ಉತ್ತರಕ್ರಿಯೆ

ಉತ್ತರಕ್ರಿಯೆಯಲ್ಲಿ ಮಹಿಳೆಯರ ಪಾತ್ರ ಬಹಳ ಕಡಿಮೆ. ಗಂಡ ಸತ್ತಾಗ ಆತನ ಹೆಂಡತಿ ಹೆಣದ ಮೇಲೆ ತನ್ನ ಕುತ್ತಿಗೆಯ ತಾಳಿ, ಕರಿಮಣಿ ಸರವನ್ನು ತೆಗೆದಿಡುತ್ತಾಳೆ. ಕೈಯಲ್ಲಿರುವ ಗಾಜಿನ ಬಳೆಗಳನ್ನು ಒಡೆಯುತ್ತಾಳೆ. ಉಳಿದ ಆಭರಣಗಳನ್ನು ಒಮ್ಮೆಗೆ ತೆಗೆದಿಟ್ಟರೂ ಆಕೆ  ಗಂಡ ಸತ್ತ ೪೦ ದಿನಗಳ ಬಳಿಕ ಅವುಗಳನ್ನು ಧರಿಸಿಕೊಳ್ಳಬಹುದು. ಹೆಂಗಸರು ಸ್ಮಶಾನಕ್ಕೆ ಹೋಗುವ ಪದ್ಧತಿ ಇಲ್ಲ. ಗಂಡಸರಂತೆ ಯಾವುದೇ ಕ್ರಿಯೆ ಹಿಡಿಯುವ ಕ್ರಮವಿಲ್ಲ. ಇವರಲ್ಲಿ ವಿಧವಾ ವಿವಾಹ ಪದ್ಧತಿ ಇರುವುದರಿಂದ ಕರಿಮಣಿ ಬಿಟ್ಟು ಉಳಿದೆಲ್ಲಾ ಆಭರಣಗಳ ಧಾರಣೆಗೆ  ನಿಷೇಧವಿಲ್ಲ.

ವ್ಯಕ್ತಿ ಸತ್ತ ಹನ್ನೊಂದನೆಯ ದಿನ ಶುದ್ಧಿ, ಹನ್ನೆರಡರಂದು ಉತ್ತರಕ್ರಿಯೆ ಮತ್ತು ೧೬ನೆಯ ದಿನ ಪದ್ನಾಜೆಗ್ ಸೇರ್ಸ್ವುನ್ ನ ಆಚರಣೆಗಳು ನಡೆಯುತ್ತವೆ. ಹೆಣವನ್ನು ಸುಟ್ಟ ದೂಪೆಯ ಬಳಿ ನಡೆಯುವ ಕ್ರಿಯೆಯಿಂದ ಹೊರತಾಗಿ ಮನೆಯಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಮಹಿಳೆಯರು ಭಾಗವಹಿಸುತ್ತಾರೆ.

ವೃತ್ತಿ

ಭೂತಾರಾಧನೆ ತುಳುನಾಡಿನ ಒಂದು ಪ್ರಮುಖ ಆರಾಧನಾ ಕಲೆ. ಅಗೆಲು, ತಂಬಿಲ ಕೋಲ ಮುಂತಾದ ವಿಧಾನಗಳ ಮೂಲಕ ಈ ಆರಾಧನೆ ನಡೆಯುತ್ತದೆ. ನಲಿಕೆ ಯಾನೆ ಪಾಣಾರರು ಭೂತಾರಾಧನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಭೂತ ಕೋಲದಲ್ಲಿ ಭೂತ ಮಾಧ್ಯಮ ವ್ಯಕ್ತಿಗಳಾಗಿ ನಲಿಕೆ ಜಾತಿಯ ಪುರುಷರು ಭಾಗವಹಿಸುತ್ತಾರೆ. ಕೋಲ ಎಂಬ ಶಬ್ದಕ್ಕೆ ಅಲಂಕಾರ, ಬಣ್ಣ, ರೂಪ, ವಿನ್ಯಾಸ, ಆಖಾರ, ಆಭರಣ, ಮುಖವಾಡ ಧರಿಸಿರುವ ವೇಷ, ನೃತ್ಯ ಇಂತಹ ಅನೇಕ ಅರ್ಥಗಳಿವೆ. ಮುಖಕ್ಕೆ ಬಣ್ಣವನ್ನು ಹಾಕಿಕೊಂಡು ಗಗ್ಗರ, ತಲೆಪಟ್ಟ, ಅಣಿ, ಮುಖವಾಡಗಳನ್ನು ಧರಿಸಿಕೊಂಡು ಕೈಯಲ್ಲಿ ವಿಶಿಷ್ಟವಾದ ಆಯುಧಗಳನ್ನು ಹಿಡಿದುಕೊಂಡು ಅಲೌಕಿಕವಾದ ಭೂತದ ವ್ಯಕ್ತಿತ್ವವನ್ನು ನಟನೆ, ಕುಣಿತ ಮತ್ತು ಅನುಕರಣೆಯ ಮೂಲಕ ಜನಪದರ ಕಣ್ಣಿಗೆ ಕಟ್ಟುವಂತೆ ಅಭಿವ್ಯಕ್ತಗೊಳಿಸುವುದೇ ಕೋಲ. ಪರಂಪರಾಗತವಾದ ಅನೇಕ ಸಂಪ್ರದಾಯಗಳು ನಿಯಮಗಳ ರೂಪದಲ್ಲಿ ಇಲ್ಲಿ ಕೆಲಸ ಮಾಡುವುದರಿಂದ ಕೋಲವನ್ನು ನೇಮವೆಂದು ಕೂಡಾ ಕರೆಯುತ್ತಾರೆ. ಕೋಲವನ್ನು ಬಂಡಿ, ಮೆಚ್ಚಿ, ಮೈಮೆ, ಒತ್ತೆಕೋಲ, ಬಯಲು ಕೋಲ, ದೊಂಪದ ಬಲಿ ಎಂದು ಕೂಡಾ ಕರೆಯಲಾಗುತ್ತದೆ. (ಕೆ. ಚಿನ್ನಪ್ಪ ಗೌಡ, ೧೯೯೦, ೬೫)

ಅಲೌಕಿಕ ಜಗತ್ತಿಗೆ ಸೇರಿದ ಭೂತಗಳನ್ನು ಲೌಕಿಕ ಜಗತ್ತಿನಲ್ಲಿರುವ ಜನರು ಕಂಡು ಮಾತನಾಡಬೇಕಾದರೆ ತಮ್ಮ ಕಷ್ಟ ಸುಖಗಳನ್ನು ಹೇಳಿಕೊಳ್ಳಬೇಕಾದರೆ ಅದರಿಂದ ಅದಕ್ಕೆ ಪರಿಹಾರ ಕಂಡುಕೊಳ್ಳಬೇಕಾದರೆ ಅಲೌಕಿಕ ಮತ್ತು ಲೌಕಿಕ ಜಗತ್ತಿನ ಮಧ್ಯೆ ಒಂದು ಮಧ್ಯಂತರ ಜಗತ್ತಿನ ಸೃಷ್ಟಿಯಾಗಬೇಕು. ತಾತ್ಕಾಲಿಕವಾದ ಅಲೌಕಿಕವಾದ, ಕಾಲ್ಪನಿಕವಾದ ಮಧ್ಯಂತರ ಜಗತ್ತಿನಲ್ಲಿ ನಡೆಯುವ ಪರಸ್ಪರ ಸಂಬಂಧವೇ ಭೂತಾರಾಧನೆ. ಜನಪದರು ಇಲ್ಲಿ ಭೂತಗಳನ್ನು ವ್ಯಕ್ತಿರೂಪದಲ್ಲಿ ಕಾನಬಯಸುತ್ತಾರೆ. ಸಾಕಾರವನ್ನು ಪಡೆಯಲು ಅದಕ್ಕೊಂದು ಮಾಧ್ಯಮ ವ್ಯಕ್ತಿ ಬೇಕು. ಅವನೇ ಭೂತನರ್ತನ ಕಲಾವಿದ. ತುಳುನಾಡಿನಲ್ಲಿ ನಡೆಯುವ ಹೆಚ್ಚಿನ ಭೂತಕೋಲಗಳಲ್ಲಿ ನಲಿಕೆ ಯಾನೆ ಪಾಣಾರರು  ಭೂತ ಮಾಧ್ಯಮ ವ್ಯಕ್ತಿಗಳಾಗಿ ಭಾಗವಹಿಸುತ್ತಾರೆ. ಆದುದರಿಂದಲೇ ಈ ಜಾತಿಯವರನ್ನು ಭೂತ ಕಟ್ಟುವವರು ಎನ್ನುತ್ತಾರೆ. ಭೂತ ಕಟ್ಟುವುದು ಇವರ ಕುಲ ಕಸಬಾಗಿದೆ.

ಭೂತಕೋಲದ ಮಧ್ಯಂತರ ಜಗತ್ತಿಗೆ ಸೃಷ್ಟಿಗೆ ಸರಿಯಾದ ನಿರ್ಮಾಣ ಅಗತ್ಯ. ಈ ಪರಿಸರ ನಿರ್ಮಾಣ ಕಾರ್ಯದಲ್ಲಿ ಪಾಣಾರ ಮಹಿಳೆಯರ ಕಾರ್ಯ ಮಹತ್ತರವಾದದ್ದು.

