ನಂಬಿಕೆ, ನಡವಳಿಕೆಗಳು

ಭೂತರಾದನೆ, ನಾಗಾರಾಧನೆಗಳೇ ಪ್ರಸಿದ್ಧ ಆರಾಧನಾ ಕಲೆಗಳಾಗಿರುವ ಈ ತುಳುನಾಡಿನಲ್ಲಿ ಪಾಣಾರರನ್ನು ಸಾಂಸ್ಕೃತಿಕ ಪ್ರತಿನಿಧಿಗಳೆಂದು ಕರೆಯಬಹುದಾಗಿದೆ. ಭೂತನರ್ತಕನ ಕುಟುಂಬ ಪರಿವಾರದವರೆಲ್ಲ ಆತನಿಗೆ ಸಹಚರ, ಪರಿಚಾರಕರಾಗಿ ನಿಲ್ಲುತ್ತಾರೆ.  ಮಹಿಳೆಯರು ಕೂಡಾ ಪುರುಷರ ಸರಿಸಾಟಿಯಾಗಿ ನಿಂತು ಕೆಲಸ ಮಾಡುತ್ತಾರೆ.  ಪುರುಷರಂತೆ ಅವರೂ ಕೂಡಾ ಕೆಲವೊಂದು ಜನಪದ ಕುಣಿತಗಳನ್ನು ನಡೆಸಬಲ್ಲರು.  ಪುರುಷರ ನರ್ತನಕ್ಕೆ ತೆಂಬರೆ ಬಡಿದು  ಹಾಡು ಹೇಳಬಲ್ಲರು. ಪಾಣಾರು ನಡೆಸುವ ವೈದ್ಯವೃತ್ತಿಯನ್ನು ತಾವೂ ನಡೆಸಬಲ್ಲರು. ಅಷ್ಟೇ ಅಲ್ಲದೆ ಅವರ ಉಪಕಸಬುಗಳಾದ ಮುಟ್ಟಾಳೆ ತಯಾರಿ, ಚಾಪೆ, ಬುಟ್ಟಿ ಹೆಣೆಯುವ ಕೆಲಸದಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚು ಪರಿಣಿತರು. ಸಂಧಿ, ಪಾಡ್ದನ, ಕವಿತೆ, ಗಾದೆ, ಒಗಟುಗಳನ್ನು ಹೆಂಗಸರು ಹೆಚ್ಚು ಸ್ಮರಣೆಯಲ್ಲಿ ಇಟ್ಟುಕೊಳ್ಳಬಲ್ಲವರು. ಸುಶ್ರಾವ್ಯವಾಗಿ ಹಾಡುವುದರಲ್ಲೂ ಅವರೇ ನಿಪುಣರು.

ಪಾಣಾರರು ಶಕ್ತಿಯ ಆರಾಧಕರು. ಶಕ್ತಿಯನ್ನು ಅವರು ಗುರು ಉಳ್ಳಾಲ್ತಿ ಎಂದು ಆರಾಧಿಸುತ್ತಾರೆ. ವಿಶೆಷ ಸಂದರ್ಭಗಳಲ್ಲಿ ಗುರು ಉಳ್ಳಾಳ್ತಿಗೆ ನೇಮ ಸಲ್ಲಿಸುತ್ತಾರೆ. ಒಚ್ಚದ ದೆಯ್ಯು ಮತ್ತು ಬಂಗಾಡಿ ಕೋಲಪರಣ್ಣ  ತಮ್ಮ ಸಮಾಜದ ಸಾಂಸ್ಕೃತಿಕ ನಾಯಕರೆಂದು ನಲಿಕೆಯವರು ಪರಿಗಣಿಸುತ್ತಾರೆ. ಪಾಣಾರ ಸಮಾಜಕ್ಕೆ ಊರಿಗೊಬ್ಬ ಗುರಿಕಾರ (ನಾಯಕ)ನಿರುತ್ತಾನೆ.ಆತನ ಮಾತನ್ನು ಸಮಾಝದ ಸದಸ್ಯರು ಗೌರವದಿಂದ ಪಾಲಿಸುತ್ತಾರೆ. ಗುರಿಕಾರನಿಗೆ ಇರುವಷ್ಟೇ ಗೌರವ ಗುರಿಕಾರನ ಪತ್ನಿಗೂ ಇರುತ್ತದೆ. ಸ್ತ್ರೀಯರೇ ಪ್ರಧಾನ ಪಾತ್ರ ವಹಿಸಿ ನಡೆಸುವ ಮಗುವಿನ ನಾಮಕರಣ, ಬಾಣಂತಿ ವಿಶೇಷ ಸ್ನಾನ, ಮದಿಮಾಳ್ ಮದುವೆ (ರುತುಶಾಂತಿ) ಬಯಕೆ ಇತ್ಯಾದಿ ಸಮಾರಂಭಗಳನ್ನು ಪುರುಷರ ಸಹಾಯವಿಲ್ಲದೆ ವಿಧಿವತ್ತಾಗಿ ಬಹಳ ಅಚ್ಚುಕಟ್ಟಾಗಿ ನಡೆಸಬಲ್ಲರು.

