ಅಲಹಾಬಾದ್‌ ರೈಲ್ವೆ ನಿಲ್ದಾಣದಲ್ಲಿ ಅಂದು ಹಬ್ಬದ ವಾತಾವರಣ. ವಿದ್ಯಾರ್ಥಿಗಳ ಭಾರಿ ಗುಂಪು. ಅವರು ಕಾಯುತ್ತಿದ್ದುದು ತಮ್ಮ ನೆಚ್ಚಿನ ನಾಯಕ ಲೋಕಮಾನ್ಯ ಬಾಲಗಂಗಾಧರ ತಿಲಕರಿಗಾಗಿ.

ರೈಲು ಆಗಮಿಸಿತು. ಕಿವಿ ಬಿರಿಯುವಂತೆ ಗುಂಪು ಜಯಕಾರ ಮಾಡಿತು. ತಿಲಕರನ್ನು ಸಂಭ್ರಮದಿಂದ ಬರಮಾಡಿಕೊಂಡಿತು. ಹೂಗಳಿಂದ ಅಲಂಕೃತವಾದ ಕುದುರೆ ಸಾರೋಟಿನಲ್ಲಿ ಮೆರವಣಿಗೆಯ ಸಿದ್ಧತೆಗಳು ನಡೆದಿದ್ದವು. ತಿಲಕರು ಸಾರೋಟಿನಲ್ಲಿ ಕುಳಿತರು. ಕುದುರೆಗಳ ಬದಲು ಅದನ್ನು ವಿದ್ಯಾರ್ಥಿಗಳೇ ಎಳೆಯಲು ಆರಂಭಿಸಿದರು. ಅದಕ್ಕೆ ತಿಲಕರು ಒಪ್ಪಲಿಲ್ಲ. ಮಧ್ಯೆ ಪ್ರವೇಶಿಸಿ, “ನಿಮ್ಮ ಉತ್ಸಾಹವನ್ನು ಇನ್ನೂ ಉತ್ತಮ ಕಾರ್ಯಕ್ಕಾಗಿ ಉಳಿಸಿಕೊಂಡು ಬನ್ನಿ” ಎಂದರು. ಮೆರವಣಿಗೆಯ ಅನಂತರ ಅವರಿಗೆ ಸನ್ಮಾನ. ತಿಲಕರಿಗೆ ಸ್ವಾಗತ, ಅಂದಿನ ಪ್ರದರ್ಶನ ಸಮಾರಂಭಗಳ ನಾಯಕತ್ವ ವಹಿಸಿದ್ದವನು ಅವಿನಾಶಿಲಾಲ್‌.

ಈ ವಿದ್ಯಾರ್ಥಿಯೇ ಮುಂದೆ ದೊಡ್ಡವನಾಗಿ ರಾಷ್ಟ್ರದ ರಾಜಕೀಯ, ಸಾಮಾಜಿಕ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಅಪಾರ ಸೇವೆ ಸಲ್ಲಿಸಿ ವಿಖ್ಯಾತರಾದ ಆಚಾರ್ಯ ನರೇಂದ್ರದೇವ. ಪಂಡಿತ ಮಾಧವ ಪ್ರಸಾದ ಮಿಶ್ರಾ ಎಂಬ ಖ್ಯಾತ ಹಿಂದೀ ಲೇಖಕ ಅವಿನಾಶಿಲಾಲರಿಗೆ ‘ನರೇಂದ್ರದೇವ’ ಎಂಬ ಹೆಸರನ್ನು ಕೊಟ್ಟರು.

ಬಾಲ್ಯ

ನರೇಂದ್ರದೇವರು ಉತ್ತರ ಪ್ರದೇಶದ ಸೀತಾಪುರದ ಗಣ್ಯ ಮನೆತನದಲ್ಲಿ ೧೮೮೯ನೇ ಅಕ್ಟೋಬರ್ ೩೦ ರಂದು ಜನಿಸಿದರು. ಅನಂತರ ಅವರ ತಂದೆ ಬಲದೇವ ಪ್ರಸಾದ್‌ ಫೈಜಾಬಾದ್‌ಗೆ ಬಂದು ನೆಲಸಿದರು.

ಚಿಕ್ಕ ವಯಸ್ಸಿನಲ್ಲೇ ನರೇಂದ್ರದೇವ ತುಳಸೀ ರಾಮಾಯಣ, ಮಹಾಭಾರತ, ಭಗವದ್ಗೀತೆ ಓದುವುದನ್ನು ಕಲಿತ. ಅಮರಕೋಶವನ್ನು ಓದಿದ. ಗುರುಗಳೊಬ್ಬರಿಂದ ವೇದವನ್ನೂ ಗೀತೆಯ ಶ್ಲೋಕಗಳನ್ನೂ ತಪ್ಪಿಲ್ಲದೇ ಸರಿಯಾಗಿ ಉಚ್ಛಾರಣೆ ಮಾಡುವುದನ್ನು ಕಲಿತ. ಇಡೀ ಗೀತೆಯನ್ನು ಅವನು ಬಾಯಿಪಾಠ ಮಾಡಿದ. ತಂದೆಯ ಜೊತೆ ಸಂಜೆ ಹೊತ್ತು ಪ್ರಾರ್ಥನೆ ಮಾಡುತ್ತಿದ್ದ.

ಶಾಲೆ

ಹತ್ತನೇ ವಯಸ್ಸಿನಲ್ಲೆ ಹುಡುಗನಿಗೆ ಉಪನಯವಾಯಿತು. ಅನಂತರ ಶಾಲಾ ಶಿಕ್ಷಣ ಆರಂಭ. ಹುಡುಗ ಬಹಳ ಬುದ್ಧಿವಂತ. ಅವನಿಗೆ ಸಮರ್ಥ ಉಪಾಧ್ಯಾಯರೂ ದೊರೆತಿದ್ದರು. ಪ್ರತಿ ತರಗತಿಯಲ್ಲಿಯೂ ನರೇಂದ್ರ ಪ್ರಥಮ ದರ್ಜೆಯ ವಿದ್ಯಾರ್ಥಿ. ಶಾಲೆಯಲ್ಲಿ ಉಪಾಧ್ಯಾಯರ ಪ್ರೀತಿಗೆ ಪಾತ್ರನಾಗಿದ್ದ. ವಿದ್ಯಾರ್ಥಿಗಳಿಗೂ ಈ ಬುದ್ಧಿವಂತ, ಲವಲವಿಕೆಯ ಹುಡುಗ ಎಂದರೆ ವಿಶ್ವಾಸ. ವಿದ್ಯಾರ್ಥಿಗಳ ಮುಂದಾಳೂ ಆದ.

ತಿಲಕರಿಗೆ ಸ್ವಾಗತದ ನಾಯಕತ್ವ ವಹಿಸಿದ್ದವನು ನರೇಂದ್ರದೇವ

ಆ ಕಾಲದಲ್ಲಿ ವಿದ್ಯಾರ್ಥಿಗಳಲ್ಲಿ ಧೂಮಪಾನದ ಚಟ ಇತ್ತು. ಇತರ ಹುಡುಗರು ಧೂಮಪಾನ ಮಾಡುತ್ತಿದ್ದುದನ್ನು ನರೇಂದ್ರ ನೋಡುತ್ತಿದ್ದ. ಅವನಿಗೂ ಅದರ ರುಚಿ ನೋಡಬೇಕೆಂದು ಆಸೆ. ಸಿಗರೇಟು ಹಚ್ಚಿ ಮೊದಲ ಬಾರಿಗೆ ಸೇದಿದಾಗ ತಲೆ ಸುತ್ತುವಂತಾಯಿತು. ಹುಡುಗನಿಗೆ ಆಶ್ಚರ್ಯವಾಯಿತು-ಈ ಕಷ್ಟ ಅನುಭವಿಸುವುದಕ್ಕೆ ಜನ ಧೂಮಪಾನ ಏಕೆ ಮಾಡುತ್ತಾರೆ ಎಂದು. ಅಂದಿನಿಂದ ಆತ ಸಿಗರೇಟು ಮುಟ್ಟಲಿಲ್ಲ. (ವಯಸ್ಸಾದ ಮೇಲೆ ಮಾತ್ರ ತಮಗಿದ್ದ ಉಬ್ಬಸದ ತೊಂದರೆಯನ್ನು ಕಡಮೆ ಮಾಡಿಕೊಳ್ಳಲು ಆಗಾಗ್ಗೆ ಧೂಮಪಾನ ಮಾಡುತ್ತಿದ್ದರು.)

ನರೇಂದ್ರದೇವ ಮೆಟ್ರಿಕ್ಯುಲೇಷನ್‌ ಓದುತ್ತಿದ್ದಾಗ ಸ್ವಾಮಿ ರಾಮತೀರ್ಥರು ಫೈಜಾಬಾದ್‌ಗೆ ಆತನ ತಂದೆಯ ಅತಿಥಿಯಾಗಿ ಬಂದಿದ್ದರು. ರಾಮತೀರ್ಥರು ಬಹುದೊಡ್ಡ ವಿದ್ವಾಂಸರು, ಪ್ರತಿಭಾವಂತರು. ಅವರು  ವೇದಾಂತ ವಿಷಯ ಕುರಿತು ಉಪನ್ಯಾಸ ಮಾಡಿದರು. ಸ್ವಾಮಿಯವರ ಆಕರ್ಷಣೀಯ ವ್ಯಕ್ತಿತ್ವ ನರೇಂದ್ರದೇವನ ಮೇಲೆ ಪರಿಣಾಮ ಬೀರಿತು. ಅನಂತರ ನರೇಂದ್ರದೇವ ಸ್ವಾಮಿಯವರ ಕೃತಿಗಳನ್ನೆಲ್ಲಾ ಅಧ್ಯಯನ ಮಾಡಿದ.

ರಾಜಕೀಯದ ಅನುಭವ ಪ್ರಾರಂಭ

ನರೇಂದ್ರದೇವನ ಶಾಲಾ ವಿದ್ಯಾಭ್ಯಾಸ ಮುಗಿಯಿತು. ಕಾಲೇಜು ವಿದ್ಯಾಭ್ಯಾಸಕ್ಕೆ ಅಲಹಾಬಾದ್‌ಗೆ ಬಂದ. ಅಲಹಾಬಾದ್‌ನಲ್ಲಿ ಅವನಿಗೆ ರಾಜಕೀಯದಲ್ಲಿ ಹೆಚ್ಚಿನ ಆಸಕ್ತಿಯುಂಟಾಯಿತು. ಭಾರತಕ್ಕೆ ಆಗ ಸ್ವಾತಂತ್ಯ್ರ ಇರಲಿಲ್ಲ. ಬ್ರಿಟಿಷರ ಕೈಯಲ್ಲಿ ದೇಶ ನರಳುತ್ತಿತ್ತು. ಬ್ರಿಟಿಷರ ಆಡಳಿತವನ್ನು ಕೊನೆಗಾಣಿಸಲು ರಾಷ್ಟ್ರೀಯ ಕಾಂಗ್ರೆಸ್‌ ಸಂಸ್ಥೆ ಚಳುವಳಿ ನಡೆಸುತ್ತಿತ್ತು. ಅಲಹಾಬಾದ್‌ನಲ್ಲಿ ಈ ಚಳುವಳಿಯ ಪ್ರತ್ಯಕ್ಷ ಪರಿಚಯ, ಅನುಭವ ನರೇಂದ್ರನಿಗಾಯಿತು.

ಆಗ ಬ್ರಿಟಿಷ್‌ ಸರ್ಕಾರದ ವಿರುದ್ಧ ಬಂಗಾಳದಲ್ಲಿ ಎಲ್ಲೆಲ್ಲೂ ಕ್ರಾಂತಿಗೆ ಸಿದ್ಧತೆ ನಡೆಯುತ್ತಿತ್ತು. ಇದರಿಂದ ಬ್ರಿಟಿಷರು ಹೆದರಿದರು. ಬಂಗಾಳದ ಪೂರ್ವ ಭಾಗದಲ್ಲಿ ಮುಸ್ಲಿಮರು ಹೆಚ್ಚು ಪಶ್ಚಿಮ ಭಾಗದಲ್ಲಿ ಹಿಂದೂಗಳು ಹೆಚ್ಚು ಬಂಗಾಳವನ್ನು ಎರಡು ಭಾಗ ಮಾಡಿದರೆ ಹಿಂದೂ-ಮುಸಲ್ಮಾನರ ಒಗ್ಗಟ್ಟು ಮುರಿದು ಕ್ರಾಂತಿಗೆ ತಡೆಯಾಗುವುದೆಂದು ಬ್ರಿಟಿಷರು ಯೋಚಿಸಿದರು. ೧೯೦೫ರಲ್ಲಿ ಬಂಗಾಳವನ್ನು ಎರಡಾಗಿ ಸೀಳಿ ಶಾಸನ ಮಾಡಿದರು.

