ನಾವು – ಅಂದರೆ ನಾನು ಮತ್ತು ಉಮೇಶ್ – ಬಾಲ್ಟಿಮೋರ್‌ನಿಂದ ನಯಾಗರಾದ ದಿಕ್ಕಿಗೆ ಹೊರಟಾಗ, ಸಣ್ಣಗೆ ಸುರಿಯುವ ಸೋನೆಯ ಮಬ್ಬು ನಮ್ಮ ದಾರಿಯ ಮೇಲೆ ಹಬ್ಬಿಕೊಂಡಿತ್ತು. ಬಾಲ್ಟಿಮೋರ್‌ನಿಂದ ನಯಾಗರಾಕ್ಕೆ ಸುಮಾರು ನೂರು ಮೈಲಿಗಳ ದಾರಿ. ಬೆಳಿಗ್ಗೆ ಆರೂವರೆಗೇ ಹೊರಟ ನಾವು, ಮಬ್ಬು ಕವಿದ ದಾರಿಯಲ್ಲಿ ಸುಮಾರು ಎರಡು ಗಂಟೆಗಳ ಕಾಲ ಪ್ರಯಾಣ ಮಾಡಿದ ಹಾಗೆ, ಸುತ್ತಲೂ ಹಬ್ಬಿಕೊಂಡ ಸೋನೆಮಳೆ  ಕ್ಷೀಣವಾಗಿ, ಸಣ್ಣಗೆ – ತಣ್ಣಗೆ ಬಿಸಿಲು ಇಣುಕತೊಡಗಿತು. ಈ ಬಿಸಿಲ ಸ್ಪರ್ಶದಿಂದ ಅನಾವರಣಗೊಂಡ, ಅತ್ತ – ಇತ್ತ ಎರಡೂ ಕಡೆಗೆ ಹರಹಿಕೊಂಡ ದಟ್ಟವಾದ ಮರಗಳಲ್ಲಿ, ಬಣ್ಣ ಬಣ್ಣದ ಎಲೆಗಳ ಮೋಡಿ ಕಣ್ಣನ್ನು ಸೆಳೆಯತೊಡಗಿತು. ಬೆಳಗಿನಿಂದ ಸಂಜೆಯತನಕ ತೆಗೆದುಕೊಂಡ ಎಂಟು ಗಂಟೆಗಳ ಸುದೀರ್ಘ ಪ್ರಯಾಣದಲ್ಲಿ ನಾವು, ವರ್ಜೀನಿಯಾ, ಪೆನ್ಸಿಲ್‌ವೇನಿಯಾ ರಾಜ್ಯಗಳನ್ನು ದಾಟಿ, ನ್ಯೂಯಾರ್ಕ್ ರಾಜ್ಯವನ್ನು ತಲುಪುವವರೆಗೂ ದಾರಿ ಉದ್ದಕ್ಕೂ ನದಿ, ಪರ್ವತ, ಕಾಡು, ಕಣಿವೆಗಳನ್ನು ಹಾದು ಅನೇಕ ಸಣ್ಣ ದೊಡ್ಡ ಊರುಗಳ ನಡುವೆ ಮುಂದುವರಿದೆವು. ಜತೆಗೆ ಇದು Fall Season ಆದುದರಿಂದ, ದಾರಿ ಉದ್ದಕ್ಕೂ ಮರ, ಮರಗಳ ತುಂಬ ಉದುರುವ ಎಲೆಗಳ ವರ್ಣವೈಭವ, ಶರದ್ ಋತು ಮುಗಿದು, ಹೇಮಂತ ಋತುವನ್ನು ಪ್ರವೇಶಿಸುವ ಈ ಸಂಧಿ ಕಾಲವನ್ನು Fall Season ಅನ್ನುತ್ತಾರೆ. ಇದು ಮರಗಳು ತಮ್ಮ ಎಲೆಗಳನ್ನು ಕಳಚಿಕೊಳ್ಳುವ ಕಾಲ. ಈ ಕಾಲವನ್ನು ನೋಡಲು ಚೆಲುವಿನ ಆರಾಧಕರಾದ ಪ್ರವಾಸಿಗಳು ಕಾದುಕೊಂಡಿರುತ್ತಾರೆ. ಯಾಕೆಂದರೆ ಒಂದೇ ಸಲಕ್ಕೆ, ಉದುರುವ ಎಲೆಗಳು ತಾಳುವ ವಿವಿಧ ವರ್ಣ ವಿನ್ಯಾಸಗಳ ಈ ನೋಟ ಅಪೂರ್ವವಾದದ್ದು. ಒಂದೊಂದು ಮರದಲ್ಲಿ ಒಂದೊಂದು ಬಣ್ಣ. ಹಳದಿ, ಕಂದು, ಕೆಂಪು, ಗುಲಾಬಿ, ಬೂದು, ಹೊನ್ನೇರಿಲೆ, ಇತ್ಯಾದಿ ಬಣ್ಣಗಳು ಮರಗಳ ಕೊಂಬೆಯ ತುಂಬ ತೂಗಾಡುತ್ತವೆ. ಅದರಲ್ಲೂ ಅಮೆರಿಕಾದ ಪೆನ್ಸಿಲ್ವೇನಿಯಾ ರಾಜ್ಯದ ನಿಸರ್ಗದಲ್ಲಂತೂ ಈ ವರ್ಣವೈಭವ ಉಳಿದೆಡೆಗಳಿಗಿಂತ ಹೆಚ್ಚು ಆಕರ್ಷಕವಾದದ್ದು ಎಂದು ಹೇಳಲಾಗಿದೆ. ನಾವು ಯೋಗಾಯೋಗದಿಂದ ಈ ಕಾಲದಲ್ಲಿ ಇದೇ ಪರಿಸರದಲ್ಲಿ ಹೊರಟಿದ್ದೆವು. ಒಂದೊಂದು ಮರವೂ ಒಂದೊಂದು ಬಣ್ಣದ ಕಲಾಕೃತಿಯಂತೆ ತೋರುತ್ತಾ, ಇಡೀ ಪರಿಸರವೇ ಅಂಥದೊಂದು ಚಿತ್ರಕಲಾ ಶಾಲೆಯಂತೆ ಭಾಸವಾಗುತ್ತಿತ್ತು. ಸಸ್ಯಸಮೃದ್ಧವಾದ ಗುಡ್ಡಬೆಟ್ಟಗಳ ಏರಿಳಿತಗಳಂತೂ, ಹಲವು ಬಣ್ಣದ ಕುಂಚಗಳನ್ನು ಯಾರೋ ಮನಸ್ಸಿಗೆ ಬಂದಂತೆಲ್ಲ ಮರ ಮರಗಳ ಮೇಲೆ ಎಳೆದಂತೆ ತೋರುತ್ತಿತ್ತು. ಕಾಮನಬಿಲ್ಲು ಕಂಟ್ರಾಕ್ಟು ಹಿಡಿದಂತೆ ತೋರುವ, ಅಸಂಖ್ಯ ಮರಗಳ ಬಣ್ಣಗಳ ಬಲೆಯಲ್ಲಿ ಕಣ್ಣು, ಕ್ಷಣ ಕ್ಷಣಕ್ಕೂ ಸೆರೆಯಾಗುತ್ತಿತ್ತು. ಒಂದು ಬಣ್ಣದ ಬಲೆಯಿಂದ ಬಿಡಿಸಿಕೊಂಡರೆ, ಮತ್ತೊಂದು ಬಣ್ಣದ ಬಲೆಗೆ ಕಣ್ಣಿನ ಹಕ್ಕಿ ಸಿಕ್ಕಿ ಬೀಳುತ್ತಿತ್ತು. ಲಕಲಕಿಸುವ ಬಿಸಿಲಿನಲ್ಲಿ ನಿಶ್ಚಲವಾದ ಬಣ್ಣದ ಜ್ವಾಲೆಗಳಂತೆ ಹರಹಿಕೊಂಡ ಮರಗಳ ದಾರಿಯ ನಡುವೆ, ಅಲ್ಲಲ್ಲಿ ಹುಚ್ಚು ಹಿಡಿದವರಂತೆ ನಿಲ್ಲುತ್ತಾ ನಾವು ಮುಂದುವರಿದೆವು. ನಮ್ಮ ದೇಶದಲ್ಲಿ ಚಿಗುರುವ ಎಲೆಗಳಿಗೆ ಬಣ್ಣ ಬಂದರೆ, ಇಲ್ಲಿ ಉದುರುವ ಎಲೆಗೆ ತುಂಬಿಕೊಳ್ಳುವ ಬಣ್ಣ ವಿಶೇಷ ರೀತಿಯದು. ಇನ್ನೇನು ಒಂದು ಗಾಳಿ ಬೀಸಿದರೆ ಉದುರಲು ತಯಾರಾಗಿರುವ ಈ ಎಲೆಗಳು ತಾಳುವ ಈ ವರ್ಣವಿನ್ಯಾಸ ಏಕಕಾಲಕ್ಕೆ ಬೆರಗನ್ನೂ ವಿಷಾದವನ್ನೂ ಉಂಟು ಮಾಡುತ್ತದೆ. ಉದುರುವೆಲೆಗಳ ಈ ಮೋಹಕತೆ, ಜೈನಪುರಾಣಗಳಲ್ಲಿ ಚಿತ್ರಿತವಾಗಿರುವ, ಎಲ್ಲವನ್ನೂ ತೊರೆದು ವಿರಾಗಿಯಾಗುವ ಜೀವದ, ತುತ್ತತುದಿಯ ಭೋಗ-ವೈಭವದಂತೆ ಉಜ್ವಲ, ಸುಂದರ ಹಾಗೂ ನಶ್ವರಮನೋಹರವಾಗಿದೆ. ಸಾಯುವ  ಎಲೆಗಳ ಈ ಸೌಂದರ್ಯವನ್ನು ಕುರಿತ ವಿಷಾದಮೂಲವಾದ ಚಿಂತೆಯಲ್ಲಿ ಇಡೀ ನಿಸರ್ಗವೇ ಮ್ಲಾನವಾದ ಹಾಗೆ, ಮತ್ತೆ ಸಂಜೆಯ ವೇಳೆಗೆ ಅದುವರೆಗೂ ಸೊಂಪಾಗಿ ಹಬ್ಬಿಕೊಂಡ ಬಿಸಿಲು ತಟಕ್ಕನೆ ಕಣ್ಮರೆಯಾಗಿ, ಕವಿದುಕೊಂಡ ಮೋಡಗಳಿಂದ ಮಳೆ ಸುರಿಯತೊಡಗಿತು. ಈ ಮಳೆಯೊಳಗೇ ಮತ್ತೆ ಒಂದು ಗಂಟೆಯ ಪ್ರಯಾಣದ ನಂತರ, ನಯಾಗರಾ ಪರಿಸರವನ್ನು ಪ್ರವೇಶಿಸಿ, ಊರ ನಡುವೆ ನಮ್ಮ ನಿಲುಗಡೆಗಾಗಿ ಮೋಟೆಲ್ ಒಂದನ್ನು ಹುಡುಕಿ, ಕೊಠಡಿಯೊಂದನ್ನು ಪಡೆದುಕೊಂಡು, ಹೀಟರ್‌ನಿಂದ ಬೆಚ್ಚಗಾದ ಕೋಣೆಯೊಳಗೆ ಕೂತಾಗ, ಎಂಟು ಗಂಟೆಗಳ ಸುದೀರ್ಘ ಪ್ರಯಾಣದ ಸುಸ್ತು ನಮ್ಮನ್ನು ಆವರಿಸಿಕೊಂಡಿತ್ತು.