ಪಾಣಾರರು ದೈವ – ದೇವರುಗಳ ಬಗ್ಗೆ ಅಪಾರ  ನಂಬಿಕೆಯುಳ್ಳವರು. ಜ್ಯೋತಿಷ್ಯ, ಪವಾಡಗಳ ಬಗ್ಗೆ ವಿಶ್ವಾಸವುಳ್ಳವರು. ಮಹಿಳೆಯರು ಪುರುಷರಿಗಿಂತಲೂ ಹೆಚ್ಚು ನಂಬಿಕೆಯುಳ್ಳವರೂ, ಕಷ್ಟಕಾಲ ಬಂದಾಗ ತಾವು ನಂಬಿದ ದೈವ, ದೇವರಿಗೆ ಹರಕೆ ಹೊರುತ್ತಾರೆ. ಒಂದಿಷ್ಟು ಹಣವನ್ನು ಮುಡಿಪಾಗಿಟ್ಟು ಕಾರ್ಯ ಈಡೇರಬೇಕಾದರೆ, ಸಮಸ್ಯೆ ಪರಿಹಾರವಾದರೆ, ನಿರ್ದಿಷ್ಟ ಸೇವೆ ಸಲ್ಲಿಸುವುದಾಗಿ ಪ್ರಾರ್ಥನೆ ಮಾಡಿಕೊಳ್ಳುತ್ತಾರೆ.  ಪಾಣಾರರಲ್ಲಿ ವ್ಯಭಿಚಾರ, ಅನೈತಿಕ ವ್ಯವಹಾರಗಳು ತೀರಾ ಕಡಿಮೆ. ಎಲ್ಲಾದರು ಇಂತಹ ಘಟನೆ ಕಂಡು ಬಂದಲ್ಲಿ ಅವರನ್ನು ಪಂಚಾಯತಿ ನಡೆಸಿ ಜಾತಿಯಿಂದ ಹೊರಗಿಡುತ್ತಾರೆ.