ಈ ವಿಭಜನೆಯನ್ನು ವಿರೋಧಿಸಿ ಜನತೆ ದಂಗೆ ಎದ್ದಿತು. ಪೂರ್ವ ಬಂಗಾಳದ ಗವರ್ನರ್ ತುಂಬಾ ಕ್ರೌರ್ಯದಿಂದ ವರ್ತಿಸಿ ಜನನಾಯಕರನ್ನು ಅವಮಾನಗೊಳಿಸಿದ. ‘ವಂದೇಮಾತರಂ’ ಗೀತೆ ಹಾಡಿದ್ದಕ್ಕಾಗಿ ೭೦೦ ಮಂದಿ ವಿದ್ಯಾರ್ಥಿಗಳನ್ನು ಶಾಲೆಯಿಂದ ತೆಗೆದು ಹಾಕಿದ. ಹಲವು ವಿದ್ಯಾರ್ಥಿಗಳಿಗೆ ಕಠಿಣ ಶಿಕ್ಷೆ, ದಂಡಗಳನ್ನು ವಿಧಿಸಿದ. ಇಂಥ ದಬ್ಬಾಳಿಕೆಯಿಂದ ಬಂಗಾಳ ಅಲ್ಲೋಲಕಲ್ಲೋಲವಾಯಿತು. ಬ್ರಿಟಿಷ್‌ ಸರ್ಕಾರದ ಮೇಲೆ ಜನರು ಕ್ರೋಧದಿಂದ ಬೆಂಕಿ ಕಾರುತ್ತಿದ್ದರು.

ಈ ಕಾಲದಲ್ಲಿ ರಾಷ್ಟ್ರೀಯ ಕಾಂಗ್ರೆಸ್‌ನಲ್ಲಿ ಎರಡು ಪಂಗಡಗಳಾದವು. ಒಂದು ಗುಂಪಿನವರು ಮಿತವಾದಿಗಳು. ಇವರು ಭಾರತ ಬ್ರಿಟಿಷ್‌ ಸಾಮ್ರಾಜ್ಯದಲ್ಲಿಯೆ ಇರಬೇಕು ಎಂದು ನಂಬಿದ್ದರು. ಭಾರತೀಯರು ತಮ್ಮನ್ನು ತಾವು ಆಳಿಕೊಳ್ಳುವಷ್ಟು ಅಧಿಕಾರವನ್ನು ಪಡೆಯಲು ಪ್ರಯತ್ನಿಸಬೇಕು. ಇದಕ್ಕಾಗಿ ಸರ್ಕಾರವನ್ನು ವಿರೋಧಿಸಬೇಕಾಗಿಲ್ಲ ಎಂದು ಇವರ ನಂಬಿಕೆ. ಇಂಗ್ಲಿಷರಿಗೆ ಕಾನೂನಿನಲ್ಲಿ ಗೌರವ, ಕಾನೂನಿನ ಪ್ರಕಾರ ನಾವು ನಡೆದುಕೊಂಡರೆ, ನಮ್ಮ ಕಷ್ಟಗಳನ್ನೂ ಬೇಡಿಕೆಗಳನ್ನೂ ಮತ್ತೆಮತ್ತೆ ಹೇಳಿಕೊಂಡರೆ ಇಂಗ್ಲಿಷರೂ ಒಪ್ಪುತ್ತಾರೆ ಎಂದು ಭಾವಿಸಿದ್ದರು ಇವರು. ಆದರೆ ಇನ್ನೊಂದು ಗುಂಪಿನವರು ಉಗ್ರವಾದಿಗಳು. ಭಾರತ ಬ್ರಿಟನ್‌ನೊಡನೆ ಸಂಪೂರ್ಣವಾಗಿ ಸಂಪರ್ಕ ಕಡಿದುಕೊಳ್ಳಬೇಕು, ಸ್ವತಂತ್ರವಾಗಬೇಕು ಎಂದು ವಾದಿಸುತ್ತಿದ್ದರು. ಮನವಿಗಳು, ಬೇಡಿಕೆಗಳು ಇವುಗಳಲ್ಲಿ ಇವರಿಗೆ ನಂಬಿಕೆ ಇರಲಿಲ್ಲ. ಹೋರಾಟ ನಡೆಸಿದರೇ ಇಂಗ್ಲಿಷ್‌ ಸರ್ಕಾರ ಎಚ್ಚೆತ್ತುಕೊಳ್ಳುವುದು, ಹೋರಾಟಕ್ಕೆ ದೇಶ ಸಿದ್ಧವಾಗಬೇಕು ಎಂದು ಇವರ ಅಭಿಪ್ರಾಯ.

ಮಿತವಾದಿಗಳು ಮತ್ತು ಉಗ್ರವಾದಿಗಳ ನಡುವೆ ಅಭಿಪ್ರಾಯದ ಘರ್ಷಣೆ ಇತ್ತು. ಅಲಹಾಬಾದ್‌ನಲ್ಲಿ ನರೇಂದ್ರದೇವ ಅವರು ಹಿಂದೂ ವಸತಿನಿಲಯದಲ್ಲಿದ್ದರು. ಇದು ತೀವ್ರವಾದಿಗಳ ಕೇಂದ್ರವಾಗಿತ್ತು. ವಿದ್ಯಾರ್ಥಿನಿಲಯದಲ್ಲಿ ರಾಜಕೀಯ ವಿಚಾರ ಕುರಿತು ಆಗಾಗ್ಗೆ ಬಿಸಿಬಿಸಿ ಚರ್ಚೆ ನಡೆಯುತ್ತಿತ್ತು. ಹೀಗೆ ನರೇಂದ್ರದೇವರಿಗೆ ದೇಶದ ರಾಜಕೀಯದ ಅನುಭವ ಆಯಿತು.

ತಿಲಕರ ಪ್ರಭಾವ

೧೯೦೬ರಲ್ಲಿ ಕಲ್ಕತ್ತದಲ್ಲಿ ನಡೆದ ಕಾಂಗ್ರೆಸ್‌ ಅಧಿವೇಶನದಲ್ಲಿ ನರೇಂದ್ರದೇವರು ಕೆಲವು ಸ್ನೇಹಿತರೊಂದಿಗೆ ಭಾಗವಹಿಸಿದ್ದರು. ಅಧಿವೇಶನಕ್ಕೆ ಲೋಕಮಾನ್ಯ ಬಾಲಗಂಗಾಧರ ತಿಲಕರು ಅಧ್ಯಕ್ಷರಾಗಿರಬೇಕೆಂದು ಹಲವರು ಪ್ರಚಾರ ಮಾಡತೊಡಗಿದರು. ತಿಲಕರು ಉಗ್ರಗಾಮಿಗಳು. ಆದುದರಿಂದ ಮಿತವಾದಿಗಳು ಭಯಪಟ್ಟು ದಾದಾಭಾಯ್‌ ನವರೋಜಿ ಎಂಬ ಹಿರಿಯ ನಾಯಕರು ಅಧ್ಯಕ್ಷರಾಗಿರಬೇಕೆಂದು ಸೂಚಿಸಿದರು. ನವರೋಜಿ ಅವರಲ್ಲಿ ವಿಶೇಷ ಗೌರವವಿಟ್ಟಿದ್ದ ತಿಲಕರು ಅವರೆದುರು ಚುನಾವಣೆಗೆ ನಿಲ್ಲಲು ಒಪ್ಪಲಿಲ್ಲ. ನವರೋಜಿ ಅವರೇ ಸರ್ವಾನುಮತದಿಂದ ಅಧ್ಯಕ್ಷರಾಗಿ ಚುನಾಯಿತರಾದರು. ನವರೋಜಿ ಕಾಂಗ್ರೆಸ್‌ ಅಧ್ಯಕ್ಷರಾಗಿರದಿದ್ದ ಪಕ್ಷದಲ್ಲಿ ಕಲ್ಕತ್ತದಲ್ಲೇ ಕಾಂಗ್ರೆಸ್‌ ಒಡೆಯುತ್ತಿತ್ತು.

ಕಾಂಗ್ರೆಸ್‌ ನೀತಿ ಅಸಮರ್ಪಕವೆಂದೂ ಅದರ ಕಾರ್ಯಕ್ರಮ ಪೂರ್ತಿ ಬದಲಾಗಬೇಕೆಂದೂ ತಿಲಕರು ಸೂಚಿಸಿದರು.

ಗೋಪಾಲಕೃಷ್ಣ ಗೋಖಲೆ ಎಂಬ ಹಿರಿಯರು ಮಿತವಾದಿಗಳ ನಾಯಕರು. ಅವರು ಉಗ್ರವಾದಿಗಳ ಅಭಿಪ್ರಾಯವನ್ನು ವಿರೋಧಿಸಿದರು. ಇಂಗ್ಲೆಂಡಿನಿಂದ ಆಮದಾದ ವಸ್ತುಗಳನ್ನು ಮುಟ್ಟಬಾರದು, ಆಂಗ್ಲ ಸರ್ಕಾರ ಸ್ಥಾಪಿಸಿರುವ ಶಾಲೆ, ನ್ಯಾಯಾಲಯಗಳನ್ನು ಬಹಿಷ್ಕರಿಸಬೇಕು ಎಂದು ಉಗ್ರಗಾಮಿಗಳು ಪ್ರತಿಯಾಗಿ ವಾದಿಸಿದರು. ಕೊನೆಗೆ ಬಹಿಷ್ಕಾರ, ಸ್ವದೇಶಿ ಮತ್ತು ರಾಷ್ಟ್ರೀಯ ವಿದ್ಯಾಭ್ಯಾಸದ ಮೂಲಕ ಸ್ವರಾಜ್ಯ ಸ್ಥಾಪನೆಯ ಗುರಿಗಾಗಿ ಶ್ರಮಿಸಬೇಕೆಂದು ಕಾಂಗ್ರೆಸ್‌ ಒಪ್ಪಿತು.

ಮುಂದಿನ ಅಧಿವೇಶನ ಸೂರತ್‌ನಲ್ಲಿ ಸೇರಿತು. ಇದು ಬಹಳ ಗದ್ದಲದ, ಗೊಂದಲದ ಅಧಿವೇಶನ. ಕಾಂಗ್ರೆಸ್‌ ಆಗಲೆ ಒಪ್ಪಿದ ತತ್ತ್ವಗಳನ್ನು ಬಿಟ್ಟುಕೊಡಲು ಮಿತವಾದಿಗಳು ಯತ್ನಿಸಿದರು. ತಿಲಕರಿಗೆ ಇದು ಸರಿ ತೋರಲಿಲ್ಲ. ಇದರಿಂದ ನಾಡಿಗೆ ಕೇಡುಂಟಾಗುವುದೆಂದು ವಾದಿಸಿದರು. ತಿಲಕರು ವೇದಿಕೆಯ ಮೇಲೆ ಬಂದು ಮಾತನಾಡಲು ಆರಂಭಿಸಿದಾಗ ಮಿತವಾದಿಗಳು ಅವರ ಮೇಲೆ ಎಸೆಯಲು ಕುರ್ಚಿಗಳನ್ನು ಎತ್ತಿದರು. ಸ್ವಲ್ಪವೂ ಬೆದರದೆ ತಮಗೆ ಭಾಷಣ ಮಾಡುವ ಹಕ್ಕಿದೆಯೆಂದೂ ತಮಗೆ ಅವಕಾಶ ನೀಡುವ ತನಕ ಕದಲುವುದಿಲ್ಲವೆಂದೂ ವೇದಿಕೆಯ ಮೇಲೆ ನಿಂತರು. ಮಿತವಾದಿಗಳಿಂದ ತಿಲಕರಿಗೆ ಏಟು ಬೀಳದಂತೆ ಉಗ್ರಗಾಮಿಗಳು ರಕ್ಷಿಸಿದರು. ಸಭೆಯನ್ನು ನಿಲ್ಲಿಸಬೇಕಾಯಿತು. ಕಾಂಗ್ರೆಸ್‌ನ ಒಗ್ಗಟ್ಟು ಮುರಿಯಿತು.

ಲೋಕಮಾನ್ಯ ತಿಲಕರು ಕಾಂಗ್ರೆಸ್‌ ಸಂಸ್ಥೆಯಲ್ಲೇ ಹೊಸ ಪಕ್ಷದ ರಚನೆಯನ್ನು ಘೋಷಿಸಿದರು. ಸ್ವರಾಜ್ಯ, ಸ್ವದೇಶಿ ಮತ್ತು ರಾಷ್ಟ್ರೀಯ ಶಿಕ್ಷಣ-ಇವೇ ಹೊಸ ಪಕ್ಷದ ಮುಖ್ಯ ಕಾರ್ಯಕ್ರಮಗಳಾಗಿದ್ದವು.

