ನಳ ನಿಷಧ ದೇಶದ ದೊರೆ. ರೂಪ, ಗುಣ, ಶೌರ್ಯ, ವಿದ್ಯೆಗಳಲ್ಲಿ ನಳನಿಗೆ ಸಮಾನರೇ ಇರಲಿಲ್ಲ. ಅವನು ಏಳು ದ್ವೀಪಗಳನ್ನು ಗೆದ್ದು ಚಕ್ರವರ್ತಿಯಾದ.

ವಿದರ್ಭ ಎಂಬುದು ಇನ್ನೊಂದು ದೇಶ. ಕುಂಡಿನೀಪುರ ಅದರ ರಾಜಧಾನಿ. ಭೀಮನೆಂಬುವವನು ಅಲ್ಲಿಯ ಅರಸು. ಈ ದೊರೆಗೆ ಬಹುಕಾಲ ಮಕ್ಕಳಿರಲಿಲ್ಲ. ದಮ ಎಂಬ ಮಹರ್ಷಿಯ ಆಶೀರ್ವಾದದಿಂದ ಅವನಿಗೆ ಒಬ್ಬಳು ಮಗಳೂ ಮೂವರು ಗಂಡುಮಕ್ಕಳೂ ಆದರು. ರಾಜನು, ದಮ ಮುನಿಯ ಅನುಗ್ರಹದಿಂದ ಹುಟ್ಟಿದುದರಿಂದ ಮಗಳಿಗೆ ದಮಯಂತಿ ಎಂದು ಹೆಸರನ್ನಿಟ್ಟ.

ನೀವಿಬ್ಬರೂ ಮದುವೆಯಾಗಬೇಕು

ದಮಯಂತಿ ಶುಕ್ಲಪಕ್ಷದ ಚಂದ್ರನಂತೆ ಬೆಳೆದಳು. ವಿದ್ಯೆಗಳಲ್ಲಿ ಪಾರಂಗತಳಾದಳು. ಅವಳ ಸೌಂದರ್ಯ ಅಪ್ಸರೆಯನ್ನು ನಾಚಿಸುವಂತಿತ್ತು. ಗುಣಗಳಲ್ಲಿ ಸೀತೆ-ಸಾವಿತ್ರಿಯರನ್ನು ಹೋಲುತ್ತಿದ್ದಳು. ಮಗಳು ಪ್ರಾಯಕ್ಕೆ ಬಂದಾಗ ಅನುರೂಪನಾದ ವರೆನೆಲ್ಲಿ ದೊರೆತಾನು ಎಂಬ ಚಿಂತೆ ರಾಜನನ್ನು ಕಾಡಿತು.

ಕಸ್ತೂರಿಯ ಪರಿಮಕಳ ಬಹುದೂರ ಪಸರಿಸುವಂತೆ ನಳನ ಕೀರ್ತಿ ಭೀಮ ರಾಜನ ಆಸ್ಥಾನಕ್ಕೂ ತಲುಪಿತು. ಅರಸನ ಒಲಗದಲ್ಲಿ ನಳನ ರೂಪ, ಗುಣ, ಔದಾರ್ಯ ಮತ್ತು ಪರಾಕ್ರಮಗಳ ಪ್ರಶಂಸೆ ನಡೆಯಿತು. ಈ ಹೊಗಳಿಕೆ ದಮಯಂತಿಯ ಕಿವಿಗಳಿಗೆ ಮುಟ್ಟಿತು. ಆಕೆಗೆ ನಳನಲ್ಲಿ ಪ್ರೀತಿಯುಂಟಾಯಿತು. ಅವಳು ಮನಸ್ಸಿನಲ್ಲಿಯೇ ನಳನನ್ನು ನೆನೆಯತೊಡಗಿದಳು.

ಕೆಲವು ಬ್ರಾಹ್ಮಣರು ಕುಂಡಿನೀಪುರದಿಂದ ನಳನ ಆಸ್ಥಾನಕ್ಕೆ ಬಂದರು. ನಳ ಅವರನ್ನು ಆದರದಿಂದ ಸತ್ಕರಿಸಿದ. ಅವರು ರಾಜಕುಮಾರಿ ದಮಯಂತಿಯ ರೂಪ, ಗುಣ, ಶೀಲ, ವಿದ್ಯೆಗಳನ್ನು  ಹೊಗಳಿ, “ಮಹಾರಾಜ, ದಮಯಂತಿ ನಿನಗೆ ಅನುರೂಪಳಾದವಳು. ನೀವಿಬ್ಬರು ಮದುವೆಯಾಗಬೇಕು; ನೀವಿಬ್ಬರೂ ಇಂದ್ರ ಮತ್ತು ಶಚಿಯರಂತೆ ಬೆಳಗುವಿರಿ” ಎಂದರು.

ಹಂಸದೌತ್ಯ

ಇದಾದ ನಂತರ ನಳನು ದಮಯಂತಯನ್ನೇ ನೆನೆಯ ತೊಡಗಿದ. ಅವನ ಚಿಂತೆ ದಿನದಿಂದ ದಿನಕ್ಕೆ ಹೆಚ್ಚಿತು. ಒಂದು ದಿನ ಅವನು ಬೇಸರ ಕಳೆಯಲು ಉದ್ಯಾನಕ್ಕೆ ಹೋದ. ಅಲ್ಲಿ ಕೆಲವು ಹೊಂಬಣ್ಣದ ಹಂಸಗಳು ವಿಹರಿಸುತ್ತಿರುವುದನ್ನು  ಅವನು ನೋಡಿದ. ಹಂಸವೊಂದನ್ನು ಹಿಡಿಯಬೇಕೆಂದು ಅವನಿಗೆ ಆಸೆಯಾಯಿತು. ಅವನು ಮೆಲ್ಲನೆ ಸರಿದು ಹಂಸವೊಂದನ್ನು ಹಿಡಿದ. ನಳನು ಹಿಡಿದ ಹಂಸ ಮನುಷ್ಯನ ಧ್ವನಿಯಲ್ಲಿ ಮಾತನಾಡಿತು. ಪಕ್ಷಿ ಮನುಷ್ಯನಂತೆ ಮಾತನಾಡುವುದನ್ನು ಕಂಡ ನಳನಿಗೆ ಆಶ್ಚರ್ಯವಾಯಿತು. ಹಂಸವು, “ಮಹಾರಾಜ, ನೀನು ನನ್ನನ್ನು ಕೊಲ್ಲಬೇಡ. ನಿನಗೆ ಹಿತವಾದ ಕೆಲಸವೊಂದನ್ನು ಮಾಡಿಕೊಡುತ್ತೇನೆ. ನೀನು ದಮಯಂತಿಯನ್ನು ಪ್ರೀತಿಸುತ್ತೀಯೆ ಎಂಬುದನ್ನು ಬಲ್ಲೆ. ನಾನು ಅವಳ ಬಳಿಗೆ ಹೋಗಿ ನಿನ್ನನ್ನು ಆಕೆ ಒಲಿಯುವಂತೆ ಮಾಡುತ್ತೇನೆ” ಎಂದಿತು.

ನಳನು, “ಹಾಗೆಯೇ ಆಗಲಿ. ನೀನು ನನ್ನ ಮನೋರಥವನ್ನು ಈಡೇರಿಸು” ಎಂದು ಹಂಸವನ್ನು ಕಳುಹಿಸಿಕೊಟ್ಟ.

ಆ ಹಂಸವು ವಿದರ್ಭಕ್ಕೆ ಹಾರಿಹೋಯಿತು. ದಮಯಂತಿ ಉದ್ಯಾನದಲ್ಲಿ ಒಬ್ಬಂಟಿಗಳಾಗಿದ್ದಾಗ ಅವಳ ಬಳಿಗೆ ಸರಿಯಿತು. “ರಾಜಕುಮಾರಿ, ನಿಷಧ ದೇಶದಲ್ಲಿ ನಳನೆಂಬ ರಾಜನಿದ್ದಾನೆ. ಅವನು ರೂಪದಲ್ಲಿ ಮನ್ಮಥನನ್ನು ಮೀರಿಸುತ್ತಾನೆ. ಗುಣದಲ್ಲಿ , ಪಾಕ್ರಮದಲ್ಲಿ, ಔದಾರ್ಯದಲ್ಲಿ ಅವನ ಸಮಾನರಿಲ್ಲ. ನೀನು ಸ್ತ್ರೀರತ್ನ. ನೀನು ಆತನನ್ನು ವರಿಸಿದರೆ ನಿನ್ನ ರೂಪ ಮತ್ತು ವಿದ್ಯೆ ಬುದ್ಧಿಗಳು ಸಾರ್ಥಕವಾಗುತ್ತವೆ”  ಎಂದು ಹೇಳಿತು.

ದಮಯಂತಿಯಾದರೋ ನಳನನ್ನೇ ಧ್ಯಾನಿಸುತ್ತಿದ್ದಳು. ಹಂಸವಾಡಿದ ನುಡಿ ಆಕೆಗೆ ಹಿತವಾಗಿ ತೋರಿತು. ಅವಳು, ‘ಎಲೈ ಹಂಸ, ನೀನಾಡಿದುದು ದಿಟ. ನೀನೆಂದ ನಳನೇ ನನ್ನ ಪ್ರಾಣ. ನೀನು ಆತನಲ್ಲಿಗೆ ಹೋಗಿ ನಾನು ಅವನನ್ನು ಪ್ರೀತಿಸುತ್ತಿದ್ದೇನೆ ಎಂಬ ಮಾತನ್ನು ತಿಳಿಸು” ಎಂದು ಬೇಡಿಕೊಂಡಳು.

ನೀನು ನಳನನ್ನು ಮದುವೆಯಾದರೆ ನಿನ್ನ ರೂಪ ಮತ್ತು ವಿದ್ಯೆಬುದ್ಧಿಗಳು ಸಾರ್ಥಕ.

ಹಂಸವು ನಿಷಧ ರಾಜ್ಯಕ್ಕೆ ಮರಳಿತು. ದಮಯಂತಿಯ ಸಂದೇಶವನ್ನು ನಳನಿಗೆ ತಿಳಿಸಿ, “ಮಹಾರಾಜ, ನೀನು ದಮಯಂತಿಯನ್ನು ವರಿಸಿ ಸುಖವಾಗಿ ಬಾಳು” ಎಂದು ಹೇಳಿ ಹಾರಿಹೋಯಿತು.

ದೇವತೆಗಳಿಗೆ ಉಪಕಾರ

ಕ್ಷತ್ರಿಯರಲ್ಲಿ ಕನ್ಯೆಗೆ ಸ್ವಯಂವರವನ್ನು ಏರ್ಪಡಿಸಿ ತಾನು ಮೆಚ್ಚಿದ ವರನನ್ನು ವರಿಸಲು ಅವಕಾಶ ಒದಗಿಸುವುದು ಆ ಕಾಲದ ಸಂಪ್ರದಾಯ. ಭೀಮ ಮಹಾರಾಜ ದಮಯಂತಿಯ ಸ್ವಯಂವರವನ್ನು ಏರ್ಪಡಿಸಿದ. ಎಲ್ಲ ಅರಸರಿಗೆ ಸ್ವಯಂವರಕ್ಕೆ ಬರಲು ಆಮಂತ್ರಣ ಕಳುಹಿಸಿದ.

ಇಂದ್ರ ದೇವಲೋಕದ ಒಡೆಯ. ನಾರದ ಮುನಿಯಿಂದ ಆತನಿಗೆ ದಮಯಂತಿಯ ಸ್ವಯಂವರದ ವಾರ್ತೆ ತಿಳಿಯಿತು. ದಮಯಂತಿಯ ಅಸಾಧಾರಣ ಸೌಂದರ್ಯವನ್ನು ಕೇಳಿ ತಿಳಿದಾಗ ಅವನಿಗೂ ಈ ಸ್ವಯಂವರದಲ್ಲಿ ಆಸಕ್ತಿ ಹುಟ್ಟಿತು. ಅವನು ಅಗ್ನಿ, ಯಮ, ವರುಣರಿಗೆ “ನಾವು ದಮಯಂತಿಯ ಸ್ವಯಂವರಕ್ಕೆ ಹೋಗೋಣ” ಎಂದು ಹೇಳಿದ. ನಾಲ್ವರು ವಾಹನಗಳನ್ನೇರಿ ಕುಂಡಿನೀಪುರಕ್ಕೆ ಹೊರಟರು.

