ಆನಂದನೊಡಗೂಡಿ ಸಂಜೆಯಲಿ ಸಂಚರಿಸೆ
ಆಶ್ರಮವನುಳಿದು ಪಡುವಣದೆಸೆಗೆ ತಿರುಗಿದೆನು,
ಒಂಟಿಕೊಪ್ಪಲಿನಾಚೆ ಹಬ್ಬಿರುವ ದಿಬ್ಬಕ್ಕೆ.
ದಾರಿಯಲಿ ಅದನಿದನು ಕುರಿತು ಮಾತಾಡುತ್ತ,
ನಡುನಡುವೆ ಹಿಂತಿರುಗಿ ಗಗನ ಪಟಕೆದುರಾಗಿ
ಹಿರಿಗನಸಿನಂತೆ ಮಲಗಿದ್ದ ಚಾಮುಂಡಿಯನು
ಬಣ್ಣಿಸುತ, ಅಲ್ಲಲ್ಲಿ ನಿಂತು ಸುತ್ತಲು ತಿರುಗಿ
ದೂರದ ದಿಗಂತದಲಿ ನೀಲಿಜವನಿಕೆ ಹೊದೆದು
ಹಬ್ಬಿದ್ದ ಗಿರಿಶಿಖರ ರೇಖೆಯನು ನುತಿಸುತ್ತ,
ಬಯಲಿನಲಿ ನೆರಳೊ ನಿರುತವೊ ಎಂಬ ಸಂಶಯವ
ಮನಕೊಡರಿಸುವ ತೇನೆಹಕ್ಕಿಗಳನೆಬ್ಬುತ್ತ,
ಹಾರಲವುಗಳನೆಣಿಕೆಗೈದು ಉರೆ ಹಿಗ್ಗುತ್ತ
ಗಾಳಿಯಿಲ್ಲದ ಹಗಲ ಗಗನದ ಮುಗಿಲಿನಂತೆ
ಗೊತ್ತುಗುರಿಯಿಲ್ಲದೆಯೆ ತೇಲಿದೆವು. ಹೋಗುತಿರೆ
ಮುಂದೆ ಹಾದಿಯು ಕವಲಿದೆಡೆ, ಎಡದ ರೆಕ್ಕೆಯನು
ಹಿಂದಿಕ್ಕಿ ಬಲದ ರೆಕ್ಕೆಯ ಹಿಡಿದು, ಹೊಲಗಳೆಡೆ
ಇಕ್ಕೆಲದ ಪಾಪಾಸುಕಳ್ಳಿ ಬೇಲಿಯ ಮಧ್ಯೆ
ಹರಟುತ್ತ ಸಾಗಿ ಬರೆ ಬರೆ, ಮುಂದೆ ನಿಮಿರಿದುದು
ಕಿರುದಿಬ್ಬವೊಂದು. ಅದನೇರಿದೆವು ಎತ್ತರದಿ
ನಿಂತು ನೋಟವ ನೋಡುವಾನಂದದತಿಶಯದಿ.
ಆ ಎಡೆಯನಡರಿದೆವು. ಮೂರೆರಡು ಬಂಡೆಗಳು,
(ಕರಿಯ ಬಣ್ಣದ ಸಣ್ಣ ಕೋಣದಂತಿದ್ದುವವು)
ಅಲ್ಲಿರಲು ನಾವು ನಿಂತೆವು. ನಿಂತು ನೋಡಿದೆವು
ನಮ್ಮ ಬಲ ಭಾಗದಲಿ ಮೈಸೂರು, ಚಾಮುಂಡಿ;
ಎದುರಿನಲಿ ಉತ್ತು ಬಿತ್ತಿದ ಹೊಲದ ಹಸುರಿನಲಿ
ಅಲ್ಲಲ್ಲಿ ಬೆಳೆದ ಮರಗಳು; ದೂರ ದೂರದಲಿ
ಅಲೆಯೇರಿ ಹಾರಿಬಹ ಬಯಲುಸೀಮೆಯ ಭೂಮಿ;
ಎಡದ ಭಾಗದಲೊಂದು ಹಿರಿಯ ದಿಣ್ಣೆಯ ಬೋರೆ
ಸಂಜೆಗಂಪಿನ ಬಾನಿಗೆದುರಾಗಿ ಹಬ್ಬಿತ್ತು;
ಹಿಂದುಗಡೆ ಹೊಲ, ಹಳ್ಳಿ. ಆ ಸೊಬಗು, ಆ ಶಾಂತಿ,
ಆ ಮಧುರ ನಿರ್ಜನತೆ, ಹಲಕೆಲವು ಪಕ್ಷಿಗಳ
ಕೂಜನದಿ ಹೊರೆಯೇರುತಿದ್ದ ಆ ನೀರವತೆ,
ಎಲ್ಲವೂ ಭವ್ಯತೆಯ ಸೀಮೆಯಲಿ ನೆಲೆಸಿತ್ತು!
