ಪೊಲ್ಸೊಡಿ ಪೋಪಿನಿ

ಇದೊಂದು ವ್ಯವಸಾಯ ಸಂಬಂಧಿ ಕುಣಿತ. ಎಣೇಲು ಬೆಳೆ ಕೊಯ್ಯುವ ಸಂದರ್ಭದಲ್ಲಿ ಮಂಗಳೂರು ಗ್ರಾಮಾಂತರ ಪ್ರದೇಶದ ರೈತರು ತಾವು ಮೊದಲಿಗೆ ಕೊಯ್ದ ಮೂರು ಅಥವಾ ಐದು ಸೂಡಿ ಭತ್ತದ ಪೈರನ್ನು ಅಂಗಳದ ತುಳಸಿಕಟ್ಟೆಯ ಬಳಿ ಇಡುತ್ತಾರೆ. ಪಕ್ಕದಲ್ಲಿ ದೀಪ, ಸ್ವಸ್ತಿಕವಿಟ್ಟು ಪೈರಿಗ ಆರತಿ ಬೆಳಗಿ ಪೂಜೆ ಮಾಡುತ್ತಾರೆ. ಪೂಜೆ ಆದ ಬಳಿಕ ಪೈರಿನ ಸೂಡಿಗಳನ್ನು ಮನೆಯ ಛಾವಣಿಗೆ ಎಸೆದುಬಿಡುತ್ತಾರೆ.

ದೀಪಾವಳಿಯ ನಂತರ ಜಾರ್ದೆ (ನವಂಬರ್) ತಿಂಗಳಲ್ಲಿ ನಲಿಕೆಯ ಹೆಂಗಸರು ಮನೆ ಮನೆಗೆ ಹೋಗಿ ಕುಣಿತ ನಡೆಸುತ್ತಾರೆ. ಛಾವಣಿಯ ಮೇಲಿದ್ದ ಪೈರಿನ ಸೂಡಿಗಳನ್ನು ತೆಗೆದು ಬಡಿದು ಭತ್ತ ಸಂಗ್ರಹಿಸಿ ತಮ್ಮ ಜೋಳೀಗೆಗೆ ತುಂಬಿಸಿಕೊಂಡು ಹೋಗುತ್ತಾರೆ. ಪೊಲಿ ಎಂದರೆ ಅದೃಷ್ಟ ಎಂದರ್ಥ. ಪೊಲ್ಸೊಡಿ ಪೋಪುನಿ ಎಂದರೆ ಅದೃಷ್ಟ ತುಂಬಿ ತುಳುಕುವುದು. ಕಲಾವಿದರಿಗೆ ಯಾವುದೇ ವಿಶೇಷ ವೇಷಭೂಷಣಗಳಿರುವುದಿಲ್ಲ. ಒಬ್ಬಾಕೆ ತೆಂಬರೆ ಬಾರಿಸಿ ಹಾಡು ಹೇಳುತ್ತಾಳೆ. ಈ ಕುಣಿತದ ಹಾಡು ಹೀಗಿದೆ :

ಪೊಲಿ ಪೊಲಿ ಪೊಲಿ ಪೊಲಿ ಎಚ್ಚಲ
ಪಂಚ ಪಾಂಡವೆರೆ ಪೊಲಿ ನಿಚ್ಚ ದೇವೆರ‍್ಕುಲೆ ಪೊಲಿ
ತುಪ್ಪೆ ಪಾಡೊಡು ಸಿರಿ ತೂವೊಡೆ
ಆಜಾಲ ಪೊಲಿ ಈಜಾಲ ಪೊಲಿ
ಆಜಿ ಪತ್ತಾಜಿ ಜಾಲ್ದಾತೆ ಪೊಲಿ
ಏಳ್‌ಪತ್ತೇಳ್ ಕೋಟಿ ಪೊಲಿ ಎಂಕುಲೆ ಜಾಲೆಗೇ ಬಲೆ ಪೊಲಿ
ಅಪ್ಪೆ ಬೆರಿಟೆ ಬಾಲೆಲು ಬನ್ನಂಗೆ ಬರೊಡು
ಪೆತ್ತದ ಬೆರಿಯೆ ಕಂಜಿ ಬನ್ನಂಗೆ ಬರೊಡು
ಪೆರಡೆದ ಬೆರಿಟೆ ಕಿನ್ನಿಲು ಬನ್ನಂಗೆ ಬರೊಡು
ಮದಿಮಾಲ್ ಪೋನಗ ತರೆಕುಜಲ್ ರಾಪಿಕುಲೆಕ ಬರೊಡು
ಕೆರ್ಮಲ್ ಪೊಣ್ಣಗ್ ಮಿರೆ ಬನ್ನಂಗೆ ಬರೊಡು
ಪಿಜಿನ್‌ದ ದಾರೆ ಬನ್ನಂಗೆ
ಸೂಜಿದ ಪಿರವು ನೂಲು ಬನ್ನಂಗೆ ಬರೊಡು
ಪಕ್ಕಿಲೆ ಬಾಯಿಡ್ ಬಲಿಪ  ನಾಲಯಿಡ್ ಕುದುಕ ಬೀಲೊಡು ಬರೊಡು
ಪೇರ್ ಉರ್ಕಿಲೆಕೊ ಉರ್ಕರೊಡು
ಕಡಲ ಸೆರೆ ಮಗ್ತಿಲೆಕ ಮಗ್ರೊಡು
ನೀರ್ ಪೆರ್ಚುಲೆಕ ಪೆರ್ಚೊಡು

(ಪೊಲಿ ಪೊಲಿ ಪೊಲಿ ಪೊಲಿ ಪೊಲಿ ಹೆಚ್ಚಾಗಲಿ. ಪಂಚ ಪಾಂಡವರ ಪೊಲಿ ನಿತ್ಯ ದೇವರ್ಕಳ ಪೊಲಿ ಕಣಜ ತುಂಬಲಿ. ಐಸಿರಿ ಹೆಚ್ಚಾಗಲಿ. ಆ ಅಂಗಳದ ಪೊಲಿ ಈ ಅಂಗಳದ ಪೊಲಿ ಅರುವತ್ತಾರು ಅಂಗಳದಷ್ಟು ಪೊಲಿ ಎಪ್ಪತ್ತೇಳು ಕೋಟಿ ಪೊಲಿ ನಮ್ಮ ಅಂಗಳಕ್ಕೆ ಬಾ ಪೊಲಿ. ತಾಯ ಹಿಂದೆ ಮಕ್ಕಳು ಬರುವಂತೆ ದನದ ಹಿಂದೆ ಕರು ಬರುವಂತೆ, ಹೆಂಟೆಯ ಹಿಂದೆ ಮರಿಗಳು ಬರುವಂತೆ, ಮದುಮಗಳು ಹೋಗುವಾಗ ಕೂದಲು ಹಾರುವಂತೆ, ಹೊಲತಿ ಹೆಣ್ಣಿಗೆ ಮೊಲೆ ಬರುವಂತೆ, ಇರುವೆ ಸಾಲಿನಂತೆ, ಸೂಜಿಯ ಹಿಂದೆ ನೂಲು ಬರುವಂತೆ ಬರಲಿ. ಹಕ್ಕಿಯ ಬಾಯಲ್ಲಿ, ಚಿರತೆಯ ನಾಲಗೆಯಲ್ಲಿ, ನರಿಯ ಬಾಲದಲ್ಲಿ ಬರಲಿ. ಹಾಲು ಉಕ್ಕಿದಂತೆ ಉಕ್ಕಲಿ. ಕಡಲ ತೆರೆ ಮಗುಚಿದಂತೆ ಮಗುಚಲಿ. ಪ್ರವಾಹ ಉಕ್ಕಿದಂತೆ ಉಕ್ಕಲಿ).

ನಲಿಕೆಯವರು ನಡೆಸುವ ಜನಪದ ಕುಣಿತಗಳಲ್ಲಿ ಹೆಚ್ಚಿನವುಗಳು ಕೃಷಿ ಸಂಬಂಧಿ ಕುಣಿತಗಳು. ಈ ಜಾತಿಒಯವರು ಕೃಷಿಕರಲ್ಲ. ಕೃಷಿಕಾರ್ಮಿಕರಾಗಿಯೂ ಪರಿಣತಿ ಪಡೆದವರಲ್ಲ. ಡಾ.ಶಿವರಾಮ ಕಾರಂತತು ತುಳುನಾಡಿನ ಕೃಷಿಕರಿಗೆ ಭತ್ತದ ಬೇಸಾಯ ಒಂದು ಉದ್ಯೋಗವಷ್ಟೇ ಅಲ್ಲ, ಅದೊಂದು ಆಚರಣೆಯೆನ್ನುತ್ತಾರೆ. ಇಲ್ಲಿನ ಕೃಷಿಯನ್ನು ಆಚರಣೆಯನ್ನಾಗಿ ರೂಪಿಸಿದವರು ನಲಿಕೆಯವರು. ಅದರಲ್ಲೂ ಮುಖ್ಯವಾಗಿ ನಲಿಕೆ ಮಹಿಳೆಯರು. ಮಹಿಳೆಯರೇ ನಡೆಸುವ ಮಾದಿರ, ಮೂರ್ಲೆ ನಲಿಕೆ, ಸೋಣದ ಮದಿಮಾಲ್, ಪೊಲ್ಸೊಡಿ ಪೋಪುನೆ ಮುಂತಾದ ಕುಣಿತಗಳ ಮೂಲಕ ನಲಿಕೆಯವರ ಕುಣಿತ ಮತ್ತು ಆರಾಧನೆಗಳ ಕೆಲಸಗಳು ಕಲಾತ್ಮಕವಾದವುಗಳು. ಎಲ್ಲಾ ಬಗೆಯ ತಯಾರಿಯನ್ನೊಳಗೊಂಡ ಮತ್ತು ಸಂಸ್ಕಾರಗೊಂಡ ಕುಣಿತಗಳನ್ನು ನಲಿಕೆಯ ಮಹಿಳೆಯರು ಸಾರ್ವಜನಿಕ ಪ್ರೇಕ್ಷಕರ ಮುಂದೆ ಪ್ರದರ್ಶಿಸುತ್ತಾರೆ.

