ಜುನಾಗಡ ಪಟ್ಟಣದಲ್ಲಿ ಚಳಿಗಾಲದ ಒಂದು ದಿನ. ಬೆಳಗಿನ ಸೂರ್ಯ ತನ್ನ ಹೊಂಗಿರಣಗಳನ್ನು ಹೊರಚೆಲ್ಲುತ್ತಾ ಮೇಲೆ ಬರುತ್ತಿದ್ದ. ಚಳಿಗಾಳಿ ಚುಳ್ಳೆಂದು ಬೀಸುತ್ತಿತ್ತು. ಜನರೆಲ್ಲ ತಮ್ಮ ತಮ್ಮ ಮನೆಯ ಕಟ್ಟೆಯ ಮೇಲೆ ಕುಳಿತು ಹಲ್ಲುಕಡ್ಡಿಗಳನ್ನು ಜಗಿಯುತ್ತಾ ಬೆಳಗಿನ ಕೆಲಸದಲ್ಲಿ ತೊಡಗಿದ್ದರು. ಬಳಿಯಲ್ಲಿಯೇ ಒಂದು ಮಕ್ಕಳ ಗುಂಪು ಆಟವಾಡುತ್ತಿತ್ತು.

ಅದೇ ಸಮಯದಲ್ಲಿ ಪಕ್ಕದ ಓಣಿಯಿಂದ ಎಂಟು ವರ್ಷದ ಬಾಲಕನೊಬ್ಬ ಚಳಿಯನ್ನು ತಾಳಲಾರದೆ ನಡುಗುತ್ತ, ಕಂಬಳಿ ಹೊದ್ದುಕೊಂಡು ಎಳೆಬಿಸಿಲಲ್ಲಿ ಕೂಡುವ ಆಸೆಯಿಂದ, ’ಬ್‌ಬ್‌ಬ್‌ಬ್’ ಎಂದು ಕೂಗಿಕೊಳ್ಳುತ್ತ ಓಡಿಬಂದ. ಈ ಹುಡುಗನು ಬರುವುದನ್ನು ನೋಡಿ ಅಲ್ಲಿದ್ದ ಮಕ್ಕಳ ಗುಂಪು ’ಬ್‌ಬ್‌ಬ್’ ಎಂದು ಅಣಕಿಸುತ್ತಾ ಇವನನ್ನು ಗೇಲಿಮಾಡಿತು. ಇವನು ತನ್ನ ತೊದಲು ನುಡಿಯಿಂದಲೇ ಅವರನ್ನು ಬಯ್ಯತೊಡಗಿದ. ಆ ಮಕ್ಕಳಿಗೆ ಮತ್ತಷ್ಟು ಉತ್ಸಾಹ ಉಂಟಾಗಿ ಇನ್ನೂ ಹೆಚ್ಚು ಗೇಲಿ ಮಾಡಿದರು. ಹುಡುಗ ಅತ್ತ. ಅವನ ಅಜ್ಜಿ ಜೈ ಕುವರ್ ಬಾ, ಕೈಯಲ್ಲಿ ಪೊರಕೆಯನ್ನು ಹಿಡಿದುಕೊಂಡೇ ಹೊರಗೆ ಬಂದಳು. ಅಜ್ಜಿಯನ್ನು ನೋಡಿ ಮಕ್ಕಳ ಗುಂಪು ಕಾಲಿಗೆ ಬುದ್ಧಿ ಹೇಳಿತು.

ಸಾಧುವಿನ ಕೃಪೆ

ಅಜ್ಜಿ ತನ್ನ ಮುದ್ದು ಮೊಮ್ಮಗನನ್ನು ಸಮಾಧಾ ಮಾಡುತ್ತಾ ಕೈಹಿಡಿದು ಮನೆಯೊಳಗೆ ಕರೆದುಕೊಂಡು ಹೋದಳು. ಹುಡುಗನ ಸ್ಥಿತಿ ನೋಡಿ ತುಂಬಾ ಕನಿಕರದಿಂದ ’ದೇವರೆ, ಈ ನನ್ನ ಮುದ್ದು ನರಸಿಂಹನಿಗೆ ಎಂಟು ವರ್ಷವಾದರೂ ಇನ್ನೂ ಮಾತು ಬರಲಿಲ್ಲವಲ್ಲಾ’ ಎಂದು ತನ್ನ ದುಃಖವನ್ನು ಈಶ್ವರನಲ್ಲಿ ತೋಡಿಕೊಂಡಳು. ಆ ತಬ್ಬಲಿ ಮಗುವಿಗಾಗಿ ಆ ಮುದುಕಿ ಎಷ್ಟೋ ಸೇವೆಗಳನ್ನು, ಯಾತ್ರೆಗಳನ್ನು ಕೈಗೊಂಡಿದ್ದಳು. ಕಂಡ ಕಂಡ ದೇವರಿಗೆಲ್ಲಾ ಹರಕೆ ಹೊತ್ತಿದ್ದಳು. ಮಂತ್ರ, ಯಂತ್ರ, ತಂತ್ರ ಇತ್ಯಾದಿ ಅನೇಕ ಉಪಾಯಗಳನ್ನೂ ಮಾಡಿಸಿದ್ದಳು. ಯಾವುದರಿಂದಲೂ ಏನೂ ಆಗಿರಲಿಲ್ಲ. ಜೈಕುವರ್ ಬಾ ದಿನವೂ ಮೊಮ್ಮಗನನ್ನು ಕರೆದುಕೊಂಡು ಈಶ್ವರನ ಗುಡಿಗೆ ಹೋಗುತ್ತಿದ್ದಳು. ಒಮ್ಮೆ ಅಲ್ಲಿಗೆ ’ಗಿರ್‌ನಾ‌ರ್’ ಎಂಬ ಕ್ಷೇತ್ರದಿಂದ ಮಹಾನುಭಾವನಾದ ಒಬ್ಬ ಸಾಧು ಬಂದಿರುವುದಾಗಿ ತಿಳಿಯಿತು. ಊರ ಜನರೆಲ್ಲಾ ಹೋಗಿ ಆತನ ಆಶೀರ್ವಾದವನ್ನು ಪಡೆದು ಹಿಂದಿರುಗತ್ತಿದ್ದರು. ಈ ಸುದ್ದಿ ತಿಳಿದು ಜೈಕುವರ್ ಬಾ, ಹಣ್ಣುಕಾಯಿ, ಹೂಮಾಲೆ ಎಲ್ಲವನ್ನೂ ತೆಗೆದುಕೊಂಡು ಹೊರಟಳು.ಅಲ್ಲಿ ಒಂದು ದೊಡ್ಡ ಜಾತ್ರೆಯಂತೆ ಜನರು ಸೇರಿದ್ದರು. ಹಿಂದಿರುಗುವವರು ಆ ಮಹಾನುಭಾವನ ಮಹಿಮೆಯನ್ನು ಹೊಗಳುತ್ತಿದ್ದರು. ಇಷ್ಟು ದೊಡ್ಡ ವ್ಯಕ್ತಿಯ ದರ್ಶನ ಮಾಡಲು ಅವಕಾಶ ಸಿಕ್ಕಿದ್ದು ತಮ್ಮ ಪುಣ್ಯ ಎಂದೇ ಎಲ್ಲರೂ ತಿಳಿದಿದ್ದರು.

ಜನರ ಗಲಾಟೆಯೆಲ್ಲಾ ಕಡಿಮೆಯಾದ ಮೇಲೆ ಮುದುಕಿ ತನ್ನ ಮೊಮ್ಮಗನೊಂದಿಗೆ ಅವನ ಪಾದ ಮುಟ್ಟಿ ನಮಸ್ಕರಿಸಿದಳು. ಮಗುವಿನ ಕೈಯಿಂದಲೇ ಆ ಸಾಧು ಮಹಾರಾಜನಿಗೆ ಹೂವಿನ ಹಾರ ಅರ್ಪಿಸಿದಳು. ಮಗುವಿನ ಮುಖವನ್ನು ನೋಡಿದ ಆ ಮಹಾನುಭಾವ ಮಗುವನ್ನು ಹತ್ತಿರ ಕರೆದು ಒಂದು ನಿಮಿಷ ಚೆನ್ನಾಗಿ ನೋಡಿದ. ಮಗುವಿನ ತಲೆಯಮೇಲೆ ಕೈಯಿಟ್ಟು ಅವನ ಬಾಯಿಯಲ್ಲಿ ಒಂದು ತುಳಸಿ ದಳ ಹಾಕಿದ ಅನಂತರ ಮಗುವಿಗೆ ಹೇಳಿದ, “ಮಗು, ಈಗ ಹೇಳು, ರಾಧಾಕೃಷ್ಣ ಕೀ ಜೈ” ಎಂದು ಕೂಡಲೇ ಆ ಹುಡುಗ “ರಾಧಾಕೃಷ್ಣ ಕೀ ಜೈ’ ಎಂದು ಜೋರಾಗಿ ಕೂಗಿ ಹೇಳಿಬಿಟ್ಟ. ಅದೇ ರೀತಿ ಸಾಧು ಮೂರು ಸಲ ಹೇಳಿಸಿದ. ಮಗು ಮೂರು ಸಲವೂ ಹೆಚ್ಚು ಗಟ್ಟಿಯಾಗಿ, ಸ್ಪಷ್ಟವಾಗಿ ’ರಾಧಾಕೃಷ್ಣ ಕೀ ಜೈ’ ಎಂದು ಹೇಳಿತು. ನೆರೆದಿದ್ದ ಜನರಿಗೆಲ್ಲಾ ಮಿತಿಮೀರಿದ ಆಶ್ಚರ್ಯವಾಯಿತು. ಆ ಸಾಧುವಿನ ಮೇಲಿನ ವಿಶ್ವಾಸ, ಪ್ರೀತಿ ಮತ್ತಷ್ಟು ಹೆಚ್ಚಾಯಿತು. ಅಜ್ಜಿಗಂತೂ ಹಿಡಿಸಲಾರಂತಹ ಆನಂದವಾಯಿತು. ಓಣಿಯ ಮಕ್ಕಳಿಗೆಲ್ಲ ಸಿಹಿತಿಂಡಿಯನ್ನು ಹಂಚಿದಳು. ಅಂದಿನಿಂದ ಆ ಹುಡುಗ ಎಲ್ಲರಂತೆ ಮಾತಾಡಲು ಕಲಿತ.

ಹೀಗೆ ನರಸೀ ಮೆಹತಾ ದೇವರ ಕೃಪೆಯನ್ನು ಪಡೆದವನು ಎಂದು ಭಕ್ತರು ಹೇಳುತ್ತಾರೆ.

ಬಾಲ್ಯ

ಗುಜರಾತಿನ ಅತಿಶ್ರೇಷ್ಠ ಭಗವದ್ಭಕ್ತನಾದ, ವೈಷ್ಣವ ಶ್ರೇಷ್ಠನಾದ, ನರಸಿಂಹ ಮೆಹತಾ ಹುಟ್ಟಿದ್ದು ಸೌರಾಷ್ಟ್ರದ ಜುನಾಗಡ ಪಟ್ಟಣದ ಬಳಿ ತಳಾಜಾ ಗ್ರಾಮದಲ್ಲಿ, ಸುಮಾರು ೪೨೫ ವರ್ಷಗಳ ಹಿಂದೆ, ಎಂದರೆ ೧೫೪೦-೫೦ರ ಸಮಯದಲ್ಲಿ. (ಅವರು ೧೪೧೪ ರಿಂದ ೧೪೮೦ರ ಒಳಗೆ ಇದ್ದಿರಬೇಕು ಎಂದೂ ಕೆಲವರು ಹೇಳುತ್ತಾರೆ.) ಅಗ ದೆಹಲಿಯಲ್ಲಿ ಹುಮಾಯೂನ್ ಬಾದಷಹನ ಆಳ್ವಿಕೆ. ಆತನ ಅಧೀನನಾಗಿ ಜುನಾಗಡದಲ್ಲಿ ರಾವ್ ಮಾಂಡಲೀಕ ಎಂಬಾತ ರಾಜ್ಯವಾಳುತ್ತಿದ್ದ. ’ಮೆಹತಾ’ ಮನೆತನ ಜುನಾಗಡದಲ್ಲಿ ಪ್ರತಿಷ್ಠಿತವಾದದ್ದು.