ನಳನ ದೌತ್ಯ

ನಳನೂ ಉತ್ಸಾಹದಿಂದ ಸ್ವಯಂವರಕ್ಕೆ ಹೊರಟ. ದಾರಿಯಲ್ಲಿ ಇಂದ್ರಾದಿ ದೇವತೆಗಳು ಆತನಿಗೆ ಭೇಟಿಯಾದರು . ನಳನ ಅನುಪಮ ಸೌಂದರ್ಯ ಮತ್ತು ದಿವ್ಯ ತೇಜಸ್ಸುಗಳನ್ನು ಕಂಡಾಗ ದಮಯಂತಿ ತಮಗೆ ಒಲಿಯುವ ಸಂಭವವಿಲ್ಲವೆಂದು ದೇವತೆಗಳಿಗೆ ತೋರಿತು. ಅವರು ನಳನನ್ನು ಸಮೀಪಿಸಿ, “ಮಹಾರಾಜ, ನೀನು ಸತ್ಯವಂತನೆಂದು ಕೇಳಿದ್ದೇವೆ. ನಿನ್ನಿಂದ ನಮಗೊಂದು ಉಪಕಾರವಾಗಬೇಕು” ಎಂದರು. ನಳನು, ‘ಆಗಲಿ, ನೀವು ಯಾರು? ನಾನು ವಹಿಸಬೇಕಾದ ಕೆಲಸ ವೇನು?” ಎಂದು ಪ್ರಶ್ನಿಸಿದ.

ಇಂದ್ರನು ತಾವು ದೇವತೆಗಳೆಂದು ತಿಳಿಸಿ, “ಮಹಾರಾಜ, ನಾವು ದಮಯಂತಿಯ ಸ್ವಯಂವರಕ್ಕೆ ಹೋಗುತ್ತಿದ್ದೇವೆ. ನೀನು ದಮಯಂತಿಯ ಬಳಿಗೆ ಹೋಗಿ ಆಕೆಗೆ ನಮ್ಮ ನಾಲ್ವರಲ್ಲಿ ಒಬ್ಬನನ್ನು ವರಿಸು ಎಂದು  ಹೇಳು” ಎಂದ.

ಇಂದ್ರನ ಮಾತನ್ನು ಕೇಳಿ ನಳನಿಗೆ ಆಶ್ಚರ್ಯವಾಯಿತು . ಅವನು, “ದೇವೇಂದ್ರ, ನಾನೂ ದಮಯಂತಿಯನ್ನು ವರಿಸಬೇಕೆಂಬ ಅಪೇಕ್ಷೆಯಿಂದ ಸ್ವಯಂವರಕ್ಕೆ ಹೋಗುತ್ತಿದ್ದೇನೆ. ನಾನು ಇನ್ನೊಬ್ಬನನ್ನು ವರಿಸೆಂದು ಅವಳಿಗೆ ಹೇಗೆ ಹೇಳಲಿ?” ಎಂದು ಉತ್ತರ ಕೊಟ್ಟ. ಲೋಕಪಾಲಕರು, “ನಳ, ಇದೇನು ಹೀಗೆ ಹೇಳುತ್ತಿರುವೆ?  ನೀನು ನಮಗೆ ಸಹಾಯ ಮಾಡುವಿಯೆಂದು ಮಾತು ಕೊಡಲಿಲ್ಲವೆ?” ಎಂದು ಪ್ರಶ್ನಿಸಿದರು.

“ರಾಜನ ಅಂತಃಪುರಕ್ಕೆ ಕಾವಲಿದೆ. ಒಳಗೆ ಪ್ರವೇಶಿಸುವುದು ನನ್ನಿಂದ ಆಗದ ಕೆಲಸ” ಎಂದು ಹೇಳಿದ ನಳ. ಇಂದ್ರ, “ಅದನ್ನು ನಾವು ನೋಡಿ ಕೊಳ್ಳುವೆವು” ಎಂದು ಭರವಸೆಯನ್ನು ಕೊಟ್ಟ.

ದೇವತೆಗಳು ಮಹಿಮೆಯಿಂದ ನಳನಿಗೆ ಅಂತಃಪುರದೊಳಗೆ ಪ್ರವೇಶಿಸಲು ಸಾಧ್ಯವಾಯಿತು. ಅಪರಿಚಿತ ಮನುಷ್ಯನೊಬ್ಬನು ಅನಿರೀಕ್ಷಿತವಾಗಿ ಅಂತಃಪುರದೊಳಗೆ ಕಾಲಿಟ್ಟುದುದನ್ನು ಕಂಡು ದಮಯಂತಿಯ ಸಖಿಯರು ಬೆರಗಾದರು. ಅವರು ಆತನ ಸೌಂದರ್ಯ ಮತ್ತು ತೇಜಸ್ಸನ್ನು ಕಂಡು ಹೊಗಳಿದರು. ದಮಯಂತಿ ತನ್ನ ಪೀಠದಿಂದ ಎದ್ದು ನಿಂತು, “ಮಹಾನುಭಾವೆ ನೀನು ಯಾರು? ದೇವತೆಯೊ? ಯಕ್ಷನೊ? ಅಥವಾ ಗಂಧರ್ವನೋ? ಈ ಅಂತಃಪುರದೊಳಗೆ ಹೇಗೆ ಬಂದೆ?” ಎಂದು ಕೇಳಿದಳು.

ನಳನು, “ಸುಂದರಿ, ನಾನು ನಿಷಧ ದೇಶದ ದೊರೆ ನಳ. ಲೋಕಪಾಲಕರ ದೂತನಾಗಿ ಬಂದಿದ್ದೇನೆ. ಅವರ ಮಹಿಮೆಯಿಂದಲೇ ಯಾರ ಕಣ್ಣಿಗೂ ಬೀಳದೆ ಅಂತಃಪುರದೊಳಗೆ ಪ್ರರೇಶಿಸುವುದು ಸಾಧ್ಯವಾಯಿತು. ನಾಳೆಯ ಸ್ವಯಂವರದಲ್ಲಿ ಆ ನಾಲ್ವರು ಲೋಕಪಾಲಕರಲ್ಲಿ ಒಬ್ಬನ್ನು ವರಿಸಬೇಕೆಂದು ಅವರ ಅಪೇಕ್ಷೆ” ಎಂದು ತಾನು ತಂದ ಸಂದೇಶವನ್ನು ತಿಳಿಸಿದ.

ನಳನು ತಂದ ಸಂದೇಶವನ್ನು ಕೇಳಿದಾಗ ದಮಯಂತಿಗೆ ಆಶ್ಚರ್ಯ, ವ್ಯಸನಗಳುಂಟಾದವು. ಅವಳು, “ಮಹಾರಾಜ, ನಿನ್ನ ಮನಸ್ಸು ಹೇಗಿದೆಯೊ ತಿಳಿಯದು. ನಾನಾದರೋ ಈಗಾಗಲೆ ಮನಸ್ಸಿನಲ್ಲಿ ನಿನ್ನನ್ನೇ ವರಿಸಿದ್ದೇನೆ. ನೀನು ನನ್ನನ್ನು ಅಲ್ಲಗಳೆದರೆ ನಾನು ಪ್ರಾಣತ್ಯಾಗ ಮಾಡಬೇಕಾದೀತು” ಎಂದು ತನ್ನ ನಿರ್ಧಾರವನ್ನು ತಿಳಿಸಿದಳು.

“ದೇವಿ, ನಾನು ಲೋಕಪಾಲಕರಿಗೆ ಎಂದಿಗೂ ಸಮಾನನಾಗಲಾರೆನು. ಅವರು ಕೋಪಕ್ಕೆ ಒಳಗಾದವರು ನಾಶವಾಗುವರು. ನೀನು ಅವರ ಅಪೇಕ್ಷೆಯಂತೆ ನಡೆದು ನನ್ನನ್ನು ರಕ್ಷಿಸು” ಎಂದು ಹೇಳಿದ ನಳ.

ದಮಯಂತಿಯ ನಿರ್ಧಾರ ಕದಲಲಿಲ್ಲ. ಅವಳು, “ಸ್ವಯಂವರದಲ್ಲಿ ಲೋಕಪಾಲಕರ ಕಣ್ಣ ಮುಂದೆಯೇ ಅವರ ಸಮ್ಮತಿಯನ್ನು ಪಡೆದೇ ನಿನ್ನ ಕೊರಳಿಗೆ ಪುಷ್ಪಮಾಲಿಕೆಯನ್ನು ಹಾಕಿ ನಿನ್ನನ್ನು ವರಿಸುವೆನು” ಎದು ನುಡಿದಳು.

ನಳನು ಲೋಕಪಾಲಕರ ಬಳಿಗೆ ಬಂದು “ಮಹನೀಯರಾದ ಲೋಕಪಾಲಕರೇ, ದಮಯಂತಿ ನನ್ನನ್ನೇ ವರಿಸಬೇಕೆಂದು ಹಟ ತೊಟ್ಟಿದ್ದಾಳೆ. ಅವಳು ನಿಮ್ಮ ಸಮ್ಮುಖದಲ್ಲಿ ನಿಮ್ಮ ಅನುಮತಿಯನ್ನು ಪಡೆದು ನನ್ನನ್ನು ವರಿಸುವುದಾಗಿ ಹೇಳಿದ್ದಾಳೆ” ಎಂದು ತಿಳಿಸಿದ.

ಸ್ವಯಂವರ

ಸ್ವಯಂವರದ ದಿನವೂ ಬಂತು. ಸ್ವಯಂವರ ಮಂಟಪದಲ್ಲಿ ಅರಸರೂ ರಾಜಕುಮಾರರೂ ಸಾಲು ಸಾಲಾಗಿ ಕುಳಿತಿದ್ದರು. ದಮಯಂತಿ ಕೈಯಲ್ಲಿ ಪುಷ್ಪಮಾಲಿಕೆಯನ್ನು ಹಿಡಿದು ಸ್ವಯಂವರ ಮಂಟಪವನ್ನು ಪ್ರವೇಶಿಸಿದಳು. ಒಂದೆಡೆಯಲ್ಲಿ ನಳನನ್ನೇ ಹೋಲುವ ಐದು ಮಂದಿ ಸಾಲಾಗಿ ಕುಳಿತಿದ್ದಾರೆ. ಇದನ್ನು ಕಂಡು ಅವಳು ಚಕಿತಳಾದಳು. ಇದು ಲೋಕಪಾಲಕರ ತಂತ್ರವೆಂಬುದು ಅವಳಿಗೆ ತಿಳಿಯಿತು. ಅವಳು ಲೋಕಪಾಲಕರನ್ನೇ ಮರೆಹೋಗಲು ನಿಶ್ಚಯಿಸಿದಳು. ಅವಳು, “ದಯಾಮಯರಾದ ಲೋಕಪಾಲಕರೇ, ನಾನು ನಿಮಗೆ ಶರಣಾಗಿದ್ದೇನೆ. ನಾನು ಮನಸ್ಸಿನಲ್ಲಿಯೇ ನಳನನ್ನು ವರಿಸಿದ್ದೇನೆ. ಬೇರೋಬ್ಬನ ಕೊರಳಿಗೆ ಪುಷ್ಪಮಾಲಿಕೆಯನ್ನು ತೊಡಿಸಿದರೆ ನಾನು ಕಲಂಕಿನಿಯಾಗುವೆನು. ನಳನೇ ನನ್ನ ಪತಿ. ನಿಮ್ಮ ಐವರಲ್ಲಿ ನಳನು ಯಾರೆಂಬುನ್ನು ತೋರಿಸಿಕೊಡಿ.ನನ್ನ ಧರ್ಮವನ್ನು ಕಾಪಾಡಲು ಸಹಾಯಮಾಡಿ” ಎಂದು ಪ್ರಾರ್ಥಿಸಿದಳು.

ಲೋಕಪಾಲಕರು ದಮಯಂತಿಯ ಪರಿಶುದ್ಧ ಪ್ರೇಮವನ್ನು ಮೆಚ್ಚಿಕೊಂಡರು. ಅವರು ನಿಜರೂಪವನ್ನು ತಾಳಿದರು. ದಮಯಂತಿಯು ಸಂತೋಷದಿಂದ ನಳನ ಬಳಿಗೆ ಹೋಗಿ ಕೊರಳಿಗೆ ಪುಷ್ಪಮಾಲಿಕೆಯನ್ನು ಹಾಕಿದಳು. ಲೋಕಪಾಲಕರು ಮತ್ತು ಮುನಿಗಳು ನೂತನ ದಂಪತಿಗಳಿಗೆ ಮಂಗಳವಾಗಲೆಂದು ಹರಸಿದರು.

ದಮಯಂತಿಯ ವಿವಾಹ ಸಡಗರದಿಂದ ನಡೆಯಿತು. ನಳನು ದಮಯಂತಿಯೊಡನೆ ನಿಷಧ ರಾಜ್ಯಕ್ಕೆ ಬಂದನು. ಅವನು ಧರ್ಮದಿಂದ ರಾಜ್ಯವಾಳುತ್ತಿದ್ದನು.

ಕಲಿಯ ಕೋಪ

ಇಂದ್ರಾದಿ ಲೋಕಪಾಲಕರು ಸ್ವಯಂವರದಿಂದ ಮರಳುತ್ತಿದ್ದಾಗ ಅವರು ದಾರಿಯಲ್ಲಿ ಕಲಿ ಮತ್ತು ದ್ವಾಪರರನ್ನು ಸಂಧಿಸಿದರು. ಲೋಕಪಾಲಕರಿಂದ ಕಲಿಗೆ ಸ್ವಯಂವರದ ಸುದ್ಧಿ ತಿಳಿಯಿತು.