ಈ ಮೋಟೆಲ್‌ನ ಕೊಠಡಿಯೊಳಗೆ, ಬೆಳಿಗ್ಗೆ ನಾವು ಬಾಲ್ಟಿಮೋರ್‌ನಿಂದ ಹೊರಟಾಗ, ನಮ್ಮ ಮಿತ್ರರ ಮಡದಿ ಮಾಡಿಕೊಟ್ಟ ಊಟದಿಂದ ಹೊಟ್ಟೆ ತುಂಬಿಸಿಕೊಂಡು, ಸುಸ್ತಾಗಿದ್ದರೂ ವಿಶ್ರಾಂತಿಗಾಗಿ ಕಾಲವನ್ನು ವ್ಯಯ ಮಾಡಲು ಇಚ್ಛಿಸದೆ, ಬೆಚ್ಚನೆಯ ಉಡುಪು ತೊಟ್ಟು, ನಮ್ಮ ಮೋಟೆಲ್‌ನಿಂದ ಕೇವಲ ಎಂಟು ಮೈಲಿಗಳ ಹತ್ತಿರದಲ್ಲಿರುವ ಜಲಪಾತವನ್ನು ನೋಡಲು ಹೊರಟೆವು. ರಾತ್ರಿ ಎಂಟು ಗಂಟೆ. ನಯಾಗರಾ ಊರಿನ ಝಗ ಝಗಿಸುವ ದಾರಿಗಳನ್ನು ಹಾದು, ಜಲಪಾತದ ನದೀತೀರವನ್ನು ತಲುಪಿ, ಒಂದೆಡೆ ಕಾರು ನಿಲ್ಲಿಸಿ ಕೊರೆವ ಛಳಿಯಲ್ಲೇ ಉದ್ಯಾನವೊಂದನ್ನು ದಾಟಿ ನದಿಯ ಸಮೀಪಕ್ಕೆ ಹೋದೆವು. ನಯಾಗರಾ ನದಿ ಮಹಾವೇಗದಿಂದ ಜಲಪಾತದೆಡೆ ಧಾವಿಸುವ ನೋಟ ಈ ಕತ್ತಲಲ್ಲಿ ಅಸ್ಪಷ್ಟವಾಗಿ ಗೋಚರಿಸುವುದರ ಜತೆಗೆ, ಅನತಿ ದೂರದಲ್ಲೇ ಅದು ಧುಮುಕುವ ಅಬ್ಬರವೂ ಕೇಳತೊಡಗಿತು. ಆ ನದಿಯ ಪಕ್ಕದಲ್ಲೇ ಹಾದು ಜಲಪಾತದ ಹತ್ತಿರಕ್ಕೆ ಬಂದೆವು. ಭೋರೆಂದು ಧುಮುಕುವ ನೀರ ಹರಹು ಮತ್ತು ಅದು ತೂರುವ ತುಂತುರಿನ ಸ್ನಾನ, ಜತೆಗೆ ಮೈ ನಡುಗಿಸುವ ಛಳಿ ಇತ್ಯಾದಿಗಳ ನಡುವೆ ನಾವಿಬ್ಬರೇ ಪ್ರೇಕ್ಷಕರು. ಬೇರೆ ಯಾರೂ ಇಲ್ಲ! ನಮಗೆ ಕೊಂಚ ದಿಗಿಲೂ ಆಯಿತು. ಆ ವೇಳೆಗೆ ಇದ್ದಕ್ಕಿದ್ದ ಹಾಗೆ, ಈ ಜಲಪಾತದ ನೀರಧಾರೆಗೆ ಆಚೆಯ ದಡದಿಂದ ಬಣ್ಣದ ಬಿಡುದೀಪದ (ಸರ್ಚ್‌ಲೈಟ್) ಪ್ರಖರವಾದ ಬೆಳಕು ಬಿದ್ದು ಹಠಾತ್ತನೆ ಇಡೀ ಜಲಪಾತ ವರ್ಣಮಯವಾಯಿತು. ನೋಡುತ್ತೇನೆ, ಊರ ಕಡೆಯಿಂದ ಒಂದೊಂದೇ ವಾಹನಗಳು ಬರತೊಡಗಿ, ಜನರೂ ಬರತೊಡಗಿದರು. ಪ್ರತಿ ದಿನ ರಾತ್ರಿ ಎಂಟೂವರೆ ಗಂಟೆಯಿಂದ, ಹತ್ತೂವರೆಯವರೆಗೆ ಪ್ರೇಕ್ಷಕರಿಗಾಗಿ ಈ ಬಗೆಯ ಬಣ್ಣದ ಬೆಳಕನ್ನು ಜಲಪಾತಕ್ಕೆ ಬಿಡುತ್ತಾರೆಂದು ತಿಳಿಯಿತು. ಐದೈದು ನಿಮಿಷಕ್ಕೆ ಬದಲಾಗುವ ಬಣ್ಣದ                ಬೆಳಕಿನಲ್ಲಿ, ರಾರಾಜಿಸುವ ಈ ಜಲಪಾತವನ್ನು ಇನ್ನೂ ಚೆನ್ನಾಗಿ ವೀಕ್ಷಿಸಲು ಅನುಕೂಲವಾಗುವಂತೆ ನಾವು ಪಕ್ಕದಲ್ಲಿದ್ದ ವೀಕ್ಷಣಾಗೋಪುರವನ್ನು ಏರಿದೆವು. ಅಲ್ಲಿ ಒಂಬತ್ತೂವರೆಯವರೆಗೂ, ಜಲಪಾತವನ್ನು ನೋಡಿ ನಮ್ಮ ಬಾಡಿಗೆಯ ಬೀಡಿಗೆ ಹಿಂದಿರುಗಿದೆವು.

