ಪಾಣಾನ್, ಪಾಣಾರು, ಪಾಂಡು ಎಂಬುದು ಒಂದು ಕಲಾವಿದ ಜನಾಂಗ. ಇವರನ್ನು ಕರಾವಳಿ ಕರ್ನಾಟಕದಲ್ಲಿ ನಲ್ಕೆ, ಅಜಿಲ, ಕೋಪಾಲರೆಂದು ಕೂಡ ಕರೆಯುತ್ತಾರೆ. ಜನಾಂಗಕ್ಕೆ ಬಹಳ ಪ್ರಾಚೀನತೆ ಇದೆ. ಬಸವಣ್ಣನವರ ಒಂದು ವಚನದಲ್ಲಿ ಪಾಣಾರ ಬಗ್ಗೆ ಹೀಗೆ ಹೇಳಲಾಗಿದೆ.

ವೇದಶಾಸ್ತ್ರದಲ್ಲಿ ಹಿರಿಯರೆನ್ನೆ
ಮಾಯಾ ಭ್ರಾಂತಿ ಕವಿದ ಗೀತಜ್ಞರ ಹಿರಿಯರೆನ್ನೆ
ಇವರು ಹಿರಿಯರುಗಳೇ?
ಯಾಗ ನಟ್ಟುವಿಗ ಪಾಣಾರು ಇವರಿಂದ ಅಧಿಕವ
ಸಾಧಿಸುವರೇನ್ ಕಿರಿಯರೇ

ಮೇಲ್ವರ್ಗದವರೆಂದು ಕರೆಯಲ್ಪಡವ ವೈದಿಕರ ಮತ್ತು ಕೆಳವರ್ಗದವರೆಂದು ಕರೆಯಲ್ಪಡುವ ಪಾಣಾರ ಆರಾಧನೆಯ ವಿಧಾನದ ಕುರಿತು ಸಮಾಜ ಮಾಡಿಕೊಂಡ ಕಲ್ಪನೆಯ ಬಗ್ಗೆ ಬಸವಣ್ಣನವರು ಸೋಜಿಗ ಪಡುತ್ತಾರೆ. ದೇವ ಶಾಸ್ತ್ರಾದಿಗಳನ್ನು ಕಲಿತು ಸೂಕ್ತಗಳನ್ನು ಚೆನ್ನಾಗಿ ಹೇಳಬಲ್ಲ ಅಹಂಕಾರದ ಮಾಯಾ ಭ್ರಾಂತಿಗೊಳಪಟ್ಟ ಉದ್ಗಾತೃ ವೈದಿಕರನ್ನು ಹಿರಿಯರೆಂದೇಕೆ ಪರಿಗಣಿಸಬೇಕು? ಇವರಿಂದ ಹೆಚ್ಚಿನದನ್ನು ಸಾಧಿಸಬಲ್ಲ ಯಾಗ ನರ್ತಕರಾದ ಪಾಣಾರು ಇವರಿಂದೇನು ಕಿರಿಯರೇ?

ಈ ವಚನವನ್ನು ಗಮನಿಸಿದಾಗ “ಪಾಣಾ” ಎಂಬ ಕಲಾವಿದ ಜನಾಂಗದವರು ಉತ್ತರ ಭಾರತದಲ್ಲಿ ನೆಲೆಸಿದ್ದ ವೈದಿಕ ಸಂಸ್ಕೃತಿಯ ಜನರಿಗೆ ಸಮಕಾಲೀನರಾಗಿದ್ದ ದ್ರಾವಿಡ ಮೂಲದವರು ಎಂಬುದನ್ನು ಊಹಿಸಬಹುದಾಗಿದೆ. ಇವರು ಯಾಗ ನಡೆಯುತ್ತಿದ್ದ ಸಂದರ್ಭದಲ್ಲಿ ನರ್ತನಗಯುತ್ತಿದ್ದರು ಎಂಬುದು ಸ್ಪಷ್ಟವಾಗುತ್ತದೆ. ವೈದಿಕ ಸಂಸ್ಕೃತಿಯು ಬಲಗೊಂಡಾಗ ಇವರು ದಕ್ಷಿಣಕ್ಕೆ ಪಸರಿಸಿರಬಹುದು. ದಕ್ಷಿಣದಲ್ಲಿ ಮುಖ್ಯವಾಗಿ ತಮಿಳುನಾಡು ಹಾಗೂ ಶ್ರೀಲಂಕಾದಲ್ಲಿ ನೆಲೆಗೊಂಡು ಹಲವು ಶತಮಾನಗಳವರೆಗೆ ಕಲಾವಿದರಾಗಿ ಉಚ್ಚ್ರಾಯ ಸ್ಥಿತಿಯಲ್ಲಿ ಬಾಳಿದರು. ತಮಿಳಿನಲ್ಲಿ ಅತ್ಯಂತ ಪ್ರಾಚೀನವೆಂದು ಹೇಳಲ್ಪಡುವ ಕ್ರಿ.ಪೂ.೫೦೦ ರಿಂದ ಕರಿ.ಶ. ೩೦೦ ರವರೆಗಿನ ಕಾಲದಲ್ಲಿ ರಚನೆಗೊಂಡ ಸಂಗಂ ಸಾಹಿತ್ಯ ಸಂಗ್ರಹದಲ್ಲಿ ಪಾಣಾರ ಕುರಿತು ಬಹಳಷ್ಟು ವಿವರಣೆಗಳಿವೆ. ಶ್ರೀಲಂಕಾದಲ್ಲಿ “ಜಾಫ್ನಾ”ವೆಂದು ಈಗ ಕರೆಯಲ್ಪಡುವ ಊರು ಹಿಂದೆ “ಯಾೞ್‌ ಪಾಣಾಂ” (ಯಾೞ್‌ ಎಂಬುದು ಪಾಣಾ ಕಲಾವಿದರು ನುಡಿಸುತ್ತಿದ್ದ ಒಂದು ತಂತಿ ವಾದ್ಯ) ಆಗಿತ್ತು. ಪಾಣಾರ ನೆಲೆಯಾಗಿತ್ತು ಎಂಬುದಾಗಿ ವಿದ್ವಾಂಸರು ಅಭಿಪ್ರಾಯಪಡುತ್ತಾರೆ.

ಪೂರ್ವೇತಿಹಾಸ

ಆ ಕಾಲದಲ್ಲಿ ತಮಿಳುನಾಡು ಹಳ್ಳಿಗಳಿಂದ ತುಂಬಿತ್ತು ಪಟ್ಟಣಗಳು ವಿರಳವಾಗಿದ್ದವು. ವಿವಿಧ ವಾಧ್ಯಗಳನ್ನು ನುಡಿಸಿಕೊಂಡು ಕವಿಗಳು ರಚಿಸಿದ ಹಾಡುಗಳನ್ನು ಹಾಡುತ್ತಾ ಈ ಪಾಣಾ ಜನಾಂಗದವರು ಮನೆಮನೆಗೆ ಹೋಗುತ್ತಿದ್ದರು. ಹಿರಿಯ ಕಲಾವಿದರು ರಾಜರುಗಳ ಆಸ್ಥಾನದಲ್ಲಿ ಆಶ್ರಯ ಪಡೆದಿದ್ದರು. ಪಾಣಾರಲ್ಲಿ ಆಶು ಕವಿ, ಕವಯಿತ್ರಿಯರಿದ್ದರು. ಖ್ಯಾತ ಗಾಯಕರಿದ್ದರು. ಸಣ್ಣ ಸಣ್ಣ ಸಾಮಂತ ರಾಜರುಗಳು ಕೂಡ ಕವಿ, ಕಲಾವಿದರನ್ನು ಪೋಷಿಸುತ್ತಿದ್ದರು. ಸ್ವತಃ ಕಾವ್ಯ ರಚನೆ ಮಾಡಬಲ್ಲ ರಾಜರುಗಳು ತಾವು ರಚಿಸಿದ ಕವಿಗಳನ್ನು ಈ ಪಾಣಾರಿಂದ ಆಸ್ಥಾನದಲ್ಲಿ ಹಾಡಿಸುತ್ತಿದ್ದರು. ಪಾಣಾರು ಹಾಡಿದ ಹಾಡುಗಳನ್ನು ಕೇಳಿ ಸಬಾಸದರು ಸಂತೋಷಪಡುತ್ತಿದ್ದರು ಎಂಬ ವಿವರಣೆ ತಮಿಳು ಸಾಹಿತ್ಯದಲ್ಲಿದೆ.

ಸಂಗಂ ಸಾಹಿತ್ಯದಲ್ಲಿ ಇವರ ಕಲಾ ಕೌಶಲ್ಯದ ಬಗ್ಗೆ ಅನೇಕ ವಿವರಣೆಗಳಿವೆ. ಆ ಕಾಲದಲ್ಲಿ ಸಂಗೀತಗಾರರು ಅನೇಕ ವಿಧದ ವಾದ್ಯಗಳನ್ನು ಬಾರಿಸುತ್ತಿದ್ದರು. ನಾಟ್ಯಕಲೆಯಲ್ಲಿ ಪರಿಣತರಾದ ನರ್ತಕರು ಹಲವರಿದ್ದರು. ಪಾಣಾರು ತಮ್ಮ ಕಲೆಯನ್ನು ಪರಂಪರಾಗತ ಉದ್ಯೋಗವನ್ನಾಗಿ ಮಾಡಿಕೊಂಡಿದ್ದರು. ಕಲೆಯನ್ನು ಅವಲಂಬಿಸಿಕೊಂಡೇ ಜೀವನದನ್ನು ಸಾಗಿಸುತ್ತಿದ್ದರು. ಪುರುಷರು ಮತ್ತು ಮಹಿಳೆಯರು ಸಮಾನವಾಗಿ ತಮ್ಮನ್ನು ತಾವು ಈ ಉದ್ಯೋಗದಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಪಾಣಾ ಮಹಿಳೆಯರನ್ನು ಪಾಡಿನಿಯರು, ಪಾಟ್ಟಿಯರು (ಹಾಡುಗಾರ್ತಿಯರು) ಎಂದೇ ಕರೆಯುತ್ತಿದ್ದರು. ಅವರು ಸುಶ್ರಾವ ಕಂಠದಿಂದ ಹಾಡಬಲ್ಲವರಾಗಿದ್ದರು. ಕೆಲವರು ಸಂಗೀತದ ಜೊತೆಗೆ ನಾಟ್ಯಕಲೆ ಬಲ್ಲವರಾಗಿದ್ದರು. ಅವರನ್ನು ವಿರಲಿಯರು (ಅಭಿನಯಗಾರ್ತಿಯರು) ಎಂದು ಹೆಸರಿಸುತ್ತಿದ್ದರು. ನಟನಾ ಸಾಮರ್ಥ್ಯವುಳ್ಳ ಪುರುಷರನ್ನು ಕೂತ್ತರ್ (ನಾಟ್ಯಗಾರರು) ಎನ್ನುವ ಅನ್ವರ್ಥನಾಮದಿಂದ ಕರೆಯುತ್ತಿದ್ದರು. ವೇಷ-ಭೂಷಣಗಳನ್ನು ಧರಿಸಿ ಜನಪದ ಕುಣಿತಗಳನ್ನು ನಡಸುವ ಕಲಾವಿದರನ್ನು ಪೊರುನರು ಎನ್ನುತ್ತಿದ್ದರು.

