ಪರಿಸರ ಅನ್ನುವ ಸರಳ ಶಬ್ದದ ಹಿಂದೆ ಒಂದು ಅಗಾಧವಾದ ಹಿನ್ನೆಲೆಯೇ ಇದೆ. ಬಹಳ ಸುಲಭವಾಗಿ ನಾವು ಪರಿಸರವನ್ನು ಕುರಿತು ಮಾತನಾಡಿ ಬಿಡುತ್ತೇವೆ; ಆದರೆ ಮಾತಿನಷ್ಟು ಹಗುರವಾದ ಶಬ್ದ ಇದಲ್ಲ. ಓರ್ವ ತಾಯಿಯಾದವಳು ಒಂಬತ್ತು ತಿಂಗಳು ತನ್ನ ಗರ್ಭದಲ್ಲಿ ಹೇಗೆ ಒಂದು ಭ್ರೂಣವನ್ನು ಇರಿಸಿ ಕೊಂಡು ನಂತರ ಎಲ್ಲ ವಿಧದಲ್ಲೂ ಪರಿಪೂರ್ಣವಾದ ಒಂದು ಮಗುವನ್ನು ಹೆರುತ್ತಾಳೋ ಹಾಗೆ ಪರಿಸರ ನಮ್ಮನ್ನೆಲ್ಲ ಕಾಪಾಡುತ್ತ ಬಂದಿದೆ.

ನಮ್ಮ ನಡುವೆ ಸಾವಿರ ಸಾವಿರ ಸಂಖ್ಯೆಯ ಜೀವಿಗಳು, ಸಸ್ಯಗಳು, ಕ್ರಿಮಿ ಕೀಟಗಳು ಇವೆ. ಇವೆಲ್ಲವೂ ಈ ಸಸ್ಯ ಕ್ರಿಮಿ ಕೀಟಗಳ ಅಭಿವೃಧ್ದಿಗೆ, ಬೆಳವಣಿಗೆಗೆ ಪೂರಕವಾದ ವಾತಾವರಣದಲ್ಲಿಯೇ ಬೆಳೆಯುವುದನ್ನು ನಾವು ಗಮನಿಸಬಹುದು.  ಒಂದು ಕಾಡಿನಲ್ಲಿ ಹುಲಿಗಳಿವೆ ಅನ್ನುವುದಾದರೆ ಅದೇ ಕಾಡಿನಲ್ಲಿ ಹುಲಿಗಳಿಗೆ ಬೇಕಾದ ಜಿಂಕೆ, ಕಡಗಳನ್ನು ಪ್ರಕೃತಿ ನಿರ್ಮಾಣ ಮಾಡಿರುತ್ತದೆ. ಒಂದು ಸಮುದ್ರದಲ್ಲಿ ದೊಡ್ಡ ದೊಡ್ಡ ಮೀನುಗಳು ಇವೆ ಅನ್ನುವುದಾದರೆ ಈ ದೊಡ್ಡ ಮೀನುಗಳಿಗೆ ಆಹಾರ ಸಿಗಲೆಂದು ಪರಿಸರ ಸಣ್ಣ ಸಣ್ಣ ಮೀನುಗಳನ್ನು ಸೃಷ್ಟಿ ಮಾಡಿರುತ್ತದೆ. ಹಾಗೆಯೇ ಈ ಸಣ್ಣ ಮೀನುಗಳಿಗೆ ಬೇಕಾದ ಆಹಾರ ಕೂಡ ಅಲ್ಲಿಯೇ ದೊರೆಯುತ್ತದೆ.

