ನವಿಲುಗುಂದದಲ್ಲಿನ ಪ್ರವಾಸಿ ಸ್ಥಳಗಳು

ನವಿಲುಗುಂದ ಎಂಬುದು ಹೆಸರೇ ಸೂಚಿಸುವಂತೆ ನವಿಲುಗಳ ಆಗರವೇ ಈ ನವಿಲುಗುಂದ. ಐತಿಹಾಸಿಕ ಹಿನ್ನೆಲೆಯನ್ನು ಒದಗಿಸುವ ಶಿಲಾಶಾಸನಗಳು ದೊರೆತಿವೆ. ಬಹಳ ಕಾಲದ ಹಿಂದೆ ಈ ಊರಿನ ಗುಡ್ಡದ ಮೇಲೆ ನವಿಲುಗಳು ಕಲೆತು ನರ್ತಿಸುತ್ತಿದ್ದವಂತೆ. ಅದರಿಂದ ಈ ಊರಿಗೆ ನವಿಲುಗುಂದ ಎಂಬ ಹೆಸರು ಬಂದಿದೆ. ಗುಂದ ಎಂದರೆ ಗುಡ್ಡ ಕ್ರಿ.ಶ. ೯೮೦ ರ ಅರೆಕುರಟ್ಟಿಯ ಶಾಸನದಲ್ಲಿ ‘ನವಿಲ್ಗುನ್ಹ’ ಎಂಬ ಉಲ್ಲೇಖವಿದೆ. ಹೊಯ್ಸಳ ಎರಡನೇ ವೀರ ಬಲ್ಲಾಳನ ಕಾಲದ (ಕ್ರಿ.ಶ. ೧೧೯೯) ಒಂದು ಶಾಸನದಲ್ಲಿ ‘ನವಿಲ್ಗುಂದೆ’ ಎಂಬ ಹೆಸರಿದೆ.

ಐತಿಹಾಸಿಕ ಹಿನ್ನೆಲೆ:

ನವಿಲುಗುಂದಕ್ಕೆ ಸಾವಿರ ವರ್ಷಗಳ ಇತಿಹಾಸವಿದೆ. ಚಾಲುಕ್ಯ, ಹೊಯ್ಸಳ ಅರಸರ ಹಾಗೂ ಅನೇಕ ಮಾಂಡಲೀಕರ ಆಡಳಿತಕ್ಕೆ ಒಳಪಟ್ಟಿತ್ತು.

ಈ ನಗರವು ಬಹುಮನಿ ಅರಸರ ಅಲ್ಲಾವುದ್ದೀನನ ಎರಡನೆಯ ಅಳಿಯ ಜಲಾಲಖಾನನ (ಕ್ರಿ.ಶ. ೧೪೩೫-೫೭) ಅಧೀನದಲ್ಲಿತ್ತು.

ನವಿಲುಗುಂದವು ಬಿಜಾಪೂರದ ಆದಿಲ್‌ಶಹಾನ ಆಡಳಿತಕ್ಕೆ ಒಳಪಟ್ಟಿತ್ತು. ಆತನ ಶೂರ ಸರದಾರನಾದ ಅವರಾದಿಯ ವಿಠಪ್ಪಗೌಡನು ಆದಿಲ್‌ಶಹಾನಿಂದ ತೊರಗಲೆ ಸೀಮೆಯನ್ನು ಕ್ರಿ.ಶ. ೧೫೬೫ ರಲ್ಲಿ ಜಹಗೀರಾಗಿ ಪಡೆದು ಸಿರಸಂಗಿ ಹಾಗೂ ನವಿಲುಗುಂದವನ್ನು ವಾಸಸ್ಥಳಗಳಾಗಿ ಮಾಡಿ ಆಳಿದನು.

೧೬೯೦ ರಲ್ಲಿ ನವಿಲುಗುಂದವು ಔರಂಗಜೇಬನ ಸಾಮಂತ ಸವಣೂರಿನ ನವಾಬನ ಆಡಳಿತದಲ್ಲಿತ್ತು. ಹಾಗೂ ಅನುವಂಶಿಕವಾಗಿ ಲಿಂಗಾಯತ ಅಧಿಕಾರಿಯಾದ ದೇಸಾಯಿ ಅವರಿಂದ ಕರವಸೂಲಿ ಮಾಡುವ ಪ್ರಮುಖ ಸ್ಥಳವಾಗಿತ್ತು.

 

) ನೀಲಮ್ಮನ ಜಲಾಶಯ:

ಲಿಂಗರಾಜ ದೇಸಾಯಿಯವರ ವಂಶಸ್ಥರಾದ ಜಾಯಗೌಂಡನ ಆಳ್ವಿಕೆಯಲ್ಲಿ ಈ ಜಲಾಶಯವನ್ನು ಕಟ್ಟಿಸಲಾಗಿದೆ. ನವಿಲುಗುಂದ ವಾಡೆಯಿಂದ ಮೂರು ಫರ್ಲಾಂಗು ದೂರದಲ್ಲಿ ಸಂಕಮ್ಮನ ಭಾವಿ ಇದೆ. ವಾಡೆಯಿಂದ ಭಾವಿಯವರೆಗೆ ಗುಪ್ತ ಮಾರ್ಗದ ಅವಶೇಷವಿದೆ.

