ಉ|| ನೆಟ್ಟನೆ ಬೂತುಗೊಳ್ವ ತೆಱದಿಂ ದಶಕಂಧರನಾಡಿ ಪಾಡಿ ನಾ
ಣ್ಗೆಟ್ಟಿರೆ ಕೊಂಡನಲ್ಲದೆ ಬರಂಗಳನೀಶ್ವರನಲ್ಲಿ ಪೇೞಮಾ|
ವೊಟ್ಟಜೆಯಿಂದೆ ಕೊಂಡನೆನುತುಂ ವಿಜಯಂ ನೆಲಕಿಕ್ಕಿ ಗಂಟಲಂ
ಮೆಟ್ಟದೆ ಕೊಂಡನೇ ಹರನ ಪಾಶುಪತಾಸ್ತ್ರಮನಿಂದ್ರಕೀಲದೊಳ್|| ೫೩

ಪೊಂಗಿ ಕಡಂಗಿ ಬೀರದೊಳ್ ಬೀಗುವ ನಿನ್ನಣುಗಾಳೆ ನೋಡೆ ನಿ
ನ್ನಂಗನೆಯರ್ ತೊವಲ್ಗೊಳೆ ಭಯಂಗೊಳೆ ಕೋಡಗಗಟ್ಟುಗಟ್ಟಿ ಚಿ|
ತ್ರಾಂಗದನುಯ್ಯೆ ನಿನ್ನನೆಡೆಮಾಡದಸುಂಗೊಳೆ ಕಾದಿ ತಂದ ವೀ
ರಂಗರಿಗಂಗೆ ನೀಂ ಮಲೆದು ನಿಲ್ವುದು ಪಾೞವಲಂ ಸುಯೋಧನಾ|| ೫೪

ಮ||ಸ್ರ|| ಗುರುವಿಲ್ಲಾ ಕರ್ಣನಿಲ್ಲಾ ಗುರುವಿನ ಮಗನಿಲ್ಲಾ ಕೃಪಾಚಾರ್ಯನಿಲ್ಲಾ
ಕುರುರಾಜಾ ನಿನ್ನ ತಮ್ಮಂದಿರೊಳಿನಿಬರೊಳಾರಿಲ್ಲ ಗಾಂಗೇಯನಿಲ್ಲಾ|
ಮರುಳೇ ಗಾಂಡೀವಿಯಾರೆಂದೆಣಿಕೆಗಳೆವೆ ಗಂಧರ್ವರುಯ್ವಂದು ನಿನ್ನಂ
ಕರುವಿಟ್ಟಂತಿರ್ದುದಿಲ್ಲಾ ನೆರೆದ ಕುರುಬಲಂ ತಂದವಂ ಪಾರ್ಥನಲ್ಲಾ|| ೫೫

ಮ|| ಬವರಂಗೆಯ್ವಮಮೋಘಮೆಂಬ ಬಗೆಯಿಂ ನೀಮೆಲ್ಲಮಾದಂ ರಣೋ
ತ್ಸವದಿಂ ನಿನ್ನೆಯೆ ಪೋದ ಗೋಗ್ರಹಣದಂದೇನಾದಿರಂತಾ ಪರಾ|
ಭವಮಂ ಚಿ ಮದಿರ್ದಿರಪ್ಪೊಡಮದೇನೇವೋದುದಿನ್ನುಂ ಗುಣಾ
ರ್ಣವನಿಂ ನಾಳೆಯೆಂ ಕೇಳದಿರ್ಪಿರೆ ಮಹಾ ಗಾಂಡೀವ ನಿರ್ಘೋಷಮಂ|| ೫೬

ಚಂ|| ಸುರಿವ ಸರಲ್ ನರಲ್ವ ಭಟರೆತ್ತಮುರುಳ್ವ ದೞಂ ಪೊರಳ್ವ ಸಿಂ
ಧುರ ಘಟೆ ಬರ್ಪ ನೆತ್ತರ ಕಡಲ್ ಕುಣಿವಟ್ಟೆಗಳಾಜಿಯೊಳ್ ಭಯಂ|
ಕರತರಮಪ್ಪಿನಂ ಪಗೆವರೊಕ್ಕಲೊಳೋವೆನಲೊರ್ವರಿಲ್ಲದಂ
ತಿರೆ ತವೆ ಕೊಲ್ಗುಮಂತುಮರಿಕೇಸರಿಗಾಂತು ಬರ್ದುಂಕಲಕ್ಕುಮೇ|| ೫೭

ವ|| ಎಂದು ಕಾಳನೀಳಮೇಘದಂತು ಮಸಗಿ ಗರ್ಜಿಸುವಸುರಕುಳವಿಷಯಕೇತುಗೆ ಫಣಿಕೇತು ಮುಳಿದು ತಳಮಳಿಸಿ ಕಣ್ಗಾಣದೆ-

ಪೌರುಷವನ್ನೂ ಕಂಡೂ ಕೇಳಿಯೂ ನಿನಗೆ ಹೋರಾಡಲು ಹೇಗೆ ಮನಸ್ಸು ಬರುತ್ತದೆ. ೫೩. ದುರ್ಯೋಧನ ! ರಾವಣನು ಸಾಮಾನ್ಯವಾದ ಬಡಪ್ರಾಣಿಯಂತೆ ಹಾಡಿ ಪಾಡಿ ಬೇಡಿ ನಾಚಿಕೆಯಾಗುವ ರೀತಿಯಲ್ಲಿ ಈಶ್ವರನಿಂದ ವರಗಳನ್ನು ಪಡೆದನಲ್ಲದೆ ತನ್ನ ಪರಾಕ್ರಮದಿಂದ ತೆಗೆದುಕೊಂಡನೆ. ಹೇಳು. ಅರ್ಜುನನಾದರೋ ಶಿವನನ್ನು ನೆಲಕ್ಕೆ ತಳ್ಳಿ ಗಂಟಲನ್ನು ಮೆಟ್ಟದೆ ಈಶ್ವರನ ಪಾಶುಪತಾಸ್ತ್ರವನ್ನು ಇಂದ್ರಕೀಲಪರ್ವತದಲ್ಲಿ ತೆಗೆದುಕೊಂಡನೆ? (ಅರ್ಜುನನು ತನ್ನ ಪರಾಕ್ರಮದಿಂದಲೇ ಈಶ್ವರನಿಂದ ಅಸ್ತ್ರವನ್ನು ಪಡೆದುದರಿಂದ ರಾವಣನಿಗಿಂತ ಇವನು ಪರಾಕ್ರಮಿ ಎಂದರ್ಥ.) ೫೪. ಕೊಬ್ಬಿ ಉತ್ಸಾಹಿಸಿ ಶೌರ್ಯದಿಂದ ಅಹಂಕಾರಪಡುವ ನಿನ್ನ ಪ್ರೀತಿಪಾತ್ರರಾದ ಯೋಧರೇ ನೋಡುತ್ತಿರಲು ನಿನ್ನ ಸ್ತ್ರೀಯರು ತಮ್ಮ ಅಪಾಯವನ್ನು ಸೂಚಿಸುವ ಚಿಗುರನ್ನು ಹಿಡಿದುಕೊಂಡು ಹೆದರಿರಲು ಚಿತ್ರಾಂಗದನೆಂಬ ಗಂಧರ್ವನು ನಿನ್ನನ್ನು ಕೋಡಗವನ್ನು ಕಟ್ಟುವಂತೆ ಕಟ್ಟಿ ತೆಗೆದುಕೊಂಡು ಹೋಗುತ್ತಿರಲು ತಡೆಮಾಡದೆ ಪ್ರಾಣವನ್ನೇ ಸೆಳೆಯುವಂತೆ ಕಾದಿ ತಂದ ವೀರನಾದ ಅರ್ಜುನನಿಗೆ ಮಲೆತು ನೀನು ಪ್ರತಿಭಟಿಸಿ ನಿಲ್ಲುವುದು ಕ್ರಮವಲ್ಲವೇ ದುರ್ಯೋಧನ? ೫೫. ನಿನ್ನನ್ನು ಗಂಧರ್ವರು ಸೆಳೆದುಕೊಂಡು ಹೋದಾಗ ದ್ರೋಣಾಚಾರ್ಯರಿಲ್ಲ, ಕರ್ಣನಿಲ್ಲ, ಅಶ್ವತ್ಥಾಮನಿಲ್ಲ, ಕೃಪಾಚಾರ್ಯನೂ ಇಲ್ಲ, ನಿನ್ನ ಇಷ್ಟು ಜನ ತಮ್ಮಂದಿರಲ್ಲಿ ಯಾರೂ ಇಲ್ಲ, ಭೀಷ್ಮನೂ ಇಲ್ಲ. ಯಾರೂ ಸಮಯಕ್ಕಾಗಲಿಲ್ಲ. ಬುದ್ಧಿಯಿಲ್ಲದವನೇ ಅರ್ಜುನನು ಯಾರೆಂದು ಕೀಳ್ಮಾಡಿ ನುಡಿಯುತ್ತಿರುವೆ? ಕುರುಸೈನ್ಯವು ಎರಕಹೊಯ್ದಂತೆ ಸ್ತಬ್ಧವಾಗಿತ್ತಲ್ಲವೆ? ನಿನ್ನನ್ನು ಬಿಡಿಸಿ ತಂದವನು ಅರ್ಜುನನಲ್ಲವೇ? ೫೬. ಉತ್ತಮ ರೀತಿಯಲ್ಲಿ ಯುದ್ಧಮಾಡೋಣ ಎಂಬ ಮನಸ್ಸಿನಿಂದ ನೀವೆಲ್ಲರೂ ವಿಶೇಷಾಸಕ್ತಿಯಿಂದ ಬಂದು ನಿನ್ನೆ ನಡೆದ ಪಶುಗಳನ್ನು ಹಿಡಿಯುವ ಸಂದರ್ಭದಲ್ಲಿ ಏನಾದಿರಿ? ಆಗುಂಟಾದ ಸೋಲನ್ನು ಚಿ ಮರೆತಿರುವಿರಾದರೆ ಏನಂತೆ? ಇನ್ನೂ ಗುಣಾರ್ಣವನಾದ ಅರ್ಜುನನಿಂದ ನಾಳೆಯೇ ಮಹಾಗಾಂಡೀವದ ಟಂಕಾರ ಶಬ್ದವನ್ನು ಕೇಳದಿರುತ್ತೀರಾ? ೫೭. ಸುರಿಯುವ ಬಾಣಗಳು, ನರಳುತ್ತಿರುವ ಯೋಧರು, ಉರುಳುತ್ತಿರುವ ಸೈನ್ಯ, ಹೊರಳುವ ಆನೆಗಳ ಸಮೂಹ, ಹರಿದು ಬರುತ್ತಿರುವ ರಕ್ತಸಮುದ್ರ, ಕುಣಿವ ತಲೆಯಿಲ್ಲದ ಮುಂಡಗಳು, ಯುದ್ಧದಲ್ಲಿ ಭಯಂಕರವಾಗುವ ಹಾಗೆ ಶತ್ರುಶಿಬಿರದಲ್ಲಿ ಓ ಎನ್ನುವುದಕ್ಕೆ ಒಬ್ಬರೂ ಇಲ್ಲದಂತೆ ಸಂಪೂರ್ಣವಾಗಿ ಕೊಲ್ಲುತ್ತಾನೆ. ಹಾಗೆ ಅರಿಕೇಸರಿಗೆ ಪ್ರತಿಭಟಿಸಿ ಬದುಕಲು ಸಾಧ್ಯವೇ? ವ|| ಎಂದು ಪ್ರಳಯಕಾಲದ ಕಾರ್ಮೋಡದ ಹಾಗೆ ರೇಗಿ