ನರೇಂದ್ರದೇವ ಉಗ್ರ ಮನೋಭಾವದ ತಿಲಕರು ಮತ್ತು ಅರವಿಂದರ ಪ್ರಭಾವಕ್ಕೆ ಒಳಗಾದರು. ಅರವಿಂದರು ಪ್ರಕಟಿಸುತ್ತಿದ್ದ ‘ವಂದೇ ಮಾತರಂ’ ಮತ್ತು ‘ಆರ್ಯ’ ಪತ್ರಿಕೆಗಳನ್ನು ತಪ್ಪದೆ ಓದುತ್ತಿದ್ದರು. ಎಡ ಪಕ್ಷದವರ- ಎಂದರೆ ಸಮಾಜವಾದದ ಆದರ್ಶಗಳ – ಕಡೆ ಅವರ ಮನಸ್ಸು ಒಲಿಯಿತು. ವಿದ್ಯಾರ್ಥಿಯಾಗಿ ಅವರು ಸ್ವದೇಶಿ ಚಳುವಳಿಯಲ್ಲಿ ಭಾಗವಹಿಸಿದರು. ಹೀಗೆ ವಿದ್ಯಾರ್ಥಿಯಾಗಿದ್ದಾಗಲೇ ನರೇಂದ್ರದೇವರು ದೇಶದ ರಾಜಕೀಯ ಸ್ಥಿತಿಯ ವಿಷಯ ಯೋಚಿಸಬೇಕಾಯಿತು. ದೇಶದ ಉದ್ಧಾರಕ್ಕೆ ಬೇರೆ ಬೇರೆ ಮಾರ್ಗಗಳಲ್ಲಿ ಯಾವುದು ಉತ್ತಮ ಎಂದು ಯೋಚಿಸಿ ತೀರ್ಮಾನಿಸಬೇಕಾಯಿತು.

ವಕೀಲರಾಗಿ

ನರೇಂದ್ರದೇವರು ಸಂಸ್ಕೃತ ಎಂ.ಎ. ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಜೊತೆಗೆ ಕಾಲೇಜಿನ ಪುಸ್ತಕ ಭಂಡಾರದಲ್ಲಿ ಭಾರತೀಯ ಇತಿಹಾಸ, ಸಾಮಾಜಿಕ ವಿಜ್ಞಾನ, ತತ್ತ್ವಶಾಸ್ತ್ರಕ್ಕೆ ಸಂಬಂಧಿಸಿದ ಗ್ರಂಥಗಳನ್ನೆಲ್ಲಾ ಆಳವಾಗಿ ಅಧ್ಯಯನ ಮಾಡಿದರು. ವಕೀಲ ವೃತ್ತಿಯಲ್ಲಿದ್ದುಕೊಂಡೇ ರಾಜಕೀಯದಲ್ಲಿ ಭಾಗವಹಿಸಬಹುದೆಂಬ ಮುಖ್ಯ ಉದ್ದೇಶದಿಂದ ಅವರು ನ್ಯಾಯಶಾಸ್ತ್ರವನ್ನು ವ್ಯಾಸಂಗ ಮಾಡಿದರು. ಪ್ರೇಮಾದೇವಿ ಎಂಬುವರೊಡನೆ ಅವರ ವಿವಾಹವಾಯಿತು.

ಫೈಜಾಬಾದ್‌ನಲ್ಲಿ ಅವರು ವಕೀಲ ವೃತ್ತಿ ಆರಂಭಿಸಿದರು. ನರೇಂದ್ರದೇವ ಅವರು ಸಾವಿರಗಟ್ಟಲೆ ಹಣ ಗಳಿಸಿದರು. ಅವರು ‘ಕೊಡುಗೈ ಕರ್ಣ’ನೂ ಆಗಿದ್ದರು. ಬಡ ವಿದ್ಯಾರ್ಥಿಗಳಿಗೆ ಬಹಳ ಉದಾರವಾಗಿ ಹಣ ಕೊಡುತ್ತಿದ್ದರು. ಧರ್ಮಕಾರ್ಯಗಳಿಗೆ ಧನಸಹಾಯ ಮಾಡುತ್ತಿದ್ದರು. ತಮ್ಮ ಪುಸ್ತಕ ಭಂಡಾರದಿಂದ ಬಡ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ಓದಲು ಕೊಡುತ್ತಿದ್ದರು.

ನರೇಂದ್ರದೇವರಿಗೆ ವಕೀಲರಾಗಿ ಬಿಡುವಿಲ್ಲದಷ್ಟು ಕೆಲಸ. ಆದರೆ ವಿದ್ಯಾರ್ಥಿಯಾಗಿದ್ದಾಗಲೆ ಅವರಿಗೆ ದೇಶದ ಸ್ವಾತಂತ್ಯ್ರ ಮತ್ತು ಸಮಾಜದ ಅಭಿವೃದ್ಧಿ ಇವುಗಳಲ್ಲಿ ತುಂಬ ಆಸಕ್ತಿ ಇದ್ದಿತು. ವಕೀಲ ವೃತ್ತಿಯ ಕೆಲಸಗಳ ಮಧ್ಯೆಯೂ ಇತರ ಚಟುವಟಿಕೆಗಳಿಗೆ ಹೇಗಾದರೂ ಬಿಡುವು ಮಾಡಿಕೊಳ್ಳುತ್ತಿದ್ದರು.

ಫೈಜಾಬಾದ್‌ನಲ್ಲಿ ಸಾಂಸ್ಕೃತಿಕ ಸಂಘ ಸ್ಥಾಪಿಸಿದರು. ವಾರಕ್ಕೊಮ್ಮೆ ತಮ್ಮ ಮನೆಯಲ್ಲಿ ಸಭೆಗಳನ್ನು ಏರ್ಪಡಿಸುತ್ತಿದ್ದರು. ರಾಜಕೀಯ ಮತ್ತು ಸಾಮಾಜಿಕ ವಿಷಯಗಳನ್ನು ಕುರಿತು ಈ ಸಭೆಗಳಲ್ಲಿ ಚರ್ಚೆ ನಡೆಯುತ್ತಿತ್ತು. ಅಯೋಧ್ಯೆಗೆ ನೂರಾರು ಮಂದಿ ಯಾತ್ರಿಕರು ಬರುತ್ತಿದ್ದರು. ದೇಶದ ಬೇರೆಬೇರೆ ಭಾಗಗಳಿಂದ ಬಂದ ಇವರಲ್ಲಿ ಎಷ್ಟೋ ಮಂದಿಗೆ ಉತ್ತರ ಭಾರತದ ಭಾಷೆಗಳು ಬರುತ್ತಿರಲಿಲ್ಲ. ತುಂಬ ಕಷ್ಟಪಡುತ್ತಿದ್ದರು. ಆದುದರಿಂದ ನರೇಂದ್ರದೇವರು ಯಾತ್ರಿಕರಿಗೆ ಸಹಾಯ ಮಾಡಲು ಸ್ವಯಂಸೇವಕರ ತಂಡವನ್ನೇ ನಿರ್ಮಿಸಿದ್ದರು.

ದೇಶದ ಸ್ವಾತಂತ್ಯ್ರಕ್ಕಾಗಿ ಬಾಲಗಂಗಾಧರ ತಿಲಕರು ಚಳುವಳಿಯನ್ನು ಪ್ರಾರಂಭಿಸಿದರು. ಬ್ರಿಟಿಷ್‌ ಸರ್ಕಾರ ಅವರನ್ನು ಬಂಧಿಸಿ, ಬರ್ಮಾದೇಶದ ಮಾಂಡಲೆ ಜೈಲಿನಲ್ಲಿ ಸೆರೆ ಇಟ್ಟಿತು. ೧೯೧೪ರಲ್ಲಿ ಅವರ ಬಿಡುಗಡೆ ಆಯಿತು. ತಿಲಕರು ಪುನಃ ತಮ್ಮ ಸಹಕಾರ್ಯಕರ್ತರನ್ನೆಲ್ಲಾ ಒಂದುಗೂಡಿಸಿದರು. ತಮ್ಮ ಚಳುವಳಿ ಮುಂದುವರಿಸಲು ಹೋಂ ರೂಲ್‌ ಲೀಗ್‌ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ನರೇಂದ್ರದೇವ ಕೂಡ ಫೈಜಾಬಾದ್‌ನಲ್ಲಿ ಹೋಂ ರೂಲ್‌ ಲೀಗ್‌ ಶಾಖೆ ಆರಂಭಿಸಿದರು. ಆ ಶಾಖೆಗೆ ಅವರೇ ಕಾರ್ಯದರ್ಶಿಯಾದರು. ಹೋಂ ರೂಲ್‌ ಲೀಗ್‌ ಮೂಲಕ ಫೈಜಾಬಾದ್‌ ನಾಗರಿಕರಲ್ಲಿ ರಾಜಕೀಯ ಪ್ರಜ್ಞೆ ಮೂಡಿಸಿದರು.

ವಕೀಲರಾಗಿ ನರೇಂದ್ರದೇವರು ತಿಂಗಳಿಗೆ ಸಾವಿರಾರು ರೂಪಾಯಿ ಸಂಪಾದಿಸುತ್ತಿದ್ದರು. ಆದರೆ ದೇಶಸೇವೆಗಾಗಿ ಎಲ್ಲವನ್ನೂ ಬಿಡಬೇಕು, ಬ್ರಿಟಿಷರ ಕಛೇರಿಗಳು, ನ್ಯಾಯಾಲಯಗಳಿಂದ ಭಾರತೀಯರು ದೂರವಾಗಬೇಕು ಎಂದು ತಿಲಕರು ಕರೆ ಕೊಟ್ಟರು. ನರೇಂದ್ರದೇವರು ಕೈತುಂಬ ದುಡ್ಡು ಕೊಡುತ್ತಿದ್ದ ವಕೀಲ ವೃತ್ತಿಯನ್ನು ಬಿಟ್ಟು ದೇಶದ ಸೇವೆಗೇ ಮುಡಿಪಾದರು.

ಶಿಕ್ಷಣ ಕ್ಷೇತ್ರದಲ್ಲಿ

ಯಾವ ದೇಶದಲ್ಲಿಯೆ ಆಗಲಿ, ಯಾವ ಕಾಲದಲ್ಲಿಯೆ ಆಗಲಿ, ವಿದ್ಯಾಭ್ಯಾಸ ಪದ್ಧತಿ ಬಹು ಮುಖ್ಯವಾದದ್ದು. ವಿದ್ಯಾರ್ಥಿಗಳಿಗೆ ತಮ್ಮ ದೇಶದ ವಿಷಯ ತಿಳಿಯಬೇಕು. ಅವರು ಸ್ವತಂತ್ರವಾಗಿ ಯೋಚನೆ ಮಾಡುವ ಶಕ್ತಿ ಬೆಳೆಯಬೇಕು. ಸೇವೆಯ ಮನೋಭಾವನೆ ಬಲಗೊಳ್ಳಬೇಕು. ಆದರೆ ಸುಮಾರು ಐವತ್ತು ವರ್ಷದ ಹಿಂದಿನ ವಿದ್ಯಾಭ್ಯಾಸ ಪದ್ಧತಿ ಭಾರತೀಯರ ಮನಸ್ಸನ್ನು ಬ್ರಿಟಿಷರ ಆಡಳಿತಕ್ಕೆ ಒಗ್ಗಿಸುವಂತಿತ್ತು. ನಮ್ಮ ದೇಶದ ಇತಿಹಾಸ, ಸಂಸ್ಕೃತಿ, ಹಿರಿಮೆಗಳ ವಿಷಯ ತಿಳಿಯುತ್ತಿದ್ದುದು ಕಡಮೆ. ಬ್ರಿಟಿಷರಿಂದ ಭಾರತಕ್ಕೆ ಮಹಾ ಉಪಕಾರವಾಯಿತು ಎಂಬ ಭಾವನೆಯನ್ನೆ ಅದು ಬೆಳೆಸುತ್ತಿತ್ತು.

ಭಾರತೀಯ ಭಾಷೆ, ಸಂಸ್ಕೃತಿ, ಇತಿಹಾಸದ ಬಗ್ಗೆ ತಿರಸ್ಕಾರ; ಪಾಶ್ಚಾತ್ಯರ ಬಗ್ಗೆ ಗೌರವ ಉಂಟುಮಾಡುವುದೇ ಆಗಿನ ವಿದ್ಯಾಭ್ಯಾಸದ ಗುರಿ. ಭಾರತೀಯ ಸಂಸ್ಕೃತಿಗೆ ಅನುಗುಣವಾಗಿ ವಿದ್ಯಾಭ್ಯಾಸ ಕೊಡಬೇಕೆಂಬ ಉದ್ದೇಶದಿಂದ ರಾಷ್ಟ್ರೀಯ ಶಿಕ್ಷಣ ಆರಂಭವಾಯಿತು. ವಿದ್ಯಾಪ್ರಚಾರವೇ ಸ್ವಾತಂತ್ಯ್ರ ಚಳುವಳಿಯ ಮೊದಲ ಹೆಜ್ಜೆಯಾಯಿತು. ಈ ಚಳುವಳಿಗೆ ನರೇಂದ್ರದೇವರು ಧುಮುಕಿದರು.

ರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳು ದೇಶದ ಅನೇಕ ಕಡೆಗಳಲ್ಲಿ ಸ್ಥಾಪಿಸಲ್ಪಟ್ಟವು. ೧೯೨೧ ರಲ್ಲಿ ಕಾಶಿ ವಿದ್ಯಾಪೀಠ ಆರಂಭವಾಯಿತು. ಹಿರಿಯ ವಿದ್ವಾಂಸರು ಹಾಗೂ ತತ್ತ್ವಜ್ಞಾನಿ ಬಾಬು ಭಗವಾನ್‌ದಾಸ್‌ ವಿದ್ಯಾಪೀಠದ ಪ್ರಾಚಾರ್ಯರಾಗಿದ್ದರು. ನರೇಂದ್ರದೇವರು ಭಾರತೀಯ ಇತಿಹಾಸದ ಪ್ರಾಧ್ಯಾಪಕರಾಗಿದ್ದರು. ಸ್ವಲ್ಪ ಸಮಯದಲ್ಲಿಯೇ ವಿದ್ಯಾಪೀಠದ ಉಪಪ್ರಾಚಾರ್ಯರಾದರು. ಹಾಗೂ ಸಂಸ್ಥೆಯ ಮುಖ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಅವರು ವಿದ್ಯಾಪೀಠದ ಅಭಿವೃದ್ಧಿಗೆ ಬಹುವಾಗಿ ಶ್ರಮಿಸಿದರು.