ನೀಲಮ್ಮನ ಕೆರೆಯ ದಂಡೆಗುಂಟ ಕಲ್ಲಿನಿಂದ ಕಟ್ಟಿಸಿದ ಗೋಡೆ ಇದೆ. ಸುತ್ತಲೂ ಅಡ್ಡಾಡಲು ಸಿಮೆಂಟ್‌ಕಲ್ಲುಗಳನ್ನು ಹೊಂದಿಸಲಾಗಿದೆ. ಈ ನೀರು ಇಡೀ ನವಲುಗುಂದಕ್ಕೆ ಕುಡಿಯುವ ನೀರಿನ ಮೂಲವಾಗಿತ್ತು. ಲಿಂಗರಾಜರ ವಂಶಸ್ಥರಾದ ನೀಲಮ್ಮನು ಜನರಿಗಾಗಿ ಈ ಕೆರೆಯನ್ನು ಕಟ್ಟಿಸಿದ್ದರಿಂದ ಈ ಹೆಸರು ಬಂದಿದೆ.

 

) ಹುರಕಡ್ಲಿ ಅಜ್ಜನವರ ಮಠ:

ಶ್ರೀ ಅ.ನಾ ಹುರಕಡ್ಲಿ ಅಜ್ಜನವರು ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. ಗೃಹಸ್ಥರಾಗಿ ಆಧ್ಯಾತ್ಮದಲ್ಲಿ ಆಸಕ್ತರಾಗಿ ದೇವಿ ಉಪಾಸಕರಾಗಿ ದೇವಿಯನ್ನು ಪ್ರತ್ಯಕ್ಷಗೊಳಿಸಿಕೊಂಡವರು. ಇವರ ಭಕ್ತ ಸಮುದಾಯ ಈ ಮಠವನ್ನು ನಿರ್ಮಿಸಿದೆ. ಅಜ್ಜನವರು ಉಯೋಗಿಸಿದ ವಸ್ತುಗಳು ಇಲ್ಲಿವೆ. ತಮ್ಮ ಎಲ್ಲ ಆಸ್ತಿಯನ್ನು ಈ ಮಠಕ್ಕೆ ನೀಡಿದ್ದಾರೆ.

ಅಜ್ಜನವರ ಹೆಸರಿನಲ್ಲಿ ಅನೇಕ ಶೈಕ್ಷಣಿಕ ಸಂಸ್ಥೆಗಳು, ಮಹಾವಿದ್ಯಾಲಯ, ಕಾನೂನು ಮಹಾವಿದ್ಯಾಲಯ, ಮಹಿಳಾ ಕಾಲೇಜು ಹೀಗೆ ವಿವಿಧ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ.

ಶ್ರೀ ಅ.ನಾ. ಹುರಕಡ್ಲಿ ಅಜ್ಜನವರು ತಮ್ಮಲ್ಲಿಗೆ ಬಂದ ಭಕ್ತರಿಗೆ ಆಧ್ಯಾತ್ಮದ ದಿವ್ಯ ಸಂದೇಶ ನೀಡಿ ಅವರ ಕಷ್ಟಗಳನ್ನು ನಿವಾರಿಸುತ್ತಿದ್ದರು. ಅವರ ದಿವ್ಯ ಸಮಾಧಿ ಮಂದಿರವು ಶಿಲ್ಪಕಲಾ ಕೌಶಲದಿಂದ ಒಡಗೂಡಿ ಭವ್ಯವಾಗಿ ನಿರ್ಮಿತವಾಗಿದೆ.

 

) ಥಡಿ ಮಠ:

ನವಿಲುಗುಂದ ನಾಡಿಗೆ ಲಿಂಗರಾಜರು ಕ್ರಿ.ಶ. ೧೮೯೭ ರಿಂದ ೧೯೦೬ ರವರೆಗೆ ದೊರೆಯಾಗಿ ‘ದೇಶ ಸೇವೆಯೇ ಈಶ ಸೇವೆ’ ಎಂಬ ಸತ್ಯಂಕಲ್ಪದಿಂದ ಆಳಿ, ಕೊನೆಗೆ ಇಡೀ ಸಂಸ್ಥಾನವನ್ನೇ ಸಮಾಜದ ಬಡ ಮಕ್ಕಳ ಶಿಕ್ಷಣಕ್ಕಾಗಿ ನೀಡಿ, ‘ಕೊಡುಗೈ ದೊರೆ’ ತ್ಯಾಗವರ ಎಂಬ ಪ್ರಶಂಸೆಗೆ ಪಾತ್ರರಾದರು. ಇವರ ಸಮಾಧಿಯು ಇಲ್ಲಿಯ ಥಡಿ ಮಠದಲ್ಲಿದೆ. ಇಲ್ಲಿ ಹಿಂದಿನವರ ಆರು ಸಮಾಧಿಗಳು ಒಂದೇ ಕಡೆ ಇವೆ. ಇದೇ ಕೈಲಾಸ ಮಂದಿರ ಥಡಿ ಮಠ.

ದೇಸಾಯಿಯವರ ವಂಶಸ್ಥರ ಸಮಾಧಿಗಳನ್ನು ಇಲ್ಲಿ ಕಾಣಬಹುದು. ದೇಸಾಯಿ ಮನೆತನದವರ ಆರು ಸಮಾಧಿಗಳಿವೆ. ಈ ಸಮಾಧಿಗಳ ಮೇಲೆ ಶಿವಲಿಂಗಗಳಿವೆ. ಅವುಗಳಲ್ಲಿ ಶ್ರೀ ಲಿಂಗರಾಜರ ನೀಲಮ್ಮ, ಚನ್ನಮ್ಮರ ಸಮಾಧಿಗಳು ಪ್ರಮುಖವಾಗಿವೆ.

