೨೭. ಆ ಹಸ್ತಿನಾಪಟ್ಟಣವು ಕುದುರೆಗಳ ಹೇಷಾರವ, ಮದ್ದಾನೆಗಳ ಘೀಂಕಾರಶಬ್ದ, ಮದ್ದಲೆಗಳ ಗಂಭೀರನಾದ, ಯುವತಿಯರೂ, ಮದಿಸಿರುವವರೂ ಆದ ಸ್ತ್ರೀಯರ ಕಾಲಂದಿಗೆಗಳ ಶಬ್ದ ಇವುಗಳಿಂದ ಮಂದರ ಪರ್ವತದಿಂದ ಕಡೆಯಲ್ಪಟ್ಟ ಕ್ಷೀರಸಮುದ್ರದ ಶಂಕೆಯನ್ನು ಕೃಷ್ಣನಿಗೆ ಉಂಟುಮಾಡಿತು. ವ|| ಭೋಗವತೀಪಟ್ಟಣವನ್ನು ಕೀಳುಮಾಡುವ ಹಸ್ತಿನಾಪಟ್ಟಣವನ್ನು ಶ್ರೀಕೃಷ್ಣನು ಪ್ರವೇಶಿಸಿದನು. ವಿದುರನು ಪಾಂಡವಪಕ್ಷಪಾತಿಯಾದುದರಿಂದ ಆತನ ಮನೆಗೆ ಬಂದನು. ತನಗೆ ಎದುರಾಗಿ ಬಂದ ಕುಂತಿದೇವಿಗೆ ಕೃಷ್ಣನು ನಮಸ್ಕಾರ ಮಾಡಿ ತನಗೆ ನಮಸ್ಕಾರ ಮಾಡಿದ ವಿದುರನನ್ನು ಹರಸಿದನು. ತೇರಿನಿಂದಿಳಿದು ರತ್ನಖಚಿತವಾದ ಪೀಠದಲ್ಲಿ ಕುಳಿತುಕೊಂಡು ಪಾಂಡವರ ಕ್ಷೇಮಸಮಾಚಾರವನ್ನು ತಿಳಿಸಿದನು. ಕೃಷ್ಣನಿಗೆ ಸತ್ಕಾರಮಾಡುವ ರೀತಿಯು ವಿದುರನಿಗೆ ತೋರದಾಯಿತು. ೨೮. ಅವನು ಸಿದ್ಧಪಡಿಸಿದ ಸ್ನಾನದಿಂದಲೂ ಒಳ್ಳೆಯ ಮನಸ್ಸಿನಿಂದ ಬಡಿಸಿದ ಆಹಾರದಿಂದಲೂ ನಾನಾರೀತಿಯಾದ ಸಾಮಾನ್ಯ ಸತ್ಕಾರಗಳಿಂದಲೂ ಕೃಷ್ಣನಿಗೆ ಮಾರ್ಗಾಯಾಸವೆಲ್ಲ ಪೂರ್ಣವಾಗಿ ಶಮನವಾಯಿತು. ವ|| ವಿದುರನು ಕೃಷ್ಣನನ್ನು ಯೋಗ್ಯವಾದ ಸನ್ಮಾನಗಳಿಂದ ಸಂತೋಷಪಡಿಸಿ ಅವನ ಬರುವಿಕೆಯನ್ನು ದುರ್ಯೋಧನನಿಗೆ ತಿಳಿಸಿದನು. ಚಕ್ರವರ್ತಿಯು ಸುಮ್ಮನಿರಲಾರದೆ ಹುಸಿನಗೆ ನಕ್ಕು ನಾಳೆಯ ಸಭೆಯಲ್ಲಿ ತಂದು ಕಾಣಿಸು ಎಂದನು. ಮಾರನೆಯ ದಿನ ಸೂರ್ಯೋದಯವಾದಾಗ ಸೂರ್ಯನಂತೆ ಅನೇಕ ರತ್ನಕಿರಣಗಳಿಂದ ಮೆರೆಯುತ್ತಿರುವ ಇಂದ್ರನಂತೆ ಉದ್ದವೂ ಭಯಂಕರವೂ ಆದ ಬಿಲ್ಲಿನ ವೈಭವಯುಕ್ತವಾದ ವಿಳಾಸದಿಂದ ಕೂಡಿದ ಸಿಂಹಾಸನದಲ್ಲಿ ಕುಳಿತನು. ಸ್ತ್ರೀಯರು ತಮ್ಮ ಕಯ್ಯಿಂದ ಅವನ ಎಡಗಾಲನ್ನು ಒತ್ತುತ್ತಿದ್ದರು. ಅವನ ವಿಸ್ತಾರವಾದ ಎದೆಯನ್ನು ಅಲಂಕರಿಸಿದ ಆಭರಣಗಳು ನಕ್ಷತ್ರಗಳಂತೆ ಪ್ರಕಾಶಮಾನವಾಗಿದ್ದುವು. ಅನಂತ ಸಾಮಂತ ರಾಜರ ಕಿರೀಟದ ಮಾಣಿಕ್ಯರತ್ನಕಾಂತಿಸಮೂಹದಿಂದ ಸಭಾಮಂಟಪವು ವಿರಾಜಮಾನವಾಗಿದ್ದಿತು. ಆ ಸಭಾಮಂಟಪದಲ್ಲಿ ದುರ್ಯೋಧನನು ಒಡ್ಡೋಲಗದಲ್ಲಿದ್ದನು. ಆ ಸಭಾಮಂಟಪದ ಮಧ್ಯೆ ಅವಕಾಶವೇ ಇಲ್ಲದೆ ಒತ್ತಾಗಿ ಅವರ ಮರ‍್ಯಾದಾನುಗುಣವಾಗಿ ಸಿದ್ಧಪಡಿಸಿದ್ದ ಲೋಹಪೀಠಗಳಲ್ಲಿಯೂ ರತ್ನಖಚಿತವಾದ ಸುವರ್ಣಾಸನಗಳಲ್ಲಿ ಸೇರಿಸಿರುವ ಮೆತ್ತೆಗಳಲ್ಲಿಯೂ ಭೀಷ್ಮ, ದ್ರೋಣ, ಅಶ್ವತ್ಥಾಮ, ಕೃಪ, ಕೃತವರ್ಮ, ಶಲ್ಯ, ಶಕುನಿ, ಬಾಹ್ಲೀಕ, ಸೋಮದತ್ತ, ಭಗದತ್ತ, ಭೂರಿಶ್ರವರೇ ಮೊದಲಾದವರು ಕುಳಿತಿದ್ದರು. ಇತರ ಅನೇಕದೇಶಾಶರೆಲ್ಲ ತಮ್ಮ ತಮ್ಮ ಸ್ಥಾನಾನುಗುಣವಾಗಿ ಮಂಡಿಸಿದ್ದರು. ರಾಣಿವಾಸದ ಉತ್ತಮಸ್ತ್ರೀಯರು ಎರಡುಪಕ್ಕದಲ್ಲಿಯೂ ಇದ್ದರು. ನೂರುಜನ ತಮ್ಮಂದಿರೂ ಹಿಂದುಗಡೆ ಇದ್ದರು. ಲಕ್ಷಣನೇ ಮೊದಲಾದ

ಮ|| ನನೆಯಂಬಂ ಮಸೆದನ್ನರಪ್ಪ ಪಲರೊಳ್ವೆಂಡಿರ್ ಮನಂಗೊಂಡೊಱ
ಲ್ವಿನಮೆತ್ತಂ ಕೊಳೆ ಪಾಡೆ ಜೇನ ಮೞೆ ಕೊಂಡಂತಪ್ಪ ಗೇಯಂ ಮನ|
ಕ್ಕೆ ನೆಲಕ್ಕಿಟ್ಟಳಮಾಗೆ ಸಂದ ರಥಿಕರ್ ಕಣ್ಗೊಳ್ವಿನಂ ತತ್ಸುಯೋ
ಧನನೊಡ್ಡೋಲಗಮಿಂದ್ರನೋಲಗಮುಮಂ ಕೀೞುಡಿ ಕಣ್ಗೊಪ್ಪುಗುಂ|| ೨೯

