ಸಾವಿರಾರು ವರ್ಷಗಳಿಂದ ನಮ್ಮ ಪುಟ್ಟ ಭೂಮಿಯಿಂದ  ಬೃಹತ್ ವಿಶ್ವವನ್ನು   ನೋಡುತ್ತಾ ಬಂದಿದ್ದೇವೆ. ಬಹಳ ಹಿಂದೆ ಯೇ  ಖಗೋಳಶಾಸ್ತ್ರಜ್ಞರು ನಕ್ಷತ್ರಗಳ ನಡುವೆ ಕೆಲವು ಚುಕ್ಕೆಗಳ ಚಲನೆಯನ್ನು ಗಮನಿಸಿದರು. ಅಲೆಮಾರಿ ಅಥವಾ ತಿರುಗಾಡುವುದು ಎಂಬರ್ಥದಲ್ಲಿ ಇವನ್ನು ಗ್ರಹಗಳೆಂದು ಕರೆದು ತಮ್ಮ ದೇವತೆಗಳ  ಹೆಸರನ್ನು ಇರಿಸಿದರು . –  ಗುರು (Jupiter) – ದೇವತೆಗಳ ರಾಜ, ಮಂಗಳ (Mars) – ಯುದ್ದ ದೇವತೆ, ಬುಧ (Mercury) – ದೇವತೆಗಳ ದೂತ, ಶುಕ್ರ (Venus) – ಸೌಂದರ್ಯ ಮತ್ತು ಪ್ರೇಮ ದೇವತೆ, ಶನಿ (Saturn) – ಗುರುವಿನ ತಂದೆ ಮತ್ತು ಕೃಷಿ ದೇವತೆ. ಇವಲ್ಲದೆ ಪ್ರಕಾಶ ಮಾನವಾದ ಬಾಲದ ಧೂಮಕೇತುಗಳನ್ನು ಮತ್ತು ಅತಿ ವೇಗವಾಗಿ ಚಲಿಸಿ ಉದುರುವ ನಕ್ಷತ್ರಗಳಂತೆ ಕಾಣುವ  ಉಲ್ಕೆಗಳನ್ನು ಕಂಡರು.

ದೂರದರ್ಶಕವನ್ನು ಕಂಡುಹಿಡಿದ ನಂತರ ನಮ್ಮ ಸೌರವ್ಯೂಹದಲ್ಲಿ ಹೊಸ  ಗ್ರಹಗಳನ್ನು ಕಂಡುಹಿಡಿಯಲಾಗಿದೆ. ಅವೆಂದರೆ, ಯುರೇನಸ್ (1781), ನೆಪ್ಚೂನ್ (1846) ಮತ್ತು ಪ್ಲೂಟೊ (1930). ಅನಂತರ 2006 ರಲ್ಲಿ ಪ್ಲೂಟೊವನ್ನು ಕುಬ್ಜ ಗ್ರಹವೆಂದು ಮರುವರ್ಗೀಕರಣ ಮಾಡಲಾಯಿತು. ಇದರೊಂದಿಗೆ ನಮ್ಮ ಸೌರವ್ಯೂಹ ಸಾವಿರಾರು ಚಿಕ್ಕ, ಚಿಕ್ಕ ಕಾಯಗಳಾದ ಕ್ಷುದ್ರಗ್ರಹಗಳು, ಧೂಮಕೇತು, ಇತ್ಯಾದಿಗಳಿಂದ ತುಂಬಿಹೋಗಿದೆ. ಸಾಮಾನ್ಯವಾಗಿ ಕ್ಷುದ್ರಗ್ರಹಗಳು  ಮಂಗಳ ಹಾಗೂ ಗುರು ಗ್ರಹಗಳ ಕಕ್ಷೆಗಳ  ನಡುವೆ ಬರುತ್ತವೆ. ಧೂಮಕೇತುಗಳ ನೆಲೆ ಪ್ಲೂಟೊವಿನ ಕ್ಷೇತ್ರದಿಂದ ಬಹಳ ದೂರದಲ್ಲಿ ಓರ್ಟ್ ಎಂಬ ಹೆಸರಿನ ಮೋಡಗಳಲ್ಲಿದೆ.