ದಮಯಂತಿ ಮನುಷ್ಯನಾದ ನಳನನ್ನು ವರಿಸಿದಳು ಎಂಬುದನ್ನು ತಿಳಿದಾಗ ಕಲಿಗೆ ಕೋಪಬಂತು. ಅವನು, “ದಮಯಂತಿ ದೇವತೆಗಳನ್ನು ತಿರಸ್ಕರಿಸಿ ಮನುಷ್ಯನಾದ ನಳನನ್ನು ಮದುವೆಯಾದಳೆ? ಇದು ದೇವತೆಗಳಿಗೆಲ್ಲ ಅಪಮಾನ ತರುವ ಸಂಗತಿ. ಇದಕ್ಕೆ ತಕ್ಕ ಶಾಸ್ತಿ ಮಾಡಲೇಬೇಕಲು” ಎಂದು ಗುಡುಗಿದ. ಇಂದ್ರ, “ಕಲಿ, ನೀನು ಸಿಟ್ಟಾಗುವುದೇಕೆ? ದಮಯಂತಿ ನಮ್ಮ ಅನುಮತಿಯಿಂದಲೇ ನಳನನ್ನು ವರಿಸಿದಳು. ನಳ ಸಾಮಾನ್ಯನಲ್ಲ. ಅಗಣಿತ ಗುಣಸಂಪನ್ನ, ಸತ್ಯವಂತ ಮತ್ತು ಧರ್ಮವನ್ನು ತಿಳಿದವನು. ದಮಯಂತಿ ಆತನನ್ನು ವರಿಸಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ” ಎಂದು ಕಲಿಯನ್ನು ಎಚ್ಚರಿಸಿದ.

ಇಂದ್ರನಾಡಿದ ಹಿತೋಕ್ತಿ ಕಲಿಗೆ ಪ್ರಿಯವಾಗಲಿಲ್ಲ. ಅವನು ನಳನಿಗೆ ತೊಂದರೆ ಕೊಟ್ಟು ಕಾಡಬೇಕೆಂದು ನಿಶ್ಚಯಿಸಿದ. ಅವನು ಕೃತ್ರಿಮ ಪಗಡೆಗಳನ್ನು ಸಿದ್ಧ ಮಾಡಿಟ್ಟುಕೊಂಡ.

ಕಲಿ ನಿಷಧ ದೇಶಕ್ಕೆ ಬಂದು ನಳನಲ್ಲಿ ಏನಾದರೂ ಆಚಾರಲೋಪ ಸಿಕ್ಕೀತೆ ಎಂದು ಕಾದು ನೋಡಿದ. ಹನ್ನೆರಡು ವರ್ಷ ಕಳೆದರೂ ನಳನಲ್ಲಿ ಯಾವ ಲೋಪವೂ ಕಾಣಿಸಲಿಲ್ಲ. ಒಂದು ದಿನ ನಳನು ನೀರಡಿಕೆಯಾದಾಗ ಆಚಮನ ಮಾಡಿ ದೇಹಶುದ್ಧಿ ಮಾಡಿಕೊಳ್ಳದೆ ಜಲಪಾನ ಮಾಡಿದ. ಕಲಿ ತನ್ನ ಸೇಡನ್ನು ತೀರಿಸಿಕೊಳ್ಳಲು ಕಾಲ ಕೂಡಿ ಬಂತೆಂದು ಹಿಗ್ಗಿದ. ಅವನು ಅದೃಶ್ಯ ರೂಪಿಯಾಗಿ ನಳನ ದೇಹದೊಳಕ್ಕೆ ಪ್ರವೇಶಿಸಿದ.

ಜೂಜಾಟ

ಪುಷ್ಕರನೆಂಬುವವನು ನಳನ ದಾಯಾದಿ. ಕಲಿ ಬ್ರಾಹ್ಮಣನ ವೇಷ ಧರಿಸಿ ಪುಷ್ಕರನ ಬಳಿಗೆ ಹೋಗಿ, “ನೀನು ನಳನಂತೆಯೇ ರಾಜವಂಶದವನು. ಅವನ ಬಂಧು. ನಳನು ಭೂಮಂಡಲಕ್ಕೆಲ್ಲ ಅಧಿಪತಿ. ಆದರೆ ನಿನಗೆ ಅಂಗೈ ಅಗಲದ ನೆಲವೂ ಇಲ್ಲ” ಎಂದು ಮರುಕದಿಂದ ಹೇಳಿದ.

“ನಳ ಪರಾಕ್ರಮಿ. ಭುಜಬಲದಿಂದ ಭೂಮಂಡಲವನ್ನು ಗೆದ್ದಿದ್ದಾನೆ. ನಾನು ಅಂಥವನನ್ನು ಗೆದ್ದು ಹೇಗೆ ತಾನೆ ರಾಜನಾಗಬಲ್ಲರೆ?” ಎಂದು ಪುಷ್ಕರ ತನ್ನ ನಿರಾಶೆಯನ್ನು ಕಲಿಯ ಮುಂದೆ ತೋಡಿಕೊಂಡ.

ಕಲಿ, “ನೀನೇಕೆ ಚಿಂತಿಸುತ್ತೀಯೆ? ನಳನು ಭುಜಬಲದಿಂದ ಭೂಮಂಡಲವನ್ನು ಗೆದ್ದರೆ ನೀನು ಪಗಡೆ ದಾಳಗಳಿಂದ ನಳನನ್ನು ಗೆಲ್ಲುವಿಯಂತೆ. ಹೆಸರಿಗೆ ನೀನು ಆಟಕ್ಕೆ ಕುಳಿತುಕೊ. ನಾನು ನಳನ ರಾಜ್ಯ, ಸಿರಿ, ಸಂಪತ್ತುಗಳನ್ನು ನಿನಗೆ ಗೆದ್ದು ಕೊಡುತ್ತೇನೆ” ಎಂದು ಭರವಸೆಯನ್ನು ಕೊಟ್ಟ.

ಪುಷ್ಕರನಿಗು ಆಸೆ ಹುಟ್ಟಿತು. ಅವನು ನಳನ ಬಳಿಗೆ ಬಂದ. ನಳನು ದಾಯಾದಿಯನ್ನು ಆದರಿಸಿ ಉಪಚರಿಸಿದ. ಪುಷ್ಕರನು ನಳನನ್ನು ಪಗಡೆಯಾಡಲು ಆಹ್ವಾನಿಸಿದ. ಮೈಯೊಳಗೆ ಸೇರಿದ ಕಲಿಯ ಪ್ರಭಾವದಿಂದ ನಳನಿಗೆ ಮಂಕು ಕವಿದಿತ್ತು. ಅವನು ಪಗಡೆಯಾಡಲು ಒಪ್ಪಿದ. ಇಬ್ಬರೂ ಪಣ ಒಡ್ಡಿ ಪಗಡೆಯಾಡತೊಡಗಿದರು. ನಳನು ಆಟದಲ್ಲಿ ಧನ, ಕನಕ, ವಾಹನ, ವಸ್ತು ಕಳೆದುಕೊಂಡ. ಸೋತಂತೆಯೇ ಆಟದ ಹುಚ್ಚು ನಳನ ನೆತ್ತಿಗೆ ಏರಿತು. ಮಂತ್ರಿಗಳು ಮತ್ತು ಮಿತ್ರರು ಬಂದು ಆಟ ನಿಲ್ಲಿಸೆಂದು ನಳನನ್ನು ವಿನಂತಿಸಿದರು. ಅವರ ಹಿತೋಕ್ತಿಗಳನ್ನು ಅವನು ಕಿವಿಗೆ ಹಾಕಿ ಕೊಳ್ಳಲಿಲ್ಲ. ದಮಯಂತಿಯೇ ಬಂದು ಆಟವನ್ನು ನಿಲ್ಲಿಸೆಂದು ಪತಿಯನ್ನು ಬೇಡಿಕೊಂಡಳು. ಅವನು ಅವಳನ್ನು ಕಣ್ಣೆತ್ತಿಯೂ ನೋಡಲಿಲ್ಲ.

ಒಂದು ತಿಂಗಳ ಕಾಲ ಜೂಜಾಟ ಅವಿರತರಾಗಿ ನಡೆಯಿತು. ನಳ ಸಂಪೂರ್ಣವಾಗಿ ಸೋತುಹೋದ. ರಾಜ್ಯ, ಭಂಡಾರ, ಚತುರಂಗಬಲ ಇವೆಲ್ಲ ಪುಷ್ಕರನ ವಶವಾದವು. ತಮಗೆ ಕೇಡುಗಾಲ ಬಂತೆಂದು ದಮಯಂತಿ ಮಿಡುಕಿದಳು. ನಳನ ಸಾರಥಿ ವಾರ್ಷ್ಣೇಯನನ್ನು ಕರೆದು ತನ್ನ ಮಕ್ಕಳಾದ ಇಂದ್ರಸೇನ ಮತ್ತು ಇಂದ್ರಸೇನೆಯರನ್ನು ಅವನೊಡನೆ ತಂದೆಯ ಮನೆಗೆ ಕಳುಹಿಸಿದಳು. ಆ ಮಕ್ಕಳನ್ನು ಕುಂಡಿನೀಪುರಕ್ಕೆ ಒಯ್ದು ಭೀಮ ಮಹಾರಾಜನ ವಶಕ್ಕೆ ಒಪ್ಪಿಸಿದ. ಅವನು ನಳನ ಕುದುರೆಗಳೊಡನೆ ಅಯೋಧ್ಯಾ ನಗರಕ್ಕೆ ಹೋಗಿ ಅಲ್ಲಿನ ರಾಜನಾದ ಋತುಪರ್ಣನ ಸಾರಥಿಯಾದ.

ಭೀಮ ಮಹಾರಾಜನು ಅಳಿಯನಿಗೊದಗಿದ ದುರವಸ್ಥೆಯನ್ನು ತಿಳಿದು ಮಮ್ಮಲ ಮರುಗಿದ.

ಅಡವಿಯ ಆಸರೆ

ನಳನು ಜೂಜಿನಲ್ಲಿ ತನ್ನದೆನಿಸುವ ಎಲ್ಲವನ್ನೂ ಕಳೆದುಕೊಂಡ. ಪುಷ್ಕರನು ಅವನನ್ನು ಹಾಸ್ಯ ಮಾಡುತ್ತಾ, “ಇನ್ನು ಪಣ ಒಡ್ಡಲು ನಿನ್ನಲ್ಲಿ ಏನು ಉಳಿದಿದೆ? ದಮಯಂತಿಯನ್ನೇ ಕರೆತಂದು ಹಾಸಿನ ಮೇಲೆ ನಿಲ್ಲಿಸು” ಎಂದು ಹೇಳಿದ.

ಈ ಕಠೋರ ವಚನವನ್ನು ಕೇಳಿದಾಗ ಆಟದ ಹುಚ್ಚು ನಳನ ನೆತ್ತಿಯಿಂದ ಇಳಿಯಿತು. ಅವನು ಮರುಮಾತಾಡದೆ ತಾನು ತೊಟ್ಟ ಆಭರಣಗಳನ್ನೆಲ್ಲಾ ಕಳಚಿಕೊಟ್ಟು ಐಶ್ವರ್ಯವನ್ನೆಲ್ಲ ತೊರೆದು ಏಕವಸ್ತ್ರಧಾರಿಯಾಗಿ ನಗರದಿಂದ ಹೊರಟ. ಸತಿಯು ಪತಿಯ ನೆರಳಲ್ಲವೆ? ದಮಯಂತಿ ಆತನನ್ನು ಹಿಂಬಾಲಿಸಿದಳು.

ಪುಷ್ಕರನ ಹಗೆ ಅಲ್ಲಿಗೆ ಮುಗಿಯಲಿಲ್ಲ. ಅವನು ಪ್ರಜೆಗಳಲ್ಲಿ ಯಾರಾದರೂ ನಳನಿಗೆ ಆಶ್ರಯ ಕೊಟ್ಟರೆ ಅಂತಹವರನ್ನು ಶೂಲಕ್ಕೇರಿಸುವೆನೆಂದು ಡಂಗುರ ಹೊಡೆಸಿದ. ಪುರಜನರು ಈ ರಾಜಾಜ್ಞೆಗೆ ಹೆದರಿ ರಾಜ ದಂಪತಿಗಳಿಗೆ ನೆರವು ನೀಡಲು ಹಿಂಜರಿದರು. ನಳನು ಪತ್ನೀಸಮೇತನಾಗಿ ಅಡವಿಯ ಹಾದಿಯನ್ನು ಹಿಡಿದ.

