ಕಳೆದ ವರ್ಷ ಬೆಂಗಳೂರಿನ ನೃತ್ಯವಲಯದಲ್ಲಿ ಗುರು ನರ್ಮದಾ ಅವರಿಗೆ ಆರೋಗ್ಯ ತೀರ ಹದಗೆಟ್ಟಿದೆ ಎಂಬ ವಿಷಯ ಚರ್ಚೆಗೆ ಗ್ರಾಸವಾಗಿತ್ತು. ಸಕ್ಕರೆ ಕಾಯಿಲೆ ಹೆಚ್ಚಾಗಿ ಒಂದು ಕಾಲಿಗೆ ದೊಡ್ಡ ಶಸ್ತ್ರ ಚಿಕಿತ್ಸೆಯಾಗಿದೆ ಎಂಬುದು ಹಲವರಿಗೆ ಆತಂಕವನ್ನೂ ಉಂಟುಮಾಡಿತ್ತು. ನರ್ಮದಾ ಅವರ ಬಹುದೊಡ್ಡ ಆತ್ಮೀಯ ವಲಯ ಅವರನ್ನು ನೋಡಿ ಬರಲು ನಿತ್ಯವರ ಮನೆಗೆ ಹೋಗಿ ಬರುತ್ತಿತ್ತು. ನನಗೂ ನರ್ಮದಾ ಅವರನ್ನು ಕಂಡರೆ ಬಹಳ ಗೌರವ, ಅವರೂ ನನ್ನನ್ನು ಬಹಳ ಆತ್ಮೀಯವಾಗಿ ಕಾಣುತ್ತಿದ್ದರು. ಅವರ ಆರೋಗ್ಯ ಸರಿ ಇಲ್ಲ ಎಂಬ ವಿಷಯ ತಿಳಿದಾಗ ಹೋಗಿ ನೋಡಿ ಬರುವುದು ನನ್ನ ಕರ್ತವ್ವಾಗಿತ್ತು. ಆದರೆ ನನಗೆ ಹೋಗಲು ಸಾಧ್ಯವಾಗಲಿಲ್ಲ… ಕೆಲಸದ ಒತ್ತಡದಿಂದ ಅಂತಲ್ಲ…… ಸದಾ ಹಸನ್ಮುಖಿಯಾಗಿರುವ ನರ್ಮದಾ ಅವರ ಮುಖ ನನ್ನ ಮನಸ್ಸಿನಲ್ಲಿ ಅಚ್ಚೊತ್ತಿದ್ದು, ಶಸ್ತ್ರ ಚಿಕಿತ್ಸೆಯಿಂಧ ಕಂಗಾಲಾದ ಅವರ ಸೋತ ಮುಖ ನೋಡುವುದು ನನಗೆ ಸಾಧ್ಯವೇ ಎಂಬ ಸಂದೇಹದಿಂದ…. ಆದರೂ ನೋಡಿ ಬರದಿದ್ದರೆ ಕರ್ತವ್ಯ ಲೋಪವಾದೀತೆಂದು ಒಂದು ದಿನ ಗಟ್ಟಿ ಮನಸ್ಸು ಮಾಡಿ ಅವರ ಮನೆಗೆ ಹೋದೆ.

ಯಾವಾಗಲೂ ಶಿಷ್ಯರು, ಬಂಧುಗಳು ಮತ್ತು ಸ್ನೇಹಿತರ ಮಧ್ಯೆ ನಗುತ್ತಾ ಮನೆ ತುಂಬಾ ಓಡಾಡುತ್ತಿದ್ದ ನರ್ಮದಾ ಒಂಟಿಯಾಗಿ ಹಾಸಿಗೆಯಲ್ಲಿ ಮಲಗಿದ್ದರು. ಸಣ್ಣಗೆ ನಿದ್ದೆ ಆವರಿಸಿತ್ತು. ನಾನು ಮೆಲ್ಲಗೆ ಅವರ ಮುಖ ನೋಡಿದೆ. ನಗುವಿನಿಂದ ತುಂಬಿರುತ್ತಿದ್ದ ಮುಖದಲ್ಲಿ ಸಣ್ಣ ನೋವಿನ ಗೆರೆ ಕಾಣಿಸಿತು. ಆಂಟೀ….ಎಂದು ಕೂಗಿದೆ. ಮೆಲ್ಲಗೆ ಕಣ್ಣು ತೆರೆದರು. ಎದ್ದು ಕೂಡಲು ಪ್ರಯತ್ನಿಸಿದರು. ನಾನೂ ಕೂರಲು ಸಹಕರಿಸಿದೆ. ಮುಖದಲ್ಲಿದ್ದ ನೋವಿನ ಗೆರೆ ಮಾಯವಾಯಿತು. ಅದೇ ತುಂಟ ನಗು ತುಂಬಿ ಕೊಂಡು ‘ಇಷ್ಟು ದಿನ ಎಲ್ಲಿ ಹೋಗಿದ್ದೆಯೋ’ ಎಂದು ಆಕ್ಷೇಪಿಸಿದರು. ನಾನೇನು ಹೇಳಲಿ, ಸುಮ್ಮನೆ ಕುಳಿತೆ. ಅವರೇ ಮೆಲ್ಲಗೆ ಕಾಲ ಮೇಲಿದ್ದ ಹೊದಿಕೆ ಸರಿಸಿದರು. ನಾನು ಒಂದು ಕ್ಷಣ ದಂಗಾದೆ! ಮುಂಗಾಲಿನಿಂದ ಆರಂಭಿಸಿ ಇಡೀ ಕಾಲಿಗೆ ಶಸ್ತ್ರ ಚಿಕಿತ್ಸೆ ಮಾಡಿದ್ದ ಗುರುತು ಕಾಣುತ್ತಿತ್ತು. ಶಸ್ತ್ರ ಚಿಕಿತ್ಸೆ ಆದ ಮೇಲೆ ಹೊಲಿಗೆ ಹಾಕಿರಲಿಲ್ಲವಂತೆ., ಎರಡೂ ಕಡೆಯ ಚರ್ಮ ಸೇರಿಸಿ ಸ್ಟ್ರಾಪ್‌ ಮಾಡಿದ್ದರಂತೆ. ಹಾಗಾಗಿ ಆ ಗುರುತು ರೈಲ್ವೇ ಹಳಿಯಂತೆ ಇಡೀ ಕಾಲನ್ನು ಆವರಿಸಿತ್ತು. ಲವಲವಿಕೆಯೇ ಮೂರ್ತಿವೆತ್ತಂತಿರುತ್ತಿದ್ದ ಆ ತಾಯಿ, ಹೀಗೆ ಸೋತು ಮುದುಡಿ ಮಲಗಿರುವುದು ಕಂಡು ನನ್ನ ಕಣ್ಣಾಲಿ ತುಂಬಿ ಬಂತು. ನಾನು ಅತ್ತರೆ ತಮಗೂ ಅಳೂ ಬಂದೀತೆಂದು ತಕ್ಷಣ ನರ್ಮದಾ ಎಚ್ಚೆತ್ತುಕೊಂಡು, ‘ಯಾಕೋ ಅಳ್ತೀಯಾ…. ಕಾಲೈ ತೂಕಿ ನಿಂಡ್ರು ಆಡುಂ ದೈವಮೇ…. ಎಂದು ನಟರಾಜ ಒಂದು ಕಾಲು ಎತ್ತಿ ನೃತ್ಯ ಮಾಡಿದ ಸನ್ನಿವೇಶವನ್ನು ಎಷ್ಟೊಂದು ಜನಕ್ಕೆ ಹೇಳಿ ಕೊಟ್ಟಿದ್ದೇನೆ…. ಅದಕ್ಕೇ ಆ ನಟರಾಜ ನೀನೂ ಒಂದು ಕಾಲು ಎತ್ತಿ ತೂಗಾಡು ಅಂತ ಹೀಗೆ ಮಾಡಿದ್ದಾನಬೆ…’ ಎನ್ನುತ್ತಾ ಗಹಗಹಿಸಿದರು.

