ಆಮೆ ಕಳೆಯುವುದು

ಆಮೆ ಎಂದರೆ ವೃದ್ಧಿ ಸೂತಕ (ಪುರುಡು) ಹೆತ್ತು ೩, ೫, ೭, ೯, ೧೧ ಅಥವಾ ೧೬ ರಂದು ಆಮೆ ಕಳೆಯುವ ಕಾರ್ಯ ನಡೆಸುತ್ತಾರೆ. ಆ ದಿನ ಮನೆ ಸ್ವಚ್ಛಗೊಳಿಸಿ ಬಟ್ಟೆಯನ್ನೆಲ್ಲಾ ತೊಳೆದು ಬ್ರಾಹ್ಮಣರಿಂದ ತಂದ ಪುಣ್ಯ ನೀರನ್ನು (ಪಂಚಗವ್ಯ) ಮನೆ, ಬಚ್ಚಲು, ಅಂಗಳ, ಬಾವಿಗೆ ಸಿಂಪಡಿಸುತ್ತಾರೆ. ತೀರ್ಥದ ರೂಪದಲ್ಲಿ ಮನೆಯವರೆಲ್ಲ ಇದನ್ನು ಸೇವಿಸುತ್ತಾರೆ. ಮಗುವಿನ ಅಜ್ಜ, ಅಜ್ಜಿ ಇಲ್ಲವೇ ಊರ ಗುರಿಕಾರನ ಹೆಂಡತಿ ಮಗುವಿಗೆ ಹೆಸರಿಟ್ಟು ಮೂರು ಸಲ ಕೂಗುತ್ತಾರೆ. ಮಗುವಿನ ಸೊಂಟಕ್ಕೆ ಪಟ್ಟೆ ನೂಲು ಕಟ್ಟುತ್ತಾರೆ. ಈ ಕಾರ್ಯಕ್ರಮಗಳು ಕೂಡ ಮಹಿಳೆಯರಿಂದಲೇ ನಡೆಯುತ್ತವೆ.

ತೊಟ್ಟಿಲಲ್ಲಿ ಹಾಕುವುದು

ಮಗು ಹುಟ್ಟಿದ ೧೬ನೇ ದಿನ ಮಗುವನ್ನು ತೊಟ್ಟಿಲಲ್ಲಿ ಹಾಕುವ ಕ್ರಮವಿದೆ. ತೊಟ್ಟಿಲನ್ನು ಕಾಡು ಬಳ್ಳಿಗಳಿಂದ ರಚಿಸುತ್ತಾರೆ. ತೊಟ್ಟಿಲಿಗೆ ಸಣ್ಣ ಚಾಪೆ (ತಕ್ಕನ)ಯನ್ನು ಹಾಸಿ ಅದರ ಮೇಲೆ ಹಳೆಯ ಸೀರೆಗಳನ್ನು ಕೂಡ ಹಾಸಿ ಧೂಪದ ಹೊಗೆ ಹಿಡಿದು ಶುದ್ಧ ಮಾಡಿ ಅಜ್ಜಿಯಂದಿರು ಮಗುವನ್ನು ತೊಟ್ಟಿಲಿನ ಮೇಲೆ ಕೆಳಗೆ ಮೂರು ಸಲ ಸುತ್ತು ತೆಗೆಯುತ್ತಾರೆ. ಮಗುವನ್ನು ಬಳಿಕ ತೊಟ್ಟಿಲ್ಲಿ ಮಲಗಿಸಿ ಜೋಗುಳ ಹಾಡುತ್ತಾರೆ.

ನಲಿಕೆಯವರ ಜೋಗುಳದ ಮಾದರಿಯೊಂದು ಹೀಗಿದೆ:

ತಂದನಾನ ತಾನ ತಂದನಾನ
ತಂದನಾದ ತರೊಳಿಗೆ ನಿದ್ರೇದ ಮರೊಳಿಗೆ
ತಂದನಾನ ತಾನ ತಂದನಾನ
ಜೋಜೋ ಜೋ ಬಾಲೆ ಜೋ ನಂತ ಬಾಲೆ
ಎಂಕ್ಲೇನ ಬಾಲೆ ಭಾಗ್ಯೋದ ಬಾಳೆ
ಎಂಚ ಪುಟ್ಯನ ಬಾಳೆ ಎಂಚ ಬುಳೆಪನ ಬಾಲೆ
ಬೆರ್ಮೆರರ್ ಕೋರ್ನ ಪಿಂಗಾರದ ಪುರ್ಪ
ಇಂಗೊಳು ದಿನೊ ದಿನೊ ದಿಂಜೊನು ಬನ್ನಗ
ಓಯಮ್ಮ ಬಾಳೆ ಬಿನ್ನಾಣ ಬಾಲೆ
ಎನ್ಯ ಭಾಗ್ಯೊದ ಬಾಲೆ ಜನ್ಮೆತ್ತಿ ಬಾಲೆ
ಜೋ ಜೋ ಜೋ ಬಾಲೆ ಜೋ ನಂತ ಬಾಲೆ
ಎನ್ನ ಯೋಗ್ಯೊದ ಬಾಲೆ ಭೂಮಿಡ್ ಪುಟ್ಟಿಬಾಲೆ
ಬುಲಿಪಡ ಬಾಲೆ ಜೋ ಎನ್ನ ಬಾಲೆ
ದಟ್ಟಿದ್ ದುಃಖಿದ್ ಬುಲಿಪಡ ಬಾಲೆ
ಓಯಮ್ಮ ಬಾಲೆ ಬುಲಿಪುಂಡು ತೂಲೆ
ಯೋಗ್ಯೋದ ಬಾಲೆ ಭಾಗ್ಯೊದ ಗುಣೋತ ಬಾಲೆ
ಓಯಮ್ಮ ಬಾಲೆ ಪರಂಚೋಲು ಬಾಲೆ
ತೊಂಕುವೆ ತೊಟ್ಟಿಲ್ ಮಾಣವೆ ಬಾಲೆ
ಜೋ ಜೋ ಜೋ ಎನ್ನ ಮೋಕೆದ ಬಾಲೆ

ಕನ್ನಡದ ಅನುವಾದ

ತಂದನಾನ ತಾನ ತಂದನಾನ
ತಂದನಾನ ತಂದರೆ ನಿದ್ರೆಯ ಮರುಕಳಿಕೆ
ತಂದನಾನ ತಾನ ತಂದನಾನ
ಜೋ ಜೋ ಜೋ ಮಗುವೆ ಜೋ ಅನಂತ ಮಗುವೆ
ನಮ್ಮಯ ಮಗುವೆ ಭಾಗ್ಯದ ಮಗುವೆ
ಹೇಗೆ ಹುಟ್ಟಿದೆ ಮಗುವೆ ಹೇಗೆ ಬೆಳೆದೆಯ ಮಗುವೆ
ಬಿರ್ಮರು ಕೊಟ್ಟ ಹಿಂಗಾರದ ಹೂವೆ
ತಿಂಗಳು ದಿನ ದಿನ ಹೆಚ್ಚುತ್ತಾ ಬಂದಂತೆ
ಓಯಮ್ಮ ಮಗುವೆ ಬಿನ್ನಾಣದ ಮಗುವೆ
ಎನ್ನ ಭಾಗ್ಯದಿಂದಲೇ ಜನ್ಮ ತಾಳಿದ ಮಗುವೆ
ನನ್ನ ಯೋಗ್ಯತೆಗಾಘಿ ಭೂಮಿಗೆ ಬಂದ ಮಗುವೆ
ಅಳಬೇಡ ಮಗುವೆ ಜೋ ಎನ್ನ ಮಗುವೆ
ದುಃಖಿಸಿ ಮರುಕದಿ ಅಳದಿರು ಮಗುವೆ
ಓಯಮ್ಮ ಮಗುವೆ ಅಳದಿರು ಮಗುವೆ
ಯೋಗ್ಯದ ಮಗುವೆ ಭಾಗ್ಯದ ಮಗುವೆ
ಓಯಮ್ಮ ಮಗುವೆ ಅರಚುವ ಮಗುವೆ
ತೂಗುವೆ ಮಗುವೆ ತೊಟ್ಟಿಲು ತೂಗುವೆ ಮಗುವೆ
ಜೋ ಜೋ ಜೋ ಎನ್ನ ಪ್ರೀತಿಯ ಮಗುವೆ ||

ನಲ್ವತ್ತನೇ ಸ್ನಾನ

ಹೆಣ್ಣು ಮಗುವಾದರೆ ಹುಟ್ಟಿದ ೩೯ನೇ ದಿವಸ, ಗಂಡು ಮಗುವಾದರೆ ೪೧ನೇ ದಿನ ಬಾಣಂತಿಗೆ ವಿಶೇಷ ಸ್ನಾನ ಮಾಡಿಸುವುದು ಪದ್ಧತಿ.  ಆ ದಿನ ಸ್ನಾನದ ಬಳಿಕ ಬಾಣಂತಿ ಹೊಸ ಸೀರೆಯುಟ್ಟು ರವಿಕೆ ತೊಟ್ಟು ತೆಂಗಿನಮರ, ಹಲಸಿನ ಮರಗಳಿಗೆ ನೀರೆರೆದು ಮನೆಯೊಳಗೆ ಬಂದು ಅಡುಗೆ ಕೋಣೆಗೆ ಪ್ರವೇಶಿಸುತ್ತಾಳೆ. ಈ ಸ್ನಾನದ ಏರ್ಪಾಡನ್ನು ಕೂಡ ಮಹಿಳೆಯರೇ ನಡೆಸುತ್ತಾರೆ.

