ಇಂದು ನರಗುಂದ ಧಾರವಾಡ ಜಿಲ್ಲೆಯಲ್ಲಿ ಒಂದು ತಾಲ್ಲೂಕು.ಆದರೆ ಈ ಸ್ಥಳಕ್ಕೆ ಪ್ರಾಚೀನ ಇತಿಹಾಸವಿದೆ. ನರಗುಂದ ಹಾಗೂ ಅದರ ಹತ್ತಿರವೇ ಇರುವ ಚಿಕ್ಕ ನರಗುಂದ ಗ್ರಾಮಗಳು ಚಾಲುಕ್ಯರ ವಶದಲ್ಲಿದ್ದವು.  ಚಾಲುಕ್ಯರ ಕಾಲದಲ್ಲಿಯೇ ಕಟ್ಟಿಸಿದ ಶ್ರೀ ಶಂಕರಲಿಂಗ ದೇವಸ್ಥಾನವು ನರಗುಂದದಲ್ಲಿ ಇನ್ನೂ ಅಚ್ಚಳಿಯದೇ ನಿಂತುಕೊಂಡಿದೆ.

ವೀರರ ವಂಶ

ಹಿಂದುಧರ್ಮದ ರಕ್ಷಕರಾದ ಛತ್ರಪತಿ ಶಿವಾಜಿಮಹಾರಾಜರು ೧೬೭೬ರಲ್ಲಿ . ನರಗುಂದದ ಹಳೆಯ ಕೋಟೆಯನ್ನು ಭದ್ರಗೊಳಿಸಿ ಅಲ್ಲಿಯ ಆಡಳಿತವನ್ನು ರಾಮಚಂದ್ರ ನೀಲಕಂಠ ಜಾವಡೇಕರ ಎಂಬ ಸರದಾರನಿಗೆ ಒಪ್ಪಿಸಿದರು.

ಹೀಗೆ ಚರಿತ್ರೆಯಲ್ಲಿ ಪ್ರಸಿಧ್ಧವಾದ ನರಗುಂದ ಹದಿನೆಂಟು-ಹತ್ತೊಂಬನೆಯ ಶತಮಾನಗಳಲ್ಲಿ “ಭಾವೆ” ಅರಸರ ಸ್ವತಂತ್ರ ಸಂಸ್ಥಾನವಾಗಿದ್ದಿತ್ತು.

ನರಗುಂದದ ಬಾಬಾಸಾಹೇಬ, ಭಾವೆ ಮನೆತನದವನು. ಈ ಮನೆತನವೇ ಪರಾಕ್ರಮಿಗಳ ಮನೆತನ. ಈಮನೆತನದ ರಾಮರಾಯ ಎಂಬುವನು ೧೭೦೦ ರಲ್ಲಿ ಮೊಗಲರ ಕೈಯಲ್ಲಿದ್ದ ನರಗುಂದ ಮತ್ತು ರಾಮದುರ್ಗಗಳನ್ನು ವಶಮಾಡಿಕೊಂಡ. ಚಿಕ್ಕ ವಯಸ್ಸಿನಲ್ಲಿ ಈತ ಶ್ರೀಮಂತ ಅಪ್ಪಾರಾವ ಸೂರೆಪಂತ್ ಎಂಬುವರ ಮನೆಯಲ್ಲಿ ಅಡಿಗೆಯ ಕೆಲಸದಲ್ಲಿದ್ದ. ಒಮ್ಮೆ ಇವನ  ಮಲಗಿದ್ದಾಗ ಇವನ ಮೇಲೆ ನಾಗರಹಾವು ಹೆಡೆಯಾಡುತ್ತಿದ್ದುದನ್ನು ಅಪ್ಪಾರಾಯರು ನೋಡಿದರಂತೆ. ಮುಂದೆ ಇವನು ರಾಜನಾಗುತ್ತಾನೆ ಎಂದ, ಅಡಿಗೆಯವನ ಕೆಲಸ ಬಿಡಿಸಿ ದೊಡ್ಡ ಹುದ್ದೆ ಕೊಟ್ಟರಂತೆ! ಇದೇ ವಂಶದ ವೆಂಕಟರಾಯ ಎಂಬುವವನು ಟಿಪ್ಪುವಿನೊಡನೆ ಸಾಹಸದಿಂದ ಹೋರಾಡಿದನು. ಮುಂದೆ ದಾದಾಜಿರಾವ್ ಎಂಬುವನು ದೊರೆಯಾದ. ಅವನು ಶೂರ , ಪ್ರಜಾವಾತ್ಸಲ. ಬಹು ವಿಶ್ವಾಸದಿಂದ , ಕರ್ತವ್ಯನಿಷ್ಠೆಯಿಂದ ಪ್ರಜೆಗಳನ್ನು ನೋಡಿಕೊಂಡ. ಅವನ ಮಗ ಬಾಬಾಸಾಹೇಬ.

ದಾದಾಜಿರಾವ್ ೧೮೪೨ರಲ್ಲಿ ಮರ ಹೊಂದಿದ.  ಆಗ ಕೇವಲ ೨೮ ವರ್ಷ ವಯಸ್ಸಿನ ಬಾಬಾಸಾಹೇಬ ಭಾವೆ ನರಗುಂದದ ಆಡಳೀತದಲ್ಲಿ ಕಡಿವಾಣವನ್ನು ಕೈಗೆತ್ತಿಕೊಂಡ.

ಧೀರ, ಉದಾರಿ, ವಿದ್ಯಾಪಕ್ಷಪಾತಿ

ಸಿಂಹಾಸನವನ್ನು ಏರಿದಾಗ ಬಾಬಾಸಾಹೇಬನಿಗೆ ಚಿಕ್ಕ ವಯಸ್ಸು. ಆದರೆ ತನ್ನ ವಯಸ್ಸಿಗೆ ಮೀರಿ ಧೈರ್ಯಶಾಲಿಯಾಗಿದ್ದನು. ಅವನದು ಉದಾರ ಹೃದಯ. ಅವನು ತುಂಬಾ ಸ್ವಾಭಿಮಾನಿ, ಅಷ್ಟೇ ಬುದ್ಧಿವಂತ.  ಸಂಸ್ಕೃತವನ್ನು ಚೆನ್ನಾಗಿ ಅಭ್ಯಾಸ ಮಾಡಿದ್ದ. ತಾನೇರನಗುಂದದಲ್ಲಿ ಒಂದು ಸಂಸ್ಕೃತ ಪಾಠಶಾಲೆಯನ್ನೂ ಪ್ರಾರಂಭಿಸಿದ. ಒಬ್ಬ ಮಠಾಧೀಶರೊಡನೆ ಬಾಬಾಸಾಹೇಬ ಎರಡು ಗಂಟೆಗಳ ಕಾಲ ಸಂಸ್ಕೃತದಲ್ಲಿಯೇ ಚರ್ಚೆಯನ್ನು ನಡೆಸಿದನೆಂದು ಹೇಳುತ್ತಾರೆ. ಬೇರೆ ದೇಶಗಳವರೂ ಮೆಚ್ಚುವಂತಹ ಪಾಂಡಿತ್ಯ, ಸೌಜನ್ಯ, ಸದ್ಗುಣ ಇವನದು. ಜರ್ಮನಿಯಿಂದ ಬಂದಿದ್ದ ರೈಸ ಎಂಬುವು ಬಾಬಾಸಾಹೇಬನ ಬಗೆಗೆ, ಬಾಬಾಸಾಹೇಬನು ಸದ್ಗುಣಿ, ಕೀರ್ತಿವಂತನು. ಚಿಕ್ಕ ಮಕ್ಕಳಿಗೆ ಪಾಲಕನಾಗಿಯೂ ವಿದ್ಯಾವಂತರಿಗೆ ಆಶ್ರಯದಾತನೂ ಆಗಿದ್ದ.  ಬಡವರನ್ನು ಕಂಡಾಗ ಇವನ ಹೃದಯ ಕರಗಿ ನೀರಾಗುತ್ತಿತ್ತು” ಎಂದು ಬರೆದಿದ್ದಾನೆ.

ವಿಪತ್ತಿನ ಕಾಲ

ಬಾಬಾಸಾಹೇಬನು ನರಗುಂದ ಸಂಸ್ಥಾನದ ಪಟ್ಟವನ್ನೇರಿದಾಗ, ಭಾರತದ ರಾಜಕೀಯ ಪರಿಸ್ಥಿತಿ ಅಶಾಂತಿಯಿಂದ ಕೂಡಿತ್ತು. ಇಂಗ್ಲೀಷರ ಕಂಪನಿ ಸರಕಾರದ ಗವರ್ನರ‍್ ಜನರಲ್ ಡಾಲ್ ಹೌಸಿಯು ದೇಶಿ ಸಂಸ್ಥಾನಗಳನ್ನು ಒಂದೊಂದಾಗಿ ನುಂಗಿ ನೀರು ಕುಡಿಯುತ್ತಿದ್ದ. ಇಂಗ್ಲಿಷರು ಭಾರತದ ಒಡೆಯರಾಗಲು ಹವಣಿಸುತ್ತಿದ್ದ ಕಾಲವದು. ಆವರು ತಮಗೆ ಸಮಬಲದ ಎದುರಾಳಿ ಯಂತಿದ್ದ ಪೇಷ್ವೆಯರನ್ನು ನಾಶಗೊಳಿಸಿದ್ದರು.  ದಕ್ಷಿಣದ ಟಿಪ್ಪೂ ಸುಲ್ತಾನನ್ನು ನಿರ್ನಾಮ ಮಾಡಿದ್ದರು. ಹೈದರಾಬಾದಿನ ನಿಜಾಮನ್ನು ಗೆಳೆಯನನ್ನಾಗಿ ಮಾಡಿಕೊಂಡಿದ್ದು. ಹೀಗೆ ಇಂಗ್ಲೀಷರು ಹೆಚ್ಚು ಕಡಿಮೆ ಅಖಿಲ ಭಾರತದ ಒಡೆಯರೇ ಆಗಿಬಿಟಿದ್ದರು.

ಆದರೂ ಹಲವು ದೇಶಿ ಸಂಸ್ಥಾನಗಳು ಇವರು ತಮ್ಮಯಜಮಾನರು ಎಂದು ಒಪ್ಪಲು ಸಿದ್ಧವಿರಲಿಲ್ಲ. ಇವನ್ನು ಕಂಡರೆ ಡಾಲಹೌಸಿಗೆ ದ್ವೇಷ. ಯಾವುದಾದರೊಂದು ನೆವವನ್ನು ಮುಂದೆ ಮಾಡಿ, ಇಂತಹ ಸಂಸ್ಥಾನಗಳನ್ನು ನೆಲಸಮ ಮಾಡಿ, ನೇರವಾಗಿ ತಮ್ಮಾಡಳಿತಕ್ಕೆ ತರುವ ಪ್ರಯತ್ನವನ್ನೂ ಮಾಡತೊಡಗಿದು.

ಇದಕ್ಕೆ ಅವು ಹಲವು ಅನ್ಯಾಯದ ಉಪಾಯಗಳ್ನು ಮಾಡಿದ., ಅವುಗಳಲ್ಲಿ ಒಂದು ದತ್ತು ತೆಗೆದುಕೊಳ್ಳುವ ಹಕ್ಕಿಗೆ ಸಂಬಂಧಿಸಿದ್ದು. ಒಬ್ಬ ಮನುಷ್ಯ ತೀರಿಕೊಂಡರೆ ಅವನ ಆಸ್ತಿ ಅವನ ಮಕ್ಕಳಿಗೆ ಹೋಗುತ್ತದೆ. ಆವನಿಗೆ ಮಕ್ಕಳು ಇಲ್ಲದೆಯಿದ್ದರೆ ಅವನು ಬೇರೆಯವರ ಮಗನನ್ನು ದತ್ತು ತೆಗದುಕೊಳ್ಳುವುದು ಎಂದು ಹೆಸರು.  ಹೀಗೆ ದತ್ತು ಆದ ಮಗನಿಗೆ ದತ್ತು ತೆಗೆದುಕೊಂಡವರ ಆಸ್ತಿ ಸೇರುತ್ತದೆ.