ಭಗವಾನ್‌ದಾಸ್‌ ಅವರು ವಿದ್ಯಾಪೀಠದ ಅಧ್ಯಕ್ಷತೆಗೆ ರಾಜಿನಾಮೆ ಇತ್ತು ನರೇಂದ್ರದೇವರಿಗೆ ತಮ್ಮ ಅಧಿಕಾರ ವಹಿಸಿಕೊಟ್ಟರು. ಕಾಶಿಯಲ್ಲಿ ನರೇಂದ್ರದೇವರಿಗೆ ಅನೇಕ ಗಣ್ಯರ ಪರಿಚಯವಾಯಿತು. ಶ್ರೀಪ್ರಕಾಶರು ಆ ಕಾಲದ ಮತ್ತೊಬ್ಬ ಸ್ವಾತಂತ್ಯ್ರ ಹೋರಾಟಗಾರರು. ಅವರಿಗೆ ನರೇಂದ್ರದೇವರನ್ನು ಕಂಡರೆ ಹೆಚ್ಚಿನ ಮಮತೆ. ಅವರು ನರೇಂದ್ರದೇವರನ್ನು ‘ಆಚಾರ್ಯ’ ಎಂದು ಕರೆಯುತ್ತಿದ್ದರು. ಕ್ರಮೇಣ ‘ಆಚಾರ್ಯ’ ಎಂಬುದು ನರೇಂದ್ರದೇವರ ಹೆಸರಿನ ಒಂದು ಭಾಗವಾಯಿತು.

ಉಪಕುಲಪತಿ

ಆಚಾರ್ಯ ನರೇಂದ್ರದೇವರು ಕಾಶಿ ವಿದ್ಯಾಪೀಠದ ಪ್ರಾಚಾರ್ಯರಾಗಿ ಕೊನೆಗೆ ಉಪಕುಲಪತಿಗಳಾದರು. ವಿದ್ಯಾಪೀಠದ ವಾರ್ಷಿಕ ಘಟಿಕೋತ್ಸವದಲ್ಲಿ ಗಾಂಧೀಜಿ ಭಾಷಣ ಮಾಡಿದರು. ಆಗ ಗಾಂಧೀಜಿ ಅವರಿಗೆ ನರೇಂದ್ರದೇವ ಅವರ ಪರಿಚಯವಾಯಿತು. ಅಂದಿನಿಂದ ಅವರು ಗಾಂಧೀಜಿಗೆ ಪ್ರೀತಿಪಾತ್ರರಾದರು.

ನರೇಂದ್ರದೇವರು ಪಾಂಡಿತ್ಯಕ್ಕೆ ಮತ್ತು ದಕ್ಷ ಆಡಳಿತಕ್ಕೆ ಹೆಸರಾದವರು. ಅವರು ಸ್ವಾತಂತ್ಯ್ರಕ್ಕೆ ಮೊದಲೂ ಸ್ವಾತಂತ್ಯ್ರ ಬಂದನಂತರವೂ ಹಲವು ಸ್ಥಾನಗಳಲ್ಲಿ ಕೆಲಸ ಮಾಡಿದರು. ಎರಡು ಸಾರಿ ಲಖ್ನೋ ವಿಶ್ವವಿದ್ಯಾನಿಲಯದ ಉಪಕುಲಪತಿಯಾಗಿ ನೇಮಕಗೊಂಡರು. ಕಾಶಿ ಹಿಂದೂ ವಿಶ್ವವಿದ್ಯಾನಿಲಯದ ಉಪಕುಲಪತಿಯಾಗಿಯೂ ಅವರು ಕೆಲಸ ಮಾಡಿದರು.

ಉಪಕುಲಪತಿಯಾಗಿ ನರೇಂದ್ರದೇವರು ವಿದ್ಯಾರ್ಥಿಗಳಿಗೆ ನೆರವಾಗುತ್ತಿದ್ದರು. ತಮ್ಮ ಸ್ವಂತ ಹಣದಿಂದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನಗಳನ್ನು ಕೊಟ್ಟದ್ದೂ ಉಂಟು. ಬಡ ವಿದ್ಯಾರ್ಥಿಗಳೆಂದರೆ ಅವರಿಗೆ ಬಹಳ ಸಹಾನುಭೂತಿ. ಆದರೆ ಶಿಸ್ತಿನ ವಿಷಯದಲ್ಲಿ ಅವರು ಬಹಳ ಕಟ್ಟುನಿಟ್ಟು. ಒಮ್ಮೆ ಒಬ್ಬ ವಿದ್ಯಾರ್ಥಿ ಎಷ್ಟು ತರಗತಿಗಳಿಗೆ ಬಂದಿರಬೇಕಾಗಿತ್ತೋ ಅಷ್ಟು ತರಗತಿಗಳಿಗೆ ಬಂದಿರಲಿಲ್ಲ. ಅವನು ಪರೀಕ್ಷೆಗೆ ಕುಳಿತುಕೊಳ್ಳಲು ಅನುಮತಿ ಕೊಡಬೇಕೆಂದು ಉಪಕುಲಪತಿ ನರೇಂದ್ರದೇವರನ್ನು ಬೇಡಿದ. ಅವರು ಒಪ್ಪಲಿಲ್ಲ. ರಾಜ್ಯದ ರಾಜ್ಯಪಾಲರೇ ವಿಶ್ವವಿದ್ಯಾನಿಲಯದ ಕುಲಪತಿಗಳೂ ಆಗಿದ್ದರು. ವಿದ್ಯಾರ್ಥಿ ಅವರ ಬಳಿ ಹೋಗಿ ಸಹಾಯ ಮಾಡಬೇಕೆಂದು ಬೇಡಿದ. ಅವನ ಪ್ರಾರ್ಥನೆಯನ್ನು ಸಹಾನುಭೂತಿಯಿಂದ ಪರಿಶೀಲಿಸಬೇಕೆಂದು ಕುಲಪತಿ ರಾಜ್ಯಪಾಲರು ನರೇಂದ್ರದೇವರಿಗೆ ಹೇಳಿದರು. ನರೇಂದ್ರ ದೇವರು ಖಡಾಖಂಡಿತವಾಗಿ “ಆಗುವುದಿಲ್ಲ” ಎಂದುಬಿಟ್ಟರು.

ವಿಶ್ವವಿದ್ಯಾನಿಲಯಗಳ ಕರ್ತವ್ಯ

ವಿದ್ಯಾರ್ಥಿಗಳು ತಮ್ಮ ವ್ಯಾಸಂಗದ ಕಡೆ ಹೆಚ್ಚು ಲಕ್ಷ್ಯ ಕೊಡುವಂತೆ ಮಾಡಲು ಹಾಗೂ ಉತ್ತಮ ವಾತಾವರಣ ಕಲ್ಪಿಸಲು ನರೇಂದ್ರದೇವರು ವಿಶ್ವವಿದ್ಯಾನಿಲಯದ ಆಡಳಿತದಲ್ಲಿ ಅನೇಕ ಸುಧಾರಣೆಗಳನ್ನು ತಂದರು.

 

ರೈತರೊಡನೆ ನರೇಂದ್ರದೇವ

ಆಚಾರ್ಯ ನರೇಂದ್ರದೇವರ ದೃಷ್ಟಿಯಲ್ಲಿ ಶಿಕ್ಷಣದ ಗುರಿ ಏನು? ವಿಶ್ವವಿದ್ಯಾನಿಲಯಗಳು ಏನು ಮಾಡಬೇಕು? ಅವರ ಮಾತುಗಳಲ್ಲಿಯೇ ತಿಳಿಯೋಣ:

“ಜೀವನದಲ್ಲಿ ಕಷ್ಟಗಳು ಬರುತ್ತವೆ. ವಿದ್ಯಾರ್ಥಿ ಅವಕ್ಕೆ ಹೆದರದೆ ಜೀವನದ ಸವಾಲು ಎದುರಿಸಲು ಸಿದ್ಧನಾಗಿರುವಂತೆ ವಿದ್ಯಾಭ್ಯಾಸ ಮಾಡಬೇಕು; ಜೊತೆಗೇ ಅವನು ತನ್ನ ಜೀವನವನ್ನು ನಡೆಸಿಕೊಳ್ಳಲು ಸಾಧ್ಯವಾಗುವಂತೆಯೂ ಮಾಡಬೇಕು. ನಾವು ವಿಶ್ವಸಮಾಜದ ಒಂದು ಅಂಗವಾಗಿರುವುದರಿಂದ ಅಂತರರಾಷ್ಟ್ರೀಯ ಅರಿವು ಮತ್ತು ಸ್ನೇಹವನ್ನು ಬೆಳೆಸಿಕೊಳ್ಳಬೇಕು. ಇದಕ್ಕಾಗಿ ಇತರ ರಾಷ್ಟ್ರಗಳ ಸಂಸ್ಕೃತಿಯನ್ನು ಮುಖ್ಯವಾಗಿ ನೆರೆರಾಷ್ಟ್ರಗಳ ಸಂಸ್ಕೃತಿಯನ್ನು ನಾವು ಚೆನ್ನಾಗಿ ತಿಳಿದುಕೊಳ್ಳಬೇಕು.

“ಈಗ ವಿಶ್ವವಿದ್ಯಾನಿಲಯಗಳಲ್ಲಿ ಇರುವವರು ಕೆಲವು ವರ್ಷಗಳಲ್ಲಿ ಪ್ರಜೆಗಳಾಗಿರುತ್ತಾರೆ, ನಾಯಕರಾಗುತ್ತಾರೆ. ಅವರೇ ದೇಶವನ್ನು ನಡೆಸಬೇಕು. ಆದುದರಿಂದ ಸಾರ್ವಜನಿಕ ವ್ಯವಹಾರಗಳ ಆಡಳಿತ ಹಾಗೂ ನಾಯಕತ್ವಕ್ಕಾಗಿ ಯುವಜನಾಂಗಕ್ಕೆ ತರಬೇತಿ ನೀಡುವುದು ವಿಶ್ವವಿದ್ಯಾನಿಲಯಗಳ ಕರ್ತವ್ಯ.

“ವಿದ್ಯಾರ್ಥಿಗಳು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳುವಂತೆ ಮಾಡಬೇಕು. ಬೆಲೆಬಾಳುವ ಪುಸ್ತಕಗಳನ್ನು ಕೊಂಡುಕೊಳ್ಳಲು ಸಾಧ್ಯವಾಗದ ಬಡ ವಿದ್ಯಾಥಿಗಳ ಉಪಯೋಗಕ್ಕಾಗಿಯೇ ಪಠ್ಯಪುಸ್ತಕಗಳನ್ನೊಳಗೊಂಡ ಪ್ರತ್ಯೇಕ ವಿಭಾಗವನ್ನು ವಿಶ್ವವಿದ್ಯಾನಿಲಯಗಳ ಪುಸ್ತಕ ಭಂಡಾರಗಳಲ್ಲಿ ವ್ಯವಸ್ಥೆಗೊಳಿಸಬೇಕು.”

ದೇಶಕ್ಕಾಗಿ ಸೆರೆಮನೆಯಲ್ಲಿ

೧೯೩೦ರಲ್ಲಿ ಗಾಂಧೀಜಿ ಅಸಹಕಾರ ಚಳುವಳಿ ಆರಂಭಿಸಿದರು. ಬ್ರಿಟಿಷ್‌ ಸರ್ಕಾರದೊಡನೆ ಭಾರತೀಯರು ಸಹಕರಿಸುವುದಿಲ್ಲ. ಅವರ ಕಾನೂನುಗಳಿಗೆ ವಿಧೇಯರಗಿರುವುದಿಲ್ಲ ಎನ್ನುವುದು ಇದರ ತಿರುಳು. ದೇಶದಲ್ಲಿ ರಾಷ್ಟ್ರೀಯತೆಯ ಉಗ್ರಜ್ವಾಲೆ ಹಬ್ಬಿತು. ಸಾವಿರಾರು ಮಂದಿ ಭಾರತೀಯರು ಭಾಗವಹಿಸಿದರು. ಹಳ್ಳಿಹಳ್ಳಿಗಳಲ್ಲಿ ಅಕ್ಷರ ತಿಳಿಯದ ಗಂಡಸರು, ಹೆಂಗಸರು ಧೈರ್ಯವಾಗಿ ಸರ್ಕಾರದ ವಿರುದ್ಧ ತಿರುಗಿಬಿದ್ದರು. ರಾಷ್ಟ್ರೀಯ ಶಿಕ್ಷಣಕ್ಕೆ ಸೆರೆಮನೆಗಳೇ ಶಾಲೆಗಳಾದವು.

