೨೦೦೪ನೇ ಇಸವಿಯ ವೇಳೆಗೆ ಮಲೆನಾಡಿನ ಕಾಫಿವಲಯ ತತ್ತರಿಸಿಹೋಗಿತ್ತು. ಒಂದುಕಡೆ ಅನೇಕ ವರ್ಷಗಳಿಂದ ಇದ್ದ ಕಾಫಿ ಬೋರ್ಡಿನ ಏಕಸ್ವಾಮ್ಯದಿಂದ ಕಳಚಿಕೊಂಡು ಮುಕ್ತವಾದ ಕಾಫಿ ಉದ್ಯಮ, ಸ್ವಾತಂತ್ರ್ಯ ದೊರೆತ ಹುಮ್ಮಸ್ಸಿನಲ್ಲಿದ್ದರೆ, ಇನ್ನೊಂದು ಕಡೆ ಕಾಫಿಗೆ ದೊರೆತ – ಅದುವರೆಗೆ ಯಾರೂ ಕನಸಿನಲ್ಲೂ ಊಹಿಸದಿದ್ದಂತಹ ಹೆಚ್ಚಿನ ಬೆಲೆ ದಿಢೀರನೆ ಕುಸಿದು ನೆಲಕಚ್ಚಿತ್ತು. ಅದರೊಂದಿಗೆ ಕಳೆದೆರಡು ವರ್ಷಗಳಿಂದ ಮಳೆಯೂ ಅತ್ಯಂತ ಕಡಿಮೆಯಾಗಿ ನೀರಿನ ಮೂಲಗಳೆಲ್ಲ ಒಣಗಿಹೋಗಿ ಕಾಫಿ ತೋಟಗಳೆಲ್ಲ ನಾಶವಾಗುವ ಸ್ಥಿತಿಗೆ ಬಂದಿದ್ದವು. ಪ್ರಥಮ ಬಾರಿಗೆ ಕಾಫಿ ತೋಟಗಳ ಮಾಲಿಕರು ಮತ್ತು ಕಾರ್ಮಿಕರು ಒಟ್ಟಾಗಿ ತಮ್ಮ ಉಳಿವಿಗಾಗಿ ಹೋರಾಡಲು ಬೀದಿಗಿಳಿದಿದ್ದರು.

ಬೆಂಗಳೂರು ದೂರದರ್ಶನದಿಂದ ಗೆಳೆಯ ಸುಬ್ಬುಹೊಲೆಯಾರ್ ಫೋನ್ ಮಾಡಿದರು. “ಕಾಫಿ ಉದ್ಯಮದ ಸಮಸ್ಯೆಗಳ ಬಗ್ಗೆ ದೂರದರ್ಶನದಲ್ಲಿ ಒಂದು ಕಾರ್ಯಕ್ರಮ ಮಾಡೋಣ. ಕಾಫೀ ಬೆಳೆಗಾರರ, ತೋಟ ಕಾರ್ಮಿಕರ, ವ್ಯಾಪಾರಿಗಳ ಹೀಗೆ ಕಾಫಿ ಉದ್ಯಮಕ್ಕೆ ಸಂಬಂಧಪಟ್ಟ ಎಲ್ಲರ ಸಂದರ್ಶನಗಳೂ ಇರಲಿ. ಜನರ ಆಯ್ಕೆ ಮತ್ತು ಸಂದರ್ಶನಗಳ ಜವಾಬ್ದಾರಿ ನಿಮ್ಮದು” ಎಂದು ಎಲ್ಲವನ್ನೂ ನನ್ನ ತಲೆಗೆ ಕಟ್ಟಿದರು.

ಸಾಧ್ಯವಿದ್ದರೆ ತಾಜಸ್ವಿಯವರ ಸಂದರ್ಶನ ಮಾಡಬೇಕೆಂದು ಆಗಲೇ ಅಂದುಕೊಂಡೆ. (ಅವರು ಕೂಡಾ ಕಾಫಿ ಬೆಳೆಗಾರರೇ). ದೂರದರ್ಶನದ ಕ್ಯಾಮರಾ ತಂಡ ನಮ್ಮೂರಿಗೆ ಬಂದಿಳಿಯಿತು. ಮೊದಲನೇ ದಿನ ಸಕಲೇಶಪುರದ ಸುತ್ತಮುತ್ತ ಬೆಳೆಗಾರರಿಂದ ಹಿಡಿದು ಕೂಲಿ ಕಾರ್ಮಿಕರ ತನಕ, ಕಾಫಿ ಕೃಷಿ ಮತ್ತು ಉದ್ಯಮಕ್ಕೆ ಸಂಬಂಧಿಸಿದ ಅನೇಕರ ಸಂದರ್ಶನ ಮಾಡಿದೆವು. ಮಾರನೇ ದಿನ ಬೆಳಗ್ಗೆ ತೇಜಸ್ವಿಯವರನ್ನು ಕಾಣಲು ಹೋಗುವ ಯೋಜನೆಯಿತ್ತು. ಫೋನ್ ಮಾಡಿ ತೇಜಸ್ವಿಯವರ ಸಂದರ್ಶನಕ್ಕೆ ಅನುಮತಿಯನ್ನು ಪಡೆದುಕೊಳ್ಳಲು ನಮಗೆ ಕೆಲವರು ಸಲಹೆ ನೀಡಿದರು. ಆದರೆ ಅವರ ಸ್ವಭಾವದ ಸ್ವಲ್ಪ ಪರಿಚಯವಿದ್ದ ನಾನು, ಫೋನ್ ಮಾಡಿ ಅವರಿಗೆ ತಿಳಿಸುವುದು ಬೇಡವೆಂದು ವಾದ ಮಾಡಿದೆ.

ನಾವೇನಾದರೂ ಪೋನ್ ಮಾಡಿದಾಗ ಅವರು ಸಂದರ್ಶನ ನೀಡಲು ನಿರಾಕರಿಸಿದ್ದರೆ ನಾವು ಅವರಲ್ಲಿಗೆ ಹೋಗುವ ಆಸೆಯನ್ನೇ ಕೈಬಿಡಬೇಕಾಗುತ್ತಿತ್ತು! (ಅವರು ಯಾವುದೇ ಟಿ.ವಿ.ಗೆ ಸಂದರ್ಶನ ನೀಡದೇ ಕೆಲವು ವರ್ಷಗಳಾಗಿದ್ದವೆಂಬ ವಿಚಾರ ನನಗೆ ತಿಳಿದಿದ್ದುದರಿಂದ ಸಮ್ಮತಿಸುತ್ತಾರೋ ಇಲ್ಲೋ ಎಂಬ ಸಣ್ಣ ಅಳುಕಿತ್ತು).

