ಅದು ಐವತ್ತರ ದಶಕದ ಕೊನೆಯ ಭಾಗ. ಪ್ರೊ|| ತೀ.ನಂ. ಶ್ರೀಕಂಠಯ್ಯನವರು ಮಹಾರಾಜ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರು. ಶ್ರೀ ಕುವೆಂಪು ಮಹಾರಾಜಾ ಕಾಲೇಜಿನ ಪ್ರಿನ್ಸಿಪಾಲರು. ಕನ್ನಡ ಪ್ರಾಧ್ಯಾಪಕರೊಬ್ಬರು ಮಹಾರಾಜಾ ಕಾಲೇಜಿನಂಥ ಪ್ರತಿಷ್ಠಿತ ಸಂಸ್ಥೆಯ ಪ್ರಿನ್ಸಿಪಾಲರಾದದ್ದು ಅದೇ ಮೊದಲು. ಕನ್ನಡದ ಘನ ವಿದ್ವಾಂಸರಾದ ಡಿ.ಎಲ್. ನರಸಿಂಹಾಚಾರ್ಯರು, ವಿದ್ಯಾರ್ಥಿಗಳಿಗೆ ಪ್ರಿಯರಾದ ಎಸ್.ವಿ. ಪರಮೇಶ್ವರ ಭಟ್ಟರು, ತ.ಸು. ಶಾಮರಾಯರು, ಎನ್. ಅನಂತರಂಗಾಚಾರ್ಯರು,

ದೇ. ಜವರೇಗೌಡರು -ಇತ್ಯಾದಿ ಕನ್ನಡದ ಕಟ್ಟಾಳುಗಳಿಂದ ಮೈಸೂರು ವಿಶ್ವವಿದ್ಯಾಲಯದ ವಾತಾವರಣ ಕನ್ನಡಮಯವಾಗಿತ್ತು. ನಾನು ಅದೇ ತಾನೆ, ಭಾರತ ಸರ್ಕಾರದ ಸಂಶೋಧನಾ ಸಹಾಯಧನವನ್ನು ಪಡೆದು, ಎರಡು ವರ್ಷಗಳ ಅವಧಿಯಲ್ಲಿ ಬರೆದು ಮುಗಿಸಿದ ಪಿ.ಎಚ್.ಡಿ. ಮಹಾಪ್ರಬಂಧವನ್ನು ವಿಶ್ವವಿದ್ಯಾಲಯಕ್ಕೆ ಒಪ್ಪಿಸಿ, ಮಹಾರಾಜಾ ಕಾಲೇಜಿಗೆ ಕನ್ನಡ ಅಧ್ಯಾಪಕನಾಗಿ ಹಿಂದಿರುಗಿದ್ದೆ.

ಪ್ರೊ. ತೀ.ನಂ. ಶ್ರೀಕಂಠಯ್ಯನವರು ನನ್ನ ಅಧ್ಯಾಪಕತನದ ಜತೆಗೆ, ಬೇರೊಂದು ಜವಾಬ್ದಾರಿಯನ್ನು ನನಗೆ ವಹಿಸಿದರು. ಅದೇನೆಂದರೆ: ಕನ್ನಡ ಎಂ.ಎ. ತರಗತಿಯ ಸೆಮಿನಾರ್‌ಗಳನ್ನು ವ್ಯವಸ್ಥೆಗೊಳಿಸುವುದು. ಎಂ.ಎ. ತರಗತಿಯ ವಿದ್ಯಾರ್ಥಿಗಳೆಲ್ಲರೂ, ವಾರಕ್ಕೆ ಒಬ್ಬರಂತೆ ಒಂದು ನಿರ್ದಿಷ್ಟ ವಿಷಯವನ್ನು ಕುರಿತು ಅಧ್ಯಯನ ಮಾಡಿ ಪ್ರಬಂಧವೊಂದನ್ನು ಬರೆದುಕೊಂಡು ಬಂದು ವಿದ್ಯಾರ್ಥಿಗಳ ಹಾಗೂ ಅಧ್ಯಾಪಕರ ಸಭೆಯ ಮುಂದೆ ಮಂಡಿಸಬೇಕು. ಇದು ಅಂದಿನ ಪಠ್ಯಕ್ರಮದ ಒಂದು ಅಂಗವೂ ಆಗಿತ್ತು. ಈ ಬಗೆಯ ಪ್ರಬಂಧ ಮಂಡನೆಯ ನಂತರ ಆ ಪ್ರಬಂಧವನ್ನು ಕುರಿತ ಚರ್ಚೆ-ಪ್ರತಿಚರ್ಚೆಯೂ ಇರುತ್ತಿತ್ತು. ಅಧ್ಯಾಪಕರೂ ಈ ಚರ್ಚೆಯಲ್ಲಿ ಭಾಗವಹಿಸಿ ಅನೇಕ ಹೊಸ ಸಂಗತಿಗಳನ್ನು ಸೇರಿಸುತ್ತಿದ್ದರು; ಮಾರ್ಗದರ್ಶನ ಮಾಡುತ್ತಿದ್ದರು.