ಜನಪದ ವೈದ್ಯ

ನಲಿಕೆಯವರು ಕೈಗೊಂಡ ಇನ್ನೊಂದು ವೃತ್ತಿ ನಾಟಿ ವೈದ್ಯ. ಈ  ವೈದ್ಯವನ್ನೀಗ ಜನಪದ ವೈದ್ಯವೆಂಬುದಾಗಿ ವಿದ್ವಾಂಸರು ಹೆಸರಿಸಿದ್ದಾರೆ. ಇದು ಆಯುರ್ವೇದದಿಂದ  ಹಿಡಿದು ಎಲ್ಲಾ ವೈದ್ಯಪದ್ಧತಿಗಳಿಗೂ ಮೂಲ. ಜನಪದ ವೈದ್ಯ ಪದ್ಧತಿಯಲ್ಲಿ ಎರಡು ವಿಭಾಗಗಳಿವೆ. ಒಂದು ನೈಸರ್ಗಿಕ ವೈದ್ಯ ಪದ್ಧತಿ ಮತ್ತು ಇನ್ನೊಂದು ಮಾಂತ್ರಿಕ ವೈದ್ಯ ಪದ್ಧತಿ. ನಲಿಕೆಯವರು ಅಥವಾ ಪಾಣಾರರು ಔಷಧಿಯ ಗಿಡಮೂಲಿಕೆಗಳೆಲ್ಲದರ ಪರಿಚಯವುಳ್ಳವರು. ಯಾವ ಗಿಡಬಳ್ಳಿಗಳಲ್ಲಿ ಯಾವ ರೋಗವನ್ನು ಗುಣಡಿಸುವ ಶಕ್ತಿ ಇದೆಯೆಂದು ಬಲ್ಲವರು. ತಮ್ಮ ಮನೆಯ ಸುತ್ತ ಹತ್ತಾರು ಗಿಡಬಳ್ಳಿಗಳನ್ನಾದರೂ ಬೆಳೆಸಿಕೊಳ್ಳುತ್ತಾರೆ. ಸಸ್ಯಜನ್ಯ, ಪ್ರಾಣಿಜನ್ಯ,ಖನಿಜಜನ್ಯ ವಸ್ತುಗಳನ್ನು ಬಳಸಿ ಅವರು ಔಷಧ ನೀಡುತ್ತಾರೆ. ಮುಖ್ಯವಾಗಿ ವಾತ, ಪಿತ್ತ, ಅಪಸ್ಮಾರ, ಕೆಂಪು ಹುಣ್ಣು, ಸರ್ಪಸುತ್ತು, ಅರಸಿನ ಮಂಡಿಗೆ, ಚರ್ಮರೋಗಗಳಿಗೆ ಔಷಧಿ ನೀಡಿ ಗುಣಪಡಿಸುವುದರಲ್ಲಿ ಇವರು ಪರಿಣಿತರು. ನಲಿಕೆಯ ಮಹಿಳೆಯರು ಪ್ರಕೃತಿಯಲ್ಲಿರುವ ಬಹಳಷ್ಟು ಸಸ್ಯಗಳನ್ನು ಗುರುತಿಸಬಲ್ಲರು. ಅದರ ಗುಣದೋಷಗಳನ್ನು ಹೇಳಬಲ್ಲರು. ಜನಪದ ವೈದ್ಯಪದ್ಧತಿಯ ಎರಡು ಪ್ರಕಾರಗಳಲ್ಲಿ ಮೊದಲನೆಯದಾದ ನೈಸರ್ಗಿಕ ವೈದ್ಯ ಪದ್ಧತಿಯಲ್ಲಿ ಇವರು ಚತುರರು. ದೊಡ್ಡ ದೊಡ್ಡ ಖಾಯಿಲೆಗಳನ್ನು ಕೂಡಾ ಬೇರು, ತೊಗಟೆ, ಸೊಪ್ಪಿನ ಔಷಧದಿಂದಲೇ ಗುಣಪಡಿಸಬಲ್ಲರು.

ಇನ್ನೊಂದು ಪ್ರಕಾರವಾದ ಮಾಂತ್ರಿಕ ಚಿಕಿತ್ಸೆಯನ್ನು ಪಾಣಾರ ಪುರುಷರು ನಡೆಸುತ್ತಾರೆ. ಭಸ್ಮ ಮಂತ್ರಿಸಿ ಕೊಡುವುದು, ತಾಯಿತ ಕಟ್ಟುವುದು, ನೀರು ಹೊಯ್ಯುವುದು, ಕೋರು ತೆಗೆಯುವುದು, ಕಳೆಯುವುದು, ಕಟ್ರೆ ಮುರಿಯುವುದು ಮುಂತಾದ ಕ್ರಿಯೆಯಲ್ಲಿ ಪಾಣಾರ ಪುರುಷರು ಪರಿಣಿತರು.

ಹಿಂದಿನ ಕಾಲದಲ್ಲಿ ಹಳ್ಳಿಗಳಲ್ಲಿ ಆಸ್ಪತ್ರೆಗಳಿರಲಿಲ್ಲ. ಹೆಂಗಸರಿಗೆ ಹೆರಿಗೆ ನೋವು ಬಂದಾಗ ದೂರದ ಆಸ್ಪತ್ರೆಗೆ ಕೊಂಡೊಯ್ಯಲು ಕಷ್ಟವಾಗುತ್ತಿತ್ತು. ಅಂತಹ ಸಂದರ್ಭದಲ್ಲಿ ಹೆರಿಗೆ ಮಾಡಿಸುವ ಕೆಲಸವನ್ನು ಹಳ್ಳಿಯ ಪರಿಣಿತ ಹಿರಿಯ ಹೆಂಗಸರು ನಡೆಸುತ್ತಿದ್ದರು. ಇವರನ್ನು ಸೂಲಗಿತ್ತಿಯರೆಂದು ಕರೆಯುತ್ತಿದ್ದರು. ನಲಿಕೆ ಇಲ್ಲವೆ ಪಾಣಾರರಲ್ಲಿ ಇಂತಹ ಅನೇಕ ಪರಿಣಿತ ಸೂಲಗಿತ್ತಿಯರಿದ್ದರು. ಈಗಲೂ ಇದ್ದಾರೆ. ಆದರೆ ಈಗ ಹಳ್ಳಿ ಹಳ್ಳಿಗಳಲ್ಲೂ ಆಸ್ಪತ್ರೆಗಳಿರುವುದರಿಂದ ಹೆರಿಗೆಗೆ ಇಂತಹ ಸೂಲಗಿತ್ತಿಯರ ಅವಶ್ಯಕತೆ ಬೀಳುವುದಿಲ್ಲ.

ಜನರು ಮಳೆ, ಬಿಸಿಲಿನಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಮನೆಯಿಂದ ಹೊರಗೆ ಹೊರಟಾಗ ಕೈಯಲ್ಲಿ ಛತ್ರಿಯನ್ನು ಹಿಡಿದುಕೊಳ್ಳುವುದು ಸಹಜ. ಹಿಂದಿನ ಕಾಲದಲ್ಲಿ ತುಳುನಾಡಿನಲ್ಲಿ ಈ ಛತ್ರಿಯನ್ನು ಪಣೆಮರದ ಗರಿಗಳಿಂದ ತಯಾರಿಸುತ್ತಿದ್ದರು. ಪಣೆಮರದ ಗರಿಗಳನ್ನು ಒಣಗಿಸಿ ಹೆಣೆದು ಅದಕ್ಕೊಂದು ಬಿದಿರಿನ ಕಾಲನ್ನು ಜೋಡಿಸಿ ಇದನ್ನು ತಯಾರಿಸಲಾಗುತ್ತಿತ್ತು. ಪಣೆಮರವೆಂದರೆ ಅಗಲವಾದ ಗರಿಗಳನ್ನು ಬಿಡುವ ತಾಳೆಜಾತಿಯ ಒಂದು ಮರ. ಈ ಜಾತಿಯ ಮರವನ್ನು ಶ್ರೀಲಂಕಾದಿಂದ ಪಾಣಾರೇ ಇಲ್ಲಿಗೆ ತಂದರೆಂಬ ಬಗ್ಗೆ ಐತಿಹ್ಯವಿದೆ. ಈ ರೀತಿಯ ಪಣೆಛತ್ರಿಯನ್ನು ಪಾಣಾರು ತಯಾರಿಸುತ್ತಿದ್ದರು. ಮೇಲ್ವರ್ಗದ ಬ್ರಾಹ್ಮಣರು ಅರಸರು ಈ ಛತ್ರಿಯನ್ನೇ ಬಳಸುತ್ತಿದ್ದರು. ದೇವಸ್ಥಾನದ ಉತ್ಸವದ ಸಂದರ್ಭದಲ್ಲಿ ದೇವರನ್ನು ಹೊತ್ತುಕೊಂಡು ಹೋಗುವ ಅರ್ಚಕರ ಹಿಂದಿನಿಂದ ಪಣೆಛತ್ರಿಯನ್ನು ಹಿಡಿದುಕೊಂಡು ಹೋಗುವ ಸಂಪ್ರದಾಯ ಈಗಲೂ ಇದೆ. ಆಟಿಕಳೆಂಜೆ ಕುಣಿತದಲ್ಲಿ ಫಣೆಛತ್ರಿಯನ್ನು ಬಳಸಿಕೊಳ್ಳಲಾಗುತ್ತಿದೆ. ಈ ಛತ್ರಿಯನ್ನು ಪಾಣಾರ ಮಹಿಳೆಯರೂ ತಯಾರಿಸಬಲ್ಲರು.

ಪಣೆಛತ್ರಿಯ ಜೊತೆಗೆ ಪಾಣಾ ಮಹಿಳೆಯರು ತಾಳೆಗರಿಗಳನ್ನು ಒಣಗಿಸಿ ಅದರಿಂದ ಸಣ್ಣ ಕುರುವೆ (ಸಣ್ಣ ಬುಟ್ಟಿ) ಗಳನ್ನು ಕೂಡಾ ತಯಾರಿಸುತ್ತಾರೆ. ಈ ಕುರುವೆಗಳನ್ನು ಧಾನ್ಯ ತುಂಬಿಸಿಡಲು ಮತ್ತೆ ಅಡುಗೆ ಕೋಣೆಯ ಸಾಂಬಾರ ವಸ್ತುಗಳನ್ನು ಹಾಖಿಡಲು ಬಳಸುತ್ತಾರೆ. ಈಗಿನ ಕಾಲದ ಮಹಿಳೆಯರು  ತಾಳೆಗರಿಯಿಂದ ವ್ಯಾನಿಟಿ ಬ್ಯಾಗ್, ಪರ್ಸ್, ಹ್ಯಾಟ್ ಇತ್ಯಾದಿಗಳನ್ನು ಕೂಡಾ ತಯಾರಿಸುತ್ತಾರೆ. ಮಕ್ಕಳ ಆಟಿಕೆಗಳನ್ನು ಕೂಡ ತಯಾರಿಸುತ್ತಾರೆ. ಗಿರಿಗಿಟಿ ತಯಾರಿ ಗರಿಯಿಂದಲೂ ಗಿಳಿ, ಹಾವು ಮುಂತಾದ ಆಟಿಕೆಗಳನ್ನು ತಯಾರಿಸಲು ನಲಿಕೆ ಮಹಿಳೆಯರು ಬಲ್ಲರು.

ಚಾಪೆ ಹೆಣೆಯುವುದು ಪಾಣಾ ಮಹಿಳೆಯರದ್ದೇ ಆದ ಉದ್ಯೋಗ. ಕರಾವಳಿ ಕರ್ನಾಟಕದ ನದಿ, ಹೊಳೆ, ಕೆರೆ, ಸರೋವರ ಮುಂತಾದ ಜಲಾಶಯಗಳ ಬದಿಗಳಲ್ಲಿ ಮತ್ತು ಜವುಗು ಪ್ರದೇಶಗಳಲ್ಲಿ ಮುಂಡೇವು (ಮುಂಡೋವು-ಮುಂಡಬಲ್ಲೆ-ಮುಂಡೊಲಿ) ಎಂಬ ಕೇದಗೆ ಜಾತಿಯ ಒಂದು ಸಸ್ಯ ಬೆಳೆಯುತ್ತದೆ. ಬಾಳೆಗಿಡದಂತೆ ಇದಕ್ಕೆ ಕಾಂಡದಿಂದಲೇ ಉದ್ದವಾದ ಮತ್ತು ಹೆಚ್ಚು ಅಗಲವಿಲ್ಲದ ಓಲೆ ಗರಿಯ ರೀತಿಯ ಎಲೆಗಳು ಬೆಳೆಯುತ್ತವೆ. ಈ ಎಲೆಗಳ ಎರಡು ಅಂಚುಗಳಲ್ಲಿಯೂ ಸಣ್ಣ ಮುಳ್ಳುಗಳಿರುತ್ತವೆ. ಸಾಮಾನ್ಯವಾಗಿ ಈ ಸಸ್ಯವನ್ನು ಕಾಲುವೆ ಹಳ್ಳಗಳ ಪಕ್ಕದಲ್ಲಿ ಬೇಲಿಗಾಗಿ ನೆಡುತ್ತಾರೆ.