ಸೂರ್ಯನಿಗೆ ಹತ್ತಿರದಲ್ಲಿರುವ ನಾಲ್ಕು ಗ್ರಹಗಳಾದ ಬುಧ, ಶುಕ್ರ, ಭೂಮಿ ಮತ್ತು ಮಂಗಳ ಇವುಗಳನ್ನು ಭೂ (ಸದೃಶ) ಗ್ರಹಗಳೆಂದು ಕರೆಯುತ್ತಾರೆ. ಏಕೆಂದರೆ ಇವುಗಳ ಮೇಲ್ಮೈ ಘನವಾದ ಬಂಡೆಗಳಿಂದ ಕೂಡಿದೆ. ಮಂಗಳ ಗ್ರಹದ ಕಕ್ಷೆಯಿಂದಾಚೆಗೆ ಇರುವ ಗುರು, ಶನಿ, ಯುರೇನಸ್ ಮತ್ತು ನೆಪ್ಚೂನ್ ಗ್ರಹಗಳನ್ನು ಅನಿಲ ದೈತ್ಯ ಗ್ರಹಗಳೆಂದು ಕರೆದಿದ್ದಾರೆ. ನೆಪ್ಚೂನ್ ನಿಂದಾಚೆಗೆ  ಇರುವ ಕುಬ್ಜ ಗ್ರಹವಾದ ಪ್ಲೂಟೊ ಮೇಲ್ಮೈ ಘನವಾದರೂ ಭೂ ಸದೃಶ ಗ್ರಹಗಳಿಗಿಂತ ಮೆದುವಾಗಿದೆ.  ಈ ಭಾಗಕ್ಕೆ ಕೈಪರ್ ಬೆಲ್ಟ (Kuiper Belt) ಎಂಬ ಹೆಸರಿದೆ.

ವಾಯುಮಂಡಲ:  ಭೂಮಿಯ ವಾಯುಮಂಡಲದಲ್ಲಿ  ಕಾಣುವ ಅನಿಲಗಳು ಮುಖ್ಯವಾಗಿ ಸಾರಜನಕ ಮತ್ತು ಆಮ್ಲಜನಕ. ಶುಕ್ರಗ್ರಹದಲ್ಲಿ ದಟ್ಟವಾದ ವಾಯುಮಂಡಲವಿದ್ದು ಅದರಲ್ಲಿ ಕಾರ್ಬನ್ ಡೈ ಆಕ್ಸೈಡ್ ಮತ್ತು ಗಂಧಕದ ಡೈ ಆಕ್ಸೈಡ್ ನಂತಹ  ಅನಿಲಗಳ ಚಿಹ್ನೆಗಳಿವೆ. ಮಂಗಳ ಗ್ರಹದಲ್ಲಿ ವಾಯುಮಂಡಲವು ಬಹು ತೆಳ್ಳಗಿದೆ – ಕಾರ್ಬನ್ ಡೈ ಆಕ್ಸೈಡ್ ಹೆಚ್ಚಿನ ಅಂಶ. ಗುರು, ಶನಿ, ಯುರೇನಸ್ ಮತ್ತು ನೆಪ್ಚೂನ್ ಇವುಗಳ ವಾತಾವರಣದಲ್ಲಿ  ಹೈಡ್ರೋಜನ್ ಮತ್ತು ಹೀಲಿಯಂ ಕಂಡು ಬರತ್ತವೆ. ಪ್ಲೂಟೊ ಸೂರ್ಯನನ್ನು ಸಮೀಪಿಸಿದಾಗ ತೆಳುವಾದ ವಾಯುಮಂಡಲ ಕಾಣುತ್ತದೆ, ತನ್ನ ಕಕ್ಷೆಯಲ್ಲಿ  ಮುಂದುವರೆದಂತೆ ವಾಯುಮಂಡಲ ಹಿಮಗಡ್ಡೆಯಾಗಿ ಗ್ರಹದ ಮೇಲ್ಮೈ ಮೇಲೇ ಕುಸಿಯುತ್ತದೆ. ಹೀಗೆ ಪ್ಲೂಟೊ ಒಂದು ಧೂಮಕೇತುವಿನಂತೆಯೇ  ವರ್ತಿಸುತ್ತದೆ.

ಸುಮಾರು ಕ್ರಿ.ಶ.1610 ರಿಂದ 1977ರವರೆಗೆ ಶನಿ ಗ್ರಹ ಮಾತ್ರ ಉಂಗುರಗಳಿರುವ  ಗ್ರಹ ಎಂದು ತಿಳಿದಿದ್ದರು.  ಆದರೆ ಈಗ ಈ ಗುಂಪಿಗೆ ಗುರು, ಯುರೇನಸ್ ಮತ್ತು ನೆಪ್ಚೂನ್ ಕೂಡ ಸೇರುತ್ತವೆ. ಉಂಗುರಗಳು ಶನಿ ಗ್ರಹದಲ್ಲಿರುವಷ್ಟು ದೊಡ್ಡದಲ್ಲ. ಈ ಉಂಗುರ ವ್ಯವಸ್ಥೆಯಲ್ಲಿ ಕಣಗಳ ಅಳತೆ ಧೂಳಿನಿಂದ ಹಿಡಿದು ದೊಡ್ಡಗಾತ್ರದ ಬಂಡೆ ಅಥವ ಮಂಜಿನಗಡ್ಡೆ ಹೀಗೆ ಏನೇ ಆಗಿರಬಹುದು.

ಹಲವಾರು ಗ್ರಹಗಳಿಗೆ ಕಾಂತಕ್ಷೇತ್ರವಿದ್ದು ವ್ಯೋಮದಲ್ಲಿ ಹರಡಿ ಕಾಂತಕ್ಷೇತ್ರ ವನ್ನುಂಟುಮಾಡುತ್ತದೆ. ಈ ಕಾಂತರೇಖೆ ಗಳು ಗ್ರಹಗಳೊಂದಿಗೆ ಆವೇಶಗೊಂಡ ಕಣಗಳನ್ನು  ಗುಡಿಸಿಕೊಂಡು ಸುತ್ತುತ್ತವೆ.

೨೦೧೧ರಲ್ಲಿ ತಿಳಿದಿರುವಂತೆ ನಮ್ಮ ಸೌರವ್ಯೂಹದ ಗ್ರಹಗಳ ಕಕ್ಷೆಯ ಸುತ್ತಮುತ್ತಲಿನಲ್ಲಿ ಪರಿಚಿತವಿರುವ ಸಾಮಾನ್ಯ ಉಪಗ್ರಹಗಳ ಸಂಖ್ಯೆ 146. ಇವನ್ನು ಉಪಗ್ರಹ ಅಥವಾ  ಚಂದ್ರಗಳೆಂದು ಕರೆಯೋಣ.  ನಮ್ಮ ಚಂದ್ರನಿಗಿಂತ ಕೆಲವು ದೂಡ್ಡವಾಗಿರುತ್ತವೆ ಹಾಗೂ ಕೆಲವು ಚಿಕ್ಕದಾಗಿ  ಭಗ್ನಾವಶೇಷದಂತೆಯೂ ಇರುತ್ತವೆ. ಗ್ರಹಗಳನ್ನು ಸುತ್ತುತ್ತಿರುವ  ಬಾಹ್ಯಾಕಾಶ ನೌಕೆಯ ಸಹಾಯದಿಂದ ಈ ಉಪಗ್ರಹಗಳನ್ನು ಕಂಡುಹಿಡಿಯಲಾಯಿತು. ಇನ್ನೂ 21 ಚಂದ್ರಗಳು ನಮ್ಮ ಸೌರವ್ಯೂಹದ ಚಂದ್ರಪರಿಗಣನೆಗೆ ಸೇರ್ಪಡೆಯಾಗುವುದಕ್ಕೆ ಅನುಮೋದನೆಗಾಗಿ ಕಾದಿವೆ.