ಪಾಣಾ ಜನಾಂಗದ ಸ್ತ್ರೀ-ಪುರುಷರೆಲ್ಲ ಆಶು ಕವಿಗಳಾಗಿದ್ದರು. ಅವರ ಕವಿತೆಗಳಲ್ಲಿ ವೀರ ಮತ್ತು ಔದಾರ್ಯದ ವಿಷಯಗಳೇ ಹೆಚ್ಚಾಗಿದ್ದವು. ಇವಲ್ಲದೆ ಪ್ರಕೃತಿಯ ವರ್ಣನೆಗಳಿದ್ದವು. ಕವಿತೆಗಳಲ್ಲಿ ಕಂಡುಬರುವ ಔದಾರ್ಯದ ಸಂಗತಿಗಳು, ಪ್ರಕೃತಿ ವರ್ಣನೆ, ಹೆಣ್ಣಿನ ವರ್ಣನೆ ಇಲ್ಲದೆ ಇರುವುದು. ಇವೆಲ್ಲವನ್ನು ಅವಲೋಕಿಸಿದಾಗ ಇವುಗಳಲ್ಲಿ ಹೆಚ್ಚಿನವುಗಳು ಸ್ತ್ರೀಯರಿಂದಲೇ ರಚಿಸಲ್ಪಟ್ಟವುಗಳು ಎಂಬುದು ವ್ಯಕ್ತವಾಗುತ್ತದೆ.

ಪಾಣಾ ಕವಯಿತ್ರಿಯರಿಂದ ರಚಿಸಲ್ಪಟ್ಟ ಕವಿತೆಗಳ ಆಶಯಗಳು ಬಹಳ ಸುಂದರವಾಗಿವೆ. ಗೋಡೆಯ ಮೇಲೆ ಸಂಚರಿಸುತ್ತಿದ್ದ ಹಲ್ಲಿಯೊಂದು ಲೊಚಗುಟ್ಟಿದ್ದನ್ನು ಕೇಳಿದ ಹೆಣ್ಣೊಬ್ಬಳು ತನ್ನ ಪ್ರಿಯತಮನಿಗೆ ಏನು ಅನಿಷ್ಟ ತಟ್ಟಿತೋ ಎಂದು ಗಾಬರಿಯಾಗುತ್ತಾಳೆ. ತನ್ನ ಪ್ರಿಯನಿಗೆ ಏನೂ ಆಗದಿರಲೆಂದು ಸದ್ದು ಕೇಳಿ ಬಂದ ಕಡೆಗೆ ಕೈ ಮುಗಿದು “ನನ್ನ ಪ್ರಿಯನನ್ನು ಕುರಿತು ಒಳ್ಳೆಯ ಸುದ್ದಿ ಹೇಳು. ಅವನು ಚೆನ್ನಾಗಿದ್ದಾನೆಂಬ ಸುದ್ದಿ ಕೇಳಿ ಬರಲಿ” ಎಂದಂದು ಕೊಳ್ಳುತ್ತಾಳೆ.

ಮದುವೆಯಾದವಳೊಬ್ಬಳು ತನ್ನ ಗಂಡನ ಪ್ರೇಮದ ಬಗ್ಗೆ ವಿವಾಹ ಪೂರ್ವದಲ್ಲಿದ್ದ ಸಂಶಯ ನಿವಾರಣೆಯಾದ ಬಗೆಯನ್ನು ಗೆಳತಿಯೊಡನೆ ಹೀಗೆ ಹೇಳಿಕೊಳ್ಳುತ್ತಾಳೆ. “ಆ ದಿನ ನೀನು ನನ್ನ ಪ್ರಿಯನನ್ನು ನನಗೆ ಪರಿಚಯ ಮಾಡಿಕೊಟ್ಟಾಗ ಅವರ ಒಳ್ಳೆಯ ಗುಣಗಳನ್ನು ಎತ್ತಿ ಹೇಳಿ ನಂಬಿಕೆ ಹುಟ್ಟಿಸಿದೆ. ನಿನ್ನ ಪ್ರಯತ್ನದಿಂದ ನನ್ನ ವಿವಾಹ ನಡೆಯಿತು. ನೀನು ಹೇಳಿದ್ದೆಲ್ಲ ನಿಜ. ಅವರು ಈಗಲೂ ಒಳ್ಳೆಯವರೇ ಆಗಿದ್ದಾರೆ. “ಯಾಳ್” ನುಡಿಸಿ ಹಾಡುವ ಗಾಯಕನ ರಾಗಕ್ಕಿಂತಲೂ ಹೆಚ್ಚಾಗಿ ನನಗೆ ಪ್ರಿಯರಾಗಿದ್ದಾರೆ. ಮದುವೆಯ ದಿನಕ್ಕಿಂತಲೂ ಹೆಚ್ಚು ಅವರಿಂದು ನನಗೆ ಇಷ್ಟವೆನಿಸುತ್ತಾರೆ”.

ಪಾಣಾರು ಅಲೆಮಾರಿ ಜೀವನ ನಡೆಸುತ್ತಿದ್ದವರು. ಕೆಲವೊಮ್ಮೆ ಉದ್ಯೋಗ ನಿಮಿತ್ತ ಹೊರಗಡೆ ಹೋಗ ಗಂಡಸರು ಹೇಳಿದ ದಿನದಂದು ಮನೆಗೆ ಬಾರದೆ ಇದ್ದಾಗ ಹೆಂಗಸರು ತಳಮಳಗೊಳ್ಳುತ್ತಿದ್ದರು. “ಪ್ರಿಯನ ಬಹುಕಾಲದ ಅಗಲಿಕೆಯಿಂದ ನಾನು ಬಡವಾಗಿ ಹೋಗಿದ್ದೇನೆ, ಸಂಕಟ ಪಡುತ್ತಿದ್ದೇನೆ. ಆದರೂ ಅವರು ಹೋದ ನಾಡಿನಲ್ಲಿ ಕೈಗೊಂಡಿರುವ ಕರ್ತವ್ಯಗಳನ್ನು ಮುಗಿಸಿ ಬರುವವರಾಗಲಿ. ಅದೇ ನನ್ನ ಕಟ್ಟಾಸೆ” ಎಂದೊಬ್ಬಳು ತನ್ನ ಗಂಡನ ಶುಭಾಗಮನವನ್ನು ಹಾಡಿನಮೂಲಕ ಹೊರಗೆಡಹಲು ಇನ್ನೊಬ್ಬ ಅನುಭವಿ ಹೆಣ್ಣಿನಿಂದ ಮಾತ್ರ ಸಾಧ್ಯ. ಹೀಗಾಗಿ ಈ ಕಾವ್ಯಗಳಲ್ಲಿ ಬಹಳಷ್ಟು ಹಾಡುಗಳನ್ನು ಸ್ತ್ರೀಯರೇ ರಚಿಸಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ.

ಕವಿ ಹೃದಯಿಗಳಾದ ಪಾಣಾ ಪುರುಷ-ಮಹಿಳೆಯರು ತಮ್ಮ ಒಲವು-ಚೆಲುವುಗಳನ್ನು ಪರಸ್ಪರ ಹೊಂದಾಣಿಕೆ ಮಾಡಿಕೊಂಡು ವಿವಾಹವಾಗುತ್ತಿದ್ದರು. ಪರಸ್ಪರ ಅರಿವು ಬೆಳೆಸಿಕೊಂಡು ಬಡತನದಲ್ಲಿಯೂ ಸಂತೋಷದಿಂದ ಬಾಳುತ್ತಿದ್ದರು. ಪ್ರಕೃತಿಯ ವಸ್ತುಗಳು ಮನುಷ್ಯ ಜೀವನದ ಸದುಪಯೋಗಕ್ಕಾಗಿ ಎಂಬ ಭಾವನೆ ಅವರಲ್ಲಿತ್ತು. ಪ್ರೀತಿ ಪ್ರೇಮ ಸಹಬಾಳ್ವೆಯಿಂದಲೇ ಅವುಗಳ ಸದ್ಬಳಕೆ ಎಂಬುದನ್ನು ನಂಬಿದ್ದರು. ಅಲೆಮಾರಿ ಜೀವನ ನಡೆಸಿ ತಮ್ಮ ಹಾಡು, ಕುಣಿತಗಳಿಂದ ಜನರನ್ನು ಮೆಚ್ಚಿಸಿ ಸಂಪಾದಿಸಿದ ಸಂಪತ್ತಿನಿಂದ ಬದುಕುತ್ತಿದ್ದ ಅವರು ಸಂಕುಚಿತ ಮನಸ್ಸಿನವರಾಗಿರಲಿಲ್ಲ. ಅವರಲ್ಲಿ ವೃತ್ತಿ ಮಾತ್ಸರ್ಯವಿರಲಿಲ್ಲ. ಹಂಚಿ ಉಣ್ಣುವ ಮನೋಭಾವವಿತ್ತು.

ಉದಯ ಕಾಲದಲ್ಲಿ ಹಾಸಿಗೆ ಬಿಟ್ಟೇಳುವ ಮೊದಲು ಇಂಪಾದ ಗಾನ ಕೇಳುವುದು ಶುಭವೆಂದು ತಮಿಳರ ನಂಬಿಕೆ. ಸಂಗೀತ ಕಲೆಯಲ್ಲಿ ನಿಪುಣರಾದ ಪಾಣಾ ಸ್ತ್ರೀ-ಪುರುಷರು ಬೆಳಗಾಗುವುದರೊಳಗಾಗಿ ಅರಮನೆಗೋ ಇಲ್ಲ ಶ್ರೀಮಂತರ ಮನೆಯ ಎದುರಿಗೋ ಹೋಗಿ ನಿಂತು ಮನೆಯ ಯಜಮಾನರು ನಿದ್ದೆ ಬಿಟ್ಟೇಳುವ ಹೊತ್ತಿಗೆ ಸುಶ್ರಾವ್ಯವಾಗಿ ತಾವೇ ಕಟ್ಟಿದ ಉದಯರಾಗವನ್ನು ಹಾಡುತ್ತಿದ್ದರು. ಇದನ್ನು “ತುಯಿ ಲೆಡೈ ನಿಲೈ” ಎನ್ನುತ್ತಿದ್ದರು. ಮನೆಯವರು ಸಂತೋಷಗೊಂಡು ಗಾಯಕ-ಗಾಯಕಿಯರಿಗೆ ಉಡುಗೊರೆ ನೀಡುತ್ತಿದ್ದರು.