ನರಸಿಂಹನ ತಂದೆಯ ಹೆಸರು ಕೃಷ್ಣ ದಾಮೋದರ; ತಾಯಿಯ ಹೆಸರು ಲಕ್ಷ್ಮೀಗೌರಿ. ಇವರಿಬ್ಬರೂ ನರಸಿಂಹನು ಚಿಕ್ಕವನಿರುವಾಗಲೇ ತೀರಿಕೊಂಡರು. ಆದ್ದರಿಂದ ನರಸಿಂಹ ಮತ್ತು ಅಣ್ಣ ವಂಶೀಧರ ಅಜ್ಜಿಯ ಪಾಲನೆ ಪೋಷಣೆಯಲ್ಲಿಯೇ ಬೆಳೆದರು. ವಂಶೀಧರ ಸಾಕಷ್ಟು ದೊಡ್ಡವನೇ ಆದ್ದರಿಂದ ಅಜ್ಜಿಯೇ ಅವನ ಮದುವೆಯನ್ನು ಮಾಡಿದ್ದಳು. ಅವನ ಹೆಂಡತಿ ದುರಿತ ಗೌರಿ ನರಸಿಂಹನಿಗೆ ಮಾತು ಬಂದ ಮೇಲೆ ಅಜ್ಜಿಯು ಇವನಿಗೆ ವಿದ್ಯೆಯನ್ನು ಕಲಿಸಲು ತುಂಬ ಪ್ರಯತ್ನ ಮಾಡಿದಳು. ಆದರೆ ಅದು ಸಾಧ್ಯವಾಗಲಿಲ್ಲ. ಆತ ಕೊನೆಗೂ ಅವಿದ್ಯಾವಂತನಾಗಿ ಉಳಿದ ಎನ್ನಬಹುದು. ಆದರೂ ಆತ ಎಂತಹ ಮಹಾಜ್ಞಾನಿಯಾದ ಎಂಬುದನ್ನು ನೋಡಿದರೆ ಪರಮಾಶ್ಚರ್ಯವಾಗದಿರದು.

ನರಸಿಂಹ ಮೆಹತಾಗಿಂತ ಮೊದಲು ಗುಜರಾತಿನ ಹಿಂದುಗಳೆಲ್ಲ ಬಹುಶಃ ಶಿವಭಕ್ತರೇ ಆಗಿದ್ದರು. ಗುಜರಾತಿನಲ್ಲಿ ವೈಷ್ಣವ ಪಂಥವನ್ನು ರೂಢಿಗೆ ತಂದವರು ಇವರೇ ಎನ್ನಲು ಅಡ್ಡಿಯಿಲ್ಲ. ೧೨ನೇ ಶತಮಾನದಿಂದ ೧೬ನೇ ಶತಮಾನದವರೆಗಿ ಮಧ್ಯಯುಗದ ಕಾಲವೆಂದರೆ ಪ್ರಪಂಚದಲ್ಲೇ ಭಕ್ತಿಪಂಥಕ್ಕೆ ಮಹಾಪೂರ ಬಂದ ಕಾಲ. ಕರ್ನಾಟಕದಲ್ಲಿಯಂತೂ ಭಕ್ತಿಪಂಥ ಪರಮಾವಧಿಗೆ ಮುಟ್ಟಿತ್ತು. ಶಂಕರಾಚಾರ್ಯ, ಬಸವೇಶ್ವರರಿಂದ ಆರಂಭವಾಗಿ ರಾಮಾನುಜ, ಮಧ್ವಾಚಾರ್ಯರಿಂದ ಪುಷ್ಟಿಗೊಂಡು ಭಕ್ತಿಪಂಥ ಬೆಳೆದಿತ್ತು. ಪುರಂದರದಾಸ, ಕನಕದಾಸರಿಂದ ಆರಂಭವಾದ ದಾಸ ಪರಂಪರೆ ಕರ್ನಾಟಕದಲ್ಲಿ ಇಂದಿಗೂ ನಡೆಯುತ್ತಿದೆ.

ಅತ್ತಿಗೆಯ ಹಗೆ

ಆ ವೇಳೆಗೆ ಅಣ್ಣ ವಂಶೀಧರ ರಾವ್ ಮಾಂಡಲೀಕರ ಅನುಗ್ರಹದಿಂದ ನಗರದ ಕೊತವಾಲನಾಗಿದ್ದ. ಇದರಿಂದ ಜೈ ಕುವರ್ ಬಾಗೆ ಸಂಸಾರ ನಡೆಸುವುದು ಸುಗಮವಾಯಿತು. ಆದರೂ ಅವಳಿಗೆ ಬಾಯಿ ಇಲ್ಲದ ನರಸಿಂಹನದೇ ದೊಡ್ಡ ಚಿಂತೆಯಾಗಿತ್ತು. ಸಾಧುವಿನ ಅನುಗ್ರಹದಿಂದ ಆ ಕೊರತೆಯೂ ಕಳೆದಿದ್ದರಿಂದ ಅವಳ ಆನಂದಕ್ಕೆ ಪಾರವೇ ಇರಲಿಲ್ಲ. ಆದರೂ ವಂಶೀಧರನ ಹೆಂಡತಿ, ದುರಿತ ಗೌರಿ ದುಷ್ಟ ಸ್ವಭಾವದವಳಾದ್ದರಿಂದ ಸಂಸಾರದಲ್ಲಿ ಆಗಾಗ್ಗೆ ಕಿರುಕುಳ ಏಳುತ್ತಿದ್ದಿತು. ’ತನ್ನ ಗಂಡನ ಗಳಿಕೆಯಿಂದಲೇ ಸಂಸಾರ ನಡೆದಿದೆ’ ಎಂದು ದುರಿತ ಗೌರಿಗೆ ಅಹಂಕಾರ.

ನರಸಿಂಹನಿಗೆ ಹತ್ತು ವರ್ಷ ತುಂಬುವುದರಲ್ಲಿ ಅವನ ಅಜ್ಜಿ, ರೂಪ ಗುಣವುಳ್ಳವಳಾದ, ಆದರೆ ತಾಯಿ-ತಂದೆ ಇಲ್ಲದ ಮಾಣಿಕ ಗೌರಿ ಎಂಬ ಹುಡುಗಿಯನ್ನು ತಂದು ಮದುವೆ ಮಾಡಿದಳು. ವಂಶೀಧರನಿಗೇನೋ ತಮ್ಮ ಅಚ್ಚುಮೆಚ್ಚಿನವನಾಗಿದ್ದರೂ ನರಸಿಂಹ ಮತ್ತು ಆತನ ಹೊಸ ಹೆಂಡತಿ ದುರಿತ ಗೌರಿಯ ಆಕ್ರೋಶಕ್ಕೆ ಗುರಿಯಾಗಬೇಕಾಯಿತು. ಗಳಿಕೆಯಿಲ್ಲದೆ ಕೂತು ತಿನ್ನುತ್ತಿದ್ದ ಮೈದುನ; ಈಗ ಅವನ ಹೆಂಡತಿಯೂ ಬಂದದ್ದು ದುರಿತ ಗೌರಿಗೆ ಇನ್ನೂ ಹೆಚ್ಚಿನ ಹೊಟ್ಟೆಕಿಚ್ಚು ಮತ್ತು ಜಗಳಕ್ಕೆ ಕಾರಣವಾಯಿತು. ತಮ್ಮನಿಗೆ ಮಾತು ಬಂದ ಮೇಲೆ ಅಲ್ಪಸ್ವಲ್ಪವಾದರೂ ವಿದ್ಯೆ ಕಲಿತರೆ, ವಿದ್ಯಾವಂತರೇ ಇಲ್ಲದ ಆ ಕಾಲದಲ್ಲಿ ಆತನಿಗೆ ಒಳ್ಳೆಯ ಕೆಲಸವನ್ನು ಕೊಡಿಸಿ ಅವನ ಸಂಸಾರವೂ ಸುಖವಾಗಿರುವಂತೆ ಮಾಡಬೇಕೆಂದು ವಂಶೀಧರ ಅಪೇಕ್ಷಿಸಿದ್ದ.

ನರಸಿಂಹನನ್ನು ಪಾಠಶಾಲೆಗೆ ಕಳಿಸಿದಾಗ ಗುರುಗಳು ಏನು ಹೇಳಿದರೂ ಆತ ’ರಾಧಾಕೃಷ್ಣ’ ಎಂಬ ಪದ ಬಿಟ್ಟು ಏನನ್ನೂ ಕಲಿಯಲಿಲ್ಲ. ಇದರಿಂದ ಅಣ್ಣನಿಗೆ ತುಂಬಾ ಬೇಸರವಾಗಿ, ಇವನನ್ನು ಪಾಠಶಾಲೆಯಿಂದ ಬಿಡಿಸಬೇಕಾಯಿತು. ಅನಂತರ ಅವನನ್ನು ದನ ಕಾಯಲು, ಅವಕ್ಕೆ ಹುಲ್ಲು-ಹುರುಳಿ ಹಾಕಲು ಮತ್ತು ತನ್ನ ಕುದುರೆಯ ಚಾಕರಿ ಮಾಡಲು ಹಚ್ಚಿದ. ನರಸಿಂಹನು ಈ ಕೆಲಸಗಳನ್ನು ಬಹಳ ಸಂತೋಷದಿಂದ, ಉತ್ಸಾಹದಿಂದ ಮಾಡುತ್ತಿದ್ದ.  ಯಾವ ತಕರಾರೂ ಇಲ್ಲದೇ ಆತ ’ರಾಧಾಕೃಷ್ಣ’, ರಾಧಾಕೃಷ್ಣ’ ಎಂದು ಹಾಡುತ್ತ ಎಂತಹ ಕೆಲಸವಿದ್ದರೂ ಮಾಡಿಬಿಡುತ್ತಿದ್ದ.

ಒಂದು ದಿನ-

ನೋಡು ನೋಡುವಷ್ಟರಲ್ಲಿ ನರಸಿಂಹನಿಗೆ ಹದಿನೆಂಟು ವರ್ಷಗಳಾದವು. ಮಾಣೀಕಗೌರಿಗೆ ಕುವರ್ ಬಾಯಿ ಎಂಬ ಮಗಳು ಹುಟ್ಟಿದಳು. ಮುಂದೆ ಎರಡು ವರ್ಷಗಳಲ್ಲಿ ಕುವರ್‌ಬಾಯಿಗೆ ಒಬ್ಬ ತಮ್ಮನೂ ಹುಟ್ಟಿದ. ಅವನ ಹೆಸರು ಶ್ಯಾಮಳದಾಸ ಎಂದು. ಮೊಮ್ಮಕ್ಕಳನ್ನು ನೋಡುವ ಭಾಗ್ಯ ಬಂದದ್ದರಿಂದ ಮುದುಕಿಗೆ ಹಿಡಿಸಲಾರದಷ್ಟು ಹಿಗ್ಗು ಆಗಿತ್ತು. ಆದರೆ ಅವಳಿಗೆ ಈಗ ವಯಸ್ಸು ತೊಂಬತ್ತರ ಹತ್ತಿರ ಬಂದಿತ್ತು. ಮೊಮ್ಮಗಳ ಮದುವೆಯನ್ನು ನೋಡಿ ಸಾಯಬೇಕೆಂದು ಹಂಬಲವಿತ್ತು. ದುರಿತ ಗೌರಿ ಇದಕ್ಕೆ ಸ್ವಾಭಾವಿಕವಾಗಿಯೇ ಕಲ್ಲು ಹಾಕುತ್ತಿದ್ದಳು. ಇದು ಮುದುಕಿಯ ಹೆಚ್ಚಿನ ದುಃಖಕ್ಕೆ ಕಾರಣವಾಗುತ್ತಿತ್ತು.

ಕೊನೆಯಲ್ಲಿ ಮುದುಕಿ ತಾನೇ ಒಳಗಿಂದೊಳಗೆ ಹಂಚಿಕೆ ಹಾಕಿ ಗುರುತಿನವರ ಸಹಾಯದಿಂದ ಮೊಮ್ಮಗಳಿಗೆ ವರ ಹುಡುಕಿದರು. ಶ್ರೀರಂಗ ಮೆಹತಾ ಎಂಬುವರ ಮಗ ವಸಂತರಾಯ್ ಎಂಬಾತನೇ ವರ. ಮುದುಕಿಯ ಹುಮ್ಮಸ್ಸಿನಿಂದಾಗಿ ಕುವರಬಾಯಿಯ ಮದುವೆ ಸಾಂಗವಾಗಿ ನೆರವೇರಿಗು. ಮೊಮ್ಮಗಳ ಮದವೆಯಾದ ಹೊಸತರಲ್ಲಿ ಮುದುಕಿ ಕಣ್ಣುಮುಚ್ಚಿದಳು.

