ಪ್ರತಿಸಾರಿ ಹುಬ್ಬಳ್ಳಿ ಧಾರವಾಡಕ್ಕೆ ಹೋಗುವಾಗಲೆಲ್ಲಾ ದಂತಿಯವರೊಂದಿಗೆ ಜಗಳ.  ಬೆಂಗಳೂರಿನ ಸೀಬೆ ಬಲು ರುಚಿ.  ಅದು ಕವಿಗಳ ಪದ್ಯಗಳಲ್ಲೂ ಬಂದಿದೆ ಎಂದರೆ ದಂತಿಯವರು ಒಪ್ಪುವುದೇ ಇಲ್ಲ.  ನವಲೂರಿನ ಪೇರಲವೇ ಹೆಚ್ಚು ರುಚಿ.  ಬೇಂದ್ರೆಯವರೂ ಇದನ್ನು ಹೇಳಿದ್ದಾರೆ ಎನ್ನುವ ಅಭಿಮಾನ, ಹೆಗ್ಗಳಿಕೆ.

ಅದರಲ್ಲೂ ಹುಬ್ಬಳ್ಳಿಯಿಂದ ಹೊರಟು ಧಾರವಾಡಕ್ಕೂ ಮೊದಲು ಸಿಗುವ ರೈಲ್ವೇ ಸೇತುವೆ ಬಳಿಯಲ್ಲಿ  ಮಾರುವ ಬುಟ್ಟಿ ಬುಟ್ಟಿ ಪೇರಲವನ್ನು ತಿನ್ನಿಸಿ, ಪ್ರತಿವರ್ಷವೂ ಇದೇ ರುಚಿಯಾಗಿದೆ ಎನ್ನುವವರೆಗೂ ಬಿಡುವುದಿಲ್ಲ.

ಧಾರವಾಡದ ಫೇಡೆಯ ಎದುರು ಇದು ಎಲೆಮರೆಯ ಕಾಯಾಗಿದೆ. ದಾರಿ ಬದಿಯಲ್ಲಿಯೇ ಕೂಗಿ ಕರೆದರೂ ಯಾರಿಗೂ ಅತ್ತಿತ್ತ ನೋಡುವಷ್ಟು ಸಮಯವಿಲ್ಲ.

ಇದು ತೀರಾ ದೊಡ್ಡ ದೊಡ್ಡ ಕಾಯಿಗಳೇನಲ್ಲ.  ಮುಷ್ಠಿಯಲ್ಲಿ ಹಿಡಿಯುವಷ್ಟು ದೊಡ್ಡದು.  ಚಿಕ್ಕದು ಜವಾರಿ. ರುಚಿ ಸಿಹಿ.  ಬೀಜ ಗಟ್ಟಿ.  ದೊಡ್ಡದು ಹೈಬ್ರಿಡ್‌.  ಅಷ್ಟೇನು ಸಿಹಿ ಇಲ್ಲ.  ಬೀಜ ಮೃದು ಎನ್ನುತ್ತಾರೆ ಮಲ್ಲಪ್ಪ ನವಿಲೂರ.  ತಂದೆಯ ಕಾಲದಿಂದಲೂ ಇದ್ದ ತೋಟ.  ಹೀಗಾಗಿ ಜವಾರಿಯೇ ಹೆಚ್ಚು.  ಈಗಿನವರೆಲ್ಲಾ ಹೈಬ್ರಿಡ್‌ ಹಾಕುತ್ತಿದ್ದಾರೆ ಎಂದೂ ಹೇಳುತ್ತಾರೆ.

ಬೀಜದಿಂದ ಮಾಡಿದ ಗಿಡಗಳು ಮರಗಳಾಗಿವೆ.  ಕೆಲವು ಸರಿಯಾಗಿ ಚಾಟ್ನಿ ಮಾಡಿದ್ದರಿಂದ ಹರಡಿಕೊಂಡಿವೆ.  ಎಕರೆ ಒಂದರಲ್ಲಿ ಸುಮಾರು ನೂರು ಗಿಡಗಳಿವೆ.

ಇಲ್ಲಿನ ಮಣ್ಣು ಕೆಂಪು.  ಮೂರು ಅಡಿ ಆಳ, ಅಗಲ ಉದ್ದದ ಗುಂಡಿ ತೆಗೆದು ಸುಮಾರು ೧೫ ಅಡಿ ಅಂತರದಲ್ಲಿ ಗಿಡಗಳ ನಾಟಿ.  ಸುಮಾರು ಮೂರು ವರ್ಷಗಳವರೆಗೆ ದಿನಾಲೂ ಒಂದು ಬಿಂದಿಗೆ ನೀರು ಕೊಟ್ಟರೆ ಸಾಕು.  ನಾಲ್ಕನೇ ವರ್ಷಕ್ಕೆ ಫಸಲು.  ಆಗ ಮೂರು ಅಡಿ ಎತ್ತರದವರೆಗಿನ ಕೊಂಬೆಗಳನ್ನೆಲ್ಲಾ ಕತ್ತರಿಸಿದರೆ ಆಯಿತು.  ಗಿಡ ತಾನೇ ಹರಡಿಕೊಳ್ಳುತ್ತದೆ.