ವ|| ಅಂತು ಪಿರಿದೋಲಗಂಗೊಟ್ಟಿರ್ಪನ್ನೆಗಂ ಮುನ್ನಮೆ ಮೂಱನೆಯ ಬಾಗಿಲೊಳ್ ಬಂದಿರ್ದನಂತನ ಬರವಂ ಪಡಿಯಱಂ ಬಿನ್ನಪಂಗೆಯ್ಯೆ ಕುರುರಾಜಂ ಸಿಂಧುತನೂಜನ ಮೊಗಮಂ ನೋಡಿ-

ಕಂ|| ಲೋಕ ಗುರು ಶಂಖ ಚಕ್ರ ಗ
ದಾಕರನತಿಶಯ ಚತುರ್ಭುಜಂ ಜನಜನಿತ|
ವ್ಯಾಕುಳದೆ ಬಂದನೆಂದೊಡೆ
ಲೋಕದೊಳಿನ್ನೆನ್ನ ದೊರೆಗೆ ಪಿರಿಯರುಮೊಳರೇ|| ೩೦

ವ|| ಎಂದು ತನ್ನ ಬೆಸನನೆ ಪಾರ್ದು ಲಲಾಟ ತಟ ಘಟಿತ ಮುಕುಳಿತ ಕರಕಮಳನಾಗಿರ್ದ ಮಹಾಪ್ರತಿಹಾರನ ಮೊಗಮಂ ನೋಡಿ-

ಮ|| ಬರವೇೞೆಂಬುದುಮಂಜನಾಚಲದವೋಲ್ ಕಣ್ಗೊಪ್ಪಿ ಬರ್ಪಂಬುಜೋ
ದರನಂ ಮೆಲ್ಲನೆ ನೋಡಿ ಮೆಯ್ಯಲಸಿದಂತೆಂತಾನುಮೆೞರ್ದು ಕೇ|
ಸರಿ ಪೀಠಾಗ್ರದಿನಪ್ಪಿಕೊಂಡು ಪೊಡೆವಟ್ಟುಚ್ಚಾಸನಾಸೀನನಾ
ಗಿರವೇೞ್ದರ್ಘ್ಯಮನಿತ್ತನಂತರಮೆ ತಾಂ ಕುಳ್ಳಿರ್ದ ದುರ್ಯೋಧನಂ|| ೩೧

ವ|| ಅಂತು ಮಧುಕೈಟಭಾರಾತಿಯ ಮೊಗಮಂ ನೋಡಿ-

ಕಂ|| ಸಂಸಾರದೊಳಿನ್ನೆನ್ನವೊ
ಲೇಂ ಸೈಪಂ ಪಡೆದರೊಳರೆ ನೀಂ ಬರೆ ಪೆಱತೇಂ|
ಕಂಸಾರೀ ಯುಷ್ಮತ್ಪದ
ಪಾಂಸುಗಳಿಂದಾಂ ಪವಿತ್ರಗಾತ್ರನೆನಾದೆಂ|| ೩೨

ಬಂದ ಬರವಾವುದಿದು ಬಿಸ
ವಂದಂ ಬೆಸನಾವುದಾವ ಬೆಸನಂ ಬೆಸಸಲ್|
ಬಂದಿರ್ ಬರವಿನೊಳೀಗಳ
ಗುಂದಲೆಯಾಯ್ತೆನಗಮೀಗಳೆಂಬುದುಮಾಗಳ್|| ೩೩

ನೂರು ಜನ ಮಕ್ಕಳು ಮುಂಭಾಗವನ್ನಲಂಕರಿಸಿದ್ದರು. ಯುವರಾಜನೂ ಪ್ರೀತಿಯ ತಮ್ಮನೂ ಎರಡು ಪಕ್ಕಗಳಲ್ಲಿಯೂ ತೊಡೆಸೋಂಕುವ ಹಾಗೆ ಹತ್ತಿರದಲ್ಲಿ ಕುಳಿತಿದ್ದರು. ೨೯. ಪುಷ್ಪಬಾಣವನ್ನು ಮಸೆದ ಹಾಗಿರುವ ಅನೇಕ ಒಳ್ಳೆಯ ಸ್ತ್ರೀಯರು ಆಕರ್ಷಕವಾಗಿ ಪ್ರೀತಿಯಿಂದ ಹಾಡುತ್ತಿದ್ದರು. ಜೇನಮಳೆಯನ್ನು ಸುರಿಸಿದಂತಿರುವ ಸಂಗೀತವು ಎಲ್ಲೆಡೆಯಲ್ಲಿಯೂ ವ್ಯಾಪಿಸಿದ್ದಿತು. ಮನಸ್ಸಿಗೂ ಆಸ್ಥಾನಮಂಟಪಕ್ಕೂ ರಮಣೀಯವಾಗಿರುವಂತೆ ಪ್ರಸಿದ್ಧವಾಗಿರುವ ರಥಿಕರು ಚಿತ್ತಾಕರ್ಷಕವಾಗಿರಲು ಆ ದುರ್ಯೋಧನನ ಆಸ್ಥಾನಮಂಟಪವು ಇಂದ್ರನ ಸಭೆಯನ್ನು ಕೀಳ್ಮಾಡಿ ಕಣ್ಣಿಗೆ ಒಪ್ಪುವಂತಿತ್ತು. ವ|| ಅಂತಹ ಒಡ್ಡೋಲಗದಲ್ಲಿ ದುರ್ಯೋಧನನಿಗೆ ಮೂರನೆಯ ಬಾಗಿಲಿನಲ್ಲಿ ಬಂದಿದ್ದ ಕೃಷ್ಣನ ಆಗಮನವನ್ನು ಪ್ರತೀಹಾರಿಯು ಬಂದು ತಿಳಿಸಲು ದುರ್ಯೋಧನನು ಭೀಷ್ಮನ ಮುಖವನ್ನು ನೋಡಿ- ೩೦. ಲೋಕಗುರುವೂ ಶಂಖಚಕ್ರಗದಾಪಾಣಿಯೂ ಅತಿಶಯವಾದ ನಾಲ್ಕುತೋಳುಗಳುಳ್ಳವನೂ ಆದ ಕೃಷ್ಣನೇ ಲೋಕಪ್ರಸಿದ್ಧವಾದ ಚಿಂತೆಯಿಂದ ನನ್ನ ಬಳಿಗೆ ಬಂದಿದ್ದಾನೆ ಎನ್ನುವಾಗ ಲೋಕದಲ್ಲಿ ನನಗೆ ಸಮಾನವಾದ ಹಿರಿಮೆಯುಳ್ಳವರೂ ಇದ್ದಾರೆಯೇ ಎಂದನು. ವ|| ತನ್ನ ಅಪ್ಪಣೆಯನ್ನೇ ನಿರೀಕ್ಷಿಸುತ್ತ ಕೈಮುಗಿದು (ಮೊಗ್ಗಾಗಿ ಮಾಡಿದ್ದ ಕರಕಮಲವನ್ನು ಮುಖದ ಸಮೀಪದಲ್ಲಿ ಸೇರಿಸಿದ್ದ) ನಿಂತಿದ್ದ ಮಹಾದ್ವಾರಪಾಲಕನ ಮುಖವನ್ನು ನೋಡಿ- ೩೧. ‘ಬರಹೇಳು’ ಎಂದನು. ಅಂಜನ ಪರ್ವತದಂತೆ ಕಣ್ಣಿಗೆ ಮನೋಹರವಾಗಿರುವಂತೆ ಕೃಷ್ಣನು ಪ್ರವೇಶಿಸಿದನು. ಅವನನ್ನು ನಿಧಾನವಾಗಿ ನೋಡಿ ಶರೀರಕ್ಕೆ ಏನೋ ಆಯಾಸವಾಗಿರುವಂತೆ ಹೇಗೋ ಎದ್ದು ಸಿಂಹಾಸನದಿಂದಲೇ ಆಲಿಂಗನಮಾಡಿಕೊಂಡು ನಮಸ್ಕಾರಮಾಡಿ ಎತ್ತರವಾದ ಆಸನದಲ್ಲಿ ಕುಳಿತುಕೊಳ್ಳಬೇಕೆಂದು ಹೇಳಿದನು. ಅರ್ಘ್ಯವನ್ನು ಕೊಟ್ಟಾದಮೇಲೆಯೇ ದುರ್ಯೋಧನನು ತಾನೂ ಕುಳಿತುಕೊಂಡನು. ವ|| ಮಧುಕೈಟಭರೆಂಬವರ ಶತ್ರುವಾದ ಕೃಷ್ಣನ ಮುಖವನ್ನು ನೋಡಿ ಹೇಳಿದನು. ೩೨. ‘ಕೃಷ್ಣ, ನೀನು ಬರಲಾಗಿ ಸಂಸಾರದಲ್ಲಿ ಇನ್ನು ಮೇಲೆ ನನ್ನಂತಹ ಅದೃಷ್ಟಶಾಲಿಗಳಾದರೂ ಇದ್ದಾರೆಯೇ? ಮತ್ತೇನು ನಿನ್ನ ಪಾದಧೂಳಿಯಿಂದ ನಾನು ಪರಿಶುದ್ಧವಾದ ಶರೀರವುಳ್ಳವನಾಗಿದ್ದೇನೆ. ೩೩. ತಾವು ದಯಮಾಡಿಸಿದ ಕಾರಣ ಯಾವುದು? ನಿಮ್ಮ ಆಗಮನ ಆಶ್ಚರ್ಯಕರವಾದುದು;