ಕೆಲ ಹಕ್ಕಿಗಳು ಒಂದು ಮರದ ಹಣ್ಣುಗಳ ಮೇಲೆ ಅವಲಂಬಿಸಿ ಕೊಂಡಿರುತ್ತವೆ. ಈ ಮರಗಳಲ್ಲಿ ಹಣ್ಣು ದೊರೆತರೆ ಮಾತ್ರ ಆ ಹಕ್ಕಿಗಳ ಸಂಖ್ಯೆ ಅಧಿಕವಾಗುತ್ತದೆ. ಈ ಹಕ್ಕಿ ಹಾಗು ಆ ಮರ, ಇವೆರಡರ ನಡುವೆ ಒಂದು ಅವಿನಾಭಾವ ಸಂಬಂಧ ಏರ್ಪಟ್ಟಿರುತ್ತದೆ. ಇಲ್ಲವೆ ಪರಿಸರ ಇಂತಹ ಒಂದು ಸಂಬಂಧ ಏರ್ಪಡುವ ಹಾಗೆ ಮಾಡುತ್ತದೆ. ಈ ಹಕ್ಕಿಗಳಿಗೆ ಬೇಕಾದ ಮರಗಳು ಒಂದು ಪ್ರದೇಶದಲ್ಲಿ ಅಧಿಕವಾಗಿ ಬೆಳೆಯುವ ಹಾಗೆ ಆ ಹಕ್ಕಿಯೇ ಮಾಡುತ್ತದೆ. ಹಣ್ಣನ್ನು ತಿಂದ ಹಕ್ಕಿ ಅದರ ಬೀಜವನ್ನು ತನ್ನ ಮಲದ ಮೂಲಕ ಹಲವೆಡೆಗಳಲ್ಲಿ ಬಿತ್ತಿ ಪ್ರತಿಯಾಗಿ ಆ ಮರಗಳು ಅಲ್ಲಲ್ಲಿ ಹುಟ್ಟುವ ಹಾಗೆ ಮಾಡುತ್ತದೆ.  ಪರಿಸರದ ಈ ವ್ಯವಸ್ಥೆಯ ಹಿಂದಿರುವ ಕಾಳಜಿಯನ್ನು ನಾವು ಗಮನಿಸಬೇಕು.  ಮರಗಳ ಬೆಳವಣಿಗೆಗೆ ಹಕ್ಕಿ ಕಾರಣವಾಗುತ್ತದೆ, ಹಕ್ಕಿಗಳ ಬದುಕಿಗೆ ಮರಗಳು ನೆರವಾಗುತ್ತವೆ.

ಇಂಥ ಒಂದು ವ್ಯವಸ್ಥೆಯನ್ನು ನಾವು ಪರಿಸರದಲ್ಲಿ ನೋಡುತ್ತ ಬಂದಿದ್ದೇವೆ.

ಇನ್ನೊಂದು ಮರದಲ್ಲಿ ಇನ್ನೊಂದು ಬಗೆಯ ಹಣ್ಣು ಬಿಡುತ್ತದೆ. ಈ ಹಣ್ಣು ಜಿಂಕೆಗಳಿಗೆ ಪ್ರಿಯವಾದದ್ದು. ಈ ಹಣ್ಣುಗಳನ್ನು ತಿನ್ನಲಿಕ್ಕೆ ಜಿಂಕೆಗಳು ಅಲ್ಲಿಗೆ ಬರುತ್ತವೆ.  ಈ ಜಿಂಕೆಗಳು ಹುಲಿಗಳ ಪ್ರೀಯ ಆಹಾರ. ಜಿಂಕೆ ಅಲ್ಲಿಗೆ ಬರುವುದನ್ನು ಕಾದು ಕುಳಿತ ಹುಲಿ, ಜಿಂಕೆ ಅಲ್ಲಿಗೆ ಬಂದಾಗ ಅದರ ಮೇಲೆ ಹಾರಿ ಅದನ್ನು ಹಿಡಿಯುತ್ತದೆ.

