ದೇವರ ಮಕ್ಕಳೆ ಎಲ್ಲರು ಏಳಿ,
ಬೆಳ್ಳಗೆ ಬೆಳಗಾಯಿತು ಬೇಗೇಳಿ!
ಮೂಡಣ ದೆಸೆಯಲಿ ಬಾನಿನ ನೀರೆ
ಪೊಸವೇಟದಿ ನಾಚುತ ಕೆಂಪೇರೆ
ನೇಸರು ಬರುವನು ಬೆಟ್ಟವನೇರಿ
ಭೂಮಿಗೆ ಬಾಳಿನ ಬೆಳಕನು ಬೀರಿ!
ಹೊಂಬಿಸಿಲಪ್ಪಿಹ ಬನ ಬನದಲ್ಲಿ
ನನೆಕೊನೆಯೇರಿಹ ಮರ ಮರದಲ್ಲಿ
ರೆಕ್ಕೆಯ ರಿಸಿಗಳು ಮುದವನು ತಾಳಿ
ಸಾಮಗಾನದಲಿ ಕರೆವರು ಕೇಳಿ!
ದೇವರ ಮಕ್ಕಳೆ ಎಲ್ಲರು ಏಳಿ?
ಬೆಳ್ಳಗೆ ಬೆಳಗಾಯಿತು ಬೇಗೇಳಿ!

ಹೊಸ ದಿನವೈತಂದಿದೆ ನಿಮಗಾಗಿ;
ಹೊಸ ಸೊಬಗಿಳೆಗಿಳಿದಿದೆ ನಿಮಗಾಗಿ;
ಹೊಸ ಹೂವುಗಳರಳಿವೆ ನಿಮಗಾಗಿ;
ಕರೆ ಕರೆವುವು ನಿಮ್ಮನು ತಲೆದೂಗಿ!
ಪಸುರಲಿ ಪೊಳೆವೈಕಿಲ್ವನಿಮಾಲೆ,
ಬಣ್ಣದ ಚಿಟ್ಟೆಗಳಲೆಯುವ ಲೀಲೆ,
ಮೊರೆ ಮೊರೆವಳಿಗಳ ಮಂಜುಳ ಗಾನ,
ಸಗ್ಗವು ಬುವಿಗೊಲಿದಿತ್ತಿಹ ದಾನ!
ಸೊಬಗೆಂಬುದು ಲೋಕದ ಸಿರಿಗಣ್ಣು!
ನನ್ನಿಗೆ ಸೊಬಗೇ ನಚ್ಚಿನ ಹೆಣ್ಣು!
ದೇವರ ಮಕ್ಕಳೆ ಎಲ್ಲರು ಏಳಿ;
ಬೆಳ್ಳಗೆ ಬೆಳಗಾಯಿತು ಬೇಗೇಳಿ!

ನಿಮ್ಮೆದೆ ತಾಳವ ಮುದದಲಿ ಬಡಿದು,
ನಿಮ್ಮೆದೆ ಬೀಣೆಯ ತಂತಿಯ ಮಿಡಿದು,
ಬನಗಳ ತೊರೆಗಳ ಗಾನವ ಹಾಡಿ,
ತಳಿರಿನ ತೆರೆಗಳ ಕುಣಿತವ ಮಾಡಿ,
ಹಸುರಲಿ ಕುಣಿಯುತ ಹಾಡುತ ಬನ್ನಿ;
ತೇಲುತ ಚಿಮ್ಮುತ ನಲಿದೈತನ್ನಿ!
ದೇವರ ಗುಡಿಯಿದೆ ನಿಮ್ಮೊಡಲಲ್ಲಿ;
ಮೇಣ್ ಅವನಡಿಯಿದೆ ನಿಮ್ಮೆದೆಯಲ್ಲಿ.
ಇಂದಿನ ಜಗದುಲ್ಲಾಸವು ನೀವೇ.
ನಾಳೆಯ ಮುಂದಿನ ಜೀವವು ನೀವೇ.
ದೇವರ ಮಕ್ಕಳೆ ಎಲ್ಲರು ಏಳಿ!
ಬೆಳ್ಳಗೆ ಬೆಳಗಾಯಿತು ಬೇಗೇಳಿ!