ಮುದುಕಿಯ ಹತೋಟಿ ತಪ್ಪಿದ್ದರಿಂದ ದುರಿತ ಗೌರಿಗೆ ಪರೆ ಉಚ್ಚಿದಂತಾಯಿತು. ಹೆಚ್ಚು ವಿಷಕಾರಲಾರಂಭಿಸಿದಳು. ನರಸಿಂಹ ಮತ್ತು ಅವನ ಹೆಂಡತಿಗೆ ಬೆಂಬಲವಿಲ್ಲದಾಯಿತು. ಪತ್ನಿಯ ಎದುರು ಅಣ್ಣನ ಕೈಯೂ ನಡೆಯುತ್ತಿರಲಿಲ್ಲ. ಹೀಗಾಗಿ ದಿನ ಬೆಳಗಾದರೆ ಮನೆಯಲ್ಲಿ ಬೈಗುಳ ಕೇಳಬೇಕಾಗಿತ್ತು. ಎಲ್ಲದಕ್ಕೂ ಈ ದಂಪತಿಗಳು ತುಟಿ ಎರಡು ಮಾಡದೆ ಎದೆಗೊಡುತ್ತಿದ್ದರು. ಈ ವಿಷಯದಲ್ಲಿ ಕೃಷ್ಣಭಕ್ತನಾದ ಪತಿಗೆ ಭಗವದ್ಭಕ್ತಳಾದ ಮಾಣಿಕ ಗೌರಿಯೂ ನೆರವಾಗಿರುತ್ತಿದ್ದಳು. ನರಸಿಂಹನಿಗೆ ಅವಳದೇ ಒಂದು ದೊಡ್ಡ ಆಸರೆ. ಬಂದ ಕಷ್ಟಗಳೆಲ್ಲ ಭಗವಂತನ ಇಚ್ಛೆ ಎಂದು ಗಂಡ-ಹೆಂಡತಿ ಸಹಿಸಿದರು.

ಒಂದು ಸಲ ವಂಶೀಧರ ಪರ ಊರಿಗೆ ಹೋದಾಗ, ನರಸಿಂಹ ಅಡವಿಯಿಂದ ಹುಲ್ಲು ಹೊರೆ ಹೊತ್ತುಕೊಂಡು ಬಂದು, ಉಸ್ಸೆಂದು ಹೊರೆ ಇಳಿಸಿ ಕುಳಿತ. ಅಂದು ಸಂಜೆ ದುರಿತ ಗೌರಿಯೇ ಉಣಬಡಿಸಿದಳು. ಎರಡು ದಿನದ ತಂಗಳ ರೊಟ್ಟಿ ಮತ್ತು ಹಳಸಿದ ಹುಳಿಯನ್ನು ಎದುರಿಗೆ ಅಪ್ಪಳಿಸಿದಳು. ನರಸಿಂಹ ತುಟಿ ಪಿಟಕ್ ಎನ್ನದೆ, ಎದುರಿಗೆ ಬಂದದ್ದೇ ಪ್ರಸಾದ ಎಂದು ಭಾವಿಸಿ ಉಂಡೆದ್ದ. ಆದರೆ ಹೊಟ್ಟೆ ಕೇಳೀತೆ? ವಾಂತಿ ಬರುವ ಹಾಗೆ ಆಯಿತು. ಅಷ್ಟಕ್ಕೇ ಅತ್ತಿಗೆಯ ಸಿಟ್ಟು ನೆತ್ತಿಗೇರಿತು. ರೋಷದಿಂದ ಆರ್ಭಟಿಸಿದಳು. “ಇವನಿಗೆಷ್ಟು ದುರಹಂಕಾರ! ಇವನ ಭಕ್ತಿಯೆಲ್ಲ ಬರಿ ತೋರಿಕೆ” ಎಂದು ಬಾಯಿಗೆ ಬಂದಂತೆ ಚೀರಾಡಿದಳು. ಇಷ್ಟು ಕೂಗಾಡಿದರೂ ನರಸಿಂಹ ಮಾತ್ರ ಮರುಮಾತಾಡದೆ ಮೌನವಾಗಿದ್ದ. ಇದರಿಂದ ಅವಳ ಮಾತಿನ ಮಳೆ ಇನ್ನೂ ಜೋರಾಗಿ ಸುರಿಯಹತ್ತಿತು.

ಬೆಳಕು ಕಂಡ

ಈ ಮಾತಿನ ಮಳೆ ಬೀಳುತ್ತಿರುವಾಗಲೇ ಊರಿಗೆ ಹೋಗಿದ್ದ ವಂಶೀಧರ ಮನೆಗೆ ಬಂದ. ಅವನು ಬಂದೊಡನೆ ದುರಿತ ಗೌರಿ ಮೈದುನ ಮತ್ತು ವಾರಗಿತ್ತಿಯ ಮೇಲೆ ಇಲ್ಲಸಲ್ಲದ ಆರೋಪ ಹೊರಸಿದಳು. ಕೊನೆಗೆ, “ಇಂದಿನಿಂದ ಈ ಮನೆಯಲ್ಲಿ ನಾನಿರಬೇಕು; ಇಲ್ಲವಾದರೆ ನಿಮ್ಮ ತಮ್ಮಿನಿರಬೇಕು. ಇಬ್ಬರಲ್ಲಿ ಒಬ್ಬರು ಈ ಮನೆಯಿಂದ ಹೊರಬೀಳಲೇಬೇಕು” ಎಂದು ಖಡಾ ಖಂಡಿತವಾಗಿ ನುಡಿದಳು. ಪಾಪ! ವಂಶೀಧರನಿಗೆ ದಿಕ್ಕುತೋಚದಾಯಿತು.  ಕೊನೆಗೆ ನಿರ್ವಾಹವಿಲ್ಲದೆ ತಮ್ಮನನ್ನೇ ಮನೆಯಿಂದ ಹೊರಹಾಕಿದ.

ಆದರೆ ಪಾಪ! ಈ ಬಡಪಾಯಿ‌ಗೆ ಏನೂ ತೋಚದಂತಾಯಿತು. ಅಣ್ಣನ ಮಾತು ಮೀರಲಾರದೆ ಮನೆಯಿಂದ ಹೊರಗೆ ಬಂದು ಜಗುಲಿಯ ಮೇಲೆ ಬಹಳ ಹೊತ್ತು ಕಾದು ಕುಳಿತೇ ಕುಳಿತ. ಅವನಿಗೆ ’ನನ್ನ ಅಣ್ಣ ನನ್ನನ್ನು ಎಂದೂ ಈ ರೀತಿ ಹೊರದೂಡಲಾರ, ಅವನ ಮನಸ್ಸು ನನಗೆ ಗೊತ್ತು; ಸಿಟ್ಟನಲ್ಲಿ ಈ ರೀತಿ ಮಾತಾಡಿದರೆ, ಕೆಲವು ಸಮಯದನಂತರ ಶಾಂತನಾಗಬಹುದು. ಅಣ್ಣನಿಗಾಗಿ ನಾನು; ನನಗಾಗಿ ಅಣ್ಣ. ಆದ್ದರಿಂದ ಅವನು ನನ್ನನ್ನು ಕರೆದಲ್ಲಿ ಅವನ ಮಾತಿಗೆ ಬೆಲೆಕೊಡಲೇ ಬೇಕು’ ಎಂದು ಏನೇನೋ ಆಲೋಚಿಸುತ್ತಿದ್ದ. ಆದರೆ ಇವನ ಆಸೆ ನೆರವೇರಲಿಲ್ಲ. ಸಂಜೆಯಾಯಿತು; ರಾತ್ರಿಯೂ ಆಯಿತು; ಅರ್ಧರಾತ್ರಿಗೂ ಬಂತು. ಅವನ ಬಳಿ ಯಾರೂ ಸುಳಿಯಲಿಲ್ಲ; ಹೆದರಿ ನೀರಾಗಿ ಹೋದ ಹೆಂಡತಿಯಾಗಲಿ ಮಗುವಾಗಲಿ ಯಾರೂ ಹತ್ತಿರ ಬರಲಿಲ್ಲ.

ಅಂದು ಹಣ್ಣಿಮೆಯ ದಿನ; ಚಂದ್ರನು ಬೆಳ್ಳಿ ಬೆಳಕನ್ನು ಚೆಲ್ಲುತ್ತಿದ್ದ. ನರಸೀ ಮೆಹತಾ ಕೂತಲ್ಲಿ ಬೆಳದಿಂಗಳೂ ಕಣ್ಣು ಕೋರೈಸಿತು. ಅವನಿಗೆ ಆ ಬೆಳಕನ್ನು ಕಂಡು ಏನೋ ಹೊಳೆದಂತಾಗಿ ಕಟ್ಟೆಯಂದಿಳಿದು ’ರಾಧಾಕೃಷ್ಣ, ರಾಧಾಕೃಷ್ಣ’ ಎಂದು ಹೇಳುತ್ತಾ ತನ್ನ ಕಾಲು ಎಳೆದತ್ತ ನಡೆದುಕೊಂಡು ಹೊರಟ. ಪೂರ್ಣ ಬೆಳಗಾಗುವವರೆಗೂ ತಾನು ಎತ್ತ ಹೊರಟಿರುವೆನೆಂಬ ವಿಚಾರವೂ ಇಲ್ಲದೆ ದಾರಿ ಸಾಗಿದ್ದ. ಹೀಗೆ ಎಷ್ಟೋ ದೂರ ನಡೆದು ಬಂದ ನಂತರ, ದೂರದಲ್ಲಿ ಇವನಿಗೊಂದು ಹಳೆಯದಾದ ಮುರುಕು ಶಿವಮಂದಿರ ಕಂಡಿತು. ಅಲ್ಲಿ ಹೋಗಿ ಕುಳಿತು ತನ್ನ ಸೋತ ಕಾಲುಗಳಿಗೆ ವಿಶ್ರಾಂತಿ ಕೊಟ್ಟ. ತನ್ನ ಹೊಸ ಬಾಳನ್ನು ರಾಧಾಕೃಷ್ಣ ನಾಮಸ್ಮರಣೆ ಮಾಡುತ್ತಲೇ ಆ ಮುರುಕು ಮಂದಿರದಲ್ಲಿ ಆರಂಭಿಸಿದ. ಮುಂದೆ ಆ ಮಂದಿರವನ್ನು ತನ್ನ ದಿವ್ಯ ಮಂದಿರವನ್ನಾಗಿ ಮಾಡಿಕೊಂಡ.

ಎಷ್ಟೋ ತಿಂಗಳು ಕಳೆದವು. ತನ್ನ ಪತಿಯ ಸಮಾಚಾರ ತಿಳಿಯದ ಮಾಣಿಕ ಗೌರಿ, ಪತಿಯ ವಿರಹವನ್ನು ತಾಳಿಕೊಂಡು, ಅತ್ತಿಗೆಯ ಕಿರುಕುಳವನ್ನು ಎದುರಿಸಲೇ ಬೇಕಾಗಿತ್ತು. ಈ ಎಲ್ಲ ಕಷ್ಟಗಳನ್ನು ತನ್ನ ಕಂದನಿಗಾಗಿ ಸಹಿಸಬೇಕಾಗಿತ್ತು. ಈಗಂತೂ ವಾರಗಿತ್ತಿಯ ಕೆಟ್ಟತನಕ್ಕೆ ಮಿತಿಯೇ ಇರಲಿಲ್ಲ. ಮಾಣಿಕ ಗೌರಿಯ ಜೀವನ ಈ ರೀತಿ ನಡೆದಿತ್ತು.

’‘ನನ್ನ ಜೊತೆಯಲ್ಲಿರು’’

ಅತ್ತ ನರಸಿಂಹ ಮೆಹತಾ ಹಳೆಯ ಮುರುಕು ದೇವಾಲಯವನ್ನೇ ತನ್ನ ಅರಮನೆ ಎಂದು ತಿಳಿದು ಅಲ್ಲಿ ತನ್ನ ಭಕ್ತಿಯ ಭಜನೆ, ಪೂಜೆ, ಜಪತಪಗಳಿಂದ ಆ ದೇವಾಲಯಕ್ಕೆ ಪುನಃ ಒಂದು ಹೊಸ ಕಳೆ ಕಟ್ಟಿ, ಅದರ ಪುನರುದ್ಧಾರ ಮಾಡಿದ.

ಅಲ್ಲಿ ಅವನಿಗೊಂದು ಮಹತ್ವದ ಅನುಭವ ಆಯಿತು ಎಂದು ಹೇಳುತ್ತಾರೆ.

 

ರಾಧಾಕೃಷ್ಣ, ರಾಧಾಕೃಷ್ಣ’ ಎನ್ನುತ್ತಾ ಹೊರಟ.