ತುಳುನಾಡಿನಲ್ಲಿ ಸುಮಾರು ೪೦೦ಕ್ಕಿಂತಲೂ ಹೆಚ್ಚು ಭೂತಗಳು ಆರಾಧಿಸಲ್ಪಡುತ್ತವೆ.  ಅವುಗಳಲ್ಲಿ ಗುಳಿಗ, ಪಂಜುರ್ಲಿ, ಮಲರಾಯಿ, ಕಲ್ಕುಡ, ಕಲ್ಲುರ್ಟಿ, ಪಿಲಿಚಾಮುಂಡಿ, ಜಟಾಧಾರಿ, ಉಳ್ಳಾಲ್ತಿ, ಮಾಂಕಾಳಿ, ಕೊಡಮಣಿತ್ತಾಯ, ಕೊರಗ ತನಿಯ, ಬಸ್ತಿ ನಾಯಕ, ಪಂಜನ್ತಾಯ, ದುಗಲಾಯ, ದಾಲ್ಸೂರಾಯ, ಮಾಲಿಂಗರಾಯ, ಮುಗ್ಗೇರ್ಲು ಮುಂತಾದ ದೈವಗಳಿಗೆ ಕಟ್ಟುತ್ತಾರೆ. ಕುಂದಾಪುರದ ಕಡೆ ಪಾಣಾರರು ಬಬ್ಬರ್ಯ, ಹಾಯ್ಗುಳಿ, ನೇತ್ರಾಯ್ಗುಳಿ, ಕಾಡ್ತಿ, ಚವುಂಡಿ, ಚಿಕ್ಕು, ಎಳೆಯಮ್ಮ, ಹಳೆಯಮ್ಮ, ನಾಗ ಮುಂತಾದ ದೈವಗಳಿಗೆ ಕಟ್ಟುತ್ತಾರೆ. ಈ ಎಲ್ಲಾ ದೈವಗಳಿಗೆ ಕಥೆಗಳಿವೆ. ಈ ಕಥೆಗಳಲ್ಲಿ ದೈವದ ಹುಟ್ಟು, ಬೆಳವಣಿಗೆ, ಪವಾಡ, ಪ್ರಸರಣಗಳು ಹೇಳಲ್ಪಡುತ್ತವೆ. ಕಾವ್ಯರೂಪದಲ್ಲಿರುವ ಈ ಕಥೆಗಳನ್ನು ಪಾರ್ದನ (ಪಾಡ್ದನ) ಗಳೆನ್ನುತ್ತಾರೆ.  ಈ ಪಾಡ್ದನಗಳನ್ನು ಹುಟ್ಟು ಹಾಖುವವರು ನಲಿಕ ಯಾನೆ ಪಾಣಾರ ಮಹಿಳೆಯರು. ಪಾಣಾರ ಮಹಿಳೆಯರು ಆಶುಕವಯತ್ರಿಯರು. ಇವರು ಪಾಡ್ದನಗಳನ್ನು ಸುಶ್ರಾವ್ಯವಾಗಿ ಹಾಡಬಲ್ಲರು. ಭೂತ ಕಟ್ಟುವ ವ್ಯಕ್ತಿ ಅಲಂಕಾರಿಕ ಸಿದ್ಧತೆ ನಡೆಸುತ್ತಿರುವಾಗ ಅವರ ಸಂಬಂಧಿ ಮಹಿಳೆಯರು ತೆಂಬರೆ ಎಂಬ ಚರ್ಮವಾದ್ಯವನ್ನು ಬಾರಿಸುತ್ತಾ ಪಾಡ್ದನ ಹೇಳಿ ಭೂತ ಕಲಾವಿದನಿಗೆ ಪ್ರೇರಣೆ ನೀಡುತ್ತಾರೆ. ಕನ್ನಡ ಭಾಷೆಯನ್ನಾಡುವ ಪ್ರದೇಶದಲ್ಲಿ ಈ ಪಾಡ್ದನಗಳು ಕನ್ನಡ ಭಾಷೆಯಲ್ಲಿವೆ. ಅಲ್ಲಿ ಅದನ್ನು “ಹೊಗಳಿಕೆ” ಎನ್ನುತ್ತಾರೆ.

ನಲಿಕೆ ಯಾನೆ ಪಾಣಾರ ಮಹಿಳೆಯರು ಇಲ್ಲಿ ಆರಾಧನೆಗೊಳ್ಳುತ್ತಿರುವ ದೈವಗಳ ಹುಟ್ಟು, ಬೆಳವಣಿಗೆ, ಪವಾಡ, ಪ್ರಸರಣಗಳೆಲ್ಲವನ್ನೂ ಬಲ್ಲವರು. ಐತಿಹ್ಯಗಳನ್ನೂ ಆರಿತವರು. ಆಶು ಕವಯತ್ರಿಯರಾದುದರಿಂದ ಈ ಭೂತಗಳ ಪಾಡ್ದನಗಳನ್ನು ಐತಿಹ್ಯಗಳು ಮತ್ತು ಜನಪದ ಕಥೆಗಳ ಆಧಾರದ ಮೇಲೆ ಹೆಣೆಯಬಲ್ಲರು. ಸುಶ್ರಾವ್ಯವಾಗಿ ಹಾಡಬಲ್ಲರು. ಭೂತಗಳಿಗೆ ಸಂಬಂಧಪಟ್ಟ ಸುದಿರ್ಘವಾದ ಪಾಡ್ದನಗಳನ್ನು ಸಂಧಿ ಎನ್ನುತ್ತಾರೆ. ಭೂತಗಳ ಕಥೆಯಷ್ಟೇ ಅಲ್ಲ, ಇವರ ರಚನೆಯಲ್ಲಿ ಕೆಲವೊಂದು ಲೌಕಿಕ ಹಾಗೂ ಸಾಮಾಝಿಕ ಪಾಡ್ದನಗಳೂ ಇವೆ. ಈ ಪಾಡ್ದನಗಳನ್ನು ಗದ್ದೆಯಲ್ಲಿ ನೇಜಿ ತೆಗೆಯುವಾಗ, ತೊಟ್ಟಿಲು ತೂಗುವಾಗ, ಮುಸ್ಸಂಜೆ ಹೊತ್ತು ಮಕ್ಕಳೊಡನೆ ಅಜ್ಜಿಯಂದಿರು ಕಲೆತಾಗ ಹಿಂದಿನ ಕಾಲದಲ್ಲಿ ಹಾಡುವ ಪದ್ಧತಿ ಇತ್ತು. ಈ ಪಾಡ್ದನಗಳನ್ನು ಸಾಮಾನ್ಯವಾಘಿ ಎಲ್ಲಾ ಜಾತಿಯವರೂ ಹಾಡುತ್ತಿದ್ದರೂ ಕೂಡಾ ಅವುಗಳಲ್ಲಿ ಬಹುತೇಕ ಪಾಡ್ದನಗಳ ಕರ್ತೃಗಳು ನಲಿಕೆ ಮಹಿಳೆಯರು. ಇಷ್ಟೇ ಅಲ್ಲಿನ ಬಹುಜನರ ನಾಲಗೆಯಲ್ಲಿ ಸದಾ ನಲಿದಾಡುತ್ತಲೇ ಇರುವ ಗಾದೆ, ಒಗಡುಗಳ ರಚನಾಕಾರರು ಕೂಡಾ ಪಾಣಾರ ಮಹಿಳೆಯರೇ ಆಗಿದ್ದಾರೆ.

ಜಾಲಾಟದೇಯಿ ನಲಿಕೆ – ಪಾಣಾರಾಟ

ಹಲವು ವರ್ಷಗಳಿಗೊಮ್ಮೆ ನಡೆಯುವ ಜಾಲಾಟ, ದೇಯಿ ನಲಿಕೆ ಅಥವಾ ಪಾಣಾರಾಟದಲ್ಲಿ ನಲಿಕೆ ಯಾಣೆ ಪಾಣಾರ ಜಾತಿಯವರೇ ಮುಖ್ಯ ನಿರ್ವಾಹಕರು. ಉತ್ಸವ ನಡೆಯುವ ಊರು, ಅಥವಾ ತಾಲ್ಲೂಕಿನಲ್ಲಿರುವ ಎಲ್ಲಾ ನಲಿಕೆ – ಪಾಣಾರ ಮನೆಯಿಂದಲೂ ಗಂಡು, ಹೆಣ್ಣು ಮಕ್ಕಳೆನ್ನದೆ ಎಲ್ಲರೂ ಭಾಗವಹಿಸುತ್ತಾರೆ. ಉತ್ಸವ ನಡೆಸುವ ಗುತ್ತು, ಬೀಡಿನ ಒಡೆಯರು ಅವರೆಲ್ಲರಿಗೂ ಊಟ, ಉಪಹಾರ ಮಾತ್ರವಲ್ಲ ದಕ್ಷಿಣೆಯ ರೂಪದಲ್ಲಿ ಸಂಭಾವನೆ ಕೊಡುವ ಪದ್ಧತಿಯೂ ಇದೆ. ಉತ್ಸವದ ವೇದಿಕೆಯು ಕ್ಷಣಹೊತ್ತು ಬರಿದಾಗಿ ಇರದಂತೆ ನಿರ್ಧಾರಿತ ಅವಧಿಯವರೆಗೆ ಕುಣಿತಗಳನ್ನು ಪಾಣಾರರು ನಡೆಸಿಕೊಡುವುದು ಅವರ ಕರ್ತವ್ಯವಾಗಿರುತ್ತದೆ. ಪಾಣಾ ಮಹಿಳೆಯರು ಕೇವಲ ಹಾಡುಗಾರರಷ್ಟೇ ಅಲ್ಲ ಚೆನ್ನಾಗಿ ಕುಣಿತಗಳನ್ನು ಕೂಡಾ ನಡೆಸಬಲ್ಲರು. ವೇದಿಕೆಯಲ್ಲಿ ಪುರುಷರಿಗೆ ಸರಿಸಮಾನವಾಗಿ ಮಹಿಳೆಯರೂ ಕೂಡಾ ಹಾಡು, ಕುಣಿತಗಳನ್ನು ನಡೆಸುತ್ತಲೇ ಇರುತ್ತಾರೆ.