ಮಗುವಿಗೆ ಅನ್ನ ಕೊಡುವುದು (ಅನ್ನ ಪ್ರಾಶನ)

ಮಗುವಿಗೆ ಮೊದಲ ಬಾರಿ ಅನ್ನ ಕೊಡುವ ದಿನವೂ ಪಾಣಾರ ಮಹಿಳೆಯರಿಗೆ ಸಂಭ್ರಮದ ದಿನ. ಆ ದಿನ ವಿಶೇಷವಾಗಿ ಅಕ್ಕಿ ಪಾಯಸ ಮಾಡುತ್ತಾರೆ. ಬಂಧುಗಳೆಲ್ಲ ಊಟಕ್ಕೆ ಸೇರುತ್ತಾರೆ. ಮಗುವಿಗೆ ಸ್ನಾನ ಮಾಡಿಸಿ ಹೊಸ ಬಟ್ಟೆ ತೊಡಿಸಿ ಕೂರಿಸಿ ಎಲ್ಲರೂ ಬಾಯಿಗೆ ಒಂದೊಂದು ಅಗುಳು ಅನ್ನ ಕೊಡುತ್ತಾರೆ.

ಕಜಂಬು (ಚೌಲ)

ಕಜಂಬು ಎಂದರೆ ಗಂಡು ಮಗುವಿನ ಕೂದಲು ಕತ್ತರಿಸುವ ಆಚರಣೆ. ನಿಶ್ಚಿತ ದಿನದಂದು ದೇವರಿಗೆ ಸ್ವಸ್ತಿಕಯಿಟ್ಟು ಮಗುವನ್ನು ಪಕ್ಕದ ಮಣೆಯಲ್ಲಿ ಕುಳ್ಳಿರಿಸುತ್ತಾರೆ. ಜಾತಿಯವನೊಬ್ಬ ಕೆನ್ನೆಗೆ ಕ್ಷಾರದ ಕತ್ತಿ (ಬಾಳು) ತಾಗಿಸುತ್ತಾನೆ. ಮತ್ತೆ ಕೂದಲು ಕತ್ತರಿಸುತ್ತಾನೆ. ಬಳಿಕ ಮಗುವನ್ನು  ಸ್ನಾನ ಮಾಡಿಸುತ್ತಾರೆ. ಮಗುವಿಗೆ ಹೊಸ ಅಂಗಿ ಬಟ್ಟೆ ತೊಡಿಸಿ ದೈವಗಳಿಗೆ ನಮಸ್ಕಾರ ಮಾಡಿಸುತ್ತಾರೆ. ಮಧ್ನಾಹ್ನ ಎಲ್ಲರೂ ಒಟ್ಟು ಕುಳಿತು ಊಟ ಮಾಡುತ್ತಾರೆ.

ಕಿವಿ ಚುಚ್ಚುವುದು

ಕಿವಿ ಚುಚ್ಚಲು  ಒಳ್ಳೆಯ ದಿನ ನೋಡುತ್ತಾರೆ. ಅಕ್ಕಾಸಾಲಿಗರಲ್ಲಿ ಹೋಗಿ ಹಿತ್ತಾಳೆ  ಇಲ್ಲವೆ ಬೆಳ್ಳಿಯ ಮುರ (ಕೊಡಂಗೆ) ಮಾಡಿಸಿ ತರುತ್ತಾರೆ. ದೇವರಿಗೆ  ಸ್ವಸ್ತಿಕ ಇಟ್ಟು ಪಕ್ಕದಲ್ಲಿ ಮಗುವನ್ನು ಕುಳ್ಳರಿಸುತ್ತಾರೆ. ಗುರಿಕಾರ ಸೂಜಿಯಿಂದ ಮಗುವಿನ ಕಿವಿ ಹಾಲೆಯನನ್ನು ತೂತು ಮಾಡಿ ಕಿವಿಯ ಆಭರಣ ತೊಡಿಸುತ್ತಾನೆ.

ಮದಿಮಲೆ ಮದಿಮೆ (ಋತುಶಾಂತಿ)

ಹೆಣ್ಣು ಮಕ್ಕಳು ಮೈ ನೆರೆದಾಗ ನಡೆಸುವ ಆಚರಣೆಗೆ ಮದಿಮಲ್ ಮದಿಮೆ ಎನ್ನುತ್ತಾರೆ.  ಇದು ಸಂಪೂರ್ಣವಾಗಿ ಹೆಂಗಸರಿಂದಲೇ ನಡೆಸಲ್ಪಡುವ ಆಚರಣೆ. ಹೆಣ್ಣು ಋತುಮತಿಯಾದುದು ತಿಳಿದೊಡನೆ ಆಕೆಯನ್ನು ಮನೆಯಿಂದ ಹೊರಗಿನ ಕೊಟ್ಟಿಗೆಯಲ್ಲಿ ಕುಳ್ಳಿರುವಂತೆ ಮಾಡುತ್ತಾರೆ. ಬೇರೆ ಕಟ್ಟಡವೇ ಇಲ್ಲದಿದ್ದರೆ ಆಕೆ ಒಂದು ಕಳೆ ಕುಳ್ಳರಿಸಿ ಹೊರಗಿನವರಿಗೆ ಕಾಣದಂತೆ ಸುತ್ತು ಅಡ್ಡ ಕಟ್ಟುತ್ತಾರೆ. ನಂತರ ಜಾತಿಯ ನಾಲ್ಕು ಜನ ಹೆಂಗಸರು ಅಕ್ಕಪಕ್ಕದ ಜಾತಿಯ ಮನೆಗಳಿಗೆ ಸುದ್ದಿ ಹರಡಿಸುತ್ತಾರೆ. ಅಲ್ಲಿನ ಹೆಂಗಸರೆಲ್ಲ ಒಟ್ಟು ಸೇರಿ ನಾಲ್ಕು ತೆಂಗಿನ ಕಾಯಿಗಳ ನಾರೆಬ್ಬಿಸಿ ಒಂದಕ್ಕೊಂದು ಜೋಡಿಸಿ ಕಟ್ಟಿ ಅದರ ಮೇಲೆ ಹುಡುಗಿಯನ್ನು ಕುಳ್ಳರಿಸುತ್ತಾರೆ. ಬಂದ ಹೆಂಗಸರು ಅವಳ ತಲೆಗೆ ವಿಳ್ಯದೆಲೆಯ ತುದಿಯಿಂದ ಎಣ್ಣೆ, ತೆಂಗಿನಕಾಯಿ ಹಾಲು ಎರೆಯುತ್ತಾರೆ. ನಂತರ ಮಣ್ಣಿನ ಕಲಶ (ಬಿಂದಿಗೆ)ದಿಂದ ಆಕೆಯ ತಲೆಗೆ ನೀರೆರೆಯುತ್ತಾರೆ.