ಕಂ|| ಎೞ್ಪೋಗು ದೂತನಪ್ಪನ
ಬೆೞ್ಪನ ನುಡಿಗೇಳ್ದು ಮುಳಿಯಲಾಗದು ನೀನುಂ|
ಮೇೞ್ಪಟ್ಟು ವಿದುರನೆಂಬೀ
ತೊೞ್ಪುಟ್ಟಿಯ ಮನೆಯ ಕೂೞೆ ನುಡಿಯಿಸೆ ನುಡಿದೈ|| ೫೮

ವ|| ಎನೆ ವಿದುರನತಿಕುಪಿತಮನನಾಗಿ-

ಕಂ|| ಕಡು ಮುಳಿದು ನಿನ್ನ ತೊಡೆಗಳ
ನುಡಿವೆಡೆಯೊಳ್ ಭೀಮಸೇನನಾನಾ ಪದದೊಳ್|
ಪಿಡಿಯಲ್ಕೆಂದಿರ್ದೆನಿದಂ
ಪಿಡಿಯೆಂ ಪೋಗೆಂದು ಸಭೆಯೊಳುಡಿದಂ ಬಿಲ್ಲಂ|| ೫೯

ವ|| ಅಂತು ವಿದುರಂ ವಿಚ್ಛಿದುರಮನನಾಗಿ ಬಿಲ್ಲನುಡಿವುದುಂ ಸುಯೋಧನಂ ತನ್ನ ಬಲದ ತೋಳುಡಿದಂತಾಗಿ ಸಿಗ್ಗಾಗಿ ಬಾಳಂ ಕಿೞ್ತೊದಱ ಮನದೊಳಾದೇವದಿಂ ದೇವಕೀನಂದನನ ಮೇಲೆವಾಯ್ವುದುಂ ನಂಜಿನ ಮೇಲೆವಾಯ್ವ ನೊಳರಿನಂತುರುಳ್ತರೆ ಪಾಯ್ದು-

ಉ|| ಮೂಱಡಿ ಮಾಡಿದಂದು ನೆಲನೆಲ್ಲಮನಾ ಬಲಿಗಾದ ರೂಪಮಂ
ತೋಱದನೀ ಜಗತ್ತ್ರಯಮನೊರ್ಮೆಯೆ ನುಂಗುವ ಕಾಲ ರೂಪಮಂ|
ತೋಱದನಂತೆ ರೌದ್ರತರ ರೂಪಮನೊರ್ಮೆಯೆ ವಿಶ್ವರೂಪಮಂ
ತೋಱದನಿರ್ದರಂ ನೆಯೆ ಮೋಹಿಸಿ ವೈಷ್ಣವದಿಂ ಮುರಾಂತಕಂ|| ೬೦

ವ|| ಆಗಳ್ ಧೃತರಾಷ್ಟ್ರಂ ಬಂದು ಮುಕುಂದನನೇಕಸ್ತುತಿಶತಸಹಸ್ರಂಗಳಿಂ ಸ್ತುತಿಯಿಸಿದೊಡಾತಂಗೆ ವರದನಾಗಿ ದಿವ್ಯ ದೃಷ್ಟಿಯಂ ದಯೆಗೆಯ್ದು ಮುನ್ನಿನಂತೆ ಮನುಷ್ಯದೇಹಮಂ ಕೆಯ್ಕೊಂಡು ತ್ರೈಲೋಕ್ಯ ಗುರು ಗುರುತನೂಜನ ಕೆಯ್ಯಂ ಪಿಡಿದರಮನೆಯಂ ಪೊಱಮಟ್ಟು ಕಪಟ ಪ್ರಪಂಚದಿಂದಾತನುಮಂ ತನಗೆ ಮಾಡಿ ಬೀಡಿಂಗೆ ವಂದು ಕುಂತಿಗೇಕಾಂತದೊಳಿಂತೆಂದಂ-

ಚಂ|| ಗುರು ಕೃಪ ಶಲ್ಯ ಸಿಂಧುಸುತರಪ್ಪೊಡೆ ನಮ್ಮಯ ಪಕ್ಷಮೊಂದಿದಂ
ಗುರುಸುತನೀಗಳೆಮ್ಮೊಳಖಿಳಾಸ್ತ್ರ ವಿಶಾರದನಪ್ಪನುಂ ಗೆಲ|
ಲ್ಕರಿಯನುಮೊಂದಿ ಬಾರದನುಮಂಕದ ಕರ್ಣನೆ ಭೀರಮಾತನಿಂ
ದುರಿವರಿದತ್ತು ಚಾಗಮವನಿಂದೆಸೆದತ್ತು ಸಮಸ್ತ ಧಾತ್ರಿಯೊಳ್|| ೬೧