ಈ ಮುಂಡೇವು ಸಸ್ಯದ ಉದ್ದವಾದ ಎಲೆಗಳನ್ನು ಕೊಯ್ದು ಸಂಗ್ರಹಿಸಿ ತಂದು ಬಿಸಿಲಲ್ಲಿ ಒಣಗಿಸುತ್ತಾರೆ. ಬಳಿಕ ಅದಕ್ಕೆ ನೀರನ್ನು ಹಾಯಿಸಿ ಮೆತ್ತಗೆ ಮಾಡುತ್ತಾರೆ. ಈ ಓಲೆಗರಿಯನ್ನು ಮಧ್ಯದಿಂದ ಸೀಳಿ ಎರಡು ಗರಿಗಳನ್ನಾಗಿ ಮಾಡುತ್ತಾರೆ. ಅಂಚಿನ ಮುಳ್ಳನ್ನು ಹರಿತವಾದ ಅಂಚಿನ ಕತ್ತಿಯಿಂದ ಸೀಳಿ ತೆಗೆಯುತ್ತಾರೆ. ಮತ್ತೆ ಉದ್ದವಾದ ಓಲೆಯನ್ನು ಸುತ್ತಿ ಸಿಂಬೆಯನ್ನಾಗಿ ಮಾಡುತ್ತಾರೆ. ಇದಕ್ಕೆ ಚಂದ್ರಿಕೆ ಎನ್ನುತ್ತಾರೆ. ನಂತರ ಎರಡೆರಡು ಗರಿಗಳನ್ನು ಅಡ್ಡನೀಟಕ್ಕೆ ಹಾಸುಹೊಕ್ಕಾಗಿ ಜೋಡಿಸಿ ಹೆಣೆದು ಚಾಪೆ ತಯಾರಿಸುತ್ತಾರೆ. ಈ ಚಾಪೆ ಹುಲ್ಲಿನ ಚಾಪೆಗಿಂತ ಹೆಚ್ಚು ಬಾಳ್ವಿಕೆ ಬರುತ್ತದೆ. ಅದರ ಮೇಲೆ ಮಲಗುವ  ವ್ಯಕ್ತಿಗೆ ಹೆಚ್ಚು ತಂಪು ನೀಡುತ್ತದೆ.

ಮುಂಡೇವು ಗರಿಯಿಂದ ಚಾಪೆ ಮಾತ್ರವಲ್ಲದೆ ಸಣ್ಣ ಸಣ್ಣ ಕುಕ್ಕೆಗಳನ್ನು ಕೂಡಾ ತಯಾರಿಸುತ್ತಾರೆ. ಪ್ಲಾಸ್ಟಿಕ್ ಚಾಪೆಗಳು ಬಂದ ಮೇಲೆ  ಈ ಓಲೆಗರಿಯ ಚಾಪೆಗಳಿಗೆ ಬೇಡಿಕೆ ಕಡಿಮೆಯಾಗಿದೆ. ಚಾಪೆಯನ್ನು ಚದರಡಿಗೆ ಇಂತಿಷ್ಟು ಹಣವೆಂದು ಲೆಕ್ಕಹಾಕಿ ಮಾರಾಟ ಮಾಡುತ್ತಿದ್ದರು. ಆದರೆ ಈಗ ಪ್ಲಾಸ್ಟಿಕ್ ಚಾಪೆಗಳು ಅದರ ಅರ್ಧಾಂಶ ಬೆಲೆಗೆ ದೊರೆಯುವಂತಾಗಿದೆ.

ತುಳುನಾಡಿನ ಹಳ್ಳಿ ಪ್ರದೇಶಗಳಲ್ಲಿ ಕೃಷಿಕರು, ಕೂಲಿ ಕೆಲಸಗಾರರು ತಮ್ಮ ಕೆಲಸದ ಹೊತ್ತಿನಲ್ಲಿ ಮಳೆ, ಬಿಸಿಲಿನಿಂದ ರಕ್ಷಣೆಗಾಗಿ ತಲೆಯ ಮೇಳೆ ಹೊತ್ತುಕೊಳ್ಳುವ ಹೊರೆಯಿಂದ ತಲೆಗೆ ಪೆಟ್ಟಾಗದಂತೆ ರಕ್ಷಿಸಿಕೊಳ್ಳುವ ಸಲುವಾಗಿ ತಮ್ಮ ತಲೆಗಿಟ್ಟುಕೊಳ್ಳುವ ಕಂಗಿಯ ಹಾಳೆಯಿಂದ ತಯಾರಿಸಿದ ವಿಶೀಷ್ಟ ಶಿರಸ್ತ್ರಾಣವೇ ಮುಟ್ಟಾಳೆ. ಮುಟ್ಟಾಳೆಯೆಂಬ ಪದಕ್ಕೆ ಬಾಗಿದ ಹಾಳೆ ಎಂಬರ್ಥವಿದೆ. ಮುಟ್ಟಾಳೆ ತಯಾರಿಸಲು ಬೇಕಾದ ಅಡಿಕೆಯ ಮರದ ಹಾಳೆ (ಸೋಗೆಯ ಬುಡಭಾಘ) ಯನ್ನು ಬೇಸಗೆಯಲ್ಲಿ ನಲಿಕೆಯ ಗಂಡಸರು ಮತ್ತು ಹೆಂಗಸರು ತೋಟದಿಂದ ಸಂಗ್ರಹಿಸುತ್ತಾರೆ. ಸಂಗ್ರಹಿಸಿದ ಹಾಳೆಯನ್ನು ಬಿಸಿಲಿಗೆ ಒಣಗಿಸಿ ಬೆಚ್ಚನೆಯ ಜಾಗದಲ್ಲಿಟ್ಟುಕೊಂಡು ಮುಟ್ಟಾಳೆ ಕಟ್ಟುವ ಸಂದರ್ಭದಲ್ಲಿ ಬಳಸಿಕೊಳ್ಳುತ್ತಾರೆ. ಅದಕ್ಕೆ ನೀರು ಹನಿಸಿ ಬಾಗಲು ಅನುಕೂಲ ಮಾಡಿಕೊಳ್ಳುತ್ತಾರೆ. ರಾತ್ರಿ ನೀರು ಹನಿಸಿ ಅಂಗಳದಲ್ಲಿಟ್ಟರೆ ಮುಂಜಾನೆಗೆ ಅದು ಮೆತ್ತಗಾಗುತ್ತದೆ. ಹಾಳೆಯ ಹೊರಮೈಯ ದಪ್ಪ ಭಾಘವನ್ನು ಕೆತ್ತಿ ತೆಗೆದು ಹಾಳೆಯನ್ನು ಆಯತಾಕಾರಕ್ಕೆ ಕತ್ತರಿಸಿಕೊಳ್ಳುತ್ತಾರೆ. ಹಾಳೆಯ ಮಧ್ಯಭಾಗವನ್ನು ನೆರಿಗೆ ಹಿಡಿದು ಮಡಚಿ ನಾರಿನಿಂದ ಗಟ್ಟಿಯಾದ ಗಂಟು ಹಾಕುತ್ತಾರೆ. ಹಾಳೆಯ ಎರಡು ಬದಿಗಳನ್ನೂ ಅಗಲಗೊಳಿಸಿ ಒಂದೇ ಬದಿಗೆ ಬಾಘಿಸಿ ಒಂದರ ಮೇಲೊಂದು  ಒಂದು ನಿಲ್ಲುವಂತೆ ಮಾಡಿ ಎರಡೂ ಬದಿಗಳು ಒಟ್ಟು ಸೇರುವ ಜಾಗವನ್ನು ಮತ್ತೊಮ್ಮೆ ನೆರಿಗೆ ಹಿಡಿದು ಕನ್ನಿಯಿಂದ ಹೊಲಿಯುತ್ತಾರೆ. ಎರಡೂ ಬದಿಯೂ ಮುಟ್ಟಾಳೆಯ ಒಳಭಾಗಕ್ಕೆ ಮಡಚಿಕೊಳ್ಳುತ್ತದೆ. ಇದು ಮುಟ್ಟಾಳೆ ಮಾಡುವ ವಿಧಾನ.

ಮುಟ್ಟಾಳೆಯಲ್ಲಿ ಒಂದು ಕೋಂಟಿನ ಮುಟ್ಟಾಳೆ, ಎರಡು ಕೋಂಟಿನ ಮುಟ್ಟಾಳೆ ಎಂದು ಎರಡು ವಿಧಗಳಿವೆ. ಹಾಳೆಯ ಎರಡು ತುದಿಗಳನ್ನು ಎದುರಿಗೆ ತಂದು ಒಂದು ಮೇಲೊಂದು ಇಟ್ಟು ಕಟ್ಟಿದ ಭಾಗಕ್ಕೆ ಕೋಂಟು  ಎಂದು ಹೆಸರು. ಒಂದು ಕೋಂಟಿನ ಮುಟ್ಟಾಳೆಗಿಂತ ಎರಡು ಕೋಂಟಿನ ಮುಟ್ಟಾಳೆಯ ರಚನೆ ಕಷ್ಟ. ಹಿಂದಿನ ಕಾಲದಲ್ಲಿ ಮೇಳ್ವರ್ಗದವರು ಒಂದು ಕೋಂಟಿನ ಮುಟ್ಟಾಳೆಯನ್ನು ಕೆಳವರ್ಗದವರೂ ಎರು ಕೋಂಟಿನ ಮುಟ್ಟಾಳೆಯನ್ನು ಇಟ್ಟುಕೊಳ್ಳುತ್ತಿದ್ದರು. ಕರಾವಳಿಯ ಮೀನುಗಾರ ಮಹಿಳೆಯರು ಅತ್ಯಂತ ಚಿಕ್ಕ ಮುಟ್ಟಾಳೆಯನ್ನು ಧರಿಸುತ್ತಾರೆ. ಇದನ್ನು ಪಾಳೆ ಎನ್ನುತ್ತಾರೆ. ಮುಟ್ಟಾಳೆ ಕಟ್ಟುವ ನಲಿಕೆ ಗಂಡಸರು ತಲೆಗೆ ದೊಡ್ಡ ಮುಟ್ಟಾಳೆಯನ್ನು ಧರಿಸಿರುತ್ತಾರೆ.  ಇದನ್ನವರು ಗೋಂಪರು, ಚಿಲ್ಲಿ ಇತ್ಯಾದಿ ಹೆಸರುಗಳಿಂದ ಕರೆಯುತ್ತಾರೆ. ಕೇವಲ ತಲೆಯ ರಕ್ಷಣೆಗಾಗಿ ಮಾತ್ರವಲ್ಲ. ಗೋಂಪರನ್ನು ಗಂಜಿ ಊಟದ ಬಟ್ಟಲಾಗಿ, ನೀರು ಕುಡಿಯುವ ಪತ್ರೆಯಾಗಿಯೂ ಉಪಯೋಗಿಸುತ್ತಾರೆ.