ಅಯ ನಯ ಪರಾಕ್ರಮೋಪಾ
ಶ್ರಯಂಗಳಂ ಶ್ರೀಗಡರ್ಪುಮಾಡಿದ ನಿನ್ನಿಂ|
ದ್ರಿಯ ಜಯಮೆ ಕೂಡೆ ಲೋಕ
ತ್ರಯದಿಂ ಪೊಗೞಸಿದುದಿಂತು ಪಿರಿಯರುಮೊಳರೇ|| ೩೫

ಕಂ|| ಉನ್ನತನೆ ಆಗಿಯುಂ ನುಡಿ
ನನ್ನಿಯನಳವಣ್ಮನಱವು ವಿನಯಮನಾದಂ|
ಮನ್ನಣೆ ಗುರುಜನಮಂ ನೆ
ಮನ್ನಿಸಿದುದು ಪಿರಿಯ ಸಿರಿಯೊಳೇಂ ಸುಜನತೆಯೋ|| ೩೬

ಕುವಳಯಬಾಂಧವನೆಸೆವನೆ
ಕುವಳಯಮಂ ಬೆಳಸಿ ಕುವಳಯಂ ಪೊಱಗೆನೆ ಪಾಂ|
ಡವರೆ ಪೊಱಗಾಗೆ ನಿನಗೀ
ಕುವಳಯಪತಿಯೆಂಬ ಪೆಂಪೊಡಂಬಡೆ ನೃಪತೀ|| ೩೭

ಮನಕತದಿಂದೊರ್ವರ
ನಿನಿಸನಗಲ್ದಿರ್ದಿರಿನಿಸೆ ನಿಮಗಂ ತಮಗಂ|
ಮುನಿಸುಂಟೆ ಕಾಯ್ದ ಬೆನ್ನೀರ್
ಮನೆ ಸುಡದೆಂಬೊಂದು ನುಡಿಯವೋಲ್ ಕುರುರಾಜಾ|| ೩೮

ಪೊಂಗುವ ಮಲೆಪರ ಮಲೆಗಳ
ಡಂಗಂ ಕಣ್ಮಲೆವ ಮಂಡಲಂಗಳ್ ಪ್ರತ್ಯಂ|
ತಂಗಳೆನಲೊಳವೆ ಪಾಂಡವ
ರಂ ಗೆಡೆಗೊಳೆ ನಿನಗೆ ಕುರುಕುಳಾಂಬರಭಾನೂ|| ೩೯

ಪಟ್ಟದ ಮೊದಲಿಗರಾಜಿಗೆ
ಜಟ್ಟಿಗರವರೆಂದುಮಾಳ್ವ ಮುನ್ನಿನ ನೆಲನಂ|
ಕೊಟ್ಟು ಬೞಯಟ್ಟು ನಿನಗೊಡ
ವುಟ್ಟಿದರಾ ದೊರೆಯರಾಗೆ ತೀರದುದುಂಟೇ|| ೪೦

ಮುನ್ನಿನ ನೆಲನಂ ಕುಡುಗೆಮ
ಗೆನ್ನರ್ ದಾಯಿಗರೆಮೆನ್ನರಂತಲ್ತಿಂತ|
ಲ್ತೆನ್ನರ್ ಕರುಣಿಸಿ ದಯೆಯಿಂ
ದಿನ್ನಿತ್ತುದೆ ಸಾಲ್ಗುಮೆಂಬರೆಂಬುದನೆಂಬರ್|| ೪೧