ಮೂರು ದಿನಗಳಿಂದ ನಳ-ದಮಯಂತಿಯರಿಗೆ ಆಹಾರವಿಲ್ಲ. ಅವರು ಜಲಪಾನದಿಂದ ತಮ್ಮ ಹಸಿವೆಯನ್ನು ಹಿಂಗಿಸಿಕೊಂಡರು. ಅರಣ್ಯದಲ್ಲಿ ಗೊತ್ತುಗುರಿಯಿಲ್ಲದೆ ಸಂಚರಿಸಿದರು. ನಾಲ್ಕನೇ ದಿನ ನಳನು ಹಸಿವೆಯಿಂದ ಕಂಗೆಟ್ಟ ಸಮಯದಲ್ಲಿ ಚಿನ್ನದ ಬಣ್ಣದ ಹಕ್ಕಿಗಳು ಅವನ ಬಳಿಗೆ ಹಾರಿ ಬಂದವು. ಈ ಹಕ್ಕಿಗಳು ಸಿಕ್ಕಿದರೆ ಆಹಾರವಾಗಬಹುದೆಂದು ಯೋಚಿಸಿ, ಅವನು ತಾನುಟ್ಟ ಬಟ್ಟೆಯನ್ನು ಬಿಚ್ಚಿ ಹಕ್ಕಿಗಳ ಮೇಲೆ ಬೀಸಿದ. ಆ ಹಕ್ಕಿಗಳು ಬಟ್ಟೆಯನ್ನು ಎತ್ತಿಕೊಂಡು ಹಾರಿಹೋದವು. ಅವು ನಳನಿಗೆ, “ಎಲವೋ ಹೆಡ್ಡ, ನಾವು ಹಕ್ಕಿಗಳಲ್ಲ. ನಿನ್ನನ್ನು ಆಟದಲ್ಲಿ ಸೋಲಿಸಿದ ಪಗಡೆ ದಾಳಗಳು ನಾವು. ನಿನ್ನ ವಸ್ತ್ರವನ್ನು ನಿನ್ನಿಂದ ಕಸಿದುಕೊಂಡು ಹೋಗುತ್ತಿದ್ದೇವೆ” ಎಂದು ಹೇಳಿದವು.

ನಳನಿಗೆ ತುಂಬ ದುಃಖವಾಯಿತು. ಈಗ ಅವನ ಮೈಮೇಲೆ ವಸ್ತ್ರವೂ ಇಲ್ಲ. ಹಸಿವು, ಆಯಾಸಗಳು ಬೇರೆ. ಅರಮನೆಯಲ್ಲಿ ಬೆಳೆದ ದಮಯಂತಿ ಈಗ ಕಾಡು-ಮೇಡುಗಳಲ್ಲಿ ಸಂಚರಿಸಿ ಕಷ್ಟಪಡುತ್ತಿರುವಳೆಂಬ ಕೊರಗು. ಅವನು, “ಪ್ರಿಯೆ, ನಿನ್ನನ್ನು ಕಾಡು-ಮೇಡುಗಳಲ್ಲಿ ಅಲೆದಾಡಿಸಿ ಸಂಕಟಪಡಿಸುತ್ತಿರುವ ಪಾರಿ ನಾನು” ಎಂದು ಹೇಳಿ ಮರುಗಿದ. ದಮಯಂತಿ, “ಮಹಾರಾಜ, ನೀನು ಮರುಗಬೇಡ. ಪತಿಯ ನೆರಳೇ ನನಗೆ ಅರಮನೆ. ಆತನಿರುವ ಅಡವಿಯೇ ನನಗೆ ಉದ್ಯಾನ. ನಾವಿಬ್ಬರೂ ವಿದರ್ಭ ದೇಶಕ್ಕೆ ಹೋಗೋಣ. ಅಲ್ಲಿ ತಂದೆಯ ಆಶ್ರಯದಲ್ಲಿ ದುಃಖ ಪರಿಹಾರವಾದೀತು” ಎಂದು ಸಮಾಧಾನ ಹೇಳಿದಳು.

ಆದರೆ ನಿರ್ಗತಿಕನಾಗಿ ಮಾವನ ಮನೆಯನ್ನು ಸೇರುವುದು ನಳನಿಗೆ ಇಷ್ಟವಾಗಲಿಲ್ಲ.

ಮಡದಿಯನ್ನು ತೊರೆದ

ನಳ-ದಮಯಂತಿಯರು ಅಡವಿಯಲ್ಲಿ ಸಂಚರಿಸುತ್ತಾ ಬಹುದೂರ ಬಂದರು. ಕತ್ತಲಾಯಿತು.  ಅವರು ಒಂದು ಮರದಡಿಯಲ್ಲಲಿ ಮಲಗಿದರು. ದಣಿದುದರಿಂದ ದಮಯಂತಿಗೆ ಬೇಗನೆ ನಿದ್ರೆ ಬಂತು. ಆದರೆ ನಳನಿಗೆ ನಿದ್ರೆ ಬರದು. ಚಿಂತೆಯ ಹುಳುಗಳು ಅವನ ಮೆದುಳನ್ನು ಕೊರೆಯುತ್ತಿದ್ದವು. ಅವನು, ‘ಈಕೆ ನನ್ನ ಸಂಗಡ ಬಂದರೆ ಅವಳಿಗೆ ಜೀವನದುದ್ದಕ್ಕೂ ಕಷ್ಟವೆ; ನಾನು ಇವಳನ್ನು ಬಿಟ್ಟು ಹೋದರೆ ಹೇಗಾದರೂ ತಂದೆಯ ಮನೆಯನ್ನು ಸೇರಿ ಅಲ್ಲಿ ಸುಖವಾಗಿದ್ದಾಳು’ ಎಂದು ಯೋಚಿಸಿದ. ಯೋಚಿಸಿದಂತೆಯೇ ದಮಯಂತಿಯನ್ನು ಕಾಡಿನಲ್ಲಿ ಬಿಟ್ಟು ಹೋಗುವುದೇ ಸರಿಯೆಂದು ಆತನಿಗೆ ತೋರಿತು. ಅವನು ದಮಯಂತಿಯ ವಸ್ತ್ರದ ಅರ್ಧಭಾಗವನ್ನು ಹರಿದು ತಾನು ಉಟ್ಟುಕೊಂಡ. ಅವಳನ್ನು ತೊರೆದು ಮುಂದೆ ಅಡಿಯಿಟ್ಟ. ಅಂತರಗಂದ ಪ್ರೀತಿ, “ನೀನು ಮಾಡುವ ಕೆಲಸ ಸರಿಯಲ್ಲ” ಎಂದು ಅವನನ್ನು ಎಚ್ಚರಿಸಿತು. ಅವನು ಕಣ್ಣೀರು ಹಾಕುತ್ತಾ ಮರಳಿ ಅವಳ ಬಳಿಗೆ ಬಂದ. ಒಮ್ಮೆ ಅವಳ ಬಳಿಗೆ ಬರುವುದು, ಇನ್ನೊಮ್ಮೆ ದೂರ ಹೋಗುವುದು ಹೀಗೆ ಅನೇಕ ಸಲ ಮಾಡಿದ. ಕಲಿಯ ಮಹಿಮೆಯಿಂದ ಅವನ ವಿವೇಕ ಅಳಿಸಿಹೋಯಿತು. ಅವನು ಮರುಳನಂತೆ ಪತ್ನಿಯನ್ನು ಕಾಡಿನಲ್ಲಿ ಬಿಟ್ಟು ಹೊರಟು ಹೋದ.

ನಳನು ತನ್ನ ಸಹಜವಾದ ಸುಂದರಾಕಾರವನ್ನು ಪಡೆದ.

ದಮಯಂತಿ ವಿಪತ್ತಿನಲ್ಲಿ

 

ಮರುದಿನ ಮುಂಜಾನೆ ದಮಯಂತಿಗೆ ಎಚ್ಚರವಾಯಿತು. ಆಕೆಯ ಪಕ್ಕದಲ್ಲಿ ನಳನಿಲ್ಲ. ಕಾಡಿನಲ್ಲಿ ತಾನೊಬ್ಬಳೇ ಇರುವುದನ್ನು ನೆನೆದು, “ನಳಮಹಾರಾಜ” ಎಂದು ಕೂಗಿದಳು. ಆದರೆ ನಳನ ಉತ್ತರವಿಲ್ಲ. ನಳನು ತನ್ನನ್ನು ಕಾಡಿನಲ್ಲಿ ಬಿಟ್ಟುಹೋದನೆಂಬ ಶಂಕೆ ತಲೆದೊರಿತು. ಅವಳು, “ಮಹಾರಾಜ, ಯಾರೋ ನಿನಗೆ ಮಾಡಿದ ಕೇಡಿಗೆ ಪ್ರತಿಯಾಗಿ ನನಗೆ ಈ ಶಿಕ್ಷೆಯನ್ನು ಕೊಟ್ಟೆಯಾ? ಎಂದು ಗೋಳಾಡಿದಳು. ಅಕ್ಕ-ಪಕ್ಕದ ಹೊದರುಗಳಲ್ಲಿ ಪತಿಯನ್ನು ಹುಡುಕಿದಳು. ಆದರೆ ಎಲ್ಲಿಯೂ ನಳನಿಲ್ಲ. ದುಷ್ಟ ಮೃಗಗಳು ಅರಣ್ಯದಲ್ಲಿ ಅಲ್ಲಿ-ಇಲ್ಲಿ ಅಲೆದಾಡುತ್ತಿದ್ದವು. ಆದರೆ ದಮಯಂತಿ ಅವುಗಳ ಪರಿವೆಯಿಲ್ಲದೆ, “ನಳಮಹಾರಾಜ, ನೀನೆಲ್ಲಿರುವೆ?” ಎಂದು ಮೊರೆಯಿಡುತ್ತಾ ಪತಿಯನ್ನು ಹುಡುಕತೊಡಗಿದಳು. ಒಂದು ಹೆಬ್ಬಾವು ಅವಳನ್ನು ಹಿಡಿದುಕೊಂಡಿತು. ಅವಳು, “ಮಹಾರಾಜ, ನಾನು ಹೆಬ್ಬಾವಿನ ಬಾಯಿಗೆ ಸಿಕ್ಕಿ ಸಾಯುತ್ತಿದ್ದೇನೆ. ನಿನಗೆ ಕರುಣೆಯಿಲ್ಲವೇ? ಬೇಗ ಬಾ” ಎಂದು ಮೊರೆಯಿಟ್ಟಳು. ಅವಳ ಮೊರೆ ಅರಣ್ಯದಲ್ಲಿದ್ದ ಒಬ್ಬ ಬೇಡನಿಗೆ ಕೇಳಿಸಿತು. ಅವನು ಓಡಿ ಬಂದು ಆಯುಧದಿಂದ ಹೆಬ್ಬಾವನ್ನು ಸೀಳಿ ದಮಯಂತಿಯನ್ನು ಬಿಡಿಸಿದ. ಅವಳು ಕೊಳ ಒಂದಕ್ಕೆ ಹೋಗಿ ಮೈತೊಳೆದು ಬಂದಳು. ಆಕೆಯ ಅನುಪಮ ಸೌಂದರ್ಯವನ್ನು ಕಂಡಾಗ ಬೇಡನಿಗೆ ಆಕೆಯಲ್ಲಿ ಮೋಹ ಅಂಕುರಿಸಿತು. ಅವನು, “ನೀನು ನನ್ನ ಪತ್ನಿಯಾಗಿ ಸುಖವಾಗಿ ಬಾಳು” ಎಂದು ಹೇಳುತ್ತಾ ಅವಳ ಹತ್ತಿರಕ್ಕೆ ಬಂದ. ದಮಯಂತಿ ಕೋಪದಿಂದ “ನೀನು ನನ್ನ ಪ್ರಾಣವನ್ನು ಕಾಪಾಡಿದುದರಿಂದ ನನಗೆ ತಂದೆಯ ಸಮಾನ. ನೀನು ನನ್ನನ್ನು ಮುಟ್ಟಿದರೆ ಶಾಪಗೊಡುವೆನು” ಎಂದಳು. ಬೇಡನು ಆ ಸಾಧ್ವಿಯ ದಿವ್ಯ ತೇಜಸ್ಸನ್ನು ಕಂಡು ಹೆದರಿ ಆಕೆಗೆ ನಮಸ್ಕರಿಸಿ ಹೊರಟುಹೋದ.