ಕಬ್ಬಿಗನು ಕತೆಗಾರರಿಬ್ಬರೂ ಮಾತುಳಿದು
ಗಾಢವಾಗುತಲಿದ್ದ ಧ್ಯಾನದಲಿ ಮುಳುಗಿದರು!
ಇಂತಿರಲು “ಕೂತುಕೊಳ್ಳೀ ಬುದ್ದಿ!” ಎಂಬ ದನಿ
ಧ್ಯಾನದಿಂದೆಮ್ಮನೆಬ್ಬಿಸಿತು. ನೋಡಿದರಲ್ಲಿ,
ಮೊರಡು ಮೊರಡಾಗಿ ಬಳಿಯಿದ್ದ ಹೊಲದಂತರದಿ,
ಸ್ವರ್ಣವರ್ಣದ ಲಕ್ಷ ಪುಷ್ಪಗಳ ಶೋಭೆಯಲಿ
ಮೆರೆದಿದ್ದ ಹುಚ್ಚೆಳ್ಳು ಗಿಡಗಳಾ ಹೊಲದಲ್ಲಿ,
ರೈತನೊಬ್ಬನು ತನ್ನ ಕಾರ್ಯದಲಿ ತೊಡಗಿದುದು
ಕಣ್ಗೆ ಬಿತ್ತು. ನಮ್ಮ ಪ್ರಶ್ನೆಗೆ ಅವನು ಮತ್ತೊಮ್ಮೆ
“ಕೂತುಕೊಳ್ಳೀ ಬುದ್ದಿ! ಹವವು ಚೆನ್ನಾಗಿಹುದು!”
ಎಂದುಸುರಿ, ಮರಳಿ ರಾಗಿಯ ಗಿಡಗಳನು ಕೊಯ್ದು
ರಾಶಿ ಹಾಕುವ ತನ್ನ ಕರ್ಮದಲಿ ತೊಡಗಿದನು.
ಆ ವಾಣಿಯಾಹ್ವಾನದಲಿ ಎನಿತು ಸರಳತೆ,
ಎನಿತು ಆದರವೆನಿತು ವಾತ್ಸಲ್ಯವೆನಿತೊಲ್ಮೆ!
ಆ ಮಾತಿನಾ ಮೋಹದಿಂಪಿನಲಿ ಸೆರೆಸಿಕ್ಕಿ
ಮರುಳಾಗಿ ಮುಗ್ಧಭಾವದಿನಲ್ಲಿ ಕುಳಿತುಬಿಡೆ,
ಮೆಲುಮೆಲನೆ ಮಾತು ತೆಗೆದನು ನೇಗಿಲಿಗೆ ಯೋಗಿ.