ಮತ್ತೆ ಬೆಳಿಗ್ಗೆ ಉಪಹಾರ ಮುಗಿಸಿಕೊಂಡು, ಜಲಪಾತದ ಬಳಿ ಹೋದೆವು. ಹವಾಮಾನ ಪ್ರಸನ್ನವಾಗಿತ್ತು. ಬೆಚ್ಚನೆಯ ಬಿಸಿಲು ಹಬ್ಬಿಕೊಂಡು ನಯಾಗರಾ ನದಿಯ ನೀರೆಲ್ಲಾ ಥಳಥಳಿಸುತ್ತಿತ್ತು. ನದಿಯನ್ನು ಸಣ್ಣ ಸೇತುವೆಯೊಂದರ ಮೂಲಕ ದಾಟಿಕೊಂಡು ‘ಗೋಟ್ಸ್ ಐಲೆಂಡ್’ ಎಂಬುದನ್ನು ಪ್ರವೇಶಿಸಿದೆವು. ಈ ದ್ವೀಪದ ಆಚೆಗೂ ನಯಾಗರಾ ನದಿ ಹರಿಯುತ್ತಿತ್ತಲ್ಲದೆ, ನಯಾಗರಾ ನದಿ ಜಲಪಾತವಾಗಿ ಧುಮುಕುವುದು ನಾವು ಹಿಂದಿನ ರಾತ್ರಿ ಕಂಡಂತೆ ಒಂದು ಕಡೆ ಮಾತ್ರ ಅಲ್ಲ. ಎರಡು ಕಡೆ ಎಂಬ ಅರಿವಾಯಿತು. ದೂರದ ಈರಿ ಎಂಬ ಸರೋವರದಿಂದ ಹೊರಟು ಬರುವ ಈ ನಯಾಗರಾ ನದಿ, ಗೋಟ್ಸ್ ಐಲೆಂಡ್ ಎಂಬ ಈ ಪುಟ್ಟ ದ್ವೀಪದ ಬಳಿ ಎರಡು ಕವಲಾಗಿ ಒಡೆದು, ಅನಂತರ ಸ್ವಲ್ಪ ದೂರದಲ್ಲೇ ಎರಡು ಕಡೆ ಕೇವಲ ಅರ್ಧ ಮುಕ್ಕಾಲು ಮೈಲಿಯ ಅಂತರದಲ್ಲಿ ಜಲಪಾತಗಳಾಗಿ ಧುಮುಕುತ್ತದೆ. ಒಂದು, ಕುದುರೆಯ ಲಾಳದಾಕಾರದಲ್ಲಿ ಧುಮುಕಿದರೆ, ಇನ್ನೊಂದು ನೇರವಾಗಿ ಧುಮುಕುತ್ತದೆ. ಕುದುರೆಯ ಲಾಳದಾಕಾರದ ಜಲಪಾತ ಬಹುಭಾಗ ಕೆನಡಾ ದೇಶಕ್ಕೆ ಸೇರಿರುವುದಲ್ಲದೆ, ಅದು ಕೆನಡಾದ ಕಡೆಯಿಂದ ಇಡಿಯಾಗಿ ಕಾಣಲು ದೊರೆಯುವ ನೋಟವಾಗಿದೆ ಮತ್ತು ನಾವು ಹಿಂದಿನ ರಾತ್ರಿ ಕಂಡ ಅಮೆರಿಕಾದ ಕಡೆಯ ಜಲಪಾತಕ್ಕಿಂತ ಹೆಚ್ಚು ಅದ್ಭುತವಾಗಿದೆಯಂತೆ. ಕುದುರೆ ಲಾಳದಾಕಾರದ ಜಲಪಾತದ ಎತ್ತರ ೧೭೬ ಅಡಿ; ಅಗಲ ೨೨೦೦ ಅಡಿ. ಇದು ಎಬ್ಬಿಸುವ ಹೊಗೆ ತುಂತುರಿನ ಮೋಡ ಸುಮಾರು ಒಂದು ಮೈಲಿ ಅಗಲಕ್ಕೆ ವ್ಯಾಪಿಸಿ, ಬರುವ ಪ್ರೇಕ್ಷಕರಿಗೆ ಸಾಕಷ್ಟು ‘ತುಂತುರಭಿಷೇಕ’ ವಾಗುತ್ತದೆ. ಅಮೆರಿಕಾಕ್ಕೆ ಸೇರಿದ ಈಚೆಯ ಕಡೆಯಿಂದಲೂ ಈ ಕುದುರೆ ಲಾಳದಾಕಾರದ ಜಲಪಾತವನ್ನು, ತೀರಾ ಹತ್ತಿರ ನಿಂತು, ಅಡ್ಡಲಾಗಿ ಹಾಕಿರುವ ಕಂಬಿಗಳ ಕಟಕಟೆಯಿಂದ ನೋಡಿದೆವು.  ಕುದುರೆ ಲಾಳದಾಕಾರದ ನೀರಿನ ಹರಹು ಇಡಿಯಾಗಿ ಕಾಣುವುದಿಲ್ಲವಾದರೂ, ಅದರ ಅರ್ಧದಷ್ಟಂತೂ, ದಂಗುಬಡಿಸುವ ನೀರಧಾರೆ ಹಾಗೂ ಅಬ್ಬರಗಳಿಂದ ಕೂಡಿದೆ. ನಮ್ಮ ಕರ್ನಾಟಕದ ಜೋಗದ ಜಲಪಾತದ ಎತ್ತರ ೯೦೦ ಅಡಿಗಳು. ಅದಕ್ಕೆ ಹೋಲಿಸಿದರೆ ಈ ನಯಾಗರಾದ ಎತ್ತರ, ಅದರ ಮೊಳಕಾಲಿಗೂ ಬರುವುದಿಲ್ಲ. ಆದರೆ ಇದರ ಎರಡು  ಸಾವಿರಕ್ಕೂ ಮೀರಿದ ಅಡಿಗಳ ವಿಸ್ತಾರವಿದೆಯಲ್ಲ, ಅದೇ ಇದರ ಹೆಗ್ಗಳಿಕೆ. ಜತೆಗೆ ಸದಾ ಇರುವ ನಿರಂತರ ಜಲಸಮೃದ್ಧಿಯೂ ಇದರ ಮುಖ್ಯ ಆಕರ್ಷಣೆ (ನಮ್ಮ ಜೋಗದಲ್ಲಿ ವರ್ಷದಲ್ಲಿ ಒಂಬತ್ತು ತಿಂಗಳು ನೀರೇ ಇರುವುದಿಲ್ಲ). ಈ ವಿಸ್ತಾರದ ನೀರ ಹರಹು ಈ ಪ್ರಮಾಣದಲ್ಲಿ ಸದಾ ಧುಮುಕುವುದನ್ನು ನಿಂತು ನೊಡುವುದೇ ಒಂದು ಅದ್ಭುತವಾದ ಅನುಭವ.