ಒಂದು ರಾತ್ರಿ ತನ್ನ ಪೂಜಾವಿಧಿಗಳನ್ನು ಮುಗಿಸಿ, ರಾಧಾಕೃಷ್ಣನ ಸ್ಮರಣೆ ಮಾಡಿ ಮಲಗಿದಾಗ ಒಂದು ಒಳ್ಳೆಯ ಕನಸು ಕಂಡ. ಆ ಕನಸಿನಲ್ಲಿ ಒಬ್ಬ ತ್ರಿಶೂಲಧಾರಿಯಾದ ಸಾಧು ಬಂದು ಕೇಳಿದ: “ನೀನು ಇಲ್ಲೇಕೆ ಇರುವಿ? ನನ್ನ ಜೊತೆಯಲ್ಲಿ ಬಾ; ನೀನು ಇರಬೇಕಾದ ಸ್ಥಳಕ್ಕೆ ಕರೆದುಕೊಂಡು ಹೋಗುವೆ” ಎಂದು ಹೇಳಿ ಇವನನ್ನು ದ್ವಾರಕಾಕ್ಕೆ ಕರೆದುಕೊಂಡು ಹೋದ. ಅಲ್ಲಿ ಇವನಿಗೆ ರಾಧಾಕೃಷ್ಣರ ರಾಸಲೀಲೆಯ ದರ್ಶನವಾಯಿತು. ’ನೀನು ಮತ್ತೆಲ್ಲಿಗೂ ಹೋಗಬೇಡ; ಸದಾ ನನ್ನ ಜೊತೆಯಲ್ಲಿರು’ ಎಂದು ಹೇಳಿದಂತಾಯಿತು. ಅಲ್ಲಿನ ಕೃಷ್ಣ ದೇವಾಲಯವನ್ನೂ ರಾಧಾಕೃಷ್ಣರ ಸುಂದರ ಮುಧಗಳನ್ನೂ ನೋಡಿ ಅತ್ಯಂತ ಆನಂದವಾಯಿತು. ಅಷ್ಟು ಹೊತ್ತಿಗೆ ನರಸೀ ಮೆಹತಾಗೆ ಎಚ್ಚರವಾಯಿತು. ಎದ್ದು ನೋಡಿದಾಗ ಇನ ತಲೆದಿಂಬಿನ ಬಳಿ ಒಂದು ಸುಂದರವಾದ ರಾಧಾಕೃಷ್ಣರ ಮೂರ್ತಿ ಕಂಡಿತು. ಕೈಗೆತ್ತಿಕೊಂಡು ಕಣ್ಣಿಗೊತ್ತಿಕೊಂಡ.

ಅಂದಿನಿಂದ ಇವನ ಜೀವನವೇ ಬದಲಾಯಿತು. ಸದಾಕಾಲ ಶ್ರೀಕೃಷ್ಣನ ಭಜನೆಯನ್ನು ಹಾಡುತ್ತ, ಕುಣಿಯುತ್ತ ಜನರಿಗೆಲ್ಲ ಶ್ರೀಕೃಷ್ಣ ಭಕ್ತಿಯ ಪ್ರಚಾರ ಮಾಡಲು ಊರೂರು ಸುತ್ತಾಡಿದ. ಒಂದು ಕೈಲಿ ರಾಧಾಕೃಷ್ಣನ ಮೂರ್ತಿ, ಮತ್ತೊಂದು ಕೈಲಿ ತಾಳ ಹಿಡಿದು, ಕಾಲಿಗೆ ಗೆಜ್ಜೆ ಕಟ್ಟಿಕೊಂಡು, ಕೃಷ್ಣನ ಭಜನೆಗಳನ್ನು ಹಾಡುತ್ತಾ ಹೊರಟ. ಹೊರಡುವಾಗ – ’ಧನ್ಯ ಭಾಭೀ ತಮೇ, ಧನ್ಯ ಮಾತಾಪಿತಾ | ಕಷ್ಟ ಅಪೀ ಮನೇ ದಯಾರೇ ಕೀಧೀ || ತಮಾರೀ ಕೃಪಾಧೀ ಹರಿಹರ ಭೇಟಿಯ | ಕೃಷ್ಣಜೀಯೇ ಮಾರೀ ಪಾರಕೀಥೀ ||” (ಅತ್ತಿಗೆ, ನೀನೆ ಧನ್ಯಳು; ಕೊಟ್ಟ ಕಷ್ಟ ಕರುಣೆಯಾಗಿ, ಹರಿಹರರ ಭೇಟಿಯಾಯಿತು. ಶ್ರೀ ಕೃಷ್ಣ ಒಲಿದ) ಎಂದು ಹಾಡಿದ.

ಅಣ್ಣನ ಮನೆ

ಹೀಗೆ ಊರೂರು ಸುತ್ತುತ್ತಾ ಒಂದು ದಿನ ಬೆಳಗಾಗುವ ಹೊತ್ತಿಗೆ ಜುನಾಗಡಕ್ಕೆ ಬಂದ. ಅವನು ಬರುವ ಸಮಯಕ್ಕೆ ಸರಿಯಾಗಿ, ಮಾಣಿಕ ಗೌರಿಯು ಪ್ರತಿದಿನದಂತೆ ಬಾಗಿಲಿಗೆ ಸಾರಿಸಿ ರಂಗೋಲಿ ಇಡುತ್ತಿದ್ದಳು. ಅವಳ ಮಗನು ಅವಳೊಂದಿಗೆ ಬಾಗಿಲಲ್ಲಿ ನಿಂತು ನೋಡುತ್ತಿದ್ದ. ಹುಡುಗ ಭಜನೆಯನ್ನೂ ಗೆಜ್ಜೆಯ ಶಬ್ದವನ್ನೂ ಕೇಳಿ ಬಾಗಿಲಿಂದ ಹೊರಬಂದು ನೋಡಿದ. ತಕ್ಷಣವೇ ತಂದೆಯ ಗುರುತು ಹಿಡಿದು, “ಅಮ್ಮಾ, ಅಪ್ಪ ಬಂದರು ಅಪ್ಪಾ!” ಎಂದು ಗಟ್ಟಿಯಾಗಿ ಕೂಗುತ್ತ ಎರಡು ಹೆಜ್ಜೆ ಮುಂದಿಟ್ಟ. ಮಾಣಿಕ ಗೌರಿ ಹಿಂದಿರುಗಿ ನೋಡಿದಳು; ಪೀತಾಂಬರಧಾರಿಯಾಗಿ, ನವಿಲುಗರಿಯ ಕರೀಟ ಹಾಕಿಕೊಂಡು, ಕೈಯಲ್ಲಿ ತಾಳ ಹಿಡಿದು ಹೆಗಲಮೇಲೆ ಕೃಷ್ಣನ ಮೂರ್ತಿಯನ್ನು ಹೊತ್ತುಕೊಂಡ, ತನ್ನ ಪತಿಯ, ಧ್ವನಿ ಕೇಳಿ ಗುರುತು ಹಿಡಿದಳು. ಅವನ ದರ್ಶನವಾದದ್ದಕ್ಕೆ ಅವಳ ಕಣ್ಣಲ್ಲಿ ಆನಂದ ಒಡಮೂಡಿತು. ಪತಿಯ ಪಾದ ಮುಟ್ಟಿ ನಮಸ್ಕರಿಸಿದಳು.

ಹುಡುಗ ಕೂಗಿದ್ದು ಕೇಳಿ, ದುರಿತಗೌರಿಗೆ ತನ್ನ ಮೈದುನ ಬಂದಿರುವನೆಂದು ಎನಸಿ, ಒಳಗಿನಿಂದಲೇ ಸಿಂಹ ಗರ್ಜನೆಯನ್ನು ಮಾಡುತ್ತಾ ಹೊರಗೆ ಬಂದಳು. ಅವನ ಅವತಾರ, ವೇಷಭೂಷಣಗಳನ್ನು ನೋಡಿ ಅವಳ ಮೈ ಮತ್ತಷ್ಟು ಉರಿಯತೊಡಗಿತು. “ಪುನಃ ಬಂದೆಯಾ ಮತ್ತೊಂದು ಅವತಾರವಾಗಿ! ನಾಟಕೀ ಸೋಗು ಹಾಕಿಕೊಂಡು ವೇಷಧರಿಸಿ ತಿರುಗಲು ನಾಚಿದೆಯಾಗುವುದಿಲ್ಲವೇ ನಿನಗೆ! ಯಾವ ಶನಿಯಾಗಿ ನಮ್ಮ ಬೆನ್ನು ಹತ್ತಿದ್ದೀಯೋ ಮಹಾರಾಯಾ!” ಎಂದು ಕೂಗಾಡಿದಳು. ಹೆಂಡತಿಯ ದರ್ಪದ ಮಾತುಗಳನ್ನು ಕೇಳಿ ಒಳಗೆ ಮಲಗಿದ್ದ ವಂಶೀಧರ ಹೊರಗೆ ಬಂದು ನೋಡಿದ. ಅಣ್ಣ ಹೊರಗೆ ಬಂದೊಡನೆ ನರಸಿಂಹ ಅಣ್ಣನ ಪಾದ ಮುಟ್ಟಿ ನಮಸ್ಕರಿಸಿದ ಹಾಗೂ ಅಣ್ಣನಿಗೆ ಹೇಳಿದ: “ಅತ್ತಿಗೆಯ ಪುಣ್ಯದಿಂದಲೇ ನನಗೆ ಈ ರೀತಿ ಕೃಷ್ಣನ ದರ್ಶನವಾಗಿ ನನ್ನ ಜೀವನ ಸಾರ್ಥಕವಾಗಿದೆ. ಈ ಸುಯೋಗ ಸಿಕ್ಕಿದ್ದಕ್ಕೆ ನನ್ನ ಪೂಜ್ಯ ಅತ್ತಿಗೆಗೆ ನಮಸ್ಕರಿಸಿ ನನ್ನ ಕೃತಜ್ಞತೆಯನ್ನು ಅರ್ಪಿಸುತ್ತೇನೆ” ಎಂದು ಅತ್ತಿಗೆಯ ಪಾದಮುಟ್ಟಿ ಕಣ್ಣಿಗೆ ಒತ್ತಿಕೊಂಡ.

ಅವಳು ಮಾತ್ರ ತಿರಸ್ಕಾರದಿಂದ ಕಾಲು ಕೊಸರಿಕೊಂಡಳು.

ಅಲ್ಲೇ ನಿಂತು ಇದನ್ನು ನೋಡುತ್ತಿದ್ದ ಅಣ್ಣನಿಗೆ ತಮ್ಮನ ಮೇಲೆ ಕನಿಕರವುಟಾಗಿ ಪುನಃ ತಮ್ಮನಿಗೆ ಹೇಳಿದ: “ನೋಡು ನರಸೀ, ಈ ರೀತಿ ಇಷ್ಟು ಸುಲಭವಾಗಿ ಎಲ್ಲರಿಗೂ ದೇವರ ದರ್ಶನವಾಗುತ್ತಿದ್ದರೆ ಇನ್ನು  ಜಗತ್ತಿನಲ್ಲಿ ಮತ್ತೇನು ಬೇಕು? ಈಗಲಾದರೂ ನೀನು ನನ್ನ ಮಾತನ್ನು ಕೇಳಿ ನಡೆ. ಎರಡು ಮಕ್ಕಳ ತಂದೆಯಾದೆ. ನಿನಗೆ ಒಂದು ಒಳ್ಳೆಯ ಕೆಲಸ ಕೊಡಿಸುತ್ತೇನೆ. ಹೆಂಡತಿ ಮಕ್ಕಳೊಂದಿಗೆ ಸುಖವಾಗಿ ಸಂಸಾರ ಮಾಡಿಕೊಂಡಿರು”. ಆದರೆ ನರಸಿಂಹ, “ಕೃಷ್ಣನ ಭಜನೆ ಮಾಡುವ ಕೆಲಸದ ಹೊರತು ಬೇರೆ ಯಾವ ಕೆಲಸವೂ ಬೇಡ” ಎಂದ. “ಹಾಗಾದರೆ ನಿನ್ನಿಷ್ಟ ಬಂದಂತೆ ಮಾಡು; ಬಂದ ದಾರಿಗೆ ಸುಂಕವಿಲ್ಲವೆಂದು ಇಲ್ಲಿಂದ ಹೊರಟುಹೋಗು” ಎಂದು ಹೇಳಿದ ಅಣ್ಣ.

 

ನರಸಿಂಹ ಮೈಮರೆತು ಹರಿಜನರ ಮಧ್ಯೆ ಭಜನೆ ಮಾಡುತ್ತಿದ್ದಾನೆ.