 

) ಲಿಂಗರಾಜರ ವಾಡೆ:

ಕ್ರಿ.ಶ. ೧೭೯೫ ರಿಂದ ೧೮೦೦ ರಲ್ಲಿ ಧೊಂಡೆ ಪಂತ ಗೋಖಲೆ ನವಿಲುಗುಂದವನ್ನು ದೇಸಾಯಿಯವರಿಂದ ಕಿತ್ತುಕೊಂಡರು. ೧೮೧೭ ರಲ್ಲಿ ಜನರಲ್‌ಮನ್ರೋ ರಾಮರಾವನಿಗೆ ನವಿಲುಗುಂದದ ಅಧಿಕಾರವನ್ನು ವಹಿಸಿಕೊಟ್ಟನು. ನಂತರ ಪೇಶ್ವೆಯವರು ನವಿಲುಗುಂದ ತೊರಗೆಲೆ ನಾಡಿನ ದೊರೆ ಮೂರನೆಯ ಜಾಯ ಗೌಂಡನಿಗೆ ಅವರ ಹಿರಿಯ ರಾಜ್ಯದ ಬದಲಾಗಿ ಹತ್ತು ಊರುಗಳನ್ನು ಉಂಬಳಿಯಾಗಿ ಕೊಟ್ಟರು. ನಂತರ ಲಿಂಗರಾಜರು ದೊರೆಯಾಗಿ ಕಾರ್ಯಭಾರ ನಡೆಸಿದರು.

ಈ ವಂಶಸ್ಥರು ಇದ್ದ ಅರಮನೆಯೇ ಈ ವಾಡೆ. ಇಲ್ಲಿ ಸುತ್ತಲೂ ಎತ್ತರವಾದ ಗೋಡೆ, ಗೋಪುರಗಳಿವೆ. ಹುಡೆಗಳಿವೆ. ಈ ಪ್ರದೇಶ ಎತ್ತರದ ಸ್ಥಳದಲ್ಲಿ ನಿರ್ಮಾಣವಾಗಿದೆ. ಇಲ್ಲೇ ಇವರ ಕುಲದೇವಸ್ಥಾನವಿದೆ. ಇದನ್ನೇ ಕಾಡಸಿದ್ದೇಶ್ವರ ದೇವಾಲಯ ಎಂದು ಕರೆಯುವರು. ವಾಡೆಯಲ್ಲಿ ವಿಶಾಲವಾದ ಕಟ್ಟಡವಿದೆ. ಈ ಕಟ್ಟಡವು ಈ ಸಂಸ್ಥಾನದ ನ್ಯಾಯಾಲಯವಾಗಿತ್ತು. ಇದರ ಅಟ್ಟದ ಮೇಲೆ ಲಿಂಗರಾಜರು ದರ್ಬಾರು (ಕೋರ್ಟ್‌) ನಡೆಯುವಾಗ ಕೂಡುತ್ತಿದ್ದರು.

ಇದಕ್ಕೆ ಒಂದು ಪ್ರವೇಶದ್ವಾರವಿದೆ. ಈ ದ್ವಾರ ಕಮಾನಿನ ಆಕಾರದಲ್ಲಿದೆ. ಇದನ್ನು ಇಟ್ಟಿಗೆ ಗಾರೆಯಿಂದ ಕಟ್ಟಲಾಗಿದೆ. ನೆಲಮಾಳಿಗೆಯಲ್ಲಿ ಸುರಂಗ ಮಾರ್ಗವಿದೆ. ಈ ಮಾರ್ಗ ಸಂಕಮ್ಮನ ಭಾವಿಗೂ ಹಾಗೂ ಕಾಡಸಿದ್ದೇಶ್ವರ ದೇವಸ್ಥಾನಕ್ಕೂ ಹೋಗುವುದು.

 

) ಪಂಚಗೃಹ ಹಿರೇಮಠ:

ಶ್ರೀ ಷ.ಬ್ರ.ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಸದ್ಯದ ಪಂಚಗೃಹ ಹಿರೇಮಠದ ಪಟ್ಟಾಧ್ಯಕ್ಷರು.

ಈ ಮಠದ ಮೂಲ ಕತೃ ಷ.ಬ್ರ. ಲಿಂಗೈಕ್ಯ ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು. ಇವರು ಜೀವಂತ ಸಮಾಧಿ ಹೊಂದಿದರು. ಅವರ ಸಮಾಧಿ ಸ್ಥಳವೇ ಈ ಪಂಚಗೃಹ ಹಿರೇಮಠ.

ಕಟ್ಟಡದಲ್ಲಿ ಕಟ್ಟಿಗೆಯ ತೊಲೆ, ಕಂಭ, ಜಂತಿ, ಎಲ್ಲವುಗಳಲ್ಲಿ ಕುಸುರಿ ಕಲೆಗಳ ಆಗರವೇ ಇಲ್ಲಿದೆ. ಕೆದಿಗೆ ಎಲೆಗಳು ಸರಪಳಿಗಳು ಕಟ್ಟಿಗೆಯಲ್ಲಿಯೆ ಕೆತ್ತಲಾಗಿದೆ. ಅಷ್ಠ ದಿಕ್ಪಾಲಕರನ್ನು ಕೆತ್ತಲಾಗಿದೆ.

ಚಾಲುಕ್ಯರು ನಂತರ ಕೆಳದಿಯ ಶಿವಪ್ಪ ನಾಯಕನು ಈ ಮಠಕ್ಕೆ ೧೦೧ ಕೂರಿಗೆ ಅಂದರೆ ೪೦೪ ಎಕರೆ ಜಮೀನನ್ನು (ಭೂಮಿಯನ್ನು) ದಾನವಾಗಿ ನೀಡಿದನು.