ವಿಸ್ತಾರವಾದ, ಕಮಾನಿನಗಲದ ಈ ಜಲಪಾತದಿಂದ ಮತ್ತೆ ಈ ಕಡೆಗೆ ನಡೆದು ಬಂದರೆ ಅರ್ಧ ಮೈಲಿಯ ಅಂತರದಲ್ಲಿ ಅಮೆರಿಕಾದ ಕಡೆಯ ನಯಾಗರಾ ಜಲಪಾತವಿದೆ. ಇದು ಕುದುರೆ ಲಾಳದಾಕಾರದ ಜಲಪಾತಕ್ಕಿಂತ ಎಂಟು ಅಡಿ ಆಳವಾದದ್ದು. ಅಂದರೆ ಇದರ ಎತ್ತರ ೧೮೪ ಅಡಿಗಳು; ಅಗಲ ಮಾತ್ರ ಒಂದು ಸಾವಿರದ ಎಪ್ಪತ್ತೈದು (೧೦೭೫) ಅಡಿಗಳು. ಇದು ನೇರವಾಗಿ ಧುಮುಕುವಂಥದು. ನಯಾಗರಾ ಜಲಪಾತ ಅನ್ನುವುದು ಈ ಎರಡನ್ನೂ ಕೂಡಿಯೇ ಹೇಳಿದ್ದು. ಕುದುರೆ ಲಾಳದಾಕಾರದ ಆ ಇನ್ನೊಂದು ಜಲಪಾತಕ್ಕೆ ಅದರ ಆಕಾರ ಹಾಗೂ ವಿಸ್ತಾರಗಳಿಂದ, ಇದಕ್ಕಿಂತ ಹೆಚ್ಚಿನ ಪ್ರಾಶಸ್ತ್ಯ ಬಂದಿದೆ. ಕೆನಡಾಕಡೆಯಿಂದ ಅದನ್ನು ನೋಡಲು ನನ್ನ ಬಳಿ ವೀಸಾ ಇರದಿದ್ದ ಕಾರಣ ಇತ್ತ ಕಡೆಯ ನೋಟದಿಂದಷ್ಟೇ ನಾನು ತೃಪ್ತನಾಗಬೇಕಾಯಿತು.

‘ನಯಾಗರಾ’ ಎಂದರೆ ರೆಡ್‌ಇಂಡಿಯನ್ನರ ಭಾಷೆಯಲ್ಲಿ ‘ಗುಡುಗುವ ನೀರು’ ಎಂದು ಅರ್ಥ. ಅಮೆರಿಕಾದ ಮೂಲನಿವಾಸಿಗಳಾದ ಈ ರೆಡ್ ಇಂಡಿಯನ್ ಜನರ ಪಾಲಿಗೆ, ನಯಾಗರಾ ಒಂದು ದೈವೀ ಅದ್ಭುತ. ವರ್ಷಕ್ಕೆ ಒಂದು ಸಲ ತಮ್ಮ ಜನಾಂಗದ ಚೆಲುವೆಯಾದ ಕನ್ಯೆಯೊಬ್ಬಳನ್ನು ಸರ್ವಾಲಂಕಾರಗಳಿಂದ ಶೃಂಗಾರ ಮಾಡಿ, ಹೂವಿನಿಂದ ಅಲಂಕರಿಸಿದ ದೋಣಿಯೊಂದಲ್ಲಿ ಕೂರಿಸಿ, ಈ ನದೀ ಜಲದ ಮೇಲೆ ತೇಲಿ ಬಿಡುತ್ತಿದ್ದರಂತೆ; ಹಾಗೆ ಬಿಟ್ಟ ದೋಣಿ ನಯಾಗರಾ ನದೀ ಪ್ರವಾಹದ ಗುಂಟ ವೇಗವಾಗಿ ಹಾಯ್ದು ಸೀದಾ ನಯಾಗರಾ ಜಲಪಾತದೊಳಕ್ಕೆ ಬಿದ್ದು, ಆ ಕನ್ಯೆ ನದೀ ದೇವತೆಗೆ ಅರ್ಪಿತವಾಗುತ್ತಿದ್ದಳಂತೆ. ಇದು ಅನುಕ್ರಮವಾಗಿ ಸರದಿ ಮೇಲೆ, ಆ ಜನಾಂಗದಲ್ಲಿ ನಡೆದುಕೊಂಡು ಬಂದ ಒಂದು ಧಾರ್ಮಿಕ ಸಂಪ್ರದಾಯವಾಗಿತ್ತಂತೆ. ಒಮ್ಮೆ ಈ ಸರದಿ ಆ ಜನಾಂಗದ ನಾಯಕನ ಪಾಲಿಗೆ ಬಂದು, ಆತ ತನ್ನ ಒಬ್ಬಳೇ ಒಬ್ಬ ಮುದ್ದಿನ ಮಗಳನ್ನು ಈ ಆರಾಧನೆಗೆ ಬಲಿಕೊಡುವಂಥ ಸಂದರ್ಭ ಪ್ರಾಪ್ತವಾಯಿತಂತೆ. ಆಗ ಆತ, ಈ ವಿಧಿಗೆ ಕಟ್ಟುಬಿದ್ದು ತನ್ನ ಮಗಳನ್ನು ಸಿಂಗರಿಸಿದ ಹೂವಿನ ದೋಣಿಯೊಂದರಲ್ಲಿ ಕೂರಿಸಿ ತೇಲಿಬಿಟ್ಟನಂತೆ. ಅನಂತರ ತನ್ನ ಮುದ್ದಿನ ಮಗಳ ಅಗಲಿಕೆಯ  ದುಃಖವನ್ನು ತಡೆಯಲಾರದೆ, ಹಿಂದೆಯೇ ಒಂದು ದೋಣಿಯನ್ನೇರಿ ಹೊರಟು ಮಗಳ ಜತೆಗೆ ಭೋರ್ಗರೆಯುವ ಆ  ಜಲಪಾತದೊಳಕ್ಕೆ ತಾನೂ ಬಲಿಯಾದನಂತೆ.