ಮಾರನೇ ದಿನ ಬೆಳಗ್ಗೆ, ನಮ್ಮ ತಂಡ ನೇರವಾಗಿ ತೇಜಸ್ವಿಯವರ ಮನೆಗೆ ಹೋಯಿತು. ಉಳಿದವರನ್ನೆಲ್ಲ ಮನೆಯಿಂದ ಸ್ವಲ್ಪ ದೂರದಲ್ಲಿ ನಿಲ್ಲಿಸಿ ನಾನೊಬ್ಬನೇ ಅವರ ಮನೆಗೆ ಹೋದೆ. ರಾಜೇಶ್ವರಿಯವರು ಮನೆಯಲ್ಲಿದ್ದರು. ಅವರಿಗೆ ನಾವು ಬಂದ ಉದ್ದೇಶವನ್ನು ತಿಳಿಸಿದೆ. ಅದಕ್ಕವರು “ನೀವೇ ಹೋಗಿ ಕೇಳಿ ತೋಟದಲ್ಲಿ ಏನೋ ಕೆಲಸ ಮಾಡುತ್ತಿದ್ದಾರೆ” ಎಂದರು.

ತೋಟದಲ್ಲಿ ತೇಜಸ್ವಿಯವರು ಸಣ್ಣ ಕವಲಿಯೊಂದರಲ್ಲಿ ಇಳಿದು ನಿಂತಿದ್ದರು. ಜೊತೆಯಲ್ಲಿ ಒಬ್ಬ ಗಾರೆಯವನಿದ್ದ. ಕವಲಿಯಲ್ಲಿ ನೀರು ಸಣ್ಣದಾಗಿ ಹರಿಯುತ್ತಿತ್ತು. ಅವರಿಬ್ಬರೂ ಸೇರಿ ಕವಲಿಗೆ ಕಟ್ಟು ಹಾಕಿ ನೀರು ನಿಲ್ಲಿಸುವ ಪ್ರಯತ್ನದಲ್ಲಿದ್ದರು.

“ನಮಸ್ಕಾರ ಸಾರ್” ಎಂದೆ. ಅಲ್ಲಿಂದಲೇ ತಲೆಯೆತ್ತಿ ನೋಡಿ.

“ಓಹೋ ಬಾರಯ್ಯ, ನೋಡು ನಮ್ಮ ಮೂಡಿಗೆರೆಲೂ ನೀರಿಗೆ ಈ ಗತಿ ಬಂತು. ಇದನ್ನೇ ಕಟ್ಟಿ ನಿಲ್ಸೋಕೆ ಒದ್ದಾಡ್ತಾ ಇದ್ದೀನಿ. ಬಾ ಅಂತ ಹೇಳಿಕಳ್ಸಿದ್ರೆ, ಈ ಗಾರೆಯವ್ನು ಹದಿನೈದು ದಿನ ತಡ ಮಾಡ್ದ, ಅಷ್ಟರಲ್ಲಿ ನೀರೇ ಅರ್ಧ ಕಮ್ಮಿಯಾಗಿಹೋಯ್ತು” ಎಂದರು. ಅದಕ್ಕೆ ಗಾರೆಯವನು “ಅವತ್ತು ನೀರು ಜಾಸ್ತಿ ಇತ್ತು ಕಟ್ಟಂಗಿರ‍್ಲಿಲ್ಲ” ಎಂದು ತನ್ನನ್ನು ಸಮರ್ಥಿಸಿಕೊಂಡ.

ನಾವು ಕಳೆದ ವರ್ಷ ‘ಶ್ರೀ ಪಡ್ರೆ’ ಯವರನ್ನು ಕರೆಸಿ ಹಾನಬಾಳು, ಸಕಲೇಶಪುರ, ಬೆಳ್ಳೇ ಕೆರೆಗಳಲ್ಲಿ ನೀರಿಂಗಿಸುವ ಬಗ್ಗೆ ಜಾಗ್ರತಿ ಮೂಡಿಸುವ ಒಂದು ಕಾರ್ಯಕ್ರಮ ಮಾಡಿದ್ದೆವೆಂದೂ, ಅದರಿಂದ ಈಗ ಕೆಲವರು ತಮ್ಮ ಜಮೀನಿನಲ್ಲಿ ನೀರಿಂಗಿಸುವ ಕೆಲಸ ಮಾಡುತ್ತಿದ್ದಾರೆಂದೂ, ನಾನೂ ನಮ್ಮ ತೋಟದಲ್ಲಿ ನೀರಿಂಗಿಸಲು ಪ್ರಾರಂಭ ಮಾಡಿ ನನಗೆ ಸ್ವಲ್ಪ ಅನುಕೂಲವಾಗಿದೆಯೆಂದೂ ಹೇಳಿದೆ.

“ಈ ನಮ್ಮ ಮೂಡಿಗೆರೆಲೂ ಅಂಥಾದ್ದೇನಾದ್ರೂ ಮಾಡ್ಬೇಕಪ್ಪ” ಎಂದರು.

“ಸಾರ್ ಇಲ್ಲೂ ಒಂದು ಕಾರ್ಯಕ್ರಮ ಮಾಡೋಣ ಜನರಿಗೆ ಸ್ವಲ್ಪ ಮಾಹಿತಿನಾದ್ರೂ ಸಿಗುತ್ತೆ” ಎಂದೆ.

“ಯಾರಿಗೆ ಹೇಳೋದು. ನಂಗಂತೂ ಸಾಕಾಗಿಹೋಗಿದೆ ಕಣಯ್ಯ. ಬಾ ಒಂದು ಕಾಫಿ ಕುಡ್ದು ಬರೋಣ” ಎಂದು ಕವಲಿಯಿಂದ ಮೇಲೆ ಹತ್ತಿ ಮನೆಯ ಕಡೆ ಹೊರಟರು.

ನಾವು ಮನೆಯತ್ತ ತಿರುಗುತ್ತಿದ್ದಂತೆ “ನಂಗೆ ಇಲ್ಲೇ ಕಳ್ಸ್‌ಬುಡಿ ಕಾಫಿ” ಕವಲಿಯಿಂದ ಧ್ವನಿ ಕೇಳಿಬಂತು. ಪಕ್ಕನೆ ತೇಜಸ್ವಿಯವರ ಗೆಳೆಯ ರಾಮದಾಸರ ಧ್ವನಿಯಂತಿತ್ತು. ಮತ್ತೊಮ್ಮೆ ಹೊರಳಿ ಯಾರೆಂದು ನೋಡಿದೆ. ಇಲ್ಲ ಹಾಗೆಂದವನು ಗಾರೆಯವನೇ!.

“ಸರಿ ಹಾಗಾದ್ರೆ ನೀನಿಲ್ಲೇ ಇರ್ತೀಯ?” ಎಂದು ಗಾರೆಯವನಿಗೆ ಹೇಳಿ ತೇಜಸ್ವಿ ಮನೆಯತ್ತ ಹೆಜ್ಜೆ ಹಾಕಿದರು. ನಾನು ಹಿಂಬಾಲಿಸಿದೆ. ಮಾತು ಕಾಫಿಯತ್ತ ತಿರುಗಿದ್ದರಿಂದ, ಇದೇ ತಕ್ಕ ಸಮಯವೆಂದುಕೊಂಡು “ಕಾಫಿ ಸಮಸ್ಯೆಯ ಬಗ್ಗೆ ದೂರದರ್ಶನಕ್ಕೊಂದು ಕಾರ್ಯಕ್ರಮ ಮಾಡ್ತಾ ಇದ್ದೀವಿ. ಅದಕ್ಕೆ ಸಂಬಂಧಪಟ್ಟಂತೆ ಹಲವರ ಸಂದರ್ಶನ ಮಾಡಿದ್ದೀವಿ. ಈಗ ನಿಮ್ದೊಂದು ಸಂದರ್ಶನ ಬೇಕಿತ್ತು” ಎಂದೆ.