ಈ ಮಠವು ಶ್ರೀ ಜಗದ್ಗುರು ಪಂಚಾಚಾರ್ಯರ ಗುರು ಪರಂಪರೆಗೆ ಒಳಪಟ್ಟ ವಾರಣಾಸಿಯಲ್ಲಿರುವ ಶ್ರೀಕಾಶಿ ಜ್ಞಾನ ಸಿಂಹಾಸನ ಮಹಾಸಂಸ್ಥಾನ ಪೀಠಕ್ಕೆ ಸಂಬಂಧಿಸಿದ ಶಾಖಾ ಮಠವಾಗಿದೆ. ಇಲ್ಲಿಯವರೆಗೆ ೨೩ ಮಠಾದೀಶರು ಆಗಿ ಹೋಗಿದ್ದಾರೆ. ಸದ್ಯದಲ್ಲಿ ೨೪ನೆಯ ಮಠಾದೀಶರಾದ ಶ್ರೀ ಷ.ಬ್ರ. ಸಿದ್ದೇಶ್ವರ ಶಿವಾಚಾರ್ಯರು ಇದರ ಉಸ್ತುವಾರೆ ನೋಡುತ್ತಿದ್ದಾರೆ. ೨೩ ಮಠಾದೀಶರ ಸಮಾಧಿ ಸ್ಥಳಗಳು ಇಲ್ಲಿ ನೋಡಲು ಸಿಗುತ್ತವೆ.

ಈ ಮಠವು ಮೂರು ಹಂತದಲ್ಲಿ ನಿರ್ಮಾಣವಾಗಿದೆ. ಕತೃ ಗುರುಗಳ ಗದ್ದುಗೆ, ೧೬ ಅಂಕಣದ ಸಭಾಗೃಹ, ಇದನ್ನೇ ಶಿವದೀಕ್ಷಾ ಮಂಟಪವೆಂದು ಕರೆಯುವರು. ಏಳು ಅಂಕಣದ ಮೊಗಶಾಲೆ ಇದೆ.

 

) ವಿರಕ್ತ ಪರಂಪರೆಯ ಶ್ರೀ ಗವಿಮಠ:

ನವಿಲುಗುಂದದ ನೆಲವು ಪ್ರಾಚೀನ ಕಾಲದಿಂದಲೂ ಪುಣ್ಯ ಪುರುಷರು ಅಡಿ ಇಟ್ಟಿರುವುದರಿಂದ ಪುಣ್ಯಕ್ಷೇತ್ರವೆನಿಸಿದೆ. ಧರ್ಮ ಕ್ಷೇತ್ರವೆನಿಸಿದೆ. ೧೬ನೇ ಶತಮಾನದಲ್ಲಿ ಆಗಿಹೋದ ಶ್ರೀ ತೋಂಟದ ಸಿದ್ದಲಿಂಗ ಶಿವಯೋಗಿಗಳ ಪುಣ್ಯ ಪರಂಪರೆಯ ಪವಾಡ ಪುರುಷ ಶ್ರೀ ಜಡೆಸ್ವಾಮಿಗಳು ತಪಸ್ಸು ಮಾಡಿದ ಗವಿ ಮಠವು ಗುಡ್ಡದ ಓರೆಯಲ್ಲಿದೆ.

ಜೈನ ಧರ್ಮದ ಗೌಡರು ಜಡೆ ಸ್ವಾಮಿಗಳು ತಪಸ್ಸು ಮಾಡುತ್ತಿದ್ದ ಗವಿಯಿಂದ ಅನತಿ ದೂರದಲ್ಲಿ ಭಾವಿಯನ್ನು ಅಗೆಸತೊಡಗಿದ್ದರು. ಎಷ್ಟು ಆಳ ಅಗೆದರೂ ನೀರು ಕಾಣಲಿಲ್ಲ. ಗವಿಯ ಹತ್ತಿರ ಧ್ಯಾನಾಸಕ್ತರಾದ ಸ್ವಾಮಿಗಳನ್ನು ಕಂಡರು. ಸ್ವಾಮಿಗಳು ಭಾವಿಯಲ್ಲಿ ಧ್ಯಾನ ಮಾಡುವುದಾಗಿ ಅವರನ್ನು ಮೇಲಕ್ಕೆ ಎತ್ತಿದಂತೆ ಗಂಗೆ ಪುಟ್ಟಿದೆದ್ದಳಂತೆ. ಆಗ ಗೌಡರು ಆ ಪ್ರದೇಶದ ಸುತ್ತಲಿನ ಪ್ರದೇಶವನ್ನು ದಾನವಾಗಿ ನೀಡಿದರು. ಆ ಸ್ಥಳದಲ್ಲಿ ತಲೆ ಎತ್ತಿದ ಮಠವೇ ಗವಿಮಠ. ಆ ಭಾವಿ ಇಂದಿಗೂ ಮಠದ ಆವರಣದಲ್ಲಿದೆ.

ಈ ಭವ್ಯ ಪರಂಪರೆಯಲ್ಲಿ ಆಗಿಹೋದ ಶ್ರೀ ಸಿದ್ಧಲಿಂಗ ಸ್ವಾಮಿಗಳ ನಂತರ ಶ್ರೀ ನಿ.ಪ್ರ. ಲಿಂಗೈಕ್ಯ ಬಸವಲಿಂಗ ಮಹಾಸ್ವಾಮಿಗಳು ನವಿಲುಗುಂದದ ಕೀರ್ತಿಯನ್ನು ಎಲ್ಲೆಡೆ ಪರಿಚಯಿಸಿದರು. ‘ಸರ್ವಧರ್ಮ ಸಮ್ಮೇಳನ’ ಮಾಡಿದರು. ಇವರ ನಂತರ ಬಸವರಾಜದೇವರು ಪಟ್ಟಾಧ್ಯಕ್ಷರಾಗಿ ಕಾರ್ಯ ನಡೆಸುತ್ತಿದ್ದಾರೆ.

 

ಶ್ರೀ ನಾಗಲಿಂಗ ಸ್ವಾಮಿಗಳ ಮಠ

ಜಾತ್ಯಾತೀತ ಮಹಿಮಾ ಪುರುಷರು ಅಜಾತ ನಾಗಲಿಂಗ ಮಹಾಸ್ವಾಮಿಗಳು ಪವಾಡ ಪುರುಷರು, ಗರಗದ ಮಡಿವಾಳೇಶ್ವರರು, ಶಿಶುವಿನಹಾಳದ ಸಂತ ಶರೀಫರು ಹುಬ್ಬಳ್ಳಿಯ ಶ್ರೀ ಸಿದ್ಧಾರೂಢರ ಸಮಕಾಲೀನರು.

