ಬ್ಯಾಂಡ್‌ ವಾದ್ಯವಾಗಿದ್ದ ಕ್ಲಾರಿಯೋನೆಟ್‌ ವಾದ್ಯವನ್ನು ಹಿಂದುಸ್ಥಾನಿ ಶಾಸ್ತ್ರೀಯ ವಾದ್ಯವನ್ನಾಗಿಸಿ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆದಿರುವ ವಿಖ್ಯಾತ ಕ್ಲಾರಿಯೋನೆಟ್‌ ವಾದಕ ಪಂ. ನರಸಿಂಹಲು ವಡವಾಟಿಯವರು ಕನ್ನಡ ನಾಡು ಕಂಡ ಅಪೂರ್ವ ಕಲಾವಿದರು. ವಿದೇಶಿ ವಾದ್ಯ ಕ್ಲಾರಿಯೋನೆಟನ್ನು ಕೈಗೆತ್ತಿಕೊಂಡು ಅದರಲ್ಲಿ ಗ್ವಾಲಿಯರ್ ಮತ್ತು ಜೈಪುರ ಘರಾಣಾ ಗಾಯನ ಅಂಶಗಳನ್ನು ಎರಕ ಹೊಯ್ದು ಕ್ಲಾರಿಯೋನೆಟ್‌ನಲ್ಲಿ ‘ವಡವಾಟಿ ಶೈಲಿ’ ಎನ್ನುವಷ್ಟರ ಮಟ್ಟಿಗೆ ಬೆಳೆದು ರಾಷ್ಟ್ರ ಖ್ಯಾತಿ ಗಳಿಸಿದ ರಾಷ್ಟ್ರೀಯ ಕನ್ನಡಿಗ.

ಪಂ. ನರಸಿಂಹಲು ಅವರು ಹುಟ್ಟಿದ್ದು (೧೯೪೨) ರಾಯಚೂರು ಹತ್ತಿರದ ವಡವಾಟಿ ಎಂಬ ಊರಲ್ಲಿ. ಅವರದು ಸಂಗೀತ ಹಾಗೂ ಧಾರ್ಮಿಕ ಪರಂಪರೆಯ ಮನೆತನ. ಅವರ ತಾಯಿ ರಂಗಮ್ಮ ಭಕ್ತಿಗೀತೆಗಳ ಸುಶ್ರಾವ್ಯ ಗಾಯಕಿ. ತಂದೆ ಬುದ್ಧಪ್ಪ ಪ್ರಸಿದ್ಧ ತಬಲಾ ವಾದಕ. ಅಜ್ಜ ಹೊಬಳಪ್ಪ ಶಹನಾಯಿ ವಾದಕರು. ಇಂತಹ ‘ಸ್ವರ ಪರಿವಾರ’ದಲ್ಲಿ ಜನಿಸಿದ ಅವರಿಗೆ ಸಂಗೀತ ರಕ್ತಗತವಾಗಿಯೇ ಬಂದಿತು. ಮೂರನೇ ತರಗತಿವರೆಗೆ ಕಲಿತು ಸಂಗೀತದತ್ತ ತಮ್ಮ ಸಂಪೂರ್ಣ ಒಲವು ಹರಿಸಿದರು.

ಆರಂಭದಲ್ಲಿ ಜೆ. ವೆಂಕಪ್ಪನವರ ಬ್ಯಾಂಡ್‌ಸೆಟ್‌ನಲ್ಲಿ ಕ್ಲಾರಿಯೋನೆಟ್‌ ನುಡಿಸುತ್ತ ಸಂಗೀತದ ದಾರಿ ತುಳಿದ ಅವರಿಗೆ ವಿಖ್ಯಾತ ಗಾಯಕ ಪಂ. ಸಿದ್ಧರಾಮ ಜಂಬಲದಿನ್ನಿಯವರ ಬಳಿ ಸಂಗೀತ ಕಲಿಯುವ ಅವಕಾಶ ದೊರೆಯಿತು. ಜಂಬಲದಿನ್ನಿಯವರ ಬಳಿ ಅವರು ಎರಡು ದಶಕಗಳ ಕಾಲ ಗ್ವಾಲಿಯರ್ ಹಾಗೂ ಜೈಪುರ ಘರಾಣೆಯ ಗಾಯನ ಕಲಿತು ಅದನ್ನು ಕ್ಲಾರಿಯೋ ನೆಟ್‌ನಲ್ಲಿ ಎರಕ ಹೊಯ್ದು ಆ ವಾದ್ಯಕ್ಕೆ ಶಾಸ್ತ್ರಿಯ ಮತ್ತು ರಾಷ್ಟ್ರೀಯ ಖ್ಯಾತಿ ತಂದುಕೊಟ್ಟರು. ವಡವಾಟಿಯವರ ಸಂಗೀತ ತಪ್ಪಸ್ಸಿನ ಫಲವಾಗಿ ಬ್ಯಾಂಡ್‌ಸೆಟ್‌ ವಾದ್ಯವಾಗಿದ್ದ ಕ್ಲಾರಿಯೋನೆಟ್‌ ಇಂದು ರಾಷ್ಟ್ರೀಯ ಹಿಂದುಸ್ತಾನಿ ಶಾಸ್ತ್ರೀಯ ವಾದ್ಯವಾಗಿ ನಿಂತಿದ್ದು ಅವರ ಕರ್ತೃತ್ವ ಶಕ್ತಿಗೆ ಸಾಕ್ಷಿ.

ರಾಯಚೂರು ಹಾಗೂ ಬೆಂಗಳೂರಿನಲ್ಲಿ ‘ಸ್ವರ ಸಂಗಮ ಸಂಗೀತ ವಿದ್ಯಾಲಯ’ ಸ್ಥಾಪಿಸಿ ಆಸಕ್ತರಿಗೆ ದಾನವಿದ್ಯೆ ನೀಡುತ್ತ ದೇಶದ ತುಂಬೆಲ್ಲ ಸಂಗೀತ ಕಾರ್ಯಕ್ರಮ ನೀಡುತ್ತಿರುವ ಅವರ ಕ್ಲಾರಿಯೋನೆಟ್‌ ವಾದನ ತುಂಬ ಕರ್ಣ ಮಧುರ. ತಿಳಿಯಾದ ಗಾಳಿಯಲ್ಲಿ ಸುಳಿವ ಮಧುರ ನಾದ ಲಹರಿ. ಕಠಿಣವಾದ ರಾಗಗಳನ್ನು ಅತ್ಯಂತ ಸರಳವಾಗಿ ನುಡಿಸುವ ನೈಪುಣ್ಯ. ಅವರು ನುಡಿಸುವ ಜುಗಲಬಂದಿ ವಾದನ ಕೇಳುವುದೇ ಒಂದು ಸೊಗಸು. ಕದ್ರಿ ಗೋಪಾಲನಾಥ (ಸ್ಯಾಕ್ಸೋಫೋನ್‌), ಎ.ಕೆ.ಸಿ. ನಟರಾಜ್‌ (ಕರ್ನಾಟಕೀ ಶೈಲಿಯ ಕ್ಲಾರಿಯೋನೆಟ್‌), ಡಾ. ಕಾರೈಕುಡಿ ಸುಬ್ರಹ್ಮಣ್ಯನ್‌ (ವೀಣೆ) ಹಾಗೂ ಅಮೆರಿಕದ ಪ್ರಸಿದ್ಧ ಸಂಗೀತಗಾರ ಡಾ. ವಿಲಿಯಂ ಪೊವೆಲ್‌ ಜೊತೆಗಿನ ವಾದ್ಯಗಳ ಜುಗಲಬಂದಿ ಅಪಾರ ಜನಮನ್ನಣೆ ಪಡೆದಿದೆ.

ತಮ್ಮ ಗುರು ಪಂ. ಸಿದ್ಧರಾಮ ಜಂಬಲದಿನ್ನಿ ಸ್ಮರಣಾರ್ಥ ಹಾಗೂ ಪಂ. ಪಂಚಾಕ್ಷರಿ ಗವಾಯಿಗಳ ಪುಣ್ಯ ಸ್ಮರಣೆಯ ನಿಮಿತ್ತ ಸಂಗೀತ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಸುತ್ತಾರೆ. ಆಕಾಶವಾಣಿ ಧ್ವನಿ ಪರೀಕ್ಷಾ ಆಯ್ಕೆ ಸಮಿತಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. ‘ಹಾಥಿ’ ಎಂಬ ವಿದೇಶಿ ‘ಇಂಗ್ಲೀಷ್‌’ ಚಲನಚಿತ್ರಕ್ಕೆ ಸಂಗೀತ ನಿರ್ದೇಶನ ನೀಡಿದ್ದಾರೆ. ಅಮೇರಿಕಾದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಇನ್ಸ್ಟಿಟ್ಯೂಟ್‌ ಆಫ್‌ ದಿ ಆರ್ಟ್ಸ್ ಫೆಕಲ್ಟಿಯ ಸಂದರ್ಶಕ ಸಂಗೀತ ಪ್ರಾಧ್ಯಾಪಕರಾಗಿ ಕೆಲಸ ಮಾಡಿರುವ ಪಂ. ನರಸಿಂಹಲು ವಡವಾಟಿ ಅವರಿಗೆ ಅನೇಕ ಪ್ರಶಸ್ತಿ-ಪುರಸ್ಕಾರ ಬಂದಿವೆ. ಅಂಥವುಗಳಲ್ಲಿ ಮುಂಬೈಯ ಸೂರಸಿಂಗಾರ್ ದ ‘ಸುರಮಣಿ’ ಪ್ರಶಸ್ತಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ‘ಕರ್ನಾಟಕ ಕಲಾ ತಿಲಕ’ ಪ್ರಶಸ್ತಿ (೧೯೯೨-೯೩), ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (೧೯೯೭), ಶೃಂಗೇರಿ ಶಾರದಾ ಪೀಠದ ಗುಲ್ಬರ್ಗಾ ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್‌ (೨೦೦೭) ‘ಆಸ್ಥಾನ ಸಂಗೀತ ವಿದ್ವಾನ್‌’ ಪದವಿ ಮುಂತಾದವುಗಳು ಉಲ್ಲೇಖನೀಯ.