎಂದು ಎಳೆದು ಬೈಕ್ ಹತ್ತಿಸಿದ. “ನಾಲ್ಕು ರುಪಾಯಿ ಉಳಿಸಿಕೊಟ್ಟು ನಲವತ್ತು ರುಪಾಯಿ ಖರ್ಚು ಮಾಡ್ಸೋ ಐಡಿಯಾ ಹಾಕ್ಬೇಡ, ನಿನಗಾಗಿ ಬರ್ತೀನೀ ಆದರೆ ಸಾಯಂಕಾಲದ ಖರ್ಚೆಲ್ಲ ನಿಂದೇ” ಎನ್ನುತ್ತಾ ಅವನೊಂದಿಗೆ ಹೊರಟೆ.

ನಾನೂ ತೇಜಸ್ವಿಯವರನ್ನು ಭೇಟಿ ಮಾಡದೆ ತುಂಬ ಸಮಯವಾಗಿತ್ತು. ಈಗ ನಾರಾಯಣ ಗೌಡ ಜೊತೆಯಲ್ಲಿ ಇರುವುದರಿಂದ ಅವರಲ್ಲಿಗೆ ಹೋಗಲು ಒಂದು ಕಾರಣ ಸಿಕ್ಕಿತ್ತು.

ಹ್ಯಾಂಡ್ ಪೋಸ್ಟಿಗೆ ಬರುತ್ತಿದ್ದಂತೆ ಹೋಟೆಲೊಂದರ ಮುಂದೆ ಬೈಕ್ ನಿಲ್ಲಿಸದ ನಾರಾಯಣ ಗೌಡ “ಬಾ ಕಾಫಿ ಕುಡ್ದು ಹೋಗಣ” ಎಂದ.

ಹೋಟೆಲಿನಲ್ಲಿ ಕಾಫಿಗೆ ಮೊದಲು ತಿಂಡಿಗೂ ಹೇಳಿದ. ನನ್ನ ಅನುಮಾನ ಬೆಳೆಯುತ್ತಲೇ ಇತ್ತು.

“ನಾರಾಯಣ ನೀನು ಯಾವಾಗ ಬೇಕಾದ್ರೂ ಅವರಲ್ಲಿಗೆ ಒಬ್ನೇ ಹೋಗ್ತಿದ್ದೆ, ಈಗ ನಾನು ಬರಲ್ಲ ಅಂದ್ರು ಎಳ್ಕೊಂಡು ಹೋಗ್ತಾ ಇರೋದು ನೋಡಿದ್ರೆ ನಂಗ್ಯಾಕೋ ಡೌಟು.. ನೀನೇನೋ ಮುಚ್ಚಿಡ್ತಾ ಇದ್ದೀಯ,” ಎಂದೆ.

“ಅದೊಂದು ಕತೆ ಮಾರಾಯ, ಈಗ ಒಂದು ತಿಂಗ್ಳಲ್ಲಿ ನಂಗೆ ಅವ್ರತ್ರ ಅರ್ಜೆಂಟಾಗಿ ಒಂದು ಕೆಲ್ಸ ಆಗ್ಬೇಕಿತ್ತು, ಬೆಳಗ್ಗೆ.. ಬೆಳಗ್ಗೇನೆ ಅವ್ರ ಮನೆ ಹತ್ರ ಹೋದೆ. ಮನೇಲಿ ಯಾರೂ ಕಾಣುಸ್ಲಿಲ್ಲ, ಅಲ್ಲೇ ಮನೆ ಪಕ್ಕದಲ್ಲೇ ಕೆಲಸದೋನಿದ್ದ, ಅವನ್ನ ಕೇಳುದ್ರೆ ‘ಅವುರಾಗಳೇ ಕ್ಯಾಮರಾ ತಗಂದು ತ್ವಾಟಕ್ಕೋದ್ರು’ ಅಂದ, ಅವ್ರು ಹೋದ ದಿಕ್ಕಿಗೇ ಹುಡುಕ್ತಾ ಹೋಗಿ ತೋಟದಲ್ಲೆಲ್ಲಾ ನೋಡ್ದೆ, ಅಲ್ಲೆಲ್ಲೂ ಕಾಣುಸ್ಲಿಲ್ಲ, ಹಂಗೇ ಅವ್ರು ಮನೆ ಕೆರೆ ದಾಟಿ ಕಾಡು ಹತ್ತಿ ಗದ್ದೆ ಕಡೀಗ್ ಬಂದು ನೋಡಿದ್ರೂ ಅಸಾಮಿನೇ ಪತ್ತೆ ಇಲ್ಲ. ಇನ್ನೆಂಗೂ ವಾಪಸ್ ಹೋಗದಲ್ಲ, ನನಗ್ ಅವುರ್ನ ಅರ್ಜೆಂಟಾಗಿ ಕಾಣ್ಲೇ ಬೇಕಿತ್ತು, ಇಲ್ಲೇ ಎಲ್ಲಾರ ಇರ್ಬೌದು ಅಂದ್ಕಂಡ್… ಅಣ್ಣಾ… ಅಣ್ಣಾ… ಅಂತ ಜೋರಾಗಿ ಕೂಗ್ದೆ. ಅವೆಂತವೋ ಹಕ್ಕಿಗಳು ಮರದಿಂದ ಬರ್ರ…. ಅಂತ ಹಾರಿ ಹೋದ್ವು. ಜೊತಿಗೇ ದಡಕ್ಕಂತೆ ಎಂತದೋ ಪ್ರಾಣಿ ನೆಲದಿಂದ ಎದ್ದಂಗಾಯ್ತು. ನಾನು ಇದೆಂತದೋ ಕಾಡು ಹಂದಿನೋ.. ಕಾಟಿನೋ ಅಂತ ಗಾಬರಿಲಿ ಯಾವ್ದಾರು ಮರ ಹತ್ತಾಣ ಅಂತ ನೋಡ್ತಿದ್ರೆ, ಅದು ಇವ್ರೇ ಮಾರಾಯ.. . ನೆಲದಲ್ಲಿ ಸೊಪ್ಪು ಕಣಾರ (ಟೊಂಗೆ) ಎಲ್ಲ ಗುಡ್ಡಿಗೆ ಹಾಕ್ಕೊಂಡು ಅದರೊಳಗೆ ಮಲಗಿ ಫೋಟೋ ತೆಗಿಯಕ್ಕೆ ಮಾಡ್ಕಂಡಿದ್ರು, ನಂಗೆ ಗಾಬರೀಲೂ ನಗು ಬಂತು. ಅವರು ಎದ್ದೋರೆ ‘ಯಾವೋನೊ ಅವನು, ನಾನು ಅಷ್ಟೊತ್ತಿಂದ ಕಾಯ್ತಾ ಇದ್ರೆ ಎಲ್ಲಾ ಹಾಳು ಮಾಡ್ದೋನು, ಇಲ್ಲಿಗ್ಯಾಕಯ್ಯ ಬಂದೆ’ ಅಂಕ ಕಣಾರ ತಗಂದು ಹೊಡಿಯೋಕೇ ಬೆರಸ್ಕಂಡ್ ಬಂದ್ರು. ನಾನು ಸಿಕ್ಕಿದ್ರೆ ಹೊಡದೇ ಬಿಡೋರೋ ಏನೋ. ನಾನು ಹೆಂಗೆ ಪದರಾಡು ಹಾಕ್ದೇ (ಓಟಕಿತ್ತೆ) ಅಂದ್ರೇ ಮತ್ತೆ ಇವತ್ತೇ ನೋಡು ನೀನಿರೋ ಹೊತ್ಗೆ ಧೈರ್ಯವಾಗಿ ಅಲ್ಲಿಗೆ ಹೊರಟಿರೋದು” ಅಂದ.