ಹುಲಿ ತಾನು ಹಿಡಿದ ಜಿಂಕೆಯ ಸ್ಚಲ್ಪ ಭಾಗವನ್ನು ತಿಂದು ಉಳಿದುದನ್ನು ಅಲ್ಲಿಯೇ ಬಿಟ್ಟು ಹೋಗುತ್ತದೆ. ಆಗ ಕಾಡಿನಲ್ಲಿ ಇರುವ ಕೆಲ ಕ್ಷುದ್ರ ಪ್ರಾಣಿಗಳಾದ ನರಿ, ತೋಳಗಳಂತಹಾ ಪ್ರಾಣಿಗಳು ಹುಲಿ ಬಿಟ್ಟು ಹೋದ ಜಿಂಕೆಯ ಅವಶೇಷವನ್ನು ತಿಂದು ಹೋಗುತ್ತವೆ. ಇವು ಕೂಡ ಸಂಪೂರ್ಣವಾಗಿ ಆ ಅವಶೇಷವನ್ನು ತಿಂದು ಮುಗಿಸುವುದಿಲ್ಲ. ಹುಲಿಯ ಚರ್ಮ ಎಲಬು ಅಲ್ಲಿಯೇ ಉಳಿಯುತ್ತದೆ. ಇವು ಮಣ್ಣಿನಲ್ಲಿ ವಾಸಿಸುವ ಇನ್ನೂ ಕೆಲ ಸೂಕ್ಷ್ಮ ಜೀವಿಗಳಿಗೆ ಆಹಾರವಾಗುತ್ತದೆ.  ಹೀಗೆ ಆಹಾರವಾಗುವಾಗಲೇ ಇವು ಮರಕ್ಕೆ ಗೊಬ್ಬರವಾಗಿ ಪರಿವರ್ತನೆ ಹೊಂದುತ್ತವೆ. ಇಲ್ಲಿ ಮರ ಜಿಂಕೆಯನ್ನು ಸಾಕುತ್ತದೋ ಇಲ್ಲ ಜಿಂಕೆ ಮರವನ್ನು ಸಾಕುತ್ತದೋ ಇಲ್ಲ ಹುಲಿ ಈ ಎರಡರ ಬದುಕುವಿಕೆಗೆ ಕಾರಣವಾಗುತ್ತದೋ ಅನ್ನುವುದು ಒಂದು ಸಮಸ್ಯೆಯೇ.  ಆದರೆ ಪರಿಸರದ ಈ  ವ್ಯವಸ್ಥೆ ಮಾತ್ರ ನಮ್ಮಲ್ಲಿ ಅಚ್ಚರಿ ಉಂಟು ಮಾಡುವಂತಹದು. ಇದನ್ನೇ ನಾವು ಪರಿಸರ ಸರಪಳಿ ಅಥವಾ  ಎನವಿರಾನ್ಮೆಂಟಲ್ ಚೈನ್ ಎಂದು ಕರೆಯುತ್ತೇವೆ.

ಇಂಥ ಪರಿಸರ ಸರಪಳಿ ಎಲ್ಲಿಯಾದರೂ ತುಂಡಾದರೆ ಇಡೀ ಪರಿಸರದಲ್ಲಿ ಅಸಮತೋಲನ ಉಂಟಾಗುತ್ತದೆ.

ಈ ಬಗೆಯ ಅಸಮತೋಲನಗಳು ಇಂದು ಅಧಿಕ ಸಂಖ್ಯೆಯಲ್ಲಿ ನಡೆಯುತ್ತಿವೆ.      ಚೀನಾದವರು ಗುಬ್ಬಿಗಳ ದಾಂದಲೆ ಹೆಚ್ಚಾಯಿತೆಂದು ಒಂದು ರಾಷ್ಟ್ರೀಯ ದಿನವನ್ನು ಗುರುತು ಮಾಡಿಕೊಂಡು ಅಂದು ಸರಕಾರಿ ರಜಾ ದಿನ ಎಂದು ಘೋಷಿಸಿ ಎಲ್ಲ ಗುಬ್ಬಿಗಳನ್ನು ಕೊಂದು ಹಾಕಿದರು. ದೇಶದಲ್ಲಿಯ ಗುಬ್ಬಿಗಳೆಲ್ಲ ಸತ್ತವು.  ಆದರೆ ಮಿಡತೆಗಳಂತಹಾ ಜೀವಿಗಳು ಹೆಚ್ಚಾದವು. ಗುಬ್ಬಿಗಳಿಂದ ಆಗುತ್ತಿದ್ದ ನಷ್ಟಕ್ಕಿಂತ ಹೆಚ್ಚಿನ ನಷ್ಟ ಈಗ ಆಗ ತೊಡಗಿತು.

