ಎನಿತು ದಿನ ನಿನ್ನ ನಾನೆದುರುನೋಡಲಿ?
ನಿನ್ನನಗಲಿ, ಕೆಳದಿ, ಕವಿತೆ, ಬೆಂದು ಬಾಡಲಿ?

ಮೂಕನಾದ ವಾಗ್ಮಿಯಂತೆ, ಗಾನವುಳಿದ ವೀಣೆಯಂತೆ,
ನುಡಿಯ ಬಡತನದಲಿ ಭಾವ ಹೊಮ್ಮಲರಿಯದೆ,
ಬಲೆಗೆ ಬಿದ್ದ ಸಿಂಗದಂತೆ, ಪಂಜರದ ವಿಹಂಗದಂತೆ,
ಹೊರಡಲೆಳಸಿ, ಹೊರಳಿ, ಕೆರಳಿ, ನರಳುತಿರುವುದು.

ಕೆಂಪು ಬಿಸಿಲಿನಲ್ಲಿ ಮಿಂದ ಹೊಲಗಳೆಲ್ಲ ಹಸುರಿನಿಂದ
ಹಿಗ್ಗಿ ಮಂದಹಾಸದಿಂದ ನಲಿಯುತಿರುವುವು!
ಬನದ ಮೌನದಿಂದ ಉಕ್ಕಿ, ಬನದ ತಳಿರ ನಡುವೆ ಸಿಕ್ಕಿ
ಚಿಮ್ಮುವಿನಿದು ದನಿಯ ಹಕ್ಕಿ ಕರೆಯುತಿರುವುದು!

ತೆರೆಯ ನಿರಿಯ ಹಿರಿಯ ಕೆರೆಯನಪ್ಪಿ ನಲಿವ ಹಸುರು ಕರೆಯ
ಚೆಲ್ವಿನಿಂದ ಮೆರೆವ ತಿರೆಯ ನೋಡಲೆದೆಯಲಿ
ತಾಯ ತೋಳ ತಕ್ಕೆಯಿಂದ ಬಿಡಿಸಿಕೊಳ್ಳಲೆಳಸಿ, ಕಂದ
ಬರಿದೆ ಹೋರುವಂದದಿಂದ ಭಾವ ಹೋರ್ವುದು!