ಇದು ಹಿಂದುಗಳಲ್ಲಿ ಸಾವಿರಾರು ವರ್ಷಗಳಿಂದ ಬಂದ ಪದ್ಧತಿ. ಇದು ರಾಜರಿಗೂ ಅನ್ವಯಿಸುತ್ತದೆ. ರಾಜನಿಗೆ ಮಕ್ಕಳಿಲ್ಲದಿದ್ದರೆ ಅವನು ಬೇರೊಬ್ಬರ ಹುಡುಗನನ್ನು ದತ್ತು ಮಾಡಿಕೊಳ್ಳಬಹುದು. ಅವನು ತೀರಿಕೊಂಡರೆ ದತ್ತು ಮಗ ರಾಜನಾಗುತ್ತಾನೆ.

ಡಾಲ್ ಹೌಸಿ ಹೊಸ ಕುತಂತ್ರ ಹೂಡಿದ. ಯಾವ ರಾಜನಾದರೂ ಮಕ್ಕಳಿಲ್ಲದೆ ಸತ್ತರೆ ಅವನ ದತ್ತು ಮಗನಿಗೆ ರಾಜ್ಯ ಹೋಗುವುದಿಲ್ಲ: ಇಂಗ್ಲೀಷರ ಕಂಪೆನಿಗೆ ಸೇರುತ್ತದೆ ಎಂದು ಸಾರಿದ!

ಇಂಗ್ಲೀಷರು ಈ ಅನ್ಯಾಯದ ಧೋರಣೆಯನ್ನು ಅನುಸರಿಸಿ, ಹಲವಾರು ದೇಶಿ ಸಂಸ್ಥಾನಗಳನ್ನು ನಾಶಗೊಳಿಸಿ, ಅವುಗಳನ್ನು ತಾವೇ ಕಬಳಿಸತೊಡಗಿದರು.  ಇಂತಹ ಅನ್ಯಾಯದ ಪ್ರವೃತ್ತಿಯನ್ನು ಖಂಡಿಸುವ ಶಕ್ತಿ ಹಲವು ದೇಶೀ ಸಂಸ್ಥಾನಿಕರಿಗೆ ಇರಲಿಲ್ಲ. ಅವರು ತಮ್ಮ ತಮ್ಮ ರಾಜ್ಯವನ್ನು ಇಂಗ್ಲೀಷರಿಗೆ ಒಪ್ಪಿಸಿ ಕಾಲಗರ್ಭದಲ್ಲಿ ಮರೆಯಾಗಿ ಹೋದರು. ಆದರೆ ಇನ್ನು ಕೆಲವು ಸಂಸ್ಥಾನಿಕರು ಪ್ರತಿಭಟಿಸಿದರು.  ಇವರಿಗೆ ಬಲಾಢ್ಯರಾಗಿದ್ದ ಇಂಗ್ಲೀಷರನ್ನು ಸೋಲಿಸುವುದು ಅಷ್ಟೊಂದು ಸುಲಭವಲ್ಲವೆಂದು ತಿಳಿದೇ ಇತ್ತು. ಆದರೂ ತಮ್ಮ ಕೈಯಿಂದಲಾದಷ್ಟು ಪ್ರತಿಭಟನೆಯನ್ನು ತೋರಿಸಿ ಸಮರದಲ್ಲಿ ಮರಣ ಹೊಂದಿ ಅಮರರಾಗಿ ಹೋದರು. ಅವರಲ್ಲಿ ನಾನಾಸಾಹೇಬ ಪೇಷ್ವೆ, ಝಾನ್ಸಿಯ ರಾಣಿ ಲಕ್ಷ್ಮೀಬಾಯಿ, ಸೇನಾಪತಿ ತಾತ್ಯಾಟೋಪಿ, ರಣಶೂರ ರಾಣಾ ಕುವರಸಿಂಹ ಮುಂತಾದವರು ಪ್ರಾತಃ ಸ್ಮರಣೀಯವಾಗಿದ್ದಾರೆ.

ಮ್ಯಾನ್ ಸನ್ ನ ಉದ್ಧಟತನ

೧೮೫೭ರಲ್ಲಿ ಇಂಗ್ಲೀಷರ ವಿರುದ್ಧದ ಪ್ರತಿಭಟನೆ ಪ್ರಚಂಡ ರೂಪವನ್ನು ತಾಳೀತು. ಭಾರತೀಯ ಸೈನಿಕರು ಬ್ರೀಟಿಷರ ವಿರುದ್ಧ ದಂಗೆ ಎದ್ದರು. ಹಿಂದುಗಳು , ಮುಸ್ಲಿಮರು, ಹೆಗಲಿಗೆ ಹೆಗಲು ಕೊಟ್ಟು, ಇಂಗ್ಲೀಷರ ವಿರುದ್ದ ಹೋರಾಡಿದರು. ಸ್ವಲ್ಪ ಕಾಲ ಉತ್ತರ ಭಾರತದಲ್ಲಿ ಇಂಗ್ಲೀಷರು ತತ್ತರಿಸುವಂತಾಯಿತು.

ಉತ್ತರ ಭಾರತದಲ್ಲಿ ನಡೆದ ಬಂಡಾಯದ ಕಿಡಿ ದಕ್ಷಿಣ ಭಾರತಕ್ಕೆ ಪಸರಿಸಬಾರದೆಂದು ಇಂಗ್ಲೀಷರು ತುಂಬಾ ಎಚ್ಚರಿಕೆ ವಹಿಸಿದ್ದರು. ಅದಕ್ಕಾಗಿ ದಕ್ಷಿಣದಲ್ಲಿಯ ದೇಶಿ ಸಂಸ್ಥಾನಗಳ ವಿಚಾರಣೆಗೆ ಮೇಜರ‍್ ಜನರಲ್ ಜೇಕಬ್ ರನ್ನು ನೇಮಿಸಲಾಗಿತ್ತು. ಈತನ ಕೈಕೆಳಗೆ, ಮ್ಯಾನ ಸನ್, ಎಂಬ ಒಬ್ಬ ಐ.ಸಿ.ಎಸ್. ಅಧಿಕಾರಿ, “ಇನಾಂ” ಕಮೀಷರ‍್ ಆದ. ಎಲ್ಲ ದೇಶಿ ಸಂಸ್ಥಾನಗಳನ್ನೂ ತನ್ನ ಸಂಪೂರ್ಣ ಹತೋಟಿಯಲ್ಲಿರಿಸಿಕೊಳ್ಳಲು ಇವನು ಚಡಪಡಿಸುತ್ತಿದ್ದ.

ದಕ್ಷಿಣದ ಸಾಂಸ್ಥಾನಿಕರ ಮನಸ್ಸಿನ ಒಲವು ನಿಲುವುಗಳನ್ನು ಕಂಡುಕೊಳ್ಳುವ ಉದ್ದೇಶದಿಂದ ಮ್ಯಾನ್ ಸನ್ ಜಮಖಂಡಿಯಲ್ಲಿ ಎಲ್ಲ ಸಂಸ್ಥಾನಿಕರ ಸಭೆಯನ್ನು ಕರೆದಿದ್ದ. ಈ ಸಭೆಯಲ್ಲಿ ಮ್ಯಾನ್ ಸನ್ ತಾನು ದೇವರ ಪ್ರತಿನಿಧಿ ಎನ್ನುವ ದರ್ಪದಿಂದ ಮದೋನ್ಮತ್ತನಾಗಿ ನಡೆದುಕೊಂಡ. ಎಲ್ಲ ಸಂಸ್ಥಾನಿಕರನ್ನು ಅವಹೇಳನಕರವಾಗಿ ಕಾಣತೊಡಗಿದ. ಅವನುಗುಳು ಬಾಬಾಸಾಹೆಬನ ಮೇಲೆ ಬಿತ್ತು. ಮ್ಯಾನ್ ಸನ್ ಈ ಅಹಂಕಾರದ ಸ್ವಭಾವವನ್ನು ಬಾಬಾಸಾಹೇಬನು ಸಭೆಯಲ್ಲಿಯೇ ಪ್ರತಿಭಟಿಸಿದನು. “ಇದು ಅಪಮಾನ, ನಾನು ಇಲ್ಲಿ ನಿಲ್ಲುವುದಿಲ್ಲ” ಎಂದು ಗುಡುಗಿದ. ಮ್ಯಾನ್ ಸನ್ ಕಿಡಿ ಕಿಡಿಯಾದ. ಆಳುವ ಬಿಳಿಯರ ಮುಂದೆ ಈ ಸಣ್ಣ ರಾಜನ ಸೊಕ್ಕೆ ಎಂದು ಅವನ ಅಹಂಕಾರ ಕೆರಳಿತು. ಬಾಬಾಸಾಹೇಬನ ಸೊಕ್ಕನ್ನು ಅಡಗಿಸಿ ಬಿಟ್ಟರೆ ಉಳಿದ ಸಂಸ್ಥಾನಿಕರು ತಣ್ಣಗಾಗುವುದು ಖಂಡಿತವೆನ್ನುವ ಅಭಿಪ್ರಾಯಕ್ಕೆ ಅವನು ಬಂದ. ಆದರೆ ಸಭೆಯಲ್ಲಿ ಮಾತ್ರ ಯಾವುದೋ ಕ್ರಮವನ್ನು ಕೈಗೊಳ್ಳಲು ಸಾಧ್ಯವಾಗುವಂತಿರಲಿಲ್ಲ. ಯಾವುದಕ್ಕೂ ಒಂದು ಕಾರಣ ಬೇಕಲ್ಲವೇ?

‘ದತ್ತು ತೆಗೆದುಕೊಳ್ಳುತ್ತೇನೆ

ಬಾಬಾಸಾಹೇಬನ ಹಲವು ರೀತಿಗಳಲ್ಲಿ ಅದೃಷ್ಟ ಶಾಲಿಯೇ ಆಗಿದ್ದನು. ಒಳ್ಳೆಯ ತಂದೆ ತಾಯಿ, ಸದ್ಗುಣಿಯೂ ರೂಪವತಿಯೂ ಆದ ಹೆಂಡತಿ. ಆದರೆ, ಅವನಿಗೆ ಒಂದು ಕೊರಗು- ಅವನಿಗೆ ಮಕ್ಕಳಿರಲಿಲ್ಲ. ೧೮೪೬ರಲ್ಲಿ ಅವನಿಗೆ ಒಂದು ಗಂಡು ಮಗು ಆಗಿತ್ತು. ಆದರೆ ಕೆಲವೇ ದಿನಗಳಲ್ಲಿ ಸತ್ತು ಹೋಯಿತು. ಬಾಬಾಸಾಹೇಬನಿಗೆ ಮೂವತ್ತೆರಡು ವರ್ಷವಾಗಿತ್ತು. ತನ್ನ ಅನಂತರ ರಾಜ್ಯವನ್ನು ಆಳುವವರು ಯಾರು? ಒಬ್ಬ ಹುಡುಗನನ್ನು ದತ್ತು ತೆಗೆದುಕೊಳ್ಳಲು ತೀರ್ಮಾನಿಸಿದ. ಆದರೆ ದತ್ತು ತೆಗೆದುಕೊಂಡಲ್ಲಿ ಅದಕ್ಕೆ ಇಂಗ್ಲೀಷ್ ಸರಕಾರದ ಅನುಮತಿ ಬೇಕು. ದತ್ತು ವಿಧಾನಕ್ಕೆ  ಇಂಗ್ಲೀಷ ಸರಕಾರ ಅನುಮತಿ ಕೊಡುವುದಿಲ್ಲವೆಂಬ ಸಂಗತಿ ಬಾಬಾಸಾಹೇಬನಿಗೆ ತಿಳಿದಿತ್ತು. ಆ ಸರಕಾರ ಉತ್ತರ ಭಾರತದ ಹಲವು ಸಂಸ್ಥಾನಿಕರಿಗೆ ದತ್ತು ಅಧಿಕಾರವನ್ನು ನಿರಾಕರಿಸಿತ್ತು: ಈ ಸಂಗತಿ ಆತನಿಗೆ ಮೊದಲೇ ತಿಳಿದಿತ್ತು.

ಆದರೂ ಬಾಬಾಸಾಹೇಬನಿಗೆ ಒಂದು ಆಸೆಯ ಮೊಳಕೆ- ಇಂಗ್ಲೀಷರು ದಕ್ಷಿಣದ ಸಂಸ್ಥಾನಿಕರ ವಿಷಯದಲ್ಲಿ ತಮ್ಮ ಬಿಗುವಿನ ಧೋರಣೆಯನ್ನು ಸಡಿಲಿಸಬಹುದು, ತನಗೆ ಒಪ್ಪಿಗೆ ಕೊಡಬಹುದು ಎಂದು.