ಪಾಣಾರ ಮಹಿಳೆಯರೂ ಪುರುಷರಂತೆ ವಾಕ್ಪಟುತ್ವ ಉಳ್ಳವರು ಅಲಂಕಾರಪ್ರಿಯರು ಉಡುಗೆ-ತೊಡುಗೆಗಳನ್ನು ಶುಭ್ರವಾಗಿ ಇಟ್ಟುಕೊಳ್ಳುವರು. ಮಡಿವಂತಿಕೆಯರು ಎಂಜಲು ಹಳಸಿದ ವಸ್ತುಗಳನ್ನು ತಿನ್ನಲೊಲ್ಲರು.  ಮಆಂಸಾಹಾರಿಗಳಾದರೂ ದನ, ಹಂದಿ ಮುಂತಾದ ಪ್ರಾಣಿಗಳ ಮಾಂಸವನ್ನು ತಿನ್ನಲಾರರು.  ಸದಾ ಮುಗುಳ್ನಗೆಯುಳ್ಳವರು. ಮೃದು ಮತ್ತು ವಿನಯಪೂರಕ ಮಾತಿನವರು. ಯಾರೊಡನೆಯೂ ಸಿಟ್ಟು, ದ್ವೇಷ ಕಟ್ಟಿಕೊಳ್ಳದ ಸಾತ್ವಿಕ ಸ್ವಭಾವದವರು. ಶಿಷ್ಟಾಚಾರ ಮತ್ತು ಸಂಸ್ಕೃತಿಯನ್ನು ಚೆನ್ನಾಗಿ ಅರಿತವರು. ಅಲಂಕಾರಯುಕ್ತ ಮಾತನ್ನಾಡುವವರು.  ಮಾತು ಮಾತಿಗೂ ರೂಪಕಗಳನ್ನು ಬಳಸಿಕೊಳ್ಳುತ್ತಿದ್ದರು. ಶ್ರಮಕ್ಕಿಂತಲೂ ಹೆಚ್ಚು ಕೌಶಲ್ಯಕ್ಕೆ ಬೆಲೆ ತೆರುವವರು.  ಭೂತ ಮಾಧ್ಯಮ ವ್ಯಕ್ತಿಗಳಾಗಿ ನ್ಯಾಯ ತೀರ್ಮಾನ ಮಾಡುವ ಪುರುಷರಿಗೆ ಈ ಮಹಿಳೆಯರ ಪ್ರಭಾವ ಬಹಳಷ್ಟಿದೆ. ಸುಶ್ರವ್ಯವಾಗಿ ಹಾಡಬಲ್ಲ, ಹೆಜ್ಜೆ ಹಾಕಿ ಕುಣೀಯಬಲ್ಲ ಹುಟ್ಟು ಕಲಾವಿದರಾದ ಇವರು ಮಾತು ಮಾತಿಗೂ ರೂಪಕಗಳನ್ನು ಬಳಸಿಕೊಂಡು ಮಾತನಾಡುತ್ತಾರೆ. ವಿನಯವಂತರಾದ ಇವರು ಪರಜಾತಯ ಮೇಲ್ವರ್ಗದ ಹಿರಿಯರನ್ನು ಉಳ್ಳಾಯ (ಒಡೆಯ) ಎಂದು ಮಹಿಳೆಯರನ್ನು (ಉಳ್ಳಾಳ್ದಿ) ಒಡತಿ ಎಂದೂ ಸಂಬೋಧಿಸುತ್ತಾರೆ.  ಹಿರಿಯರನ್ನು ಕಂಡೊಡನೆ “ಅಡ್ಡ ಬೂರೊಂಡೆ” (ಸಾಷ್ಟಾಂಗ ನಮಸ್ಕಾರ ಮಾಡಿದ್ದೇನೆ) ಎನ್ನುತ್ತಾರೆ. ಯಾರಲ್ಲೂ ಜಗಳ ಕಾಯುವ ಪ್ರಮೇಯವನ್ನು ಅವರು ಬೆಳೆಸಿಕೊಳ್ಳುವುದೇ ಇಲ್ಲ. ತಮ್ಮ ಕೆಲಸ ದೊಡ್ಡದೇ ಇರಲಿ, ಸಣ್ಣದೇ ಇರಲಿ ಚಾಕಚಕ್ಯತೆಯಿಂದ ನಡೆಸಿಕೊಡಬಲ್ಲರು.