ಕಿವಿಗಳಾ ಹೊಲದ ವಾಣಿಯನಾಲಿಸುತಲಿರಲು
ಕಣ್ಗಳವಲೋಕಿಸಿದುವಾ ಪುಣ್ಯಮೂರ್ತಿಯನು
ಹನಿತುಂಬಿ ಆತ್ಮೀಯತೆಯಲಿ:-ವರುಷಗಳಿಂದ
ನಯಜೀವನದ ಮೃದುಲ ಸುಖಗಳು ಕಾಣದೆಯೆ
ರೂಕ್ಷವಾಗಿರುವ ಮೈ; ಆದರೂ ಆ ಕರಿಯ
ಬಣ್ಣದಲಿ ಬಲ್ಮೆಯಿರದಿರಲಿಲ್ಲ. ನೂರಾರು
ನೋವುಗಳ ಸಹಿಸಿ ಮೊರಡಾದ ಮುಖ; ಆದರೂ
ಮಾನವ ಮಹಾಗುಣಗಳಿಗೆ ಬೀಡು ಎನಲಹುದು.
ಬಹು ಕಾಲ ಹೊಲಗೆಲಸದಲಿ ಬೇಸರದೆ ತೊಡಗಿ
ಕಷ್ಟವನೆ ಸುಖವೆಂದು ತಿಳಿದಿರುವ ಒರಟು ಕೈ-
ಭಾರತದ ನಾಕದಲಿ ಕಲ್ಪಭೂರುಹದ ಕೈ!
ಆತನಾ ಕಣ್ಣುಗಳೊ ಪಾತಾಳದಲಿ ಕುಳಿತು
ಸ್ವರ್ಗದ ಅಸೀಮತೆಯನೀಕ್ಷಿಸಿ ನಿರೀಕ್ಷಿಸುವ
ತೆರದಿನಿದ್ದುವು. ತಲೆಯೊ ತೈಲವನೆ ಕಾಣದೆಯೆ
ಮುಡಿಗೆದರಿಕೊಂಡಿತ್ತು. ಕೆಂಪು ವಸ್ತ್ರವದೊಂದು
ಸುತ್ತಲಾರದೆ ಅದನು ಮುತ್ತಿಕೊಂಡಂತಿತ್ತು!
ಅವನ ಮೈಯಲಿ ಹರಕು ಅಂಗಿ; ಮೊಳಕಾಲಿನಲಿ
ಚಿಂದಿ ಪಂಚೆ: ಆ ಮನೋಹರ ಮಂಗಳದ ಮೂರ್ತಿ!
ಮುಳುಗುತಿಹ ಕನಕಮಯ ಸಂಧ್ಯೆಯ ದಿವಾಕರನು,
ಬೈಗುವೆಣ್ಣಿನ ಕುಂಕುಮದ ಮಂಗಳಾರತಿಯು,
ನೀಲಿಮೆಯ ಪ್ರಾಂತದಲಿ ಗಗನದಾನಂತ್ಯದಲಿ
ದೂರ ಬಹುದೂರದಲಿ ಋಜುಕುಟಿಲ ಪಙ್ಕ್ತಿಯಲಿ
ತಮ್ಮ ಹಕ್ಕೆಯ ನೆನೆದು ಬೇಗ ಬಹು ಬೇಗ ಬೇಗದಲಿ
ತೇಲಿ ಹಾರುತ ಹರಿವ ಧವಳಿಮ ಬಲಾಕಗಳು,
ಓ ಆ ದಿಗಂತದಲಿ ಭವ್ಯತೆಯ ರೂಪಿನೊಲು
ಮೇಲೆದ್ದಿರುವ ಪಾವನತರ ಚಾಮುಂಡಿ ಗಿರಿ,
ಎಲ್ಲವನು ಗೌರವದಿ ಮೀರಿ ಮಿಗಿಲೆನಿಸಿ ಆ
ಹಸುರು ಹುಚ್ಚೆಳ್ವೊಲದ ಪುಷ್ಪಿತ ಹರಿದ್ರದಲಿ
ರೈತನೆಸೆದನು ತನ್ನ ಶುಭದ ದಾರಿದ್ರ್ಯದಲಿ!