ಈ ಚಳುವಳಿಯಲ್ಲಿ ನರೇಂದ್ರದೇವರು ದಸ್ತಗಿರಿಯಾದರು. ೧೯೩೧ ರಲ್ಲಿ ಸರ್ಕಾರಕ್ಕೆ ಕಂದಾಯ ಕೊಡುವುದಿಲ್ಲ ಎಂಬ ಚಳುವಳಿ ನಡೆಯಿತು. ನರೇಂದ್ರದೇವರು ಪುನಃ ದೀರ್ಘ ಕಾಲಾವಧಿವರೆಗೆ ಸೆರೆಮನೆವಾಸ ಅನುಭವಿಸಬೇಕಾಯಿತು. ಸೆರೆಮನೆಯಲ್ಲಿ ನರೇಂದ್ರದೇವರ ಆರೋಗ್ಯ ಕೆಟ್ಟಿತು. ಉಬ್ಬಸದಿಂದ ತುಂಬ ನರಳಿದರು. ಸೆರೆಮನೆಯಿಂದ ಹೊರಬಂದ ಮೇಲೂ ನರೇಂದ್ರದೇವರ ಆರೋಗ್ಯ ಸುಧಾರಿಸಲಿಲ್ಲ. ವಿಶ್ರಾಂತಿ ಪಡೆಯುವಂತೆ ವೈದ್ಯರು ಸಲಹೆ ನೀಡಿದರು.

ಗಾಂಧೀಜಿ ಚಳುವಳಿಯನ್ನು ನಿಲ್ಲಿಸಿದರು. ಅಹಿಂಸೆ ಮಹಾತ್ಮರ ಜೀವದುಸಿರು. ಆದುದರಿಂದ, ಅಲ್ಲಲ್ಲಿ ಜನ ಹಿಂಸೆಯಿಂದ ನಡೆದುಕೊಂಡರು ಎಂದು ಚಳುವಳಿಯನ್ನೆ ಗಾಂಧೀಜಿ ನಿಲ್ಲಿಸಿದರು. ಸಾವಿರಾರು ಮಂದಿ ಯುವಕರು ಉತ್ಸಾಹದಿಂದ ಚಳುವಳಿಗೆ ಧುಮುಕಿದ್ದರು. ಈ ಬಾರಿ ಬ್ರಿಟಿಷರನ್ನು ಓಡಿಸುತ್ತೇವೆ ಎಂಬ ವಿಶ್ವಾಸದಿಂದ, ಓದನ್ನೂ ಕೆಲಸವನ್ನೂ ಮನೆಮಠಗಳನ್ನೂ ತ್ಯಜಿಸಿ ಬಂದಿದ್ದರು. ಗಾಂಧೀಜಿ ಚಳುವಳಿಯನ್ನು ನಿಲ್ಲಿಸಿದುದರಿಂದ ಇವರಿಗೆಲ್ಲ ತುಂಬ ನಿರುತ್ಸಾಹವಾಯಿತು. ಗಾಂಧೀಜಿ ತಮ್ಮ ಪ್ರಯತ್ನದಲ್ಲಿ ವಿಫಲರಾದರೆಂಬ ಶಂಕೆ, ರಾಷ್ಟ್ರೀಯ ಚಳುವಳಿಯಲ್ಲಿ ಭಾಗವಹಿಸಿದ್ದ ಅಂದಿನ ಯುವಕರಲ್ಲಿ ಮೂಡಿತು. ಕೆಲವು ತರುಣರಿಗೆ ಅಹಿಂಸೆಯಿಂದ ಫಲವಿಲ್ಲ. ಶಸ್ತ್ರ ಹಿಡಿದೇ ಹೋರಾಡಬೇಕು, ಬಾಂಬು ಮೊದಲಾದವನ್ನು ಉಪಯೋಗಿಸಬೇಕು ಎಂದೂ ತೋರಿತು. ಅವರು ಬ್ರಿಟಿಷರ ವಿರುದ್ಧ ಸಶಸ್ತ್ರ ಹೋರಾಟಕ್ಕೆ ಇಳಿದರು.

ಹೊಸ ದಾರಿಸಮಾಜವಾದ

ಈ ಸಮಯದಲ್ಲಿ ಆಚಾರ್ಯರಂಥ ವ್ಯಕ್ತಿಗಳು ಬುದ್ಧಿ ಜೀವಿಗಳಿಗೆ ಸರಿಯಾದ ಮಾರ್ಗದರ್ಶನ ನೀಡದಿದ್ದ ಪಕ್ಷದಲ್ಲಿ ಬಹುತೇಕ ಮಂದಿ ಯುವಕರು ಭಯೋತ್ಪಾದನೆ, ಹಿಂಸಾಕೃತ್ಯ ಹಾಗೂ ಗುಪ್ತ ಚಟುವಟಿಕೆಗಳಲ್ಲಿ ನಿರತರಾಗುತ್ತಿದ್ದರು. ನರೇಂದ್ರದೇವರು ವಿಚಾರ ಮತ್ತು ನಡೆಯಲ್ಲಿ ಕ್ರಾಂತಿಕಾರಿಗಳಾಗಿದ್ದರು. ಅವರು ಯುವಜನರ ಮತ್ತು ಜನಸಾಮಾನ್ಯರ ಮನಸ್ಸು ಮತ್ತು ಆಸೆಗಳನ್ನು ಚೆನ್ನಾಗಿ ಅರಿತಿದ್ದರು. ಅವರು ರಾಜಕೀಯ ವಿಚಾರವಾದಿಗಳಿಗೆ ಹೊಸ ಮಾರ್ಗವನ್ನು ತೋರಿಸಿದರು. ಅದೇ ‘ಸಮಾಜವಾದ’.

ಈಗ ‘ಸಮಾಜವಾದ’ದ ಮಾತನ್ನು ಮತ್ತೆ ಮತ್ತೆ ಕೇಳುತ್ತೇವೆ. ಮೊಟ್ಟಮೊದಲು ಇದನ್ನು ಭಾರತದ ಜನತೆಗೆ ತಿಳಿಸಿಕೊಟ್ಟವರು ಆಚಾರ್ಯ ನರೇಂದ್ರದೇವ. ಅದು ಕಾರ್ಯಗತವಾಗಲು ಅವರು ಹೊಸ ಚಳುವಳಿಯನ್ನೇ ಆರಂಭಿಸಿದರು. ರಾಷ್ಟ್ರದಲ್ಲೇ ಮೊಟ್ಟಮೊದಲು ವ್ಯವಸ್ಥಿತವಾದ ಸಮಾಜವಾದಿ ಚಳುವಳಿಯ ನಾಯಕರಾದರು.

ಸಮಾಜವಾದ ಎಂದರೇನು?

ಸಮಾಜವಾದದ ಮುಖ್ಯ ಗುರಿ ಇಡೀ ಸಮಾಜದ ಕಲ್ಯಾಣ. ಇದೊಂದು ಹೊಸ ಆರ್ಥಿಕ ಮತ್ತು ಸಾಮಾಜಿಕ ವ್ಯವಸ್ಥೆ. ಸಮಾಜದಲ್ಲಿ ಯಾರೋ ಕೆಲವರು ಸಾಹುಕಾರರಾದರೆ, ನೆಮ್ಮದಿಯಿಂದ ಇದ್ದರೆ ಸಾಲದು. ಎಲ್ಲರೂ ಅತ್ಯಗತ್ಯವಾದ ಆಹಾರ-ಬಟ್ಟೆ-ವಸತಿ-ಶಿಕ್ಷಣ-ಔಷಧೋಪಚಾರ ಮೊದಲಾದ ಸೌಲಭ್ಯಗಳನ್ನಾದರೂ ಪಡೆಯಬೇಕು. ಸಮಾಜದ ಸಂಪತ್ತು ಕೆಲವರ ಕೈಯಲ್ಲಿ ಸೇರಬಾರದು. ರೈಲ್ವೆ ಕೆಲಸಗಾರ, ಹಡಗುಗಳ ಕೆಲಸಗಾರ, ಕಾರ್ಖಾನೆ ಕೆಲಸಗಾರ, ಗಣಿಯ ಕೆಲಸಗಾರ, ಉಪಾಧ್ಯಾಯ, ವೈದ್ಯ- ಎಲ್ಲ ವರ್ಗಗಳ ಎಲ್ಲ ಕೆಲಸಗಾರರೂ ಸೇರಿ ಸಂಪಾದಿಸಿದ ಸಂಪತ್ತು. ಇದನ್ನು ಕೆಲವರು ದಕ್ಕಿಸಿಕೊಂಡು ವೈಭವದಿಂದ ಮೆರೆದು ಉಳಿದವರು ಬಡತನದಲ್ಲಿರುವುದು, ಕೆಲವರು ತಾವು ಮೈಬಗ್ಗಿಸಿ ಕೆಲಸ ಮಾಡದೆ ಇತರರನ್ನು ದುಡಿಸಿ, ಅವರಿಗೆ ಲಾಭದಲ್ಲಿ ಪಾಲು ಕೊಡದೆ, ಶೋಷಿಸುವುದು ಆಗಕೂಡದು. ಎಂದರೆ ಬಹುದೊಡ್ಡ ಉದ್ಯಮಗಳು, ಸಮಾಜಕ್ಕೆ ಬಹಳ ಲಾಭವನ್ನು ತಂದು ಕೊಡುವ ಉದ್ಯಮಗಳು ಕೆಲವೇ ವ್ಯಕ್ತಿಗಳ ಕೈಯಲ್ಲಿರಬಾರದು, ಸಮಾಜದ ಕೈಯಲ್ಲಿರಬೇಕು. ಸಂಪತ್ತು ಸಮನಾಗಿ ಹಂಚಿಕೆಯಾಗಬೇಕು. ಸಮಾಜದ ಆಸ್ತಿಪಾಸ್ತಿಗಳಿಗೆ, ಲಾಭಕ್ಕೆ ಉದ್ಯಮಗಳು ಸರ್ಕಾರದ ಆಡಳಿತದಲ್ಲಿ ಇರಬೇಕು.

ಸಮಾಜವಾದೀ ಪಕ್ಷ

೧೯೩೪ರಲ್ಲಿ ನಾಸಿಕ್‌ ಸೆಂಟ್ರಲ್‌ ಜೈಲ್‌ನಲ್ಲಿ ಜಯಪ್ರಕಾಶ ನಾರಾಯಣ್‌ ಮುಂತಾದ ಹಲವು ತರುಣರು ಸೇರಿ ಕಾಂಗ್ರೆಸ್‌ ಸಮಾಜವಾದೀ ಪಕ್ಷವನ್ನು ಹುಟ್ಟುಹಾಕಿದರು. ಇವರೆಲ್ಲ ೧೯೩೨ರ ಅಸಹಕಾರ ಚಳುವಳಿ ಸಮಯದಲ್ಲಿ ಬಂಧಿತರಾಗಿ ಸೆರೆಮನೆ ಸೇರಿದ್ದರು. ಭಾರತದಲ್ಲಿ ಸಮಾಜವಾದದ ಬೆಳವಣಿಗೆಗೆ ಸಮಾಜವಾದಿಗಳೆಲ್ಲಾ ಒಟ್ಟಿಗೆ ಸೇರಿ ಕೆಲಸ ಮಾಡಬೇಕು ಎಂದು ಇವರ ಅಪೇಕ್ಷೆ.

೧೯೩೪ರ ಮೇ ತಿಂಗಳಲ್ಲಿ ಪಟ್ನಾದಲ್ಲಿ ಪ್ರಥಮ ಸಮಾಜವಾದಿಗಳ ಸಮ್ಮೇಳನ ಸೇರಿತ್ತು. ಆಚಾರ್ಯ ನರೇಂದ್ರದೇವರೇ ಅಧ್ಯಕ್ಷರು. “ಸಮಾಜದಲ್ಲಿನ ವಿವಿಧ ವರ್ಗಗಳ ನಡುವೆ ಸಮಾನತೆ ಇಲ್ಲದೆ ಹೋಗಿದೆ. ಐಶ್ವರ್ಯವಂತರು, ಬಡವರು ಎಂಬ ಅಸಮಾನತೆಯನ್ನು ಹೋಗಲಾಡಿಸಬೇಕು. ಜನಸಾಮಾನ್ಯರನ್ನು ಒಂದು ಗೂಡಿಸಬೇಕು. ನಮ್ಮ ರಾಷ್ಟ್ರೀಯ ಚಳುವಳಿಯ ವ್ಯಾಪ್ತಿಯನ್ನು ವಿಶಾಲಗೊಳಿಸಬೇಕು” ಎಂದು ನರೇಂದ್ರದೇವರು ತಮ್ಮ ಅಧ್ಯಕ್ಷ ಭಾಷಣದಲ್ಲಿ ತಿಳಿಸಿದರು.

ಭಾರತದ ಸಮಾಜವಾದಿಗಳು ಗಾಂಧೀಜಿ ಅವರ ಅಹಿಂಸಾ ತತ್ತ್ವವನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳಲಿಲ್ಲ. ಆದರೆ ಅವರ ಸತ್ಯಾಗ್ರಹ ಚಳುವಳಿ ಮಾರ್ಗ ಸಮಾಜವಾದಿಗಳಿಗೆ ಇಷ್ಟವಾಯಿತು. ಭಾರತದಲ್ಲಿ ಹಿಂಸೆಯ ರೀತಿಯನ್ನು ಬಳಸಬೇಕಾಗಿಲ್ಲ, ಪ್ರಜಾಪ್ರಭುತ್ವದ ಮಾರ್ಗಗಳಿಂದ ಅಧಿಕಾರಕ್ಕೆ ಬರಲು ಸಾಧ್ಯವೆಂದು ಸಮಾಜವಾದಿಗಳು ಭಾವಿಸಿದರು.

