ಕೋಗಿಲೆಯಂತೆಯೆ ಬಣ್ಣವು ನಿನಗಿದೆ,
ಕೋಗಿಲೆಯಿಂಚರಕಿಮ್ಮಡಿಯಿಂಚರ!
ಕೋಗಿಲೆಗೆಲ್ಲಿದೆ ನಿನಗಿರುವಂತಹ
ಪುಕ್ಕದ ನೇಲುವ ಗರಿಯೆರಡು?
ಕೋಗಿಲೆಯಿನಿದನಿಯೊಂದೇ ಆಗಿದೆ
ನಿನ್ನದು ಬಹು ವಿಧವಾಗಿಹುದು!
ಕೋಗಿಲೆಯಂದದಿ ಹೆರವರ ಮನೆಯಲಿ
ಹುಟ್ಟಿದ ತಬ್ಬಲಿ ನೀನಲ್ಲ!
ಕೋಗಿಲೆಯಂದದಿ ಹೊಲಸನು ತಿನ್ನುವ
ಕಾಗೆಗೆ ನೀ ಋಣಿಯಾಗಿಲ್ಲ!
ಶೂದ್ರನೆ ಹುಟ್ಟಿಸಿ, ಶೂದ್ರನೆ ಬೆಳೆಯಿಸಿ,
ಶೂದ್ರನು ಕೊಟ್ಟಾಹಾರವ ತಿಂದಿಹ
ಕೋಗಿಲೆಗೆಲ್ಲಿಯ ದ್ವಿಜತನವು?
ಕಾಗೆಯ ಮರಿಗಳ ಸಂಗದಿ ಬಳೆದಿಹ
ಆ ಪರಪುಟ್ಟನು ನಿನಗೆಣೆಯೆ?
ಬನದೆಲೆವನೆಯಲಿ ರಿಸಿಕುವರರವೊಲು
ಜನಿಸಿದ ಪರಿಶುದ್ಧಾತ್ಮನು ನೀನಹೆ;
ಸಾಟಿಯೆ ನಿನಗಾ ದೇಸಿಗನು?

[ಮನ್ನಿಸು ಕೋಗಿಲೆ! ಕೂಗುವೆ ಏತಕೆ?
ಹೆರರನು ಹೊಗಳಲು ನಿನ್ನನು ಬೈದೆನೆ?
ಮನ್ನಿಸು ಕವಿಯಪರಾಧವನು!
ನಿಶೆಯಲ್ಲೇತಕೆ ಕೂಗುತಿಹೆ?
ಬೆಳಗುವ ತಿಂಗಳ ಬೆಳಕಿಲ್ಲ!
ತಿರೆಯನು ಸಿಂಗರಿಸೈತಹ ಪೆಂಪಿನ
ಸುಗ್ಗಿಯು ಬಂದಿಯ ಕನಸಾಯ್ತೆ?
ಹಿಂದಿನ ಹರುಷದ ನೆನಸಾಯ್ತೆ?
ಹೆಮ್ಮೆಯೆ ಮಧುನೃಪ ಬಂದಿಹನೆಂದು?
ಚೈತ್ರನು ಶಿಶಿರನ ಕೊಂದಿಹನೆಂದು?
ಸಂತಸವೇ ಸೆರೆ ತೊಲಗಿತು ಎಂದು?
ಸೊಕ್ಕೇ ಬಿಡುಗಡೆ ದೊರಕಿತು ಎಂದು?
ಇತರರ ಸೊಬಗನು ಬಣ್ಣಿಸಲಿನಿಯನು
ಕರುಬುವ ಹೆಣ್ಣಿನ ತೆರದಿಂದೆ,
ಕಾಜಾಣದ ನಾ ಬಣ್ಣಿಸುತ್ತಿದ್ದರೆ
ಮಚ್ಚರವೇತಕೆ ನಿನಗೆಲೆ ಹಕ್ಕಿ?
ಗುಣವಿರುವೆಡೆ ಮತ್ಸರವೇಕೆ?
ಹಿಂದೆಯೆ ನಿನ್ನನು ಹೊಗಳಿಹೆನಲ್ಲಾ;
ಸಾಲದೆ ಮಾಡಿಹ ಹೊಗಳಿಕೆಯೆಲ್ಲಾ?
ರಾತ್ರಿಯ ಕಾಲದೊಳೂಳುವುದೇತಕೆ?
ಗೂಬೆಯ ಜಾತಿಯೆ ನೀನೇನು?
ಕಬ್ಬಿಗರೆಲ್ಲರು ಹೊಗಳಿಹರೆಂದು
ಹೆಮ್ಮೆಯು ತಲೆಗೇರಿರುವುದೆ ಇಂದು?
ಮುದ್ದಿನ ಕೋಗಿಲೆ, ನಚ್ಚಿನ ಕೋಗಿಲೆ,
ಕಬ್ಬಿಗರೊಲ್ಮೆಯ ಕೋಗಿಲೆಯೆ!
ಹೊಗಳಿದೆನಲ್ಲವೆ? ಸುಮ್ಮನಿರು!
ಕಾಜಾಣವ ನಾ ಬಣ್ಣಿಪೆ ಕೇಳು!
ಪರರೊಳ್ಜಸದಲಿ ಸಂತಸ ತಾಳು!]