ನಾನು ಇದೇ ಕತೆಯನ್ನು ಬೇರೊಂದು ರೂಪದಲ್ಲಿ ಇನ್ನೊಬ್ಬನ ಬಾಯಲ್ಲಿ ಕೇಳಿದ್ದೆ. ಆದ್ದರಿಂದ ಇವರಿಬ್ಬರಲ್ಲಿ ಯಾರು ಯಾರ ಕಥೆಯನ್ನು ಕದ್ದಿದ್ದಾರೆ ಎಂದು ತಿಳಿಯಲಿಲ್ಲ. ಆದರೂ ಇವನೂ ಇಷ್ಟೆಲ್ಲ ಕಥೆ ಕಟ್ಟಿ ನನ್ನನ್ನು ಅಲ್ಲಿಗೆ ಕರೆದೊಯ್ಯುತ್ತಿರಬೇಕಾದರೆ ಏನೋ ಭೀಕರವಾದದ್ದನ್ನು ಎದುರಿಸಬೇಕಾದೀತೆಂದು ಆತಂಕವಾಯಿತು. “ನೀನು ಏನೇ ಹೇಳಿದ್ರೂ ನಾರಾಯಣ, ನಂಗ್ಯಾಕೋ ನಿನ್ನ ಕಥೆ ಬಗ್ಗೆ ನಂಬಿಕೇನೇ ಬರ್ತಾ ಇಲ್ಲಾ. ನಿನ್ನ ಮಾತು ಕೇಳ್ತಾ ನನ್ನ ಅನುಮಾನ ಇನ್ನೂ ಜಾಸ್ತಿ ಆಯ್ತು” ಎಂದೆ.

“ಅನುಮಾನಂ ಪೆದ್ದರೋಗಂ.. ಸುಮ್ನೆ ಬಾರಯ್ಯ” ಎಂದು ಹೋಟೆಲ್ ಬಿಲ್ಲನ್ನು ಅವನೇ ಪಾವತಿಸಿ, ನನ್ನನ್ನು ಕಾಫಿಯ ಋಣದಲ್ಲಿ ಸಿಲುಕಿಸಿ ಮತ್ತೆ ಬೈಕನ್ನೇರಿದ, ಅನಿವಾರ್ಯವಾಗಿ ಅವನೊಡನೆ ಹೊರಟೆ. ಬೈಕು ‘ನಿರುತ್ತರ’ದತ್ತ ಸಾಗಿತು.

ನಾವು ಹೋದಾಗ ತೇಜಸ್ವಿ ಮನೆಯಲ್ಲೇ ಇದ್ದರು. ಮನೆಯವರೆಲ್ಲ ಮೈಸೂರಿಗೆ ಹೋಗಿದ್ದಾರೆಂದು, ಸದ್ಯಕ್ಕೆ ತಾನೊಬ್ಬನೇ ಇದ್ದೇನೆಂದು ತಿಳಿಸಿದರು. “ಊಟಕ್ಕೆ ಏನು ಮಾಡ್ತೀರಿ?” ಎಂದದಕ್ಕೆ. ಅನ್ನವನ್ನು ಮಾಡಿಕೊಳ್ಳುತ್ತೇನೆಂದೂ, ಒಂದು ವಾರಕ್ಕಾಗುವಷ್ಟು ಸಾರನ್ನು ರಾಜೇಶ್ವರಿ ಮಾಡಿಟ್ಟು ಹೋಗಿದ್ದಾರೆಂದೂ ಹೇಳಿ ಅದಕ್ಕೆ ದಿನಾ ಒಂದಿಷ್ಟು ಉಪ್ಪು – ನೀರು, ಏನು ಬೇಕೋ ಅದನ್ನು ಹಾಕಿ ಕುದಿಸುತ್ತಾ ಇದ್ದರೆ ರಾಜೇಶ್ವರಿಯವರು ಬರುವವರೆಗೂ ಏನೂ ತೊಂದರೆ ಇಲ್ಲವೆಂದು… ಮುಂದೆ ಅವರೇ ಬರೆದ “ಪಾಕ ಕ್ರಾಂತಿ”ಯ ಕೆಲವು ವಿವರಗಳನ್ನು ನೀಡಿದರು.