ಮುಟ್ಟಾಳೆಯನ್ನು ಹೊಲಿಯಲು ಉಪಯೋಗಿಸುವ ಅಥವಾ ಕಟ್ಟು ಹಾಕಲು ಬಳಸುವ ಸಪೂರವಾದ ಮತ್ತು ಗಟ್ಟಿಯಾದ ನಾರನ್ನು ಕನ್ನ ಎನ್ನುತ್ತಾರೆ. ಬೈನೆ ಮರದ ಸೋಗೆಯ ಎರಡೂ ಪಕ್ಕಗಳಲ್ಲಿ ನಾರುಗಳಿರುತ್ತವೆ. ಕನ್ನಿಯಿಂದ ಮುಟ್ಟಾಳೆಯ  ಎದುರು ಭಾಗಕ್ಕೆ ಅರ್ಧ ಚಂದ್ರಾಕೃತಿಯ ಹೊಲಿಗೆಯ ಸುಂದರ ಚಿತ್ರ ಬಿಡಿಸಿರುತ್ತಾರೆ. ಹಾಳೆಗಳನ್ನು ಜೋಡಿಸಿ ಗಂಟು ಹಾಕಲು ಕತ್ತಾಳೆ ನಾರನ್ನು ಬಳಸುತ್ತಾರೆ. ಮುಟ್ಟಾಳೆ ಕಟ್ಟಲು ಬೇಕಾದ ಹಾಳೆ ಮತ್ತಿತರ ಸಾಮಗ್ರಿಗಳ ಸಂಗ್ರಹ ತುಂಬಾ ಶ್ರಮದಾಯಕವಾದುದು. ಕರಾವಳಿ ಪ್ರದೇಶದಲ್ಲಿ ಅಡಿಕೆ ಬೆಳೆಯೇ ಪ್ರಧಾನವಾಗಿದ್ದರೂ, ಸಾಕಷ್ಟು ಅಡಿಕೆ ಮರದ ತೋಟಗಳಿದ್ದರೂ ತೋಟದ ಒಡೆತನ ನಲಿಕೆಯವರಲ್ಲಿರುವುದಿಲ್ಲ. ಆದುದರಿಂದ ಇವರು ಹಾಳೆಗಾಗಿ ತೋಟದ ಮಾಲಿಕರನ್ನು  ಬೇಡಬೇಕಾಗುತ್ತದೆ. ಇತ್ತೀಚೆಗೆ ಯಂತ್ರಗಳನ್ನು ಬಳಸಿ ಅಡಿಕೆ ಹಾಳೆಗಳಿಂದ ತಾತ್ಕಾಳಿಕ ಬಟ್ಟಲು, ಪಾತ್ರೆಗಳನ್ನು  ತಯಾರು ಮಾಡಲಾಗುತ್ತಿದೆ. ಹೀಗಾಗಿ ಮುಟ್ಟಾಳೆಯ ಹಾಳೆಗಾಗಿ ನಲಿಕೆಯವರು ಪರದಾಟ ಮಾಡಬೇಕಾದ ಪ್ರಸಂಗ ಬಂದಿದೆ.

ಮುಟ್ಟಾಳೆಗಾಗಿ ಬಳಸುವ ಹಾಳೆಯನ್ನೇ ನಲಿಕೆಯವರು ಭೂತಕ್ಕೆ ಕಟ್ಟುವ ಅಣಿ, ಪ್ರಭಾವಳಿ ಮುಂತಾದ ಅಲಂಕಾರ ಸಾಧನಗಳಿಗೂ ಬಳಸುತ್ತಾರೆ. ಭೂತದ ಶಿರೋಭೂಷಣಗಳನ್ನು ಜನಪದ ಕುಣೀತಗಳಿಗೆ ಬೇಕಾದ ಮುಖವಾಡಗಳನ್ನು ಕೂಡಾ ತಯಾರಿಸುತ್ತಾರೆ. ಮುಟ್ಟಾಳೆಯ ತಯಾರಿಯಲ್ಲಿ ಕಂಡು ಬರುವ ಸೊಗಸುಗಾರಿಕೆ, ಕಲಾವಂತಿಕೆ ಇವು ಮೂಲತಃ ನಲಿಕೆಯವರ ಸೃಜನಶೀಲ ಪ್ರವೃತ್ತಿಗೆ ಸಂಬಂಧಪಟ್ಟದ್ದಾಗಿವೆ. ಮುಟ್ಟಾಳೆ ತಯಾರಿಗೆ ಬೇಕಾದ ಕಚ್ಚಾವಸ್ತುಗಳ ಸಂಗ್ರಹಕಾರ್ಯ ಮತ್ತು ಕಟ್ಟುವ ಕೆಲಸ ಅತ್ಯಂತ ಶ್ರಮದಾಯಕವಾದುದರಿಂದ ಈ ಕೆಲಸವನ್ನು ಗಂಡಸರು ಹೆಂಗಸರು ಸೇರಿ ಮಾಡುತ್ತಾರೆ.

ಚಾಪೆ ಹೆಣೆಯುವ ಕೆಲಸ ಕೂಡಾ ಕಲಾತ್ಮಕವಾದ ಕೆಲಸವಾಗಿದೆ. ಗರಿಯ ಸಂಗ್ರಹ, ಅವುಗಳನ್ನು ಹದಗೊಳಿಸುವುದು, ನಾಜೂಕಾಗಿ ಜೋಡಿಸಿ ಮಾಡುವ ಹೆಣಿಗೆಯ ಕೆಲಸ, ಮೇಲ್ನೋಟಕ್ಕೆ ಇವೆಲ್ಲ ಸರಳವೆಂದು ಕಂಡುಬಂದರು ಶ್ರಮದಾಯಕ ಹಾಗೂ ಕಲಾತ್ಮಕವಾದ ಕೆಲಸಗಳಾಗಿವೆ. ನಲಿಕೆ ಮಹಿಳೆಯರ ಕೌಶಲ್ಯ ಹಾಗೂ ಸೃಜನಶೀಲತೆ ಅವರ ಕಲಾತ್ಮಕವಾದ ಪರಿಕರಗಳ ರಚನೆಯಲ್ಲಿ ವ್ಯಕ್ತವಾಗುತ್ತದೆ. ಮರೆಯಲ್ಲಿ ಅವಿತುಹೋದ ಅವರ ಜ್ಞಾನ, ಅವಗಣನೆಗೆ ಒಳಗಾಗಿದೆ.

ಹಬ್ಬಗಳು

ಆಟಿ (ಆಷಾಢ) ತಿಂಗಳ ಅಮವಾಸ್ಯೆಯಿಂದ ತೊಡಗಿ ಪತ್ತನಾಜೆ (ಬೇಶ ತಿಂಗಳಹತ್ತನೇ ದಿನ ಸಾಮಾಣ್ಯ ಮೇ ೨೫) ಯವರೆಗೆ ತುಳುನಾಡಿನಲ್ಲಿ ಹಬ್ಬಗಳು ನಡೆಯುತ್ತಲೇ ಇರುತ್ತವೆ. ಈ ಹಬ್ಬಗಳಿಗೆಲ್ಲ ತುಳುವರು ವಿಶೇಷ ತಿಂಡಿ-ತಿನಿಸುಗಳನ್ನು ತಯಾರಿಸುತ್ತಾರೆ. ಅಷ್ಟಮಿಗೆ ಕೊಟ್ಟಿಗೆ, ಚೌತಿಗೆ ಉಂಡ್ಲುಕ, ಮೋದಕ, ದೀಪಾವಳಿಗೆ ಉದ್ದು ಬೆರೆಸಿ ಅರೆದು ಮಾಡಿದ ಅಕ್ಕಿ ತಿನಿಸಸುಗಳು, ಕಾವೇರಿ ಸಂಕ್ರಾಮತಿಗೆ ದೋಸೆ, ಕೆಡ್ಡಸಕ್ಕೆ ಅಕ್ಕಿ ಮತ್ತಿತರ ಧಾನ್ಯಗಳನ್ನು ಹುರಿದು ತೆಂಗಿನಕಾಯಿ ಬೆಲ್ಲ ಸೇರಿಸಿ ಮಾಡಿದ ತಿಂಡಿ ನನ್ನೇರಿ, ಬಿಸು (ಸೌರಮಾನ ಯುಗಾದಿ) ವಿಗೆ ತೆಲ್ಲವು (ಅಕ್ಕಿಯ ನೀರು ದೋಸೆ) ಮತ್ತು ಪಾಯಸ, ಪತ್ತನಾಜೆಗೆ ಹಲಸಿನ ಸೋಳೆಯನ್ನು ಅಕ್ಕಿಯೊಂದಿಗೆ ಬೇಯಿಸಿ ತಯಾರಿಸಿದ ತಿಂಡಿ ಹಲಸಿನ ಗಟ್ಟಿ – ಇವೆಲ್ಲ ಹಬ್ಬಗಳ ವಿಶೇಷ ತಿಂಡಿಗಳು.

ಪಾಣಾರ – ನಲಿಕೆಯವರು ತಮ್ಮ ಮನೆಗಳಲ್ಲಿ ಹಬ್ಬಗಳ ಆಚರಣೆ ಮಾಡುವುದು ಕಡಿಮೆ. ಆರ್ಥಿಕವಾಗಿ ಸ್ಥಿತಿವಂತರು ಮಾತ್ರ ಆಚರಣೆ ಮಾಡುತ್ತಿದ್ದರು. ಉಳಿದವರು ಊರಿನ ಮನೆಗಳಿಗೆ ಹಬ್ಬದ ದಿನ ಸಂಜೆಗೆ ಅಥವಾ ಮರುದಿನ ಹೋಗಿ ವಿಶೇಷ ತಿಂಡಿಗಳನ್ನು ಪಡೆಯುತ್ತಿದ್ದರು. ಹೀಗೆ ಅನ್ನ – ತಿಂಡಿಗಳನ್ನು ಹಬ್ಬದ ಸಂದರ್ಭದಲ್ಲಿ ನಲಿಕೆಯವರಿಗೆ ದಾನ ಮಾಡುವುದರಿಂದ ತಮಗೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಹಳ್ಳಿಯ ಇತರ ಜನರಲ್ಲಿತ್ತು. ತಿಂಡಿಯ ಜೊತೆಗೆ ತೆಂಗಿನಕಾಯಿ, ಸೌತೆಕಾಯಿ, ಹಲಸಿನ ಬೀಜ, ಅಡಿಕೆ, ವೀಳ್ಯ, ವಸ್ತ್ರ,  ಎಣ್ಣೆ ಇತ್ಯಾದಿಗಳನ್ನು ಕೂಡಾ ದಾನವಾಗಿ ನಲಿಕೆಯವರು ಪಡೆಯುತ್ತಿದ್ದರು. ವಿಶೇಷವಾಗಿ ದೀಪಾವಳಿ, ಕಾವೇರಿ ಸಂಕ್ರಮಣ ಮತ್ತು ಬಿಸು ಹಬ್ಬಗಳಲ್ಲಿ ಈ ರೀತಿ ದಾನಗಳು ನಡೆಯುತ್ತವೆ.