ಕೊನೆಯ ಮಾತುಗಳು

ಕಾಸರಗೋಡು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯನ್ನೊಳಗೊಂಡಂತೆ ಇರುವ ತುಳುನಾಡಿನಲ್ಲಿ ವಾಸಿಸುವ ಕೋಪಳ, ಅಜಿಲ, ಪಾಣಾರ, ನಲಿಕೆ, ಪಾಂಡ್ರು, ಎಂಬ ಕುಲನಾಮವನ್ನು ಹೊಂದಿರುವ ಈ ಸಮಾಜದ ಒಟ್ಟು ಜನಸಂಖ್ಯೆ ಸುಮಾರು ೩೮ ಸಾವಿರವೆಂದು ಅಂದಾಜು ಮಾಡಲಾಗಿದೆ. ಇವರಲ್ಲಿ ಸಮಪಾಲು ಮಹಿಳೆಯರು ಇರಬಹುದು. ಈ ಪ್ರದೇಶದಿಂದ ಬ್ರಿಟಿಷರ ಆಡಳಿತ ಕಾಳದಲ್ಲಿ ಬಹಳಷ್ಟು ಪರಿಶಿಷ್ಟ ಜಾತಿಯ ಜನರು ಕೊಡಗು, ಚಿಕ್ಕಮಗಳೂರು ಜಿಲ್ಲೆಗೆ ವಲಸೆ ಹೋಗಿ ಅಲ್ಲೇ ನೆಲೆಸಿದ್ದಾರೆ. ಕಾಫಿ, ಚಹಾ ತೋಟಗಳಲ್ಲಿ ಕೃಷಿ ಕಾಂಇðಕರಾಗಿ ದುಡಿಯುತ್ತಿದ್ದಾರೆ. ಆದರೆ ಈ ಕೆಲಸಗಾರರಲ್ಲಿ ಪಾಣಾರ-ನಲಿಕೆ ಜಾತಿಯವರ ಸಂಖ್ಯೆ ತೀರಾ ಅಲ್ಪ. ಇಲ್ಲವೇ ಇಲ್ಲವೆಂದು ಹೇಳಿದರೂ ಕೂಡಾ ತಪ್ಪಾಗಲಾರದು. ಹೀಗಾಗಿ ಇವರು ಪೂರ್ವಕಾಲದಿಂದಲೂ ಕೃಷಿಕರಾಗಿ, ಕೃಷಿ ಕಾರ್ಮಿಕರಾಗಿ ದುಡಯುತ್ತಿರಲಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಆರ್ಥಿಕವಾಗಿ, ಸಾಮಾಜಿಕವಾಗಿ ತೀರಾ ಹಿಂದುಳಿದ ಇವರನ್ನು ಬ್ರಿಟಿಷ್ ಸರಕಾರವು ೧೯೩೫ರ ಕಾಯ್ದೆಯನ್ವಯ ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ ಸೇರಿಸಿದೆ. ಈ ಪಟ್ಟಿಯ ಸಂಖ್ಯೆ ೬, ೧೨೯, ೧೨೯ ಮತ್ತು ೧೩೦ ರ ಪ್ರಕಾರ ಇವರನ್ನು ಅಜಿಲ, ನಲಿಕೆದಾರರು, ನಲಿಕೆಯವರು ಎಂದು ನಮೂದಿಸಲಾಗಿದೆ. ಜಾತಿ ವಿಂಗಡಣೆ ಮಾಡಿ ಪಟ್ಟಿ ತಯರಿಸಿದ ಸರಕಾರಿ ಅಧಿಕಾರಿಗಳಿಗೆ ಪಾಣಾರರು ಅಥವಾ ಪಾಣಾನ್ ಎಂದರೆ ಯಾರೆಂಬುದರ ಬಗ್ಗೆ ಅರಿವು ಇಲ್ಲದೇ ಇರುವುದು ಈ ರೀತಿಯ ವ್ಯತ್ಯಾಸ ಮತ್ತು ಅನಿರ್ದಿಷ್ಟತೆಯ ಕಾರಣವಾಯಿತು. ಇನ್ನುಮುಂದಾದರೂ ಕೇಂದ್ರ ಸರಕಾರ ಸರಿಪಡಿಸಿ ಗೊಂದಲವನ್ನು ತಪ್ಪಿಸಬಹುದು.