ಮಾತು ಮುಂದುವರೆದಂತೆ ‘ಹೇಗಿದೆ ನಿಮ್ಮ ರಂಗ ಚಟುವಟಿಕೆ’ ಎಂದು ನನ್ನಲ್ಲಿ ವಿಚಾರಿಸಿಕೊಂಡರು. ಹಾಗೇ ಮಾತು ‘ಮೈಸೂರಿನ ರಂಗಾಯಣ’ದತ್ತ ತಿರುಗಿತು. ಆಗಿನ್ನೂ ಬಿ. ವಿ. ಕಾರಂತರೇ ರಂಗಾಯಣದ ನಿರ್ದೇಶಕರಾಗಿದ್ದರು. “ಅಲ್ಲಾ ಕಣ್ರಿ ಅವತ್ತು ನಿಮ್ಮಲ್ಲಿ ರಂಗ ಶಿಬಿರ ಮಾಡೋಕೆ ಬಂದಿದ್ದರಲ್ಲ ಹುಡುಗರು (ಮಂಡ್ಯ ರಮೇಶ್ ಮತ್ತು ಕೃಷ್ಣಕುಮಾರ್ ನಾರ್ಣಕಜೆ) ಅವ್ರಿನ್ನೂ ಅಲ್ಲೇ ಇದ್ದಾರೇನ್ರಿ?” ಎಂದರು.

“ಅಲ್ಲೇ ಇದ್ದಾರೆ ಸಾರ್” ಎಂದೆ.

“ಆ ಕಾರಂತ ಎಲ್ಲ ಸರಿ ಆದ್ರೆ ಆಡಳಿತನೇ ಸರಿಯಾಗಿ ಗೊತ್ತಿಲ್ಲ ಕಣ್ರಿ. ಪಾಪ ಈ ಹುಡುಗರ ಭವಿಷ್ಯ ಏನು, ನಾಟಕನೇ ನಂಬ್ಕೊಂಡು ಮುಂದೆ ಏನ್ಮಾಡ್ತಾರೆ. ಎಲ್ಲ ಅವ್ಯವಸ್ಥೆ ಆಗಿದಿಯಂತಲ್ರಿ, ಇದನ್ನೆಲ್ಲ ಸರಿಯಾಗಿ ಯೋಚ್ನೆ ಮಾಡ್ದೇ ಮಾಡ್ಬಾರ್ದು, ಎಲ್ಲಾ ಬೇಜವಾಬ್ದಾರಿ ಅನ್ಸುತ್ತೆ, ನಂಗೆ ಆ ಹುಡುಗರ ಯೋಚ್ನೆ ಮಾಡಿದ್ರೆ ಬೇಜಾರಾಗುತ್ತೆ ಕಣ್ರಿ” ಎಂದರು. ರಂಗಾಯಣದಲ್ಲಿ ಮುಂದೆ ಬರಬಹುದಾದ ಸಮಸ್ಯೆಗಳನ್ನು ಅವರು ಅಂದೇ ಊಹಿಸಿದ್ದರು. ನಮ್ಮ ಮಾತು ಹೀಗೇ ಮುಂದುವರಿಯಿತು. ಕೊನೆಗೆ ತೇಜಸ್ವಿಯವರಿಗೆ ಮಾತು ಸಾಕೆನಿಸಿ,

“ಮತ್ತೇನು ಈ ಕಡೆ ಬಂದ್ರಿ” ಎಂದು ಮುಕ್ತಾಯದ ಸೂಚನೆ ನೀಡಿದರು.

ನಾವು ಇಷ್ಟೆಲ್ಲ ಮಾತನಾಡಿದರೂ ನಾರಾಯಣ ಗೌಡ ಮಾತ್ರ ಮೈಯೆಲ್ಲ ಮುಳ್ಳಾಗಿಸಿಕೊಂಡು ಹಲಸಿನ ಕಾಯಿಯಂತೆ ಕೂತಿದ್ದ.

ಆಗ ನಾನು ನಿರ್ವಾಹವಿಲ್ಲದೆ ನಾನು ಇವತ್ತು ಇಲ್ಲಿಗೆ ಬರುವ ಉದ್ದೇಶವಿರಲಿಲ್ಲವೆಂದೂ, ಈ ನಾರಾಯಣಗೌಡ ನನ್ನನ್ನು ಕರೆದುಕೊಂಡು ಬಂದನೆಂದೂ ಹೇಳಿದೆ.