ಗರ್ಜನೆ ಮಾಡುವ ಕೃಷ್ಣನಿಗೆ ದುರ್ಯೋಧನನು ಕೋಪಿಸಿಕೊಂಡು ಕುದಿದು ಕುರುಡನಾದನು. ೫೮. “ಎದ್ದು ಹೋಗು; ದೂತನಾದವನ ದಡ್ಡಮಾತನ್ನು ಕೇಳಿ ಕೋಪಿಸಬಾರದು. ನೀನು ಮೋಸಹೋಗಿ ವಿದುರನೆಂಬ ದಾಸೀಪುತ್ರನ ಮನೆಯ ಕೂಳಿನ ಕೊಬ್ಬು ಮಾತನಾಡಿಸಲು ನೀನು ಹೇಗೆ ಮಾತನಾಡಿದ್ದೀಯೆ. (ನೀಚ ಆಹಾರದ ಪ್ರಭಾವ ಇದು ಎಂದರ್ಥ) ವ|| ಎನ್ನಲು ವಿದುರನು ವಿಶೇಷ ಕೋಪದಿಂದ ಕಿಡಿಕಿಡಿಯಾದನು. ೫೯. ಎಲವೊ ದುರ್ಯೋಧನ, ಮುಂದೆ ಭೀಮಸೇನನು ವಿಶೇಷವಾಗಿ ಕೋಪಿಸಿಕೊಂಡು ನಿನ್ನ ತೊಡೆಯನ್ನು ಒಡೆಯುವ ಸಂದರ್ಭದಲ್ಲಿ ಇದನ್ನು ಪ್ರಯೋಗಿಸಬೇಕೆಂದಿದ್ದೆ. ಈಗ ಹಿಡಿಯುವುದಿಲ್ಲ ಹೋಗು ಎಂದು ಸಭೆಯಲ್ಲಿ ಎಲ್ಲರೆದುರಿಗೂ ಬಿಲ್ಲನ್ನು ಮುರಿದು ಹಾಕಿದನು. ವ|| ಹಾಗೆ ವಿದುರನು ಭಗ್ನಮನಸ್ಕನಾಗಿ ಬಿಲ್ಲನ್ನು ಮುರಿದುಹಾಕಲು ದುರ್ಯೋಧನನಿಗೆ ತನ್ನ ಬಲತೋಳೇ ಭಿನ್ನವಾದಂತೆ ಆಯಿತು. ಅವಮಾನಿತನಾಗಿ ಒರೆಯಿಂದ ಕತ್ತಿಯನ್ನು ಸೆಳೆದು ಒದರಿ ಮನಸ್ಸಿನಲ್ಲುಂಟಾದ ಕೋಪದಿಂದ ಕೃಷ್ಣನ ಮೇಲೆ ಹಾಯಲು ವಿಷದ ಮೇಲೆ ಹಾಯುವ ನೊಣದಂತೆ ಉರುಳಿಬೀಳುವ ಹಾಗೆ ಹಾಯಲು- ೬೦. ಶ್ರೀಕೃಷ್ಣನು ತನ್ನ ವಿಷ್ಣುಮಾಯೆಯಿಂದ ಸಭೆಯಲ್ಲಿದ್ದವರನ್ನೆಲ್ಲಾ ಪೂರ್ಣವಾಗಿ ಮೂರ್ಛೆಗೊಳಿಸಿ ಭೂಮಿಯನ್ನೆಲ್ಲ ಮೂರಡಿಯಾಗಿ ಅಳೆದಾಗ ಬಲಿಚಕ್ರವರ್ತಿಗೆ ತೋರಿದ ದೊಡ್ಡ ಆಕಾರವನ್ನು ತೋರಿಸಿದನು. ಈ ಮೂರು ಲೋಕಗಳನ್ನೂ ಒಂದೇ ಸಲಕ್ಕೆ ನುಂಗುವ ಪ್ರಳಯಕಾಲದ ರೂಪವನ್ನು ತೋರಿಸಿದನು. ಹಾಗೆಯೇ ಒಂದೇಸಲಕ್ಕೆ ವಿಶ್ವರೂಪವನ್ನು ತೋರಿಸಿದನು. ವ|| ಆಗ ಧೃತರಾಷ್ಟ್ರನು ಬಂದು ನೂರಾರು ಸಾವಿರಾರು ಸ್ತೋತ್ರಗಳನ್ನು ಸ್ತುತಿಸಲು ಆತನಿಗೆ ವರಪ್ರದನಾಗಿ ದಿವ್ಯದೃಷ್ಟಿಯನ್ನು ದಯಪಾಲಿಸಿ ಮೊದಲಿನ ಮನುಷ್ಯರೂಪವನ್ನು ತಾಳಿ ಮೂರುಲೋಕದ ಗುರುವಾದ ಕೃಷ್ಣನು ಅಶ್ವತ್ಥಾಮನ ಕೈಹಿಡಿದು ಅರಮನೆಯಿಂದ ಹೊರಟು ಅವನನ್ನು ಕಪಟದಿಂದ ತನ್ನವನನ್ನಾಗಿ ಮಾಡಿಕೊಂಡು ಬೀದಿಗೆ ಬಂದು ಕುಂತೀದೇವಿಗೆ ರಹಸ್ಯವಾಗಿ ಹೀಗೆ ಹೇಳಿದನು- ೬೧. ಗುರು, ಕೃಪ, ಶಲ್ಯ, ಭೀಷ್ಮರಾದರೆ ನಮ್ಮ ಪಕ್ಷದವರೇ. ಈಗ ಅಶ್ವತ್ಥಾಮನೂ ನಮ್ಮಲ್ಲಿ ಸೇರಿದನು. ಸಮಸ್ತ ಶಾಸ್ತ್ರದಲ್ಲಿ ವಿಶಾರದನೂ ಜಯಿಸುವುದಕ್ಕೆ ಅಸಾಧ್ಯನೂ ನಮ್ಮ ಜೊತೆಯಲ್ಲಿ ಸೇರುವುದಕ್ಕೆ ಒಪ್ಪದವನೂ ಆದವನು ಪ್ರಸಿದ್ಧನಾದ ಕರ್ಣನೊಬ್ಬನೇ. ಸಮಸ್ತ ಪ್ರಪಂಚದಲ್ಲಿ ಅವನ ಶೌರ್ಯಪ್ರತಾಪವು ಬೆಂಕಿಯಂತೆ ಪ್ರಸರಿಸಿದೆ. ತ್ಯಾಗವೂ

ಉ|| ಎಂತೆನೆ ವಜ್ರಿ ವಜ್ರಕವಚಕ್ಕೆ ನಿಜೋಜ್ವಳಕುಂಡಳಕ್ಕೆ ಕೆ
ಯ್ಯಾಂತೊಡೆ ಪಾಂಡುಪುತ್ರರನೆ ಕಾದೆರೆವಂದುಗಿವಂ ದಲೆಂದಿನಂ|
ಮಂತಣದಿಂದೆ ಬಾರಿಸೆಯುಮೆಂದುದನೆನ್ನದೆ ಮೀಱ ಕೊಟ್ಟನೋ
ರಂತು ಜಸಕ್ಕೆ ನೋಂತು ಬಿಡೆ ನೇರ್ದೊಡಲೊಳ್ ತೊಡರ್ದಾ ತನುತ್ರಮಂ|| ೬೨

ಮ|| ಬರವಂ ಬೇಡಿದರ್ಗೀವ ದೇವನೆ ವಲಂ ನಾಣ್ಗೆಟ್ಟು ಬಂದೆನ್ನನಿಂ
ತೆರೆದಂ ಬರ್ದರೊಳಾನೆ ಬರ್ದನೆನುತುಂ ನೇರ್ವಲ್ಲಿ ಕೆನ್ನೆತ್ತರುಂ|
ಬಿರಿ ಕಂಡಂಗಳೆ ಬೀೞಲುಣ್ಮೆ ಮನದೊಂದಣ್ಮಿಟ್ಟಳಂ ಪೊಣ್ಮೆ ವೀ
ರರಸಕ್ಕಾಗರಮಾಯ್ತು ನೋಡೆ ಕವಚಂಗೊಂಡಂದಮಾ ಕರ್ಣನಾ|| ೬೩

ವ|| ಅಂತು ಸಹಜಕವಚ ರತ್ನಕುಂಡಲಂಗಳಂ ನೆತ್ತರ್ ಪನಪನ ಪನಿಯೆ ತಿದಿಯುಗಿವಂತುಗಿದು ಕೊಟ್ಟುದರ್ಕೆ ಮೆಚ್ಚಿ ದೇವೇಂದ್ರನಾತಂಗಮೋಘಶಕ್ತಿಯನಿತ್ತನಾತನಂ ನಾನುಮೆನ್ನ ಬಲ್ಲ ಮಾೞ್ಕೆಯಿಂ ಭೇದಿಸಿದಪ್ಪೆಂ ನೀಮುಂ ನಿಮ್ಮ ಚೊಚ್ಚಿಲ ಮಗನಪ್ಪ ಸೂರ್ಯಸೂನುವಂ ಸೂರ್ಯದಿನದಂದು ಕಂಡು ಕಾರ್ಯಸಿದ್ಧಿಯಂ ಮಾಡಿ ಬನ್ನಿಮೆಂದು ಕೊಂತಿಯಂ ಬೀೞ್ಕೊಂಡು ಪರಕೆಯಂ ಕೈಕೊಂಡು ರಥಾಂಗಧರಂ ರಥಮನೇಱ ಕರ್ಣನ ಮನೆಯ ಮುಂದನೆ ಬಂದು ಮೇಲೆ ಬಿೞ್ದೆಮ್ಮಂ ಕಿಱದಂತರಂ ಕಳಿಪಿ ಮಗುೞ್ವೆ ಬಾ ಪೋಪಮೆಂದು ತನ್ನೊಡನೆ ರಥಮನೇಱಸಿಕೊಂಡುಪೋಗಿ ಮುಂದೊಂದೆಡೆಯೊಳ್ ನಿಂದು-