ಕೆಲವು ಉಪಗ್ರಹಗಳಿಗೆ ವಾಯುಮಂಡಲವಿದೆ (ಶನಿ ಗ್ರಹದ ಟೈಟಾನ್(Titan)), ಕೆಲವಕ್ಕೆ ಕಾಂತಕ್ಷೇತ್ರವೂ ಇದೆ (ಗುರು ಗ್ರಹದ ಗಾನಿಮೀಡ್(Ganymede)). ಸೌರವ್ಯೂಹದಲ್ಲಿ ಗುರು ಗ್ರಹದ ಇಯೋ (Io) ದಲ್ಲಿ ಜ್ವಾಲಾಮುಖಿಗಳಿವೆ.   ಗುರುವಿನ ಯೂರೋಪ(Europa) ದಲ್ಲಿ  ಹಿಮಗಡ್ಡೆಗಳ ನಡುವೆ ಸಾಗರವೇ ಇರಬಹುದು. ಇದೇ ಗ್ರಹದ ಗೆನಿಮೀಡ್(Ganymede) ನಲ್ಲಿಯೂ ಮಂಜಿನ ಪದರದ ತಟ್ಟೆಯಂತಿದ. ಚಲಿಸುವಂತೆ ತೋರುತ್ತದೆ. ಕೆಲವು   ಕ್ಷುದ್ರ ಗ್ರಹಗಳಾಗಿರಲೂ ಬಹುದು. ಅವು  ಗುರುತ್ವಾಕರ್ಷಣೆಯಿಂದ ಗ್ರಹಗಳನ್ನು ಸುತ್ತತ್ತಿರುತ್ತವೆ.  ಈ ವರ್ಗಕ್ಕೆ ಮಂಗಳ ಗ್ರಹದ ಫೋಬೋಸ್(Phobos) ಮತ್ತು ಡಿಮೋಸ್(Deimos), ಗುರು ಗ್ರಹದ ಹಲವಾರು ಉಪಗ್ರಹಗಳು, ಶನಿ ಗ್ರಹದ ಫೋಬಿ(Phoebe), ಯುರೇನಸ್ ನ ಹಲವಾರು ಹೊಸ ಉಪಗ್ರಹಗಳು ಮತ್ತು  ನೆಪ್ಚೂನ್ ಗ್ರಹದ ನಿರೀಡ್(Nereid) ಸೇರುತ್ತವೆ.

ಹಿಂದೇ   ಭೂಮಿಯನ್ನೇ ವಿಶ್ವದ ಮಧ್ಯಭಾಗವೆಂದು ನಂಬಿದ್ದರು; ಸೂರ್ಯ ಮತ್ತು ಇತರ ಗ್ರಹ, ನಕ್ಷತ್ರಗಳು ಭೂಮಿಯ ಸುತ್ತ ಸುತ್ತುತ್ತವೆ ಎಂದು ತಿಳಿದಿದ್ದರು. ಸೌರವ್ಯೂಹದಲ್ಲಿ ಸೂರ್ಯನೇ ಕೇಂದ್ರಬಿಂದು ಹಾಗೂ ಅದರ ಸುತ್ತ ಭೂಮಿ ಮತ್ತು ಇತರ ಗ್ರಹಗಳು ಸುತ್ತುತ್ತವೆ ಎಂದು ಮೊದಲಬಾರಿಗೆ ದೃಢೀಕರಿಸಿದವರು ಕೋಪರ್ನಿಕಸ್. ಪ್ರಸ್ತುತ ನಾವು ಹಂತ ಹಂತವಾಗಿ ವಿಶ್ವದ ನಕ್ಷೆಯನ್ನು ಸಿದ್ಧಪಡಿಸುತ್ತಿದ್ದೇವೆ. ಆದರೆ ಒಂದು ಮುಖ್ಯ ಪ್ರಶ್ನೆ ಉದ್ಭವಿಸುತ್ತದೆ. ಅದೇನೆಂದರೆ ಯಾವುದಾದರೂ ಗ್ರಹಗಳಲ್ಲಿ ಜೀವಿಗಳಿರಬಹುದಾ?ಸೌರವ್ಯೂಹದಲ್ಲಿ  ಇತ್ತೀಚೆಗಷ್ಟೆ ಖಗೋಳಶಾಸ್ತ್ರಜ್ಞರು  ಹಲವು ನಕ್ಷತ್ರಗಳ ಸುತ್ತ ದೊಡ್ಡ ಗ್ರಹಗಳ ಇರುವಿಕೆಯನ್ನು ಪರೋಕ್ಷವಾಗಿ ಕೆಲವು ಸಾಧನಗಳ ಸಹಾಯದಿಂದ ಕಂಡುಹಿಡಿದಿದ್ದಾರೆ.   ಇತ್ತೀಚಿನ ವರದಿಯ ಪ್ರಕಾರ ಜಗತ್ತಿನ ಕೆಲವು ಭಾಗಗಳಲ್ಲಿ ಕಂಡುಬಂದಿರುವ ಉಲ್ಕಾಶಿಲೆಗಳಲ್ಲಿ ಅನ್ಯಗ್ರಹ ಜೀವ ವೈವಿಧ್ಯ  ಒಂದನ್ನು ಪತ್ತೆ ಹಚ್ಚಿರುವುದಾಗಿ ನಾಸಾದ ವಿಜ್ಞಾನಿ ಡಾ.ರಿಚರ್ಡ ಹೂವರ್ ಹೇಳಿಕೊಂಡಿದ್ದಾರೆ .