ವಿಶ್ವಕರ್ಮ ಸಮಾಜದ ಸದ್ಗುರು ಯಯಾತಗಿರಿ ಸ್ವಾಮಿಗಳು ಇಲ್ಲಿ ಸ್ಥಾಪಿಸಿದ ಮೌನೇಶ್ವರ ಮಠವೇ ಮುಂದೆ ಸದ್ಗುರು, ಪರಮಹಂಸ, ಪವಾಡ ಪುರುಷ ಅಜಾತ ನಾಗಲಿಂಗ ಸ್ವಾಮಿಗಳ ನೆಲೆಯಾಗಿ ಅಜ್ಜನಮಠವೆಂದು ಪ್ರಸಿದ್ಧಿಯಾಗಿದೆ. ನಾಡಿನಲ್ಲಿ ಅನೇಕ ಪವಾಡಗಳನ್ನು ಮಾಡಿದವರು ಕ್ರಿಶ್ಚಿಯನ್‌. ಧರ್ಮ ಗ್ರಂಥ, ಬೈಬಲ್‌ಅಜ್ಜನ ಮಠದಲ್ಲಿದೆ. ಸಿದಿಗಿಯನ್ನು ಸ್ಮಶಾನದಿಂದ ತಂದು ಪಲ್ಲಕ್ಕಿಯನ್ನಾಗಿ ಮಾಡಿ ಅದರಲ್ಲಿ ಕುಳಿತು ಸಂಚರಿಸುತ್ತಿದ್ದರು. ಮುಸ್ಲಿಂ ಸಂಪ್ರದಾಯದ ಪಂಜಾಗಳನ್ನು ವೀರಭದ್ರ ದೇವರ ಮೂರ್ತಿಯನ್ನು ಮಠದ ಗವಿಯಲ್ಲಿ ಇಟ್ಟು ಪೂಜಿಸಿದರು. ಅದನ್ನು ಇಂದಿಗೂ ಕಾಣಬಹುದು.

ಶ್ರೀ ಮಠದಿಂದ ಐ.ಟಿ.ಐ ಕಾಲೇಜು, ಪ್ರೌಢಶಾಲೆ ಸಂಗೀತ ವಿದ್ಯಾಲಯಗಳು ನಡೆಯುತ್ತಿವೆ. ಈಗಿನ ಮಠವನ್ನು ನವೀಕರಿಸಲಾಗಿದೆ. ಮೇಲ್ಛಾವಣಿಯಲ್ಲಿ ಸುಂದರ ಕಲಾಕೃತಿಗಳನ್ನು ರಚಿಸಲಾಗಿದೆ. ಮಠದಲ್ಲಿ ನಾಗಲಿಂಗ ಸ್ವಾಮಿಗಳ ಐಕ್ಯ ಸ್ಥಳವನ್ನು ಕಾಣಬಹುದು.

ನಾಗಲಿಂಗ ಸ್ವಾಮಿಗಳು ಸು.ಕ್ರಿ.ಶ. ೧೮೧೧ರಲ್ಲಿ ರಾಯಚೂರ ಜಿಲ್ಲೆಯ ಸಿಂಧನೂರ ತಾಲೂಕಿನ ಜಾವಳಗೇರಿಯಲ್ಲಿ ಜನಿಸಿದರು. ಸು.ಕ್ರಿ.ಶ. ೧೮೮೧ ಜೂನ್‌೩೦ ರಂದು ಐಕ್ಯರಾದರು. ೬೯ ರಿಂದ ೭೦ ವರ್ಷ ಜೀವಿಸಿದ್ದರು.

 

ಅಖಿಲ ಭಾರತ ನೀರು ನಿರ್ವಹಣೆ ಸಂಶೋಧನಾ ಕೇಂದ್ರ ಬೆಳವಟಗಿ

ನವಿಲುಗುಂದದಿಂದ ನರಗುಂದದ ಕಡೆಗೆ ಹೋಗುವಾಗ ಕಣ್ಣಿಗೆ ಕಾಣುವ ಸ್ಥಳವೇ ಬೆಳವಟಗಿ ಕೃಷಿ ಕೇಂದ್ರ.

ಕಪ್ಪು ಮಣ್ಣಿನಲ್ಲಿ ನೀರು ನಿರ್ವಹಣೆಯ ಬಗ್ಗೆ ಸಂಶೋಧನೆ, ಪ್ರಾತ್ಯಕ್ಷಿಕೆಗಳನ್ನು ನಡೆಸಲಾಗುತ್ತಿದೆ. ಇಲ್ಲಿ ೫ ಜನ ವಿಜ್ಞಾನಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಇಲ್ಲಿ ಜಲ ಸಂಪನ್ಮೂಲ ಅಭಿವೃದ್ಧಿ, ಕೃಷಿ ಹೊಂಡ ರಚನೆ, ಜಲ ಸಂಪನ್ಮೂಲಗಳ ಸಮರ್ಥ ಬಳಕೆ, ಹನಿ ನೀರಾವರಿ ಮುಂತಾದವುಗಳ ಬಗೆಗೆ ತರಬೇತಿ ನೀಡಲಾಗುತ್ತಿದೆ.