ಜಾಲಾಟ, ದೇಯಿ ನಲಿಕೆ ಇಲ್ವೇ ಪಾಣಾರಾಟ ಒಂದು ನಿರ್ದಿಷ್ಟ ಬೀಡು ಯಾ ಗುತ್ತಿನ ಆಶ್ರಯದಲ್ಲಿ ನಡೆಯುತ್ತದೆ. ಮೇಳ ನಡೆಯುವ ಕೇಂದ್ರದ ಪಕ್ಕದಲ್ಲಿ ಬನವಿರುತ್ತದೆ. ಬನ ಎಂದರೆ ಭೂತ. ನಾಗರು ಆವಾಸ ಹೊಂದಿರುವ ವನ ಪ್ರದೇಶ. ಈ ಬನದಲ್ಲಿ ನಾಗನ ಚಿತ್ರ ಕೆತ್ತಿದ ಕಲ್ಲುಗಳೀರುತ್ತವೆ. ಹುತ್ತಗಳಿರುತ್ತವೆ. ಬನಗಳಲ್ಲಿ ಜೀವಂತ ನಾಗಗಳು ವಾಸ್ತವ್ಯ ಹೂಡಿರುವುದು ಇದೆ. ಬನಗಳನ್ನು ಪಾಣಾರ ಮಹಿಳೆಯರು ಮಾತ್ರವಲ್ಲ ಎಲ್ಲ ಮಹಿಳೆಯರೂ ಕೂಡಾ ಬಹಳ ಪವಿತ್ರವೆಂದು ನಂಬುತ್ತಾರೆ. ಸೂತಕದವರು ಮತ್ತು ಮುಟ್ಟಾದ ಮಹಿಳೆಯರು ಈ ಬನಕ್ಕೆ ಪ್ರವೇಶ ಮಾಡುವುದಿಲ್ಲ. ಬನದಿಂದ ಮಹಿಳೆಯರು ಸೊಪ್ಪು ಕಟ್ಟಿಗೆ ಕಡಿಯುವುದಿಲ್ಲ.

ಉತ್ಸವದ ದಿನ ಈ ಬನವನ್ನು ಶುದ್ಧಾಚಾರದಲ್ಲಿರುವ ಆಳುಗಳು ಪ್ರವೇಶಿಸಿ ಸೊಪ್ಪು, ಸದೆ, ಒಣ ಕಟ್ಟಿಗೆಗಳನ್ನೆಲ್ಲಾ ತೆಗೆದು ಸ್ವಚ್ಛಗೊಳಿಸುತ್ತಾರೆ. ಬ್ರಾಹ್ಮಣ ಅರ್ಚಕರು ಪವಿತ್ರೋದಕ ಪ್ರೋಕ್ಷಿಸಿ ಸ್ಥಳ ಶುದ್ಧಗೊಳಿಸುತ್ತಾರೆ. ಬಳಿಕ ನಾಗನ ಕಲ್ಲುಗಳನ್ನು ತೊಳೆದು ಅವಕ್ಕೆ ಗಂಧ ಅರಿಶಿನ ಹಚ್ಚಿ, ಪೂಜೆ ಸಲ್ಲಿಸುತ್ತಾರೆ. ಎಳನೀರು, ಹೊದಲು ಬಡಿಸಿ ತಂಬಿಲ ನಡೆಸುತ್ತಾರೆ. ಅಲ್ಲಿ ಕಲಶವನ್ನಿಟ್ಟು ಪೂಜೆ ಸಲ್ಲಿಸುತ್ತಾರೆ. ಈ ಕಲಶಗಳನ್ನು ಮಣ್ಣಿನಿಂದ ರಚಿಸಿರುತ್ತಾರೆ. ಈ ಕಳಶದ ಹೊರಗಡೆ ನಾಗನ ಹೆಡೆಯ ಚಿತ್ರವಿರುತ್ತದೆ. ಇದನ್ನು ತಯಾರಿಸುವ ಕುಂಬಾರರು ಕೂಡಾ ಬಹಳ ಪವಿತ್ರವಾದ ಆವೆಮಣ್ಣಿನಿಂದಲೇ ತಯಾರಿಸಿ ಕೊಡುವುದು ಪದ್ಧತಿ. ಈ ಕಲಶವನ್ನು “ಮೂರಿ” ಎನ್ನುತ್ತಾರೆ. ಈ ಮೂರಿಗೆ ಅರ್ಚಕರು ಪವಿತ್ರೋದಕ ತುಂಬಿಸಿ ಕಲಶ ಸ್ಥಾಪನೆ ಮಾಡಿದ ಬಳಿಕ ಕಲಶವನ್ನೆತ್ತಿಕೊಂಡು ಬನದಿಂದ ಹೊರಬರುತ್ತಾರೆ.

ಬನದಲ್ಲಿ ತಂಬಿಲ ನಡೆಯುವ ಹೊತ್ತಿಗೆ ಸ್ನಾನ ಮಾಡಿ ಮಡಿಬಟ್ಟೆಯುಟ್ಟುಕೊಂಡು ಶುದ್ಧಾಚಾರದಲ್ಲಿರುವ ಮುತ್ತೈದೆ ಪಾಣಾರ ಮಹಿಳೆಯರು ಅಲ್ಲಿ ನೆರೆದಿರುತ್ತಾರೆ. ಈ ತಂಡದಲ್ಲಿ ಐರು ಅಥವಾ ಏಳು ಜನ ಮಹಿಳೆಯರು ಇರುತ್ತಾರೆ. ಈ ಮಹಿಳೆಯರಿಗೆ ಅರ್ಚಕರು ಎಣ್ಣೆ ವಿಳ್ಯ ನೀಡುತ್ತಾರೆ. ಅರ್ಚಕರು ಬನದಿಂದ ಕಲಶವನ್ನೆತ್ತಿ ಎರಡೂ ಕೈಯಲ್ಲಿ ಹಿಡಿದುಕೊಂಡು ಕುಣಿತದ ಕೇಂದ್ರಕ್ಕೆ ಹಿಮ್ಮುಖ ನಡಿಗೆಯಲ್ಲಿ ನಿಧಾನವಾಗಿ ಸಾಗುತ್ತಾರೆ. ಅರ್ಚಕರು ಪಾಣಾರ ಕನ್ಯೆಯರಿಗೆ ಮುಖ ಮಾಡಿ ಮಂದಗತಿಯಿಂದ ಹಿಂದೆ ಸರಿಯುತ್ತಾ ಹೋಗುವಾಗ ಅವರ ಹಾಡು ಹೇಳುತ್ತಾ, ಕುಣಿತ ನಡೆಸಿಕೊಂಡು ಮುಂದುವರೆಯುತ್ತಾರೆ. ಪಾಣಾರ ಮಹಿಳೆಯರು ಹೇಳುವ ಹಾಡು

ಪೊಲಿಯಾ ನೆಂದ್ ಪೊಲಿಯಾನೆ ಪನ್ನಗ
ಈ ಪೊಲಿಲಾ ಪಾಲಿತ್ಂಡ ದಾವಾ ಲೆಚ್ಚುಂಡು
ಆನಸರೆಲಾ ಪೊಣ್ಣಮ್ಮ ನರಿಯೆ ಕಾತ್‌ದ್ ಕೊರ್ಯರ್
ದುಂಬುದ ಕಾಲೊಡು ಮಣ್ಣ್‌ದ ಮೂರಿಗೆ
ಇತ್ತೆದೊಂಜಿ ಕಾಲೊಡು ಕಂಚಿನ ಮೂರಿಗೆ
ಕಂಚಿನ ಮೂರಿಲಾ ತುಂಬೊಂಡೆರ್‌
ಮಣ್ಣ ಮೂರಿಲಾ ಮತ್ತೊಂಡೆರ್‌
ನಾಲಿಲೊಂಚಿ ನಲ್ಕೆ ನಲ್ತೊಂಡೆರ್
ನಾಲಿಲೊಂಚಿ ನಲ್ಕೆ ನಲ್ತೊಂಡೆರ್

(ಅದೃಷ್ಟವೇ ಅದೃಷ್ಟವೆನ್ನುವಾಗ ಅದೃಷ್ಟ ಒಲಿಯಿತು. ಸಂಪತ್ತು ಹೆಚ್ಚಾಯಿತು. ಪುರುಷರ ತಲೆ, ಮಹಿಳೆಯರ ಸೆರಗು ಕಾಪಾಡಲ್ಪಟ್ಟಿತು. ಹಿಂದಿನ ಕಾಲದಲ್ಲಿ ಮಣ್ಣ ಕಲಶ, ಇಂದಿನ ಕಾಲದಲ್ಲಿ ಕಂಚಿನ ಕಳಶ ಹಿಡಿದುಕೊಂಡರು. ನಾಲ್ಕು ಮನೆಗಳ ಅಂಗಳದಲ್ಲಿ ನಲಿದಾಡಿದರು.)

