ಜಿಲ್ಲೆ: ೭೦ ಕಿ.ಮೀ.

ಹಿನ್ನೆಲೆ :

ಪ್ರಾಚೀನ ಕಾಲದಿಂದಲೂ ನರಗುಂದವು ತನ್ನ ವಿಶಿಷ್ಟ ಪ್ರಾಕೃತಿಕ ವಿಶೇಷಗಳಿಂದಾಗಿ ಹೆಸರು ಪಡೆದ ವಸತಿ ಪ್ರದೇಶವಾಗಿದೆ. ಶಾಸನಗಳಲ್ಲಿ ಪಿರಿಯ ನರಗುಂದ ವೆಂದು ಉಲ್ಲೇಖಿತವಾಗಿರುವ ತಾಲೂಕ ಸ್ಥಳವಾದ ನರಗುಂದ ಕರ್ನಾಟಕದ ಗಂಡು ಮೆಟ್ಟಿನ ನಾಡು ಸಂಗ್ರಾಮ ಭೂಮಿ-ಯೆಂದೇ ಪ್ರಸಿದ್ಧ. ಬಂಡಾಯದ ಭೂಮಿ ಸಾಹಿತ್ಯ ಸಾಂಸ್ಕೃತಿಕ ಸೊಗಡನ್ನು ಹೊರಹೊಮ್ಮಿಸಿದ ಈ ನರುಗಂಪಿನ ಪ್ರದೇಶಕ್ಕೆ ಕರ್ನಾಟಕ ಐತಿಹಾಸಿಕ ಪರಂಪರೆಯಲ್ಲಿ ಒಂದು ವಿಶಿಷ್ಟವಾದ ಸ್ಥಾನವಿದೆ.

ಇದನ್ನು ಹಿಂದೆ ಮಹಾಂತಗಡ ಎಂದು ಕರೆಯುತ್ತಿದ್ದರು. ಇತಿಹಾಸ ಪ್ರಕಾರ ಬೆಳ್ವೂಲದ ೩೦೦ ನಾಡಿನಲ್ಲಿ ಕಳಸಪ್ರಾಯವಾದ ನರಗುಂದದ ಬಗೆಗೆ ಪ್ರಮುಖ ಉಲ್ಲೇಖವಿದೆ.

ಸುಮಾರು ಕ್ರಿ.ಶ. ೧೧-೧೨ ನೇಯ ಶತಮಾನದಲ್ಲಿ ಬೆಳ್ವೂಲ ೩೦೦ ಆಡಳಿತಕ್ಕೆ ಒಳಪಟ್ಟಿತ್ತು ೧೮ ಅಗ್ರಹಾರಗಳಲ್ಲಿ ಒಂದಾದ ಇದು ಸೌಂದರ್ಯದ ಬೀಡಾಗಿತ್ತೆಂದು ಅನೇಕ ಶಾಸನಗಳು, ಕವಿಗಳು ವರ್ಣಿಸಿದ್ದುಂಟು.

೧೯೯೭ ರಲ್ಲಾದ ಜಿಲ್ಲೆಗಳ ಪುನರ್ವಿಂಗಡಣೆಯ ವೇಳೆ ನರಗುಂದವು ಗದಗ ಜಿಲ್ಲೆಯ ಭಾಗವಾಯಿತು.

ಕೃಷಿಯು ಇಲ್ಲಿಯ ಜನರ ಜೀವನಾಧಾರ. ಪ್ರಮುಖವಾಗಿ ಗೋವಿನಜೋಳ, ಹತ್ತಿ, ಸೂರ್ಯಕಾಂತಿ, ಹೆಸರು, ಶೇಂಗಾ ಹಾಗೂ ಇತರ ದ್ವಿದಳ ದಾನ್ಯಗಳನ್ನು ಬೆಳೆಯುತ್ತಾರೆ. ಇಲ್ಲಿ ಮಲಪ್ರಭೆ ಹಾಗೂ ಬೆಣ್ಣಿಹಳ್ಳವು ಕೃಷಿಗೆ ನೀರುಣಿಸುವ ಜೀವನ ನದಿಗಳಾಗಿವೆ. ನೀರಾವರಿಯಿಂದ ಬಾಳೆ, ಕಬ್ಬು, ಭತ್ತ ಬೆಳೆಗಳನ್ನು ಬೆಳೆಯಲಾಗುತ್ತದೆ.