ವರ್ಷಗಳು ಕಳೆದಂತೆ ಹಣ್ಣಿನ ಪ್ರಮಾಣದಲ್ಲಿ ಹೆಚ್ಚಳ.  ಹತ್ತನೇ ವರ್ಷಕ್ಕೆ ಸಾವಿರ ಹಣ್ಣುಗಳು ಗ್ಯಾರಂಟಿ.  ವರ್ಷಕ್ಕೆ ಎರಡು ಫಸಲು.  ಬೇಸಿಗೆಯ ಫಸಲಿಗೆ ರುಚಿ ಹೆಚ್ಚು.  ಮಳೆ ಬಿದ್ದಕೂಡಲೇ ಕೊಟ್ಟಿಗೆ ಗೊಬ್ಬರ ಹಾಗೂ ಉಪ್ಪು ಸೇರಿಸಿ ಗಿಡಗಳ ಸುತ್ತಲೂ ಮಣ್ಣು ಏರಿಸಿ ಮಡಿ ಮಾಡಬೇಕು.

ಆಲಿಕಲ್ಲು ಬಿದ್ದರೆ ಹೂವೆಲ್ಲಾ ಉದುರಿಹೋಗುತ್ತದೆ.  ಹಣ್ಣಿನ ಮೇಲೆ ಕಪ್ಪುಚುಕ್ಕೆ ಬೀಳುತ್ತದೆ.  ಆದರೆ ಜವಾರಿಗೆ ಈ ಯಾವ ತೊಂದರೆಯೂ ಇಲ್ಲ.

ಹಣ್ಣನ್ನು ಕಳಿತ ಮೇಲೂ ಐದು ದಿನಗಳ ಕಾಲ ಇಡಬಹುದು.  ಮಳೆಗಾಲದಲ್ಲೂ ಹಣ್ಣಿನೊಳಗೆ ಹುಳುಗಳಾಗದು.

ಜವಾರಿ ಗಿಡಗಳು ೩೦ ವರ್ಷಗಳವರೆಗೆ ಅತ್ಯಧಿಕ ಫಸಲು ನೀಡುತ್ತವೆ. ಆಮೇಲೆ ಫಸಲು ಕಡಿಮೆಯಾಗುತ್ತದೆ.  ಆಗ ಸುಮಾರು ಎರಡು ಅಡಿ ಬಿಟ್ಟು ಮರವನ್ನು ಕಡಿಯಬೇಕು.  ಮಳೆಗಾಲ ಕಳೆಯುತ್ತಿದ್ದಂತೆ ಹತ್ತಾರು ಕಂದುಗಳು ಎದ್ದಿರುತ್ತವೆ.  ಅವುಗಳಲ್ಲಿ ಬಲಿಷ್ಠವಾದುದನ್ನು ಉಳಿಸಿಕೊಂಡು ಉಳಿದದ್ದನ್ನು ಕತ್ತರಿಸಿ ಹಾಕಬೇಕು.  ಮತ್ತೆ ಮೂರು ವರ್ಷಕ್ಕೆ ಉತ್ತಮ ಫಸಲು ನೀಡತೊಡಗುತ್ತದೆ.

“ಆದರೆ ಹೈಬ್ರಿಡ್‌ ಆಸೆಯಲ್ಲಿ ಜವಾರಿಗಳು ಕಾಣೆಯಾಗೈತ್ರಿ” ಎನ್ನುತ್ತಾರೆ ತುಕಾರಾಮ ಗಂಗಾರಾಮ ಕೋಳಿ.  ಅಷ್ಟೇ ಅಲ್ಲ, ನವಲೂರಿನಲ್ಲಿ ಪೇರಲ ತೋಟವೇ ಕಡಿಮೆಯಾಗಿದೆ.

ಪೇರಲಕ್ಕೆ ಗುಬ್ಬಿ, ಬಾವಲಿಗಳು ಹಾಗೂ ಗಿಣಿಗಳ ಕಾಟ ಜಾಸ್ತಿ.  ಆದರೆ ಅವುಗಳ ನಿವಾರಣೆಗೆ ಇವರಾರೂ ಶ್ರಮಪಟ್ಟಿಲ್ಲ.  ತೋಟಗಳು ಕಡಿಮೆಯಾದಂತೆ ಅವುಗಳ ಸಂಖ್ಯೆಯೂ ಕಡಿಮೆಯಾಗಿದೆ ಎನ್ನುತ್ತಾರೆ.  ಆದರೆ ಹೈಬ್ರಿಡ್‌ ಪೇರಲೆಗೆ ಸಿಂಪಡಿಸುವ ರಾಸಾಯನಿಕ ವಿಷಗಳೇ ಅವುಗಳ ನಾಶಕ್ಕೆ ಕಾರಣ ಎಂದು ಇಲ್ಲಿನ ರೈತರಿಗೆ ಗೊತ್ತಿಲ್ಲ.