ಇದು ನರ್ಮದಾ ಅವರ ಗುಣ. ಎಂತಹುದೇ ಸಂದರ್ಭವಾದರೂ ಅದನ್ನು ಬಹಳ ಸರಳಗೊಳಿಸುವ ಕಲೆ ಅವರಿಗೆ ಚೆನ್ನಾಗಿ ಸಿದ್ಧಿಸಿತ್ತು. ಅದಕ್ಕೆ ಆ ದೇವರು ಏನೆಲ್ಲಾ ಕಷ್ಟಕೋಟಳೆಗಳನ್ನು ಕೊಟ್ಟರೂ ನರ್ಮದಾ ಅವನ್ನೆಲ್ಲಾ ಮೆಟ್ಟಿ ಇನ್ನೊಬ್ಬರಿಗೆ ಮಾರ್ಗದರ್ಶಿಯಾಗಿ ಬೆಳೆದು ಬಂದರು…. ನೃತ್ಯ ಗುರು ಪರಂಪರೆಯಲ್ಲಿ ಅಳಿಸಲಾರದ ತಮ್ಮದೇ ಒಂದು ಪರಂಪರೆಯನ್ನು ದಾಖಲಿಸಿದರು.

ನರ್ಮದಾ ಹುಟ್ಟಿದ್ದು ೨೨.೦೯.೧೯೪೨ರಲ್ಲಿ ಬೆಂಗಳೂರಿನಲ್ಲಿ. ತಂದೆ ಡಾ.ಕೆ. ರಾಮರಾವ್‌. ಆಗಿನ ಕಾಲದಲ್ಲಿ ಬೆಂಗಳೂರಿನ ಬಹಳ ಪ್ರಸಿದ್ಧ ವೈದ್ಯರು. ತಾಯಿ ಶ್ರೀಮತಿ ಶಕುಂತಲಾ ಬಾಯಿ. ಒಳ್ಳೆಯ ವೀಣಾವಾದನ ಕಲಾವಿದೆ. ವಾಸ್ತವವಾಗಿ ಡಾ.ಕೆ. ರಾಮರಾವ್‌ ಮತ್ತು ಶಕುಂತಲಾ ಬಾಯಿಯವರ ವಿವಾಹ ಸಮಾರಂಭದಲ್ಲಿ ವಧುವಾಗಿದ್ದ ಶಕುಂತಲಾ ಬಾಯಿ ಸ್ವತಃ ತಾವೇ ವೀಣೆ ನುಡಿಸಿದ್ದರಂತೆ. ಶಕುಂತಲಾ ಬಾಯಿ ಮತ್ತು ರಾಮರಾವ್‌ ದಂಪತಿಗಳಿಗೆ ನಾಲ್ಕು ಹೆಣ್ಣು ಮತ್ತು ಎರಡು ಗಂಡು ಮಕ್ಕಳು. ನರ್ಮದಾ ಅವರ ಇಬ್ಬರು ಅಕ್ಕಂದಿರು  ನಾಗರತ್ನ ಮತ್ತು ಕಮಲಾ ಗೃಹಿಣಿಯರು. ಮೂರನೇ ಅಕ್ಕ ಡಾ.ರಾಜಮ್ಮ ತಂದೆಯಂತೆ ವೈದ್ಯೆಯಾದರು. ಒಬ್ಬ ಅಣ್ಣ ಡಾ.ಗುರುರಾಜ ರಾವ್‌ ಮತ್ತು ಒಬ್ಬ ತಮ್ಮ ಡಾ.ವೆಂಕಟೇಶ್‌ ಅವರುಗಳೂ ಕೂಡ ತಂದೆಯ ದಾರಿ ಹಿಡಿದು ವೈದ್ಯರಾದರು.

ಆರು ಮಕ್ಕಳಲ್ಲಿ ಐದನೆಯವರಾದ ನರ್ಮದಾ ಅವರಿಗೆ ಮನೆಯಲ್ಲಿ ಎಲ್ಲ ಮಕ್ಕಳಿಗೆ ಸಿಕ್ಕಂತೆ ಪ್ರೀತಿಯ ಜೊತೆಗೆ ಉತ್ತಮ ವಿದ್ಯಾಭ್ಯಾಸವೂ ದೊರೆಯಿತು. ಶಾಲಾ ವಿದ್ಯಾಭ್ಯಾಸ ಬಿಷಪ್‌ ಕಾಟನ್‌ ಸ್ಕೂಲಿನಲ್ಲಾದರೆ, ಕಾಲೇಜು ವಿದ್ಯಾಭ್ಯಾಸ ಮೌಂಟ್‌ಕಾರ್ಮಲ್‌ ಕಾಲೇಜಿನಲ್ಲಾಯಿತು. ನರ್ಮದಾ ತಮ್ಮ ಕುಟುಂಬದ ಇತರರಂತೆ ವೈದ್ಯಕೀಯ ವಿದ್ಯಾಭ್ಯಾಸವನ್ನು ಆರಿಸಿಕೊಳ್ಳದೆ ಬಿ.ಎಸ್ಸಿ. ಪದವಿಗೆ ತಮ್ಮ ಕಾಲೇಜು ಶಿಕ್ಷಣವನ್ನು ಸೀಮಿತಗೊಳಿಸಿಕೊಂಡರೂ, ನೃತ್ಯ ಕ್ಷೇತ್ರದಲ್ಲಿ ಒಂದು ವಿಶ್ವ ವಿದ್ಯಾಲಯ ಮಾಡಬಹುದಾದಷ್ಟು ಕೆಲಸವನ್ನು ತಾವೋಬ್ಬರೆ ಮಾಡಿದರು.