ಪಾಣಾರಲ್ಲಿ ಆಶು ಕವಯಿತ್ರಿಯರೂ ಬಹಳಷ್ಟು ಮಂದಿ ಇದ್ದಿರಬೇಕು. ಹೆಂಗಸರೆಲ್ಲ ಒಟ್ಟು ಸೇರಿ ಹಾಡುವ “ಅಮ್ಮೆನ್ ಹಾಡು” ಪರಸ್ಪರ ಚೆಂಡು ಹೊಡೆದು ಕೊಂಡು ಹಾಡುವ “ಕಂಡುಕವರಿ” ಉಯ್ಯಾಲೆ ತೂಗಿ ಹಾಡುವ “ಊಶಲ್ವರಿ” ಭತ್ತ ಕುಟ್ಟುವಾಗ ಹಾಡುವ “ವಳ್ಳೈ ಪಾಟ್ಟು” (ಒನಕೆವಾಡು) ಇವೆಲ್ಲ ಸಂಗಂ ಸಾಹಿತ್ಯದಲ್ಲಿ ತೊಡೆತಿವೆ. ಈ ಹಾಡಿನ ಕರ್ತೃಗಳೆಲ್ಲ ಪಾಣಾರ ಮಹಿಳೆಯರೇ ಇದ್ದಿರಬೇಕು. ಪಾಣಾರ ಕುಣಿತದ ಹಾಡುಗಳು “ಪೊರುನರಾಳ್ವಪ್ಪಡೈ” ಎಂಬ ಕವನ ಸಂಕಲನದಲ್ಲಿವೆ. ಕುಣಿತದಲ್ಲಿ ಪುರುಷರು ಯಾಳ್ ಎಂಬ ತಂತಿವಾದ್ಯವನ್ನು ಬಾರಿಸಿಕೊಂಡು ಕುಣಿದರೆ ಮಹಿಳೆಯರು ಹಾಡು ಹೇಳುತ್ತಾ ಚರ್ಮವಾದ್ಯವನ್ನು ಬಾರಿಸಿಕೊಂಡು ಕುಣಿಯುತ್ತಿದ್ದರು. ಕೆಲವೊಮ್ಮ ಮಹಿಳೆಯರೇ ಕುಣಿಯುತ್ತಿದ್ದರು. ಈ ಹಾಡುಗಳನ್ನು ಕೇಳಿದ ಕುಣಿತವನ್ನು ಕಂಡ ದರೋಡೆಕೋರರು ಕೂಡ ಮನಸೋತು ಇವರ ತಂಡವನ್ನು ಹಿಂಬಾಲಿಸುತ್ತಿದ್ದರು ಎಂಬ ಉಲ್ಲೇಖ ತಮಿಳು ಸಾಹಿತ್ಯದಲ್ಲಿದೆ.

ಕಲಾವಿದರಾದ ಪಾಣಾರು ತಮ್ಮ ಮುಂದಿನ ಜೀವನದ ಬಗ್ಗೆ ಎಳ್ಳಷ್ಟು ಆಲೋಚನೆ ಮಾಡಿರಲಿಲ್ಲ. ಹಣ, ಧಾನ್ಯ, ಸಂಪತ್ತನ್ನು ಕೂಡಿಡುವ ಪರಿಪಾಠ ಅವರಲ್ಲಿ ಬೆಳೆದು ಬಂದಿರಲಿಲ್ಲ. ಪ್ರತಿದಿನ ಹತ್ತಾರು ಮನೆಗಳನ್ನು ಸಂದರ್ಶಿಸಿ ಹಾಡಿ, ಕುಣಿದು ದಿನದ ಆಹಾರವನ್ನು ಸಂಪಾದಿಸಿಕೊಂಡು ಬರುವ ರೂಢಿ ಅವರದಾಗಿತ್ತು. ಕಾಲ ಒಂದೇ ರೀತಿ ಇರುವುದಿಲ್ಲ. ಸಮಾಜ ಬದಲಾಗುತ್ತಲೇ ಇರುತ್ತದೆ. ಕಾಲಕ್ಕೆ ತಕ್ಕಂತೆ ಜನರ ಮನಸ್ಸುಗಳು ಕೂಡ ಬದಲಾಗುತ್ತವೆ. ಅರಸೊತ್ತಿಗೆಗಳು ಅಳಿದು ಹೋಗಲು ಪ್ರಾರಂಭವಾಯಿತು. ವ್ಯವಹಾರಗಳು ಹೆಚ್ಚಾಗಿ, ಜನರ ಆಸಕ್ತಿ ಕಲೆ ಸಾಹಿತ್ಯದಲ್ಲಿ ಕುಂಠಿತವಾಗತೊಡಗಿತು. ಪಾಣಾ ಜನರ ಸಂಪಾದನೆ ಕಡಿಮೆಯಾಗುತ್ತಾ ಬಂತು. ದಿನದ ಆಹಾರಕ್ಕೆ ತತ್ವಾರವಾಯಿತು.

ಪಾಣಾರಿಗೆ ಕೃಷಿ ಭೂಮಿ ಇದ್ದಿರಲಿಲ್ಲ. ಕೃಷಿ ಕಾರ್ಯದ ಅರಿವು ಅವರಿಗಿರಲಿಲ್ಲ. ಮೊದಲೇ ಅಲೆದಾಟದ ಅಭ್ಯಾಸವಿದ್ದ ಈ ಜನರು ದೂರದೂರದ ಊರುಗಳಿಗೆ ಹೋಗಿ ಅಲ್ಲಿ ಕೆಲವು ದಿನಗಳವರೆಗೆ ನೆಲೆಸಿ ಆ ಊರಿನ ಜನರಿಗೆ ತಮ್ಮ ಕಲೆಯನ್ನು ಪ್ರದರ್ಶಿಸಿ ಸಂಪಾದನೆ ಮಾಡಲು ಪ್ರಾರಂಭಿಸಿದರು.

ಪಾಣಾರ ಜೀವನ ಅತ್ಯಂತ ದುಸ್ತರವಾಯಿತು. ಕುಟುಂಬ ಪೋಷಣೆ ಕಠಿಣವೆನಿಸಿತು. ಕಲಾವಿದರ ಬಾಳು ಸಾಮಾನ್ಯವಾಗಿ ಇಂದಿಗೂ ಅದೇ ರೀತಿಯದ್ದೇ ಆಗಿದೆ. ದಾನಿಗಳು ಕಡಿಮೆಯಾದರು. ಪೋಷಕರೇ ಇಲ್ಲದಂತಾಯಿತು. ಆದರೂ ಅವರು ತಮ್ಮ ಕವಿತಾ ಶಕ್ತಿಯನ್ನು ಕಳೆದುಕೊಳ್ಳಲಿಲ್ಲ. ತಮ್ಮ ಬಡತನದ ಕುರಿತಾಗಿಯೇ ಕವಿತೆಗಳನ್ನು ರಚಿಸಿದರು. ಇವರು ದುಃಖದ ಕವಿತೆಗಳನ್ನು ಕೇಳಿದ  ಜನರು ಅವರ ಬಗ್ಗೆ ಕನಿಕರಗೊಂಡು ದಾನ ಮಾಡಲು ಮುಂದಾದರು. ಈ ವ್ಯಥೆಯ ಕವಿತೆಗಳು ಕೂಡಾ ಬಹಳಷ್ಟು ಮನೋಜವಾಗಿವೆ. ಕೇಳುವವರ ಹೃದಯವನ್ನು ಇರಿಯುತ್ತವೆ. “ಆ ಮನೆಯ ಹಳೆಯ ಗೋಡೆಗಳು ಬಿರುಕುಬಿಟ್ಟಿವೆ. ಗುಡಿಸಲಿನ ಛಾವಣಿಯು ಮುರಿದು ಬೀಳುವ ಸ್ಥಿತಿಯಲ್ಲಿದೆ. ಅಡುಗೆಯ ಕೋಣೆಯಲ್ಲಿ ಹುಡಿಮಣ್ಣು ಹರಡಿದೆ. ಅದರ ಮೇಲೆ ಅಣಬೆ ಅರಳಿದೆ. ದಾರಿದ್ರ್ಯ ಅವರಿಗೆ ಮಾತ್ರವಲ್ಲ ಅವರ ನಾಯಿಗೂ ತಟ್ಟಿದೆ. ಆ ನಾಯಿ ಅಡುಗೆಮನೆಯಲ್ಲೇ ಮುದುಡಿದೆ. ಆ ನಾಯಿ ಅಡುಗೆ ಮನೆಯಲ್ಲೇ ಮರಿಹಾಕಿದೆ. ಕಣ್ಣು ತೆರೆಯದ ಆ ಮರಿಗಳಿಗೆ ತಾಯಿಹಾಲು ಸಾಕಷ್ಟಿಲ್ಲ. ತಾಯಿಯ ಮೊಲೆಗಳಿಗೆ ಮರಿಗಳು ಬಾಯಿ ಹಾಕಲು ಹೋದರೆ ತಾಯಿ ಗುರುಗುಟ್ಟುತ್ತದೆ. ತಾಯ್ತನದ ಭಾವನೆಯನ್ನು ಕೆಡಿಸುವಷ್ಟರ ಮಟ್ಟಿಗೆ ದಾರಿದ್ರ್ಯ ವ್ಯಾಪಿಸಿದೆ. ಆ ಕುಟುಂಬದ ಯಜಮಾನ ಬಹಳಷ್ಟು  ಸಹನಾಶಕ್ತಿಯುಳ್ಳವನು. ಆಹಾರ ಹುಡುಕುತ್ತಾ ಹೋದ ಆತನಿಗೆ ಏನೂ ದೊರಕಲಿಲ್ಲ. ಯಾವ ದಾನಿಯಿಂದಲೂ ಸಂಪಾದನೆಯಾಗಲಿಲ್ಲ. ಆತನ ಹೆಂಡತಿಯು ಸಿಕ್ಕಿದ ಕಾಡುಸೊಪ್ಪನ್ನು ತಂದು ಒಲೆಯಲ್ಲಿ ಬೇಯಲಿಡುತ್ತಾರೆ. ರುಚಿಗೆ ತಕ್ಕಷ್ಟು ಉಪ್ಪು ಬೆರೆಸಲೂ ಮನೆಯಲಿಲ್ಲ. ಬೇಯಿಸಿದ ಸೊಪ್ಪನ್ನು ತಿನ್ನಲು ಮನೆಮಂದಿಯೆಲ್ಲಾ ಕಾದು ಕುಳಿತಿದ್ದಾರೆ. ಈ ದೃಶ್ಯ ಬೇರೆಯವರಿಗೆ ಕಾಣಬಾರದೆಂದು ಬೀದಿಯ ಕಡೆಗಿದ್ದ ಕದ ಮುಚ್ಚಿದ್ದಾರೆ”.

ಸಮಾಜದಲ್ಲಿ ಮೇಲ್ಮಟ್ಟದ ಸ್ಠಾನಮಾನಗಳನ್ನು ಗಳಿಸಿ ಕಲಾವಿದರೆಂಬ ಗೌರವಕ್ಕೆ ಪಾತ್ರರಾಗಿ ರಾಜಮನ್ನಣೆ ಪಡೆಯುತ್ತಿದ್ದ ಪಾಣಾರ ಕುಟುಂಬದ ಜೀವನ ಪರಿಸ್ಥಿತಿ ನಿಕೃಷ್ಟ ಹಂತಕ್ಕೆ ತಲುಪಿತೆಂಬುದನ್ನು ಈ ಹಾಡು ಬಿತ್ತರಿಸುತ್ತದೆ.