ನಲಿಕೆ ಯಾನೆ ಪಾಣಾರಲ್ಲಿ ಆಸ್ತಿವಂತರೂ ಹಾಗೂ ಉದ್ಯಮಿಗಳ ಸಂಖ್ಯೆ ತೀರಾ ಕಡಿಮೆ. ಇವರಲ್ಲಿ ಶೇಕಡಾ ೮೦ರಷ್ಟು ಅನಕ್ಷರಸ್ಥರು.  ಅವರಲ್ಲಿ ಮಹಿಳೆಯರ ಸಂಖ್ಯೆ ಅಧಿಕ. ಅಕ್ಷರಸ್ಥರಲ್ಲಿಯೂ ಶೇ. ೪೫ರಷ್ಟು ಎಸ್.ಎಸ್.ಎಲ್.ಸಿ. ಪಾಸಾದವರು ಶೇಕಡಾ ೨೦ ರಷ್ಟು ಜನ. ಪಿಯುಸಿ ಓದಿದವರು ಸ್ನಾತಕೋತ್ತರ ಪದವಿ, ತಾಂತ್ರಿಕ ಶಿಕ್ಷಣ, ವೈದ್ಯಕೀಯ ಪದವಿ ಪಡೆದು ಉನ್ನತ ಹುದ್ದೆಯಲ್ಲಿ ಇರುವವರನ್ನ ಕೈ ಬೆರಳುಗಳಲ್ಲು ಎಣಿಸಿ ಹೇಳಬಹುದು. ಹೀಗೆ ಈ ಸಮಾಜದವರು ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿನೂ ಬಹಳ ಹಿಂದುಳಿದಿದ್ದಾರೆ.

ಪಾಣಾರರ ರಕ್ತದಲ್ಲಿಯೇ ಕಲೆಯ ಬೀಜ ಹುದುಗಿದೆ. ಯಕ್ಷಗಾನ ತುಳುನಾಡಿನ ಪ್ರಮುಖ ರಂಗಕಲೆ. ಯಕ್ಷಗಾನ ಎಂಬ ಕ್ಲಪನೆಗೆ ಯಕ್ಷಾರಾಧನೆಯೇ ಮೂಲ. ಪಾಣಾರ ಯಾನೆ ನಲಿಕೆಯವರೇ ಇಲ್ಲಿನ ಯಕ್ಷಾರಾಧನೆ ಪ್ರವರ್ತಕರು. ನಲಿಕೆಯವರು ಮತ್ತೆ ಯಕ್ಷಗಾನದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಮುಂದಾಗಿದ್ದಾರೆ. ಶ್ರೀರಾಮ್ ಸಾಲಿಯಾನ್ ಮಂಗಲ್ಪಾಂಡಿಯ “ಯಕ್ಷಭರತಿ(ರಿ) ಹಲವಾರು ಪ್ರದರ್ಶನಗಳನ್ನು ನೀಡಿದೆ. ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದಿದೆ.

ಪಾಣಾರ – ನಲಿಕೆ ಜಾತಿಯ ಸಂಘಟನೆ ಮತ್ತು ಅಭಿವೃದ್ಧಿಯ ದೃಷ್ಟಿಯಿಂದ ಕಾಸರಗೊಡನ್ನೊಳಗೊಂಡಂತೆ ಅವಿಭಜಿತ ದಕ್ಷಿಣ ಜಿಲ್ಲೆಗೊಂದು ಪಾಣಾರ ಯಾನೆ ನಲಿಕೆ ಸಂಘವನ್ನು ರಚಿಸಲಾಗಿದೆ. ಇವರ ಕೇಂದ್ರವು ಮೂಡಬಿದ್ರೆಯಲ್ಲಿ ಇದೆ. ಸಂಘದ ವತಿಯಿಂದ ಹಲವಾರುರಚನಾತ್ಮಕ ಕಾರ್ಯಗಳನ್ನು ನಡೆಸಲಾಗಿದೆ, ಮಹಿಳೆಯರು ಕೂಡಾ ಈ ಸಂಘದಲ್ಲಿ ಸಕ್ರಿಯವಾಗಿ ದುಡಿಯುತ್ತಿದ್ದಾರೆ. ಈ ಸಂಘದ ಮಹಿಳಾ ವಿಭಾಗದ ಸಂಚಾಲಕಿಯಾಗಿ ಮಂಗಳೂರು ಆಲೂಕು ಬಜಪೆ ಗ್ರಾಮದ ಕರುಮಾರು ಶ್ರೀಮತಿ ಲಕ್ಷ್ಮಿಯವರು ಬಹಳಷ್ಟು ಸಾಧನೆಗಳನ್ನು ಮಾಡಿದ್ದಾರೆ. ಪಾಣಾರ ಸಂಘದ ಅಧ್ಯಕ್ಷರಾದ ಶ್ರೀ ಎಂ.ಡಿ. ವೆಂಕಪ್ಪ ಅವರು ಸಮಾಜದ ಮಕ್ಕಳ ಶೈಕ್ಷಣಿಕ ಪ್ರಗತಿ, ಕಲಾವಿದರುಗಳಿಗೆ ಸರಕಾರದಿಂದ ಮಾಸಾಶನ ಸಿಗುವ ಬಗ್ಗೆ ಪ್ರಯತ್ನ ಪಾಣಾರರ ಕಲೆ ಮತ್ತು ಜಾನಪದ ಸಾಹಿತ್ಯವನ್ನು ಉಳಿಸಿಕೊಳ್ಳುವ ಬಗ್ಗೆ ಪರಿಶ್ರಮಮಡುತ್ತಿದ್ದಾರೆ,