ಮಿಸುನಿ ಮಳೆ ಸುರಿಸಿ, ಹಸುರಲಿ ಹೊನ್ನು ಹೊಳೆ ಹರಿಸಿ
ಮಾರ್ಗಶೀರ್ಷ ಪ್ರಭಾತದ ಕನಕ ರವಿ ಮೂಡೆ
ಮೂಡಲಲಿ ಹೊಲಕೆ ಬಂದಾತನಿಗೆ ನುಡಿವೆನೆನೆ
ತೆರಪಿಲ್ಲ; ತೆರಪಿದ್ದಿರೂ ನುಡಿಯೆ ಜನವಿಲ್ಲ.
ಮೌನದಲಿ ದುಡಿದುಡಿದು ಬಳಲಿದಾತನು ನಮ್ಮ
ಕಂಡೊಡನೆ ಸಂತೋಷದಿಂದ ಸಾದರದಿಂದ
ಸ್ವಾಗತವನಿತ್ತು, ತನ್ನಾ ಹೊಲವೆ ತನ್ನ ಮನೆ
ಎಂಬ ನಂಬುಗೆಯಿಂದ ಕರೆದು ಸ್ವಾಗತವಿತ್ತು,
ಮೆಲುಮೆಲನೆ ಮಾತು ತೆಗೆದನು ನೇಗಿಲಿನ ಯೋಗಿ!
ಕೆಲವು ಪುಡಿನುಡಿಗಳಿಗೆ ಮಾರುತ್ತರಂಗೊಟ್ಟು
ಮೈತ್ರಿಯಲಿ ಮರಳಿ ಕೇಳಿದೆನವನ ಬಡತನದ
ಸಂಸಾರ ಕಥನವನು: ನಿನಗೆನಿತು ಭೂಮಿಯಿದೆ?
ನೀವೆನಿತು ಮಂದಿ ಮನೆಯಲಿ? ನಿನಗೆ ಸೋದರರು
ಇಹರೇನು? ಮಕ್ಕಳೆನಿತಿಹರು? ಜೀವನವೆಂತು?
ಸಾಲ ಸೂಲಗಳೊಳವೆ? ಕಾಲ್ನಡೆಗಳೆನಿತಿಹವು?
ಇತ್ಯಾದಿ. ಅದಕವನು ಕಟ್ಟೆಯೊಡೆದಂದದಲಿ
ಕಥೆಯ ನದಿ ಹರಿಸಿದನು ಕುಗ್ರಾಮ ಭಾಷೆಯಲಿ,
ಕಾವ್ಯವಾಣಿಗೆ ನಿಲುಕಲಾರದಾವೇಶದಲಿ.
ಮಾನವರು ನಾವಿರಲಿ, ವಿಶ್ವವೇ-ಕಲ್ಮಣ್ಣು,
ಮುಚ್ಚಂಜೆ, ಗಿಡು ಮರಗಳಾಗಸವೆ ಮೊದಲಾದ
ಪ್ರೇಕ್ಷಕ ಮಹಾಶಯರು ಎಲ್ಲರೂ, ಲೋಭದಲಿ
ಕಿವುಡಾದ ಶ್ರೀಮಂತರನ್ನುಳಿದು ಎಲ್ಲರೂ
ನಿಶ್ಶಬ್ದರಾಗಿ ಆಲಿಸಿದರಾ ಸುಖದುಃಖ
ಮಿಶ್ರ ಇತಿಹಾಸವನು, ಬಡವನ ಪುರಾಣವನು,
ಭಾರತಿಯ ಕಂಠದಲಿ ಮಿಡುಕುವ ಪರಾಣವನು:
“ಮೂರು ಎಕ್ಕರೆ ಭೂಮಿ ನನಗಿಹುದು, ಬುದ್ದಿ. ಅದು
ನಮ್ಮ ತಂದೆಯ ತಂದೆ ಕೊಂಡಿದ್ದು. ಆರ್ನೂರು
ರೂಪಾಯಿ ನಗದು ಹಣ ಸುರಿದು ಸರಕಾರಕ್ಕೆ
ಕೊಂಡುದಿದು. ಆದರೂ ವರುಷ ವರುಷವು ನಾವು
ಕಂದಾಯ ಕೊಡಬೇಕು! ಆರುವರೆ ರೂಪಾಯಿ!”