ಹೀಗೆ ಪರಿಸರದಲ್ಲಿ ಸಮತೋಲನ ತಪ್ಪಿದಾಗ ಆಗುತ್ತದೆ.  ಒಂದು ಸಮಸ್ಯೆಯನ್ನು ಪರಿಹರಿಸ ಹೊರಟಾಗ ಮತ್ತೊಂದು ಸಮಸ್ಯೆ ಎದುರಾಗುತ್ತದೆ. ಇಂತಹಾ ಸಮಸ್ಯೆಗಳು ಉದ್ಭವಿಸ ಬಾರದು ಅಂದರೆ ನಮಗೆ ಪರಿಸರದ ಸಮಗ್ರ ಪರಿಚಯ ಇರ ಬೇಕಾಗುತ್ತದೆ.

ಪರಿಸರವನ್ನು ನಾವು ವಿಭಜಿಸಬಹುದಾದರೆ ಭೌತಿಕ ಮತ್ತು ಜೈವಿಕ ಎಂದು ಗುರುತಿಸ ಬಹುದು. ಭೌತಿಕ ಅನ್ನುವುದು ಗಾಳಿ, ಜಲ, ನೆಲಕ್ಕೆ ಸಂಬಂಧ ಪಟ್ಟದ್ದು. ಜೈವಿಕ ಅನ್ನುವುದು ಸಸ್ಯ, ಪ್ರಾಣಿ, ಜಲಚರ ಕ್ರಿಮಿಕೀಟ ಇವುಗಳಿಗೆ ಸಂಬಂಧ ಪಟ್ಟದ್ದು. ಒಂದು ಅರ್ಥದಲ್ಲಿ ಇವೆರಡರ ನಡುವೆ ಯಾವದೇ ಸಂಬಂಧ ಇದೆ ಎಂದು ನಮಗೆ ಅನಿಸದಿದ್ದರೂ ಭೌತಿಕ ಮತ್ತು ಜೈವಿಕ ಅಂಶಗಳು ಸೇರಿಯೇ ನಮ್ಮ ಪರಿಸರ ಆಗಿದೆ ಮತ್ತು ಇದೆ.

ಸಮುದ್ರದಲ್ಲಿ ಇರುವ ಆಮೆ ಮೊಟ್ಟೆ ಇಡಲು ಕಡಲ ತಡಿಗೆ ಬರುತ್ತದೆ. ಕಡಲವಾಸಿಯಾದ ಒಂದು ಮೀನು ಮರಿ ಮಾಡಲು ದಡದಲ್ಲಿನ ಜೊಂಡನ್ನು ಬಳಸಿ ಕೊಳ್ಳುತ್ತದೆ. ಒಂದು ಮರ ನೆಲದ ಮೇಲೆ ನಿಲ್ಲಲು ಬೇರುಗಳ ಮೂಲಕ ನೆಲವನ್ನು ಬಲವಾಗಿ ತಬ್ಬಿಕೊಳ್ಳುತ್ತದೆ. ಬಿಸಿಲಿನಿಂದ ತನಗೆ ಬೇಕಾದ ಪೋಷಕಾಂಶಗಳನ್ನು ಪಡೆಯುತ್ತದೆ. ನೀರು, ನೆಲ, ಗಾಳಿ ಎಲ್ಲ ಜಂತುಗಳಿಗೂ ಬೇಕು ಅನ್ನುವುದು ಸರ್ವವಿದಿತ. ಅಲ್ಲದೆ ಇವುಗಳು ಪರಾವಲಂಬೀ ತತ್ವವನ್ನು ರೂಢಿಸಿ ಕೊಂಡಿವೆ.  ಈ ಪರಾವಲಂಬಿ ತತ್ವದ ಮೂಲಕವೇ ಇಲ್ಲಿ ಅಸ್ತಿತ್ವದಲ್ಲಿ ಇವೆ.

ಮೇಯುವ ದನಕರುಗಳ ಹಿಂದೆ ಕೆಲ ಕೊಕ್ಕರೆಗಳು ಸದಾ ಇರುವುದನ್ನು ನಾವು ಗಮನಿಸ ಬಹುದು. ಇವು ಈ ದನ ಕರುಗಳ ಮೈಮೇಲಿನ ಜಿಗಟಗಳನ್ನು ತಿನ್ನುವುದರ ಮೂಲಕ ಅವುಗಳ ಶುಚಿತ್ವವನ್ನು ಕಾಪಾಡುತ್ತವೆ. ಹಾಗೆಯೇ ಮಾಂಸಾಹಾರಿಯಾದ ಮೊಸಳೆ ಸಿಕ್ಕ ಪ್ರಾಣಿಯ ಮಾಂಸವನ್ನು ತಿಂದು ಬಾಯಿ ತೆರೆದು ಕೊಂಡು ಒಂದೆಡೆ ಬಿದ್ದು ಕೊಂಡಿದ್ದರೆ, ಡಾಕ್ಟರ ಫಿಶ್ ಅನ್ನುವ ಒಂದು ಮೀನು ಅದರ ಬಾಯಿಯೊಳಗೆ ಪ್ರವೇಶಿಸಿ ಅದರ ಹಲ್ಲಿನ ಸಂದಿಯಲ್ಲಿ ಸಿಕ್ಕಿ ಬಿದ್ದ ಎಲ್ಲ ಮಾಂಸವನ್ನು ಕಿತ್ತು ತಿನ್ನುತ್ತದಂತೆ.  ಎಂತಹಾ ಅವಲಂಬನೆ

ನೋಡಿ. ಪರಿಸರದ ವಿಶೇಷತೆ ನಿಂತಿರುವುದೇ ಇದರ ಮೇಲೆ.

ಈ ಕಾರಣದಿಂದಲೇ ಪರಿಸರದಲ್ಲಿಯ ಭೌತಿಕ ಅಂಶವಾಗಲಿ, ಜೈವಿಕ ಅಂಶವಾಗಲಿ ಒಂದನ್ನು ಇನ್ನೊಂದು ಧಿಕ್ಕರಿಸಿ ಬದುಕುವ ಪ್ರಮೇಯ ನಮಗೆ ಕಾಣುವುದಿಲ್ಲ. ನಿನ್ನ ಹಂಗು ನನಗಿಲ್ಲ, ನನ್ನ ಹಂಗು ನಿನಗಿಲ್ಲ ಅನ್ನುವ ಮಾತು ಪರಿಸರದಲ್ಲಿ ಇಲ್ಲ.

ಆದರೆ ಇದಕ್ಕೆ ಪೂರಕವಲ್ಲದ ಮನೋಭಾವ ಬೆಳೆಸಿ ಕೊಂಡಿರುವವನು ಮಾತ್ರ ಮನುಷ್ಯ ಒಬ್ಬನೇ. ಹಿಂದೆ ಮನುಷ್ಯ ಪರಿಸರದ ಮುಂದೆ ವಿಧೇಯನಾಗಿರುತ್ತಿದ್ದ. ಕಡಲಲ್ಲಿ ದೋಣಿಯನ್ನು ತೆಗೆದುಕೊಂಡು ಹೋಗುವ  ಮುನ್ನ ಆತ ಕಡಲ ದಂಡೆಯ ಮೇಲೆ ನಿಂತು ಕಡಲಿಗೆ ಕೈ ಮುಗಿಯುತ್ತಿದ್ದ.  ಮರ ಹತ್ತುವ ಮುನ್ನ ಮರವನ್ನು ಕಣ್ಣಿಗೆ ಒತ್ತಿ ಕೊಳ್ಳುತ್ತಿದ್ದ. ಇದನ್ನು ಆಧುನಿಕರು ಮೌಢ್ಯ ಎಂದು ಕರೆದರೂ ಎಲ್ಲೋ ಒಂದು ಕಡೆ ಆತ ತನ್ನ ವಿಧೇಯತೆಯನ್ನು ಪರಿಸರಕ್ಕೆ ವ್ಯಕ್ತಪಡಿಸುತ್ತಿದ್ದ. ಪರಿಸರದ ನೇಮ ನಿಯಮಗಳಿಗೆ ತಾನು ಬಧ್ದ ಅನ್ನುವುದನ್ನು ಆತ ತನ್ನ ಈ ವರ್ತನೆಯ ಮೂಲಕ ಖಚಿತ ಪಡಿಸುತ್ತಿದ್ದ.