ಉ|| ಭೇದಿಸಲೆಂದೆ ದಲ್ ನುಡಿದರೆನ್ನದಿರೊಯ್ಯನೆ ಕೇಳ ಕರ್ಣ ನಿ
ನ್ನಾದಿಯೊಳಬ್ಬೆ ಕೊಂತಿ ನಿನಗಮ್ಮನಹರ್ಪತಿ ಪಾಂಡುನಂದನರ್|
ಸೋದರರೆಯ್ದೆ ಮಯ್ದುನನೆನಾಂ ಪೆಱತೇಂ ಪಡೆಮಾತೊ ನಿನ್ನದೀ
ಮೇದಿನಿ ಪಟ್ಟಮುಂ ನಿನತೆ ನೀನಿರೆ ಮತ್ತೆ ಪೆಱರ್ ನರೇಂದ್ರರೇ|| ೬೪

ಕಂ|| ಗಂಗೆಗೆ ಕೆಯ್ಯೆಡೆಯೆಂದು
ತ್ತುಂಗಸ್ತನಿ ಕೊಟ್ಟು ಪೋಗೆ ಸೂತಂ ಕಂಡಾ|
ತ್ಮಾಂಗನೆಗೆ ರಾಧೆಗಿತ್ತು ಮ
ನಂಗೊಳೆ ರಾಧೇಯನೆನಿಸಿ ಸೂತಜನಾದೈ|| ೬೫

ಅವನಿಂದಲೇ ಪ್ರಕಾಶಮಾನವಾಗಿದೆ. ೬೨. ಹೇಗೆಂದರೆ ಇಂದ್ರನು ಕರ್ಣನ ವಜ್ರಕವಚವನ್ನೂ ಅವನ ಬಹುಪ್ರಕಾಶವಾದ ಕಿವಿಯಾಭರಣ ಗಳನ್ನೂ ಕೈನೀಡಿ ಯಾಚಿಸಿದಾಗ “ಪಾಂಡುಪುತ್ರರನ್ನು ರಕ್ಷಿಸುವುದಕ್ಕಾಗಿ ಇಂದ್ರನು ಬಂದು ನಿನ್ನನ್ನು ಛಿದ್ರಿಸುತ್ತಿದ್ದಾನೆ, ಕೊಡಬೇಡ ಎಂದು ಸೂರ್ಯನು ಬಂದು ಉಪದೇಶಮಾಡಿ ತಡೆದರೂ ಅವನು ಹೇಳಿದುದನ್ನು ಕೇಳದೆ ಯಶಸ್ಸಿಗಾಗಿ ಆಶೆಪಟ್ಟು ತನ್ನ ಶರೀರದಲ್ಲಿ ಅಂಟಿಕೊಂಡಿದ್ದ ಆ ವಜ್ರಕವಚವನ್ನು ಸುಲಿದುಬರುವ ಹಾಗೆ ಕತ್ತರಿಸಿ ದಾನವಾಗಿ ಕೊಟ್ಟನು. ೬೩. ಬೇಡಿದವರಿಗೆ ವರವನ್ನು ಕೊಡುವ ಇಂದ್ರದೇವನೇ ನಾಚಿಕೆಗೆಟ್ಟು ಬಂದು ನನ್ನನ್ನು ಈರೀತಿ ಬೇಡಿದನು. ಬಾಳಿದವರಲ್ಲೆಲ್ಲ ನಾನೆ ಬಾಳಿದವನು ಎಂದುಕೊಳ್ಳುತ್ತ ದೇಹದಿಂದ ಕವಚವನ್ನು ಕೆಂಪಾದ ರಕ್ತವೂ ಸೀಳಿದ ಮಾಂಸಖಂಡವೂ ಒಂದೇ ಸಮನಾಗಿ ಸುರಿಯುತ್ತಿರಲು ಮನೋದಾರ್ಢ್ಯವೂ ಅತಿಶಯವಾಗಿ ಅಭಿವೃದ್ಧಿಯಾಗುತ್ತಿರಲು ಕರ್ಣನು ಕವಚವನ್ನು ಶರೀರದಿಂದ ಕಿತ್ತ ರೀತಿ ನೋಡುವವರಿಗೆ ವೀರರಸಕ್ಕೆ ಆಗರವಾಗಿತ್ತು. ವ|| ಹಾಗೆ ಅವನಿಗೆ ಸಹಜವಾಗಿ ಹುಟ್ಟಿದ ಕವಚ ಮತ್ತು ರತ್ನಕುಂಡಲಗಳನ್ನು ರಕ್ತವು ಪನಪನ ಎಂದು ತೊಟ್ಟುತ್ತಿರಲು ಚರ್ಮವನ್ನು ಸುಲಿಯುವ ಹಾಗೆ ಸುಲಿದುಕೊಟ್ಟುದಕ್ಕೆ ಮೆಚ್ಚಿ ದೇವೇಂದ್ರನಾತನಿಗೆ ಬೆಲೆಯಿಲ್ಲದ ಶಕ್ತಾಯುಧವನ್ನು ವರವಾಗಿ ಕೊಟ್ಟಿದ್ದಾನೆ. ಆತನನ್ನು ನಾನೂ ನನಗೆ ತಿಳಿದ ಮಟ್ಟಿನ ರೀತಿಯಲ್ಲಿ ಛಿದ್ರಿಸುತ್ತೇನೆ. ನೀವೂ ನಿಮ್ಮ ಚೊಚ್ಚಲಮಗನಾದ ಸೂರ್ಯಪುತ್ರನಾದ ಕರ್ಣನನ್ನು ಭಾನುವಾರದ ದಿನ ನೋಡಿ ಕಾರ್ಯಸಿದ್ಧಿಯನ್ನು ಮಾಡಿಕೊಂಡು ಬನ್ನಿ ಎಂದು ಕುಂತಿಯನ್ನು ಕಳುಹಿಸಿಕೊಟ್ಟನು. ಅವಳ ಆಶೀರ್ವಾದವನ್ನು ಪಡೆದು ಕೃಷ್ಣನು ತೇರನ್ನು ಹತ್ತಿ ಕರ್ಣನ ಮನೆಯ ಮುಂದುಗಡೆಯೇ ಬಂದು ತಾನೇ ಮೇಲೆ ಬಿದ್ದು ‘ಕರ್ಣ! ನಮ್ಮನ್ನು ಸ್ವಲ್ಪ ದೂರ ಕಳುಹಿಸಿಕೊಟ್ಟು ಬರುವೆಯಂತೆ ಬಾ ಹೋಗೋಣ’ ಎಂದು ತನ್ನೊಡನೆ ರಥದಲ್ಲಿ ಹತ್ತಿಸಿಕೊಂಡು ಹೋಗಿ ಮುಂದೆ ಬಂದು ಒಂದು ಕಡೆಯಲ್ಲಿ ನಿಂತು ಹೇಳಿದನು. ೬೪. ಕರ್ಣ ಕೇಳು, ನಿನ್ನನ್ನು ಭೇದಿಸಲು ಹೀಗೆ ಹೇಳಿದೆನೆಂದು ನುಡಿಯದಿರು. ಆದಿಯಲ್ಲಿ ಕುಂತಿಯು ನಿನ್ನ ತಾಯಿ, ಸೂರ್ಯನು ನಿನ್ನ ತಂದೆ, ಪಾಂಡವರು ನಿನ್ನ ಸಹೋದರರು, ನಾನು ನಿನಗೆ ಮೈದುನ. ಹೆಚ್ಚು ಹೇಳುವುದೇನು? ಈ ಭೂಮಿಯೆಲ್ಲವೂ ನಿನ್ನದೇ. ಪಟ್ಟವೂ ನಿನ್ನದೇ. ನೀನಿರುವಲ್ಲಿ ಇತರರು ರಾಜರಾಗಬಲ್ಲರೇ? ೬೫. ನಿನ್ನನ್ನು ಯುವತಿಯಾದ ನಿನ್ನ ತಾಯಿಯಾದ ಕುಂತಿಯು ಗಂಗೆಗೆ ನ್ಯಾಸವೆಂದು (ರಕ್ಷಿಸುವ ಪದಾರ್ಥ) ಕೊಟ್ಟು ಹೋಗಲು ಅದನ್ನು ನೋಡಿದ ಸೂತನು ತನ್ನ

ನಿನ್ನುತ್ಪತ್ತಿಯನಿಂತೆಂ
ದೆನ್ನರುಮಣಮಯರಱವೆನಾಂ ಸಹದೇವಂ|
ಪನ್ನಗಕೇತು ದಿನೇಶಂ
ನಿನ್ನಂಬಿಕೆ ಕುಂತಿಯಿಂತಿವರ್ ನೆ ಬಲ್ಲರ್|| ೬೬