ಋತುಮತಿಯಾದಾಗ ಮೂರನೇ ದಿವಸ ಅಂಗಳದಲ್ಲಿ ಭತ್ತ ಹರಡಿ ಅದರ ಮೇಲೆ ಒನಕೆ ಇಟ್ಟು ಒನಕೆಯ ಮೇಳೆ ಆಕೆಯನ್ನು ಕುಳ್ಳರಿಸಿ ಸ್ನಾನ ಮಾಡಿಸಿ, ಹೊಸ ಸೀರೆ, ರವಿಕೆ ತೊಡಿಸಿ ಅಂಗಳದ ಬದಿಯಲ್ಲಿರುವ ತೆಂಗಿನಮರ, ಹಲಸಿನ ಮರ ಮುಟ್ಟಿಸಿ ನಮಸ್ಕಾರ ಮಾಡಿಸುತ್ತಾರೆ. ಮತ್ತೆ ಮನೆಯೊಳಗೆ ಕರೆದುಕೊಂಡು ಬಂದು ಅಡುಗೆ ಪಾತ್ರೆ ಸೌಟುಗಳನ್ನು ಮುಟ್ಟಿಸಿ ನಮಸ್ಕಾರ ಮಾಡಿಸುತ್ತಾರೆ. ಈ ಕಾರ್ಯಕ್ರಮದಿಂದಾಗಿ ಇದಕ್ಕೆ ಕರಪತ್ತವುನೆ (ಮಡಕೆ ಹಿಡಿಸುವುದು)  ಎಂಬ ಹೆಸರು ಬಂದಿದೆ.  ಬಳಿಕ ಆಕೆಯನ್ನು ಜಗಲಿಯಲ್ಲಿ ಚಾಪೆ ಹಾಕಿ ಕುಳ್ಳಿರಿಸಿ ಆರತಿ ಎತ್ತುತ್ತಾರೆ. ಬಂದ ಹೆಂಗಸರು ಉಡುಗೊರೆ ನೀಡುತ್ತಾರೆ. ಮಧ್ಯಾಹ್ನ ಊಟದ ಏರ್ಪಾಡು ನಡೆಯುತ್ತದೆ. ಇದು ಫಲವಂತಿಕೆಯ ಆಚರಣೆ, ತೆಂಗಿನಕಾಯಿಗಳ ಮೇಲೆ ಕುಳ್ಳಿರಿಸುವುದು ಭತ್ತದ ಮೇಲಿಟ್ಟ ಒನಕೆಯಲ್ಲಿ ಕುಳ್ಳರಿಸುವುದು, ಫಲವಂತಿಕೆಯ ಕಲ್ಪಗಳು, ಭತ್ತ ಮತ್ತು ಒನಕೆ ಲೈಂಗಿಕ ಕ್ರಿಯೆಯನ್ನು ಸಾಂಕೇತಿಸುತ್ತವೆ.  ಮಡಿಕೆ ಮುಟ್ಟಿಸುವುದು ಮನೆಯ ಜವಾಬ್ದಾರಿಯನ್ನು ವಹಿಸಿಕೊಡುವ ಸಂಕೇತ. ಮನೆಯ ಜವಾಬ್ದಾರಿ ಹೊರುವುದು ಮತ್ತು ಸಂತಾನವನ್ನು ನೀಡುವುದು ಹೆಣ್ಣಿನ ಬದುಕಿನ ಉದ್ದೇಶಗಳು ಎಂಬುದು ನಮ್ಮ ಪೂರ್ವಜರ ಕಲ್ಪನೆಗಳು. ಈ ಕಲ್ಪನೆಗೆ ದೃಷ್ಟಾಂತಗಳಾಗಿ ಈ ಆಚರಣೆಗಳು ನಡೆಯುತ್ತವೆ.

ಮದುವೆ

ಮದುವೆ ಎಂದರೆ ಮನೆಯವರಿಗೆಲ್ಲ ಹಬ್ಬ. ಹೊರಗಿನ ವ್ಯವಸ್ಥೆ ಆಮಂತ್ರಣ ಪತ್ರ ವಿತರಣೆ ಎಲ್ಲ ಗಂಡಸರದ್ದಾದರೆ ಮನೆಯನ್ನು ಸ್ವಚ್ಛ, ಒಪ್ಪ, ಓರಣಗೊಳಿಸಿ ಸಿಂಗರಿಸಿ ಗೋಡೆಗಳನ್ನು ಸ್ವಚ್ಛಗೊಳಿಸಿ ಚಿತ್ತಾರೆ ಬಿಡಿಸುವುದು, ನೆಲೆ ಸಾರಿಸುವುದು, ವಸ್ತ್ರ, ಒಡವೆ ಖರಿದೀಸುವುದು, ಅಡುಗೆಯ ಸಿದ್ಧತೆ ನಡೆಸುವುದು ಇವೆಲ್ಲವೂ ಮಗಹಿಳೆಯರ ಕೆಲಸ. ಹೀಗಾಗಿ ಮದುವೆಯಲ್ಲಿ ಪುರುಷರಿಗಿಂತ ಮಹಿಳೆಯರಿಗೆನೇ ಹೆಚ್ಚು ಜವಾಬ್ದಾರಿ ಮತ್ತು ಸಂಭ್ರಮ.

ವೈದಿಕ ಸಂಪ್ರದಾಯದ ಮದುವೆಗಳನ್ನು ಬಿಟ್ಟರೆ ಉಳಿದ ವೈವಾಹಿಕ ಪದ್ಧತಿಗಳೆಲ್ಲ ಒಂದಕ್ಕೊಂದು ಭಿನ್ನ. ಹಿಂದಿನ ಕಾಳದಲ್ಲಿ ಹೆಚ್ಚಿನ ಬುಡಕಟ್ಟು ಜನಾಂಗಗಳ ಮದುವೆಗಳಲ್ಲಿ ಹಾಡು-ಕುಣಿತಗಳೇ ಪ್ರಧಾನವಾಗಿತ್ತು. ಕೊಡವರ ಮದುವೆಗಳು ತುಳುನಾಡಿನ ಮೊಗ್ಗೇರರ ಮದುವೆಗಳು ಇತ್ತೀಚಿನವರೆಗೂ ಹಾಡು-ಕುಣಿತಗಳ ಮೂಲಕವೇ ನಡೆಯುತ್ತಿದ್ದವು. ನಲಿಕೆ ಪಾಣಾರ ವಿವಾಹಗಳು ಕೂಡ ಇದೇ ರೀತಿಯಲ್ಲಿ ನಡೆಯುತ್ತಿದ್ದಿರಬಹುದು. ಆ ಬಳಿಕ ಕುಣಿತವನ್ನು ಬಿಟ್ಟು ಬರೇ ಹಾಡನ್ನು ಮಾತ್ರ ಉಳಿಸಿಕೊಂಡರು. ಇತ್ತೀಚೆಗೆ ಹಾಡುಗಳು ಕೂಡ ಮಾಯವಾಗಿ ಬರಿಯ ಆಚರಣೆಗಳು ಮಾತ್ರ ಉಳಿದಿವೆ.

ವರನ ಕಡೆಯವರು ಮೊದಲಿಗೆ ವಧು ಪರೀಕ್ಷೆಗಾಗಿ ವಧುವಿನ ಮನೆಗೆ ಹೋಗುತ್ತಾರೆ. ಹೀಗೆ ಹೋಗುವಾಗ ಗಂಡಸರ ಜೊತೆಗೆ ಹೆಂಗಸರೂ ಕೂಡಾ ಹೋಗುವುದು ಪದ್ಧತಿ. ಹೆಣ್ಣು ಒಪ್ಪಿಗೆಯಾದರೆ ಹೆಣ್ಣಿನ ಕಡೆಯವರನ್ನು ತಮ್ಮ ಮನೆಗೆ ಬರುವಂತೆ ಗಂಡಿನ ಮನೆಯವರು ಆಹ್ವಾನಿಸುತ್ತಾರೆ. ಹೆಣ್ಣಿನ ಕಡೆಯವರು ಗಂಡಿನ ಮನೆಗೆ ಬಂದು ಒಪ್ಪಿಗೆ ಸೂಚಿಸಿದ ಬಳಿಕ ಮದುವೆ ನಿಶ್ಚಯ ವಧುವಿನ ಮನೆಯಲ್ಲಿ ನಡೆಯುತ್ತದೆ. ಇದಕ್ಕೆ “ಬದ್ಧ” ಎನ್ನುತ್ತಾರೆ. ಆ ದಿನ ಮದುವೆಗೆ ದಿನ ನಿಶ್ಚಯವಾಗುತ್ತದೆ. ನಲಿಕೆಯರವರಲ್ಲಿ ಹಿಂದೆ ವಧುದಕ್ಷಿಣೆ ಪದ್ಧತಿ ಇತ್ತು. ಇತ್ತೀಚೆಗೆ ಅದು ವರದಕ್ಷಿಗೆಯಾಗ ಪರಿವರ್ತನೆಗೊಂಡಿದೆ. ಬಹುಪತ್ನಿತ್ವ ಪದ್ದತಿಯೂ ಇದೆ. ಸಗೋತ್ರ ವಿವಾಹ ನಿಷೇಧ. ಈ ಎಲ್ಲ ವಿಧಿ-ನಿಷೇಧಗಳನ್ನು ಪರಸ್ಪರ ಮನವರಿಕೆ ಮಾಡಿಕೊಂಡು ಮದುವೆಯನ್ನು ನಿಶ್ಚಯಿಸಲಾಗಿದೆ. ಆ ದಿನ ತೆರವಿನ ಹಣವನ್ನು ನಿರ್ಧರಿಸಲಾಗುತ್ತದೆ. ವರನು ವಧುವಿಗೆ ಕೊಡುವ ವಧುದಕ್ಷಿಣೆಯೇ ತೆರವಿನ ಹಣ. ಹಿಂದೆ ಇದು ಸಾಮಾಣ್ಯವಾಘಿ ೧೬, ೧/೪ ರೂಪಾಯಿಯಾಗಿತ್ತು. ಈಗ ಈ ವಧುದಕ್ಷಿಣೆಯ ದರ ಹೆಚ್ಚಾಗುತ್ತಾ ಹೋಗಿದೆ. ಮದುವೆಗಿಂತ ಮುಂಚಿತವಾಗಿ ಗಂಡಿನ ಕಡೆಯವರು ಹೂ, ಸೀರೆ, ವಿಳ್ಯ-ಅಡಿಕೆಯೊಂದಿಗೆ ಈ ತೆರವಿನ ಹಣವನ್ನು ಹೆಣ್ಣಿನ ಕಡೆಯವರಿಗೆ ಒಪ್ಪಿಸುವುದು ಪದ್ಧತಿ. ಇತ್ತೀಚೆಗೆ ವರನ ಅಕ್ಕ ತಂಗಿಯರು ಬದ್ಧದ ದಿನ ಹೆಣ್ಣಿಗೆ ಉಂಗುರ ತೊಡಿಸುವ ಪದ್ಧತಿ ಬಂದಿದೆ. ಬದ್ಧದ ದಿನ ಬಂದ ನೆಂಟರಿಷ್ಟರಿಗೆಲ್ಲ ಪಾಯಸದೂಟದ ವ್ಯವಸ್ಥೆಯನ್ನು ಹೆಣ್ಣಿನ ಕಡೆಯವರು ನಡೆಸುತ್ತಾರೆ.