ನಲಿಕೆ ಜಾತಿಯ ಮಹಿಳೆಯರಲ್ಲಿ ಹಲವಾರು ಮಂದಿ ಹಾಡುಗಾರರಿದ್ದಾರೆ. ಹಲವಾರು ಮಂದಿ ವೈದ್ಯರಿದ್ದಾರೆ. ಪಾರ್ದನ ಹಾಡುವ ಪ್ರಮುಖ ಕಲಾವಿದೆಯಲ್ಲಿ ಪಾಡ್ದನಗಳ ರಾಣಿ ಎಂದೇ ಹೆಸರು ಪಡೆದ ಉಡುಪಿಯ ಶ್ರೀಮತಿ ಕರ್ಗಿ ನಲಿಕೆಯವರೊಬ್ಬರು, ೬೫ ವರ್ಷ ವಯಸ್ಸಿನ ಇವರು ಉಳಿದ ಜಾನಪದ ಹಾಡುಗಾರ್ತಿಯರಿಗೆಲ್ಲಾ ಗುರು ಸ್ಥಾನದಲ್ಲಿದ್ದಾರೆ. ಸುಶ್ರಾವ್ಯವಾಗಿ, ನಿರರ್ಗಳವಾಗಿ, ಗಂಟೆಗಟ್ಟಲೆ ಸಂಧಿ, ಪಾಡ್ದನ, ಕಬಿಕೆಗಳನ್ನು ಹಾಡಬಲ್ಲ ಜನಪದ ಕತೆಗಳನ್ನು ಹೇಳಬಲ್ಲ ಶ್ರೀಮತಿ ಕರ್ಗಿಯವರನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಉಡುಪಿ ಜಿಲ್ಲಾ  ರಾಜ್ಯೋತ್ಸವ ಪ್ರಶಸ್ತಿ ಸಹಿತ ಹಲವಾರು ಪ್ರಶಸ್ತಿ ಬಹುಮಾನಗಳು ಇವರಿಗೆ ಸಂದಿವೆ,  ೬೫ವರ್ಷ ಪ್ರಾಯದ ಕಾರ್ಕಳ ತಾಲೂಕಿನ ಕೆರ್ವಾಸೆಯ ಶ್ರೀಮತಿ ಮುತ್ತು, ೭೫ ವರ್ಷ ಪ್ರಾಯದ ಕಾರ್ಕಳ ತಾಲೂಕಿನ ಮಂಚಿಯ ಪಾಚು ಇನ್ನಿಬ್ಬರು ಹಿರಿಯ ಜಾನಪದ ಕಲಾವಿದೆಯರು. ೪೬ ವರ್ಷ ಪ್ರಾಯದ ಬಂಟ್ವಾಳ ತಾಲೂಕಿನ ನೆಲ್ಲಿ ಗಡ್ಡೆಯ ಶ್ರೀಮತಿ ಉಮಾ ಅನಕ್ಷರಸ್ಥೆ. ಆದರೆ ಅವರ ತಿಳುವಳಿಕೆ ಅಪಾರ. ಗುರು ಉಳ್ಳಾಲ್ದಿ ಸಂಧಿ, ನಾಗಾರಾಧೆಯ ಕತೆ ಮತ್ತಿತರ ಹಾಡುಗಳನ್ನು ನಿರರ್ಗಳವಾಗಿ ಹಾಡಬಲ್ಲವರು ತುಳು ಕನ್ನಡ ಭಾಷೆಯ ಹಲವಾರು ಭಕ್ತಿಗೀತೆಗಳನ್ನು  ಕೂಡಾ ಅವರು ಸ್ವತಃ ರಚಿಸಿದ್ದಾರೆ. ಈ ಅಶುಕವಿಯತ್ರಿಯ ಪ್ರತಿಭೆ ತೆರೆಯ ಮರೆಯಲ್ಲೇ ಉಳಿದಿದೆ.