ತಾನು ಹುಡುಗನೊಬ್ಬನನ್ನು ದತ್ತು ತೆಗೆದುಕೊಳ್ಳುತ್ತೇನೆ, ಒಪ್ಪಿಗೆ ಕೊಡಬೇಕು ಎಂದು ಕಂಪೆನಿ ಸರಕಾರಕ್ಕೆ ಅರ್ಜಿ ಬರೆದು ಕಳುಹಿಸಿದ.

ಈ ಅರ್ಜಿಯನ್ನು ದಕ್ಷಿಣ ಭಾರತದ ಇನಾಂ ಕಮೀಷನ್ನಿನ ಅಧ್ಯಕ್ಷ ಮ್ಯಾನ್ ಸನ್ ನ ಮೂಲಕವೇ ಕಳುಹಿಸಬೇಕಾಗಿತ್ತು. ಮ್ಯಾನ್ ಸನ್ ನರಗುಂದ  ಸಂಸ್ಥಾನಿಕ ಬಾಬಾ ಸಾಹೇಬನಿಗೆ ದತ್ತು ತೆಗೆದುಕೊಳ್ಳುವ ಅಧಿಕಾರವನ್ನು ನೀಡತಕ್ಕದ್ದಲ್ಲವೆಂದು ಕಂಪೆನಿಗೆ ಬರೆದು ಕಳೂಹಿಸಿದ.

 

ಇದು ಅಪಮಾನ, ನಾನು ಇಲ್ಲಿ ನಿಲ್ಲುವುದಿಲ್ಲ

ಬಾಬಾಸಾಹೇಬನು ೧೮೪೬ರಲ್ಲಿ ತನ್ನ ಪ್ರಾರ್ಥನಾ ಪತ್ರವನ್ನು ಕಳೂಹಿಸಿದ್ದ. ೧೮೪೬ರಿಂದ ೧೮೫೮ರವರೆಗೂ ಬಾಬಾಸಾಹೇಬ ಕಂಪೆನಿಗೆ ಸರಕಾರದ ಒಪ್ಪಿಗೆಗಾಗಿ ಕಾಯುತ್ತ ಕುಳಿತನು. ಕೆಲವು ಇಂಗ್ಲೀಷ್ ಅಧಿಕಾರಿಗಳು ಬಾಬಾಸಾಹೇಬನ ಬಗೆಗೆ ಆದರದ ಭಾವವನ್ನು ತಳೆದಿದ್ದರು.  ಅವರಲ್ಲಿ ಧಾರವಾಡದ  ಕೆಲಕ್ಟರನೂ ಒಬ್ಬನಾಗಿದ್ದ. ಈ ಕಲೆಕ್ಟರನು ಬಾಬಾಸಾಹೇಬನಿಗೆ ನಿಜವಾಗಿ ಚಿರ ಋಣಿಯಾಗಿದ್ದ. ಅದಕ್ಕೊಂದು ಕಾರಣವೂ ಇದೆ ಎಂದು ಹೇಳುತ್ತಾರೆ.

ಬಾಬಾಸಾಹೇಬನ ಹೆಂಡತಿ ಸಾವಿತ್ರ, ನಿಜವಾಗಿಯೂ ತನ್ನಹೆಸರನ್ನು  ಸಾರ್ಥಕಗೊಳಿಸಿಕೊಂಡವಳು. ಆಕೆಗೆ ಹಾವು ಕಡಿದವರನ್ನು ಬದುಕಿಸುವ ಔಷಧಿ ತಿಳಿದಿತ್ತು.  ಬಾಬಾಸಾಹೇಬನೂ ಅವನ ಹೆಂಡತಿಯೂ ಧಾರವಾಡದಲ್ಲಿದ್ದಾಗ ಕಲೆಕ್ಟರನ ಹೆಂಡತಿಗೆ ಹಾವೊಂದು ಕಚ್ಚಿತ್ತು.  ಬೇರೆ ಯಾವ ಔಷಧಿಯೂ  ಉಪಯೋಗಕ್ಕೆ ಬರಲಿಲ್ಲ. ತನ್ನಹೆಂಡತಿ ಬದುಕುವುದಿಲ್ಲವೆಂದು ಕಲೆಕ್ಟರನು ಚಿಂತೆ ಹೊತ್ತು ಕುಳಿತ. ಆ ಹೊತ್ತಿಗೆ ಸುದಿಧ ತಿಳಿದ ಸಾವಿತ್ರಿ ಅಲ್ಲಿಗೆ ಹೋದಳು. ಔಷಧಿ ಮಾಢಿದಳು. ಕಲೆಕ್ಟರನ ಹೆಂಡತಿಯನ್ನು ಬದುಕಿಸಿದಳೂ. ಇದರಿಂದ ಕಲೆಕ್ಟರನಿಗೆ ಈ ದಂಪತಿಗಳಲ್ಲಿ ಕೃತಜ್ಞತೆ ಮತ್ತು ವಿಶ್ವಾಸ ಮೂಡಿದವು ಎನ್ನುತ್ತಾರೆ.

ಧಾರವಾಡದ ಕಲೆಕ್ಟರನಂತೂ ಬಾಬಾಸಾಹೇಬನ ಪ್ರಾರ್ಥನೆಯನ್ನು ಸಹಾನೂಭೂತಿಯಿಂದ ಕಂಡ, ಅವನು ದತ್ತು ತೆಗೆದುಕೊಳ್ಳಲು ಒಪ್ಪಿಗೆ ಕೊಡಬೇಕು ಎಂದು ಬರೆದು ತನ್ನ ಆಭಿಪ್ರಾಯವನ್ನು ತಿಳಿಸಿದನು.

ಭವಿಷ್ಯವನ್ನು ಎದುರಿಸಲು ಸಿದ್ಧತೆ

ಜಮಖಂಡಿಯಲ್ಲಿ ಜರುಗಿದ ದಕ್ಷಿಣ ಸಂಸ್ಥಾನಿಕರ ಸಭೆಯಲ್ಲಿ ದೇಶಿ ಸಂಸ್ಥಾನಿಕರನ್ನು ತೀರ ಕನಿಷ್ಠ ರೀತಿಯಲ್ಲಿ ಮ್ಯಾನಸನ್ ಕಂಡಾಗಲೇ ಬಾಬಾಸಾಹೇಬನಿಗೆ ಆತನ ವಿಷಯದಲ್ಲಿ ತಿರಸ್ಕಾರದ ಭಾವ ಮೂಡಿದಿತ್ತು. ಈಗ ತನ್ನ ಅರ್ಜಿಯ ವಿರುದ್ಧವಾಗಿ ಕಂಪೆನಿ ಸರಕಾರಕ್ಕೆ ಮ್ಯಾನಸನ್ ತನ್ನ ಅಭಿಪ್ರಾಯವನ್ನು ತಿಳಿಸಿದ್ದನು. ಕೇಳಿದ ಬಾಬಾಸಾಹೇಬನು ಕಿಡಿಕಿಡಿಯಾದನು.

ದತ್ತು ತೆಗೆದುಕೊಳ್ಳುವುದಕ್ಕೆ ಕಂಪೆನಿ ಸರಕಾರ ತನಗೆ ಒಪ್ಪಿಗೆಯನ್ನು ನೀಡದಿದ್ದಲ್ಲಿ ತನ್ನ ಸಂಸ್ಥಾನ ವಾರಸುದಾರರಿಲ್ಲದೆ ಇಂಗ್ಲೀಷ್ ಹಸ್ತಗತವಾಗುವುದು ಖಚಿತ. ಹಾಗಿದ್ದ ಪಕ್ಷದಲ್ಲಿ ಅನಿವಾರ್ಯವೆನಿಸಿದ ಕೂಡಲೇ ಪ್ರತಿಕ್ರಿಯೆಯನ್ನು ತೋರಿಸಲೇಬೇಕು ಎಂದು ಬಾಬಾಸಾಹೇಬನು ನಿರ್ಧರಿಸಿದನು. ಈ ವಿಚಾರದಲ್ಲಿ ಅತ್ಯಂತ ದಾರುಣ ಪರಿಸ್ಥಿತಿಯನ್ನು ಎದುರಿಸಲು ಅವನು ಸಿದ್ಧನಾದನು.

ಇಂತಹ ಪರಿಸ್ಥಿತಿಯಲ್ಲಿ ತನಗೆ ಸಹಾಯ ಮಾಡಬಹುದಾದರು ಯಾರು ಎಂದು ಬಾಬಾಸಾಹೇಬನು ಯೋಚಿಸಿದ. ಹಲವಾರು ದಕ್ಷಿಣದ ಜಹಗೀರುದಾರರಿಗೆ ಗುಟ್ಟಾಗಿ ಪತ್ರಗಳನ್ನು ಬರೆದು ತನ್ನ ಅಂತಿಮ ನಿರ್ಣಯವನ್ನು ತಿಳಿಸಿದ.  ಅವರಿಂದ ಸಹಾಯದ ಭರವಸೆಯನ್ನು ಪಡೆದ. ಯುದ್ಧ ಅಗತ್ಯವಾದರೆ ಯಾವಾಗ- ಯಾವ ರೀತಿಯಲ್ಲಿ ಯುದ್ಧವನ್ನು ಮಾಡಿ, ಇಂಗ್ಲೀಷರಿಗೆ ಬಲವಾದ ಪೆಟ್ಟನ್ನು ಕೊಡಬಹುದು ಎಂದು ತನ್ನ ರೂಪು ರೇಷೆಯನ್ನು ಸಿದ್ಧಗೊಳಿಸಲು ಬಾಬಾಸಾಹೇಬ ತನ್ನ ಮಿತ್ರರ ಜೊತೆಗೆ ಸಮಾಲೋಚನೆ ನಡೆಸಿದನು.

‘ಆಯುಧಗಳನ್ನು ಒಪ್ಪಿಸಿ’

ಮ್ಯಾನಸನ್  ಅತ್ಯಂತ ಕಪಟಿ ಹಾಗೂ ಸ್ವಾರ್ಥ ಸಾಧಕನೆಂದು ಹೆಸರಾಗಿದ್ದವನು ನರಗುಂದದ ಬಾಬಾಸಾಹೇಬನ ಚಟುವಟಿಕೆಗಳ ಮೇಲೆಒಂದು ಕಣ್ಣನ್ನು ಇರಿಸಿಯೇ ಇದ್ದನು. ಬಾಬಾಸಾಹೇಬನ ಸುತ್ತ ತನ್ನ ಗೂಢಚಾರರ ಜಾಲವನ್ನೇ ಪಸರಿಸಿದ್ದನು. ಆದರೂ ಬಾಬಾಸಾಹೇಬನ ಚಟುವಟಿಕೆಗಳು ಪೂರ್ಣ ವಿವರಗಳು ಮ್ಯಾನ್ ಸನ್ನಿಗೆ ತಿಳಿಯುತ್ತಿರಲಿಲ್ಲ. ಆದರೂ ಎನು ಒಳಗೊಳಗೆ ಯೋಚನೆ ನಡೆಯುತ್ತಿದೆ ಎನ್ನುವ ಸಂದೇಹ ಮಾತ್ರ ಮ್ಯಾನ್ ಸನ್ ನನ್ನು ಆವರಿಸಿತ್ತು.

ಮ್ಯಾನ್ ಸನ್ ಯೋಚಿಸಿದ : “ಬಾಬಾಸಾಹೇಬನು ಇಂಗ್ಲೀಷರ ವಿರುದ್ಧ ಯುದ್ಧವನ್ನು ಸಾರಿದರೆ ?ಆತನ ತೋಪುಗಳು ತಮಗೆ ಮಾರಕವಾಗಬಹುದು. ಇದನ್ನು ಹೇಗಾದರೂ ತಪ್ಪಿಸಬೇಕು ಎಂದು.

ಮ್ಯಾನಸ್ನ ಒಂದು ಉಪಾಯ ಮಾಡಿದ: ಒಂದು ಆಜ್ಞೆಯನ್ನು ಹೊರಡಿಸಿದ. “ದಕ್ಷಿಣದ ಸಂಸ್ಥಾನಿಕರ ಸಂರಕ್ಷಣೆಯ ಹೊಣೆಯನ್ನು ಇಂಗ್ಲೀಷ ಸರಕಾರ ವಹಿಸಿಕೊಂಡಿದೆ. ಹಾಗಿರುವಾಗ ಆ ಸಂಸ್ಥಾನಿಕರಿಗೆ ಯಾವುದೇ ಯುದ್ಧದ ಶಸ್ತ್ರಾಸ್ತ್ರಗಳನ್ನುಇಡುವ ಅವಶ್ಯಕತೆಯಿಲ್ಲ.ಆದುದರಿಂದ ಅವನ್ನು ಕೂಡಲೇ ಅವರು ತ್ವರಿತವಾಗಿ ತಮ್ಮ ತಮ್ಮ ಜಿಲ್ಲಾಧಿಕಾರಿಗಳಿಗೆ ಒಪ್ಪಿಸಬೇಕು”.