ಚಾರಿತ್ರಿಕವಾಗಿ ಹೇಳುವುದಾದರೆ, ಮೊಟ್ಟ ಮೊದಲು ಈ ಜಲಪಾತವನ್ನು ಕಂಡ ವಿದೇಶೀಯನೆಂದರೆ ಒಬ್ಬ ಫ್ರೆಂಚ್‌ಪಾದ್ರಿ, ಫಾದರ್  ಲೂಯಿಸ್ ಹೆನ್ನೆಪಿಸ್ ಎಂಬಾತ. ಆತ ಇದನ್ನು ಕಂಡದ್ದು ೧೬೭೮ರಲ್ಲಿ. ಇದಾದನಂತರ ಫ್ರೆಂಚರು ಬಂದು ಇಲ್ಲಿ ಒಂದು ಕೋಟೆಯನ್ನು ಕಟ್ಟಿದರು. ೧೭೨೬ರಲ್ಲಿ ಕಟ್ಟಲಾದ ಆ ಕೋಟೆ ಇಲ್ಲಿ ಇಂದಿಗೂ ಭದ್ರವಾಗಿದೆ. ಮುಂದೆ ಫ್ರೆಂಚರು ಸುಮಾರು ಒಂದು ಶತಮಾನದ ಕಾಲ ಈ ಪ್ರದೇಶದಲ್ಲಿ ಹಲವು ಮುಖ್ಯವಾದ ಯುದ್ಧಗಳನ್ನು ನಡೆಸಬೇಕಾಯಿತು. ಅದೂ ಬ್ರಿಟಿಷರೊಂದಿಗೆ. ಅನಂತರ, ಅಂದರೆ ೧೭೭೫ರಲ್ಲಿ ಅಮೆರಿಕಾದಲ್ಲಿ ಕ್ರಾಂತಿಯಾದ ನಂತರ, ಬ್ರಿಟಿಷರು ಹಳೆಯ ನಯಾಗರಾ ಕೋಟೆಯಿಂದ ಕಾಲ್ತೆಗೆದು, ನದಿಯ ಆಚೆ ದಡದ  ಕೆನಡಾಕ್ಕೆ ಹೋದರು. ಹಲವಾರು ರಾಜಕೀಯ ತುಮುಲಗಳಿಗೆ ಸಿಕ್ಕ ನಯಾಗರಾ ಪರಿಸರ, ೧೮೯೨ರ ವೇಳೆಗೆ ಹೊಸ ಸ್ವರೂಪವನ್ನು ಪಡೆದುಕೊಂಡು ಜಗದ್ ವಿಖ್ಯಾತವಾದ ಪ್ರವಾಸಿ ಕೇಂದ್ರವಾಗಿ ಪರಿವರ್ತಿತವಾಯಿತು.

ನಯಾಗರಾ ಜಲಪಾತವನ್ನು ತಮ್ಮ ಸಾಹಸಗಳ ಕೇಂದ್ರವನ್ನಾಗಿಸಿಕೊಂಡ ಕೆಲವರ ಕತೆ ರೋಮಾಂಚಕಾರಿಯಾಗಿದೆ: ೧೮೫೯ ರಲ್ಲಿ ಸ್ಯಾಮ್‌ಪಾಚ್ (Sampatch) ಎಂಬಾತ, ಗೋಟ್ಸ್ ಐಲೆಂಡ್ ಕಡೆಯಿಂದ ಈ ಜಲಪಾತದೊಳಕ್ಕೆ ಎರಡು ಸಲ ನೆಗೆದೂ ಬದುಕಿಕೊಂಡನು. ಮತ್ತೆ ೧೮೬೦ ರಲ್ಲಿ ಜೀನ್ ಫ್ರಾನ್ಕೋಯಿಸ್ ಗ್ರಾವೆಲೆಟ್ (Gean Francois Gravelet) ಎಂಬಾತ, ಜಲಪಾತದ ಆಚೆ ದಡದಿಂದ ಈಚೆ ದಡದವರೆಗೆ ತಂತಿ ಬಿಗಿಯಿಸಿ, ಅದರ ಮೇಲೆ ನಡೆದು ವಿಸ್ತಾರವಾದ ನೊರೆಗರೆವ ಜಲಪಾತ ಕಂದರವನ್ನು ದಾಟಿದ. ಅಷ್ಟೇ ಅಲ್ಲ, ಹಾಗೆ ನಡೆಯುವಾಗ, ಪ್ರೇಕ್ಷಕ ಸಮುದಾಯ ನೋಡುತ್ತಿರುವಂತೆಯೇ, ಜಲಪಾತದ ನಡುವಣ ಹಂತದಲ್ಲಿ ತಂತಿಯ ಮೇಲೆ ದೊಂಬರಲಾಗವನ್ನೂ ಹಾಕಿದನಂತೆ ! ಇನ್ನೊಂದು ಸಲ, ೧೯೦೧ರಲ್ಲಿ, ಮರದ  ಪೀಪಾಯಿಯೊಂದರಲ್ಲಿ ತೂರಿಕೊಂಡು, ಶ್ರೀಮತಿ ಅನಿ ಟೈಲರ್ (Mrs. Annie Taylor) ಎಂಬ ಹೆಸರಿನ ಶಾಲಾ ಶಿಕ್ಷಕಿಯೊಬ್ಬಳು ನಯಾಗರಾ ಜಲಪಾತ ಧಾರೆಯ ಮೂಲಕ ಕೆಳಕ್ಕೆ ಉರುಳಿ ಬದುಕಿಕೊಂಡಳು. ಈಕೆಯ ಹಾಗೆ ಮಾಡಿದ ಇನ್ನೂ ಕೆಲವರ ಪ್ರಯತ್ನ ಯಶಸ್ವಿಯಾಗಲಿಲ್ಲ. ೧೯೨೦ರಲ್ಲಿ ಇದೇ ರೀತಿ ಮರದ ಪೀಪಾಯಿಗಳಲ್ಲಿ ಹುದುಗಿಕೊಂಡು ಜಲಪಾತದೊಳಕ್ಕೆ ಉರುಳಿದ ಕೆಲವರು ಜೀವಂತವಾಗಿ ಉಳಿಯಲಿಲ್ಲ. ಮುಂದೆ ಈ ಬಗೆಯ ‘ಸಾಹಸ’ಗಳನ್ನು ಸರ್ಕಾರ ಪ್ರತಿಬಂಧಿಸಿತು.