ಯಾವ ಕಾರ್ಯವನ್ನು ಆe ಮಾಡಲು ಬಂದಿದ್ದೀರಿ? ಈಗ ನಿಮ್ಮ ಬರುವಿಕೆಯಿಂದ ನನಗೂ ಗೌರವವುಂಟಾಗಿದೆ ಎಂದು ಪ್ರಶ್ನೆ ಮಾಡಿದನು. ಆಗ- ೩೪. ಆ ಸಭಾಸ್ಥಾನದಲ್ಲಿ ಕೃಷ್ಣನು ತನ್ನ ಅಭಿನಯದಿಂದಲೇ ಮಾತುಗಳನ್ನು ಜೋಡಿಸುತ್ತಿರಲು ಹಲ್ಲುಗಳ ಕಾಂತಿಯು ಹಾಸುಹೊಕ್ಕಾಗಿ ಹರಡಿ ಸಭಾಭವನವು ಪ್ರಕಾಶಮಾನವಾಗಿರಲು ಮಾತನಾಡಿದನು. ೩೫. ನಯ ನೀತಿ ಪರಾಕ್ರಮಗಳನ್ನು ಯಶೋಲಕ್ಷ್ಮಿಗೆ ಅನವನ್ನಾಗಿಸಿರುವ ಜಿತೇಂದ್ರಿಯತ್ವವು ಮೂರುಲೋಕಗಳಿಂದಲೂ ಹೊಗಳಿಸಿಕೊಳ್ಳುತ್ತಿದೆ. ನಿನ್ನಂತಹ ಹಿರಿಯರು ಯಾರಿದ್ದಾರೆ? ೩೬. ಉನ್ನತವಾಗಿದ್ದರೂ ನಿನ್ನ ಮಾತಿನಲ್ಲಿ ಸತ್ಯಸಂಧತೆಯೂ ಶಕ್ತಿಯಲ್ಲಿ ಪರಾಕ್ರಮವೂ ಪಾಂಡಿತ್ಯದಲ್ಲಿ ವಿನಯವೂ ಹಿರಿಯರಲ್ಲಿ ಮರ್ಯಾದೆಯೂ ನಿನ್ನಲ್ಲಿ ಶೋಭಿಸುತ್ತಿವೆ. ಹೆಚ್ಚಾದ ಸಿರಿಯಿದ್ದರೂ ನಿನ್ನಲ್ಲಿ ಸೌಜನ್ಯವಿದೆ! ೩೭. ಚಂದ್ರನು ಭೂಮಿಯನ್ನೆಲ್ಲ ಬೆಳಗಿಸಿ ಕನ್ನೆ ದಿಲೆಗೆ ಮಾತ್ರ ಹೊರಗಾಗಿದ್ದಾನೆ ಎಂದರೆ ಸೊಗಯಿಸುತ್ತಾನೆಯೆ? ಹಾಗೆಯೇ ಪಾಂಡವರು ಹೊರಗಾಗಿದ್ದರೆ ನಿನಗೆ ಭೂಪತಿ (ಚಕ್ರವರ್ತಿ)ಯೆಂಬ ಹಿರಿಮೆ ಒಪ್ಪುತ್ತದೆಯೇ? ೩೮. ಇದುವರೆಗೆ ಏನೋ ಮನಸ್ತಾಪದಿಂದ ಒಬ್ಬರನ್ನೊಬ್ಬರು ಅಗಲಿದ್ದೀರಿ ಇಷ್ಟೇ. ನಿಮಗೂ ಅವರಿಗೂ ಕ್ರೋಧವುಂಟೆ? ದುರ್ಯೋಧನ, ಕಾದ ಬಿಸಿನೀರು ಮನೆಯನ್ನು ಸುಡುವುದೆ? ೩೯. ಕೌರವವಂಶವೆಂಬ ಆಕಾಶಕ್ಕೆ ಸೂರ್ಯನಂತಿರುವ ಎಲೈ ದುರ್ಯೋಧನನೇ ಪಾಂಡವರೊಡನೆ ಸ್ನೇಹವನ್ನು ಗಳಿಸಿದರೆ ನಿನಗೆ ಪ್ರತಿಭಟಿಸುವ ಪರ್ವತರಾಜರ ಸುಂಕದ ಕಟ್ಟೆಗಳೂ ಅಹಂಕಾರದಿಂದ ವರ್ತಿಸುವ ದೇಶಗಳೂ ಗಡಿಪ್ರದೇಶಗಳೂ ಎನ್ನುವುವು ಇರುತ್ತವೆಯೇ? ೪೦. ಅದೂ ಇರಲಿ, ಅವರು ರಾಜ್ಯಪಟ್ಟಕ್ಕೆ ಮೊದಲು ಅರ್ಹರಾದವರು, ಯುದ್ಧದಲ್ಲಿ ಶೂರರಾದವರು. ಅವರು ಯಾವಾಗಲೂ ಮೊದಲಿಂದ ಆಳುತ್ತಿದ್ದ ರಾಜ್ಯವನ್ನು ಅವರಿಗೆ ಕೊಟ್ಟು ಆ ಸಮಾಚಾರವನ್ನು ದೂತರ ಮೂಲಕ ಹೇಳಿಕಳುಹಿಸು. ನಿನ್ನ ಸಹೋದರರು ಅಂತಹ ಸಮರ್ಥರಾಗಿರಲು ನಿನಗಸಾಧ್ಯವಾದುದೂ ಉಂಟೇ? ೪೧. ಅವರು ನಮಗೆ ಮೊದಲಿನ ನೆಲವನ್ನೆ ಕೊಡು ಎನ್ನುವುದಿಲ್ಲ. ನಾವು ದಾಯಾದಿಗಳು

ಚಂ|| ಕರಿ ಕಳಭ ಪ್ರಚಂಡ ಮೃಗರಾಜ ಕಿಶೋರ ಕಠೋರ ಘೋರ ಹೂಂ
ಕರಣ ಭಯಂಕರಾಟವಿಯೊಳಿನ್ನೆವರಂ ನೆಲಸಿರ್ದ ಸೇದೆ ನೀಂ|
ಕರುಣಿಸಿದಾಗಳಲ್ಲದವರ್ಗಾಱದು ಕೆಮ್ಮಗೆ ನಾಡ ಚಲ್ಲವ
ತ್ತರ ನುಡಿಗೊಳ್ಳದಿರ್ ನಿನಗೆ ಪಾಂಡವರಪ್ಪುದನಾರುಮಪ್ಪರೇ|| ೪೨

ಉ|| ಒಂದುಮೊಡಂಬಡುಂ ಪೊರೆಯುಮಿಲ್ಲವರ್ಗೆಂಬುದನೆಯ್ದ ನಂಬಿ ನಾ
ಡಂ ದಯೆಗೆಯ್ದು ನೀಂ ಕುಡುವಿನಂ ಪೆಱತೇ ಪಡೆಮಾತೊ ಪಳ್ಳಿರ|
ಲ್ಕೆಂದವರ್ಗೀವುದೊಳ್ಪು ನಿಲೆ ಕಂಚಿ ನೆಗೞ್ತೆಯ ವಾರಣಾಸಿ ಕಾ
ಕಂದಿ ಕುರುಸ್ಥಳಂ ವರ ವೃಕಸ್ಥಳಮೆಂಬಿವನಯ್ದು ಬಾಡಮಂ|| ೪೩

ವ|| ಎಂಬುದು ಸುಯೋಧನಂ ಕ್ರೋಧಾನಲೋದ್ದೀಪಿತ ಹೃದಯನಾಗಿ ಶೌರ್ಯಮದಾಡಂಬರದೊಳಂಬರಂಬರಂ ಸಿಡಿಲ್ದು-

ಚಂ|| ತೊಲಗದೆ ಗೋವುಗಾದ ಕಿಱಯಂದಿನ ಗೋವಿಕೆ ನಿನ್ನ ಚಿತ್ತದೊಳ್
ನೆಲಸಿದುದಕ್ಕುಮಗ್ಗಳದ ವೈಷ್ಣವ ಮೋಹಮೆ ನಿನ್ನ ಮೆಯ್ಯೊಳ|
ಗ್ಗಲಿಸಿದುದಕ್ಕುಮಾ ಜಡ ಸಂಗತಿಯಿಂ ಜಡಬುದ್ಧಿ ಬುದ್ಧಿಯಂ
ತೊಲಗಿಸಿತಕ್ಕುಮಲ್ಲದೊಡೆ ನೀನಿನಿತಂ ನುಡಿವೈ ಪಳಾಳಮಂ|| ೪೪

ಕಂ|| ಪಱಪಟ್ಟ ಪಗೆವರಂ ನೆ
ಪಱಪಡಲಣವೀಯದವರನವರ್ಗಳ ಬಾೞೊಳ್|
ನಿಱಸಲ್ ಬಗೆದೈ ಕರಮೆನ
ಗುಱದಿರ್ಕುಮೆ ನಿನ್ನ ಪೇೞ್ದ ಧರ್ಮಶ್ರವಣಂ|| ೪೫

ಉ|| ಭಾಗಮನಾಸೆವಟ್ಟಳಿಪಿ ಬೇೞ್ಪುದು ನಿನ್ನಯ ಕಲ್ತ ವಿದ್ದೆ ನೀ
ನಾಗಳುಮಣ್ಣ ಬೇಡಿದಪೆ ಸಜ್ಜನದಂತೆನಗೆಕ್ಕಬಾಗೆ ನೋ|
ಡೀಗಳಿಳಾಲತಾಂಗಿ ಪುದವಲ್ಲಳದೆಂತೆನೆ ಮುನ್ನ ನೂಲ ತೋ
ಡಾಗದೆ ಕೆಟ್ಟು ಪೋದವರನಿಂ ಮಗುೞ್ದುಂ ನಿಱಪಂತು ಬೆಳ್ಳನೇ|| ೪೬