ಪಾಣಾರು ಈ ಹಂತದಲ್ಲಿ ದಾನಿಗಳನ್ನು ಹುಡುಕಿಕೊಂಡು ದೂರ ದೂರದ ಊರುಗಳಿಗೆ ಪಯಣ ಬೆಳೆಸಿದರು. ಕರ್ನಾಟಕದ ಬೇರೆ ಬೇರೆ ಭಾಗಗಳಿಗೆ ಅವರು ಹೋಗಿರಬೇಕು. ಕನ್ನಡದ ಪ್ರಾಚೀನ ಸಾಹಿತ್ಯದಲ್ಲಿ ಬರುವ ಪಾಣಾ ಎಂಬ ಪದವು ಇದಕ್ಕೆ ಆಧಾರವಾಗುತ್ತದೆ. ಈ ಪಾಣಾ ಜನಾಂಗದವರು ಬೇರೆ ಬೇರೆ ಕಾಲಘಟ್ಟದಲ್ಲಿ ಮಲಬಾರಿನ ಮೂಲ್ಕ್ ಕರಾವಳಿ ಕರ್ನಾಟಕವನ್ನು  ಪ್ರವೇಶಿಸಿದ್ದಾರೆಂದು ಹೆಚ್ಚಿನ ಸಂಶೋಧಕರು ಬರೆದಿದ್ದಾರೆ. ಇವರಲ್ಲಿ ಒಂದೇ ಪಂಗಡಕ್ಕೆ ಸೇರಿದ ದೊಡ್ಡದಾದ ಒಂದು ಗುಂಪು ಕಾಸರಗೋಡಿನ ಮೂಲಕ ತಮಿಳುನಾಡಿಗೆ ಬಂದ ಪಾಣಾರು ಅಲ್ಲಲ್ಲಿ ನೆಲೆಯಾಗುತ್ತಾ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕೊನೆಯಲ್ಲಿರುವ ಬೈಂದೂರಿನವರೆಗೂ ಮುಟ್ಟಿದರು.

ಕಾಸರಗೋಡಿನಲ್ಲಿ ಉಳಿದುಕೊಂಡಿರುವ ಪಾಣಾರು ಕೋಪಲರೆಂದು ಕರೆಯಲ್ಪಟ್ಟವರು. ಕೋಪು ಎಂದರೆ ತುಳುವಿನಲ್ಲಿ ಪೋಣಿಸು, ನೇಯು ಎಂದರ್ಥ. ಇವರು ಸಂಗೀತ, ನೃತ್ಯಗಳನ್ನೆಲ್ಲಾ ಪೋಣಿಸಿಕೊಂಡು ಪ್ರದರ್ಶನ ನೀಡಬಲ್ಲವರಾದ ಕಾರಣ ಕೋಪಲರಾದರು. ಸುಳ್ಯ ಪ್ರದೇಶದಲ್ಲಿ ನೆಲೆಯಾದ ಪಾಣಾರನ್ನು ಅಜಲಾಯ, ಅಜಿಲರೆಂದು ಕರೆದರು. ಅಜಲ್ ಎಂದರೆ ಪಾಲು ಎಂದರ್ಥ. ಸುಳ್ಯಕ್ಕೆ ಬಂದ ಸೀಮಿತ ಪಾಣಾ ಕುಟುಂಬದವರು ಒಂದೊಂದು ಗ್ರಾಮಗಳನ್ನು ತಮ್ಮ ಕುಣಿತಕ್ಕಾಗಿ ವಿಂಗಡಣೆ ಮಾಡಿಕೊಂಡರು. ಹೀಗೆ ಪಾಲು ಮಾಡಿ ಹಂಚಿಕೊಂಡ ಈ ಪಾಣಾ ಕುಟುಂಬದವರು  ಅಜಿಲರಾದರು. ದಕ್ಷಿಣ ಕನ್ನಡದ ಉಳಿದ ಭಾಗದಲ್ಲಿ ನೆಲೆನಿಂತವರನ್ನು ಅವರ ವೃತ್ತಿಗನುಸಾರವಾಗಿ ಅಲ್ಲಿನ ಜನರು ನಲಿಕೆ (ಕುಣಿತ)ಯವ, ನೆಲ್ಕೆಯವರೆಂದು ಕರೆಯಲು ಪ್ರಾರಂಭಿಸಿದರು. ಮಂಗಳೂರು ದಾಟಿ ಮುಂದೆ ಬೈಂದೂರಿನವರೆಗೂ ಹೋಗಿ ಅಲ್ಲಲ್ಲಿ ನೆಲೆಯಾದವರೆಲ್ಲ ತಮ್ಮ ತಮಿಳು ಮೂಲದ ಪಾಣಾನ್ ಎಂಬ್ ಹೆಸರನ್ನೇ ಖಾಯಂ ಆಗಿ ಮಾಡಿಕೊಂಡರು. ಅವರೀಗ್ ಪಾಣಾನ್, ಪಾಣ್ರು, ಪಾಂಡ್ರು ಎಂದು ಕೂಡಾ ಕರೆಯಲ್ಪಡುತ್ತಾರೆ. ಕೋಪಲ ಮತ್ತು ಅಜಿಲ ಹೆಸರುಗಳೀಗ ಕಡಿಮೆಯಾಗಿ ನಲ್ಕೆ ಮತ್ತು ಪಾಣಾರು ಅಥವಾ ಪಾಣಾರರು ಎಂಬ ಹೆಸರು ಮಾತ್ರ ಹೆಚ್ಚು ಪ್ರಚಲಿತವಾಗಿ ಉಳಿದಿದೆ.  ನಲ್ಕೆಯವರು ತುಳು ಮಾತನಾಡಿದರೆ ಪಾಣಾರರು ಅಲ್ಲಿನ ಪ್ರಾದೇಶಿಕ ಭಾಷೆಯಾದ  ಕನ್ನಡವನ್ನು ಮಾತಾಡುತ್ತಾರೆ. ಇವರು ತಮ್ಮೊಳಗೆ ಸಂಬಂಧವನ್ನು ಬೆಳೆಸಿಕೊಳ್ಳುತ್ತಾರೆ.

ವಾಸಪರಿಸರಮನೆ

ಪಾಣಾರರು ಹೆಚ್ಚಾಗಿ ಬೆಟ್ಟದ ತಪ್ಪಲಲ್ಲಿ ಇಲ್ಲವೇ ನದಿ ದಂಡೆಯಲ್ಲಿ ಗುಡಿಸಲು ಕಟ್ಟಿಕೊಂಡು ವಾಸ ಮಾಡುತ್ತಾರೆ. ಇವರು ಸ್ವಂತ ಜಮೀನು, ಹೊಲ, ಗದ್ದೆಗಳನ್ನು ಮಾಡಿಕೊಂಡಿಲ್ಲ. ಏಕೆಂದರೆ ಮೂಲತಃ ಇವರು ಕೃಷಿಕರಲ್ಲ. ಕೃಷಿ ಕೆಲಸದಲ್ಲಿ ಇವರು ಅನಿವಾರ್ಯವಾಗಿ ತೊಡಗಿದರೂ ಉಳಿದ ಕೃಷಿ ಕಾರ್ಮಿಕರಷ್ಟು ಪರಿಶ್ರಮದಿಂದ ಇವರಿಗೆ ದುಡಿಯಲು ಸಾಧ್ಯವಾಗುವುದಿಲ್ಲ.  ಮಹಿಳೆಯರೂ ಕೂಡಾ ಅಷ್ಟೆ. ಗದ್ದೆಯ ಕೆಲಸ ತಿಳಿದರೆ ಅಲ್ಲಿ ಕೂಡಾ ಉಳಿದ ಹೆಂಗಸರಿಗಿಂತ ಇವರು ಹಿಂದುಳಿಯುತ್ತಾರೆ. ಹಾಡು ಹೇಳುತ್ತಾ ಉಳಿದವರನ್ನು ರಂಜಿಸುತ್ತಾರೆ.

ಕೆಲವರಿಗೆ ಭೂತ ಚಾಕರಿಗಾಗಿ ಗುತ್ತು ಬೀಡಿನ ಶ್ರೀಮಂತ ಜಮೀನ್ದಾರರು ಉಂಬಳಿ ಕೊಟ್ಟ ಒಣ ಭೂಮಿಯಿರುತ್ತದೆ. ವಾಸಕ್ಕಾಗಿ ಪುಟ್ಟ ಗುಡಿಸಲೊಂದನ್ನು ಕಟ್ಟಿಕೊಂಡಿರುತ್ತಾರೆ. ಇವರಲ್ಲಿ ಕೆಲವರು ಜನಪದ ವೈದ್ಯರಾಗಿರುವ ಕಾರಣ ಮನೆಯ ಸುತ್ತ ಔಷಧಿಯ ಸಸ್ಯಗಳನ್ನು ಬೆಳೆಸಿಕೊಳ್ಳುತ್ತಾರೆ. ಪಾಣಾರರು ಹಿಂದಿನ ಕಾಲದಲ್ಲಿ ತಮ್ಮ ಮನೆಗಳನ್ನು ನಾಲ್ಕು ಮರದ ಇಲ್ಲವೇ ಬಿದಿರಿನ ಕಂಬ ಹಾಕಿ ಕಟ್ಟಿಕೊಂಡಿರುತ್ತಿದ್ದರು. ಛಾವಣಿಗೆ ಹುಲ್ಲು ಹೊದಿಸುತ್ತಿದ್ದರು. ಮಣ್ಣಿನ ಗೋಡೆಗಳ ಮನೆ ಮತ್ತೆ ರಚನೆಗೊಂಡಿತು. ಮನೆಯ ಎರಡೇ ಕೋಣೆಗಳು. ಒಂದು ಅಡುಗೆಕೋಣೆಯಾದರೆ, ಇನ್ನೊಂದು ಮಲಗುವ ಕೋಣೆ. ಭೂತ ಕಟ್ಟುವ ಅಲಂಕಾರಿಕ ಸಾಮಗ್ರಿಗಳು, ಆಭರಣ, ಗಗ್ಗರ, ಮುಖವರ್ಣಿಕೆಯ ಸಾಮಾನುಗಳನ್ನು ಅವರು ಒಂದು ಬೆತ್ತದ ಪೆಟ್ಟಿಗೆಯಲ್ಲಿ ಇಡುತ್ತಾರೆ. ಈ ಪೆಟ್ಟಿಗೆಯನ್ನವರು ಬಹಳ ಪವಿತ್ರ ದೃಷ್ಟಿಯಿಂದ ನೋಡುತ್ತಾರೆ. ಭೂತದ ಪೆಟ್ಟಿಗೆಯನ್ನಿಡಲು ಮಲಗುವ ಕೋಣೆಯಲ್ಲಿ ಒಂದು ಪ್ರತ್ಯೇಕ ವ್ಯವಸ್ಥೆಯಿರುತ್ತದೆ. ಮನೆಗೆ ಒಂದೇ ಬಾಗಿಲು ಇರುತ್ತದೆ.  ಇದನ್ನು ಬಿದಿರಿನ ದಬ್ಬೆ ಇಲ್ಲವೇ ಮರದಿಂದ ರಚಿಸಿರುತ್ತಾರೆ. ಕೆಲವರ ಮನೆಗಳಿಗೆ ಜಗಲಿ ಇರುತ್ತದೆ. ಮನೆಯೆದುರಿಗೆ ತುಳಸಿಕಟ್ಟೆ ಇರುತ್ತದೆ. ಹೆಚ್ಚಿನ ಮನೆಗಳ ಪಕ್ಕದಲ್ಲೊಂದು ಭೂತದ ಮೊಗವಾಡ, ಮೂರ್ತಿ ಇಲ್ಲವೇ ಆಯುಧ ಇರುತ್ತದೆ. ದಿನನಿತ್ಯ ಮುಸ್ಸಂಜೆಗೆ ಈ ಹಲಗೆಯ ಮೇಲೆ ಒಂದು ದೀಪ ಹಚ್ಚಿಡುತ್ತಾರೆ. ಈಗೀಗ ಹುಲ್ಲಿನ ಮನೆಗಳು ಕಡಿಮೆಯಾಗಿವೆ. ಸರಕಾರದ ಸಹಾಯಧನ ಪಡೆದು ಮನೆಗೆ ಹೆಂಚು ಹೊದಿಸಿಕೊಳ್ಳುತ್ತಾರೆ. ಮಣ್ಣಿನ ಗೋಡೆಯ ಬದಲು ಮುರಕಲ್ಲು ಅಥವಾ ಇಟ್ಟಿಗೆಯ ಗೋಡೆಗಳನ್ನು ಕಟ್ಟಿಕೊಳ್ಳುತ್ತಾರೆ.  ಸಾಮಾನ್ಯವಾಗಿ ಇವರಿಗೆ ಪ್ರತ್ಯೇಕ ಬಾವಿ ಇರುವುದಿಲ್ಲ. ಹತ್ತಿರದ ಜಲಾಶಯದಿಂದಲೇ ಅಡುಗೆಗೆ, ಸ್ನಾನಕ್ಕೆ ನೀರು ತರುತ್ತಾರೆ. ನಲ್ಕೆಯವರ ಮನೆಗಳೆಲ್ಲಾ ಗುಂಪಾಗಿ ಇರುವುದರಿಂದ ಸರಕಾರ ಇವರಿಗಾಗಿ ಬಾವಿ ಒದಗಿಸಿಕೊಟ್ಟಿದೆ. ಭಾಗ್ಯಜ್ಯೋತಿ ಯೋಜನೆಯಲ್ಲಿ ಮನೆಗೆ ವಿದ್ಯುತ್ ಪೂರೈಕೆ ಮಾಡಿದೆ.