ಬಾಲ್ಯದಲ್ಲಿ ನರ್ಮದಾ ಮನೆಯ ತುಂಬಾ ಕುಣಿಕುಣಿಯುತ್ತಾ ಓಡಾಡುತ್ತಿದ್ದರಂತೆ. ಸ್ವತಃ ಕಲಾವಿದೆಯಾದ ತಾಯಿ ಶಕುಂತಲಾ ಬಾಯಿಯವರಿಗೆ, ಬಾಲಕಿ ನರ್ಮದಾ ಅವರ ಓಡಾಟದಲ್ಲಿದ್ದ ಲಯವನ್ನು ಗುರುತಿಸಿ, ಈಕೆಯನ್ನು ನೃತ್ಯ ಕಲಿಕೆಗೆ ಹಾಕಿದರೆ ಒಳಿತಾಗಬಹುದೇನೋ ಅನ್ನಿಸಿತಂತೆ. ಸರಿ, ಆರರ ಬಾಲೆ ನರ್ಮದಾ ಅವರನ್ನು ಅವರ ತಂದೆ ತಾಯಿಯರು ತಮ್ಮ ಮನೆಯ ಸಮೀಪವಿದ್ದ ಸನಾತನ ಕಲಾಕ್ಷೇತ್ರದ ಗುರು ಶ್ರೀ ವಿ.ಎಸ್‌.ಕೌಶಿಕ್‌ ಅವರ ಬಳಿ ವಿದ್ಯೆಗಾಗಿ ಕರೆತಂದರು. ಕೌಶಿಕರ ಮಾರ್ಗದರ್ಶನದಲ್ಲಿ ನರ್ಮದಾ ಅವರ ನೃತ್ಯ ಶಿಕ್ಷಣ ಆರಂಭವಾಯಿತು. ಆತರೆ ಮೂಲತಃ ಬಹಳ ಸಿಟ್ಟಿನ ಸ್ವಭಾವದವರಾದ ಕೌಶಿಕ್‌ ಮಾಸ್ಟರ್ ಅವರ ಬಳಿ ವಿದ್ಯೆ ಕಲಿಯಲು ಹೆದರಿದ ನರ್ಮದಾ ಕೆಲವು ತಿಂಗಳುಗಳ ಪಾಠದ ನಂತರ ನೃತ್ಯ ಶಾಲೆಗೆ ಹೋಗುವುದಿಲ್ಲವೆಂದು ಹಠ ಮಾಡಿ ಮನೆಯಲ್ಲೇ ಉಳಿದು ಬಿಟ್ಟರು

ಅದೇ ಸಮಯದಲ್ಲಿ, ಅಂದರೆ ಐವತ್ತರ ದಶಕದ ಆರಂಭದಲ್ಲಿ ಪದ್ಮಲೋಚನೆ ಎಂಬ ಬಾಲಕಿಗೆ ನೃತ್ಯ ಕಲಿಸಲು ಅವಳ ಪೋಷಕರು ತಂಜಾವೂರಿನಿಂದ ಗುರು ಕಿಟ್ಟಪ್ಪ ಪಿಳ್ಳೈ ಅವರನ್ನು ಕರೆಸಿದ್ದರು. ಪದ್ಮಲೋಚನೆ ನರ್ಮದಾ ಅವರ ಒಳ್ಳೆಯ ಗೆಳತಿ. ನರ್ಮದಾ ಕೌಶಿಕ್‌ ಮಾಸ್ಟರ್ ಬಳಿ ನೃತ್ಯ ಕಲಿಕೆಗೆ ಸೇರಿ ನಂತರ ಬಿಟ್ಟ ವಿಷಯ ಪದ್ಮಲೋಚನೆಗೆ ಗೊತ್ತಿತ್ತು. ಹಾಗಾಗಿ ಪದ್ಮಲೋಚನೆ ತನ್ನೊಂದಿಗೆ ಕಿಟ್ಟಪ್ಪನವರ ಮಾರ್ಗದರ್ಶನದಲ್ಲಿ ನೃತ್ಯ ಕಲಿಯಲು ನರ್ಮದಾರನ್ನು ಆಹ್ವಾನಿಸಿದರು. ಅಂದು ಆರಂಭವಾಯಿತು ಮುಂದೊಂದು ದಿನ ಪರಂಪರೆಯ ಬೀಜಾಂಕುರ.  ತಂಜಾವೂರಿನಿಂದ ಬಂದ ಗುರು ಕಿಟ್ಟಪ್ಪನವರಿಗೆ ಕರ್ನಾಟಕದಲ್ಲಿ ಮೊದಲ ಶಿಷ್ಯೆ ಪದ್ಮಲೋಚನೆ. ಎರಡನೆ ಶಿಷ್ಯೆ ನರ್ಮದಾ. ಅನಂತರ ಈಗ ಅಂತರ ರಾಷ್ಟ್ರೀಯ  ಮನ್ನಣೆ ಪಡೆದು ಚೆನೈನಲ್ಲಿ ನೆಲೆಸಿರುವ ಸುಧಾರಾಣಿ ರಘುಪತಿ. ಕಿಟ್ಟಪ್ಪನವರ ಆರಂಭದ ಗುರುಕುಲದಲ್ಲಿದ್ದ ಮೂವರಲ್ಲಿ ಪದ್ಮಲೋಚನೆ ನೃತ್ಯವನ್ನು ಮುಂದುವರಿಸಲಿಲ್ಲ. ಸುಧಾರಾಣಿ ರಘುಪತಿ ಮದುವೆಯಾಗಿ ಚೆನ್ನೈನಲ್ಲಿ ನೆಲೆ ನಿಂತರು. ಆದರೆ ನರ್ಮದಾ ಮಾತ್ರ ಗುರು ಪರಂಪರೆಯನ್ನು ಉಳಿಸಿ ಬೆಳೆಸಿಕೊಂಡು ಬಂದರು.