“ನನಗೆ ಅದಕ್ಕೆಲ್ಲ ಬರೋಕಾಗಲ್ಲ ಕಣಯ್ಯ, ಪುರುಸೋತ್ತಿಲ್ಲ” ಎಂದರು.

“ನೀವು ಬರ್ಬೇಡಿ ಸಾರ್. ಇಲ್ಲೇ ಮಾಡೋಣ”.

“ಎಂದೋ ಮಾರಾಯ”.

“ಇವತ್ತೇ ಸಾರ್. ಈಗಲೇ.”

“ಎಲ್ಲಿದ್ದಾರೆ ಅವರೆಲ್ಲ” ಸಂಚಿನ ವಾಸನೆ ಹಿಡಿದವರಂತೆ ಕೇಳಿದರು.

“ಇಲ್ಲೇ ಮೇಲೆ ಕಾಯ್ತಾ ಇದ್ದಾರೆ.” ಕದ್ದು ದಕ್ಕಿಸಿಕೊಂಡವನಂತೆ ಹೇಳಿದೆ!

“ನೀವೆಲ್ಲ ಒಳ್ಳೆ ಕಿರಾತಕರು – ಕರಿ ಅವರನ್ನೂ ಕಾಫಿಗೆ!”

ಎಲ್ಲರನ್ನೂ ಮನಗೆ ಕರೆದು ಕಾಫಿ ಸಮಾರಾಧನೆ ಆಯಿತು. ಆಮೇಲೆ ದೂರದರ್ಶನದವರ ಕ್ಯಾಮರಾ, ಕ್ಯಾಮರಾ ಸ್ಟಾಂಡ್, ಇತ್ಯಾದಿಗಳ ಬೆಲೆ ಅದರ ಸೂಕ್ಷ್ಮತೆ ಇವುಗಳನ್ನೆಲ್ಲ ವಿವರವಾಗಿ ಕೇಳಿ ತಿಳಿದುಕೊಂಡರು. ಎಲ್ಲವನ್ನೂ ನೋಡಿ “ಈ ಕ್ಯಾಮರಾ ಇರ‍್ಲಿ ಅದರ ಸ್ಟಾಂಡನ್ನು ಕೊಳ್ಳೋಕ್ಕಾಗಲ್ಲ” ಎಂದವರೇ

“ನಂಗಂತೂ ನಿಮ್ಮ ದೂರದರ್ಶನ ಒಂಚೂರು ಇಷ್ಟ ಇಲ್ಲ. ಇಷ್ಟೊಳ್ಳೆ ಕ್ಯಾಮರ ಇಟ್ಕೊಂಡಿದ್ದೀರ. ಟಿ.ವಿ.ಲಿ ಚಿತ್ರ ನೋಡಿದ್ರೆ ಸರಿಯಾಗಿ ಬರೋದೆ ಇಲ್ಲ” ಎಂದರು.

ಆ ಮೇಲೆ ಅವರ ತೋಟದ ಮಧ್ಯದಲ್ಲೇ ನಿಂತು, ಸಂದರ್ಶನವೂ ನಡೆಯಿತು. ತೇಜಸ್ವಿ ಕಾಫಿ ಬೆಳೆಗಾರರ ಬಗ್ಗೆ ಮಾತನಾಡುತ್ತಾ ‘ನಾವು ಕಳೆದ ನಲುವತ್ತು ವರ್ಷಗಳಿಂದ ಕಾಫಿ ಮಾರಾಟದ ಸಂಪೂರ್ಣ ಜವಾಬ್ದಾರಿಯನ್ನು ಕಾಫಿ ಬೋರ್ಡನ ಕೈಗೊಪ್ಪಿಸಿ ಕುಳಿತು ಬಿಟ್ಟಿದ್ದೆವು. ಕಾಫಿಗೆ ತಕ್ಕಮಟ್ಟಿನ ಒಳ್ಳೆಯ ಬೆಲೆ ದೊರಕುತ್ತಿದ್ದುದರಿಂದ ಈ ಸ್ಥಿತಿ ಶಾಶ್ವತ ಎಂಬಂತೆ ನಿರಾಳವಾಗಿದ್ದೆವು. ಈಗ ನಮ್ಮ ಉತ್ಪನ್ನದ ಮಾರಾಟದ ಜವಾಬ್ದಾರಿಯನ್ನು ಸಮರ್ಥವಾಗಿ ನಾವೇ ನಿರ್ವಹಿಸಲು ಕಲಿಯಬೇಕಾಗಿದೆ.’ ಕೃಷಿಯಲ್ಲಿನ ಅನಿಶ್ಚಿತ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು, ಅದಕ್ಕೆ ಹೊಂದಿಕೊಂಡು ಬದುಕಲು ಅಗತ್ಯವಾದ ಆರ್ಥಿಕ ಶಿಸ್ತನ್ನು ಕಲಿಯುವ ಬಗ್ಗೆ ಮಾತ್ರವಲ್ಲ ಸಮಗ್ರವಾಗಿ ರೈತರ ಬಗ್ಗೆ, ಅದರಲ್ಲೂ ಕಾಫಿ ಬೆಳೆಗಾರರಿಗಿಂತಲೂ ಇನ್ನೂ ಅನಿಶ್ಚಿತ ಸ್ಥಿತಿಯಲ್ಲಿ ಬದುಕುವ – ಹಣ್ಣು ತರಕಾರಿ ಬೆಳೆಯುವ ರೈತರ ಬಗ್ಗೆಯೂ ಮಾತನಾಡಿದರು. ಆ ರೈತರಿಗೆ ಹೋಲಿಸಿದರೆ ಕಾಫಿ ಬೆಳೆಗಾರರ ಸ್ಥಿತಿ ಅವರಷ್ಟು ಚಿಂತಾಜನಕವಲ್ಲವೆಂದು ನನ್ನ ಅಭಿಪ್ರಾಯ ಎಂದರು. ನಂತರ “ಯಾವ ಸರ್ಕಾರನೂ ರೈತನ ನೆರವಿಗೆ ಬರೋದಿಲ್ಲ, ಹೆಚ್ಚೆಂದರೆ ಸಾಲ ವಸೂಲಿಯನ್ನು ಮುಂದೂಡೋದೋ ಇಲ್ಲಾ ಬಡ್ಡಿ ಒಂದ್ಸೊಲ್ಪ ಕಡಿಮೆ ಮಾಡೋದೋ ಇಂಥಾ ಸಣ್ಣಪುಟ್ಟ ರಿಯಾಯಿತಿ ಕೊಡಬಹುದಷ್ಟೆ. ನಮ್ಮನ್ನು ನಾವೇ ನೋಡಿಕೊಳ್ಳಲು ಕಲೀಬೇಕು” ಎಂದರು. ಇವೆಲ್ಲ ದೂರದರ್ಶನದಲ್ಲಿ ಪ್ರಸಾರವೂ ಆಯಿತು.

