ಬಾನಬಯಲನೇರಿತಲ್ಲಿ
ನೋಡು ನಮ್ಮ ಬಾವುಟ.
ಮುಗಿಲನಲೆವ ಗರುಡನಂತೆ
ಯಜ್ಞಕುಂಡದುಂಡೆಯಂತೆ
ದಿವಕೆ ದಾಳಿಯಿಕ್ಕುತ !

ಬೆಳ್ಳಿ ಬೆಟ್ಟ ಕುಬ್ಜವಾಯ್ತು
ಇದು ಏರಿದ ನಿಲುವಿಗೆ !
ದಿಙ್ಮಂಡಲ ನೋಡುತಿತ್ತು,
ಭೂಮಂಡಲ ತಿರುಗುತಿತ್ತು
ಕೆಳಗೆಲ್ಲೋ ಒಂದೆಡೆ !

ಬೆರಗುಗಣ್ಣೊಳೀಕ್ಷಿಸಿದಳು
ತಾಯಿ ಪೃಥುವಿ ಶ್ಯಾಮಲೆ.
ನೀಲ ಕಡಲು ತೊದಲುತಿತ್ತು
ಜಯಘೋಷವ ಅಲೆ ಅಲೆ !
ಸೂರ್ಯ ಚಂದ್ರ ಚಿಕ್ಕೆ ಬಳಗ
ಸಲ್ಲಿಸಿದುವು ವಂದನೆ !

ವೇದ ಋಷಿಯ ಮಂತ್ರ ಪವನ
ತೀಡುತ್ತಿತ್ತು ಮೇಲ್ಗಡೆ.
ದಿವ್ಯಯಜ್ಞ ದೀಪ್ತಿಯಂತೆ
ಜಗದಿಚ್ಛಾ ಚಕ್ರದಂತೆ
ಮೆರೆವಶೋಕ ಚಕ್ರವಾಯ್ತು
ದೇವತೆಗಳ ನಿಲುಗಡೆ !