(ಸಮಭಾಗಿಗಳು) ಎನ್ನುವುದಿಲ್ಲ. ಹೀಗಲ್ಲ ಹಾಗಲ್ಲ ಎನ್ನುವುದಿಲ್ಲ. ನೀನು ದಯೆಯಿಂದ ಕೊಟ್ಟುದು ಸಾಕು ಎನ್ನುತ್ತಾರೆ. ನೀನು ಹೇಳಿದಂತೆ ಕೇಳುವರು. ೪೨. ಆನೆಯ ಮತ್ತು ಭಯಂಕರವಾದ ಸಿಂಹದ ಮರಿಗಳ ಕರ್ಕಶವೂ ಭಯಂಕರವೂ ಆದ ಹೂಂಕರಣ ಶಬ್ದದಿಂದ ಕೂಡಿದ ಘೋರವಾದ ಕಾಡಿನಲ್ಲಿ ಇದುವರೆಗೂ ಅವರು ವಾಸಮಾಡಿದ ಆಯಾಸವು ನೀನು ದಯೆತೋರಿಸಿದಲ್ಲದೆ ಶಮನವಾಗುವುದಿಲ್ಲ. ಸುಮ್ಮನೆ ನಂಬಿಸಿ ಹೊಟ್ಟೆಹೊರೆಯುವ ಬೀದಿಹೋಕರ ಮಾತುಗಳನ್ನು ಕೇಳಬೇಡ. ನಿನ್ನ ಕಷ್ಟಸುಖಕ್ಕೆ ಪಾಂಡವರಾಗುವಂತೆ ಇತರರಾಗುತ್ತಾರೆಯೆ? ೪೩. ಪಾಂಡವರಿಗೆ ಯಾವ ಒಡಂಬಡಿಕೆಯೂ ರಕ್ಷಣೆಯೂ ಇಲ್ಲ ಎಂದು ಚೆನ್ನಾಗಿ ನಂಬಿ ಬೇರೆ ಮಾತಿಲ್ಲದೆ ರಾಜ್ಯವನ್ನು ದಯೆಮಾಡಿ ಕೊಡುವುದಾದರೆ ಕಂಚಿ, ಶ್ರೇಷ್ಠವಾದ ವಾರಣಾಸಿ, ಕಾಕಂದಿ, ಕುರುಸ್ಥಳ, ಉತ್ತಮವಾದ ವೃಕಸ್ಥಳ ಎಂಬ ಅಯ್ದ ಹಳ್ಳಿಗಳನ್ನು ಅವರಿಗೆ ಮಲಗುವುದಕ್ಕೆ (ಸಾಕಷ್ಟು ನೆಲವನ್ನು) ಲೋಕ ಮೆಚ್ಚುವ ಹಾಗೆ (ನಿನ್ನ ಸದ್ಗುಣ ಸ್ಥಿರವಾಗುವ ಹಾಗೆ) ಕೊಟ್ಟರೆ ಸಾಕು. ವ|| ಎನ್ನಲು ದುರ್ಯೋಧನನು ಕ್ರೋಧಾಗ್ನಿಯಿಂದ ಉರಿಯುತ್ತಿರುವ ಹೃದಯವುಳ್ಳವನಾಗಿ ಶೌರ್ಯದ ಸೊಕ್ಕಿನ ಉಬ್ಬರದಲ್ಲಿ ಆಕಾಶದವರೆಗೂ ಸಿಡಿದು ಕೃಷ್ಣನನ್ನು ಕುರಿತು ಹೇಳಿದನು. ೪೪. “ಬಾಲ್ಯದ ದನಕಾಯುವ ಮನೋಭಾವ ನಿನ್ನಲ್ಲಿ ಹೋಗದೆ ಇನ್ನೂ ನೆಲೆಸಿರುವಂತಿದೆ. ಅತಿಶಯವಾದ ವೈಷ್ಣವ ಮೋಹವು ನಿನ್ನ ಶರೀರದಲ್ಲಿ ಮಿತಿಮೀರಿರಬೇಕು.

ಆ ಜಲ (ಕ್ಷೀರಸಮುದ್ರ) ಸಂಬಂಧದಿಂದ ಬಂದ ಜಡಬುದ್ಧಿಯು ನಿನ್ನ ಬುದ್ಧಿಯನ್ನು ತೊಲಗಿಸಿರಬೇಕು. ಅಲ್ಲದಿದ್ದರೆ ನೀನು ಈ ಮೋಸದ ಮಾತನ್ನು ಆಡುತ್ತಿದ್ದೆಯಾ ೪೫. ಹರಿದುಹೋದ (ಕತ್ತರಿಸಿಹೋಗಿರುವ) ಸಂಬಂಧವುಳ್ಳ ಶತ್ರುಗಳನ್ನು ಸಂಪೂರ್ಣವಾಗಿ ನಾಶಮಾಡುವುದಕ್ಕೆ ಅವಕಾಶಕೊಡದೆ ಅವರ ಮೊದಲ ಉನ್ನತಸ್ಥಿತಿಯಲ್ಲಿ ಪುನ ಸ್ಥಾಪಿಸಲು ಮನಸ್ಸು ಮಾಡಿದ್ದೀಯೆ. ನೀನು ಹೇಳಿದ ಧರ್ಮಶ್ರವಣವು ನನಗೆ ಹಿಡಿಸುವುದಿಲ್ಲವಲ್ಲವೆ? ೪೬. ಭೂಭಾಗವನ್ನು ಕೊಡೆಂದು ಆಶೆಪಟ್ಟು ಕೇಳಿಕೊಳ್ಳುವುದು ನೀನು ಮೊದಲಿಂದ ಕಲಿತ ವಿದ್ಯೆ. ನೀನು ಯಾವಾಗಲೂ ಬೇಡುವ ಸ್ವಭಾವವುಳ್ಳವನು ತಾನೆ. ಈಗ ನನಗೆ ಭೂಮಿಯೆಂಬ ಸ್ತ್ರೀಯು ಕುಲವಧುವಿನಂತೆ

ಮ|| ವಿಜಿಗೀಷುತ್ವದೊಳೊಂದಿ ಗೋವುಳಿಗನಪ್ಪಂ ಮತ್ಸ್ಯನಾಳಾಗಿ ವಾ
ರಿಜನಾಭಂ ಹರಿಯೆಂಬ ದೊಡ್ಡಿವೆಸರಂ ಪೊತ್ತಿರ್ದ ನೀಂ ಮಂತ್ರಿಯಾ|
ಗೆ ಜಯೋದ್ಯೋಗಮನೆತ್ತಿಕೊಂಡು ರಣದೊಳ್ ಭೂಭಾಗಮಂ ನೆಟ್ಟನೊ
ಟ್ಟಜೆಯಿಂದಂಜಿಸಿಕೊಳ್ಳದಿರ್ಪಿರೆ ಸಮಂತಾ ಗಂಡರೀ ಗಂಡರಂ|| ೪೭

ಚಂ|| ಪುಸಿಯೆನೆ ಸಾಮಮಂ ನುಡಿದು ಭೇದಮನುಂಟೊಡತಾಗೆ ಮಾಡಿ ಛೀ
ದ್ರಿಸಲೊಳಪೊಕ್ಕು ಮಿಕ್ಕು ನೆಗೞ್ದುಗ್ರವಿರೋಗಳೆತ್ತಮೆಯ್ದೆ ಬಂ|
ಚಿಸಿ ಪೊಱಗಣ್ಗೆ ಸಯ್ದರೆನೆ ತಾವೊಳಗಂ ತವೆ ತೋಡಿ ತಿಂದು ರ
ಕ್ಕಸಿಯರ ಕಂಡ ಕುಂಬಳದ ಮಾೞ್ಕೆವೊಲಾಗಿರೆ ಮಾಡದಿರ್ಪಿರೇ|| ೪೮