ತುಳುವರು ಮಾತ್ರ ವಿಶೇಷವಾಗಿ ಆಚರಿಸುವ ಹಬ್ಬ ಕೆಡ್ಡಸ. ಈ ಹಬ್ಬವು ತುಳುವರ ಪುಯಿಂತೆಲ್ ತಿಂಗಳ ಇಪ್ಪತ್ತೇಳರಿಂದ ಮೂವತ್ತರವರೆಗೆ ಅಂದರೆ ಸಾಮಾನ್ಯವಾಗಿ ಫೆಬ್ರವರಿ ೧೦ ರಿಂದ ೧೩ರವರೆಗೆ ನಾಲ್ಕು ದಿವಸಗಳ ಕಾಲ ಆಚರಿಸಲ್ಪಡತ್ತದೆ. ಈ ಹಬ್ಬವನ್ನು ಭೂಮಿದೇವಿಯ ಮೀಹದ ಹಬ್ಬವೆಂದೂ ಕರೆಯುತ್ತಾರೆ. ಪೂರ್ವಜರು ಈ ಭೂಮಿಯನ್ನು ಹೆಣ್ಣು ಎಂಬುದಾಗಿ ಬಗೆದರು. ವರ್ಷದ ಒಂದು ಕಾಲಘಟ್ಟದಲ್ಲಿ ಪ್ರಕೃತಿಯಲ್ಲಿರುವ ಮರ-ಗಿಡಗಳೆಲ್ಲ ಉದುರಿ ಬೋಳಾಗಿ ಕಾಣಿಸಿಕೊಳ್ಳುವುದರಿಂದ ಅದು ಭೂಮಿದೇವಿಯ ಮುಟ್ಟಿನ ದಿನಗಳೆಂದು ಕಲ್ಪಿಸಿಕೊಂಡರು. ಕಾರ್ಯಕಾರಣ ಸಂಬಂಧಗಳು ಬೆಳೆದು ಆ ದಿನಗಳು ಪೊನ್ನಿ (ಪುಯಿಂತೆಲ್) ತಿಂಗಳ ೨೭ರಿಂದ ಎಂಬುದಾಗಿ ನಿಗದಿಗೊಂಡವು. ಭೂಮಿದೇವಿ ಋತುಮತಿಯಾಗುವುದು ಎಲ್ಲರಿಗೂ ಸಂತಸ. ಏಕೆಂದರೆ ಆಗೆ ಗರ್ಭ ಧರಿಸುತ್ತಾಳೆ. ಮರುಸೃಷ್ಟಿಯಾಗುತ್ತದೆ. ಮಾಗಿಯ ಕಾಲದಲ್ಲಿ ಎಲೆ ಉದುರಿಸಿಕೊಂಡು ಬೋಳಾದ ಸಸ್ಯ ಸಂಕುಲ ವಸಂತ ಋತುವಿನಲ್ಲಿ ಚಿಗುರಿಕೊಂಡಾಗ ಪ್ರಾಚೀನ ಮಾನವರು ಊಹಿಸಿಕೊಂಡ ಬಗೆ ನಿಜವಾಗಿಯೂ ವಿಚಿತ್ರವಾಗಿದೆ.

ಕೆಡ್ಡಸ ಹಬ್ಬದ ಆಚರಣೆಯಲ್ಲಿ ಎಲ್ಲ ಎಲ್ಲ ಮಹಿಳೆಯರಂತೆ ನಲಿಕೆ ಮಹಿಳೆಯರೂ ಪ್ರಮುಖ ಸ್ಥಾನ ಪಡೆಯುತ್ತಾರೆ. ಪುರುಷ-ಸ್ತ್ರೀಯರ ಮಧ್ಯೆ ಕೆಲಸಗಳ ಬದಲಾವಣೆ ಈ ಹಬ್ಬದ ವಿಶೇಷತೆ. ಬೇಟೆಯು ಕೆಡ್ಡಸ ಹಬ್ಬದ ಒಂದು ಭಾಗ. ಕೆಡ್ಡಸದ ದಿನ ಸ್ತ್ರೀಯರು ಕತ್ತಿ, ದೊಣ್ಣೆ, ಸೌಟು ಹಿಡಿದು ಬೇಟೆಗೆ ಹೋಗಬೇಕು. ಗಂಡಸರು ಮನೆಯಲ್ಲಿ ಕುಳೀತು ಅಕ್ಕಿ ರುಬ್ಬಿ ದೋಸೆ ಹೊಯ್ಯಬೇಕು.

ಕೆಡ್ಡಸ ಬರುವ ಒಂದು ವಾರಕ್ಕಿಂತ ಪೂರ್ವದಲ್ಲೇ ನಲಿಕೆಯ ಗಂಡಸರು ಬಣ್ಣ ಹಾಕಿಕೊಂಡು ತೆಂಬರೆ ಬಡಿಯುತ್ತಾ ಊರಲ್ಲಿ ಡಂಗುರ ಸಾರುತ್ತಾರೆ. ಅವರ ಜೊತೆಗೆ ಜೋಳಿಗೆ ಹಿಡಿದುಕೊಂಡು ಹೆಂಗಸರು ಹೋಗುತ್ತಾರೆ. ಅವರ ಹೇಳಿಕೆ ಈ ರೀತಿ ಇರುತ್ತದೆ : “ಸೋಮವಾರ ಕೆಡ್ಡಸ, ಮುಟ್ಟುನೆ ಅಂಗಾರ ನಡು ಕೆಡ್ಡಸ ಬುಧವಾರ ಬಿರಿಪುನೆ ಪಜಿ ಕಡ್ಪರೆ ಬಲ್ಲಿ ಉನುಂಗೆಲ್ ಪೊಲಿಪ್ಯರೆ ಬಲ್ಲಿ, ಅರಸುಲೆ ಬೋಟೆಂಗ್ ಸರ್ವೆರ್ ಉಲ್ಲಾಯನಕುಲು ಪೋವೋಡಗೆ. ವಲಸಾರಿ ಮಜಲ್‌ಡ್ ಕೂಡ್ದು ವಲಸರಿ ದೇರ‍್ದ್ ಪಾಲೆಜ್ಜಾರ್ ಜಪ್ಪುನಗ ಉಳ್ಳಾಲ್ದಿನಕ್‌ಲ್ ಕಡಿಪಿ ಕಲ್ಲ್ ಕಂಜಿನ್ ನೀರ‍್ಡ್ದ್ ಪಾಡೋದು. ಓಡುದು ಕಡೆವೊಡು, ಕಲ್ಲ್ ಡ್ ರೊಟ್ಟಿ ಪತ್ತವೊಡು. ಮಲ್ಲ ಮಲ್ಲ ಪುರ್ಗೊಲು ಜತ್ತ್‌ದ್ ಬರ್ಪ. ಕಟ್ಟ ಇಜ್ಜಾಂದಿ ಬೆಡಿ ಕದಿ ಕಟ್ಟಂದಿನ ಪಗರಿ, ಕೈಲ ಕಡೆಲ ಪತ್ತ್‌ದ್ ಉಜ್ಜೆರ್‌ಗೊಂಜಿ ಎರ್ಪು ಏರ್ಪಾದ್ ಇಲ್ಲ ಮುತ್ತೇನಿಲೆಡ್ ಉಂತೊಂದು ಮುರ್ಗೊಲೆಗ್ ತಾಂಟಾವೊಡು. ಮಲ್ಲ ಮಲ್ಲ ಮುರ್ಗೊಲೆನ್ ಜಯಿಪೊಡು. ಎಂಕ್ ಅಯಿತ ಕೆಬಿ, ಕಾರ್, ಕೈ, ಉಪ್ಪು, ಮುಂಚಿ, ಪುಳಿ ಕೊರೊಡು”. (ಸೋಮವಾರ ಕೆಡ್ಡಸ ಪ್ರಾರಂಭವಾಗುವುದು. ಮಂಗಳವಾರ ನಡು ಕೆಡ್ಡಸ. ಬುಧವಾರ ಮುಕ್ತಾಯ. ಹಸಿ ಕಡಿಯಬಾರದು. ಒಣಗಲು ಮುರಿಯಬಾರದು. ಅರಸುಗಳ ಬೇಟಗೆ ಎಲ್ಲಾ ಒಡೆಯರು ಹೋಗಬೇಕಂತೆ. ವಲಸರಿ ಮಜಲಿನಲ್ಲಿ ಕೂಡಿ ಓಡಾಡಿ ಬೆನ್ನಟ್ಟಿ ಪಾಲೆಚಾರಿನಲ್ಲಿ ಇಳಿಯುವಾಗ ಒಡತಿಯರು ಕಡೆಯುವ ಕಲ್ಲಿನ ಗುಂಡುಕಲ್ಲನ್ನು ನೀರಲ್ಲಿ ಹಾಕಬೇಕು. ಮಡಿಕೆ ತುಂಡಿನಲ್ಲಿ ಅರೆಯಬೇಕು. ಕಲ್ಲಿನಲ್ಲಿ ರೊಟ್ಟಿ ಹಚ್ಚಬೇಕು. ದೊಡ್ಡ ದೊಡ್ಡ ಮೃಗಗಳು ಇಳಿದುಕೊಂಡು ಬರುತ್ತವೆ. ಬಣ್ಣ ಬಣ್ಣದ ಕಾಡಡುಕೋಳಿ, ಬಿರುರೋಮದ ಹಂದಿ, ನಾಲ್ಕು ಕಾಳಿನ ಕಡವೆ, ಚುಕ್ಕೆಯ ಜಿಂಕೆಗಳು ಇಳಿದುಕೊಂಡು ಬರುತ್ತವೆ.ಕೆಟ್ಟು ಇಲ್ಲದ ಕೋವಿ, ಗರಿ ಇಲ್ಲದ ಬಾಣ, ಸೌಟಿನ ಹಿಡಿ, ಒನಕೆಯನ್ನು ಮೇಳಕ್ಕೆತ್ತಿ ಮನೆಯ ಹಿಂಬದಿ ನಿಲ್ಲಬೇಕು. ಮೃಗಗಳಿಗೆ ತಾಗಿಸಬೇಕು. ದೊಡ್ಡ ದೊಡ್ಡ ಮೃಗಗಳನ್ನು ಗೆಲ್ಲಬೇಕು. ಅದರ ಕೈ, ಕಾಳು, ಕಿವಿ ಮತ್ತು ಉಪ್ಪು, ಮೆಣಸು, ಹುಳಿ ನನಗೆ ಕೊಡಬೇಕು).

ಈ ಡಂಗುರ ಸಾರುವಿಕೆಯಲ್ಲಿ ಸ್ವಲ್ಪ ವ್ಯಂಗ್ಯವಿದೆ. ಹೆ<ಗಸರು ಬೇಟೆಯಾಡಲು ಹೋಗುವುದೇಕೆಂದರೆ ಆ ದಿನಗಳಲ್ಲಿ ಮೃಗಗಳು ಕಾಳು ಬಾಯಿ ಬೇನೆಯಿಂದ ಬಳಲುತ್ತಿರುತ್ತವೆ. ನಡೆಯಲಾರದ ಸ್ಥಿತಿಯಲ್ಲಿರುತ್ತವೆ. ಆಗ ಅವುಗಳನ್ನು ಹೆಂಗಸರು ಕೂಡಾ ಒನಕೆಯಿಂದ ಹೊಡೆದುಕೊಳ್ಳಬಹುದು ಎಂಬುದು ಇದರ ತಾತ್ಪರ್ಯ. ಗಂಡಸರು ಮಾಡುವ ಸಾಹಸದ ಕೆಲಸಕ್ಕೆ ಹೆಂಗಸರು ಹೊರಟಾಗ ಅದು ಅವರಿಂದ ಸಾಧ್ಯವಾಗದ ಕೆಲಸವೆಂದು ತಾತ್ಸಾರ ಮಾಡುವುದು ಅಪಹಾಸ್ಯ ಮಾಡುವುದು ಸಾಮಾನ್ಯ.