ಇಂಥ ಸೆಮಿನಾರ್‌ಗಳನ್ನು ಕುರಿತು ಮುಂಗಡವಾಗಿಯೆ ವಿದ್ಯಾರ್ಥಿಗಳಿಗೆ ತಿಳಿಯಹೇಳಿ, ಯಾರುಯಾರು ಯಾವಯಾವ ವಿಷಯಗಳನ್ನು ಮಂಡಿಸುತ್ತಾರೆಂಬುದನ್ನು  ಸೂಚಿಸುವ ವೇಳಾಪಟ್ಟಿಯೊಂದನ್ನು ತಯಾರಿಸುವ ಕೆಲಸ, ಮತ್ತು ವಾರಕ್ಕೊಂದರಂತೆ ನಡೆಯುವ ಈ ಕಾರ‍್ಯಕ್ರಮವನ್ನು ವ್ಯವಸ್ಥೆಗೊಳಿಸುವ ಕೆಲಸ ನನ್ನದಾಗಿತ್ತು. ಅದಕ್ಕಾಗಿ ಮೂರು ತಿಂಗಳಿಗೊಮ್ಮೆ ನಾನೇ ವಿದ್ಯಾರ್ಥಿಗಳಿಂದ ವಿಷಯಗಳನ್ನು ಮುಂಗಡವಾಗಿ ಬರಮಾಡಿಕೊಳ್ಳುತ್ತಿದ್ದೆ. ಇಂಥ ಹಿನ್ನೆಲೆಯಲ್ಲಿ ಆ ವರ್ಷದ ಸೆಕೆಂಡ್ ಟರ್ಮಿನಲ್ಲಿ ನಡೆಯಿಸಬೇಕಾದ ಸೆಮಿನಾರ್‌ಗೆ, ವಿಷಯಗಳ ಆಯ್ಕೆಯನ್ನು ತಿಳಿಸಿರಿ ಎಂದು ಕನ್ನಡ ವಿಭಾಗದ ನೋಟೀಸ್ ಬೋರ್ಡಿನಲ್ಲಿ ಪ್ರಕಟಿಸಿದೆ. ಒಂದು ವಾರದ ನಂತರ ಈ ಕುರಿತು ಕೆಲವು ವಿದ್ಯಾರ್ಥಿಗಳಿಂದ, ತಾವು ಪ್ರಬಂಧ ಮಂಡನೆಗಾಗಿ ಆಯ್ಕೆ ಮಾಡಿಕೊಂಡ ವಿಷಯಗಳೇನೆಂಬುದನ್ನು ಕುರಿತ ಪತ್ರಗಳು ನನ್ನ ಕೈಗೆ ಬಂದವು. ನಾನು ಒಂದೊಂದೇ ಪತ್ರದಲ್ಲಿ ಸೂಚಿತವಾದ ವಿಷಯಗಳನ್ನು ಪಟ್ಟಿ ಮಾಡಲು ಕೈಗೆತ್ತಿಕೊಂಡೆ: ‘ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಸಾಮಾಜಿಕ ಪ್ರಜ್ಞೆ’, ‘ಮಾಸ್ತಿಯವರ ಸಣ್ಣಕತೆಗಳ ವೈಶಿಷ್ಟ ’, ‘ವರ್ಣನಾತ್ಮಕ ಭಾಷಾವಿಜ್ಞಾನದ ದೃಷ್ಟಿಯಿಂದ ಶಬ್ದಮಣಿ ದರ್ಪಣ’, ‘ಕನ್ನಡದ ನವ್ಯ ಕತೆಗಳು; ‘ಎಲಿಯಟ್ ಮತ್ತು ಗೋಪಾಲಕೃಷ್ಣ ಅಡಿಗ: ಒಂದು ವಿವೇಚನೆ’-ಹೀಗೆ ಒಂದೊಂದೆ ವಿಷಯಗಳ ಸೂಚನೆಯನ್ನು ಗಮನಿಸುತ್ತ ಇದ್ದಂತೆ, ‘ಕನ್ನಡ ಸಾಹಿತ್ಯದಲ್ಲಿ ದೆವ್ವಗಳು’ ಎಂಬ ವಿಷಯದ ಸೂಚನಾ ಪತ್ರವನ್ನು ಓದುತ್ತಲೆ ಥಟ್ಟನೆ, ಇದ್ಯಾರಪ್ಪ್ಪ ಇದು, ಇಷ್ಟೊಂದು ಘನವಾದ ವಿಷಯಗಳನ್ನು ಸೂಚಿಸಿದವರ ನಡುವೆ ಇದಕ್ಕಿದ್ದ ಹಾಗೆ, ಅನಿರೀಕ್ಷಿತವಾಗಿ ಕನ್ನಡ ಸಾಹಿತ್ಯದಲ್ಲಿ ದೆವ್ವಗಳನ್ನು ಹುಡುಕ ಹೊರಟವರು ಎಂದು ಚಕಿತನಾದೆ. ನೋಡುತ್ತೇನೆ ಈ ವಿಷಯವನ್ನು ಕುರಿತು ಪ್ರಬಂಧ ಮಂಡನೆಗೆ ಮುಂದಾದ ವಿದ್ಯಾರ್ಥಿಯ ಹೆಸರು-ಕೆ.ಜಿ. ನಾಗರಾಜಪ್ಪ.

ಕೆಲವು ವಾರಗಳ ನಂತರ ಕನ್ನಡ ಸಾಹಿತ್ಯದಲ್ಲಿ ದೆವ್ವಗಳನ್ನು ಕುರಿತ ಕಲ್ಪನೆಯ ಬಗ್ಗೆ ನಾಗರಾಜಪ್ಪ ತರಗತಿಯ ಸೆಮಿನಾರಿನಲ್ಲಿ ಪ್ರಬಂಧ ಮಂಡಿಸಿದ್ದು, ಆ ಪ್ರಂಬಂಧದ ವಸ್ತು ಹಾಗೂ ಸ್ವಾರಸ್ಯಗಳನ್ನು ಕುರಿತು ಸಾಕಷ್ಟು ಚರ್ಚೆಯಾದದ್ದು, ಚರ್ಚೆಯ ಸಂದರ್ಭದಲ್ಲಿ ಒಂದಷ್ಟು ನಗೆಯ ಬುಗ್ಗೆ ಪುಟಿದದ್ದೂ, ಈಗ ನನ್ನ ಪಾಲಿಗೆ ದೂರದ ನೆನಪುಗಳಾಗಿವೆ. ಆದರೆ ಈ ಸೆಮಿನಾರ್ ನಂತರ ನಾಗರಾಜಪ್ಪ ನನಗೆ ತೀರಾ ಹತ್ತಿರದವರಾಗಿ ಬಿಟ್ಟರು ಎಂಬುದಂತೂ ಸ್ಪಷ್ಟವಾದ ಸಂಗತಿ.

ನಾಗರಾಜಪ್ಪ ಗುಬ್ಬಿ ತಾಲ್ಲೂಕಿನ, ಕಡಬಾ ಹತ್ತಿರದ ಕಲ್ಲೂರು ಗ್ರಾಮದವರು. ತಾಯಿ ಕೂಲಿ ನಾಲಿ ಮಾಡಿ ದುಡಿಯುವ ಮಹಿಳೆ. ಇದ್ದುದೊಂದು ಸಣ್ಣ ಮುರುಕಲು ಮನೆ. ಬೆಳೆದದ್ದು ಕಡುಬಡತನದಲ್ಲಿ, ಆದರೂ ತಮ್ಮಓದನ್ನು ಮುಂದುವರಿಸಿ, ಎಂ.ಎ. ತರಗತಿಯವರೆಗೂ ಬಂದಿದ್ದರು. ಮೈಸೂರಿನಲ್ಲಿ ಎಲ್ಲೋ ಒಂದು ರೂಮು ಮಾಡಿಕೊಂಡಿದ್ದರೆಂದು ಕಾಣುತ್ತದೆ. ನನಗೆ ತಿಳಿದಂತೆ ಅವರಿಗೆ ಯಾವ ಹಾಸ್ಟಲುಗಳ ಆಶ್ರಯವೂ ದೊರೆತಿರಲಿಲ್ಲ. ಅವರ ಅಂದಿನ ಪರಿಸ್ಥಿತಿಗಳನ್ನು ಹೇಗೋ ತಿಳಿದ ನಾವು ಕೆಲವರು (ನಾನು- ಪ್ರಭಂಶಂಕರ್), ಅವರಿಗೆ ಕೆಲವು ಮನೆಗಳಲ್ಲಿ ಊಟದ ಏರ್ಪಾಡು ಮಾಡಿದೆವು; ಜತೆಗೆ ನಮ್ಮ ಸ್ನೇಹಿತರ ಮನೆಯ ಹೈಸ್ಕೂಲು ಮಕ್ಕಳಿಗೆ ಪಾಠ ಹೇಳುವ ಅವಕಾಶವೂ ಕಲ್ಪಿತವಾಯಿತು. ವಾರದಲ್ಲಿ ಒಂದೆರಡು ದಿನ ನಮ್ಮ ಮನೆಯಲ್ಲೂ ಊಟ ಮಾಡುತ್ತಿದ್ದ ನಾಗರಾಜಪ್ಪ ಕ್ರಮ ಕ್ರಮೇಣ, ನನ್ನ ಮನೆಗೆ, ನನ್ನ ಮಡದಿ- ಮಕ್ಕಳಿಗೆ ಹತ್ತಿರವಾದರು. ಅಷ್ಟೆ ಅಲ್ಲ ನಮ್ಮ ಮನೆಯವರಲ್ಲಿ ಒಬ್ಬರಾದರು. ಈ ಹೊತ್ತಿಗೂ ಆಗಿದ್ದಾರೆ. ನನ್ನ ಕಷ್ಟದಲ್ಲಿ ಸುಖದಲ್ಲಿ, ಮಳೆಯಲ್ಲಿ ಬಿಸಿಲಲ್ಲಿ, ನೆರಳಿನಲ್ಲಿ ಬೆಳಕಿನಲ್ಲಿ ಅವರು ನನ್ನ ಜತೆಗೆ ಇದ್ದಾರೆ. ಅವರು ನನ್ನ ಜತೆಗೆ ಇದ್ದಾರೆ ಅನ್ನುವುದು ನನಗೊಂದು ಧೈರ್ಯದ, ಸಮಾಧಾನದ ಸಂಗತಿಯಾಗಿದೆ.