ಅಖಿಲ ಭಾರತ ಸಮಾಜವಾದಿಗಳ ತಂಡಕ್ಕೆ ಜಯಪ್ರಕಾಶ ನಾರಾಯಣರೇ ಕಾರ್ಯದರ್ಶಿಯಾದರು. ಆಚಾರ್ಯ ನರೇಂದ್ರದೇವರು ಭಾರತದಲ್ಲಿನ ಸಮಾಜವಾದೀ ಚಳುವಳಿಯ ಮಾರ್ಗದರ್ಶಕರಾದರು, ತತ್ತ್ವ ಬೋಧಕರಾದರು.

ಹೀಗೆ ಯುವಕರಿಗೆ ದಾರಿ ತೋರಿಸುವುದು ಎಷ್ಟು ಅಗತ್ಯವಾಗಿತ್ತು ಎಂಬುದು ಸ್ವಲ್ಪ ಕಾಲದಲ್ಲಿಯೇ ಸ್ಪಷ್ಟವಾಯಿತು.

ಸಮಾಜವಾದೀ ಪಕ್ಷ ರಚನೆಯನ್ನು ಜವಾಹರಲಾಲ್‌ ನೆಹರೂ, ಸುಭಾಷ್‌ಚಂದ್ರ ಬೋಸ್‌ ಮುಂತಾದವರು ಸ್ವಾಗತಿಸಿದರು. ೧೯೩೯ರಲ್ಲಿ ನೆಹರೂ ಅವರು ಎರಡನೇ ಬಾರಿಗೆ ಭಾರತ ರಾಷ್ಟ್ರೀಯ ಕಾಂಗ್ರೆಸ್‌ ಅಧ್ಯಕ್ಷರಾಗಿ ಆಯ್ಕೆಯಾದ ಮೇಲೆ ಅವರು ಬಹಿರಂಗವಾಗಿ ಸಮಾಜವಾದದಲ್ಲಿ ತಮ್ಮ ನಂಬಿಕೆಯನ್ನು ವ್ಯಕ್ತಪಡಿಸಿದರು. ಹಾಗೂ ಸಮಾಜವಾದೀ ಮುಂದಾಳುಗಳಾಗಿದ್ದ ಆಚಾರ್ಯ ನರೇಂದ್ರದೇವ, ಜಯಪ್ರಕಾಶ ನಾರಾಯಣ್‌ ಮತ್ತು ಅಚ್ಯುತ ಪಟವರ್ಧನ್‌ ಅವರನ್ನು ಕಾಂಗ್ರೆಸ್‌ ಕಾರ್ಯಕಾರಿ ಸಮಿತಿಗೆ ಸದಸ್ಯರನ್ನಾಗಿ ತೆಗೆದುಕೊಂಡರು. ಇದೇ ಸಮಯದಲ್ಲಿ ಆಚಾರ್ಯ ನರೇಂದ್ರದೇವರು ಉತ್ತರ ಪ್ರದೇಶ ಪ್ರಾಂತೀಯ ಕಾಂಗ್ರೆಸ್‌ ಸಮಿತಿ ಅಧ್ಯಕ್ಷರಾಗಿ ಚುನಾಯಿತರಾದರು.

ರೈತ ಸಂಘಟನೆ

ಭಾರತದ ಜನರಲ್ಲಿ ಬಹು ಮಂದಿ ರೈತರು. ಅವರ ಸ್ಥಿತಿ ಉತ್ತಮವಾಗದೆ ದೇಶ ಮುಂದುವರಿಯುವಂತಿಲ್ಲ. ಈಗಲೂ ಅವರಲ್ಲಿ ಬಹುಮಂದಿಗೆ ಓದು ಬರಹ ಬರುವುದಿಲ್ಲ. ನಲವತ್ತು ವರ್ಷಗಳ ಹಿಂದೆ ಅವರ ಸ್ಥಿತಿ ಇನ್ನೂ ಕಷ್ಟವಾಗಿತ್ತು. ನರೇಂದ್ರದೇವರಿಗೆ ಅವರ ಕಷ್ಟಗಳಲ್ಲಿ ಸಹಾನುಭೂತಿ, ಅವರ ಸಮಸ್ಯೆಗಳನ್ನು ಪರಿಹರಿಸಬೇಕು ಎಂಬ ತವಕ. ಅವರ ಕಷ್ಟಗಳ ನಿವಾರಣೆ ಆಗಬೇಕಾದರೆ ಅವರಲ್ಲಿ ಜಾಗೃತಿ ಆಗಬೇಕು, ಅವರು ಒಟ್ಟುಗೂಡಬೇಕು ಎಂದು ಅವರ ನಂಬಿಕೆ. ೧೯೩೬ರಲ್ಲಿ ಅಖಿಲ ಭಾರತ ಕಿಸಾನ್‌ ಸಭಾ (ರೈತರ ಸಭೆ) ರಚನೆಯಾಯಿತು. ನರೇಂದ್ರದೇವರು ಎರಡು ಬಾರಿ ಕಿಸಾನ್‌ ಸಭಾ ಅಧ್ಯಕ್ಷರಾಗಿ ಚುನಾಯಿತರಾದರು.

ಭೂಕಂಪದ ಸಂಕಟಸ್ವಂತ ಅನಾರೋಗ್ಯ

ಈ ಮಧ್ಯೆ ಬಿಹಾರದಲ್ಲಿ ಭಯಂಕರ ಭೂಕಂಪ ಸಂಭವಿಸಿತು. ಸಾವಿರಾರು ಜನ ಆಸ್ತಿಪಾಸ್ತಿಗಳನ್ನು ಕಳೆದುಕೊಂಡು ತೊಂದರೆಗೊಳಗಾದರು. ನರೇಂದ್ರದೇವರು ಜನರ ಗೋಳನ್ನು ನೋಡಿ ಮರುಗಿದರು, ಸೇವೆಗೆ ನಡುಕಟ್ಟಿದರು. ಬಿಹಾರ ಪರಿಹಾರ ಸಮಿತಿ ಮುಂದಾಳಾಗಿ ಶ್ರಮಿಸಿದರು. ಹಣ, ಬಟ್ಟೆ ಔಷಧಿಯನ್ನು ಸಂಗ್ರಹಿಸಿದರು. ಪರಿಹಾರ ನೀಡಿಕೆ ಕಾರ್ಯವನ್ನು ಯಶಸ್ವಿಯಾಗಿ ನೆರವೇರಿಸಿದರು. ಈ ಸಂದರ್ಭದಲ್ಲಿ ನರೇಂದ್ರದೇವರಿಗೆ ಮತ್ತೊಬ್ಬ ಸಮಾಜವಾದೀ ಧುರೀಣ ಡಾಕ್ಟರ್ ರಾಮಮನೋಹರ ಲೋಹಿಯಾ ಅವರ ಪರಿಚಯವಾಯಿತು.

೧೯೪೧ನೇ ಅಕ್ಟೋಬರ್ ನಲ್ಲಿ ನರೇಂದ್ರದೇವರು ಸೆರೆಮನೆಯಿಂದ ಬಿಡುಗಡೆಯಾದರು. ಉಬ್ಬಸ ರೋಗದಿಂದ ನರಳುತ್ತಿದ್ದ ಅವರ ಆರೋಗ್ಯ ತೀರಾ ಕೆಟ್ಟಿತು. ಚಿಕಿತ್ಸೆಗಾಗಿ ಸೇವಾಗ್ರಾಮಕ್ಕೆ ಬರುವಂತೆ ನರೇಂದ್ರದೇವರನ್ನು ಗಾಂಧೀಜಿ ಆಹ್ವಾನಿಸಿದರು. ಗಾಂಧೀಜಿಗೆ ತೊಂದರೆ ಕೊಡಲು ನರೇಂದ್ರದೇವರಿಗೆ ಇಷ್ಟವಿರಲಿಲ್ಲ. ಅವರು ಸೇವಾಗ್ರಾಮಕ್ಕೆ ಹೋಗಲಿಲ್ಲ. ಅಖಿಲ ಭಾರತ ಕಾಂಗ್ರೆಸ್‌ ಸಮಿತಿ ಸಭೆಯಲ್ಲಿ ಭಾಗವಹಿಸಲು ಒಮ್ಮೆ ನರೇಂದ್ರದೇವರು ವರ್ಧಾಕ್ಕೆ ಹೋಗಿದ್ದಾಗ ಪುನಃ ಅವರ ಆರೋಗ್ಯ ಕೆಟ್ಟಿತು. ಆಗ ಸೇವಾಗ್ರಾಮದಲ್ಲಿ ನಾಲ್ಕು ತಿಂಗಳ ಕಾಲ ಇದ್ದು ಚಿಕಿತ್ಸೆ ಪಡೆದರು. ಗಾಂಧೀಜಿ ನರೇಂದ್ರದೇವರ ಆರೋಗ್ಯದ ಬಗ್ಗೆ ಹೆಚ್ಚಿನ ಆಸಕ್ತಿವಹಿಸಿದರು.

ಒಂದು ರಾತ್ರಿ ನರೇಂದ್ರದೇವರ ಆರೋಗ್ಯ ತೀರಾ ಕೆಟ್ಟಿತು. ಅವರನ್ನು ನೋಡಿಕೊಳ್ಳುತ್ತಿದ್ದ ವೈದ್ಯರಿಗೂ ಗಾಬರಿಯಾಯಿತು. ಕೂಡಲೇ ಗಾಂಧೀಜಿ ಅವರಿಗೆ ವಿಷಯವನ್ನು ತಿಳಿಸಿದರು. ಗಾಂಧೀಜಿ ನರೇಂದ್ರದೇವ ಅವರನ್ನು ನೋಡಲು ಬಂದರು. ಅಂದು ಸೋಮವಾರ, ಪ್ರತಿ ಸೋಮವಾರ ಗಾಂಧೀಜಿ ಮೌನವ್ರತ ಆಚರಿಸುತ್ತಿದ್ದರು . ಯಾರ ಜೊತೆಗೂ ಮಾತನಾಡುತ್ತಿರಿಲ್ಲ. ನರೇಂದ್ರದೇವ ಅವರಿಗೋಸ್ಕರ ಗಾಂಧೀಜಿ ತಮ್ಮ ಮೌನವ್ರತ ಮುರಿದರು. ಕೂಡಲೇ ವರ್ಧಾದಿಂದ ವೈದ್ಯರನ್ನು ಕರೆತರಿಸಿ ಬೆಳಗಿನ ಹೊತ್ತಿಗೆ ಗುಣಪಡಿಸಿದರು.

ಗಾಂಧೀಜಿ ಮತ್ತು ನರೇಂದ್ರ ದೇವ

ಭಾರತ ಬಿಟ್ಟು ತೊಲಗಿ ಚಳುವಳಿ

 

೧೯೪೨ರಲ್ಲಿ ಬ್ರಿಟಿಷರ ವಿರುದ್ಧ ಅಂತಿಮ ಹೋರಾಟಕ್ಕೆ ಭಾರತ ಸಿದ್ಧವಾಯಿತು. ೧೯೫೨ನೇ ಆಗಸ್ಟ್‌ ೯ ರಂದು ‘ಭಾರತ ಬಿಟ್ಟು ತೊಲಗಿ’ ಚಳುವಳಿ ಆರಂಭವಾಯಿತು. ‘ಮಾಡು ಇಲ್ಲವೆ ಮಡಿ’ ಎಂದು ಗಾಂಧೀಜಿ ಕರೆ ನೀಡಿದರು. ಚಳುವಳಿಗಾರರ ಮೇಲೆ ಲಾಠಿ ಪ್ರಹಾರ, ಅಶ್ರುವಾಯು, ಗೋಲಿಬಾರು ನಡೆದವು. ಭಾರತದಲ್ಲೆಲ್ಲ ಸಾವಿರಾರು ಮಂದಿ ಪ್ರಾಣ ತೆತ್ತರು, ಸೆರೆಮನೆ ಸೇರಿದರು. ಇಡೀ ಭಾರತ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿತು. ಇಡೀ ದೇಶವೇ ಸೆರೆಮನೆಯಾಯಿತು.

ಪುನಃ ನರೇಂದ್ರದೇವರು ದಸ್ತಗಿರಿಯಾದರು. ಅಹಮದ್‌ನಗರ ಕೋಟೆ ಜೈಲಿನಲ್ಲಿದ್ದ ನರೇಂದ್ರದೇವರು ದೇಶದ ರಾಜಕೀಯ ಮತ್ತು ಸಮಾಜವಾದ ಕುರಿತು ಅನೇಕ ಲೇಖನಗಳನ್ನು ಬರೆದರು. ಬೌದ್ಧ ಧರ್ಮ ಕುರಿತು ಹಿಂದಿಯಲ್ಲಿ ಮೇರುಕೃತಿಯೊಂದನ್ನು ರಚಿಸಿದರು.