ಆದರೆ ಇಂದು ಈ ಮನೋಭಾವ ಕಡಿಮೆಯಾಗಿದೆ ಇಲ್ಲ ಮರೆಯಾಗುತ್ತಿದೆ. ಪರಿಸರದ ಎಲ್ಲ ನಿಯಮಗಳನ್ನು ಮೀರಿ ಹೋಗುವ ಪ್ರಯತ್ನವನ್ನು ನಾವು ಮಾಡುತ್ತಿದ್ದೇವೆ, ಮುಖ್ಯವಾಗಿ ಪರಿಸರವನ್ನು ಧಿಕ್ಕರಿಸಿ ಹೋಗುವ ಒಂದು ಮನೋಭಾವ ಮನುಷ್ಯನಲ್ಲಿ ಮೂಡುತ್ತಿದೆ.  ಅವನ ಅತ್ಯಾಧುನಿಕ ಸಂಶೋಧನೆಗಳು, ಅವನು ಪಡೆದಿರುವ ವೈಜ್ಞಾನಿಕ ಶಕ್ತಿ, ಯಂತ್ರಗಳ ಮೂಲಕ ಅವನು ಗಳಿಸಿರುವ ಜ್ಞಾನ ಅವನನ್ನು ಈ ವಿಷಯದಲ್ಲಿ ಮುಂತಳ್ಳುತ್ತಿದೆ. ತಾನು ಪರಿಸರಕ್ಕಿಂತ ಶ್ರೇಷ್ಠ ಅನ್ನುವ ಅಹಂಕಾರವನ್ನು ಅವನಲ್ಲಿ ಬೆಳೆಸುತ್ತಿದೆ.

ಇವತ್ತು ಮನುಷ್ಯ ಹಲವಾರು ಕಾರ್ಯಗಳನ್ನು ಕೈಕೊಳ್ಳುತ್ತಿದ್ದಾನೆ.  ಆದರೆ ಈ ಎಲ್ಲ ಸಂದರ್ಭಗಳಲ್ಲಿ ಆತ ಪರಿಸರದ ನಿಯಮಗಳನ್ನು ಮುರಿದು ಮುಂದೆ ಹೋಗುತ್ತಿದ್ದಾನೆ.  ಮರಗಳ ನಾಶದಿಂದ ಮಳೆ ಕಡಿಮೆ ಆಗಿದೆ.  ಕೆರೆಗಳ ನಾಶದಿಂದ ಅಂತರಜಲ ಮಟ್ಟ ಇಳಿದಿದೆ, ಕಪ್ಪೆಗಳ ನಾಶದಿಂದ ಹಾವುಗಳ ಸಂತತಿ ಕಡಿಮೆ ಆಗುತ್ತಿದೆ, ರಾಸಾಯನಿಕಗಳ ಬಳಕೆಯಿಂದ ನೆಲದ ಗುಣ ಮಟ್ಟ ಕುಸಿದಿದೆ, ಕಾರ್ಖಾನೆಗಳು ನೀರನ್ನು ಕಲುಶಿತ ಗೊಳಿಸುತ್ತಿವೆ, ನಗರಗಳು ವಾಯು ಮಾಲಿನ್ಯಕ್ಕೆ ಕಾರಣವಾಗುತ್ತಿವೆ, ಇಂತಹಾ ನೂರಾರು ಅಪಾಯಗಳು ಸಂಭವಿಸುತ್ತಿವೆ.  ಇದಕ್ಕೆ ಮೂಲ ಕಾರಣ ಮನುಷ್ಯ ಪರಿಸರದ ಜೊತೆಯಲ್ಲಿ ಸಹಭಾಗಿತ್ವ ಪಡೆಯದೆ ಮುನ್ನಡೆಯುತ್ತಿದ್ದಾನೆ. ಪರಿಸರದ ನಿಯಮಗಳನ್ನು ಆತ ಅನುಸರಿಸುತ್ತಿಲ್ಲ.