ಕೆಡ್ಡಸದ ತಿಂಡಿ ನನ್ಯೆರಿ. ಒಂದಿಷ್ಟು ಉಪ್ಪು ನೀರು ಬೆರೆಸಿ ಹುರಿದ ಅಕ್ಕಿಯ ಜೊತೆ ಇನ್ನಿತರ ಹುರಿದ ಧಾನ್ಯಗಳನ್ನು ಬೆರೆಸಿ ಬೀಸುಕಲ್ಲಿನಲ್ಲಿ ಬೀಸಿ ತಯಾರಿಸಿದ ಹುಡಿ ನನ್ಯೆರಿ. ಇದನ್ನು ಕುಡುವರಿ (ಕುಡು=ಹುರುಳಿ, ಅರಿ=ಅಕ್ಕಿ) ಎನ್ನುತ್ತಾರೆ. ಹೀಗೆ ತಯಾರಿಸಿದ ಧಾನ್ಯಗಳ  ಹುಡಿಗೆ ಬೆಲ್ಲ ಬೆರೆಸುತ್ತಾರೆ. ಕೊಬ್ಬರಿ ಚೂರು ಮಾಡಿ ಹಾಕುತ್ತಾರೆ. ನನ್ಯೆರಿಗೆ ಹೊದ್ಲು ಇಲ್ಲವೇ ಹುರಿಯಕ್ಕಿ ಬೆರೆಸುತ್ತಾರೆ. ಬಾಳೆಹಣ್ಣಿನೊಂದಿಗೆ ನೆಂಚಿ ತಿನ್ನಲು ನನ್ಯೆರಿ ರುಚಿಯಾಗಿರುತ್ತದೆ. ಪಾಣಾರ ಮಹಿಳೆಯರು ನನ್ಯೆರಿ ತಯಾರಿಸಲು ಬಲ್ಲವರು. ಆದರೆ ಈ ಕೆಲಸವನ್ನು ನಲಿಕೆ ಮಹಿಳೆಯರು ಮಾಡುವುದಿಲ್ಲ. ಕೆಡ್ಡಸ ಬರುವುದಕ್ಕಿಂತ ಒಂದು ವಾರದ ಮೊದಲು ನಲಿಕೆಯ ಗಂಡಸರು ಡಂಗುರ ಸಾರುತ್ತಾ ಊರಲೆಲ್ಲಾ ತಿರುಗಾಡಿ ಸಿದ್ಧತೆಗಾಗಿ ಕರೆ ನೀಡಿದರೆ, ಕೆಡ್ಡಸದ ಮೂರನೆಯ ದಿನ ನನ್ಯೆರಿ ಸಂಗ್ರಹಕ್ಕಾಗಿ ನಲಿಕೆ ಮಹಿಳೆಯರು ಮನೆ ಮನೆಗೆ ಹೋಗುತ್ತಾರೆ. ಸಿಕ್ಕಿದ ಆ ಊರ ವಸ್ತುಗಳನ್ನು ಮನೆಗೆ ತಂದು ಮನೆಯವರೆಲ್ಲ ಹಂಚಿ ತಿನ್ನುತ್ತಾರೆ. ಹೀಗೆ ಈ ಹಬ್ಬದ ವಿಷಯದಲ್ಲಿ ನಲಿಕೆಯ ಸ್ತ್ರೀ ಪುರುಷರು ಪರಸ್ಪರ ಕಾರ್ಯಸಂಬಂಧವನ್ನು ಇಟ್ಟುಕೊಳ್ಳುತ್ತಾರೆ.

ದೀಪಾವಳಿಯನ್ನು ಕೂಡಾ ಇಲ್ಲಿ ಮೂರು ದಿನಗಳ ಕಾಲ ಆಚರಿಸಲಾಗುತ್ತದೆ. ತುಳುನಾಡಿನ ಹೆಚ್ಚಿನ ಮನೆಗಳಲ್ಲಿ ಪಾಳೆ ಮರದ (ಸಪ್ತಕರ್ಣಿ) ಗೂಡ ನೆಟ್ಟು ಅದನ್ನು ಹೂವಿನಿಂದ ಅಲಂಕರಿಸಿ ಪೂಜೆ ಮಾಡುವ ಪದ್ಧತಿ ಇದೆ. ಇದಕ್ಕೆ ಬಲೀಂದ್ರ ಎನ್ನುತ್ತಾರೆ. ತುಳುನಾಡನ್ನು ಆಳುತ್ತಿದ್ದ ಬಲೀಂದ್ರನನ್ನು ವಾಮನರೂಪಿ ವಿಷ್ಣು ಪಾತಾಳಕ್ಕೆ ತಳ್ಳಿದ. ದೀಪಾವಳಿ ಪಾಡ್ಯದಂದು ಬಲಿಯೇಂದ್ರ ತನ್ನ ರಾಜ್ಯದ ಪ್ರಜೆಗಳನ್ನು ನೋಡಲು ಬರುತ್ತಾನೆಂದು ನಂಬಿಕೆ. ಬಲೀಂದ್ರ ಪೂಜೆಯನ್ನು ನಲಿಕೆಯವರು ಮಾಡದೇ ಇದ್ದರೂ ಪ್ರಸಾದ ರೂಪದಲ್ಲಿ ಅಕ್ಕಿಯ ತಿಂಡಿಯನ್ನು ಮರುದಿನ ಮನೆಯವರಿಂದ ಪಡೆಯುತ್ತಾರೆ. ದೀಪಾವಳಿಯ ದಿನಗಳಲ್ಲಿ ಮಹಿಳೆಯರು ಮನೆ ಮನೆಗೆ ಹೋಗಿ ಮಾದಿರ ಕುಣಿತ ನಡೆಸಿ ಮನೆಯವರಿಂದ ಅಕ್ಕಿ, ಭತ್ತ ಪಡೆಯುತ್ತಾರೆ. ಕಾರ್ಕಳದ ಕಡೆ ಪಾಣಾರರು ದೀಪಾವಳಿಯ ಸಂದರ್ಭದಲ್ಲಿ ಮಾಂಕಾಳಿ ಕುಣಿತ ನಡೆಸುತ್ತಾರೆ.  ಇದೊಂದು ಮುಖವಾಡ ಧರಿಸಿ ಕುಣಿಯುವ ಕುಣಿತ. “ಬಲಿ ಬಲ ಮಾಂಕಾಳಿ, ಬಲಿ ಬಲಾ” ಎಂಬ ಹಾಡಿನೊಂದಿಗೆ ಈ ಕುಣಿತ ನಡೆಯುತ್ತದೆ.

ಕಾವೇರಿ ಸಂಕ್ರಾಂತಿಯು ಕೂಡಾ  ತುಳುವರಿಗೊಂದು ಹಬ್ಬ. ಈ ಹಬ್ಬದ ದಿನ ತಲಕಾವೇರಿಯಲ್ಲಿ ತೀರ್ಥೋದ್ಭವವಾಗುತ್ತದೆ. ತುಳುನಾಡಿನವರು ಹೆಚ್ಚಿನವರು  ಹಿಂದೆ ತಲಕಾವೇರಿ ಜಾತ್ರೆಗೆ ಹೋಗುತ್ತಿದ್ದರು. ಹೋಗುವಾಗ ಮನೆಯೊಳಗಿರುವ ಭತ್ತದ ರಾಶಿಗೆ ಇಲ್ಲವೆ ಕಣಜಕ್ಕೆ ಉರಗನಿಂದ ರಕ್ಷಣೆ ಪಡೆಯಲೆಂದು ಕಲ್ಲು (ಬೆನಚು ಕಲ್ಲು), ಮುಳ್ಳು (ಚೂರಿಮುಳ್ಳು, ಒಂದು ಜಾತಿಯ ಮುಳ್ಳಿನ ಪೊದರು ಗಿಡ) ಇಟ್ಟು ಹೋಗುತ್ತಿದ್ದರು.  ಕಾವೇರಿ ಸಂಕ್ರಮಣದ ದಿನ ಉದ್ದು ಹಾಕಿ ರುಬ್ಬಿದ ದೋಸೆ ಮಾಡುವುದು ಪದ್ಧತಿ. ನಲಿಕೆ ಮಹಿಳೆರು ಸಂಕ್ರಾಂತಿಯ ಮರುದಿನ ಮನೆ ಮನೆಗೆ ಹೋಗಿ ದೋಸೆ ಪಡೆಯುವುದು ಪದ್ಧತಿ.  ಕಾವೇರಿ ಸಂಕ್ರಾಂತಿಗೆ ನಲಿಕೆಯವರು ಕಾವೇರಿ ಪುರುಸೆ ಎಂಬ ಕುಣಿತವನನ್ನು ಕೂಡಾ ನಡೆಸುತ್ತಾರೆ.

ಬಿಸು ಅಥವಾ ವಿಷು ಎಂದರೆ ಸೌರಾನ ಯುಗಾದಿ. ಸಾಮಾನ್ಯ ಏಪ್ರಿಲ್ ತಿಂಗಳ ೧೪ ರಂದು ಬಿಸು ನಡೆಯುತ್ತದೆ. ಆ ದಿನ ಪಾಣಾ ಮಹಿಳೆಯರು ತಮ್ಮ ಒಡೆಯರ ಮನೆಗೆ ತೆರಳುತ್ತಾರೆ. ಧನಿಗಳ ಮನೆಗೆ ಹೋಗುವಾಗ ಬರಿಗೈಯಲ್ಲಿ  ಹೋಗುವದಿಲ್ಲ. ಹೆಚ್ಚಾಗಿ ಅವರು ತಾವು ಹೆಣೆದ ಚಾಪೆಯನ್ನು ಹಿಡಿದುಕೊಂಡು ಹೋಗುತ್ತಾರೆ. ಒಡೆಯರಿಗೆ ಅದನ್ನೊಪ್ಪಿಸಿ, ಅಡ್ಡಬಿದ್ದು, ಆಶೀರ್ವಾದ ಪಡೆಯುತ್ತಾರೆ. ಧನಿಗಳ ಮನೆಯಿಂದ ಅವರಿಗೆ ಸೀರೆ ನೀಡುವ ಪದ್ಧತಿ. ಭೂತ ನರ್ತಕರಿಗೂ ಆ ದಿನ ಉಡುಗೊರೆ ನೀಡುತ್ತಾರೆ. ಆ ದಿನ ಬೇಸಾಯದ ಪ್ರಾರಂಭದ ದಿನ. ಸಾಂಕೇತಿಕವಾಗಿ ಗದ್ದೆ ಉತ್ತು ಬೀಜ ಬಿತ್ತಲಾಗುತ್ತದೆ. ಮಧ್ಯಾಹ್ನ ಪಾಯಸದೂಟ. ಹೆಚ್ಚಾಗಿ ಧನಿಗಳ ಮನೆಯಲ್ಲೇ ನಡೆಯುತ್ತದೆ. ಸಂಜೆಗೆ ಪುರುಷರು ತೆಂಗಿನಕಾಯಿ ಕುಟ್ಟುವುದು, ಕೋಳಿ ಅಂಕ ಮುಂತಾದ ಕ್ರೀಡೆಗಳಲ್ಲಿ ಭಾಗವಹಿಸುತ್ತಾರೆ.