ಹೀಗೆ ಹಾಡು ಹೇಳಿ ಕುಣಿದುಕೊಂಡು ಮಹಿಳೆಯರು ಮುಂದುವರೆಯುವಾಗ ಅರ್ಚಕರಿಗೆ ಆವೇಶ ಬರುತ್ತದೆ. ವೇದಿಕೆಯತ್ತ ಬಂದ ಅರ್ಚಕರು ವೇದಿಕೆಯಲ್ಲಿ ಕಲಶ ಸ್ಥಾಪನೆ ಮಾಡುತ್ತಾರೆ. ಬಳಿಕ ಮೂರಿ ಪೂಜೆ ನಡೆಯುತ್ತದೆ. ಮಹಿಳೆಯರು ಮೂರ್ಲೆ ನಲಿಕೆ (ಕುಣಿತ) ನಡೆಸುತ್ತಾರೆ. ಕುಣಿತದ ಬಳಿಕ ಮೇಳ ನಡೆಸುವ ಯಜಮಾನ ಮಹಿಳೆಯರಿಗೆ ಸೀರೆಯ ಉಡುಗೊರೆ ನೀಡುತ್ತಾನೆ.

ನಂತರ ನಾಗ ಬಿರ್ಮರ ಕೋಲ ನಡೆಯುತ್ತದೆ. ಈ ಕೋಲಕ್ಕೆ ಪಾಣಾರ ಪುರುಷರೇ ಮಾಧ್ಯಮ ವ್ಯಕ್ತಿಗಳು. ಪಾಡ್ದನ ಹೇಳುವವರು ಪಾಣಾರ ಮಹಿಳೆಯರು.

ಹಾss  ಏss ಅಪ್ಪೆ ಪನ್ನಗುಲ್ಲೆರ್ ಬಾಲೆಗುಲಪ್ಪೆಯೆ
ಬಲಿಯೆಂದ್ರ ದೇವಿಯೆ
ಅಮ್ಮೆಂದ್ ಪನ್ನಗ ಉಲ್ಲೆರ್ ರಾಮಲಚುಮಣೆರ್
ಅಕುಲೆಗ್ ಪುಟ್ಟಿನ ಬಾಲೆಲುಲ್ಲೆರ್
ಇರ್ವೆರ್ ಮಣಿನಾಗರ ಜೇವುಲು
ಪುಟ್ಟಿನ ಬಾಲೆಲೆಗ್ ಪುದರ್ ದೀತೆರ್
ಪಲಯೆ ಕೋಚಂಡೆ ಮೆಗ್ಯೆ ಮಾಚಂಡೆ
ಕಾಲ್ತೆ ಪುಟ್ಯೆರ್ ಬಯ್ಯಗ್ ಬಲತೆರ್

ತಾಯಿ ಬಲಿಯೆಂದ್ರ ದೇವಿ. ತಂದೆ ರಾಮಲಕ್ಷ್ಮಣರು. ಅವರಿಗೆ ಹುಟ್ಟಿದ ಮಕ್ಕಳಿಬ್ಬರು ಮಣಿ ನಾಗರು ಅಣ್ಣ ಕೋಚಂಡ, ಮತ್ತು  ತಮ್ಮ ಮಾಚಂಡ. ಮುಂಜಾನೆ ಹುಟ್ಟಿದರು ಮುಸ್ಸಂಜೆಗೆ ಬೆಳೆದು ದೊಡ್ಡವರಾದರು).

ಹಾಡು ಮುಂದುವರೆಯುತ್ತದೆ.

ಬೆಳೆದ ಮಕ್ಕಳು ನಮಗೆ ಮದುವೆಯಾಗಬೇಕೆಂದು ಹೇಳುತ್ತಾರೆ. “ಕಂಕುಳ ಅಮೆ ವಾಸನೆ ಇನ್ನೂ ಮಾಸಿಲ್ಲ ನಿಮಗೇತರ ಮದ್ವೆ” ಎಂದು ತಾಯಿ ಕೇಳುತ್ತಾಳೆ. ಇಲ್ಲ ನಮಗೆ ಮದ್ವೆ ಆಗಲೇಬೇಕು ಎನ್ನುತ್ತಾರೆ ಮರಿನಾಗರು. ಆಗ ತಾಯಿ ಮಕ್ಕಳಿಗೆ ಹುಡುಗಿ ನೋಡುವ ಸಲುವಾಗಿ  ಜನ ಆಯ್ಕೆ ಮಾಡುತ್ತಾಳೆ. ಕಾಡಲ್ಲಿ ಕರಿಯ ಸಂಕಪಾಲ ನಾಡಲ್ಲಿ ಹುಟ್ಟಿದ ಬೊಳಿಯ ಸಂಕಪಾಲ ಮತ್ತು ನೀರಲ್ಲಿ ಹುಟ್ಟಿದ ನೀರ್ಕಂದಡಿ ಕೇರೆ ಮಾರಾಜ ಎನ್ನುವ ಮಣಿನಾಗರ ಜೇವು ಇವರನ್ನು ಕರೆದು ನಿಮ್ಮಲ್ಲಿ ನಮ್ಮ ಕೋಚಂಡ ಮಾಚಂಡರಿಗೆ ಹುಡುಗಿ ನೋಡಲು ಯಾರು ಹೋಗುತ್ತೀರು ಎಂದು ಕೇಳುತ್ತಾಳೆ. ಕೇರೆ ಮಾರಾಜ ಒಪ್ಪಿಕೊಳ್ಳುತ್ತಾನೆ.

ಮೇರುಪರ್ವತದಡಿಯಲ್ಲಿ ಶಾಪಗ್ರಸ್ಥಳಾದ ಕುಂತಿದೇವಿ ಇರುತ್ತಾಳೆ.  ಅವರುಮಕ್ಕಳಿಬ್ಬರು ಸುಂದರ ನಾಗಕನ್ನಿಕೆಯರು. ಅವರನ್ನು ಮದುವೆಯಾಗಬಹುದೆಂದು ಕೇರೆ ಮಾರಾಜ ನೋಡಿ ಬರುತ್ತಾನೆ. ಮದುವೆಗೆ ಒಪ್ಪಿಗೆಯೂ ಆಗುತ್ತದೆ. ಕೋಚಂಡ ಮಾಚಂಡರ ದಿಬ್ಬಣ ಹೋಗುತ್ತದೆ.  ಮದುವೆ ಸಂಭ್ರಮದಿಂದ ನಡೆಯುತ್ತದೆ. ಮದುಮಕ್ಕಳನ್ನು ಊರಿಗೆ ಕರೆದುಕೊಂಡು ಬರುತ್ತಾರೆ. ಗಟ್ಟಿ ಇಳಿದು ಬರುವಾಗ ದಾರಿಯಲ್ಲಿ ಕುಕ್ಕೆ ಸ್ಥಳ ಸಿಗುತ್ತದೆ. ನವವಧುವರರಿಗೆ ಆಯಾಸವಾಗುತ್ತದೆ. ಅಲ್ಲಿ ಸ್ವಲ್ಪ ಹೊತ್ತು ವಿಶ್ರಮಿಸಿಕೊಳ್ಳುತತಾರೆ. ಮಲಗಿ ನಿದ್ದೆ ಹೋಗುತ್ತಾರೆ. ಕೇರೆ ಮಾರಾಜನಿಗೆ ನಿದ್ದೆ ಬಂದಿರುವುದಿಲ್ಲ ಆತ ಮಾರ್ಚಂಡನ ಮಡದಿಯ ಮುಖ ನೋಡುತ್ತಾನೆ. ಸೌಂದರ್ಯವತಿಯಾದ ಆಕೆಯ ಮುಖ ನೋಡಿ ಆಖೆಯ ಮುಖಕ್ಕೆ ಉಗುಳುತ್ತಾನೆ.  ಮಚಂಡನಿಗೆ ಎಚ್ಚರವಾಗುತ್ತದೆ. ಆತ ತನ್ನ ಮಡದಿಯ ಮುಖದಲ್ಲಿ ಕೇರಿಯ ಎಂಜಲು ನೋಡಿ ಸಿಟ್ಟುಗೊಳ್ಳುತ್ತಾನೆ. “ನಿನ್ನಲ್ಲಿ ತುಂಬಿರುವ ವಿಷವೆಲ್ಲಾ ಬತ್ತಿ ಹೋಗಲಿ” ಎಂದು ಶಾಪ ಕೊಡುತ್ತಾನೆ. ಬಳಿಕ ಮಾಚಂಡ ದಂಪತಿಗಳು ಮಾಯವಾಗಿ ಕುಮಾರನ ಆಶ್ರಯ ಪಡೆದು ಕುಕ್ಕೆಯಲ್ಲಿ ನೆಲೆಯಾಗುತ್ತಾರೆ. ಕೋಚಂಡ ದಂಪತಿಗಳು ಊರಿಗೆ ಹಿಂತಿರುತ್ತಾರೆ.

ಇದು ನಾಗಬ್ರಹ್ಮರ ಪಾಡ್ದನ ಕಥೆ. ಇದನ್ನು ಪಾಣಾರ ಮಹಿಳೆಯರು ಸುಶ್ರಾವ್ಯವಾಗಿ ಹಾಡುತ್ತಾರೆ.