 

ಹೋರಾಟದ ಪರಂಪರೆ:

ನರಗುಂದವೆಂದೊಡನೆ “ಬಂಡಾಯ” ವೆಂಬ ಶಬ್ದ ಅವಿಭಾಜ್ಯ ಅಂಗವಾಗಿ ಹಿಂಬಾಲಿಸಿ ಬರುತ್ತದೆ. ಸ್ವಾತಂತ್ರ್ಯ ಹೋರಾಟದಲ್ಲಿ ಇಲ್ಲಿಯ ಜನ ಪ್ರಮುಖ ಪಾತ್ರ ವಹಿಸಿರುವುದು ಎಲ್ಲರಿಗೂ ತಿಳಿದ ವಿಚಾರ. “ಹೆತ್ತ ತಾಯಿ, ಹೊತ್ತ ಭೂಮಿ ಸ್ವರ್ಗಕ್ಕಿಂತ ಶ್ರೇಷ್ಠ’. ಹಿರಿಯ ಕವಿ ಸಿದ್ದಯ್ಯ ಪುರಾಣಿಕರಿಗಿಂತಲೂ “ನೆನೆದೊಡೆ ನರ-ನರಗಳಲ್ಲಿ ಸ್ವಾತಂತ್ರ್ಯ ಪ್ರೇಮವನ್ನು ಹರಿಸುವ ನರಗುಂದ” ವೆಂದಿದ್ದಾರೆ. ನರಗುಂದ ಸ್ವಾತಂತ್ರ್ಯಗಾಥೆ ದೇಶದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಅಚ್ಚಳಿಯದ ಮೊದಲ ಪುಟವನ್ನು ಅಲಂಕರಿಸುತ್ತದೆ. ಈ ಗಾಥೆಗೆ ಬಂಡಾಯವೆನ್ನುವುದಕ್ಕಿಂತ ಸ್ವಾತಂತ್ರ್ಯ ಹೋರಾಟವೆಂಬ ಹೆಸರೇ ಸರಿ ಹೊಂದುತ್ತದೆ. ಈ ಹೋರಾಟಕ್ಕೆ ಕಾರಣ ಪುರುಷನಾದ ವೀರಕಲಿ ಭಾಸ್ಕರರಾವ ಭಾವೆ (ಬಾಬಾಸಾಹೇಬ) ಸ್ವಾಭಿಮಾನದ ಉಜ್ವಲ ದೇಶಭಕ್ತಿಯ ಸಂಕೇತವಾಗಿದ್ದಾರೆ. ನಾಡಿನ ಜನಮನದಲ್ಲಿ ನರಗುಂದದ ಜನಪದದಲ್ಲಿ ಅಭಿಮಾನದ ಹೆಮ್ಮೆಯ ಹಾಡಾಗಿ ಹರಿದಾಡಿ ಹಾಸು ಹೊಕ್ಕಾಗಿದೆ.

ನರಗುಂದ ಕಂಡ ಪ್ರಥಮ ಸ್ವಾತಂತ್ರ್ಯಕ್ಕೆ ೧೫೦ ವರ್ಷಗಳು ತುಂಬಿದರೆ ರಾಜ್ಯವೇ ನೆನೆಯುವಂತಹ ರೈತ ಬಂಡಾಯ ೨೮ ವಸಂತಗಳನ್ನು ಪೂರೈಸಿದೆ. ಅಲ್ಲದೇ ಕರ್ನಾಟಕದ ಏಕೀಕರಣಕ್ಕಾಗಿ ಶ್ರೀ ಶಿವಮೂರ್ತಿ ಸುರೇಬಾನರಂತಹ ಹೋರಾಟದ ಕೊಡುಗೆಯನ್ನು ಕಾಣಬಹುದು. ಇದು ಕರ್ನಾಟಕದ ಪ್ರಖ್ಯಾತ ಗಣಿತತಜ್ಞನಾದ, ಜೈನನೂ ಆದ ಶ್ರೀಧರಾಚಾರ್ಯನ ತವರೂರು.

ಐತಿಹಾಸಿಕ ಸ್ಥಳಗಳು :