ತಂದೆಯ ಮನೆಗೆ

ದಮಯಂತಿ ನಳನನ್ನು ಹುಡುಕುತ್ತಾ ಗೊತ್ತುಗುರಿಯಿಲ್ಲದೆ ಕಾಡುಮೇಡುಗಳಲ್ಲಿ ಅಲೆದಳು. ಹೀಗೆ ಸಂಚರಿಸುತ್ತಿದ್ದಾಗ ಚೇದಿ ರಾಜ್ಯಕ್ಕೆ ಹೋಗುತ್ತಿದ್ದ ವರ್ತಕರ ತಂಡವೊಂದು ಆಕೆಗೆ ಸಿಕ್ಕಿತು. ಅವಳು ಈ ವರ್ತಕರ ಸಂಗಡ ಚೇದಿ ನಗರವನ್ನು ಸೇರಿದಳು. ಚೇದಿ ರಾಜ್ಯವನ್ನು ಸುಬಾಹು ಎಂಬ ಅರಸ ಆಳುತ್ತಿದ್ದ. ರಾಜನ ತಾಯಿ ದಮಯಂತಿಯ ಗುಣ, ಸೌಜನ್ಯಗಳನ್ನೂ ಮೆಚ್ಚಿದಳು. ಅವಳನ್ನು ತನ್ನ ಮಗಳಾದ ಸುನಂದೆಯ ವಶಕ್ಕೆ ಒಪ್ಪಿಸಿದಳು. ದಮಯಂತಿ ಸುನಂದೆಯ ಸೈರಂಧ್ರಿಯಾಗಿ ತನ್ನ ಜೀವನವನ್ನು ಸಾಗಿಸತೊಡಗಿದಳು.

ದಮಯಂತಿಯ ತಂದೆ ಭೀಮ ರಾಜನಿಗೆ ಅಳಿಯ ಮತ್ತು ಮಗಳು ರಾಜ್ಯ ತೊರೆದು ಕಾಡು ಸೇರಿದ ವಾರ್ತೆ ತಿಳಿಯಿತು. ಅವನು ತನ್ನ ಆಪ್ತರನ್ನು ಕರೆದು ಅಳಿಯ ಮತ್ತು ಮಗಳನ್ನು ಪತ್ತೆ ಹಚ್ಚಿ ತನ್ನ ಅರಮನೆಗೆ ಕರೆತರಬೇಕೆಂದು ಆಜ್ಞಾಪಿಸಿದ. ಹೀಗೆ ನಳ-ದಮಯಂತಿಯರನ್ನು ಹುಡುಕ ಹೊರಟವರಲ್ಲಿ ಸುದೇವನೆಂಬುವನೊಬ್ಬ. ಅವನು ಸುಬಾವಿಹುವಿನ ಅರಮನೆಯಲ್ಲಿ ದಮಯಂತಿಯನ್ನು ಗುರುತಿಸಿದ. ಅವಳನ್ನು ಮಾತಾನಾಡಿಸಿದ. ದಮಯಂತಿ ತನಗೊದಗಿದ ದುರವಸ್ಥೆಯನ್ನು ನೆನೆದು ಕಂಬನಿ ಮಿಡಿದಳು. ರಾಜಮಾತೆ ಮತ್ತು ಸುನಂದೆ ತಮ್ಮ ಆಶ್ರಯದಲ್ಲಿದ್ದ ಹೆಂಗಸು ಸಾಮಾನ್ಯ ಸ್ತ್ರೀಯಲ್ಲ, ನಿಷಧ ರಾಜನ ಪತ್ನಿ ಎಂದರಿತು ಹರ್ಷಗೊಂಡರು. ಸುದೇವನು ದಮಯಂತಿಯನ್ನು ಕುಂಡಿನೀಪುರಕ್ಕೆ ಕರೆದುಕೊಂಡು ಬಂದ. ಅಡವಿಯ ಪಾಲಾದ ಮಗಳು ಮನೆ ಸೇರಿದುದರಿಂದ ತಾಯಿ ತಂದೆಯರಿಗೆ ಅಮಿತ ಹರ್ಷವಾಯಿತು.

ದಮಯಂತಿ ದೂತರು

ದಮಯಂತಿ ತಾಯ್ತಂದೆಗಳ ಅಕ್ಕರೆಯ ನೆರಳನ್ನು ಸೇರಿದರೂ ಅವಳ ಮನಸ್ಸಿಗೆ ನೆಮ್ಮದಿಯಿಲ್ಲ. ಆಕೆಗೆ ಯಾವಾಗಲೂ ನಳನದೇ ಚಿಂತೆ. ಅವನನ್ನು ನೆನೆಯುತ್ತಾ ಕಣ್ಣೀರು ಹಾಕುವಳು. ಅವಳಿಗೆ ಊಟ, ಉಣಿಸು, ಉಡುಗೆ-ತೊಡುಗೆಗಳಲ್ಲಿ ಆಸಕ್ತಿಯುಳಿಯಲಿಲ್ಲ. ಭೀಮ ಮಹಾರಾಜನೂ ನಳನನ್ನು ಹುಡುಕಿ ಕರೆತರಲು ಅನೇಕ ಮಂದಿ ಬ್ರಾಹ್ಮಣರನ್ನು ಕಳುಹಿಸಿದ. “ನಾನು ನಿಮ್ಮನ್ನು ಕಳುಹಿಸಿದೆ. ಎಂದು ಅವನಿಗೆ ತಿಳಿಯಬಾರದು. ಅವನಿಗೆ ಬಹು ಆತ್ಮಗೌರವ. ನನ್ನ ಸಹಾಯವನ್ನು ಸ್ವೀಕರಿಸುವುದಿಲ್ಲ” ಎಂದು ಹೇಳಿದ.

ನಳನ ಶೋಧನೆಗೆ ಹೊರಟ ಬ್ರಾಹ್ಮಣರು ತಾವು ಪಯಣಿಸುವ ಮುನ್ನ ದಮಯಂತಿಯನ್ನು ಕಾಣಲು ಬಂದರು. ಅವಳು, “ಎಲ್ಲಿ ಜನರ ಗುಂಪು ನಿಮ್ಮ ಕಣ್ಣಿಗೆ ಬೀಳುತ್ತದೋ ಅಲ್ಲಿ ದೊಡ್ಡ ಸ್ವರದಲ್ಲಿ ‘ಎಲವೋ ಜೂಜುಗಾರ, ನೀನು ಕಾಡಿನಲ್ಲಿ ಪತ್ನಿಯ ಅರ್ಧ ವಸ್ತ್ರವನ್ನು ಕತ್ತರಿಸಿ ಎಲ್ಲಿಗೆ ಹೋದೆ? ಅವಳಾದರೋ ಉಳಿದ ಅರ್ಧ ವಸ್ತ್ರವನ್ನೇ ಉಟ್ಟುಕೊಂಡು ನಿನ್ನ ಬರವನ್ನೇ ಇದಿರು ನೋಡುತ್ತಿದ್ದಾಳೆ’ ಎಂದು ಹೇಳಿ. ಈ ಮಾತನ್ನು ಕೇಳಿದಾಗ ಯಾರಾದರೂ ಉತ್ತರ ಕೊಟ್ಟ ಅವನು ಯಾರು, ಏನು ಮಾಡುತ್ತಿದ್ದಾನೆ ಎಂಬುದನ್ನು ತಿಳಲಿದು ಬಂದು ನನಗೆ ತಿಳಿಸಿರಿ” ಎಂದು ನುಡಿದು ಅವರನ್ನು ಕಳುಹಿಸಿಕೊಟ್ಟಳು.

ಕಾರ್ಕೋಟಕನ ಸಹವಾಸ

ದಮಯಂತಿಯನ್ನು ತೊರೆದ ನಳ ಅಡವಿಯಲ್ಲಿ ಗೊತ್ತುಗುರಿಯಿಲ್ಲದೆ ಬರುತ್ತಿದ್ದಾಗ ಉರಿಯುತ್ತಿದ್ದ ಕಾಡು ಬೆಂಕಿಯೊಂದನ್ನು ನೋಡಿಕದ. ಆ ಬೆಂಕಿಯ ಮಧ್ಯದಿಂದ, “ನಳಮಹಾರಾಜ, ನನ್ನನ್ನು ಕಾಪಾಡು” ಎಂಬ ಮೊರೆ ಅವನಿಗೆ ಕೇಳಿಸಿತು. ಅವನು ಬೆಂಕಿಯನ್ನು ಸಮೀಪಿಸಿ ತನ್ನನ್ನು ಕರೆದವರು ಯಾರೆಂದು ತಿಳಿಯಲು ಪ್ರಯತ್ನಿಸಿದ. ಬೆಂಕಿಯಲ್ಲಿ ಘಟಸರ್ಪವೊಂದು ಇತ್ತು. ಅದು, “ಮಹಾರಾಜ, ನಾನು ಕಾರ್ಕೋಟಕನೆಂಬ ಸರ್ಪರಾಜ, ಮುನಿಯ ಶಾಪದಿಂದ ಅಲುಗಾಡಲಾರದೆ ಬಿದ್ದಿದ್ದೇನೆ. ನಿನ್ನ ನನ್ನನ್ನು ಬೆಂಕಿಯಿಂದೆತ್ತಿ ದಾಟಿಸಿ, ನನಗೆ ಉಪಕಾರ ಮಾಡು”  ಎಂದು ಬೇಡಿಕೊಂಡಿತು.

ನಳನು ಆ ಸಪ್ವನ್ನು ಹಿಡಿದೆತ್ತಿ ಕಿಚ್ಚಿನ ಬಾಧೆಯಿಂದ ತಪ್ಪಿಸಿದ. ಕಾರ್ಕೋಟಕವು ನಳನಿಗೆ ಹೆಜ್ಜೆಗಳನ್ನೆಣಿಸುತ್ತಾ ಮುಂದೆ ಹೋಗಲು ಹೇಳಿತು. ನಳ ಎಣಿಸುತ್ತಾ ಹತ್ತು ಹೆಜ್ಜೆಗಳನ್ನು ನಡೆದಾಗ ಕಾರ್ಕೋಟಕ ಹಿಂದಿನಿಂದ ಬಂದು ಆತನನ್ನು ಕಚ್ಚಿತು. ವಿಷದ ಪ್ರಭಾವದಿಂದ ನಳನ ಸುಂದರಾಕಾರ ಕುರೂಪವನ್ನು ತಾಳಿತು. ಅವನು ಆಶ್ಚರ್ಯ ಮತ್ತು ದುಃಖಪರವಶನಾಗಿ, “ಹರಿಯ ಕರುಣ ತಪ್ಪಿದ ಮೇಲೆ ಇನ್ನೇನಾಗಬೇಕು? ತೋರಮಾಣಿಕ ಎಂದು ಹಿಡಿದರೆ ಇದು ಸುಡುವ ಕೆಂಡವಾಯಿತು” ಎಂದು ದುಃಖಿಸಿದ.

‘ಮಹಾರಾಜ, ನೀನು ಮರುಗಬೇಡ.’

ಕಾರ್ಕೋಟಕವು “ಮಹಾರಾಜ, ನೀನು ಮರುಗಬೇಡ. ನಾನು ನಿನ್ನ ಮೈಗೆ ವಿಷವೇರಿಸಿದುದರಿಂದ ನಿನ್ನ ದೇಹವನ್ನು ಸೇರಿಕೊಂಡ ಕಲಿ ಬಾಧೆಪಡುವನು. ನಿನ್ನ ರೂಪ ಬದಲಾದುದರಿಂದ ಯಾರೂ ನಿನ್ನನ್ನು ಗುರುತಿಸಲಾರರು. ನೀನು ಅಯೋಧ್ಯೆಯ ಅರಸ ಋತುಪರ್ಣನಲ್ಲಿ ಹೋಗಿ ಸೇರಿಕಓ. ಅವನಲ್ಲಿ ನೀನು ಸಾರಥ್ಯವನ್ನು ಮಾಡು. ಅವನು ನಿನಗೆ ಪಗಡೆಯಾಟದ ವಿದ್ಯೆಯನ್ನು ಕಲಿಸಿಕೊಡುವನು. ಪ್ರತಿಯಾಗಿ ನೀನು ಅವನಿಗೆ ಕುದುರೆಯನ್ನು ಅಂಕೆಯಲ್ಲಿಡುವುದನ್ನು ಕಲಿಸಿಕೊಡು. ನೀನು ಮಡದಿ, ಮಕ್ಕಳನ್ನು ಸೇರಿಕೊಳ್ಳುತ್ತೀಯೆ. ಕಳೆದುಕೊಂಡ ರಾಜ್ಯವನ್ನು ಪಡೆಯುತ್ತೀಯೆ. ನಿನ್ನ ನಿಜರೂಪ ಬೇಕೆನಿಸಿದಾಗ ಈ ವಸ್ತ್ರವನ್ನು ಧರಿಸಿ ನನ್ನನ್ನು ಸ್ಮರಿಸು” ಎಂದು ಹೇಳಿತು, ಮತ್ತು ಒಂದು ವಸ್ತ್ರವನ್ನು ನಳನಿಗೆ ಕೊಟ್ಟು ಕಣ್ಮರೆಯಾಯಿತು.