ನಾವು ಒಂದು ವಿಷಯವನ್ನು ಗಮನಿಸ ಬೇಕು. ಪರಿಸರದಲ್ಲಿ ನಮ್ಮ ಜೊತೆಯಲ್ಲಿ ಇರುವ ಯಾವುದೇ ಪ್ರಾಣಿ, ಪಕ್ಷಿ ನಮ್ಮ ಹಾಗೆ ಪರಿಸರವನ್ನು ನಾಶ ಮಾಡುತ್ತಿಲ್ಲ. ನಾನು ಮೇಲೆ ಹೇಳಿದ ಹಾಗೆ ಎಲ್ಲ ಜೀವ ಜಂತುಗಳು ಪರಿಸರದ ಉಳಿಯುವಿಕೆಗೆ ನೆರವಾಗುತ್ತವೆ. ಆದರೆ ಪರಿಸರವನ್ನು ತಿರಸ್ಕಾರದಿಂದ ಕಾಣುತ್ತಿರುವವ ಮನುಷ್ಯ ಒಬ್ಬನೇ.

ಇದಕ್ಕೆ ಕಾರಣ ಎರಡು. ಒಂದು ಅಹಂಕಾರ ಮತ್ತೊಂದು ಅಜ್ಞಾನ.  ನಾನು ಈ ಪರಿಸರದ ಒಡೆಯ ಅನ್ನುವ ಒಂದು ತಪ್ಪು ಕಲ್ಪನೆ ಮನುಷ್ಯನಲ್ಲಿ ಇದೆ. ನಾನು ಇಲ್ಲಿ ಏನೂ ಮಾಡ ಬಹುದು, ಇದೆಲ್ಲ ಇರುವುದು ತನಗಾಗಿ ಎಂದು ಆತ ತಿಳಿದಿದ್ದಾನೆ. ಒಂದು ಭೂಕಂಪ ಸಂಭವವಿಸಿದಾಗ, ಒಂದು ಜ್ವಾಲಾ ಮುಖಿ  ಆಸ್ಫೋಟಿಸಿದಾಗ, ಒಂದು ಸುನಾಮಿ ಬಂದು ಅಪ್ಪಳಿಸಿದಾಗ ಮನುಷ್ಯ ಎಷ್ಟೆಲ್ಲ ಕಷ್ಟ ನಷ್ಟಗಳಿಗೆ ಒಳಗಾಗುತ್ತಾನೆ  ಅನ್ನುವುದನ್ನು ಗಮನಿಸಿದಾಗ ಮನುಷ್ಯ ಎಷ್ಟರವನು ಅನ್ನುವುದು ಖಚಿತವಾಗುತ್ತದೆ. ಹಡಗು ಹಡಗುಗಳೇ  ಊರಿನೊಳಗೆ ನುಗ್ಗಿ ಬರುವಾಗ ಸುನಾಮಿಗಿಂತಲೂ ಇನ್ನೊಂದು ದೊಡ್ಡದಿಲ್ಲ ಅನಿಸುತ್ತದೆ. ಆದರೆ ಈ ಅರಿವು  ಮನುಷ್ಯನಿಗೆ ಬಂದಿಲ್ಲ.