ಸಾಮಾಜಿಕವಾಗಿ ಕೆಳಸ್ತರಕ್ಕೆ ತಳ್ಳಲ್ಪಟ್ಟವರು ದೈವ, ನಾಗಾರಾಧನೆಯಂತಹ ಧಾರ್ಮಿಕ ಆಚರಣೆಗಳನ್ನು ನಡೆಸುತ್ತಾ ರಂಗಭೂಮಿಯ ಕಲಾವಿದರಿಗೆ ಪ್ರೇರಣೆ, ಸಹಕಾರಗಳನ್ನು ನೀಡುತ್ತಾ ಸಮಾಜಕ್ಕೆ ಕಾಲ ಕಾಳಕ್ಕೆ ಸರಿಯಾದ ಹಾಡು, ಕುಣಿತಗಳಂತಹ ಮನೋರಂಜನೆಯನ್ನು ಒದಗಿಸುವ ನಿಟ್ಟಿನಲ್ಲಿ ಪಾಣಾರ ಮಹಿಳೆಯರು ದುಡಿಯುತ್ತಿದ್ದಾರೆ. ಒಟ್ಟು ಸಮಾಜಕ್ಕೆ ಪಾಡ್ದನ ಸಾಹಿತ್ಯ, ದೈವ ಮಾಧ್ಯಮ ಸಾಹಿತ್ಯ, ನಾಗಾರಾಧ ಸಾಹಿತ್ಯ ಹಾಗೂ ಲೌಕಿಕ ಜಾನಪದ ಸಾಹಿತ್ಯವನ್ನು ವಿಫುಲವಾಗಿ ಒದಗಿಸಿದ್ದಾರೆ, ಸೂಲಗಿತ್ತಿಯರಾಗಿ ನಾಟಿ ವೈದ್ಯೆಯರಾಗಿ ಆರೋಗ್ಯ ಸೇವೆ ಸಲ್ಲಿಸಿದ್ದಾರೆ. ಚಾಪೆ ಹೆಣೆಯುವುದು, ಮುಟ್ಟಾಳೆ ಕಟ್ಟುವುದು, ಒಣಗರಿಗಳಿಂದ ಬುಟ್ಟಿ ಹೆಣೆಯುವುದು, ಮುಂತಾದ ಕರ-ಕುಶಲ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ. ತಮ್ಮ  ನಡೆ-ನುಡಿ, ಆಚಾರ-ವಿಚಾರ, ಸಂಸ್ಕೃತಿಯ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾದ ಇವರು ಸಾಂಸ್ಕೃತಿಕ ಕ್ಷೇತ್ರದಲ್ಲಿ ಬಹುಮುಖ್ಯ ಸ್ಥಾನ ಪಡೆದಿದ್ದಾರೆ.