ವ|| ನಾಮೆಲ್ಲಮೊಂದೆ ಗರುಡಿಯೊಳೋದಿದ ಮಾನಸರೆವೆಮ್ಮಂ ನಿಮ್ಮಡಿ ಕೆಮ್ಮನೆ ಬೞಲಿಸಲ್ವೇಡ ಬಂದು ಬಟ್ಟೆಯಿನೆ ಬಿಜಯಂಗೆಯ್ಯಿಮೆನೆ ಮುರಾಂತಕನಂತಕನಂತೆ ಮಾಮಸಕಂ ಮಸಗಿ ದುರ್ಯೋಧನನಿಂತೆಂದಂ-

ಉ|| ಸೀತೆಯ ದೂಸಱಂದೞದ ರಾವಣನಂತಿರೆ ನೀನುಮೀಗಳೀ
ಸೀತೆಯ ದೂಸಱಂದೞಯಲಾಟಿಸಿದೈ ನಿನಗಂತು ಸೀತೆಯೇ|
ಸೀತೆ ಕಡಂಗಿ ಕಾಯ್ದು ಕಡೆಗಣ್ಚಿದಳಪ್ಪೊಡೆ ಧಾತ್ರನಿಂ ತೊದ
ಳ್ವಾತಿನೊಳೇನೊ ಪಾಂಡವರ ಕೆಯ್ಯೊಳೆ ನಿನ್ನ ನಿಸೇಕಮಾಗದೇ|| ೪೯

ಆರ್ಕಡುಕೆಯ್ದು ಪಾಂಡವರೊಳಾಂತಿಱಯಲ್ ನೆರೆವನ್ನರಿಂತಿದೇ
ತರ್ಕೆ ಬಿಗುರ್ತಪೈ ನೆಲನೊಪ್ಪಿಸಿ ತಪ್ಪದೆ ಬಾೞ್ವೆನೆನ್ನದೀ|
ಯುರ್ಕಿನೊಳೆಂತು ನಿಂದು ಸೆಣಸಲ್ ಬಗೆ ಬಂದುದು ನಿನ್ನ ಮೆಯ್ಯ ನೆ
ತ್ತರ್ಕುದಿದುರ್ಕಿ ಸಾವ ಬಗೆಯಿಂ ಸೆಣಸಲ್ ಬಗೆ ಬಂದುದಾಗದೇ|| ೫೦

ಕಂ|| ಮುಳಿಯಿಸಿ ಬರ್ದುಂಕಲಾದನು
ಮೊಳನೆ ಯುಷ್ಠಿರನನಮಳರಳವೆಂಬುದು ಭೂ|
ವಳಯ ಪ್ರಸಿದ್ಧಮರಿನೃಪ
ಬಳಂಗಳವರಿಱಯೆ ಪೆಳವೆಂಬರುಮೊಳರೇ|| ೫೧

ಒಬ್ಬನೇ ಅನುಭವಿಸುವುದಕ್ಕೆ ಯೋಗ್ಯಳಾದವಳು. ಮತ್ತೊಬ್ಬರೊಡನೆ ಜೊತೆಗೂಡಿ ಇರುವವಳಲ್ಲ. ಅದು ಹೇಗೆಂದರೆ ಮೊದಲು ಕತ್ತರಿಸಿ ಹೋದ ನೂಲಿನಂತೆ ತಿರುಗಿ ಸೇರಿಸಲಾಗದುದು. ಕೆಟ್ಟು ಹೋದವರನ್ನು ಪುನ ಸ್ಥಾಪಿಸುವುದಕ್ಕೆ ನಾನು ದಡ್ಡನೇ?

೪೭. ಗೋವಳಿನಾಗಿದ್ದು ಜಯಾಕಾಂಕ್ಷೆಯಿಂದ ಕೂಡಿ ವಿರಾಟನ ಸೇವಕನಾಗಿ (ಮನುಷ್ಯನ ಆಳಾಗಿ) ಕಮಲನಾಭ, ಹರಿ, ಎನ್ನುವ ದೊಡ್ಡ ಹೆಸರನ್ನು ಹೊತ್ತಿರುವ ನೀನು ಮಂತ್ರಿಯಾಗಿರಲು ಆ ಶೂರರಾದ ಪಾಂಡವರು ಜಯೋದ್ಯೋಗವನ್ನು ಹೂಡಿ (ಯುದ್ಧದಲ್ಲಿ ಗೆಲ್ಲುವ ಕಾರ್ಯದಲ್ಲಿ ತೊಡಗಿ) ಶೂರರಾದ ನಮ್ಮನ್ನು ಪರಾಕ್ರಮದಿಂದ ಹೆದರಿಸಿ ಯುದ್ಧದಲ್ಲಿ ನೇರವಾಗಿ ಭೂಮಿಯ ಭಾಗವನ್ನು ಪೂರ್ಣವಾಗಿ ಪಡೆಯದೇ ಇರುತ್ತಾರೆಯೇ? ೪೮. ಸುಳ್ಳು ಸಾಮವನ್ನು ಹೇಳಿ, ಕೂಡಲೆ ಭೇದವನ್ನುಂಟುಮಾಡಿ, ಛಿದ್ರಿಸಲು ಒಳಹೊಕ್ಕು, ಉಗ್ರ ವಿರೋಗಳಾದ ನೀವು ಎಲ್ಲ ರೀತಿಯಿಂದಲೂ ವಂಚನೆಮಾಡಿ ರಾಕ್ಷಸಿಯರು ನೋಡಿದ ಕುಂಬಳದ ಕಾಯಿಯಂತೆ ಹೊರಗಡೆ ಮಾತ್ರ ಸರಿಯಾದವರಂತೆ ತೋರಿ ಒಳಗೆಯೆ ಕೇಡನ್ನು ಮಾಡದಿರುತ್ತೀರಾ? ವ|| ನಾವೆಲ್ಲ ಒಂದೇ ಗರಡಿಯಲ್ಲಿ ಕಲಿತ ಮನುಷ್ಯರಾಗಿದ್ದೇವೆ. ನೀವು ನಮ್ಮನ್ನು ವೃಥಾ ಆಯಾಸಪಡಿಸಬೇಡಿ; ಬಂದ ದಾರಿಯಲ್ಲಿ ಬಿಜಯಮಾಡಿಸಿ ಎಂದನು. ಕೃಷ್ಣನು ಯಮನಂತೆ ವಿಶೇಷವಾಗಿ ಕೋಪಿಸಿಕೊಂಡು ದುರ್ಯೋಧನನಿಗೆ ಹೀಗೆಂದನು. ೪೯. ಸೀತಾದೇವಿಯ ಕಾರಣದಿಂದ ನಾಶವಾದ ರಾವಣನ ಹಾಗೆ ಈಗ ನೀನೂ ಕೂಡ ರಾಜ್ಯದ (ಭೂಮಿಯ) ಆಸೆಯಿಂದ ನಾಶವಾಗಲು ಆಶೀಸುತ್ತಿದ್ದೀಯೆ; ನಿನಗೆ ಈ ಸೀತೆ (ಭೂಮಿಯು) ಆ ಸೀತೆಯೇ ಆಗಿದ್ದಾಳೆ. (ನಾಶಕಾರಕಳು). ಉತ್ಸಾಹಿಸಿ ಕೋಪದಿಂದ ನಿನ್ನನ್ನು ಭೂಮಿಯು ತಿರಸ್ಕರಿಸುವುದಾದರೆ ಬ್ರಹ್ಮನ ಸಹಾಯದಿಂದಲೇ ಪಾಂಡವರ ಕಯ್ಯಿಂದಲೇ ನಿನಗೆ ನಿಷೇಕ (ಶಾಸ್ತಿ, ಪ್ರಸ್ತುತ) ಆಗದಿರುತ್ತದೆಯೇ? ಅಡ್ಡ ಮಾತುಗಳಿಂದಲೇನು ಪ್ರಯೋಜನ ೫೦. ಪಾಂಡವರನ್ನು ಪ್ರತಿಭಟಿಸಿ ಯುದ್ಧಮಾಡಲು ಯಾರು ಸಮರ್ಥರು? ಹೀಗೇಕೆ ಉಬ್ಬಿಹೋಗಿದ್ದೀಯೆ? ಅವರಿಗೆ ಸಲ್ಲಬೇಕಾದ ಭೂಮಿಯನ್ನು ಒಪ್ಪಿಸಿ ತಪ್ಪದೆ (ಶಾಶ್ವತವಾಗಿ) ಬದುಕುತ್ತೇನೆ ಎನ್ನದೆ ಹೀಗೆ ಅಹಂಕಾರದಿಂದ ಪ್ರತಿಭಟಿಸಿ ಸೆಣಸಲು ಹೇಗೆ ನಿನಗೆ ಮನಸ್ಸು ಬಂದಿತು? ನಿನ್ನ ಶರೀರದ ರಕ್ತ ಕುದಿದು ಉಕ್ಕಿ ಸಾಯುವ ಇಚ್ಛೆಯಿಂದಲೇ ಯುದ್ಧಮಾಡಲು ನಿನಗೆ ಮನಸ್ಸು ಬಂದಿರಬೇಕಲ್ಲವೇ? ೫೧. ಧರ್ಮರಾಜನಿಗೆ