ಈ ಕೇಂದ್ರವನ್ನು ೧೯೭೪ ರಲ್ಲಿ ೫೨.೫ ಎಕರೆ ಭೂಮಿಯಲ್ಲಿ ಸ್ಥಾಪಿಸಲಾಯಿತು. ಕರ್ನಾಟಕ ರಾಜ್ಯದಲ್ಲಿ ಒಂದೇ ಒಂದು ಕೇಂದ್ರ ಸ್ಥಾಪಿಸಲಾಗಿದೆ. ಇಲ್ಲಿ ಮಳೆ ಮಾಪನ ಕೇಂದ್ರವಿದೆ. ಭಾರತದಲ್ಲಿ ೨೫ ಕೇಂದ್ರಗಳಿವೆ ಅದರಲ್ಲಿ ಕರ್ನಾಟಕದಲ್ಲಿ ಇದು ಒಂದೇ ಒಂದು ಕೇಂದ್ರ ಬೆಳವಟಗಿಯಲ್ಲಿದೆ.

ಈ ಕೇಂದ್ರದಲ್ಲಿ ರೈತರಿಗೆ, ಅಧಿಕಾರಿಗಳಿಗೆ ಈ ಕೆಳಗಿನ ವಿಷಯಗಳಲ್ಲಿ ತರಬೇತಿ ನೀಡಲಾಗುತ್ತಿದೆ. ಎನ್‌.ಜಿ.ಓ ಪ್ರತಿನಿಧಿಗಳಿಗೆ ಸಹ ತರಬೇತಿ ನೀಡಲಾಗುತ್ತಿದೆ.

  • ಬೀಜೋತ್ಪಾದನೆ.
  • ರೋಗ ನಿರ್ವಹಣೆ, ಸಲಹೆ ನೀಡಲಾಗುತ್ತಿದೆ.
  • ಸಮಗ್ರ ಬೆಳೆ ನಿರ್ವಹಣೆ ಕೃಷಿ ಪದ್ಧತಿ, ಹೈನುಗಾರಿಕೆ, ಕೋಳಿಸಾಕಾಣೆ.
  • ಸಮಗ್ರ ಬೆಳೆ ನಿರ್ವಹಣೆ ಕೃಷಿ ಪದ್ಧತಿ.
  • ಎರೆಹುಳು ಗೊಬ್ಬರ ತಯಾರಿಕೆ.
  • ಹೈನುಗಾರಿಕೆ, ಕೋಳಿಸಾಕಾಣೆ.
  • ಸಮಗ್ರ ಬೆಳೆ ನಿರ್ವಹಣೆ ಕೃಷಿ ಪದ್ಧತಿ.
  • ರೋಗ ನಿರ್ವಹಣೆ, ಸಲಹೆ ನೀಡಲಾಗುತ್ತಿದೆ.

 

ನವಲಗುಂದ

ರವಾಮಿಲ್ಲು ನವಲಗುಂದ

ನವಿಲುಗುಂದವು ಕರ್ನಾಟಕದಲ್ಲಿಯೇ ಪ್ರಸಿದ್ಧ ಗೋಧಿ ರವೆಯನ್ನು ತಯಾರಿಸುವ ಕೈಗಾರಿಕೆಯನ್ನು ಹೊಂದಿದೆ.

ಮೊದಲು ಆನೆಗುಂದಿಯವರು ಊರ ಮಧ್ಯದಲ್ಲಿ ಚಿಕ್ಕ ರವೆ ತಯಾರಿಕಾ ಕೇಂದ್ರ ಸ್ಥಾಪಿಸಿದ್ದರು. ನಂತರ ಬೃಹತ್‌ಪ್ರಮಾಣದಲ್ಲಿ ಅಣ್ಣಿಗೇರಿ ರಸ್ತೆಯಲ್ಲಿ ದೊಡ್ಡ ಮಿಲ್‌ನ್ನು ಸ್ಥಾಪಿಸಲಾಗಿದೆ. ಮತ್ತೊಂದನ್ನು ನರಗುಂದ ರಸ್ತೆ ಕಡೆಗೆ ತಲೆ ಎತ್ತಿರುವ ರವೆ ಮಿಲ್‌ಪ್ರತಿದಿನ ೫೦೦ ಕ್ವಿಂಟಾಲ್‌ರವೆಯನ್ನು ಉತ್ಪಾದಿಸುತ್ತದೆ.

ಈ ಪ್ರದೇಶದಲ್ಲಿ ಗೋಧಿ ಹೆಚ್ಚು ಬೆಳೆಯುತ್ತಿರುವುದರಿಂದ ರೈತರಿಂದ ಗೋಧಿಯನ್ನು ಖರೀದಿಸಿ ಗೋಧಿ ಹಿಟ್ಟು, ಗೋಧಿ ರವೆ, ತಯಾರಿಸಲಾಗುತ್ತಿದೆ. ಇದರಿಂದ ಬಂದ ತವು ಹೈನದ ದನಗಳಿಗೆ ಆಹಾರವಾಗಿ ಪೂರೈಕೆಯಾಗುತ್ತಿದೆ. ಹೀಗೆ ಈ ಕೈಗಾರಿಕೆಯಿಂದ ನೂರಾರು ಕುಟುಂಬಗಳಿಗೆ ಉದ್ಯೋಗ ಕಲ್ಪಿಸಲಾಗಿದೆ.

 

ಚನ್ನಮ್ಮನ ಜಲಾಶಯ

ಲಿಂಗರಾಜ ದೇಸಾಯಿಯವರ ವಂಶಸ್ಥರಾದ ನೀಲಮ್ಮ ಹಾಗೂ ಚನ್ನಮ್ಮ, ಸಂಕಮ್ಮ ಇವರ ಹೆಸರಿನಲ್ಲಿ ಕಟ್ಟಿಸಿದ ಭಾವಿ ಹಾಗೂ ಕೆರೆಗಳು ಈ ಪ್ರದೇಶದ ಆಕರ್ಷಣೀಯ ಸ್ಥಳಗಳಾಗಿವೆ.