ಧರ್ಮಶಾಲೆಯಲ್ಲಿ ಸಂಸಾರ

ಆಗ ನರಸಿಂಹ ಪುನಃ ತನ್ನ ದಾರಿ ತನಗೆ ಎಂದು ’ರಾಧಾಕೃಷ್ಣ, ರಾಧಾಕೃಷ್ಣ’ ಎನ್ನುತ್ತಾ ಹೊರಟ. ಈ ಎಲ್ಲ ಮಾತು ಕೇಳುತ್ತ ನಿಂತಿದ್ದ ಮಾಣಿಕ ಗೌರಿ, ಪತಿ ಹೊರಟದ್ದನ್ನು ಕಂಡು ಕಾಲಿಗೆ ಬಿದ್ದು, “ನನ್ನನ್ನು ಬಿಟ್ಟು ಹೋಗಬೇಡಿ, ನೀವಿದ್ದಲ್ಲಿ ನಾನಿರುವೆ” ಎಂದು ಮಗನನ್ನು ಅವನ ಪಾದದಡಿಯಲ್ಲಿ ಹಾಕಿ, ದುಃಖಪರವಶಳಾಗಿ ಬೇಡಿಕೊಂಡಳು. ಇದನ್ನು ನೋಡಿದ ನರಸಿಂಹ ಮಗನನ್ನೂ ಹೆಂಡತಿಯನ್ನೂ ಮೈದಡವಿ ಎಬ್ಬಿಸಿ ಹೇಳಿದ: “ನಡೆಯಿರಿ, ಹಾಗಾದರೆ ಕೃಷ್ಣಪರಮಾತ್ರನೇ ಜೊತೆಯಲ್ಲಿರುವಾಗ ಚಿಂತೆ ಯಾತರದು! ಅವನು ದಯಾಪರನು”, ಹೆಂಡತಿ-ಮಕ್ಕಳೊಂದಿಗೆ ಹೊರಟು ಊರ ಹೊರಗಿನ ಧರ್ಮ ಶಾಲೆಗೆ ಬಂದು ಸೇರಿದನು. ಗಂಡನ ಜೊತೆಯಲ್ಲಿರುವ ಸೌಭಾಗ್ಯ ಸಿಕ್ಕ ಮಾಣಿಕ ಗೌರಿ, ಆ ಮುರುಕು ಧರ್ಮಶಾಲೆ ತನ್ನ ಪತಿಯ ಅರಮನೆ ಎಂದು ಭಾವಿಸಿದಳು. ಗಂಡ ಹೆಂಡತಿ ಮಕ್ಕಳು ಎಲ್ಲರೂ ಯಾವಾಗಲೂ ಕೃಷ್ಣನ ಭಜನೆಯನ್ನು ಮಾಡುತ್ತ ಸುಖಸಂತೋಷವಾಗಿ ಕಾಲ ಕಳೆಯುತ್ತಿದ್ದರು. ಅವರ ಬಳಿ ಆ ಕೃಷ್ಣನ ಮೂರ್ತಿಯ ಹೊರತು ಮಿಕ್ಕಾವ ಸಂಪತ್ತೂ ಇರಲಿಲ್ಲ. ಆದರೂ ದಿನವೂ ಬಂದ ಸಾಧುಸಂತರನ್ನು ಆದರಿಸಿ ಸತ್ಕರಿಸುತ್ತಿದ್ದರು.

ಗೃಹಿಣಿಯಾದ ಮಾಣಿಕ ಗೌರಿಗೆ ಮಾತ್ರ ಗಂಡ ಹಗಲು-ಇರುಳು ಕಾಲಿಗೆ ಗೆಜ್ಜೆ ಕಟ್ಟಿ, ಕೈಯಲ್ಲಿ ತಾಳ ಹಿಡಿದು, ಶ್ರೀಕೃಷ್ಣನ ಭಜನೆ ಮಾಡುತ್ತ ಕುಣಿಯುತ್ತಿರುವುದನ್ನು ಕಂಡು, ಆಗಾಗ ಒಳಗೊಳಗೆ ಚಿಂತೆ ಆವರಿಸುತ್ತಿತ್ತು. ನೋಡುವ ಜನರಿಗಾದರೋ ಈ ಮೂಕ ತೊದಲುವ ಹುಡುಗನಾಗಿದ್ದವನು ಈಗ ಕೃಷ್ಣಭಕ್ತಿಯ ಪದಗಳನ್ನು ಕಟ್ಟಿ ಅಷ್ಟು ಸುಮಧುರವಾಗಿ ಹಾಡುವುದನ್ನು ಕೇಳಿ ತುಂಬ  ಆಶ್ಚರ್ಯವಾಗುತ್ತಿತ್ತು. ಆದರೆ  ಇದಕ್ಕೂ ಹೆಚ್ಚಿನ ಆಶ್ಚರ್ಯದ ಮಾತೆಂದರೆ, ಸ್ವಲ್ಪ ಕಾಲದಲ್ಲಿ ನರಸಿಂಹ ಅದೇ ಊರಲ್ಲಿ ನೂರಿನ್ನೂರು ಸಾಧುಸಂತರು ಸೇರುವಷ್ಟು ದೊಡ್ಡದಾದ ರಾಧಾಕೃಷ್ಣ ಮಂದಿರವನ್ನು ಕಟಿಸಿದ. ಎಲ್ಲರಿಗೂ ಅದೊಂದು ದೊಡ್ಡ ಪ್ರಶ್ನೆಯೆ. ’ಈ ಭಿಕಾರಿ ಭಕ್ತನಿಗೆ ಇಷ್ಟೊಂದು ದುಡ್ಡು ಎಲ್ಲಿಂದ ಬಂತಪ್ಪಾ?’ ಎಂದು. ಆದರೆ ಕೆಲವು ಧಾರ್ಮಿಕರಾದ ಹಿರಿಯರು ಹೇಳುತ್ತಿದ್ದರು: ’ಕೃಷ್ಣಪರಮಾತ್ಮ ಕೃಪೆಯನ್ನು ಪಡೆದಂಥವರಿಗೆ ಯಾತರ ಕೊರತೆ?’ ನರಸಿಂಹ ಮೆಹತಾ ಅಷ್ಟು ದೊಡ್ಡ ಭಗವದ್ಭಕ್ತನೇ ಎಂದು ಕೇಳಿದವರು ಆಶ್ಚರ್ಯ ಚಕಿತರಾದರು. ಭಕ್ತರ ಗುಂಪು ನರಸಿಂಹನ ಸುತ್ತಲೂ ಇಪ್ಪತ್ತನಾಲ್ಕು ಗಂಟೆಗಳ ಕಾಲವೂ ಇರುತ್ತಿತ್ತು. ಇದರಿಂದ ಆತನ ಕೀರ್ತಿ ಎಲ್ಲೆಲ್ಲೂ ಹಬ್ಬಿತು.

ಹರಿಜನ ಭಕ್ತರೊಡನೆ

ಒಮ್ಮೆ ನರಸಿಂಹ ರಾಧಾಕೃಷ್ಣನ ಭಜನೆಯಲ್ಲಿ ಮಗ್ನನಾಗಿದ್ದ. ಆಗ ಒಬ್ಬ ಹರಿಜನ ಗೌಡ ಬಂದು ದೂರದಲ್ಲಿ ನಿಂತುಕೊಂಡ. ನಿಂತವನನ್ನು ನೋಡಿ ನರಸಿಂಹ ಕೂಡಲು ಹೇಳಿದ.  ಬಹಳ ಸಂತೋಷದಿಂದ ಆ ಗೌಡ ಇವನಿಗೆ ನಿಂತಲ್ಲೇ ನಮಸ್ಕರಿಸಿ, “ಹರಿದಾಸರೇ, ನಮ್ಮಲ್ಲಿಗೆ ಒಮ್ಮೆ ಬಂದು ನಮ್ಮ ಕೇರಿಯಲ್ಲಿ ಭಜನೆ ಮಾಡಿ ನಮ್ಮ ಕಿವಿಗಳನ್ನು ಪಾವನ ಮಾಡಬೇಕು” ಎಂದು ಕೇಳಿಕೊಂಡ. “ಆಗಲಿ, ಅದಕ್ಕೇನಂತೆ? ಶ್ರೀಕೃಷ್ಣ ಭಗವಾ ಎಲ್ಲೆಲ್ಲೂ ಇ‌ದ್ದಾನೆ, ಸಂತೋಷದಿಂದ ಬರುತ್ತೇನೆ. ಆದರೆ ಒಂದು ಕರಾರು” ಎಂದ ನರಸಿಂಹ. ಗೌಡ, “ನಿಮ್ಮ ಯಾವುದೇ ಕರಾರು ಇದ್ದರೂ ಸರಿ, ನಾವು ಒಪ್ಪಿಕೊಳ್ಳುತ್ತೇವೆ ನಿಮ್ಮ ಭಜನೆಯನ್ನು ಮಾತ್ರ ಕಿವಿ ತುಂಬ ಕೇಳಬೇಕು” ಎಂದ. “ನೋಡಪ್ಪಾ, ನನಗೆ ಕೂತು ಭಜನೆ ಮಾಡುವಲ್ಲಿ ಒಂದು ತುಳಸೀಕಟ್ಟೆ ಅಥವಾ ಅಶ್ವತ್ಥಕಟ್ಟೆ ಇರಬೇಕು ಅಷ್ಟೆ” ಎಂದು ನರಸಿಂಹ ಹೇಳಿದ. ಅದಕ್ಕೆ ಒಪ್ಪಿಕೊಂಡು ಮರುದಿನವೇ ಆ ಗೌಡ ನರಸಿಂಹನನ್ನು ತಮ್ಮ ಹರಿಜನರ ಓಣಿಗೆ ಕರೆದುಕೊಂಡು ಹೋದ.

ಈ ರೀತಿ ಅಲ್ಲಿ ಹೋಗಿ ಭಜನೆ ಮಾಡುವ ವಿಚಾರ ತಿಳಿದ ಆಚಾರವಂತರಿಗೆ ಕೋಪವುಂಟಾಗಿ ’ಅವನಿಗೆ ಬಹಿಷ್ಕಾರ ಹಾಕಿರಿ; ಅವನೆಂಥಾ ವಿಷ್ಣುಭಕ್ತ?’ ಎಂದು ಉಪಹಾಸ ಮಾಡಿದರು. ಆದರೆ ನರಸಿಂಹನಿಗೆ ಅದಾವುದೂ ಲಕ್ಷ್ಯಕ್ಕೇ ಬಾರದೆ, ಆತ ತನ್ನ ಭಜನೆಯನ್ನು ಪ್ರಾರಂಭಿಸಿ ಅದರಲ್ಲಿ ತಲ್ಲೀನನಾದ. ಕಾಲಿಗೆ ಗೆಜ್ಜೆ ಕಟ್ಟಿ, ಕೈಯಲ್ಲಿ ತಾಳ ಹಿಡಿದು, ಕುಣಿಯುತ್ತಾ ಹಾಡಿದ. ಅಲ್ಲಿ ನೆರೆದಿದ್ದ ಹರಿಜನರಿಗೆಲ್ಲ ಸಂತೋಷವಾಯಿತು. ಅವರೂ ಭಜನೆಯಲ್ಲಿ ಸೇರಿದರು.

ಅಂದೇ, ಅಲ್ಲಿ ಭಜನೆ ನಡೆಯುವ ಸಮಯದಲ್ಲಿ ನರಸಿಂಹ ಬೀಗರಾದ ಶ್ರೀರಂಗ ಮೆಹತಾನ ಪುರೋಹಿತರು ಜುನಾಗಡಕ್ಕೆ ಬಂದರು. ನೆರೆಹರೆಯವರು, “ಆ ಮಹಾಭಕ್ತ ಇದೇ ತಾನೇ ಹರಿಜನರ ಕೇರಿಯಲ್ಲಿ ಭಜನೆ ಮಾಡಲು ಹೋಗಿರುತ್ತಾನೆ” ಎಂದು ಒಂದು ರೀತಿ ಅಪಹಾಸ್ಯವಾಗಿ ಹೇಳಿದರು. ಇದನ್ನು ಕೇಳಿದ ಪುರೋಹಿತರಿಗೆ ನಂಬುವುದೇ ಕಷ್ಟವಾಯಿತು. ಆದರೆ ಹರಿಜನ ಕೇರಿಗೆ ಹೋಗಿ ನೋಡಿದರೆ ನರಸಿಂಹ ಹರಿಜನರ ಮಧ್ಯೆ ಮೈಮರೆತು ಭಜನೆ ಮಾಡುತ್ತಿದ್ದಾನೆ! ಆಚಾರವಂತರೆಲ್ಲ ಅವನನ್ನು ಕುರಿತು ಹಾಸ್ಯ ಮಾಡಿದರು, ಬೈದರು.