ವ|| ದುರ್ಯೋಧನಂ ನಿನ್ನನೇತಳ್ ನಂಬಿವನೆಂದೊಡೆ ನೀನುಂ ತಾನುಮೊರ್ಮೆ ಗಂಗಾನದೀತೀರದೊಳ್ ಬೇಂಟೆಯಾಡುವಲ್ಲಿ ತತ್ಸಮೀಪದ ತಾಪಸಾಶ್ರಮದೊಳ್ ಸತ್ಯಂತಪರೆಂಬ ದಿವ್ಯಜ್ಞಾನಿಗಳಂ ಕಂಡು ಪೊಡೆವಟ್ಟಿರ್ವರುಮಂ ಪರಸಿ ನಿನಗೆ ಮುನ್ನಮೇಱಲ್ ತರಿಸಿದೊಡೆ ಸುಯೋಧನನೇವಯಿಸಿ ನಿನ್ನಂ ಪೋಗಲ್ವೇೞ್ದು-

ಉ|| ಆನಿರೆ ನೀಮಿದೇಕೆ ದಯೆಗೆಯ್ದಿರೊ ಮೀಂಗುಲಿಗಂಗೆ ಪೇೞಮೆಂ
ದಾ ನರನಾಥನಂ ತಿಳಿಪೆ ತನ್ಮುನಿ ಭೂಭುಜನೆಯ್ದೆ ನಂಬಿ ಕಾ|
ನೀನ ಸಮಂತು ಪಾಟಿಸುವೆನೊಯ್ಯನೆ ಮುಳ್ಳೊಳೆ ಮುಳ್ಳನೆಂದು ತಾ
ನೀ ನಯದಿಂದೆ ಪೆರ್ಚಿ ಪೊರೆದೞ್ಕಳಂದೊಡನುಂಡನಲ್ಲನೇ|| ೬೭

ಚಂ|| ಎನೆಯೆನೆ ಬಾಷ್ಪವಾರಿ ಪುಳಕಂಬೆರಸೊರ್ಮೆಯೆ ಪೊಣ್ಮೆ ಮುನ್ನೆ ನೀ
ವೆನಗಿದನೇಕೆ ಪೇೞರೊ ನೆಗೞ್ತೆ ಪೊಗೞ್ತೆಯನಾಂಪಿನಂ ಸುಯೋ|
ಧನನೆನಗೊಳ್ಳಿಕೆಯ್ದ ಕೃತಮಂ ಪೆಱಗಿಕ್ಕಿ ನೆಗೞ್ತೆ ಮಾಸೆ ನ
ಣ್ಪಿನ ನೆವದಿಂದೆ ಪಾಂಡವರನಾನೊಳವೊಕ್ಕೊಡೆ ನೀಮೆ ಪೇಸಿರೇ|| ೬೮

ಉ|| ನೆತ್ತಮನಾಡಿ ಭಾನುಮತಿ ಸೋಲ್ತೊಡೆ ಸೋಲಮನೀವುದೆಂದು ಕಾ
ಡುತ್ತಿರೆ ಲಂಬಣಂ ಪಱಯೆ ಮುತ್ತಿನ ಕೇಡನೆ ನೋಡಿ ನೋಡಿ ಬ|
ಳ್ಕುತ್ತಿರೆಯೇವಮಿಲ್ಲದಿವನಾಯ್ವುದೊ ತಪ್ಪದೆ ಪೇೞಮೆಂಬ ಭೂ
ಪೊತ್ತಮನಂ ಬಿಸುಟ್ಟಿರದೆ ನಿಮ್ಮೊಳೆ ಪೊಕ್ಕೊಡೆ ಬೇಡನಲ್ಲನೇ|| ೬೯

ಹೆಂಡತಿಯಾದ ರಾಧೆಗೆ ಕೊಟ್ಟುದರಿಂದ ನೀನು ರಾಧೇಯನೆನಿಸಿಕೊಂಡು ಸೂತಪುತ್ರನಾಗಿದ್ದೀಯೆ. ೬೬. ನೀನು ಹುಟ್ಟಿದ ರೀತಿ ಹೀಗೆಂದು ಯಾರಿಗೂ ಸ್ವಲ್ಪವೂ ತಿಳಿಯದು. ನಾನು, ಸಹದೇವ, ದುರ್ಯೋಧನ, ಸೂರ್ಯ, ನಿನ್ನ ತಾಯಿಯಾದ ಕುಂತಿ ಇವರು ಪೂರ್ಣವಾಗಿ ಬಲ್ಲೆವು. ವ|| ದುರ್ಯೋಧನನು ನಿನ್ನನ್ನು ಯಾವುದರಿಂದ ನಂಬಿದವನೆಂದರೆ ನೀನೂ ಆತನೂ ಒಂದು ಸಲ ಗಂಗಾತೀರದಲ್ಲಿ ಬೇಟೆಯಾಡುತ್ತಿರುವಾಗ ಸಮೀಪದಲ್ಲಿದ್ದ ತಾಪಸಾಶ್ರಮದಲ್ಲಿ ಸತ್ಯಂತಪರೆಂಬ ದಿವ್ಯಜ್ಞಾನಿಗಳನ್ನು ಕಂಡು ನಮಸ್ಕಾರಮಾಡಿದಿರಿ. ನಿಮ್ಮಿಬ್ಬರನ್ನೂ ಹರಸಿ ಅವರು ನಿನಗೆ ಮೊದಲು ಆಸನವನ್ನು ತರಿಸಿಕೊಟ್ಟರು. ದುರ್ಯೋಧನನು ಲಜ್ಜಿತನಾಗಿ ನಿನ್ನನ್ನು ಹೊರಗೆ ಹೋಗಹೇಳಿ ೬೭. ‘ನಾನಿರುವಾಗ ತಾವಿದೇಕೆ ಆ ಮೀಂಗುಲಿಗನಿಗೆ (ಮೀನನ್ನು ಕೊಲ್ಲುವ ಸ್ವಭಾವವುಳ್ಳವನು-ಬೆಸ್ತ) ದಯೆಗೆಯ್ದಿರಿ’ ಎಂದು ಆ ಋಷಿಯನ್ನು ಕೇಳಿದಾಗ ಅವರು ದೊರೆಗೆ ಎಲ್ಲವನ್ನೂ ತಿಳಿಸಿದರು. ದೊರೆಯು ನಂಬಿ ಕರ್ಣ! ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುವ ಉಪಾಯವನ್ನು ಮಾಡುವೆನೆಂದು ನಿನ್ನನ್ನು ಈ ನಯದಿಂದ ಪೋಷಿಸುತ್ತ ಪ್ರೀತಿಯಿಂದ ನಿನ್ನೊಡನೆ ಉಂಡನಲ್ಲವೇ?” ೬೮. ಹೀಗೆಂದು ಕೃಷ್ಣನು ಹೇಳಲು ಕರ್ಣನಿಗೆ ರೋಮಾಂಚನದೊಡನೆ ಕಣ್ಣೀರು ಸುರಿಯಲಾರಂಭಿಸಿತು. ಅವನು ಕೃಷ್ಣನನ್ನು ಕುರಿತು ‘ತಾವು ಮೊದಲು ನನಗೆ ಏಕೆ ತಿಳಿಸಿದರೋ? ಪ್ರಸಿದ್ಧಿಗೂ ಹೊಗಳಿಕೆಗೂ ಪಾತ್ರವಾಗುವಷ್ಟು ಆತ್ಮವಿಶ್ವಾಸದಿಂದ ದುರ್ಯೋಧನನು ನನಗೆ ಮಾಡಿದ ಒಳ್ಳೆಯ ಕಾರ್ಯಗಳನ್ನು ಹೊರಗಿಕ್ಕಿ ನನ್ನ ಕೀರ್ತಿ ಮಾಸಿ ಹೋಗುವ ಹಾಗೆ ನೆಂಟಿನ ನೆಪದಿಂದ ಪಾಂಡವರಲ್ಲಿ ಸೇರಿಕೊಂಡರೆ ನೀವೂ ಹೇಸುವುದಿಲ್ಲವೇ? ೬೯. ದುರ್ಯೋಧನನೂ ರಾಣಿಯಾದ ಭಾನುಮತಿಯೂ ಪಗಡೆಯಾಡಿ ಭಾನುಮತಿ ಸೋತು ಎದ್ದುಹೋಗಲು ಪಣವನ್ನು ಕೊಟ್ಟು ಹೋಗು ಎಂದು ದುರ್ಯೋಧನನು ಹಿಂಸಿಸುತ್ತಿರಲು ಮುತ್ತಿನಹಾರವು ಕಿತ್ತುಹೋಯಿತು. ತನ್ನ ಮುತ್ತಿನ ಕೇಡನ್ನೇ ನೋಡುತ್ತ ನಡುಗುತ್ತಿದ್ದ ಭಾನುಮತಿಯನ್ನು ದುರ್ಯೋಧನನು ಕರ್ಣನಿಗೆ ‘ತೋರಿಸಿ, ನಾಚಿಕೆಯಿಲ್ಲದೆ ಮುತ್ತುಗಳನ್ನು ಆಯುವುದೇ ತಪ್ಪಿಲ್ಲದೇ ಹೇಳು’ ಎಂದು ಹೇಳುವ ರಾಜಶ್ರೇಷ್ಠನಾದ ದುರ್ಯೋಧನನ್ನು ಬಿಟ್ಟು ನಿಮ್ಮಲ್ಲಿ ಸೇರಿಕೊಂಡರೆ ನಾನು ಯಾರಿಗೂ ಬೇಡದವನಾಗುತ್ತೇನಲ್ಲವೇ? ಎಂದನು. ವ|| ಕರ್ಣನು ಹೇಗೂ ತನ್ನ ಮಾತಿಗೆ ಒಪ್ಪುವುದಿಲ್ಲವೆಂಬುದನ್ನು ಸ್ಥಿರವಾಗಿ