ದೇಸಾಯಿ ಮನೆತನದ ರಾಣಿಯರು ಈ ನೀಲಮ್ಮ ಮತ್ತು ಚನ್ನಮ್ಮರು ತಮ್ಮ ಹೆಸರಿನಲ್ಲಿ ಎರಡು ಕೆರೆಗಳನ್ನು ಕಟ್ಟಿಸಿ ಕೀರ್ತಿ ಗಳಿಸಿಕೊಂಡರು.

ಹಳೆಯ ಚನ್ನಮ್ಮನ ಕೆರೆಯನ್ನು ನಿರ್ಮಿಸಲಾಗಿದೆ. ಮಾಜಿ ಅರಣ್ಯ ಮಂತ್ರಿಗಳಾದ ಶ್ರೀ ಕೆ.ಎನ್‌.ಗಡ್ಡಿಯವರು ನವಲಗುಂದ ಪಟ್ಟಣಕ್ಕೆ ಕುಡಿಯುವ ನೀರಿನ ಸೌಲಭ್ಯಕ್ಕಾಗಿ ಸರ್ಕಾರದಿಂದ ನಾಗರೀಕರಿಂದ ಹಣ ಸಂಗ್ರಹಿಸಿ ವಿಶಾಲವಾದ ೪೮ ಎಕರೆ ಪ್ರದೇಶದಲ್ಲಿ ಜಲ ಹಾಗೂ ಜಲ ಶುದ್ಧೀಕರಣ ಕೇಂದ್ರ ಜಲಾಗಾರಗಳನ್ನು ನಿರ್ಮಿಸಿ ನವಲಗುಂದ ಪಟ್ಟಣಕ್ಕೆ ನೀರು ಕಲ್ಪಿಸುವ ಯೋಜನೆಯನ್ನು ಮಾಡಿಸಿರುವುದರಿಂದ ಪ್ರತಿ ೨ ದಿನಕ್ಕೆ ನಗರಕ್ಕೆ ನೀರು ಪೂರೈಸಲಾಗುತ್ತಿದೆ.

 

ಅಣ್ಣಿಗೇರಿ

ಅಮೃತೇಶ್ವರ ದೇವಾಲಯ ಅಣ್ಣಿಗೇರಿ

ಅಣ್ಣೀಗೇರಿಯ ಪ್ರಸಿದ್ಧ ದೇವಾಲಯವೇ ಅಮೃತೇಶ್ವರ ದೇವಾಲಯ ವಿಶಾಲ ಪ್ರಾಕಾರದ ಮಧ್ಯ ಪೂರ್ವಾಭಿಮುಖವಾಗಿದೆ. ಅದಕ್ಕೆ ಒಂದು ಗರ್ಭ ಗೃಹ, ಒಂದು ಅಂತರಾಳ, ಒಂದು ನವರಂಗ, ಒಂದು ಮಹಾಮಂಟಪವಿದೆ. ನವರಂಗಕ್ಕೆ ಒಂದು ಪ್ರವೇಶ ದ್ವಾರವಿದೆ. ಗರ್ಭಗೃಹದಲ್ಲಿ ಶಿವಲಿಂಗವಿದೆ. ಲಲಾಟ ಪಟ್ಟಿಯಲ್ಲಿ ಗಜಲಕ್ಷ್ಮಿಯನ್ನು ಚಿತ್ರಿಸಲಾಗಿದೆ.

ಮಹಾ ಮಂಟಪದಲ್ಲಿ ವಿಭಿನ್ನ ರೀತಿಯ ೨೬ ಕಂಬಗಳಿದ್ದು ಮಧ್ಯದ ಛತ್ತಿನ ಕಮಲವು ಅಲಂಕೃತವಾಗಿದೆ. ಮೂರು ಪ್ರವೇಶ ದ್ವಾರಗಳಿವೆ. ಪೂರ್ವದ ಪ್ರವೇಶ ದ್ವಾರ ಒಳಗಡೆ ನಂದಿ ಮಂಟಪವಿದೆ. ಇದನ್ನು ವಿಜಯನಗರ ಕಾಲದಲ್ಲಿ ನಿರ್ಮಿಸಲಾಗಿದೆ.

ಕ್ರಿ.ಶ. ೧೨೨೮ ರಲ್ಲಿ ನಿರ್ಮಿಸಿದ ಧರ್ಮೇಶ್ವರ ದೇವಾಲಯ ಅಮೃತೇಶ್ವರ ಗುಡಿಯ ಎಡಗಡೆ ಇದೆ. ಈ ದೇವಾಲಯದ ಪ್ರಾಂಗಣದಲ್ಲಿ ಒಂದು ಭಾವಿ ಇದೆ. ಹೊಯ್ಸಳ, ಯಾದವ ಮತ್ತು ವಿಜಯನಗರದ ಅರಸರ ಕಾಲದಲ್ಲಿ ದತ್ತಿ ನೀಡಿದ ಉಲ್ಲೇಖಗಳಿವೆ.

 

ಪಂಪನ ಜನ್ಮಸ್ಥಳ

ಪಂಪಕವಿಯು ಆದಿ ಕವಿ ಎಂದು ಪ್ರಸಿದ್ಧಿ ಪಡೆದ ಕವಿಯು. ಆರನೇ ಶತಮಾನದಲ್ಲಿ ಆಗಿ ಹೋದ ಕವಿಯು ಬನವಾಸಿಯ ಕುರಿತು “ಆರಂಕುಶ ವಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ” ಎಂದು ಹೇಳಿದ ಕವಿ ಕನ್ನಡದ ಬಗ್ಗೆ ಅನೇಕ ಕಾವ್ಯಗಳನ್ನು ರಚಿಸಿದ. ಈ ಮಹಾನ್‌ಕವಿಯು ಇಲ್ಲಿ ಜನಿಸಿದ ಕುರುಹು ಆಂದ್ರ ಪ್ರದೇಶದ ಕೆಲ ಶಾಸನಗಳಲ್ಲಿ ಕಂಡುಬಂದಿದೆ.