ಗುರು ಕಿಟ್ಟಪ್ಪನವರಿಗೆ ನರ್ಮದಾ ಅವರ ಶ್ರದ್ಧೆ ಮತ್ತು ಆಸಕ್ತಿಯನ್ನು ಕಂಡು ಬಹಳ ಅಚ್ಚರಿ ಮತ್ತು ಸಂತೋಷವಾಗಿತ್ತು. ಹಾಗಾಗಿ ತಮ್ಮ ಬತ್ತಳಿಕೆಯಲ್ಲಿದ್ದ ಸರ್ವಸ್ವನ್ನೂ ನರ್ಮದಾರಿಗೆ ಧಾರೆಯೆರೆದರು. ಅವರ ಮಾರ್ಗದರ್ಶನದಲ್ಲಿ ಕಲಿಕೆ ಅಂದರೆ ಅದೊಂದು ಫಲಾಪೇಕ್ಷೆಯಿಲ್ಲದ ಸಾಧನೆ-ಗುರಿ ಕಾಣದ ಪಯಣ-ಹಾಗಾಗಿ ಅಲ್ಲಿನ ಕಲಿಕೆ ಒಂದು ರೀತಿಯ ತಪಸ್ಸಿನಂತಿರಬೇಕು. ಪಾಠ ಮಾಡುವಾಗ ಗುರು ಕಿಟ್ಟಪ್ಪನವರು ಶಿಸ್ತಿಗೆ ಬಹಳ ಬೆಲೆಕೊಡುತ್ತಿದ್ದರು. ಶಿಸ್ತಿಗೆ ಸ್ವಲ್ಪ ಲೋಪವಾದರೂ ಶಿಷ್ಯರನ್ನು  ದಂಡಿಸಲು ಹಿಂದು ಮುಂದು ನೋಡುತ್ತಿರಲಿಲ್ಲ. ಆದರೆ ತಾವು ಹೇಳಿಕೊಟ್ಟದ್ದನ್ನು ಶ್ರದ್ಧೆಯಿಂದ ಅಭ್ಯಾಸ ಮಾಡಿದರೆ ಪ್ರೀತಿಯಿಂದ ಮೈದಡವುತ್ತಿದ್ದರು. ಹಾಗಾಗಿ ನರ್ಮದಾ ಅವರಿಗೆ ಕೌಶಿಕ್‌ ಮಾಸ್ಟರ್ ಬಳಿ ಆದಂತಹ ಅನುಭವ ಇಲ್ಲಾಗಲಿಲ್ಲ., ನರ್ಮದಾ ತಮಗೆ ಸಿಕ್ಕ ಅವಕಾಶವನ್ನು ಎಳ್ಳಷ್ಟೂ ಬಿಡದೆ  ಬಳಸಿಕೊಂಡರು. ಉತ್ತಮ ನರ್ತಕಿಯಾಗಿ, ಗುರುಮೆಚ್ಚುವ ಕಲಾವಿದೆಯಾಗಿ ರೂಪುಗೊಂಡರು.

ಹನ್ನೊಂಧರ ಹರೆಯದಲ್ಲಿರಬಹುದು. ೧೯೫೩ರಲ್ಲಿ ನರ್ಮದಾ ಬೆಂಗಳೂರಿನ ಟೌನ್‌ ಹಾಲ್‌ ನಲ್ಲಿ ಗುರು ಕಿಟ್ಟಪ್ಪ ಪಿಳ್ಳೈ ಮಾರ್ಗದರ್ಶನದಲ್ಲಿ ರಂಗಪ್ರವೇಶ ಮಾಡಿದರು. ಇಲ್ಲೂ ಒಂದು ವಿಶೇಷ. ಎಲ್ಲರೂ ಒಂದು ದಿನ ರಂಗಪ್ರವೇಶ ಮಾಡಿದರೆ, ನರ್ಮದಾ ರಂಗಪ್ರವೇಶ ಎರಡು ದಿನವಾಯಿತು. ಏಕೆಂದರೆ ನರ್ಮದಾ ಅವರ ತಂದೆ ತಾಯಿಗಳಿಬ್ಬರ ಕಡೆಯಿಂದಲೂ ಹೆಚ್ಚಿನ ಬಂಧುಗಳು. ಜೊತೆಗೆ ತಂದೆ ಜನಪ್ರಿಯ ವೈದ್ಯರಾದ್ದರಿಂದ ಸಮಾಜದ ಗಣ್ಯರ ಸಮುದಾಯವೂ ಬಹಳ ದೊಡ್ಡದು. ಎಲ್ಲರನ್ನೂ ಒಂದು ದಿನ ಕರೆದರೆ ಟೌನ್‌ ಹಾಲ್‌ ನಲ್ಲಿ ಜಾಗ ಸಾಕಾಗುವುದಿಲ್ಲ. ಹಾಗಾಗಿ ಬಂಧುಗಳಿಗೆ ಒಂದು ದಿನ ಮತ್ತು ಸ್ನೇಹಿತರಿಗೆ ಒಂದು ದಿನದಂತೆ ಎರಡು ದಿನ ನರ್ಮದಾ ಕಿಕ್ಕಿರಿದ ಸಭಾಂಗಣದಲ್ಲಿ ರಂಗಪ್ರವೇಶ ಮಾಡಿದರು. ಗುರುಗಳು ರಂಗಪ್ರವೇಶದ ಎರಡೂ ಪ್ರದರ್ಶನಗಳಿಗೆ ಪ್ರತ್ಯೇಕ ನೃತ್ಯ ಬಂಧಗಳನ್ನು ಸಿದ್ಧಪಡಿಸಿಕೊಟ್ಟಿದ್ದರು. ಆಗಿನ ಕಾಲದ ವೀರಕೇಸರಿ ಪತ್ರಿಕೆಯ ಸೀತಾರಾಮ ಶಾಸ್ತ್ರಿಗಳು ನರ್ಮದಾ ಅವರ ರಂಗಪ್ರವೇಶ ಕುರಿತಾಗಿ ಬಹಳ ಒಳ್ಳೆಯ ಲೇಖನಗಳನ್ನೂ ಬರೆದರು.