ಇಂತೆನುತ ಕೈನೀಡಿ ತನ್ನ ನೆಲದಲ್ಲೆಯನು
ತೋರಿದನೆಮಗೆ ಹೆಮ್ಮೆಯಿಂದ. ಆ ಭೂಮಿಯೋ
ಬರಿಕಲ್ಲು! ಪಾಪಾಸುಕಳ್ಳಿಯಲ್ಲದೆ ಬೇರೆ
ಪೈರುಗಳು ಹುಲುಸಾಗಿ ಬೆಳೆಯಲಾರವು ಅಲ್ಲಿ!
ಆದರಾ ರೈತನಿಗೆ, ನಾಲ್ವತ್ತು ವರುಷಗಳು
ಹಗಲಿರುಳು ಅಲ್ಲಿ ದುಡಿದಾತನಿಗೆ, ಆ ಹೊಲವು
ಇಂದ್ರವನಕೆರಡುಮಡಿ ರಮಣೀಯವಾಗಿತ್ತು!
ಏತಕೆನೆ, ಅವನ ಗೆಯ್ಮೆಯ ಕಷ್ಟದಿಂದಲ್ಲದೆ
ನೆಲದ ಗುಣದಿಂದಲ್ಲ, ಆ ಸ್ಥಲದೊಳಾತನಿಗೆ
ಹುರುಳಿ, ಜೋಳವು, ರಾಗಿ, ಹುಚ್ಚೆಳ್ಳೆ ಮೊದಲಾದ
ಧಾನ್ಯಗಳು ಕೃಪೆಯಿಂದ ಬೆಳೆದು ಉಣಿಸಿತ್ತುದನು
ಅವನು ಮರೆಯದೆ ಕೃತಜ್ಞತೆಯಿಂದ, ನೆನಹಿನಲಿ
ಅದು ಬುತ್ತಿಯಾಗಿತ್ತು. ನಮ್ಮ ಕಣ್ಣಿಗೆ ಬರಿಯ
ಬಂಜೆ ಭೂಮಿಯೆ ತೋರಿತಾದರಾತನಿಗೆ ಅದು
ಹಿಂದು ಮುಂದಿಂದುಗಳ ಹೊಟ್ಟೆಪಾಡಿನ ಹಿರಿಯ
ಉಗ್ರಾಣವಾಗಿತ್ತು. ಅವನ ಕಣ್ಣಿಗೆ ಅಲ್ಲಿ
ತನ್ನ ಮಕ್ಕಳ ಮುಂದಿನಭ್ಯುದಯ ಮೆರೆದಿತ್ತು;
ತನ್ನ ಹಿರಿಯರ ಆಶೀರ್ವಾದವೆಸೆದಿತ್ತು;
ರಂಜಿಸಿತು ತನ್ನುಳಿದ ಜೀವನದ ಸಂಪತ್ತು!
ಕಲ್ಲು ನೆಲದಾ ಹೊಲದಿ ಬಿದ್ದಿದ್ದ ಒಂದೊಂದು
ಹುಡಿಯು ಆತನಿಗೆ ಸಂತಸದ ಕಿಡಿಯಾಗಿತ್ತು!-
“ಜೀವನಕೆ ನಿನಗಿದರ ಉತ್ಪತ್ತಿ ಸಾಲುವುದೆ?”
ಎಂದೆನಲು ನಿಡುಸುಯ್ದು ನುಡಿದನವನಿಂತೆಂದು:
“ಮಳೆ ನಡೆಸಿದರೆ ಸಾಲುವುದು, ಬುದ್ದಿ. ಆದರೀ
ಸಾಲಿನಲಿ ಮಳೆಯಿಲ್ಲ. ಕಂದಾಯ ಕೊಡಬೇಕು.
ಕಾಲ ಮೀರಿದರೆ ಕಸುಕೊಳ್ಳುವರು ಭೂಮಿಯನೆ!