ಈ ಆಜ್ಞೆಯನ್ನು ಓದಿದ ಬಾಬಾಸಾಹೇಬನಿಗೆ ರಕ್ತ ಕುದಿಯಿತು. ಈ ನಾಗರಹಾವಿನ ಹಲ್ಲುಗಳನ್ನು ಹೇಗಾದರೂ ಮಾಡಿ ಮುರಿಯಬೇಕೆಂದು ನಿರ್ಧರಿಸಿದನು. ಆದರೆ ಆಜ್ಞೆಯನ್ನು ನೇರವಾಗಿ ಉಲ್ಲಂಘಿಸುವುದು ಹೇಗೆ?  ಉಲ್ಲಂಘಿಸಿದರೆ ಕಂಪೆನಿ ಸರಕಾರದ ಇಡೀ ಶಕ್ತಿ ತನಗೆ ವಿರುದ್ಧವಾಗುತ್ತದೆ!

ಬಾಬಾಸಾಹೇಬನು ಒಂದು ತೀರ್ಮಾನಕ್ಕೆ ಬಂದ. “ನನ್ನಲ್ಲಿರುವ ತೋಪುಗಳನ್ನು ಧಾರವಾಢಕ್ಕೆ ಕಳುಹಿಸುತ್ತೇನೆ. ನಿಮ್ಮ ಅಧಿಕಾರಿಗಳಲ್ಲಿ ಯಾರನ್ನಾದರೂ ಕಳೂಹಿಸಿ ಎಂದು ಉತ್ತರ ಬರೆದ.

ಒಪ್ಪಿಸಿಕೊಂಡುದುನ್ನು ದಕ್ಕಿಸಿಕೊಳ್ಳಬೇಕಲ್ಲ!

ಶಸ್ತ್ರಾಸ್ತ್ರಗಳನ್ನು ಕೊಂಡೊಯ್ಯಲು ಜನರಲ್ ಲೆಸ್ಟರ‍್ ಎಂಬ ಸಾಹೇಬನು ೧೮೫೮ರ ಮೇ ೨೮ ರಂದು ನರಗುಂದಕ್ಕೆ ಬಂದ.

ಬಾಬಾಸಾಹೇಬನು ಬಂದವನನ್ನು ಸ್ವಾಗತಿಸಿದ, ಮಾತನಾಡಿಸಿದ ತನ್ನಲ್ಲಿದ್ದ ಎಲ್ಲಾ ತೋಪುಗಳನ್ನು ಅತನಿಗೆ ಒಪ್ಪಿಸಿದ.   ಅವನ ಸಹಾಯಕ್ಕೆ ತನ್ನವರು ಕೆಲವರನ್ನು ಕಳೂಹಿಸಿದ. ಲೇಸ್ಟರ‍್ ಸಾಹೇಬನಿಗೆ ಬಹು ಸಂತೋಷ. ಬಾಬಾಸಾಹೇಬನು ಹೇಗೆ ನಡೆದುಕೊಳ್ಳುವನೋ ಏನು ಸಿಟ್‌ಉಟ ಮಾಡುವನೋ ಎಂದು ಅವನಿಗೆ ಆತಂಕವಿತ್ತು. ಈಗ ತನ್ನ ಕೆಲಸ ಸುಲಭವಾಗಿ ಮುಗಿಯಿತೆಂದು ಅವನಿಗೆ ತುಂಬಾ ಹರ್ಷವಾಯಿತು.

ಅದೇ ದಿನ ಜನರಲ್ ಲೆಸ್ಟರನು ಈ ತೋಫುಗಳೊಂದಿಗೆ ನರಗುಂದದಿಂದ ಧಾರವಾಡದತ್ತ ಪ್ರಯಣ ಬೆಳೆಸಿದನು. ಗಾಡಿಗಳನ್ನು ಹೊಡೆಯಲು ಬಾಬಾ ಸಾಹೇಬನೇ ತನ್ನಜನರನ್ನು ಕೊಟ್ಟನು.

ಲೆಸ್ಟರನೂ ಅವನ ಕಡೆಯವರೂ ಎಂಟು-ಹತ್ತು ಮೈಲಿ ಹೋಗಿರಬೇಕು. ಕಾಡೊಂದು ಸಿಕ್ಕಿತ್ತು. ಕಾಡನ್ನು ಹೊಕ್ಕರು.  ಆ ಹೊತ್ತಿಗೆ ಸಂಜೆಯಾಯಿತು, ರಾತ್ರಿಯಾಯಿತು. ಕಾಡಲ್ಲಿ ಕತ್ತಲೆ ಕತ್ತಲು.

ಇದ್ದಕಿದ್ದ  ಹಾಗೆ ದೊಡ್ಡ ಗುಂಪೊಂದು ಬಿಳಿಯರ ಮೇಲೆ ಎರಗಿತು.

ಬಿಳಿಯರಿಗೆ ಆ ಪ್ರದೇಶ ಹೊಸದು. ಅನಿರೀಕ್ಷಿತ ಅಕ್ರಮಣದಿಂದ ಅವರಿಗೆ ದಿಕ್ಕು ತೋಚದಂತಾಯಿತು. ಹೆಜ್ಜೆ ಇಟ್ಟಲ್ಲಿ ಮುಗ್ಗರಿಸಿದರು. ಕೈಯಲ್ಲಿದ್ದ ಅಯುಧಗಳು ಕೆಳಗೆ ಬಿದ್ದವು. ಕುದುರೆಗಳ ಮೇಲಿದ್ದವರು ಕೆಳಕ್ಕೆ ಉರುಳಿದರು.  ಕಾವಲುಗಾರರು ಚೆಲ್ಲಾಪಿಲ್ಲಿಯಾದರು.

ಶಸ್ತ್ರಗಳಿದ್ದ ಗಾಡಿಗಳನ್ನು ಹೊಡೆಯುತ್ತಿದದವರು ನರಗುಂದದವರೇ ಅಲ್ಲವೇ? ಆದ್ದರಿಂದ  ಅವರು ಎತ್ತುಗಳ ಬೆನ್ನು ಚಪ್ಪರಿಸಿ ಗಾಡಿಗಳನ್ನು ನರಗುಂದಕ್ಕೆ ತಿರುಗಿಸಿದರು.

ಬಾಬಾಸಾಹೇಬನೇ ಈ ದಾಳಿಯ ಸೂತ್ರಧಾರನಾಗಿದ್ದ. ಲೆಸ್ಟರನ ಕಡೆಯವರನ್ನು ಆಕ್ರಮಣ ಮಾಡಿದವರು ಬಾಬಾಸಾಹೇಬನ ಕಡೆಯವರೇ. ಅವರು ತೋಪುಗಳನ್ನು ನರಗುಂದಕ್ಕೆ ತಂದಿಳಿಸಿದರು.

ಹೀಗೆ ಮರಳಿ ಪಡೆದ ತೋಪುಗಳನ್ನು ಮಧ್ಯ ರಾತ್ರಿಯಲ್ಲಿಯೇ ನರಗುಂದಕ್ಕೆ ತರಬೇಕೆಂದು ಬಾಬಾಸಾಹೇಬನು ತನ್ನಜನರಿಗೆ ಅಜ್ಞಾಪಿಸಿದ್ದನು.  ಏಕೆಂದರೆ ತನ್ನರಮನೆಯಲ್ಲಿಯ ಕೆಲವು ಅಧಿಕಾರಿಗಳು ಇಂಗ್ಲೀಷರಿಗೆ ಒಳಗಿಂದೊಳಗೆ ಸಹಾಯ ಸಲ್ಲಿಸುತ್ತಿದ್ದಾರೆನ್ನುವ ಸಂದೇಹ ಬಾಬಾಸಾಹೇಬನಿಗೆ ಬಂದಿತು.ಹಾಡು ಹಗಲಿನಲ್ಲಿಯೇ ತೋಪುಗಳು ನರಗುಂದವನ್ನು ಪ್ರವೇಶಿಸಿದ್ದಲ್ಲಿ ಈ ವಿಶ್ವಾಸಘಾತುಕರು ಇಂಗ್ಲೀಷರಿಗೆ ಈ ಸುದ್ಧಿಯನ್ನು ಮುಟ್ಟಿಸದೇ ಬಿಡುತ್ತಿರಲಿಲ್ಲ.

ಬಾಬಾಸಾಹೇಬನು ವೀರನಂತೆ ಹೋರಾಡಿದ.

ಮ್ಯಾನ್ ಸನ್ ನ ರೋಷ

ಕೊಲ್ಲಾಪೂರದಲ್ಲಿ ಮೇಜರ ಜನರಲ್ ಲಿಗ್ರಾಂಡ್ ಜೇಕಬ್ ಎಂಬ ಇಂಗ್ಲೀಷ ಸೈನ್ಯಾಧಿಕಾರಿ ಇದ್ದ. ಲೆಸ್ಟರ‍್ ಸಾಹೇಬ್ ಅವನಿಗೆ ವರದಿ ಕಳೂಹಿಸಿದ:  “ಬಾಬಾಸಾಹೇಬ ನಮಗೆ ಆಯುಧಗಳನ್ನು ಒಪ್ಪಿಸಿದ ನಾಟಕ ಆಡಿದ. ಅಯುಧಗಳನ್ನೇನೋ ಕೊಟ್ಟ, ಆದರೆ ದಾರಿಯಲ್ಲಿ ಅವನ ಕಡೆಯವರೇ ನಮ್ಮ ಮೇಲೆ ಬಿದ್ದರು. ಕತ್ತಲೆಯಲ್ಲಿ ಆಯುಧಗಳನ್ನೆಲ್ಲ ವಶಪಡಿಸಿಕೊಂಡು ಹೋದರು. ನಮ್ಮಲ್ಲಿ ಅನೇಕರಿಗೆ ಗಾಯಗಳಾಗಿವೆ.

ಈ ಘಟನೆ ನಡೆದಾಗ ಮ್ಯಾನ ಸನ್ ಕುರುಂದ ವಾಡದಲ್ಲಿದ್ದನು. ಸಂಗತಿಯನ್ನು ಕೇಳೀದ ಮ್ಯಾನಸನ್ ಬಾಬಾಸಾಹೇಬನ ಮೇಲೆ ವಿಷವನ್ನೇ ಕಾರತೊಡಗಿದನು. ಇನ್ನು ವಿಳಂಭ ಮಾಡಿ ಪ್ರಯೋಜನವಿಲ್ಲವೆಂದೂ ತಾನೇ ಹೋಗಿ ಬಾಬಾಸಾಹೇಬನ ಮೇಲೆ ಹದ್ದಿನಂತೆ ಎರಗಿ ಅವನನ್ನು ಸಾಯಿಸಿಬಿಡಬೇಕೆಂದೂ ಮ್ಯಾನಸನ್ ನಿರ್ಧರಿಸಿದನು.

ಆದರೆ ಲಿಗ್ರಾಂಡ್ ಜೇಕಬ್ನು ಈ ವಿಚಾರದಲ್ಲಿ ಅವಸರ ಮಾಡಬಾರದೆಂದೂ ಮ್ಯಾನ್ ಸನ್ ನಿಗೆ ಉಪದೇಶ ಮಾಡಿದನು. ಅವರ ಉಪದೇಶವನ್ನು ಕಿವಿಯ  ಮೇಲೆ ಹಾಕಿಕೊಳ್ಳಲು ಮ್ಯಾನ್ ಸನ್ ಸಿದ್ಧನಾಗಿರಲಿಲ್ಲ. ನರಗುಂದದ ಪ್ರಶ್ನೆಯನ್ನು ತನಗೇ ಬಿಟ್ಟು ಕೊಡಬೇಕೆಂದೂ ತಾನೂ ಅದನ್ನು ಕ್ಷಣ ಮಾತ್ರದಲ್ಲಿಯೇ ಮುಗಿಸುವೆನೆಂದೂ ಜೇಕಬ್ನಿಗೆ ತಿಳಿಸಿ ನರಗುಂದದತ್ತ ಪ್ರಯಣ ಹೊರಟೇಬಿಟ್ಟ.