ಅಲ್ಲಿಂದ ನರ್ಮದಾ ಅವರ ನೃತ್ಯ ಕಾರ್ಯಕ್ರಮಗಳ ಯಾತ್ರೆ ಆರಂಭವಾಯಿತು. ತಮದೆ ವೈದ್ಯರಾಗಿದ್ದರಿಂದ ಮತ್ತು ಸಂಪ್ರದಾಯಿಕ ಕುಟುಂಬವಾದರೂ ಮಗಳ ಬೆಳವಣಿಗೆ ಕಂಡು ಹೆಮ್ಮೆಪಡುತ್ತಿದ್ದುದರಿಂದ, ತಂದೆಯ ಕಡೆಯಿಂದ ಅನೇಕ ವೈದ್ಯಕೀಯ ಸಮ್ಮೇಳನಗಳಲ್ಲಿ ನರ್ತಿಸುವ ಅವಕಾಶ ನರ್ಮದಾ ಅವರಿಗೆ ಮೇಲಿಂದ ಮೇಲೆ ಬರುತ್ತಿತ್ತು. ಅಂತಹುದೇ ಒಂದು ಸಮ್ಮೇಳನದಲ್ಲಿ ಅಧ್ಯಕ್ಷತೆ ವಹಿಸಿದ್ದ ಮೈಸೂರು ಮಹಾರಾಜರಾದ ಜಯಚಾಮರಾಜೇಂದ್ರ ಒಡೆಯರ್ ಅವರ ಸಮ್ಮುಖದಲ್ಲಿ ನರ್ತಿಸಿ ಅವರಿಂದ ಮೆಚ್ಚುಗೆಯ ಕುರುಹಾಗಿ ಬಂಗಾರದ ಪದಕ ಪಡೆದದ್ದನ್ನು ನರ್ಮದಾ ಈಗಲೂ ಹೆಮ್ಮೆಯಿಂದ ನೆನಪಿಸಿಕೊಳ್ಳುತ್ತಾರೆ.

ದೇವಾಲಯ ನೃತ್ಯ ಪದ್ಧತಿಯ ನವಸಂಧಿ ನೃತ್ಯ ವನ್ನು ಗುರು ಕಿಟ್ಟಪ್ಪ ಪಿಳ್ಳೈ ಅಧಿಕೃತವಾಗಿ ಬಲ್ಲವರಾಗಿದ್ದರು. ಅದನ್ನು ಕಲಿಸುಕೊಡುತ್ತಿದ್ದುದೂ ತಮಗೆ ನಂಬಿಕೆಯಿರುವ ಶಿಷ್ಯರಿಗೆ ಮಾತ್ರ. ಅಂತಹ ನವಸಂಧಿ ನೃತ್ಯ ವನ್ನು ಕಲಿಸಿ, ಪ್ರದರ್ಶನಕ್ಕೆ ಕನರ್ಮದಾರನ್ನು ಗುರುಗಳು ಮದ್ರಾಸಿಗೆ ಕರೆದುಕೊಂಡು ಹೋದರು. ಮದ್ರಾಸಿನ ತಮಿಳ್‌ ಇಸೈ ಸಂಘದಲ್ಲಿ ನವಸಂಧಿ ನೃತ್ಯದ ಪ್ರದರ್ಶನವಾಯಿತು. ಕರ್ನಾಟಕದ ಕಲಾವಿದರು ಅಂದರೆ ಮೂಗುಮುರಿಯುತ್ತಿದ್ದ ಮದ್ರಾಸಿನ ಕಲಾವಿದರು, ನರ್ಮದಾರ ನವಸಂಧಿ ಪ್ರದರ್ಶನವನ್ನು ಕಂಡು ಬೆರಗಾಗಿದ್ದರು.

೧೯೬೫ರಲ್ಲಿ ನರ್ಮದಾ ಅವರ ಬದುಕಿನಲ್ಲಿ ಒಂದು ಮಹತ್ತರ ತಿರುವು. ಬೆಂಗಳೂರಿನ ಮತ್ತೊಂದು ಸಾಂಪ್ರದಾಯಿಕ ಕುಟುಂಬ, ಹೈದರಾಬಾದಿನಲ್ಲಿ ಇಂಜಿನಿಯರ್ ಆಗಿರುವ ತಮ್ಮ ಮಗನಿಗೆ ನರ್ಮದಾರನ್ನು ಕೇಳಿ ಬಂತು. ನರ್ಮದಾ ಒಬ್ಬ ನೃತ್ಯ ಕಲಾವಿದೆ ಎಂದು ಗೊತ್ತಿದ್ದೂ ಮದುವೆಗೆ ಆಹ್ವಾನ ಬಂದಾಗ ಮನೆಯವರೆಲ್ಲರೂ ಒಪ್ಪಿಕೊಂಡರು. ಆರಡಿಯ ನೀಳಕಾಯದ ಸ್ಪುರದ್ರೂಪಿ ಇಂಜಿನಿಯರ್ ಯುವಕ ಕೃಷ್ಣಮೂರ್ತಿರಾವ್‌ ಅವರನ್ನು ವರಿಸಿ ನರ್ಮದಾ ಹೈದರಾಬಾದಿಗೆ ತೆರಳಿದರು. ಪತಿಯಿಂದ ನೃತ್ಯಾಭ್ಯಾಸ ಮುಂದವರಿಸಲು ಸಹಕಾರ ಇತ್ತು. ಆಗೊಮ್ಮೆ ಈಗೊಮ್ಮೆ ಬೆಂಗಳೂರಿಗೆ ಬಂದಾಗ ಎರಡೂ ಮನೆಯವರ ಒತ್ತಾಸೆಯಿಂದ ಕೆಲವು ಕಾರ್ಯಕ್ರಮಗಳೂ ನಡೆಯುತ್ತಿದ್ದವು. ಹೀಗೇ ನಡೆಯುತ್ತಿದ್ದರೆ ಆ ವಿಧಿಯನ್ನು ಯಾರೂ ನೆನಪಿಸಿಕೊಳ್ಳುವುದಿಲ್ಲವಲ್ಲಾ! ಅವನ ಆಟ ತೋರಿಸಿಯೇ ಬಿಡುತ್ತಾನೆ. ಪ್ರೀತಿಸುವ ಪತಿ, ಗೌರವಿಸುವ ಅತ್ತೆಮಾವ, ಅಭಿಮಾನದ ತವರು ಎಲ್ಲಾ ಇದ್ದೂ, ಆ ವಿಧಿ ನರ್ಮದಾಅವರಿಗೆ ಒಳ್ಳೆಯ ದಾಂಪತ್ಯ ಬದುಕು ಕೊಡಲಿಲ್ಲ.