ಹೊಟ್ಟೆಬಟ್ಟೆಯ ಹಿಡಿದು, ಮಕ್ಕಳುಣಿಸನೆ ಕಡಿದು,
ಕಂದಾಯ ಕೊಡಬೇಕು. ಮಳೆ ಬರಲಿ, ಬರದಿರಲಿ,
ಬೆಳೆ ಕೊಡಲಿ, ಬೆಳೆ ಸುಡಲಿ, ಕಂದಾಯ ತಪ್ಪದಿದೆ!
ಏನು ಮಾಡುವುದೆಮ್ಮ ಹಿರಿಯರಿತ್ತೀ ನೆಲವ
ತೆರಿಗೆ ಕೊಡದೆಯೆ ನಾವು ಪರರ ವಶಮಾಡಿದರೆ
ಮಕ್ಕಳಾದಪೆವೆಂತು ನಾವವರಿಗೆ? ಮುಂದೆಮಗೆ
ಒಳಿತಹುದೆ? ನಾವಿಬ್ಬರಣ್ಣತಮ್ಮದಿರಿಹೆವು.
ಅಣ್ಣನಿಗೆ ಮಗನೊಬ್ಬ; ಮದುವೆಯಾಗಿಹುದವಗೆ;
ಮಕ್ಕಳೆರಡಿವೆ; ನಿಮ್ಮ ವಯಸವಗೆ. ನನಗೊಬ್ಬ
ಮಗನಿಹನು. ಮನೆಯಲ್ಲಿ ಹೆಂಗಸರು ಬೇರಿಹರು.
ಇಷ್ಟು ಜನರಿಗೆ ಹೊಟ್ಟೆ ಬಟ್ಟೆಯೆಂದರೆ ಎಲ್ಲಿ
ಹಣಕಾಸು? ಹೇಗೊ ಸಾಲದ ಮೇಲೆ ಬಡಬದುಕು
ಹೊರೆಯುತಿದೆ,”
“ನಿನಗೆನಿತು ಸಾಲವಿದೆ?”
“ಇನ್ನೂರು!”
“ಅದನೆಂತು ತೀರಿಸುವೆ?”
“ಈಗ ಬಡ್ಡಿಯ ಕೊಟ್ಟು,
ಮುಂದೆ ಒಳ್ಳೆಯ ಕಾಲ ಬಂದಾಗ ತೀರಿಸುವೆ.”
“ಎಷ್ಟು ಬಡ್ಡಿಯ ಕೊಡುವೆ?”
“ನೂರಕ್ಕೆ ಹದಿನೆಂಟು!”
ಇಷ್ಟರಲಿ ತನ್ನ ಕೆಲಸವ ಮುಗಿಸಿ ಬಳಿಬಂದು
ಕುಳಿತವನ ಮುಖದಲ್ಲಿ ಖಿನ್ನತೆ ಅಧೀರತೆಯ
ಚಿಹ್ನೆಗಳು ತೋರಿದುವು. ಆದರೆಮ್ಮಯ ಮುಂದೆ
ಉಲ್ಲಾಸವನೆ ತೋರಿ ನಗುವಂತೆ ನಟಿಸಿದನು.
ರೈತನಿಗೆ ನೆರವಾಗಲೆಂಬಂತೆ ಕತ್ತಲೆಯ
ಹಿರಿನೆರಳು ಬಾನಿನಿಂದಿಳಿತಂದು ಮುತ್ತಿದುದು
ಭೂಮಿಯ ಸಮಸ್ತವನು. ದೂರ ಮೈಸೂರಿನಲಿ
ಮಿಂಚಿದುವು ದೀಪಗಳು ಐಶ್ವರ್ಯಗರ್ವದಲಿ.
ಮೇಲೆ ಆಕಾಶದಲಿ ಮಿಣುಕಿದುವು ತಾರೆಗಳು
ವಿಶ್ವದೌದಾಸೀನ್ಯದಲಿ? ಅಥವ ಶೋಕದಲಿ?
ಕತ್ತಲಲಿ ರೈತನಾಕೃತಿಯೊಂದು ಕನಸಿನ ತೆರದಿ
ಕಾಣಿಸಿತು: ಅವನೊಂದು ವಿಶ್ವದ ಮಹಾಸ್ವಪ್ನ!