ಕಾರ್ಯಕ್ರಮವನ್ನು ಟಿ.ವಿ.ಯಲ್ಲಿ ನೋಡಿದ ಕೆಲವರು ಕಾಫಿ ಬೆಳೆಗಾರರು, ನನ್ನಲ್ಲಿ “ನೀನು ನಮ್ಮೆಲ್ಲರ ಸಂದರ್ಶನ ಮಾಡಬೇಕಿತ್ತು. ನಮ್ಮೆಲ್ಲರನ್ನು ಬಿಟ್ಟು ಆ ತೇಜಸ್ವಿಯವರನ್ನು ಸಂದರ್ಶನ ಮಾಡಿದ್ದೀಯ. ಅವರು ನಮ್ಮ ವಿರುದ್ಧವೇ ಮಾತಾಡಿದರು” ಎಂದು ಜಗಳಕ್ಕೆ ಬಂದರು! ಅವರೆಲ್ಲರಿಗೆ ನಿಜವನ್ನು ಒಪ್ಪಿಕೊಳ್ಳುವುದು ಕಷ್ಟವಾಗಿ ಕಂಡಿರಬೇಕು.

* * *

ಕುವೆಂಪು ಶತಮಾನೋತ್ಸವದ ಸಂದರ್ಭದಲ್ಲಿ ಹಾಸನ ಜಿಲ್ಲಾಡಳಿತ ಉದ್ಘಾಟನಾ ಸಮಾರಂಭಕ್ಕೆಂದು ಕುವೆಂಪು ಅವರ ನಾಟಕವೊಂದನ್ನು ಪ್ರದರ್ಶಿಸಲು ನಮ್ಮ ರಂಗತಂಡಕ್ಕೆ ಆಹ್ವಾನ ನೀಡಿತ್ತು. ಕುವೆಂಪು ಅವರ ಸಣ್ಣ ಕಥೆ ‘ಧನ್ವಂತರಿಯ ಚಿಕಿತ್ಸೆ’ಯನ್ನು ರಂಗಕ್ಕೆ ಅಳವಡಿಸಿ ನಾಟಕವೊಂದನ್ನು ಸಿದ್ಧಪಡಿಸಿಕೊಂಡಿದ್ದೆವು. ನಾಟಕದಲ್ಲಿ ಕುವೆಂಪು ಅವರೇ ಒಂದು ಪಾತ್ರವಾಗಿ ಬರುವಂತೆ, ಆ ಮೂಲಕ ಕುವೆಂಪು ಅವರ ವಿಚಾರಗಳು ಮತ್ತು ಕಾಳಜಿಗಳು ಸ್ವಲ್ಪಮಟ್ಟಿಗೆ ನಾಟಕದಲ್ಲಿ ಚರ್ಚಿತವಾಗುವಂತೆ ರಂಗಪಠ್ಯವೊಂದನ್ನು ತಯಾರಿಸಲಾಗಿತ್ತು. ಆ ಸಂದರ್ಭದಲ್ಲೇ ಒಮ್ಮೆ ಮೂಡಿಗೆರೆಗೆ ಹೋದಾಗ, ತೇಜಸ್ವಿಯವರನ್ನು ಕಂಡು ನಾಟಕದ ವಿಚಾರವನ್ನೂ, ಹಾಗೇ ತಾಲೀಮಿನ ಸಂದರ್ಭದಲ್ಲಿ ತೆಗೆದಿದ್ದ ಕೆಲವು ಫೋಟೋಗಳನ್ನು ತೋರಿಸಿದೆ. ‘ಧನ್ವಂತರಿಯ ಚಿಕಿತ್ಸೆ’ ಗೆ ಕುವೆಂಪು ಪಾತ್ರ ಅಗತ್ಯ ಇತ್ತೇನ್ರಿ? ಎಂದರು.

ಸಾಧ್ಯವಾದರೆ ಮೂಡಿಗೆರೆಯಲ್ಲಿ ಒಂದು ಪ್ರದರ್ಶನ ಮಾಡಬೇಕೆಂದಿದ್ದೇವೆ. ಆಗ ತಿಳಿಸುತ್ತೇನೆ ಬನ್ನಿ ಎಂದೆ. ಕೆಲವು ದಿನಗಳ ನಂತರ ಮೂಡಿಗೆರೆಯ ನೇಚರ್ ಕ್ಲಬ್‌ನವರು ನಾಟಕ ಪ್ರದರ್ಶನದ ವ್ಯವಸ್ಥೆ ಮಾಡಿದರು. ಆಗಲೇ ಈ ನಾಟಕ ಒಂದೆರಡು ಕಡೆ ಪ್ರದರ್ಶನಗಳಾಗಿತ್ತು. ಪ್ರದರ್ಶನಕ್ಕೆ ತೇಜಸ್ವಿಯವರು ಬಂದಿದ್ದರು. ಅಂದು ಪ್ರದರ್ಶನ ಅನೇಕ ಕಾರಣಗಳಿಂದ ಚೆನ್ನಾಗಿರಲಿಲ್ಲ.

ಕೆಲವು ದಿನಗಳ ನಂತರ ಅವರನ್ನು ಭೇಟಿಯಾದಾಗ ಸ್ವಲ್ಪ ಅಳುಕುತ್ತಲೇ ನಾಟಕದ ಬಗ್ಗೆ ಕೇಳಿದೆ. “ಯಾಕೆ ಏನಾಯ್ತು ನಿಮಗೆ ಅವತ್ತು”. ಅಂದು ಬಾಡಿಗೆಗೆ ತಂದಿದ್ದ ಜನರೇಟರ್‌ನ ತೊಂದರೆಯಿಂದಾಗಿ ನಮ್ಮ ಡಿಮ್ಮರ್ ಒಂದು ಸುಟ್ಟುಹೋಯಿತು, ಧ್ವನಿ ವ್ಯವಸ್ಥೆಯೂ ಹಾಳಾಯಿತು. ಜೊತೆಗೆ ಒಂದಿಬ್ಬರು ನಟರೂ ಬದಲಿಯಿದ್ದರು ಎಂದು ವಿವರಿಸಿದೆ. “ಅವೆಲ್ಲ ಸಬೂಬು ಕಣ್ರಿ ಜನರ ಮುಂದೆ ಬರಬೇಕಾದ್ರೆ ಎಲ್ಲ ಸಿದ್ಧತೆ ಮಾಡಿಕೊಂಡೇ ಬರಬೇಕು, ಏನನ್ನಾದರೂ ಬರೀಬೇಕಾದ್ರೂ ಅಷ್ಟೇ, ಸರಿಯಾಗಿ ಯೋಚ್ನೆ ಮಾಡಿ ಕೂತ್ಕೊಂಡು ಬರೀಬೇಕು, ಅರೆಬರೆ ಕೆಲಸ ನಡಿಯೋಲ್ಲ” ಎಂದರು.

