ಸವಿನುಡಿಯ ಸಿರಿಗುಡಿಯ
ಕಟ್ಟುವರು ನಾವು;
ಹೊಂಗನಸುಗಳ ಮುಡಿಯ
ಮುಟ್ಟುವರು ನಾವು.
ಸಿಡಿಲು ಕೆಮ್ಮಿಂಚುಗಳ
ಕಡಲು ಬನ ಬಾನುಗಳ
ಒಡಹುಟ್ಟುಗಳು ನಾವು,
ಗುಟ್ಟುಗಳು ನಾವು.
ಪೊಡವಿಯನು ತಲ್ಲಣಿಪ
ಹುಚ್ಚುಗಳು ನಾವು!

ಸೊನ್ನೆಯಲಿ ಸಗ್ಗವನು
ಕೆತ್ತುವರು ನಾವು;
ಶೂನ್ಯದಲಿ ಪೂರ್ಣತೆಯ
ಬಿತ್ತುವರು ನಾವು.
ನಮ್ಮ ಇಂದಿನ ಕನಸು
ನಿಮ್ಮನಾಳೆಯ ಮನಸು;
ನಮ್ಮ ಇಂದಿನ ಹುಚ್ಚೆ
ಮುಂದೆಲ್ಲರಿಚ್ಚೆ!
ನಮ್ಮುಸಿರೊಳಿದೆ ಕಿಚ್ಚು,
ನಾವಿಳೆಯ ನೆಚ್ಚು!

ಕಬ್ಬಿಗರು ವಾಗೈಂದ್ರ
ಜಾಲಿಕರು ನಾವು;
ನಮ್ಮ ನುಡಿಮಾಯೆಯಿಂ
ಬದುಕುವುದು ಸಾವು!
ಮಸಣದಿಂ ಮೂಡುವುವು,
ಮರಳಿ ಮಾತಾಡುವುವು,
ಹಳೆಯ ವಾಣಿಗಳೆಲ್ಲ
ಯುಗ ಯುಗಗಳೆಲ್ಲ!
ಹಿಂದು ಮುಂದಿಂದುಗಳು
ಎರಡರಿವುದಿಲ್ಲ!

ಸಿರಿ ಮರಳಿ ಮೆರೆಯುವುದು
ದಶರಥನ ಪುರಿಯು;
ಇನ್ನೊಮ್ಮೆ ಬೇಯುವುದು
ಲಂಕಾ ನಗರಿಯು!
ವಾರಿಧಿಯ ಲಂಘಿಪನು
ಮಾರುತಿಯು ಮೇಣೊಮ್ಮೆ,
ಧರಣಿಜೆಯ ದಶಶಿರನು
ಮರಳಿ ಸೆರೆಗೈದು
ಕೆಡೆಯುವುವು ಕದನದಲಿ
ತಲೆಗಳೀರೈದು!

ಸಮರದಲಿ ಭೇರಿಯನು
ಹೊಯ್ಯುವರು ನಾವು;
ಸಂಧಿಯ ತುತೂರಿಯನು
ದನಿಗೈವರಾವು.
ಲತೆಯು ಅಸಿಯಾಗುವುದು,
ಅಸಿಯು ಲತೆಯಾಗುವುದು,
ನಾವೆಳಸಿದಂತೆಮ್ಮ
ಸವಿಯಿಚ್ಚೆಯಂತೆ!
ಮಾಡುವೆವು ಮಡಿಪುವೆವು,
ಬೊಮ್ಮ ಸಿವರಂತೆ!

ಖಡ್ಗಗಳಿಗೆಮ್ಮುಸಿರೆ
ಹರಿವಜ್ರಸಾಣೆ;
ನಮ್ಮ ಲೇಖನಿಗಿಂತ
ಬರಸಿಡಿಲ ಕಾಣೆ.
ದೇಶಗಳು ತಾಗುವುವು;
ಸೋತು ತಲೆ ಬಾಗುವುವು.
ವಿಪ್ಲವಗಳೇಳುವುವು,
ಮಕುಟ ಬೀಳುವುವು!
ಲೇಖನಿಯೆ ಕೂರಸಿಯು,
ಕೆನ್ನೀರೆ ಮಸಿಯು!

ಆಚಾರ್ಯತನವಿಲ್ಲ,
ನಮ್ಮದಾಚಾರ.
ಅಧಿಕಾರವೆಮಗಿಲ್ಲ,
ನಮ್ಮದಧಿಕಾರ.
ಮೌನಿಗಳೊ ನೀವೆಲ್ಲಿ
ವಾಗ್ಮಿಗಳು ನಾವಲ್ಲಿ;
ಗಳಪುವಿರೊ ನೀವೆಲ್ಲಿ
ಮೂಕರಾವಲ್ಲಿ!
ನಮ್ಮುಲಿಯ ತವರೂರು
ಚಿರಮೌನದಲ್ಲಿ!

ಹಿಂದು ಮುಂದುಗಳೆಲ್ಲ
ಇಂದುಗಳು ನಮಗೆ;
ತಿರೆಯ ಕಣ್ಣುಗಳೆಲ್ಲ
ಕಣ್ಣುಗಳು ನಮಗೆ.
ಇಂದು ನಾಳೆಯ ಮೇಲೆ,
ನಾಳೆ ಇಂದಿನ ಮೇಲೆ
ಚೆಲ್ಲುತಿಹ ಛಾಯೆಗಳು,
ನಾವು ಮಾಯೆಗಳು!
ಕಲ್ಪಗಳು ಕವಿ ಕನಸು
ಕಡೆದ ಹಾಹೆಗಳು!

ಸಾಹಸಿಯ ಕೂರಸಿಯ
ಕಠಿನತೆಯು ನಾವು;
ಹೂವುಗಳ ಹೊಡೆಯಲ್ಲಿ
ಕೋಮಲತೆ ನಾವು.
ಚೆಲುವೆಯರ ಮೊಗದಲ್ಲಿ
ಮುಗುಳು ನಗೆಗಳು ನಾವು;
ರುದ್ರಾಗ್ನಿ ಜ್ವಾಲೆಗಳು
ಮಸಣ ಸೂಡಿನಲಿ!
ಜೀವಿಗಳ ಜೀವಗಳು
ನಾಡು ನಾಡಿನಲಿ!

ನಮ್ಮ ಕೈಬುಟ್ಟಿಯಲಿ
ಸಿಡಿಲ ಗೂಡಿಹುದು!
ಹುಡುಕಿ ನೋಡಿದರಲ್ಲಿ
ಸುಮದ ಬೀಡಿಹುದು!
ಬೈಗು ಬೆಳಗುಗಳಲ್ಲಿ;
ಬೆಳ್ದಿಂಗಳಿಹುದಲ್ಲಿ.
ಸಂಕ್ಷಿಪ್ತ ಬ್ರಹ್ಮವೈ
ನಮ್ಮ ಕೈಬುಟ್ಟಿ!
ಕಲ್ಪ ಕಲ್ಪಗಳಲ್ಲಿ
ಸಾಯುವುವು ಹುಟ್ಟಿ!