ಅತ್ತೆ ಮನೆಗೆ ಮಗಳು

ಏನು ಮಾಡಬೇಕೆಂದು ತಿಳಿಯದೆ ಪುರೋಹಿತರು ನರಸಿಂಹ ಮೆಹತಾನ ಮನೆಗೆ ಬಂದರು. ಮಾಣಿದ ಗೌರಿ ಮನೆಗೆ ಬಂದ ಪುರೋಹಿಗರಿಗೆ ಆದರ ಸತ್ಕಾರ ಮಾಡಿದಳು. ಊರಿನ ಬೀಗರ ಕ್ಷೇಮಸಮಾಚಾರ ವಿಚಾರಿಸಿದಳು. ದೇವಮಂದಿರದಂತಿದ್ದ ಆ ಮನೆಯನ್ನೂ ಅಲ್ಲಿದ್ದ  ಆ ಭವ್ಯವಾದ ರಾಧಾಕೃಷ್ಣ ಮೂರ್ತಿಯನ್ನೂ ಕಂಡು ಪುರೋಹಿತರು ಬಹಳ ಪ್ರಸನ್ನರಾದರು. ಹಾಗೆಯೇ ಸುತ್ತಲೂ ಒಂದು ನಿಮಿಷ ನೋಡುತ್ತ ನಿಂತರು.

ಅಷ್ಟರಲ್ಲಿ ಸ್ವತಃ ನರಸಿಂಹ ಮೆಹತಾ’ಜೈರಾಧಾಕೃಷ್ಣ’ ಎನ್ನುತ್ತಲೇ ಮನೆ ಒಳಕ್ಕೆ ಬಂದ. ಪುರೋಹಿತರಿಗೆ ನಮಸ್ಕರಿಸಿದ. ಮಾಣಿಕ ಗೌರಿ ತನ್ನ ಪತಿಯನ್ನು ಒಳಗೆ ಕರೆದು, “ಈಗಲಾದರೂ ನಿಮ್ಮ ಭಜನೆಯನ್ನು ಬದಿಗಿರಿಸಿ, ಮಗಳಿಗೆ ಕೊಟ್ಟು ಕಳಿಸಬೇಕಾದ ಬಳುವಳಿಯ ಏರ್ಪಾಡು ಮಾಡಬೇಕು. ಪುರೋಹಿತರು ಹುಡುಗಿಯನ್ನು ಕರದೊಯ್ಯಲು ಬಂದಿದ್ದಾರೆ ಎಂಬ ಗಮನವಾದರೂ ಇದೆಯೇ ನಿಮಗೆ?” ಎಂದು ಕೇಳಿದಳು. “ಅದಕ್ಕೇನಂತೆ, ಧಾರಾಳವಾಗಿ ಬೇಕಾದ್ದು ಕೊಟ್ಟು ಕಳಿಸೋಣ. ಅದಕ್ಕಾಗಿ ನಾನು ಮಾಡುವುದೇನಿದೆ! ಶ್ರೀಕೃಷ್ಣ ಪರಮಾತ್ಮನೇ ಎಲ್ಲವನ್ನೂ ನಡೆಸುತ್ತಾನೆ” ಎಂದು ಹೇಳಿದ  ನರಸಿಂಹ. ಇದನ್ನು ಕೇಳುತ್ತಿಲಿದ್ದ ಪುರೋಹಿತರು ಇವನ ಮುಖದ ಅಲೌಕಿಕ ತೇಜಸ್ಸಿನ ಕಳೆಯನ್ನು ನೋಡಿ ಇನ್ನು ಹೆಚ್ಚು ಪ್ರಭಾವಿತರಾದರು. ಮಾರನೇ ದಿನ ಕುವರ್‌ಬಾಯಿಳನ್ನು ಕರೆದುಕೊಂಡು  ಹೊರಟರು. ದಾರಿಯುದ್ದಕ್ಕೂ ನರಸಿಂಹ ಮೆಹತಾನ ಗುಣಗಾನ ಮಾಡುವುದೇ ಪುರೋಹಿತರ ಕೆಲಸ.

ಸೊಸೆ ಮನೆಗೆ ಬಂದಳೆಂಬ ಸಂತೋಷ ಅತ್ತೆ ಮಾವಂದಿರೆಗೆ! ತೌರಿನಿಂದ  ಏನೇನು ಬಳುವಳಿ ತಂದಿರುವಳೆಂದು ಎಲ್ಲರೂ ಕುತೂಹಲದಿಂದ ಬಳುವಳಿಯ ಗಂಟನ್ನು ಬಿಚ್ಚಿ ನೋಡಿದಾಗ ಎಲ್ಲರ ಮುಖಗಳೂ ಗಂಟಾದವು. ಅದರಲ್ಲಿದ್ದ ಪೀತಾಂಬರ, ಗೋಪೀಚಂದನ, ತುಳಸೀಮಾಲೆ, ಕೃಷ್ಣನ ಮೂರ್ತಿ ಇವುಗಳನ್ನು ಮಾತ್ರ ಕಂಡ ಅತ್ತೆ ಅವಳನ್ನು ಕೋಪದಿಂದ ಬೈದಳು. ಪಾಪ! ಗುಣವಂತೆ ಕುವರ್‌ಬಾಯ್ ಅತ್ತೆಯ ಮಾತಿಗೆ ತುಟಿ ಬಿಚ್ಚದೆ ಎಲ್ಲವನ್ನು ಕೇಳುತ್ತ ಮೂಕಳಾಗಿ ಸಹಿಸಿಕೊಂಡಳು.

ದುಃಖ ಕವಿಯಿತು

ವಡ್ ನಗರದ  ದಿವಾನನಾದ ಮದನ ಮೆಹತಾನ ಎಂಟು ವರ್ಷದ ಮಗಳಿಗೆ ಮದುವೆ ಮಾಡಬೇಕಾದ್ದರಿಂದ, ದಿವಾನನು ತನ್ನ ಕಡೆಯ ದೀಕ್ಷಿತರೆಂಬ ಪುರೋಹಿತರನ್ನು ವರನ ಶೋಧಕ್ಕಾಗಿ ಕಳಿಸಿಕೊಟ್ಟರು. ಅವರು ಹತ್ತಾರು ಕಡೆ ಹುಡುಕಿ ಕಡೆಗೆ ನರಸಿಂಹನ ಮಗ ಶ್ಯಾಮಲದಾಸನನ್ನೇ ಒಪ್ಪಿದರು. ಮದುವೆಯೂ ನಡೆಯಿತು.

ಆದರೇ ಕೆಲವೇ ದಿನಗಳಲ್ಲಿ ಶ್ಯಾಮಲದಾಸ ಸಾವಿಗೀಡಾದ.

ಮಗನ ಸಾವಿನಿಂದ ನರಸಿಂಹ ಮೆಹತಾನಿಗೆ ವಿರಕ್ತಿದೃಢವಾಯಿತು. ಸಂಸಾರದಲ್ಲಿ ನಿರಾಸಕ್ತನಾದ. ಯಾವಾಗಲೂ ಸುಖದುಃಖದಲ್ಲಿ ಸಮಭಾವವಿಟ್ಟುಕೊಂಡು ದೇವರ ಧ್ಯಾನದಲ್ಲಿಯೇ ಮುಳುಗಿರುತ್ತಿದ್ದ ಮೆಹತಾನ ಮನಸ್ಸಿನ ಮೇಲೆ ಹೊರಗೆ ಕಾಣುವಂಥ ಯಾವ ಪರಿಣಾಮವೂ ಉಂಟಾಗಲಿಲ್ಲ. ’ಇದು ತನ್ನ ಸತ್ವ ಪರೀಕ್ಷೆಯ ಕಾಲ’ ಎಂದುಕೊಂಡು ’ಉಪ್ಪರಿಗೆ ಹೋಗಿ ತಿಪ್ಪೆಯಗುವುದು ಹೀಗೇ’ ಎಂದು ಭಾವಿಸಿದ. ’ಶ್ಯಾಮಲದಾಸನೋ ವಿವಾಹ’ ಎಂಬ ಕಿರಿ ಕಥನಕಾವ್ಯದಲ್ಲಿ, ಆತ ತನ್ನ ದುಃಖವನ್ನೆಲ್ಲಾ ಒಂದು ಮೈ ಮರೆವಿನ ಆನಂದವಾಗಿ ಪರಿವರ್ತಿಸಿ ಶ್ರೀ ಕೃಷ್ಣನನ್ನು ಕೊಂಡಾಡಿದ್ದಾನೆ.

ಕೃಷ್ಣನ ಅನುಗ್ರಹ

ಕೃಷ್ಣನು ನರಸಿಂಹನಲ್ಲಿ ವಿಶೇಷವಾಗಿ ಅನುಗ್ರಹ ಮಾಡಿದ ಎಂದು ನಿದರ್ಶನವಾಗಿ ಭಕ್ತರು  ಕೆಲವು ಕಥೆಗಳನ್ನು ಹೇಳುತ್ತಾರೆ.

ಒಮ್ಮೆ ವಂಶೀಧರನು ತಂದೆಯ ಶ್ರಾದ್ಧಕ್ಕಾಗಿ ತಮ್ಮನನ್ನು ಕರೆಕಳಿಸಿದ. ನರಸಿಂಹ ಮೆಹತಾ ತನ್ನ ಕೀರ್ತನೆ, ಭಜನೆಗಳನ್ನು ಮುಗಿಸಿ ಬರುವುದಾಗಿ ಹೇಳಿ ಕಳಿಸಿದ. ಅಣ್ಣನಿಗೆ ಕೋಪ ಬಂದು, “ನೀನು ಯಾವಾಗಲೂ ನಿನ್ನ ಭಜನೆಯಲ್ಲಿ ಮುಳುಗಿರುವಿ. ನಿನ್ನ ಇಷ್ಟ ಬಂದಂತೆ ಮಾಡಿಕೋ” ಎಂದು ಹೇಳಿದಾಗ ನರಸಿಂಹ ಮೆಹತಾ ತನ್ನ ಮನೆಯಲ್ಲಿಗಯೇ ಶ್ರಾದ್ಧ ಮಾಡಬೇಕಾಗಿ ಬಂತು. ಆದರೆ ಮನೆಯಲ್ಲಿ ಯಾವ ಸಾಮಾನೂ ಇಲ್ಲದೆ ಶ್ರಾದ್ಧ ಮಾಡುವ ಬಗೆ ಹೇಗೆ ಎಂದು ಮಾಣಿಕಗೌರಿಗೆ ದುಃಖವಾಯಿತು. ತನ್ನ ಕಿವಿಯಲ್ಲಿಯ ಚಿನ್ನದ ಓಲೆಯನ್ನು ತೆಗೆದು ಪತಿಯ ಕೈಗೆ ಕೊಟ್ಟು ಅದರಿಂದ ಶ್ರಾದ್ಧಕ್ಕೆ ಬೇಕಾಗುವ ಸಾಮಾನುಗಳನ್ನು ತರಲು ಹೇಳಿದಳು. ನರಸಿಂಹ ಮೆಹತಾ ಅದರಂತೆ ಬೇಕಾಗುವ ಸಾಮಾನುಗಳನ್ನು  ಕೊಂಡುಕೊಂಡ. ತುಪ್ಪಕ್ಕಾಗಿ ಹಣ ಸಾಲದಾಯಿತು. ಉದ್ದರಿ ಕೇಳಲು ಹೋದಾಗ ವ್ಯಾಪಾರಸ್ಥರು ಗೇಲಿ ಮಾಡಿದರು. ಒಬ್ಬ ವ್ಯಾಪಾರಿಗೆ ಮಾತ್ರ ಇವನ ಭಜನೆ ಕೇಳಲು ಆಸೆಯುಂಟಾಗಿ, “ನೀನು ಭಜನೆಯನ್ನು ಹೇಳಿದರೆ , ನಾನು ನಿನಗೆ ತುಪ್ಪ ಕೊಡುತ್ತೇನೆ” ಎಂದು ಹೇಳಿದ.

ನರಸಿಂಹ ಮೆಹತಾ ಆನಂದದಿಂದ ಭಜನೆ ಹಾಡಲು ಪ್ರಾರಂಭಿಸಿದ. ಭಜನೆಯಲ್ಲಿ ಮೈಮರೆತು, ಮನೆಯಲ್ಲಿ ಶ್ರಾದ್ಧವಿದೆ ಎಂಬುದನ್ನು ಕೂಡ ಮರೆತುಬಿಟ್ಟ ಈ ಭಕ್ತ. ಸಾಯಂಕಾಲ ಮನೆಗೆ ಬಂದು ನೋಡಿದಾಗ ಅನೇಕ ಮಂದಿ ಬ್ರಾಹ್ಮಣರು ಶ್ರಾದ್ಧದ ಊಟ ಮಾಡಿ, ದಕ್ಷಿಣೆ ತಾಂಬೂಲಗಳನ್ನು ತೆಗೆದುಕೊಂಡು, ’ಈತ ಎಷ್ಟು ದೊಡ್ಡ ದೈವಭಕ್ತ’ ಎಂದು ಈತನನ್ನೇ ಹೊಗಳುತ್ತ ಮನೆಗೆ ಹೋಗುತ್ತಿದ್ದರು ಎಂದು ಹೇಳುತ್ತಾರೆ. ಇದನ್ನು ನೋಡಿ ನರಸಿಂಹ ಮೆಹತಾನಿಗೆ ಆನಂದವುಂಟಾಗಿ ಶ್ರೀಕೃಷ್ಣ ಪರಮಾತ್ಮನೇ ಪ್ರತ್ಯಕ್ಷವಾಗಿ ಬಂದು ನಿಂತು ಈ ಎಲ್ಲವನ್ನೂ ಮಾಡಿಸಿದ ಎಂದು ತಿಳಿದನಂತೆ.