ನಲ್ಕೆಯವರು ಸಂಪ್ರದಾಯಸ್ಥರಾಗಿರುವುದರಿಂದ ಮೂಡುದಿಕ್ಕು ಅಥವಾ ಬಡಗು ದಿಕ್ಕಿಗೆ ಮುಖ ಮಾಡಿ ಮನೆ ಕಟ್ಟುತ್ತಾರೆ. ಪಕ್ಕದಲ್ಲಿ ರಾಜರಸ್ತೆ, ಬಯಲು ಅಥವಾ ಜಲಾಶಯವಿದ್ದರೆ ಮನೆಬಾಗಿಲು ಆ ಕಡೆಗಿಡುತ್ತಾರೆ. ತೆಂಕು ದಿಕ್ಕಿಗೆ ಮುಖ ಮಾಡಿ ಮನೆ ಕಟ್ಟುವುದಿಲ್ಲ. ಮನೆಯ ಎದುರು ಒಂದೆರಡು ತೆಂಗಿನ ಮರ ನೆಟ್ಟು ಬೆಳೆಸಿಕೊಳ್ಳುತ್ತಾರೆ.

ಮನೆಯನ್ನು ಸ್ವಚ್ಛವಾಗಿ, ಓರಣವಾಗಿ ಇಟ್ಟುಕೊಳ್ಳುವ ಜವಾಬ್ದಾರಿ ಸಾಮಾನ್ಯವಾಗಿ ಮಹಿಳೆಯರದ್ದು. ನಲ್ಕೆ ಮಹಿಳೆಯರು ತಮ್ಮ ಗಂಡಸರ ಜೊತೆ ಭೂತ ಕೋಲಕ್ಕಾಗಿ ಊರೂರು ತಿರುಗುತ್ತಲೇ ಇರುವವರಾದ ಕಾರಣ ಮನೆಯ ಭದ್ರತೆ, ಒಪ್ಪ ಓರಣಗಳಿಗೆ ವಿಶೇಷ ಗಮನ ಹರಿಸುವುದಿಲ್ಲ. ಮನೆಯಲ್ಲಿ ದಿನನಿತ್ಯ ಅಡುಗೆ ಮಾಡುವ ಕೆಲಸವೂ ಇರುವುದಿಲ್ಲ. ಹಬ್ಬ, ಹರಿದಿನಗಳಲ್ಲಿ ಶ್ರೀಮಂತರ ಮನೆಗಳಿಗೆ ಹೋಗಿ ಅಲ್ಲಿಂದ ಅವರು ಕೊಟ್ಟ ಅಕ್ಕಿ ತಿಂಡಿ ಮತ್ತಿತರ ಆಹಾರಪದಾರ್ಥಗಳನ್ನು ತರುತ್ತಾರೆ. ತಂದ ಆಹಾರ ಪದಾರ್ಥಗಳನ್ನು ಹಂಚಿ ಎಲ್ಲರೂ ಉಣ್ಣುತ್ತಾರೆ. ಈ ಕಾರಣದಿಂದಾಗಿ ಅಡುಗೆಕೋಣೆಯಲ್ಲಿ ವಿಶೇಷ ಅಡುಗೆಪಾತ್ರೆಗಳಿರುವುದಿಲ್ಲ. ಮೊದಲು ಮಣ್ಣಿನ ಪಾತ್ರೆಗಳನ್ನು ಬಳಸುತ್ತಿದ್ದರು. ಮನೆಯೊಳಗಡೆ ಹೆಚ್ಚೇನೂ ಪಿಠೋಪಕರಣಗಳಿರುವುದಿಲ್ಲ. ಇವರು ಚಾಪೆ ಹೆಣೆಯುವ ವೃತ್ತಿಯವರಾದ ಕಾರಣ ಕುಳಿತುಕೊಳ್ಳಲು ಮರಣ ಮಣೆ ಇಲ್ಲವೇ ಚಾಪೆಯನ್ನು ಬಳಸುತ್ತಾರೆ. ಮಹಿಳೆಯರು ಮನೆಯೊಳಗಡೆ ಮಣ್ಣಿನ ಸಾರಣೆ ಮಾಡಿ ನಯಗೊಳಿಸಿ ಸೆಗಣಿ ಸಾರಿಸುತ್ತಾರೆ. ಅಂಗಳಕ್ಕೂ ಕೂಡಾ ಸೆಗಣಿ ಸಾರಿಸಿ ಧೂಳು ಮನೆಯೊಳಗೆ ಬಾರದಂತೆ ನೋಡಿಕೊಳ್ಳುತ್ತಾರೆ. ಗೋಡೆಗಳಿಗೆ ಜೇಡಿ ಮತ್ತು ಕೆಂಪು ಬಣ್ಣದಿಂದ ಚಿತ್ತಾರ ಬಿಡಿಸುತ್ತಾರೆ. ದಿನನಿತ್ಯ ತುಳಸಿಗೆ ನೀರೆರೆಯುತ್ತಾರೆ. ಮುಸ್ಸಂಜೆಗೆ ತುಳಸಿಕಟ್ಟೆಗೆ ದೀಪವಿಡುತ್ತಾರೆ.

ಉಡುಗೆತೊಡುಗೆ

ಪಾಣಾರರು ಸುಂದರವಾದ ಮೈಕಟ್ಟುಳ್ಳವರು. ಎಣ್ಣೆಗಪ್ಪು ಬಣ್ಣದವರು. ಮಹಿಳೆಯರು ಲಕ್ಷಣವಾದ ಮುಖವುಳ್ಳವರು. ಸಾಮಾನ್ಯ ಎತ್ತರದವರು. ಹೆಂಗಸರು ಸದಾ ಸೀರೆಯುಟ್ಟುಕೊಂಡು ರವಿಕೆ ಹಾಕಿಕೊಳ್ಳುತ್ತಾರೆ. ಹಿಂದಿನ ಕಾಲದಲ್ಲಿ ರವಿಕೆ ಹಾಕಿಕೊಳ್ಳುತ್ತಿರಲಿಲ್ಲ. ಸೊಂಟದಿಂದ ಕೆಳಗೆ ಸೀರೆಯನ್ನು ಸುತ್ತಿ ಉಟ್ಟು, ಎದೆ ಮುಚ್ಚುವಂತೆ ತುಂಡುವಸ್ತ್ರವೊಂದನ್ನು ಅಡ್ಡವಾಗಿ ಕಟ್ಟಿಕೊಳ್ಳುತ್ತಿದ್ದರು. ರವಿಕೆ ಇದ್ದರೂ ಹಾಕಿಕೊಳ್ಳುವಂತಿರಲಿಲ್ಲ. ಈ ಬಗ್ಗೆ ಬಂಟ್ವಾಳ ತಾಲೂಕಿನ ಮಂಚಿಯ ೭೫ ವರ್ಷ ಪ್ರಾಯದ ಶ್ರೀಮತಿ ಪಾಚು ಹೀಗೆ ಹೇಳುತ್ತಾರೆ “ನಮ್ಮ ಬಾಲ್ಯ ಕಾಲದಲ್ಲಿ ನಮಗೆ ಬಹಳ ಬಡತನವಿತ್ತು. ಬಡತನವಿದ್ದರೂ ನಮಗೆ ನಮ್ಮ ಅಪ್ಪ ಅಮ್ಮ ಬೇಕಾದ ಬಟ್ಟೆ ಬರೆ ತೆಗೆಸಿಕೊಡುತ್ತಿದ್ದರು. ಪ್ರಾಯಕ್ಕೆ ಬಂದ ಮೇಲೆ ಹುಡುಗಿಯರು ಸೀರೆ ಉಡುವುದು ಪದ್ಧತಿ. ನನಗೂ ಸೀರೆ ರವಿಕೆ ತಂದಿದ್ದರು. ಆದರೂ ಸೀರೆ ಉಟ್ಟು ರವಿಕೆ ತೊಟ್ಟುಕೊಂಡು ನಾವು ನಮ್ಮ ಒಡೆಯರ ಮನೆಗೆ ಹೋಗುವಂತಿರಲಿಲ್ಲ. ಪರಿಶಿಷ್ಟ ಜಾತಿಯ ಹೆಂಗಸರು ಮೇಲ್ವರ್ಗದವರ ಮನೆಯಂಗಳಕ್ಕೆ ರವಿಕೆ ಹಾಕಿಕೊಂಡು ಹೋಗಬಾರದೆಂಬ ಕಟ್ಟುಪಾಡುಗಳಿದ್ದವು. ಧಣಿಗಳ ಮನೆ ಬಿಟ್ಟು ಬೇರೆ ಕಡೆ ಹೋಗುವಾಗ ನಾವು ಸೀರೆ ರವಿಕೆ ಧರಿಸಿಕೊಳ್ಳುತ್ತಿದ್ದೇವು”.