ಮದುವೆಯನ್ನು ಹೆಣ್ಣಿನ ಮನೆಯಲ್ಲಿ ನಡೆಸುವುದು ಪದ್ಧತಿ. ಮದುವೆಯ ಹಿಂದಿನ ದಿನ ವಧುವಿನ ಮನೆಯಲ್ಲಿ ಕನ್ಯಾಕಂಬ ನೆಟ್ಟು ಗುರು ಉಳ್ಳಾಲ್ತಿ ಆರಾಧನೆ ನಡೆಸಲಾಗುತ್ತದೆ. ಮದುವೆಯಾಘಿ ಮನೆಯ ಎದುರು ಅಂಗಳಕ್ಕೆ ಹಾಕಿದ ಚಪ್ಪರದಲ್ಲಿ ಒಂದು ಕಂಬವನ್ನು ಹೆಚ್ಚು ಸಿಂಗರಿಸುತ್ತಾರೆ. ಸಿಂಗರಿಸಲ್ಪಟ್ಟ ಈ ಕಂಬಕ್ಕೆ ಗುರಿಕಾರ ಪಾಳೆ ಮರದ ಒಂದು ರೆಂಬೆಯನ್ನು ಕಟ್ಟುತ್ತಾನೆ. ಇದನ್ನು ಕನ್ಯಾಕಂಬ ಎನ್ನುತ್ತಾರೆ. ಮಹೂರ್ತದ ಕಂಬವೆಂಬ ಹೆಸರೂ ಇದಕ್ಕೆ ಇದೆ. ಇದನ್ನು ಪಾಳೆಶಾಸ್ತ್ರ ಎಂದೂ ಕರೆಯುತ್ತಾರೆ. ವಧುವನ್ನು ಸ್ನಾನ ಮಾಡಿಸಿ ಹೊಸ ಬಟ್ಟೆ ತೊಡಿಸಿ ಕನ್ಯಾಕಂಬದ ಬಳಿ ಕರೆ ತರುತ್ತಾರೆ. ಕಂಬದ ಕೆಳಗೆ ಒಂದು ಸ್ವಸ್ತಿಕ, ಕಲಶ, ಕನ್ನಡಿ, ದೀಪ, ವಳ್ಯ ಮತ್ತು ಗುರು ಪಣವು ಎಂದು ಹೇಳಲಾಗುವ ದಕ್ಷಿಣೆಯಾಗಿ ಒಂದು ಕಾಳು ರೂಪಾಯಿ ಇಡುತ್ತಾರೆ. ಗುರಿಕಾರ ಪ್ರಾರ್ಥನೆ ಮಾಡಿಕೊಂಡ ಬಳಿಕ ಮುತ್ತೈದೆಯರು ಕಂಬಕ್ಕೆ ಆರತಿ ಬೆಳಗುತ್ತಾರೆ. ಗುರಿಕಾರ ನೂಲಿನಲ್ಲಿ ಪೋಣಿಸಿದ ಕರಮಣಿ ಸರವನ್ನು ಕನ್ಯಾಕಂಬಕ್ಕೆ ಕಟ್ಟುತ್ತಾನೆ. ಆ ಬಳಿಕ ಇನ್ನೊಂದು ಕರಿಮಣಿ ಸರವನ್ನು ವಧುವಿನ ತಾಯಿ, ಅಕ್ಕ, ಇಲ್ಲವೇ ಗುರಿಕಾರನ ಪತ್ನಿ ವಧುವಿನ ಕುತ್ತಿಗೆಗೆ ಕಟ್ಟುತ್ತಾರೆ. ಹಿಂದೆ ಈ ಕ್ರಮವಿತ್ತು. ಆದರೆ ಈಗ ಈ ಪದ್ಧತಿಯನ್ನು ಕೈ ಬಿಡಲಾಗಿದೆ. ಕನ್ಯಾಕಂಬ ಪೂಜೆಯಾದ ಬಳಿಕ ಗುರು ಉಳ್ಳಾಲ್ತಿಯ ಕೋಲ ಇಲ್ಲವೇ ಸಾಮಾನ್ಯ ಆರಾಧನೆ ನಡೆಯುತ್ತದೆ.

ವರನ ಮನೆಯಲ್ಲಿ ಕೂಡಾ ಇದೇ ರೀತಿ ಕನ್ಯಾಕಂಬ ಪೂಜೆ, ಪೂಜೆ, ಗುರು ಉಳ್ಳಾಲ್ತಿ ಆರಾಧನೆ  ನಡೆಸಿ ಊಟವಾದ ಬಳಿಕ ದಿಬ್ಬಣ ಹೊರಡುತ್ತಾರೆ. ನಲಿಕೆಯವರಲ್ಲಿ ಸಾಮಾನ್ಯವಾಗಿ ವಿವಾಹ ವಿಧಿಗಳು ಮುಂಜಾನೆ ನಡೆಯುತ್ತವೆ. ವರನ ದಿಬ್ಬಣ ವಧುವಿನ ಮನೆಗೆ ತಲುಪಿದೊಡನೆ ವರನ ಕಡೆಗೆ ಗುರಿಕಾರ ವಧುವಿನ ಕಡೆಯವರಿಗೆ “ದಿಬ್ಬಣೊತ ಕೂಡಿಯಾಲ್ ಬತ್ತೊ” (ದಿಬ್ಬಣದಲ್ಲಿ ಕೂಡಿದ ಜನರು ಬಂದೆವು) ಎಂದು ಸೂಚನೆ ನೀಡುತ್ತಾನೆ.  ಪಾಡ್ದನದಲ್ಲಿ ಮದುವೆಯ ಒಂದು ವರ್ಣನೆ ಹೀಗಿದೆ, “ಲತ್ತ್ ಪಿಂಗಾರ ಅರಿ ಕುಡ್ತ್ ಬತ್ತಿನಂಗೆ ಪೊಣ್ಣ ಕೋಡಿಡ್ ದಿಬ್ಬಣೊದ ಮಂದೆ ನಿರೆದ್ ಬರ್ಪುಂಡು, ಪಿಜಿನ್ ದಾರೆ ಪತ್ತಿನಂಗೆ ಆಣಕೋಡಿದ ದಿಬ್ಬಣದ ಮಂದೆ ನಿರೆದ್ ಬತ್ತ್ಂಡ್, ಕಾರ‍್ಗ್ ನೀರ್ ಕೊರಿಯಾರ್, ಪರಿಯರೆ ಆಸರೊ ಕೊರೆಯೆರ್, ಎದ್ರ‍್ಗ್ ಆರತಿ ಕೊಂಡು ಬತ್ತೆರ್. ದಿಬ್ಬಣೊ ದೊಂಪ ಪೊಗ್ಗುಂಡು. ಉಣಸ್ ದುಂಬೊ ದಾರೆ  ದುಂಬೊ ಕೇಂಡೆರ್. ಉಣಸ್ ಬಲ್ಮನ್ ಆಂಡ್ ಬೊಳ್ಳಿ ಏರ‍್ಡ್ ಬೊಳ್ಯರಾನಗ ಬೊಳ್ಳೆರೆ ಮಾಣಿಗ ಸೊರ ದನಿ ಕೊರ‍್ನಗ ಮದಿಮಲೆನ್ ಜಪುಡಾದ್ ಕೈಟೆನೆ ಪತ್ತೊಂದು ದೊಂಪ ಪೊಗ್ಗಯೆರ್. ದಾರೆ ಮಂಟಮೆ ಸಿಂಗಾರ ಮಲ್ತ್ ದ್ ಮದಿಮಾಯೆ ಮದಿಮಲೆನ್ ಪಾವಡೆ ಬಲಿ ಬರ್ಪದ್ ದಾರೆದ ಮಂಟಮೆಡ್ ಕುಲ್ಲಾಯೆರ್ ಆಣ್-ಪೊಣ್ಣು ಒಚ್ಚಿದ್ ಕೊರೆಯರ್ (ಎಳತ್ತು ಪಿಂಗಾರದ ಅಕ್ಕಿ ಉದುರಿ ಬಂದಂತೆ ಹೆಣ್ಣಿನ ಕಡೆಯಲ್ಲಿ ದಿಬ್ಬಣದ ಜನ ನೆರೆದರು. ಇರುವೆ ಸಾಲುಗಟ್ಟಿ ಬಂದಂತೆ ವರನ ದಿಬ್ಬಣದ ಜನ ಬಂದರು. ಕಾಲಿಗೆ ನೀರು ಕೊಟ್ಟರು. ಕುಡಿಯಲು ಬಾಯಾರಿಕೆ ಕೊಟ್ಟರು. ಆರತಿ ಬೆಳಗಿದರು. ದಿಬ್ಬಣದ ಜನ ಚಪ್ಪರ ಸೇರಿದರು. ಊಟ ಮೊದಲೋ ಧಾರೆ ಮೊದಲೋ ಎಂದು ಕೇಳಿದರು. ಊಟ ಗಮ್ಮತ್ತಾಯಿತು. ಬೆಳ್ಳಿ (ಧ್ರುವ ನಕ್ಷತ್ರ) ಮೂಡುವ ಮೊದಲು ಮುಂಜಾಣೆ ಬೊಲ್ಯರ ಮಾಣಿಗ ಹಕ್ಕಿ ಕೂಗುವ ಹೊತ್ತಿಗೆ ಮದುಮಳನ್ನು ಸಿಂಗರಿಸಿ ಧಾರೆ ಮಂಟಪಕ್ಕೆ ಕರೆತಂದರು. ಮಂಟಪದಲ್ಲಿ  ಕುಳ್ಳರಿಸಿದರು. ಗಂಡು-ಹೆಣ್ಣಿಗೆ ಕೈಮುಟ್ಟಿ ಕೈದಾರೆ, ಮೈಮುಟ್ಟಿ ಸೇಸೆ ನಡೆಸಿದರು. ಊಟ ನಡೆಯಿತು. ಊಟವಾದ ಬಳಿಕ ಹೆಣ್ಣೊಪ್ಪಿಸಿ ಕೊಟ್ಟರು.)