ಮುಂದೆ ಕೆಲವು ದಿನಗಳ ನಂತರ ಮಾಣಿಕ ಗೌರಿ ತೀರಿಕೊಂಡಳು. ಅದು ನರಸಿಂಹ ಮೆಹತಾನ ಕಠಿಣ ಪರೀಕ್ಷೆಯ ಕಾಲವಾಗಿತ್ತು. ಮಗನ ಸಾವಿನ ನಂತರ ಹೆಂಡತಿಯ ಸಾವು! ಈ ರೀತಿ ಒಂದರ ಮೇಲೊಂದು ದುಃಖ ಸಂಕಟಗಳು ಬಂದವು. ಏನೇ ಬಂದರೂ ’ಕಷ್ಟದಿ ಕುಗ್ಗದೆ ಸೌಖ್ಯದಿ ಹಿಗ್ಗದೆ ಜೀವಿಸಿ ಎಂದನು ಶ್ರೀಕೃಷ್ಣ’ ಎಂದು ಶ್ರೀಕೃಷ್ಣ ಪರಮಾತ್ಮನನ್ನೇ ನಂಬಿದ ನರಸಿಂಹ ಮೆಹತಾ ಸುಖದುಃಖಗಳಲ್ಲಿ ಸಮಭಾವನಾಗಿದ್ದ.

ಹೆಂಡತಿ ಸತ್ತು ಹದಿಮೂರು ದಿನ ಕಳೆಯಿತು. ಕ್ರಿಯಾಕರ್ಮ ಮಾಡಬೇಕಾಯಿತು. ಮನೆಯಲ್ಲಿ ನೀನೇ ಎಂದು ಕೇಳುವವರೂ  ಗತಿಯಿಲ್ಲದಾಗ ಏನು ತಾನೆ ಇರಲು ಸಾಧ್ಯ? ಮನೆ ಬರಿದಾಗಿತ್ತು. ಮುಂದೇನು ಮಾಡಬೇಕೆಂದು ತಲೆ ಮೇಲೆ ಕೈಹೊತ್ತು ಕುಳಿತಿರುವಾಗ ಸಮಯಕ್ಕೆ ಸರಿಯಾಗಿ ಹೇಳಿಕಳಿಸದಂತೆ ಕೆಲ ತೀರ್ಥ ಯಾತ್ರಿಕರು ಬಂದರು. ಅವರು ದ್ವಾರಕೆಗೆ ಹೊರಟರು. ಅವರಲ್ಲಿ ೭೦೦ ರೂಪಾಯಿಗಳು ಇದ್ದವು. ಅಷ್ಟೊಂದು ಹಣವನ್ನು ತಮ್ಮೊಡನೆ ತೆಗೆದುಕೊಂಡು ಹೋಗುವುದು ಅಪಾಯವೆಂದು ತಿಳಿದು ಇಲ್ಲಿ ಯಾರಲ್ಲಿಯಾದರೂ ಇಡಬೇಕೆಂದು ವಿಚಾರಿಸಿದಾಗ ಅಲ್ಲಿನ ತುಂಟ ಯುವಕರು ನರಸಿಂಹ ಮೆಹತಾ ತುಂಬ  ಶ್ರೀಮಂನಿದ್ದಾನೆಂದು ಹೇಳಿ ಅವನಲ್ಲಿ ಯಾತ್ರಿಕರನ್ನು ಕಳಿಸಿದರು.

ಯಾತ್ರಿಕರು ಇವನಲ್ಲಿ ಬಂದು ಹಣದ ವಿಚಾರ ತಿಳಿಸಿದಾಗ ನರಸಿಂಹ  ಮೆಹತಾನಿಗೆ ಆನಂದವುಂಟಾಗಿ ’ದೇವರೇ ನನ್ನ ನೆರವಿಗೆ ಬಂದಿರಬಹುದು’ ಎಂದು ತಿಳಿದ. ಸಮಯಕ್ಕೆ ಬಂದ ಹಣವನ್ನು ಸ್ವೀಕರಿಸಿ, ’ದ್ವಾರಕಾಧೀಶ ವಾಸುದೇವ’ ರೆಂಬ ಶೆಟ್ಟರ ಹೆಸರಿಗೆ ೭೦೦ ರೂಪಾಯಿಗಳ ಹುಂಡಿಯನ್ನೂ ಬರೆದುಕೊಟ್ಟ. ಯಾತ್ರಿಕರು ಹುಂಡಿಯನ್ನು ತೆಗೆದುಕೊಂಡು ಮುಂದೆ ದ್ವಾರಕೆಗೆ ಮುಟ್ಟಿದರು. ಹಣಕ್ಕಾಗಿ ಅಲ್ಲಿದ್ದ ಚಿನಿವಾರ ಪೇಟೆಗಳನ್ನೆಲ್ಲಾ ಹುಡುಕಿದರು. ನರಸಿಂಹ ಮೆಹತಾ ಬರೆದುಕೊಟ್ಟ ಹೆಸರಿನ ಅಂಗಡಿ ಸಿಗಲಿಲ್ಲ. ಯಾತ್ರಿಕರಿಗೆ ತುಂಬ ಚಿಂತೆಯಾಗಿ ನರಸಿಂಹನಿಗೆ ಶಿಕ್ಷೆ ಮಾಡಿಸಬೇಕು ಎಂದು ಮಾತನಾಡಿಕೊಳ್ಳುತ್ತಿದ್ದರು. ಊರ ಬಾಗಿಲಲ್ಲಿ ಒಬ್ಬ ವರ್ತಕ ಇವರನ್ನು ಮಾತನಾಡಿಸಿ ವಿಷಯ ತಿಳಿದುಕೊಂಡನಂತೆ. ಅನಂತರ ’ನಾನೇ ನರಸಿಂಹ ಮೆಹತಾ ಹೇಳಿದ ವರ್ತಕ’ ಎಂದು ಯಾತ್ರಿಕರ ಹಣವನ್ನು ಬಡ್ಡಿ ಸಹಿತ ಹಿಂದಕ್ಕೆ ಕೊಟ್ಟನಂತೆ. ಸುದ್ದಿ ಕೇಳಿ ನರಸಿಂಹ ಕೃತಜ್ಞತೆಯಿಂದ ಕಣ್ಣೀರು ಹಾಕಿದ.

ಪರೀಕ್ಷೆ

ನರಸಿಂಹನ ಭಕ್ತಿ ಎಲ್ಲ ಬರಿಯ ಕಪಟ ಎಂದು ಕೆಲವರು ಭಾವಿಸಿದರು. ಏನಾದರೂ ಮಾಡಿ ಅವನ ಕಪಟವನ್ನು ಬಯಲಿಗೆಳೆಯಬೇಕೆಂದು ಜುನಾಗಡದ ರಾಜನಾದ ರಾವ್ ಮಾಂಡಲೀಕನ ಎದುರು ನರಸಿಂಹ ಮೆಹತಾನ ವಿಚಾರವಾಗಿ, ಆತನ ನಡವಳಿಕೆಯ ವಿಷಯವಾಗಿ ಇಲ್ಲಸಲ್ಲದ ದೂರುಗಳನ್ನು ಹೇಳಿದರು. ಈ ದೂರುಗಳನ್ನು ಕೇಳಿದ ರಾವ್ ಮಾಂಡಲೀಕನಿಗೆ ತುಂಬ ಆಶ್ಚರ್ಯವಾಯಿತು. “ನರಸಿಂಹ ಮೆಹತಾನ ಬಗ್ಗೆ ನೀವುಗಳು ಏನು ಮಾತಾಡುತ್ತೀರಿ? ಅವನು ಮಹಾಭಕ್ತ ಎಂದು ಕೇಳಿದ್ದೇನೆ. ಎಂದಿಗೂ ಅವನಲ್ಲಿ ಈ ದೋಷಗಳಿರಲು ಸಾಧ್ಯವಿಲ್ಲ” ಎಂದು ಅವರಿಗೆ ಛೀ ಹಾಕಿದ. ಆದರೆ ಅವರು ಚಾಡಿ ಹೇಳುವುದನ್ನು ಬಿಡಲಿಲ್ಲ. ಕೊನೆಗೆ ಇದರ ನಿಜಾಂಶವೇನೆಂದು ತಿಳಿಯಲೇಬೇಕು ಅಥವಾ ಆ ಕುಹಕರನ್ನು ಒಳ್ಳೆಯ ದಾರಿಗೆ ತರಬೇಕೆಂದು ಅವನ ಮನಸ್ಸು ಆತುರಪಟ್ಟಿತು. ಒಂದು ಪರೀಕ್ಷೆ ನಡೆಸಿದ. ರಾಧಾಕೃಷ್ಣನ ದೇವಸ್ಥಾನದ ಜಗುಲಿಯ ಮೇಲೆ ಅವನ ಕೈಕಾಲು ಕಟ್ಟಿ ಕೂಡಿಸಿ, ದೇವರಿದ್ದ ಗರ್ಭಗುಡಿಯ ಬಾಗಿಲಿಗೆ ಬೀಗ ಹಾಕಿಸಿದ. ದೇವರ ಕೊರಳಲ್ಲಿ ಮಾಂಡಲೀಕ ತನ್ನ ಹಸ್ತದಿಂದಲೇ ರತ್ನಹಾರ ಹಾಕಿದ. “ನೀನು ನಿಜವಾದ ಭಕ್ತನಾಗಿದ್ದರೆ ಬೆಳಗಾಗುವುದರೊಳಗಾಗಿ ಆ ದೇವರ ಕೊರಳಲ್ಲಿರುವ ರತ್ನಮಾಲೆ ನಿನ್ನ ಕೊರಳಲ್ಲಿ ಬೀಳಬೇಕು; ನೋಡುವ, ನಿನ್ನ ದೇವರ ಭಕ್ತಿಯನ್ನು!” ಎಂದು ನರಸಿಂಹನಿಗೆ ಹೇಳಿ ಅವನನ್ನು ಜಗುಲಿಗೆ ಕಟ್ಟಿ ಕೂಡಿಸಿದ.

ಪರೀಕ್ಷೆಯಲ್ಲಿ ಗೆದ್ದ

ನರಸಿಂಹ ಮೆಹತಾನ ದುರದೃಷ್ಟ. ಅವನು ದರ್ಬಾರಿಗೆ ಬರುವಾಗ ದಾರಿಯಲ್ಲಿಯೇ ಒಬ್ಬ ಬಡ ಬ್ರಾಹ್ಮಣ ಎದುರಿಗೆ ಬಂದು ’ನನ್ನ ಮಗನ ಉಪನಯನವಾಗಬೇಕು. ತಾವು ಸ್ವಲ್ಪ ಸಹಾಯ ಮಾಡುವಿರಾ?’ ಎಂದು ಕೇಳಿದ. ನರಸಿಂಹ ಮೆಹತಾನಿಗೆ ಕೇದಾರ ರಾಗ ಎಂದರೆ ಬಹು ಪ್ರೀತಿ. ಅದರೀಮದಲೇ ಭಜನೆ ಪ್ರಾರಂಭ ಮಾಡಿತ್ತಿದ್ದ. ಬ್ರಾಹ್ಮಣನಿಗೆ ಸಹಾಯ ಮಾಡಲು ತೀರ್ಮಾನಿಸಿ, ಒಬ್ಬ ಸಾಹುಕಾರರ ಬಳಿ ಕೇದಾರ ರಾಗವನ್ನು ಒತ್ತೆಯಿಟ್ಟು ಅರವತ್ತು ರೂಪಾಯಿ ತಂದ. (ಎಂದರೆ ‘ನಾನು ನಿಮ್ಮ ಹಣ ಹಿಂದಕ್ಕೆ ಕೊಡುವವರೆಗೆ ಕೇದಾರ ರಾಗ ಹಾಡುವುದಿಲ್ಲ’ ಎಂದು ಮಾತುಕೊಟ್ಟ.) ಹಣವನ್ನು ಬ್ರಾಹ್ಮಣನಿಗೆ ಕೊಟ್ಟು ದರ್ಬಾರಿಗೆ ಹೋಗಿದ್ದ. ಆದುದರಿಂದ ಭಜನೆ ಪ್ರಾರಂಭ ಮಾಡುವ ಹಾಗೆಯೇ ಇರಲಿಲ್ಲ.