ಕಪ್ಪಾದುದನು ಕಂಡು “ಏಳಿ, ಬುದ್ದೀ, ನಿಮಗೆ
ಹೊತ್ತಾಯ್ತು, ಕತ್ತಲಲಿ ದಾರಿ ಕಾಣದು; ಕಲ್ಲು
ಮುಳ್ಗಳಿವೆ; ಕೊರಕಲಿದೆ” ಎಂದು ರೈತನು ಹೇಳೆ
ಎದ್ದುನಿಂತೆವು, ಪ್ರಕೃತಿವಾಣಿಗವಿಧೇಯತೆಯೆ
ಅಪರಾಧವೆಂಬಂತೆ. ನಾವೆದ್ದು ನಿಲ್ಲಲವನೂ
ಮೇಲೆದ್ದು “ನಾಳೆ ಬನ್ನೀ, ಬುದ್ದಿ! ನಾನಿಲ್ಲೆ
ಕೆಲಸಮಾಡುತ ನಿಮ್ಮನ್ನೆದುರು ನೋಡುತ್ತಿರುವೆ.
ಹೊತ್ತಿನಂತೆಯೆ ಬನ್ನಿ; ಹವವು ಚೆನ್ನಾಗಿಹುದು!”
ಎಂದು ಆಹ್ವಾನವೀಯುತಲಿರಲು ಚಲಿಸಿದೆವು
ಮನೆಯ ಕಡೆ. ಅವನೆಮ್ಮ ಒಡನೊಡನೆ ಚಲಿಸಿದನು.
ಕತ್ತಲಲಿ ನಾವು ಮೂವರು ಮಾತನಾಡುತ್ತ
ಸಾಗಿದೆವು ಬಯಲಿನಲಿ, ಮೂರು ವಾಣಿಗಳಂತೆ!
ದಾರಿಯಲಿ ರೈತನಿಗೆ ಮಲೆಯನಾಡಿನ ಕಥೆಯ
ಬಿತ್ತರಿಸಿ ಹೇಳಿದೆನು: ಅಲ್ಲಿ ಮಳೆ ಮಾರಿಮಳೆ;
ಅಲ್ಲಿರುವ ಪರ್ವತ ಅರಣ್ಯಗಳು ಬಾನ್ಗೇರಿ
ನಾಡನೆಲ್ಲವ ನುಂಗಿ ನಿಂತಿಹವು; ಅಲ್ಲಿರುವ
ಕಬ್ಬು, ಅಡಕೆಯ ತೋಟ, ಹುಲುಸು ಬತ್ತದ ಗದ್ದೆ,
ಎಲ್ಲ ಕಾಲದೊಳೆಲ್ಲಿಯೂ ಮೆರೆವ ಬರಿ ಹಸುರು;
ನೀರು ನಾವ್ ಕರೆದ ಕಡೆಗೈತಹುದು. ಎಲ್ಲವನು
ಕೇಳಿ, ಶಿಶು ಕಟ್ಟುಕತೆಗೆನಿತು ಬೆರಗಾಗುವುದೊ
ಅಂತಾದನಾ ರೈತ. ಆದರವನಿಗೆ ತನ್ನ
ಕಲ್ಲು ಹೊಲವಿನ್ನುಳಿದ ಸಿರಿನಾಡುಗಳಿಗಿಂತ
ಮುದ್ದಾಗಿ ತೋರಿದುದು. ಅವನೊಳಿದ್ದುದು ಬೆರಗು,
ಕರುಬಲ್ಲ.
ದಾರಿ ಕವಲುವೆಡೆ ನಮ್ಮನು ಮನೆಗೆ
ಕಳುಹಿಬಹೆನೆಂದವನು ಹಟಹಿಡಿದು ನಿಂತಿರಲು,
“ಬೇಡ ಬೇಡೈ, ನೀನು ಗುಡಿಗೆ ನಡೆ; ಹಗಲೆಲ್ಲ
ಉಣಿಸಿಲ್ಲ, ಹಸಿದಿರುವೆ, ದುಡಿದು ಮೈದಣಿದಿರುವೆ.”