ಈ ಎಲ್ಲಾ ಕ್ರಿಯೆಗಳು ನಡೆಯುತ್ತಿರುವಾಗ ಪಾಣಾರ ಮಹಿಳೆಯರು ಹಾಡು ಹಾಡುತ್ತಲೇ ಕಾರ್ಯಕ್ರಮಗಳನ್ನು ಮುಂದುವರೆಸುತ್ತಾರೆ. ಈ ಹಾಡುಗಳು ಹಲವು ಕನ್ನಡ ಭಾಷೆಯಲ್ಲಿವೆ. ಇನ್ನು ಕೆಲವು ತುಳು ಭಾಷೆಯಲ್ಲಿವೆ.

ವರನ ದಿಬ್ಬಣ ಚಪ್ಪರದೊಳಗೆ ಬರುವಾಗ ವಧುವಿನ ಕಡೆಯ ಹೆಂಗಸರು ಆರತಿ ಬೆಳಗುವ ಹಾಡು

ದಿಬ್ಬಣದವರು ಬಂದಿರ್ವರು ಚಪ್ಪರದೊಳಗೆ
ಚಪ್ಪರದೊಳಗೆ ಚಾಪೆಯುಂಟು
ಚಾವಡಿಯೊಳಗೆ ದೀಪವುಂಟು
ಎತ್ತಿದರಾರತಿ – ಬೆಳಗಿರೆ ನಾರಿಯರು ||
(ಈ ಸೋಬಾನೆಯನ್ನು ಮೂರು ಸಲ ಹಾಡುವರು)

ಮದುಮಗಳಿಗೆ ಮದುಮಗನ ಕಡೆಯ ಮಹಿಳೆಯರು ಹೂಸೀರೆ ಒಪ್ಪಿಸಿದರು. ಆಗ ಹೇಳುವ ಹಾಡು

ಬಣ್ಣದ ಬಾಚಣಿಗೆಗೆ ಚಿನ್ನದ ಸೀರಣಿಕೆ
ಎಡಕೆನ್ನೆ ಈಸಿದಳು ಬಲಕೆನ್ನೆ ಬಾಚಿದಳು
ಚಂಚದಾರತಿಯ ಬೆಳಗಿರೆ |ಸೋಬಾನೆ|
ಎಡಕೈಲಿ ಕನ್ನಡಿಯು ಬಲಕೈಲಿ ಕುಂಕುಮವು
ಕನ್ನಡಿ ನೋಡಿದಳು ಕುಂಕುಮ ಹಣೆಗಿಟ್ಟಳು
ಬೆಳಗಿರೆ ಚಂದದಾರತಿಯ |ಸೋಬಾನೆ|
ಮಲ್ಲಿಗೆ ಹೂವ ತಂದು ಪೂಪೂಜೆ ಮಾಡುವಳು
ಚಂದಕ್ಕೆ ಹೂವ ತಂದು ಹೂಪೂಜೆ ಮಾಡುವಳು
ಜಾಜಿಯ ಹೂವ ತಂದು ಹೂ ಪೂಜೆ ಮಾಡುವಳು
ಚಂದಕ್ಕೆ ಹೂವ ಮುಡಿಸುವಳು | ಶೋಬಾನೆ|
ಪಿಂಗಾರ ಹೂವ ತಂದು ಹೂಪೂಜೆ ಮಾಡುವಳು
ಚಂದಕ್ಕೆ ಹೂವ ತಂದು ಮುಡಿಸುವಳು| ಶೋಬಾನೆ|
ಸೀರೆಯನುಡಿಸುವರು ರವಿಕೆ ತೊಡಿಸುವರು
ಸಿಗಾರಗೊಳಿಸುವರು ಬಂಗಾರ ತೊಡಿಸುವರು
ಚಂದನದಾರತಿಯ ಬೆಳಗಿರೇ |ಸೋಬಾನೆ|
ಆ ಬಳಿಕ ಮದುಮಗಳಿಗೆ ಆರತಿ ಬೆಳಗುತ್ತಾರೆ.
ಪನ್ನೀರ ಚೆಲ್ಲುತಲಿ  ಅರಿಶಿನ ಕೆನ್ನೆಗೆ ಹಚ್ಚುತಲಿ
ಕುಂಕುಮ ಬೊಟ್ಟಿಟ್ಟು ಎತ್ತಿದರಾರತಿಯ
ಆರತಿಯ ಬೆಳಗಿರೆ |ಸೋಬಾನೆ|