ನರಸಿಂಹ ಭಜನೆ ಮಾಡಿದ.

ಶ್ರೀಕೃಷ್ಣನೇ ಮನುಷ್ಯ ವೇಷದಿಂದ ಸಾಲ ಕೊಟ್ಟದ್ದವನ ಬಳಿಗೆ ಹೋಗಿ, ಹಣವನ್ನು ಕೊಟ್ಟು, ಅದು ತಲುಪಿದುದಕ್ಕೆ ಅವನಿಂದ ಪತ್ರ ಪಡೆದು ಅದನ್ನು ನರಸಿಂಹ ಮೆಹತಾನ ಉಡಿಯಲ್ಲಿ ಹಾಕಿದ. ಸಂತೋಷದಿಂದ ನರಸಿಂಹ ಕೇದಾರದಿಂದ ಪ್ರಾರಂಭಿಸಿ ಭಜನೆ ಮಾಡಿದ, ಬೆಳಿಗ್ಗೆ ಎಲ್ಲರ ಎದುರಿಗೆ ದೇವರ ಕೊರಳಲ್ಲಿದ್ದ ಮಾಲೆ ನರಸಿಂಹನ ಕೊರಳಿಗೆ ಬಂದು ಬಿದ್ದಿತು ಎಂದು ಭಕ್ತರು ಹೇಳುತ್ತಾರೆ. ರಾಜ ಬಹಳ ಸಂತೋಷಪಟ್ಟು ಅವನನ್ನು ಗೌರವಿಸಿದನಂತೆ, ಅವನ ವಿರೋಧಿಗಳು ನಾಚಿಕೊಂಡು ಕ್ಷಮೆ ಬೇಡಿದರಂತೆ.

ಅಂದಿನಿಂದ ನರಸಿಂಹ ಮೆಹತಾನ ಹೆಸರು ಗುಜರಾತಿನಲ್ಲೂ ಹೊರಗೂ ಪ್ರಖ್ಯಾತವಾಯಿತು.

ಆದಿಕವಿ

ಮೊದಲು ಮೂಕನಾಗಿ, ಮುಂದೆ ಪರಮಭಕ್ತನಾದ, ಭಾರತದ ಸಂತಶ್ರೇಷ್ಠರಲ್ಲಿ ಒಬ್ಬನಾದ ನರಸಿಂಹ ಮೆಹತಾ ಗುಜರಾತೀ ಸಾಹಿತ್ಯದ ಆದಿಕವಿಯೂ ಹೌದು; ಆತ ಆ  ಸಾಹಿತ್ಯದ ‘ಪಂಪ’ ಆಥವಾ ‘ವಾಲ್ಮೀಕಿ’. ಆತನ ಪದಗಳೇ ಗುಜರಾತೀ ಕಾವ್ಯದ ಸುಪ್ರಭಾತ. ಆರಂಭದಲ್ಲಿ ನಿರಕ್ಷರ ಕುಕ್ಷಿಯಾದ ನರಸಿಂಹ ಮುಂದೆ ಸಂಸ್ಕೃತವನ್ನು ಚೆನ್ನಾಗಿಯೇ ಓದಿಕೊಂಡ. ಜಯದೇವನ ಗೀತ ಗೋವಿಂದ, ಭಾಗವತದ ದಶಮಸ್ಕಂದ ಈತನಿಗೆ ಬಾಯಿ ಪಾಠವಾಗಿದ್ದವು. ಅವು ಆತನ ಭಕ್ತಿಗೀತೆಗಳಲ್ಲಿ ಎಲ್ಲೆಲ್ಲೂ ಪಡಿ ಮೂಡಿಕೊಂಡಿವೆ. ಇಂದಿಗೂ ಗುಜರಾತಿನಲ್ಲಿ ಮದುವೆಯ ಅನಂತರ ಮಗಳನ್ನು ಅತ್ತೆ ಮನೆಗೆ ಕಳಿಸುವಾಗ ಇವನು ಬರೆದ ಹಾಡನ್ನು ಹಾಡಿಕೊಳ್ಳುತ್ತಾರೆ. ಬೆಳಗಿನ ಹೊತ್ತು ಹೆಂಗಸರು ಕೆಲಸ ಮಾಡುತ್ತಾ ಇವನ ಹಾಡುಗಳನ್ನು ಹೇಳಿಕೊಳ್ಳುತ್ತಾರೆ. ಬರಿ ಹರಿದಾಸನೆಂದಲ್ಲ, ಒಂದು ಆಧುನಿಕ ಹಿರಿ ಸಾಹಿತ್ಯದ ಆದಿಕವಿ ಎನಿಸಿಕೊಂಡ ನರಸೀ ಮೆಹತಾ ಎಲ್ಲಾ ಆದಿಕವಿಗಳಂತೆ ಜಗದ್ವಂದ್ಯನೇ.

ಇಂಥ ಜಗದ್ವಂದ್ಯರಾದ ಮಹಾ ಸಂತರೆಲ್ಲರೂ ತಮ್ಮ ತಮ್ಮ ಜೀವನದಲ್ಲಿ ಕೆಲವೊಂದು ಮೂಲ ಸೂತ್ರಗಳನ್ನು ಉಪದೇಶಿಸುತ್ತಾರೆ. ಅವೇ ಅವರು ಜಗತ್ತಿಗೆ ಕೊಟ್ಟ ಹಿರಿಯ ಕಾಣಿಕೆ. ಅವರಿತ್ತ ಈ ಕಾಣಿಕೆ ಮಾನವೀ ಸಂಸ್ಕೃತಿಯ ಮೂಲಾಧಾರ. ಸಂತ ಯಾವ ಜಾತಿ-ಪಂಥದವನೇ ಆಗಿರಲಿ, ಅವನ ಸೂತ್ರ ರೂಪವಾದ ನುಡಿಮುತ್ತುಗಳು ಎಲ್ಲರಿಗೂ ದಾರಿದೀಪಗಳು.

ಮೆಹತಾನ ಸೂತ್ರಗಳು

ನರಸಿಂಹ ಮೆಹತಾನ ಇಂತಹ ಸೂತ್ರಗಳನ್ನು ನಮಗಾಗಿ ಕಾಣಿಕೆ ಇತ್ತಿದ್ದಾನೆ.

ನರಸಿಂಹ ಮೆಹತಾನ ಅತ್ಯಂತ ಮಹತ್ವದ ಸೂತ್ರ ‘ಮನ ಅಭಿಮಾನ ನ ರಾಖೆ ರೇ!’ – ‘ಮನವೇ, ಅಭಿಮಾನಕ್ಕೆ ಎಂದೂ ಎಡೆಗೊಡದಿರು,’ ಈ ಮಾತು ಕೇವಲ ಆತನ ಬಾಯಿಂದ ಬಂದದ್ದಲ್ಲ; ಜೀವನದಲ್ಲಿ ಒಡಮೂಡಿ ಬಂದದ್ದು. ಸ್ವತಃ ರಾವ್‌ಮಾಂಡಲೀಕನೇ ಸಾಷ್ಟಾಂಗ ನಮಸ್ಕಾರ ಹಾಕಿದಾಗಲೂ ಆತ ಇದೇ ಮಂತ್ರ ಜಪಿಸಿಕೊಂಡ. ಅವನ ವಿರೋಧಿ ಸಾರಂಗಧರ ತನ್ನನ್ನು ಪರಿಪರಿ ಪೀಡಿಸಿದರೂ ಸಹ ಆತನಿಗೊಮ್ಮೆ ಹಾವು ಕಚ್ಚಿದಾಗ ಶ್ರೀಕೃಷ್ಣನ ಚರಣಾಮೃತವನ್ನು ನರಸಿಂಹ ತಾನಾಗಿಯೇ ಒಯ್ದು ಆತನಿಗೆ ಕುಡಿಸಿದನಂತೆ. ಜೀವನದ ಎಲ್ಲ ಕುಕರ್ಮಗಳ ಬೇರು ಗರ್ವ; ಇದೊಂದನ್ನು ತೊರೆದರೆ ನೆರೆಹೊರೆಯವರ ಸ್ನೇಹ, ನಿಷ್ಕಾಮ ಕರ್ಮ, ಭೂತದಯೆ, ಒಳ್ಳೆಯ ನಡವಳಿಕೆ, ಈಸಿ ಜೈಸುವ ಬಲ ಇವೆಲ್ಲಾ ಅತಿ ಸುಲಭವಾಗುವುವು.

ಎರಡನೇ ಸೂತ್ರ ’ಪರದುಃಖ ತನ್ನದೆಂದೇ ಭಾವಿಸುವುದು’. ಇದೂ ನರಸಿಂಹನ ತೊರೆಯುವುದು, ಪರಪೀಡೆ ಮಾಡದಿರುವುದು, ಅಷ್ಟೇ ಅಲ್ಲ; ಪರ ದು:ಖದಲ್ಲಿ ಭಾಗಿಯೂ ಆಗುವುದು. ಇದನ್ನು ಸಾಧಿಸಿದರೆ ತೃಷ್ಣಾ, ಮೋಹ, ಮಾಯೆ ಇವೆಲ್ಲಾ ಇಲ್ಲವಾಗುತ್ತವೆ. ಸಮಭಾವ, ಸಮದೃಷ್ಟಿ ತಾನೇ ಉಂಟಾಗುತ್ತದೆ. ಇದೇ ದೃಢವೈರಾಗ್ಯ, ಇದೇ ನಿಜ ವೈಷ್ಣವಾ ತಳಹದಿ ಎಂಬುದು ನರಸಿಂಹನ ಜೀವನ ಮಂತ್ರ; ಆತ ಸಾಧಿಸಿದ ಗುರಿ.

’ವೈಷ್ಣನ ಜನತೋ’

ಮಹಾತ್ಮಾ ಗಾಂಧಿಯವರಿಗೆ ಅತ್ಯಂತ ಪ್ರಿಯವಾದ ಆತನ ’ವೈಷ್ಣವ ಜನತೋ ತೇನೇ ಕಹಿಯೆ’ ಎಂಬ ಹಾಡಿನಲ್ಲಿ ಈ ಸೂತ್ರಗಳೆಲ್ಲ ಅಡಕವಾಗಿವೆ. ಅದರ ಕನ್ನಡ ಭಾಷಾಂತರವನ್ನು ಕೆಳಗೆ ಕೊಟ್ಟಿದೆ.

ವೈಷ್ಣವನೆಂದರೆ ಅವನೇ ಮಾತ್ರ, ಪರ ಪೀಡೆಯ ಪರಿ ಅರಿತವನು |
ಪರದುಃಖದಲುಪಕಾರವ ಗೈದರು
, ಒಣ ಅಭಿಮಾನಕೆ ಮನಗೊಡನು ||
ಸಕಲ ಲೋಕದಲಿ ಸರ್ವರ ವಂದಿಪ
; ನಿಂದಿಸಿ ನೋಯಿಸನಾರನ್ನೂ |
ವಾಚ-ಕಾಛ-ಮನ
ನಿಶ್ಚಲವಿರಲು, ಧನ್ಯಳು ಹಡೆದವಳವನನ್ನು ||
ಸಮದೃಷ್ಟಿಯಲಿಹ
; ತೃಷ್ಣಾ ತೀತನು; ಪರಸ್ತ್ರೀ ಮಾತೆಯೊಲೆಂಬನು |
ನಾಲಿಗೆಯಲಿ ಹುಸಿ ನುಡಿಯಿರದವನಿಗೆ
, ಪರಧನ ತೃಣವೆನೆ ಕಾಂಬನು||
ಮೋಹ-ಮಾಯೆಗಳು ವ್ಯಾಪಿಸವವನಲಿ ವೈರಾಗ್ಯವು ನೆಲೆನಿಂದಿಹುದು
|
ರಾಮನಾಮ ಜಪಿಪಾತನ ತನುವಲಿ ತೀರ್ಥಸಂದುಲವೇ ಸಂದಿಹುದು
||
ಲೋಭ-ಕಪಟಗಳ
, ಕಾಮಕ್ರೋಧಗಳನಾವನು ಮಾಡಿಹ ಪರಿಹಾರಾ |
ಅವನ ದರ್ಶನದಿ ನರಸಯ್ಯನ ಕುಲ ಕೋಟೆಯು ಆಯಿತು ಉದ್ಧಾರಾ
||

*(’ಕಾಛ’ ಎಂದರೆ ಬ್ರಹ್ಮಚರ್ಯ, ಸುಖದ ಆಸೆ ಪಡದಿರುವುದು.)