ಪಾಣಾರರು ಉದ್ದ ಕೂದಲಿನವರು. ಗಂಡಸರಿಗೂ ಕೂಡಾ ಕೂದಲು ಬಿಟ್ಟು ಮುಡಿ ಕಟ್ಟಿಕೊಳ್ಳುತ್ತಿದ್ದರು. ಮಹಿಳೆಯರು ತಲೆಗೆ ಎಣ್ಣೆ ಹಚ್ಚಿಕೊಂಡು ಕೂದಲು ಬಾಚಿ ಕಟ್ಟಿಕೊಳ್ಳುತ್ತಿದ್ದರು.  ಇಲ್ಲವೇ ಜಡೆ ಹೆಣೆದುಕೊಳ್ಳುತ್ತಿದ್ದರು. ಇವರು ಶೃಂಗಾರ ಪ್ರಿಯರು. ಕೈಗೆ ಗಾಜಿನ ಬಳೆ ಇಟ್ಟುಕೊಳ್ಳುತ್ತಿದ್ದರು. ಹಿಂದಿನ ಕಾಲದಲ್ಲಿ ಚಿನ್ನದ ಆಭರಣ ಧರಿಸಿಕೊಳ್ಳುವಷ್ಟು ಶಕ್ತರಾಗಿರಲಿಲ್ಲ. ಆಗ ಕಿವಿಗೆ ತೂತು ಮಾಡಿ ಆ ತೂತಿಗೆ ತಾಳೆಯ ಗರಿಯನ್ನು ಸುರುಳಿ ಮಾಡಿ ಓಲೆಯಂತೆ ಧರಿಸಿಕೊಳ್ಳುತ್ತಿದ್ದರು. ಬೆಂಡಿನಿಂದ ಮಾಡಿದ ಆಭರಣಗಳನ್ನು ಕೂಡಾ ಧರಿಸುತ್ತಿದ್ದರು. ಈಗ ಬೆಳ್ಳಿಯ ಇಲ್ಲವೇ ಚಿನ್ನದ ಲೇಪನದ (ಗಿಲೀಟಿನ) ಕಿವಿಯ ಆಭರಣಗಳನ್ನು ಧರಿಸಿಕೊಳ್ಳುತ್ತಿದ್ದರು. ಹಣವಂತರು ಚಿನ್ನದ ಆಭರಣಗಳನ್ನು ಧರಿಸಿಕೊಳ್ಳುತ್ತಿದ್ದರು.  ಮೂಗಿಗೆ ಟಿಕಲಿ ಇಟ್ಟುಕೊಳ್ಳುತ್ತಿದ್ದರು. ಕುತ್ತಿಗೆಗೆ ಮಣಿಹಾರ, ಬೆಳ್ಳಿಯ ಹಾರ ಇಲ್ಲವೇ ಚಿನ್ನದ ಲೇಪನದ ಬೆಳ್ಳಿಯ ಹಾರ ಧರಿಸಿಕೊಳ್ಳುತ್ತಿದ್ದರು. ವಿವಾಹಿತ ಸ್ತ್ರೀಯರು ಕರಿಮಣಿ ಸರ ಧರಿಸಿಕೊಳ್ಳುತ್ತಿದ್ದರು. ಹೆಚ್ಚಾಗಿ ಚಿನ್ನದ ತಾಳಿಯನ್ನು ಬೆಳ್ಳಿಯ ಕರಿಮಣಿ ಸರದಲ್ಲಿ ಹಾಕಿಕೊಳ್ಳುತ್ತಿದ್ದರು.

ಇವರು ತಲೆ ಬಾಚಿ ಕಟ್ಟಿ ಹಣೆಗೆ ಕುಂಕುಮವಿಟ್ಟು ಹೂ ಮುಡಿದುಕೊಳ್ಳುತ್ತಾರೆ. ಮುತ್ತೈದೆಯರು ಕಾಲಿಗೆ ಕಾಲುಂಗುರ ಧರಿಸಿಕೊಳ್ಳುತ್ತಾರೆ. ಆಭರಣಗಳ ಬಗ್ಗೆ ಅವರಿಗಿರುವ ತಿಳುವಳಿಕೆ ಅವರಿಂದಲೇ ರಚಿತವಾದ ಕನ್ಯಾಪು ಕುಣಿತದ ಹಾಡಿನಲ್ಲಿ ವ್ಯಕ್ತವಾಗುತ್ತದೆ. ತಾವು ಇತರರಿಗಿಂತ ಹೆಚ್ಚು ಲಕ್ಷಣವಂತರು ಎಂಬ ಅಭಿಮಾನ ಪಾಣಾ ಮಹಿಳೆಯರಿಗಿದೆ. ವಿಶ್ವಕರ್ಮನೇ ಒಂದು ಸುಂದರವಾದ  ಹೆಣ್ಣು ಗೊಂಬೆಯನ್ನು ರಚಿಸಿ ಅದಕ್ಕೆ ಜೀವನೀಡಿ ಪಾಣಾರ ಹೆಣ್ಣನ್ನು ಸೃಷ್ಟಿಸಿ ಕುಣಿತವೇ ನಿನ್ನ ಉದ್ಯೋಗವೆಂದು ಹರಸಿ ಕಳುಹಿಸಿಕೊಟ್ಟನೆಂದು ಅವರು ಹೇಳಿಕೊಳ್ಳುತ್ತಾರೆ. ಹೆಣ್ಣಿನ ಅಲಂಕಾರ ಹೀಗಿರಬೇಕೆಂಬ ಕಲ್ಪನೆಯನ್ನಿಟ್ಟುಕೊಂಡ ಅವರ ಕನ್ಯಾಪುವಿನ ವರ್ಣನೆ ಹೀಗಿದೆ.

“ಉಡಲು ಪಟ್ಟೆಸೀರೆ, ಗಾಜಿನ ಬಣ್ಣದ ರವಿಕೆ, ಕಣ್ಣಸುತ್ತ ಕಾಡಿಗೆ, ಮುತ್ತು ಬೈತಲೆ, ಮುಂದಲೆ ಬೊಟ್ಟು, ಕಿವಿಗೆ ಚಿನ್ನದ ಓಲೆ, ಕೊಪ್ಪು, ಬುಗಡಿ, ಮುಂಗೈ ಬೆರಳುಗಳಿಗೆ ನೆಲ್ಲಿಸರ, ಸೊಂಟಕ್ಕೆ ನೇವಳ, ಪಟ್ಟಿ, ಮೂಗಿಗೆ ಮೂಗುಬೆಟ್ಟು, ಕೆನ್ನೆಗೆ ಕೆನ್ನೆ ಸರಪಳಿ, ಕೊರಳಿಗೆ ಚಿನ್ನದ ಹಾರಗಳು, ತೋಳಿಗೆ ತೋಳಬಂಧಿ, ಕೈಗೆ ಬಂಗಾರದ ಬಳೆಗಳು, ಕಾಳಿಗೆ ಗೆಜ್ಜೆ, ಕಾಲ ಸರಪಳಿ ಇವಿಷ್ಟು ಅಲಂಕಾರ ಮಾಡಿಕೊಂಡು ಒಂದು ಕೈಯಲ್ಲಿ ಗೆಜ್ಜೆ ಕತ್ತಿ”, ತುಳು ನಾಡಿನ ಹೆಣ್ಣು ಹೀಗಿರಬೇಕೆಂದು ಅವರ ಕಲ್ಪನೆ. ಸಂಪತ್ತಿನ ಕೊರತೆಯಿಂದಾಗಿ ಪಾಣಾರ ಮಹಿಳೆಯರಿಗೆ ಇದನ್ನೆಲ್ಲ ಧರಿಸಿಕೊಂಡು ಅಲಂಕಾರಗೊಳ್ಳುವ ಅವಕಾಶವಿದ್ದಿರಲಿಲ್ಲ. ಒಂದು ವೇಳೆ ಅನುಕೂಲತೆ ಇದ್ದಿದ್ದರೆ ಪಾಣಾ ಮಹಿಳೆಯರೂ ಕೂಡಾ ಈ ಎಲ್ಲಾ ಆಭರಣ, ಉಡುಗೆ ತೊಡುಗೆಗಳಿಂದ ಅಲಂಕಾರಗೊಳ್ಳುತ್ತಿದ್ದರೆಂಬುದು ಖಚಿತ.

ಕುಟುಂಬ ಪದ್ಧತಿ

ತುಳುಣಾಡಿನ ಮೂಲ ನಿವಾಸಿಗಳೆಲ್ಲ ಅಳಿಯ ಸಂತಾನ ಪದ್ಧತಿಯನ್ನು ಅನುಸರಿಸುವರು. ಮಾತೃಪ್ರಧಾನವಾಗಿರುವ ಈ ಪದ್ಧತಿಯಲ್‌ಇ ಬಳಿ (ಗೋತ್ರ)ಗಳು ತಾಯಿಯಿಂದ ಮಕ್ಕಳೀಗೆ ಮುಂದುವರೆಯುತ್ತವೆ. ತನ್ನ ಸಹೋದರಿಯರ ಮಕ್ಕಳ ಮೇಲೆ ಸೋದರ ಮಾವನಿಗೆ ವಿಶೇ ಜವಾಬ್ಧಾರಿ ಮತ್ತು ಹಕ್ಕು ಇರುತ್ತದೆ.  ತುಳುನಾಡಿಗೆ ಹೊರಗಿನಿಂದ ಬಂದ ಬ್ರಾಹ್ಮಣ, ವಿಶ್ವಕರ್ಮ, ಗೌಡ ಮುಂತಾದ ಜಾತಿಯವರೆಲ್ಲ ಪಿತೃಪ್ರಧಾನ ಪದ್ಧತಿಯವರು. ಇಲ್ಲಿ ಬಂದು ಅಳಿಯ ಸಂತಾನ ಪದ್ಧತಿಯನ್ನು ಸ್ವೀಕರಿಸಲಿಲ್ಲ. ಆದರೆ, ಜೈನರು ಮಾತ್ರ ಇಲ್ಲಿನ ಪ್ರಾದೇಶೀಕ ಕುಟುಂಬ ಪದ್ಧತಿಯನ್ನು ಸ್ವೀಕರಿಸಿದರು. ಮಾತೃಮೂಲೀಯ ಪದ್ಧತಿಯನ್ನು ಸ್ವೀಕರಿಸದೆ ತಮ್ಮ ಪದ್ಧತಿಯನ್ನೇ ಮುಂದುವರೆಸಿಕೊಂಡು ಬಂದ ಜಾತಿಯವರು ಕೂಡ ಇಲ್ಲಿ ಸೋದರ ಮಾವನಿಗೆ ನೀಡುವ ಮರ್ಯಾದೆಯ ಕ್ರಮವನ್ನು ತಮ್ಮ ಪಿತೃಪ್ರಧಾನ ಪದ್ಧತಿಯಲ್ಲೂ ಅಳವಡಿಸಿಕೊಂಡರು.

ಪಾಣಾರ ಜನಾಂಗದವರು ಮೂಲತಃ ಪಿತೃ ಪ್ರಧಾನ ಪದ್ಧತಿಯವರು. ತುಳುನಾಡಿಗೆ ಬಂದ ಮೇಲೆ ಇಲ್ಲಿನ ಬಳಿಗಳನ್ನು ಸ್ವೀಕಾರ ಮಾಡಿಕೊಂಡು ಮಾತೃಪ್ರಧಾನ ಪದ್ಧತಿಯನ್ನು ಬೆಳೆಸಿಕೊಂಡರು. ಇವರಲ್ಲೂ ಮಕ್ಕಳಿಗೆ ತಾಯಿಯ ಕಡೆಯಿಂದ ಬಳಿ ಮುಂದುವರೆಯುತ್ತದೆ. ಸೋದರ ಮಾವನಿಗೆ ವಿಶೇಷ ಗೌರವವಿದೆ. ಆದರೆ ಆಸ್ತಿ ಇಲ್ಲವೇ ವೃತ್ತಿಯ ಒಡೆತನ ತಂದೆಯಿಂದ ಮಕ್ಕಳಿಗ ಬರುತ್ತದೆ. ಇವರ ಬಳಿಗಳ ಬಗ್ಗೆ ಸ್ಟರಕ್ (೧೮೯೪-೧೭೮) ಮತ್ತು ಎಡ್ವರ್ಡ ಥರ್ಸ್ಟನ್ ನಲ್ಕೆಯವರು ಬಳಿಗಳು ಇಲ್ಲಿನ ಮೂಳ ನಿವಾಸಿಗಳಿಂದ ಎರವಲು ಪಡೆದವುಗಳು ಎಂದಿದ್ದಾರೆ.