ನಳನು ಕಾರ್ಕೋಟಕನ ಸೂಚನೆಯಂತೆ ಅಯೋಧ್ಯೆಯ ಋತುಪರ್ಣನಲ್ಲಿಗೆ ಬಂದ . ಅಲ್ಲಿ ಬಾಹುಕ ಎಂಬ ಹೆಸರಿನಿಂದ ಅವನ ಅಶ್ವಾಧ್ಯಕ್ಷನಾಗಿ ಸೇರಿಕೊಂಡ. ನಳನ ಸಾರಥಿಯಾಗಿದ್ದ ವಾರ್ಷ್ಣೇಯನೂ ಋತುಪರ್ಣನಲ್ಲಿದ್ದ. ಆದರೆ ಆತನಿಗೆ ನಳನನ್ನು ಗುರುತಿಸಲಾಗಲಿಲ್ಲ.

ಇವನು ನಳನೇ

ನಳನಿಗೆ ಜೀವನಕ್ಕೆ ಉದ್ಯೋಗವೇನೋ ದೊರಕಿತು. ಆದರೆ ನೆಮ್ಮದಿಯಿಲ್ಲ. ಮನಸ್ಸು ವ್ಯಥೆಯ ಮೂಸೆಯಾಗಿತ್ತು. ಅವನು, “ನಾನು ಕೈಹಿಡಿದ ಪತ್ನಿಯನ್ನು ಅಡವಿಯಲ್ಲಿ ಬಿಟ್ಟು ಬಂದೆನಲ್ಲ! ಈ ಅನ್ಯಾಯಕ್ಕೆ ಮೇರೆಯುಂಟೆ? ನನ್ನಂಥ ಮೂರ್ಖನೂ ಪಾಪಿಯೂ ಆದ ಮನುಷ್ಯನು ಬೇರೊಬ್ಬನಿಲ್ಲ” ಎಂದು ಮರುಗುತ್ತಿದ್ದ.

ನಳನನ್ನು ಹುಡುಕಲು ದಮಯಂತಿ ಕಳುಹಿಸಿಕೊಟ್ಟ ಬ್ರಾಹ್ಮಣರಲ್ಲಿ ಪರ್ಣಾದ ಎಂಬುವನೊಬ್ಬ. ಅವನು ಅಯೋಧ್ಯೆಗೂ ಬಂದ. ಅವನು ಬಂದಾಗ ಋತುಪರ್ಣನ ಆಸ್ಥಾನ ಸಭೆ ನಡೆಯುತ್ತಿತ್ತು. ಪರ್ಣಾದನು ಸಭೆಯನ್ನು ಪ್ರವೇಶಿಸಿ ಉಚ್ಛ ಸ್ವರದಲ್ಲಿ ದಮಯಂತಿ ತನಗೆ ಹೇಳಿಕೊಟ್ಟ ಮಾತುಗಳನ್ನು ಹೇಳಿದ. ರಾಜನಾಗಲಿ, ಮಂತ್ರಿಯಾಗಲಿ, ಸಭಿಕರಾಗಲಿ ಪರ್ಣಾದನ ನುಡಿಗೆ ಪ್ರತಿ ಹೇಳಲಿಲ್ಲ. ಆದರೆ ಸಭೆಯ ಒಂದು ಮೂಲೆಯಲ್ಲಿದ್ದ ಬಾಹುಕ ಕಣ್ಣೀರು ಹಾಕಿದ. ಅವನು, “ಹಿರಿಯರೆ, ಸಾಧ್ವಿಯರು ಕಷ್ಟ ಬಂಧರೂ ತಮ್ಮನ್ನು ಕಾಪಾಡಿಕೊಳ್ಳುತ್ತಾರೆ. ಪತಿ ತೊರೆದು ಹೋದರೂ ಅವರು ಕೋಪಗೊಳ್ಳುವುದಿಲ್ಲ. ರಾಜ್ಯಕೋಶಗಳನ್ನು ಕಳೆದುಕೊಂಡ ಆ ದುರದೃಷ್ಟವಂತನ ಮೇಲೆ ಆ ಸಾಧ್ವಿ ಕೋಪಗೊಳ್ಳಬಾರದು” ಎಂದು ಹೇಳಿದ. ಪರ್ಣಾದನು ಕುಂಡಿನೀಪುರಕ್ಕೆ ಹಿಂದಿರುಗಿ ದಮಯಂತಿಗೆ ನಡೆದುದನ್ನು ತಿಳಿಸಿದ.

ಬಾಹುಕನು ನಳನೇ ಎಂದು ದಮಯಂತಿಗೆ ಖಚಿತವಾಯಿತು. ಅವಳು ಸುದೇವನನ್ನು ಕರೆದು, “ನೀನು ನನಗೆ ಪರಮಾಪ್ತ. ಹಿಂದೆ ಅನೇಕ ಉಪಕಾರಗಳನ್ನು ಮಾಡಿರುವೆ. ನೀನು ಅಯೋಧ್ಯೆಗೆ ಹೋಗಿ ದಮಯಂತಿಗೆ ಎರಡನೇ ಸ್ವಯಂವರ ನಡೆಯುತ್ತಿದೆ, ಆ ಸ್ವಯಂವರಕ್ಕೆ ಬರಲು ನಿನ್ನನ್ನು ಆಹ್ವಾನಿಸಿದ್ದಾರೆ ಎಂದು ಋತುಪರ್ಣನಿಗೆ ಹೇಳು”  ಎಂದು ನುಡಿದಳು.

ದಮಯಂತಿಗೆ ಮತ್ತೆ ಸ್ವಯಂವರ ಎಂದು ಸುದೇವನು ಆಹ್ವಾನಿಸಿದಾಗ ಋತುಪರ್ಣನಿಗೆ ಆಶ್ಚರ್ಯವಾಯಿತು. ಈ ಸ್ವಯಂವರಕ್ಕೆ ಹೋಗಬೇಕೆಂಬ ಚಪಲವುಂಟಾಯಿತು. ಅವನು ಅಶ್ವಾಧ್ಯಕ್ಷನನ್ನು ಕರೆದು, “ಬಾಹುಕ, ನಾಳೆ ಕುಂಡಿನೀಪುರದಲ್ಲಿ ದಮಯಂತಿಗೆ ಎರಡನೇ ಸ್ವಯಂವರ. ನಾನು ಹೋಗಬೇಕೆಂದಿದ್ದೇನೆ. ಒಂದು ಹಗಲಲ್ಲಿ ನೂರು ಯೋಜನ ದಾರಿಯನ್ನು ಶ್ರಮಿಸಬೇಕು. ಅಶ್ವಹೃದಯವನ್ನು ಬಲ್ಲ ನೀನು ಈ ಕಾರ್ಯ ಸಾಧಿಸಬಲ್ಲೆ” ಎಂದು ಹೇಳಿದ.

ಎರಡನೆಯ ಸ್ವಯಂವರ

ದಮಯಂತಿಗೆ ಎರಡನೆಯ ಸ್ವಯಂವರ!

ಕೇಳಿ ದುಃಖದಿಂದ ನಳನ ಎದೆಯೊಡೆಯಿತು. ಅವನು, “ದಮಯಂತಿ ದುಃಖದಿಂದ ಬುದ್ಧಿಗೆಟ್ಟು ಈ ಸಾಹಸವನ್ನು ಕೈಗೊಂಡಳೋ ಅಥವಾ ನನ್ನನ್ನು ಕೊಂಡು ಹಿಡಿಯುವ ಸಲುವಾಗಿ ಈ ಉಪಾಯ ಹೂಡಿದಳೋ?” ನನ್ನಲ್ಲಿ ಸೇಡು ತೀರಿಸಿಕೊಳ್ಳಲು ಈ ದಾರಿ ಹಿಡಿದಳೋ?” ಎಂದು ಹಳಹಳಿಸಿದ., ಕುಂಡೀನಿಪುರಕ್ಕೆ ತಲುಪಿದಾಗ ನಿಜ ಸಂಗತಿ ಏನೆಂದು ತಿಳಿಯುವುದೆಂದು ಸಮಾಧಾನ ತಾಳಿದ.

ನಳನು ಅಶ್ವಶಾಲೆಗೆ ಹೋಗಿ ರಥಕ್ಕೆ ಹೂಡಲು ಅತ್ಯುತ್ತಮವಾದ ಕುದುರೆಗಳನ್ನೇ ತಂದ. ಅವು ಸಾಮಾನ್ಯ ಕುದುರೆಗಳಲ್ಲ. ನಳನ ಸಾರಥಿ ವಾರ್ಷ್ಣೇಯ ತಂದು ಬಿಟ್ಟ. ಕುದುರೆಗಳೇ ಅವು. ರಾಜನು ರಥದಲ್ಲಿ ಕುಳಿತುಕೊಂಡನು. ನಳನು ಕುದುರೆಗಳ ಬೆನ್ನು ಚಪ್ಪರಿಸಿ ಚಾವಟಿಗಳನ್ನು  ಎತ್ತಿಕೊಂಡೊಡನೆಯೇ ಕುದುರೆಗಳು ಇಂಗಿತವನ್ನರಿತು ವಾಯುವೇಗದಲ್ಲಿ ಒಡಿದವು. ರಥ ಚಾಲನೆಯ ತೀವ್ರ ವೇಗವನ್ನು ಕಂಡು ಋತುಪರ್ಣನಿಗೆ ಆಶ್ಚರ್ಯವಾಯಿತು. ಅವನು, “ಈ ಚಳಕವನ್ನು ಇಂದ್ರನ ಸಾರಥಿಯಾದ ಮಾತಲಿಯಲ್ಲಿಯೂ ನಳನಲ್ಲಿಯೂ ಮಾತ್ರ ಕಾಣಬಲ್ಲೆವು. ಬಾಹುಕನು ಅವರ ಕೌಶಲವನ್ನು ಮೈಗೂಡಿಸಿಕೊಂಡದ್ದು ಆಶ್ಚರ್ಯವೇ ಸರಿ” ಎಂದು ಸಾರಥಿಯನ್ನು ಹೊಗಳಿದ.
ರಥವು ಮಿಂಚಿನ ವೇಗದಲ್ಲಿ ಓಡುತ್ತಿದ್ದಾಗ ಋತುಪರ್ಣನ ಹೆಗಲಿನ ಉತ್ತರೀಯ ಜಾರಿಬಿದ್ದು ಹೋಯಿತು. ಅವನು, “ಬಾಹುಕ, ನನ್ನ ಉತ್ತರೀಯ ಬಿದ್ದುಹೋಯಿತು. ರಥವನ್ನು ಸ್ವಲ್ಪ ನಿಲ್ಲಿಸು” ಎಂದು ಹೇಳಿದ. ನಳನು ನಗುತ್ತಾ “ಮಹಾರಾಜ, ಉತ್ತರೀಯ ಬಿದ್ದ ಸ್ಥಳ ಒಂದು ಯೋಜನ ಹಿಂದೆ. ಅದನ್ನು ತರಲು ಸಾಧ್ಯವಿಲ್ಲ” ಎಂದು ಉತ್ತರ ಕೊಟ್ಟ.

ಒಳ್ಳೆಯ ಕಾಲ ಪ್ರಾರಂಭವಾಯಿತು

ರಥವು ಮಿಂಚಿನಂತೆ ಮುಂದೆ ಸಾಗಿತು. ದಾರಿಯಲ್ಲಿ ಹಸಿರೆಲೆ ಮತ್ತು ಹಣ್ಣು-ಕಾಯಿಗಳಿಂದ ಕೂಡಿದ ತಾರೆ ಮರವೊಂದು ಸಿಕ್ಕಿತು. ಋತುಪರ್ಣ ಆ ಮರವನ್ನು ನೋಡುತ್ತಾ “ಬಾಹುಕ, ನೀನೇನೋ ಅಶ್ವವಿದ್ಯೆಯಲ್ಲಿ ನಿಪುಣ. ಆದರೆ ನೋಡು, ನನಗೆ ಕೆಲವು ವಿದ್ಯೆಗಳಲು ಗೊತ್ತಿವೆ. ಆ ತಾರೆ ಮರದಲ್ಲಿ ಎಷ್ಟು ಎಲಗಳಿವೆಯೆಂದು ಹೇಳಬಲ್ಲೆಯಾ?” ಎಂದು ಕೇಳಿದ. ಇಂತಹ ಕೊಂಬೆಗಳಲ್ಲಿ ಇಷ್ಟು ಎಲೆಗಳಿವೆ, ಇಷ್ಟು ಹಣ್ಣುಗಳಿವೆ ಎಂದು ಹೇಳಿದ.

ಈ ಮಾತುಗಳನ್ನು ಹೇಳಿ ನಳನು ಬೆರಗುಗೊಂಡ. ಅವನು ರಥದಿಂದ ಇಳಿದು ಮರದ ಬಳಿಗೆ ಹೋಗಿ ರಾಜನು ರೋತಿಸಿದ ಎರಡು ಕೊಂಬೆಗಳ ಎಲೆ ಮತ್ತು ಹಣ್ಣುಗಳನ್ನು ಎಣಿಸಿದ. ಅವು ಋತುಪರ್ಣ ಹೇಳಿದ ಸಂಖ್ಯೆಗಳಿಗೆ ಸರಿಯಾಗಿದ್ದವು. ನಳನು ರಥಕ್ಕೆ ಹಿಂದಿರುಗಿದ. “ಮಹಾರಾಜ, ನೀವು ಸಂಖ್ಯಾಶಾಸ್ತ್ರದಲ್ಲಿ ನಿಪುಣರು. ಆ ಶಾಸ್ತ್ರದ ಗುಟ್ಟನ್ನು ತಿಳಿಯಲು ನನಗೆ ಆಸೆಯಾಗಿದೆ” ಎಂದು ಹೇಳಿದ.