ಭೂಮಿಗ್ ಬೀಲೊ ಊರ್ದ ಆಕಾಶೊಡು ಜಿಡೆ ಬುಡ್ಪಾಯೆರ್
ಗುರುಗೊಂಜಿ ಕಣ್ಣ್ ಮುಚ್ಚಿಲ್ದಾತ್ ಮಲ್ಲ ಮೋನೆ ಆಂಡ್
(ಭೂಮಿಗೆ ಬಾಲವೂರಿ ಆಕಾಶಕ್ಕೆ ಹೆಡೆ ಎತ್ತಿದನು
ಗುಲಗಂಜಿಯಂತಹ ಕೆಂಪು ಕಣ್ಣುಗಳು ಅಗಲವಾದ
ಮುಚ್ಚಳದಂತಹ ಮುಖವಾಯ್ತು.)

ಈ ಹಾಡನ್ನು ಪಾಣಾರು ಬಹಳ ರಾಗವಾಗಿ ಕನ್ನಡದಲ್ಲಿಯೂ ಹಾಡಬಲ್ಲರು. ಕುಂದಾಪುರದ ಕಡೆಯಲ್ಲಿ ನಾಗಕೋಳ, ಪಾಣಾರಾಟದಲ್ಲಿ ಈ ಹಾಡನ್ನು ಮಹಿಳೆಯರು ಹೇಳುತ್ತಾರೆ.

ಸುಬ್ರಹ್ಮಣ್ಯನೇ ನೀನು ಉದಿಯಾದವನೇ
ಸುಬ್ರಹ್ಮಣ್ಯದೀ ಮಾರ್ಗ ಹಿಡಿದುಕೊಂಡೆ
ಸೂಡದಲ್ಲಿ ಬಂದು ನಿಲುತೇನೆಂದು
ಕರಜಪಾಡಿಯ ಮಾರ್ಗವ ದಾಟಿಕೊಂಡೆ
ಶಿರೂರದಲ್ಲೇ ಬಂದು ನಿಲುವನಲ್ಲ
ಮಾರಿಕಾಣ ಕೆತ್ತಿಕಾಣ ದಾಟಿಕೊಂಡೆ
ಕಾಳಪೀಠದಲ್ಲಿ ಬಂದು ಉದಿಯಾದವನೇ
ಕಾಳಿಂಗ ಮಾಳಿಂಗ ನಲಿಯಬೇಕು
ಎಪ್ಪತ್ತು ಏಳಡಿ ಮಾಶೇಷನೇ
ಸುಬ್ರಹ್ಮಣ್ಯನೇ ಮಾರ್ಗ ಹಿಡಿದುಕೊಂಡೆ
ಗುಟ ಮುಡಿ ಬಂದು ನಿಲುತೇನೆಂದೆ
ಆ ಸ್ಥಳದಲ್ಲೇ ಬಂದು ನಿಲುತೇನೆಂದೆ
ಸ್ವಾಮಿ ಜೊತೆಯಲ್ಲೇ ಬಂದು ಸ್ಥಳ ಮಾಡಿಕೊಂಡೆ
ವೀದಿನ ವಾಭೋಗ ಪಡೆದುಕೊಂಡೆ
ಭೋಗ ಕೊಟ್ಟವರಿಗೆ ಲೇಸ ಕೊಡಲಾಬೇಕ
ನಾಗ್ನೆ ನಾಗ ನಾಗ ದೇವನ್‌ಎ ದೇವ
ಅರಿಶೀನ ಹುಡಿಯಲ್ಲಿ ಹೊರಳಾಡಿಕೊಂಡೆ
ಮುತ್ತಿನಂತಹ ಹೆಡೆಗಳ ಅಮಸಾಡಿಕೊಂಡೆ
ಗುಲುಗುಂಜಿಯ ಕಣ್ಣ ಒಳಸಾಡಿಗೊಂಡೆ
ಜಗದಂತಹ ಕುರುಬಲ ಎಳೆದಾಡಿಕೊಂಡೆ
ಸೂಜಿನಂತಹ ನಾಲಗೆ ನೀಡಾಡಿಕೊಂಡೆ
ನಿಮ್ಮ ಸ್ಥಳದಲ್ಲಿ ಸ್ಥಿರವಾಗಿ ನಿಲ್ಲುವಂತಹ ಶ್ರೀ ಸುಬ್ರಾಯನವರು.

ಹೀಗೆ ನಾಗಕೋಲ, ಬಿರ್ಮೆರೆ ಕೋಲದಿಂದ ಪ್ರಾರಂಭಗೊಂಡ ಈ ಉತ್ಸವವು ನಿರಂತರವಾಗಿ ಮೂರು ದಿನಗಳ ಕಾಲ ಮುಂದುವರೆಯುತ್ತದೆ. ಈ ಮೇಳವನ್ನು ಕೆಲವು ವಿದ್ವಾಂಸರು ಹಿಂದೆ ಕನ್ನಡ ನಾಡಿನಲ್ಲಿ ನಡೆಯುತ್ತಿತ್ತು. ಎನ್ನಲಾದ ಪಗರಣಕ್ಕೆ ಹೋಲಿಸಿದ್ದಾರೆ. ಉತ್ಸವದಲ್ಲಿ ಪುರುಷರಿಗೆ ಸಮಾಣವಾಗಿ ಹಾಡು, ಕುಣಿತಗಳಲ್ಲಿ ಭಾಗವಹಿಸಿ ಪ್ರೇಕ್ಷಕರನ್ನು ರಂಜಿಸಿ ಭಾವಪರವಶರನ್ನಾಗಿ ಮಾಡುವ ಕೆಲಸವನ್ನು ಪಾಣಾರ ಮಹಿಳೆಯರು ನಿರ್ವಹಿಸುತ್ತಾರೆ. ಈ ಉತ್ಸವು ಸಂಗಂ ಸಾಹಿತ್ಯದಲ್ಲಿ ಉಲ್ಲೇಖಿತವಾಗಿರುವ ಇಂದ್ರೋತ್ಸವವನ್ನು ಹೋಲುತ್ತದೆ. ನಾಡಿನ ಪಾಣರೆಲ್ಲ ಒಟ್ಟು ಸೇರಿ ವರ್ಷಕ್ಕೊಮ್ಮೆ ಅಥವಾ ಹಲವು ವರ್ಷಗಳಿಗೊಮ್ಮೆ ರಾಜರ ಆಶ್ರಯ ಪಡೆದು ಹಿಂದೆ ತಮಿಳುನಾಡಿನಲ್ಲಿ ಇಂದ್ರೋತ್ಸವ ಆಚರಿಸುತ್ತಿದ್ದರು. ಇದೊಂದು ದೊಡ್ಡ ಕಲೋತ್ಸವವಾಗಿತ್ತು. ಚೇರೇನಾಡಿನ ಸಂತ ಕವಿ ಇಳಂಗೋ ವಡಿಗಳ್ ಬರೆದ ಶಿಲಪ್ಪದಿಕಾರಂನಲ್ಲಿ ಇಂದ್ರೋತ್ಸವದ ವರ್ಣನೆ ಇದೆ. ಈ ಜಾಲಾಟ ಇಲ್ಲವೇ ಪಾಣಾರಾಟ ಇಂದ್ರೋತ್ಸವದ ಪರಂಪರೆಯಿಂದಲೇ ಬಂದಿರಬಹುದು.

ಜನಪದ ಕುಣಿತಗಳು

ತುಳುನಾಡಿನಲ್ಲಿ ಸುಮಾರು ಮೂವತ್ತಕ್ಕಿಂತಲೂ ಹೆಚ್ಚು ಜನಪದ ಕುಣಿತಗಳಿದ್ದವು. ಅವುಗಳಲ್ಲಿ ಕೆಲವೊಂದನ್ನು ಈಗ ಬೇರೆ ಬೇರೆ ಜಾತಿಯವರು ನಡೆಸಿಕೊಂಡು ಬರುತ್ತಿದ್ದರೂ ಕೂಡಾ ಹೆಚ್ಚಿನವುಗಳನ್ನು ಹುಟ್ಟುಹಾಕಿದವರು ನಲಿಕೆಯವರು. ಆಟಿ (ಆಗೋಸ್ತು ೧೫ ರಿಂದ) ತಿಂಗಳಿನಿಂದ ತೊಡಗಿ ಪತ್ತನಾಜೆ (ಮೇ ೨೫)  ಯವರೆಗೆ ನಲಿಕೆಯವರಿಂದ ಬೇರೆ ಬೇರೆ ರೀತಿಯ ಕುಣಿತಗಳು ನಡೆಯುತ್ತಲೇ ಇರುತ್ತವೆ. ಆಟಿ ಕಳೆಂಜ, ಸೋಣದ ಜೋಗಿ, ಸೋಣದ ಮದಿಮಾಲ, ಜೋಗಿ ಪುರುಷೆ, ಕಾವೇರಿ ಪುರುಷೆ, ಮಾದಿರ, ಮಾಯಿದ ಪುರುಷೆ, ಮಾಂಕಾಳಿ, ಮರ‍್ವೆ, ಕನ್ಯಾಪು, ಪೊಲ್ಸೊಂಡಿ ಪೋಪಿನಿ, ಮೂರ್ಲೆ ನಲಿಕೆ, ಕೊರಗ ನಲಿಕೆ, ಏರುಕೋಲ, ಕುದುರೆ ಕೋಲ, ನಾಗಕೋಲ, ಕೀಳುಕೋಲ, ಕೀಳು ಕುದುರೆ, ಸಾವು ಕೋಲ, ಕಾಲೆ ಕೋಲ, ರಾಹು ಗುಳಿಗ ಕೋಲ, ಗದ್ದೆಕೋರಿ ಹೇಳಿಕೆ ಕುಣಿತ, ಕೆಡ್ಡಸರದ ಕುಣಿತ ಮುಂತಾದ ಇಪ್ಪತ್ತಕ್ಕಿಂತಲೂ ಹೆಚ್ಚು ಕುಣಿತಗಳನ್ನು ರೂಪಿಸಿದರು ನಲಿಕೆಯವರು. ಈ ಸೃಷ್ಟಿಯಲ್ಲಿ ನಲಿಕೆ ಮಹಿಳೆಯರ ಪಾತ್ರ ಹಿರಿದಾದುದು. ಇವುಗಳಲ್ಲಿ ಮಾದಿರ, ಸೋಣದ ಮದಿಮಾಳ್, ಪೊಲ್ಸೋಡಿ ಪೋಪಿನ, ಮೂರ್ಲೆ ನಲಿಕೆ ಮುಂತಾದವುಗಳು ಸ್ತ್ರೀಯರದ್ದೇ ಆದ ಕುಣಿತಗಳು.