ಪತ್ತನಾಜೆ ಬೇಸಿಗೆಯ ಕೊನೆಯ ದಿನ. ಆ ದಿನ ನಾಡಿನ ಎಲ್ಲಾ ಕೃಷಿಕರು ಮಳೆಗಾಲಕ್ಕೆ ಬೇಕಾದ ಆಹಾರಧಾನ್ಯ ಕಟ್ಟಿಗೆ ಇತ್ಯಾದಿಗಳನ್ನು ಜೋಪಾನಗೊಳಿಸುವುದು ರೂಢಿ. ಮುಂದೆ ಮಳೆಗಾಲ ಪ್ರಾರಂಭವಾಗುತ್ತದೆ. ಮಳೆಗಾಲದಲ್ಲಿ ಭೂತಗಳಿಗೆ ನೇಮ ಕೋಲಗಳು ನಡೆಯುವುದಿಲ್ಲ. ನಲಿಕೆಯವರಿಗೆ ಯಾವುದೇ ರೀತಿಯ ಸಂಪಾದನೆಯಿಲ್ಲ.  ಮಳೆಯ ಕಾರಣದಿಂದ ಚಾಪೆ ಹೆಣೆಯುವ, ಮುಟ್ಟಾಳೆ ಕಟ್ಟುವ ಕೆಲಸವನ್ನು ಕೂಡಾ ಮಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಸಾಧ್ಯವಾದಷ್ಟು ಮಟ್ಟಿಗೆ ಮಳೆಗಾಲದ ಖರ್ಚಿಗಾಗಿ ಆಹಾರಧಾನ್ಯ ಸಂಗ್ರಹಿಸಿಟ್ಟುಕೊಳ್ಳುವುದು ಅವಶ್ಯ. ಆದರೆ ಈ ರೀತಿಯ ಸಂಗ್ರಹಕ್ಕೆ ಅವರಲ್ಲಿ  ಸಾಕಷ್ಟು ಹಣವಿರುವುದಿಲ್ಲ. ಆದರೂ ಇದ್ದ ಹಣದಲ್ಲಿ ಅಕ್ಕಿ, ಧಾನ್ಯಗಳನ್ನು ತೆಗೆದಿಡುತ್ತಾರೆ. ಹಲಸಿನ ಬೀಜವನ್ನು ಬೇಯಿಸಿ ಒಣಗಿಸಿ ಶೇಖರಿಸಿಡುತ್ತಾರೆ. ಇದನ್ನು ಸಾಂತಣಿ ಎನ್ನುತ್ತಾರೆ. ಕೆಲವೊಮ್ಮೆ ಅಕ್ಕಿ ಧಾನ್ಯಗಳು  ಮುಗಿದಾಗ ಹಲಸಿನ ಹಣ್ಣು, ಹಲಸಿನ ಬೀಜಗಳನ್ನೇ ಬೇಯಿಸಿ ದಿನವೀಡಿ ತಿಂದು ಬದುಕಬೇಕಾಗುತ್ತದೆ.  ಹೀಗಾಗಿ ನಲಿಕೆಯವರಿಗೆ ಮಳೆಗಾಲವು ಅತ್ಯಂತ ಕಷ್ಟಕರವಾದ ದಿನಗಳು, ಅತ್ಯಂತ ಬಡತನದ ಮತ್ತು ದುಃಖದಾಯಕ ದಿನಗಳು.

ಮಳೆಗಾಲದ  ಕೊನೆಯ ತಿಂಗಳು ಆಟಿ ಅಥವಾ ಆಷಾಢ. ಈ ತಿಂಗಳು ಬಡತನ. ರೋಗ ಮತ್ತು ಭಯ ಇವು ಮೂರು ಜನರನ್ನು ವಿಶೇಷವಾಗಿ ಬಾಧಿಸುವ ದಿನಗಳು. ಹೆಚ್ಚಿನ ಜನರು ಈ ತಿಂಗಳಲ್ಲಿ ಮಲೇರಿಯಾ ರೋಗ ಮತ್ತು ಇನ್ನಿತರ ಜ್ವರಬಾಧೆಗಳಿಂದ ಪರಿತಪಿಸುತ್ತಾರೆ.  ನಲಿಕೆಯವರು ವೈದ್ಯವೃತ್ತಿಯನ್ನು ಕೂಡಾ ನಡೆಸುವುದರಿಂದ ಈ ರೋಗ-ರುಜಿನುಗಳಿಗೆ ಪಾರಾಗಲು ಪಾಳೆ ಮರದ (ಸಪ್ತಪರ್ಣಿ = ಡೆವಿಲ್ ಟ್ರೀ) ತೊಗಟೆ ತೆಗೆದು ಜಜ್ಜಿ ಅದರ ರಸ ಕುಡಿಯಬೇಕೆಂಬ ಮಾರ್ಗೋಪಾಯ ಸೂಚಿಸುತ್ತಾರೆ. ಸಾಮಾನ್ಯವಾಗಿ ತುಳುನಾಡಿನ ಹೆಚ್ಚಿನ ಜನರು  ಈ ವಿಷಯದಲ್ಲಿ ನಂಬಿಕೆಯುಳ್ಳವರಾಗಿದ್ದಾರೆ. ಜನರ ಭಯ ನಿವಾರಣೆ, ಆಟಿ ಕಳೆಂಜ ಕುಣಿತದಿಂದ ಪರಿಹಾರ. ಕೆಂಚಿ ಮೀಸೆ, ಕೇಸರಿ ಗಡ್ಡ, ಡೊಳ್ಳು ಹೊಟ್ಟೆ, ಕೆಂಪುಕಣ್ಣು, ಮಾಡಿಕೊಂಡು ತೆಂಗಿನ ಗರಿ ತಿರಿಗಳನ್ನೆಲ್ಲಾ ಮೈಗೆ ಸುತ್ತಿಕೊಂಡು ಕೈಯಲ್ಲಿ ಪಣೆಛತ್ರಿ ಧರಿಸಿ ದಾಪುಗಾಲಿಟ್ಟು ಕುಣಿಯುವ ಭೀಕರ ರೂಪದ ಕಳೆಂಜ ಭಯಗ್ರಸ್ತರಿಗೆ ಪ್ರತಿಭಯವನ್ನು ಹುಟ್ಟಿಸಿ ಮೊದಲಿಗೆ ಭಯವನ್ನು ಮಾಡಿಸುತ್ತಾನೆ. ಈ ಕಳೆಂಜನ ಜೊತೆಯಲ್ಲಿ ಹಾಡು ಹೇಳುತ್ತಾ ತೆಂಬರೆ ಬಾರಿಸಿಕೊಂಡು ಬರುವವಳು ಹೆಣ್ಣು. ಕುಣಿತದ ಬಳಿಕ ಸಿಕ್ಕಿದ ದವಸ, ಧಾನ್ಯ, ತೆಂಗಿನ ಕಾಯಿ, ಉಪ್ಪು, ಹುಳಿ ಮೆಣಸನ್ನು ಜೋಳಿಗೆಗೆ ತುಂಬಿಸಿಕೊಳ್ಳುವವಳೂ ಪಾಣಾರ ಹೆಣ್ಣು. ಆಹಾರಕ್ಕೆ ತತ್ವರವಾಗುವ ಆ ದಿನಗಳಲ್ಲಿ ಬಡಜನರು ನರೆ, ಈಯೆರ್ ಮುಂತಾದ ಕಾಡುಗಡ್ಡೆಗನ್ನು ಹುಡುಕಿ ಅಗೆದು ಉಪ್ಪು ಹಾಕಿ ಬೇಯಿಸಿ ತಿನ್ನುತ್ತಾರೆ. ಧಾರಾಳವಾಗಿ ಸಿಗುವ ಕೆಸುವಿನ ಎಲೆಯ ಜೊತೆ ಅಕ್ಕಿಹಿಟ್ಟು ಬೆರೆಸಿ ಮಾಡಿದ ಪತ್ರೊಡೆ ತಿನ್ನುತ್ತಾರೆ. ಬಿದಿರ ಮೊಗ್ಗು (ಕನಿಲೆ), ಅಡ್ಕಬಾರೆ (ಒಂದು ಜಾತಿಯ ಕಾಡುಕಾಯಿ), ಎದ್ರೊಳಿ ಕಾಯಿ ಮುಂತಾದವುಗಳಿಂದ ವಿವಿಧ ಖಾದ್ಯಗಳನ್ನು ತಯಾರಿಸಿ ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಾರೆ. ಕಡು ಬಡತನದಲ್ಲಿರುವ ನಲಿಕೆಯವರು ಕೂಡಾ ಇದರಿಂದ ಹೊರತಾಗಿಲ್ಲ. ಮಳೆಗಾಲದ ಆಹಾರ ಸಂಪಾದನೆಯ ಕಾರ್ಯ ನಲಿಕೆ ಮಹಿಳೆಯರಿಂದ ನಡೆಯುತ್ತದೆ. ಗುಡ್ಡ, ಕಾಡುಗಳಿಗೆ ಹೋಗಿ ಪ್ರಕೃತಿಯಲ್ಲಿ ಸಹಜ ಸಸ್ಯವಾಗಿ ಬೆಳೆಯುವ ಗಡ್ಡೆ, ಗೆಣಸು, ಹಣ್ಣು, ಕಾಯಿ, ಸೊಪ್ಪುಗಳನ್ನು ಸಂಗ್ರಹಿಸಿ ತಂದು ಬೇಯಿಸಿಕೊಟ್ಟು ಮನೆಯವರ ಹೊಟ್ಟೆ ತುಂಬಿಸುತ್ತಾರೆ.