ದ್ರೋಹಿಯಾದ ತಮ್ಮ

ನರಗುಂದಕ್ಕೆ ಭೇಟಿಕೊಡುವ  ಮೊದಲು ಆತ ರಾಮದುರ್ಗಕ್ಕೆ ಬಂದಿಳಿದನು. ರಾಮದುರ್ಗದ ರಾಜನುಬಾಬಾಸಾಹೇಬನ ಸ್ವಂತ ತಮ್ಮನೇ ಆದಹರಿಹರ ರಾಯ. ಈ ತಮ್ಮ ತನ್ನ ಅಣ್ಣನ ಜೊತೆಯಲ್ಲಿ ವೈರ ಭಾವ ಬೆಳೆಸಿಕೊಂಡು ಬಂದ ಸಂಗತಿ ಮ್ಯಾನ್ ಸನ್ ನಿಗೂ ಗೊತ್ತಿದ್ದಿತ್ತು. ಆದರೂ ಅದನ್ನೊಂದು ಪ್ರತ್ಯೇಕ್ಷ ಪರಿಶೀಳಿಸಿ ನೋಡಬೇಕೆಂದು ಮ್ಯಾನ್ಸರ ರಾಮದುರ್ಗದಲ್ಲಿಳಿದ.

ರಾಮರಾಯ ಮಾನ್ ಸನ್ನನನ್ನು ಆದರದಿಂದ ಬರಮಾಡಿಕೊಂಡನು. ಮ್ಯಾನ್ ಸನ್ ಆತನನ್ನೂ ಮಾತನಾಡಿಸಿ, ಆತನ ಒಲವು ನಿಲುವುಗಳನ್ನು ತಿಳಿದುಕೊಂಡನು. ತಾನು ಇಂಗ್ಲೀಷರಿಗೆ ತುಂಬಾ ನಿಷ್ಠೆಯಿಂದ ಇರುವುದಾಗಿ ರಾಮರಾಯ ಭಾವೆ ಮ್ಯಾನ್ ಸನ್ ನಿಗೆ ತಿಳಿಸಿದನು. ಅದರಿಂದ ಸಂತುಷ್ಟಗೊಂಡ ಮ್ಯಾನ್ ಸನ್ ನರಗುಂದದತ್ತ ಪಯಣ ಬೆಳೆಸಿದನು.

ಆಗ ಮ್ಯಾನ ಸನ್ ನ ಜೊತೆಯಲ್ಲಿ ಒಟ್ಟು ನೂರು ಜನ ಸಿಪಾಯಿಗಳಿದ್ದರು. ಪ್ರತಿ ದಿನ ಬೆಳಗ್ಗೆ ಬಾಬಾಸಾಹೇಬನು ಒಬ್ಬನೇ ಶ್ರೀ ವೆಂಕಟೇಶ್ವರ ದೇವಾಲಯಕ್ಕೆ ಹೋಗುತ್ತಿದ್ದ. ಈ ಸಂಗತಿ ಮ್ಯಾನಸನ್ ನಿಗೆ ತಿಳಿದಿತ್ತು. ಅವನೊಂದು ಯೋಚನೆ ಮಾಡಿದ.  – ತನ್ನ ಸಿಪಾಯಿಗಳ ಬೆಂಬಲದಿಂದ ನರಗುಂದಕ್ಕೆ ಬೆಳಗಿನಜಾವದಲ್ಲಿ ಹೋಗಿ ಬಾಬಾ ಸಾಹೇಬನು ದೇವಮಂದಿರಕ್ಕೆ ಹೋಗುವ ದಾರಿಯಲ್ಲಿ ಆತನನ್ನು ಬಂಧಿಸಿಕೊಂಡು ಬಂದು ಬಿಡಬೇಕುಎಂದು. ೧೮೫೮ರ ಮೇ ೨೯ ರಂದು ಸಂಜೆ ಮ್ಯಾನ್ ಸನ್ ಸುರೇಬಾನ್ ಎಂಬ ಹಳ್ಳಿಗೆ ಬಂದು ಬೀಡು ಬಿಟ್ಟನು.

ಬಾಬಾಸಾಹೇಬನ ಸಿದ್ಧತೆ

ಬಾಬಾಸಾಹೇಬನೂ ಚಾಣಾಕ್ಷ ಆಡಳಿತಗಾರನಲ್ಲವೇ? ಮ್ಯಾನ್ ಸನ್ ತನ್ನ ಮೇಲೆ ಕಣ್ಣಿರಿಸಿದಂತೆ, ಬಾಬಾ ಸಾಹೇಬನೂ ಮ್ಯಾನಸನ್ ನ ಮೇಲೆ ತನ್ನ ಕಣ್ಣು ಇರಿಸಿದ್ದನು. ಬಾಬಾಸಾಹೇಬನೂ ತನ್ನ ಗೂಢಚಾರರ ಜಾಲವನ್ನು ಮ್ಯಾನ್ ಸನ್ ನ ಸುತ್ತ ಹಾಗೂ ರಾಮದುರ್ಗದ ಸುತ್ತ ಪಸರಿಸಿದ್ದನು. ಮ್ಯಾನ್ ಸನ್ ರಾಮದುರ್ಗಕ್ಕೆ ಹೋದದ್ದು, ರಾಮದುರ್ಗದಲ್ಲಿ ತನ್ನ ತಮ್ಮನನ್ನು ಕಂಡದ್ದು, ಅವರಲ್ಲಿ ನಡೆದ ಮಾತುಕತೆಗಳ ಸಾರಾಂಶ ಎಲ್ಲವನ್ನು ತನ್ನ ಗೂಢಚರ್ಯರ ಮೂಲಕ ಬಾಬಾಸಾಹೇಬ ತಿಳಿದುಕೊಂಡನು.

ಈ ಪೀಡೆಯನ್ನು ಯೋಗ್ಯ ಸಮಯದಲ್ಲಿ ನಿರ್ಮೂಲ ಮಾಡದೆ ಹೋದಲ್ಲಿ ಅದು ತನ್ನ ಕುಲವನ್ನೇ ನಾಶಗೊಳಿಸುವುದು ಎಂದು ಬಾಬಾಸಾಹೆಬನು ಯೋಚಿಸಿದನು. ತನ್ನನ್ನು ಸೆರೆ ಹಿಡಿಯಲು ಮ್ಯಾನ್ ಸನ್ ಬರುತ್ತಿದ್ದಾನಲ್ಲವೆ, ಅವನನ್ನೇ ಸೆರೆ ಹಿಡಿದು ತನ್ನ ಪರಾಕ್ರಮದ ಅರಿವನ್ನು ಈ ಕಪಟಿ ಇಂಗ್ಲೀಷ್ ಮನುಷ್ಯನಿಗೆ ಮಾಡಿಕೊಡಬೇಕೆಂದು ಬಾಬಾಸಾಹೇಬನು ನಿರ್ಧರಿಸಿದ. ತನಗೆ ಆಪ್ತಮಿತ್ರರಾದಂತಹ ವಿಷ್ಣುಪಂತ ಹಾಗೂ ಹೀರೆಕೊಪ್ಪ ಮೊದಲಾದ ನಾಲ್ಕಾರು ತರುಣರೊಂದಿಗೆ ೧೮೫೮ರ ಮೇ ೨೯ರ ರಾತ್ರಿ ೯ ಗಂಟೆಗೆ ಸುರೇಬಾನ್ ಊರನ್ನು ತಲುಪಿದನು.

ಮ್ಯಾನ್ ಸನ್ ನ ಕಥೆ ಮುಗಿಯಿತು

ಆಗ ಈಗಿನಂತೆ ವಿದ್ಯುತ್ ದೀಪಗಳಿರಲಿಲ್ಲ. ರಾತ್ರಿ  ೯ ಗಂಟೆಗೆ ಊರಲ್ಲಿ ಗಾಢ ಕತ್ತಲೆ ವ್ಯಾಪಿಸಿಬಿಡುತ್ತಿತು. ಮ್ಯಾನ್ ಸನ್ ಬಳಿ ಇದ್ದ ಸಿಪಾಯಿಗಳು ಊರಿನಲ್ಲಿ ಅತ್ತಿತ್ತ ಚದುರಿ ಬೇರೆ ಬೇರೆ ಕಡೆಗಳಲ್ಲಿ ತಂಗಿದ್ದರು. ಅವನ ಬಳಿ ಕೆಲವು ಸಿಪಾಯಿಗಳು ಮಾತ್ರ ಇದ್ದರು.  ಯೋಗ್ಯ ವೇಳೆಯನ್ನು ಸಾಧಿಸಿಕೊಂಡು ಬಾಬಾಸಾಹೇಬನು ತನ್ನ ತರುಣ ಮಿತ್ರದೊಂದಿಗೆ ಮ್ಯಾನ್ ಸನ್ ನ ಮೇಲೆ ಹದ್ದಿನಂತೆ ಹಠಾತ್ತಾನೆ ಎರಗಿ ಬಿಟ್ಟನು.

ಯಾವುದೇ ಪೂರ್ವ ಸೂಚನೆ ಇಲ್ಲದೇ ಬಂದ ಆಕ್ರಮಣವನ್ನು ಎದುರಿಸುವ ಸ್ಥಿತಿಯಲ್ಲಿ ಮ್ಯಾನ್ ಸನ್  ಇರಲಿಲ್ಲ. ಸ್ವಂತದ ಸಂರಕ್ಷಣೆಗಾಗಿ ಇದ್ದ ಸಿಪಾಯಿಗಳೂ ನಿದ್ರೆಯ ಅಧೀನರಾಗಿದ್ದರು.  ಇಂತಹ ಪರಿಸ್ಥಿತಿಯಲ್ಲಿ ಮ್ಯಾನ್ಸನ್ ಕ್ಷಣ ಕಾಲ ದಿಗ್ಬ್ರಾಂತನಾದ. ಅನಂತರ ಚೇತರಿಸಿಕೊಂಡು ತನ್ನ ಪಿಸ್ತೂಲಿನಿಂದ ಗುಂಡು ಹಾರಿಸತೊಡಗಿದ. ಸುತ್ತಲೂ ಕತ್ತಲೆ ಪಸರಿಸಿದೆ. ಗುರಿ ಇಡಬೇಕೆಂದರೆ ಏನು ಕಾಣಿಸುತ್ತಿಲ್ಲ. ತಾನು ಗುಂಡು ಹಾರಿಸಿದ್ದರಿಂದ ಪ್ರಯೋಜನವಾಗುತ್ತದೆ ಎನ್ನಿಸಲಿಲ್ಲ. ತಾನಾದರೂ ಎಟು ಹೊತು ಗುಂಡು ಹಾರಿಸಿಯೇನು?-  ಹೀಗೆ ಯೋಚಿಸಿ ಅಧೈರ್ಯಗೊಂಡ ಮ್ಯಾನ್ ಸನ್  ದಿಕ್ಕು ತೋಚದೆ ಅಲ್ಲಿಂದ ತಪ್ಪಿಸಿಕೊಂಡು ಹೋಗುವ ಯೋಚನೆ ಮಾಡಿದ.ಸಮೀಪದಲ್ಲಿಯೇ  ಹನುಮಂತ ದೇವರ ಗುಡಿಯಿತ್ತು.  ಓಡಿ ಹೋಗಿ ಗರ್ಭಗುಡಿಯನ್ನು ಪ್ರವೇಶಿಸಿ ಬಾಗಿಲಿಗೆ ಚಿಲಕವನ್ನು ಹಾಕಿ ತನ್ನ ದೇವರಿಗೆ ಪ್ರಾರ್ಥನೆ  ಮಾಡುತ್ತ ಕುಳಿತುಕೊಂಡನು.