ಕ್ರಿಯಾಶೀಲ ಭಾಗವಹಿಸುವಿಕೆಯಿಂದ ಗಣ್ಯರ ಗೌರವಕ್ಕೆ ಅರ್ಹರಾಗಿದ್ದಾರೆ. ಈ ಜನಾಂಗದ ಮಹಿಳೆಯರಿಗೆ ಸಲ್ಲಬೇಕಾದ ಸಾಮಾಜಿಕ ಸ್ಥಾನಮಾನ ಯುಕ್ತ ಪ್ರಮಾಣದಲ್ಲಿ ಸಂದಿಲ್ಲವೆಂಬುದು ವಿಷಾದದ ವಿಚಾರ. ಇವರ ಬಹುಮುಖ್ಯ ಪ್ರತಿಭೆಗಳೆಲ್ಲಾ ನಶಿಸಿ ಹೋಗುವ ಈ ಸಂಧಿಕಾಲದಲ್ಲಿ ಅವನ್ನು ಉಳಿಸಿಕೊಳ್ಳುವ ಪ್ರಯತ್ನಗಳನ್ನು ಸಂಘ-ಸಂಸ್ಥೆಗಳು ಮತ್ತು ಆಸಕ್ತ ವಿದ್ವಾಂಸರು ನಡೆಸುವುದು ಒಳ್ಳೆಯದು.

ಆಕರ ಗ್ರಂಥಗಳು

೧. ಡಾ. ಪಾಲ್ತಾಡಿ ರಾಮಕೃಷ್ಣ ಆಚಾರ್, ನಲಿಕೆ ಜನಾಂಗದ ಕುಣಿತಗಳು – ಒಂದು ಜಾನಪದೀಯ ಅಧ್ಯಯನ, ೧೯೯೫, (ಅಪ್ರಕಟಿತ)

೨. ಡಾ. ಸುಶೀಲಾ ಪಿ. ಉಪಾಧ್ಯಾಯ, ಜಾನಪದ ಆರಾಧನೆ ಮತ್ತು ರಂಗಕಲೆ, ೧೯೮೯, ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ, ಉಡುಪಿ.

೩. ಸ್ಟರಕ್ ಜೆ., ೧೯೯೪, ಮದ್ರಾಸ್ ಡಿಸ್ಟ್ರಿಕ್ಟ್ ಮ್ಯಾನುವಲ್ ಸೌತ್ ಕೆನರಾ

೪. ಎಡ್ಗರ್ ಥಸ್ಟರ್ನ, ೧೯೦೯, ಕಾಸ್ಟ್ ಎಂಡ್ ಟ್ರೈಬ್ಸ್ ಆಫ್ ಸದರ್ನ್ ಇಂಡಿಯ, ವ್ಯಾಲ್ಯೂಮ್ -೬

೫. ವರದರಾಜನ್ ಮು, ೧೯೮೦, ತಮಿಳು ಸಾಹಿತ್ಯ ಚರಿತ್ರೆ, ಕೇಂದ್ರ ಸಾಹಿತ್ಯ ಅಕಾಡೆಮಿ, ನವದೆಹಲಿ.

೬. ಡಾ. ಕೆ.ಚಿನ್ನಪ್ಪ ಗೌಡ, ೧೯೯೦, ಭೂತಾರಾಧನೆ – ಜಾನಪದೀಯ ಅಧ್ಯಯನ, ಮದಿಪು ಪ್ರಕಾಶನ, ಮಂಗಳಗಂಗೋತ್ರಿ

೭. ಡಾ. ಪಾಲ್ತಾಡಿ ರಾಮಕೃಷ್ಣ, ಆಚಾರ್, ೧೯೯೮, ಕ್ಲಕುಡ ಕಲ್ಲುರ್ಟಿ ಸಂಸ್ಕೃತಿ ಶೋಧ, ಸುಪ್ರಿಯಾ ಪ್ರಕಾಶನ, ಪುತ್ತೂರು.

೮. ಡಾ. ಪಾಲ್ತಾಡಿ ರಾಮಕೃಷ್ಣ, ಆಚಾರ್, (ಸಂ) ೨೦೦೩,  ಸಿರಿಮುಡಿ – ನಲಿಕೆ ಯಾನೆ ಪಾಣಾರ ಸಮಾಜ ಸೇವಾ ಸಂಘ (ರಿ) ಮೂಡಬಿದ್ರೆ.