ಓ ರತಿಪತಿಯೇ,
ಹರಿ ನಿನ್ನನು ಪಡೆದನು ಎಂದು
ತಿಳಿದಿದ್ದುವು ಶಾಸ್ತ್ರಗಳಂದು;
ಆ ಹರಿಯನೆ ನೀ ಪಡೆದಿಹೆ ಎಂದು
ಹೇಳುತ್ತಿವೆ ಶಾಸ್ತ್ರಗಳಿಂದು!
ಮತಧರ್ಮವು ನೀತಿಗಳೆಲ್ಲ
ನಿನ್ನಯ ಮೈದೋರಿಕೆಯಂತೆ.
ಗಾಯನ ಕವನ ಕಲೋಪಾಸನೆಯೆಲ್ಲಾ
ವೇಷ ಧರಿಸಿರುವ ನೀನಂತೆ!

ಓ ರತಿಪತಿಯೇ,
ಈಶ್ವರಗೀಶ್ವರ ನೀನಂತೆ!
ಕಾಮನೆ, ನಿನ್ನನು ಹಿಡಿದವರೆಲ್ಲ
ಸೋತು ನಿನಗೆ ಶರಣಾದವರಂತೆ;
ಒಲ್ಲದೆ ನಿನ್ನನು ಬಿಟ್ಟವರೆಲ್ಲ
ಸೋಲನೊಪ್ಪದಿಹ ಕಪಟಿಗಳಂತೆ!
ಸೋತರದಂತೂ ಸೋಲಂತೆ:
ಗೆದ್ದರೆ? ಅದು ಜಯವಲ್ಲಂತೆ!

ಓ ರತಿಪತಿಯೇ,
ನಿನ್ನ ಪೂಜಕರ ವಾದವ ಗೆಲುವುದು
ನಿನ್ನನು ಗೆದ್ದುದಕೈಮಡಿಯು!
ಸೋತರು ಸೋಲು, ಗೆದ್ದರು ಸೋಲು!
ಸುಮ್ಮನಿರುವುದೇ ಬಲು ಮೇಲು!
ಕಾಮನಿಗಿಂತಲು ಕಾಮವಾದಿಗಳೆ
ಮೋಹಿಸುವುದರಲಿ ಗಟ್ಟಿಗರು.
ಕಾಮನಿಗಿದ್ದಾ ಐದು ಬಾಣಗಳು
ಸಾಲದಿವರುಗಳು ಹುಟ್ಟಿದರು!
ತಾಯಿಯ ಮಗುವಿನ ನೇಹದ ಹಿಂಗಡೆ
ಕಾಮದ ಬೇರಂತೆ;
ಅಣ್ಣತಂಗೆಯರ ಮೈತ್ರಿಯ ಬೆನ್ನಲಿ
ಕಾಮದ ಕಣ್ಣಂತೆ;
ಮಿತ್ರರಿಗಿರುವಾ ಸ್ನೇಹದ ಹೃದಯದಿ
ಕಾಮದ ಮನೆಯಂತೆ;
ಚೆಲುವನು ಕಂಡರೆ ಹಿಗ್ಗುವರೆದೆಯಲಿ
ಕಾಮದ ಮೊನೆಯಂತೆ.

ರಾವಣ ವಧೆಯೂ ಕಾಮನ ಚೇಷ್ಟೆ!
ಭೀಮನ ಗದೆಯೂ ಕಾಮನ ಚೇಷ್ಟೆ!
ರಾಮಾಯಣ ವಾಲ್ಮೀಕಿಯ ಕಾಮ!
ಭಾರತವೆಂಬುದು ವ್ಯಾಸನ ಕಾಮ!
ಶಿಲುಬೆಗೆ ಏರಿದ ಕ್ರಿಸ್ತನ ಆತ್ಮದ
ಸ್ಥೈರ್ಯವು ಕಾಮನ ಕಿಚ್ಚಂತೆ!
ರಾಜ್ಯವ ತ್ಯಜಿಸಿದ ಬುದ್ಧನ ತ್ಯಾಗದ
ಧೈರ್ಯವು ಕಾಮನ ಕೆಚ್ಚಂತೆ!
ಇದು ದಿಟವಾದರೆ ಹೆಸರಿಂದೇನು?
ರಾಮನ “ಕಾಮ” ಎಂದರೆ ಏನು?