ಈ ಪದ್ಯದಲ್ಲಿ ಕರ್ಣನು ತನಗೆ ದುರ್ಯೋಧನನಲ್ಲಿದ್ದ ಸದರವನ್ನೂ ಆಂತರ್ಯ ಮನೋಭಾವವನ್ನೂ ವಿಶದಪಡಿಸುತ್ತಾನೆ. ಇಲ್ಲಿ ಪಗಡೆ ಯಾಡುತ್ತಿರುವವರು ದುರ್ಯೋಧನ ಭಾನುಮತಿಯರು, ಕರ್ಣ ಪ್ರೇಕ್ಷಕ. ದುರ್ಯೋಧನನ ಏಕಾಂತವಾದ ಅಂತಪುರಕ್ಕೂ ಅವನಿಗೆ ಪ್ರವೇಶವುಂಟು. ರಾಜರಾಣಿಯರ ಆಟದಲ್ಲಿಯೂ ಇವನ ಮಧ್ಯಸ್ಥಿಕೆ ಇರುತ್ತಿತ್ತು ಎಂಬುದು ಸೂಕ್ತವಾದ ಅರ್ಥ. ಅದು ಬಿಟ್ಟು ಕರ್ಣನು ಭಾನುಮತಿಯೊಡನೆ ಪಗಡೆ ಯಾಟವಾಡುತ್ತಿದ್ದು ಅವಳ ಹಾರಕ್ಕೆ ಕೈ ಹಾಕಿ ಹರಿದುಹಾಕಿದ ಎಂಬುದು ಲೌಕಿಕದೃಷ್ಟಿಯಿಂದ ಹಾಸ್ಯಾಸ್ಪದವಾಗುತ್ತದೆ. ಎಷ್ಟೇ ಸದರವಿದ್ದರೂ ಸ್ನೇಹಿತ ಅಥವಾ ಕೈಕೆಳಗಿನ ಅಕಾರಿಯೊಬ್ಬನ ರಾಣಿಯ ಮುತ್ತಿನ ಹಾರಕ್ಕೆ ಕೈ ಹಾಕಿ ಹರಿಯುವುದು ಅಪಚಾರದ ಪರಮಾವ. ರಾಜರಾಣಿಯರ ಪ್ರಣಯಕಲಹ ದಲ್ಲಿಯೂ ಕರ್ಣನ ಮಧ್ಯಸ್ಥಿಕೆಯಿತ್ತೆಂಬುದು ಅವರ ಪರಸ್ಪರ ಮೈತ್ರಿಯ ಪರಾಕಾಷ್ಠತೆಯನ್ನು ವಿಶದಪಡಿಸುತ್ತದೆ.

ವ|| ಎಂಬುದುಂ ಕರ್ಣಂ ತನಗೆಂತುಮೊಡಂಬಡದುದಂ ನಿರ್ಣಯಮಾಗಱದು ಮಗುೞಲ್ವೇೞ್ದು ನಾರಾಯಣಂ ಪೋದನಿತ್ತಲಂಗ ರಾಜನುಮಾತ್ಮಾಲಯಕರ‍್ಕೆ ವಂದು ಚಿಂತಾಕ್ರಾಂತನಾಗಿ-

ಚಂ|| ಕುರುಪತಿಗಿಲ್ಲ ದೈವಬಲಮಾಜಿಗೆ ಮೇಲ್ಮಲೆಗೆಯ್ವರಾಗಳುಂ
ಗುರು ಗುರುಪುತ್ರ ಸಿಂಧುಸುತರಾಳ್ದನುಮೆನ್ನನೆ ನಚ್ಚಿ ಪೆರ್ಚಿ ಮುಂ|
ಪೊರೆದನಿದಿರ್ಚಿ ಕಾದುವರುಮೆನ್ನಯ ಸೋದರರೆಂತು ನೋಡಿ ಕೊ
ಕ್ಕರಿಸದೆ ಕೊಲ್ವೆನೆನ್ನೊಡಲನಾಂ ತವಿಪೆಂ ರಣರಂಗಭೂಮಿಯೊಳ್|| ೭೦

ಮ|| ಅಱದೆಂ ಸೋದರರೆಂದು ಪಾಂಡವರನಿನ್ನೆಂತೆನ್ನರಂ ಕೊಲ್ವೆನ
ೞ್ಕಳೆನ್ನಂ ಪೊರೆದೆಯ್ದೆ ನಂಬಿದ ನೃಪಂಗೆಂತಾಜಿಯೊಳ್ ತಪ್ಪುವೆಂ|
ತಱಸಂದುದ್ಧತ ವೈರಿ ಭೂಪ ಬಲದೊಡ್ಡಳ್ಳಾಡೆ ಲೆಕ್ಕಕ್ಕೆ ತ
ಳ್ತಿಱದೆನ್ನಾಳ್ದನಿವಾನೆ ಮುಂಚೆ ನಿಱಪೆಂ ಕೆಯ್ಕೊಂಡು ಕಟ್ಟಾಯಮಂ|| ೭೧

ವ|| ಎಂದು ಮುಂತಪ್ಪ ಕಜ್ಜಮಂ ತನ್ನೊಳೆ ಬಗೆದವಾರ್ಯ ವೀರ್ಯಂ ಸೂರ್ಯದಿನದಂದು ಮಂದಾಕಿನಿಯಂ ಮೀಯಲೆಂದು ಬಂದು ದುರ್ಯೋಧನನಟ್ಟಿದ ದೇವಸವಳದ ಪದಿನೆಂಟು ಕೋಟಿ ಪೊನ್ನುಮನೊಟ್ಟಿ ಬೆಟ್ಟಾಗ ಪುಂಜಿಸಿ-

ಕಂ|| ಸೋರ್ವ ವಸುಧಾರೆಯಂ ಕೆ
ಯ್ಸಾರ್ವ ನಿಧಾನಮುಮನಿೞಸಿ ತನ್ನೀವಳವಿಂ|
ಪಾರ್ವಂಗಮಳಿಪಿ ಬೇಡಿದ
ಪಾರ್ವಂಗಂ ಪಿರಿದನಿತ್ತನಂಗಮಹೀಶಂ|| ೭೨

ವ|| ಅಂತು ಚಾಗಂಗೆಯ್ದು ಜಗನ್ಮಂಗಳ ಗಂಗಾವಾರಿಯೊಳನಿವಾರಿತ ಪರಾಕ್ರಮನಘಮರ್ಷಣಪೂರ್ವಕಂ ಮಿಂದು ಕನಕಪಾತ್ರದೊಳ್ ತೆಕ್ಕನೆ ತೀವಿದ ಕನಕ ಕಮಳಂಗಳಿಂದಾದಿತ್ಯತೇಜನಾದಿತ್ಯಂಗರ್ಘ್ಯಮೆತ್ತಿ ಸೂರ್ಯಜಂ ಸೂರ್ಯಮಂತ್ರಂಗಳನೋದಿ ನೀರಂ ಸೂಸಿ ತ್ರಿಪದಕ್ಷಿಣಂಗೆಯ್ವಾಗಳ್-

ಕಂ|| ಸಂಗತ ತರಂಗಯುತೆಯಂ
ಮಂಗಳಲಕ್ಷಣೆಯನಂದು ಭೋಂಕನೆ ಕಂಡಂ|
ಗಂಗಾಂಗನೆಯಂ ಕಾಣ್ಬವೊ
ಲಂಗನೃಪಂ ಮುಂದೆ ನಿಂದ ಕೊಂತಿಯನಾಗಳ್|| ೭೩

ತಿಳಿದುಕೊಂಡು ಕೃಷ್ಣನು ಅವನನ್ನು ಹಿಂತಿರುಗಹೇಳಿ ತಾನೂ ಹೋದನು. ಈ ಕಡೆ ಕರ್ಣನು ತನ್ನ ಮನೆಗೆ ಬಂದು ದುಖದಿಂದ ಕೂಡಿ- ೭೦. ದುರ್ಯೋಧನನಿಗೆ ದೈವಬಲವಿಲ್ಲ, ದ್ರೋಣ ಅಶ್ವತ್ಥಾಮ ಭೀಷ್ಮರು ತೋರಿಕೆಯ ಯುದ್ಧವನ್ನು ಮಾಡುವವರು, ನನ್ನ ಯಜಮಾನನಾದ ದುರ್ಯೋಧನನು ನನ್ನನ್ನೇ ನಂಬಿ ಉಬ್ಬಿ ಮೊದಲು ಸಾಕಿದ್ದಾನೆ. ಯುದ್ಧಮಾಡುವವರು ನನ್ನ ಸಹೋದರರು. ತಿಳಿದು ತಿಳಿದು ಅಸಹ್ಯಪಡದೆ ಅವರನ್ನು ಹೇಗೆ ಕೊಲ್ಲಲಿ. ರಣರಂಗಭೂಮಿಯಲ್ಲಿ ನನ್ನ ಶರೀರವನ್ನೇ ನಾಶಮಾಡುತ್ತೇನೆ.