ಆಗ ನಾರಾಯಣ ಗೌಡ ಅನಿವಾರ್ಯವೆಂಬಂತೆ ಬಾಯಿ ತೆರೆದ “ಅಣ್ಣಾ ನಿಮ್ಮಂತೋರೆಲ್ಲ ಕಷ್ಟಪಟ್ಟು ನಮ್ಮ ಈ ಹಾಳುಬಿದ್ದ ಮೂಡಿಗೆರೆಗೆ ಒಂದು ಕೃಷಿ ಬ್ಯಾಂಕು ತಂದ್ರಿ, ಅದ್ರಿಂದ ಇದು ಒಂದು ಊರು ಅಂತ ಆಯ್ತು. ಇಂದ್ರಾಗಾಂಧಿ ಬ್ಯಾಂಕನ್ನೆಲ್ಲ ರಾಷ್ಟ್ರೀಕರಣ ಮಾಡಿದ್ರಿಂದ ನಮ್ಮಂತೋರೆಲ್ಲ ಬ್ಯಾಂಕೊಳಗೆ ಕಾಲಿಡೋ ಹಂಗಾಯ್ತು, ಇಲ್ಲಾಂದ್ರೆ ಮೂಡಿಗೆರೇಲಿ ಬರೀ ಹತ್ತು ಹನ್ನೆರಡು ಜನರಿಗೆ ಮಾತ್ರ ಬ್ಯಾಂಕೊಳಗೆ ನುಗ್ಗೋಕೆ ಅವಕಾಶ ಇತ್ತು. ಆದ್ರೆ ಈಗ ನೀವೆಲ್ಲ ಇತ್ತೀಚೆಗೆ ಆ ಕಡೆಗೆ ಬರೋದು ಕಡಿಮೆ ಮಾಡಿದ್ರಿ. ಇವ್ರುನೆಲ್ಲಾ ವಿಚಾರಿಸ್ಕೊಳಣಾ ಅಂದ್ರೆ ರೈತಸಂಘನೂ ಇಲ್ಲ. ಅದ್ಕೇ ಈ ಬ್ಯಾಂಕಿನೋರೆಲ್ಲ ಹಿಂಗ್ ಹೆಚ್ಚಿಕೊಂಡಿದ್ದಾರೆ. ನಾನೇನೋ ನ್ಯಾಯ ಮಾತಾಡಕ್ಕೋದ್ರೆ ಬ್ಯಾಂಕ್ ಮೇನೇಜರ್ ನಿನ್ ಮ್ಯಾಲೆ ಪೋಲಿಸ್ ಕಂಪ್ಲೇಂಟ್ ಕೊಡ್ತೀನಿ ಅಂದ. ಅಲ್ಲೇ ಇದ್ದ ಚಂದ್ರೇಗೌಡ್ರು ಮತ್ ಆ ಮಕಾನಳ್ಳಿ ಕಡೆಯೋರೆಲ್ಲಾ ಬ್ಯಾಂಕಿನ ಪರನೇ ಮಾತಾಡಿದ್ರು. ನೀವಿಲ್ದೇ ಹೋಗಿದ್ರೆ ಈ ಮೂಡಿಗೆರೆಗೆ ಕೃಷಿ ಬ್ಯಾಂಕೆಲ್ಲಿ ಬರ್ತಿತ್ತಣ್ಣ ಎಂದು ಒಂದಕ್ಕೊಂದು ಸಂಬಂಧವಿಲ್ಲದಂತೆ ತೋರುವ ಹಲವು ವಿಷಯಗಳನ್ನೆಲ್ಲಾ ಜೋಡಿಸಿ ಹೇಳುತ್ತಾ, ತೇಜಸ್ವಿಯವರನ್ನು ಯದ್ವಾತದ್ವಾ ಹೊಗಳತೊಡಗಿದ.

“ಅದೇನು ಹೇಳ್ಬೇಕೋ ಹೇಳು ಸುಮ್ನೆ ಸುತ್ತಿ ಬಳಸಿ ಮಾತಾಡ್ಬೇಡ” ಎಂದರು ತೇಜಸ್ವಿ. ಧ್ವನಿಯಲ್ಲಿ ಸಣ್ಣ ಅಸಹನೆಯಿತ್ತು.

“ಅದೇ ಅಣ್ಣ ಬ್ಯಾಂಕಲ್ಲಿ ಸ್ವಲ್ಪ ಲೋನ್ ಬಾಕಿ ಆಗಿತ್ತು. ಹಂಗಂತ ಇಡೀ ಬ್ಯಾಂಕಿಗೆ ನಾನೊಬ್ನೇ ಸುಸ್ತಿದಾರ ಅನ್ನೋತರ ಎಲ್ರ ಎದ್ರಿಗೆ, ಮ್ಯಾನೇಜರು, ಕೋರ್ಟು ಕಛೇರಿ, ಜಪ್ತಿ, ಅಂದ್ರೆ ಹೆಂಗ್ಹೇಳಿ? ನಂಗೂ ಸಿಟ್ಬಂತು. ನಾನೂ ಒಂದ್ ಸೊಲ್ಪ ರಾಂಗಾದೆ. ಅಷ್ಟಕ್ಕೇ ಪೋಲಿಸಿಗೆ ಫೋನ್ ಮಾಡ್ತೀನಿ ಅಂದ್ರು. ನಾನೂ ‘ಹಂಗಾದ್ರೆ ನನ್ ಮನೆ ಜಪ್ತಿ ಮಾಡೇ ತಗಳಿ ನಿಮ್ ಹಣವ’ ಅಂದೆ. ಅಲ್ಲಾ ಅಲ್ಲಿದ್ದೋರೆಲ್ಲಾ ನನ್ನಂಗೆ ಸುಸ್ತಿದಾರ್ರೆ, ಅವ್ರೆಲ್ಲಾ ನಂದೇ ತಪ್ಪು ಅನ್ನೋತರ ಮಾತಾಡದ, ಅದ್ಕೇ ನೀವೊಂಸೊಲ್ಪ ಬುದ್ದಿ ಹೇಳಿ ಆ ಮ್ಯಾನೇಜರಿಗೆ ಅವುಂದ್ಯಾಕೋ ಅತಿಯಾಯ್ತು” ಎಂದ. ಮ್ಯಾನೇಜರ್ ಬಗ್ಗೆ ಹೇಳುವಾಗ ನಾರಾಯಣ ಗೌಡನ ಮಾತು ಅವನ ಸಿಟ್ಟಿಗೆ ಅನುಗುಣವಾಗಿ ಏಕವಚನ ಬಹುವಚನಗಳ ಮಧ್ಯೆ ಹೊಯ್ದಾಡುತ್ತಿತ್ತು.