ಚಪ್ಪರದೊಳಗೆ ಬಂದ ಮದುಮಗನನ್ನು ಆತನ ಸೋದರಭಾವ ಇಲ್ಲವೇ ಗುರಿಕಾರ ಕೈ ಹಿಡಿದು ತಂದು ಮಂಟಪದೊಳಗಿಟ್ಟಿರುವ ಬೆಂಚಿನ ಮೇಲೆ ಕುಳ್ಳಿರಿಸುತ್ತಾರೆ. ವಧುವಿನ ಸೋದರಮಾವ ವಧುವನ್ನು ಕರೆದುಕೊಂಡು ಬಂದು ಅದೇ ಬೆಂಚಿನ ಮೇಳೆ ಪಕ್ಕದಲ್ಲಿ ಕುಳ್ಳಿರಿಸುತ್ತಾರೆ. ವಧುವಿನ ತಲೆಮೇಲೆ ಬಿಳಿ ವಸ್ತ್ರವೊಂದನ್ನು ಹಾಕುತ್ತಾರೆ. ಹೆಣ್ಣು ಮತ್ತು ಗಂಡಿನ ತಂದೆ-ತಾಯಿ ವಧು-ವರರನ್ನು ಕನ್ಯಾಕಂಬಕ್ಕೆ ಮೂರು ಸುತ್ತು ಬರಿಸಿ ನಮಸ್ಕಾರ ಮಾಡಿಸಿ ಕನ್ಯಾಕಂಬಕ್ಕೆ ಎದುರು ನಿಲ್ಲಿಸಿ ಧಾರೆ ಎರೆಯುತ್ತಾರೆ. ನೀರು ಕೆಳಗೆ ಬೀಳದಂತೆ ಕೈಗಳಡಿ ಹೆಣ್ಣಿನ ತಾಯಿ ತಟ್ಟೆ ಹಿಡಿಯುತ್ತಾಳೆ. ಧಾರೆ ಎರೆದ ಮೇಲೆ ಗಂಡು ಹೆಣ್ಣಿನ ಕುತ್ತಿಗೆಗೆ ತಾಳಿ ಇರುವ ಕರಿಮಣಿ ಸರ ಕಟ್ಟುತ್ತಾನೆ. ಬಳಿಕ ವಧು ವರರು ಹಾರ ವಿನಿಮಯ ಮಾಡಿಕೊಳ್ಳುತ್ತಾರೆ. ಬಳಿಕ ವಧೂ-ವರರನ್ನು ಬೆಂಚಿನ ಮೇಲೆ ಕುಳ್ಳರಿಸುತ್ತಾರೆ. ನೆರೆದು ಬಂದ ಬಂಧುಗಳು ಅವರ ಕಾಳಿನಿಂದ ತಲೆಯವರೆಗೂ ಎರಡೂ ಕೈಗಳಿಂದ ಅಕ್ಕಿ ಪ್ರೋಕ್ಷಿಸಿ ಸೇಸೆ ಮಾಡುತ್ತಾರೆ. ಉಡುಗೊರೆ, ಹಣ ನೀಡುತ್ತಾರೆ. ನಂತರ ಹೆಂಗಸರು ಆರತಿ ಮಾಡುತ್ತಾರೆ. ಊಟ ನಡೆಯುತ್ತದೆ. ಊಟವಾದ ಬಳಿಕ ಹೆಣ್ಣಿನ ಕಡೆಯವರು ವಧುವನ್ನು ಗಂಡಿನ ಕಡೆಯವರಿಗೆ ಒಪ್ಪಿಸಿಕೊಡುತ್ತಾರೆ.

ಧಾರೆ ಎರೆಯುವಾಗ ಹಾಡುವ ಹಾಡು

ಹತ್ತು ತಿಂಗಳು ತುಂಬಿದಳು ತಾಯಿ
ಹೆತ್ತು ಮಗಳನು ಸಾಕಿದಳು
ಹನ್ನೊಂದು ವರ್ಷ ಸಲಹಿದನು ತಂದೆ
ಕನ್ಯೆಯ ಕುಮಾರಗೆ ಧರ್ಮಧಾರೆ
ಎರೆಯಲು ಕೈಯ ನೀಡಿದರು ||
ಈ ಹಾಡನ್ನು ಮೂರು ಸಲ ಹಾಡುತ್ತಾರೆ
ಹೆಣ್ಣೊಪ್ಪಿಸಿಕೊಡುವ ಹಾಡು
ಅತ್ತೆಯ ಮನೆಗೆ ನೆರಳಾಗಿರಮ್ಮ ಮಗಳೇ
ನಿನ್ನ ಸುಗುಣ ಸಮ್ಮೋಹನ ಮರೆಯದಿರು ||ಸೋಬಾನೆ||

ಮದುವೆ  ಕಳೆದ ಬಳಿಕ ವಧೂ ವರರು ಮನೆಗೆ ದಿಬ್ಬಣ ಸಹಿತ ಹಿಂದಿರುಗುತ್ತಾರೆ. ವರನ ಮನೆಯಲ್ಲಿ ಮತ್ತೆ ವಧೂ ವರರಿಗೆ ಸೇಸೆ ಹಾಕಿ ಉಡುಗೊರೆ ನೀಡುವ ಕ್ರಮವಿದೆ. ನಂತರ ಊಟ. ಊಟಕ್ಕೆ ಕುಳಿತ ವರನಿಗೆ ವಧು ಬಡಿಸುತ್ತಾಳೆ. ಬಡಿಸಿದ ಸಟ್ಟುಗದಲ್ಲಿ ವರನು ಐದು ರೂಪಾಯಿ ಇಡುವ ಕ್ರಮವಿದೆ. ಊಟವಾದ ಬಳಿಕ ವರನು ತನ್ನ ಕುತ್ತಿಗೆಯಲ್ಲಿ ಕರಿಮಣಿಯನ್ನು ಅಂಗಳದ ಪಕ್ಕದಲ್ಲಿರುವ ತೆಂಗಿನ ಮರಕ್ಕೆ ಅಥವಾ ಹಲಸಿನ ಮರಕ್ಕೆ ಕಟ್ಟುತ್ತಾನೆ. ವರನ ಮನೆಯಲ್ಲಿ ಮದುಮಕ್ಕಳು ಎರಡು ದಿವಸ ನಿಂತು ಬಳಿಕ ವಧುವಿನ ಮನೆಗೆ ಹೋಗುತ್ತಾರೆ. ಹೋಗುವಾಗ ವಧು ತನ್ನ ಜೊತೆ ಒಂದು ಪಾತ್ರೆಯಲ್ಲಿ ತುಪ್ಪ ಕೊಂಡೊಯ್ಯುವುದು ಸಂಪ್ರದಾಯ. ವಧು-ವರರು ಮತ್ತೆ ವರನ ಮನೆಗೆ ಬಂದ ಮೇಲೆ ಅಂಗಳದ ಚಪ್ಪರ ತೆಗೆಯುತ್ತಾರೆ.