ಆಟಿ ತಿಂಗಳಲ್ಲಿ  ನಡೆಯುವ ಇನ್ನೊಂದು ಜನಪದ ಕುಣಿತ “ಮರ್ವೆ”. ಇದು ಹೆಚ್ಚಾಗಿ ಕಾಸರಗೋಡು, ಬೆಳ್ತಂಗಡಿ, ಬಂಟ್ವಾಳ, ಪ್ರದೇಶದಲ್ಲಿ ನಡೆಯುತ್ತದೆ. ಇದರಲ್ಲಿ ನಲಿಕೆ ಗಂಡಸೊಬ್ಬ ಸ್ತ್ರೀವೇಷ ಹಾಕುತ್ತಾನೆ. ನೆರಿ ಹಾಕಿ ಸೀರೆ ಉಡುತ್ತಾನೆ. ಎದೆಗೆ ಮೊಲೆಕಟ್ಟು ಕಟ್ಟಿಕೊಂಡು ರವಿಕೆ ಧರಿಸುತ್ತಾನೆ. ಮೂಗು, ಕಿವಿಗೆ ಆಭರಣ, ಕೈಗೆ ಬಳೆ, ಕುತ್ತಿಗೆಗೆ ಹಾರ ಹಾಕಿಕೊಳ್ಳುತ್ತಾನೆ. ತಲೆಕೂದಲು ನೆಯ್ದು ಜಡೆ ಹಾಕಿಕೊಳ್ಳುತ್ತಾನೆ. ಮುಖಕ್ಕೆ ಅರ್ದಲ ಹಾಕಿ ಹೆಣ್ಣಿನಂತೆ ಮುಖಾಲಂಕಾರ ಮಾಡಿಕೊಳ್ಳುತ್ತಾನೆ.  ತೆಂಗಿನ ಎಳತ್ತು ಗರಿ (ತಿರಿ)ಗಳಿಂದ ಮಾಡಿದ ಅಲಂಕಾರ ಸಾದನಗಳನ್ನು ಬಳಸಿಕೊಳ್ಳುತ್ತಾನೆ. ಸಣ್ಣ ಸಣ್ಣ ಹೆಜ್ಜೆಗಳನ್ನಿಟ್ಟು ಕುಣಿತ ನಡೆಸುತ್ತಾನೆ. ಪಾಣಾರ ಮಹಿಳೆಯೊಬ್ಬಳು ತೆಂಬರೆ ಬಡಿದುಕೊಂಡು ಹಾಡು ಹೇಳುತ್ತಾಳೆ.

ಹಾಡು

ಪೊಲಿಯಾನೆ ಪೊಲಿಯಾನೆ ಪೊಲಿಯಾನೆ ದೇವ್ಯಮ್ಮ
ಈ ಪೊಲಿಬಾರ್‌‌ದ್ಂಡ್ ದಾಪೋಲಿ ಬಲಪುಂಡು
ದುಂಬುದ ಕಾಲೊಡು ಮಣ್ಣದ್ ಮೂರಿಗೆ
ಇತ್ತೆದ ಕಾಲೊಡು ಕಂಚಿಗೆ ಮೂರ‍್ಯಾಂಡೆ
ಮಣ್ಣ ಮೂರಿ ಪತ್ತೊಂದು ಕಂಚಿ ಮೂರಿ ತುಂಬೊಂದು
ನಾಲಿಲ್ಲ ನಡುವೆ ನಲಿಕೆ ಕಣತೆರ್
ಮಿತ್ತೊಂಜಿ ಮಾಡೊಡು ಮುಡ್ಯೊಲ್ಲ ಬಿಲ್ರಾಯ
ತಿರ್ತೊಂಜಿ ಕಾಡ್‌ಡ್ ಕನ್ಯ ಕಾಡೆದಿ
ಕನ್ನೀಯ ಕಾಡೆದಿಗ್ ಕಲಮೆದ ಕಜೆ ಅರಿಯೆ
ಮೂರ‍್ಯೆಲ್ಲ ಬಿಲ್ರಾಯಗ್ ತೋಡರ ಬಲಿಯೇ
ಹಾಂ ….. ದುಂಬುಂಡ ಪೋಪೇರ್ ಪಿರ ಪಂಡ ಬರ್ಪೆರ್
ಉಲ್ಲಯ ತಿರ್ತ ಸಿರಿಮುಡಿ ಕಾಡ್ ಕೊರೈರ್
ಏಳ್ ಕಡಲ ನಡುಟು ಪಾಲೆನ ಮರಗೆ
ಪಾಲೆನ ಮಲನವುಲ ಓಲುಜ್ಯನ ಬೂತೊಲು
ಮುದ್ದಳ್ಳ ಮೋನೆಗ್ ಮುಂಕುಲೆ ಸನ್ನಯೆರ್
ಮೂಡಾಯಿ ಬಾಕಿಲ್‌ಡ್ದೆ ರಾತೊನೇ ಪೊಗ್ಗುದುನಗ್
ಪಡ್ಡಾಯಿ ಬಾಕಿಲ್ ಡ್ದೆ ಬೊಳಿಯ ಪಾರ್ಂಡೆ

ಕನ್ನಡ ಅನುವಾದ

ಅದೃಷ್ಟ ಬರಲಿ ಅದೃಷ್ಟ ಬರಲಿ ದೇವ್ಯಮ್ಮ
ಅದೃಷ್ಟ ಬಂದಿದೆ ಅದೃಷ್ಟ ಬೆಳೆಯುತ್ತಿದೆ
ಹಿಂದಿನ ಕಾಲದಲ್ಲಿ ಮಣ್ಣಿನ ಕಲಶ
ಈಗಿನ ಕಾಲದಲ್ಲಿ ಕಂಚಿನ ಕಲಶ
ಮಣ್ಣ ಕಲಶ  ಹಿಡಿದುಕೊಂಡು ಕಂಚಿ ಕಲಶ ಹೊತ್ತುಕೊಂಡು
ನಾಲ್ಕು ಮನೆ ನಡುವೆ ಕುಣಿತ ತಂದರು
ಮೇಲಿನ ಮಾಡದಲ್ಲಿ ಕಲಶದ ಬಿಲ್ರಾಯ
ಕೆಳಗಿನ ಕಾಡಿನಲ್ಲಿ ಕನ್ನೆ ಕಾಡೆದಿ
ಕನ್ನಿ ಕಾಡೆದಿಗೆ ಕಳಮೆಯ ಕಜೆ ಅಕ್ಕಿ
ಕಲಶದ ಬಿಲ್ಲಯನ ತೋಡಿನ ಬಲಿಯು
ಹಂ…. ಹಿಂದಿನಿಂದ ಹೋಗುತ್ತಾರೆ ಹಿಂದಿನಿಂದ ಬರುತ್ತಾರೆ.
ಒಡೆಯನ ಸಂಪತ್ತು ಕಾದು ಕೊಡುತ್ತಾರೆ.
ಏಳು ಕಡಲ ನಡು ಪಾಲೆಯ ಮರವು
ಪಾಲೆಯ ಮರದಲಿ ಎಲ್ಲಿಲ್ಲದ ಭೂತಗಳು
ಮುದ್ದುಳ್ಳ ಮುಖಕ್ಕೆ ಮೂಗುತ್ತಿ ಬಿನ್ನ
ಸಣ್ಣಗಾದ ನಡುವಿಗೆ ಬಣ್ಣ ಬಂಗಾರ
ಮೂತಿನ ಬಾಗಿಲಿಂದ ರಥವೊಂದು ಬಂದಿತ್ತು
ಪಡುವಣ ಬಾಗಿಲಿಂದ ಬಾಳಿನಿಂದ ಓಲೆ ಹೋಯಿತು.

ಈ ಕುಣಿತ ದೇವಿ ಅಥವಾ ಕಾಡೆದಿ ಭೂತಕ್ಕೆ ಸಂಬಂಧಪಟ್ಟಂತೆ ಕುಣಿತ, ಅದೃಷ್ಟವನ್ನು  ಕರೆಯುವ ಆಶಯವನ್ನು ಹೊಂದಿದ ಕುಣಿತ. ಆಟಿ ತಿಂಗಳಲ್ಲಿ ಬರುವ ದೃರದೃಷ್ಟವನ್ನು ವಿಘ್ನ ಸಂಕಟವನ್ನು ಈ ಕುಣಿತ ದೂರಗೊಳಿಸುತ್ತದೆ ಎಂಬುದು ನಲಿಕೆಯವರ ನಂಬಿಕೆ. ಈ ಕುಣಿತ ನಡೆಸಿ ಅವರು ಆಹಾರ ಧಾನ್ಯ ಜೊತೆಗೆ ದುಷ್ಟ ಶಕ್ತಿಗಳನ್ನು ದೂರಗೊಳಿಸುವ ಅರಿಶಿನ, ಮೆಣಸು, ಹುಳಿ, ಮಸಿ ಇತ್ಯಾದಿ ಸಾಮಗ್ರಿಗಳನ್ನು ಮನೆಯವರಿಂದ ದಾನವಾಗಿ ಪಡೆಯುತ್ತಾರೆ.

ಮುಂದೆ ಬರುವ ಸೋಣ (ಶ್ರಾವಣ)  ತಿಂಗಳಲ್ಲಿ ಹಬ್ಬಗಳೆಲ್ಲ ಸಾಲಾಗಿ ಬರುತ್ತವೆ. ಪ್ರತಿಯೊಂದು ಹಬ್ಬವೂ ವಿಶಿಷ್ಟವಾದ ಆಶಯಗಳನ್ನು ಹೊಂದಿದೆ. ತುಳುವರು ಆಚರಿಸುವ ಹಬ್ಬಗಳು ಪ್ರಕೃತಿ ಮತ್ತು ವ್ಯವಸಾಯಕ್ಕೆ ಸಂಬಂಧಪಟ್ಟವು. ಪಾಣಾರರು ಕೃಷಿಕರಲ್ಲದೆ ಹೋದರೂ ಕೃಷಿಯನ್ನು ಒಂದು ಆಚರಣೆಯಾಗಿ ಪರಿಗಣಿಸಿ ವ್ಯವಸಾಯಕ್ಕೆ ಒಂದು ಹಬ್ಬದ ರೂಪವನ್ನು ಕೊಟ್ಟವರು. ಅವರ ಪ್ರಕಾರ ಅಕ್ಕಿ, ಭತ್ತ ಎಂಬುದು ಅದೃಷ್ಟ. ಭತ್ತದ ಕೃಷಿಕರ ಬೇಸಾಯದ ಗದ್‌ಎಗೋರಿ (ಮುಕ್ತಾಯದ ದಿನ) ನಡೆಯುವ ದಿನ ಡಂಗೂರ ಸಾರುವುದರಿಂದ ಹಿಡಿದು ಅಲ್ಲಿ ನಡೆಯುವ ಭೂತದ ಕೋಲ, ನಾಗಾರಾಧನೆಯ ಎಲ್ಲಾ ಕೆಲಸಗಳಲ್ಲೂ ಅವರು ಪಾಲುದಾರರು. ಕೆಡ್ಡಸವನ್ನು ಅವರು ಭೂಮಿದೇವಿಯ ಮೀಹದ ಹಬ್ಬವೆಂದು ಕರೆದರೆ ಗದ್ದಗೋರಿಯನ್ನು ಭೂಮಿದೇವಿಯ ಮದುವೆ ಎಂಬುದಾಗಿ ಪರಿಗಣಿಸಿದ್ದಾರೆ. ಉಳುಮೆಗೂ ಅವರಲ್ಲಿ ಹಾಡು , ಆಚರಣೆಗಳಿವೆ. ಉಳುಮೆಯ ದ್ವಿಪದಿಗಳನ್ನು  ಉರಲ್ ಎಂದು ಕರೆದಿದ್ದಾರೆ. ನೇಜಿ ತೆಗೆಯುವುದಕ್ಕೆ ಪಾಡ್ದನಗಳೆಂಬ ಹಾಡುಗಳನ್ನು ಕಟ್ಟಿದ್ದಾರೆ. ನೇಜಿ ತೆಗೆಯುವಾಗ ಹಾಡುವ ಓಬೇಲೆ ರಚನಾಕಾರರೂ  ಕೂಡಾ ಹೆಚ್ಚಿನವರು ಪಾಣಾರ ಮಹಿಳೆಯರು. ಹೀಗೆ ಪಾಣಾರರು ತುಳುನಾಡಿನ ಜಾನಪದ ಸಂಸ್ಕೃತಿಯ ವಕ್ತಾರರಾಗಿದ್ದಾರೆ.