“ಹೋರಾಟಗಳಂತೇ ನಮಗೆ ಇದೊಂದು ತರಾ ಅಭ್ಯಾಸ ಆಗ್ಬಿಟ್ಟಿದೆ ಸಾರ್, ಮಧ್ಯದಲ್ಲಿ ಯಾರೋ ಕೈಕೊಡೋದು, ಇನ್ನೇನೋ ತೊಂದ್ರೆ ಆಗೋದು, ಹೀಗೆ ಮುಂದುವರಿತಾ ಇದ್ದೀವಿ” ಎಂದೆ.

“ಅದ್ಕೇ ಕಣ್ರಿ ನನಗೆ ಜನರ ಗುಂಪು ಕಟ್ಟಿಕೊಂಡು ಮಾಡೋ ಕೆಲಸನೇ ಬೇಡಾ ಅನ್ನಿಸಿಬಿಟ್ಟಿದೆ. ಏನಿದ್ರೂ ನಾನೊಬ್ನೇ ಮಾಡ್ಬೇಕು ಅಷ್ಟೆ.” (ಇದೇ ಮಾತನ್ನು ಬೇರೊಂದು ಸಂದರ್ಭದಲ್ಲಿ ಕವಿ ಸುಬ್ರಾಯ ಚೊಕ್ಕಾಡಿಯವರೂ ಹೇಳಿದ್ದರು.)

“ಸಾರ್ ನಾಟಕದಲ್ಲಿನ ಕುವೆಂಪು ಪಾತ್ರ…… .” ರಾಗವೆಳೆದೆ.

“ಹೇಗೂ ಮಾಡ್ತಾ ಇದ್ದೀರಲ್ಲ, ಇರ‍್ಲಿ ಬಿಡಿ” ಎಂದರು.

“ಸಾರ್ ಆ ಕಡೆ ಬಂದಾಗ ನೋಡಿ ದಾರಿ ಪಕ್ಕದಲ್ಲೇ, ಕಾಣ್ಸುತ್ತೆ ಗುಡ್ದ ಮೇಲೆ ನಾವು ಕಟ್ತಾ ಇರೋ ರಂಗಮಂದಿರ” ಎಂದೆ.

“ತುಂಬಾ ಹೆವಿಯಾಗಿ ಮಾಡ್ಕೋಬೇಡಿ, ಕೆಲವು ಸಾರಿ ಕಾರ್ಯಕ್ರಮಗಳಿಗಿಂತ ಕಟ್ಟಡಗಳೇ ಭಾರವಾಗಿ ಬಿಡ್ತವೆ” ಎಂದು ಕಿವಿಮಾತು ಹೇಳಿದರು.

* * *

ಹಾಸನದಿಂದ ಕೆಲವರು ಗೆಳೆಯರು ನಮ್ಮೂರಿನ ಪಕ್ಕದ ‘ಮೂರು ಕಣ್ಣು ಗುಡ್ಡ’ದಲ್ಲಿ ಗುಡ್ಡದಲ್ಲಿ ಚಾರಣಕ್ಕೆಂದು ಬಂದಿದ್ದರು. ಅವರಲ್ಲಿ ಒಂದಿಬ್ಬರು ಸರ್ಕಾರಿ ನೌಕರರಿದ್ದುದರಿಂದ ತಿಂಗಳ ಎರಡನೇ ಶನಿವಾರ ಮತ್ತು ಭಾನುವಾರಕ್ಕೆ ಹೊಂದಿಸಿಕೊಂಡು ಅವರು ಕಾರ್ಯಕ್ರಮ ಹಾಕಿಕೊಂಡಿದ್ದರು. ಚಾರಣ ಮುಗಿಸಿ ಭಾನುವಾರ ಮಧ್ಯಾಹ್ನ ನಮ್ಮೂರಿಗೆ ಬಂದರು. ಇನ್ನೂ ಅರ್ಧ ದಿನ ಸಮಯ ಉಳಿದಿರುವುದರಿಂದ ಮೂಡಿಗೆರೆಗೆ ಹೋಗಿ ತೇಜಸ್ವಿಯವರಲ್ಲಿ ಕೆಲವು ಪುಸ್ತಕಗಳನ್ನು ಖರೀದಿಸುವ ಯೋಜನೆ ಹಾಕಿ ಜೊತೆಯಲ್ಲಿ ಬರುವಂತೆ ನನ್ನನ್ನು ಆಹ್ವಾನಿಸಿದರು. ನನಗೂ ಅಂದು ಬೇರೇನೂ ಕೆಲಸವಿಲ್ಲದ್ದರಿಂದ ಅವರೊಂದಿಗೆ ಹೊರಟೆ. ಅವರಲ್ಲಿ ಒಂದಿಬ್ಬರು ರೈತ ಸಂಘದ ಹಾಗೂ ಸಾಕ್ಷರತಾ ಆಂದೋಲನದ ಕಾಲದ ನನ್ನ ಮಿತ್ರರಿದ್ದುದೂ ಇದಕ್ಕೆ ಕಾರಣವಾಗಿತ್ತು.

ನಾವೆಲ್ಲರೂ ‘ನಿರುತ್ತರ’ ವನ್ನು ತಲುಪುವಾಗ ಸಂಜೆ ನಾಲ್ಕು ಗಂಟೆಯಾಗಿತ್ತು. ತೇಜಸ್ವಿಯವರು ಮನೆಯಲ್ಲಿರಲಿಲ್ಲ. ಆದರೆ ಅವರ ಹಲವು ವರ್ಷಗಳ ಸಂಗಾತಿಯಾಗಿ ವ್ಯವಹಾರಗಳನ್ನು ನೋಡಿಕೊಳ್ಳುತ್ತಿರುವ ರಾಘವೇಂದ್ರ ಇದ್ದರು. ನಮ್ಮ ಗೆಳೆಯರು ಮನೆಯ ಸುತ್ತ ತಿರುಗಿ ಫೋಟೋಗಳನ್ನು ತೆಗೆದುಕೊಂಡು, ನಂತರ ಪುಸ್ತಕಗಳನ್ನು ನೋಡಿ ಹಲವು ಪುಸ್ತಕಗಳನ್ನು ಕೊಂಡುಕೊಂಡರು. ಆ ವೇಳೆಗೆ ಮೂಡಿಗೆರೆಗೆ ಹೋಗಿದ್ದ ತೇಜಸ್ವಿಯವರೂ ಮನೆಗೆ ಬಂದರು. ಆಗಷ್ಟೇ ಅವರ ತೆಗೆದ ಛಾಯಾಚಿತ್ರಗಳನ್ನು ಒಳಗೊಂಡ ಶುಭಾಶಯ ಪತ್ರಗಳು ಬಂದಿದ್ದವು. ಅವುಗಳನ್ನು ನೋಡಿ ಚೆನ್ನಾಗಿರುವ ಕೆಲವನ್ನು ಆರಿಸಿಕೊಡುವಂತೆ ಹಾಸನದ ಗೆಳೆಯರೊಬ್ಬರು ನನ್ನಲ್ಲಿ ಕೇಳಿದರು. ನಾನು ಆರಿಸತೊಡಗಿದೆ. ಅಷ್ಟರಲ್ಲಿ ರಾಘವೇಂದ್ರ ಇನ್ನೊಂದಿಷ್ಟನ್ನು ತಂದುಕೊಟ್ಟರು. ಅದರಲ್ಲಿ ನಾನಾ ಬಗೆಯ ಹಕ್ಕಿಗಳ ಚಿತ್ರಗಳಿದ್ದವು. ಕೆಲವರಿಗೆ ಯಾವುದನ್ನು ಆರಿಸಿಕೊಳ್ಳುವುದೆಂದು ತಿಳಿಯದಾಯಿತು. ಆಗ ತೇಜಸ್ವಿ “ಅದು ಹಂಗೇ ಕಣ್ರೀ, ಒಂದು ನೋಡುವಾಗ ಇನ್ನೊಂದು ಚೆನ್ನಾಗಿ ಕಾಣುತ್ತೆ. ನಿಮಗೆ ಬೇಕಾದಷ್ಟು ಸುಮ್ನೆ ಆರಿಸಿಕೊಳ್ಬೇಕಷ್ಟೆ” ಎಂದರು.

