ಮೂಡುದೆಸೆಯೊಳಾಡಿಯಾಡಿ ಮೂಡಿ ಬರುವಳು,
ನಲಿದಾಡಿ ಬರುವಳು!
ಮೆಲು ಮೆಲ್ಲನೆ ಮೇಲೇರುತ ನೋಡು ಬರುವಳು,
ಉಷೆ ಮೂಡಿ ಬರುವಳು!

ಕುರುಡಿರುಳಿನ ಕರಿಹೊದಿಕೆಯ ತಿರೆ ಮೆಲ್ಲನೆ ತೆರೆಯುತಿಹಳು,
ಹೊಸ ಬನಗಳ ಹಸುರುಡುಗೆಯ ಹಿಮಮಣಿಗಳು ನಲಿಯುತಿಹವು;
ತಂಗಾಳಿಯು ತಳಿರಮೇಲೆ ಸುಳಿಸುಳಿದಲೆದಡಿಯನಿಟ್ಟು
ಮಧುಪಾನದಿ ಮೈಮರೆತಿಹ ಕಾಮುಕನೊಲು ಕುಣಿಯುತಿಹುದು!

ಬಾಂದಳದಲಿ ಚಲಿಸದಿರುವ ತುಂಡುಮುಗಿಲ ಹಿಂಡುಗಳಿಗೆ
ಅನುರಾಗದಿ ಚಿಮುಚಿಮುಕಿಸಿ ನವಮೋಹದ ಓಕುಳಿಯನು
ತಮದೆವೆಗಳ ತೆರೆತೆರೆಯುತ ಹೊಂಬೆಳಕಿನ ಮಳೆಗರೆಯುತ
ಚೈತನ್ಯದ ಸೌಂದರ್ಯದ ನವಜೀವನ ರಸವ ಚೆಲ್ಲಿ!

ಸವಿಗೊರಲಿನ ಇಂಚರದಲಿ ಶುಕ ಪಿಕಗಳು ಕರೆಯುತಿಹವು!
ಮಿಳಿರಾಡುವ ತರುಲತೆಯಲಿ ಅರಳಿದಲರು ಮೆರೆಯುತಿಹವು!
ಬನ ಬನದಲಿ ಸುಮಸುಮದಲಿ ಅಳಿಯಾವಳಿ ಮೊರೆಯುತಿಹುದು!
ಸಂತಸದಲಿ ತಿರೆಯು ಉಷೆಗೆ ಸೊಗದ ಬರವ ಬಯಸುತಿಹುದು!