ಪಂಪಕವಿಯ ತಾಯಿ ತವರೂರು ಈ ಅಣ್ಣಿಗೇರಿ. ಕವಿಯ ವಂಶಸ್ಥರು ಅವರು ಜನಿಸಿದ ಮನೆ ಇಂದಿಗೂ ನೋಡಲು ಕಾಣಸಿಗುತ್ತದೆ.

ಶ್ರೀ ರಾಜೇಂದ್ರ ಭೀಮಪ್ಪಯ್ಯ ದೇಶಪಾಂಡೆಯವರು ಪಂಪನ ವಂಶಸ್ಥರು. ಇವರ ಪೂರ್ವಜರು ಭೀಮಪ್ಪಯ್ಯ, ನಾಗಪ್ಪಯ್ಯ, ಚಂದ್ರಪ್ಪಯ್ಯ ಇವರಲ್ಲಿ ಭೀಮಪ್ಪಯ್ಯನವರ ಹೆಸರನ್ನು ಈ ವಂಶಸ್ಥರಿಗೆ ಇಡಲಾಗಿದೆ. ಸಾಹಿತಿಗಳಾದ ಹಂಪಾ ನಾಗರಾಜಯ್ಯರವರು ಈ ವಂಶಸ್ಥರ ಬಗ್ಗೆ ಸಂಶೋಧನೆ ಮಾಡಿದ್ದಾರೆ. ನಾಲ್ಕು ನೂರು ವರ್ಷದ ಹಿಂದೆ ನಿರ್ಮಿಸಿದ ವಾಡೆ ಇಂದಿಗೂ ನೋಡಲು ಸಿಗುತ್ತದೆ. ಇದೇ ಪಂಪನ ತಾಯಿ ತವರು ಮನೆ ಎಂಬ ಪ್ರತೀತಿ ಇದೆ.

 

ಲಕ್ಕುಂಡಿ

ಗದಗ ಜಿಲ್ಲೆಯ ಗದಗ ತಾಲೂಕಿನ ಊರು ಲಕ್ಕುಂಡಿ. ರಾಷ್ಟ್ರಕೂಟರು ಆಳಿದಂಥ ಸ್ಥಳ. ಇವರ ಕಾಲದಲ್ಲಿ ಲಕ್ಕುಂಡಿಯಲ್ಲಿ ಮುತ್ತು, ರತ್ನ, ಹವಳ, ವಜ್ರಗಳನ್ನು, ಚಿನ್ನ, ಬೆಳ್ಳಿಗಳನ್ನು ಹೇರಳವಾಗಿ ಮಾರುತ್ತಿದ್ದರಂತೆ. ಬೆಳ್ಳಿ, ಚಿನ್ನದ ನಾಣ್ಯಗಳ ಟಂಕಶಾಲೆ ಇಲ್ಲಿ ಸ್ಥಾಪಿಸಲಾಗಿತ್ತಂತೆ.

ಈ ಪ್ರದೇಶವು ಜೈನ ಮತ್ತು ಶೈವ ಪರಂಪರೆಯ ತಾಣವಾಗಿದೆ. ದೇಗುಲಗಳ ಸಂಗಮ ವಾಸ್ತು ಶಿಲ್ಪದ ಪ್ರತಿಬಿಂಬ ಇಲ್ಲಿದೆ.

೮ನೇ ಶತಮಾನದಿಂದ ೧೨ನೇ ಶತಮಾನದಲ್ಲಿನ ದೇವಾಲಯಗಳು ಇಲ್ಲಿವೆ. ಸಾವಿರಾರು ವರ್ಷಗಳ ಇತಿಹಾಸವಿರುವ ಲಕ್ಕುಂಡಿಯಲ್ಲಿ ೧೦೧ ಭಾವಿಗಳು ಇಂದಿಗೂ ಕಾಣಸಿಗುತ್ತವೆ.

ಇಲ್ಲಿ ಮಲ್ಲಿಕಾರ್ಜುನ, ವೀರಭದ್ರ, ಮಾಣಿಕೇಶ್ವರ, ನಾನೇಶ್ವರ, ಕಾಶಿ ವಿಶ್ವನಾಥ, ಸೂರ್ಯನಾರಾಯಣ, ಬ್ರಹ್ಮ, ಸೂರ್ಯನಾರಾಯಣರ ದೇವಾಲಯಗಳಿವೆ. ಜಿನಾಲಯಗಳಿವೆ.

ಚಾಲುಕ್ಯ, ಕಳಚೂರಿ, ಸೆವಣ, ಹೊಯ್ಸಳ ಮತ್ತು ರಾಷ್ಟ್ರಕೂಟರ ಆಡಳಿತದಲ್ಲಿ ಲಕ್ಕುಂಡಿ ಗುರುತಿಸಿಕೊಂಡಿದೆ.

ಹಳೆಯ ಕಾಲದ ಅತ್ಯಧಿಕ ದೇವಾಲಯಗಳನ್ನು ಹೊಂದಿರುವ ರಾಜ್ಯದ ಏಕೈಕ ತಾಣ ಲಕ್ಕುಂಡಿಯಾಗಿದೆ. ದಾನ ಚಿಂತಾಮಣಿ ಅತ್ತಿಮಬ್ಬೆಯ ಸ್ಥಳ ಇದಾಗಿದೆ. ೧ ಸಾವಿರ ಮೆಟ್ಟಿಲುಗಳ ಪುಷ್ಕರಣಿ ಇಲ್ಲಿದೆ.