ಮಾದಿರ ಕುಣಿತದ ತಂಡದಲ್ಲಿ ನಾಲ್ಕದಿಂದ ಏಳೆಂಟು ಜನರವರೆಗೆ ಸ್ತ್ರೀಯರಿರುತ್ತಾರೆ. ಒಬ್ಬಾಕೆ ಮುಖಕ್ಕೆ ಬಿಳಿ ಬಣ್ಣ ಹಚ್ಚಿಕೊಂಡು ಕಣ್ಣಿಗೆ ಕಾಡಿಗೆ, ಹಣೆಗೆ ಕೆಂಪು ಬೊಟ್ಟು, ಗಲ್ಲಕ್ಕೆ ಚುಕ್ಕೆ ಇಟ್ಟುಕೊಂಡಿರುತ್ತಾಳೆ. ಉಳಿದವರು ಸಾದಾ ಉಡುಪಿನಲ್ಲಿರುತ್ತಾರೆ. ಹೆಂಗಸರು ಸೀರೆಯನ್ನು ಗಂಟಿ ಹಾಕಿ ಉಡುತ್ತಾರೆ. ರವಕೆ ಹಾಕದೆ ಇದ್ದ ಕಾಲದಲ್ಲಿ ಎದೆಗೆ ಬೈರಾಸಗಳನ್ನು ಹೆಗಲಿನ ಮೂಳಕ ನೀಡಾಗಿ ಕಟ್ಟಿಕೊಳ್ಳುತ್ತಿದ್ದರು. ಇದನ್ನು “ಸೆಂಬೆ” ಎನ್ನುತ್ತಿದ್ದರು. ಈಗ ಸೆರಗನ್ನೇ ಈ ರೀತಿಯಾಘಿ ಕಟ್ಟಿಕೊಳ್ಳುತ್ತಾರೆ. ತಲೆಗೆ ಹೂ ಮುಡಿದುಕೊಂಡು ಮುಖವನ್ನು ಸಿಂಗರಿಸಿಕೊಂಡಿರುತ್ತಾರೆ. ಮಾದಿರ ವೇಷ ಹಾಕಿದವಳು ಮಾತ್ರ ಕಾಲಿಗೆ ಗೆಜ್ಜೆ ಕಟ್ಟಿಕೊಂಡಿರುತ್ತಾಳೆ. ಹೆಂಗಸರು ಹಾಡು ಹೇಳಿಕೊಂಡು ತೆಂಬರೆ ಬಾರಿಸಿಕೊಂಡು ಕುಣಿತ ನಡೆಸುತ್ತಾರೆ.

ಸಣ್ಣ ಸಣ್ಣ ಹೆಜ್ಜೆಗಳನ್ನಿಟ್ಟುಕೊಂಡು ಕೈಗಳಿಂದ ಅಭಿನಯ ಮಾಡುತ್ತಾ ಸುತ್ತು ಕುಣಿಯುತ್ತಾರೆ. ಈ ಕುಣಿತದ ಬಳಿಕ ಕೋಲಾಟ ನಡೆಸುತ್ತಾರೆ. ಕೋಲಾಟ ಮುಗಿದ ಬಳಿಕ ಕುಣಿತದ ತಂಡದವರು ಕಸರತ್ತು ನಡೆಸುತ್ತಾರೆ. ಚೇಲು ಬಗ್ಗುವ ಆಟ ಮಾಡಿ ತೋರಿಸುತ್ತಾರೆ. ನೆಲದ ಮೇಲಿಟ್ಟು ನಾಣ್ಯವನ್ನು ಚೇಳು ಬಗ್ಗಿ ಅವಳಮೇಲಿಂದ ಹಾರುತ್ತಾಳೆ. ಇದನ್ನು ಬೆರಿ ಎಡ್ಪುನೆ ಎನ್ನುತ್ತಾರೆ. ಬಳಿಕ ಮನೆಯವರು ಒಂದೆರಡು ಸೇರು ಭತ್ತವನ್ನು ಗೆರಸೆಯಲ್ಲಿ ಹಾಕಿಕೊಡುತ್ತಾರೆ. ಒಬ್ಬಾಕೆ ಗೆರಸೆಯಲ್ಲಿ ಹಾಕಿದ ಭತ್ತವನ್ನು  ಮೇಲಕ್ಕೆ ಹಾರಿಸಿ ಆ ಭತ್ತ ಕೆಳಗೆ ಬೀಳುವ ಮೊದಲು ಗೆರಸೆಯನ್ನು ಅಡಿಮೇಲು ಮಾಡಿ ಹಿಡಿಯುತ್ತಾಳೆ. ಹೀಗೆ ಹಲವು ಚಮತ್ಕಾರಗಳನ್ನು ತೋರಿಸಿ ಬಳಿಕ ಕೊಟ್ಟ ಭತ್ತವನ್ನು ತಮ್ಮ ಜೋಳೀಗೆಗೆ ಸೇರಿಸಿಕೊಳ್ಳುತ್ತಾರೆ. ಈ ಕಸರತ್ತುಗಳನ್ನು ಕಂಡೋ ಏನೋ ಪಾಣಾರ ಮಹಿಳೆಯರು ದೊಂಬರಾಟದವರನ್ನು ಮೀರಿಸಿದರೆಂದು ಜನರು ಅಭಿಪ್ರಾಯಪಟ್ಟಿರಬೇಕು.

ನಲಿಕೆ ಮಹಿಳೆಯರು ಅಶುಕವಿಗಳು. ಅವರು ಬೇಕಾದಂತೆ ಹಾಡುಗಳನ್ನು ರಚಿಸಿಕೊಳ್ಳುತ್ತಾರೆ. ಹೀಗಾಗಿ ಮಾದಿರ ಕುಣಿತದ ಹಾಡಿಗೆ ಬಹಳಷ್ಟು ಪಾಠಾಂತರಗಳಿವೆ.

ಮಾದಿರೋ ಮಾದಿರೋ ದಾರಿಲೋ ಮಾದಿರೋ
ಮಾದಿರೊಂದು ಪನ್ಪುನಾಳ್ ಮಾಪೊರ್ಲೆದಿಯೋ
ಬೊಳ್ಳೆರಿ ಚೆನ್ನಗ್ ಅಡುವೆಂದುಳ್ಳನೋ ಮಾದಿರ
ಕಂಚಿನನೇ ತಟ್ಟ್‌ಗೊಡು ಬಳಸ್ವೆಂದುಳ್ಳನೋ ಮಾದಿರ
ಎನನ್ ಕೊನೊಪಿ ಚೆನ್ನೆರಿ ಮಗೆ ಏರೆನಾತೆಗ್ ಉಲ್ಲೆನೋ
ಆಯನಾತೇ ಇಂಬ್ಯನಾತೇ ತಪ್ಪುದ ಗುಂಟೊ ದಾತೆ
ತಪ್ಪುಲಾ ಜಾಪಿ ಗುಂಟೊದಾತೆ ಅರಿಲಾ ಲಪ್ಪಿ ಬಳ್ಳದಾತೆ
ಕೊನಪೆಂಡಲಾ ಕೊನೊವಡೆ ಇನಿಯೇ ಕೊನವಡೆ ||

(ಮಾದಿರ ಎಂದರೆ ಚುರುಕು ಹೆಣ್ಣು ಎಂದರ್ಥ. ಆಕೆ ಬಲು ಚೆಲುವೆ. ಬೊಳ್ಳೇರಿ ಎಂದರೆ ಬಿಳಿ ಬಣ್ಣದ ಚೆಲುವನನ್ನು (ಸುಂದರನನ್ನು) ಮದುವೆಯಾಗುತ್ತೇನೆ ಎನ್ನುವ ಆಸೆ ಆಕೆಗೆ. ಕಂಚಿನ ಸಟ್ಟುಗದಲ್ಲಿ ಆತನಿಗೆ ಬಡಿಸಬೇಕೆಂಬ ಆಸೆ. ಆತ ಎಷ್ಟು ಎತ್ತರಕ್ಕಿದ್ದಾನೆಂದು ಆಕೆಗೆ ಕುತೂಹಲ. ಆತನ ಎತ್ತರ ಅಷ್ಟಿಷ್ಟಲ್ಲ. ಎಂದು ಹೇಳಲು ಬರುವುದಿಲ್ಲ. ಗೂಟದ ಛತ್ರಿ, ಅಕ್ಕಿ ಅಳೆಯುವ ಬಳ್ಳದಷ್ಟು ಹೀಗೆಂದು ಹೇಳುತ್ತಾ ಗೆಳತಿಯರು ತಮಾಷೆ ಮಾಡುತ್ತಾರೆ. ನಿನಗೆ ಆತನನ್ನು ತೋರಿಸಲು ಇಂದೇ ಕರೆತರುತ್ತೇನೆ ಎನ್ನುತ್ತಾರೆ).

