ಸಮಕಾಲೀನ ಭರತ ನಾಟ್ಯ ಗುರುಗಳ ಪೈಕಿ ಶ್ರೀಮತಿ ನರ್ಮದಾ ಅವರ ಸ್ಥಾನ ಗಣನೀಯ. ೨೨-೯-೧೯೪೩ರಂದು ಬೆಂಗಳೂರಿನಲ್ಲಿ ಜನಿಸಿದ ಇವರು ತಮ್ಮ ಬಾಲ್ಯದಲ್ಲೇ ಭರತ ನಾಟ್ಯವನ್ನು ಕಲಿಯಲು ಪ್ರಾರಂಭಿಸಿದರು. ಇವರ ಮೊದಲ ಗುರು ಸನಾತನ ಕಲಾಕ್ಷೇತ್ರದ ನಾಟ್ಯಾಚಾರ್ಯ ದಿ|| ವಿ.ಎಸ್.ಕೌಶಿಕ್, ನಂತರ ಬೆಂಗಳೂರು ನಿವಾಸಿಯಾಗಿದ್ದ ಗುರು ತಂಜಾವೂರು ಕಿಟ್ಟಪ್ಪ ಪಿಳ್ಳೆಯವರ ಶಿಷ್ಯೆಯಾಗಿ ಅವರ ಮಾತಾಮಹ ಪಂದನಲ್ಲೂರು ಶ್ರೀ ಮೀನಾಕ್ಷಿ ಸುಂದರಂ ಪಿಳ್ಳೆಯವರಿಂದ ಪ್ರಸಿದ್ಧಿಗೊಳಿಸಲ್ಪಟ್ಟಿರುವ ಪಂದನಲ್ಲೂರು ಶೈಲಿಯ ನಾಟ್ಯಾಭ್ಯಾಸ ಪಡೆದರು. ೧೯೫೩ರಲ್ಲಿ ರಂಗಪ್ರವೇಶವನ್ನು ಮಾಡಿ ಬೆಂಗಳೂರು. ಮದರಾಸು ಮುಂತಾದ ಕಡೆ ನೃತ್ಯ ಕಾರ್ಯಕ್ರಮಗಳನ್ನು ನೀಡಿದರು. ನೃತ್ಯ ಶಿಕ್ಷಣಕ್ಕೆ ವಿದ್ಯಾರ್ಥಿ ವೇತನವನ್ನೂ ಪಡೆದರು. ೧೯೭೮ರಲ್ಲಿ ತಮ್ಮ ತಾಯಿಯವರ ಸ್ಮಾರಕವಾಗಿ ’ಶಕುಂತಲಾ ನೃತ್ಯಾಲಯ’ ಎಂಬ ನೃತ್ಯ ಶಾಲೆಯನ್ನು ಪ್ರಾರಂಭಿಸಿ ಅನೇಕರಿಗೆ ಶಿಕ್ಷಣವನ್ನು ಕೊಡುತ್ತಿದ್ದಾರೆ. ಇವರಲ್ಲಿ ಅನೇಕರು ಇಂದು ಪ್ರಸಿದ್ಧರಾಗಿದ್ದಾರೆ. ೧೯೮೭ರಲ್ಲಿ ತಮ್ಮ ಇಬ್ಬರು ಶಿಷ್ಯೆಯರೊಂದಿಗೆ ಇಂಗ್ಲೆಂಡ್‌, ಅಮೆರಿಕಾ ಮತ್ತು ಅರಬ್ ದೇಶಗಳಲ್ಲಿ ಕಾರ್ಯಕ್ರಮಗಳನ್ನು ನೀಡಿ ಮೆಚ್ಚುಗೆ ಪಡೆದರು.

ನರ್ಮದಾರಿಗೆ ನಮ್ಮ ಅಕಾಡೆಮಿಯ ೧೯೮೭-೮೮ನೇ ಸಾಲಿನ ಪ್ರಶಸ್ತಿಯಲ್ಲದೇ ರಾಜ್ಯೋತ್ಸವ ಪ್ರಶಸ್ತಿ, ಶಾಂತಲಾ ಪ್ರಶಸ್ತಿ ಹಾಗೂ ಪ್ರತಿಷ್ಠಿತ ಕೇಂದ್ರ ಸಂಗೀತ-ನಾಟಕ ಅಕಾಡೆಮಿಯ ಪ್ರಶಸ್ತಿಯೂ ಸಂದಿದೆ. ನರ್ಮದಾ ಮೇ ೨೦೦೭ರಲ್ಲಿ ಹೃದಯಾಘಾತಕ್ಕೆ ತುತ್ತಾದರು.