ಶಬ್ದಮಣಿದರ್ಪಣವನೋದಿ ನಾ ಮಲಗಿದೆನು,
ಕೇಶಿರಾಜನ ಗರಡಿಯಲಿ ಕಾಳೆಗವ ಮಾಡಿ!
ಸ್ವಪ್ನಸಾಮ್ರಾಜ್ಯದಲಿ ಮೆಲು ಮೆಲನೆ ಸಂಚರಿಸಿ
ಕಳೆದ ಕಾಲದ ಮಹಾಗರ್ಭವನು ಹೊಕ್ಕು
ಮರೆತ ಶತಮಾನಗಳ ಸೋಪಾನಗಳನಿಳಿದು
ಕಲ್ಪನೆಯೆರಂಕೆಗಳ ಬಿಚ್ಚಿ ಬಡಿಯುತ ಹಾರಿ
ಮೂಕ ವಿಸ್ಮಿತನಾಗಿ ಶೂನ್ಯ ದೃಷ್ಟಿಯ ಬೀರಿ
ಭಕ್ತಿಯಲಿ, ಭಾವದಲಿ ಕೈಮುಗಿದು ನಿಂತೆ!
ಹಿರಿಯ ಮರುಭೂಮಿಯಲಿ ಬಟ್ಟೆಗೆಟ್ಟವನಂತೆ!
ಪಾಳುಬಿದ್ದಿಹ ಗುಡಿಯ ದೇವಮಂದಿರದಲ್ಲಿ
ಕಲ್ಪನೆಯ ಗಂಟೆಗಳ ನಾದವನು ಕೇಳುತ್ತ
ಕಲ್ಪನೆಯ ಮಂಗಳಾರತಿಯನವಲೋಕಿಸುತ
ವಿಗ್ರಹದ ಮುಂದೆ ನಿಲ್ಲುವ ಭಕ್ತ ಕವಿಯಂತೆ!
ಕರಿಮಣಿಯನೇಳಿಸುವ ಕತ್ತಲೆಯು ಕವಿದಿತ್ತು;
ನಿದ್ದೆಯಲಿ ಮುಳುಗಿತ್ತು ಸದ್ದಿಲ್ಲದಾ ಇರುಳು;
ಏಳು ಶತಮಾನಗಳ ಹಿಂದಿನಾ ನಟ್ಟಿರುಳು!
ಏಳ್ನೂರು ವರ್ಷಗಳ ಬಿತ್ತರದ ಬಾಂದಳವು!
ಹೊಳೆಯುತಿಹ ಚುಕ್ಕಿಗಳು! ಬೀಡುತಿಹ ತಣ್ಣೆಲರು!
ಕುಸುಮಿಸಿಹ ತರುನಿಕರ! ತಿರೆಯೆಂಬ ಮುತ್ತಜ್ಜಿ!
ಕಿವಿಗೆ ಕೇಳದ ಮೌನ ಮೊಳಗುತಿದ್ದುದು ಅಲ್ಲಿ!
ಕಣ್ಗೆ ಕಾಣದ ನೋಟ ಮೆರೆಯುತಿದ್ದುದು ಅಲ್ಲಿ!
ಆ ಮಹಾಮೌನದೇಕಾಂತದಲಿ, ಯೋಗದಲಿ
ಕುಳಿತಿರುವ ರಸಋಷಿಯ ತೆರದಿಂದೆ ರಾಜಿಸಿತು
ಸೌಂದರ್ಯಯೋಗಿಯೊಲು ಎಲೆವನೆಯದೊಂದು!
ಸುತ್ತಲೆಲ್ಲಿಯು ಜನರ ಸುಳಿವಿಲ್ಲ, ಬೀಡಿಲ್ಲ.
ಎಲೆವನೆಯದೊಂದೇ ಸಮಾಧಿಯಲಿ ಕುಳಿತಿತ್ತು!
ಆ ಭಯಂಕರ ನಿಶಿಯ ತಿಮಿರವನು ಮೂದಲಿಸಿ
ಮಿಣುಕುತಿಹ ಚಿಣ್ಣ ಹಣತೆಯ ಸೊಡರಿನೆದುರಿನಲಿ
ಕಮಲಾಸನವನಾಂತು ಕುಳಿತ ಋಷಿಯಿವನಾರು?
ತನ್ನ ಕಾರ್ಯದಿ ತೊಡಗಿ ಕುಳಿತಿಹನು ಮೈಮರೆತು.
ಯಾವ ಜಪವಿದು? ಯಾವ ಪೂಜೆಯಿದು? ಧ್ಯಾನವಿದು?
ಹಗಲಿರುಳು ನಿದ್ದೆಯಿಲ್ಲದೆ ಮಾಳ್ಪ ಕಜ್ಜವಿದು?
ಕಂಗಳಲಿ ಹೊರಹೊಮ್ಮುತಿದೆ ಕಾಂತಿ! ಮೊಗದಲ್ಲಿ
ಗಾಂಭೀರ್ಯವುಕ್ಕುತಿದೆ! ತಿರೆಗಿರದ ತೇಜಸ್ಸು!