ಪಾಠಾಂತರ ೨

ಓ ದಾರಿಲೋನೆ ದಾರಿಲೋ ಮಾದಿರೊ
ಮಾದಿರೊನೇ ಆಪಿನಾಲ್ ಮಾಪೊರ್ಲೆದಿ ಮಾದಿರೊ
ಮಾದಿರೊನೆ ಅಪಿನಾಳ್ ಮಾಪೊರ್ಲೆದಿಯೋ
ಚನ್ನೇರಿಂದ್ ಅಪಿನಾಯೆ ಬೊಳ್ಯೆರಿ ಚೆನ್ನೆನೋ ||
ಎಣ್ಣೆ ಮಂಜಲ್ ತರೆ ಬಗ್ತಲೆ ಚಿನ್ನಂಗೊ ಡುಂಡುಗೆ
ಮೈತೆನೆನೇ ಬರ‍್ಪಿಂಚಿ ಬರವುಡುಲ್ಲೆನೋ
ಆ ಮಡಲ್ ಈ ಮಡಲ್ ಕುಬೆ ಒಡಿಪುಂಡು ಮಾದಿರ
ಕಂಚಿಕಾರೆ ಮೈತಿ ಕಡವು ಕೈ ಒಡಿಪುಂಡು
ಬರಿಯರಂದ್ ಪೋತಲ್ ಮಾದಿರ ಬಾಳ ಬಡಕಯಿ ರಾಜ್ಯೊಗು
ಕುಲ್ಲುದ್ ಬರಿಯೆರೆ ಬುಡಯೆ ಸಮಲೆ ಮಗೆ
ಸಮ್ಮಲೆ ಮಗ ಬಾರಿಗ್ ಪೋದು ದಾನೆ ಕನತ ಮಾದಿರ
ಅವ್ವೇ ತೂಲೆ ಉಂದುವೇ ತೂಲೆ ಮೈಯೇರ ಪದ್ದಯಿ
ಮೈ ಯೇರ‍್ನ ಪದ್ದಾಯಿ ಡುಂಡಾಂಡ್ ಸೂಳೆ ಕುಣಿತೊನೆ ಮಾದಿರ
ಕಡ ಕಷ್ಟ ಕಣನೀರ್ ನ್‌ಅಂಗೈಡೊಚ್ಚನು
ಮಾದಿರ ಜೇವು ಮದಿಮಾಲಾಲಾತ್‌ನೆ ಏರಜೆದೇಬೆರೆ ಗುಂಡೊಡು
ಪಂಬತ ಮಗ ಪಾಳೆಬರೆತ್ನೆ ಮಲೆ ಪರ್ವತೊಡು
ಉಪ್ಪುಗುಂದು ಮುಂಚಿಗುಂದು ಪೋಯಿನಾಲ್ ಮಾದಿರ
ಮೈರೆನ ಪಾದೆಟ್ ಪೊಣ್ಣು ಪೋದು ಪೊಂಜೊವಾತಲ್ ಮಾದಿರ
ಮುಡಾಯಿ ಪೋವೋಡುಂದು ಮುರನಿಕುಲ್ಯರ್ ಮಾದಿರ
ಬೈತ ಕೋಲು ಡಂಕ್‌ಂಡ್‌ದ್ ಬಲ ಸಗಿನಾಂಡ್ ಮಾದಿರ
ಕಾಯಿ ಪೋಯಿನ ವೇಳ್ಯೊಡ್ ತೆರದಿಂಜ ಪೂವಾಂಡ್
ಪೂಪೋಪಿನ ವೇಳ್ಯೊಡ್‌ ತರೆದಿಂಜ ಪೂವಾಂಡ್
ಆ ಮಡಲ್ ಈ ಮಡಲ್ ಕುಬೆ ಒಡಿಪುಂಡು ಮಾದಿರ
ಕಂಚರ ಜೇವು ಮೈತಿ ಕಡವು ಕೈ ಒಡಿಪುಂಡು
ಅಂಚ ಇಂಚ ಪಂಡ್‌ಂಡ ಎಲ್ಲೆ ಮುಟ್ಟಲಾ ಮುಗಿಯಂದೆ
ಮಾದಿರೊಗು ಪಂಡ್ ಪಂಡ್‌ದ್ ದನಿಲಾ ಬೂರುಂಡೆ
ಉಜ್ಜೆರ್ ಬಲ್ಲ್ ಒಚ್ಚೊಚ್ಚಿ ಕೈ ಮೈ ಬೇನಾಂಡೆ
ಬಿರಪ ಮದ್ದೊಲಿ ದನಿಗುಳೆ ಕಂಟೆ ಒಪ್ಪ ಮಗುರುಂಡೆ

(ಓ ದಾರಿಲೊನೆ ದಾರಿಲೋ ಮಾದಿರೊ, ಮಾದಿರೊ ಆಗುವವಳು ಚೆಲುವೆ ಮಹಾ ಚೆಲುವೆ. ಚೆನ್ನೇರಿ ಆಗುವವನು ಬಿಳಿ ಬಣ್ಣದ ಚೆಲುವ. ಮಾದಿರ ಎಣ್ಣೆ, ಅರಿಶಿನ, ಚಿನ್ನಾಭರಣಗಳಿಂದ ಸಿಂಗರಿಸಿಕೊಂಡಿದ್ದಾಳೆ. ಮೈ ಸಿಂಗರಿಸಿಕೊಂಡಿದ್ದಾಳೆ. ಭಾವಮೈದುನ ಬರುವ ದಾರಿ ಕಾಯುತ್ತಿದ್ದಾಳೆ. ತೆಂಗಿನ ಮರದಲ್ಲಿ ಕಾಯಿ ತುಂಬಾ ಜೋತಾಡುತ್ತದೆ. ಕಂಚುಗಾರ ಮಾಡಿದ ಕಡಗ ಕೈಯಲ್ಲಿ ಜೋತಾಡುತ್ತಿದೆ. ಉತ್ತರದ ರಾಜ್ಯಕ್ಕೆ ಬಾಳಲೆಂದು ಮಾದಿರ ಹೋಗಿದ್ದಾಳೆ. ಅಲ್ಲಿ ಕುಳೀತು ಸಖ ಪಡೆಯಲು ಆಕೆಯ ಮಾವನ ಮಗ ಬಿಡಲಾರ. ಮಾವನ ಮನೆಯಿಂದ ನೀನೇನು ತಂದೆ ಎಂದಾಕೆಯನ್ನು ಕೇಳುತ್ತಾರೆ. ಅದು ನೋಡಿ ಇದನ್ನು ನೋಡಿ,ಮೈತುಂಬಾ ಆಭರಣ. ಮೈತುಂಬಾ ಆಭರಣವಿದ್ದಾರಾಕೆ ಸೂಳೆ ಕುಣಿತ ನಡೆಸುವವಳು. ಕಡು ಕಷ್ಟ ತಾಳಲಾರದೆ ಕಣನೀರು ಒರೆಸಿಕೊಳ್ಳುವವಳು. ಪಂಬದನ ಮಗ ಹಾಳೆ ಕತ್ತರಿಸಿದ್ದು ಮಲೆ ಪರ್ವತದಲ್ಲಿ. ಮಾದಿರ ಮೈ ನೆರೆದಿದ್ದು ಮೈರನ ಪಾದೆಯಲ್ಲಿ. ಮೂಡುದಿಕ್ಕಿಗೆ ಹೋಗುತ್ತೇನೆಂದು ಮಾದಿರ ಮೈನೆರೆದದ್ದು ಮೈರನ ಪಾದೆಯಲ್ಲಿ. ಮೂಡುದಿಕ್ಕಿಗೆ ಹೋಗುತ್ತೇನೆಂದು ಮಾದಿರ ಮೊನ್ನೆ ಹೊರಟಾಗ ಬೈಕೋಲು ಕಾಲಿಗೆ ತಾಗಿ ಅಪಶಕುನವಾಯಿತು. ಕಾಯಿ ಆಗುವ ವೇಳೆಗೆ ಮಡಕೆ ತುಂಬಾ ಪದಾರ್ಥ. ಹೂ ತುಂಬುವ ವೇಳೆಗೆ ತಲೆ ತುಂಬಾ ಹೂವು, ತೆಂಗಿನ ಮಡಲುಗಳು ಕಾಯಿ ತುಂಬಿ ತೂಗಾಡುತ್ತವೆ. ಕಂಚುಗಾರ ಹುಡುಗ ಮಾಡಿದ ಕಡಗ ಕೈಯಲ್ಲಿ ಜೋತಾಡುತ್ತವೆ. ಹಾಗೆ ಹೀಗೆ ಹೇಳಿದರೆ ಮಾದಿರನ ಕತೆ ನಾಳೆಯವರೆಗೆ ಮುಗಿಯದು. ಹೇಳಿ ಹೇಳಿ ಗಂಟಲು ಒಣಗಿ ಹೋಯಿತು. ಒನಕೆ, ಹಗ್ಗ ಎಳೆದು ಎಳೆದು ಮೈಕೈಯೆಲ್ಲಾ ನೋವಾಯಿತು. ಮದ್ದಳೆ, ಧ್ವನಿ, ಗಂಟೆ ಧ್ವನಿ ಒಟ್ಟಿಗೆ ಮೊಳಗಿತು).

