ಕರ್ನಾಟಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ರಾಷ್ಟ್ರದ ರಾಜಧಾನಿ ನವದೆಹಲಿಯಲ್ಲಿ (ಕರ್ನಾಟಕ ಭವನ-2, ಸರ್ದಾರ್ ಪಟೇಲ್ ಮಾರ್ಗ) ಕರ್ನಾಟಕ ವಾರ್ತಾ ಕೇಂದ್ರವನ್ನು ಸಮನ್ವಯ ಕಚೇರಿಯನ್ನಾಗಿ ಹೊಂದಿದೆ.

ನವದೆಹಲಿಯ ಕರ್ನಾಟಕ ಭವನದ ನಿವಾಸಿ ಆಯುಕ್ತರ ಕಚೇರಿಯೊಡನೆ ಸಂಪರ್ಕವಿಟ್ಟುಕೊಂಡು ಕಾರ್ಯ ಚಟುವಟಿಕೆಗಳನ್ನು ನಿರ್ವಹಿಸುವ ಕರ್ನಾಟಕ ವಾರ್ತಾ ಕೇಂದ್ರವು ರಾಷ್ಟ್ರದ ರಾಜಧಾನಿಯಲ್ಲಿ ಕೇಂದ್ರ ಸರ್ಕಾರದ ಎಲ್ಲಾ ಸಚಿವಾಲಯ, ವಿವಿಧ ಆಡಳಿತ ಇಲಾಖೆಗಳು ಹಾಗೂ ಮಾಧ್ಯಮ ಪ್ರತಿನಿಧಿಗಳ ನಡುವೆ ಸಾರ್ವಜನಿಕ ಸಂಪರ್ಕ ಸೇತುವಾಗಿ ಕಾರ್ಯ ನಿರ್ವಹಿಸುತ್ತದೆ.

ಕರ್ನಾಟಕದ ಕಲೆ, ಸಂಸ್ಕೃತಿ ಮತ್ತು ಪ್ರಗತಿಯ ಸಾಧನೆಯ ಮಾಹಿತಿಯನ್ನು ಮಾಧ್ಯಮ ಪ್ರತಿನಿಧಿಗಳು ಹಾಗೂ ಸಾರ್ವಜನಿಕರಿಗೆ ನೀಡುವುದರೊಂದಿಗೆ ಕರ್ನಾಟಕದ ಮುಖ್ಯಮಂತ್ರಿಗಳು, ಸಚಿವ ಸಂಪುಟದ ಸದಸ್ಯರು, ಇಲಾಖಾ ಕಾರ್ಯದರ್ಶಿಗಳು ಪತ್ರಿಕಾಗೋಷ್ಠಿಗಳನ್ನು ಅವರ ಅಪೇಕ್ಷೆಯ ಮೇರೆಗೆ ವಾರ್ತಾ ಕೇಂದ್ರವು ಏರ್ಪಡಿಸುತ್ತದೆ.

ರಾಜಧಾನಿಯಲ್ಲಿ ರಾಜ್ಯ ಸರ್ಕಾರದ ಕಾರ್ಯಕ್ರಮ, ಕಾರ್ಯಕಲಾಪ, ಸಭೆ, ಸಮಾರಂಭಗಳಿಗೆ ವ್ಯಾಪಕ ಪ್ರಚಾರ ದೊರಕಿಸಲು ಕಾರ್ಯ ನಿರ್ವಹಿಸುವ ವಾರ್ತಾ ಕೇಂದ್ರವು ನವದೆಹಲಿಯ ಗಣರಾಜ್ಯೋತ್ಸವ ಪೆರೇಡ್ನಲ್ಲಿ ಕರ್ನಾಟಕ ಸ್ತಬ್ಧಚಿತ್ರ ಭಾಗವಹಿಸುವ ಬಗೆಗಿನ ವ್ಯವಸ್ಥೆಯಲ್ಲಿ ಜವಾಬ್ದಾರಿ ಹೊಂದಿರುತ್ತದೆ.

ಕರ್ನಾಟಕ ರಾಜ್ಯದ ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿ ಚಟುವಟಿಕೆಗಳು, ನಾಡಿನ ಇತಿಹಾಸ, ಸಂಸ್ಕೃತಿ, ಭಾಷೆ, ಕಲೆ, ಸಂಗೀತ, ನೃತ್ಯ ಕಾರ್ಯಕ್ರಮಗಳು, ರಾಜ್ಯದ ಪ್ರವಾಸಿ ತಾಣಗಳ ಮಾಹಿತಿ ಒದಗಿಸುವ ನವದೆಹಲಿಯ ವಾರ್ತಾ ಕೇಂದ್ರ ಪ್ರಚಲಿತ ವಿಷಯಗಳ ಬಗೆಗೆ ವಿಚಾರ ಸಂಕಿರಣ, ಸಾಹಿತ್ಯದ ಚಟುವಟಿಕೆಗಳು, ಕಲಾ ಮಹೋತ್ಸವ ಮತ್ತು ಪ್ರದರ್ಶನಗಳನ್ನು ಏರ್ಪಡಿಸುವ ಹೊಣೆಗಾರಿಕೆಯನ್ನು ಹೊಂದಿದೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಚೇರಿಗಳಿಗೆ ಕರ್ನಾಟಕ ಕುರಿತ ನಿರ್ದಿಷ್ಟ ವಿಚಾರಗಳನ್ನು ಸಂಗ್ರಹಿಸಿ ಒದಗಿಸುವ ಕೆಲಸವನ್ನು ಮಾಡುವ ವಾರ್ತಾ ಕೇಂದ್ರ ಮಾಧ್ಯಮ ಕೇಂದ್ರಗಳು ಹಾಗೂ ಪತ್ರಕರ್ತರಿಗೆ ಅಗತ್ಯ ಲಭ್ಯ ವಿವರಗಳನ್ನು ಒದಗಿಸುವ ಕಾರ್ಯವನ್ನು ನಿರ್ವಹಿಸುತ್ತದೆ.

ಕರ್ನಾಟಕ ಸರ್ಕಾರಕ್ಕೆ ಸಂಬಂಧಿಸಿದ ಸಭೆ, ಸಮಾರಂಭ, ಕಾರ್ಯಕ್ರಮಗಳಿಗೆ ಮತ್ತು ಸಾಧನೆಗಳಿಗೆ ವ್ಯಾಪಕ ಪ್ರಚಾರ ದೊರಕಿಸುವುದು ಮಾಧ್ಯಮ ಹಾಗೂ ಸಾರ್ವಜನಿಕರಿಗೆ ಮಾಹಿತಿ ನೀಡುವುದು ದೆಹಲಿ ಕರ್ನಾಟಕ ವಾರ್ತಾ ಕೇಂದ್ರದ ಇನ್ನೊಂದು ಹೊಣೆಗಾರಿಕೆ.