ಎಲ್ಲರ ಪರಿಚಯ ಮಾಡಿಕೊಂಡ ನಂತರ ಮಾತು ಮತ್ತೊಮ್ಮೆ ರೈತ ಚಳುವಳಿ, ಸಾಕ್ಷರತಾ ಆಂದೋಲನ, ಇವುಗಳತ್ತವೂ ಸಾಗಿತು. ಇವರೆಲ್ಲರೂ ಚಾರಣಕ್ಕೆ ಬಂದವರೆಂದು ತಿಳಿದಾಗ ನೀವು ಮೂರುಕಣ್ಣು ಗುಡ್ಡಕ್ಕಿಂತ ಇನ್ನೂ ಜೇನುಕಲ್ಲು ಗುಡ್ಡ ಅಥವಾ ಚಾರ್ಮಾಡಿ ಇಲ್ಲವೇ ಕಬ್ಬಿನಾಲೆ – ಬಿಸಲೆ ಇಂಥ ಕಡೆ ಹೋಗ್ಬೇಕು, ಅಲ್ಲ ಮೂರುಕಣ್ಣು ಗುಡ್ಡಕ್ಕೆ ಹೋಗ್ಬಾರ‍್ದು ಅಂತೇನೂ ಅಲ್ಲ,” ಎಂದರು.

ಆಗ ಹಾಸನದವರೊಬ್ಬರು “ಸಾರ್ ಅಲ್ಲಿಗೇ ಹೋಗ್ಬೋದಾಗಿತ್ತು (ನನ್ನನ್ನು ತೋರಿಸಿ) ಇವ್ರ ಜೊತೇಲಿ ಹೋದ್ರೆ ನಮ್ಮನ್ನ ನಕ್ಸಲೈಟರು ಅಂದ್ಕೊಂಡಬಿಟ್ಟಾರು ಅಂತ ನಾವು ಅಲ್ಲಿಗೆಲ್ಲ ಹೋಗಲಿಲ್ಲ” ಎಂದರು. ಉಳಿದವರೆಲ್ಲ ಜೋರಾಗಿ ನಕ್ಕರು. ತೇಜಸ್ವಿ ನಗಲಿಲ್ಲ.

ಆ ಸಮಯದಲ್ಲಿ ಪ್ರತಿದಿನವೆಂಬಂತೆ ಪತ್ರಿಕೆಗಳಲ್ಲಿ ನಕ್ಸಲೀಯರ ಚಟುವಟಿಕೆಗಳು ವರದಿಯಾಗುತ್ತಿದ್ದವು. ಒಂದೆರಡು ಎನ್‌ಕೌಂಟರುಗಳೂ ಆಗಿದ್ದವು. ತೀರ್ಥಹಳ್ಳಿ, ಉಡುಪಿ, ಮೂಡಿಗೆರೆಯ ಕೆಲವು ಭಾಗಗಳಲ್ಲಿ ಅವರ ಚಟುವಟಿಕೆ ವಿಸ್ತರಿಸಿದೆಯೆಂದು ಆ ವರದಿಗಳು ತಿಳಿಸಿದ್ದವು.

ಅಷ್ಟರಲ್ಲಿ ಹಳೆಯ ರೈತ ಸಂಗಾತಿಗಳೊಬ್ಬರು “ಇವತ್ತಿನ ಪರಿಸ್ಥಿತಿ ನೋಡಿದ್ರೆ ಅವ್ರು ಮಾಡೋದೇ ಸರಿ ಅನ್ಸುತ್ತೆ, ಬೇರೆ ದಾರೀಲಿ ಈ ಸರ್ಕಾರಗಳನ್ನ ಎಚ್ಚರಿಸೋಕೇ ಆಗೋಲ್ವೇನೋ” ಎಂದರು.

ಆ ಮಾತಿನಿಂದ ತೇಜಸ್ವಿಯವರು ಸ್ವಲ್ಪ ಸಿಟ್ಟಿಗೆದ್ದಂತೆ ಕಂಡರು. “ರೀ ನಾವೆಲ್ಲ ಸ್ವಲ್ಪ ಜವಾಬ್ದಾರಿಯಿಂದ ಮಾತಾಡ್ಬೇಕ್ರಿ, ಅಲ್ಲಾ ಬೇರೆ ದಾರೀನೇ ಇಲ್ಲಾ ಅಂದರೆ ಏನಾದ್ರೂ ದಾರಿ ಕಂಡ್ಕೋಬೇಕಪ್ಪ, ಈ ತರ ಹೇಳಿ ಹೇಳಿ ಪಾಪ ಆ ಸಣ್ಣ ವಯಸ್ಸಿನ ಹುಡುಗ್ರು ಅಲ್ಲಿ ಕಾಡಲ್ಲಿ ಕೂತ್ಕೊಂಡು ಹುಚ್ಚುಚ್ಚಾಗಿ ಏನೋ ಮಾಡೋಕ್ಕೋಗಿ ಗುಂಡೇಟು ತಿಂದು ಸಾಯ್ತಾ ಇದಾರಲ್ರಿ. ಅವ್ರಿಗೆಲ್ಲಾ ನೀವು ಕಾಡು ಬಿಟ್ಟು ಈಚೆಗೆ ಬನ್ನಿ, ಹೋರಾಟಕ್ಕೆ ಬೇರೆ ದಾರಿಗಳಿವೆ ಅಂತ ಹೇಳೋರ್ಯಾರು.” ಎಂದರು. ನಮ್ಮ ಗೆಳೆಯರೆಲ್ಲ ಎರಡು ನಿಮಿಷ ಮೌನವಾಗಿಬಿಟ್ಟರು.