ನಲಿಕೆಯವರು ತಾವು ೧೬ ಬಳಿಗಳವರು ಎಂದುಕೊಳ್ಳುತ್ತಾರೆ. ಅವು ಈ ರೀತಿ ಇವೆ. ೧. ಸೋಮಣ್ಣ ಬಳಿ (ಸುವರ್ಣ ) ೨. ಅಮ್ಮಣ್ಣ ಬಳಿ (ಅಮೀನ್) ೩. ಕಿರೋಡಿ ಬನ್ನಾಯ (ಕಿರೋಡಿಯನ್) ೪. ಕರುಂ ಬೆರನ್ನಾಯ (ಕರ್ಕೆರಾ) ೫.ಬಂಗೇರನ್ನಾಯ (ಬಂಗೇರ) ೬. ಚಾಲ್ಯನ್ನಾಯ (ಸಾಳ್ಯಾನ್) ೭.ನಾವಡಿಯನ್ನಾಯ ೮. ಅಲಂಕನ್ನಾಯ ೯. ಉಪ್ರನ್ನಾಯ (ಕುಕ್ಯಾನ್) ೧೦. ಪೆರ್ಬಣ್ಣ ೧೧. ಗುಂಡೆರಣ್ಣ ೧೨. ಕುಮೆರಣ್ಣ (ಕೂರ್ಮೆರ್) ೧೩. ಬೊಳ್ಳೆ ಐತಣ್ಣ ೧೪. ಅರಸನ್ನಾಯ ೧೫. ಕುಂಡಚಣ್ಣ (ಚನಿಲಣ್ಣ) ೧೬. ಮುಂಡೆರಣ್ಣಾಯ (ಮುಂಡಿಕಣ್ಣ) ಇವಿಷ್ಟೇ ಅಲ್ಲದೆ ಪುಲ್ಲೇಟ್ಟಿನ್ನಾಯ, ಗಿರಿಯೊಟ್ಟುನ್ನಾಯ, ಮಾಣ್ಯಗಬಳಿ, ಕಡಂಬೆರೆಬಳಿ, ಕಾಂತೆಟ್ಟಿಬಳಿ, ಉಪ್ಯಣ್ಣ ಬಳಿ ಮುಂತಾದ ಬಳಿಗಳೂ ಕಂಡು ಬಂದಿವೆ. ಇವೆಲ್ಲ ಮೂಲ ಬಳಿಗಳ ಪ್ರಬೇಧಗಳಾಗಿರುವ ಸಾಧ್ಯತೆ ಇದೆ. ಕನ್ನಡ ಮಾತನಾಡುವ ಪಾಣಾರರ ಬಳಿಗಳು ಇವಕ್ಕಿಂತ ಸ್ವಲ್ಪ ಭಿನ್ನವಾಗಿವೆ. ಗಂಗರಬಳಿ, ತೋಳಾರ ಬಳಿ, ಶೆಟ್ಟಿಬಳಿ, ಕೌಂಚನ ಬಳಿ, ಹೊಲೆಬಳಿ, ಇತ್ಯಾದಿ ಬಳಿಗಳನ್ನು ಅವರು ಹೇಳಿಕೊಳ್ಳುತ್ತಾರೆ. ಒಂದೇ ಬಳಿಯು ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ಹೆಸರುಗಳಿಂದ ಕರೆಯಲ್ಪಡುವ ಸಾಧ್ಯತೆ ಇದೆ. ಕನ್ನಡ ಮಾತನಾಡುವ ಪಾಣಾರರು ಮತ್ತು ತುಳು ಮಾತನಾಡುವ ನಲ್ಕೆಯವರ ನಡುವೆ ಸಂಬಂಧಗಳು ನಡೆಯುತ್ತವೆ. ಒಂದೇ ಬಳಿಯ ಗಂಡು-ಹೆಣ್ಣುಗಳ ನಡುವೆ ಸಂಬಂಧ ಏರ್ಪಡುವುದಿಲ್ಲ. ಸಹೋದರ-ಸಹೋದರಿಯರ ಮಕ್ಕಳ ನಡುವೆ ವಿವಾಹಕ್ಕೆ ಹೆಚ್ಚು ಪ್ರಾಶಸ್ತ್ಯವಿದೆ. ಸೋದರ ಮಾವನೊಡನೆ ವಿವಾಹ ನಿಶಿದ್ಧ.

ವಿಧವಾ ಮರು ವಿವಾಹ ಇವರಲ್ಲಿ ರೂಢಿಯಲ್ಲಿದೆ. ಗಂಡ ಸತ್ತಾಗ ಒಮ್ಮೆಗೆ ಆತನ ಹೆಂಡತಿ ತನ್ನ ಎಲ್ಲಾ ಅಲಂಕಾರಿಕ ಉಡುಪು-ಒಡವೆಗಳನ್ನು ಧರಿಸಿ ಕಳಚಬೇಕು. ಗಂಡ ಸತ್ತು ೪೦ ದಿನಗಳ ಬಳಿಕ ತಾಳಿ ಕರಿಮಣಿ ಹೊರತಾಗಿ ಉಳಿದ ಎಲ್ಲವನ್ನೂ ಮತ್ತೇ ಧರಿಸಿಕೊಳ್ಳಬಹುದು.  ಆದರೆ ಹೂ ಮುಡಿಯಬಹುದು ಮತ್ತು ಕುಂಕುಮ ಇಟ್ಟುಕೊಳ್ಳಬಹುದು. ಗಂಡಸರಲ್ಲೂ ಬಹುಪತ್ನಿತ್ವ ರೂಢಿಯಲ್ಲಿದೆ. ಸಾಮಾನ್ಯವಾಗಿ ಒಬ್ಬ ಗಂಡಸು ೭ ಕ್ಕಿಂತ ಹೆಚ್ಚು ಮದುವೆ ಆಗಬಾರದು ಎನ್ನುತ್ತಾರೆ. ಪ್ರಥಮ ಬಾರಿಗೆ ನಡೆಯುವ ವಿವಾಹದ ಹೊರತಾಗಿ ಎಲ್ಲಾ ವಿವಾಹಗಳನ್ನು ಮದುವೆ ಎನ್ನುವುದಿಲ್ಲ. ಕೈ ಪತ್ತವುನೆ (ಕೈ ಹಿಡಿಸುವುದು) ಎನ್ನುತ್ತಾರೆ.

ನಲ್ಕೆ ಯಾನೆ ಪಾಣಾರ ಜಾತಿಯಲ್ಲಿ ವಿವಾಹ ವಿಚ್ಛೇದನಕ್ಕೆ ಅವಕಾಶವಿದೆ. ಇದನ್ನು ಬರ ಹೇಳುವುದು ಎನ್ನುತ್ತಾರೆ. ಗಂಡ ಹೆಂಢತಿಗೆ ಸರಿ ಬಾರದೆ ಇದ್ದಾಗ ಅವರು ತಮ್ಮ ಧಣಿಗಳಲ್ಲಿ ದೂರು ಕೊಡುತ್ತಾರೆ. ಧಣಿಗಳು ನಲ್ಕೆ ಜಾತಿಯ ಗುರಿಕಾರನನ್ನು ಹಾಘೂ ಊರಿನ ಗುತ್ತು, ಬೀಡಿನ ಮುಖ್ಯಸ್ಥರನ್ನು ಮತ್ತು ಇತರ ಗಣ್ಯರನ್ನು ಕರೆಸಿ ಚರ್ಚೆ ನಡೆಸಿ ಸರಿಯೆಂದು ಕಂಡು ಬಂದರೆ ವಿಚ್ಛೇದನಕ್ಕೆ ಅನುಮತಿ ನೀಡುತ್ತಾರೆ. ತಪ್ಪಿತಸ್ಥರಿಗೆ ದಂಡ ವಿಧಿಸುತ್ತಾರೆ. ಸಾಮಾನ್ಯವಾಗಿ ಈ ದಂಡನೆ ಒಂದೂ ಕಾಲು ರೂಪಾಯಿಯಿಂದ ಹಿಡಿದು ನೂರೊಂದು ರೂಪಾಯಿವರೆಗಿರುತ್ತದೆ.

ಸಾಮಾನ್ಯವಾಗಿ ಗಂಡನೇ ಹೆಂಡತಿಗೆ ದಂಡ ಕೊಡುವುದು ರೂಢಿ. ಹೆಂಡತಿಯೇ ಒತ್ತಾಯದಿಂದ ಗಂಡನನ್ನು ಬಿಟ್ಟಲ್ಲಿ ಮಾತ್ರ ಹೆಣ್ಣಿನ ಕಡೆಯವರು ಗಂಡಿಗೆ ದಂಡ ತೆರಬೇಕಾಗುತ್ತದೆ. ಇದನ್ನು “ಅರ್ಥೋದ ಪಣವು” ಎನ್ನುತ್ತಾರೆ. ವಿಚ್ಛೇದನ  ಸಂದರ್ಭದಲ್ಲಿ ದಂಪತಿಗಳಿಗಿದ್ದ ಮಕ್ಕಳಲ್ಲಿ ಗಂಡು ಮಕ್ಕಳು ತಂದೆಯ ಕಡೆಗೂ ಹೆಣ್ಣು ಮಕ್ಕಳು ತಾಯಿಯ ನಡೆಗೂ ಸೇರುತ್ತಾರೆ.

ನಲಿಕೆ ಯಾನೆ ಪಾಣಾರ ಜಾತಿಯವರು ಜಾತಿ ಪದ್ಧತಿಯನ್ನು ಗಾಢವಾಗಿ ನಂಬುತ್ತಾರೆ. ಯಾವುದೇ ಹೆಣ್ಣು ತನ್ನ ಜಾತಿಯವನನ್ನು ಬಿಟ್ಟು ಬೇರೆ ಜಾತಿಯವನನ್ನು ವಿವಾಃವಾದರೆ ಅಂತಹ ಹೆಣ್ಣನ್ನು ತಂದೆ-ತಾಯಿ ಮತ್ತೆ ಮನೆಗೆ ಸೇರಿಸಿಕೊಳ್ಳುವುದಿಲ್ಲ. ಒಂದು ವೇಳೆ ಸೇರಿಸಿಕೊಂಡರೆ ಜಾತಿಯ ಉಳಿದ ಅವರ ಬಂಧುಗಳು ಆ ಕುಟುಂಬಕ್ಕೆನೇ ಬಹಿಷ್ಕಾರ ಹಾಕುತ್ತಾರೆ. ಜಾತಿ ಬಹಿಷ್ಕಾರ ನಿರ್ಣಯಗಳೆಲ್ಲ ಜಾತಿಯ ಗುರಿಕಾರನ ನೇತೃತ್ವದಲ್ಲಿ ನಡೆಯುತ್ತದೆ. ಕೆಲವೊಮ್ಮೆ ಜಾತಿಯಿಂದ ಹೊರಗೆ ಹೋದ ಪುರುಷ ಅಥವಾ ಮಹಿಳೆ ಮತ್ತೆ ಜಾತಿಗೆ ಸೇರುವುದಾದರೆ ಗುರಿಕಾರ ಪಂಚಾಯತಿ ನಡೆಸಿ ಜಾತಿಯೊಳಗೆ ಬರುವವರೆಗೆ ದಂಡ ವಿಧೀಸಿ ಬರಮಾಡಿಕೊಳ್ಳುತ್ತಾರೆ. ಈ ದಂಡನೆಯ ಹಣ ದೈವ-ದೇವರ ಸೇವೆಗೆ ಸಲ್ಲುತ್ತದೆ. ಹೆಚ್ಚಾಗಿ ಪುರುಷರು ಪರಜಾತಿಯ ಹೆಣ್ಣನ್ನು ವಿವಾಹವಾಗಿ ತನ್ನ ಮನೆಗೆ ಕರೆ ತಂದಾಗ ಇಂತಹ ಜಾತಿಗೆ ಸೇರಿಕೊಳ್ಳುವ ಕ್ರಿಯೆ ನಡೆಯುತ್ತದೆ.

