ಸಾಯಂಕಾಲವು ಮೌನವನಾಂತಿದೆ
ಧ್ಯಾನದೊಳಿರ್ಪ ತಪಸ್ವಿನಿಯಂದದಿ!
ಗುರುವಿನ ಮುಂಗಡೆ ಸುಳಿಯುವ ಶಿಷ್ಯನ
ಚಲನೆಯ ತೆರದಲಿ, ತಣ್ಣನೆ ಗಾಳಿಯು
ಬೀಸುತಲಿದೆ. ಬಹುದೂರದ ಪಡುವಣ
ದೆಸೆಯ ದಿಗಂತದೊಳಾಗಲೆ ಮುಳುಗಿನ
ಸೂರ್ಯನ ಕೆಂಪನು ತಳೆದಿರುವಂಚಿನ
ಕಿರಿಯ ಮುಗಿಲ್ಗಳ ಮೊತ್ತವು ಚಲಿಸದೆ
ಜಪಮಾಡುತಲಿದೆ. ನಿಂತಿಹ ಮರಗಳೊ,
ಮನವನು ಭಾವಸಮಾಧಿಯೊಳದ್ದಿಹ
ರಸಯೋಗಿಗಳಂದದಿ ತೋರುತಲಿವೆ!
ಅವರೆಯ ತೊಗರಿಯ ಹೊಲಗಳು ಕೂಡ
ಯಾವುದೊ ಮಂತ್ರವನುಸಿರುತಲಿರುವುವು!
ಈ ಕೆರೆ, ಆ ಗಿರಿ, ಆ ಪುರ, ಈ ಹೊಲ,
ಎಲ್ಲವು ಸಂಧ್ಯಾಯೋಗಿನಿಯೆಡೆಯಲಿ
ದೀಕ್ಷೆಯ ಕೈಕೊಳ್ಳುತಲಿವೆ! ನಾನೂ
ದೀಕ್ಷಿತನಾಗುವೆ! ಸದ್ದಿಲಿ ಬೈಗಿದು
ಶಾಂತಿಯನೆಂತುಟು ಮಳೆಗರೆಯುತಲಿದೆ!
ಸೃಷ್ಟಿಯೆ ಒಯ್ಯನೆ ಮೈಮರೆಯುತಲಿದೆ!