ಮತ್ತೆ ಅವರೇ ಮುಂದುವರಿದು “ನಾನ್ಹೀಗೆ ಅಂದೆ ಅಂತ ಬೇಜಾರು ಮಾಡ್ಕೋಬೇಡಿ. ಇದ್ರಲ್ಲಿ ನಮ್ಮೆಲ್ರ ಜವಾಬ್ದಾರಿ ಇದೆ. ನಾವು ಆಡುವ ಮಾತು, ನಮ್ಮ ನಡವಳಿಕೆಗಳು ಅಂತಾ ಹುಡುಗರನ್ನು ಇನ್ನಷ್ಟು ಹುಚ್ಚು ಸಾಹಸಕ್ಕೆ ಉತ್ತೇಜಿಸುವಂತೆ ಇರಬಾರದು. ಈ ಆಧುನಿಕ ಕಾಲದ ರಾಜ್ಯ ಶಕ್ತಿಯ ವಿರುದ್ಧ ಇಂತಾ ಹೋರಾಟಗಳು ಪ್ರತಿಹಿಂಸೆಯನ್ನ ಹುಟ್ಟು ಹಾಕ್ತವೆ ಅಷ್ಟೆ. ಬೇರೆ ಶಾಂತಿಯುತ ದಾರಿಗಳನ್ನು ಹುಡುಕ್ಬೇಕು” ಎಂದರು.

* * *

೨೦೦೭ರ ಜನೆವರಿಯಲ್ಲಿ ಒಂದು ಕಲಾ ಶಿಬಿರ, ಸಂಸ್ಕೃತಿ ಶಿಬಿರ ಮತ್ತು ನಾಟಕೋತ್ಸವವನ್ನು ಜೊತೆಯಾಗಿ ಮಾಡಿದ್ದೆವು. ಕಲಾವಿದ ಮೋಹನ ಸೋನ ಅವರ ನೇತೃತ್ವದಲ್ಲಿ ಬೇರೆ ಬೇರೆ ಊರುಗಳಿಂದ ಬಂದ ಅನೇಕ ಯುವ ಕಲಾವಿದರು ನಮ್ಮೂರಿನ ಹಲವು ಆಸಕ್ತ ಮಕ್ಕಳನ್ನೂ ದೊಡ್ಡವರನ್ನೂ ಜೊತೆಗೂಡಿಸಿಕೊಂಡು ಊರ ತುಂಬೆಲ್ಲ ಚಿತ್ರಗಳನ್ನು ರಚಿಸುವುದರೊಂದಿಗೆ ತರಬೇತಿಯನ್ನೂ ನೀಡಿದ್ದರು. ಸಾವಯವ ಕೃಷಿ, ಪರಿಸರ ರಕ್ಷಣೆ, ನಕ್ಷತ್ರ ವೀಕ್ಷಣೆ, ಚಲನಚಿತ್ರ ಪ್ರದರ್ಶನಗಳಲ್ಲದೆ, ಮಕ್ಕಳಿಗೆ ಮತ್ತು ದೊಡ್ಡವರಿಗೆ ರಂಗ ತರಬೇತಿ, ನಾಟಕ ಪ್ರದರ್ಶನಗಳೂ ಇದ್ದವು.

ಮುಕ್ತಾಯ ಸಮಾರಂಭಕ್ಕೆ ಅತಿಥಿಯಾಗಿ ಬರುವಂತೆ ತೇಜಸ್ವಿಯವರನ್ನು ಆಹ್ವಾನಿಸಲು ನಾವು ಕೆಲವರು ಮೂಡಿಗೆರೆಗೆ ಹೋದೆವು, ಜೊತೆಯಲ್ಲಿ ಖ್ಯಾತ ಮಕ್ಕಳ ರಂಗ ನಿರ್ದೇಶಕ ಮೂರ್ತಿ ದೇರಾಜೆಯವರೂ ಇದ್ದರು. ತೇಜಸ್ವಿಯವರು ಅನಾರೋಗ್ಯಕ್ಕೊಳಗಾಗಿ ಮೈಸೂರಿನಲ್ಲಿ ಚಿಕಿತ್ಸೆ ಪಡೆದು ಬಂದು ಕೆಲವು ದಿನಗಳಾಗಿದ್ದುವಷ್ಟೆ. ನಾವು ಹೋದಾಗ ಅವರಿನ್ನೂ ಜ್ವರದಿಂದ ನರಳುತ್ತಿದ್ದರು.

ಮನೆಯಂಗಳಕ್ಕೆ ನಾವು ತಲುಪಿದಾಗ ಹೊರಗೆ ಬಂದು ನಮ್ಮನ್ನು ನೋಡಿ “ಯಾಕ್ರಯ್ಯ ಈಗ ಬಂದ್ರಿ. ಬೇರೆ ಕೆಲ್ಸ ಇಲ್ಲ ನಿಮ್ಗೆ” ಎಂದು ಗದರುತ್ತಾ ಮನೆಯೊಳಗೆ ಹೋದರು.

ನಾನು ಮೂರ್ತಿಯವರಿಗೆ ನನ್ನನ್ನು ಹಿಂಬಾಲಿಸುವಂತೆ ಕಣ್ಣಿನಲ್ಲೇ ಸೂಚಿಸಿ ಅವರ ಹಿಂದೆಯೇ ಮನೆಯೊಳಕ್ಕೆ ಹೋದೆ.

ಅವರು ಮೆಲ್ಲನೆ ಕುರ್ಚಿಯಲ್ಲಿ ಕುಳಿತು, “ಅಲ್ಲಾ ಇದು ವೈರಲ್ ಫಿವರ್ ಕಣ್ರಯ್ಯ, ನಿಮ್ಗೆ ಅಂಟಿಕೊಂಡ್ರೆ ಏನ್ಮಾಡ್ತೀರಾ? ಸಿಕ್ಕಾಬಟ್ಟೆ ಮೈ ಕೈ ನೋವು ಬರುತ್ತೆ. ಈಗ ನಾನು ಅನುಭವಿಸ್ತಾ ಇದ್ದೀನಿ, ಆಮೇಲ್ ನೀವೂ ಅನುಭವಿಸ್ಬೇಕಾ?” ಎಂದರು.

ಹೀಗೇ ಮಾತು ಮುಂದುವರಿಯಿತು. ಮಾತು ಕಂಪ್ಯೂಟರ್‌ನತ್ತ ಹೊರಳಿತು.

“ನಾವಿನ್ನೂ ಕಂಪ್ಯೂಟರ್‌ನ ಸರಿಯಾಗಿ ಉಪಯೋಗ ಮಾಡೋದೇ ಕಲ್ತಿಲ್ಲ ಕಣ್ರಿ. ನೋಡಿ ಈ ಮಕ್ಕಳ ಕಥೆಗಳನ್ನೂ ಅಷ್ಟೂ ಚಿತ್ರ ಕಥೆಗಳನ್ನಾಗಿ ಮಾಡಿ ಪುಸ್ತಕ ತರ್ಬೋದು, ಹಾಗೇ ಎನಿಮೇಷನ್‌ನಲ್ಲಿ ಎಂತಾ ಕೆಲ್ಸ ಮಾಡ್ಬೋದು, ಇವೆಲ್ಲ ಮಾಡ್ಬೇಕು. ಇಂಗ್ಲೀಷ್‌ನಲ್ಲಿ ಏನೇನ್ ಮಾಡಿದ್ದಾರೆ ಆ ಥರಾ ನಾವೂ ಮಾಡದೇ ಹೋದ್ರೆ ಉಳಿಯೋಲ್ಲ ಕಣ್ರಿ.. .” ಎಂದು ಮುಂದುವರೆದು.. . “ಕವಿಶೈಲದಲ್ಲೊಂದು ನಾಟ್ಕ ಮಾಡ್ರೀ” ಎಂದರು. ಮಾತು ಕಥೆ ಹೀಗೇ ಅರ್ಧಗಂಟೆ ಮುಂದುವರಿಯಿತು. “ಜ್ವರ ಕಮ್ಮಿಯಾದ್ರೆ ಖಂಡಿತ ಕಾರ್ಯಕ್ರಮಕ್ಕೆ ಬರ್ತೀನಿ” ಎಂದರು.