ಜೀವನಾವರ್ತ ಆಚರಣೆಗಳು

ಜೀವನಾವರ್ತ ಆಚರಣೆಗಳನ್ನು ವ್ಯಕ್ತಿ ಜೀವಂತ ಇದ್ದಾಗ ಆಚರಿಸುವ ಆಚರಣೆಗಳು ಮತ್ತು ವ್ಯಕ್ತಿ ಸತ್ತ ಮೇಲೆ ಆಚರಿಸುವ ಆಚರಣೆಗಳೆಂದು ಎರಡು ವಿಭಾಗ ಮಾಡಬಹುದು. ವ್ಯಕ್ತಿ ಜೀವಂತವಾಗಿರುವಾಗ ಮಾಡುವ ಕ್ರಿಯಾವಿಧಿಗಳೆಲ್ಲ ಸಂಭ್ರಮದ ಆಚರಣೆಗಳಾದರೆ ಸತ್ತ ಮೇಲೆ ನಡೆಸುವಂಥವುಗಳು ದುಃಖದ ಆಚರಣೆಗಳು. ಜೀವನಾವರ್ತ ಆಚರಣೆಗಳಲ್ಲಿ ಪುರುಷರು ಹಾಗೂ ಮಹಿಳೆಯರು ಸಮಾನವಾಗಿ ಭಾಗವಹಿಸುತ್ತಾರೆ. ಸಾವಿನ ನಂತರದ ಆಚರಣೆಗಳಲ್ಲಿ ಹೆಚ್ಚು ದುಃಖ ಪಡುವವರು ಮಹಿಳೆಯರೇ ಆದರೂ ಅವರು ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ವಿರಳ. ಹೆಣ್ಣು ಪ್ರಸವಿಸಿದಾಗ, ಅಮೆ ಸೂತಕ ಕಳೆಯುವಾಗ, ಮಗುವಿಗೆ ನಾಮಕರಣ ಮಾಡುವಾಗ, ಬಾಣಂತಿಯ ೪೦ ನೇ ಸ್ನಾನದ ದಿನ, ಮಗುವಿನ ಅನ್ನ ಪ್ರಾಶನ,ಮೊದಲ ಬಾರಿ ಕೂದಲು ಕತ್ತರಿಸುವ ಕಜಂಬು, ಹೆಣ್ಣು ಋತುಮತಿಯಾದಾಗ ನಡೆಸುವ ಆಚರಣೆ, ಮದುವೆ ಮತ್ತು ಬಯಕೆ ಈ ಎಲ್ಲ ಸಂದರ್ಭಗಳಲ್ಲಿ ಗಂಡಿಗಿಂತ ಹೆಂಗಸರೇ ಬಹುಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಾರೆ.

ವೈದಿಕ ಸಂಸ್ಕೃತಿಯ ಪ್ರಕಾರ ಆಚರಿಸಲ್ಪಡುವ ಆಚರಣೆಗಳಿಗೆ ಮಂತ್ರಗಳ ಮಾರ್ಗದರ್ಶನವಿರುತ್ತದೆ. ಆದುದರಿಂದ ಅದು ಎಲ್ಲಾ ಕಡೆ ಸಾಮಾನ್ಯವಾಗಿ ಏಕ ಪ್ರಕಾರವಾಗಿ ನಡೆಯುತ್ತದೆ. ವೈದಿಕೇತರ ಪದ್ಧತಿಯ ಆಚರಣೆಗಳು ಅನುಕರಣೆಯ ಮೂಲಕ ನಡೆಯುತ್ತವೆ. ನಲಿಕೆಯವರ ಜಾತೀಯ ಆಚರಣೆಗಳು ವೈದಿಕೇತರ ಆಚರಣೆಗಳು.

ತಮಿಳುನಾಡಿನಿಂದ ಬಂದ ಪಾಣಾರು ಇಲ್ಲಿನ ಆಚರಣಾ ವಿಧಾನಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡರು. ತಮ್ಮಲ್ಲಿರುವ ಕಲಾಪ್ರೌಢಿಮೆ, ಪ್ರತ್ಯುತ್ಪನ್ನ ಮತಿತ್ವ, ಸಾಹಿತ್ಯ, ಸೃಜನಶೀಲ ಗುಣಗಳನ್ನು ತಮ್ಮ ಆಚರಣೆಯಲ್ಲಿ ಅಳವಡಿಸಿಕೊಂಡರು. ಇವರ ಆಚರಣೆಯ ಪ್ರತಿಯೊಂದು ಭಾಗವೂ ನಿರ್ದಿಷ್ಟವಾದ ನುಡಿಕಟ್ಟುಗಳನ್ನು ಗುರಿಕಾರನು ಹೇಳುವ ಮೂಲಕ ನಡೆಯುತ್ತವೆ. ಪಾಣಾರರು ತುಳುನಾಡಿನ ಸಾಂಸ್ಕೃತಿಕ ವಿಭಾಗದ ಕಾರ್ಯಕರ್ತರಾದುದರಿಂದ  ಜೀವನಾವರ್ತ ಆಚರಣೆಗಳನ್ನು ಬಹಳ ಶೃದ್ಧೆಯಿಂದ ಮತ್ತು ವಿಧಿವತ್ತಾಗಿ ನಡೆಸುತ್ತಾರೆ. ವಿವಾಹ ಆಚರಣೆಯಲ್ಲಿ ಹಾಡುಗಳನ್ನು ಬಳಸುತ್ತಾರೆ. ತಾವೇ ರಚಿಸಿದ ಪಾಡ್ದನಗಳಲ್ಲಿ ಆಚರಣೆಗಳ ವಿಧಿವಿಧಾನಗಳನ್ನು ಹಾಡಿನ ರೂಪದಲ್ಲಿ ವಿವರಿಸುತ್ತಾರೆ. ನುಡಿಗಟ್ಟಿನ ರಚನೆ ಪುರುಷರಿಂದಾದರೆ ಹಾಡು ಕಟ್ಟುವ ಕೆಲಸ ಮಹಿಳೆಯರದ್ದಾಗಿರುತ್ತದೆ.

ಹೆರಿಗೆ

ನಲಿಕೆಯವರಲ್ಲಿ ಪರಿಣತ ಸೂಲಗಿತ್ತಿಯರಿರುತ್ತಾರೆ. ಅವರ ನೆರವಿನಿಂದ ನಲಿಕೆಯವರು ಮನೆಯಲ್ಲೇ ಹೆರಿಗೆ ಮಾಡಿಸುತ್ತಿದ್ದರು. ಹೆರಿಗೆಯಾದ ಬಳಿಕ ಮಗುವಿನ ಹೊಕ್ಕುಳ ಬಳ್ಳಿ ಕೊಯ್ದು ರಕ್ತಸ್ರಾವವಾಗದಂತೆ ನೂಲಿನ ಕಟ್ಟು ಹಾಕಿ ಅಡಿಕೆ ಹಾಳೆಯಲ್ಲಿ ಮಗುವನ್ನು ಮಲಗಿಸುತ್ತಾರೆ. ಕಾಸರಕನ ಬೀಜ ಸುಟ್ಟು  ಹೊನ್ನೆ ಎಣ್ಣೆಯಲ್ಲಿ ಅರೆದು ಗಾಯಕ್ಕೆ ಹಚ್ಚುತ್ತಾರೆ. ಮಾಸವನ್ನು ಹೊಂಡ ತೋಡಿ ಹುಗಿಯುತ್ತಾರೆ. ತೋಡಿದ ಹೊಂಡವನ್ನು ಆಮೆಗುಂಡಿ ಎನ್ನುತ್ತಾರೆ. ಬಾನಂತಿ ಮಗುವನ್ನು ಸ್ನಾನ ಮಾಡಿಸಿ ಬಾಣಂತಿಗೆ ಶುಶ್ರೂಷೆ ನಡೆಸುತ್ತದೆ. ಈ ಎಲ್ಲ ಕೆಲಸಗಳನ್ನು ನಡೆಸುವವರು ಮಹಿಳೆಯರು.

ಹೆರಿಗೆಯಾದ ಮನೆಯನ್ನು ಸೂತಕದ ಮನೆ ಎಂದು ಭಾವಿಸುವುದು, ಬಾಣಂತಿಗೆ ಕಾಳೆ (ದುಷ್ಟಶಕ್ತಿ)ಯಿಂದ ತೊಂದರೆಯಾಗದಂತೆ ಮನೆಯ ಛಾವಣಿಗೆ ಕಾಸರಕನ ರೆಂಬೆ ಇಡುವುದು, ಬಾಣಂತಿಯ ಚಾಪೆಯಡಿ ಹಿಡಿಸೂಡಿ (ಕಸಬರಿ) ಕಾಸರಕನ ಎಲೆಗಳನ್ನು ಇಡುವುದು, ಬಲ್ಯಾಯ (ಜ್ಯೋತಿಷ್ಯ ವೃತ್ತಿಯವರು)ರಿಂದ ಭಸ್ಮ ಮಂತ್ರಿಸಿ ತಂದು ಚಾಪೆಯಡಿಯಲ್ಲಿಡುವುದು, ಬಾಣಂತಿ  ಹೊರಹೋಗುವಾಗ ತಲೆಗೆ ಮುಸುಕು ಹಾಕಿಕೊಂಡು ಕೈಯಲ್ಲೊಂದು ಚಿಕ್ಕ ಕತ್ತಿಯನ್ನು ಹಿಡಿದುಕೊಳ್ಳುವುದು – ಇವೆಲ್ಲ ನಲಿಕೆಯವರು ಆಮೆ ಸೂತಕ ಸಂಬಂಧ ನಡೆಸುವ ಅನುಕರಿಯೆಗಳು. ನಲಿಕೆ ಮಹಿಳೆಯರು ವಿಶೇಷವಾಗಿ ಪ್ರಕೃತಿ ಶಕ್ತಿಗಳನ್ನು ನಂಬುತ್ತಾರೆ. ದುಷ್ಟಶಕ್ತಿಗಳಿಂದ ರಕ್ಷಿಸಲು ಮಗು ಬಾಣಂತಿಯನ್ನು ಯಾರಾದರೂ ಮನೆಯವರು ರಾತ್ರಿ ಹಗಲು ಕಾಯುತ್ತಿರುತ್ತಾರೆ. ಕಾಸರಕನ ಮರದ ರೆಂಬೆ, ಕಬ್ಬಿಣದ ಕತ್ತಿ, ಹಿಡಿಸೂಡಿ, ಜ್ಯೋತಿಷಿಯು ಮಂತ್ರಿಸಿಕೊಟ್ಟ ಭಸ್ಮ ಇವೆಲ್ಲ ತಾಯಿ ಮಗುವಿಗೆ ದುಷ್ಟ ಶಕ್ತಿಗಳಿಂದ ರಕ್ಷಣೆ ನೀಡುತ್ತವೆ ಎಂಬುದಾಗಿ ಅವರು ಭಾವಿಸುತ್ತಾರೆ.