ನರಗುಂದ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುಮಾರು ೨೨ ಕ್ಕಿಂತ ಹೆಚ್ಚು ಶಿಲಾಶಾಸನಗಳು ಉಪಲಬ್ಧವಾಗಿವೆ. ಇಲ್ಲಿನ ವಾಸನ ಗ್ರಾಮದಲ್ಲಿ ಶಾತವಾಹನ ವಸಿಷ್ಟಪುತ್ರ ಪುಳಮಾಯಿ ಕಾಲದ ಬ್ರಾಹ್ಮಿಲಿಪಿಯ ಪಾಕೃತ ಭಾಷೆಯ ಶಾಸನವಿದೆ. ಕೊಣ್ಣೂರ ಗ್ರಾಮದಲ್ಲಿ ಪರಮೇಶ್ವರ ದೇವಾಲಯದಲ್ಲಿ ೧೨ನೇ ಶತಮಾನದಲ್ಲಿನ ಕನ್ನಡ ಶಾಸನ ಹಾಗೂ ಕ್ರಿ.ಶ. ೮೬೦ರ ಅಮೋಘವರ್ಷ ನೃಪತುಂಗನ ಕಾಲದ ತಾಮ್ರಶಾಸನ ಇದೆ. ಹದಲಿ ಗ್ರಾಮದಲ್ಲಿ ೧೦೪೮ರ ಕನ್ನಡ ಶಾಸನವಿದೆ. ಚಿಕ್ಕನರಗುಂದದಲ್ಲಿ ಶ್ರೀ ಬಸವೇಶ್ವರ ದೇವಾಲಯ ಹಾಗೂ ನರಗುಂದದ ೧೧೪೮ರ ಕನ್ನಡ ಶಾಸನ ಹಾಗೂ ಜೋಡು ಹನಮಂತ ದೇವಾಲಯವಿದೆ.

 

ದಂಡೇಶ್ವರ ಗುಡಿ


ಎದುರು ಬದುರಾಗಿ ಗರ್ಭಗ್ರಹ, ತೆರೆದ ಅರ್ಧಮಂಟಪವನ್ನು ಹೊಂದಿರುವ ದಂಡೇಶ್ವರ ಗುಡಿ ದ್ವಿಕೂಟವಾಗಿದೆ. ಈ ದ್ವಿಕೂಟಗಳಿಗೆ ಒಂದೇ ನವರಂಗವಿದ್ದು, ನವರಂಗದ ಉತ್ತರ ಭಾಗದಲ್ಲಿರುವ ಹೆಚ್ಚುವರಿ ಅಂಕಣವು ಇದನ್ನು ತ್ರಿಕೂಟವೆಂದು ಭ್ರಮೆ ಹುಟ್ಟಿಸುತ್ತದೆ. ನಕ್ಷತ್ರಾಕಾರದಲ್ಲಿರುವ ಈ ಗರ್ಭಗೃಹಗಳಲ್ಲಿ ಪ್ರಧಾನ ಗರ್ಭಗೃಹದಲ್ಲಿ ಶಿವಲಿಂಗವಿದ್ದು, ಎದುರಿನ ಗರ್ಭಗೃಹದಲ್ಲಿ ಸೂರ್ಯವೀರನ ಮೇಲೆ ನಾರಾಯಣಮೂರ್ತಿ ಇದೆ. ಅರ್ಧಮಂಟಪಗಳನ್ನು ಆಕರ್ಷಕವಾದ ಮಕರ ತೋರಣಗಳನ್ನು ಅಲಂಕರಿಸಿದ್ದು, ಒಂದರಲ್ಬಿ ಆಸೀನ ಬ್ರಹ್ಮ, ಮಹೇಶ್ವರ, ವಿಷ್ಣು ಇತರೆ ಕೆತ್ತನೆ ಇದ್ದರೆ, ಇನ್ನೊಂದರಲ್ಲಿ ಸೂರ್ಯನ ಕೆತ್ತನೆ ಇದೆ. ಹೊರಭಿತ್ತಿಯ ವಿವಿಧ ಶಿಖರ ಮಾದರಿಗಳಿಂದ ಅಲಂಕೃತ ಕಂಬಗಳಿಂದ ಕೂಡಿದೆ.

 

ಶಂಕರಲಿಂಗ ದೇವಸ್ಥಾನ

 

ವಿಶಾಲವಾದ ಪ್ರಾಕಾರದೊಳಗಿರುವ ಶಂಕರಲಿಂಗ ದೇವಾಲಯ ಗರ್ಭಗೃಹ, ಅಂತರಾಳ, ನವರಂಗ, ಸಭಾಮಂಟಪ, ಪಂಚಶಿಖರಗಳಿಂದ ಕೂಡಿರುವ ಈ ಗುಡಿಯ ಶಿಖರಗಳು ಎತ್ತರವಾಗಿದ್ದು, ದ್ರಾವಿಡ ಶೈಲಿಯಲ್ಲಿವೆ. ನವರಂಗದ ಒಳಭಾಗದಲ್ಲಿ ಮೊಗಸಾಲೆ ಇದೆ. ಗರ್ಭಗೃಹದಲ್ಲಿ ವೆಂಕಟೇಶ್ವರ ಮೂರ್ತಿ ಇದೆ. ಗುಡಿಯ ಆವರಣದಲ್ಲಿ ಗೋವಿಂದರಾಜ, ವರಾಹ, ಹರಿಹರೇಶ್ವರ ಗುಡಿಗಳಿವೆ.