ಮ್ಯಾನ್ ಸನ್ ಓಡಿಹೋದ ಸಂಗತಿ ಬಾಬಾಸಾಹೇಬನಿಗೆ ತಿಳಿಯಿತು. ಅವನೂ ಅವನ ಕಡೆಯವರೂ ಅವನ ಬೆನ್ನಟ್ಟಿ ಹೋದರು. ಕೆಲವೇ ನಿಮಿಷಗಳಲ್ಲಿ ಗರ್ಭಗುಡಿಯ ಬಾಗಿಲನ್ನು ಮುರಿದು ಒಳಗೆ ನುಗ್ಗಿದರು. ಮೊದಲೇ ಕಂಗಾಲಾಗಿದ್ದ ಮ್ಯಾನ್ ಸನ್ನ್ನು ಕೆಳಗೆ ಕೆಡವಿದರು. ಈ ರಭಸದ ಜಗ್ಗಾಟದಲ್ಲಿ ಪರಿಸ್ಥಿತಿ ಕೈಮೀರಿ ಮ್ಯಾನ್ ಸನ್ ನಿಗೆ ಪ್ರಾಣ ಹೋಗುವಂತಹ ಪೆಟ್ಟು ಬಿದ್ದಿತು. ಅರೆ ನಿಮಿಷದಲ್ಲಿ ದುರಹಂಕಾರಿಯಾದ ಮ್ಯಾನ್ ಸನ್ ಸತ್ತು ಬಿದ್ದ.

ಆತನನ್ನು ಕೊಲ್ಲದೆ ಸೆರೆಹಿಡಿದುಕೊಂಡು ಬರಬೇಕೆಂದು ಬಾಬಾಸಾಹೆಬನು ಯೋಚಿಸಿದ್ದ. ಆದರೆ  ಈಗ ಪ್ರಸಂಗ ಕೈಮೀರಿಹೋಗಿದ್ದಿತ್ತು. ತಾನು  ನಿರ್ಧರಿಸಿದ ರೂಪ ರೇಷೆಗಳಂತೆ, ಜೂನ್ ಮಧ್ಯಭಾಗದಲ್ಲಿ ಯುದ್ಧದ ಕಹಳೆಯನ್ನು ಮೊಳಗಿಸಬೇಕಾಗಿದ್ದಿತ್ತು. ಈ ಘಟನೆಯಿಂದ ಹದಿನೈದು ದಿನಗಳ ಮುಂದೆಯೇ ಯುದ್ಧವನ್ನು ಸಾರುವಂತಾಯಿತು.

ದ್ರೋಹ!

ಬಾಬಾಸಾಹೇಬನೂ ಅವನ ಸಂಗಡಿಗರೂ ಮ್ಯಾನ್ ಸೆನ್ ನ ಹೆಣವನ್ನು ಶೋಧಿಸಿದರು. ಕೆಲವು ಕಾಗದ ಪತ್ರಗಳು ದೊರೆತವು. ಅವನ್ನು ದೀಪದ ಬೆಳಕಿನಲ್ಲಿ ಓದಿದಾಗ ಬಾಬಾಸಾಹೇಬನು ದಂಗುಬಡಿದಂತಾದ.

ಕೃಷ್ಣಾಜಿಪಂತ ಮತ್ತು ಬನ್ಯಾಪೂರ ಎಂಬುವರು ಬಾಬಾಸಾಹೇಬನ ದರ್ಬಾರಿನ ಅಧಿಕಾರಿಗಳು. ಅವನರನ್ನು ಬಾಬಾಸಾಹೇಬನು ನಂಬಿದ್ದನು. ಅವರೇ ಮ್ಯಾನ್ ಸನ್ ಗೆ ಬರೆದಿದ್ದ ಕಾಗದಗಳು ದೊರೆತವು.

“ನಾವು ನಿಮ್ಮ ಬೆಂಬಲಕ್ಕೆ ಇದ್ದೇವೆ. ನೀವು ಹೇಗೆ ಹೇಳಿದರೆ ಹಾಗೆ ನಡೆಯುತ್ತೇವೆ. ಬಾಬಾಸಾಹೇಬನ ಶಸ್ತ್ರಾಸ್ತ್ರಗಳು ಉಪಯೋಗಕ್ಕೆ ಬಾರದಂತೆ  ಮಾಡುವ ಕೆಲಸ ನಮ್ಮದು” ಎಂದು ಬರೆದಿದ್ದರು ಆ ದ್ರೋಹಿಗಳು.

ಈ ಪತ್ರಗಳನ್ನು ನೋಡಿ ಬಾಬಾಸಾಹೇಬ ದಿಗ್ಭ್ರಾಂತನಾದ. ತನಗಿಂತ ಹತ್ತುಪಟ್ಟು ಶಕ್ತರಾದ ಶತ್ರುಗಳ ವಿರುದ್ಧ ಅವನುಸ್ವಾತಂತ್ಯ್ರಕ್ಕಾಗಿ , ಮರ್ಯಾದೆಯಾಗಿ ಹೋರಾಡುತ್ತಿದ್ದರೆ ತನ್ನವರಿಂದಲೇ ಈ ವಿಶ್ವಾಸ ಘಾತುಕತನ!

ಆದರೂ ಬಂದುದ್ದನ್ನು ಎದುರಿಸುವ ನಿರ್ಧಾರದೊಂದಿಗೆ ಬಾಬಾಸಾಹೇಬನು ಮ್ಯಾನ್ ಸನ ನ ರುಂಡವನ್ನು ಮುಂಡದಿಂದ ಬೇರ್ಪಡಿಸಿದ. ಅದನ್ನು ತನ್ನ ಖಡ್ಗದ ತುದಿಗೆ ಸಿಕ್ಕಿಸಿಕೊಂಡು ರಾತ್ರಿಯೇ ನರಗುಂದಕ್ಕೆ ಬಂದು ಅಲ್ಲಿಯ ಕೋಟೆಯ ಬಾಗಿಲಿಗೆ ರುಂಡವನ್ನು ತೋರಣವಾಗಿ ಕಟ್ಟಿ ಅರಮನೆಯನ್ನು ಮುಟ್ಟಿದ. ಬೆಳಗಾದಾಗ ನರಗುಂದದ ಅಗಸೆ ಬಾಗಿಲಿನಲ್ಲಿ ರಕ್ತ ಹತ್ತಿದ ರುಂಡ ತೂಗಾಡುತ್ತಿತ್ತು. ಇಂದೂ ಆ ಮಹಾದ್ವಾರಕ್ಕೆ “ಕೆಂಪಗಸೆ ” ಎಂದು ಹೆಸರು.

ಮ್ಯಾನ್ ಸನ್ ನ ಬಳಿ ದೊರೆತ ಪತ್ರಗಳಿಂದ , ತನ್ನ ದರಬಾರಿನಲ್ಲಿ ಕೃಷ್ಣಾಜಿಪಂತ, ಬನ್ಯಾಬಾಪೂರವರ ಒಳಸಂಚಿನ ಸಂಗತಿ ತಿಳಿದು ಬಾಬಾಸಾಹೇಬ ಚಿಂತಾತುರನಾಗಿದ್ದನು.ಅರಮನೆಗೆ ಹೋದವನೇ  ನೇರವಾಗಿ ತನ್ನ ಮದ್ದಿನ ಕೊಣೆಯನ್ನು ನೋಡಲು ಹೋದ. ಅಲ್ಲಿ ಅವನಿಗೊಂದು ಆಘಾತ ಕಾದಿತ್ತು.  ಮದ್ದಿನ ಪುಡಿಯಲ್ಲಿ ಸಗಣಿ ನೀರನ್ನು ದ್ರೋಹಿಗಳು ಸೇರಿಸಿಬಿಟ್ಟಿದ್ದರು. ಅವು ಉಪಯೋಗಕ್ಕೆ ಬರುವಂತೆಯೂ ಇಲ್ಲ.

ಇದನ್ನು ಕಂಡ ಬಾಬಾಸಾಹೇಬ ದಿಗ್ಭ್ರಾಂತನಾಗಿ ಬಿಟ್ಟನು. ತೋಪುಗಳಿದ್ದರೂ ಕೆಲಸಕ್ಕೆ ಬಾರದ ಮದ್ದಿನಿಂದ ಅವೂ ಕೆಲಸಕ್ಕೆ ಬಾರದ ವಸ್ತುಗಳಾಗುತ್ತವಲ್ಲವೆಂದು ಬಾಬಾಸಾಹೇಬನು ಹಳಹಳಿಸಿದನು. ಆದರೆ ಹಿಂದಿನ ದಿನ ನಡೆದ ಘಟನೆಗಳಿಂದ ಸ್ವಲ್ಪ ಕಾಲದಲ್ಲಿಯೇ ಯುದ್ಧ ಕಟ್ಟಿಟ್ಟಿದ್ದು ಎಂಬುವುದು ಅವನಿಗೆ ತಿಳಿದಿತ್ತು. ಇದ್ದಬಿದ್ದ ಶಸ್ತ್ರಾಸ್ತ್ರಗಳನ್ನು ಸರಿಪಡಿಸುವಂತೆ ತನ್ನ ಸೇನಾಧಿಪತಿ ಯೋಗಿರಾವ್ ಭಾವೆಯವರಿಗೆ ಸೂಚನೆ ನೀಡಿದರು.

ದ್ರೋಹ ಮಾಡಿದ ಕೃಷ್ಣಾಜಿಪಂತ ಮತ್ತು ಬನ್ಯಾಬಾಪು ಇವರಿಗಾಗಿ ಊರಿನಲ್ಲೆಲ್ಲ ಶೋಧನೆ ನಡೆಯಿತು. ಆದರೆ ಅವರು ಆಗಲೇ ಓಡಿ ಹೋಗಿದ್ದರು.

ಇಂಗ್ಲೀಷ್ ಸೈನ್ಯ ಹೊರಟಿತು

ಮ್ಯಾನ್ ಸನ್ ನ ಸಾವಿನ ಸುದ್ಧಿ ಬಿರುಗಾಳಿಯಂತೆ ಹಬ್ಬಿತು. ಕೊಲ್ಲಾಪೂರದ ಜೇಕಬ್ ಸಾಹೇಬನು ಮಾಲಕಮ್ ಎಂಬ ಸೈನ್ಯಧಿಕಾರಿಯ ಜೊತೆಗೆಯಲ್ಲಿ ಶಸ್ತ್ರಸಜ್ಜಿತ ಸೇನಾಪಡೆಯನ್ನು ನರಗುಂದಕ್ಕೆ ಕಳೂಹಿಸಿದನು. ಬಳ್ಳಾರಿಯಿಂದ  ಇಂಗ್ಲೀಷರ ಒಂದು ಸೈನ್ಯದ ತುಕಡಿ ನರಗುಂದದತ್ತ ಪಯಣ ಬೆಳೆಸಿತು. ಮಾಲಕಮ್ನ ಸೈನವು ೧೮೫೮ರ ಮೇ ೩೧ ರಂದು ಸಂಜೆಗೆ ನರಗುಂದದ ಬಳಿ ಯಿರುವ ಅಮರಗೋಳದಲ್ಲಿ ಬಂದು ಬೀಡುಬಿಟ್ಟತ್ತು. ಈ ಸಮಯಕ್ಕೆ ಬಳ್ಳಾರಿಯ ಸೈನ್ಯವು ಮಾಲಕಮ್ ನನ್ನು ಕೂಡಿಕೊಂಡಿತು.

‘ನಿನ್ನ ರಕ್ಷಣೆಗೆ ಶ್ರೀ ವೆಂಕಟೇಶ್ವರನಿದ್ದಾನೆ’

ಮರುದಿನ ಅಂದರೆ ೧೮೫೮ರ ಜೂನ ೧ ರಂದು ಬೆಳಿಗ್ಗೆ ನರಗುಂದದ ಕೋಟೆಗೆ ಮುತ್ತಿಗೆಯನುನ ಹಾಕುವುದಾಗಿ ಮಾಲಕಮ್ ನಿರ್ಧರಿಸಿದನು.

ಮರುದಿನ ಸೂರ್ಯ ಮೂಡಿದಾಗ, ಇಂಗ್ಲೀಷ ಸೈನ್ಯ ಅಮರಗೋಳದಿಂದ ನರಗುಂದದತ್ತ ಹೊರಟಿತು. (ಇಂದಿಗೂ ಅಮರಗೋಳ- ನರಗುಂದ ನಡುವಿನ ದಾರಿಯನ್ನು ದಂಡಿನ ದಾರಿ ಎಂತಲೇ ಕರೆಯುತ್ತಾರೆ)

ಬಾಬಾಸಾಹೇಬನ ಸೇನಾಪತಿ ಯೋಗಿರಾವ್ ಭಾವೆ, ಬಾಬಾಸಾಹೇಬನಿಗೂ ಯೋಗಿರಾವ್ ಗೂ ತಮಗೆ ಸೋಲು ಖಂಡಿತ ಎನ್ನುವ ಅರಿವು ಇದ್ದಿತು. ಆದರೂ ಯುದ್ಧಕ್ಕೆ ಸಿದ್ಧತೆ ಮಾಡಿಕೊಂಡರು. ಬಾಬಾಸಾಹೇಬನಿಗೆ ಸಹಾಯ ಮಾಡುವುದಾಗಿ ಭರವಸೆ ನೀಡಿ ಅನೇಕ ಜಹಗೀರುದಾರರು ಪತ್ರಗಳನ್ನು ಬರೆರದಿದ್ದರು. ಬಾಬಾಸಾಹೇಬನ ಅವನ್ನೆಲ್ಲ ಸುಡಿಸಿ ಯುದ್ಧಕ್ಕೆ ಅಣಿಯಾದ. ಯೋಗಿರಾವ್ ಭಾವೆಯನ್ನು ಕೂಡಿಕೊಂಡ.