ನವಲೂರು ಪೇರಲಕ್ಕೆ ಬೆಲೆ ಜಾಸ್ತಿ.  ಹಣ್ಣಿಗೊಂದು ರೂಪಾಯಿ.  ಆದರೆ ರೈತರಿಗೆ ಹತ್ತು ಹಣ್ಣುಗಳಿಗೆ ಐದು ರೂಪಾಯಿ ಸಿಗುತ್ತದೆ.  ಪೇಟೆಯಲ್ಲಾದರೆ ಹಣ್ಣಿಗೆ ಎರಡು-ಮೂರು ರೂಪಾಯಿಗಳು.

ಹೆಚ್ಚಿನ ಪೇರಲೆ ಬೆಳೆಯುವ ರೈತರು ಗೇಣಿಗೆ ಕೃಷಿ ಮಾಡುವವರು.  ಕೆಲವರು ದಿನಾಲೂ ಕೊಯ್ದು ಮಾರಾಟಕ್ಕೆ ಒಯ್ಯುತ್ತಾರೆ.  ಕೆಲವರು ಮರವನ್ನೇ ಗುತ್ತಿಗೆಗೆ ಕೊಡುತ್ತಾರೆ.  ಜವಾರಿಯಾದರೆ ಮರಕ್ಕೆ ಮುನ್ನೂರು ರೂಪಾಯಿಗಳವರೆಗೆ ಸಿಗುತ್ತದೆ.  ಎಕರೆಗೆ ಸುಮಾರು ೨೫ ಸಾವಿರದಿಂದ ೩೦ ಸಾವಿರ ರೂಪಾಯಿಗಳವರೆಗೆ ಆದಾಯ ಸಿಗುತ್ತದೆ.  ಗೊಬ್ಬರ ಹಾಗೂ ಇತರ ಕೆಲಸಗಳಿಗೆ ಸುಮಾರು ಎಂಟರಿಂದ ಹತ್ತು ಸಾವಿರ ರುಪಾಯಿಗಳವರೆಗೆ ಖರ್ಚಾಗುತ್ತದೆ.  ಜೊತೆಗೆ ಗೇಣಿಯನ್ನೂ ಕಳೆದರೆ ಹತ್ತರಿಂದ ಹದಿನೈದು ಸಾವಿರ ರೂಪಾಯಿಗಳವರೆಗೆ ಲಾಭ.

ನವಲೂರು ಪೇರಲವನ್ನು ಈಗ ಬೇರೆ ಕಡೆಗಳಲ್ಲೂ ಬೆಳೆಯುತ್ತಾರೆ.  ಇದು ರಫ್ತು ಮಾಡಲು ಯೋಗ್ಯವೆನ್ನುವ ಹಣೆಪಟ್ಟಿ ಹೊಂದಿವೆ.  ಆದರೆ ನವಲೂರಿನಲ್ಲಿ ಬೆಳೆಯುತ್ತಿರುವ ಪೇರಲವಂತೂ ಹುಬ್ಬಳ್ಳಿ, ಧಾರವಾಡ ಹೆಚ್ಚೆಂದರೆ ಶಿವಮೊಗ್ಗದವರೆಗೆ ಪಾದ ಬೆಳೆಸಿದೆ.  ಹಾಗಂತ ಬೆಂಗಳೂರಿನಲ್ಲೂ ಹುಬ್ಬಳ್ಳಿ ಮಂದಿಗೆ ಇದು ನವಲೂರಿನಿಂದಲೇ ಬಂದ ಪೇರಲ ಎಂದು ಮಾರುವವರೂ ಇದ್ದಾರೆ.

ಬೇಸಿಗೆಯಲ್ಲಿ ಹುಬ್ಬಳ್ಳಿ, ಧಾರವಾಡದ ಕಡೆ ಹೋದರೆ ನವಲೂರಿನಲ್ಲಿಳಿದು ಪೇರಲ ತಿನ್ನದೇ ಬರಬೇಡಿ.  ಸೆಪ್ಟೆಂಬರ್‌, ಅಕ್ಟೋಬರ್‌ಗಳಲ್ಲಾದರೆ ಅಪ್ಪಟ ಜವಾರಿ ಹಣ್ಣೇ ಸಿಗುತ್ತದೆ.