 

ಪತ್ರೀವನ:

ಗುಡ್ಡದ ಇಳಿಜಾರಿನಲ್ಲಿ ಪತ್ರಿವನವಿದ್ದು, ಇದರ  ಆವರಣದಲ್ಲಿ ಪಂಚಗ್ರಹ ಪೀಠದ ಪ್ರಭು ಸಿದ್ದೇಶ್ವರ ಹಾಗೂ ಅಜ್ಜಪ್ಪನ ಗುಡಿಗಳಿವೆ.

 

ವೆಂಕಟೇಶ್ವರ ದೇವಸ್ಥಾನ:

ಕ್ರಾಂತಿಯ ಕಿಡಿ ಹೊತ್ತಿಸಿದ ನಾಡು ನರಗುಂದ ಅಂತಹ ಕಿಡಿಯನ್ನು ಹೊತ್ತಿಸಿದ ಬ್ರಿಟಿಷರ ವಿರುದ್ಧ ಬಂಡಾಯವೆದ್ದ ಅರಸ ಬಾಬಾಸಾಹೇಬ ಭಾವೆ ಅವರ ಪೂರ್ವಜರು ತಮ್ಮ ಆಡಳಿತಾವಧಿಯಲ್ಲಿ ತಿರುಪತಿ ತಿರುಮಲ ವೆಂಕಟೇಶ್ವರ ಮಾದರಿಯಲ್ಲೇ ನರಗುಂದ ಸಂಸ್ಥಾನದಲ್ಲಿ ೨೯೨ ವರ್ಷಗಳ ಹಿಂದೆ ವೆಂಕಟೇಶ್ವರ ದೇವಸ್ಥಾನವನ್ನು ನಿರ್ಮಿಸಿದರು.

ತಿರುಪತಿ ತಿರುಮಲ ವೆಂಕಟೇಶ್ವರ ನರಗುಂದ ಸಂಸ್ಥಾನದ ಅರಸ ಭಾವೆ ಅವರ ಆರಾಧ್ಯ ದೇವರು. ಬಾಬಾಸಾಹೇಬರ ತಾತ ದಾದಾಜಿರಾವ ಭಾವೆ ಪ್ರತಿವರ್ಷ ತಮ್ಮ ಸಾವಿರಾರು ಸೈನಿಕರೊಂದಿಗೆ ತಿರುಪತಿಗೆ ತೆರಳಿ ನವರಾತ್ರಿ ಉತ್ಸವದಲ್ಲಿ ಪಾಲ್ಗೊಳ್ಳುವುದು ಸಂಪ್ರದಾಯ. ದಾದಾಜಿರಾವ ಭಾವೆ ತಿರುಪತಿ ದರ್ಶನ ಪಡೆದು ಹಿಂತಿರುಗುತ್ತಿದ್ದರು. ಹೀಗೆ ಭಾವೆ ಅವರ ದಂಡು ನಡೆದುಕೊಂಡು ಹೋಗುವ ಮಧ್ಯಮಾರ್ಗದಲ್ಲಿ ದರೋಡೆಕೋರರ ಲೂಟಿಗೆ ಒಳಗಾಗುತ್ತಿತ್ತು. ಇದರಿಂದ ಚಿಂತಿತರಾದ ದಾದಾಸಾಹೇಬರ ಕನಸಿನಲ್ಲಿ ತಿರುಪತಿ ದೇವರು ಪ್ರತ್ಯಕ್ಷನಾಗಿ ತಿರುಪತಿವರೆಗೂ ಬರುವ ಕಷ್ಟಬೇಡ. ಅಲ್ಲಿಯೇ ಒಂದು ದೇವಸ್ಥಾನ ನಿರ್ಮಿಸಿ ನನ್ನ ದರ್ಶನ ಪಡೆ ಎಂಬ ಆಜ್ಞೆ ನೀಡಿದರು. ಇದನ್ನು ಪರಿಪಾಲಿಸಿದ ದಾದಾಜಿರಾವ ಭಾವೆ ನರಗುಂದ ಗುಡ್ಡದ ಪಕ್ಕದಲ್ಲಿಯೇ ತಿರುಪತಿ ತಿರುಮಲ ಮಾದರಿಯಲ್ಲೇ ಕ್ರಿ.ಶ. ೧೭೧೦ ರಲ್ಲಿ ದೇವಸ್ಥಾನ ನಿರ್ಮಿಸಿದರು ಎಂಬುದು ಪ್ರತೀತಿ.