ಬಾಬಾಸಾಹೆಬನು ಮೊದಲು ಮಾಡಿಕೊಂಡಿದ್ದ ಯೋಜನೆಯೇ ಬೇರೆ. ಅದರಂತೆ ಇನ್ನೂ ಹದಿನೈದು ದಿನಗಳ ನಂತರ ಯುದ್ಧ ಮಾಡಬೇಕಾಗಿತ್ತು. ಆ ಹೊತ್ತಿಗೆ ಅಕ್ಕಪಕ್ಕದ ಜಹಗೀರುದಾರರ ನೆರವೂ ಸಿಕ್ಕುತ್ತಿತು. ತಾನೂ ಸಿದ್ಧತೆ ಮಾಡಿಕೊಳ್ಳಬಹುದಾಗಿತ್ತು. ಆದರೆ ಈಗ ಬೇರೆ ಯಾರ ನೆರವು ಇಲ್ಲದೇ, ಶಸ್ತ್ರಾಸ್ತ್ರಗಳೂ ತಕ್ಕಷ್ಟಿಲ್ಲದೆ ಹೋರಾಟ ನಡೆಸಬೇಕಾಯಿತು . ತನಗೆ ಗೆಲುವು ದೊರೆಯುವುದು ಸಾಧ್ಯವಿಲ್ಲ ಎಂಬುವುದನ್ನು ಅವನು ಕಂಡುಕೊಂಡ. ತನಗೆ ಸಹಾಯ ಮಾಡುವುದಾಗಿ ಬರದವರ ಕಾಗದಗಳು ಇಂಗ್ಲೀಷ್ ಕೈಗೆ ಸಿಕ್ಕಿ ತನ್ನ ಹಿತೈಷಿಗಳಿಗೆ ಏಕೆ ಕಷ್ಟವಾಗಬೇಕು ಎಂದು ಆ ಪತ್ರಗಳನ್ನೆಲ್ಲ  ಸುಟ್ಟ ಬಿಟ್ಟನು.

ಕಾಳಗ

ಇಡೀ ದಿನದ ಯುದ್ಧದಲ್ಲಿ ಇಂಗ್ಲೀಷರ ಸೈನಿಕರಿಗೆ ಕೋಟೆಯ ಗೋಡೆಯನ್ನು ಒಡೆದು  ಒಳಗೆ ಬರಲಾಗಲಿಲ್ಲ. ಬಾಬಾಸಾಹೇಬನು ಒಮ್ಮೆ ಕೋಟೆಯ ಬಾಗಿಲನ್ನು ತೆರೆದು ಹೊರಕ್ಕೆ ನುಗ್ಗಿ ವೀರನಂತೆ ಹೋರಾಡಿದ. ಬಿಳಿಯರ ಸೈನ್ಯ ತತ್ತರಿಸುವಂತಾಯಿತು. ಶತ್ರುವಿನ ಒಂದು ಗುಂಡು ಯೋಗಿರಾವ್ ಭಾವೆಗೆ ಬಡಿದುದರಿಂದ ಅವರು ಸಾವನಪ್ಪಿದ ನೆಲಕ್ಕುರುಳಿದರು. ತನ್ನ ಸೇನಾಪತಿಯೇ ಸತ್ತು ಹೋದುದರಿಂದ, ಬಾಬಾಸಾಹೇಬನ ಸೈನಿಕರಲ್ಲಿ ಶಕ್ತಿ – ಹುಮ್ಮಸ್ಸು- ಉತ್ಸಾಹ ಕುಗ್ಗತೊಡಗಿದವು. ಬಾಬಾಸಾಹೇಬನು ಮತ್ತೇ ಕೋಟೆಯ  ಯೊಳಕ್ಕೆ ಬಂದು ಬಾಗಿಲನ್ನು ಹಾಕಿಸಿದ.

ಮರು ದಿನ ಜೂನ್ ೨ ರಂದು ಬೆಳಗಿನ ಜಾವ ಕೋಟೆಯ ಬಾಗಿಲನ್ನು ಮುರಿಯುವುದರಲ್ಲಿ ಇಂಗ್ಲೀಷರು ಯಶಸ್ವಿಯಾದರು. ಈ ಮಧ್ಯೆ ಬಾಬಾಸಾಹೇಬನು ತನ್ನ ಆಪ್ತಮಿತ್ರರನ್ನು ಕರೆಯಿಸಿ ಆಪ್ತಾಲೋಚನೆಯನ್ನು ನಡೆಸಿದ. ಅವರೆಲ್ಲರೂ ಬಾಬಾಸಾಹೇಬನು ಗುಪ್ತಮಾರ್ಗದಿಂದ ಪಾರಾಗಿ ದೂರ ಹೋಗಬೇಕೆಂದು ಸಲಹೆ ಇತ್ತರು. ಅವರೆಲ್ಲರ ಸಲಹೆಯಂತೆ ಬಾಬಾಸಾಹೇಬ ತನ್ನ  ಇಷ್ಟ ದೇವತೆಯಾದ ಶ್ರೀ ವೆಂಕಟೇಶ ದೇವರನ್ನು ಪ್ರಾರ್ಥಿಸಿ ಕೋಟೆಯಿಂದ ಹೊರಕ್ಕೆ ಹೋಗಲು ಸಿದ್ಧನಾದನು.

ವೀರ ಮಾತೆ, ವೀರ ಪತ್ನಿ

ರಾಜಮಾತೆ ಯಮುನಾಬಾಯಿ, ರಾಜಪತ್ನಿ ಸಾವಿತ್ರಬಾಯಿ ಇವರ ಗತಿ ?

ಸಾವಿತ್ರಿ ಬಾಯಿ ಬಂದು ಗಂಡನ ಪಾದಗಳಿಗೆರಗಿದಳು. “ನಾನು ಶತ್ರುಗಳ ಕೈಗೆ ಸಿಕ್ಕುಕವುದು ಬೇಡ. ಅವರು ನನ್ನನ್ನು ಮುಟ್ಟುವುದು ಬೇಡ. ನಿಮ್ಮ ಕೈಯಿಂದಲೇ ನನಗೆ ಸೌಭಾಗ್ಯದ ಸಾವನ್ನು ಕೊಟ್ಟುಬಿಡಿ” ಎಂದು ಬೇಡಿಕೊಂಡಳು. ಅದೇ ಸಮಯಕ್ಕೆ ಬಾಬಾಸಾಹೇಬನ ವೃದ್ಧ ತಾಯಿ ಯಮುನಾಬಾಯಿಯೂ ಬಂದು, “ನಾವಿನ್ನೇನು ಮಾಡಬೇಕು?” ಎಂದು ಕೇಳೀದಳೂ.

ಬಾಬಾಸಾಹೇಬನ ಕಣ್ಣಂಚಿನಲ್ಲಿ ನಿಈರು ಹರಿದಯತೊಡಗಿತು. ನಿನ್ನೆಯವರೆಗೆ ರಾಜಮಾತೆಯಾಗಿ, ರಾಜಪತ್ನಿಯಾಗಿ ಸುಪತ್ತಿಗೆಯಲ್ಲಿ ಸುಖವಾಗಿ ನಿದ್ರಿಸುತ್ತಿದ್ದ, ತನಗೆ ಜನ್ಮ ಕೊಟ್ಟ ತಾಯಿ ಮತ್ತು ಕೈಹಿಡಿದ ಹೆಂಡತಿ ಇವರನ್ನು ನಾನೀಗ ಹೇಗೆ ಕಾಪಾಡಲಿ ಎಂದು ಕೊರಗಿದ. ತನ್ನ ನಿಸ್ಸಹಾಯಕತೆಗೆ ಸಂಕಟಪಟ್ಟುಕೊಂಡ.

ತಾಯಿಗೆ ಹೇಳಿದ, “ಅಮ್ಮಾ, ನೀನು ರಾಮದುರ್ಗಕ್ಕೆ ಹೋಗು. ಅಲ್ಲಿಯ ರಾಜನೂ ನಿನ್ನ ಮಗನೇ. ಅವನು ನನಗೆ ವೈರಿಯಾದರೂ ನೀನು ಅವನಿಗೆ ತಾಯಿ- ನಿನ್ನನ್ನು ಆತ ನೋಡಿಕೊಳ್ಳುವನು” ಅನಂತರ ಹೆಂಡತಿಗೆ ಹೇಳಿದ; “ನೀನು ಸತೀ ಧರ್ಮದಂತೆ ನಡೆದುಕೋ; ನಿನ್ನ ರಕ್ಷಣೆಗೆ ಶ್ರೀ ವೆಂಕಟೇಶ್ವರನಿದ್ದಾನೆ”.

ಅದೊಂದು ಹೃದಯವಿದ್ರಾವಕ ದೃಶ್ಯ.

ವೃದ್ಧ ಮಾತೆ ಯಮುನಾಬಾಯಿ ತನ್ನ ಇನ್ನೊಬ್ಬ ಮಗನ್ನತ ಹೋಗಲು ಖಡಾಖಂಡಿತವಾಗಿ ನಿರಾಕರಿಸಿದಳು.  “ತನ್ನವರಿಗೆ ದ್ರೋಹ ಬಗೆದು, ಅಣ್ಣನನ್ನೇ ಬಲಿಕೊಟ್ಟು ಬಿಳಿಯರ ಕೈಸೇರಿದ ಅವನು ನನ್ನ ಮಗನೇ?” ನೀನಿನ್ನು ನಿನ್ನ ಕರ್ತವ್ಯ ಮಾಡಲು ಹೊರಡು. ನಾನು, ಸೊಸೆ ಏನು ಮಾಡಬೇಕೆಂಬುವುದನ್ನು ನಾವೇ ನಿರ್ಧರಿಸಿಕೊಳ್ಳುತ್ತೇನೆ” ಎಂದಳು. ಬಾಬಾಸಾಹೆಬನ ತಾಯಿಯ ಕಾಲಿಗೆರಗಿದ, ತಾಯಿ ಮಗನನ್ನು ಹರಿಸಿದಳು. ಸಾವಿತ್ರಿಬಾಯಿ ಗಂಡನ ಪಾದಗಳಿಂದ ನಮಸ್ಕರಿಸಿದಳು. ಇದೇ ತಮ್ಮ ಕಡೆಯ ಭೇಟಿ ಎಂದು ಮೂವರಿಗೂ ಗೊತ್ತು. ದುಃಖ ಹೃದಯವನ್ನೂ ಸೀಳುತ್ತಿದ್ದಂತೇ ಬಾಬಾಸಾಹೇಬ ತಾಯಿಯನ್ನೂ ಹೆಂಡತಿಯನ್ನು ಬಿಳ್ಕೊಟ್ಟ.

ಬಾಬಾಸಾಹೇಬನ ತನ್ನ ಅತಿ ವಿಶ್ವಾಸದ ಜನರೊಡನೆ ಗುಪ್ತಮಾರ್ಗದಿಂದ ಕೋಟೆಯಿಂದ ಹೊರಬಿದ್ದು ೧೮೫೮ರ ಜೂನ್ ೧ ರ ಸಂಜೆ ತೊರಗಲ್ ಎಂಬ ಸ್ಥಳಕ್ಕೆ ಬಂದು ತಲುಪಿದನು.

ಆ ವೇಳೆಗಾಗಲೇ ಇಂಗ್ಲೀಷ ಸೈನಿಕರು ಕೋಟೆಯನ್ನು ಪ್ರವೇಶಿಸಿ, ಕೈಗೆ ಸಿಕ್ಕಿದ್ದನ್ನುಯ ಲೂಟಿ ಮಾಡತೊಡಗಿದರು. ಬಾಬಾಸಾಹೇಬ ಎರಡು ಸಾವಿರ ಸಂಸ್ಕೃತ ಪುಸ್ತಕಗಳ ಭಂಡಾರವನ್ನು ಇಟ್ಟುಕೊಂಡಿದ್ದ. ಅದನ್ನು ಸುಟ್ಟು ಹಾಕಿದರು.