ಚಂ|| ಗಜೆಗೊಳೆ ಭೀಮಸೇನನಿದಿರಾಂತು ಬರ್ದುಂಕುವ ವೈರಿ ಭೂಭುಜ
ಧ್ವಜಿನಿಗಳಿಲ್ಲದಲ್ಲದೆಯುಮೀ ಯುವರಾಜನ ನೆತ್ತರಂ ಕುರು|
ಧ್ವಜಿನಿಯೆ ನೋಡೆ ಪೀರ್ದು ಭವದೂರುಯುಗಂಗಳನಾಜಿರಂಗದೊಳ್
ಗಿಜಿಗಿಜಿ ಮಾಡಲೆಂದವನ ಪೂಣ್ದುದು ನಿಕ್ಕುವಮಾಗದಿರ್ಕುಮೇ|| ೫೨

ವ|| ಅದಲ್ಲದೆಯುಂ ರಾಜಸೂಯ ವ್ಯತಿಕರದೊಳ್ ದಿಗ್ವಿಜಯಂ ಗೆಯ್ದು ಲಂಕೆಯ ವಿಭೀಷಣನನೊಂದೆ ದಿವ್ಯಾಸ್ತ್ರದೊಳೆಚ್ಚು ಕಪ್ಪಂಗೊಂಡ ವಿಕ್ರಮಾರ್ಜುನನ ವಿಕ್ರಮಮುಮಂ ಕಾಪಿನ ದೇವರೊಂದು ಪೊೞ್ತುಮಗಲದ ನೂಱು ಯೋಜನದಳಮಿ ಖಾಂಡವವನಮನನಲಂ ಗೂಡಿದರಾತಿಕಾಳಾನಳನಳವುವಂ ಜವನನವಯವದೊಳ್ ಗೆಲ್ದು ಪಾರ್ವರ ಪಿಳ್ಳೆಯ ಪೋದ ಪ್ರಾಣಮಂ ತಂದ ಸಾಹಸಾಭರಣನ ಸಾಹಸಮುಮನಿಂದ್ರಕೀಲ ನಗೇಂದ್ರದೊಳಿಂದ್ರನ ಬೆಸದೊಳ್ ತಪೋವಿಘಾತಂ ಮಾಡಲೆಂದು ಬಂದ ಪುರಂದರನ ಗಣಿಕೆಯರ ಕಡೆಗಣ್ಣ ನೋಟಕ್ಕಂ ಕಾಟಕ್ಕ ಮಳ್ಕದ ಶೌಚಾಂಜನೇಯನ ಶೌಚಮುಮಂ ದಾನವಾಪನಪ್ಪ ಮೂಕದಾನವ ಸೂಕರನನೊಂದೆ ಸೂೞಂಬಿನೊಳೆಚ್ಚು ಕೊಂದ ಪರಾಕ್ರಮಧವಳನ ಪರಾಕ್ರಮಮುಮಂ ತ್ರಿಣೇತ್ರನೊಳ್ ಕಾದಿ ಪಾಶುಪತಾಸ್ತ್ರಮಂ ಪಡೆದ ಕದನತ್ರಿಣೇತ್ರನ ಗಂಡಗರ್ವಮುಮನಿಂದ್ರಲೋಕಕ್ಕೆ ಪೋಗಿ ದೇವೇಂದ್ರನ ಪಗೆವರಪ್ಪ ನಿವಾತಕವಚ ಕಾಳಕೇಯ ಪೌಳೋಮ ತಳತಾಳುಕರೆಂಬ ದೈತ್ಯರುಂ ಪಡಲ್ವಡಿಸಿದ ಪಡೆಮೆಚ್ಚೆ ಗಂಡನ ಗಂಡುಮಂ ದೇವೇಂದ್ರನೊಳರ್ಧಾಸನಮೇಱದ ಗುಣಾರ್ಣವನ ಮಹಿಮೆಯುಮಂ ಚಳುಕ್ಯಕುಳತಿಳಕನಪ್ಪ ವಿಜಯಾದಿತ್ಯಂಗೆ ಗೋವಿಂದರಾಜಂ ಮುಳಿಯೆ ತಳರದೆ ಪೆಱಗಿಕ್ಕಿ ಕಾದ ಶರಣಾಗತ ಜಳನಿಯ ಪೆಂಪುಮಂ ಗೊಜ್ಜಿಗನೆಂಬ ಸಕಲ ಚಕ್ರವರ್ತಿ ಬೆಸಸೆ ದಂಡುವಂದ ಮಹಾಸಾಮಂತರಂ ಮರಲಿಱದು ಗೆಲ್ದ ಸಾಮಂತ ಚೂಡಾಮಣಿಯ ಬೀರಮುಮನತಿವರ್ತಿಯಾಗಿ ಮಾರ್ಮಲೆವ ಚಕ್ರವರ್ತಿಯಂ ಕಿಡಿಸಿ ತನ್ನ ನಂಬಿ ಬಂದ ಬದ್ದೆಗ ದೇವಂಗೆ ಸಕಳ ಸಾಮ್ರಾಜ್ಯಮನೋರಂತು ಮಾಡಿ ನಿಱಸಿದರಿಕೇಸರಿಯ ತೋಳ್ವಲಮುಮಂ ಸಮದಗಜಘಟಾಟೋಪಂಬೆರಸು ನೆಲನದಿರೆವಂದು ತಾಗಿದ ಕಕ್ಕಲನ ತಮ್ಮನಪ್ಪ ಬಪ್ಪುವನಂಕಕಾಱನನೊಂದೆ ಮದಾಂಧಗಂಧಸಿಂಧುರದೊಳೋಡಿಸಿದ ವೈರಿಗಜಘಟಾ ವಿಘಟನನದಟುಮಂ ಪರಚಕ್ರಂಗಳನಂಜಿಸಿದ ಪರಸೈನ್ಯ ಭೈರವನ ಮೇಗಿಲ್ಲದ ಬಲ್ಲಾಳ್ತನಮುಮಂ ಕಂಡುಂ ಕೇಳ್ದುಂ ನಿನಗೆ ಸೆಣಸಲೆಂತು ಬಗೆ ಬಂದಪುದು-