“ಅಲ್ಲ ಕಣಯ್ಯ ನಂಗೀಗ ಅರ್ಥ ಆಯ್ತು. ಆ ಮೇನೇಜರ್ ನಂಗೂ ಫೋನ್ ಮಾಡಿದ್ರು. ನೀನು ಅವ್ರ ಬಟ್ಟೆ ಬಿಚ್ಚಿ ಮೆರವಣಿಗೆ ಮಾಡ್ತೀನಿ ಅಂದ್ಯಂತೆ. ‘ತೇಜಸ್ವಿ ನಂ ನೆಂಟ್ರು ಗೊತ್ತಾ’ ಅಂತ ಹೆದರ‍್ಸೋತರ ಹೇಳಿದಿಯಂತೆ. ನಾನೇ ಹೇಳ್ದೆ ನನ್ನ ಹೆಸರು ಹೇಳ್ಕೊಂಡು ಏನಾದರೂ ಬೇಡದ್ದು ಮಾಡಿದ್ರೆ ಪೋಲಿಸಿಗೆ ಕೊಡಿ ಅಂತ. ನಿಂಗೇನಾದ್ರು ತಲೆಗಿಲೆ ಕೆಟ್ಟಿದಿಯೇನಯ್ಯ. ಬ್ಯಾಂಕಿನೋರು ಸಾಲ ಕೊಡಬೇಕಾದ್ರೆ ನಿನ್ನತ್ರ ಎಲ್ಲಾದಕ್ಕೂ ಸೈನ್ ತಗೊಂಡೇ ಅಲ್ವಾ ಕೊಟ್ಟಿರೋದು. ಸುಮ್ನೆ ಗಲಾಟೆ ಮಾಡಿ ಒಂದೆರಡು ಕೇಸು ಮೈಮೇಲೆ ಎಳ್ಕೊಳ್ತೀಯಾ ಅಷ್ಟೆ, ಏನಾದ್ರೂ ಮಾಡಿ ಸಾಲ ತಿರ್ಸೋಕ್ಕಾಗುತ್ತೋ ನೋಡು” ಎಂದು ಹೇಳಿ, ಸ್ವಲ್ಪ ಯೋಚಿಸಿ, “ಈ ದೇಶದಲ್ಲಿ ರೈತ ಒಂದು ಸಾರಿ ಸಾಲ ಮಾಡಿದ್ರೆ ಅದು ತೀರಿದ್ದೇ ಕಾಣೆ, ಅದ್ಯಾಕಯ್ಯ ಅಷ್ಟೊಂದು ಸಾಲ ಮಾಡಿದ್ದೀಯಂತೆ” ಎಂದರು.

“ಅಣ್ಣಾ ಅದೊಂದು ಕತೆ. ಈಗ ಮೂರನೇ ವರ್ಷದಲ್ಲಿ ಒಂದೂವರೆ ಲಕ್ಷ ಲೋನ್ ಮಾಡಿ ಹೊಳೆ ಪಕ್ಕದ ನಾಕೆಕರೆಗೆ ಪಚ್ಚಬಾಳೆ ಹಾಕಿದ್ದೆ. ಎಂತಾ ಚನ್ನಾಗಿ ಬಂದಿತ್ತೂ ಅಂತೀರಿ. ಹಂಗೇ ಮೈನ್ ರೋಡಿಗೆ ಕಾಣದಲ್ಲ. ಎಲ್ಲಾರೂ ಕೇಳೋರೆ ‘ಅದು ಯಾರ‍್ದು ಮಾರಾಯ್ರೆ ಪಚ್ಚಬಾಳೆ, ಒಂದೊಂದು ಗೊನೆ ಏನಿಲ್ಲ ಅಂದ್ರೂ ಇಪ್ಪತೈದ್ ಕೇಜಿ ಮೇಲೆ ಬೀಳುತ್ತೆ’ ಅನ್ನೋರು. ಹಂಗ್ ಬಂದಿತ್ತು ಬಾಳೆ. ನೋಡೀ ನೋಡೀ ಜನಗಳ್ದೇ ಕಣ್ಣಾಯ್ತೋ ಏನೋ, ಆ ವರ್ಷ ಡಿಸೆಂಬರಲ್ಲಿ ಬಿತ್ತಲ್ಲ ಚಳಿ, ಒಂದೇ ವಾರದ ಚಳೀಗೆ ಬಾಳೆ ಎಲ್ಲಾ ಕೆಂಪಾಗಿ ಬತ್ತಿದಂಗಾಯ್ತು. ಆಮೇಲೆ ಏನೆಲ್ಲಾ ಮಾಡ್ದೆ. ಕೊನೀಗ್ ನೋಡಿದ್ರೆ ಗೊನೆಗಳೆಲ್ಲ ಪೀಚಾಗಿ ಏಳ್ ಕೇಜಿ ಎಂಟು ಕೇಜಿ ಮೇಲ್ ಬರ‍್ಲೇ ಇಲ್ಲ. ಪೂರಾ ಲಾಸಾಯ್ತು. ಇನ್ನು ಬ್ಯಾಂಕಿನ ಕಂತೆಲ್ಲಿ ಕಟ್ಟಲಿ” ಎಂದ.

ಚಳಿ ತೀರಾ ಹೆಚ್ಚಾದರೆ ನಮ್ಮಲ್ಲಿರುವ ಅನೇಕ ಜಾತಿಯ ಸಸ್ಯಗಳ ಬೇರುಗಳು ಕೆಲಸವನ್ನೇ ನಿಲ್ಲಿಸಿಬಿಡುವುದರಿಂದ ಈ ರೀತಿ ಆಗುತ್ತದೆಂದೂ, ಇದು ಯಾರ ಕಣ್ಣಿನ ಪ್ರಭಾವವೂ ಅಲ್ಲವೆಂದೂ ತೇಜಸ್ವಿ ವಿವರಿಸಿದರು.

ಆ ವರ್ಷ ನಾನೂ ಕೂಡಾ ಸ್ವಲ್ಪ ಪಚ್ಚಬಾಳೆ ಬೆಳೆದಿದ್ದೆನೆಂದೂ, ಆ ಸಂದರ್ಭದಲ್ಲಿ ಬಾಳೆಗೆ ಚೆನ್ನಾಗಿ ನೀರು ಹಾಯಿಸಿದರೆ ಚಳಿಯ ಪ್ರಭಾವ ಕಮ್ಮಿಯಾಗುತ್ತದೆಂದೂ ನನಗೆ ಹಿರಿಯರೊಬ್ಬರು ಹೇಳಿದ್ದರು. ಅದರಂತೆ ನಾನೂ ಬಾಳೆಗೆ ಏಳೆಂಟು ದಿನಗಳ ಕಾಲ ಸ್ಪ್ರಿಂಕ್ಲರ್ ಮೂಲಕ ನೀರಾವರಿ ಮಾಡಿಸಿದ್ದೆ. ಇದರಿಂದ ಬಾಳೆಗೆ ಆದ ಹಾನಿ ಬಹಳಷ್ಟು ಕಡಿಮೆಯಾಗಿತ್ತು. ಈ ವಿಚಾರವನ್ನು ನಾನು ಅವರಿಗೆ ತಿಳಿಸಿದೆ.