ಅಂದು, ೧೮೫೮ರ ಜೂನ೧,  ಮಂಗಳವಾರ ನರಗುಂದ ಸಂಸ್ಥಾನದ ದುರ್ಭಾಗ್ಯದ ದಿನವಾಗಿ ಪರಿಣಮಿಸಿತು. ಅಂದಿನ ನರಗುಂದ ಸಂಸ್ಥಾನ ನಷ್ಟವಾಯಿತು.

ನದಿಯೇ ಆಶ್ರಯ

ಬಾಬಾಸಾಹೇಬನು ನರಗುಂದವನ್ನು ಬಿಟ್ಟ ಸ್ವಲ್ಪ ಹೊತ್ತಿನಲ್ಲಿಯೇ ಯಮುನಾಬಾಯಿಯೂ ಸಾವಿತ್ರಿಬಾಯಿಯು ಮನೆಯ ದೇವರಿಗೆ ಮಿಸಿ ಕೋಟೆಯಿಂದ ಸುರಂಗ ಮಾರ್ಗವಾಗಿ ಹೊರಕ್ಕೆ ಬಂದರು. ಎಂದೂ ಬೀದಿಗೆ ಕಾಲಿಡಿದ, ಎಂದೂ ರಸೆತೆಯಲ್ಲಿ ನಡೆಯದ ಇಬ್ಬರೂ ಕಲ್ಲುಮುಳ್ಳುಗಳ ಹಾದಿಯಲ್ಲಿ ಹೊರಟರು. ಉತ್ತರ ದಿಕ್ಕಿನಲ್ಲಿ ಪ್ರಯಾಣ ಮಾಡಿದರು. ದಾರಿ ಸರಿಯಾಗಿ ತಿಳಿಯದು, ಎಷ್ಟು ದೂರ ಬಂದೆವೆಂದೂ ತಿಳಿಯದು. ಕಾಡು ಮೇಡುಗಳಲ್ಲಿ ಅಲೆದರು. ಇಬ್ಬರಿಗೂ ಎದೆಯ ತುಂಬಾ ಸುಡುವ ಚಿಂತೆ, ಆದರೆ ಅವರೇ ಒಬ್ಬರಿಗೊಬ್ಬರೂ ಆಧಾರ. ಒಬ್ಬರಿಗೊಬ್ಬರು ಸಮಾಧಾನ ಹೇಳೀದರು. ಒಬ್ಬರು ಬಳಳಿದಾಗ  ಇನ್ನೊಬ್ಬರೂ ಸಂತೈಸಿದರು.  ಆಹಾರವಿಲ್ಲ, ನೀವೇ” ಎಂದು  ಕೇಳೂವವರಿಲ್ಲ. ಕೋಮಲೆಯರಿಬ್ಬರೂ ನಡೆದರು. ನಡದರು, ನಡೆದರು….

ಕಡೆಗೆ ಅವರು ಮಲಪ್ರಭಾ ನದಿಯ ದಡಕ್ಕೆ ಬಂದರು. ನದಿಯ ದರ್ಶನ ಅವರಿಗೊಂದು ಮಾರ್ಗವನ್ನು ತೋರಿಸಿತು.

ಒಂದು ಕಡಿದಾದ ಸ್ಥಳದಲ್ಲಿ ನಿಂತರು. ಸೆರಗಿಗೆ ಸೆರಗು ಸೇರಿಸಿ ಗಂಟು ಹಾಕಿದರು. ದೇವರನ್ನು ಮನಸ್ಸಿನಲ್ಲಿ ಸ್ಮರಿಸಿದರು. ಬಾಬಾಸಾಹೇಬನಿಗೆ ಒಳ್ಳೆಯದಾಗಲಿ ಎಂದು ಬೇಡಿಕೊಂಡು, ನದಿಗೆ ಹಾರಿದರು.

ಮರುದಿನ ಬೆಳಗ್ಗೆ ಬೂದಿಹಾಳೆಂಬ ಗ್ರಾಮದ ಅಂಚಿನಲ್ಲಿ ಇಬ್ಬರ ಹೆಣಗಳೂ ಬಿದ್ದಿದ್ದವು.  ಗ್ರಾಮದ ಜನರು ಕಂಡರವು. ವೀರ ಮಹಿಳೆಯರ ಸ್ಥಿತಿಯನುನ ಕಂಡು ಕಣ್ಣೀರಿಟ್ಟರು, ಅವರ ಆತ್ಮಗೌರವಕ್ಕೆ ಮಣಿದರು. ಅವರು ಇಬ್ಬ ರ ಶವಗಳಿಗೂ ಅಂತ್ಯ ಸಂಸ್ಕಾರ ಮಾಡಿದರು.

ಅಮರಜ್ಯೋತಿ

ನರಗುಂದವನ್ನು ಪ್ರವೇಶಿಸಿದ ಇಂಗ್ಲೀಷರು ಬಾಬಾಸಾಹೇಬನಿಗೆ ಮೂಲೆ ಮೂಲೆಯನ್ನು ಶೋಧಿಸಿದರು. ಅವನು ಕಾಣಲಿಲ್ಲ. ಅವನನ್ನು ಹುಡುಕಿಕೊಟ್ಟವರಿಗೆ ಹತ್ತು ಸಾವಿರ ರೂಪಾಯಿಗಳ ಬಹುಮಾನ ಕೊಡುವುದಾಗಿ ಘೋಷಿಸಿದರು. ಅವನನ್ನು ಹಿಡಿಯಲು ದಿಕ್ಕು ದಿಕ್ಕಿಗೆ ಸೈನಿಕರನ್ನು ಓಡಿಸಿದರು.

ಬೆಳಗಾವಿ ಜಿಲ್ಲೆಯ ಪೋಲಿಸ ಅಧಿಕಾರಿ ಫ್ರಾಂಕ್ ಸೌಟರನಂತೂ ಬಾಬಾಸಾಹೇಬನರನ್ನು ಹಿಡಿಯಲು ಗೂಢಚಾರರನ್ನು ಕಳೂಹಿಸಿದ.

ಬಾಬಾಸಾಹೇಬನ ಸಂಗಡಿಗರಲ್ಲಿ ಒಬ್ಬ ಲಕ್ಷ್ಮಣರಾವ್ ಜಗತಾಪೆ ಎಂಬುವನು, ಅವನು ವೇಷ ಮರೆಸಿಕೊಳ್ಳಲು ಕಾಷಾಯ ವಸ್ತ್ರಗಳನ್ನು ತರುತ್ತೇನೆ ಎಂದು ಹೇಳಿ ತೋರಗಲ್ ಪೇಟೆಗೆ ಹೋದ. ಅವನೇ ಸೌಟರನಿಗೆ ಸುದ್ಧಿ ಕೊಟ್ಟ ಎಂದು ಕೆಲವರು ಹೇಳುತ್ತಾರೆ. ಅವನು ಇಂಗ್ಲೀಷ್ ಕೈಗೆ ಸಿಕ್ಕಿಬಿದ್ದ.  ಅವನಿಗೆ ತಡೆಯಲಾಗದಷ್ಟು ಹಿಂಸೆ ಕೊಟ್ಟರು. ಅದರಿಂದ ಅವನು ಸುದ್ಧಿಯನ್ನು ಹೇಳಿಬಿಟ್ಟ ಎಂದು ಕೆಲವರು ಹೇಳುತ್ತಾರೆ. ಇಷ್ಟಂತ್ತೂ ನಿಜ: ಲಕ್ಷ್ಮಣರಾವ್ ಜಗತಾಪೆಯಿಂದ ಸೌಟರನಿಗೆ ಬಾಬಾಸಾಹೇಬನೂ ಅವನ ಸಂಗಡಿಗರೂ ಕಾಷಾಯ ವಸ್ತ್ರಗಳಿಗಾಗಿ ಕಾಯುತ್ತಿದ್ದಾರೆ, ಅವನು ಧರಿಸಿ ಉತ್ತರ ಭಾರತಕ್ಕೆ ಹೋಗುವುದು ಅವರ ಯೋಚನೆ ಎಂದು ತಿಳಿಯಿತು.

ಇದು ತಿಳಿದಾಗೆ ಸಂಜೆಯಾಗಿತ್ತು. ಕತ್ತಲಾಗುತ್ತಿತ್ತು. ಕತ್ತಲಿನಲ್ಲೇ ಸೌಟರನು ತನ್ನ ಕಡೆಯವರೊಂದಿಗೆ ನದಿಯನ್ನು ದಾಟಿದ. ಪಾಪ, ಬಾಬಾಸಾಹೇಬನಿಗೆ ಬರುತ್ತಿರುವವರು ಯಾರು ಎಂದು ತಿಳಿಯಲಿಲ್ಲ. ತಮ್ಮವರೇ ಎಂದು ಮೋಸಹೋದ.

ಬಾಬಾಸಾಹೇಬನೂ ಅವನ ಸಂಗಡಿಗರೂ ಜೂನ್ ಎರಡರಂದು ಇಂಗ್ಲೀಷ್ ಬಂದಿಗಳಾದರು.

ಇಂಗ್ಲೀಷರು ಒಂದು ನ್ಯಾಯ ವಿಚಾರಣೆಯ ನಾಟಕ ನಡೆಸಿದರು. ತನಗೆ ಸಹಾಯ ಮಾಡಲು ಒಪ್ಪಿದವರು ಯಾರು ಎಂದು ಹೇಳಿದರೆ ಅವನನ್ನು ಬಿಡುಗಡೆ ಮಾಡುವುದಾಗಿ ಆಶೆ ತೋರಿಸಿದರು.  ವೀರ ಬಾಬಾ ಸಾಹೇಬನು ಅವರ ಮಾತನ್ನು ತಿರಸ್ಕರಿಸಿದ.

೧೮೫೮ರ ಜೂನ್ ೧೨ ರಂದು ಬೆಳಗಿನ ಜಾವ ಬೆಳಗಾವಿಯ ಕೇಂದ್ರ ಕಾರಾಗೃಹದಲ್ಲಿ ಇಂಗ್ಲೀಷರು ನರಗುಂದದ ಬಾಬಾಸಾಹೇಬನನ್ನುಗಲ್ಲಿಗೇರಿಸಿದರು.

ಸ್ವಾತಂತ್ಯ್ರಕ್ಕಾಗಿ ಸರ್ವಾರ್ಪಣೆ ಮಾಢಿದ ವೀರನೊಬ್ಬ ಮಡಿದ. ಅವನ ಕೀರ್ತಿಯ ಬೆಳಕು, ಆದರ್ಶದ ಬೆಳಕು ಸಾವಿರ ಸಾವಿರ ಹೃದಯಗಳಲ್ಲಿ ಹೊತ್ತಿಕೊಂಡಿತು.

೧೯೫೭ರ ಮೇ, ೧೦ ರಂದು ಭಾರತದ ಸ್ವಾತಂತ್ಯ್ರ ಹೋರಾಟದ ಶತಮಾನೋತ್ಸವ. ಆ ದಿನ ಬೆಳಗಾಂವನಲ್ಲಿ  ಕೆಲವು ತರುಣರು ಒಟ್ಟಾದರು.  ಜನ ಮರೆತೇ ಬಿಟ್ಟಿದ್ದ ಊರಿಗೆ ಅರ್ಧಮೈಲಿ ದೂರದಲ್ಲಿರುವ ಬಾಬಾಸಾಹೇಬನ ಸಮಾಧಿಯನ್ನು ಸ್ವಚ್ಛಗೊಳಿಸಿದರು. ಎರಡು ನಿಮಿಷ ಮೌನವಾಗಿ ನಿಂತು ಗೌರವ ಸಲ್ಲಿಸಿದರು.

ಅದು ನರಗುಂದದ ಬಾಬಾಸಾಹೇಬನ ಸಮಾಧಿ.

ಸ್ವಾತಂತ್ಯ್ರಕ್ಕಾಗಿ ಪ್ರಾಣ ಒಪ್ಪಿಸಿದ ಧೀರನಿಗೆ ಸ್ವತಂತ್ರ ಭಾರತದ ಯುವಕರು ಪ್ರಣಾಮ ಸಲ್ಲಿಸಿದರು – ಅಭಿಮಾನದಿಂದ ನಮಿಸಿದರು.