ಎನೆ ನಾವು ಒಲ್ಲದಾತನು ನಮ್ಮ ಸುಮ್ಮನಿಸಿ
“ಇಲ್ಲ ಬುದ್ದೀ, ನನ್ನ ಊಟಕಿನ್ನೂ ಹೊತ್ತು
ಬಹಳ ಇದೆ” ಎನುತ ನಮ್ಮನು ಕಳುಹಿದನು ಮಠಕೆ
ತುಸುದೂರವಿರುವವರೆಗೆ. ಒಂದೆ ಗಂಟೆಯ ನುಡಿಗೆ
ಅವನದೆಂತಹ ಮೈತ್ರಿ! ನಾಗರಿಕರಂತಿಹರೆ?
ಆತನು ಅನಾಗರಿಕನೆ? ಅವನ ಆ ದುಃಖದಲಿ
ಹೆರರ ಸುಖವನು ಕಂಡು ಕುದಿವ ಕರುಬಿನಿತಿಲ್ಲ;
ತನ್ನ ನೋವನು ಕುರಿತು ನುಡಿವಾಗ ಮಾತಿನಲಿ
ಕ್ರೋಧ ಮತ್ಸರವಿಲ್ಲ, ಕೋಪವೆಂಬುವುದಿಲ್ಲ.
ಸ್ಥಿತ ಪ್ರಜ್ಞನಿಗೆ ಸಹಜವಾಗಿಹ ಸಹಿಷ್ಣುತೆ,
ಧೀರತೆ, ಸೌಜನ್ಯಗಳು ಹುಟ್ಟುಗುಣವವಗೆ.
ನಮ್ಮೊಡನೆ ಯಾರನೂ ಆತನು ಹಳಿಯಲಿಲ್ಲ:
ಎಲ್ಲವನು ಹೇಳಿದನೆ ಹೊರತು ಖಂಡಿಸಲಿಲ್ಲ!
ನಾಗರಿಕರಂತಿಹರೆ? ಆತನು ಅನಾಗರಿಕನೆ?
ಇನಿವಾತುಗಳನಾಡಿ ಕಡೆಗವನ ಬೀಳ್ಕೊಂಡು
ಬರುತಿರಲು, ನಮ್ಮೆದೆ ದುಃಖ ಸಂಮಿಶ್ರಣದ
ಸ್ಮೃತಿಯ ಮಾಧುರ್ಯದಲಿ ಗಂಭೀರವಾಗಿತ್ತು.
ಸ್ವಂತ ಸ್ವಾಂತದ ಚಿಂತೆಯ ತರಂಗಗಳ ಮಧ್ಯೆ
ನಮ್ಮಾತ್ಮಗಳು ತೇಲಿ ಮುಳುಗಿದುವು. ಮೌನದಲಿ,
ಧ್ಯಾನದಲಿ, ಬ್ರಹ್ಮಾಂಡ ಭವ್ಯ ಗಾಂಭೀರ್ಯದಲಿ,
ಚಿತ್ತಕೆ ಅತೀತವಹ ಗೂಢತರ ಶಾಂತಿಯಲಿ,
ಜಗದ ವಸ್ತುಗಳೆಲ್ಲ ಮನದಿಂದ ಜಾರುತಿರೆ
ನಡುವೆ ನಿಂತುದದೊಂದೆ ವಿಶ್ವದಾ ಶಿಶುಮೂರ್ತಿ,
ಹಸುರು ಹುಚ್ಚೆಳ್ವೊಲದಿ ಕಂಡ ರೈತನ ಮೂರ್ತಿ!
ನಾನವಗೆ ನುಡಿದಂತೆ ಬಹುಜನಕೆ ನುಡಿದಿಲ್ಲ;
ಅವನಿಗೆ ಕರಗಿದಂತೆ ಬಹುಜನಕೆ ಕರಗಿಲ್ಲ!