ಸೋತುಬಂದೆನೊ, ಗುರುವೆ, ನಿನ್ನ ಬಳಿಗೆ!
ಸೋತ ಜೀವವನಾತುಕೋ ಒಂದು ಗಳಿಗೆ!

ಅರಿಯ ಹಿರಿಸರಳು ಮರುಮೊನೆಗೊಂಡ ಗಾಯದಲಿ
ಸುರಿಯುತಿದೆ ತೊರೆಯಂತೆ ಬಿಸಿನೆತ್ತರು;
ಗಿರುಗಿರನೆ ಗಾಳಿಯಲಿ ತಿರುಗುತಿಹ ಸರಳಗರಿ
ಕೊರೆಯುತಿಹುದೆದೆಯಲ್ಲಿ ಉರಿಹೊತ್ತಿಸಿ!

ಎತ್ತ ನೋಡಿದರೆನಗೆ ಆಶ್ರಯವೆ ತೋರದಿದೆ;
ಇತ್ತು ಕೃಪೆಯಾಶ್ರಮದಿ ತಾವನೆನಗೆ
ಹೆತ್ತ ಕಂದನ ಬಗೆಯ ಹೊತ್ತ ದುಗುಡವ ಹರಿಸಿ
ಮತ್ತೆ ನನ್ನನು ಕಳುಹೊ ರಣರಂಗಕೆ!

ಗೌರವ ರಣಾಂಗಣದಿನಳುಕಿ ಬಂದವನಲ್ಲ,
ಪೌರುಷ ವಿಹೀನತೆಯ ಪಾಪಿಯಲ್ಲ;
ಘೋರ ಸಂಗ್ರಾಮದಿಂ ಬಿಡುತೆ ಬೇಡುವನಲ್ಲ,
ವೈರಿಯನು ಗೆಲ್ಲದೈತರುವನಲ್ಲ!