೧೯೬೦ರಲ್ಲಿ ಒಂದು ಘಟನೆ ನಡೆಯಿತು. ರೋಜರ್ ವುಡ್‌ವರ್ತ್ ಎಂಬ ಏಳು ವರ್ಷದ ಬಾಲಕನೊಬ್ಬನು, ಸಣ್ಣ ದೋಣಿಯೊಂದರಲ್ಲಿ ತನ್ನ ತಂಗಿ ಹಾಗೂ ತನಗಿಂತ ಸ್ವಲ್ಪ ವಯಸ್ಕನಾದ ಸ್ನೇಹಿತನ ಜತೆ ಕೂತು, ಜಲಪಾತಕ್ಕೆ ಹಿಂದೆ, ಸ್ವಲ್ಪ ದೂರದ ನದೀ ಜಲದ ಮೇಲೆ ಆಟಕ್ಕೆಂದು ಪ್ರಯಾಣ ಮಾಡುತ್ತಿದ್ದನು. ಆದರೆ ತಾನು ಹೀಗೆ ಪ್ರಯಾಣ ಹೊರಟ ಈ ನದಿ ಮುಂದೆ ಸ್ವಲ್ಪ ದೂರದಲ್ಲೆ ಜಲಪಾತವಾಗಿ ಧುಮುಕುತ್ತದೆ ಎಂಬ ಸಂಗತಿ ಈ ಹುಡುಗರಿಗೆ ಗೊತ್ತೇ ಇರಲಿಲ್ಲ! ಜಲಪಾತ ಹತ್ತಿರವಾದಂತೆ, ನೀರಿನ ಸೆಳೆತಕ್ಕೆ ಸಿಕ್ಕಿ ತೇಲಿ ಹೋಗುತ್ತಿದ್ದ ಆತನ ತಂಗಿಯನ್ನು ಗೋಟ್ಸ್ ಐಲೆಂಡ್ ಹತ್ತಿರ ಕಂಡ ಕೆಲವರು ರಕ್ಷಿಸಿದರು; ಅವನ ಸ್ನೇಹಿತ ಜಲಪಾತದೊಳಗೆ ಬಿದ್ದ ರಭಸಕ್ಕೆ ಸತ್ತೇ ಹೋದ; ಆದರೆ ಜಲಪಾತದೊಳಕ್ಕೆ ಬಿದ್ದು, ನೊರೆಗರೆವ ನೀರ ನಡುವೆ ತೇಲುತ್ತಿದ್ದ, ರೋಜರ್ ವುಡ್‌ವರ್ತ್ ಎಂಬ ಈ ಹುಡುಗನನ್ನು, ಜಲಪಾತ ವೀಕ್ಷಣೆಗೆ ಬಂದ ಪ್ರೇಕ್ಷಕರ ದೋಣಿಯ ಚಾಲಕರು, ಅದು ಹೇಗೋ ಮೇಲೆತ್ತಿಕೊಂಡರು. ಈತ ಆ ಎತ್ತರದಿಂದ ಬಿದ್ದೂ ಬದುಕಿ ಉಳಿದದ್ದು ಒಂದು ಪವಾಡವೇ ಸರಿ. ಈ ಎಲ್ಲ ಸಾಹಸಗಳೂ, ಐತಿಹಾಸಿಕ ಘಟನೆಗಳೂ ನಡೆದದ್ದು ಕುದುರೆ ಲಾಳದಾಕಾರದ ನಯಾಗರಾ ಜಲಪಾತದಲ್ಲಿ.

ಈ  ಕುದುರೆ ಲಾಳದಾಕಾರದ ಜಲಪಾತದ ಹತ್ತಿರಕ್ಕೆ ನದಿಯ ಮೂಲಕ ಹೋಗುವ ವ್ಯವಸ್ಥೆಯಿರುವುದರಿಂದ ನಾವು ಅಮೆರಿಕಾ ಜಲಪಾತದ ಬಳಿ ಇರುವ ವೀಕ್ಷಣಾ ಗೋಪುರ ಭವನದ ತಳಾತಳಕ್ಕೆ ಲಿಫ್ಟ್ ಮೂಲಕ ಇಳಿದು, ನದಿಯ ಮೇಲೆ ಹೋಗುವ ದೋಣಿಗೆ ಟಿಕೆಟ್ ಕೊಂಡುಕೊಂಡೆವು. ನಾವು ಕೂತ ದೋಣಿಯ ಹೆಸರು Maid of the mist (ಮಂಜಿನ ಕನ್ಯೆ). ಇದರೊಳಕ್ಕೆ ಪ್ರವೇಶಮಾಡುವ ಮುನ್ನ ಕುಲಾವಿ ಸಹಿತವಾದ ನೀಲಿಯ ಕೋಟುಗಳನ್ನು – ವಾಟರ್ ಪ್ರೂಫ್ ಕೋಟುಗಳನ್ನು – ಹಾಕಿಕೊಂಡೆವು. ಈ ದೋಣಿ, ‘ನಯಾಗರ’ ಎಂದು ಕರೆಯಲಾದ ಎರಡೂ ಜಲಪಾತಗಳ ಬದಿಗೇ ಹೋಗುವಂಥದು. ಎರಡು ಹಂತಗಳ ಪುಟ್ಟ ಹಡಗಿನಂಥ ಈ ದೋಣಿ, ವೇಗವಾಗಿ ಹರಿದು ಬರುವ ನದೀ ಜಲದ ಮೇಲೆ ಹಾದು ಆ ಜಲಪಾತಗಳ ತಳದ ಕಡೆಗೆ ಹೋದಂತೆ, ಮೇಲಿನಿಂದ ಧೋ ಎಂದು ಸುರಿಯುವ ನೀರಿನ ಗೋಡೆಯನ್ನು ನೋಡಿ ಮೈ ನಡುಗುತ್ತದೆ. ಎಲ್ಲೋ ಮೇಲಿನ ಆಕಾಶದಿಂದ ಹಠಾತ್ತನೆ ಧುಮುಕುವಂತೆ ತೋರುವ ನೀರ ಹರಹು, ನದೀ ಜಲವನ್ನು ತಾಗಿದಾಗ ಆಗುವ ನಿರಂತರ ಭಯಂಕರ ಮೊರೆತ ಮತ್ತು ಅದು ಅಪ್ಪಳಿಸಿದ್ದರಿಂದ ನೊರೆಗರೆದು ಕುದಿಯುವ ನೀರಿನ ಸೆಳೆತಗಳನ್ನು ಹಾದು ನಮ್ಮ ದೋಣಿ ಮೊದಲ ಜಲಪಾತದಿಂದ ಸ್ವಲ್ಪ ದೂರದಲ್ಲಿರುವ ಅರ್ಧ ಚಂದ್ರಾಕಾರದ ದೊಡ್ಡ ಜಲಪಾತದ ಹತ್ತಿರಕ್ಕೆ ಬರುವ ಹೊತ್ತಿಗೆ, ಅದರ ಗುಡುಗಿನಬ್ಬರಕ್ಕೆ ಕಿವಿಗಳು ಕಿವುಡಾಗುತ್ತವೆ. ರಪರಪನೆ ಮುಖಕ್ಕೆ ರಾಚುವ ನೀರಿನ ತುಂತುರುಗಳ ಆಕ್ರಮಣ ನಮ್ಮನ್ನು ತತ್ತರಿಸುವಂತೆ ಮಾಡುತ್ತದೆ. ವಿಸ್ತಾರವಾದ ಮಹಾಜಲರಾಶಿಯ ಅಪ್ಪಳಿಕೆಗೆ ನೀರೆಲ್ಲ ಕೊತ ಕೊತ ಕುದಿಯುತ್ತದೆ. ನೊರೆಗರೆವ ಈ ನೀರಿನ ಹೊಯ್ಲಿಗೆ ಸಿಕ್ಕಿದ ನಮ್ಮ ಎರಡು ಹಂತದ ದೋಣಿ ಹೊಯ್ದಾಡತೊಡಗುತ್ತದೆ. ಈ ಗೊಂದಲ-ಗೋಜಲುಗಳಲ್ಲಿ ನಾವು ನಿಂತ ನೆಲೆಯೇ ತಪ್ಪಿದಂತಾಗುತ್ತದೆ. ನಾವು ದೋಣಿಯಂಚಿಗೆ ಜೋಡಿಸಿದ ಅಡ್ಡಕಂಬಿಗಳನ್ನು ಹಿಡಿದು, ಹೇಗೋ ನೆಲೆನಿಂತು ಕುದುರೆ ಲಾಳದಾಕಾರದಲ್ಲಿ ಎರಡು ಸಾವಿರ ಅಡಿಗಳಿಗೂ ಮೀರಿದ ಹರಹಿನಲ್ಲಿ, ಸುತ್ತಲೂ ಭೋರೆಂದು ಧುಮುಕುವ ಜಲ ಪ್ರವಾಹದ ಕಡೆ ನೋಡಲು ಪ್ರಯತ್ನಿಸುತ್ತೇವೆ. ನಾವು ನಿಂತ ಮೂರೂ ಕಡೆಯಿಂದ ದೈತ್ಯ ಪ್ರವಾಹ ನಿಷ್ಠುರನಿಯತಿಯ ಅಧೀನಕ್ಕೆ ಒಳಗಾಗಿ, ಆ ಎತ್ತರದಿಂದ ಸಾವಿರ ಗುಡುಗುಗಳ ಧ್ವನಿಯಿಂದ ಕೆಳಗಿನ ನದಿಗೆ ಧುಮುಕುತ್ತದೆ. ಸುತ್ತ ಭೋರೆಂಬ ನೀರು, ಮುಖಕ್ಕೆ ನಿರ್ದಯವಾಗಿ ಬಡಿಯುವ ತುಂತುರು ಹನಿಗಳ ಗಾಳಿ, ಕಿವಿಕಿವುಡಾಗಿಸುವ ಅಬ್ಬರ, ನೊರೆಗರೆವ ನೀರ ಹೊಯ್ಲಿಗೆ ಸಿಕ್ಕು ತತ್ತರಿಸುವ ನಮ್ಮ ದೋಣಿ – ಈ ಎಲ್ಲದರಿಂದಾಗಿ ನಾವು ಪುರಾಣ ಕಾಲದ ಜಲ ಪ್ರಳಯವೊಂದರಲ್ಲಿ ವಾಸ್ತವವಾಗಿಯೇ ಸಿಕ್ಕಿಕೊಂಡಿದ್ದೇವೆ ಅನ್ನಿಸುತ್ತದೆ. ಅಸಾಧ್ಯ ಶೀತದ ದಾಳಿಯಿಂದ ಕೈ ಕಾಲು ಯಾವುದೂ ನಮ್ಮ ಸ್ವಾಧೀನದಲ್ಲಿ ಇಲ್ಲದ ಆ ಒಂದು ಸ್ಥಿತಿಯಲ್ಲಿ, ಮೂಗಿನಿಂದ ಸುರಿಯುವ ನೀರನ್ನು ಒರೆಸಿಕೊಳ್ಳಲು ಕೈ ಎತ್ತಿ ತಂದರೆ ಮೂಗೆಲ್ಲಿದೆಯೋ ಪತ್ತೆಯಾಗುವುದಿಲ್ಲ! ಹಾಗೂ ಹೀಗೂ ಮೂಗೊರಸಿಕೊಂಡರೆ ಕೈ ಎಲ್ಲಿದೆಯೋ ತಿಳಿಯುವುದಿಲ್ಲ! ನಮ್ಮ ಸಮಸ್ತ ವ್ಯಕ್ತಿತ್ವವೇ, ಆ ಅಬ್ಬರ – ಗೊಂದಲಗಳ ತೆಕ್ಕೆಯಲ್ಲಿ ಸಿಕ್ಕಿಕೊಂಡು ಕೊಚ್ಚಿ ಹೋಗುತ್ತಿರುವಂಥ ಸ್ಥಿತಿಯಲ್ಲಿ, ನಮ್ಮ ದೋಣಿ ಅದು ಹೇಗೋ ಹಿಂದಿರುಗಿ ಬಂದು ನೆಮ್ಮದಿಯ ನೆಲೆಗೆ ಇಳಿಸಿದಾಗಲೇ ಪ್ರಳಯದೊಳಗಿಂದ ಪಾರಾಗಿ ಬದುಕಿದ ಅನುಭವ.