ಹೌದು ಅದೂ ಒಂದು ಪರಿಣಾಮಕಾರಿ ವಿಧಾನವೇ ಎಂದರು.

“ಅಣ್ಣ ಅಲ್ಲಿಗೇ ನಿಂತಿಲ್ಲ ನನ್ ಕತೆ, ಹೆಂಗೂ ಇನ್ನು ಈ ಬಾಳೆಕಾಯಿ ಮಾರಿ ಬ್ಯಾಂಕ್ ಸಾಲ ತೀರ‍್ಸದು ಕನಸು ಅಂದ್ಕಂಡು ಇನ್ನೂ ಒಂದು ಲಕ್ಷ ಸಾಲ ತಗಂಡು, ಸಕಲೇಶಪುರದಲ್ಲಿ ಕೃಷ್ಣ ಅಂತಿದ್ದಾನೆ ನನ್ ಫ್ರೆಂಡು, ಚಕ್ಕೆ ವ್ಯಾಪಾರ ಮಾಡ್ತಾನೆ. ಅವುನು ಜೊತೆ ಪಾರ್ಟನರ್ ಆಗಿ ಸುಂಡೆಕೆರೆ ಹತ್ರ ಒಂದು ಸಾಬರ ಎಸ್ಟೇಟಿನ ಚಕ್ಕೆ ಕಂಟ್ರಾಕ್ಟ್ ಮಾಡುದ್ವು, ಎಲ್ಲಾ ಸರಿಯಾಗಿದ್ರೆ ನಾಕ್ – ನಾಕ್ ಲಕ್ಷ ಲಾಭ ಉಳ್ದಿರೋದು. ಚಕ್ಕೆ ಎಲ್ಲಾ ಕೆತ್ತಿ ಇನ್ನೇನು ಪರ್ಮಿಟ್ ಸಿಕ್ಕೋ ಹೊತ್ತಿಗೆ ಅದೇನೋ ಕಾಂಪ್ಲಿಕೇಷನ್ ಆಗಿ ಚಕ್ಕೆ ಎಲ್ಲಾ ಫಾರೆಸ್ಟ್‌ನೋರು ಸೀಜ್ ಮಾಡಿದ್ರು. ಅದೆಲ್ಲಾ ಸರಿ ಮಾಡಿ ನಾವು ಬಚಾವಾಗಿ ಚಕ್ಕೆ ಮಾರೋ ಹೊತ್ತಿಗೆ ಅಲ್ಲಿಗಲ್ಲಿಗೆ ಸರಿಯಾಗಿ, ಕೈ ಕಾಲಿಯಾಯ್ತಣ್ಣ. ಅಲ್ಲಾ ಆ ಬ್ಯಾಂಕ್ ಮ್ಯಾನೇಜರು ಎಲ್ರ ಎದುರಿಗೆ ನನ್ ಮರ್ಯಾದಿ ಕಳುದ್ರೆ ಸಿಟ್ ಬರಲ್ವಣ್ಣ, ಅದ್ಕೇ ನಿಮ್ ಹೆಸರು ಹೇಳ್ದೆ, ಅವಾಗ ಸ್ವಲ್ಪ ಸುಮ್ನಾದ” ಎಂದು ಕರುಣಾಜನಕವಾಗಿ ತನ್ನ ಕತೆಯನ್ನು ಹೇಳಿದ.

“ಸರಿ ಮಾರಾಯ ಮತ್ತೀಗ ಸಾಲಕ್ಕೆಂತ ಮಾಡ್ತೀಯಾ” ಎಂದು ತೇಜಸ್ವಿ.

“ಇನ್ನೆಂತದು ಮಾಡ್ಲಿ, ನನ್ನ ಹೊಳೆ ಸಾಲು ಗದ್ದೆ ಮೇಲೆ ತುಂಬಾ ಜನಕ್ಕೆ ಕಣ್ಣಿರಾದು, ಅದರಲ್ಲೇ ಎರಡು ಎಕರೆ ಮಾರ್ಬೇಕು ಅಂತಿದ್ದೀನಿ. ಅಲ್ಲಿವರ‍್ಗೂ ಸ್ವಲ್ಪ ಸುಮ್ನಿರೋಕೇ ಆ ಮ್ಯಾನೇಜರಿಗೆ ಹೇಳಿ” ಎಂದ.

“ಸರಿ ಆದ್ರೆ ಪದೇ ಪದೇ ನನ್ನ ಹೆಸರು ಹೇಳಕೊಂಡು ತಿರುಗ್ಬೇಡಾ, ನೀವೆಲ್ಲ ಒಂದು ಶಿಸ್ತು ಕಲೀಬೇಕು ಕಣ್ರಯ್ಯ. ಇಲ್ಲಾಂದರೆ ಯಾರೂ ನಮ್ಮ ಸಹಾಯಕ್ಕೆ ಬರೋದೇ ಇಲ್ಲ. ಸರ್ಕಾರವಂತೋ ಬರೋದೇ ಇಲ್ಲ, ತಿಳ್ಕಳಿ” ಎಂದರು.

ನಂತರ ಅವರೇ ಒಂದಷ್ಟು ಕಾಫಿ ಮಾಡಿ ತಂದುಕೊಟ್ಟರು. ಕಾಫಿ ಕುಡಿದು ನಾವು ಹೊರಡುವಾಗ ನಾರಾಯಣ ಗೌಡನಿಗೆ “ಹೆಂಗಾದ್ರು ಒಂದ್ಸಾರಿ ಬಚಾವಾಗೋ ದಾರಿ ಹುಡ್ಕು” ಎಂದರು.