೭೧. ಪಾಂಡವರನ್ನು ಸೋದರರೆಂದು ತಿಳಿದೆನು. ಇನ್ನು ನನ್ನವರನ್ನು ಹೇಗೆ ಕೊಲ್ಲಲಿ? ಪ್ರೀತಿಯಿಂದ ಸಲಹಿ ಪೂರ್ಣವಾಗಿ ನಂಬಿದ ರಾಜನಿಗೆ ಹೇಗೆ ಯುದ್ಧದಲ್ಲಿ ತಪ್ಪಿ ನಡೆಯಲಿ. ಎರಡೂ ಸಾಧ್ಯವಿಲ್ಲ. ನಿಷ್ಕರ್ಷೆ ಮಾಡಿಕೊಂಡು ಉದ್ಧತರಾದ ಶತ್ರುಸೈನ್ಯಸಮೂಹವನ್ನು ನಾಶವಾಗುವ ಹಾಗೆ ಲೆಕ್ಕಕ್ಕೆ ಮಾತ್ರ ಹೋರಾಡಿ ನನ್ನೊಡೆಯನಿಗಿಂತ ಮೊದಲು ನಾನೇ ಪರಾಕ್ರಮವನ್ನು ಅಂಗೀಕರಿಸಿ ಸಾಯುತ್ತೇನೆ. ವ|| ಎಂದು ಮುಂದೆ ಆಗಬೇಕಾದ ಕಾರ್ಯವನ್ನು ತನ್ನಲ್ಲಿ ನಿಷ್ಕರ್ಷೆ ಮಾಡಿಕೊಂಡನು. ಅವಾರ್ಯವೀರ್ಯನಾದ ಕರ್ಣನು ಒಂದು ಆದಿತ್ಯವಾರದ ದಿನ ಗಂಗೆಯಲ್ಲಿ ಸ್ನಾನಮಾಡಬೇಕೆಂದು ಬಂದು ದುರ್ಯೋಧನನು ಕಳುಹಿಸಿದ ದೇವಮಾನದ ಹದಿನೆಂಟು ಕೋಟಿ ಚಿನ್ನವನ್ನು ಒಟ್ಟಾಗಿ ಬೆಟ್ಟದಂತೆ ರಾಶಿಮಾಡಿದನು. ೭೨. ತಾನು ಮಾಡುವ ದಾನವು ಧಾರಾಕಾರವಾಗಿ ಸುರಿಯುವ ಸುವರ್ಣವೃಷ್ಟಿಯನ್ನೂ ಕೈವಶವಾದ ನಿಯನ್ನೂ ಕಡೆಗಣಿಸುತ್ತಿರಲು ದಕ್ಷಿಣೆಯನ್ನು ನಿರೀಕ್ಷಿಸುತ್ತಿರುವವನಿಗೂ ಆಶೆಪಟ್ಟು ಬೇಡಿದ ಬ್ರಾಹ್ಮಣರಿಗೂ ಕರ್ಣನು ಕೊಡುಗೈಯಿಂದ ದಾನಮಾಡಿದನು. ವ|| ಹಾಗೆ ತ್ಯಾಗ ಮಾಡಿ ಲೋಕಮಂಗಳ ಸ್ವರೂಪೆಯಾದ ಗಂಗಾನದಿಯಲ್ಲಿ ತಡೆಯಿಲ್ಲದ ಪರಾಕ್ರಮವುಳ್ಳ ಕರ್ಣನು ಪಾಪಪರಿಹಾರವಾದ ಮಂತ್ರೋಚ್ಚಾರಣಪೂರ್ವಕವಾಗಿ ಸ್ನಾನಮಾಡಿ ಚಿನ್ನದ ಪಾತ್ರೆಯಲ್ಲಿ ಪೂರ್ಣವಾಗಿ ತುಂಬಿದ ಚಿನ್ನದ ಕಮಲಗಳಿಂದ ಆದಿತ್ಯತೇಜನಾದ ಕರ್ಣನು ಸೂರ್ಯನಿಗೆ ಅರ್ಘ್ಯವೆತ್ತಿ ಸೂರ್ಯಮಂತ್ರವನ್ನು ಜಪಿಸಿ ಅರ್ಘ್ಯಪ್ರದಾನ ಮಾಡಿ ಮೂರುಪ್ರದಕ್ಷಿಣೆ ಮಾಡಿದನು. ೭೩. ಆಗ ಅಲೆಗಳಿಂದ ಕೂಡಿದವಳೂ ಮಂಗಳಲ ಕ್ಷಣವುಳ್ಳವಳು ಆದ ಗಂಗಾದೇವಿಯನ್ನು

ವ|| ಅಂತು ಕಂಡು ಮನದೊಳಾದೆಱಕದಿಂ ಸಾಷ್ಟಾಂಗಮೆಱಗಿ ಪೊಡೆವಟ್ಟ ನಿಜನಂದನನ ನೞ್ಕಱಂದಪ್ಪಿಕೊಂಡು ಪರಮಾಶೀರ್ವಚನಂಗಳಿಂ ಪರಸಿ-

ಕಂ|| ತೊರೆದ ಕುಚಯುಗಳವಂದಂ
ಬಿರಿವಿಡೆ ಮೊಲೆವಾಲನೞ್ಕಱಂದಂ ಮೆಯ್ಯಂ|
ಕುರಿಸೆ ಸುರಿವಶ್ರುಜಲಮು
ಬ್ದರಿಸಿ ಪೊನಲ್ ಪೊನಲಟ್ಟೆ ಜನನುತೆಗಾಗಳ್|| ೭೪

ಆಗಳೆ ಮಗನಂ ಪೆತ್ತವೊ
ಲಾಗಿ ಲತಾಲಲಿತೆ ನೊಸಲ ಕಣ್ಬೆತ್ತವೊಲಂ|
ತಾಗಡೆ ರಾಗಕ್ಕಾಗರ
ಮಾಗೆ ದಿನಾಪತನೂಜನೊಸೆದಿರ್ಪಿನೆಗಂ|| ೭೫

ವ|| ಗಂಗಾದೇವಿಯುಂ ದಿವ್ಯಮೂರ್ತಿಯಂ ಕೆಯ್ಕೊಂಡು ಬಂದು-

ಕಂ|| ಒಪ್ಪಿಸಿದೆಂ ಕೆಯ್ಯೆಡೆಯೆಂ
ದಪ್ಪೈಸಿದ ನಿನ್ನ ಮಗನನೀಗಳೆ ನಿನಗೆಂ|
ದಪ್ಪೈಸಿದ ಗಂಗೆ ಪೋಪುದು
ಮೊಪ್ಪುವ ನಿಜಬಿಂಬದೊಳಗಣಿಂದಂ ದಿನಪಂ|| ೭೬

ಪೊಱಮಟ್ಟು ಬರಲ್ ತನ್ನಡಿ
ಗೆಱಗಿದ ನಿಜಸುತನನೞ್ಕಱಂ ಪರಸಿ ಮನಂ|
ಮಱುಗಿ ರವಿ ನುಡಿದನೆನ್ನುಮ
ನುಱದೆ ಮರುಳ್ಮಗನೆ ಹರಿಗೆ ಕವಚಮನಿತ್ತೈ|| ೭೭

ನುಡಿಯೆನಿದಂ ನಿನ್ನಂಬಿಕೆ
ಪಡೆಮಾತೇಂ ಕೊಂತಿ ಹರಿಯ ಮತದಿಂ ಕಾಯ|
ಲ್ಕೊಡರಿಸಿ ಬಂದಳ್ ಸುತರಂ
ಕುಡದಿರ್ ಪುರಿಗಣೆಯನೆನಿತು ಲಲ್ಲೆ ಸಿದೊಡಂ|| ೭೮

ಎಂದರವಿಂದಪ್ರಿಯಸಖ
ನಂದಂಬರತಳಮನಡರ್ವುದುಂ ಕೆಯ್ಮುಗಿದಿಂ|
ತೆಂದಂ ಕುಂತಿಯನಬ್ಬೇಂ
ವಂದಿರ್ಪುದದೆನಗೆ ಸಯ್ಪು ಬರ್ಪಂತೀಗಳ್|| ೭೯

ಕಾಣುವ ಹಾಗೆ ಮುಂದೆ ನಿಂತಿದ್ದ ಕುಂತಿದೇವಿಯನ್ನು ಕರ್ಣನು ಥಟಕ್ಕನೆ ಕಂಡನು. ವ|| ಮನಸ್ಸಿನಲ್ಲುಂಟಾದ ಪ್ರೀತಿಯಿಂದ ಸಾಷ್ಟಾಂಗನಮಸ್ಕಾರ ಮಾಡಿದನು. ಕುಂತಿಯು ತನ್ನ ಮಗನನ್ನು ಪ್ರೀತಿಯಿಂದ ಆಲಿಂಗನಮಾಡಿಕೊಂಡು ಅತ್ಯುತ್ತಮವಾದ ಹರಕೆಗಳಿಂದ ಹರಸಿದಳು. ೭೪. ತೊರೆದ ಎರಡು ಮೊಲೆಗಳೂ ಆಗ ಎದೆಯ ಹಾಲನ್ನು ಧಾರಾಕಾರವಾಗಿ ಸುರಿಸಿದುವು. ಪ್ರೀತಿಯಿಂದ ಶರೀರದಲ್ಲಿ ರೋಮಾಂಚನವುಂಟಾಯಿತು. ಸಂತೋಷದಿಂದ ಹರಿಯುತ್ತಿರುವ ಕಣ್ಣೀರು ಅತ್ಯಕ ಪ್ರವಾಹವಾಗಿ ಗಂಗೆಯ ಪ್ರವಾಹವನ್ನು ಹೆಚ್ಚಿಸಿತು. ಜನರ ಸ್ತುತಿಗೆ ಪಾತ್ರಳಾದ ಆ ಕುಂತೀದೇವಿಗೆ- ೭೫. ಆಗತಾನೆ ಪುತ್ರೋತ್ಸವವಾದಂತಾಯಿತು. ಬಳ್ಳಿಯಂತೆ ಕೋಮಲವಾದ ಗಂಗಾದೇವಿಗೆ ಹಣೆಗಣ್ಣನ್ನು ಪಡೆದಷ್ಟು ಸಂತೋಷವಾಯಿತು. ಸೂರ್ಯಪುತ್ರನಾದ ಕರ್ಣನು ಸಂತೋಷಿಸುತ್ತಿದ್ದನು. ವ|| ಆ ವೇಳೆಗೆ ಸರಿಯಾಗಿ ಗಂಗಾದೇವಿಯು ದಿವ್ಯಾಕಾರವನ್ನು ತಾಳಿ ಬಂದು ೭೬. ಕುಂತಿಯನ್ನು ಕುರಿತು ‘ನನಗೆ ನ್ಯಾಸವೆಂದು ಒಪ್ಪಿಸಿದ್ದ ನಿನ್ನ ಮಗನನ್ನು ನಿನಗೆ ಈಗ ಒಪ್ಪಿಸಿದ್ದೇನೆ’ ಎಂದು ಹೇಳಿ ಗಂಗೆಯು ಅದೃಶ್ಯಳಾದಳು. ಸೂರ್ಯನು ತನ್ನ ಪ್ರಕಾಶಮಾನವಾದ ಬಿಂಬದಿಂದ ೭೭. ಹೊರಟು ಬಂದು ತನ್ನ ಪಾದಕ್ಕೆ ಭಕ್ತಿಯಿಂದ ನಮಸ್ಕಾರಮಾಡಿದ ಮಗನನ್ನು ಪ್ರೀತಿಯಿಂದ ಹರಸಿ ಮನಸ್ಸಿನಲ್ಲಿ ದುಖಪಟ್ಟು ‘ಹಿಂದೆ ನನ್ನನ್ನೂ ಲಕ್ಷ್ಯಮಾಡದೆ ಬುದ್ಧಿಯಿಲ್ಲದೆ ಮಗನೇ ಇಂದ್ರನಿಗೆ ಕವಚವನ್ನು ಕೊಟ್ಟೆ. ೭೮. ಇದನ್ನು ಈಗ ಹೇಳುತ್ತಿಲ್ಲ ; ಇಂದಿನ ಮಾತು ಬೇರೆ. ಈಗ ನಿನ್ನ ತಾಯಿಯಾದ ಕುಂತೀದೇವಿಯು ಕೃಷ್ಣನ ಸೂಚನೆಯ ಪ್ರಕಾರ ತನ್ನ ಮಕ್ಕಳ ರಕ್ಷಣೆಯ ಪ್ರಯತ್ನದಲ್ಲಿ ತೊಡಗಿ ಬಂದಿದ್ದಾಳೆ. ಎಷ್ಟು ಲಲ್ಲೆಯ (ಪ್ರೀತಿಯ) ಮಾತುಗಳನ್ನಾಡಿದರೂ ದಿವ್ಯಾಸ್ತ್ರಗಳನ್ನು ಕೊಡಬೇಡ. ೭೯. ಎಂದು ಹೇಳಿ ಸೂರ್ಯನು ಆಕಾಶಪ್ರದೇಶವನ್ನು

ಚಲಮುಂ ಚಾಗಮುಮಳವುಂ
ಕಲಿತನಮುಂ ಕುಲಮುಮೀಗಳೆನ್ನಯ ಮೆಯ್ಯೊಳ್|
ನೆಲಸಿದುವು ನಿಮ್ಮ ಕರುಣಾ
ಬಲದಿಂ ನೀವೆನ್ನನಿಂದು ಮಗನೆಂದುದಱಂ|| ೮೦

ಪಡೆದರ್ ತಾಯುಂ ತಂದೆಯು
ಮೊಡಲಂ ಪ್ರಾಣಮುಮನವರವವು ಕೆಯ್ಯೆಡೆಯಂ|
ಕುಡುವುದರಿದಾಯ್ತೆ ನೀಮೆನ
ಗೆಡೆ ಮಡಗದೆ ಬೆಸಪ ತೊೞ್ತುವೆಸನಂ ಬೆಸಸಿಂ|| ೮೧

ಎಂಬುದುಮಂಬಿಕೆ ಮಗನೆ ಮ
ನಂಬೆಳಱದೆ ನೀನುಮಿತ್ತೆಯಾನುಂ ಪೆತ್ತೆಂ|
ನಂಬಿದ ನಿನ್ನನುಜರ್ ನಿ
ನ್ನಂ ಬೆಸಕೆಯೆ ನೀನೆ ನೆಲನನಾಳ್ವುದು ಕಂದಾ|| ೮೨

ಕಂ|| ನಿನಗಪ್ಪರಸಂ ದುರ್ಯೋ
ಧನನೊಲವಂ ಮುಂದುಗೆಯ್ದು ಬೆಸಕೆಯ್ವರೆ ನಿ|
ನ್ನನುಜರೆರೞ್ದೆಸೆಗಂ ಕಿಸು
ಱನಿಸಾಗದು ಮಗನೆ ನೀನೊಡಂಬಡವೇೞ್ಕುಂ|| ೮೩

ವ|| ಎಂಬುದುಮದೆಲ್ಲಮಂ ಕೇಳ್ದು ಕರ್ಣಂ ಮುಗುಳ್ನಗೆ ನಕ್ಕು-

ಮ|| ಭಯಮಂ ಲೋಭಮುಮೆಂಬ ತಮ್ಮುತೆರಡುಂ ಪಾಪಕ್ಕೆ ಪಕ್ಕಾಗೆ ಪಾ
ೞಯನೊಕ್ಕಾಳ್ದನ ಗೆಯ್ದ ಸತ್ಕೃತಮುಮಂ ಪಿಂತಿಕ್ಕಿ ಜೋಳಕ್ಕೆ ತ|
ಪ್ಪಿಯುಮಿಂ ಬಾೞ್ವುದೆ ಪೂಣ್ದು ನಿಲ್ಲದಿಕೆಯಿಂ ಬಾೞ್ವಂತು ವಿಖ್ಯಾತ ಕೀ
ರ್ತಿಯವೋಲೀಯೊಡಲಬ್ಬೆ ಪೇೞಮೆನಗೇಂ ಕಲ್ಪಾಂತರಸ್ಥಾಯಿಯೇ|| ೮೪

ಕಂ|| ಮೀಂಗುಲಿಗನೆನಾಗಿಯುಮಣ
ಮಾಂ ಗುಣಮನೆ ಬಿಸುಟೆನಿಲ್ಲ ನಿಮಗಂ ಮಗನಾ|
ದಂಗೆನಗೆ ಬಿಸುಡಲಕ್ಕುಮೆ
ನೀಂ ಗಳ ಪಂಬಲನೆ ಬಿಸುಡಿಮಿನ್ನೆನ್ನೆಡೆಯೊಳ್|| ೮೫