ಇಂತಹ ಐತಿಹಾಸಿಕ ಹಿನ್ನಲೆಯುಳ್ಳ ಶ್ರೀ ದೇವಸ್ಥಾನದಲ್ಲಿ ಕಳೆದ ೨೯೨ ವರ್ಷಗಳಿಂದ ಮೈಸೂರ ದಸರಾ ಮತ್ತು ತಿರುಪತಿ ಉತ್ಸವದಂದೆ ನರಗುಂದ ವೆಂಕಟೇಶ್ವರನ ಉತ್ಸವಕ್ಕೆ ಚಾಲನೆ ದೊರೆಯುತ್ತದೆ.

 

ಪರಮೇಶ್ವರ ಗುಡಿ:

ಪ್ರಾಚೀನ ಶಾಸನಗಳಲ್ಲಿ ಕೋಳನೂರು ಎಂದು ಉಲ್ಲೇಖಗೊಂಡಿರುವ ಕೊಣ್ಣೂರ ನರಗುಂದದಿಂದ ಈಶಾನ್ಯಕ್ಕೆ ೨೦ ಕಿ.ಮೀ. ದೂರದಲ್ಲಿ ಮಲಪ್ರಭಾ ನದಿಯ ಬಲದಂಡೆಯ ಮೇಲೆ ಇದೆ. ಬೃಹತ್ ಶಿಲಾಯುಗಕ್ಕೆ ಸೇರಿದ ಸಮಾಧಿಗಳು ಇಲ್ಲಿ ಲಭಿಸಿವೆ. ಕೊಣ್ಣೂರಿನಲ್ಲಿ ಊರ ನಡುವೆ ಇರುವ ಈಗಿನ ಪರಮೇಶ್ವರ ದೇವಾಲಯ ರಾಷ್ಟ್ರಕೂಟರ ಕಾಲದ ವಾಸ್ತುಶಿಲ್ಪಗಳಿದ್ದು, ಈ ಪರಮೇಶ್ವರ ದೇವಾಲಯವು ಮೂಲತಃ ಜೈನ ಬಸದಿ ಗರ್ಭಗುಡಿಯ ದ್ವಾರ ಮೇಲಿನ ಲಲಾಟ ಬಿಂಬದಲ್ಲಿ ಜೈನ ಮೂರ್ತಿ ಇದೆ. ಪರಮೇಶ್ವರ ಗುಡಿ ನಕ್ಷತ್ರಾಕಾರದ ತಳವಿನ್ಯಾಸವುಳ್ಳ ರಾಜ್ಯದ ಅತ್ಯಂತ ಪ್ರಾಚೀನ ಉದಾಹರಣೆಯಾಗಿದೆ. ಇದು ಪೂರ್ವಾಭಿಮುಖವಾಗಿದ್ದು, ಸುಮಾರು ೨೭೧೧ ಚದುರ ಮೀಟರ ವಿಸ್ತಾರವಾಗಿದೆ. ಗರ್ಭಗೃಹ ಅಂತರಾಳ, ಸಭಾಮಂಟಪ, ಮತ್ತು ಮುಖಮಂಟಪದಿಂದ ಕೂಡಿದ  ಈ ದೇವಾಲಯದ ವಾಸ್ತುಶಿಲ್ಪ ಲಕ್ಷಣದಲ್ಲಿ ಅತ್ಯಂತ ವಿಶೇಷವಾದುದೆಂದರೆ ಅದರ ಗರ್ಭಗುಡಿಯ ತಳವಿನ್ಯಾಸ ಏರಿಳಿತದಿಂದ ಕೂಡಿ ಮೂರು ಬದಿಗಳಿಂದ ಒಟ್ಟು ೧೩ ಲಘು ಶಟಕೋನಗಳುಳ್ಳದಾಗಿದ್ದು, ವೃತ್ತಾಕಾರದ ನಕ್ಷತ್ರಾಕೃತಿಯಲ್ಲಿ ಬಿಡಿಸಿವೆ. ಇದನ್ನು ರಾಷ್ಟ್ರಕೂಟರ ಆಳ್ವಿಕೆಯ ಕಾಲದಲ್ಲಿ ಸೇನಾನಿ ಬಂಕೆಯನು ಕ್ರಿ.ಶ. ೮೬೦ ರಲ್ಲಿ ನಿರ್ಮಿಸಿದ್ದನು. ಮರುಳು ಮಿಶ್ರಿತ ಕೆಂಪುಕಲ್ಲನ್ನು ಬಳಸಿ ನಿರ್ಮಿಸಿದ ಈ ಗುಡಿಯು ಶಿಥಿಲಾವಸ್ಥೆಯಲ್ಲಿದೆ.