ಮಾನವನೊ? ದೇವತೆಯೊ? ಹೇಳಬಲ್ಲವರಾರು?
ಗ್ರಂಥಗಳ ಕಟ್ಟೇನು ರಾಶಿಯಾಗಿಹವಿಲ್ಲಿ!
ಋಷಿವರನು ಕಂಟವನು ಹಿಡಿದು ಕೈಯಲ್ಲಿ
ಬರೆಯುವನು, ಬರೆಯುವನು, ಕೊರೆಯುತಿಹನೆಡೆಬಿಡದೆ!
ಪರಮ ವೈಯಾಕರಣ! ಶಾಬ್ದಿಕಜನಮನೋಜ!
ಕವಿ ಕೇಶಿರಾಜನೆಂದರಿತು ನಾನಿನಿತಳುಕಿ
ದೂರದಲ್ಲಿಯೆ ನಿಂತು ಬಾಗಿದೆನು ಕೈಮುಗಿದು!
ವಾಗ್ದೇವಿಯವನೆದುರು ಕೈಕಟ್ಟಿ ನಿಂತಿಹಳು,
ಪಂಡಿತನ ಕರುಣೆಯನು ಬೇಡುತಿಹಳೆಂಬಂತೆ!
ಎಲೆವನೆಯ ಮೂಲೆಯಲಿ ಕುಳಿತ ಕಬ್ಬಿಗನಾರು?
ವಿಕ್ರಮಾರ್ಜುನ ವಿಜಯವನು ಬರೆದ ಪಂಪನೇ?
ಬೆದರಿ ನಿಂತಿಹನಿಲ್ಲಿ! ಇವನಾರು? ಸರಸತಿಯ
ಬೊಕ್ಕಸದ ಮುದ್ರೆಯನು ಕುಟ್ಟೊಡೆದೆನೆಂದೆಂಬ
ಹೆಮ್ಮೆಯಲಿ ಹಿಗ್ಗಿದಾ ರನ್ನನೆಂಬುವನಿವನೆ?
ವೀರಕವಿ, ಋಷಿಯೆದುರು ಬೆದರುತಿಹೆ ಏಕಿಂತು?
ಗಜಗ, ಗುಣನಂದಿ, ಮನಸಿಜನಸಗ, ಚಂದ್ರಾರ್ಯ,
ಶ್ರೀವಿಜಯ, ಗುಣವರ್ಮ, ನೇಮಿಚಂದ್ರ, ಹೊನ್ನ,
ಹಂಸರಾಜ, ಬ್ರಹ್ಮಶಿವ, ನಾಗಚಂದ್ರ,
ಜನ್ನ ಮೇಣ ನಾಗವರ್ಮರೇಕಿಹರಿಂತು
ನ್ಯಾಯಾಧಿಪತಿಯೆದುರು ಭಯದಿಂದ ಕಂಗೆಟ್ಟು
ಮಿಳ್ಮಿಳನೆ ನೋಡುವಪರಾಧಿಗಳ ತೆರದಿ? ಓ
ಕಬ್ಬಿಗರೆ, ನೀವೆಸಗಿದಪರಾಧವೇನು?
ಮಾತಿಲ್ಲ! ಗುಡುಗಿದಾ ಪಂಪನಿಗೆ ಕೊರಳಿಲ್ಲ!
ಸಿಡಿಲಿನೊಲು ಗರ್ಜಿಸಿದ ರನ್ನನಿಗೆ ದನಿಯಿಲ್ಲ!
ಋಷಿಯ ಕಂಠದೊಳೇನು ಸಂಕೋಲೆಗಳ ಹಾರ!
ನಿಯಮಗಳು! ಸೂತ್ರಗಳು! ಕಂದಗಳ ಕಟ್ಟು!
ಗಮಕಱೞಕುಳಗಳವು! ಸಂಧಿಯದು! ಲಿಂಗವವು!
ಶಿಥಿಲತ್ವ ಯತಿನಿಯಮವವ್ಯಯಗಳೆಂಬುವವು!
ಧರ್ಮಾಧಿಕಾರಿಯೇ, ಕೇಶಿರಾಜನೆ, ನಮೋ!
ಕೈಮುಗಿವೆನೆಲೆವನೆಯೆ! ನಮಿಸುವೆನು, ಎಲೆ ಸೊಡರೆ!
ಕೇಶಿರಾಜನೆ, ನಿನಗೆ ದೂರದಿಂದಲೆ ಬಾಗಿ
ತೊಲಗುವೆನು! ಬಳಿಯೊಳಿಹ ಕಬ್ಬಿಗರ ಕನಿಕರಿಸು!
ನಿಯಮಗಳ ಜಾಲದಲಿ ನಾನೆಲ್ಲಿ ಸಿಲುಕುವೆನೊ
ಎಂದಳುಕಿ ಎದೆನಡುಗಿ ಹಿಂಜರಿದು ನಿಂತೆ!