‘ಕನ್ನsಡ ಸಾಹಿತ್ಯದಲ್ಲಿ ದೆವ್ವಗಳು, ಅಥವಾ ದೆವ್ವದ ಕಲ್ಪನೆ’ ಎಂಬ ವಿಷಯವನ್ನು ಕುರಿತು ಮೊಟ್ಟಮೊದಲು (ಬಹುಶಃ ಇದೇ ಅವರ ಮೊದಲ ಬರೆಹವಾಗಿರಬಹುದು) ಪ್ರಬಂಧವನ್ನು ತಯಾರಿಸಿದ ಈ ಮನಸ್ಸು ಮೂಲತಃ ರಹಸ್ಯಗಳ ಅನ್ವೇಷಣೆಯ ಪ್ರವೃತ್ತಿಯದು. ಅವರು ಒಬ್ಬೊಬ್ಬರೇ ನಡುರಾತ್ರಿಗಳಲ್ಲಿ ದೆವ್ವಗಳನ್ನು ಹುಡುಕಿಕೊಂಡು ಸ್ಮಶಾನಗಳಿಗೆ ಹೋಗಿದ್ದುದಾಗಿಯೂ ಹೇಳುತ್ತಿದ್ದರು. ಅವರು ಹುಡುಕಿಕೊಂಡು ಹೋದ ದೆವ್ವಗಳು ಈ ಹೊತ್ತಿಗೂ ಮುಖಾಮುಖಿಯಾಗಿವೆಯೋ ಇಲ್ಲವೋ ತಿಳಿಯದು. ಆದರೆ ರಹಸ್ಯ ವಿಜ್ಞಾನದ (occult science) ಬಗ್ಗೆ ಅವರಿಗೆ ಅದಮ್ಯವಾದ ಆಸಕ್ತಿಯಿದೆ ಎಂಬುದು ಸ್ಪಷ್ಟ. ಮಂತ್ರ-ತಂತ್ರಾದಿ ಶಾಸ್ತ್ರಗಳ ಬಗ್ಗೆ ಅವರಿಗೆ ಅಪಾರವಾದ ಒಲವಿದೆ. ಈ ಗೂಢ ಅಥವಾ ರಹಸ್ಯ ವಿಜ್ಞಾನವು ಕರ್ನಾಟಕದ ವಿವಿಧ ಧಾರ್ಮಿಕ ಪಂಥಗಳ ಮೇಲೆ, ಮಾಡಿರುವ ಪ್ರಭಾವಗಳನ್ನೂ, ಈ ಧಾರ್ಮಿಕ ನಿಲುವಿನ ಪರಿಣಾಮವಾದ ಸಾಹಿತ್ಯದ ಸ್ವರೂಪವನ್ನೂ ನಾಗರಾಜಪ್ಪನವರ ಹಾಗೆ ಅಭ್ಯಸಿಸಿ, ವಿಶ್ಲೇಷಣೆ ಮಾಡಿರುವವರು ನಮ್ಮ ಸಾಹಿತ್ಯ ಸಂದರ್ಭದಲ್ಲಿ ತೀರಾ ಕಡಿಮೆಯೆಂದೇ ಹೇಳಬೇಕು.

ಈ ರಹಸ್ಯಾನ್ವೇಷಕ ಪ್ರವೃತ್ತಿಯು ಅವರ ವ್ಯಕ್ತಿತ್ವದಲ್ಲಿ ಒಂದು ಬಗೆಯ ಧೈರ್ಯವನ್ನು ಹುಟ್ಟು ಹಾಕಿದಂತೆ ತೋರುತ್ತದೆ. ಎಂಥ ಸಂದರ್ಭದಲ್ಲೂ ಎದೆಗುಂದದೆ ನಿಂತ ಅವರ ನಿಲುವಿನಲ್ಲಿ ನಾನು ಈ ಲಕ್ಷಣವನ್ನು ಗುರುತಿಸಿದ್ದೇನೆ. ಅಷ್ಟೆ ಅಲ್ಲ ಉಳಿದವರಲ್ಲೂ ಅವರು ಈ ಬಗೆಯ ಧೈರ್ಯವನ್ನು ಪ್ರಚೋದಿಸಬಲ್ಲರು. ನಮ್ಮ ಮನೆಯ ಮಕ್ಕಳು, -ಎಲ್ಲ ಮಕ್ಕಳಂತೆ ಸಹಜವಾಗಿಯೆ ಪುಕ್ಕಲುಗಳು. ನಾಗರಾಜಪ್ಪನವರು ದೆವ್ವಗಳ-ಭೂತಗಳ ಸ್ಮಶಾನಗಳ ಬಗ್ಗೆ ರಂಜಕವಾಗಿ ಮಾತನಾಡುವುದನ್ನು ಕೇಳಿದ ನಮ್ಮ ಮನೆಯ ಮಕ್ಕಳು ‘ಮಾಮ ನಮಗೂ ಅದನ್ನು ತೋರಿಸಿ’ ಎಂದು ಅವರಿಗೆ ಗಂಟು ಬೀಳುತ್ತಿದ್ದರು. ಶನಿವಾರ ಭಾನುವಾರಗಳಂದು, ಈ ಮಕ್ಕಳನ್ನು ಸೈಕಲ್ ಮೇಲೆ ಕೂರಿಸಿಕೊಂಡು, ಮೈಸೂರಿನ ಚಾಮಂಡೀಪುರಂ ಹತ್ತಿರದ ಎಲೆತೋಟಗಳನ್ನು ದಾಟಿ, ನಂಜನಗೂಡು ರಸ್ತೆಯಾಚೆ, ಚಾಮುಂಡಿಬೆಟ್ಟದ ತಪ್ಪಲಿನ ಸ್ಮಶಾನಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಅಲ್ಲಿ ಆ ಮಕ್ಕಳು ಸ್ಮಶಾನದ ಗೋರಿಗಳ ನಡುವೆ ಓಡಾಡಿ, ಆಟವಾಡಿ, ನಿರ್ಭಯರಾಗಿ ಮನೆಗೆ ಹಿಂದಿರುಗುತ್ತಿದ್ದರು. ಮಕ್ಕಳ ತಾಯಿ ಸಹಜವಾಗಿಯೆ ಆಕ್ಷೇಪಿಸಿದರೆ ‘ಏನೂ ಆಗುವುದಿಲ್ಲ ಬಿಡಿ, ಒಂದಷ್ಟು ಧೈರ್ಯ ಬರುತ್ತದೆ ಅವಕ್ಕೆ’ ಎಂದು ಸಮಾಧಾನ ಹೇಳುವರು. ನಾನೂ ನಾಗರಾಜಪ್ಪನವರೂ ಆಗಾಗ ಬಾಡಿಗೆ ಸೈಕಲ್ ತೆಗೆದುಕೊಂಡು, ಒಂದಿಷ್ಟು ಕಡ್ಲೆಕಾಯಿ ಕೊಂಡುಕೊಂಡು, ಇದೇ ಚಾಮುಂಡಿ ಬೆಟ್ಟದ ಬುಡದ ಸ್ಮಶಾನಕ್ಕೆ ಹೋಗಿ ಗಂಟೆಗಟ್ಟಲೆ ಕೂತುಕೊಳ್ಳುತ್ತಿದ್ದೆವು. ‘ಸಮಾಧಿ’ಗಳ ಸುತ್ತ ಬೆಳೆದ ಬಿಲ್ವ ಪತ್ರೆ, ಬನ್ನಿ ಮೊದಲಾದ ಮರಗಳ ಕೆಳಗೆ ಕೂತು ಅನತಿ ದೂರದಲ್ಲಿ ನಿಶ್ಚಲವಾಗಿ ವಿಸ್ತಾರವಾಗಿ ಹರಹಿಕೊಂಡ ಚಾಮುಂಡಿಬೆಟ್ಟವನ್ನೂ, ಪ್ರಶಾಂತವಾಗಿ ತಬ್ಬಿಕೊಂಡ ಸಂಜೆಯ ವರ್ಣವಿನ್ಯಾಸಗಳನ್ನೂ, ರುದ್ರಭೂಮಿಯ ವಿಲಕ್ಷಣ ಮೌನವನ್ನೂ ನಮ್ಮೊಳಗೆ ತುಂಬಿಕೊಳ್ಳುತ್ತಿದ್ದೆವು. ಐವತ್ತರ ದಶಕದ ಕೊನೆಯ ಈ ಅನುಭವ, ಮೂವತ್ತು ವರ್ಷಗಳ ಅನಂತರ, ಕವಿತೆಯೊಂದರಲ್ಲಿ ಮೈಪಡೆದುಕೊಂಡಿದೆ. ಕವಿತೆಯ ಹೆಸರು ‘ಗೆರೆ’. ‘ಪ್ರೀತಿ ಇಲ್ಲದ ಮೇಲೆ’ (೧೯೮೭) ಎಂಬ ಸಂಕಲನದಲ್ಲಿ ಸೇರ್ಪಡೆಯಾಗಿರುವ ಕವಿತೆ ಹೀಗಿದೆ:

ರುದ್ರಭೂಮಿಯ ನಿಶ್ಯಬ್ದಗಳಲ್ಲಿ
ನಾನೊಬ್ಬನೇ
,
ಸುತ್ತಲೂ ನಿಂತ ಮರಗಳಿಂದು-
ದುರುತ್ತಲಿವೆ ಎಲೆ
ಒಂದೊಂದೇ
ಗಾಳಿ ಬೀಸಿದ ಹಾಗೆ.

ಒಳಗೆ ಮಲಗಿದ್ದಾರೆ, ನಿನ್ನೆ ಮೊನ್ನೆಯ
ಮತ್ತೆ ಅದರಾಚೆ ವರ್ಷಗಳ
ನೆಲವ ತುಳಿದವರು.
ಉಸಿರಾಗಿ ಹೆಸರಾಗಿ
ಅವರಿವರ ಜತೆಯಾಗಿ
ಬದುಕಿದವರು.
ತಮ್ಮ ಕಾಲದ ಜತೆಗೆ
ಹೊಡೆದಾಡಿದವರು
ಮಲಗಿದ್ದಾರೆ ನಿಶ್ಯಬ್ದವಾಗಿ
, ಕರಗಿ
ನೆಲದಾಳಗಳಲ್ಲಿ ಅರಗಿ
,
ಮತ್ತೆ ಸುತ್ತಲೂ ನಿಂತ ಈ
ಮರಗಿಡಗಳಲ್ಲಿ ಹಸುರಾಗಿ
ಹೂವಾಗಿ
, ಹಕ್ಕಿ ದನಿಯಾಗಿ
ನೆಲವ ತಬ್ಬಿರುವ ಹುಲ್ಲಾಗಿ
, ಕಲ್ಲಾಗಿ
ಇನ್ನೂ ಏನೇನೋ ಆಗಿ
ಗುರುತು ಸಿಗದಾಗಿ.

ನಾನು ಕೂತಿದ್ದೇನೆ, ಈ ನಡುವೆ
ಅಕಾರವಾಗಿ
ಉಸಿರಾಡುತ್ತ
, ಇದನ್ನೆಲ್ಲ ನೋಡುತ್ತ
ನನಗು ಅವರಿಗೂ ಮಧ್ಯೆ
ವ್ಯತ್ಯಾಸವೇನೆಂದು ಚಿಂತಿಸುತ್ತ
ಒಳಗು-ಹೊರಗಿನ ಗೆರೆಯ
ಗುರುತಿಸುತ್ತ.