೧೯೪೫ರಲ್ಲಿ ನರೇಂದ್ರದೇವ ಅವರ ಬಿಡುಗಡೆಯಾಯಿತು. ಗಾಂಧೀಜಿಯವರು ಸತ್ಯ, ಅಹಿಂಸೆ ಬಗ್ಗೆ ನರೇಂದ್ರದೇವರ ಅಭಿಪ್ರಾಯ ಕೇಳಿದರು. “ನಾನು  ಆರಂಭದಿಂದಲೂ ಸತ್ಯದ ಆರಾಧಕ. ಆದರೆ ಬ್ರಿಟಿಷರಿಂದ ಅಹಿಂಸೆಯಿಂದಲೇ ಅಧಿಕಾರ ಕಿತ್ತುಕೊಳ್ಳುವೆನೆಂಬ ನಂಬಿಕೆ ನನಗಿಲ್ಲ’ ಎಂದು ನರೇಂದ್ರದೇವರು ಉತ್ತರ ನೀಡಿದರು.

ಕಾಂಗ್ರೆಸಿಗೆ ರಾಜಿನಾಮೆ

೧೯೪೭ರ ಆಗಸ್ಟ್‌ ಬಂದಿತು. ದೇಶ ಸ್ವಾತಂತ್ಯ್ರ ಪಡೆಯಿತು.

ನರೇಂದ್ರದೇವ ಅವರಂತಹ ಸಮಾಜವಾದಿಗಳು ಕಾಂಗ್ರೆಸ್‌ ಪಕ್ಷದಲ್ಲಿಯೆ ಇದ್ದು, ಸಮಾಜವಾದದ ರಾಷ್ಟ್ರಕ್ಕಾಗಿ ಕೆಲಸ ಮಾಡುತ್ತಿದ್ದರು. ಇದು ಸರಿಯಲ್ಲ. ಕಾಂಗ್ರೆಸಿನೊಳಗೇ ಸಮಾಜವಾದಿಗಳ ಮತ್ತೊಂದು ಪಕ್ಷ ಇರಬಾರದು ಎಂದು ಕಾಂಗ್ರೆಸಿನಲ್ಲಿ ಕೆಲವರ ವಾದ. ಈ ವಾದವಿವಾದಗಳು ಬೆಳೆಯುತ್ತ ಹೋದವು. ಕಡೆಗೆ ನಾಸಿಕದಲ್ಲಿ ಸೇರಿದ್ದ ಸಮಾಜವಾದೀ ಸಮ್ಮೇಲನ ಈ ಬಗ್ಗೆ ನಿರ್ಣಯವೊಂದನ್ನು ಅಂಗೀಕರಿಸಿತು. ಈ ನಿರ್ಣಯದ ಪ್ರಕಾರ ಸಮಾಜವಾದಿಗಳು ಕಾಂಗ್ರೆಸನ್ನು ಬಿಟ್ಟರು. ನರೇಂದ್ರದೇವರೂ ಕಾಂಗ್ರೆಸಿಗೆ ರಾಜಿನಾಮೆ ಇತ್ತರು.

ಆ ಸಮಯದಲ್ಲಿ ಅವರು ಉತ್ತರ ಪ್ರದೇಶದ ವಿಧಾನಸಭೆಯ ಸದಸ್ಯರಾಗಿದ್ದರು. ಚುನಾವಣೆ ನಡೆದಾಗ ಅವರು ಕಾಂಗ್ರೆಸ್‌ ಪಕ್ಷದಿಂದ ಚುನಾವಣೆಗೆ ನಿಂತು ಗೆದ್ದಿದ್ದರು. ಈಗ ಅವರು ಕಾಂಗ್ರೆಸ್‌ ಪಕ್ಷ ಬಿಟ್ಟಾಗ ವಿಧಾನಸಭೆಯ ಸದಸ್ಯತ್ವವನ್ನು ಬಿಡಬೇಕು ಎಂದು ಯಾರೂ ಬಲವಂತ ಮಾಡುವ ಹಾಗಿರಲಿಲ್ಲ. ಅದನ್ನು ಉಳಿಸಿಕೊಳ್ಳಬಹುದಾಗಿತ್ತು. ಆದರೆ ಅದು ನ್ಯಾಯವಲ್ಲ ಎಂದು ಅವರಿಗೆ ಎನ್ನಿಸಿತು. ಆದುದರಿಂದ ಅವರು ಕಾಂಗ್ರೆಸ್‌ ಸದಸ್ಯತ್ವದ ಜತೆಗೆ ವಿಧಾನಸಭಾ ಸದಸ್ಯತ್ವಕ್ಕೂ ರಾಜಿನಾಮೆ ಇತ್ತರು. ತಮ್ಮ ರಾಜಿನಾಮೆಗೆ ಮುನ್ನ ವಿಧಾನಸಭೆಯಲ್ಲಿ ಹೇಳಿಕೆಯೊಂದನ್ನು ನೀಡಿದರು. ಅಂದು ವಿಧಾನಸಭೆಯ ಪ್ರೇಕ್ಷಕರು ಕುಳಿತುಕೊಳ್ಳುವ ಭಾಗದಲ್ಲಿ ಜನ ಕಿಕ್ಕಿರಿದು ತುಂಬಿದ್ದರು. ನರೇಂದ್ರದೇವ ಅವರು ಕಾಂಗ್ರೆಸ್‌ ನೀತಿಯನ್ನು ಉಗ್ರವಾಗಿ ಟೀಕಿಸಿ ಸಭೆಯಲ್ಲಿ ಮಾತನಾಡುತ್ತಾರೆ ಎಂದು ಎಲ್ಲರೂ ನಿರೀಕ್ಷಿಸಿದ್ದರು. ಇಡೀ ವಾತಾವರಣ ಉದ್ವೇಗದಿಂದ ಕೂಡಿತ್ತು. ಆದರೆ ನರೇಂದ್ರದೇವರು ನೀಡಿದ ಹೇಳಿಕೆ ಸಂಯಮ ಮತ್ತು ಘನತೆಯಿಂದ ಕೂಡಿತ್ತು. “ದ್ವೇಷ ಅಥವಾ ದುರುದ್ದೇಶದಿಂದ ನಾವು ಕಾಂಗ್ರೆಸ್‌  ಸಂಸ್ಥೆಯನ್ನು ಬಿಡುತ್ತಿಲ್ಲ. ನಮ್ಮ ನಡುವೆ ಯಾವ ಕಹಿ ವಾತಾವರಣವೂ ಇಲ್ಲ. ನಮ್ಮ ಅನೇಕ ಸ್ನೇಹಿತರು ಮತ್ತು ಸಹೋದ್ಯೋಗಿಗಳು ಕಾಂಗ್ರೆಸಿನಲ್ಲಿದ್ದಾರೆ. ಅವರೊಂದಿಗೆ ಉತ್ತಮ ಬಾಂಧವ್ಯ ಉಳಿಸಿಕೊಳ್ಳಬಯಸುತ್ತೇನೆ. ನಾವು ಬೇರೆಯಾಗುತ್ತಿರುವುದು ಅವರಿಗೂ ಸಹ ನಮ್ಮಷ್ಟೇ ವ್ಯಥೆಯುಂಟುಮಾಡಿದೆ ಎಂಬುದನ್ನು ನಾನು ಬಲ್ಲೆ” ಎಂದು ನರೇಂದ್ರದೇವರು ನುಡಿದಾಗ ಇಡೀ ಸಭೆ ವಿಸ್ಮಯಗೊಂಡಿತು.

ಸಮಾಜವಾದಕ್ಕಾಗಿ ಹೋರಾಟ

ನರೇಂದ್ರದೇವರು ಸ್ವತಂತ್ರವಾಗಿ ಸಮಾಜವಾದೀ ಚಳುವಳಿಯನ್ನು ಬಲಗೊಳಿಸಿದರು. ಅದಕ್ಕಾಗಿ ಶಕ್ತಿ ಮೀರಿ ದುಡಿದರು. ಅವರು ಸೋಲು, ಕಷ್ಟ, ಎಲ್ಲವನ್ನೂ ಅನುಭವಿಸಬೇಕಾಯಿತು. ರಾಜ್ಯ ವಿಧಾನಸಭೆಗೆ ಅವರು ಎರಡು ಬಾರಿ ಕಾಂಗ್ರೆಸ್‌ ವಿರುದ್ಧ ಸ್ಪರ್ಧಿಸಿ ಪರಾಜಯಗೊಂಡರು. ೧೯೫೨ರ ಸಾರ್ವತ್ರಿಕ ಚುನಾವಣೆಗಳಲ್ಲಿ ಸಮಾಜವಾದಿಗಳು ಭಾರೀ ಪರಾಭವಗೊಂಡರು. ಸಮಾಜವಾದೀ ಚಳುವಳಿಗೆ ಎಷ್ಟೋ ಅಡ್ಡಿ ಆತಂಕಗಳು ಬಂದವು. ಅನೇಕ ನಾಯಕರು ಪಕ್ಷ ತ್ಯಜಿಸಿದರು. ಹೊಸ ಪಕ್ಷ ರಚಿಸಿದರು. ಆಚಾರ್ಯ ನರೇಂದ್ರದೇವ ಅವರು ಮಾತ್ರ ತಮ್ಮ ನಿಲುವಿನಲ್ಲಿ ಬದಲಾವಣೆ ಮಾಡಲಿಲ್ಲ. ತಮ್ಮ ಜೀವಿತದ ಕೊನೆಯವರೆಗೂ ಸಮಾಜವಾದಿಗಳಾಗಿಯೇ ಮುಂದುವರೆದರು.

೧೯೫೫-೫೬ರ ಸಮಯದಲ್ಲಿ ಅವರು ತೀರ ಅಸ್ವಸ್ಥರಾದರು. ಚಿಕ್ಕ ವಯಸ್ಸಿನಲ್ಲೆ ಉಬ್ಬಸ ರೋಗಕ್ಕೆ ತುತ್ತಾದ ಅವರು ವಿಶ್ರಾಂತಿಯನ್ನೆ ತೆಗೆದುಕೊಳ್ಳುತ್ತಿರಲಿಲ್ಲ. ಕಾಯಿಲೆ ಆದಾಗಲೂ ಸರಿಯಾಗಿ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿರಲಿಲ್ಲ. ಆರೋಗ್ಯವಿರಲಿ, ಅನಾರೋಗ್ಯವಿರಲಿ ಪ್ರವಾಸ, ಬಿಡುವಿಲ್ಲದ ರಾಜಕೀಯ ಕಾರ್ಯ ಚಟುವಟಿಕೆಗಳು. ಹೀಗಾಗಿ ಅವರು ತಮ್ಮ ಆರೋಗ್ಯವನ್ನು ಕಡೆಗಣಿಸಿದರು. ಇದರಿಂದಾಗಿ ಅವರ ಉಬ್ಬಸ ರೋಗ ಉಲ್ಬಣಗೊಂಡಿತು. ಅವರ ಆತ್ಮೀಯ ಗೆಳೆಯರಾಗಿದ್ದ ಶ್ರೀಪ್ರಕಾಶರು ಆಗ ಮದರಾಸ್‌ ರಾಜ್ಯದಲ್ಲಿ ರಾಜ್ಯಪಾಲರಾಗಿದ್ದರು. ಚಿಕಿತ್ಸೆಗಾಗಿ ದಕ್ಷಿಣ ಭಾರತಕ್ಕೆ ಬರುವಂತೆ ನರೇಂದ್ರದೇವರನ್ನು ಶ್ರೀಪ್ರಕಾಶಕರು ಒತ್ತಾಯಪಡಿಸಿದರು.

೧೯೫೬ನೇ ಜನವರಿಯಲ್ಲಿ ನರೇಂದ್ರದೇವ ಅವರು ತಮ್ಮ ಹೆಂಡತಿಯೊಂದಿಗೆ ಮದರಾಸಿಗೆ ಬಂದರು. ಕೊಯಮತ್ತೂರು ಜಿಲ್ಲೆಯಲ್ಲಿ ಉತ್ತಮ ಹವಾಮಾನ ಇರುವ ಸ್ಥಳವೊಂದರಲ್ಲಿ ನರೇಂದ್ರದೇವರು ವಿಶ್ರಾಂತಿ ಪಡೆಯಲು ಏರ್ಪಾಟಾಯಿತು. ಸ್ವಲ್ಪ ಸಮಯದ ನಂತರ ಅವರ ಆರೋಗ್ಯ ಸುಧಾರಿಸಿತು. ಕೆಲವು ವಾರ ಕಳೆದವು. ಫೆಬ್ರವರಿ ಮಧ್ಯಭಾಗದಲ್ಲಿ ಅವರು ಪುನಃ ತೀರ ಅಸ್ವಸ್ಥರಾದರು. ೧೯೫೬ನೇ ಫೆಬ್ರವರಿ ೧೯ರಂದು ಅವರು ದೇಹತ್ಯಾಗ ಮಾಡಿದರು. ಆಗ ಅವರಿಗೆ ಅರವತ್ತೇಳು ವರ್ಷ.