ಅಲ್ಲಿಂದ ಹೊರಡುವಾಗ “ಅಂತೂ ಒಟ್ಟೂ ನಿಮ್ಮ ಆರೋಗ್ಯ ಹೇಗಿದೆ ಸಾರ್ ಈಗ, ಪರವಾಗಿಲ್ವೆ?’ ಎಂದೆ.

“ಹೋಗೋಕೊಂದು ಕಾರಣ ಬೇಕಲ್ಲಪ್ಪಾ ಏನೇನೋ ಬರ್ತಾ ಇದೆ” ಎಂದರು ನಗುತ್ತಾ.

ನಮ್ಮ ಕಾರ್ಯಕ್ರಮಗಳ ಮುಕ್ತಾಯದ ದಿನ ತೇಜಸ್ವಿಯವರ ಹಲವು ವರ್ಷಗಳ ಒಡನಾಡಿ ರಾಘವೇಂದ್ರರಿಗೆ ಫೋನ್ ಮಾಡಿ ನೆನಪಿಸಿದೆ. ಕಾರ್ಯಕ್ರಮಕ್ಕೆ ಅವರೂ ಬರುವವರಿದ್ದರು. ಆದರೆ ತೇಜಸ್ವಿಯವರ ಆರೋಗ್ಯ ಸ್ವಲ್ಪ ಮಾತ್ರವೇ ಸುಧಾರಿಸಿದೆಯೆಂದೂ ಅಲ್ಲದೆ ಅಂದು ಅವರ ಮಗಳು ಮನೆಗೆ ಬರುವವಳಿದ್ದಾಳೆಂದೂ ಆ ಕಾರಣದಿಂದ ಇಂದು ಬರಲಾಗುತ್ತಿಲ್ಲವೆಂದು ರಾಘವೇಂದ್ರ ತಿಳಿಸಿದರು.

ತೇಜಸ್ವಿಯವರು ಹೋದರೆಂದು ನಮ್ಮ ತಂಡದ ನಟ ಸತೀಶ್ ಬೆಳ್ಳೇಕೆರೆ ಫೋನ್ ಮಾಡಿ ತಿಳಿಸಿದಾಗ ಟಿ.ವಿ. ನೋಡಲು ನಮ್ಮಲ್ಲಿ ಕರೆಂಟಿರಲಿಲ್ಲ. ಮಾರನೇ ದಿನ ಬೆಳಗ್ಗೆ ಸಕಲೇಶಪುರದಲ್ಲಿ ನಾವೊಂದಷ್ಟು ಜನರು ಹೊರಟು ಮೊದಲು ಮೂಡಿಗೆರೆಗೆ ನಂತರ ಕುಪ್ಪಳ್ಳಿಗೆ ಹೋಗುವ ಯೋಜನೆ ಹಾಕಿದೆವು. ಎಲ್ಲರೂ ಹೊರಟು ಸಿದ್ಧರಾದಾಗ ಸಕಲೇಶಪುರದ ಗೆಳೆಯರೊಬ್ಬರು “ನಾವು ಹೋಗೋದು ಬೇಡ ತೇಜಸ್ವಿಯವರನ್ನು ಇದುವರೆಗೆ ಹೇಗೆ ನೋಡಿದ್ದೆವೋ ಆ ನೆನಪು ನಮ್ಮಲ್ಲಿ ಹಾಗೇ ಉಳೀಲಿ” ಎಂದರು. ಹೆಚ್ಚಿನವರೆಲ್ಲರ ಮನಸ್ಸಿನಲ್ಲೂ ಅದೇ ಭಾವನೆ ಇತ್ತು. ಪ್ರಯಾಣ ರದ್ದು ಮಾಡಿದೆವು.

“ಕವಿಶೈಲದಲ್ಲಿ ಒಂದು ನಾಟಕ ಮಾಡಿ” ಎಂದಿದ್ದರು ತೇಜಸ್ವಿ.

ನಮ್ಮ ನಾಟಕ ತಂಡ ಅಲ್ಲಿಗೆ ತಲಪುವ ಮೊದಲೇ ಕವಿಶೈಲದಲ್ಲಿ ಲೀನವಾಗಿ ಹೋಗಿದ್ದರು.

ಇದರೊಂದಿಗೆ ಒಂದೆರಡು ವಿಷಯಗಳನ್ನು ಇಲ್ಲಿ ನೆನಪಿಸಿಕೊಳ್ಳುವುದು ಉಚಿತವೆಂದು ನನ್ನ ಭಾವನೆ.

  • ೨೦೦೯ರಲ್ಲಿ ತೇಜಸ್ವಿಯವರ ನೆನಪಿನಲ್ಲಿ ಒಂದು ನಾಟಕೋತ್ಸವವನ್ನು ಮಾಡಿದೆವು. ನಾಲ್ಕು ದಿನಗಳ ಕಾಲ ನಡೆದ ನಾಟಕೋತ್ಸವದಲ್ಲಿ, ತೇಜಸ್ವಿಯವರ ‘ಪಾಕ ಕ್ರಾಂತಿ’ ಯನ್ನು ರಂಗ ಅಳವಡಿಸಿ ಪ್ರದರ್ಶನವನ್ನು ನೀಡಿದ್ದೆವು. ನಾಲ್ಕು ದಿನಗಳ ಅಡಿಗೆ ಮತ್ತು ಊಟದ ವ್ಯವಸ್ಥೆಯನ್ನು ಬಿರಿಯಾನಿ ಕರಿಯಪ್ಪ ವಹಿಸಿಕೊಂಡಿದ್ದರು. ನಾಟಕೋತ್ಸವದ ಕೊನೆಯ ದಿನ ವೇದಿಕೆಯಲ್ಲಿ ಕರಿಯಪ್ಪನವರನ್ನು ಸನ್ಮಾನಿಸಲಾಯಿತು.
  • ನಮ್ಮೂರಲ್ಲಿ ಕಟ್ಟುತ್ತಿರುವ ರಂಗ ಮಂದಿರ, ಗ್ರಂಥಾಲಯ, ವಾಚನಾಲಯ ಮತ್ತು ಅತಿಥಿಗೃಹಗಳ ಸಂಕೀರ್ಣಕ್ಕೆ “ಪೂರ್ಣಚಂದ್ರ ತೇಜಸ್ವಿ ರಂಗಮಂದಿರ ಸಂಕೀರ್ಣ”ವೆಂದು ಹೆಸರಿಡಲಾಗಿದೆ.