ದಾಂಪತ್ಯ ಬದುಕು ಆರಂಭವಾದ ಮೇಲೆ ನರ್ಮದಾ ಅವರಿಗೆ ಎರಡು ಸಾರಿ, ಅದೂ ಹೊಟ್ಟೆಯಲ್ಲಿ ಮಗು ಪೂರ್ಣವಾಗಿ ಬೆಳೆದ ಮೇಲೆ ಗರ್ಭಪಾತವಾಯಿತು. ಆ ಸಂದರ್ಭದಲ್ಲಿ ನರ್ಮದಾ ಮಾನಸಿಕವಾಗಿ ಮತ್ತು ದೈಹಿಕವಾಗಿ ಕುಸಿದು ಹೋದರು. ಮತ್ತೆ ಮೂರನೇ ಮಗು ಗರ್ಭದಲ್ಲಿತ್ತು. ಅದನ್ನು ಹೇಗಾದರೂ ಮಾಡಿ ಉಳಿಸಿ ಕೊಳ್ಳಬೇಕೆಂದು ಎರಡೂ ಮನೆಯವರು ಮತ್ತು ಸ್ವತಃ ನರ್ಮದಾ ದಂಪತಿಗಳು ಸತತ ಪ್ರಯತ್ನ ನಡೆಸಿದ್ದರು. ಅವರ ಪ್ರಯತ್ನ ಫಲಕಾರಿಯಾಗುವ ಸೂಚನೆಗಳು ಗೋಚರಿಸುತ್ತಿದ್ದವು . ಆದರೆ ಆ ಕ್ರೂರ ವಿಧಿ ಮತ್ತೊಮ್ಮೆ ತನ್ನ ಘೋರ ದೃಷ್ಟಿಯನ್ನು ನರ್ಮದಾ ಅವರ ಮೇಲೆ ಹರಿಸಿಯೇ ಬಿಟ್ಟ! ಐದು ತಿಂಗಳ ಗರ್ಭಿಣಿ ನರ್ಮದಾ ಹೈದರಾಬಾದಿನ ತಮ್ಮ ಮನೆಯಲ್ಲಿ ಪತಿಯನ್ನು ಕಾಯುತ್ತಾ ಕುಳಿತಿದ್ದಾಗ ಒಂದು ದುರಂತ ಸುದ್ದಿ ಅವರಿಗೆ ಬಂತು ! ದಾರಿಯಲ್ಲಿ ಬರುತ್ತಿರುವಾಗ ರಸ್ತೆ ಅಪಘಾತದಲ್ಲಿ ನರ್ಮದಾರ ಪತಿ ದುರ್ಮರಣಕ್ಕೀಡಾಗಿದ್ದರು!

ನರ್ಮದಾ ಈಗೇನು ಮಾಡಬೇಕು! ತಂದೆ ತಾಯಿಯರು ಮಗಳನ್ನು ಬೆಂಗಳೂರಿನ ತಮ್ಮ ಮನೆಗೆ ಕರೆದುಕೊಂಡು ಬಂದರು. ಈಗ ನರ್ಮದಾರಿಗೆ ಬದುಕಿನಲ್ಲಿ ಉಳಿದದ್ದು ಒಂದೇ ಆಸೆ. ಹೊಟ್ಟೆಯಲ್ಲಿರುವ ಮಗು. ಅದಾದರೂ ಉಳಿದು ಬದುಕಿಗೊಂದು ಸಣ್ಣ ಆಸೆ ಮೂಡಲಿ ಎಂದು ಎಲ್ಲರೂ ದೇವರಲ್ಲಿ ಮೊರೆ ಇಟ್ಟರು. ಅಂತೂ ದೇಹ ಜರ್ಝರಿತಗೊಂಡಾದ ಮೇಲೆ ಒಂದು ಆರೋಗ್ಯವಾದ ಗಂಡು ಮಗು ಜನಿಸಿತು. ಮಡಿಲಲ್ಲಿ ನಕ್ಕ ಮಗುವನ್ನು ಕಂಡು ನರ್ಮದಾ ಎಲ್ಲಾ ನೋವುಗಳನ್ನು ಮರೆತು ಮತ್ತೆ ಬದುಕಿನತ್ತ ದೃಷ್ಟಿ ನೆಟ್ಟರು.

ಆದರೆ ಮತ್ತೆ ಬಂತು ಮತ್ತೊಂದು ಭರಿಸಲಾರದ ನೋವು ಗಂಡ ಸತ್ತ ಎರಡು ವರ್ಷಗಳಲ್ಲಿ ನರ್ಮದಾ ತಮ್ಮ ಭವಿಷ್ಯಕ್ಕೆ ಬಹಳ ನಂಬಿಕೊಂಡಿದ್ದ ಅವರ ತಂದೆ ತಾಯಿಯರು ವರ್ಷಕ್ಕೊಬ್ಬರಂತೆ ವಿಧಿವಶವಾದರು.

ಭವಿಷ್ಯಕ್ಕೆ ಎಲ್ಲಾ ಬಾಗಿಲುಗಳು ಮುಚ್ಚಿದವು ಎಂದು ಕೊಂಡಾಗಕ ಗುರುವಿನ ರೂಪದಲ್ಲಿ ಒಂದು ಆಶಾಕಿರಣ ಮನೆಗೆ ಹುಡುಕಿಕೊಂಡು ಬಂತು. ಗುರು ಕಿಟ್ಟಪ್ಪನವರು ನೊಂದ ಶಿಷ್ಯೆಗೆ ಮೈದಡವಿ ಸಂತೈಸಿದರು. ನೋವು ಮರೆಯಲು ನೃತ್ಯ ಶಾಲೆ ತೆರೆಯಲು ಸೂಚಿಸಿದರು. ತಾವೇ ಮುಂದೆ ನಿಂತು ಶಾಲೆಯ ಸ್ವರೂಪವನ್ನು ಸಿದ್ಧಪಡಿಸಿಕೊಟ್ಟರು. ‘ಒಂದು ನೂರಾಗಲಿ’ ಎಂದು ಹರಸಿದರು. ಹೀಗೆ ೧೯೭೮ ರಲ್ಲಿ ನರ್ಮದಾ ತಮ್ಮ ತಾಯಿಯ ಹೆಸರಿನಲ್ಲಿ ‘ಶಕುಂತಲಾ ನೃತ್ಯಾಲಯ’ ಆರಂಭಿಸಿದರು. ನಂತರದ್ದೆಲ್ಲಾ ನಮ್ಮೆದುರಿಗಿರುವ ಇತಿಹಾಸ.

ಕಿಟ್ಟಪ್ಪನವರ ಹರಿಕೆಯಂತೆ ಒಂದು ನೂರಾಯಿತು…. ನೂರು ಸಾವಿರವಾಯಿತು …… ಶಿಷ್ಯ ವೃಂದ ಊರು, ಜಿಲ್ಲೆ, ರಾಜ್ಯ, ದೇಶ ಎಲ್ಲಾ ಎಲ್ಲೆಗಳನ್ನು ದಾಟಿ ಬೆಳೆಯಿತು. ಬೇರೆ ಬೇರೆ ನೃತ್ಯ ಗುರುಗಳ ಬಳಿ ಕಲಿತವರು ಇನ್ನೂ ಹೆಚ್ಚಿನ ಮಾರ್ಗದರ್ಶನಕ್ಕಾಗಿ, ಮತ್ತು ಬೇರೆ ಬೇರೆ ನೃತ್ಯ ಗುರುಗಳ ಬಳಿ ಕಲಿತವರು ಇನ್ನೂ ಹೆಚ್ಚಿನದನ್ನು ಕಲಿಯಲು ನರ್ಮದಾ ಅವರ ಬಳಿ ಬರಲು ಪ್ರಾರಂಭಿಸಿದರು. ಒಮ್ಮೆ ಕರ್ನಾಟಕದ ನೃತ್ಯ ವಿಮರ್ಶಕರಲ್ಲೊಬ್ಬರಾದ ಶ್ರೀ ಮೈಸೂರು ಸುಬ್ರಹ್ಮಣ್ಯ ಅವರು, ಬೆಂಗಳೂರಿನ ಶಂಕರಪುರಂನ ಶಂಕರ ಮಠ ರಸ್ತೆಯಲ್ಲಿದ್ದ ನರ್ಮದಾ ಅವರ ನೃತ್ಯ ಶಾಲೆಯ ಬಗ್ಗೆ ಪ್ರಸ್ತಾಪಿಸುತ್ತಾ, all roads lead to shankaramath street ಎಂದು ಅಭಿಮಾನದಿಂದ ಹೇಳಿದ್ದರು. ಹೆಸರಾಂತ ಕೂಚಿಪುಡಿ ನೃತ್ಯ ಕಲಾವಿದೆ ಶ್ರೀಮತಿ ಮಂಜು ಭಾರ್ಗವಿ, ನೂಪುರದ ನಿರ್ದೇಶಕಿ ಶ್ರೀಮತಿ ಲಲಿತಾ ಶ್ರೀನಿವಾಸನ್‌, ನೃತ್ಯ ಕಲಾಮಂದಿರಂನ ನಿರ್ದೇಶಕಿ ಶ್ರೀಮತಿ ಬಿ. ಭಾನುಮತಿ ಮುಂತಾದವರೆಲ್ಲಾ ತಾವೇ ಸ್ವತಃ ಉತ್ತಮ ಗುರುಗಳಾಗಿದ್ದರೂ, ಶ್ರೀಮತಿ ನರ್ಮದಾ ಅವರ ಬಳಿ ಬಂದು ಹೆಚ್ಚಿನ ಅಭ್ಯಾಸ ಮಾಡಿದ್ದಾರೆ. ಇನ್ನು  ನರ್ಮದಾ ಅವರ ಬಳಿ ಪ್ರಾರಂಭದ ಹಂತದಿಂದಲೂ ಕಲಿತ ಅನೇಕ ಯುವ ನೃತ್ಯ ಕಲಾವಿದರು ಪರಿಪೂರ್ಣ ಕಲಾವಿದರಾಗಿ ಬೆಳೆದಿದ್ದಾರೆ. ಪಿ. ಪ್ರವೀಣ್‌ ಕುಮಾರ್, ಡಾ. ಶ್ರೀಧರ್, ಲಕ್ಷ್ಮೀ ಗೋಪಾಲಸ್ವಾಮಿ, ಸೌಂದರ್ಯ, ಸತ್ಯನಾರಾಯಣ ರಾಜು ಮುಂತಾದವರೆಲ್ಲಾ ಪ್ರದರ್ಶನ ಕಲಾವಿದರಾಗಿ ಮತ್ತು ತಮ್ಮದೇ ನೃತ್ಯ ಶಾಲೆಗಳನ್ನು  ತೆರೆದು ಉತ್ತಮ ಗುರುಗಳಾಗಿ ಕೂಡ ಮಾಧ್ಯಮದಲ್ಲಿ ಹೆಸರು ಮಾಡುತ್ತಿದ್ದಾರೆ. ಶಿಷ್ಯರ ವಿಷಯದಲ್ಲಿ ಆ ದೇವರು ನರ್ಮದಾ ಅವರಿಗೆ ಸಾಕು ಸಾಕೆನಿಸುವಷ್ಟು ತೃಪ್ತಿಯನ್ನು ಕೊಟ್ಟು, ತಾನು ಅವರ ಕೌಟುಂಬಿಕ ಜೀವನದಲ್ಲಿ ಕಿತ್ತು ಕೊಂಡದ್ದಕ್ಕೆ ಪಶ್ಚಾತ್ತಾಪ ಪಟ್ಟಿದ್ದಾನೇನೋ.

ಒಮ್ಮೆ ಅನಿವಾಸಿ ಭಾರತೀಯರಾದ ಶ್ರೀಮತಿ ಮಾಲತಿ ಅಯ್ಯಂಗಾರ್ ಬೆಂಗಳೂರಿನಲ್ಲಿ ನರ್ಮದಾ ಅವರ ಶಿಷ್ಯರೊಬ್ಬರ ಕಾರ್ಯಕ್ರಮ ನೋಡಿ ಬಹಳ ಇಷ್ಟಪಟ್ಟು, ಅಮೆರಿಕಾದಲ್ಲಿರುವ ತಮ್ಮ ಮಗಳಿಗೆ ನೃತ್ಯ ಕಲಿಸಲು ಅಮೆರಿಕಾಗೆ ಬರಲು ನರ್ಮದಾ ಅವರಿಗೆ ಆಹ್ವಾನವಿತ್ತರು. ಅದು ನರ್ಮದಾ ಅವರ ಮೊದಲ ವಿದೇಶ ಪ್ರವಾಸ. ಅಮೆರಿಕಾದಲ್ಲಿ ಮಗಳಿಗೆ ನರ್ಮದಾ ಪಾಠ ಮಾಡುವುದನ್ನು ಕಂಡು ತಾವೂ ಆಕರ್ಷಿತರಾಗಿ ನೃತ್ಯ ಕಲಿಯಲು ಆರಂಭಿಸಿದ ಶ್ರೀಮತಿ ಮಾಲತಿ ಅಯ್ಯಂಗಾರ್ ಇಂದು ಓರ್ವ ಪ್ರಬುದ್ಧ ನೃತ್ಯ ಕಲಾವಿದರಾಗಿ ಬೆಳೆದು ಅಮೆರಿಕಾದಲ್ಲಿ ನಿರಂತರ ಕಾರ್ಯಕ್ರಮಗಳನ್ನು ಮಾಡುತ್ತಾ, ಇಲ್ಲಿನ ಕಲಾವಿದರನ್ನು ಅಲ್ಲಿಗೆ ಕರೆಸಿಕೊಳ್ಳುತ್ತಾ ಒಂದು ರೀತಿಯಲ್ಲಿ ಇಂಡೊ ಅಮೆರಿಕನ್‌ ಸಾಂಸ್ಕೃತಿಕ ರಾಯಭಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಒಮ್ಮೆ ನರ್ಮದಾ ಅಮೆರಿಕಾ ಪ್ರವಾಸ ಮಾಡಿಬಂದ ಮೇಲೆ, ಪ್ರಪಂಚದ ಇತರ ದೇಶಗಳಲ್ಲಿ ನೆಲೆನಿಂತಿದ್ದ ನರ್ಮದಾ ಅವರ ಇತರ ಶಿಷ್ಯರು ತಮ್ಮ ತಮ್ಮ ದೇಶಗಳಿಗೂ ನರ್ಮದಾ ಅವರನ್ನು ಕರೆಸಿಕೊಂಡು, ತಾವೂ ಹೆಚ್ಚಾಗಿ ಕಲಿತು ತಮ್ಮದೇ ನೃತ್ಯ ಶಾಲೆಗಳನ್ನು ಅಲ್ಲಿ ಪ್ರಾರಂಭಿಸಿದರು. ಹಾಗಾಗಿ ಇಂದು ಅನೇಕ ಹೊರದೇಶಗಳಲ್ಲಿ ನರ್ಮದಾ ಪರಂಪರೆ ಯಶಸ್ವಿಯಾಗಿ ಕೆಲಸ ಮಾಡುತ್ತಿದೆ.