ತುಳುವಿನಲ್ಲಿರುವ ಒಂದು ಮದುವೆಯ ಹಾಡು

ಎಲ್ಲೊಂಜಿ ಪೊಣ್ಣಗ್ ಪಾತೆರ ಕೊರೆಯರ್
ಎಂಕಲೆನ ಅಲೆಗ್ ಎಲ್ಯೊಂಜಿ ಆಣನ್
ಮೋನೆನೆ ಕರ್ಪು ಅಪಿನೆ ಆತೆಗೆ
ಪಾತೆರ ಕೊರಿಯೆರ್ ಮದ್ಮೆ ಸಾದಿ ಪಾತೆರಿಯೆರ್
ಬಾಲೆಲ ಮದ್ಮಾಯೆ ಕಿನ್ನಿ ಮದಿಮಾಯೆ
ಆ…. ಪೊಣ್ಣುಲೆನ್  ತೂಯೆನ ಕಿನ್ನಿ ಮದಿಮಾಯೆ
ಪೊದುಲಾನೆ ಪತ್ಯೆನ ಕಿನ್ನಿಮದಿಮಾಯೆ
ಪೂಲು ಬಚ್ಚಿರೆ ಪಗತೆನ ಕಿನ್ನಿ ಮದಿಮಾಯೆ
ಪೊಣ್ಣುಲೆಡ್ ಪೊಣ್ಣುಗೆ ಕಿನ್ನಿ ಮದಿಮಾಳ್
ಬರೊಡುಂದು ಬರುವಲೊ ಕಿನ್ನಿ ಮದಿಮಾಲ್
ಮದಿಮೆಗ್ ಆದಿ ಕುದಿ ದೀಯೆರಾ ಮದಿಮೆಗ್
ಬೊಳ್ಳಿಲಾನೆ ಊಡುದು ಬೊಳ್ಳರಾನೆ ಬುಲಿತ್ ದ್
ನಿಕ್ಕ್ ಬೊಲ್ಟುಲಾ ಆನಗ ಕಿನ್ನಿಮದಿಮಾಯ
ಆ…… ಮುತ್ತುಡಲಾ ದೇಸೆ ಆವೊಡೇ ಮದಿಮಾಯ
ಆ…. ಮುತ್ತುಡಲಾ ದೇಸೆ ಆವೊಡೇ ಮದಿಮಾಲೆ
ಪಕಲೊದ ಆರತಿ ಕಿನ್ನಿ ಮದಿಮಾಯಗ್
ಮುತ್ತುದ ಆರತಿ ಕಿನ್ನಿ ಮದಿಮಾಯ
ಗುರುವಾರ ಬರೊಡಿಯಾ ಕಿನ್ನಿ ಮದಿಮಾಯ
ದಿಬ್ಬಣಡ್  ಬರೊಡಿಯಾ ಕಿನ್ನಿ ಮದಿಮಾಯ
ದಿನಮಾನ ದೀತೆರ್ ಯಾ ಕಿನ್ನಿ  ಮದಿಮಾಯ
ಬೊಳ್ಳಿ ಮೂಡ್ದು ಬೊಳ್ಪು ಆನಗ ಮದಿಮಾಯ
ಮಾಣಿಗ ಸೊರೊದನಿ ಕೊರ್ನಗ ಮದಿಮಾಐ
ಮುತ್ತುಡಲಾ ದೇಸೆ ಕಿನ್ನಿಮದಿಮಾಯ
ಮೈಮುಟ್ಟು ಮೈದೇಸೆ ಕಿನ್ನಿಮದಿಮಾಯಗ್
ಕೈಮುಟ್ಟು ಕೈಧಾರೆ ಕಿನ್ನಿ ಮದಿಮಾಳೆಗ್
ಎಂಕಲು ಪೋಪೆಂದೆರ್ ಕಿನ್ನಿ ಮದಿಮಾಯ ||
(ಸಣ್ಣ ಪ್ರಾಯದ ಹೆಣ್ಣಿಗೆ ಮಾತು ಕೊಟ್ಟರು
ನಮ್ಮ ಹುಡುಗಿಗೆ ಸಣ್ಣ ಮದುಮಗನಿಗೆ
ಆತನ ಮುಖ ಇನ್ನೂ ಕಪ್ಪೇರುತ್ತದಷ್ಟೇ (ಗಡ್ಡೆಮೀಸೆ)
ಮಾತು ಕೊಟ್ಟ ಮದುವೆ ದಾರಿ ಹಿಡಿದರು
ಸಣ್ಣ ಮದುಮಗ ಇನ್ನೂ ಸಣ್ಣ ಬಾಲಕ
ಆ ……. ಹೆಣ್ಣನ್ನು ನೋಡಿದೆಯಾ ಸಣ್ಣ ಮದುಮಗಾ
ಬೀಗತಿಗೆ ಮಾಡಬಯಸಿದೆಯಾ ಸಣ್ಣ ಮದುಮಗ
ವೀಳ್ಯ ಬದಲಿಸಿ ಕೊಂಡೆಯಾ ಸಣ್ಣ ಮದುಮಗ
ಹೆಣ್ಣುಗಳಲ್ಲಿ ಹೆಣ್ಣು ಸಣ್ಣ ಮದುಮಗಳು
ಬಾಳಲೆಂದು ಬರುತ್ತಾಳೆ ಸಣ್ಣ ಮದುಮಗಳು
ಮದುವೆಗೆ ಮುಹೂರ್ತ ನಿಶ್ಚಯಿಸಿದರು
ಬೆಳ್ಳಿ ಮೂಡುವಾಗ ಬೊಳ್ಳರಾಣಿ ಹಕ್ಕಿ ಕೂಗುವಾಗ
ನಿಮಗ ಬೆಳಗಾಗುವಾಗ ಸಣ್ಣ ಮದುಮಗ
ಆ… ಮುತ್ತಿನ ಸೇಸೆ ಆಗಬೇಕೆ ಮದುಮಗ
ಆ….. ಮುತ್ತಿನ ಸೇಸೆ ಆಗಬೇಕಲ್ಲಾ ಮದುಮಗಳೇ
ಹವಳದ ಆರತಿ ಸಣ್ಣ ಮದುಮಗನಿಗೆ
ಮುತ್ತಿನ ಆರತಿ ಸಣ್ಣ ಮದುಮಗನಿಗೆ
ಗುರುವಾರ ಬರಬೇಕು ಸಣ್ಣ ಮದುಮಗಳಿಗೆ
ದಿಬ್ಬಣದಲ್ಲಿ ಬರಬೇಕು ಸಣ್ಣ ಮದುಮಗ
ಮುಹೂರ್ತ  ಇಟ್ಟಿದ್ದಾರೆ ಸಣ್ಣ ಮದುಮಗ
ಬೆಳ್ಳಿ ಮೂಡುವಾಗ ಬೆಳಗು ಆಗುವಾಗ
ಮಾಣಿಗ ಸ್ವರವೆತ್ತುವಾಗ ಮದುಮಗ
ಮುತ್ತಿನ ಸೇನೆ ಸಣ್ಣ ಮದುಮಗ
ಮೈಮುಟ್ಟು ಮೈಸೇಸೆ ಸಣ್ಣ ಮದುಮಗನಿಗೆ
ಕೈಮುಟ್ಟಿ ಕೈಧಾರೆ ಸಣ್ಣ ಮದುಮಗಳಿಗೆ
ನಾವೆಲ್ಲ ತೆರಳುವೆವು ಎಂದರು ಸಣ್ಣ ಮದುಮಗ

ಮದುವೆಗೆ ಸಂಬಂಧಪಟ್ಟಂತೆ ಸೋಬಾನ ಹಾಡುಗಳಲ್ಲದೆ ಇನ್ನಿತರ ಹಾಡುಗಳನ್ನೂ ನಲಿಕೆಯ ಮಹಿಳೆಯರು ರಚಿಸಿದ್ದಾರೆ.

ತಂದನಾರೆ ತಾನಾರೆ ತಂದನಾರೆ ತಾನಾರೆ
ಸಾದಿಡ್ ಇಲ್ಲ್ ಕಟ್ಟೆರ್ ಅಮ್ಮೇರ್ ಪಂಡಿನಿ
ಸಾದಿಡ್ ಇಲ್ಲ್ ಕಟ್ಯೇರ್ ಆಮ್ಮೇರ್ ಪಂಡಿನಿ
ಪೊರ್ಲುಲಾ ಪೊಣ್ಣು ಕನಯೆರೆ ಏರ್ ಪಂಡಿನಿ
ಪೊರ್ಲುಲಾ ಪೊಣ್ಣು ಕನಯೆರೆ ಅಪ್ಪೆರ್ ಪಂಡಿನಿ ||
ಪಾಡ್ದಲೇ ಪೊಣ್ಣು ಪಟ್ಟೆ ರವಕೆ
ತುತ್ತುದಲೇ ಪೊಣ್ಣು ಜಾಗಿನ ಪಟ್ಟೆ
ಎಡತ ಕೆಬಿಕ್ ಎಣ್ಣೆ ಓಲೆ
ಬಲತ್ ಕೆಬಿಕ್ ಎಸಲ್ ಬುಗುಡಿ
ತರೆಬಾರ್ ದಿತ್ತಲ್ ಮುತ್ತು ಬೈತಲೆ
ಮದೆ ಕಟ್ಟಿ ದೊಂಪೊಡು ಮದಿಮಾಯೆ
ಏರಾಜೆ ಗುಂಡೊಡು ಮದಿಮಾಳ್
ಪನಿ ಪನಿ ಬರ್ಸೊಗು ತತ್ರ ಬೋಡಾ
ಮುಂಡೋವುದ ಗುಂಡಿಗ್ ಕುತ್ತೆರಿ ಬೋಡಾ
(ತಂದನಾರೆ ತಾನಾರೆ ತಂದನಾರೆ ತಾನಾರೆ)
ದಾರಿಯಲ್ಲಿ ಮನೆ ಕಟ್ಟಲು ಯಾರು ಹೇಳಿದ್ದುದು
ದಾರಿಯಲ್ಲಿ ಮನೆ ಕಟ್ಟಲು ತಂದೆ ಹೇಳಿದುದ್ದು
ಚಂದವಾದ  ಹೆಣ್ಣು ತರಲು ಯಾರು ಹೇಳಿದ್ದು
ಚಂದವಾದ ಹೆಣ್ಣು ತರಲು ತಾಯಿ ಹೇಳಿದ್ದು
ಹಾಕಿಕೊಂಡಿದ್ದಾಳೆ ಹೆಣ್ಣು ಪಟ್ಟೆ ರವಿಕೆ
ಉಟ್ಟಿದ್ದಾಳೆ ಹೆಣ್ಣು ಜಾಗಿನ ಸೀರೆ
ಎಡದ ಕಿವಿಗೆ ಎಣ್ಣೆ ಓಲೆ
ಬಲದ ಕಿವಿಗೆ ಎಸಳು ಬುಗುಡಿ
ತಲೆಬಾಚಿ ಕಟ್ಟಿದ್ದಾಳೆ ಮುತ್ತು ಬೈತೆಲೆ
ಮರೆಮಾಡಿದ ಚಪ್ಪರದಲ್ಲಿ ಮದುಮಗ
ಯೇರಾಜೆ ಗುಂಡದಲ್ಲಿ ಮದುಮಗಳು
ಹನಿ ಹನಿ ಮಳೆಗೆ ಛತ್ರಿ ಬೇಕಾ
ಮುಂಡೋವು ಗಿಡದ ಗುಂಡಿಯಲ್ಲಿ
ಮೀನು ಹಿಡಿಯಲು ಕುತ್ತೇರಿ (ಮೀನು ಹಿಡಿಯುವ ಸಾಧನ) ಬೇಕಾ?)