ಆಗಲೇ ಗಂಟೆ ಆರಾಗುತ್ತ ಬಂದಿತ್ತು. ನಾರಾಯಣ ಗೌಡ ನನಗೆ ಕೊಟ್ಟ ಮಾತಿನಂತೆ ನನ್ನನ್ನು ಬೈಕಿನಲ್ಲಿ ಹೇರಿಕೊಂಡು ಸಕಲೇಶಪುರದ ಹಾದಿ ಹಿಡಿದ. ಹಾನುಬಾಳಿಗೆ ಬರುತ್ತಿದ್ದಂತೆ ಇಲ್ಲೇ ‘ಸಾಯಂಕಾಲದ ಕಾರ್ಯಕ್ರಮ’ ಮುಗಿಸೋಣವೆಂದೂ, ನಿನ್ನನ್ನು ಊರಿಗೆ ಬಿಟ್ಟು ತಾನು ಸಕಲೇಶಪುರಕ್ಕೆ ಬದಲಾಗಿ ಹೆಗ್ಗದ್ದೆಗೆ ನೆಂಟರ ಮನೆಗೆ ಹೋಗುವುದಾಗಿಯೂ ತಿಳಿಸಿದ. ಸಾಯಂಕಾಲದ ಕಾರ್ಯಕ್ರಮಕ್ಕೆ ಕುಳಿತಿದ್ದಾಗ ನಾರಾಯಣ ಗೌಡನಿಂದ ತಿಳಿದ ಸತ್ಯವೆಂದರೆ ಚಕ್ಕೆ ವ್ಯಾಪಾರದಲ್ಲಿ ಆದ ನಷ್ಟವನ್ನು ತುಂಬಿಕೊಳ್ಳಲು ಅವನು ಇಸ್ಪೀಟಾಡಲು ಪ್ರಾರಂಭಿಸಿ ಈಗ ಅದೇ ಚಟವಾಗಿ ಬಿಟ್ಟಿತ್ತು. ಎಲ್ಲೆಲ್ಲಿ ‘ರಮ್ಮಿ ನಾಕೌಟ್’ ಜಾತ್ರೆಗಳಾಗಲೀ ಅಲ್ಲೆಲ್ಲ ಹೋಗಿ ಇಸ್ಪೀಟಾಡುತ್ತಿದ್ದ. ಮತ್ತಷ್ಟು ಹಣವನ್ನು ಕಳೆದುಕೊಂಡಿದ್ದ. ಇದರಿಂದ ಅವನ ಆರ್ಥಿಕ ಪರಿಸ್ಥಿತಿ ತುಂಬ ಹದಗೆಟ್ಟು ಹೋಗಿತ್ತು. ಅವನು ಹತಾಶನಾದಂತಿದ್ದ. ಏನೇನೋ ಸುಳ್ಳುಗಳನ್ನು ಹೇಳುತ್ತಾ ಎಲ್ಲರನ್ನೂ ನಂಬಿಸಲು ಪ್ರಯತ್ನಿಸುತ್ತಿದ್ದ.

ಇದನ್ನು ಊಹಿಸಿಯೇ ತೇಜಸ್ವಿಯವರು “ಶಿಸ್ತು ಕಲೀಬೇಕು ಕಣ್ರಯ್ಯ” ಎಂದಿರಬೇಕು.

* * *

೨೦೦೨ನೇ ಇಸವಿಯಲ್ಲಿ ‘ಮಹಾವೀರರ ೨೦೦೦ ವರ್ಷದ ಜನ್ಮ ಕಲ್ಯಾಣ ಮಹೋತ್ಸವ’ವೆಂದು ಘೋಷಿಸಿ ಕೇಂದ್ರ ಸರ್ಕಾರ ಹಲವು ಕಾರ್ಯಕ್ರಮ ಹಮ್ಮಿಕೊಂಡಿತ್ತು. ಅದರಂತೆ ಮೈಸೂರಿನ ರಂಗಾಯಣ ಆ ವರ್ಷ ಅಹಿಂಸೆಯನ್ನು ಪ್ರತಿಪಾದಿಸುವ ನಾಟಕವೊಂದನ್ನು ಆರಿಸಿಕೊಂಡು ಅದನ್ನು ಎರಡು ಬೇರೆ ಬೇರೆ ತಂಡಗಳಿಂದ ಸಿದ್ಧಪಡಿಸಿ ಅನೇಕ ಕಡೆಗಳಲ್ಲಿ ಪ್ರದರ್ಶನ ಮಾಡುವ ಯೋಜನೆ ಮಾಡಿಕೊಂಡಿತ್ತು. ಎರಡು ಹವ್ಯಾಸಿ ತಂಡಗಳಲ್ಲಿ ಒಂದನ್ನು ಚಾಮರಾಜನಗರದಲ್ಲಿ ಅವರು ಈಗಾಗಲೇ ಆರಿಸಿದ್ದರು. ಇನ್ನೊಂದು ತಂಡ ನಮ್ಮನ್ನು ಆಯ್ಕೆ ಮಾಡಿದ್ದರು.

ನಾಟಕದ ನಿರ್ದೇಶಕರು ಮತ್ತು ಇನ್ನಿತರ ತಾಂತ್ರಿಕ ವರ್ಗವನ್ನು ರಂಗಾಯಣ ಕಳುಹಿಸಿಕೊಡಲಿತ್ತು. ಈ ಕಾರ್ಯಕ್ರಮಕ್ಕಾಗಿಯೇ ರಂಗಾಯಣದ ರಾಮನಾಥ್ – ‘ಅರಹಂತ’ ಎನ್ನುವ ನಾಟಕವನ್ನು ಬರೆದಿದ್ದರು. ಹುಲುಗಪ್ಪ ಕಟ್ಟೀಮನಿಯವರು ನಿರ್ದೇಶಕರಾಗಿ ನಮ್ಮಲ್ಲಿಗೆ ಬಂದರು. ಕಾರ್ಯಕ್ರಮದಲ್ಲಿನ ಒಪ್ಪಂದದಂತೆ ನಾವು ನಾಟಕವನ್ನು ಬೇರೆ ಬೇರೆ ಕಡೆಗಳಲ್ಲಿ ಕನಿಷ್ಠ ಎಂಟು ಪ್ರದರ್ಶನಗಳನ್ನು ಮಾಡಬೇಕಿತ್ತು. ನಮ್ಮಲ್ಲೂ ರಂಗ ಶಿಬಿರಗಳಾಗದೆ ಸ್ವಲ್ಪ ಸಮಯವಾಗಿತ್ತು. ಹೊಸಬರಿಗೆ ತರಬೇತಿಯ ಅಗತ್ಯವಿತ್ತು.