ಕೋಪ ಬರುವ ಹಾಗೆ ಮಾಡಿ ಬದುಕಬಲ್ಲವನೂ ಇದ್ದಾನೆಯೇ? ಯಮಳರಾದ ನಕುಲಸಹದೇವರ ಪರಾಕ್ರಮವೆಂಬುದು ಲೋಕಪ್ರಸಿದ್ಧವಾದುದು. ಅವರು ಯುದ್ಧಮಾಡಲು, ಹೆದರೆವು ಎನ್ನುವ ಶತ್ರುಗಳೂ ಉಂಟೆ? ೫೨. ಭೀಮಸೇನನು ಗದೆಯನ್ನು ಹಿಡಿಯಲು ಪ್ರತಿಭಟಿಸಿ ಬದುಕುವ ಶತ್ರುಸೈನ್ಯವಿಲ್ಲ? ಅದೂ ಅಲ್ಲದೆ ಈ ಯುವರಾಜನಾದ ದುಶ್ಶಾಸನನ ರಕ್ತವನ್ನು ಕೌರವಸೈನ್ಯವು ನೋಡುತ್ತಿರುವ ಹಾಗೆಯೇ ಹೀರಿ ನಿನ್ನ ಎರಡು ತೊಡೆಗಳನ್ನೂ ಯುದ್ಧಭೂಮಿಯಲ್ಲಿ ಅಜ್ಜಿಗುಜ್ಜಿ ಮಾಡುತ್ತೇನೆಂದು ಅವನು ಪ್ರತಿe ಮಾಡಿದುದು ನಿಜವಾಗದೇ ಹೋಗುತ್ತದೆಯೇ? ವ|| ಅದಲ್ಲದೆ ರಾಜಸೂಯದ ಸಂದರ್ಭದಲ್ಲಿ ದಿಗ್ವಿಜಯವನ್ನು ಮಾಡಿ ಲಂಕಾಪಟ್ಟಣದ ವಿಭೀಷಣನನ್ನು ಒಂದೇ ದಿವ್ಯಾಸ್ತ್ರದಿಂದ ಹೊಡೆದು ಕಪ್ಪವನ್ನು ತೆಗೆದುಕೊಂಡ ವಿಕ್ರಮಾರ್ಜುನನ ಪರಾಕ್ರಮವನ್ನು, ರಕ್ಷಣೆಗೋಸ್ಕರ ಇದ್ದ ದೇವತೆಗಳು ಒಂದು ಹೊತ್ತೂ ಅಗಲದಿದ್ದ ನೂರು ಯೋಜನ ವಿಸ್ತಾರದ ಖಾಂಡವವನವನ್ನು ಅಗ್ನಿಗೆ ಸಮರ್ಪಿಸಿದ ಅರಾತಿಕಾಳಾನಳನ ಶಕ್ತಿಯನ್ನೂ, ಯಮನನ್ನೂ ಶ್ರಮವಿಲ್ಲದೆ ಗೆದ್ದು ಬ್ರಾಹ್ಮಣನ ಮಗನ ಹೋಗಿದ್ದ ಪ್ರಾಣವನ್ನು ತಂದ ಸಾಹಾಸಭರಣನ ಸಾಹಸವನ್ನೂ, ಇಂದ್ರಕೀಲಪರ್ವತದಲ್ಲಿ ಇಂದ್ರನ ಆeಯ ಪ್ರಕಾರ ತಪಸ್ಸಿಗೆ ವಿಘ್ನಮಾಡಬೇಕೆಂದು ಬಂದ ಇಂದ್ರನ ವೇಶ್ಯೆಯರ ಕಟಾಕ್ಷದೃಷ್ಟಿಗೂ ಅವರ ಹಿಂಸೆಗೂ ಹೆದರದ ಶೌಚಾಂಜನೇಯನ ಶುಚಿತ್ವವನ್ನೂ, ರಾಕ್ಷಾಸಾಪತಿಯಾದ ಮೂಕರಾಕ್ಷಸನೆಂಬ ಹಂದಿಯನ್ನು ಒಂದೇ ಸಲದ ಬಾಣದಲ್ಲಿ ಹೊಡೆದು ಕೊಂದ ಪರಾಕ್ರಮಧವಳನ ಪರಾಕ್ರಮವನ್ನೂ ಈಶ್ವರನಲ್ಲಿ ಕಾದಿ ಪಾಶುಪತಾಸ್ತ್ರವನ್ನು ಪಡೆದ ಕದನತ್ರಿಣೇತ್ರನ ಪೌರುಷಾಹಂಕಾರವನ್ನೂ ಇಂದ್ರಲೋಕಕ್ಕೆ ಹೋಗಿ ದೇವೇಂದ್ರನ ಶತ್ರುಗಳಾಗಿದ್ದ ನಿವಾಚಕವಚ, ಕಾಳಕೇಯ, ಪೌಳೋಮ, ತಳತಾಳುಕರೆಂಬ ರಾಕ್ಷಸರನ್ನು ಕೆಳಗೆ ಬೀಲುವ ಹಾಗೆ ಮಾಡಿದ ಪಡೆಮೆಚ್ಚೆಗಂಡನ ಪೌರುಷವನ್ನೂ, ದೇವೇಂದ್ರನಲ್ಲಿ ಅರ್ಧಾಸನವನ್ನು ಪಡೆದು ಗಣಾರ್ಣವನ ಮಹಿಮೆಯನ್ನೂ, ಚಾಳುಕ್ಯಕುಲತಿಲಕನಾದ ವಿಜಯಾದಿತ್ಯನಿಗೆ ಗೋವಿಂದರಾಜನು ಪ್ರತಿಭಟಿಸಲು ಅವನನ್ನು ಸಾವಕಾಶಮಾಡದೆ ಹಿಂದಕ್ಕೆ ನೂಕಿ ರಕ್ಷಿಸಿದ ಶರಣಾಗತ ಸಮುದ್ರನ ಮಹಿಮೆಯನ್ನೂ ಗೊಜ್ಜಿಗನೆಂಬ ಸಕಲಚಕ್ರವರ್ತಿಯು ಆeಮಾಡಲು ದಂಡೆತ್ತಿಬಂದ ಮಹಾಸಾಮಂತರನ್ನೆಲ್ಲ ಹಿಮ್ಮೆಟ್ಟುವಂತೆ ಹೊಡೆದು ಗೆದ್ದ ಸಾಮಂತ ಚೂಡಾಮಣಿಯ ವೀರ್ಯವನ್ನೂ, ಎಲ್ಲೆ ಮೀರಿ ಪ್ರತಿಭಟಿಸುವ ಚಕ್ರವರ್ತಿಯನ್ನು ಹಾಳುಮಾಡಿ ತನ್ನನ್ನೇ ನಂಬಿ ಬಂದ ಬದ್ದೆಗದೇವನಿಗೆ ಸಕಲಸಾಮ್ರಾಜ್ಯವನ್ನು ಏಕಪ್ರಕಾರವಾಗಿ ಮಾಡಿ ಸ್ಥಾಪಿಸಿದ ಅರಿಕೇಸರಿಯ ತೋಳ ಬಲವನ್ನು ಮದ್ದಾನೆಗಳ ಗುಂಪಿನ ಆರ್ಭಟದಿಂದ ಕೂಡಿ ಭೂಮಿಯು ನಡುಗುವಂತೆ ಬಂದು ತಾಗಿದ ಕಕ್ಕಲನ ತಮ್ಮನಾದ ಬಪ್ಪುವನೆಂಬ ಜಟ್ಟಿಯನ್ನು ಒಂದೇ ಮದ್ದಾನೆಯಿಂದ ಓಡಿಸಿದ ವೈರಿಗಜಘಟಾವಿಘಟನಪಟುವಾದ (ಶತ್ರುಗಳ ಆನೆಯ ಸಮೂಹವನ್ನು ಒಡೆದುಹಾಕುವ ಶಕ್ತಿಯನ್ನುಳ್ಳ) ಅರ್ಜುನನ ಪರಾಕ್ರಮವನ್ನೂ, ಶತ್ರುಸೈನ್ಯವನ್ನು ಹೆದರಿಸಿದ ಪರಸೈನ್ಯಭೈರವನ ಅತಿಶಯವಾದ