ಅಂತೆಯೇ ನಾವು ಯಾವ ಪರಿಸರದ ನಡುವೆ ಬದುಕಿದ್ದೇವೆಯೋ ಆ ಪರಿಸರದ ಬಗ್ಗೆ ನಮಗೆ ಸರಿಯಾದ ಅರಿವಿಲ್ಲ. ಪರಿಸರದ ಕೆಲ ವ್ಯವಹಾರಗಳ ಬಗ್ಗೆ ನಮ್ಮಲ್ಲಿ ಗೌರವವಿದೆ, ಇಲ್ಲವೆ ಭೀತಿ ಇದೆ. ನಾವು ಪರಿಸರವನ್ನು ಅಜ್ಞಾನದಿಂದ ಕೊಂಡಾಡುತ್ತೇವೆ ಇಲ್ಲವೆ ಅದನ್ನು ಕಣ್ಣು ಮುಚ್ಚಿ ಭೀತಿಯಿಂದ ಪೂಜಿಸುತ್ತೇವೆ.  ಗ್ರಹಗಳು ಸಂಭವಿಸಿದಾಗ ನಮ್ಮ ಹಾಗು ವಿದೇಶೀಯರ ವರ್ತನೆಯನ್ನು ಹೋಲಿಸಿ ನೋಡಿದಾಗ ಈ ವಿಷಯ ಸ್ಪಷ್ಟವಾದೀತು ಅನಿಸುತ್ತದೆ ನನಗೆ.

ನಮ್ಮ ಸುತ್ತಲಿನ ಪರಿಸರವನ್ನು ಪೂಜಿಸುವುದಕ್ಕಿಂತ ಮೊದಲು ಇಲ್ಲ ಅದನ್ನು ಹೆದರಿಕೆಯಿಂದ ಕೈ ಮುಗಿಯುವುದರ ಬದಲು ಅದನ್ನು ಯಥಾವತ್ತಾಗಿ ಅರ್ಥ ಮಾಡಿ ಕೊಂಡರೆ ಎಲ್ಲರಿಗೂ ಒಳಿತಾಗುತ್ತದೆ. ಪರಿಸರ ಅಧ್ಯಯನ ನಮ್ಮ ಜೀವನದ ಅತ್ಯಮೂಲ್ಯ ವಿಷಯವಾಗುವ ಸಾಧ್ಯತೆ ಇದೆ.

ಇಲ್ಲಿ ಹೇಳಬಹುದಾದ ಒಂದು ಮುಖ್ಯ ವಿಷಯ ಅಂದರೆ ಪರಿಸರ ಇತ್ತೀಚೆಗೆ ನಮ್ಮ ಮೇಲೆ ಸೇಡು  ತೀರಿಸಿಕೊಳ್ಳುತ್ತಿರುವುದು. ಓಜೋನ್ ಪದರ ನಾಶ, ತಾಪ ಮಾನ ಹೆಚ್ಚಳ, ಅಂತರ್ಜಲ ಕಡಿಮೆ  ಆಗುತ್ತಿರುವುದು, ಅಕಾಲಿಕ ಮಳೆ, ಸುನಾಮಿ ಅಬ್ಬರ, ಹವಾಮಾನ ಬದಲಾವಣೆ, ಇನ್ನೂ ಅನೇಕ ಅಪಾಯಗಳನ್ನು ನಾವು ಎದುರಿಸುತ್ತಿದ್ದೇವೆ.  ಇವುಗಳಿಂದ ನಾವು ಉಳಿಯ ಬೇಕು ಅಂದರೆ ಪರಿಸರದೊಡನೆ ನಮ್ಮ ಸಂಬಂಧ ಸ್ನೇಹ ಗಟ್ಟಿಯಾಗಬೇಕು.  ಮುಖ್ಯ ಪರಿಸರವನ್ನು ನಾವು ನಮ್ಮ ವಿಶ್ವಾಸಕ್ಕೆ ತೆಗೆದು ಕೊಳ್ಳಬೇಕು. ಈ ನಿಟ್ಟಿನಲ್ಲಿ ನಾವು ವಿಚಾರ ಮಾಡಬೇಕಾಗಿದೆ.

(ವಿವಿಧ ಮೂಲಗಳಿಂದ)