ಇಂದು ನರ್ಮದಾ ಹಲವು ನೋವು ನಲಿವುಗಳನ್ನು ಅನುಭವಿಸಿ ಪರಿಪಕ್ವಗೊಂಡು ಒಂದು ಧೀಮಂತ ಚೇತನವಾಗಿ ತಮ್ಮದೇ ಆದ ಒಂದು ಕ್ರಿಯಾಶೀಲ ಶಿಷ್ಯ ವಲಯವನ್ನು ರೂಪಿಸಿಕೊಂಡು, ತೃಪ್ತಿಯ ಅಮ್ಮನಾಗಿ ಪಾಠಕ್ಕೆ ವಿಶ್ರಾಂತಿ ಕೊಡದೆ ಚಟುವಟಿಕೆಯಿಂದಿದ್ದಾರೆ. ತಾನು ಪುನರ್ಜನ್ಮ ಪಡೆದು ಜೀವಕೊಟ್ಟ ತಮ್ಮ ಗತಿಸಿದ ಪತಿಯ ನೆನಪಿನ ಕುರುಹು, ತಮ್ಮ  ಬದುಕಿಗೆ ಆಸೆಯನ್ನು ತುಂಬಿದ ಅವರ ಒಬ್ಬನೇ ಮಗ ಡಾ. ರಾಜೇಶ್‌, ಇಂದು ಸತ್ಯಸಾಯಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜೇಶ್‌ ಅವರೂ ಕೂಡ ಪತ್ನಿ ಮತ್ತು ಎರಡು ವರ್ಷದ ಒಬ್ಬನೇ ಪುಟ್ಟ ಮಗನ ಪುಟ್ಟ ಸಂಸಾರದೊಂದಿಗೆ ತಮ್ಮ ತಾಯಿಯನ್ನು ಅಭಿಮಾನ ಅಕ್ಕರೆಯಿಂದ ನೋಡಿಕೊಳ್ಳುತ್ತಿದ್ದಾರೆ.

ಸಮಾಜವೂ ನರ್ಮದಾ ಅವರನ್ನು ಬಹಳ ಅಭಿಮಾನದಿಂದ ಗೌರವಿಸುತ್ತಾ ಬಂದಿದೆ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ ಮತ್ತು ಕರ್ನಾಟಕ ಸರ್ಕಾರ ನೃತ್ಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ಕೊಡುವ ಪ್ರತಿಷ್ಠಿತ ಶಾಮತಲಾ ಪ್ರಶಸ್ತಿಗಳು ನರ್ಮದಾ ಅವರಿಗೆ ಸಂದಿವೆ. ಜೊತೆಗೆ ಮದ್ರಾಸ್‌ ಮ್ಯೂಸಿಕ್‌ ಅಕಾಡೆಮಿ ಎಂ.ಜಿ.ಆರ್. ಯುವ ಪ್ರಶಸ್ತಿಗೆ ಆಯ್ಕೆಯಾಗಿ, ಆಯ್ಕೆಗೊಂಡ ಕಲಾವಿದರ ಗುರುಗಳಿಗೆಕ ಕೊಡುವ ವರ್ಷದ ಉತ್ತಮ ನೃತ್ಯ ಗುರು ಪ್ರಶಸ್ತಿಯನ್ನು ನರ್ಮದಾ ಪಡೆದುಕೊಂಡರು. ಎಂ.ಜಿ.ಆರ್. ಪ್ರಶಸ್ತಿ ಪಡೆದ ಮೊದಲ ಕರ್ನಾಟಕದ ಕಲಾವಿದೆ ನರ್ಮದಾ ಅವರ ಶಿಷ್ಯೆ ಲಕ್ಷ್ಮೀ ಗೋಪಾಲಸ್ವಾಮಿ ಮತ್ತು ಉತ್ತಮ ನೃತ್ಯ ಗುರು ಪ್ರಶಸ್ತಿ ಪಡೆದ ಮೊದಲ ಕರ್ನಾಟಕದ ನೃತ್ಯಗುರು ಶ್ರೀಮತಿ ನರ್ಮದಾ.

ಇಂದು ನರ್ಮದಾ ಇತಿಹಾಸದ ಒಂದು ದೊಡ್ಡ ಸಂಪುಟವಾಗಿ ನಮ್ಮೊಡನಿದ್ದಾರೆ. ಅ ಸಂಪುಟವನ್ನು ಅಭ್ಯಾಸ ಮಾಡಿ ಅದರ ಸತ್ವವನ್ನು ಸಾಕೆನಿಸುವಷ್ಟು ಉಣ್ಣುವ ಅವಕಾಶ ಯುವ ನೃತ್ಯ ಕಲಾವಿದರಿಗಿದೆ. ಈ ಸಂಪುಟ ನೂರ್ಕಾಲ ಬಾಳಬೇಕು…. ಬೆಳಗಬೇಕು.