ಈ ರೀತಿ ಹಾಡು, ನುಡಿಕಟ್ಟು (ಮದಿಪು) ಮತ್ತು ಆಚರಣೆಗಳ ಮೂಲಕ ನಲಿಕೆಯವರ ಮದುವೆ ನಡೆಯುತ್ತದೆ. ನುಡಿಕಟ್ಟು ಹೇಳುವುದು ಮತ್ತು ಆಚರಣೆಗಳ ನಿರ್ದೇಶನದಲ್ಲಿ ಪುರುಷರು ಗುರಿಕಾರನ ನೇತೃತ್ವದಲ್ಲಿ ಪ್ರಧಾನ ಪಾತ್ರವಹಿಸಿದರೆ ಹಾಡು ಹೇಳುವಲ್ಲಿ ಮತ್ತು ಆಚರಣೆಗಳಲ್ಲಿ ಗುರಿಕಾರನ ಮಡದಿ ಹಾಗೂ ಇತರ ಸ್ತ್ರೀಯರು ಮುತುವರ್ಜಿಯಿಂದ ಪಾತ್ರ ವಹಿಸುತ್ತಾರೆ.

ಬಯಕೆ

ಹೆಣ್ಣು ಏಳು ತಿಂಗಳು ಗರ್ಭಿಣಿಯಾದಾಗ ಬಯಕೆ (ಸೀಮಂತ) ನಡೆಸುತ್ತಾರೆ. ತವರುಮನೆ, ಗಂಡನ ಮನೆಯವರು ಸೇರಿ ದಿನ ನಿಶ್ಚಯಿಸುತ್ತಾರೆ. ಗಂಡನ ಮನೆಯಲ್ಲಿ ಸೀಮಂತ ನಡೆಯುತ್ತದೆ. ತವರು ಮನೆಯವರು ಕುಕ್ಕೆಯಲ್ಲಿ ಅಕ್ಕಿ ತಿಂಡಿ ಹೊದ್ಲು, ಏಳು ಬಗೆಯ ತಿಂಡಿ, ಬೆಲ್ಲ, ತೆಂಗಿನಕಾಯಿ, ಸೀರೆ, ರವಿಕೆ, ತರುತ್ತಾರೆ. ಗಂಡನ ಅಕ್ಕ ಗರ್ಭೀಣಿಗೆ ಸೀರೆ ರವಕೆ ಉಡಿಸಿ ಹೂ ಸಿಂಗಾರ ಮುಡಿಸುತ್ತಾರೆ. ತವರಿನಿಂದ ತಂದ ಭಕ್ಷ್ಯವನ್ನು ಆಕೆಗೆ ಬಡಿಸುತ್ತಾರೆ. ಆಕೆ ಬೇಕಾದ್ದುದನ್ನು ತಿನ್ನುತ್ತಾಳೆ. ತವರುಮನೆಯಿಂದ ಒಂದು ಹೆಂಟೆ ತರುತ್ತಾರೆ. ಆ ಕೋಳಿಗೆ ಗರ್ಭಿಣಿ ಅಂಗೈಯಲ್ಲಿ ಅಕ್ಕಿ ತಿನ್ನಿಸುತ್ತಾರೆ. ಆಕೆಯ ಹೆರಿಗೆಯವರೆಗೆ ಆ ಕೋಳಿ ಸಾಯಬಾರದು. ಆಕೆ ಬಾನಂತಿ ಇರುವಾಗ ಹೆಂಟೆ ಮೊಟ್ಟೆ ಇಡುತ್ತದೆ. ಮೊಟ್ಟೆಯನ್ನು ಆಕೆಗೆ ತಿನ್ನಲು ಕೊಡುತ್ತಾರೆ. ಊಟವಾದ ಬಳಿಕ ಆಕೆಯನ್ನು ತವರುಮನೆಗೆ ಕರೆದುಕೊಂಡು ಹೋಗುತ್ತಾರೆ. ಸೀಮಂತ ಅಥವಾ ಬಯಕೆ ನಲಿಕೆಯ ಮಹಿಳೆಯರಿಂದಲೇ ನಡೆಯುವ ಒಂದು ಸಂಭ್ರಮದ ಆಚರಣೆಯಾಗಿದೆ. ಈ ಆಚರಣೆಯಲ್ಲಿ ಬಸುರಿಗೆ ಹೂ ಮುಡಿಸುವುದು, ತಿಂಡಿ, ತಿನಿಸುಗಳನ್ನು ಬಡಿಸುವುದು, ಮತ್ತು ಹೆಂಟೆಗೆ ಅಕ್ಕಿ ತಿನ್ನಿಸುವುದು ಮುಖ್ಯ ಕ್ರಿಯೆಗಳು. ಅವುಗಳಲ್ಲಿ ಮೊದಲೆರಡರ ಆಶಯಗಳೆಂದರೆ ಬಸುರಿಯ ಆಸೆಗಳನ್ನು ಈಡೇರಿಸುವುದು. ಹಿಂದಿನ ಕಾಲದಲ್ಲಿ ಹೆರಿಗೆ ಎಂಬುದು ಮಹಿಳೆಯ ಜೀವನದ ಒಂದು ಕಷ್ಟಕರವಾದ ಘಟ್ಟವಾಗಿತ್ತು. ಪ್ರಸವದ ಬಳಿಕ ಬದುಕಿ ಉಳಿದರೆ ಅದು ಹೆಣ್ಣಿಗೆ ಮರುಜನ್ಮವೆಂದು ಭಾವಿಸುತ್ತಿದ್ದರು. ಹೆರಿಗೆಯ ಬಳಿಕ ಆಕೆ ಬದುಕಿ ಉಳಿಯುತ್ತಾಳೋ ಎಂಬ ಸಂಶಯವೇ ಇದಕ್ಕೆ ಕಾರಣವಾಗಿತ್ತು. ಆಕೆಯ ಆಸೆ, ಆಕಾಂಕ್ಷೆಗಳನ್ನು ಈಡೇರಿಸುವುದು ತಮ್ಮ ಕರ್ತವ್ಯವೆಂದು ಬಗೆದ ಆಕೆಯ ತಂದೆ, ತಾಯಿ, ಗಂಡ ಆಕೆಗೆ ಬೇಕಾದ ತಿಂಡಿ, ತಿನಿಸು, ಧರಿಸಲು ಬಟ್ಟೆ, ಅಲಂಕಾರ ಸಾಧನಗಳನ್ನು ಮತ್ತು ಮುಡಿಯಲು ಬಗೆ ಬಗೆಯ ಹೂವುಗಳನ್ನು ಬಯಕೆಯ ದಿನ ಕೊಡುವ ಪದ್ಧತಿ ರೂಢಿಗೆ ಬಂದಿತು. ಹೂ ಮುಡಿಸುವಾಗ ಮುಖ್ಯವಾಗಿ ಪಿಂಗಾರ (ಅಡಿಕೆ ಹೂ) ವನ್ನು ಮುಡಿಸಲಾಗುತ್ತದೆ. ಪಿಂಗಾರ ಫಲವಂತಿಕೆಯ ಕಲ್ಪ. ಹೀಗಾಗಿಯೇ ಆ ಪಿಂಗಾರದ ಗೊಂಚಲಲ್ಲಿ ನಲ್ಲಿ (ಮಿಡಿ) ಇರಬೇಕು ಎನ್ನುತ್ತಾರೆ. ಹೆಂಟೆಗೆ ಅಕ್ಕಿ ತಿನ್ನಿಸುವುದು ಕೂಡ ಫಲವಂತಿಕೆಯ ಸಂಕೇತ. ಋತುಮತಿಯಾಗಿ ಮಿಂದು ಬರುವಾಗ ಹೆಣ್ಣು ಮೀನುಗಳಿಗೆ ಅಕ್ಕಿ ತಿನ್ನಿಸಿ ಬರುವುದು, ಗರ್ಭಿಣಿ ಹೆಂಟೆಗೆ ಅಕ್ಕಿ ತಿನ್ನಿಸುವುದು ಇವೆಲ್ಲಾ ಮಹಿಳೆಯರ ಸಂತಾನಾಪೇಕ್ಷೆಯ ಸಾಂಕೇತಿಕತೆ. ಈ ಎಲ್ಲ ಆಚರಣೆಗಳು ಮಹಿಳೆಯರಿಂದಲೇ ನಡೆಯುತ್ತವೆ. ಪಾಣಾರ ಮಹಿಳೆಯರ ಈ ಆಚರಣೆಗಳು ಉಳೀದವರ ಆಚರಣೆಗಳಿಂದ ಭಿನ್ನವಾಗಿರದಿದ್ದರೂ ಕೂಡಾ ಪಾಣಾರ ಮಹಿಳೆಯರಲ್ಲೂ ಇರುವ ಸಂತಾನಾಪೇಕ್ಷೆ ಹಾಗೂ ತಾಯ್ತನದ ಹಂಬಲವನ್ನು ಈ ಕ್ರಿಯೆಗಳು ಎತ್ತಿ ತೋರಿಸುತ್ತವೆ.