ಶ್ರೇಷ್ಠ ಸಮಾಜವಾದಿ

ಆಚಾರ್ಯ ನರೇಂದ್ರದೇವರು ಉಜ್ವಲ ರಾಷ್ಟ್ರ ಪ್ರೇಮ. ದೇಶಸೇವೆಯಲ್ಲಿ ನುರಿತ ಜೀವ. ಅವರು ಬಹು ಭಾಷಾ ಪಂಡಿತರು. ಇಂಗ್ಲಿಷ್‌ ಮತ್ತು ಸಂಸ್ಕೃತ ಭಾಷೆಗಳಲ್ಲದೆ ಜರ್ಮನ್‌, ಪಾಳಿ, ಪರ್ಷಿಯನ್‌, ಬಂಗಾಳಿ, ಉರ್ದು ಅವರಿಗೆ ಚೆನ್ನಾಗಿ ಗೊತ್ತಿತ್ತು. ಆಧುನಿಕ ಪ್ರಪಂಚಕ್ಕೆ ಸಮತಾವಾದ ಅಥವಾ ಕಮ್ಯುನಿಸಂ ಅನ್ನು ಕೊಟ್ಟವನು ಕಾರ್ಲ್‌ಮಾರ್ಕ್ಸ್ (೧೯೧೮-೮೩). ಅವನು ಪ್ರತಿಪಾದಿಸಿದ ತತ್ತ್ವಗಳು ಮತ್ತು ಮಾರ್ಗಗಳಿಗೆ ಮಾರ್ಕ್ಸ್‌ವಾದ ಎಂದು ಹೆಸರು. ನರೇಂದ್ರದೇವರು ಮಾರ್ಕ್ಸ್‌ವಾದ ಮತ್ತು ಬೌದ್ಧ ಧರ್ಮ ಎರಡನ್ನೂ ಆಳವಾಗಿ ಅಧ್ಯಯನ ಮಾಡಿದ್ದರು. ಮಾರ್ಕ್ಸ್ ಮತ್ತು ಬುದ್ಧ ಇಬ್ಬರೂ ಸಮಾನತೆಯನ್ನು ಬೋಧಿಸಿದರು. ಬಡಬಗ್ಗರಿಗಾಗಿ ಮರುಗಿದರು ಎಂದು ಅವರು ಸಾಮ್ಯವನ್ನು ಕಂಡರು.

ಅವರು ಶ್ರೇಷ್ಠ ಸಮಾಜವಾದಿ. ಎಲ್ಲಕ್ಕಿಂತ ಮಿಗಿಲಾಗಿ ಅವರು ಮಾನವತಾವಾದಿ. ಮನುಷ್ಯರ ಸುಖ ದುಃಖಗಳು, ಸಮಸ್ಯೆಗಳು ಅವರಿಗೆ ಮುಖ್ಯ. ಸತ್ತ ಮೇಲೆ ಮನುಷ್ಯನಿಗೆ ಏನಾಗುತ್ತದೆ ಎನ್ನುವುದಕ್ಕಿಂತ ಬದುಕಿದ್ದಾಗ ಎಲ್ಲರೂ ನೆಮ್ಮದಿಯಾಗಿ, ಗೌರವವಾಗಿ ಬದುಕಬೇಕು-ಇದು ಸಾಧ್ಯವಾಗಬೇಕು ಎಂಬುದು ಅವರಿಗೆ ಮುಖ್ಯ. ಮನುಷ್ಯನ ಒಳಿತೇ ಅವರ ಮುಖ್ಯ ಹಂಬಲ. ಅವರು ಭಾಷಣ ಮಾಡುವಾಗ, ಶ್ರದ್ಧೆಯಿಂದ ತಮಗೆ ಪ್ರಾಮಾಣಿಕವಾಗಿ ತೋರಿದುದನ್ನು ಹೇಳುತ್ತಿದ್ದರು. ಇದರಿಂದ ಒಳ್ಳೆಯ ಭಾಷಣಕಾರರಾಗಿದ್ದರು.

ನರೇಂದ್ರದೇವರು ಮಾತುಕತೆ, ಉಡುಗೆ ತೊಡುಗೆಗಳಲ್ಲಿ ಅತಿ ಸರಳ. ಮಾಡುವ ಕೆಲಸವನ್ನು ಮನಸ್ಸಿಟ್ಟು, ಯೋಚನೆ ಮಾಡಿ ಮಾಡುವರು. ತಮಗಾಗಿ ಇದು ಬೇಕು, ಅದು ಬೇಕು ಎಂಬುದಾಗಿ ಎಂದೂ ಆಸೆ ಪಡಲಿಲ್ಲ. ಇದರಿಂದ ಎಲ್ಲಾ ರಾಜಕೀಯ ಪಕ್ಷಗಳವರಿಗೂ ಅವರಲ್ಲಿ ಗೌರವ. ಅವರು ಕ್ರಾಂತಿವಾದಿ. ಅವರಿಗೆ ಬೇಕಾದುದು ಹೋರಾಟ-ಜನತೆಯ ಒಳಿತಿಗಾಗಿ ಹೋರಾಟ. ಅವರ ಗುರಿ ಸೇವೆ. ಅವರ ಮಂತ್ರ ಸಮಾಜವಾದ. ಸದಾ ಅವರ ಕಣ್ಣುಗಳ ಮುಂದೆ ಇದ್ದದ್ದು ಭಾರತದ ಬಡಜನತೆ. ಅವರನ್ನು ಜನರು ‘ಆಚಾರ್ಯ’ ಎಂದು ಕರೆದರು. ‘ಆಚಾರ್ಯ’ ಶಬ್ದಕ್ಕೆ ಅವರು ನಿಜವಾಗಿಯೂ ತಕ್ಕವರು. ಹಿಂದಿನ ಕಾಲದ ಆಚಾರ್ಯರ ವಿದ್ವತ್ತು, ತೇಜಸ್ಸು ಅವರಿಗಿದ್ದವು.

ಪ್ರಜಾಪ್ರಭುತ್ವ ಮತ್ತು ಜೀವನದ ಗುರಿ ಬಗ್ಗೆ ಅವರೊಮ್ಮೆ ಹೀಗೆ ಹೇಳಿದರು:

“ಪ್ರಜಾಪ್ರಭುತ್ವ ಬೇಕು ಎನ್ನುತ್ತೇವೆ. ಆದರೆ ಜನ ಸಮಾಜದಲ್ಲಿ ತಮ್ಮ ಸ್ಥಾನ ಏನು, ಸಮಾಜ ತಮಗೆ ಏನು ಮಾಡಬೇಕು, ಸಮಾಜಕ್ಕೆ ತಾವು ಏನು ಮಾಡಬೇಕು, ತಮಗೆ ಎಂತಹ ರಾಜಕೀಯ ಮುಂದಾಳುಗಳು ಇರಬೇಕು, ಎಂತಹವರನ್ನು ಹಿಂಬಾಲಿಸಬಾರದು-ಇವನ್ನೆಲ್ಲ ಯೋಚನೆ ಮಾಡದಿದ್ದರೆ ಪ್ರಜಾಪ್ರಭುತ್ವ ಯಶಸ್ವಿಯಾಗಿ ಕೆಲಸ ಮಾಡಲಾರದು. ರಾಷ್ಟ್ರದ ರಾಜಕೀಯ ಜೀವನ ಕೆಲವು ವರ್ಗಗಳ ಕೈಯಲ್ಲೆ ಸಿಕ್ಕಿರಬಾರದು. ಎಲ್ಲಾ ವರ್ಗದವರು ಸಕ್ರಿಯವಾಗಿ ಭಾಗವಹಿಸುವಂತೆ ಆಗಬೇಕು. ಇದೇ ಪ್ರಜಾಪ್ರಭುತ್ವದ ಅರ್ಥ

“ಒಂದು ಸಂಸತ್ತು, ವಿಧಾನಸಭೆಗಳು, ಚುನಾವಣೆಗಳು ಇವು ಇದ್ದ ಮಾತ್ರಕ್ಕೆ ದೇಶದಲ್ಲಿ ಪ್ರಜಾಪ್ರಭುತ್ವ ಇದ್ದ ಹಾಗಲ್ಲ. ಪ್ರಜಾಪ್ರಭುತ್ವಕ್ಕೆ ಸರಿಯಾದ ಮನೋಧರ್ಮವನ್ನು ಬೆಳೆಸಿಕೊಳ್ಳಬೇಕು. ನಮ್ಮ ಯೋಚನೆಗಳೆಲ್ಲ ಪ್ರಜಾಪ್ರಭುತ್ವಕ್ಕೆ ಹೊಂದಿಕೊಂಡಂತಿರಬೇಕು. ನನಗೆ ಇತರರು ಸಮಾನರು, ನನ್ನಷ್ಟೆ ಇತರರಿಗೂ ಹಕ್ಕಿದೆ, ಎಲ್ಲರ ಒಳಿತು ಮುಖ್ಯ-ಇಂತಹ ಭಾವನೆಗಳ ಕಾಲುವೆಗಳೆಲ್ಲ ನಮ್ಮ ಯೋಚನೆಗಳು ಹರಿಯಬೇಕು. ಪ್ರಜಾಪ್ರಭುತ್ವ ರಾಜಕೀಯ ಕ್ಷೇತ್ರಕ್ಕೆ ಮಾತ್ರ ಅಲ್ಲ. ಬಾಳಿನ ಎಲ್ಲ ಕ್ಷೇತ್ರಗಳಲ್ಲಿಯೂ, ಯಾವ ಕೆಲಸವನ್ನು ಮಾಡುವಾಗಲೂ ಪ್ರಜಾಪ್ರಭುತ್ವವನ್ನು ಅನುಸರಿಸಬೇಕು.

ಜೀವನದ ಅರ್ಥ

“ಜೀವನದ ಮಹತ್ವ ಮತ್ತು ಅರ್ಥವನ್ನು ಪ್ರತಿಯೊಬ್ಬರೂ ತಮ್ಮಷ್ಟಕ್ಕೆ ತಾವೇ ಕಂಡುಕೊಳ್ಳಬೇಕು. ಜೀವನ ಶ್ರೀಮಂತವಾದುದು. ಜೀವನದಲ್ಲಿ ಸುಖ ಉಂಟು, ದುಃಖ ಉಂಟು, ಗೆಲುವು ಉಂಟು. ಪ್ರತಿಯೊಬ್ಬನೂ ತನಗೆ ಸಂಪೂರ್ಣ ಹಾಗೂ ತೃಪ್ತಿ ನೀಡುವಂಥ ಜೀವನವನ್ನು ತಾನೇ ಕಂಡುಕೊಳ್ಳಬೇಕು. ಜೀವನದಲ್ಲಿ ಇದು ಒಳ್ಳೆಯದು, ಇದು ಕೆಟ್ಟದ್ದು, ಇದನ್ನು ಬಯಸಬೇಕು, ಇದನ್ನು ಬಯಸಬಾರದು ಎಂಬ ನಂಬಿಕೆಗಳು ನಮ್ಮ ಹಿಂದಿನವರಿಂದ ಬರುತ್ತವೆ. ಇವನ್ನು ಪರೀಕ್ಷೆ ಮಾಡಿ ಯೋಚಿಸಿ,ನಮಗೆ ಸರಿ ಎಂದು ತೋರಿದ್ದನ್ನು ಒಪ್ಪಬೇಕು.

“ನಮ್ಮ ಊಟ, ಉಡುಪು, ಹಣ, ವೈಭವ, ಅಧಿಕಾರ ಇವೇ ಮುಖ್ಯವಲ್ಲ. ಸತ್ಯ, ಸೌಂದರ್ಯ ಮತ್ತು ಸಮಾಜದ ಕ್ಷೇಮಾಭ್ಯುದಯ ಇವೇ ಮಾನವನ ಗುರಿ. ಈ ಗುರಿ ಸಾಧನೆಗೆ ನಿಷ್ಠರಾಗಿ ನಮ್ಮನ್ನೇ ಮುಡಿಪಿಟ್ಟುಕೊಳ್ಳಬೇಕು.

“ಪೂರ್ಣ ಸ್ವಾತಂತ್ಯ್ರವಿರುವ ಸಮಾಜದಲ್ಲಿ ಪ್ರತಿಯೊಬ್ಬರೂ ನೆಮ್ಮದಿಯಾಗಿ ಬದುಕಬಹುದು. ತನ್ನ ಶಕ್ತಿಯನ್ನು ಬೆಳೆಸಿಕೊಂಡು ತಾನೂ ಏನನ್ನಾದರೂ ಮಾಡಿದೆ ಎಂಬ ಸಾರ್ಥಕ ಭಾವನೆಯನ್ನು ಬೆಳೆಸಿಕೊಳ್ಳಬಹುದು. ಎಲ್ಲರ ಒಳಿತಿಗಾಗಿ ಸಮಾಜವನ್ನು ಮತ್ತೆ ಸೃಷ್ಟಿಸಬೇಕು, ಇಂತಹ ಮುಖ್ಯ ಕೆಲಸದಲ್ಲಿ ಭಾಗವಹಿಸಿ ನಮ್ಮಿಂದಾದುದನ್ನು ಮನಃಪೂರ್ವಕವಾಗಿ ಮಾಡಬೇಕು, ಇದೇ ಇಂದು ನಿಜವಾದ ಜೀವನದ ಅರ್ಥ.”