ಋತುಪರ್ಣನು, “ಬಾಹುಕ, ನಾನು ಸಂಖ್ಯಾಶಾಸ್ತ್ರವನ್ನು ಮಾತ್ರವಲ್ಲ, ಅಕ್ಷಹೃದಯವನ್ನೂ ಬಲ್ಲೆ. ನೀನು ಆ ವಿದ್ಯೆಯನ್ನು ಕಲಿತೆಯಾದರೆ ಪಗಡೆಯಾಟದಲ್ಲಿ ಯಾರನ್ನೂ ಬೇಕಾದರೂ ಸೋಲಿಸಬಲ್ಲೆ. ನೀನು ನನಗೆ ಅಶ್ವಹೃದಯವನ್ನು ಕಲಿಸುವೆಯಾದರೆ ನಾನು ನಿನಗೆ ಪಗಡೆಯಾಟವನ್ನು ಹೇಳಿಕೊಡುವೆನು” ಎಂದು ಉತ್ತರ ಕೊಟ್ಟ.

ನಳನು ರಾಜನ ಸೂಚನೆಗಳನ್ನು ಸಂತೋಷದಿಂದ ಒಪ್ಪಿದ. ಋತುಪರ್ಣನು ನಳನಿಗೆ ಅಕ್ಷಹೃದಯವನ್ನು ಉಪದೇಶ ಮಾಡಿದ. ನಳನು ಆ ವಿದ್ಯೆಯನ್ನು ಮೈಗೂಡಿಸಿಕೊಂಡೊಡನೆಯೇ ನಳನ ದೇಹದೊಳಗೆ ಸೇರಿದ್ದ ಕಲಿ, ಕಾರ್ಕೋಟಕ ವಿಷವನ್ನು ಕಕ್ಕುತ್ತಾ ಹೊರಬಂದ. ಅವನು ತನಗೆ ಮಾಡಿದ ಕೇಡಿಗೆ ಶಾಪ ಕೊಡಬೇಕೆಂದು ನಳನು ಯೋಚಿಸಿದ. ಕಲಿ ನಳನಿಗೆ ಕೈ ಮುಗಿದು, “ಮಹಾರಾಜ, ನನ್ನನ್ನು ಕ್ಷಮಿಸು. ನಿನಗೆ ಶಾಶ್ವತವಾದ ಕೀರ್ತಿಯನ್ನು ಒದಗಿಸಿಕೊಡುತ್ತೇನೆ. ಇಂದಿಗೆ ನಿನ್ನ ಕಷ್ಟಗಳೆಲ್ಲ ಕೊನೆಗೊಂಡವು. ಕಷ್ಟ ಸಂಕಟಗಳಲ್ಲಿ ಸಿಕ್ಕಿಬಿದ್ದ ಜನರು ನಿನ್ನ ಹೆಸರನ್ನು ಸ್ಮರಿಸಿದರೆ ಸಾಕು, ಅವರಿಗೆ ನಾನು ತೊಂದರೆ ಕೊಡುವುದಿಲ್ಲ” ಎಂದು ಹೇಳಿ ಮರೆಯಾದ.

ಇದೇನು!

ಅವರು ಸಂಜೆಯಾಗುವ ವೇಳೆಗೆ ಕುಂಡಿನೀಪುರವನ್ನು ಸೇರಿದರು. ನಗರದಲ್ಲಿ ಸ್ವಯಂವರದ ಸದ್ದುಗದ್ದಲಗಳಿಲ್ಲ. ದೇಶದೇಶಗಳಿಂದ ಬಂದ ರಾಜರುಗಳಿಲ್ಲ. ಇದನ್ನು ಕಂಡು ಋತುಪರ್ಣನಿಗೆ ಆಶ್ಚರ್ಯವಾಯಿತು. ಭೀಮರಾಜನು ಋತುಪರ್ಣನನ್ನು ಆದರದಿಂದ ಉಪಚರಿಸಿ ಬರಮಾಡಿಕೊಂಡ. ಅವನಿಗೆ ದಮಯಂತಿ ಹೂಡಿದ ತಂತ್ರ ತಿಳಿಯದು. ಅವನು, “ಗೆಳೆಯ, ನೀನು ಬಂದದು ಬಹು ಸಂತೋಷ. ಆದರೂ ಅನಿರೀಕ್ಷಿತವಾಗಿ ಬರಲು ಏನಾದರೂ ಕಾರಣವಿರಲೇಬೇಕಲ್ಲವೇ?” ಎಂದು ಋತುಪರ್ಣನನ್ನು ಮಾತನಾಡಿಸಿದ. ಋತುಪರ್ಣನಿಗೆ ರಾಜನ ಮಾತುಗಳನ್ನು ಕೇಳಿ ವಿಸ್ಮಯವಾಯಿತು. ಸ್ವಯಂವರದ ಏರ್ಪಾಡು ಕಾಣಿಸದಿದ್ದುದರಿಂದ ಆ ವಿಷಯವನ್ನು ಎತ್ತಿದರೆ ಆಭಾಸವಾದೀತು ಎಂದು ಅವನು ಯೋಚಿಸಿದ. ಅವನು ನಗುತ್ತಾ “ಮಿತ್ರ, ವಿಶೇಷ ಕಾರಣವೇನೂ ಇಲ್ಲ. ನಿನ್ನನ್ನು ಕಂಡ ಮಾತಾಡಿಸಿ ಹೋಗೋಣವೆಂದು ಬಂದೆ” ಎಂದು ಉತ್ತರ ಕೊಟ್ಟ. ತನಗಾಗಿ ಏರ್ಪಡಿಸಿದ ವಸತಿಗೆ ತೆರಳಿದ.

ಪತಿಯ ಸಮಾಗಮ

ಋತುಪರ್ಣನ ರಥಕ್ಕೆ ಕಟ್ಟಿದ ಕುದುರೆ ನಳನದು ಎಂದು ದಮಯಂತಿ ಗುರುತಿಸಿದಳು. ರಥ, ಚಕ್ರಗಳ ಗಡುಸು ಧ್ವನಿಯನ್ನು ಆಲಿಸಿದಳು. ಆ ಬಗೆಯಲ್ಲಿ ರಥವನ್ನು ಓಡಿಸಬಲ್ಲವನು ನಳನೊಬ್ಬನೇ ಎಂದು ತನ್ನಲ್ಲಿ ಹೇಳಿಕೊಂಡಳು. ಆದರೆ ರಥವನ್ನು ಓಡಿಸುವವನು ಕುರೂಪಿಯಾದ ಬಾಹುಕ. ಈತ ಹೇಗೆ ನಳನಾದಾನು ಎಂದು ಅವಳು ತನ್ನಲ್ಲಿಯೇ ಚಿಂತಿಸಿದಳು.

ದಮಯಂತಿ ತನ್ನ ಪರಿಚಾರಿಕೆಯಾದ ಕೇಶಿನಿಯನ್ನು ಕರೆದು, “ಈ ಬಾಹುಕ ಯಾರೆಂಬುದನ್ನು ಪರೀಕ್ಷಿಸಿ ತಿಳಿದುಕೊಂಡು ಬಾ” ಎಂದು ಕಳುಹಿಸಿದಳು. ಕೇಶಿನಿ ನಳಿನಿದ್ದಲ್ಲಿಗೆ ಬಂದು ಬಾಹುಕನನ್ನು ಮಾತನಾಡಿಸಿ, “ಒಬ್ಬ ಬ್ರಾಹ್ಮಣನು ಅಯೋಧ್ಯೆಗೆ ಬಂದು, ‘ಎಲ್ಲವೋ ಜೂಜುಗಾರ, ನೀನು ಕಾಡಿನಲ್ಲಿ ಪತ್ನಿಯ ಅರ್ಧ ವಸ್ತ್ರವನ್ನು ಕತ್ತರಿಸಿ ಎಲ್ಲಿಗೆ ಹೋದೆ? ಅವಳಾದರೋ ಉಳಿದ ಅರ್ಧ ವಸ್ತ್ರವನ್ನೇ ಉಟ್ಟುಕೊಂಡು ನಿನ್ನ ಬರವನ್ನು ಎದುರು ನೋಡುತ್ತಿದ್ದಾಳೆ’ ಎಂದು ಕೇಳಿದಾಗ ನೀನೇನು ಉತ್ತರ ಕೊಟ್ಟೇ’? ಆ ಉತ್ತರವನ್ನು ಇನ್ನೊಂದು ಸಲ ಕೇಳಲು ದಮಯಂತಿ ಬಯಸುತ್ತಿದ್ದಾಳೆ” ಎಂದು ಹೇಳಿದಳು.

ನಳನು ಎಷ್ಟು ತಡೆದರೂ ಅವನ ಕಣ್ಣಲ್ಲಿ ನೀರುಕ್ಕಿತು. ಅವನು, “ಸಾಧ್ವಿಯರು ಕಷ್ಟ ಬಂದರೂ ತಮ್ಮನ್ನು ಕಾಪಾಡಿಕೊಳ್ಳುತ್ತರೆ. ಪತಿ ತೊರೆದು ಹೋದರು. ಅವರು ಕೋಪಗೊಳ್ಳುವುದಿಲ್ಲ. ರಾಜ್ಯಕೋಶಗಳನ್ನು ಕಳೆದುಕೊಂಡ  ದುರದೃಷ್ಟವಂತನ ಮೇಲೆ ಆ ಸಾಧ್ವಿ ಕೋಪಗೊಳ್ಳಬಾರದು” ಎಂದು ಹೇಳಿದ. ಮಾತು ಮುಗಿಸಿದೊಡನೆಯೇ ಅವನ ಕಣ್ಣುಗಳಿಂದ ಧಾರಾಕಾರವಾಗಿ ನೀರು ಸುರಿಯಿತು. ಕೇಶಿನಿ ದಮಯಂತಿಯ ಬಳಿಗೆ ಹೋಗಿ ನಡೆದ ಸಂಗತಿಯನ್ನು ತಿಳಿಸಿದಳು.

ದಮಯಂತಿ ತನ್ನ ಇಬ್ಬರು ಮಕ್ಕಳನ್ನು ಕರೆದು ಕೊಂಡು ಹೋಗಿ ಬಾಹುಕನ ಮುಂದೆ ಬಿಡಲು ಅಪ್ಪಣೆ ಮಾಡಿದಳು. ಕೇಶಿನಿ ಆ ಇಬ್ಬರು ಮಕ್ಕಳನನ್ನು ನಳನೆಡೆಗೆ ಕರೆದುಕೊಂಡು ಬಂದಳು. ನಳನು ಅವರನ್ನು ಎತ್ತಿ ಎದೆಗಪ್ಪಿ, ತೊಡೆಯ ಮೇಲೆ ಕುಳ್ಳರಿಸಿಕೊಂಡು, ಅವರ ನೆತ್ತಿ ಮತ್ತು ಮೈಗಳನ್ನು ಸವರುತ್ತಾ ಗೋಳಾಡಿದ. ಕೊನೆಗೆ ಅವನು ಆ ಹಸುಳೆಗಳನ್ನು ತೊಡೆಯ ಮೇಲಿಂದಿಳಿಸಿ, “ತಾಯಿ, ನನ್ನ ಈ ಮಕ್ಕಳನ್ನು ನೋಡಿದಾಗ ನನಗೆ ಮಕ್ಕಳ ನೆನಪಾಯಿತು. ಅವರ ಸಲುವಾಗಿ ಕಣ್ಣೀರು ಹಾಕಿದೆ” ಎಂದು ಹೇಳಿದ. ಕೇಶಿನಿ ಈ ಸಂಗತಿಯನ್ನು ದಮಯಂತಿಗೆ ಹೇಳಿದಳು. ದಮಯಂತಿಗೆ ಈ ಬಾಹುಕನೇ ನಳನೆಂದು ಖಚಿತವಾಗಿ ಹೋಯಿತು. ಅವಳು ಬಾಹುಕನನ್ನು ಅರಮನೆಗೆ ಬರಮಾಡಿಕೊಂಡಳು.