ಕಾಜಾಣವೆ, ಕೋಗಿಲೆಗಿರುವಂದದಿ
ಮಾಗಿಯ ಬಂಧನ ನಿನಗಿಲ್ಲ!
ಸೆರೆಬಿಡಿಸಲು ಮಧು ಬರುವನು ಎಂಬಾ
ಬಯಕೆಯ ದಾಸ್ಯವು ನಿನಗಿಲ್ಲ!
ನಿತ್ಯ ವಿಮುಕ್ತನೆ ನಿಜ ನೀನು!
ನೀನಿಂತಿರುತಿರೆ, ಕಬ್ಬಿಗರಂದು,
ಕಬ್ಬಿಗರೆನ್ನಿಸಿಕೊಳ್ಳುವರಿಂದು,
“ಕೋಗಿಲೆ! ಕೋಗಿಲೆ! ಕೋಗಿಲೆ” ಎಂದು
ಕೂಗುವರೇಕೋ ನಾನರಿಯೆ!
ನಾನೂ ಕೂಗಿದೆ ನಿನ್ನನು ಮರೆತು;
ಮರೆಯೆನು ನಾನಿನ್ನೆಂದೆಂದೂ!
ಬನಗಳಲೊರ್ವನೆ ಕುಳಿತಿರುವಾಗ,
ಕವಿತೆಯ ಬರೆದುಲಿಯುತಲಿರುವಾಗ,
ಮರಗಳ ನೆತ್ತಿಯನೇರುತ ನಾನು
ಸುತ್ತಣ ಸೊಬಗನು ಬಣ್ಣಿಸುವಾಗ,
ನಿನ್ನಿಂಚರವನು ಕೇಳಿಹೆನು,
ಹಿಗ್ಗುತ ಮುದವನು ತಾಳಿಹೆನು.
ಪಿಕ ಪಾಡಿದರೇನಾಗುವುದಂತೆಯೆ
ನಿನ್ನಿಂಚರದಿಂದಾಗುವುದು!
ನೀ ಮಲೆನಾಡಿನ ಕೋಗಿಲೆಯು!
ಹೆಮ್ಮೆಯನರಿಯದ ಕೋಗಿಲೆ ನೀನು!
ಕೋಗಿಲೆ ಎನೆ ವೈಯಾರದ, ಬೆಡಗಿನ,
ಬಿಂಕದ ಕಾಜಾಣವು ತಾನು!*

 


* ಕುಪ್ಪಳಿಯ ಉಪ್ಪರಿಗೆಯಲ್ಲಿ ರಾತ್ರಿಯ ಕಗ್ಗತ್ತಲೆ ಕವಿದು ಮುಂಗಾರುಮಳೆ ಭೋರ್ಗರೆಯುತ್ತಿತ್ತು ಈ ಕವನವನ್ನು ರಚಿಸುತ್ತಿದ್ದಾಗ. ೧೮ನೆಯ ಪಂಕ್ತಿ ಮುಗಿಯುತ್ತಿದ್ದಾಗ ಒಂದುಕೋಗಿಲೆಯ ದನಿ ಏರುಲಿಯಾಗಿ ಕೇಳಿಸಿತು. ಆ ಹೊತ್ತಲ್ಲದ ಹೊತ್ತಿನಲ್ಲಿ. ಅದರಲ್ಲಿಯೂ ಮುಂಗಾರು ಮಳೆ ಮುಸಲ ಧಾರೆಯಾಗಿ ಸುರಿಯುತ್ತಿದ್ದ ಅತ್ಯಂತ ಅವೇಳೆಯಲ್ಲಿ, ಕಾಗೆಗಳ ವಿರಳತೆಯಿಂದಾಗಿ ಕೋಗಿಲೆಗಳೆ ಅಪೂರ್ವವಾಗಿದ್ದ ಅಲ್ಲಿ, ಈ ಕೋಗಿಲೆಯ ದನಿ ಎಲ್ಲಿಂದ ಬಂದಿತೋ ಅಚ್ಚರಿ! ಮುಂದೆ ಕಂಸದೊಳಗಿರುವ ೨೮ ಪಂಕ್ತಿಗಳು ಆ ಕೋಗಿಲೆಯನ್ನು ಸಂಬೋಧಿಸಿ ಬರೆದ ಪಂಕ್ತಿಗಳಾಗಿವೆ.