ಆದೊಡೆಯು ಋಷಿವರನ ನಿಟ್ಟಿಸುತ, ದಿಟ್ಟಿಸುತ,
ಎವೆಯಿಕ್ಕದಲೆ ನೋಡಿ ಮರಮರಳಿ ಬಾಗಿದೆನು.
ವ್ಯಾಕರಣವಂ ಪಾಡಿ ಬೀಸಿತಲ್ಲಿಯ ಗಾಳಿ!
ವ್ಯಾಕರಣವಂ ಮೆರೆದು ಹೊಳೆದುವಲ್ಲಿಯ ತಾರೆ!
ಕತ್ತಲೆಯು ಕೂಡ ವ್ಯಾಕರಣವಂ ಬೆಳಗಿತ್ತು!
ಅರಳುತಿಹ ಹೂವುಗಳು ಸೂತ್ರಗಳ ಹೇಳಿದುವು!
ನನ್ನಡಿಯೊಳಿಹ ತಿರೆಯು ಕಂದಗಳ ಹಾಡಿದಳು!
ವ್ಯಾಕರಣ ಸಾಮ್ರಾಜ್ಯವದು ಭಯಂಕರವಾಯ್ತು!
ಕುರುಸೇನೆಯಂ ಕಂಡ ಉತ್ತರ ಕುಮಾರನೊಲು
ಕಾಲು ಕಿತ್ತೋಡಿದೆನು! ಓಡಿದೆನು ಮೈ ಬೆಮರಿ!
ಹಿಡಿದು ನಿಲ್ಲಿಸಲೆನ್ನ ಪಾರ್ಥನಲ್ಲಿರಲಿಲ್ಲ!
ಹಿಂದಾರೊ ಚೀರಿದರು! ಹಿಂತಿರುಗಿ ನೋಡೆ,
ಕವಿತೆಯೆಂಬುವ ತರಳೆ ಬರುತಿರ್ದಳೆನ್ನೆಡೆಗೆ
ಭೀತಿಯಿಂದೋಡುತ್ತ! ಅವಳ ಹಿಂಬಾಲಿಸುತ
ಕಿತ್ತ ಕೂರಸಿಯಾಂತು ಸಂಧಿ ಸೂತ್ರಾದಿಗಳು
“ನಿಲ್ಲು ನಿಲ್ಲೆಲೆ ತೊತ್ತೆ” ಎನ್ನುತಾರ್ಭಟಿಸಿ
ನುಗ್ಗಿದರು! ನಡುಗಿದೆನು ಕೈಲಾಗದವನಂತೆ!
ಕತ್ತಲಲಿ ಕಪ್ಪೆಯೆಡವಿದ ಹುಡುಗಿಯಂತೆ!
ಸೂತ್ರಗಳು ಕಬ್ಬವೆಣ್ಣನು ಹಿಡಿದು ಕಟ್ಟಿದುವು:
ಹೃದಯದಲಿ ಕೆಚ್ಚುದಿಸಿ ನನ್ನಿನಿಯಳನು ಬಿಡಿಸೆ
ಮಾರಾಂತು ಕಡಗಿದೆನು! ಕದನ ಭೀಕರವಾಯ್ತು!
ಸೂತ್ರಗಳ ಕೂರಸಿಗಳೆನ್ನೆದೆಯ ಚುಚ್ಚಿದುವು!
ಕಂದಗಳ ಬಾಣಗಳು ಕಿಕ್ಕಿರಿದು ಮುಚ್ಚಿದುವು!
ಸಂಧಿಗಳು ಸುತ್ತಿದುವು! ತತ್ಸಮಗಳಾವರಿಸಿ
ನೆತ್ತರನು ಹೀರಿದುವು! ಕೋಪದಲಿ ಮೇಲ್ವಾಯ್ದು
ಬಡಿದಿರಿದು ಕೆಡಹಿದುವು ತದ್ಭವಗಳಾಳಿ!
ಱೞಕುಳಗಳೆಂಬ ಕಾಲಾಳುಗಳು ತೇರೈಸಿ
ಮೆಟ್ಟಿದುವು! ಮೂರ್ಛೆಯಲಿ ನೆಲಕುರುಳಿ ಬಿದ್ದೆ!
ಕಣ್ದೆರೆದೆ; ಕನಸೊಡೆದು ಪುಡಿಯಾಯ್ತು! ಆದೊಡಂ
ತಲ್ಲಣಿಸಿತೆನ್ನೆದೆಯು ಘೋರಸಮರವ ನೆನೆದು!
ಶಬ್ದಮಣಿದರ್ಪಣವ ನಿದ್ದೆಹೋಗುವ ಮುನ್ನ
ನಾನಿನ್ನು ಮುಂದೆಂದು ನೋಡುವುದೆ ಇಲ್ಲೆಂದು
ಭೀಮನಂದದಿ ಪೊಣ್ದೊದರಿ ಶಯನದಿಂದೆದ್ದೆ!