ಸುಮಾರು ಒಂದು ತಿಂಗಳ ತರಬೇತಿಯ ನಂತರ ಅರಹಂತ ಪ್ರದರ್ಶನಕ್ಕೆ ಸಿದ್ಧವಾಯಿತು. ಈ ನಾಟಕವನ್ನು ಹಾಸನ ಜಿಲ್ಲೆಯೊಳಗಲ್ಲದೆ, ಮೈಸೂರು, ಬೆಂಗಳೂರು, ಹೂವಿನಹಡಗಲಿ ಮುಂತಾದ ಕಡೆಗಳಲ್ಲೂ ಪ್ರದರ್ಶಿಸಿದೆವು. ಈ ನಾಟಕಕ್ಕೆ ಹೆಚ್ಚಿನ ಎಲ್ಲಾ ಕಡೆಗಳಲ್ಲಿ ಉತ್ತಮ ಪ್ರತಿಕ್ರಿಯೆ ಬಂತು. ಮೂಡಿಗೆರೆಯಲ್ಲೂ ಈ ನಾಟಕದ ಪ್ರದರ್ಶನವಾಯಿತು. ಮೂಡಿಗೆರೆಯ ನೇಚರ್ ಕ್ಲಬ್‌ನ ಧನಂಜಯ ಮತ್ತು ಗೆಳೆಯರು ನಾಟಕ ಪ್ರದರ್ಶನದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ನಾಟಕ ನೋಡಲು ತೇಜಸ್ವಿಯವರೂ ಬಂದಿದ್ದರು. ನಾಟಕ ಮುಗಿದ ನಂತರ ಮಾತನಾಡುತ್ತಾ, ನಾಟಕದ ಅಭಿನಯವೇನೋ ಚೆನ್ನಾಗಿತ್ತು ಎಂದು, “ಅಲ್ಲ ಕಣ್ರಯ್ಯ ಎಲ್ಲಾ ವಿಚಾರವನ್ನೂ ಚರಿತ್ರೆಯ ಘಟನೆಗಳ ಮೂಲಕವೇ ಹೇಳ್ಬೇಕು ಅನ್ನೋ ಹುಚ್ಚು ನಿಮಗೆ – ನಾಟಕದವ್ರಿಗೆ ಯಾವಾಗ ಬಿಡುತ್ತೋ ಗೊತ್ತಿಲ್ಲ” ಎಂದು ಛೇಡಿಸಿದರು.

ನಮ್ಮ ರಂಗ ಚಟುವಟಿಕೆಗಳ ಬೆಳ್ಳಿ ಹಬ್ಬದ ಸಮಯದಲ್ಲಿ ನಾಟಕೋತ್ಸವ ಏರ್ಪಡಿಸಿದ್ದೆವು. ನಾಲ್ಕು ದಿನಗಳ ಕಾಲ ನಮ್ಮ ತಂಡದ ಮಕ್ಕಳ – ದೊಡ್ಡವರ ನಾಟಕಗಳಲ್ಲದೆ, ಮುದ್ರಾಡಿ, ಬೆಂಗಳೂರು (ಪ್ರಯೋಗ ರಂಗ) ತಂಡಗಳ ನಾಟಕವೂ ನಮ್ಮಲ್ಲಿ ಪ್ರದರ್ಶಿತವಾಯಿತು. ಆಗ ತೇಜಸ್ವಿಯವರನ್ನು ಆಹ್ವಾನಿಸಿದ್ದೆವು. ಆದರೆ ಅವರಿಗೆ ಬರಲು ಸಾಧ್ಯವಾಗಿರಲಿಲ್ಲ. ನಂತರ ನಮ್ಮೂರಲ್ಲಿ ರಂಗ ಮಂದಿರ ಕಟ್ಟಬೇಕೆನ್ನುವವರ ಸಂಖ್ಯೆ ಹೆಚ್ಚಾಗಿ ಅದರ ಕೆಲಸವನ್ನು ಪ್ರಾರಂಭಿಸಿದೆವು. ಆ ಸಮಯದಲ್ಲಿ ಒಮ್ಮೆ ಮೂಡಿಗೆರೆಯಲ್ಲಿ ತೇಜಸ್ವಿಯವರನ್ನು ಭೇಟಿಯಾದಾಗ ನಮ್ಮಲ್ಲಿ ರಂಗ ಮಂದಿರವನ್ನು ಕಟ್ಟುವ ವಿಚಾರವನ್ನು ತಿಳಿಸಿದೆವು. ಅದಕ್ಕವರು “ಸೆಕೆಂಡ್ ಲೈನ್ ಲೀಡರ್‌ಶಿಪ್ ಇದಿಯೇನ್ರಯ್ಯ ನಿಮ್ಮೂರಲ್ಲಿ, ನಿಮ್ಮ ನಂತರ ಅದು ಹಾಳು ಬೀಳೋ ಹಂಗಿದ್ರೆ ಮಾಡ್ಬೇಡಿ. ಎಷ್ಟೋ ಕಡೆಗಳಲ್ಲಿ ಹಂಗೇ ಆಗಿದೆ. ಅದನ್ನೆಲ್ಲ ಸರಿಯಾಗಿ ಯೋಚ್ನೆ ಮಾಡ್ಬೇಕು. ಆ ನೀನಾಸಂನವರನ್ನು ನೋಡು, ಆ ಥರ ಮುಂದುವರ‍್ಸಿಕೊಂಡು ಹೋಗೋಕೆ ಏನಾದ್ರು ವ್ಯವಸ್ಥೆ ಇರ್ಬೇಕು” ಎಂದರು.

* * *