ಈ ಮಾದಿರ ಹಾಡನ್ನು ಹಾಡಿಕೊಂಡು ನಲಿಕೆ ಮಹಿಳೆಯರು ಮದುವೆ ಮತ್ತಿತರ ವಿಶೇಷ ಸಂದರ್ಭಗಳಲ್ಲಿ ಕುಣಿಯುತ್ತಾರೆ. ಮಾದಿರ ಕುಣೀತ ಹೆಚ್ಚಾಗಿ ದೀಪಾವಳಿ ಸಂದರ್ಭದಲ್ಲಿ ನಡೆಯುತ್ತದೆ. ಜಾಲಾಟ, ದೇಯಿ ನಲಿಕೆಯ ಸಂದರ್ಭದಲ್ಲಿ ಕುಣಿಯುತ್ತಾರೆ. ಈ ಹಾಡಿನಲ್ಲಿ ಚೆಲುವೆಯೊಬ್ಬಳು ತನ್ನ ಸೋದರಮಾವನ ಮಗನನ್ನು ಪ್ರೀತಿಸುವುದು, ಆಖೆಯ ಸೌಂದರ್ಯ ಆತನ ಸಂಪಾದನೆಯಿಂದ ಸುಖವಾಗಿ ಬಾಳುತ್ತೇನೆಂದು ನಂಬುವುದು, ಕೊನೆಗೆ ಬಡತನದಲ್ಲಿ ಕಣ್ಣೀರೊರಸಿಕೊಳ್ಳುವುದು ಇತ್ಯಾದಿ ವಿಷಯ ತುಂಬಿವೆ. ಮಾತಿನ ಚಮತ್ಕಾರ, ವಿನೋದ, ಹೆಣ್ಣಿನ ಆಸೆ, ಆಕಾಂಕ್ಷೆಗಳು ಈ ಹಾಡಿನಲ್ಲಿ ತುಂಬಿರುತ್ತವೆ.

ಮೂರ್ಲೆ ನಲಿಕೆ

ಭತ್ತದ ಬೇಸಾಯವನ್ನು ನಲಿಕೆಯವರು ಒಂದು ವಋತ್ತಿಯನ್ನಾಗಿ ಪರಿಗಣಿಸದೆ ಒಂದು ಆಚರಣೆಯನ್ನಾಗಿ ನಡೆಸುತ್ತಾರೆ. ಕೆಡ್ಡೆಸವನ್ನು ಅವರು ಭೂಮಿದೇವಿಯ ಋತುಮತಿಯಾದ ಹಬ್ಬವೆಂದು ಬಗೆದರೆ ಗದ್ದೆ ಕೆಲಸದ ಮುಕ್ತಾಯ (ಗದ್ದೆಗೋರಿ) ವನ್ನು ಭೂಮಿದೇವಿಯ ಮದುವೆ ಎಂದು ಭಾವಿಸುತ್ತಾರೆ. ಗದ್ದೆಗೋರಿಯ ದಿನ ಮೂರ್ಲೆ ಕೊಟ್ಯವಿರುತ್ತದೆ. ಈ ಗುಡಿಯಲ್ಲಿ ಎತ್ತರಕ್ಕೆ ಒಂದು ಹಲಗೆ ಇಟ್ಟಿರುತ್ತಾರೆ. ಈ ಹಲಗೆಯ ಮೇಲೆ ಮೂರು ಮಣ್ಣಿನ ಕಲಶಗಳಿರುತ್ತವೆ. ಅವುಗಳನ್ನು ಮೂರಿ ಎನ್ನುತ್ತಾರೆ. ಈ ಕಲಶಗಳ ಹೊರಮೈಗೆ ನಾಗನ ಹೆಡೆಯ ಚಿತ್ತಾರವಿರುತ್ತದೆ. ಈ ಕಲಶಗಳನ್ನು ತೊಳೆದು ಶುದ್ಧ ನೀರನ್ನು ತುಂಬಿ ಪೂಜಾರಿ ಪೂಜೆ ನಡೆಸುತ್ತಾನೆ. ಇದರ ಎದುರು ಭಾಗದಲ್ಲಿ  ಮೂರು ಎಡೆ ಬಿಡಿಸಲಾಗುತ್ತದೆ. ನಲಿಕೆ ಹೆಂಗಸರು ಮಿಂದು ಮುಡಿಯುಟ್ಟು ಬಂದು ಕಲಶಗಳ ಮುಂದೆ ನಿಲ್ಲುತ್ತಾರೆ. ಮೂರ್ಲೆ ಪೂಜೆ ಮುಗಿದ ಬಳಿಕ ಅವರು ಮೂರ್ಲೆ ಕೊಟ್ಯದ ಎದುರು ಹಾಡು ಹೇಳಿಕೊಂಡು ತೆಂಬರೆ ಬಡಿಸುಕೊಂಡು ಕುಣಿತ ನಡೆಸುತ್ತಾರೆ. ಈ ಹಾಡಿನಲ್ಲಿ ಮೂರ್ಲೆ ಸೃಷ್ಟಿಯಾದ ಕತೆ ಇದೆ. ಕುಣಿತದಲ್ಲಿ ಕೆಲವರಿಗೆ ಆವೇಶ ಬರುತ್ತದೆ. ಕುಣಿತ ಮುಗಿದ ಬಳಿಕ ಮನೆಯ ಯಜಮಾನ ಅವರಿಗೆ ಸೀರೆಯ ಉಡುಗೊರೆ ನೀಡುತ್ತಾನೆ. ಇದು ನಾಗಾರಾಧನೆಯ ಒಂದು ಪ್ರಭೇದ.

ಸೋಣದ ಮದಿಮಾಲ್

ದಕ್ಷಿಣ ಕನ್ನಡ ಜಿಲ್ಲೆಯ ನಲಿಕೆಯ ಹೆಂಗಸರು ಈ ಕುಣಿತ ನಡೆಸುತ್ತಾರೆ. ಈ ಕುಣಿತ ಸೋಣ (ಶ್ರಾವಣ) ತಿಂಗಳಲ್ಲಿ ನಡೆಯುತ್ತದೆ. ಇದರಲ್ಲಿ ಇಬ್ಬರು ಹೆಂಗಸರಿರುತ್ತಾರೆ. ಒಬ್ಬಾಕೆ ಪ್ರಾಯದವಳು. ಆಕೆ ತೆಂಬರೆ ಬಡಿದುಕೊಂಡು ಹಾಡು ಹೇಳುತ್ತಾಳೆ. ಇನ್ನೊಬ್ಭಳು ಯುವತಿ. ಸೀರೆ ರವಕೆ ಉಡುಪು ಧರಿಸಿ, ತಲೆ ನೆಯ್ಯು ಜಡೆ ಬಿಟ್ಟು ತುಂಬಾ ಹೂವು ಮುಡಿದುಕೊಂಡಿರುತ್ತಾಳೆ. ಕೈತುಂಬಾ ಗಾಜಿನ ಬಳೆ, ಕೊರಳಿಗೆ ಮಣಿಸರ, ಕಿವಿಗೆ ಓಲೆ ಧರಿಸಿ ಆಕೆ ವಧುವಿನಂತೆ ಅಲಂಕಾರ ಮಾಡಿಕೊಂಡಿರುತ್ತಾಳೆ. ಮಾದಿರ ಕುಣಿತಕ್ಕೆ ಹೇಳುವ ಹಾಡನ್ನೇ ಇಲ್ಲಿ ಕೂಡಾ ಬಳಸಿಕೊಳ್ಳಲಾಗುತ್ತದೆ. ಹಾಡಿನ ಸಾಲನ್ನು ಕುಣಿತದವಳು ಪುನರುಚ್ಚರಿಸಿ ಸಣ್ಣ ಸಣ್ಣ ಹೆಜ್ಜೆಗಳನ್ನಿಟ್ಟು ಬಳೆಗಳಿಂದ ತುಂಬಿದ ಕೈಗಳಿಂದ ಗಿಲಿ ಗಿಲಿ ಸದ್ದು ಮಾಡುತ್ತಾ ಕುಣಿಯುತ್ತಾಳೆ.

ನಲಿಕೆಯವರು ಪ್ರಕೃತಿಯ ಆರಾಧಕರು. ತಮ್ಮ ಸೋಣದ ಮದಿಮಾಲ್ ಕುಣಿತದಲ್ಲಿ ಅವರು ಪ್ರಕೃತಿಯನ್ನು ಒಂದು ಮದುಮಗಳು ಹೆಣ್ಣಾಗಿ ರೂಪಿಸಿಕೊಳ್ಳುತ್ತಾರೆ. ಶ್ರಾವಣ ಮಾಸದಲ್ಲಿ ಚಿಗುರೊಡೆದ ಗಿಡಮರ, ಬಳ್ಳಿಗಳನ್ನು ಕಂಡ ಅವರು ಪ್ರಕೃತಿ ಮದುಮಗಳಂತೆ ಕಾಣಿಸುತ್ತಾಳೆ ಎಂದು ಭಾವಿಸಿಕೊಂಡು ಈ ಕುಣೀತ ನಡೆಸುತ್ತಾರೆ. ಇದೊಂದು ರೂಪಕ.