ನಾಗರಾಜಪ್ಪನವರು ತುಮಕೂರಿನ ಸಿದ್ಧಗಂಗಾ ಕಾಲೇಜಿನಲ್ಲಿ ಅನೇಕ ವರ್ಷಗಳ ಕಾಲ ಅಧ್ಯಾಪಕರಾಗಿದ್ದ ಕಾಲದಲ್ಲಿ, ನಾನು ಆಗಾಗ ತುಮಕೂರಿಗೆ ಹೋಗಿ, ಅವರ ಜತೆ ದೇವರಾಯನದುರ್ಗ, ಮಧುಗಿರಿ, ಸಿದ್ಧರಬೆಟ್ಟ ಹೀಗೆ ಹಲವಾರು ಗುಡ್ಡ ಬೆಟ್ಟ ಕಾಡು ಮೇಡುಗಳಲ್ಲಿ ಅಲೆದಿದ್ದೇನೆ. ‘ಕಾಡಿನ ಕತ್ತಲಲ್ಲಿ’ (೧೯೮೧) ಎಂಬ ಒಂದು ಕವಿತೆಯ ವಸ್ತು, ನಾನು ಅವರ ಜತೆ ದೇವರಾಯನ ದುರ್ಗದ ಕಾಡಿನ ಕತ್ತಲಿನಲ್ಲಿ ನನಗಾದ ಅನುಭವವನ್ನು ಕುರಿತದ್ದು. ಹೀಗೆ ನನ್ನ ಎಷ್ಟೋ ಕವಿತೆಗಳ ಜತೆಗೆ ನಾಗರಾಜಪ್ಪನವರ ನೆನಪು ಹೆಣೆದುಕೊಂಡಿದೆ. ಅಷ್ಟೆ ಅಲ್ಲ ನನ್ನ ಅನೇಕ ಕವಿತೆಗಳ ಮೊದಲ ಓದುಗರೂ, ವಿಮರ್ಶಕರೂ ಅವರೇ ಆಗಿದ್ದಾರೆ. ಹಾಗೆಯೆ ಅವರು ಬರೆದ ಸಂಶೋಧನಾತ್ಮಕವೋ ವಿಮರ್ಶಾತ್ಮಕವೋ ಆದ ಲೇಖನಗಳನ್ನು ತಂದು ನನಗೆ ತೋರಿಸಿದ್ದಲ್ಲದೆ ಅವರಿಗೆ ತೃಪ್ತಿ ಇಲ್ಲ. ಸ್ವಾರಸ್ಯದ ಸಂಗತಿ ಎಂದರೆ, ಅವರೊಬ್ಬ ಲೇಖಕರೆಂದು ಸ್ಪಷ್ಟವಾಗಿ ಕನ್ನಡ ಸಾಹಿತ್ಯದಲ್ಲಿ ಕಾಣಿಸಿಕೊಂಡದ್ದೇ, ಕೇವಲ ಹತ್ತು ವರ್ಷಗಳ ಹಿಂದೆ, ಅಂದರೆ ‘ಮರುಚಿಂತನೆ’ ಎಂಬ ಕೃತಿಯ (೧೯೮೫) ಪ್ರಕಟನೆಯ ಮೂಲಕ. ಅವರಿಗೆ, ಅಧ್ಯಯನ, ಅಧ್ಯಾಪನ ಹಾಗೂ ಚಿಂತನೆಗಳಲ್ಲಿರುವ ಆಸಕ್ತಿ, ಬರೆಯುವುದರಲ್ಲಿ ಅಷ್ಟಾಗಿ ಇರಲಿಲ್ಲ-ಅನೇಕ ವರ್ಷಗಳವರೆಗೆ. ಅಂತೂ ಬಹಳ ಕಾಲ ಕಾದು, ೧೯೮೫ರಲ್ಲಿ ಅವರು ಪ್ರಕಟಿಸಿದ ‘ಮರುಚಿಂತನೆ’ ಎಂಬ ಸಾಹಿತ್ಯ ವಿಮರ್ಶೆಯ ಕೃತಿ, ಕನ್ನಡ ಸಾಹಿತ್ಯ ವಿಮರ್ಶೆಯ ಪರಿಸರವನ್ನು ಚಕಿತಗೊಳಿಸಿತು. ಸಮಕಾಲೀನ ಸಾಹಿತ್ಯ ಸಂದರ್ಭದಲ್ಲಿ ಹೊಸ ರೀತಿಯಲ್ಲಿ ಯೋಚಿಸುವ ಅನೇಕ ತರುಣ ಲೇಖಕರನ್ನು ಈ ಕೃತಿಯ ಮೂಲಕ ನಾಗರಾಜಪ್ಪನವರು ಪ್ರಚೋದಿಸಿದರು. ಅವರು ತಮ್ಮ ವಿಮರ್ಶೆಯ ಭಿನ್ನಮಾದರಿಗಳಿಂದ ಮತ್ತು ಚಿಂತನೆಯ ಕ್ರಮದಿಂದ ಸಾಹಿತ್ಯ ವಿಮರ್ಶಕರ ಹಾಗೂ ಸಾಹಿತ್ಯಾಸಕ್ತರ ಗಮನವನ್ನು ಸೆಳೆದುಕೊಂಡರು.

ನಾಗರಾಜಪ್ಪನವರ ವಿಮರ್ಶೆ ಮೂಲತಃ ಮಾನವಶಾಸ್ತ್ರ ಹಾಗೂ ಸಮಾಜ ಶಾಸ್ತ್ರಗಳ ನೆಲೆಗಟ್ಟನ್ನು ಉಳ್ಳದ್ದು. ಬೇರೊಂದು ಮಾತಿನಲ್ಲಿ ಹೇಳುವುದಾದರೆ ಅದು ಸಂಸ್ಕೃತಿ ವಿಶ್ಲೇಷಣಾತ್ಮಕ ವಿಮರ್ಶೆ ಎಂದು ಕರೆಯಬಹುದು. ಅವರ  ಬರಹದ ಕೇಂದ್ರ ಕಾಳಜಿ ಸಂಸ್ಕೃತಿಯನ್ನು ಕುರಿತದ್ದು. ಅದರಲ್ಲೂ ಕೆಳವರ್ಗದವರ ಸಂಸ್ಕೃತಿಯ ಮೇಲೆ ಉದ್ದಕ್ಕೂ ಮೇಲ್‌ವರ್ಗದವರು ನಡೆಯಿಸಿದ ಹಲ್ಲೆಗಳೂ, ಮತ್ತು ಕೆಳವರ್ಗದ ತಲ್ಲಣಗಳೂ, ಅಸಹಾಯಕತೆಗಳೂ ನಾಗರಾಜಪ್ಪನವರನ್ನು ತೀವ್ರವಾಗಿ ಕಾಡುತ್ತವೆ. ಅವರ ‘ಮರುಚಿಂತನೆ’ ಎಂಬ ಕೃತಿಯ ಒಂದು ಮುಖ್ಯ ವಿಚಾರಧಾರೆಯೇ ಇದು. ಈ ಕೃತಿ ಕನ್ನಡ ಸಾಹಿತ್ಯ ಚರಿತ್ರೆಯನ್ನು ಕುರಿತು ಮರುಚಿಂತನೆಗೆ ತೊಡಗಿಸುವಂಥ ಅನೇಕ ಒಳನೋಟಗಳನ್ನು ಪ್ರಕಟಿಸುತ್ತದೆ. ವೀರಶೈವ ಧರ್ಮ ಮತ್ತು ವಚನ ಚಳುವಳಿಯನ್ನು ಕುರಿತ ಬರಹಗಳೇ ಮಿಗಿಲಾಗಿರುವ ಈ ಕೃತಿಯಲ್ಲಿ, ಶರಣ ಸಾಹಿತ್ಯವನ್ನು ಕುರಿತು ಪ್ರಚಲಿತವಾಗಿರುವ ‘ಜನಪ್ರಿಯ’ ಹಾಗೂ ಅನೇಕ ವೇಳೆ ಏರುದನಿಯಲ್ಲಿ ಪ್ರಸ್ತಾಪಿತವಾದ ಅನೇಕ ವಿಚಾರಗಳ ಬೇರುಗಳನ್ನು ಅಲ್ಲಾಡಿಸಿ ಸಾಕಷ್ಟು ವಿವಾದದ ತರಂಗಗಳನ್ನು ಎಬ್ಬಿಸಿದ್ದಾರೆ. ಒಂದೊಂದು ಸಲ ಇವರ ಬರಹ ಉದ್ದೇಶಪೂರ್ವಕವಾಗಿಯೇ ‘ನೇತಿ’ ಮಾರ್ಗವನ್ನು ಹಿಡಿದಂತೆ ತೋರುವುದಾದರೂ, ಆ ಮೂಲಕ ಅವರು ಮಂಡಿಸುವ ವಿಚಾರಗಳು, ಸತ್ಯದ ಬೇರೆ ಬೇರೆ ಮಗ್ಗುಲುಗಳನ್ನು, ತೋರುತ್ತ ಅವುಗಳನ್ನು ಕುರಿತು ಓದುಗರು ಮರುಚಿಂತನೆಗೆ ತೊಡಗುವಂತೆ ಪ್ರೇರೇಪಿಸುತ್ತವೆಯೆಂಬುದರಲ್ಲಿ ಅನುಮಾನವಿಲ್ಲ. ನಿದರ್ಶನಕ್ಕೆ ಹೇಳುವುದಾದರೆ, ವಚನ ಚಳುವಳಿ ಕೆಳವರ್ಗದ ಜನ, ಮೇಲ್‌ವರ್ಗದ ಜನರಿಂದ (ರಾಜರು-ಪುರೋಹಿತರು) ನಿರಂತರವಾಗಿ ಶೋಷಣೆಗೆ ಒಳಗಾಗುತ್ತ, ಬಿಡುಗಡೆಗೆ ಹಾರೈಸುತ್ತಿದ್ದ ಹನ್ನೆರಡನೆ ಶತಮಾನದ ಆ ಕಾಲದಲ್ಲಿ, ಶರಣಧರ್ಮವು ಈ ಜನವನ್ನು ಆ ಬಗೆಯ ಶೋಷಣೆಯಿಂದ ಪಾರು ಮಾಡಿ, ವೀರಶೈವವೆಂಬ ಸಂಘಟನೆಯ ನೆಲೆಯೊಂದರಲ್ಲಿ ಅವರನ್ನು ತಂದು, ಅವರಿಗೆ ಆತ್ಮಗೌರವವನ್ನೂ, ಅಭಿವ್ಯಕ್ತಿಯ ಅವಕಾಶವನ್ನೂ, ಪ್ರತಿಭಟನೆಯ ಕೆಚ್ಚನ್ನೂ ತಂದುಕೊಟ್ಟಿತು ಎನ್ನುವುದು ಮಹತ್ವದ ಚಾರಿತ್ರಿಕ ಘಟನೆಯಾಗಿದೆ. ಆದರೆ, ನಾಗರಾಜಪ್ಪನವರು ಹೇಳುತ್ತಾರೆ: ‘ಶರಣಧರ್ಮವು ಬಹುದೇವತಾರಾಧನೆಯ ಸಾಮಾನ್ಯ ಜನರನ್ನು, ಏಕದೇವತೋಪಾಸನೆಯ ಈ ಧರ್ಮಕ್ಕೆ ತರುವುದರ ಮೂಲಕ’ ಕೆಳವರ್ಗದ ಸಂಸ್ಕೃತಿಯನ್ನು ನಾಶಮಾಡಿತು ಎಂದು (ಪು. ೪೨). ಇದು ನಿಜಕ್ಕೂ ವಿಭಿನ್ನವಾದ, ಆದರೆ,  ಮೇಲುನೋಟಕ್ಕೆ ಪೂರ್ವಾಗ್ರಹ ಪೀಡಿತವೋ ಎಂಬಂತೆ ತೋರುತ್ತದೆ. ಹಾಗಾದರೆ, ಬಹುದೇವತಾರಾಧಕರಾದ ಈ ಕೆಳವರ್ಗವನ್ನು, ಅಂದಿನ ಶರಣಧರ್ಮ ತನ್ನ ತಕ್ಕೆಗೆ ತೆಗೆದುಕೊಳ್ಳದೆ ಹೋಗಿದ್ದರೆ, ಅವರೇ ತಮ್ಮ ಬಿಡುಗಡೆಯ ದಾರಿಗಳನ್ನು ಕಂಡುಕೊಂಡು, ತಮ್ಮ ಸಂಸ್ಕೃತಿಯನ್ನು ಶೋಷಣೆಗೊಳಗಾಗದಂತೆ ಕಾಯ್ದುಕೊಳ್ಳಲು ಸಾಧ್ಯವಿತ್ತೆ, ಅಥವಾ ವೀರಶೈವ ಧರ್ಮವು ಸಮಾನವಾದ ವೇದಿಕೆ ಹಾಗೂ ಸಂಕೇತವನ್ನು ಆವಿಷ್ಕಾರ ಮಾಡಿಕೊಳ್ಳದೆ, ವಿವಿಧ ಸ್ತರದ ಜನರನ್ನು ಸಂಘಟಿಸುವುದು ಸಾಧ್ಯವಿತ್ತೆ-ಎಂಬ ಪ್ರತಿ ಪ್ರಶ್ನೆಗಳನ್ನು ನಾಗರಾಜಪ್ಪನವರ ಅಭಿಪ್ರಾಯವು ಪ್ರಚೋದಿಸಿದರೂ, ಈ ಪ್ರಶ್ನೆಗಳಿಗೆ ದೊರೆಯುವ ಉತ್ತರವು ‘ಸಾಧ್ಯವಿಲ್ಲ’ ಎಂಬುದೇ ಆಗಿದೆ. ಆದರೆ ಈ ಶರಣ ಚಳುವಳಿ ಕೆಳಸ್ತರದ ಬಹುಸಂಖ್ಯಾತ ದುಡಿಯುವ ವರ್ಗಕ್ಕೆ, ತತ್ಕಾಲಕ್ಕಾದರೂ, ಮಾತನಾಡುವ ಬಾಯನ್ನೂ, ಪ್ರತಿಭಟಿಸುವ ಕೆಚ್ಚನ್ನೂ ತಂದುಕೊಟ್ಟಿತೆಂಬುದಾಗಲೀ, ಈ ಕೆಳವರ್ಗದ ಶೂದ್ರಶಕ್ತಿಯ ಸಿಡಿಮದ್ದಿನಿಂದ, ನೆಲೆನಿಂತ ವ್ಯವಸ್ಥೆಯನ್ನು ಸ್ಫೋಟಿಸುವ ಪ್ರಯತ್ನವೊಂದು ಘಟಿಸಿತೆಂಬುದಾಗಲೀ ಚಾರಿತ್ರಿಕವಾದ ವಾಸ್ತವಗಳೇ ಆಗಿವೆ. ಈ ಸಂಗತಿಗಳು ನಾಗರಾಜಪ್ಪನವರಿಗೆ ಗೊತ್ತಿಲ್ಲವೆಂದೇನೂ ಅಲ್ಲ. ಆದರೆ ಶರಣ ಚಳುವಳಿಯ ಈ ಚಾರಿತ್ರಿಕ ವಾಸ್ತವಗಳ ಹಿಂದೆ, ಕೆಳವರ್ಗದ ಸಂಸ್ಕೃತಿಗಳಿಗೆ ಒದಗಿದ ಆಘಾತವನ್ನು ನಾಗರಾಜಪ್ಪನರು ಗುರುತಿಸುತ್ತ, ಆ ಚಾರಿತ್ರಿಕ ಸಂದರ್ಭದ ಬಹುಮುಖತ್ವವನ್ನು ಕುರಿತು ಓದುಗರನ್ನು ‘ಮರುಚಿಂತನೆ’ಗೆ ತೊಡಗಿಸುತ್ತಾರೆ. ಹಾಗೆಯೇ, ವಚನಕಾರರು ಮನುಷ್ಯರೆಲ್ಲರೂ ಸಮಾನರು ಎಂಬ ಮಾತನ್ನು ಹೇಳಲಿಲ್ಲ; ಲಿಂಗದೀಕ್ಷೆಯಿಂದ ಶಿವಭಕ್ತರಾದವರೆಲ್ಲರೂ ಸಮಾನರೆಂದು ಹೇಳಿದರು-ಎಂಬರ್ಥದ (ಪು.೭೪) ಅಭಿಪ್ರಾಯವನ್ನು ಮಂಡಿಸುತ್ತಾರೆ. ಈ ಅಭಿಪ್ರಾಯವನ್ನು ಓದಿದ ಕೂಡಲೆ, ಹೌದಲ್ಲ, ಈ ಕುರಿತು ನಾವು ಯಾರೂ ಸರಿಯಾಗಿ ಗಮನಿಸಿಯೇ ಇರಲಿಲ್ಲ- ಎಂದು ಅನ್ನಿಸುತ್ತದೆ. ಆದರೆ ಚಾರಿತ್ರಿಕವಾಗಿ ನೋಡಿದರೆ, ‘ಸರ್ವೇಜನಾಃ ಸುಖಿನೋ ಭವಂತು’ ‘ಸರ್ವಂಖಲ್ವಿದಂ ಬ್ರಹ್ಮಾ’ ಎಂದು ಉದ್ ಘೋಷಿಸುತ್ತಾ, ವಾಸ್ತವವಾಗಿ ಚಾತುರ್‌ವರ್ಣದ ಶ್ರೇಣಿಕರಣವನ್ನು ಎತ್ತಿ ಹಿಡಿದ ವೈದಿಕ ಪರಂಪರೆಯ ಈ ‘ಹುಸಿ ಸಮಾನತೆ’ಯ ಹಿನ್ನೆಲೆಯಲ್ಲಿ, ‘ವಿಪ್ರ ಮೊದಲು ಅಂತ್ಯಜ ಕಡೆಯಾಗಿ ಶಿವಭಕ್ತರಾದವರೆಲ್ಲರನ್ನೂ ಒಂದೇ ಎಂಬೆ’ ಎಂಬ ಬಸವಣ್ಣನವರ ಮಾತು ಮತ್ತು ಆ ಮಾತನ್ನು ಕೃತಿಗಿಳಿಸಿ ತೋರಿಸಲು ಅವರು ಮಾಡಿದ ಪ್ರಯತ್ನ ಇಂದು ನಮಗೆ ಅತ್ಯಂತ ಮಹತ್ವದ್ದಾಗಿ ತೋರುವುದಲ್ಲದೆ, ಹನ್ನೆರಡನೆಯ ಶತಮಾನದ ಚರಿತ್ರೆಯಲ್ಲಿ ಎಂತಹ ದಿಟ್ಟ ಹೆಜ್ಜೆ ಎಂದು ಅನ್ನಿಸುತ್ತದೆ. ಹಾಗೆ ನೋಡಿದರೆ ಜಗತ್ತಿನ ಎಲ್ಲ ಧರ್ಮಗಳೂ  ಯಾವುದೋ ಒಂದು ಚೌಕಟ್ಟನ್ನು ಹಾಕಿಕೊಂಡೇ, ಮೊದಲು ಆ ಚೌಕಟ್ಟಿನಲ್ಲಿ ತಮ್ಮ ಧರ್ಮದ ಆದರ್ಶಗಳ ಪಾಲನೆಯ ಪ್ರಯತ್ನಗಳನ್ನು ಒತ್ತಿ ಹೇಳುತ್ತವೆ. ಯಾವುದು ಒಂದು ಪರಿಮಿತಿಯಲ್ಲಿ ಸಾಧ್ಯವಾಗುತ್ತದೋ, ಅದು ಅನಂತರ ಆ ಪರಿಮಿತಿಯಾಚೆಗೂ ಸಾಧ್ಯವಾಗುತ್ತದೆ ಎಂಬ ನಂಬಿಕೆಯೊಂದು ಈ ಸಂಘಟನೆಗಳ ಹಿಂದಿರುತ್ತದೆ. ಹಾಗೆಯೇ ಒಂದು ಧರ್ಮ ಕ್ರಮೇಣ, ಸಾಂಸ್ಥಿಕ ಧರ್ಮವಾದಾಗ, ಅದು ತನ್ನ ಅರ್ಥವನ್ನು ಕಳೆದುಕೊಂಡು, ಹತ್ತರಲ್ಲಿ ಹನ್ನೊಂದಾಗುವ ಅವಸ್ಥೆಯನ್ನು ತಲುಪುತ್ತದೆ. ಶರಣಧರ್ಮ ಕೂಡಾ ಈ ‘ದುರವಸ್ಥೆ’ಯನ್ನು ತಲುಪಿದ ಪರಿಯನ್ನು ನಾಗರಾಜಪ್ಪನವರು ಈ ಕೃತಿಯಲ್ಲಿ ತುಂಬ ಸಮರ್ಥವಾಗಿ ಗುರುತಿಸಿದ್ದಾರೆ. ಹಾಗೆಯೇ ಯಾವುದೇ ಸಾಹಿತ್ಯವಾಗಲಿ, ಧರ್ಮವಾಗಲಿ ತಾನು ಸಂಭವಿಸಿದ  ನೆಲದ ಸಂಸ್ಕೃತಿಯ ಸಂಪರ್ಕವನ್ನು ಕಡಿದುಕೊಂಡು ಬೇರೆ ಬೇರೆಯ ಹಾಗೂ ಪಾರಂಪರಿಕವಾದ ಪ್ರಬಲ ಸಂಸ್ಕೃತಿಯ ಅಥವಾ ಸಾಹಿತ್ಯದ, ಪ್ರಭಾವಗಳಿಗೋ, ಅನುಕರಣೆಗೋ ಒಳಗಾಗಿ, ತನ್ನತನವನ್ನು ಉಳಿಸಿಕೊಳ್ಳಲಾಗದ ಇಕ್ಕಟ್ಟುಗಳನ್ನು ನಾಗರಾಜಪ್ಪನವರು ಕನ್ನಡ ಸಾಹಿತ್ಯ ಹಾಗೂ ಕರ್ನಾಟಕದ ಧರ್ಮಗಳ ಹಿನ್ನೆಲೆಯಲ್ಲಿ ಚರ್ಚಿಸಿದ್ದಾರೆ. ಈ ದೇಶದ ‘ಮಹತ್ ಪರಂಪರೆ’ಯನ್ನು ಎದುರಿಸಿದ ಕರ್ನಾಟಕದ ಪ್ರಮುಖ ಧರ್ಮಗಳು ಮತ್ತೆ ಬ್ರಾಹ್ಮಣೀಕರಣಕ್ಕೆ ಒಳಗಾಗುವುದರ ಮೂಲಕ ತಮ್ಮ ಸತ್ವವನ್ನು ಕಳೆದುಕೊಂಡವು (ಪು. ೭೭) ಮತ್ತು ಅವು ಕೆಳವರ್ಗದ ಸಂಸ್ಕೃತಿಯಲ್ಲಿ ಕಸಿಗೊಳ್ಳದೆ, ಕೇವಲ ಕೆಳವರ್ಗದ ಭಾಷೆಯಲ್ಲಿ ಕಸಿಗೊಂಡ ಕಾರಣದಿಂದ, ಅವುಗಳ ಪರಿಣಾಮವಾದ ಸಾಹಿತ್ಯ ನಿರ್ಮಿತಿಯು ತನ್ನ ನೆಲದ ಸಾರ ಸರ್ವಸ್ವವನ್ನು ಹೀರಿ ಪುಷ್ಟಿಯಾಗಿ ಬೆಳೆದು ಸಮಗ್ರ ಜನತೆಯ ನಾಲಗೆಯಾಗಲಿಲ್ಲ (ಮುನ್ನುಡಿ XVII) -ಎಂದು ಕನ್ನಡ ಸಾಹಿತ್ಯದ ಇತಿಮಿತಿಗಳನ್ನು ಹಾಗೂ ಅದಕ್ಕೆ ಕಾರಣಗಳನ್ನೂ ಮಂಡಿಸುತ್ತಾರೆ. ಈ ಅಭಿಪ್ರಾಯಗಳು ಖಂಡಿತವಾಗಿಯೂ ನಿಜವಾದ ಸಾಹಿತ್ಯಾಸಕ್ತರನ್ನು ಪುನರಾಲೋಚನೆಗೆ ಪ್ರಚೋದಿಸುವಂಥವು ಎಂಬುದು ಗಮನಿಸಬೇಕಾದ ಸಂಗತಿಯಾಗಿದೆ. ನಾನು ಇಲ್ಲಿ ಅವರ ಮೊದಲ ಕೃತಿಯಾದ ‘ಮರುಚಿಂತನೆ’ಯನ್ನು ಕುರಿತು, ಮತ್ತು ಇತ್ತೀಚೆಗೆ ಅವರು ಬರೆದು ಅಲಲ್ಲಿ ಬಿಡಿ ಬಿಡಿಯಾಗಿ ಪ್ರಕಟವಾಗಿರುವ ಬರಹಗಳನ್ನು ಕುರಿತು ವಿಮರ್ಶೆಗೆ ತೊಡಗಲು ಹೊರಟಿಲ್ಲ. ಆದರೆ ಅವರ ಬರಹದ ಹಿಂದಿರುವ ಮುಖ್ಯವಾದ ತುಡಿತಗಳೇನೆಂಬುದರ ಕಡೆ ಮಾತ್ರ ಓದುಗರ ಗಮನವನ್ನು ಸೆಳೆಯಲು ಪ್ರಯತ್ನಿಸಿದ್ದೇನೆ. ಅದೆಂದರೆ, ನಾಗರಾಜಪ್ಪನವರ ಮನಸ್ಸು ಕೆಳವರ್ಗದ ಪರವಾದ ಅಪಾರ ತಿಳಿವಿನಿಂದಲೂ ಸಹಾನುಭೂತಿಯಿಂದಲೂ ಸ್ಪಂದಿಸುತ್ತದೆ ಎನ್ನುವುದು. ಅದೇ ಅವರ ಮುಖ್ಯ ಕಾಳಜಿಯಾಗಿರುವುದರಿಂದ, ದಲಿತ-ಬಂಡಾಯ ಸಾಹಿತ್ಯದ ಬರಹಗಾರರು, ನಾಗರಾಜಪ್ಪನವರು ತಮ್ಮೊಳಗಿನ ತಳಮಳಗಳಿಗೆ ತಕ್ಕಧ್ವನಿಯಾಗಬಲ್ಲರೆಂದು ತಿಳಿಯುತ್ತಾರೆ. ಹಾಗೆಂದರೆ ನಾಗರಾಜಪ್ಪನವರು ದಲಿತ ಬಂಡಾಯ ಸಾಹಿತ್ಯದ ವಕ್ತಾರರೆಂದೇನೂ ಅಲ್ಲ. ಹಾಗೆ ನೋಡಿದರೆ ಅವರು ಈ ಯಾವ ಬಗೆಯ ಸಾಹಿತ್ಯ ಪಂಥಗಳೊಂದಿಗೂ ಸಂಬಂಧಿಸಿಕೊಳ್ಳುವುದನ್ನು ಅಪೇಕ್ಷಿಸುವರಲ್ಲ. ಅವರು ಈ ಎಲ್ಲದರಿಂದಾಚೆ ನಿಂತು ತಮಗೆ ಸತ್ಯವೆಂದು ಕಂಡದ್ದನ್ನು ನಿರ್ಭಯವಾಗಿ ಹೇಳಬಲ್ಲರು. ಸುತ್ತ ಹತ್ತು ಜನಕ್ಕೆ, ಪ್ರೀತಿಯಿಂದ ನೆರವಾಗಬಲ್ಲರು. ಹೀಗಾಗಿ ನಾಗರಾಜಪ್ಪನವರ ಅಭಿಮಾನಿಗಳ ಹಾಗೂ ಗೆಳೆಯರ ಬಳಗ ದೊಡ್ಡದು.

ಗ್ರಾಮೀಣ ಪರಿಸರದಿಂದ ಬಂದ ನಾಗರಾಜಪ್ಪನವರು, ಈ ಗ್ರಾಮಾಂತರ ಪರಿಸರದ ಬರಹಗಾರರು ಶಿಷ್ಟವರ್ಗದ ಸಮೂಹ ಮಾಧ್ಯಮಗಳಿಂದ ಹಾಗೂ ವಿಮರ್ಶೆಯ ಗುತ್ತಿಗೆದಾರರಿಂದ, ನಿರ್ಲಕ್ಷ  ಮತ್ತು ತಿರಸ್ಕಾರಕ್ಕೆ ಗುರಿಯಾಗಿರುವ ಪರಿಗೆ ಅತ್ಯಂತ ದುಃಖದಿಂದ ಮತ್ತು ಸಿಟ್ಟಿನಿಂದ ಪ್ರತಿಕ್ರಿಯಿಸುತ್ತಾ, ಈ ಬರೆಹಗಾರರಿಗೊಂದು ವೇದಿಕೆಯನ್ನು ಕಲ್ಪಿಸಬೇಕೆಂದು ಹಂಬಲಿಸುತ್ತಾರೆ. ನಾಗರಾಜಪ್ಪನವರು ನಮ್ಮೆಲ್ಲರಿಗೂ ಪ್ರಿಯವಾಗುವುದು, ಈ ಬಗೆಯ ಮಾನವೀಯ ಅಂತಃಕರಣದಿಂದ ಹಾಗೂ ಅವ್ಯಾಜವಾದ ಪ್ರೀತಿಯಿಂದ.

ಯಾವುದೂ ಸಣ್ಣದಲ್ಲ : ೨೦೦೪