ದಮಯಂತಿಯ ಮುಡಿ ಜಡೆಕಟ್ಟಿತ್ತು. ಅವಳು ಕಾವಿಬಟ್ಟೆ ತೊಟ್ಟಿದ್ದಳು. ನಳನ ಕಣ್ಣುಗಳಿಗೆ ಅವಳೊಬ್ಬ ತಪಸ್ವಿನಿಯಂತೆ ಕಾಣಿಸಿದಳು. ಅವಳು, “ಬಾಹುಕ, ನಾನು ನಳನನ್ನೇ ವರಿಸಬೇಕೆಂದು ಲೋಕಪಾಲಕರನ್ನು ತ್ಯಜಿಸಿದೆನಲ್ಲವೆ? ಆ ನಳನು ಕಾಡಿನಲ್ಲಿ ಹೆಂಡತಿಯನ್ನು ಬಿಟ್ಟು ಎಲ್ಲಿಗೆ ಹೋದ?” ಎಂದು ಪ್ರಶ್ನಿಸಿದಳು.

ದಮಯಂತಿ ಮಾತು ನಳನ ಮನಸ್ಸನ್ನು ಇರಿಯಿತು. ಅವನು ಆಳುತ್ತಿದ್ದ ಹೆಂಡತಿಯನ್ನು ನೋಡುತ್ತಾ, ‘ನಿನ್ನನ್ನು ಕಾಡಿನಲ್ಲಿ ಬಿಟ್ಟು ಓಡಿದ ಪಾಪಿ ನಾನು. ರಾಜ್ಯಕೋಶಗಳನ್ನು ಕಳೆದುಕೊಂಡ ಜೂಜುಗಾರ ನಾನು. ಇವನ್ನೆಲ್ಲ ಮೈಯೊಳಗೆ ಹೊಕ್ಕ ಕಲಿಯ ಪ್ರಭಾವದಿಂದ ಮಾಡಿದೆ. ನನ್ನ ತಪಸ್ಸಿನಿಂದಲೂ ಪ್ರಯತ್ನದಿಂದಲೂ ಮಾಡಿದೆ. ನನ್ನನ್ನು ಬಿಟ್ಟು ಹೋದ ದಮಯಂತಿ ಎರಡನೆಯ ಸ್ವಯಂವರಕ್ಕೆ ಸಿದ್ಧಳಾಗಿದ್ದಾಳೆ ಎಂದು ತಿಳಿದು ನನಗೆ ಸಿಡಿಲು ಬಡಿದಂತಾಯಿತು. ಅವಳು ಹೀಗೆ ಮಾಡುವವಳಲ್ಲ ಎಂದು ನನ್ನ ಎದೆ ಒಡೆದುಹೋಯಿತು”  ಎಂದು ದುಃಖವನ್ನು ತೋಡಿಕೊಂಡ.

ದಮಯಂತಿ ನಳನಿಗೆ ಕೈಮುಗಿದು, “ಮಹಾರಾಜ, ನಾನು ಆ ಬಗೆಯ ತಪ್ಪು ಮಾಡುವವಳಲ್ಲ. ನಿನ್ನನ್ನು ಇಲ್ಲಿಗೆ ಬರಮಾಡಿಕೊಳ್ಳುವ ಸಲುವಾಗಿಯೇ ಆ ಉಪಾಯವನ್ನು ಹೂಡಿದೆ. ನನ್ನ ಶೀಲದ ಬಗ್ಗೆ ಇನ್ನೂ ಸಂಶಯವಿದ್ದರೆ ವಾಯು, ಸೂರ್ಯ ಮತ್ತು ಇಂದ್ರರು ಸಾಕ್ಷಿ ನುಡಿಯಲಿ. ನನ್ನಲ್ಲಿ ಕಳಂಕವೇನಾದರೂ ಇದ್ದರೆ ಈ ಪ್ರಾಣವನ್ನೇ ಬಲಿಯರ್ಪಿಸುವೆನು” ಎಂದು ನುಡಿದಳು.

ಆಗ ವಾಯುದೇವನು ಪ್ರತ್ಯಕ್ಷನಾಗಿ, “ರಾಜಶ್ರೇಷ್ಠ, ದಮಯಂತಿ ಅರುಂಧತಿ, ಸಾವಿತ್ರಿಯಂತೆ ಪರಿಶುದ್ಧಳು. ಇದನ್ನು ನಾವು ಬಲ್ಲೆವು. ನೀನು ಅವಳನ್ನು ಸ್ವೀಕರಿಸಿ ಸುಖವಾಗಿ ಬದುಕು” ಎಂದು ಹೇಳಿ ಮಾಯವಾದ. ನಳ-ದಮಯಂತಿಯರ ಮೇಲೆ ಪುಷ್ಟವೃಷ್ಟಿಯಾಯಿತು.

ನಳನು ಕಾರ್ಕೋಟಕನನ್ನು ಸ್ಮರಿಸಿ ಅವನು ಕೊಟ್ಟಿದ್ದ ವಸ್ತ್ರವನ್ನು ಧರಿಸಿದ.  ಒಡನೆಯೇ ಅವನ ಕುರೂಪ ಮರೆಯಾಯಿತು.  ನಳನು ತನ್ನ ಸಹಜವಾದ ಸುಂದರಾಕಾರವನ್ನು ಪಡೆದು ಪುಟವಿಕ್ಕಿದ ಚಿನ್ನದಂತೆ ದಿವ್ಯ ತೇಜಸ್ಸಿನಿಂದ ಬೆಳಗಿದ. ನಳ-ದಮಯಂತಿಯರ ದುಃಖವೆಲ್ಲ ನಿಮಿಷಾರ್ಧದಲ್ಲಿ ಮಾಯವಾಯಿತು.

ಮರಳಿ ಚಕ್ರವರ್ತಿಯಾದ

ಭೀಮ ಮಹಾರಾಜನಿಗೂ ಮಹಾರಾಣಿಗೂ ಬಾಹುಕನೇ ನಳನೆಂಬ ಸಂಗತಿ ತಿಳಿಯಿತು. ಅವರ ಸಂತೋಷಕ್ಕೆ ಪಾರವಿಲ್ಲ. ಮಗಳ ದುಃಖ ಕೊನೆಗೊಂಡಿತೆಂದು ಅವರು ಹಿರಿಹಿಗ್ಗಿದರು. ತನ್ನ ಸಾರಥಿಯೇ ನಳನೆಂಬುದು ಋತುಪರ್ಣನಿಗೆ ಗೊತ್ತಾಯಿತು. ಅವನು ನಳನನ್ನು ಅಭಿನಂದಿಸಿ “ಗೆಳೆಯಾ, ನೀನು ನಳನೆಂದು ಅರಿಯದೆ, ನಿನ್ನನ್ನು ಪರಿಚಾರಕನಂತೆ ನಡೆಸಿಕೊಂಡೆ. ನನ್ನನ್ನು ಕ್ಷಮಿಸು” ಎಂದು ನುಡಿದ . ನಳನು, “ಮಹಾರಾಜ, ನಿನ್ನಿಂದ ನನಗೆ ಉಪಕಾರವೇ ಆಯಿತು. ನಿನ್ನ ಮನೆಯನ್ನು ನನ್ನ ಮನೆಯೆಂದೇ ತಿಳಿದಿದ್ದೆ. ನಿನ್ನ ಉಪಕಾರವನ್ನು ಮರೆಯಲಾರೆ”  ಎಂದು ಹೇಳಿ ತಾನು ಹಿಂದೆ ಮಾತುಕೊಟ್ಟಂತೆ ಅಶ್ವಹೃದಯವನ್ನು ಉಪದೇಶಿಸಿದ.

ನಳನು ಮಾವನ ಮನೆಯಲ್ಲಿ ಸುಖವಾಗಿ ಒಂದು ತಿಂಗಳು ಕಳೆದ. ಆಮೇಲೆ ಮಾವನ ಅಪ್ಪಣೆಯನ್ನು ಪಡೆದು ಮಾವನು ಕಳುಹಿಸಿಕೊಟ್ಟ ಮಿತ ಪರಿವಾರದೊಡನೆ ನಿಷಧ ದೇಶಕ್ಕೆ ಬಂದ. ಅವನು ಪುಷ್ಕರನನ್ನು ಕಂಡು, “ಬಾ, ಇನ್ನೊಮ್ಮೆ ಪಗಡೆ ಯಾಡೋಣ. ನಾನು ವಿದೇಶಗಳಲ್ಲಿ ಸಂಚರಿಸಿ ಸ್ವಲ್ಪ ಹಣಗಳಿಸಿಕೊಂಡು ಬಂದಿದ್ದೇನೆ. ನಾನು ಪಣವಾಗಿ ದಮಯಂತಿಯನ್ನೇ ಒಡ್ಡುವೆನು. ನೀನು ನಿನ್ನ ರಾಜ್ಯ, ಭಂಡಾರ ಮತ್ತು ಪ್ರಾಣಗಳನ್ನು ಪಣವೊಡ್ಡು” ಎಂದು ಹೇಳಿ ಪಗಡೆಯಾಡಲು ಆಹ್ವಾನಿಸಿದ. ದಮಯಂತಿಯ ಅಲೌಕಿಕ ಸೌಂದರ್ಯ ಪುಷ್ಕರನನ್ನು ಮರುಳುಗೊಳಿಸಿತು. ಅವಳನ್ನು ತನ್ನ ರಾಣಿಯನ್ನಾಗಿ ಮಾಡಿಕೊಳ್ಳಬೇಕೆಂಬ ಕೆಟ್ಟ ಬಯಕೆ ಅವನಿಗೆ. ಆದುದರಿಂದ ಒಂದು ಕ್ಷಣದಲ್ಲಿ ನಳನನ್ನು ಸೋಲಿಸಿ ದಮಯಂತಿಯನ್ನು ಪಡೆಯುವೆನೆಂದು ಸಂತೋಷದಿಂದ ಪಗಡೆಯಾಡಲು ಒಪ್ಪಿದ.

ಅವರು ಅಡಿದುದು ಒದೇ ಒಂದು ಆಟ. ಆ ಆಟದಲ್ಲಿ ಪುಷ್ಕರನು ಸೋತುಹೋದ. ಆಗ ನಳನು, “ಈಗ ರಾಜ್ಯ ಮತ್ತ ಭಂಡಾರಗಳು ನನ್ನ ವಶವಾದವು. ನೀನು ದಮಯಂತಿಯನ್ನು ಕಣ್ಣಿನಿಂದ ನೋಡುವುದಕ್ಕೂ ಯೋಗ್ಯನಲ್ಲ. ಅವಳ ಕಾಲಧೂಳಿಗಿಂತಲೂ ಕೀಳು ನೀನು. ಹಿಂದೆ ಆಟದಲ್ಲಿ ಗೆದ್ದವನು ನೀನಲ್ಲ. ಗೆದ್ದವನು ಕಲಿ. ಅವನ ಕೈಗೊಂಬೆಯಾಗಿ ನೀನು ಕುಣಿದೆ ಅಷ್ಟೆ. ನಿನ್ನ ಪ್ರಾಣವನ್ನು ಉಳಸಿದ್ದೇನೆ. ಇನ್ನಾದರೂ ಸಜ್ಜನನಾಗಿ ಬದುಕು” ಎಂದು ಹೇಳಿ ಪುಷ್ಕರನನ್ನು ಆತನ ಊರಿಗೆ ಕಳುಹಿಸಿಕೊಟ್ಟ.

ಜೂಜಾಟದಲ್ಲಿ ಗೆದ್ದ ನಳ ಮರಳಿ ನಿಷಧಾಧಿಪತಿ ಯಾದ. ಅವನು ಕುಂಡಿನೀಪುರದಿಂದ ದಮಯಂತಿಯನ್ನು, ತನ್ನ ಮಕ್ಕಳನ್ನು ಕರೆಸಿಕೊಂಡ. ಪುಕ್ಷರನ ಅಧರ್ಮದ ಆಳ್ವಿಕೆಯಿಂದ ಪ್ರಜೆಗಳು ನೊಂದುಹೋಗಿದ್ದರು. ನಳನು ಮರಳಿ ಬಂದು ರಾಜ್ಯವನ್ನು ಗಳಿಸಿಕೊಂಡನೆಂದು ತಿಳಿದಾಗ ಅವರ ಸಂತೋಷ, ಸಂಭ್ರಮಗಳನ್ನು ಹೇಳತೀರದು.  ನಳನಾದರೋ ಧರ್ಮದಿಂದ ರಾಜ್ಯಪರಿಪಾ ಲನೆ ಮಾಡುತ್ತಾ ಪ್ರಜೆಗಳನ್ನು ತನ್ನ ಮಕ್ಕಳಂತೆ ಕಾಪಾಡಿದ. ದಮಯಂತಿ ಭಾಗ್ಯದೇವತೆಯಂತೆ ಅವನ ಸತ್ಕಾರ್ಯಗಳನ್ನು ಬೆಂಬಲಿಸಿದಳು. ನಳನು ಅನೇಕ ಯಜ್ಞ, ಯಾಗಗಳನ್ನು ಮಾಡಿ ಹಿಂದಿನ ಚಕ್ರವರ್ತಿಗಳಾದ ರಘು, ಯಯಾತಿ, ನಹುಷ ಇವರಿಗೆ ಸರಿಯೆನಿಸಿ ಕೀರ್ತಿಶಾಲಿಯಾದ.